ಭೌತಿಕವಾದಿಗಳ ಬಗ್ಗೆ ಮಾತನಾಡುವಾಗ ಇನ್ನೊಂದು ಪ್ರಶ್ನೆಗೆ ನಾವು ಉತ್ತರಿಸಬೇಕಾಗುತ್ತದೆ. ವಿಜ್ಞಾನದ ಬೆಳವಣಿಗೆಗೆ ಭೌತಿಕವಾದಿಗಳ ಕೊಡುಗೆ ಏನಾದರೂ ಇದೆಯೇ? ಇಲ್ಲ, ಎಂಬುದು ಹಲವಾರು ವಿದ್ವಾಂಸರ ಅಭಿಪ್ರಾಯ. ಆದರೆ ಈ ಬಗ್ಗೆ ವಿವರವಾದ ಅಧ್ಯಯನ ನಡೆಸಿರುವ ದೇವಿಪ್ರಸಾದರು ಇದನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾರೆ. ಈ ನಿಟ್ಟಿನಲ್ಲಿ ಭೌತಿಕವಾದಿಗಳ ಕೊಡುಗೆಯನ್ನು ಅವರು ತಮ್ಮ ಆಳವಾದ ಅಧ್ಯಯನದ ಮೂಲಕ ದಾಖಲಿಸುತ್ತಾರೆ. ಅವರ ಜೀವನದ ಕೊನೆಯ ಘಟ್ಟದಲ್ಲಿ ಭಾರತೀಯ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಆಳವಾದ ಅಧ್ಯಯನ ನಡೆಸಿ ಕೆಲವು ಮಹತ್ತರ ಗ್ರಂಥಗಳನ್ನು ರಚಿಸಿದ್ದಾರೆ, ಸಂಪಾದಿಸಿದ್ದಾರೆ.  ಅದರ ಕೆಲವು ವಿಚಾರಗಳನ್ನು ಇಲ್ಲಿ ಸ್ಥೂಲವಾಗಿ ನೀಡಲಾಗಿದೆ.

ರಾಷ್ಟ್ರೀಯ ವಿಜ್ಞಾನ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಸಂಸ್ಥೆ ಯಲ್ಲಿ ಸಂಶೋಧನಾ ಫೆಲೋ ಆಗಿ ‘ಭಾರತೀಯ ತತ್ವಶಾಸ್ತ್ರದಲ್ಲಿ ಬದುಕಿರುವುದೇನು ಮೃತವಾಗಿರುವುದೇನು’ ಎನ್ನುವ ಪುಸ್ತಕದ ತಯಾರಿ ನಡೆಸುತ್ತಿರುವಾಗಲೇ, ಪ್ರಾಚೀನ ಭಾರತದ ಸಮಾಜ ಹಾಗೂ ವಿಜ್ಞಾನದ ಬಗ್ಗೆಯೂ ಅವರ ತಯಾರಿ ನಡೆದಿತ್ತು.  ಆ ಅಧ್ಯಯನದ ಫಲವೇ ಇವರ ಗ್ರಂಥ “ಪ್ರಾಚೀನ ಭಾರತದಲ್ಲಿ ವಿಜ್ಞಾನ ಹಾಗೂ ಸಮಾಜ.” ಪ್ರಾಚೀನ ಭಾರತದ ವಿಜ್ಞಾನದ ಸೈದ್ಧಾಂತಿಕ ಸಾಧನೆಯ ಬಗ್ಗೆ ಅಧ್ಯಯನ ಆಗಿರುವುದೇ ಕಡಿಮೆ. ಅಲ್ಲಿ ಇಲ್ಲಿ ಆಗಿದ್ದರೂ ಕೂಡ ಅದನ್ನು ತಪ್ಪಾಗಿಯೇ ಅರ್ಥೈಸಿಕೊಳ್ಳಲಾಗಿದೆ.  ಇದಕ್ಕೆ ಕಾರಣವಿದೆ.  ಭಾರತೀಯ ವಿಜ್ಞಾನಕ್ಕೆ ಸಂಬಂಧಿಸಿದ ಆಕರ ಗ್ರಂಥಗಳನ್ನು ನೋಡಿದರೆ ವಿಜ್ಞಾನಕ್ಕೆ ತೀರಾ ಪರಕೀಯ ಎನ್ನಬಹುದಾದ ಪ್ರತಿಸಿದ್ಧಾಂತಗಳು ಹಾಗೂ ಮನೋಭಾವ ವೈಜ್ಞಾನಿಕ ಮಾಹಿತಿಯೊಂದಿಗೆ ಸೇರಿಕೊಂಡಿ ರುವುದನ್ನು ನಾವು ನೋಡಬಹುದು. ಹಾಗಾಗಿ ಪ್ರಾಚೀನ ವಿಜ್ಞಾನಿಗಳು ವಿಜ್ಞಾನವನ್ನು ಒಪ್ಪುತ್ತಲೇ ಅದಕ್ಕೆ ತೀರಾ ವಿರುದ್ಧವಾದ ಅಭಿಪ್ರಾಯಗಳಿಗೂ ಮಣೆಹಾಕುವ ದ್ವಂದ್ವ ವ್ಯಕ್ತಿತ್ವದವರಾಗಿ ಕಾಣುತ್ತಾರೆ. ಹಾಗಾಗಿಯೇ ಡಿ.ಡಿ. ಕೋಸಾಂಬಿಯಂತಹವರಿಗೂ ಅದರಲ್ಲಿ ಮಹತ್ವದ್ದು ಏನೂ ಕಾಣಿಸುವುದಿಲ್ಲ. ಇನ್ನೊಂದೆಡೆ ಅದನ್ನು ಆಧ್ಯಾತ್ಮದ ಕಣ್ಣಲ್ಲಿ ನೋಡುತ್ತಾ ಅದರ ವೈಜ್ಞಾನಿಕ ಮಹತ್ವವನ್ನೇ ಕಡೆಗಣಿಸಲಾಗಿದೆ. ಮಜುಂದಾರ್ ಥರದವರು ಅದರಲ್ಲಿ ಕi ಸಿದ್ದಾಂತವನ್ನು ಕೂಡ ಬೆರೆಸಿದ್ದಾರೆ. ಕರ್ಮ ಸಿದ್ದಾಂತವನ್ನು ಒಪ್ಪಿಕೊಂಡುಬಿಟ್ಟರೆ, ಮಾನವನ ಒಳಿತು ಕೆಡಕುಗಳೆರಡನ್ನೂ ನಿರ್ಧರಿಸುವುದು ಅವನ ಹಿಂದಿನ ಜನ್ಮದ ಕರ್ಮ. ಹಾಗಾಗಿ ಕಾಯಿಲೆ ಬರುವುದು ಹಾಗೂ ಅದು ಗುಣವಾಗುವುದು ಎರಡೂ ಮನುಷ್ಯನ ಹಿಂದಿನ ಜನ್ಮದ ಕರ್ಮ ಎಂದಾಗಿಬಿಟ್ಟರೆ, ವೈದ್ಯ ಕೇವಲ ಮೂಕ ವೀಕ್ಷಕನಾಗಿ ಮಾತ್ರ ಉಳಿಯಬಲ್ಲ. ಇದಕ್ಕಿಂತ ದೊಡ್ಡ ದುರಂತ ವೈದ್ಯನಿಗಿಲ್ಲ. ಹಾಗಾಗಿ ಇದನ್ನು ವೈದ್ಯರು ಖಂಡಿತಾ ಒಪ್ಪುತ್ತಿರಲಿಲ್ಲ.  ಅದರಿಂದಾಗಿಯೇ ಖಾಯಿಲೆಯ ನಿಜವಾದ ಕಾರಣವನ್ನು ಕರ್ಮಸಿದ್ಧಾಂತದ ಚೌಕಟ್ಟಿನ ಹೊರಗೆ ನೋಡಬೇಕು ಎಂದು ನಾಗಾರ್ಜುನ ಮಿಲಿಂದ ಪನ್ನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ.

