ಪಿಕಾಗೋ ವಿಶ್ವವಿದ್ಯಾಲಯದ ಸಂಸ್ಕೃತ ಹಾಗೂ ಭಾರತೀಯ ಭಾಷೆಗಳ ಪ್ರಾಧ್ಯಾಪಕ ಷೆಲ್ಡನ್ಪೊಲಾಕ್ಅವರ COSMOPOLITAN VERNACULLAR ಎಂಬ ಲೇಖನದ ಕನ್ನಡಾನುವಾದದ ಆಯ್ದ ಭಾಗಗಳನ್ನೊಳಗೊಂಡಿದೆ ಈ ಬರೆಹ. ಪೂರ್ಣ ಲೇಖನಕ್ಕೆ ನೋಡಿ-‘ವಿಶ್ವಾತ್ಮಕ ದೇಶಭಾಷೆ’, ನೀನಾಸಮ್ಮಾತುಕತೆ, ಸಂ. ೫೩.

ಆಧುನಿಕ ಪೂರ್ವಯುಗದಲ್ಲಿ, ಜಗತ್ತಿನ ಯಾವುದೇ ಭಾಗದ ಒಂದು ಸ್ಥಳೀಯ ಸಾಹಿತ್ಯ ಸಂಸ್ಕೃತಿಯು ತನ್ನ ಬೆಳವಣಿಗೆಯನ್ನು ನಿಖರವಾಗಿ ಗುರುತಿಸಲು ಅವಕಾಶ ಮಾಡಿಕೊಡುವ ಸ್ವಪ್ರಜ್ಞೆಯೊಂದನ್ನು ಸೂಚಿಸುವ ದೃಷ್ಟಾಂತವು ಇನ್ನೆಲ್ಲಿಗಿಂತ ಚೆನ್ನಾಗಿ ನಮಗೆ ಕಾಣದೊರೆಯುವುದು – ಕನ್ನಡದಲ್ಲಿ; ಇವತ್ತಿನ ಭಾರತದ ಕರ್ನಾಟಕ ರಾಜ್ಯದಲ್ಲಿ ನೆಲೆಯಾಗಿರುವ ಭಾಷೆ ಇದು. ಈಗ, ಈ ಭಾಷೆಯ ಸಾಹಿತ್ಯ ನಿರ್ಮಾಣದಲ್ಲಿ ನಡೆದ ವಿಶ್ವಾತ್ಮಕತೆ ಮತ್ತು ದೇಶೀಯತೆಗಳ ದೀರ್ಘಕಾಲದ ವ್ಯವಹಾರ ವಿವರಗಳ ಪರಿಶೀಲನೆಗೆ ತೊಡಗುವ ಮೊದಲು, ನಾನಿಲ್ಲಿ ಶಾಸನಗಳಲ್ಲಿ ವ್ಯಕ್ತವಾಗುವ ಅದರ ಇತಿಹಾಸವನ್ನು ಚುಟುಕಾಗಿ ಚಿತ್ರಿಸುತ್ತೇನೆ.

