ಕೃಷ್ಣಪಕ್ಷದಿರುಳು ಹಬ್ಬಿ
ಬುವಿಯ ಬಾಳನೆಲ್ಲ ತಬ್ಬಿ
ಧೀರಶಾಂತ ಕಡಲಿನಂತೆ
ರುಂದ್ರವಾಗಿದೆ.

ಕರಿಯ ನಭದ ಕಣ್ಗಳಂತೆ
ಅಭಯದೊಂದು ರೂಹಿನಂತೆ
ತೇಲಿಬಿಟ್ಟ ದೀಪದಂತೆ
ನೂರು ತಾರೆ ಬೆಳಕ ಬೀರಿ
ಹೊಳೆದು ನಿಂತಿವೆ.

ಮನೆಯ ಸುತ್ತಮುತ್ತಲೆಲ್ಲ
ಕಪ್ಪು ಕತ್ತಲೆಲ್ಲ ಹಬ್ಬಿ
ಕಾಡು ನಾಡನೆಲ್ಲವನ್ನು
ಪಾನಗೈದಿದೆ.

ನುಗ್ಗಿ ಹರಿವ ತಿಮಿರವನ್ನು
ಕಿರಿಯಮಣ್ಣು ಹಣತೆಯೊಂದು
ಮನೆಯ ಆಚೆಗಟ್ಟಿ ತಾನೆ
ಸ್ತಿಮಿತವಾಗಿದೆ.

ತುಂಬು ಸರಳಜೀವಿಯಂತೆ
ಮುಗ್ಧ ಮನದ ಬಯಕೆಯಂತೆ
ಶಾಂತವಾಗಿದೆ.

ಮನೆಯ ಒಳಗೆ ಮಂಚದಲ್ಲಿ
ನಿದ್ರೆಗೈವ ತಾಯ ಬದಿಗೆ
ಮೂರು ದಿವಸದೊಂದು ಕೂಸು
ಕಣ್ಣು ಬಿಡುತಿದೆ.

ಪರಮಕಲೆಯ ಚೆಲುವಿಗೊಂದು
ಹಿರಿಮೆಯಂತೆ ಹೊಳೆವ ಕಣ್ಣು
ಮೆಲ್ಲನರಳಿವೆ !

ಆಶ್ವಯುಜದ ಸಂಜೆಯಲ್ಲಿ
ಗಗನಪಥದಿ ಉಣ್ಣೆ ಮುಗಿಲು
ಹೊನ್ನ ಕಾಂತಿಯಲ್ಲಿ ಮಿಂದು
ಹೊಳೆಯುವಂತೆ ಮೈಯ್ಯ ಬಣ್ಣ
ಮಧುರವಾಗಿದೆ.

ಮೆಲ್ಲಮೆಲ್ಲನುಸಿರನೆಳೆಯೆ
ಉಬ್ಬುತಿಳಿವ ಎದೆಯ ಮಾಟ
ಗಾಳಿಗಲಗುವರಳೆಯಂತೆ
ಕಣ್ಗೆ ತೋರಿದೆ.

ನೀರೊಳಾಡುತಿರುವ ಮೀನ
ಚಲನದಂತೆ ದೇಹದಂಗ
ಪ್ರಾಣಪೂರ್ಣವಾದ ತೆರದಿ
ಅಲುಗುವಂತಿವೆ !
ಪ್ರಾಣವೊಂದು ದೇಹವಾಗಿ
ಚೆಲುವಿನೊಂದು ಚಿಲುಮೆಯಾಗಿ
ಆಡುವಂತಿದೆ.

ಇನಿತು ಜಗನ್‌ಮೌನದಲ್ಲಿ
ಹಸುಳೆಯೆದೆಯ ಜೀವದುಸಿರು
ಮೊತ್ತ ಮೊದಲು ದೇಹದುಸಿರು
ಮೆಲ್ಲನಾಡಿದೆ.
ಜಗದ ಮೌನದಾಳವನ್ನು
ಅಳೆಯುವಂತಿದೆ !

ಎರಡು ಗೇಣು ದೇಹದಲ್ಲಿ
ಮೃದುತೆಯೊಂದು ಚೀಲದಲ್ಲಿ
ಯಾವ ಶಕ್ತಿ ಸುಪ್ತವಾಗಿ
ಅರಳಲೆಳಸಿದೆ ?

ತಾರೆಗಳನು ತುಡುಕುವಾಸೆ
ಮಿಂಚುಗಳನು ಮುಡಿಯುವಾಸೆ
ಯಾವ ಸೃಷ್ಟಿ ಲಯದ ಬಯಕೆ
ಅಡಗಿ ಕುಳಿತಿದೆ?

ಆದರದರ ಮುದ್ದುಮೊಗದಿ
ಸಾವಿನೊಂದು ಶಂಕೆಯಿಲ್ಲ.
ನೋವು ನಲಿವಿನಂಕೆಯಿಲ್ಲ.
ದೇಹಭಾವ, ಅಹಂಭಾವ
ಯಾವುದೊಂದು ತೋರುತಿಲ್ಲ
ಏನು ಅಲ್ಲ, ಏನು ಇಲ್ಲ
ದೇವಭಾವವೊಂದು ಮಾತ್ರ
ಮುದ್ರೆಯೊತ್ತಿದೆ !
ಆದರದರ ಭದ್ರಗಾತ್ರ
ಮನುಜನಂತಿದೆ !