ವೈದಿಕಸಂಪ್ರದಾಯವನ್ನು ಇಷ್ಟೊಂದು ಪ್ರಬಲವಾಗಿ ವಿರೋಧಿಸಿದ್ದವರೇ, ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ವಿಚಾರವನ್ನೂ ತಮ್ಮ ಗ್ರಂಥಗಳಲ್ಲಿ ಸೇರಿಸಿದ್ದಾರೆ.  ಉದಾಹರಣೆಗೆ ದೇವರು ಹಾಗೂ ಬ್ರಾಹ್ಮಣರಂತೆಯೇ ಗೋವನ್ನು ಪೂಜಿಸಬೇಕು ಎಂಬ ಮಾತು ನೂರಾರು ಕಡೆ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ದೇವಗೋಬ್ರಾಹ್ಮಣಗುರುವೃದ್ಧಸಿದ್ದಆಚಾರ್ಯನ್ ಅರ್ಚಯೇತ್ (ಚರಕ ಸಂಹಿತೆ .೧೮). ಅದೇ ಚರಕಸಂಹಿತೆಯಲ್ಲಿ ಗೋಮಾಂಸ ಮಾಂಸಕರವೆಂದು ಬಣ್ಣಿಸಿ, ಅದು ಮಾಂಸವೃದ್ದಿಗೆ ತೀರಾ ಉಪಯುಕ್ತ್ತ, ಪದೇ ಪದೇ ಜ್ವರಪೀಡಿತರಾಗಿ, ಒಣಕೆಮ್ಮಿನಿಂದ, ಕ್ಷಯದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದೆಂಬ ಸೂಚನೆಯು ಬರುತ್ತದೆ. ಇಂತಹ ಉದಾಹರಣೆಗಳನ್ನು ನಾವು ಚರಕಸಂಹಿತೆಯಲ್ಲಿ ಹಾಗೂ ಇತರ ಗ್ರಂಥಗಳಲ್ಲಿ ಹೇರಳವಾಗಿ ಕಾಣಬಹುದು.

ಹಾಗಾಗಿ ಅವರು ವಿಜ್ಞಾನದೊಂದಿಗೆ ಪ್ರತಿವಿಜ್ಞಾನವನ್ನು ಸೇರಿಸಿರುವುದಕ್ಕೆ ಪ್ರಬಲ ವಾದ ಕಾರಣವಿರಬೇಕು. ಪ್ರಾಚೀನ ಕಾಲದಲ್ಲಿ ಉಳಿದ ಎಲ್ಲಾ ದೇಶಗಳಲ್ಲಿದ್ದಂತೆಯೇ ಭಾರತದಲ್ಲೂ ವಿಜ್ಞಾನಕ್ಕೆ ತೀರಾ ವಿರೋಧವಿತ್ತು. ಅನೇಕರು ಭಾವಿಸಿರುವಂತೆ, ವೈದಿಕಪರಂಪರೆಯಲ್ಲಿ ಭಾರತೀಯ ವೈದ್ಯಶಾಸ್ತ್ರವು ತೀರಾ ಸುಗಮವಾಗಿ ಬೆಳೆದು  ಬಂದಿಲ್ಲ. ಅದು ಎಲ್ಲರೂ ಒಪ್ಪಿಕೊಂಡ ಪದ್ದತಿಯೇನಾಗಿರಲಿಲ್ಲ. ಬದಲಿಗೆ ಅದರ ಬಗ್ಗೆ ಪ್ರಾಚೀನ ಭಾರತದಲ್ಲಿ ತೀವ್ರ ತಿರಸ್ಕಾರವಿತ್ತು. ಅಷ್ಟೇ ಏಕೆ, ವೈದ್ಯಕೀಯದ ಬಗ್ಗೆ ವಿವರಣೆ ನೀಡುತ್ತಿದ್ದ ಅಥರ್ವವೇದದ ಬಗೆಗೂ ನಾವು ಇದೇ ರೀತಿಯ ತಾತ್ಸಾರವನ್ನು ಕಾಣಬಹುದು. ಬ್ರಾಹ್ಮಣರು ವೈದ್ಯಕೀಯವನ್ನು ಅಭ್ಯಾಸ ಮಾಡಲೇಬಾರದು ಎಂದು ಧರ್ಮಶಾಸ್ತ್ರಗಳು ಅಪ್ಪಣೆ ಕೊಡಿಸಿವ. ಇದು ಕೆಳಸ್ತರದ ಜನರ ವಿದ್ಯೆಯಾಗಿತ್ತು. ಇಡೀ ಉಪನಿಷತ್ ಸಾಹಿತ್ಯರಾಶಿಯಲ್ಲಿ ನಾವು ಒಬ್ಬನೇ ಒಬ್ಬ ವ್ಯೆದ್ಯನ ಹೆಸರನ್ನು ಕಾಣುವುದಿಲ್ಲ.

ದೇವಿಪ್ರಸಾದರು ತಮ್ಮ ಅಧ್ಯಯನಕ್ಕೆ ಆಯುರ್ವೇದವನ್ನು ಆರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಪ್ರಾಚೀನ ಭಾರತದಲ್ಲಿ ಧರ್ಮನಿರಪೇಕ್ಷವಾದದ್ದು ಎನ್ನಬಹುದಾದ, ಆಧುನಿಕ ಸ್ವಾಭಾವಿಕ ವಿಜ್ಞಾನದ ಸ್ಪಷ್ಟ ಸಾಧ್ಯತೆಯನ್ನು ಹೊಂದಿರುವ ಶಾಖೆ ಇದೊಂದೇ. ಇದನ್ನು ಕುರಿತು ನಮಗೆ ಇರುವ ಮುಖ್ಯ ಆಕರ ಗ್ರಂಥಗಳೆಂದರೆ ವೃದ್ಧ ತ್ರಯಿಗಳೆನಿಸಿ ಕೊಂಡ ಚರಕಸಂಹಿತೆ, ಸುಶತಸಂಹಿತೆ ಹಾಗೂ ಅಷ್ಟಾಂಗಸಂಗ್ರಹ.  ಚರಕಸಂಹಿತೆಯ ಕಾಲ ಹಾಗೂ ಕರ್ತೃವಿನ ಬಗ್ಗೆ ವಿವರವಾಗಿ ಚರ್ಚಿಸಿ ದೇವಿಪ್ರಸಾದರು “ಚರಕ ಎಂದರೆ ಕ್ರಿ. ಶ ಮೊದಲನೆಯ ಶತಮಾನದಲ್ಲಿದ್ದ ಒಬ್ಬ ವ್ಯಕ್ತಿಯ ಹೆಸರು ಎಂದು ಭಾವಿಸುವುದು ಉಚಿತವಲ್ಲ. ಬೌದ್ದಪೂರ್ವಕಾಲದಲ್ಲಿದ್ದ ಅಲೆಮಾರಿ (ಚರಕ ಎಂದರೆ ಅಲೆಮಾರಿ, ಅಲೆದಾಡು ಎಂಬ ಅರ್ಥವಿದೆ) ಚಿಕಿತ್ಸಕರ ಅನುಭವ, ಜ್ಞಾನ, ಚರಕ ಸಂಹಿತೆಯ ಹೆಸರಿನಲ್ಲಿ ಸಂಕಲನಗೊಂಡಿದೆ” ಎಂಬ ತೀರ್ಮಾನಕ್ಕೆ ಬರುತ್ತಾರೆ.  ಸುಶ್ರುತಸಂಹಿತೆ ಕೂಡ ಅನೇಕರ ಕೈಗಳನ್ನು ಹಾದು ಹಲವಾರು ಬದಲಾವಣೆಗಳನ್ನು ಕಂಡ ಒಂದು ಸಂಕಲನ.

ಬೌದ್ಧಪೂರ್ವ ಕಾಲದಲ್ಲಿ ಹಲವಾರು ಚಿಕಿತ್ಸಾ ವಿಧಾನಗಳು, ವಿಭಿನ್ನ ಪದ್ದತಿಗಳು ಆಚರಣೆಯಲ್ಲಿದ್ದವು. ಆದರೆ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಕೆಲ ಕನಿಷ್ಠ ಸಿದ್ಧಾಂತ ಗಳಿದ್ದವು. ಅವನ್ನು ಸರ್ವತಂತ್ರ ಸಿದ್ದಾಂತ ಎನ್ನಲಾಗಿದೆ. ಅವು

೧) ಪ್ರತಿಯೊಂದು ಖಾಯಿಲೆಗೂ ಕಾರಣವಿರುತ್ತದೆ.

೨) ಅನಾರೋಗ್ಯವು ಪ್ರಾಕೃತಿಕ ಘಟನೆ

೩) ಗುಣಪಡಿಸಬಹುದಾದ ಪ್ರತಿ ರೋಗಗಳಿಗೂ ಗುಣಪಡಿಸುವ ಮಾರ್ಗಗಳಿವೆ.

