ದೇವಿಪ್ರಸಾದರ ಕೊಡುಗೆಯನ್ನು ಪಟ್ಟಿಮಾಡುವುದು ಕಷ್ಟ. ಇವರ ವಿಚಾರಗಳನ್ನು ತಿಳಿಸುವುದೆಂದರೆ ಇವರ ಸಂಶೋಧನೆಯ ಹಿನ್ನೆಲೆಯಲ್ಲಿ ಮತ್ತೆ ಭಾರತೀಯ ದರ್ಶನಗಳನ್ನು ನೋಡುವುದೇ ಆಗುತ್ತದೆ. ಭಾರತೀಯ ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೇಳಿರುವಂತೆ ಇವರ ವಿಚಾರಗಳು ಹಲವಾರು ಪುಸ್ತಕಗಳಲ್ಲಿ ಪ್ರಕಟ ಗೊಂಡಿವೆ. ಈ ಎಲ್ಲಾ ವಿಚಾರಗಳನ್ನು ಹಾಗೂ ಸಂಶೋಧನೆಯ ಫಲವನ್ನು ಸ್ಥೂಲ ವಾಗಿ ಸಂಗ್ರಹಿಸಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇದೊಂದು ತೀರಾ ಸ್ಥೂಲವಾದ ಪರಿಚಯವಷ್ಟೆ. ಆಸಕ್ತರು ಅವರ ಮೂಲ ಗ್ರಂಥಗಳನ್ನು ಅವಲೋಕಿ ಸುವುದು ಅನಿವಾರ್ಯ. ಅದಕ್ಕೆ ಇದು ಪ್ರೇರಣೆಯಾದರೆ ಸಾಕು.

ಭಾರತೀಯ ದರ್ಶನಗಳನ್ನು ಗೌರವದಿಂದ ಕಾಣುತ್ತಲೇ ಅವುಗಳನ್ನು ನಿರ್ದಿಷ್ಟ ಐತಿಹಾಸಿಕ, ಸಾಮಾಜಿಕ  ಹಾಗೂ ಆರ್ಥಿಕ ಸನ್ನಿವೇಶಗಳಲ್ಲಿ ಇಟ್ಟು ನೋಡಬೇಕಾದ ಅನಿವಾರ್ಯತೆಯನ್ನು ಚಟ್ಟೋಪಾಧ್ಯಾಯರು ಮನಗಂಡಿದ್ದರು.  ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಮ್ಮ ಗತಕಾಲ ಹಾಗೂ ಪಾರಂಪರಿಕ ತತ್ವಜ್ಞಾನದ ಬಗ್ಗೆ ಪೂಜ್ಯಭಾವನೆ ಯಿಂದಿರುವುದು ಒಂದು ರೀತಿಯಲ್ಲಿ ಅನಿವಾರ್ಯವಾಗಿತ್ತು, ಏಕೆಂದರೆ ಭಾರತೀ ಯರನ್ನು ಅನಾಗರಿಕರು ಎಂದು ಕೀಳಾಗಿ ಕಾಣುತ್ತಿದ್ದ ಆಂಗ್ಲರ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅವು ಭಾರತೀಯರಿಗೆ ಒಂದು ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತಿದ್ದವು. ಆದರೆ ಪ್ರಜಾಪ್ರಭುತ್ವವನ್ನು ಆಯ್ಕೆಮಾಡಿಕೊಂಡಿದ್ದ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅವುಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ, ವಸ್ತುನಿಷ್ಠವಾಗಿ ವಿಶ್ಲೇಷಿಸಬೇಕಾದ ಅವಶ್ಯಕತೆ ಇದೆ. ಜೊತೆಗೆ, ಇವುಗಳ ಬಗ್ಗೆ ಒಂದು ವಿಮರ್ಶಾತ್ಮಕವಾದ ದೃಷ್ಟಿಕೋನವನ್ನು ಬೆಳೆಸುವುದು ಮುಖ್ಯವಾಗಿದೆ. ಅವುಗಳಲ್ಲಿ ಜೀವಂತವಾಗಿ ಉಳಿದಿರುವ ಮತ್ತು ಅಪ್ರಸ್ತುತವಾಗಿರುವ ಅಂಶಗಳನ್ನು ಪ್ರತ್ಯೇಕಿಸಿ, ಅವುಗಳೊಳಗಿನ ಭೇದಗಳನ್ನು ಗುರುತಿಸುವ ಜವಾಬ್ದಾರಿ ಕೂಡ ಇದೆ.  ಆ ಪರಂಪರೆಗಳಲ್ಲಿ ಅಮೂಲ್ಯವಾದವುಗಳನ್ನು, ವೈಜ್ಞಾನಿಕ ಬೆಳವಣಿಗೆಗೆ ಪೂರಕವಾಗಿರುವ ವಿಚಾರಗಳನ್ನು ಆಯ್ಕೆಮಾಡಿಕೊಂಡು ಅದನ್ನು ಇನ್ನೂ ಬೆಳೆಸುವುದು ಅವಶ್ಯಕ.

ಭಾರತೀಯ ದರ್ಶನಗಳನ್ನು ಸರಿಯಾದ ನಿಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕಾದರೆ, ಅದು ಬೆಳೆದುಬಂದ ಕ್ರಮವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.  ಐರೋಪ್ಯ ಮತ್ತು ಭಾರತೀಯ ತತ್ವಜ್ಞಾನಗಳು ಬೆಳೆದ ಕ್ರಮದಲ್ಲಿ ಒಂದು ಮೂಲಭೂತ ವ್ಯತ್ಯಾಸ ಕಾಣುತ್ತದೆ. ಯುರೋಪಿನಲ್ಲಿ ತತ್ವಜ್ಞಾನ ಪ್ರತಿಪಾದಕರು ಒಬ್ಬರ ನಂತರ ಇನ್ನೊಬ್ಬರು ಬಂದರು.  ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಹಿಂದಿನವರ ವಿಚಾರಗಳನ್ನು ತೀವ್ರವಾಗಿ ವಿಮರ್ಶಿಸುತ್ತಾ, ಸಂಪೂರ್ಣವಾಗಿ ಭಿನ್ನವಾದ ದೃಷ್ಟಿಕೋನದಿಂದ ಹೊಸ ತತ್ವಜ್ಞಾನವನ್ನು ಪ್ರತಿಪಾದಿಸಿದರು. ಆದರೆ ಭಾರತದಲ್ಲಿ ಹಾಗಾಗಲಿಲ್ಲ. ಅನೇಕ ಪರ್ಯಾಯ ದೃಷ್ಟಿಕೋನಗಳು ಹೆಚ್ಚುಕಡಿಮೆ ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದುದ್ದನ್ನು ಇಲ್ಲಿ ಕಾಣಬಹುದು. ನಂತರದ ಜಿಜ್ಞಾಸೆಗಳು ಹೊಸ ವಿಚಾರವನ್ನೇನೂ ಬೋಧಿಸದೆ,   ಕೇವಲ ಹಿಂದಿನ ಚಿಂತನೆಗಳ ಮುಂದುವರಿಕೆಯಾಗಿಯಷ್ಟೆ ಉಳಿದುಕೊಂಡವು.  ಯಾವುದಾದರೊಂದು ಪ್ರಾಚೀನ ತತ್ವಜ್ಞಾನವನ್ನು ಸಮರ್ಥಿಸುತ್ತಾ, ಅದರ ವಾದಗಳನ್ನೇ ಇನ್ನಷ್ಟು ಬಲಪಡಿಸಿ, ಬೇರೆ ವಾದಗಳನ್ನು ಹಿಂದಿನಂತಯೇ ಖಂಡಿಸುತ್ತಾ, ಕೆಲವೊಮ್ಮೆ ತಮ್ಮ ಖಂಡನೆಗೆ ಹೆಚ್ಚಿನ ಕಾರಣಗಳನ್ನು ಕೊಡುತ್ತಾ ತರ್ಕಬದ್ಧಗೊಳಿಸುತ್ತಾ ಮುಂದು ವರಿದವು. ಈ ಮೂಲಕ ಅವರು ಹಳೆಯ ಚಿಂತನೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿ ಉಳಿದುಕೊಂಡರೇ ಹೊರತು ಅವುಗಳನ್ನು ಅಲ್ಲಗಳೆಯುವ ಕೆಲಸಕ್ಕೆ ಕೈಹಾಕಲಿಲ್ಲ. ಇದರಿಂದಾಗಿ ಭಾರತದಲ್ಲಿ ಸುಮಾರು ಒಂದೇ ಸಮಯಕ್ಕೆ ಹುಟ್ಟಿ ಕೊಂಡಂತಹ ಹಲವಾರು ಪರ್ಯಾಯ ದರ್ಶನಗಳಲ್ಲಿ ಮೂಲ ತತ್ವಗಳು ಮಾತ್ರ ಹಾಗೆಯೇ ಉಳಿದುಕೊಂಡವು. ಇದರಿಂದಾಗಿ ಒಂದು ರೀತಿಯ ವೈಚಾರಿಕ ಸ್ಥಗಿತತೆ ಉಂಟಾಯಿತು.

ತುಂಬಾ ಪ್ರಾಚೀನ ಕಾಲದಿಂದಲೂ ಭಾರತದ ರಾಜಕೀಯ ಸ್ವರೂಪದಲ್ಲಿ ಬದಲಾವಣೆ ಆಗುತ್ತಿರುವಂತೆ ಕಂಡರೂ ಕೂಡ ಅದರ ಸಾಮಾಜಿಕ ಪರಿಸ್ಥಿತಿ ಮಾತ್ರ ೧೯ನೇ ಶತಮಾನದ ಮೊದಲನೆ ದಶಕದವರೆಗೂ ಹೆಚ್ಚೇನೂ ಬದಲಾಗದೇ ಉಳಿದಿತ್ತು ಎಂದು ಮಾರ್ಕ್ಸ್ ಅಭಿಪ್ರಾಯಪಡುತ್ತಾನೆ. ಜೊತೆಗೆ ಹಲವಾರು ಶತಮಾನಗಳ ಕಾಲ ಭಾರತದಲ್ಲಿ ಉತ್ಪಾದನಾ ವಿಧಾನದಲ್ಲಿ ಗಮನಾರ್ಹವಾದ ಸುಧಾರಣೆಯೂ ಆಗಿರಲಿಲ್ಲ. ಹಾಗಾಗಿ ಈ ವಿಶ್ವದ ಮೇಲೆ ಪ್ರಭುತ್ವವನ್ನು ಸಾಧಿಸುವುದಕ್ಕೆ ಮತ್ತು ಆ ಮೂಲಕ ಪ್ರಪಂಚವನ್ನು ಅರಿಯುವುದಕ್ಕೆ ಹೊಸ ಸಾಧ್ಯತೆಗಳೇ ತೆರೆದುಕೊಳ್ಳಲಿಲ್ಲ. ನಮ್ಮ ತತ್ವಜ್ಞಾನಿಗಳ ತಾತ್ವಿಕ ಜಿಜ್ಞಾಸೆಗಳೆಲ್ಲಾ ಪೂರ್ವ ನಿರ್ಧಾರಿತವಾದ ಕೆಲವು ಆಲೋಚನೆಗಳ ಚೌಕಟ್ಟಿನೊಳಗೇ ಉಳಿದವು. ಇದರರ್ಥ ಹೊಸ ವಿಚಾರಗಳು ಹುಟ್ಟಿಕೊಳ್ಳಲೇ ಇಲ್ಲ ವೆಂದಲ್ಲ. ಆದರೆ ನಿಜವಾಗಿಯೂ ಹೊಸ ವಿಚಾರವೊಂದನ್ನು ತತ್ವಜ್ಞಾನಿಯೊಬ್ಬ ಪ್ರಸ್ತಾಪಿಸಿದ ಸಂದರ್ಭದಲ್ಲಿ ಕೂಡ ಆ ತತ್ವಜ್ಞಾನಿಯು ಇದರಲ್ಲಿ ಹೊಸದೇನೂ ಇಲ್ಲ, ಏಕೆಂದರೆ ಈ ವಿಚಾರವು ತನ್ನ ದಾರ್ಶನಿಕ ಪರಂಪರೆಯಲ್ಲಿ ಅಂತರ್ಗತವಾಗಿತ್ತೆಂದು ಹಳಿಕೊಳ್ಳುತ್ತಿದ್ದ.