ಸಾರ್ವಜನಿಕವಾಗಿ ಪ್ರದರ್ಶಿತವಾದ ಶಾಸನಪಠ್ಯಗಳ ಕ್ಷೇತ್ರದಲ್ಲಿ ಕಾಣುವ ಕನ್ನಡದ ವೈಶಿಷ್ಟ್ಯಗಳು, ಇದನ್ನು ಈ ಭಾಷೆಯ ಮೂಲಕ ದೇಶಭಾಷಾ ನಿರ್ಮಾಣದ ಪ್ರಕ್ರಿಯೆಯನ್ನು ಪರಿಶೀಲಿಸಲು ಉತ್ತಮ ದೃಷ್ಟಾಂತವನ್ನಾಗಿ ಮಾಡಿವೆ. ವಾಯವ್ಯ ಕರ್ನಾಟಕದಲ್ಲಿ, ಅಂದರೆ ಮುಂದೆ ಪ್ರಸ್ತಾಪಿಸಲಿರುವ ಪ್ರತಿಷ್ಠಿತ ಸಾಹಿತ್ಯಕ ಉಪಭಾಷೆಯು ಚಾಲ್ತಿಗೆ ಬಂದ ನೆಲದಲ್ಲಿ, ನಮ್ಮ ಮಾಹಿತಿಗೆ ಬರುವ ಮೊತ್ತ ಮೊದಲಿನ ರಾಜವಂಶ-ಕದಂಬರದು (ಕ್ರಿ.ಶ. ೪ನೆಯ ಶತಮಾನದಿಂದ). ಇವರು ಸಾರ್ವಜನಿಕ ದಾಖಲೆಗಳಲ್ಲಿ ಕನ್ನಡವನ್ನು ಬಳಸಲಿಲ್ಲ. ಇನ್ನು, ನೈರುತ್ಯ ಕರ್ನಾಟಕದಲ್ಲಿ ಸಿಗುವ ಅತ್ಯಂತ ಹಳೆಯ ರಾಜವಂಶವು ಗಂಗರದು (೪ರಿಂದ ೬ನೆಯ ಶತಮಾನ); ಇವರೂ ೬ನೆಯ ಶತಮಾನದ ಅವಿನೀತನವರೆಗೂ ತಮ್ಮ ತಾಮ್ರಪತ್ರಗಳಲ್ಲಿ ಕನ್ನಡವನ್ನು ಉಪಯೋಗಿಸಲಿಲ್ಲ. ಅಲ್ಲಿಂದ ಮುಂದೆ, ಕನ್ನಡ ನಾಡಿನ ರಾಜವಂಶಗಳ ಸಾಂಸ್ಕೃತಿಕ ರಾಜಕಾರಣವನ್ನು ಪರಿಶೀಲಿಸಲು ಸಾಧ್ಯವಾಗುವುದು ಬಾದಾಮಿ ಚಾಲುಕ್ಯರಿಂದ, ಮತ್ತು ಅದಕ್ಕಿಂತ ಚೆನ್ನಾಗಿ, ಆಮೇಲೆ ಬಂದ ರಾಷ್ಟ್ರಕೂಟರಿಂದ. ಅಂಕಿ ಅಂಶಗಳಲ್ಲಿ ಹೇಳುವುದಾದರೆ, ರಾಷ್ಟ್ರಕೂಟರ ಕಾಲದಲ್ಲಿ, ೯ನೆಯ ಶತಮಾನದ ಆದಿಯಿಂದ ಕ್ರಮೇಣ, ಆದರೆ ಅಚ್ಚರಿಯಾಗುವಂತೆ, ಸಂಸ್ಕೃತ ಕಾವ್ಯವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ರೂಢಿ ಇಳಿಮುಖವಾಗುವುದು ಕಾಣಿಸುತ್ತದೆ. ಕ್ರಿ.ಶ. ೭೫೦ರ ಸುಮಾರಿಗೆ ಮೊದಲುಗೊಳ್ಳುವ ಈ ರಾಜವಂಶವು ಶಾಸನಗಳನ್ನು ಬರೆಸಲು ತೊಡಗಿದಾಗ ಶೇಕಡಾ ೮೦ರಷ್ಟು ಶಾಸನಗಳು ಸಂಸ್ಕೃತದಲ್ಲೇ ಇದ್ದರೆ, ಅದಾಗಿ ೨೦೦ ವರ್ಷಗಳ ಬಳಿಕ ಈ ಪ್ರಮಾಣ ಶೇಕಡಾ ೫ಕ್ಕೆ ಇಳಿಯಿತು (ಗೋಪಾಲ್‌ ೧೯೯೪, ೪೨೯-೬೫).