ಈ ಸರ್ವತಂತ್ರ ತತ್ವಗಳನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಈ ಮೂಲಭೂತ ತತ್ವಗಳನ್ನು ಒಪ್ಪದ ವ್ಯಕ್ತಿ ಎಂತಹ ಗಣ್ಯನೇ ಆಗಿದ್ದರೂ ಅಯುರ್ವೇದಕ್ಕೆ ಸಂಬಂಧಿಸಿದಂತೆ ಅವನ ಅಭಿಪ್ರಾಯವು ಅಪ್ರಸ್ತುತ ದೋಷ ಎನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮೋಕ್ಷ, ಕರ್ಮ, ಕರ್ಮಫಲ, ಪರಲೋಕ, ಇತ್ಯಾದಿ ಕಲ್ಪನೆಗಳು ಅಪ್ರಸ್ತುತ ಹಾಗೂ ದೋಷಯುಕ್ತ ಎನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.  ಕರ್ಮಫಲವನ್ನು ಒಪ್ಪಿಕೊಂಡರೆ, ಚಿಕಿತ್ಸಕ ಹಾಗೂ ಚಿಕಿತ್ಸಾ ವಿಜ್ಞಾನಗಳೆರಡೂ ಅಪ್ರಸ್ತುತವಾಗಿಬಿಡುತ್ತದೆ. ಚಿಕಿತ್ಸೆ ಕೇವಲ ನಿಮಿತ್ತ ಮಾತ್ರವಾಗುತ್ತದೆ. ಈ ಚರ್ಚೆ ಹೊಸದೇನೂ ಅಲ್ಲ.  ಪ್ರಾಚೀನ ಗ್ರಂಥಕಾರರು ಇದನ್ನು ಸ್ಪಷ್ಟವಾಗೇ ಹೇಳಿದ್ದಾರೆ. ಉದಾಹರಣೆಗೆ ಸುಮಾರು ಕ್ರಿ.ಶ. ಒಂದನೆಯ ಶತಮಾನದ ಬೌದ್ಧಗ್ರಂಥ ಮಿಲಿಂದಪನ್ನವನ್ನು ನೋಡಬಹುದು. ರಾಜ ಮಿಲಿಂದ ಮತ್ತು ಭಿಕ್ಷು ನಾಗಸೇನ ಇವರ ನಡುವಿನ ಸಂವಾದ ಇದರ ವಸ್ತು. ಅವರಿಬ್ಬರ ನಡುವೆ ರೋಗ ಹಾಗೂ ಕರ್ಮಫಲದ ನಡುವೆ ಸುದೀರ್ಘ ಚರ್ಚೆ ನಡೆಯುತ್ತದೆ. ಕೊನೆಗೆ, “ಕರ್ಮಫಲವನ್ನು ಉಲ್ಲಂಘಿಸಲಾಗದಿದ್ದರೂ. ರೋಗಭೋಗ ಅದಕ್ಕೊಂದು ಅಪವಾದ ಎಂಬ ನಿರ್ಣಯಕ್ಕೆ ಬರುತ್ತಾರೆ. ಅಂದರೆ ಜೀವನದಲ್ಲಿ ಎಲ್ಲಕ್ಕೂ ಕರ್ಮವಾದ ಅನ್ವಯವಾದರೂ ಅದು ರೋಗಭೋಗದ ವಿಷಯದಲ್ಲಿ ಅನ್ವಯವಾಗುವುದಿಲ್ಲ.  ಹಾಗಾಗಿಯೇ ಬುದ್ಧನಿಗೆ ತನ್ನ ಅತೀತ ಕರ್ಮದ ಫಲಾಫಲಗಳನ್ನು ಅಳಿಸಿಹಾಕುವ ಸಮರ್ಥ್ಯವಿದ್ದಾಗಲೂ ಅವನು ಅನೇಕ ಸಲ ಅನಾರೋಗ್ಯದಿಂದ ನರಳುತ್ತಾನೆ”.  ಹಾಗಾಗಿ ನಿಜವಾದ ಚಿಕಿತ್ಸಾ ವಿಜ್ಞಾನದ ಜೊತೆಗೆ ಈ ಕರ್ಮಫಲದ ಚರ್ಚೆ ಹೊಂದಿ ಕೊಳ್ಳುವುದಿಲ್ಲ ಎಂಬುದು ಸ್ಪಷ್ಟ..

ದೈವವ್ಯಾಪಾಶ್ರಯದಿಂದ ಯುಕ್ತಿವ್ಯಾಪಾಶ್ರಯ ಭೇಷಜದ ಕಡೆಗೆ

ಒಂದು ಕಾಲದಲ್ಲಿ ರೋಗವನ್ನು ಒಂದು ಪ್ರಾಕೃತಿಕ ಘಟನೆ ಎಂದು ಪರಿಗಣಿಸಿರಲಿಲ್ಲ. ಅದು ಭೂತ ಪ್ರೇತ ಇತ್ಯಾದಿ ಯಾವುದೋ ಅತಿಮಾನುಷ ಶಕ್ತಿಯ ಚೇಷ್ಟೆ ಎಂದೇ ಭಾವಿಸಲಾಗುತ್ತಿತ್ತು. ಅದ್ದರಿಂದ ರೋಗ ನಿವಾರಣೆಗೆ ಮಾಟ-ಮದ್ದು, ಮಂತ್ರ-ತಂತ್ರ, ಯಂತ್ರ-ತಾಯಿತ ಇತ್ಯಾದಿಗಳಿಗೆ ಶರಣುಹೋಗುತ್ತಿದ್ದರು. ಅಥರ್ವವೇದದಲ್ಲಿ ಇದನ್ನು ಕಾಣಬಹುದು. ಚರಕಸಂಹಿತೆಯಲ್ಲಿ ಇಂತಹ ಚಿಕಿತ್ಸೆಗಳನ್ನು ದೈವಾಶ್ರಿತ (ದೈವ ವ್ಯಾಪಾಶ್ರಯ) ಎಂದು ಕರೆಯಲಾಗುತ್ತದೆ. ಆದರೆ, ಆಯುರ್ವೇದ ಗ್ರಂಥಗಳಲ್ಲಿ ಇಂತಹ ಕಲ್ಪನೆಗಳನ್ನೆಲ್ಲಾ ಬದಿಗಿರಿಸಿ ರೋಗಗಳ ಮೂಲ ಕಾರಣಗಳನ್ನು ಹುಡುಕುವ ಹಾಗೂ ಪ್ರಾಕೃತಿಕ ವಸ್ತುಗಳನ್ನು ಉಪಯೋಗಿಸಿ ರೋಗನಿವಾರಣೆ ಮಾಡುವ ಪ್ರಯತ್ನ ಮಾಡಲಾಗಿದೆ. ಈ ರೀತಿಯ ಚಿಕಿತ್ಸಾ ಕ್ರಮವನ್ನು ಯುಕ್ತಿವ್ಯಾಪಾಶ್ರಯ ಭೇಷಜ ಎನ್ನಲಾಗಿದೆ. ಹಾಗಾಗಿ ಆಯುರ್ವೇದದಿಂದಾಗಿ ಚಿಕಿತ್ಸಾ ವಿಜ್ಞಾನವು ದೈವ ವ್ಯಾಪಾಶ್ರಯದಿಂದ ಅಂದರೆ ಮಂತ್ರ, ತಂತ್ರ, ಬಲಿ, ಹೋಮ, ನಿಯಮ, ಪ್ರಾಯಶ್ಚಿತ್ತ, ಉಪವಾಸ, ಪೂಜೆ, ಹರಕೆ ಇತ್ಯಾದಿಗಳಿಂದ ಯುಕ್ತಿ ವ್ಯಾಪಾಶ್ರಯಭೇಷಜದತ್ತ ಅಂದರೆ ಆಹಾರ, ಔಷಧಿ, ದ್ರವ್ಯ ಇತ್ಯಾದಿಗಳನ್ನು ಬಳಸುವುದರ ಕಡೆಗೆ ಸಾಗಿತು ಎಂದು ಧಾರಾಳವಾಗಿ ಹೇಳಬಹುದು.