ದಾರ್ಶನಿಕ ಸಾಹಿತ್ಯ

ಭಾರತೀಯ ದಾರ್ಶನಿಕ ಸಾಹಿತ್ಯದ ಗ್ರಂಥಗಳನ್ನು ಸಾಮಾನ್ಯವಾಗಿ ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗುತ್ತದೆ.  ದಾರ್ಶನಿಕ ಪದ್ಧತಿಗಳ ಮೂಲ ಗ್ರಂಥಗಳನ್ನು ಸೂತ್ರ ಕೃತಿಗಳೆನ್ನುತ್ತಾರೆ.  ಈ ಸೂತ್ರಗಳನ್ನು ಕುರಿತ ವ್ಯಾಖ್ಯಾನಗಳನ್ನು ಭಾಗಳೆಂದು ಕರೆಯುತ್ತಾರೆ.  ಈ ಭಾಷ್ಯಗಳನ್ನು ಕುರಿತ ವ್ಯಾಖ್ಯಾನಗಳನ್ನು ಟೀಕೆಗಳೆಂದು ಕರೆಯುತ್ತಾರೆ.  ಇನ್ನು ಕೆಲವು ಕೃತಿಗಳು ಶ್ಲೋಕರೂಪದಲ್ಲಿವೆ.  ಅವುಗಳನ್ನು ಕಾರಿಕೆಗಳೆಂದು ಕರೆಯುತ್ತಾರೆ.  ಇನ್ನು ಕೆಲವು ಕೃತಿಗಳು ದೀರ್ಘವಾದ ವಿಮರ್ಶಾತ್ಮಕ ಪ್ರಬಂಧಗಳ ರೂಪದಲ್ಲಿವೆ.  ಅವುಗಳನ್ನು ವಾರ್ತಿಕ್ಯಗಳೆಂದು ಕರೆಯುತ್ತಾರೆ.  ಇವುಗಳಲ್ಲೆಲ್ಲಾ ಸೂತ್ರಗಳೇ ಪರಮೋನ್ನತ ಜ್ಞಾನಕೋಶ.  ಬೌದ್ಧರಿಗಾಗಲಿ, ಜೈನರಿಗಾಗಲಿ ಇಂತಹ ದಾರ್ಶನಿಕ ಸೂತ್ರಗಳಿರಲಿಲ್ಲ.  ಆದರೆ ಅವರೂ ಕೂಡ ಹೆಚ್ಚು ಕಡಿಮೆ ಇದೇ ಕ್ರಮದಲ್ಲಿ ದಾರ್ಶನಿಕ ಕೃತಿಗಳನ್ನು ರಚಿಸಿದ್ದರು.

ಈ ದಾರ್ಶನಿಕ ಸೂತ್ರಗಳನ್ನು ರಚಿಸಿದವರೆಂದು ಕೆಲವರ ಹೆಸರನ್ನು ಉಲ್ಲೇಖಿಸ ಲಾಗುತ್ತದೆ. ಆದರೆ ಅವು ಕೇವಲ ಹೆಸರುಗಳಾಗಿ ಉಳಿದುಕೊಂಡಿವೆಯೇ ಹೊರತು ಚಾರಿತ್ರಿಕವಾಗಿ ಅವರನ್ನು ಕುರಿತು ನಮಗೆ ಯಾವುದೇ ನಿಖರವಾದ ದಾಖಲೆಗಳಾಗಲೀ, ಮಾಹಿತಿಗಳಾಗಲೀ ಸಿಗುವುದಿಲ್ಲ. ನಮಗೆ ಸಿಗುವುದು ಒಂದಿಷ್ಟು ಕಟ್ಟುಕಥೆಗಳು ಮತ್ತು ಐತಿಹ್ಯಗಳು. ಹಾಗೆಯೇ ಈ ಸೂತ್ರಕೃತಿಗಳ ಕಾಲವೂ ಕೂಡ ಕೇವಲ ಒಂದು ಊಹೆ ಮಾತ್ರವಾಗಿದೆ. ಈ ಇಡೀ ದಾರ್ಶನಿಕ ಸೂತ್ರಗಳ ಧ್ವನಿ ಮತ್ತು ಹರಿವುಗಳನ್ನು ನೋಡಿದರೆ ಇವೆಲ್ಲಾ ಒಂದೇ ಸಾಹಿತ್ಯಕ ಕಾಲಘಟ್ಟದಲ್ಲಿ ಸೃಷ್ಟಿಯಾದವು ಅನ್ನಿಸುತ್ತದೆ. ಬಹುಶಃ ಸಾಂಖ್ಯದರ್ಶನವೊಂದು ಇದಕ್ಕೆ ಅಪವಾದವಿರಬಹುದು, ಏಕೆಂದರೆ ಅದು ನಂತರದ ರಚನೆಯಂತೆ ಕಂಡುಬರುತ್ತದೆ. ಈ ದಾರ್ಶನಿಕ ಆಲೋಚನೆಗಳನ್ನು ಸೂತ್ರರೂಪಕ್ಕೆ ಇಳಿಸಿದ ಕಾಲ ಯಾವುದೇ ಇರಲಿ, ಇವು ಹೀಗೆ ವ್ಯವಸ್ಥಿತ ರೂಪದಲ್ಲಿ ಪ್ರಕಟವಾಗುವುದಕ್ಕೆ ತುಂಬಾ ಮೊದಲೇ ಚರ್ಚೆಯಲ್ಲಿದ್ದವು ಮತ್ತು ದೀರ್ಘಕಾಲದ ಚರ್ಚೆಗಳ ನಂತರ ಈ ರೀತಿಯ ಅಡಕವಾದ ಸೂತ್ರಗಳ ರೂಪಕ್ಕೆ ಇಳಿದಿವೆ. ಬೌದ್ಧ ಧರ್ಮ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲೇ ಅಂದರೆ ಕ್ರಿ.ಪೂ ೫-೪ನೇ ಶತಮಾನದ ಹೊತ್ತಿಗೆ ಭಾರತದಲ್ಲಿ ತಾತ್ವಿಕ ಸಂವಾದಗಳು ಸಾಕಷ್ಟು ಬಿರುಸಿನಿಂದ ನಡೆದಿದ್ದವು.

ಈ ಎಲ್ಲಾ ವೈಶಿಷ್ಟ್ಯಗಳು ಭಾರತೀಯ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ತುಂಬಾ ಮುಖ್ಯವಾಗುತ್ತವೆ.  ಭಾರತೀಯ ತತ್ವಶಾಸ್ತ್ರದ ಬೆಳವಣಿಗೆಯೆಂದರೆ ಕೆಲವು ಸ್ಪಷ್ಟವಾದ ದಾರ್ಶನಿಕ ಪದ್ಧತಿಗಳ ಬೆಳವಣಿಗೆ ಎಂದೇ ಹೇಳಬಹುದು. ನಮ್ಮ ದಾರ್ಶನಿಕ ಪದ್ಧತಿಗಳು ಬಹಳ ಹಿಂದಿನ ಕಾಲದಲ್ಲಿ ಹುಟ್ಟಿದವಾದ್ದರಿಂದ ಹಲವಾರು ಗತಕಾಲದ ಅವಶೇಷಗಳು ಅವುಗಳೊಳಗೆ ಈಗಲೂ ಉಳಿದುಕೊಂಡಿವೆ.  ಹಾಗಾಗಿಯೇ ಧಾರ್ಮಿಕ ಅಂಧಶ್ರಧ್ಧೆ, ಪೌರಾಣಿಕ ಕಲ್ಪನೆಗಳು ಮತ್ತು ಮತಕ್ರಿಯಾ ವಿಧಿಗಳಿಂದ ನಮ್ಮ ತತ್ವಶಾಸ್ತ್ರದ ಆಲೋಚನೆಗಳು ಪೂರ್ಣವಾಗಿ ಮುಕ್ತವಾಗಿಲ್ಲ.  ಅದ್ಭುತವಾದ ತಾರ್ಕಿಕ ಸೂಕ್ಷ್ಮತೆ ಮತ್ತು ದ್ವಂದ್ವಾತ್ಮಕ ಚಿಂತನೆಯ ಸಾಮರ್ಥ್ಯದೊಂದಿಗೆ ಇವೆಲ್ಲವೂ ಶಾಂತಿಯುತವಾಗಿ ಸಹಬಾಳ್ವೆ ಮಾಡುತ್ತಾ ಬಂದಿವೆ. ಭಾರತೀಯ ತತ್ವಶಾಸ್ತ್ರ ಬೆಳೆದುಬಂದ ಈ ವಿಶಿಷ್ಟ ಕ್ರಮದ ಬಗ್ಗೆ ಏನೂ ಗೊತ್ತಿಲ್ಲದೆ, ಕೇವಲ ಯುರೋಪಿನ ಪರಂಪರೆಯ ತತ್ವಶಾಸ್ತ್ರೀಯ ಹಿನ್ನೆಲೆ ಮಾತ್ರ ಇರುವವರಿಗೆ ಈ ವೈಶಿಷ್ಟ್ಯ ಸುಲಭವಾಗಿ ಅರ್ಥವಾಗು ವುದಿಲ್ಲ, ಏಕೆಂದರೆ ಯುರೋಪಿನಲ್ಲಿ ತತ್ವಶಾಸ್ತ್ರ ಪ್ರಾರಂಭವಾದದ್ದೇ ಪ್ರಾಚೀನ ಕಾಲದ ಪೌರಾಣಿಕ ಕಥೆಗಳಿಂದ ಬಿಡುಗಡೆಗೊಳ್ಳುವುದರ ಮೂಲಕ.   ಭಾರತೀಯ ತತ್ವಶಾಸ್ತ್ರಜ್ಞರು ಉತ್ತಮವಾದ ಪರಿಷ್ಕೃತ ದಾರ್ಶನಿಕ ವಿಚಾರಗಳನ ರೂಪಿಸಿಕೊಂಡಿದ್ದರೂ ಕೂಡ ತಾವು ಯಾವುದನ್ನು ಪ್ರಾಚೀನ ಜ್ಞಾನಭಂಡಾರ ಎಂದು ಪರಿಗಣಿಸಿದ್ದರೋ ಅದರ ಪರಿಮಿತಿಗಳನ್ನು ಮೀರಿಕೊಂಡು ಮುಂದಕ್ಕೆ ಹೋಗಲು ಉತ್ಸುಕರಾಗಿರಲಿಲ್ಲ. ತಮ್ಮ ಪೂರ್ವಜರ ನಂಬಿಕೆಯ ಪ್ರಪಂಚವನ್ನು ಅಸ್ತವ್ಯಸ್ತಗೊಳಿಸಲು ಅವರು ಸಿದ್ಧರಿರಲಿಲ್ಲ.  ಆ ಪ್ರಾಕೃತ ನಂಬಿಕೆಗಳನ್ನು ಸ್ತುತಿಸುತ್ತಾ, ಕೆಲವೊಮ್ಮೆ ಅವುಗಳಿಗೆ ತಾರ್ಕಿಕ ಸಮರ್ಥನೆ ಯನ್ನು ಒದಗಿಸುತ್ತಾ ಅವುಗಳನ್ನು ಮುಂದುವರೆಸಿದರು. ಈ ವಿಚಿತ್ರ ಪರಿಸ್ಥಿತಿಗೆ ನಿಜವಾದ ಕಾರಣವನ್ನಾಗಲಿ, ತೃಪ್ತಿಕರವಾದ ವಿವರಣೆಯನ್ನಾಗಲಿ ನೀಡುವಷ್ಟು ನಮ್ಮ ಚಾರಿತ್ರಿಕ ಸಂಶೋಧನೆ ಮುಂದುವರೆದಿಲ್ಲ.

ಆದರೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಅಲಕ್ಷಿಸುವುದೂ ಕೂಡ ತಪ್ಪಾಗುತ್ತದೆ.  ಇದಕ್ಕೆ ಸಂಬಂಧಿಸಿದಂತೆ ಪ್ರಾಚೀನ ಗ್ರೀಕ್ ಚರಿತ್ರೆ ನಮಗೆ ಒಂದಿಷ್ಟು ದಾರಿತೋರ ಬಹುದು. ಗ್ರೀಸಿನಲ್ಲಿ ತತ್ವಶಾಸ್ತ್ರದ ಬೆಳವಣಿಗೆಯ ಪ್ರಾರಂಭದಲ್ಲಿ ವಿಶ್ವಸೃಷ್ಟಿಯನ್ನು ಕುರಿತು ಇದ್ದ ಕುರುಡು ನಂಬಿಕೆಗಳನ್ನು ಗ್ರೀಕ್ ತತ್ವಜ್ಞಾನಿಗಳು ಕಿತ್ತೊಗೆದರು, ಅದರೆ ಮುಂದೆ ಒಂದು ಘಟ್ಟದಲ್ಲಿ ಆ ಕುರುಡು ನಂಬಿಕೆಗಳು ಅವರಿಗೆ ಮತ್ತೆ ಅವಶ್ಯಕವಾದವು. ಪ್ರಾಚೀನ ಈಜಿಪ್ಟ್ ಮತ್ತು ಬ್ಯಾಬಿಲೋನಿಯಾದ ತತ್ವವೇತ್ತರು ಖಗೋಳಶಾಸ್ತ್ರ, ಜ್ಯಾಮಿತಿಯ ಪರಿಮಾಣಮಾಪನಗಳು, ಔಷಧಿಶಾಸ್ತ್ರ ಇವುಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದ್ದರು. ಆದರೆ, ವಿಶ್ವಸೃಷ್ಟಿಗೆ ಸಂಬಂಧಿಸಿದಂತೆ ಪೌರಾಣಿಕ ಮೂಢನಂಬಿಕೆಗಳನ್ನು ಉಳಿಸಿಕೊಂಡಿದ್ದರು. ಇದಕ್ಕೆ ಕಾರಣವನ್ನು ವಿವರಿಸಲು ಫ್ಯಾರಿಂಗ್‌ಟನ್ ಪ್ರಯತ್ನಿಸುತ್ತಾನೆ. ಈ ರಾಜ್ಯಗಳನ್ನು ನಿರಂಕುಷ ಅಧಿಕಾರದಿಂದ ನಿಯಂತ್ರಿಸುತ್ತಿದ್ದ ಪ್ರಭುತ್ವಕ್ಕೆ  ಮೂಢನಂಬಿಕೆ ಗಳು ತುಂಬಾ ಅಗತ್ಯವಿದ್ದವು.  ಖಗೋಳಶಾಸ್ತ್ರ, ಜ್ಯಾಮಿತಿ ಮುಂತಾದವು ಅದರಷ್ಟೇ ಅಗತ್ಯವಾಗಿದವು. ಅಧಿಕಾರ ಚಲಾವಣೆಗೆ ಮೂಢನಂಬಿಕೆಗಳು ಉಪಯುಕ್ತವಾಗಿದ್ದವು.  ಅವುಗಳಿಗೆ ಸಾಮಾಜಿಕ ಉಪಯುಕ್ತತೆ ಇತ್ತು. ಜನಸಾಮಾನ್ಯರು ತಮಗಿಂತ ಮೇಲಿನವರ ಆಜ್ಞೆಗಳನ್ನೆಲ್ಲಾ ವಿಧೇಯತೆಯಿಂದ ಅನುಸರಿಸುವ ರೂಢಿಗೆ ಜನರನ್ನು ಒಗ್ಗಿಸುವುದಕ್ಕೆ ಇವು ಸಹಕಾರಿಯಾಗಿದ್ದವು. ಪರಮಾತ್ಮನಿಗೆ ವಿಧೇಯರಾಗಿದ್ದವರು ಕಾನೂನುಗಳಿಗೆ ವಿಧೇಯರಾಗಿರುತ್ತಾರೆ ಎನ್ನುವ ಭಾವನೆಯೂ ಇತ್ತು. ಜನರನ್ನು ಕಾನೂನಿಗೆ ತಗ್ಗಿಬಗ್ಗಿ ನಡೆಯುವಂತೆ ಮಾಡಲು ಹಲವು ಬಗೆಯ ಪ್ರಚಾರ ತಂತ್ರಗಳ ಮೂಲಕ ಪೌರಾಣಿಕ ನಂಬಿಕೆಗಳು ಜನರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರುವಂತೆ ಮಾಡುವುದು ಬಹಳ ಅಗತ್ಯವೆಂದು ಪ್ಲೇಟೋ ಕೂಡ ಭಾವಿಸಿದ್ದ. ಇಂತಹ ಒಂದು ಸಾಮಾಜಿಕ ರಾಜಕೀಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವೈಚಾರಿಕ ದೃಷ್ಟಿಕೋನವನ್ನು ಪ್ರತಿಪಾದಿಸು ತ್ತಿದ್ದ ತತ್ವಜ್ಞಾನಿಗಳಿಗೆ ಪ್ರೋತ್ಸಾಹ ದೊರಕುವುದು ಸಾಧ್ಯವಿರಲಿಲ್ಲ.  ೧೭ನೇ ಶತಮಾನದ ಉತ್ತರಾರ್ಧದವರೆಗೆ ಭಾರತದಲ್ಲೂ ಹೆಚ್ಚುಕಡಿಮೆ ಸಾಮಾಜಿಕ ಹಾಗೂ ರಾಜಕೀಯವಾಗಿ ಇದೇ ಪರಿಸ್ಥಿತಿ ಇತ್ತು ಎಂದು ಹೇಳಬಹುದು. ವೇದ ಪ್ರಾಮಾಣ್ಯವನ್ನು ಆಧರಿಸದೆ, ತರ್ಕಬದ್ಧವಾಗಿ ಅಲೋಚಿಸಬೇಕು ಎನ್ನುವವರನ್ನು ಕಂಡರೆ ನಮ್ಮ  ಶಾಸನಕರ್ತರಿಗೆ ತುಂಬಾ ಗಾಬರಿ ಇತ್ತು. ಅಂತಹ ಮುಕ್ತ ಚಿಂತಕರನ್ನು ನಮ್ಮ ಶಾಸನಕರ್ತರು ದೈವ ದ್ವೇಷಿಗಳೆಂದೂ, ಭೌತಿಕವಾದಿಗಳೆಂದೂ ದೂಷಿಸುತ್ತಿದ್ದರು. ಇವರ ವಿಚಾರಗಳು ಸಾಮಾಜಿಕವಾಗಿ ವ್ಯಾಪಕವಾದಷ್ಟೂ ಪ್ರಜೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಜಾರಿಮಾಡುವುದು ಕಷ್ಟವಾಗುತ್ತದೆ ಎಂದು ಸ್ಮೃತಿಕಾರರು ಭಾವಿಸಿದ್ದರು.  ಭೌತವಾದಿ ಗಳನ್ನು ಖಂಡಿಸುವ ವಿಚಾರದಲ್ಲಿ ಎಲ್ಲಾ ದಾರ್ಶನಿಕರೂ ಒಂದಾಗಿದ್ದರು.

ಭಾರತೀಯ ತತ್ವಶಾಸ್ತ್ರವು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಪ್ರಾಕೃತ ಮತ್ತು ಪೌರಾಣಿಕ ಕಟ್ಟುಕಥೆಗಳ ಪ್ರಭಾವದಿಂದ ಅದು ಎಂದೂ ಸಂಪೂರ್ಣವಾಗಿ ಬಿಡುಗಡೆ ಹೊಂದಿರಲಿಲ್ಲ. ಹೀಗೆ ಇಲ್ಲಿ ತತ್ವಶಾಸ್ತ್ರ ಗತಕ್ಕೆ ಜೋತುಬಿದ್ದುದರಿಂದ, ತತ್ವಶಾಸ್ತ್ರದಿಂದ ಧರ್ಮವನ್ನು ಸಂಪೂರ್ಣವಾಗಿ ಬೇರ‍್ಪಡಿಸುವುದು ಸಾಧ್ಯವಾಗಿಲ್ಲ. ಹಾಗಾಗಿಯೇ ಭಾರತದಲ್ಲಿ ಆಲೋಚನೆಗಳಿಗೂ ಮತ್ತು ಆಚರಣೆಗಳಿಗೂ ನಡುವೆ ತುಂಬಾ ದೊಡ್ಡ ಕಂದಕವಿದೆ.  ತುಂಬಾ ಪುರೋಗಾಮಿಯಾದ, ಉನ್ನತ ಮಟ್ಟದ ತಾತ್ವಿಕ ವಿಚಾರಗಳನ್ನು ಪ್ರತಿಪಾದಿಸಿದ ತತ್ವಜ್ಞಾನಿಗಳ ದೈನಂದಿನ ಬದುಕು ಮಾತ್ರ ಅದಕ್ಕಿಂತ ತುಂಬಾ ಭಿನ್ನವಾಗಿರುತ್ತಿತ್ತು. ಅವರ ದೈನಂದಿನ ಬದುಕು ಬಹಳಷ್ಟು ಸಲ ಆಶ್ಚರ್ಯವಾಗುವಷ್ಟು ಪ್ರತಿಗಾಮಿಯಾಗಿ ಹಿಂದುಳಿದಿರುತ್ತಿತ್ತು.  ಹಾಗಾಗಿ ಈ ಪ್ರತಿಗಾಮಿ ಜೀವನ ಕ್ರಮವನ್ನು ಟೀಕಿಸುವ ಹುಮ್ಮಸ್ಸಿನಲ್ಲಿ ಅವರ ನಿಜವಾದ ದಾಶನಿಕ ಕೊಡುಗೆಗಳನ್ನು ಕಡೆಗಣಿಸಲಾಗುವುದಿಲ್ಲ. ಅದನ್ನು ಅವರ ಜೀವನಕ್ರಮದಿಂದ ಬೇರ‍್ಪಡಿಸಿ ನೋಡಬೇಕಾಗುತ್ತದೆ.

ಹಿರಿಯಣ್ಣನವರ ದೃಷ್ಟಿಯಲ್ಲಿ “ಭಾರತೀಯ ತತ್ವಜ್ಞಾನ ತರ್ಕವನ್ನು ಮೀರಿನಿಲ್ಲುತ್ತದೆ.  ಅದು ಪಾಶ್ಚಿಮಾತ್ಯ  ದೇಶಗಳಂತೆ ವಿಸ್ಮಯದಿಂದಾಗಲಿ ಅಥವಾ ಕುತೂಹಲದಿಂದಾಗಲಿ ಹುಟ್ಟಿದ್ದಲ್ಲ.  ಬದಲಾಗಿ ಜೀವನದಲ್ಲಿ ಕಂಡುಬಂದ ನೈತಿಕ ಮತ್ತು ಭೌತಿಕ ಕೆಡುಕಿಗೆ ಪರಿಹಾರವಾಗಿ ಹುಟ್ಟಿತ್ತು.” ಹಾಗಾಗಿ ಈ ಕೆಡುಕಿನ ನಿರ್ಮೂಲನ ಹೇಗೆ ಎಂಬುದೇ ಎಲ್ಲಾ ಪ್ರಾಚೀನ ಭಾರತೀಯರನ್ನು ಬಹುವಾಗಿ ಕಾಡಿದ್ದು. ಪ್ರತಿ ಭಾರತೀಯ ದರ್ಶನದಲ್ಲೂ  ಮೋಕ್ಷವನ್ನು ಎಲ್ಲಾ ಬಗೆಯ ಕೆಡುಕಿನಿಂದ ಮುಕ್ತಗೊಂಡ ಸ್ಥಿತಿಯೆಂದು ಭಾವಿಸಲಾಗಿದೆ. ಎಲ್ಲಾ ತತ್ವಜ್ಞಾನಿಗಳೂ ಮೋಕ್ಷದ ಕಲ್ಪನೆಯನ್ನು ಒಪ್ಪಿಕೊಂಡಿದ್ದರೆಂಬುದು ಸ್ವಲ್ಪ ಉತ್ಪ್ರೇಕ್ಷೆಯಾಗುತ್ತದೆ. ಲೋಕಾಯತಿಕರೇ ಪೂರ್ವಿಕರ ಕಲ್ಪನೆಗಳನ್ನು ಲೇವಡಿಮಾಡುತ್ತಾರೆ. ಜೊತೆಗೆ, ದೇವೀಪ್ರಸಾದರು ಪ್ರತಿಪಾದಿಸುವಂತೆ, ಆರ್ಥಿಕತೆ ಹಿಂದುಳಿದಿದ್ದರಿಂದ ಹಾಗೂ ಸ್ಥಗಿತಗೊಂಡಿದ್ದರಿಂದ ಈ ಮೋಕ್ಷದೆ ಕಲ್ಪನೆ ಹುಟ್ಟಿ ಕೊಂಡಿದೆ. ವಿಶ್ವದ ಮೇಲೆ ಹೆಚ್ಚಿನ ಹತೋಟಿ ಸಾಧ್ಯವಾಗದೆ ಹೋದಾಗ, ಮೋಕ್ಷದ ಕಲ್ಪನೆಯ ಮೂಲಕ ತತ್ವಜ್ಞಾನಿಗಳು ಕೆಡುಕಿನಿಂದ ತಪ್ಪಿಸಿಕೊಳ್ಳಲು ಮೋಕ್ಷದ ಆದರ್ಶಕ್ಕೆ ಶರಣಾದರು.