ಭಾಷೆಯ ಆಯ್ಕೆಯಲ್ಲಾದ ಈ ಪಲ್ಲಟದ ಜೊತೆಜೊತೆಗೇ ಕಾಣುವ ಇನ್ನೊಂದು ವಿದ್ಯಮಾನವೆಂದರೆ ಬಾದಾಮಿ ಚಾಲುಕ್ಯರ ಮತ್ತು ರಾಷ್ಟ್ರಕೂಟರ ಎಲ್ಲ ಆರಂಭದ ಕನ್ನಡ ಶಾಸನಗಳೂ ಕೇವಲ ದಾಖಲೆಯ ಸ್ವರೂಪದವು. ರಾಜವಂಶವೊಂದು ‘ಕುಶಲ’ವಾದ ಕನ್ನಡ ಶಾಸನವೊಂದನ್ನು ಬರೆಯಿಸಿದ್ದು ಮೂರನೆಯ ಕೃಷ್ಣನ ಆಳ್ವಿಕೆಯ ಕಾಲದಲ್ಲಿ (೯೩೯,ಎ.ಇ ೧೯, ೨೮೯), ಅಂದರೆ, ಶಾಸನದಲ್ಲಿ ಕನ್ನಡವು ಪ್ರಥಮವಾಗಿ ಬಳಕೆಯಾದ (ಹಲ್ಮಿಡಿ, ಕ್ರಿ.ಶ.೪೫೦) ಉದಾಹರಣೆಗಿಂತ ಸುಮಾರು ಅರ್ಧ ಸಹಸ್ರಮಾನದಷ್ಟು ತಡವಾಗಿ.

ಹಾಗೆಯೇ, ಕನ್ನಡದಲ್ಲಿ ಗ್ರಾಂಥಿಕರೂಪದ ಸಾಹಿತ್ಯ ಉತ್ಪಾದನೆಯಾದದ್ದು ಕಾಣುವುದು, ಈ ಮೂರನೆಯ ಕೃಷ್ಣನಿಗಿಂತ ಕೆಲವೇ ತಲೆಮಾರುಗಳ ಮುಂಚೆ, ರಾಷ್ಟ್ರಕೂಟ ರಾಜ ನೃಪತುಂಬ ಅಮೋಘವರ್ಷ(ಕ್ರಿ.ಶ. ೮೧೪-೮೦)ನ ಕಾಲದಲ್ಲಿ ಮಾತ್ರವೇ. ಸಾಹಿತ್ಯ ಸಂಸ್ಕೃತಿಯ ದೃಷ್ಟಿಯಿಂದ ಈ ಕಾಲ-ದೇಶಸಂಯುಕ್ತ ಬಿಂದುವು ಅಸಾಧಾರಣವಾದದ್ದು; ಭಾಷೆಭಾಷೆಗಳ ನಡುವಿನ ಹಲವು ಪ್ರಯೋಗಗಳು ಆಗ ಈ ಸ್ಥಳದಲ್ಲಿ ಜರುಗಿದವು. ಉದಾಹರಣೆಗೆ, ಈ ಕಾಲದಲ್ಲೇ ಜೈನರು ತಮ್ಮ ಧರ್ಮದ ಕಾವ್ಯಾತ್ಮಕ ಇತಿಹಾಸಗಳನ್ನು ಬರೆಯುವುದಕ್ಕಾಗಿ ಸ್ಪಷ್ಟವಾಗಿ ಸಂಸ್ಕೃತದತ್ತ ತಿರುಗಿದರು (ನೃಪತುಂಗನ ಆಧ್ಯಾತ್ಮಿಕ ಶಿಕ್ಷಕ ಎರಡನೆಯ ಜಿನಸೇನನ ‘ಆದಿಪುರಾಣ’ -ಕ್ರಿ.ಶ. ೮೩೭-ಅಥವಾ ವರ್ಧಮಾನನ ಮೊದಲ ಸ್ವತಂತ್ರ ಜೀವನಚರಿತೆಯಾಗಿರುವ ಅಸಗನ ‘ವರ್ಧಮಾನ ಪುರಾಣ’ -ಕ್ರಿಶ..