ಚರಕಸಂಹಿತೆಯ ಎರಡು ಮುಖ್ಯ ಅಂಶಗಳನ್ನು ಇಲ್ಲಿ ಉಲ್ಲೇಖಿಸುವ ಮೂಲಕ ಚರ್ಚೆಯನ್ನು ಮುಂದುವರಿಸಬಹುದು.

೧) ಚರಕಸಂಹಿತೆಯ ಪ್ರಕಾರ ‘ನ ಅನೌಷಧಂ ಕಿಂಚಿತ್” ಅಂದರೆ ಔಷಧಕ್ಕೆ ಬಳಸಲಾಗದ ಯಾವುದೇ ವಸ್ತುವೂ ಪ್ರಕೃತಿಯಲ್ಲಿರಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿ ದಂತೆ ಒಂದು ಉಪಖ್ಯಾನವನ್ನು ಇಲ್ಲಿ ಉಲ್ಲೇಖಿಸಬಹುದು.

ಜೀವಕನು ರಾಜಗೃಹದ ಒಬ್ಬ ವೇಶ್ಯೆಯ ಮಗ. ಅವನು ಶಿಕ್ಷಣಕ್ಕಾಗಿ ದೂರದ ತಕ್ಷಶಿಲೆಗೆ ಹೋಗಿದ್ದನು. ಅಲ್ಲಿ ಪ್ರಖ್ಯಾತ ಶಿಕ್ಷಕ ಆತ್ರೇಯನ ಬಳಿ ಶಿಕ್ಷಣ ಪಡೆದನು.  ಶಿಕ್ಷಣ ಮುಗಿದ ಮೇಲೆ, ಆತ್ರೇಯನಿಗೆ ತನ್ನ ಶಿಷ್ಯ ಸಂಪೂರ್ಣವಾಗಿ ಶಿಕ್ಷಣ ಪಡೆದಿ ದ್ದಾನೋ ಇಲ್ಲವೋ ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಜೀವಕನನ್ನು ಕರೆದು “ಅಯ್ಯಾ, ತಕ್ಷಶಿಲೆಯ ಸುತ್ತಲೂ ಒಂದು ಯೋಜನ ಸುತ್ತಳತೆಯಲ್ಲಿ ಚಿಕಿತ್ಸೆಗೆ ನಿರುಪಯೋಗಿಯಾದಂತಹ ವಸ್ತುವನ್ನು ಹುಡುಕಿಕೊಂಡು ಬಾ” ಎಂದು ಆಜ್ಞಾಪಿಸಿದ. ಜೀವಕ ಎಲ್ಲಾ ಕಡೆ ಹುಡುಕಾಡಿ, ಕೊನೆಗೆ ಗುರುಗಳ ಬಳಿಗೆ ಬಂದು “ಚಿಕಿತ್ಸೆಗೆ ಉಪಯೋಗಕ್ಕೆ ಬಾರದ ಯಾವುದೇ ವಸ್ತುವೂ ಸಿಗಲಿಲ್ಲ” ಎಂದು ತಿಳಿಸಿದ. ಈ ಉತ್ತರದಿಂದ ತನ್ನ ಶಿಷ್ಯ ಚಿಕಿತ್ಸಾ ವಿದ್ಯೆಯಲ್ಲಿ ಪರಿಪೂರ್ಣನಾಗಿದ್ದಾನೆ ಎಂದುಕೊಂಡು ಆತ್ರೇಯ ಸಂತೋಷಗೊಂಡನು.

ಹಾಗಾಗಿಯೇ ಅವರು “ಬುದ್ಧಿವಂತರಿಗೆ ಇಡೀ ಪ್ರಕೃತಿಯೇ ಗುರು. ದಡ್ಡರಿಗೆ ಶತ್ರು” ಎಂದು ಹೇಳಿರುವುದು. ಇಂತಹುದೇ ಉಲ್ಲೇಖಗಳನ್ನು ಶುಶ್ರುತ ಸಂಹಿತೆಯಲ್ಲೂ ಕಾಣಬಹುದು.

೨) ಇದರ ಮುಂದುವರಿಕೆಯಾಗಿ ಆಯುರ್ವೇದದ ಇನ್ನೊಂದು ಅಂಶವನ್ನು ಗಮನಿಸಬಹುದು. ಅದು ಅವರಿಗೆ ಭೌತಿಕವಾದದಲ್ಲಿದ್ದ ನಂಬಿಕೆ. ಚರಕಸಂಹಿತೆಯಲ್ಲಿ ಅನೇಕ ವಾದಗಳಿವೆ. ಚೈತ್ರರಥವನದಲ್ಲಿ ನಡೆದ ಒಂದು ಚರ್ಚೆಯ ಕೊನೆಯಲ್ಲಿ, ಆಯುರ್ವೇದದ ಅಧಿಕೃತ ಪ್ರತಿನಿಧಿಯಾಗಿ, ಆತ್ರೇಯ ಅಲ್ಲಿ ಬಂದಂತಹ ಅಭಿಪ್ರಾಯ ಗಳನ್ನೆಲ್ಲಾ ಕ್ರೋಢೀಕರಿಸಿ ಈ ಕೆಳಕಂಡಂತೆ ಹೇಳುತ್ತಾನೆ.

“ಆಯುರ್ವೇದದ ಪ್ರಕಾರ, ಪ್ರತಿಯೊಂದು ವಸ್ತುವೂ ಪಂಚಭೂತಗಳಿಂದ ಮಾಡ ಲ್ಪಟ್ಟಿದೆ. ಅವುಗಳಲ್ಲಿ ಕೆಲವು ಚೇತನಾಯುಕ್ತವಾಗಿದೆ. ಮತ್ತೆ ಕೆಲವು ಅಚೇತನ.”  ಇದು ಭೌತಿಕವಾದೀ ನಿಲುವು ಅನ್ನುವುದರ ಬಗ್ಗೆ ಸಂದೇಹವಿಲ್ಲ.  ಇದೇ ತತ್ವವನ್ನು ಮಾನವ ದೇಹಕ್ಕೆ ಅನ್ವಯಿಸುತ್ತಾ, ಮಾನವ ದೇಹವು ಪಂಚಭೂತಗಳಿಂದಲೇ ಆದದ್ದು. ಈ ಐದು ಪಂಚಭೂತಗಳು ದೇಹದಲ್ಲಿ ಸೂಕ್ತಪ್ರಮಾಣದಲ್ಲಿ ಇದ್ದರೆ ಮನುಷ್ಯನು ಆರೋಗ್ಯದಿಂದ ಇರುತ್ತಾನೆ. ಈ ಪ್ರಮಾಣದಲ್ಲಿ ಏರುಪೇರಾದರೆ ಅನಾರೋಗ್ಯ ಉಂಟಾಗುತ್ತದೆ.

ಇಂತಹ ಸಂದರ್ಭದಲ್ಲಿ ಚಿಕಿತ್ಸಕ ಹೆಚ್ಚು ಕಡಿಮೆಯಾದ ಪಂಚಭೂತ ವಿಶೇಷಾದಿ ಗಳನ್ನು ಕಡಿಮೆ ಅಥವಾ ಹೆಚ್ಚಾಗುವಂತೆ ದ್ರವ್ಯಾದಿಗಳನ್ನು ಸೇವಿಸುವಂತೆ ಮಾಡಬೇಕು. ಈ ಪಂಚಭೂತಗಳನ್ನು ಕೇವಲ ಮಾನವ ದೇಹದಲ್ಲಿ ಮಾತ್ರವಲ್ಲ, ಪ್ರಕೃತಿಯಲ್ಲಿ ದೊರೆಯುವ ಎಲ್ಲಾ ವಸ್ತುಗಳಲ್ಲೂ ಕಾಣಬಹುದು. ಆದುದರಿಂದ  ಪ್ರಕೃತಿಯಲ್ಲಿನ ವಸ್ತುಗಳನ್ನು ಸೇವಿಸುವುದರಿಂದ ಶರೀರದಲ್ಲಿರುವ ಪಂಚಭೂತಗಳ ಅಂಶ ವಿಶೇಷಗಳು ಹೆಚ್ಚು ಕಡಿಮೆಯಾಗುತ್ತವೆ. ಅಂದರೆ ದೇಹದ ಯಾವುದೋ ಕಾಯಿಲೆಗೆ, ಪ್ರಕೃತಿಯ ಯಾವುದೋ ವಸ್ತುವು ಉಪಶಮನಕಾರಿಯಾಗಿ ಇದ್ದೇ ಇರುತ್ತದೆ. ಹಾಗಾಗಿ ಚಿಕಿತ್ಸೆಗೆ ಬಾರದ ಯಾವುದೇ ವಸ್ತುವೂ ಪ್ರಕೃತಿಯಲ್ಲಿ ಇರಲು ಸಾಧ್ಯವೇ ಇಲ್ಲ. ಈ ಭೌತಿಕ ವಾದವನ್ನು ಬಿಟ್ಟು ಚಿಕಿತ್ಸೆ ಸಾಧ್ಯವಿಲ್ಲ ಎಂಬುದು ಅವರ ನಂಬಿಕೆಯಾಗಿತ್ತು. “ಭೂತೇಭ್ಯಃ ಹಿ ಪರಂ ಯಸ್ಮಾತ್ ನಾಸ್ತಿ ಚಿಂತಾ ಚಿಕಿತ್ಸಿತೇ”