ಭಾರತೀಯ ತತ್ವಶಾಸ್ತ್ರ ಸುಮಾರು ೨೫೦೦ ವರ್ಷಗಳ ದೀರ್ಘ ಅವಧಿಯಲ್ಲಿ ರೂಪುಗೊಂಡಿದೆ. ಅಲ್ಲಿಂದ ಅದು ನವ್ಯನ್ಯಾಯ ತತ್ವಜ್ಞಾನದವರೆಗೂ ಬೆಳೆದಿದೆ.  ಇಷ್ಟು ವಿಶಾಲವಾದ ವ್ಯಾಪ್ತಿಯಿರುವ ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಗ್ರಹಿಸಿ ಕೊಳ್ಳಲು ಈ ತತ್ವಶಾಸ್ತ್ರ ಬೆಳೆದು ರೂಪುಗೊಂಡಿರುವ ವಿಧಾನವನ್ನು ಅರ್ಥಮಾಡಿ ಕೊಳ್ಳಬೇಕು. ಈ ವಿಧಾನವನ್ನು ತುಂಬಾ ಸ್ಪಷ್ಟವಾಗಿ ದಾಖಲಿಸಿದವರು ಗೌತಮ ಮತ್ತು ವಾತ್ಸ್ಯಾಯನ.  ಭಾರತೀಯ ತತ್ವಶಾಸ್ತ್ರದಲ್ಲಿ ಮೊದಲು ಪೂರ್ವಪಕ್ಷವನ್ನು ಮಂಡಿಸುತ್ತಾರೆ. ಪೂರ್ವಪಕ್ಷವೆಂದರೆ, ತನ್ನ ಎದುರಾಳಿಯ ನಿಲುವನ್ನು ಮತ್ತು ಸಿದ್ಧಾಂತವನ್ನು ಸಂಗ್ರಹಿಸಿ ಮಂಡಿಸುವುದು. ನಂತರ ಎರಡನೆಯ ಹಂತದಲ್ಲಿ ಅದನ್ನು ಸಂಪೂರ್ಣವಾಗಿ ಖಂಡಿಸುವುದು.  ಮೂರನೆಯ ಹಂತದಲ್ಲಿ ಸ್ವತಃ ತನ್ನ ಸಿದ್ಧಾಂತವನ್ನು ಅಂದರೆ ತನ್ನ ತಾತ್ವಿಕ ನಿಲುವನ್ನು ಮಂಡಿಸುವುದು. ಹಾಗಾಗಿ ಒಂದು ಗಂಭೀರ ತಾತ್ವಿಕ ಚರ್ಚೆಯಲ್ಲಿ ಮೊದಲು ಎಲ್ಲಾ ವಾದಗಳನ್ನೂ ಪೂರ್ವಪಕ್ಷದ ಪರವಾಗಿ ಅತ್ಯಂತ ಸುವ್ಯವಸ್ಥಿತವಾಗಿ ಮಂಡಿಸಲಾಗುತ್ತದೆ. ಹೀಗೆ ಆ ತತ್ವಜ್ಞಾನ ಸಂಪ್ರದಾಯವನ್ನು ಸಂಪೂರ್ಣವಾಗಿ, ಸುವ್ಯವಸ್ಥಿತವಾಗಿ ಪ್ರತಿಪಾದಿಸಿದ ನಂತರ ಅದನ್ನು ಉರುಳಿಸುವ ಕೆಲಸ ಪ್ರಾರಂಭವಾಗುತ್ತದೆ.  ಪೂರ್ವಪಕ್ಷದ ಎಲ್ಲಾ ಅಂಶಗಳನ್ನೂ ಸಂಪೂರ್ಣವಾಗಿ ಖಂಡಿಸಿದ ನಂತರ ತನ್ನ ಸಿದ್ಧಾಂತವನ್ನು ತತ್ವಶಾಸ್ತ್ರಜ್ಞನು ಅತ್ಯಂತ ಸಮರ್ಥವಾಗಿ ಮಂಡಿಸುತ್ತಾನೆ. ಈ ಸುತ್ತು ಬಳಸು ಕ್ರಮದಿಂದಾಗಿ ನಮ್ಮ ದಾರ್ಶನಿಕ ಸಿದ್ಧಾಂತಗಳನ್ನು ಕೆಲವೊಮ್ಮೆ ಅರ್ಥಮಾಡಿಕೊಳ್ಳುವುದೇ ಕಷ್ಟವಾಗುತ್ತದೆ.

ದಾರ್ಶನಿಕತೆ ಕೇವಲ ಬರಹಗಳಿಗೆ ಮಾತ್ರವೇ ಸೀಮಿತವಾಗಿರಲಿಲ್ಲ, ಹಲವು ಬಾರಿ ಸಾರ್ವಜನಿಕವಾಗಿಯೂ ಚರ್ಚೆಗಳು ನಡೆಯುತ್ತಿದ್ದವು. ಈ ಸಾರ್ವಜನಿಕ ಚರ್ಚೆಗಳಿಂದಾಗಿಯೇ ಒಂದು ನಿಜವಾದ ತರ್ಕಶಾಸ್ತ್ರದ ವಿಧಾನ ಪರಿಷ್ಕಾರಗೊಂಡಿತು ಎನ್ನುವುದನ್ನು ಶೆರ್ಬಾಟ್ಸ್ಕಿಯಂಥ ವಿದ್ವಾಂಸರು ಗುರುತಿಸುತ್ತಾರೆ. ಸಾರ್ವಜನಿಕ ಚರ್ಚೆಗಳನ್ನು ನಡೆಸುವ ಬೇರೆ ಬೇರೆ ಕ್ರಮಗಳನ್ನು ವಿವರಿಸುವ ತರ್ಕಶಾಸ್ತ್ರದ ಅತ್ಯಂತ ಪ್ರಾಚೀನ ಗ್ರಂಥ ನ್ಯಾಯಸೂತ್ರ ಬಂದದ್ದು ಈ ಸಂದರ್ಭದಲ್ಲೇ.  ಇಂತಹ ಚರ್ಚೆಯಲ್ಲಿ ಗೆದ್ದವರಿಗೆ ರಾಜಾಶ್ರಯ ಸಿಗುತ್ತಿತ್ತು. ಹೊಸ ವಿಹಾರಗಳೂ ಪ್ರಾರಂಭ ವಾಗುತ್ತಿದ್ದವು. ಇದು ಹೆಚ್ಚುಕಡಿಮೆ ಬೌದ್ಧಧರ್ಮ ತುಂಬಾ ವ್ಯಾಪಕವಾಗಿ ಹಬ್ಬಿಕೊಳ್ಳುತ್ತಿದ್ದ ಕಾಲ. ಆ ಹೊತ್ತಿನಲ್ಲಿ ಬಹುತೇಕ ಬೌದ್ಧವಿಹಾರಗಳು ಹೆಚ್ಚುಕಡಿಮೆ ವಿಶ್ವವಿದ್ಯಾನಿಲಯ ಗಳಾಗಿ ರೂಪುಗೊಂಡವು. ಇದರ ಜೊತೆಜೊತೆಯಲ್ಲಿ ಮತ್ತೊಂದು ಬೆಳವಣಿಗೆಯು ಪ್ರಾರಂಭವಾಯಿತು. ವಿಶ್ವವಿದ್ಯಾನಿಲಯಗಳೊಳಗಿದ್ದ ತತ್ವವೇತ್ತರು ಸಾಮಾಜಿಕವಾಗಿ ಕೆಲಸಮಾಡುವುದನ್ನೇ ಬಿಟ್ಟು ಕೇವಲ ತಾತ್ವಿಕ ಜಿಜ್ಞಾಸೆಗಷ್ಟೇ ತಮ್ಮನ್ನು ಸೀಮಿತಗೊಳಿಸಿ ಕೊಂಡರು. ಇದು ವಾಸ್ತವಿಕ ಜಗತ್ತನ್ನು ಅಲ್ಲಗಳೆಯುವಂತಹ ಭಾವನಾವಾದಿ ದೃಷ್ಟಿಕೋನದ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಿತು. ಅದರ ನೆರಳಲ್ಲಿ ಅಸಂಖ್ಯಾತ ಮೂಢನಂಬಿಕೆಗಳೂ ಬೆಳೆದವು. ಬಹಳಷ್ಟು ಸಲ ಈ ದಾರ್ಶನಿಕರು ಪ್ರತಿಪಾದಿಸಿದ್ದ ದೃಷ್ಟಿಕೋನಗಳಿಗೂ ಅವರ ಬದುಕಿಗೂ ಸಂಬಂಧವೇ ಇರುತ್ತಿರಲಿಲ್ಲ. ಉದಾಹರಣೆಗೆ ನ್ಯಾಯದರ್ಶನದ ತತ್ವಜ್ಞಾನಿಗಳು ಶಿವನ ಉಪಾಸಕರಾಗಿದ್ದರೆಂದು ನಮ್ಮ ಪರಂಪರೆ ಪರಿಗಣಿಸುತ್ತದೆ. ಆದರೆ ಪ್ರಾಯೋಗಿಕ ಅನುಭವವೊಂದೇ ಜ್ಞಾನದ ಮೂಲವೆಂಬುದು ಅವರ ಮುಖ್ಯ ಸಿದ್ಧಾಂತವಾಗಿತ್ತು.

