ಸುತ್ತಮುತ್ತ ಅಂಧಕಾರ
ಮಳೆಹನಿಗಳ ಪಂಜರ !
ದೈತ್ಯ ಸೆರೆಯ ಕಂಬಿಯೊಳಗೆ
ಬಂತು ದೇವ ಕುಂಜರ !
ಬೆಣ್ಣೆ ಮೆದ್ದು ಮಲರುತಿತ್ತು
ಕೊಳಲೂದುವ ಕೆಂದುಟಿ !
ಮಧುರ ಭಾವದಿಂದ ಪುಲಕ-
ವಾಯ್ತು ಗೋಪ ಹೃತ್ಕುಟಿ !
ಯಮುನಾನದಿ ಪುಲಕವಾಯ್ತು
ನನಸುಗೊಂಡ ಕನಸಿಗೆ,
ಬೃಂದಾವನ ವೇಣುಕುಂಜ
ಕೊಳಲಾಯಿತು ಉಸಿರಿಗೆ !
ಕೊಳಲುಳಿಯಿತು ಗಾಳಿಯಲ್ಲಿ,
ಬಂತು ರಾಜ್ಯವೈಭವ
ಮಧುರಾಪುರದರಮನೆಯೊಳು
ಬೆಳೆಸುತಿತ್ತು ತೇಜವ.
ಕೊಳಲ ಹಿಡಿದ ಮಿದುಬೆರಳೊಳು
ಪಾರ್ಥ ರಥದ ವಾಘೆಯು !
ಕೊಳಲೂದಿದ ಮಧುರಾಧರ-
ದಲ್ಲಿ ಪಾಂಚಜನ್ಯವು !
ರಣರಂಗದ ತುಮುಲದಲ್ಲು
ಕೇಳು ದಿವ್ಯಗೀತೆಯ :
‘ಸಂಭವಾಮಿ ಯುಗೇ ಯುಗೇ’
ಎನುವ ಪರಮ ಸತ್ಯವ !
ಮತ್ತೆ ಮತ್ತೆ ಅಂಧಕಾರ
ಮಳೆ ಹನಿಗಳ ಪಂಜರ,
ಸೊಂಡಿಲಾಡಿಸುತ್ತ ಬರುವು
ದದೊ ದೇವ ಕುಂಜರ !
Leave A Comment