ಇವರ ಭೌತವಾದ ತೀರಾ ಪ್ರಾಥಮಿಕ ಮಟ್ಟದ್ದು ಅನ್ನಿಸಬಹುದು. ಆದರೆ ಮನುಷ್ಯ ಆಗಷ್ಟೇ ಈ ದಿಕ್ಕಿನಲ್ಲಿ ಯೋಚಿಸಲು ಪ್ರಾರಂಭಿಸಿದ್ದ. ಆ ಹಂತದಲ್ಲಿ ಪ್ರಾಕೃತಿಕ ಭೂತವಸ್ತುವಿನಿಂದಲೇ ಪ್ರಾಣವು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದಕ್ಕೆ ಉತ್ತರವನ್ನು ಅವರಿಂದ ನಿರೀಕ್ಷಿಸುವುದು ಕಷ್ಟ. ಆದರೆ ಆಗಲೇ ನಮ್ಮ ದೇಶದ ವಿಜ್ಞಾನಿಗಳು ಇಂತಹ ಒಂದು ಕಠಿಣ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನ ನಡೆಸಿದ್ದರು ಎಂಬುದಕ್ಕೆ ನಾವು ಹೆಮ್ಮೆ ಪಡಬೇಕು.

ದೇಹದ ವಿಶಿಷ್ಟ ಲಕ್ಷಣವಾದ ಪ್ರಾಣ, ಅಷ್ಟೇ ಏಕೆ ಪ್ರತಿಭೆ, ಸುಖ, ಸಂತೃಪ್ತಿ ಇತ್ಯಾದಿಗಳ ಕೂಡ ಈ ಪಂಚಭೂತಗಳಿಂದಾದ ಆಹಾರದ ಪರಿಣಾಮ ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು. ಇದನ್ನು ವಿವರಿಸುವಾಗ ಅವರು ಪ್ರತ್ಯಕ್ಷವಾಗಿ ದೊರಕುವ ಸಾಕ್ಷ್ಯಕ್ಕೆ ಮಹತ್ವ ನೀಡುತ್ತಾರೆ. ಅದನ್ನವರು ಪ್ರತ್ಯಕ್ಷಲಬ್ಧ ಸಾಕ್ಷ್ಯ ಎನ್ನುತ್ತಾರೆ.  ಚರಕಸಂಹಿತೆಯ ಪ್ರಕಾರ ಎಲ್ಲಾ ಸಾಕ್ಷ್ಯಗಳಲ್ಲೂ ಪ್ರತ್ಯಕ್ಷ ಲಬ್ಧ ಸಾಕ್ಷ್ಯವೇ ಅತ್ಯುತ್ತಮ ವಾದುದು. ಇದನ್ನು ಅವರು ಔಷಧಿಯ ಉದಾಹರಣೆಯ ಮೂಲಕವೇ ವಿವರಿಸುತ್ತಾರೆ. ಉದಾಹರಣೆಗೆ ಸುಶ್ರುತ ಸಂಹಿತೆಯಲ್ಲಿನ ಉಲ್ಲೇಖ ಇಲ್ಲಿ ಪ್ರಸ್ತುತ.  ಅತಿಭೇದಿ ಇತ್ಯಾದಿ ರೋಗಗಳಲ್ಲಿ ಭೇದಿ ನಿಲ್ಲಿಸಲು ಅಂಬುಷ್ಟ ಜಾತಿಯ ಗಿಡದ ಹಣ್ಣು ತುಂಬಾ ಒಳ್ಳೆಯದು ಎಂಬುದನ್ನು ಚಿಕಿತ್ಸಕರು ಪ್ರತ್ಯಕ್ಷವಾಗಿ ಕಂಡುಕೊಂಡಿದ್ದಾರೆ.  ಆದುದುರಿಂದ ಯಾರಾದರೂ ಅಂಬುಷ್ಟ ಫಲವು ಅತಿಭೇದಿ ಉಂಟುಮಾಡಲು ಸೊಗಸಾದ ಔಷಧಿ ಎಂದು ನೂರಾರು ತರ್ಕ ವಿತರ್ಕಗಳಿಂದ ಸಾಧಿಸಲು ಪ್ರಯತ್ನಿಸಿದರೆ ಆ ಬಗ್ಗೆ ಚಿಕಿತ್ಸಕರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಇದರರ್ಥ ಪ್ರಾಚೀನ ಕಾಲದ ಚಿಕಿತ್ಸಕರು ಅನುಮಾನ ಪ್ರಮಾಣವನ್ನು ತಿರಸ್ಕರಿಸಿದ್ದರು ಎಂದಲ್ಲ. ಪೂರ್ವ ಪ್ರತ್ಯಕ್ಷತೆಯೇ ಅನುಮಾನದ ಮೂಲ ಎಂಬುದು ಅವರ ನಂಬಿಕೆಯಾಗಿತ್ತು.  ಹಾಗಾಗಿ ಅವರು ಪೂರ್ವ ಪ್ರತ್ಯಕ್ಷಿಕೆಯನ್ನು ಆಧರಿಸಿರುವ ಅನುಮಾನವನ್ನು ಮಾತ್ರ ಪ್ರಮಾಣವನ್ನಾಗಿ ಸ್ವೀಕರಿಸುತ್ತಿದ್ದರು. ಭಾರತೀಯ ತರ್ಕಶಾಸ್ತ್ರದ ಆಕರಗ್ರಂಥಗಳಾದ ನ್ಯಾಯಸೂತ್ರ ಮತ್ತು ವಾತ್ಸ್ಯಾಯನ ಭಾಷ್ಯಗಳಲ್ಲಿ ಕೂಡ ಪ್ರತ್ಯಕ್ಷವಿಲ್ಲದೆ ಪ್ರಮಾಣವಿಲ್ಲ ಎಂಬ ಅಭಿಪ್ರಾಯವನ್ನು ನೋಡಬಹುದು. ಆದುದರಿಂದ ಪ್ರತ್ಯಕ್ಷವೇ ಇವರ ವೈಜ್ಞಾನಿಕ ಜ್ಞಾನದ ತಳಪಾಯ.

ಇಲ್ಲೇ ಸಮಸ್ಯೆ ಪ್ರಾರಂಭವಾಗಿರುವುದು. ಪ್ರತ್ಯಕ್ಷ ಪ್ರಮಾಣವನ್ನು ದ್ವೇಷಿಸುವವರಿಗೆ ಇದು ಹೇಗೆ ಪಥ್ಯವಾಗುತ್ತದೆ? ಯಜ್ಞ, ಯಾಗಾದಿಗಳೇ ಮೂಲವಸ್ತುವಾಗಿರುವ ಯಜುರ್ವೆದದ ವಿಷಯಕ್ಕೆ ಬರೋಣ.  ಯಜ್ಞ, ಯಾಗಾದಿಗಳಿಂದ ನಿರೀಕ್ಷಿತ ಫಲ ದೊರೆಯುತ್ತದೆ ಎಂಬ ಜ್ಞಾನವನ್ನು ಪ್ರತ್ಯಕ್ಷ ಪ್ರಮಾಣವನ್ನು ಆಧರಿಸಿ ಪರೀಕ್ಷಿಸಿದರೆ ಯಜ್ಞಕರ್ಮದ ಸಾರ್ಥಕತೆಯ ಬಗ್ಗೆಯೇ ಅನುಮಾನ ಬರುತ್ತದೆ. ಹಾಗಾಗಿಯೇ ಪುರೋಹಿತ ಸಾಹಿತ್ಯದಲ್ಲಿ ಪ್ರತ್ಯಕ್ಷವನ್ನು ವಿರೋಧಿಸಿ, ಪರೋಕ್ಷವಾದವನ್ನು ಒಪ್ಪಿಕೊಳ್ಳ ಬೇಕೆಂಬ ಉಪದೇಶವನ್ನು ಕಾಣುತ್ತೇವೆ. ‘ಪರೋಕ್ಷ ಪ್ರಿಯಾ ಇವ ಹಿ ದೇವಾಃ”-ದೇವತೆಗಳು ಪರೋಕ್ಷವನ್ನು ಬಯಸುತ್ತಾರೆ, ಯಾಜ್ಞವಲ್ಕ್ಯ ಇನ್ನೂ ಮುಂದೆ ಹೋಗಿ ದೇವತೆಗಳು ಪರೋಕ್ಷ ಪ್ರಿಯರಷ್ಟೇ ಅಲ್ಲ, ಅವರು ಪ್ರತ್ಯಕ್ಷದ ದ್ವೇಷಿಗಳು ಎಂದೂ ಹೇಳುತ್ತಾನೆ.