ಭಾರತೀಯ ತತ್ವಶಾಸ್ತ್ರದ ಪರಂಪರೆಯನ್ನು ಒಮ್ಮೆ ಸ್ಥೂಲವಾಗಿ ಅವಲೋಕಿಸಿದರೆ, ತಾತ್ವಿಕವಾಗಿ ಕೆಲವು ಪ್ರಶ್ನೆಗಳು ನಮ್ಮ ದಾರ್ಶನಿಕರಿಗೆ ಮುಖ್ಯವಾಗಿದ್ದನ್ನು ಗಮನಿಸ ಬಹುದು. ಜೊತೆಗೆ ಅವು ಪದೇ ಪದೇ ಚರ್ಚಿತವಾಗಿರುವುದು ಕಂಡುಬರುತ್ತದೆ.  ಭೌತಪ್ರಪಂಚ ವಾಸ್ತವವೇ ಅಥವಾ ಕೇವಲ ಭ್ರಮೆಯೇ ಹಾಗೂ ಅದನ್ನು ಸರಿಯಾಗಿ ಅರಿತುಕೊಳ್ಳಲು ತತ್ವಜ್ಞಾನಿಯು ಮಾಡುವ ಪ್ರಯತ್ನ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದರ ಬಗ್ಗೆ ತುಂಬಾ ಚರ್ಚೆ ನಡೆದಿದೆ. ಇದು ಎಷ್ಟೊಂದು ಮುಖ್ಯವಾಗಿಬಿಟ್ಟಿದೆ ಎಂದರೆ, ಇದರ ಆಧಾರದ ಮೇಲೆ ಭಾರತೀಯ ತತ್ವಜ್ಞಾನಿಗಳನ್ನು ಎರಡು ಪ್ರಮುಖ ವಿರೋಧಿ ಗುಂಪುಗಳನ್ನಾಗಿ ವಿಭಜಿಸುವ ಪರಿಪಾಠವಿದೆ. ಭಾರತೀಯ ತತ್ವಜ್ಞಾನ ಪರಂಪರೆಯನ್ನು ವ್ಯವಸ್ಥಿತವಾಗಿ ಅರ್ಥಮಾಡಿಕೊಳ್ಳಲು ಈ ಮೂಲಭೂತ ವೈರುಧ್ಯದಿಂದಲೇ ಪ್ರಾರಂಭ ಮಾಡುವುದು ಸೂಕ್ತ ಎನಿಸುತ್ತದೆ.

ಜಗತ್ತು ಮಿಥ್ಯೆ, ಶುದ್ಧ ಪ್ರಜ್ಞೆಯೊಂದೇ ಸತ್ಯ ಎಂಬುದು ಭಾವನಾವಾದಿಗಳ ನಿಲುವು. ಇವರದು ಭಾರತೀಯ ತತ್ವಶಾಸ್ತ್ರ ಪರಂಪರೆಯ ಒಂದು ಪ್ರಮುಖ ಗುಂಪು. ಭಾರತೀಯ ತತ್ವಜ್ಞಾನಿಗಳ ಮತ್ತೊಂದು ಗುಂಪು ಈ ನಿಲುವನ್ನು ಬಲವಾಗಿ ಖಂಡಿಸಿತು ಮತ್ತು ಭೌತಿಕ ಜಗತ್ತು ಪರಮಸತ್ಯ ಎನ್ನುವುದು ಅವರ  ನಿಲುವಾಗಿತ್ತು. ಅವರನ್ನು ಭೌತಿಕವಾದಿಗಳೆಂದು ಕರೆಯುತ್ತಾರೆ. ಇದಲ್ಲದೆ ಈ ಭಾವನವಾದಿ ಹಾಗೂ ಭೌತವಾದಿಗಳೊಳಗೇ ಹಲವಾರು ವಿಭಿನ್ನ ದರ್ಶನಗಳಿದ್ದವು. ಈ ದರ್ಶನಗಳ ನಡುವೆಯೇ ಹಲವಾರು ಭಿನ್ನಾಭಿಪ್ರಾಯಗಳು ಹಾಗೂ ವೈರುಧ್ಯಗಳು ಇದ್ದವು.  ಹಾಗಾಗಿ ಈ ಎರಡೂ ಗುಂಪುಗಳಿಗೆ ಸೇರಿದ ದಾರ್ಶನಿಕರು ತಾವು ಅನುಸರಿಸುವ ಪಂಥಗಳ ಹೆಸರಿನಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು. ಉದಾಹರಣೆಗೆ, ತನ್ನನ್ನು ವೇದಾಂತಿ, ಮೀಮಾಂಸಕ, ಸಾಂಖ್ಯ, ಅಥವಾ ನೈಯ್ಯ್ಯಾಯಿಕ ಇತ್ಯಾದಿ ಕರೆದುಕೊಳ್ಳುತ್ತಿದ್ದರು.

ಭಾವನಾವಾದವನ್ನು ವಿರೋಧಿಸಿದ ಪ್ರತಿಯೊಂದು ಭೌತಿಕವಾದಿ ಸಿದ್ಧಾಂತವೂ ತನ್ನ ವಾದವನ್ನು ಬೇರೆ ಬೇರೆ ನೆಲೆಯಿಂದ ಮಂಡಿಸಿತ್ತು. ಹಾಗಾಗಿ ಭೌತಿಕವಾದಿ ಸಿದ್ಧಾಂತ ಎನ್ನುವುದು ಸಂಪೂರ್ಣವಾಗಿ ಒಂದು ಸುಸಂಬದ್ಧ ಪರ್ಯಾಯ ವಾದವಾಗಿ ರೂಪುಗೊಳ್ಳಲಿಲ್ಲ. ಇದು ಭೌತಿಕವಾದದ ಬಗ್ಗೆ ಇರುವ ಬಹುಮುಖ್ಯ ಆಕ್ಷೇಪ ಕೂಡ. ಆದರೆ ಈ ಎಲ್ಲಾ ಮಿತಿಗಳ ನಡುವೆಯೂ ಅವುಗಳು ಭಾರತೀಯ ತತ್ವಶಾಸ್ತ್ರ ಪರಂಪರೆಯಲ್ಲಿ ಒಂದು ಸಕಾರಾತ್ಮಕ ಸಿದ್ಧಾಂತವನ್ನು ರೂಪಿಸಲು ಪ್ರಯತ್ನಿಸಿದವು ಎನ್ನುವುದು ಮುಖ್ಯ.

ಇಲ್ಲಿ ಇನ್ನೊಂದು ವಿಷಯದಲ್ಲಿ ನಾವು ಎಚ್ಚರವಹಿಸಬೇಕು. ಭಾವನಾವಾದವನ್ನು ವಿರೋಧಿಸಿದೆ ಎಂದ ಮಾತ್ರಕ್ಕೆ ಒಂದು ದರ್ಶನವು ವಿಜ್ಞಾನದ ಬೆಳವಣಿಗೆಗೆ ಪೂರಕ ವಾಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಏಕೆಂದರೆ ಮೂಲಭೂತವಾಗಿ ಧರ್ಮದ ಬಗ್ಗೆ ಒಲವು ಇರುವವರೆಗೆ ಅವು ವಿಜ್ಞಾನ ವಿರೋಧಿಯೇ ಆಗಿರುತ್ತವೆ. ಮಹಾಯಾನ ತತ್ವಜ್ಞಾನಿಯಾದ ಶುಭಗುಪ್ತನು ಭಾವನಾವಾದವನ್ನು ಖಂಡಿಸಿದ ಎನ್ನುವುದು ನಿಜ. ಆದರೆ ಅವನದು ಜಾತ್ಯತೀತ ಮನೋಭಾವವೇನಾಗಿರಲಿಲ್ಲ. ಅವನು ವೈಚಾರಿಕತೆ ಮತ್ತು ವಿಜ್ಞಾನ ಇವುಗಳ ನಿಜವಾದ ಸತ್ವವನ್ನು ಪ್ರತಿನಿಧಿಸಲೂ ಇಲ್ಲ.

ಈ ಭಾವನಾವಾದಿ ಮತ್ತು ಭೌತಿಕವಾದಿ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ಮುಖ್ಯವಾಗಿ ಮುಕ್ತ ಚಿಂತನೆ, ವೈಚಾರಿಕತೆ, ತಾರ್ಕಿಕತೆ ಹಾಗೂ ವಿಜ್ಞಾನದ ಬೆಳವಣಿಗೆಗೆ ಪೂರಕವಾಗುವ ಮತ್ತು ಆ ಮೂಲಕ ಪ್ರಗತಿ ಮತ್ತು ಇಡೀ ಸಮಾಜದ ಎಲ್ಲಾ ವರ್ಗದ ಜನಗಳ ಅಭಿವೃದ್ಧಿಗೆ ಕಾರಣವಾಗುವ ಅಂಶಗಳನ್ನು ಅರ್ಥಮಾಡಿ ಕೊಳ್ಳುವ ಪ್ರಕ್ರಿಯೆಯೂ ಆಗುತ್ತದೆ. ಹಾಗೆಯೇ ಮುಕ್ತ ಚಿಂತನೆಗೆ ಅಡ್ಡಿಮಾಡುತ್ತಾ ಸಮಾಜದ ಯಾವುದೋ ಒಂದು ವರ್ಗದ ಜನರು ಮಾತ್ರ ಸುಖಿಸುತ್ತಾ ಉಳಿದವರು ದುಡಿಯುತ್ತಾ ಇರುವ ಪ್ರವೃತ್ತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದೂ ಆಗುತ್ತದೆ. ಇವೆರಡರ ಜೊತೆಗೆ ಇದು ವಿಜ್ಞಾನ ಮತ್ತು ವೈಚಾರಿಕತೆಯ ಬೆಳವಣಿಗೆ ಹಾಗೂ ಅದಕ್ಕೆ ಒದಗಿಬಂದ ಅಡ್ಡಿ ಆತಂಕ ಇವುಗಳನ್ನು ಅರಿಯುವ ಅಧ್ಯಯನವೂ ಆಗುತ್ತದೆ.

