ಶ್ರೀ ರೇಣುಕಾ ಯಲ್ಲಮ್ಮ | ನಿನ್ನಯ ಮರ್ಮ ನಾ
ತಿಳಿಯಲು ಅಸಾಧ್ಯವಮ್ಮಾ         ಪಲ್ಲ

ಕಾಶ್ಮೀರದರಸನ ಮಗಳು ನೀನಮ್ಮ
ಮೂಕಾಂಬಿಕಿ ಗುಡಿಯೊಳಗ ಜನನಾದ್ಯೆಮ್ಮಾ
ಯೋಳುಮಂದಿ ತಾಯಂದಿರಮ್ಮ
ನಿನ್ನ ಸಂರಕ್ಷಣೆ ಮಾಡಿದರಮ್ಮಾ     ೧

ನಿನ್ನ ಕೊಲ್ಲಲಿಕೆ ಕೃಷ್ಣಗಾರುಡಿ ಗೊಲ್ಲರ ಹುಡುಕಿದರಮ್ಮ
ಮಾಯದ ಮಿಣಿನಾಗರಹಾವ ನಿನಗಾಗಿ ತರಿಸಿದರಮ್ಮ
ಶ್ರೀ ಕಾಳಿಕಾ ವರದಿಂದ ಹಾವು
ತುಂಡು ತುಂಡಾಗಿ ಬಂತಮ್ಮ       ೨

ಒಂದು ತಿಂಗಳ ಆಗಿ ಹೋತಮ್ಮ
ಎರಡು ತಿಂಗಳ ಕಳೆದು ಹೋತಮ್ಮ
ಬಾಳೆದಿಂಡ ಬೆಳೆದಂತೆ ನೀನು
ದಿನ ದಿನಕೆ ಬೆಳದಿ ಅಮ್ಮಾ          ೩

ಬಾಲ್ಯ ಯೌವನ ಕಳೆದುಹೋತಮ್ಮಾ
ಯೌವನ ಸ್ವರೂಪಿಗೆ ಬಂದಿ ನೀನಮ್ಮಾ
ಹನ್ನೆರಡು ವರ್ಷದ ಪ್ರಾಯದವಳಾದ್ಯಮ್ಮಾ
ಅಲ್ಲಿ ಜಮದಗ್ನಿಗೆ ನಿನ್ನ ಪ್ರಥಮ ಭೇಟಿಯಾತಮ್ಮಾ     ೪

ಪ್ರಥಮ ಭೇಟಿ ಆದ ಬಾರಿಗೆ ಶ್ರೀ
ಜಮದಗ್ನಿಯವರ ಮೇಲೆ ಮನಸೋತ್ಯಮ್ಮಾ
ನಿನ್ನ ತಂದೆ ರೇಣುಕರಾಯನ ಮುಂದೆ
ಇದ್ದ ವಿಸ್ತಾರನೆಲ್ಲ ಹೇಳಿದೆಯಮ್ಮಾ  ೫

ನಿನ್ನ ತಂದಿ ರೇಣುಕರಾಜ
ಜಮದಗ್ನಿ ಋಷಿಗಳಿಗೆ ಭೇಟಿಯಾಗಿ
ಅಲ್ಲಿ ಕಾಶ್ಮೀರದೊಳಗ ನಿನ್ನ
ಧರ್ಮದ ಧಾರೆಯೆರೆದನಮ್ಮಾ       ೬