ಅತ್ಯಂತ ಪ್ರತಿಭಾವಂತ ದಾರ್ಶನಿಕನಾದ ಯಾಜ್ಞವಲ್ಕ್ಯನು ಶುದ್ಧ ವಿಜ್ಞಾನಕ್ಕೆ ಮಾರಣಾಂತಿಕ ಹೊಡೆತ ನೀಡಿ, ವಿಜ್ಞಾನ ಜ್ಯೋತಿಯನ್ನು ನಂದಿಸಿ, ಗಾಢ ಕತ್ತಲೆಯನ್ನು ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಿದ್ದಾನೆ.

ಹಾಗಾಗಿ ಪ್ರತ್ಯಕ್ಷ ಜ್ಞಾನವೇ ಶ್ರೇಷ್ಠಜ್ಞಾನ ಎಂದು ಘೋಷಿಸುವುದಕ್ಕೆ ಎಂಟೆದೆ ಬೇಕಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ವೈದ್ಯರಿಗೆ ಮಾತ್ರ ಈ ವಿಷಯ ದಲ್ಲಿ ಅಚಲವಾದ ವಿಶ್ವಾಸವಿತ್ತು. ಅದನ್ನು ಪ್ರಚುರಪಡಿಸುವುದರಲ್ಲಿ ಅಷ್ಟೇ ಉತ್ಸಾಹವಿತ್ತು. ಸುಶ್ರುತಸಂಹಿತೆಯಲ್ಲಿನ ಒಂದೆರಡು ಉದಾಹರಣೆಗಳು ಇದನ್ನು ಇನ್ನೂ ಸ್ಪಷ್ಟಪಡಿಸ ಬಹುದು.

ಶವಚ್ಛೇದನ

ಧರ್ಮಶಾಸ್ತ್ರದ ಪ್ರಕಾರ ಮೃತದೇಹ ಅಪವಿತ್ರವಾದದ್ದು.  ಯಾರಾದರೂ ಅದರ ಸಂಪರ್ಕಕ್ಕೆ ಬಂದರೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ. ಬೌಧಾಯನ, ಆಪಸ್ತಂಭ ರಿಂದ ಹಿಡಿದು ಮನು ಮೊದಲಾದ ಧರ್ಮಶಾಸ್ತ್ರಕಾರರೆಲ್ಲರೂ ಇದನ್ನೇ ಸಾರಿ ಸಾರಿ ಹೇಳಿದ್ದಾರೆ.  ಹಾಗಿದ್ದಾಗ ಹೆಣವನ್ನು ಕೊಯ್ದು ಅದನ್ನು ಪರೀಕ್ಷಿಸುವುದರ ಮೂಲಕವಷ್ಟೆ, ಒಳಗಿನ ಅಂಗಾಂಗಳ ಬಗ್ಗೆ ಸುನಿಶ್ಚಿತ ಜ್ಞಾನ ಪಡೆಯಲು ಸಾಧ್ಯ ಎಂದು ಈ ವೈದ್ಯರು ಹೇಳಿದರೆ ಧರ್ಮಶಾಸ್ತ್ರದ ವಕ್ತಾರರಿಗೆ ಏನಾಗಬೇಡ.  ಪ್ರಾಚೀನ ಕಾಲದಲ್ಲಿ ಇರಲಿ, ಆಧುನಿಕ ಭಾರತದಲ್ಲಿ ಕೂಡ ಈ ಶವಚ್ಛೇದನದ ಬಗ್ಗೆ ಎಷ್ಟು ಆತಂಕವಿತ್ತು ಅನ್ನೋದನ್ನು ಗಮನಿಸಿದರೆ ನಮ್ಮ ಅಂದಿನ ವೈದ್ಯರು ಎಂತಹ ಸಾಹಸ ಮಾಡಿರಬೇಕು ಅನ್ನುವುದು ಸ್ಪಷ್ಟವಾಗುತ್ತದೆ.

೧೮೩೪-೩೫ನೆಯ ಸಾಲಿನಲ್ಲಿ ಕಲ್ಕತ್ತೆಯಲ್ಲಿ ಮೆಡಿಕಲ್ ಕಾಲೇಜು ಆರಂಭ ವಾಯಿತು. ಚಿಕಿತ್ಸಾ ವಿಜ್ಞಾನ ತಿಳಿಯಬೇಕೆಂದರೆ, ದೇಹದ ಅಂಗ ಪ್ರತ್ಯಂಗಗಳ ಪ್ರತ್ಯಕ್ಷ ದರ್ಶನ ಅನಿವಾರ್ಯ. ಅಂಗಾಂಗಳ ಪ್ರತ್ಯಕ್ಷ ದರ್ಶನವಾಗಬೇಕಾದರೆ ವಿದ್ಯಾರ್ಥಿಯು ತನ್ನ ಕೈಯಾರೆ ಶವಚ್ಛೇದನ ಮಾಡಬೇಕಾಗುತ್ತಿತ್ತು. ಆದರೆ ಹೆಣಮುಟ್ಟಿದರೆ ಸಾಕು ಜಾತಿಭ್ರಷ್ಟರಾಗುತ್ತೇವೆ ಅಂತ ನಮ್ಮ ಧರ್ಮಶಾಸ್ತ್ರ ಹೇಳಿವೆ. ಹಾಗಾಗಿ ವಿದ್ಯಾರ್ಥಿಗಳು ಶವಗಾರದತ್ತ ಹೆಜ್ಜೆಹಾಕಲೂ ಅಂಜುತ್ತಿದ್ದರು. ಇದೊಂದು ದೊಡ್ಡ ಸಮಸ್ಯೆಯಾಯಿತು. ಆಗ ಅವರಿಗೆ ನೆರವಿಗೆ ಬಂದಿದ್ದು ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ವೈದ್ಯಕೀಯ ವಿಜ್ಞಾನದ ಪ್ರಾಚಾರ್ಯರಾಗಿದ್ದ ಮಧುಸೂದನ ಗುಪ್ತ ಅವರು.  ಅವರಿಗೆ ಆಧುನಿಕ ಚಿಕಿತ್ಸಾ ವಿಧಾನವನ್ನು ಕಲಿಯುವ ಆಸೆ. ಕಾಲೇಜಿನ ಯಾವ ಹಿಂದೂ ವಿದ್ಯಾರ್ಥಿಯೂ ಮೃತದೇಹವನ್ನು ಕುಯ್ಯಲು ಮುಂದೆ ಬರದಿದ್ದಾಗ, ಗುಪ್ತ ಅವರು ಮುಂದೆ ಬಂದರು. ಆದರೂ ಸಂಘಟಕರಾದ ಡೇವಿಡ್ ಹೇರ್ ಅವರಿಗೆ ಆತಂಕ, ಕೊನೆ ಗಳಿಗೆಯಲ್ಲಿ ಅವರು ತಮ್ಮ ನಿಲುವನ್ನು ಬದಲಿಸಬಹುದು ಎಂಬ ಆತಂಕವಿತ್ತು. ಹಾಗಾಗಿ ಅವರಿಗೆ ಮನಃಸ್ಥೈರ್ಯವನ್ನು ಹೆಚ್ಚು ಮಾಡಲು ಪೋರ್ಟ್ ವಿಲಿಯಂನಿಂದ ತೋಪುಗಳನ್ನು ಹಾರಿಸುವ ವ್ಯವಸ್ಥೆ ಮಾಡಲಾಗಿತ್ತು.  ೧೯ನೇ ಶತಮಾನದಲ್ಲಿ ಅದೂ ಬಲವಾದ ಸರ್ಕಾರದ ರಕ್ಷಣೆಯಲ್ಲೇ ಈ ಕಥೆಯಾದರೆ, ತುಂಬಾ ಹಿಂದೆ ಪರಿಸ್ಥಿತಿ ಹೇಗಿದ್ದಿರಬೇಕು!