ಭಾರತದಲ್ಲಿ ಧರ್ಮಶಾಸ್ತ್ರಜ್ಞರು ಮುಕ್ತ ಚಿಂತನೆಯನ್ನು ತುಂಬಾ ವಿರೋಧಿಸಿದರು. ಸತ್ಯದ ಹುಡುಕಾಟಕ್ಕೆ, ಅನ್ವೇಷಣೆಗೆ ಪೂರಕವಾದ ವಾತಾವರಣವನ್ನು ಹೊಸಕಿಹಾಕಲು ಪ್ರಯತ್ನಿಸಿದರು. ಇದಕ್ಕೆ ತೀವ್ರ ಭಾವನಾವಾದಿಗಳ ಸಂಪೂರ್ಣ ಬೆಂಬಲವೂ ಇತ್ತು. ಮುಕ್ತ ಚಿಂತನೆಯನ್ನು ಧರ್ಮಶಾಸ್ತ್ರಜ್ಞರು ತುಂಬಾ ತೀವ್ರವಾಗಿ ವಿರೋಧಿಸುವುದಕ್ಕೆ ಒಂದು ಸ್ಪಷ್ಟ ಸಾಮಾಜಿಕ ಉದ್ದೇಶವಿದೆ. ಭಾರತದ ಚಾತುರ್ವಣ್ಯ ವ್ಯವಸ್ಥೆಯಲ್ಲಿ ಮೂರೂ ವರ್ಣದ ದ್ವಿಜರ ಒಟ್ಟು ಸಂಖೈಗಿಂತ ಶೂದ್ರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿಗೆ ಇತ್ತು. ಹಾಗಾಗಿ ಅವರನ್ನು ಹಿಡಿತದಲ್ಲಿಡುವುದಕ್ಕೆ, ರಾಜ್ಯಾಡಳಿತವನ್ನು ಸುಗಮಗೊಳಿಸಿಕೊಳ್ಳುವುದಕ್ಕೆ ಮತ್ತು ಪ್ರಜೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವುದಕ್ಕೆ ಬಲವೊಂದೇ ಸಾಲದು. ಮೂಢನಂಬಿಕೆಗಳು ಮತ್ತು ಆಂಧಶ್ರದ್ಧೆ ತುಂಬಾ ಉಪಯೋಗಕ್ಕೆ ಬರುತ್ತಿತ್ತು.  ಪುನರ್ಜನ್ಮದ ನಂಬಿಕೆ ಪ್ರಭುತ್ವದ ಸುರಕ್ಷೆಗೆ ತುಂಬಾ ಅನಿವಾರ್ಯವಾಗಿತ್ತು.  ಯಾವುದನ್ನೇ ಆಗಲಿ ಪ್ರಶ್ನಸಿದೇ ಒಪ್ಪಿಕೊಳ್ಳುವುದು ಅವರಿಗೆ ಬೇಕಾಗಿತ್ತು.  ಮುಕ್ತಚರ್ಚೆ ಯಲ್ಲಿ ತೊಡಗಿಕೊಳ್ಳುವವರನ್ನು ಹೈತುಕರೆಂದು ಕರೆದು ಅವರೊಡನೆ ಯಾವ ಬಗೆಯ ಸಂಪರ್ಕವನ್ನೂ ಹೊಂದಬಾರದೆಂಬ ಕಟ್ಟುಪಾಡನ್ನೂ ಹಾಕಿದ್ದರು. ಇದಕ್ಕೆ ಭಾವನಾವಾದಿಗಳ ಬೆಂಬಲವೂ ಇತ್ತು. ಈ ಭೌತಿಕ ಜಗತ್ತು ಸಂಪೂರ್ಣವಾಗಿ ಒಂದು ಭ್ರಮೆ ಹಾಗೂ ಮಿಥ್ಯೆ ಎನ್ನುವ ಭಾವನಾವಾದಿಗಳು  ವೈಚಾರಿಕತೆಯನ್ನು ಬೆಂಬಲಿಸುವುದು ಹೇಗೆ ತಾನೆ ಸಾಧ್ಯ?  ಈ ಪ್ರವೃತ್ತಿಯನ್ನು ನಮ್ಮ ಮಹಾಕಾವ್ಯಗಳೂ ಕೂಡ ತುಂಬಾ ಸೊಗಸಾಗಿ ಸಮರ್ಥಿಸಿಕೊಳ್ಳುತ್ತಿದ್ದವು. ಮಹಾಭಾರತದ ಘಟನೆ ಯೊಂದರಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಋಷಿಯೊಬ್ಬನನ್ನು ಸಮಾಧಾನಪಡಿಸಲು ಇಂದ್ರನು ನರಿಯ ರೂಪದಲ್ಲಿ ಬಂದು ವಿವೇಕವನ್ನು ಹೇಳುತ್ತಾನೆ ಮತ್ತು ಹಾಗೆ ಹೇಳುವ ಸಂದರ್ಭದಲ್ಲಿ ತಾನು ತನ್ನ ಹಿಂದಿನ ಜನ್ಮದಲ್ಲಿ ಹೈತುಕನಾಗಿ, ತರ್ಕಮಾಡುತ್ತಾ ಧರ್ಮಗ್ರಂಥಗಳನ್ನು ಪ್ರಶ್ನಿಸಿದ್ದೆ ಆದ್ದರಿಂದ ಈ ಜನ್ಮದಲ್ಲಿ ನರಿಯಾಗಿ ಹುಟ್ಟಿದೆ ಎನ್ನುತ್ತಾನೆ. ಇದಕ್ಕೆ ಸಂವಾದಿಯಾದ ಬೆಳವಣಿಗೆಯನ್ನು ಪುರಾತನ ಈಜಿಪ್ಟ್, ಗ್ರೀಸ್ ಮತ್ತು ರೋಮಿನಲ್ಲೂ ಎಲ್ಲರೂ ಗುರುತಿಸಿದ್ದಾರೆ. ತೀವ್ರ ಭಾವನಾವಾದಿಗಳಿಗೆ ಅತಿಹೆಚ್ಚಿನ ರಾಜಕೀಯ ಬೆಂಬಲ ಮತ್ತು ಸಮರ್ಥನೆ ಏಕೆ ದೊರಕುತ್ತಿತ್ತು ಎನ್ನುವುದಕ್ಕೂ ಇದರಿಂದ ಒಂದು ವಿವರಣೆ ದೊರಕುತ್ತದೆ.

ಆದರೆ ಭೌತವಾದಿಗಳು, ಈ ಕ್ರಮಗಳನ್ನು ಅತ್ಯಂತ ತೀವ್ರವಾಗಿ ಪ್ರತಿಭಟಿಸಿದರು. ಹಾಗಾಗಿಯೇ ಭೌತಿಕವಾದಿಗಳನ್ನು ಅಸುರರೆಂದೂ, ವಿತಂಡವಾದಿಗಳೆಂದೂ ಜರೆಯ ಲಾಯಿತು. ಇವರ ಎಲ್ಲಾ ಕೃತಿಗಳನ್ನು ಬಹುಶಃ ನಾಶಮಾಡಿದ್ದರೂ ಆಶ್ಚರ್ಯವಿಲ್ಲ. ಅದರಿಂದಲೇ ಇಂದು ಅವರ ಯಾವುದೇ ಕೃತಿಗಳು ಲಭ್ಯವಿಲ್ಲ.

ವಿಭಿನ್ನ ಭಾರತೀಯ ದರ್ಶನಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಮುಂಚೆ ದರ್ಶನ ಎಂದರೇನು; ನಮ್ಮ ತತ್ವಜ್ಞಾನಿಗಳು ತತ್ವಜ್ಞಾನವೆಂದರೆ ಏನೆಂದು ಗ್ರಹಿಸಿಕೊಂಡಿ ದ್ದರು ಮತ್ತು ನಮ್ಮಲ್ಲಿರುವ ಮೂಲಭೂತ ತತ್ವಜ್ಞಾನ ಶಾಖೆಗಳು ಯಾವುವು ಮತ್ತು ಅವುಗಳನ್ನು ಯಾವ ಅನುಕ್ರಮದಲ್ಲಿ ಚರ್ಚಿಸುವುದು ಸೂಕ್ತ ಎನ್ನುವ ಅಂಶಗಳನ್ನು ತಿಳಿದುಕೊಳ್ಳಬೇಕು.

ಭಾರತೀಯ ಪರಂಪರೆಯಲ್ಲಿ ತತ್ವಜ್ಞಾನವನ್ನು ದರ್ಶನವೆಂದು ಕರೆಯುತ್ತಾರೆ.  ಇದರ ಸರಿಯಾದ ಅರ್ಥ ನಮಗೆ ಖಚಿತವಾಗಿ ತಿಳಿದಿಲ್ಲ. ಈ ಪದ ಕಣಾದನ ವೈಶೇಷಿಕ ಸೂತ್ರದಲ್ಲಿ ಮೊದಲು ಬಳಕೆಯಾಗಿದೆ ಎನ್ನುವ ಅಭಿಪ್ರಾಯವಿದೆ.  ಆದರೆ ಇಂದು ನಾವು ಬಳಸುತ್ತಿರುವ ಅರ್ಥದಲ್ಲಿ ಬಳಕೆಯಾಗಿದೆಯೇ ಎನ್ನುವುದರ ಬಗ್ಗೆ ಸಂದೇಹವಿದೆ. ಏಕೆಂದರೆ ತತ್ವಜ್ಞಾನದ ಶಾಖೆಗಳ ಸ್ಥಾಪಕರು ತಮ್ಮ ವಿಚಾರಗಳನ್ನು ಸೂಚಿಸುವುದಕ್ಕೆ ದರ್ಶನ ಎನ್ನುವ ಪದವನ್ನು ಬಳಸಿರಲಿಲ್ಲ. ಅದನ್ನು ಬಳಸಿರುವವರು ಇತ್ತೀಚಿನವರಾದ ಶಂಕರ ಮತ್ತು ಉದಯನನಂಥವರು. ಅದೇನೇ ಇದ್ದರೂ ಈ ಪದದ ಬಳಕೆಗೆ ಮೊದಲೇ ನಮ್ಮಲ್ಲಿ ತತ್ವಜ್ಞಾನ ಶಾಖೆಗಳು ಇದ್ದವು.

ನಮ್ಮಲ್ಲಿ ಮೂಲಭೂತವಾಗಿ ಒಂಭತ್ತು ತತ್ವಜ್ಞಾನ ಶಾಖೆಗಳನ್ನು ಗುರುತಿಸಬಹುದು.  ಆ ಒಂಭತ್ತನ್ನು ಆಸ್ತಿಕ ಮತ್ತು ನಾಸ್ತಿಕ ಎಂದು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ.  ಆಸ್ತಿಕ ಎಂದರೆ ವೇದಪ್ರಾಮಾಣ್ಯವನ್ನು ಒಪ್ಪುವಂಥದ್ದು, ಮತ್ತು ನಾಸ್ತಿಕ ಎಂದರೆ ವೇದಪ್ರಾಮಾಣ್ಯವನ್ನು ವಿರೋಧಿಸುವಂಥದ್ದು.  ಆಸ್ತಿಕ ಅಥವಾ ವೈದಿಕ ದರ್ಶನಗಳು ಆರು: ೧ ಪೂರ್ವಮೀಮಾಂಸೆ, ೨ ವೇದಾಂತ (ಉತ್ತರ ಮೀಮಾಂಸೆ) ೩ ಸಾಂಖ್ಯ, ೪ ಯೋಗ, ೫ ನ್ಯಾಯ, ೬ ವೈಶೇಷಿಕ. ಇನ್ನು ನಾಸ್ತಿಕ ಶಾಖೆಗಳು ಮೂರು: ೧ ಲೋಕಾಯತ, ಚಾರ್ವಾಕ ಅಥವಾ ಬಾರ್ಹಸ್ಪತ್ಯ, ೨ ಬೌದ್ಧದರ್ಶನಗಳು, ೩ ಜೈನದರ್ಶನಗಳು.

