ಕೊನೆಗೆ ಇನ್ನೊಂದು ಮುಖ್ಯವಾದ ಪ್ರಶ್ನೆ, ಮುಕ್ತಿಯ ಪ್ರಶ್ನೆ ಅಂದರೆ ಬಿಡುಗಡೆಯ ಪ್ರಶ್ನೆಗೆ ಬರೋಣ. ಎಲ್ಲೋ ಕೆಲವು ದಾರ್ಶನಿಕರನ್ನು ಬಿಟ್ಟರೆ, ನಮ್ಮ ಹೆಚ್ಚಿನ ದಾರ್ಶನಿಕರು ತಮ್ಮ ಇಡೀ ತಾತ್ವಿಕ ಚಟುವಟಿಕೆಯ ಉದ್ದೇಶವೇ ಮುಕ್ತಿ ಎಂದು ಹೇಳಿಕೊಂಡಿದ್ದಾರೆ. ನಮ್ಮ ಇಡೀ ತತ್ವಶಾಸ್ತ್ರವೇ ಬಂಧನದಿಂದ ಮುಕ್ತಿಹೊಂದುವ ಪ್ರಶ್ನೆಯಲ್ಲಿ ಮುಳುಗಿ ಹೋಗಿದೆ. ಆದರೆ ಇವರಲ್ಲಿ ಕೆಲವು ಭಾವನವಾದಿಗಳಿಗಷ್ಟೇ ಈ ಮುಕ್ತಿಯನ್ನು ಕುರಿತಂತೆ ಸ್ಪಷ್ಟ ಪರಿಕಲ್ಪನೆಯನ್ನು ರೂಪಿಸಲು ಸಾಧ್ಯವಾಗಿದೆ.  ಅವರಿಗೆ ಮುಕ್ತಿಯೆಂಬುದು ಈ ಭ್ರಮಾ ಪ್ರಪಂಚದಿಂದ ಬಿಡುಗಡೆ.  ಒಂದರ್ಥದಲ್ಲಿ ಅದು ದೀರ್ಘವಾದ ಕನಸಿನಿಂದ ಎಚ್ಚರವಾಗುವ ಕ್ರಿಯೆ. ಅಂದರೆ ಅವರ ಮಟ್ಟಿಗೆ ದಿನನಿತ್ಯದ ಐಹಿಕ ಬದುಕಿನಲ್ಲಿ ಬದಲಾವಣೆ ತರುವುದಕ್ಕಿಂತ ಮುಖ್ಯವಾಗುವುದು ನಮ್ಮ ವಸ್ತುನಿಷ್ಠ ಮನೋಭಾವದಲ್ಲಿನ ಬದಲಾವಣೆ.  ಬ್ರಹ್ಮನ್ ಅನ್ನು ಅರಿತವರು ಸ್ವತಃ ಬ್ರಹ್ಮನ್ ಆಗಿಬಿಡುತ್ತಾರೆ. ಬ್ರಹ್ಮನ್ ಅನ್ನು ಅರಿಯುವುದೆಂದರೆ ನಮ್ಮನ್ನು ಆವರಿಸಿರುವ ಭ್ರಮೆಯ ಪೊರೆಯನ್ನು ಕಳಚಿದಂತೆ.  ಇದೇ ರೀತಿಯ ಅಭಿಪ್ರಾಯವನ್ನು ಮಹಾಯಾನ ಬೌದ್ಧರೂ ಹೊಂದಿದ್ದರು.