“ಶಲ್ಯಜ್ಞಾನವಿಲ್ಲದೆ ಚರ್ಮದವರೆಗೆ ಎಲ್ಲಾ ಅಂಗ ಪ್ರತ್ಯಂಗಗಳನ್ನು ವಿವರಿಸಲು ಸಾಧ್ಯವಿಲ್ಲ.  ಆದ್ದರಿಂದ ಶಲ್ಯವಿದನಾಗ ಬಯಸುವವನು ನಿಜವಾಗಿ ಜ್ಞಾನಾಭಿಲಾಷಿಯೇ ಆಗಿದ್ದರೆ, ಒಂದು ಮೃತದೇಹವನ್ನು ಸಂಪಾದಿಸಿ, ಅದರ ಅಂಗ ಪ್ರತ್ಯಂಗಗಳನ್ನು ಕಣ್ಣಾರೆ ಪರೀಕ್ಷಿಸಬೇಕು,  ಈ ರೀತಿಯ ಪ್ರತ್ಯಕ್ಷ ಜ್ಞಾನ ಹಾಗೂ ಆಯುರ್ವೇದಶಾಸ್ತ್ರ ಅಧ್ಯಯನದಿಂದ ಮಾತ್ರ ಹೆಚ್ಚಿನ ಜ್ಞಾನಪಡೆಯಲು ಸಾಧ್ಯ” ಎಂಬುದರ ಬಗ್ಗೆ ಸುಶ್ರುತಸಂಹಿತೆಗೆ ಯಾವುದೇ ಅನುಮಾನವಿಲ್ಲ. ಹಾಗಾಗಿ ಶವ ಹೇಗಿರಬೇಕು ಎಂಬುದರ ಬಗ್ಗೆ, ಶಲ್ಯವಿದ್ಯೆಯ ಶಿಕ್ಷಣಾರ್ಥಿಗಳ ಕೈ ಪಳಗಿಸಲು ಬೇಕಾದ ಕ್ರಮಗಳ ಬಗ್ಗೆ ತೀರಾ ವಿಸ್ತೃತವಾದ ವಿವರಣೆಯನ್ನು ನಾವು ಅದರಲ್ಲಿ ಕಾಣಬಹುದು.  ಅಷ್ಟೇ ಅಲ್ಲ, ಹೆಣ ಕುಯ್ಯಲು ಬೇಕಾದ ಶಲ್ಯ ಉಪಕರಣಗಳನ್ನು ಬಳಸುವ ಕ್ರಮ ಹಾಗೂ ಅವುಗಳ ತಯಾರಿಕೆ ಬಗ್ಗೆಯೂ ತುಂಬಾ ಮಾಹಿತಿ ಅದರಲ್ಲಿದೆ. ಜಗತ್ತಿನ ಬೇರಾವ ವೈಜ್ಞಾನಿಕ ಸಾಹಿತ್ಯದಲ್ಲೂ ಇಷ್ಟೊಂದು ವಿವರವಾದ ಚರ್ಚೆ ಈ ಬಗ್ಗೆ ಸಿಗುವುದಿಲ್ಲ.  ಇಲ್ಲಿ ಧರ್ಮಶಾಸ್ತ್ರಜ್ಞರ ದೃಷ್ಟಿಯಲ್ಲಿ ಎರಡು ಸಮಸ್ಯೆ ಬರುತ್ತದೆ. ಒಂದು ಇಂತಹ ಉಪಕರಣಗಳನ್ನು ತಯಾರಿಸಬೇಕಾದರೆ ದಕ್ಷ ಹಾಗೂ ಕುಶಲ ಕಮ್ಮಾರರೊಂದಿಗಿನ ಸಕ್ರಿಯವಾದ ಸಹಯೋಗದಿಂದ ಅನಿವಾರ್ಯ. ಆದರೆ ಅವರು ನೀಚಜಾತಿಯವರು!  ಅವರೊಂದಿಗೆ ಸಹಯೋಗ ಹೇಗೆ ಸಾಧ್ಯ?

ಎರಡನೆಯದು ನಮ್ಮ ಶಾಸ್ತ್ರಗಳ ಪ್ರಕಾರ ಕೈ ಕೆಲಸವೇ ನಿಂದನೀಯ. ಆದರೆ ನಮ್ಮ ಸುಶ್ರುತಸಂಹಿತೆಯಲ್ಲಿ ಕೈಯಿಂದ ಮಾಡುವ ಕೆಲಸಕ್ಕೆ ಅತಿಹೆಚ್ಚಿನ ಗೌರವ. “ನೂರಾರು ಉಪಕರಣಗಳಿವೆ. ಈ ಉಪಕರಣಗಳಲ್ಲೆಲ್ಲ ಹಸ್ತವೇ ಪ್ರಧಾನವಾದ ಉಪಕರಣ. ಯಾಕೆಂದರೆ ಸಮಸ್ತ ಉಪಕರಣಗಳು ಹಸ್ತದ ಅಧೀನ. ಹಸ್ತವಿಲ್ಲದೆ ಯಾವುದೇ ಉಪಕರಣದ ಬಳಕೆ ಸಾಧ್ಯವಿಲ್ಲ.”  ಭಾರತದ ಹೆಸರಾಂತ ವಿಜ್ಞಾನಿಯಾದ ಪ್ರಫುಲ್ಲ ಚಂದ್ರ ರಾಯ್ ಅವರ ಪ್ರಕಾರ ಕೈಕೆಲಸದ ಬಗ್ಗೆ ಇದ್ದಂತಹ ವಿಕೃತ ಮನೋಭಾವವೇ ಭಾರತದಲ್ಲಿ ವಿಜ್ಞಾನ ಅವನತಿ ಹೊಂದಲು ಮೂಲಕಾರಣ.  ಅದೇನೇ ಇರಲಿ, ನಮ್ಮ ಪ್ರಾಚೀನ ವೈದ್ಯರಿಗೆ ಧರ್ಮಶಾಸ್ತ್ರದ ಈ ದೃಷ್ಟಿಕೋನ ಸ್ವೀಕೃತವಾಗಿರಲಿಲ್ಲ. ಸ್ವಾಭಾವಿಕವಾಗಿಯೇ ಈ ದೃಷ್ಟಿಕೋನ ಧರ್ಮಶಾಸ್ತ್ರಜ್ಞರಿಗೆ ಪಥ್ಯ ವಾಗುವುದು ಸಾಧ್ಯವೇ ಇಲ್ಲ. ಆದರೆ ಆ ದೃಷ್ಟಿಕೋನ ಬಿಟ್ಟು ಆಧ್ಯಾತ್ಮದ ಹಿಂದೆ ಹೋಗುವುದು ವೈದ್ಯರಿಗೆ ಸಾಧ್ಯವಿಲ್ಲ. ಆದರೆ ಧರ್ಮಶಾಸ್ತ್ರಜ್ಞರನ್ನು ಮೀರಿಹೋಗುವು ದುಂಟೆ? ಹಾಗಾಗಿ ಅವರು ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡರು. ಧರ್ಮಶಾಸ್ತ್ರಜ್ಞರ ಆತ್ಮ ತತ್ವ, ಕರ್ಮಶಾಸ್ತ್ರ ಇತ್ಯಾದಿಗಳನ್ನು ಹೇಳುತ್ತಲೇ ತಮ್ಮ ಸಿದ್ಧಾಂತಗಳನ್ನು ಹೇಳುತ್ತಾ ಹೋದರು. ಹಾಗಾಗಿ ನಮಗೆ ಇಂದು ಇದು ಕಲಸು ಮೇಲೋಗರವಾಗಿ ಕಾಣುತ್ತದೆ.