ಹೀಗೆ ನಮ್ಮ ದರ್ಶನಗಳ ವಿಂಗಡನೆಗೆ ವೇದಗಳೇ ಆಧಾರವಾಗಿರುವುದರಿಂದ ಮೊದಲು ವೇದ ಎಂದರೇನು ಎಂದು ಅರ್ಥಮಾಡಿಕೊಳ್ಳಬೇಕು. ವೇದ ಎಂದರೆ ಸಾಹಿತ್ಯಕವಾಗಿ ಜ್ಞಾನ ಎಂದರ್ಥ. ಅವು ಎರಡು ಸಾವಿರವರ್ಷಕ್ಕೂ ಹೆಚ್ಚಿನ ಕಾಲಾವಧಿ ಯಲ್ಲಿ ರಚಿತವಾಗಿರುವ ಸಾಹಿತ್ಯ ರಚನೆಗಳ ಬಹಳ ದೊಡ್ಡ ಸಮೂಹ. ಹಾಗಾಗಿ ಅವು ಶೈಲಿಯಲ್ಲಿ ಅಥವಾ ವಸ್ತುವಿನಲ್ಲಿ ಏಕರೂಪದವಲ್ಲ. ಅವುಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ರಚನೆಯಾದಾಗ ಬರವಣಿಗೆ ಇನ್ನೂ ಆರಂಭವಾಗಿರಲಿಲ್ಲ. ಪಶು ಪಾಲಕ ಜನಾಂಗವೊಂದರಿಂದ ಮೌಖಿಕವಾಗಿ ಹರಿದುಬಂದಿದೆ. ಒಬ್ಬರ ಬಾಯಿಂದ ಒಬ್ಬರಿಗೆ, ಹೀಗೆ ಹಲವಾರು ತಲೆಮಾರುಗಳು ಒಂದು ಚೂರೂ ಬದಲಾಗದೆ ಈವರೆಗೂ ಬಂದಿವೆ.  ಇವು ಕೇಳಿ ತಿಳಿದವಾದ್ದರಿಂದ ಇವುಗಳನ್ನು ಶ್ರುತಿ ಎನ್ನುತ್ತಾರೆ.  ಇವುಗಳಲ್ಲಿ ಬಹುದೊಡ್ಡ ಭಾಗ ಪದ್ಯರೂಪದಲ್ಲಿವೆ.  ಇವುಗಳನ್ನು ಸಾಂಪ್ರದಾಯಿಕವಾಗಿ ಮಂತ್ರಗಳು ಎಂದು ಕರೆಯುತ್ತಾರೆ. ಈ ಮಂತ್ರಗಳ ಸಂಕಲನಗಳನ್ನು ಸಂಹಿತೆಗಳೆನ್ನುತ್ತಾರೆ. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಸಂಹಿತೆಗಳು ಇವೆ. ಮತ್ತೊಂದು ಭಾಗವನ್ನು ಬ್ರಾಹ್ಮಣಗಳೆಂದು ಕರೆಯುತ್ತಾರೆ. ಇವು ಗದ್ಯರೂಪದಲ್ಲಿವೆ. ಋಗ್ವೇದದ ಸೂಕ್ತಗಳನ್ನು ರಚಿಸಿದವರನ್ನು ದ್ರಷ್ಟಾರರೆನ್ನುತ್ತಾರೆ. ಈ ಸೂಕ್ತಗಳು ಪ್ರಾಕೃತ ಸಮೂಹಗಾನಗಳು.  ಇವು ಖಂಡಿತಾ ಒಬ್ಬರ ರಚನೆಯಂತೂ ಅಲ್ಲ. ಇವು ರಚನೆಯಾಗಲು ಬಹಳ ದೀರ್ಘಕಾಲ ಹಿಡಿದಿರಬೇಕು. ಇವುಗಳ ಕಾಲ ವನ್ನು ಸಾಮಾನ್ಯವಾಗಿ ಕ್ರಿ.ಪೂ. ೨೫೦೦ ಅಥವ ೨೦೦೦ ಎಂದು ಅಂದಾಜುಮಾಡ ಲಾಗಿದೆ. ಋಗ್ವೇದದ ಸೂಕ್ತಗಳು ಜನಸಾಮಾನ್ಯರ ಬಯಕೆಗಳನ್ನು ಹಾಗೂ ಬೇಡಿಕೆಗಳನ್ನು ವ್ಯಕ್ತಪಡಿಸುತ್ತವೆ; ಅವುಗಳಲ್ಲಿ ಅನ್ನ, ಮಳೆ, ಆರೋಗ್ಯ, ರಕ್ಷಣೆ, ಪಶು, ಸಂತಾನ ಮುಂತಾದವುಗಳು ಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.  ಕಾಲದ ದೃಷ್ಟಿಯಿಂದ ಸಾಕಷ್ಟು ನಂತರದವು ಎನ್ನಲಾಗುವ ಕೆಲವು ಮಂತ್ರಗಳಲ್ಲಿ ಮಾತ್ರ ವಿಶ್ವವನ್ನು ಕುರಿತ ಕಲ್ಪನೆಯನ್ನು ಕಾಣಬಹುದು. ತತ್ವಜ್ಞಾನಕ್ಕೆ ಸಂಬಂಧಿಸಿದ ಯಾವ ಚಿಂತನೆಗಳೂ ಋಗ್ವೇದದಲ್ಲಿ ಕಾಣುವುದಿಲ್ಲ. ಋಗ್ವೇದದಲ್ಲಿ ಕಂಡುಬರುವ ಹೆಚ್ಚಿನ ದೇವತೆಗಳು ಹೆಚ್ಚು ಕಡಿಮೆ ಮಾನವರೂಪದ ವೀರರಂತೆ ಕಾಣುತ್ತಾರೆ. ಹಲವು ಸಂದರ್ಭಗಳಲ್ಲಿ ಮಾನವನ ಐಹಿಕ ಅಪೇಕ್ಷೆಗಳೇ ದೇವತೆಗಳ ರೂಪ ತಳೆಯುತ್ತವೆ. ಗರ್ಭಪಾತದ ವಿರುದ್ಧದ ರಕ್ಷಣೆ, ಭಯಾನಕ ಸ್ವಪ್ನಗಳ ವಿರುದ್ಧ ರಕ್ಷಣೆ ಮೊದಲಾದವುಗಳಿಗೆ ದೇವತೆಗಳಿಗೆ ಸಲ್ಲುವಂತೆ ಸ್ತುತಿಗಳು ಸಲ್ಲುತ್ತವೆ. ‘ಪಿತು’ ಒಂದು ಕುತೂಹಲಕಾರಿ ದೇವತೆ. ಪಿತು ಎಂದರೆ ಆಹಾರ. ಪಿತು ನಮ್ಮ ದೇಹವನ್ನು ಕೊಬ್ಬಿಸುತ್ತದೆ ಹಾಗೂ ಅದು ರುಚಿಕರವಾಗಿ ಮತ್ತು ಮಧುರವಾಗಿ ಇದೆ ಎನ್ನುವ ಕಾರಣಕ್ಕಾಗಿ ಪಿತುವನ್ನು ಸ್ತುತಿಸಲಾಗಿದೆ.

ಇದನ್ನು ನೋಡಿದರೆ ಈ ವೇದಕಾಲದ ಜನರ ಚಿಂತನೆಯಲ್ಲಿ ನಾವು ಇಂದು ಹೇಳುವ ಅಧ್ಯಾತ್ಮಿಕತೆಯಾಗಲೀ, ಉನ್ನತ ಅಮೂರ್ತ ವಿಚಾರಧಾರೆಯಾಗಲೀ ಕಾಣುವುದೇ ಇಲ್ಲ. ಈ ನಾಲ್ಕು ಸಂಹಿತೆಗಳು ಯಜ್ಞವನ್ನು ಮಾಡುತ್ತಿದ್ದಂತಹ ನಾಲ್ಕು ವೈದಿಕ ಪುರೋಹಿತರ ಗುಂಪುಗಳಿಗೆ ಸೇರಿದ ವಿಶಿಷ್ಟ ವೇದಗಳಾಗಿದ್ದವು. ಋಗ್ವೇದವು ಹೋತೃ ಎಂಬ ಪುರೋಹಿತನದು, ಸಾಮವೇದ ಉದ್ಗಾತೃ ಎಂಬ ಪುರೋಹಿತನದು; ಯಜುರ್ವೇದ ಅಧ್ವರ್ಯು ಎಂಬ ಪುರೋಹಿತನದು, ಅಥರ್ವ ವೇದವು ಬ್ರಹ್ಮನ್ ಎಂಬ ಪುರೋಹಿತನದು. ಈ ಪ್ರಾಚೀನ ಮಂತ್ರಗಳನ್ನು ಯಜ್ಞದಲ್ಲಿ ಬಳಸಲಾಗುತ್ತಿತ್ತು ಎಂಬುದನ್ನು ಒಪ್ಪಿಕೊಂಡರೆ, ಯಜ್ಞ ಎಂದರೇನು ಎನ್ನುವುದನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಅವರಿಗೆ ಯಜ್ಞ ಅಂದರೆ, ಅದೊಂದು ವಿಧಿಯಾಚರಣೆ. ಈ ಸಂಹಿತೆಗಳು ಮಳೆ, ಐಶ್ವರ್ಯ, ಜಯ ಮೊದಲಾದವುಗಳನ್ನು ಪಡೆಯುವುದಕ್ಕೆ ನಡೆಸುವ ಯಜ್ಞಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದಕ್ಕೆ ಹಾಡುವ ಅಂತಃಶಕ್ತಿಯುತ ಮಂತ್ರ ಗಳಾಗಿವೆ. ಇವಕ್ಕೆ ನಿಜಕ್ಕೂ ಅಂತಃಶಕ್ತಿಯಿದ್ದರೆ, ಇವು ದೇವತೆಗಳನ್ನು ಬೇಡುವುದಿಲ್ಲ, ಬದಲಿಗೆ ನಿರ್ಬಂಧಿಸುತ್ತವೆ. ಹಾಗಾಗಿ ಇಲ್ಲಿ ಮಂತ್ರವಾದದ ದೃಷ್ಟಿಕೋನವನ್ನು ನೋಡಬಹುದೇ ಹೊರತು ಧಾರ್ಮಿಕ ದೃಷ್ಟಿಕೋನವನ್ನಲ್ಲ.

ವಾಸ್ತವಿಕತೆಯನ್ನು ನಿಯಂತ್ರಿಸುತ್ತೇವೆ ಎಂಬ ಭ್ರಮೆಯನ್ನು ಸೃಷ್ಟಿಸುವುದರ ಮೂಲಕ ನಿಜವಾಗಿಯೂ ವಾಸ್ತವಿಕತೆಯನ್ನು ನಿಯಂತ್ರಿಸಬಲ್ಲೆವು ಎನ್ನುವ ತತ್ವವೇ ಮಂತ್ರವಾದದ ಆಧಾರವಾಗಿದೆ. ಇದು ಪ್ರಾರ್ಥನೆಯಲ್ಲ, ಏಕೆಂದರೆ ಇದು ಬೇಡುವುದಿಲ್ಲ.  ಇಲ್ಲಿ ಯಾವ ದೈವಿಕ ಶಕ್ತಿಗೂ ಬೇಡಿಕೆ ಸಲ್ಲಿಸುವುದಿಲ್ಲ. ಆರಂಭಕ್ಕೆ ಅದು ಕೇವಲ ಅನುಕರಣೆಯ ರೂಪದಲ್ಲಿರುತ್ತದೆ. ನಿಮಗೆ ಮಳೆಬೇಕಾಗಿದೆ; ಆದುದರಿಂದ ಮೋಡಗಳು ಕವಿಯುವುದನ್ನು, ಗುಡುಗುವುದನ್ನು, ಮಳೆ ಸುರಿಯುವುದನ್ನು ಅನುಕರಿಸುವ ಒಂದು ನೃತ್ಯವನ್ನು ನೀವು ಮಾಡುತ್ತೀರಿ. ನಿಮಗೆ ಬೇಕಿರುವುದನ್ನು ನೀವು ಕಾಲ್ಪನಿಕವಾಗಿ ನಟಿಸುತ್ತೀರಿ. ಮುಂದಿನ ಹಂತದಲ್ಲಿ, ಈ ಅನುಕರಣಾ ಕ್ರಿಯೆಯೊಂದಿಗೆ ಒಂದು ಆಜ್ಞೆ ಸೇರಿಕೊಳ್ಳುತ್ತದೆ-‘ಮಳೆ ಆಗಲಿ’ ಎಂದು. ಇದು ಪ್ರಾರ್ಥನೆಯಲ್ಲ, ಆಜ್ಞೆ ಎಂಬುದನ್ನು ನಾವು ಗಮನಿಸಬೇಕು. ಸೂಕ್ತವಾದ ಯಜ್ಞವನ್ನು ತಕ್ಕ ಮಂತ್ರದೊಂದಿಗೆ ನೆರವೇರಿಸುವುದರಿಂದ ಅಪೇಕ್ಷಿತ ಫಲವು ದೊರಕುತ್ತದೆ ಎಂಬುದರ ಬಗ್ಗೆ ಮಂತ್ರವಾದಿಗೆ ಯಾವುದೇ ಅನುಮಾನವಿಲ್ಲ. ಆದರೆ ಯಜ್ಞ ಫಲಪ್ರದವಾಗಬೇಕಾದರೆ ತನ್ನ ಕಲೆಯ ನಿಯಮಗಳನ್ನು ಅಥವಾ ಪ್ರಕೃತಿಯ ನಿಯಮಗಳೆಂದು ತಾನು ಭಾವಿಸಿರುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಗ್ರಹಿಕೆ ಮಂತ್ರವಾದದ ಹಿಂದೆ ಇರುತ್ತದೆ.  ಇದಕ್ಕೆ ವ್ಯತಿರಿಕ್ತವಾಗಿ ಧರ್ಮ, ಮನುಷ್ಯರಿಗಿಂತ ಶ್ರೇಷ್ಠವಾದ ಹಾಗೂ ಪ್ರಪಂಚವನ್ನು ಆಳುವ ಸಚೇತನ ಶಕ್ತಿಗಳ ಅಸ್ತಿತ್ವವನ್ನು ನಂಬುತ್ತದೆ. ಮತ್ತು ಆ ಮಹಾನ್ ಶಕ್ತಿಗಳ ಮನವೊಲಿಸಲು ಸಾಧ್ಯ ಎಂದು ನಂಬುತ್ತದೆ. ಹಾಗಾಗಿ ಈ ಪರಿಕಲ್ಪನೆಯನ್ನು ಮಂತ್ರವಾದ ಮತ್ತು ವಿಜ್ಞಾನಗಳೆರಡೂ ಒಪ್ಪುವುದಿಲ್ಲ. ಪ್ರಾಚೀನ ಮಂತ್ರವಾದದ ತಾತ್ವಿಕ ಪರಿಕಲ್ಪನೆ ಭಾವನಾವಾದ ಮತ್ತು ಆಧ್ಯಾತ್ಮವಾದಗಳಿಗಿಂತ ಹಿಂದಿನದು ಎಂದು ಹೇಳಿದರೆ ತಪ್ಪಿಲ್ಲ.

