ದೇವುಡು ನರಸಿಂಹ ಶಾಸ್ತ್ರಿ ೧೮೯೬ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಕಾದಂಬರಿಗಾರರು, ಕಥೆಗಾರರು, ಉತ್ತಮ ವಾಗ್ಮಿಗಳು, ವಿದ್ವಾಂಸರು, ಪತ್ರಿಕಾ ಸಂಪಾದಕರು, ನಟರು ಹಾಗೂ ಡಾ||ರಾಧಾಕೃಷ್ಣನ್‌ರವರ ಶಿಷ್ಯರು. ಉಪಾಧ್ಯಾಯರಾಗಿ ಜೀವನ ಪಥ ತುಳಿದ ದೇವುಡುರವರ ಮೊದಲ ಸಾಧನೆಯೆಂದರೆ ಆರ್ಯ ವಿದ್ಯಾಶಾಲೆಯನ್ನು ಸ್ಥಾಪಿಸಿದ್ದು. ಇವರು ನವಜೀವನ ಎಂಬ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು ದೇವುಡುರವರ ಬರಹಗಳು ಗುಣ, ಸತ್ವ, ಸಂಖ್ಯೆ, ಎಲ್ಲಾ ದೃಷ್ಟಿಯಿಂದಲೂ ಗಮನಾರ್ಹವಾಗಿವೆ. ಕನ್ನಡ ಸಾರಸ್ವತಲೋಕಕ್ಕೆ ಇವರ ಪೌರಾಣಿಕ ಕಾದಂಬರೀತ್ರಯಗಳಾದ ‘ಮಹಾ ಬ್ರಾಹ್ಮಣ, ಮಹಾಕ್ಷತ್ರಿಯ ಮತ್ತು ಮಹಾದರ್ಶನ’ಗಳು ಮಹಾ ಕಾದಂಬರಿಗಳು. ವೈದಿಕ ಸಾಹಿತ್ಯವನ್ನು ಕರತಲಾಮಲಕ ಮಾಡಿಕೊಂಡಿದ್ದ ದೇವುಡು ಅವರು ಆ ಕಾಲದ ಜನಜೀವನ ಸಂಸ್ಕೃತಿ, ರೀತಿನೀತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಮಹಾಬ್ರಾಹ್ಮಣದಲ್ಲಿ ವಿಶ್ವಾಮಿತ್ರನ ಮಹಾತಪಸ್ಸು ಸಾಧನೆಗಳ ಕಥೆಯನ್ನೂ, ಮಹಾಕ್ಷತ್ರಿಯದಲ್ಲಿ ನಹುಷನ ಕಥೆಯನ್ನೂ, ಮಹಾದರ್ಶನದಲ್ಲಿ ಯಾಜ್ಞವಲ್ಕ್ಯರ ಕಥೆಯನ್ನು ದೇವುಡು ಹೃದಯಂಗಮವಾಗಿ ಹೇಳುತ್ತಾರೆ. ‘ಅಂತರಂಗ’ ಇವರ ಮತ್ತೊಂದು ಪ್ರಮುಖ ಕಾದಂಬರಿ. ಈ ಕಾದಂಬರಿ ಮನಸ್ಸಿನ ವ್ಯಾಪಾರಗಳನ್ನು ಚಿತ್ರಿಸುತ್ತದೆ. ಮೊಟ್ಟಮೊದಲ ಮನೋವೈಜ್ಞಾನಿಕ ಕಾದಂಬರಿ ಎಂಬ ಹೆಸರಿಗೆ ಪಾತ್ರವಾಗಿದೆ. ‘ಎರಡನೆಯ ಜನ್ಮ’ ಕಾದಂಬರಿಯಲ್ಲಿ ಲೈಂಗಿಕ ಸಮಸ್ಯೆಗಳನ್ನು ದೇವುಡು ಚಿತ್ರಿಸಿದ್ದಾರೆ.