ಖಗೋಳಶಾಸ್ತ್ರದಲ್ಲಿ ಆಗಿದ್ದೂ ಇದೇ. ನಮ್ಮಲ್ಲಿನ ಕೆಲವು ಪ್ರಖ್ಯಾತ ಖಗೋಳ ಶಾಸ್ತ್ರಜ್ಞರು ಈ ಧರ್ಮಶಾಸ್ತ್ರಜ್ಞರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಇದೇ ಮಾರ್ಗವನ್ನು ಅನುಸರಿಸಿದ್ದಾರೆ. ನಮ್ಮ ದೇಶಕ್ಕೆ ಹನ್ನೊಂದನೇ ಶತಮಾನದಲ್ಲಿ ಬಂದಿದ್ದ ಪ್ರವಾಸಿ ವಿಜ್ಞಾನಿ ಅಲ್ ಬರೂನಿ ಇದನ್ನು ಚೆನ್ನಾಗಿ ವಿವರಿಸಿದ್ದಾನೆ. ವಿಜ್ಞಾನಿಗಳು ಅದರಲ್ಲೂ ವಿಶೇಷವಾಗಿ ಬ್ರಹ್ಮಗುಪ್ತನ ಬಗ್ಗೆ ಮಾತನಾಡುತ್ತಾ, ಅವನಿಗೆ ನಿಜವಾಗಿ ಗ್ರಹಣದ ಕಾರಣ ಸ್ಪಷ್ಟವಾಗಿ ಗೊತ್ತಿದ್ದರೂ, ತನ್ನ ಹಿಂದಿನವರು ರಾಹು ಕೇತು ಗ್ರಹಣಕ್ಕೆ ಕಾರಣ ಅಲ್ಲ ಎಂದಿರುವುದನ್ನು ಬ್ರಹ್ಮಗುಪ್ತನು ಕಟುವಾಗಿ ವಿರೋಧಿಸುತ್ತಾನೆ. ಆ ರೀತಿಯ ನಿಲುವು ನಮ್ಮ ವೇದ, ಪುರಾಣ ಹಾಗೂ ಮನುಸ್ಮೃತಿಗೆ ಅಪಚಾರವೆಸಗಿದಂತೆ ಎಂದು ಹೇಳುತ್ತಲೇ, ಮುಂದೆ ಗ್ರಹಣಕ್ಕೆ ನಿಜವಾದ ವೈಜ್ಞಾನಿಕ ಕಾರಣವನ್ನು ಚರ್ಚಿಸಲು ಪ್ರಾರಂಭಿಸುತ್ತಾನೆ. ಇದು ಧರ್ಮಶಾಸ್ತ್ರಕಾರರಿಂದ ವಿಜ್ಞಾನವನ್ನು ಬದುಕಿಸಿ ಉಳಿಸಿಕೊಳ್ಳಲು ನಮ್ಮ ವಿಜ್ಞಾನಿಗಳು ಕಂಡುಕೊಂಡ ತಂತ್ರ. ಹಾಗಾಗಿಯೇ ಈ ಗ್ರಂಥಗಳು ಈವರೆಗೂ ಉಳಿದುಕೊಂಡು ಬಂದಿವೆ. ಲೋಕಾಯತರ ಗ್ರಂಥಗಳಂತೆ ಇವು ಹಾಳಾಗಿಲ್ಲ. ಆದರೆ ಮುಂದೆ ಇದಕ್ಕೆ ಬಲವಾದ ಬೆಲೆಯನ್ನೇ ತೆರಬೇಕಾಯಿತು.

ಚಟ್ಟೋಪಾಧ್ಯಾಯರು ತಮ್ಮ ಪುಸ್ತಕದಲ್ಲಿ ಮುಂದೆ ಆಯುರ್ವೇದದ ಪ್ರಮುಖ ಪದ್ಧತಿಗಳು, ವಿಧಾನಗಳು, ಅವುಗಳ ಹಿಂದೆ ಇದ್ದ ವೈಜ್ಞಾನಿಕ ಮನೋಭಾವವನ್ನು ತೀರಾ ವಿವರವಾಗಿ ಚರ್ಚಿಸುತ್ತಾರೆ. ನಂತರದ ವೈಜ್ಞಾನಿಕ ಬೆಳವಣಿಗೆ ಕುಂಠಿತಗೊಳ್ಳು ವುದಕ್ಕೆ ಕಾರಣಗಳನ್ನು ವಿವರಿಸುತ್ತಾರೆ. ಈ ಬಗ್ಗೆ ನಮ್ಮ ದೇಶದ ದೊಡ್ಡ ವಿಜ್ಞಾನಿಯಾಗಿದ್ದ ಆಚಾರ್ಯ ಪ್ರಫುಲ್ಲಚಂದ್ರರಾಯ್ ಮನೋಜ್ಞವಾಗಿ ಬರೆದಿದ್ದಾರೆ.  ರಾಯ್ ಅವರ ‘ಹಿಂದು ರಸಾಯನಶಾಸ್ತ್ರ‘ ಒಂದು ಉತ್ತಮ ಗ್ರಂಥ. ನಮ್ಮಲ್ಲಿ ವಿಜ್ಞಾನವು ದೊಡ್ಡ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸದಿರುವುದಕ್ಕೆ ಕೆಲವು ಕಾರಣಗಳನ್ನು ಅವರು ಈ ಗ್ರಂಥದಲ್ಲಿ ನೀಡುತ್ತಾರೆ. ಅವುಗಳಲ್ಲಿ ಜಾತಿಭೇದ ಮೊದಲ ಕಾರಣ. ಜತಿಭೇದದಿಂದಾಗಿ ದುಡಿಮೆ, ಶ್ರಮ ಇತ್ಯಾದಿಗಳನ್ನು ಜನ ಕೀಳ್ದರ್ಜೆಯ ಕೆಲಸವೆಂದು ಭಾವಿಸಿದರು. ಅದರಿಂದಾಗಿ ವಿಜ್ಞಾನದ ಪ್ರಗತಿಗೆ ಅಗತ್ಯವಾದ ನಿರೀಕ್ಷಣ-ಪರೀಕ್ಷಣಗಳತ್ತ ಜನರು ಗಮನ ಕೊಡುವುದನ್ನು ಕಡಿಮೆ ಮಾಡಿದರು. ರಾಯ್ ಅವರು ನೀಡಿದ ಎರಡನೇ ಕಾರಣ ವೇದಾಂತ ದರ್ಶನದ ಪ್ರಭಾವ. ಈ ದರ್ಶನದ ದೃಷ್ಟಿಯಲ್ಲಿ ಜಗತ್ತು ಮಾಯೆ, ಮಿಥ್ಯೆ. ಈ ಭಾವನೆಯೇ ವಿದ್ವಾಂಸರ ಮನಸ್ಸನ್ನು ತುಂಬಿಕೊಂಡರೆ, ಜಗತ್ತನ್ನು ಅರ್ಥಮಾಡಿಕೊಂಡು ಅದರ ಮೇಲೆ ವಿಜಯ ಸಾಧಿಸುವ ಉತ್ಸಾಹ ಎಲ್ಲಿಂದ ಬರುತ್ತದೆ?

ಹೀಗೆ ಮುಂದುವರೆಯುತ್ತದೆ ಅವರ ವಾದ. ಒಟ್ಟಿನಲ್ಲಿ ದೇವಿಪ್ರಸಾದರು ಗುರುತಿಸುವಂತೆ, ಪ್ರಾಚೀನ ಭಾರತದಲ್ಲಿ ವಿಜ್ಞಾನ ಮುಂದುವರೆಯಲು ಬೇಕಾದ ತಯಾರಿ ಸಾಕಷ್ಟು ಇತ್ತು. ಸಾಕಷ್ಟು ಪ್ರಗತಿಯೂ ಆಯಿತು, ಇದಕ್ಕೆ ನಮ್ಮ ಭೌತವಾದಿಗಳ ದೃಷ್ಟಿಕೋನವೂ ನೆರವಾಯಿತು. ಆದರೆ ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳಿಂದಾಗಿ ವಿಜ್ಞಾನದ ಬೆಳವಣಿಗೆ ತನ್ನ ವೇಗವನ್ನು ಕಳೆದುಕೊಂಡು ನಮ್ಮ ಹಲವಾರು ದರ್ಶನಶಾಖೆಗಳಂತೆಯೇ ತನ್ನ ಮೂಲ ಉದ್ದೇಶವನ್ನೇ ಬಿಟ್ಟ್ಪು ಬೇರೆ ದಾರಿ ಹಿಡಿಯಬೇಕಾಯಿತು.