ಇನ್ನು ಬ್ರಾಹ್ಮಣಗಳು ಸಂಹಿತೆಯ ನಂತರದ ಕೃತಿಗಳು ಮತ್ತು ಅವು ಗದ್ಯರೂಪದಲ್ಲಿವೆ. ಅವುಗಳಲ್ಲಿ ಬರುವ ಕೆಲವು ಕಥೆಗಳನ್ನು ಮತ್ತು ಕೆಲವು ಗಮನಾರ್ಹ ವಿಚಾರಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ಯಜ್ಞಕ್ರಿಯೆಗೆ ಸಂಬಂಧಿಸಿದ ಕ್ರಿಯೆಗಳಾಗಿವೆ. ಅವು ಯಜ್ಞವನ್ನು ಮಾಂತ್ರಿಕ ಕ್ರಿಯೆ ಎಂದೇ ಭಾವಿಸುತ್ತವೆ. ಕೀತ್ ಅವರ ಅಭಿಪ್ರಾಯದಲ್ಲಿ “ಬ್ರಾಹ್ಮಣಗಳಲ್ಲಿ ಬರುವ ದೈವಜ್ಞಾನದ ಪ್ರಕಾರ ಯಜ್ಞಕ್ಕೆ ಅದರದೇ ಆದ ಮಾಂತ್ರಿಕ ಶಕ್ತಿಯಿದೆ. ಅದಕ್ಕೆ ಕೇವಲ ತನ್ನ ಬಲದಿಂದಲೇ ನಿಶ್ಚಿತ ಫಲವನ್ನು ಸಾಧಿಸಲು ಸಾಧ್ಯ.” ಆರಣ್ಯಕಗಳು ಬ್ರಾಹ್ಮಣಗಳ ನಂತರ ಬಂದವು. ಆರಣ್ಯಕಗಳ ಕೊನೆಯ ಭಾಗವನ್ನು ಉಪನಿಷತ್ತುಗಳೆಂದು ಕರೆಯುತ್ತಾರೆ. ಉಪನಿಷತ್ ಎಂದರೆ ನಿಗೂಢ ಜ್ಞಾನ ಎಂದರ್ಥ. ಅದು ಬೇರೊಬ್ಬರ ಹತ್ತಿರ ಕುಳಿತು ಅವರಿಂದ ತಿಳಿಯುವುದು ಎನ್ನುವ ಅರ್ಥವನ್ನೂ ಕೊಡುತ್ತದೆ. ಹಾಗಾಗಿ ಗೋಪ್ಯವಾದ ಸಂವಹನ ಎಂಬ ಅರ್ಥವನ್ನು ಸೂಚಿಸುತ್ತದೆ. ಉಪನಿಷತ್ತು ಗಳಲ್ಲಿ ತುಂಬಾ ಮುಖ್ಯವಾದವು ಐತರೇಯ, ಕೌಷೀತಕಿ, ಛಾಂದೋಗ್ಯ, ಕೇನ, ಬೃಹದಾರಣ್ಯಕ, ಈಶ, ತೈತ್ತಿರೀಯ, ಕಠ, ಮೈತ್ರಿ, ಶ್ವೇತಾಶ್ವತರ ಮುಂತಾದವು.  ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳ ಕಾಲವನ್ನು ಇಂತಹದೇ ಎಂದು ಖಚಿತವಾಗಿ ಹೇಳುವುದು ತುಂಬಾ ಕಷ್ಟ. ಪ್ರಮುಖ ಉಪನಿಷತ್ತುಗಳು ಬುದ್ಧನ ಕಾಲಕ್ಕಿಂತ ಹಿಂದಿನವುಗಳೆಂದು ಆಧುನಿಕ ವಿದ್ವಾಂಸರು ಒಮ್ಮತದ ಅಭಿಪ್ರಾಯ ತಳೆದಿದ್ದಾರೆ.

ಉಪನಿಷತ್ತುಗಳು ಬ್ರಾಹ್ಮಣ ಮತ್ತು ಆರಣ್ಯಕಗಳಿಗಿಂತ ಸ್ವಲ್ಪ ಭಿನ್ನವಾಗಿವೆ, ಏಕೆಂದರೆ ಮಾಂತ್ರಿಕ ಕ್ರಿಯೆಗಳಲ್ಲಿ ಆಸಕ್ತಿ ತೋರದೆ ಒಂದು ಬೇರೆ ಬಗೆಯ ವೈಚಾರಿಕ ಪ್ರಜ್ಞೆ ಯನ್ನು ರೂಢಿಸಿಕೊಳ್ಳುವ ಪ್ರಯತ್ನ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ. ತುಂಬಾ ಸ್ಪಷ್ಟವಾದ ತತ್ವಜ್ಞಾನದ ಪ್ರಶ್ನೆಗಳನ್ನು ಎತ್ತುವ ಮತ್ತು ಅದಕ್ಕೆ ಗಂಭೀರವಾಗಿ ಉತ್ತರ ಹುಡುಕುವ ಪ್ರಯತ್ನ ಉಪನಿಷತ್ತಿನಲ್ಲಿ ಕಂಡುಬರುತ್ತದೆ.  ಹಾಗಾಗಿಯೇ ಉಪನಿಷತ್ತನ್ನು ಜ್ಞಾನಕಾಂಡವೆಂದೂ ಮತ್ತು ಬ್ರಾಹ್ಮಣಗಳನ್ನು ಕರ್ಮಕಾಂಡವೆಂದೂ ಕರೆಯುತ್ತಾರೆ.  ಹೀಗೆ ಪುರಾತನ ಮಾಂತ್ರಿಕ ಕ್ರಿಯೆಗಳಿಂದ ಕಳಚಿಕೊಂಡಾಗ ಭೌತಿಕ ಪ್ರಪಂಚದ ವಾಸ್ತವತೆಯನ್ನೇ ನಿರಾಕರಿಸುವ ದಿಕ್ಕಿನಲ್ಲಿ ಭಾವನಾವಾದಿ ಆಲೋಚನೆಯು ಹೊರಳಿತು.  ಕ್ರಿಯೆಯಿಲ್ಲದೆ, ಕೇವಲ ತರ್ಕದ ಮೂಲಕ ಅಂದರೆ, ಯಥಾರ್ಥಜೀವನದ ನೆರವಿಲ್ಲದೆ, ಪ್ರಯೋಗದ ಸಹಾಯವಿಲ್ಲದೆ, ಸತ್ಯತೆಯನ್ನು ಮನವರಿಕೆಮಾಡಿಕೊಳ್ಳುವ ಪ್ರಥಮ ಪ್ರಯತ್ನ ಅದಾಗಿತ್ತು.  ಉಪನಿಷತ್ತಿನಲ್ಲಿದ್ದ ವಿಚಾರಗಳು ಯಾವುದೇ ಒಬ್ಬ ವೈಯುಕ್ತಿಕ ಚಿಂತಕನಿಂದ ಸೃಷ್ಟಿಯಾದವಲ್ಲ.  ಅವು ಅನೇಕ ತಲೆಮಾರುಗಳು ನಡೆಸಿದ್ದ ಊಹನಾತ್ಮಕ ಚಿಂತನೆಗಳ ಪರಿಣಾಮ ಎಂದು ತಿಳಿಯುವುದು ಹೆಚ್ಚು ಸೂಕ್ತ.  ಅದರಲ್ಲಿ ಹಲವಾರು ಜನ ವಿಭಿನ್ನ ಸ್ಥಳದಲ್ಲಿ, ವಿಭಿನ್ನ ಕಾಲದಲ್ಲಿ ರಚಿಸಿದ ವಿಭಿನ್ನ ಅಭಿಪ್ರಾಯಗಳನ್ನು ಕಾಣಬಹುದು. ಏಕಾರ್ಥತಾ ಎನ್ನುವುದು ನಂತರ ಹೇರಿದು.  ಉಪನಿಷತ್ತುಗಳೇ ಹೇಳುವ ಹಾಗೆ ಅವು ಆ ಕಾಲದಲ್ಲಿ ಎಲ್ಲೆಡೆ ಪ್ರಚಲಿತವಾಗಿದ್ದ ಬೌದ್ಧಿಕ ಸಂಪತ್ತಿನ ಸಂಗ್ರಹವಾಗಿತ್ತು. ಮತ್ತು ಯಾರು ಬೇಕಾದರೂ ಅದನ್ನು ಬಳಸಿಕೊಂಡು ಅದಕ್ಕೆ ಹೊಸ ರೂಪ ಕೊಡಬಹುದಿತ್ತು. ಬೌದ್ಧ್ದ ದರ್ಶನದ ಒಂದು ಶಾಖೆಯಾದ ಶೂನ್ಯ ವಾದಿಗಳು ಮಾಡಿದ್ದು ಇದನ್ನೇ. ಇವರು ಭಾವನಾವಾದಿ ದರ್ಶನವನ್ನು ಕಟ್ಟಲು ಅನುಕೂಲಕರವಾದ ಕೆಲವು ವಿಚಾರಗಳನ್ನು ಉಪನಿಷತ್ತಿನಿಂದ ಹೆಕ್ಕಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಅದಕ್ಕೊಂದು ರೂಪಕೊಟ್ಟರು. ಇದೇ ಕೆಲಸವನ್ನು ಮಾಯಾವಾದಿ ಗಳೆಂದು ಕರೆಸಿಕೊಂಡ ಕಟ್ಟಾ ವೇದಾಂತಿಗಳೂ ಮಾಡಿದರು. ಹಾಗಾಗಿಯೇ ಉಳಿದಂತೆ ಇವರಿಬ್ಬರೂ ಪರಸ್ಪರ ಕಿತ್ತಾಡುತ್ತಿದ್ದರೂ ಭಾವನಾವಾದಕ್ಕೆ ಸಂಬಂಧಿಸಿದಂತೆ ಮಾತ್ರ ಇವರಿಬ್ಬರ ನಡುವೆ ತುಂಬಾ ಸಾಮರಸ್ಯವಿತ್ತು.

ಇಷ್ಟು ಪೀಠಿಕೆಯೊಂದಿಗೆ ನಮ್ಮ ಬೇರೆ ಬೇರೆ ದರ್ಶನಗಳನ್ನು ಒಂದೊಂದಾಗಿ ಪರಿಚಯ ಮಾಡಿಕೊಳ್ಳಬಹುದು ಅನ್ನಿಸುತ್ತದೆ.  ಮಾಧವ ತನ್ನ ಸರ್ವದರ್ಶನಸಂಗ್ರಹದಲ್ಲಿ ಲೋಕಾಯತವನ್ನು ಎಲ್ಲದಕ್ಕಿಂತ ಮೊದಲು ಮತ್ತು ಅದ್ವೈತ ವೇದಾಂತವನ್ನು ಎಲ್ಲದಕ್ಕಿಂತ ಕೊನಗೆ ವಿವರಿಸಿ ಮೊದಲನೆಯದು ಎಲ್ಲದಕ್ಕಿಂತ ತೀರಾ ಕೆಳಮಟ್ಟದ್ದೆಂದೂ ಮತ್ತು ಅದ್ವೈತವು ಎಲ್ಲದಕ್ಕಿಂತ ಉನ್ನತವಾದುದೆಂದು ಸೂಚಿಸಿದ್ದಾನೆ. ದೇವಿಪ್ರಸಾದರು ಇದಕ್ಕಿಂತ ವಿರುದ್ಧವಾದ ಕ್ರಮವನ್ನು ಅನುಸರಿಸಿದ್ದಾರೆ. ಮೀಮಾಂಸದಿಂದ ತಮ್ಮ ಚರ್ಚೆಯನ್ನು ಪ್ರಾರಂಭಿಸಿ ಲೋಕಾಯತದಲ್ಲಿ ಅದನ್ನು ಮುಗಿಸುತ್ತಾರೆ.