೮೫೩). ಇದೇ ಕಾಲದಲ್ಲೇ, ಕಳೆದ ಐದು ಶತಮಾನಗಳಿಂದೀಚೆಗೆ ಮೊದಲ ಬಾರಿಗೆ, ಜೈನರು ಸಂಸ್ಕೃತದ ವ್ಯಾಕರಣ ಗ್ರಂಥವೊಂದನ್ನು ರಚಿಸಿದರು; ಅದು – ಶಕಟಾಯನನ ‘ಶಬ್ದಾನುಶಾಸನ’. ಇಲ್ಲಿ, ತುಸು ತಡವಾಗಿ ಕಾಣಿಸಿಕೊಂಡ ಅಪಭ್ರಂಶದಲ್ಲಿ -ಅಪಭ್ರಂಶವು ನಾವು ಗುರುತಿಸಿರುವ ಹಾಗೆ, ಸಂಸ್ಕೃತ ಮತ್ತು ಪ್ರಾಕೃತಗಳ ಜೊತೆಗೆ ವಿಶ್ವಾತ್ಮಕತೆಯನ್ನು ಸಾಧಿಸಿಕೊಂಡ ಮೂರನೆಯ ಭಾಷೆಯಾಗಿತ್ತು-ಪುಷ್ಪದಂತನೆಂಬ ಕವಿ ಕ್ರಿ.ಶ. ೯೫೦ರಲ್ಲಿ ಬರೆದ; ಆತ ಜೈನರ ಸಾರ್ವತ್ರಿಕ ಇತಿಹಾಸವನ್ನು ಕನ್ನಡದಲ್ಲಿ ಬರೆದ ಮೊದಲಿಗ. ಆದರೆ, ಈ ಘಟ್ಟದಲ್ಲಿ, ಐತಿಹಾಸಿಕವಾಗಿ ಅತ್ಯಂತ ಆಯಕಟ್ಟಿನ ಕೃತಿಯೊಂದು ಬಂದಿದ್ದು ಮಾತ್ರ ಕನ್ನಡದ ಸಾಹಿತ್ಯ ಸಂಸ್ಕೃತಿಯಲ್ಲಿಯೇ.

ಕನ್ನಡದಲ್ಲಿ ನೃಪತುಂಗನ ಕಾಲಕ್ಕಿಂತ ಮೊದಲೇ ಸಾಹಿತ್ಯ ಪಠ್ಯಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿದ್ದವೆಂಬುದರಲ್ಲಿ ಅನುಮಾನವಿಲ್ಲ. ಆದರೆ, ಮಧ್ಯಯುಗದಾದ್ಯಂತ ಚಾಲ್ತಿಯಲ್ಲಿದ್ದ ಕನ್ನಡ ಸಾಹಿತ್ಯ ಸಂಸ್ಕೃತಿಯ ಮೇರೆಗಳ ಪರಿಕಲ್ಪನೆಯಲ್ಲಿ, ಕನ್ನಡದ ‘ಕೇಂದ್ರಸ್ಥಳ’ವಾಗಿದ್ದದ್ದು ಕಿಸುವೊಳಲ್‌ (ಪಟ್ಟದಕಲ್ಲು), ಪ್ರಸಿದ್ಧ ನಗರವಾಗಿದ್ದ ಕೊಪಣ(ಕೊಪ್ಪಳ), ಪುಲಿಗೆರೆ(ಲಕ್ಷೇಶ್ವರ) ಮತ್ತು ಒಂಕುಂದ(ಬೆಳಗಾವಿ ಜಿಲ್ಲೆಯ ಒಕ್ಕುಂದ)-ಈ ಊರುಗಳ ನಡುವಿನ ಕನ್ನಡದ ತಿರುಳು ಭೂಮಿ(ಕವಿರಾಜಮಾರ್ಗ ೧.೩೮). ಅರ್ಥಾತ್‌ ರಾಜನೇ ಪ್ರತಿಷ್ಠಿತವೆಂದು ಸೂಚಿಸಿದ ಈ ಪ್ರಮುಖ ಉಪಭಾಷಾನಾಡು ಇದ್ದದ್ದು ಎರಡನೆಯ ಗೋವಿಂತ ಮತ್ತು ಅವನ ಮಗ ನೃಪತುಂಗರು ತಮ್ಮ ರಾಜಧಾನಿಯನ್ನು ಕಟ್ಟಿದ್ದ ಕರ್ನಾಟಕದ ವಾಯವ್ಯ ಭಾಗದಲ್ಲಲ್ಲ; ಬದಲು, ಅದಕ್ಕೆ ೨೫೦ ಕಿ.