ಅಂದರೆ ಅವರು ಹೇಳುತ್ತಿರುವುದು ಸರಳವಾಗಿ ಇಷ್ಟು. ಈ ಜಗತ್ತು ಮಿಥ್ಯೆ.  ಈ ಐಹಿಕ ಜಗತ್ತಿನ ಜಂಜಾಟದಿಂದ ಬಿಡುಗಡೆಗೊಳ್ಳುವುದರಿಂದಲೇ ಮೋಕ್ಷಸಾಧನೆ ಸಾಧ್ಯ. ಅದರರ್ಥ ಐಹಿಕ ಜಗತ್ತಿನ ನೋವು ನಲಿವುಗಳ ಬಗ್ಗೆ ನಾವು ಏನೂ ಮಾಡಲಾಗುವುದಿಲ್ಲ, ಮಾಡಬೇಕಾಗಿಲ್ಲ.  ಯಾಕೆಂದರೆ ಅದು ಸುಳ್ಳು –  ಮಿಥ್ಯಜ್ಞಾನ.  ಹಾಗಾಗಿ ನಿಮಗೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ಇತ್ಯಾದಿಗಳ ಬಗ್ಗೆ ತಲೆಕೆಡಿಸಿ ಕೊಳ್ಳಬೇಡಿ ಎಂದು ಭಾವನಾವಾದಿಗಳು ಹೇಳುತ್ತಾರೆ. ಅದಕ್ಕೆ ಮನು ಹೇಳುವುದು “ಆತ್ಮವನ್ನು ಕುರಿತ ಜ್ಞಾನವೇ ಮಹತ್ತರ ಜ್ಞಾನ. ಅದಕ್ಕಾಗಿ ಶ್ರಮಿಸುವವನು, ಎಲ್ಲದರಲ್ಲೂ ಬ್ರಹ್ಮವನ್ನು ಕಾಣುತ್ತಾನೆ. ಬ್ರಹ್ಮನಲ್ಲಿ ಎಲ್ಲವನ್ನು ಕಾಣುತ್ತಾನೆ. ಅಪ್ರತಿಮ ಬಲಶಾಲಿಯಾಗು ತ್ತಾನೆ.” ಆದರೆ ನಮ್ಮಲ್ಲಿ ಇಂತಹ ಭಾವನಾವಾದಿ ಸಿದ್ದಾಂತದ ವಿರುದ್ದ ವಾದಿಸಿದ ಹಲವಾರು ಪಂಥಗಳು ಇದ್ದವು. ಜೊತೆಗೆ ಅವರು ಐಹಿಕ ಜಗತ್ತನ್ನು ಅರಿಯುವ ಪ್ರಯತ್ನಗಳನ್ನು ತಮ್ಮ ಚಿಂತನೆಗಳಲ್ಲಿ ಮಾಡಿದ್ದಾರೆ.  ಅವರು ಮುಕ್ತಿಯ ಬಗ್ಗೆ ಏನು ಹೇಳುತ್ತಾರೆ? ಕೊನೆಯಪಕ್ಷ ಅವರಾದರೂ ಮುಕ್ತಿಯನ್ನು ಕುರಿತು ಇತ್ಯಾತ್ಮಕ ನಿಲುವನ್ನು ಪ್ರತಿಪಾದಿಸಿರಬಹುದಲ್ಲವೆ?  ಇಲ್ಲ ಅವರೂ ಮಾಡಿಲ್ಲ.  ಲೋಕಾಯತರೊಬ್ಬರನ್ನು ಬಿಟ್ಟು ಉಳಿದಂತೆ ನ್ಯಾಯ-ವೈಶೇಷಿಕರು, ಸಾಂಖ್ಯರು, ಮೀಮಾಂಸಕರು ಮೊದಲಾದ ವರೂ ಸಹ ಇದೇ ಜಾಡಿನಲ್ಲೇ ಸಾಗಿದ್ದಾರೆ. ತಮ್ಮ ಮೂಲಭೂತ ಸಿದ್ದಾಂತಕ್ಕೆ ಸ್ವಲ್ಪವೂ ಹೊಂದಿಕೊಳ್ಳದ, ಈ ವೇದಾಂತಿಗಳ ಮೋಕ್ಷದ ಪರಿಕಲ್ಪನೆಯನ್ನು ತಮ್ಮ ದರ್ಶನದ ಮೇಲೆ ಕಸಿ ಮಾಡಿ ನೂರಾರು ಗೊಂದಲಗಳನ್ನು ಸೃಷ್ಟಿಸಿಕೊಂಡಿದ್ದಾರೆ.  ತಾವೇ ಸೃಷ್ಟಿಸಿಕೊಂಡ ಈ ಗೋಜಲಿನಿಂದ ಹೊರಬರಲಾರದೆ, ತಮ್ಮ ದರ್ಶನವನ್ನೇ ಇಕ್ಕಟ್ಟಿಗೆ ಸಿಲುಕಿಸಿರುವುದನ್ನು ನಾವು ಕಾಣಬಹುದು. ಆದರೆ ಯಾಕೆ ಹೀಗೆ ಒಬ್ಬರಾದ ಮೇಲೆ ಒಬ್ಬರು ವೇದಾಂತಿಗಳ ಈ ಮುಕ್ತಿಯ ಸಿದ್ಧಾಂತಕ್ಕೆ ಶರಣಾಗುತ್ತಿದ್ದಾರೆ? ಅದೂ ತಮ್ಮ ಮೂಲಭೂತ ವಿಚಾರಗಳಿಗೆ ಅದು ತಾಳೆಯಾಗುವುದಿಲ್ಲ ಎಂಬುದರ ಸಂಪೂರ್ಣ ಅರಿವು ಇದ್ದ ಮೇಲೂ? ತಕ್ಷಣಕ್ಕೆ ನಮಗೆ ಇದಕ್ಕೆ ಸಂಪೂರ್ಣ ಉತ್ತರ ಕೊಡುವುದು ಸಾಧ್ಯವಾಗದೇ ಇರಬಹುದು.  ಆದರೆ ಈ ದಿಕ್ಕಿನಲ್ಲಿ ಯೋಚಿಸಬಹುದು.