ದೇವುಡು ಅವರ ಆಸಕ್ತಿಗಳು ಅನೇಕ, ನಾಟಕದಲ್ಲಿ ಆಸಕ್ತಿ ಇದ್ದ ಕಾರಣ ಬೆಂಗಳೂರು ಅಮಚೂರ್ ಡ್ರಮಾಟಿಕ್ ಅಸೋಸಿಯೇಷನ್ ಸದಸ್ಯರಾದರು. ಆ ಸಂಸ್ಥೆ ಪ್ರಕಟಿಸುತ್ತಿದ್ದ ರಂಗಭೂಮಿ, ಎಂಬ ನಿಯತಕಾಲಿಕದ ಪ್ರಕಟಣೆಯನ್ನು ವಹಿಸಿಕೊಂಡು ಅದರ ಸಂಪಾದಕರಾದರು. ನಟನೆಯಲ್ಲಿ ಇದ್ದ ಆಸಕ್ತಿ ಚಿತ್ರರಂಗಕ್ಕೂ ಅವರನ್ನು ಕೊಂಡೊಯ್ಯಿತು. ಮಾರ್ಕಂಡೇಯ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದರು. ಇವರ ಇತರ ಕಥಾರಚನೆಗಳೆಂದರೆ ಹೊಸಗನ್ನಡ ಪಂಚತಂತ್ರ, ಮೂರು ಕನಸು, ಬುದ್ದಿಯ ಕಥೆಗಳು ಕ್ರಿಸ್ತನ ವಿಚಾರಣೆ, ಮೇಘಸಂದೇಶ, ಕಥಾಸರಿತ್ಸಾಗರ ಹಾಗೂ ಸೋಲೋ ಗೆಲುವೋ ಪ್ರಮುಖವಾದವು.

ಇವರ ಮರಣಾನಂತರ ಮಹಾಕ್ಷತ್ರಿಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೬೨ ರ ಪ್ರಶಸ್ತಿ ದೊರೆಯಿತು. ಇವರ ವ್ಯಕ್ತಿತ್ವ ಎಷ್ಟು ವಿಶಿಷ್ಟವೋ ಇವರ ಕೃತಿಗಳೂ ಕನ್ನಡ ಸಾಹಿತ್ಯದಲ್ಲಿ ಅಷ್ಟೇ ವಿಶಿಷ್ಟ ಹಾಗೂ ಅಪೂರ್ವ.

ಇದೇ ಗುಂಪಿನಲ್ಲಿ ಇನ್ನೊಂದು ಹೆಸರೆಂದರೆ ದೇವುಡು ಅವರದು. ಅವರ ‘ವೈಣಿಕದ, ಕಾವ್ಯಮಯತೆ ಗಾಂಭೀರ್ಯಗಳು ಅದಕ್ಕೊಂದು ಅನನ್ಯತೆಯನ್ನು ತಂದು ಕೊಟ್ಟಿವೆ. ಆದರೆ ಅದಕ್ಕಿಂತ ಅವರ ಸೋಲೋ ಗೆಲುವೋ ದಲ್ಲಿಯ ನೀಳ್ಗತೆಗಳು ಹೆಚ್ಚು ಮಹತ್ವವಾಗಿವೆ. ಈ ಕಥೆಯಲ್ಲಿಯ ಕಂಠಿಮಾವನ ಪಾತ್ರ ಮರೆಯಲಾಗದಂತೆ ಮೂಡಿ ಬಂದಿದೆ. ಅವನೇ ತನ್ನ ದಿಟ್ಟತನ, ಪೌರುಷಗಳಿಂದ ಕಥೆಯ ಸಂವಿಧಾನವನ್ನು ರಚಿಸುತ್ತಾ ಹೋಗುತ್ತಾನೆ. ಪಾತ್ರಗಳ ಕ್ರಮವಾದವಿಕಾಸ, ಕಥೆ ಪಡೆಯುವ ಏರಿಳಿತಗಳು, ಸನ್ನಿವೇಶಗಳ ಯಥಾರ್ಥಗಳಿಂದ ಈ ಕಥೆ ಸಣ್ಣಪ್ರಮಾಣದಲ್ಲಿ ರಚಿಸಿದ ಕಾದಂಬರಿಯಾಗಿದೆ.