ಮಿ. ನೈರುತ್ಯಕ್ಕಿದ್ದ ಆ ಮೊದಲಿನ ಚಾಲುಕ್ಯರಾಜರ ಕೇಂದ್ರಪ್ರಾಂತ್ಯದಲ್ಲಿ. ಇದಕ್ಕೆ ಕಾರಣ, ಬಾದಾಮಿ ಮತ್ತು ಐಹೊಳೆಗಳಲ್ಲಿ ಆಗಲೇ ಹೊಸ ಕನ್ನಡ ಸಾಹಿತ್ಯವೊಂದು ಅಸ್ತಿತ್ವದಲ್ಲಿತ್ತು -ಎಂದಾದರೂ ಕೂಡಾ ಕನ್ನಡ ಸಾಹಿತ್ಯದ ಪ್ರಾಚೀನತೆ ಇನ್ನೂ ಕೆಲವು ಶತಮಾನಗಳಿಗಿಂತ ಹಿಂದೆ ಹೋಗುವುದಿಲ್ಲ. ನಿಜವಾಗಿ, ಕನ್ನಡ ಕವಿಗಳು ಸ್ವತಃ ತಮ್ಮ ಕವಿಪ್ರಶಂಸೆಯಲ್ಲಿ ಪ್ರಸ್ತಾಪಿಸುವ ಸಾಹಿತ್ಯ ಇತಿಹಾಸದ ಸ್ಮೃತಿ ಕೂಡಾ ಇದಕ್ಕಿಂತ ಹಿಂದೆ ಹೋಗುವುದಿಲ್ಲ. (ಹಾಗೆ ಪ್ರಸ್ತಾಪಿತವಾಗುವ ಅತ್ಯಂತ ಹಿಂದಿನ ಕವಿಗಳೆಂದರೆ ೯ನೆಯ ಶತಮಾನದ ಅಸಗ, ಗುಣನಂದಿಯರು). ಕನ್ನಡದಲ್ಲಿ ಲಭ್ಯವಿರುವ ಮೊದಲ ಪಠ್ಯವೂ ಕೂಡಾ ಹೀಗೇ ಅಭಿಪ್ರಾಯಪಡುತ್ತ, ಲೇಖಕನೊಬ್ಬನಿಗೆ ತನ್ನ ಪೂರ್ವದ ಸಾಹಿತ್ಯ ಮಾದರಿಗಳನ್ನು ಗುರುತಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸವೆಂದು ಹೇಳುತ್ತದೆ; ತಾನು ಮಾಡಹೊರಟಿರುವ ಕಾರ್ಯಕ್ರಮಕ್ಕಾಗಿ ಅದು ಚಿಂದಿ ಆಯುವವರಂತೆ ಕನ್ನಡ ಸಾಹಿತ್ಯದ ತುಣುಕುಗಳ ಹುಡುಕಾಟಕ್ಕೆ ತೊಡಗುತ್ತದೆ:

ಸಂಸ್ಕೃತ ಮತ್ತು ಪ್ರಾಕೃತಗಳೆರಡರ ಪ್ರಯೋಗದ ಲಕ್ಷ್ಯಲಕ್ಷಣಗಳು ಹೇರಳವಾಗಿ ಮೊದಲೇ ಸಿಕ್ಕುವುದರಿಂದ ಅವು ಓರಣವಾದ ಸಾಹಿತ್ಯರಚನೆಗೆ ಇಷ್ಟಾನುಸಾರವಾಗಿ (ಬಗೆದಂತೆ) ಲಭ್ಯವಾಗುವವು. ಆದರೆ, ನಾನು ಪ್ರಸ್ತುತಪಡಿಸಲು ಹೊರಟಿರುವ ಪ್ರಸ್ಥಾನಕ್ಕೆ (ಕನ್ನಡ ಸಾಹಿತ್ಯದ) ತುಣುಕುಗಳನ್ನು (ಇರಿಕೊರೆಗೊಂಡು) ಬೇಡಿಹುಡುಕುವುದು ಅಗತ್ಯವಾಗಿದೆ. (ಸಂಸ್ಕೃತ ಮತ್ತು ಪ್ರಾಕೃತದ) ಪ್ರಾಚೀನ ಲಕ್ಷಣಕಾರರು ಮಾಡಿದ್ದನ್ನು ಕನ್ನಡಕ್ಕೆ ಸಂಬಂಧಿಸಿದಂತೆ ಮಾಡುವುದು ಕಷ್ಟಸಾಧ್ಯ. (ಕವಿರಾಜಮಾರ್ಗ, ೧.೪೧೪೧)

ಕನ್ನಡ ಸಾಹಿತ್ಯವೆಂಬುದೇ, ನಾನು ಆ ಶಬ್ದವನ್ನು ಉದ್ದಕ್ಕೂ ಬಳಸುತ್ತ ಬಂದಿರುವ ಅರ್ಥದಲ್ಲಿ, ಈ ಕಾಲಕ್ಕೆ ಒಂದು೭ ಸಮೀಪಕಾಲದ, ಅಂದರೆ ಪ್ರಾಯಶಃ ೮ನೆಯ ಶತಮಾನದ, ಅನ್ವೇಷಣೆಯಾಗಿತ್ತು. ಕನ್ನಡದ ಇಂಥ ಹೊಸತನದ ಕಾರಣದಿಂದಲೇ, ಅಂದರೆ ಸಂಸ್ಕೃತಕ್ಕೆ ಹೋಲಿಸಿದರೆ ಈ ಸಾಹಿತ್ಯವು ಹೊಸದೆಂದು ಕಾಣಿಸುತ್ತಿದ್ದುದರಿಂದಲೇ, ಪ್ರಸ್ತುತ ಲೇಖಕ ಮಧ್ಯಯುಗದ ಈ ಸಾಹಿತ್ಯ ಸಂಸ್ಕೃತಿಯಲ್ಲಿ ನಡೆಯತೊಡಗಿದ್ದ ಇಂಥ ಸಂಕೀರ್ಣವಾದ ಸ್ಥಳೀಯ ಮತ್ತು ವಿಶ್ವಾತ್ಮಕ ಜಗ್ಗಾಟದಲ್ಲಿ ಹೆಣಗುತ್ತ ತನ್ನ ಹಾದಿಯನ್ನು ಹುಡುಕಿಕೊಳ್ಳಬೇಕಾಯಿತು. ಸಾಹಿತ್ಯದ ದೇಶಭಾಷಾ ನಿರ್ಮಾಣದ ಇತಿಹಾಸದಲ್ಲಿ ಕಾಣಸಿಗುವ ಇಂಥ ಒಂದು ಅನನ್ಯ ಕೃತಿ-ಕವಿರಾಜಮಾರ್ಗ(ಕ್ರಿ.ಶ.೮೭೫); ಈ ದೃಷ್ಟಿಯಿಂದ ಇದನ್ನು ಡಾಂಟೆಯ ‘ಡೆ ವಲ್ಗಾರಿ ಇಲೋಕ್ವೆನ್ಷಿಯಾ’ ಕೃತಿಯ ಜೊತೆಗೆ -ಯಾ ಅದಕ್ಕಿಂತ ಮೊದಲಿಗೆ-ಇಡಬಹುದಾದ್ದು. ಪ್ರಾಯಶಃ ಇದು, ಪ್ರಪಂಚದ ಸಂಸ್ಕೃತಿಯಲ್ಲೇ, ವಿಶ್ವಾತ್ಮಕ ಭಾಷೆಯೊಂದಕ್ಕೆ ಪ್ರತಿಯಾಗಿ ದೇಶಭಾಷಾ ಕಾವ್ಯಮೀಮಾಂಸೆಯೊಂದನ್ನು ಕಟ್ಟಿದ ಮೊತ್ತಮೊದಲ ಕೃತಿ. ಇದಕ್ಕೂ ಡಾಂಟೆಯ ಕೃತಿಗೂ ನಡುವೆ ಗಣನೀಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಾಮ್ಯಗಳಿದ್ದಾವೆ; ಕೆಲವು ವ್ಯತ್ಯಾಸಗಳೂ ಇದ್ದಾವೆ. ಸೂಕ್ಷ್ಮಸ್ತರದಲ್ಲಿ, ‘..