ಭಾವನಾವಾದಿಗಳ ಆತ್ಮ ಹಾಗೂ ಅದರ ಮೋಕ್ಷದ ಕಲ್ಪನೆಯನ್ನು ಸರಾಸಗಟಾಗಿ ತಿರಸ್ಕರಿಸಿದವರು ಲೋಕಾಯತರು ಮಾತ್ರ. ಅವರು ಸ್ವರ್ಗ, ಮೋಕ್ಷ ಹಾಗೂ ಆತ್ಮದ ಕಲ್ಪನೆಯನ್ನೇ ತಳ್ಳಿಹಾಕಿಬಿಡುತ್ತಾರೆ.

ಸ್ವರ್ಗವೆಂಬುದಿಲ್ಲ, ಮೋಕ್ಷವೆಂಬುದಿಲ್ಲ
ಆತ್ಮವೆಂಬುದೂ ಇಲ್ಲ ಪರಲೋಕದಲ್ಲಿ.
ನಾಲ್ಕು ಜಾತಿಗಳು, ನಾಲ್ಕು ಆಶ್ರಮಗಳು
ನೀಡುವುದಿಲ್ಲ ಎಣಿಸಿದ ಫಲವ.

ಲೋಕಾಯತರು ಬದುಕಿನಲ್ಲಿ ಸುಖವನ್ನು ಕಾಣಲು ಪ್ರಯತ್ನಿಸುತ್ತಾರೆ, ಅದರಿಂದ ತಪ್ಪಿಸಿಕೊಂಡು ಹೋಗುವುದು ಅವರ ಉದ್ದೇಶವಲ್ಲ.

ಇಂದ್ರಿಯಸ್ಪರ್ಶಿ ವಸ್ತುಗಳು ನೀಡುವ
ಸುಖವನ್ನು ತ್ಯಜಿಸು, ಅದಕ್ಕಂಟಿದೆ ನೋವು;
ಹೀಗೆನ್ನುತ್ತಾರೆ ತಿಳಿಗೇಡಿ ಅವಿವೇಕಿಗಳು.
ತನ್ನೊಳಗೆ ಬಿಳಿ ಅಕ್ಕಿಯನ್ನು ಇಟ್ಟುಕೊಂಡಿರುವ ಭತ್ತವನ್ನು
ಅದಕ್ಕೆ ಹೊಟ್ಟಿದೆ ಎಂದು ಬಿಸುಟುವರೇ ತನ್ನ ಹಿತವರಿತವರು.

ಈ ರೀತಿ ಬದುಕನ್ನು ಸ್ವೀಕರಿಸುವುದು ಒಂದು ಒಳ್ಳೆಯ ಪ್ರಾರಂಭ. ಆದರೆ ಇಲ್ಲೇ ಬದುಕನ್ನು ಸುಖಿಸಬೇಕು ಎನ್ನುವುದಷ್ಟೇ ಸಾಲುವುದಿಲ್ಲ. ಜನತೆಯ ನಿಜವಾದ ಮೋಕ್ಷಕ್ಕೆ, ಜಗತ್ತನ್ನು ಬದಲಿಸುವುದಕ್ಕೆ ಇಷ್ಟೇ ಸಾಲದು. ಆದರೆ ಅವರಿದ್ದ ಕಾಲದ ಮಿತಿಯಲ್ಲಿ ಇದನ್ನು ನಿರೀಕ್ಷಿಸುವುದು ಸೂಕ್ತವಲ್ಲದೇ ಇರಬಹುದು.

