ಶರಣು ಶರಣು ಶರಣೆಂಬೆ ಭವಾನಿ
ಕರುಣಿಸು ಕಲ್ಯಾಣಿ         ಪಲ್ಲ

ಸಾವಿರ ನಾಮವ ಹೊಂದಿದ ಗೌರಿ
ಕಾಶ್ಮೀರದರಸನ ಪ್ರೀತಿ ಕುಮಾರಿ
ವಿಸ್ಮಯ ಅನಂತ ಮಹಿಮೆಯ ತೋರಿ
ವಸುಧೆಯೊಳು ಮೆರೆಯುವ ಮೂಲಾಧಾರಿ   ೧

ಕೃತಾಯುಗದಿ ಆದಿಶಕ್ತಿ ರೂಪದಿ
ದಿತಿಸುತರನು ಸಮರದಿ ಶಿರಹರಿದಿ
ಹತಮಾಡಿದಿ ನಿರ್ಜರರನು ನೀನು
ಕ್ಷತ್ರಿಜನರನ್ನು ಉದ್ಧರಿಸಿದಿ ತಾಯಿ   ೨

ತ್ರೇತಾಯುಗದಿ ಸೀತೆಯ ರೂಪದಿ
ಮತಿಯುತ ಶ್ರೀರಾಮಗೆ ಸತಿಯಾದಿ
ಗತಿಗೆಡಿಸಿದಿ ದಶಕಂಠ ರಾವಣನ
ಜಗ ಉದ್ಧರಿಸಿದಿ ಪರತರ ಸದನೆ    ೩

ದ್ವಾಪರ ಯುಗದಿ ದ್ರೌಪದಿಯಾಗಿ
ಪಾಂಡು ಕೌರವರ ವಂಶವನಳದಿ
ಶ್ರೀಪತಿ ದಯದಲಿ ಭಗವತಿಯಾಗಿ
ಪಂಚಪಾಂಡವರ ತಾಮಸ ಹರಿಸಿದಿ          ೪

ಕಲಿಯುಗದಲಿ ಶ್ರೀ ಎಲ್ಲಮ್ಮನೆಂಬ
ಅಚಲ ನಾಮವನು ಧರಿಸಿ ನೀ ಮೆರೆದಿ
ಬಲವುಳ್ಳ ಭಕ್ತರ ಬವಣೆಯ ಹರಿಸಿ
ಛಲವನು ನೀಡಿದಿ ತಾಯಿ ಮಹಾಕಾಳಿ ೫

ಎಕ್ಕಯ್ಯ ಜೋಗಯ್ಯ ಉಘೆ ಉಘೆಯೆಂಬ
ಮುಖ್ಯ ಮಂತ್ರವನು ಜಪಿಸುವವರಿಗೆ
ದುಃಖ ದೂರ ಮಾಡಿ ಸೌಖ್ಯವ ನೀಡಿ
ಅಕ್ಕರೆಯಿಂದಲಿ ಪಾಲಿಸುವ ಗೌರಿ   ೬