ಪರಲೋಕವಿದೆಯೆಂಬ ಬ್ರಾಹ್ಮಣರ ಸಿದ್ಧಾಂತ
ಹೊಟ್ಟೆ ಹೊರೆಯುವ ದಾರಿ ಹೊರತು ಬೇರೆನಲ್ಲ

ಎಂದು ಅವರು ಒರಟಾಗಿ ಹೇಳುವಾಗಲೂ ಅದರಲ್ಲಿ ಒಂದು ಸತ್ಯವಿದೆ. ಕೆಲವು ನಿಲುವುಗಳು ಹಾಗೂ ಮನೋಭಾವಗಳು ಪರಾವಲಂಬಿಗಳ ಆರ್ಥಿಕ ಹಿತಾಸಕ್ತಿಗೆ ಪೂರಕವಾಗಿರುತ್ತವೆ.  ಆದರೆ ಇದಕ್ಕೆ ಇನ್ನೊಂದು ಆಯಾಮವೂ ಇದೆ. ಮನುಷ್ಯರ ಬದುಕಿನ ಕ್ರಮ ಅವರ ತಾತ್ವಿಕ ನಿಲುವನ್ನೂ ನಿರ್ಧರಿಸುತ್ತದೆ. ಇದು ತುಂಬಾ  ಮುಖ್ಯವಾದ ಅಂಶ. ಸಾಮಾಜಿಕವಾಗಿ ನಮ್ಮ ದಾರ್ಶನಿಕರು ಪರಾವಲಂಬಿಗಳಾಗಿ ಬದುಕಬೇಕಾದ್ದರಿಂದ, ತಮ್ಮ ಒಡೆಯರ ಹಾಗೂ ಆಶ್ರಯದಾತರ ತಾತ್ವಿಕ ನಿಲುವುಗಳನ್ನು ಪ್ರಜ್ಞಾಪೂರ್ವಕವಾಗಿ ಸಮರ್ಥಿಸಬೇಕಾಯಿತು.  ಇನ್ನು ನ್ಯಾಯ-ವೈಶೇಷಿಕರ ವಿಷಯಕ್ಕೆ ಬರೋಣ. ಮೋಕ್ಷದ ಕಲ್ಪನೆ ಜನಪ್ರಿಯವಾಗಿದ್ದು ವಾತ್ಸ್ಯಾಯನನ ಕಾಲದಲ್ಲಿ. ಬಹುಷಃ ಅವನು ಗುಪ್ತರ ಕಾಲದಲ್ಲಿದ್ದವನು. ಅದು ಕೃಷಿ ಅಭಿವೃದ್ಧಿಗೊಳ್ಳುತ್ತಿದ್ದ ಸಮಯ.  ಬ್ರಾಹ್ಮಣರಿಗೆ ಭೂಮಿಯನ್ನು ದತ್ತಿಯಾಗಿ ನೀಡಲಾಗುತ್ತಿತ್ತು.  ಬ್ರಾಹ್ಮಣರಿಗೆ ಸಿಕ್ಕ ಬಳುವಳಿಗೆ ಬದಲಾಗಿ ಅವರಿಗೂ ಒಂದಿಷ್ಟು ಕರ್ತವ್ಯವಿತ್ತು. ಅವರು ಒಡೆಯರ ಮತ್ತು ಆಶ್ರಯದಾತರ ಹಿತಾಸಕ್ತಿಯನ್ನು ಕಾಪಾಡಬೇಕಿತ್ತು. ದಾರ್ಶನಿಕರಾಗಿ ಅವರು ಈ ಐಹಿಕ ಜಗತ್ತಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಪಾರಮಾರ್ಥಿಕ ಮೋಕ್ಷವನ್ನು ಕುರಿತು ಚಿಂತಿಸುವಂತಾಗಬೇಕಿತ್ತು. ಇದು ಮನುವಿನ ಸಿದ್ದಾಂತವಾಗಿತ್ತು.  ಪಾಪ ಅನ್ವೀಕ್ಷಕೀ-ವಿದ್ಯಾ ಕುರಿತು ಅಮೋಘವಾಗಿ ತರ್ಕಿಸಿದ ದಾರ್ಶನಿಕರು ಅತ್ಮವಿದ್ಯೆಗೆ ಶರಣಾಗಬೇಕಾಯಿತು. ವಾತ್ಸ್ಯಾಯನನಂತೆಯೇ, ಪ್ರಶಸ್ಥಪಾದನೂ ಕೂಡ ಧರ್ಮ ಶಾಸ್ತ್ರಜ್ಞರು ಹಾಕಿಕೊಟ್ಟ ದಾರಿಯನ್ನೇ ಅನುಸರಿಸಿದ.  ಹಾಗಾಗಿ ಇವರ‍್ಯಾರಿಗೂ   ತಮ್ಮ ಮೂಲಭೂತ ತತ್ವಗಳಿಗೆ ಪೂರಕವಾದ ಮುಕ್ತಿಯ ಪರಿಕಲ್ಪನೆಯನ್ನು ರೂಪಿಸು ವುದು ಸಾಧ್ಯವಾಗಲೇ ಇಲ್ಲ.  ಮೋಕ್ಷದ ಕಲ್ಪನೆಯನ್ನು ಮಾತ್ರ ವೇದಾಂತಿಗಳಿಂದ ಎರವಲು ತಂದು ತಮ್ಮ ಸಿದ್ದಾಂತಕ್ಕೆ ಸೇರಿಸಿಕೊಂಡರು.  ಹಾಗಾಗಿ ಮೋಕ್ಷದ ತತ್ವವು ಈ ದೃಷ್ಟಿಯಿಂದ ಭೌತಿಕವಾದಿ ಸಿದ್ದಾಂತದಲ್ಲಿ ರೂಪಗೊಳ್ಳಲೇ ಇಲ್ಲ.

ಇಡೀ ವೇದಾಂತದ ಚೌಕಟ್ಟು ಹೊರಗಿಟ್ಟಿದ್ದ ಶ್ರಮಿಕರ-ಶೂದ್ರರ ದೃಷ್ಟಿಯಿಂದ ಮೋಕ್ಷದ ಹೊಸ ದೃಷ್ಟಿ ನಿರ್ಮಾಣವಾಗಬೇಕಾಗಿದೆ. ಪ್ರಕೃತಿಯನ್ನು ಕುರಿತ ಹೊಸ ನೋಟವೆಂದರೆ, ಪ್ರಕೃತಿಯನ್ನು ಕುರಿತ ಹೆಚ್ಚಿನ ಜ್ಞಾನ. ಹೊಸ ಜ್ಞಾನವೆಂದರೆ ಹೊಸ ಅಧಿಕಾರ. ಅಂದರೆ ಉಪನಿಷತ್ ಚಿಂತಕರು ಭಾವಿಸುವ ಜ್ಞಾನದಲ್ಲೇ ಅಂತರ್ಗತವಾಗಿ ರುವ ಮಾಂತ್ರಿಕ ಶಕ್ತಿಯಲ್ಲ. ಜ್ಞಾನ ಒಂದು ಶಕ್ತಿಯಾಗಿ, ಅಧಿಕಾರವಾಗಿ ಮಾರ್ಪಾಡಾಗ ಬೇಕು. ಈ ರೀತಿಯ ಮಾರ್ಪಾಡು ಸುಮ್ಮನೆ ಅದಕ್ಕದಾಗೇ ಆಗಿಬಿಡುವುದಿಲ್ಲ. ದುಡಿಮೆ ಮತ್ತು ದುಡಿಯುವ ಕೈಗಳು ಬೇಕು. ಪ್ರಾಮುಖ್ಯ ಕಳೆದುಕೊಂಡಿದ್ದ ಕೈಗೆ ಈಗ ಮತ್ತೆ ಮಹತ್ವ ಬಂದಿದೆ.  ನಮ್ಮ ಧರ್ಮಶಾಸ್ತ್ರಜ್ಞರು ದೂರ ಇಟ್ಟಿದ್ದ ಶೂದ್ರರೇ ಈ ಮುಕ್ತಿಗೆ ಸೂತ್ರದಾರರಾಗಬೇಕು.