ಇಲೋಕ್ವೆನ್ಷಿಯ’ಕ್ಕಿಂತ ಭಿನ್ನವಾಗಿ ಕವಿರಾಜಮಾರ್ಗವು ತನ್ನ ಕಾಲದಲ್ಲಿ ಪೈಪೋಟಿ ನಡೆಸುತ್ತಿರುವ ಹಲವು ಉಪಭಾಷೆಗಳ ನಡುವೆ ರಾಜ್ಯಕ್ಕೆ ಉಪಯುಕ್ತವಾಗುವಂತಹ ಒಂದು ಏಕೀಕೃತ ಭಾಷೆಯನ್ನು ನಿರ್ಮಿಸಲು ಪ್ರಯತ್ನಿಸುವುದಿಲ್ಲ. ಬದಲು, ಇದು ಸಾಹಿತ್ಯಕ್ಕೆ ಸಮರ್ಪಕವಾಗುವಂಥ ಭಾಷೆಯೊಂದನ್ನು ಹುಡುಕುತ್ತದೆ. ಇನ್ನು, ಸ್ಥೂಲಸ್ತರದಲ್ಲಿ, ರಾಜಕೀಯ ತತ್ವ-ಪ್ರಯೋಗಗಳಿಗೂ ಮತ್ತು ಡಾಂಟೆಯ ಕೃತಿಗೂ ಇರುವಂತಹ ಪಾರದರ್ಶಕ ಸಂಬಂಧ ಕವಿರಾಜಮಾರ್ಗದಲ್ಲಿ ಕಾಣಿಸುವುದಿಲ್ಲ; ಆದರೆ, ಈ ಕೃತಿಗೆ ತನ್ನ ಸಾಮಾಜಿಕ ಆವರಣ ಮತ್ತು ಲೇಖಕನ ಸಂದರ್ಭ ಮುಖ್ಯವಾಗಿರುವುದು ನಿಚ್ಚಳವಾಗಿದೆ. ಈ ಕೃತಿ ರಚನೆಯಾಗಿದ್ದು ನೃಪತುಂಗನ ಆಸ್ಥಾನದಲ್ಲಿ ಮತ್ತು ಅವನ ಮೇಲ್ವಿಚಾರಣೆಯಲ್ಲಿ, ಅಂಧರೆ, ಈ ‘ಕವಿರಾಜಮಾರ್ಗ’ವು ಸ್ವತಃ ನೃಪತುಂಗನ ಮಾರ್ಗವೇ ಸರಿ.

ಮಧ್ಯಕಾಲೀನ ಭಾರತದ ಸಾಂಸ್ಕೃತಿಕ-ರಾಜಕೀಯ ಇತಿಹಾಸಕ್ಕೆ ‘ಕವಿರಾಜ ಮಾರ್ಗ’ವು ತುಂಬ ಪ್ರಮುಖ ದಾಖಲೆಯಾಗಿದ್ದರೂ ಕೂಡಾ ಕನ್ನಡದಲ್ಲಿ ಬಿಟ್ಟು ಬೇರಾವ ಭಾಷೆಯಲ್ಲೂ ಇದರ ವಿಮರ್ಶಾತ್ಮಕ ಚರ್ಚೆಯಿರಲಿ ಪರಿಚಯಾತ್ಮ’ಕ ವೃತ್ತಾಂತವೂ ಬಂದಿಲ್ಲ. ಕನ್ನಡ ಭಾಷೆಯ ವಿದ್ವಾಂಸಚಿಂತನೆ ಕೂಡಾ ಇದರ ವಿಶಾಲವಾದ ಐತಿಹಾಸಿಕ ಪ್ರಾಮುಖ್ಯವನ್ನು ಗುರುತಿಸಿದ್ದು ಕಡಿಮೆಯೇ. ದಕ್ಷಿಣ ಏಶಿಯಾದ ಕುರಿತು ಎಲ್ಲೆಡೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಕನ್ನಡವೇ ಅನ್ಯಾಯದಿಂದ ನಿರ್ಲಕ್ಷಿತವಾಗಿದ್ದರೆ, ೧೨ನೆಯ ಶತಮಾನದ ವೀರಶೈವ ಸಾಂಸ್ಕೃತಿಕ ಕ್ರಾಂತಿಗೆ ಮುಂಚಿನ ಹಳಗನ್ನಡ ಭಾಷೆಯ ಈ ನಾಡಿನ ಸಾಹಿತ್ಯವೆಲ್ಲವೂ, ಕರ್ನಾಟಕದಲ್ಲೂ ಕೂಡಾ ಕಡಿಮೆ ಅಭ್ಯಾಸಗೊಳ್ಳುತ್ತಿದೆ. ಕಾರಣ, ಸಂಸ್ಕೃತದ ಜ್ಞಾನವಿಲ್ಲದೆ ಈ ಹಳಗನ್ನಡವನ್ನು ಹಿಡಿಯುವುದು ಕಷ್ಟ. ಪ್ರಸ್ತುತ ಪಠ್ಯವು ಸಂಸ್ಕೃತದ ಪರಂಪರೆಯ ಜೊತೆಗೆ, ಅದರಲ್ಲೂ ಮುಖ್ಯವಾಗಿ ದಂಡಿಯ ‘ಕಾವ್ಯಾದರ್ಶ’ದೊಂದಿಗೆ, ಹೊಂದಿದ್ದ ಸಂಬಂಧವೇ ಒಗಟಿನದು. ಇವೆರಡೂ ಸಂಗತಿಗಳು ನಮಗೆ, ಆ ಕಾಲದ ಕನ್ನಡದಲ್ಲಿ ಬರೆಯುತ್ತಿದ್ದ ಧೀಮಂತರು ಏನನ್ನು ಸಾಧಿಸಹೊರಟಿದ್ದರು ಎಂಬುದರ ಬಗ್ಗೆ ಸುಳಿವ ಕೊಡುತ್ತವೆ. ಈ ಮೊದಲೇ ನಾವು ನೋಡಿದಂತೆ, ದಕ್ಷಿಣ ಏಶಿಯಾದಲ್ಲಿ, ಸಂಸ್ಕೃತ ಕಾವ್ಯಮೀಮಾಂಸೆಯನ್ನು ಕುರಿತಂತೆ ಗ್ರಂಥಗಳು ಚಲಾವಣೆಯಲ್ಲಿ ಇದ್ದವು ಎನ್ನುವ ಸಂಗತಿಯೇ ಸಂಸ್ಕೃತವೆಂಬ ಮಹಾವಿಶ್ವದ ಸೃಷ್ಟಿಗೆ ಕಾರಣವೂ ಸಾಕ್ಷಿಯೂ ಆಗಿದ್ದವು. ಜೊತೆಗೆ, ಈ ಗ್ರಂಥಗಳು ಸ್ಥಳೀಯ ಕಾವ್ಯಗಳನ್ನು ತತ್ವೀಕರಿಸಲಿಕ್ಕೆ ಅಗತ್ಯವಾಗುವ ಚೌಕಟ್ಟನ್ನೂ ಒದಗಿಸುವಂಥವಾಗಿದ್ದವು (ಸಯಾಮ್‌ನಲ್ಲಿ, ಶ್ರೀಲಂಕಾದಲ್ಲಿ, ಟಿಬೆಟ್‌ನಲ್ಲಿ ಇತ್ಯಾದಿ). ಇಂಥದೇ ಪ್ರಕ್ರಿಯೆ ಭಾರತ ಉಪಖಂಡದಲ್ಲೂ ಸಂಭವಿಸಿತು; ಅದು ಮೊದಲಿಗೆ ಮತ್ತು ಇನ್ನೆಲ್ಲಿಗಿಂತ ಗಾಢವಾಗಿ ಸಂಭವಿಸಿದ್ದು ಕನ್ನಡ ನಾಡಿನಲ್ಲಿ.

ಜಾಗತಿಕವನ್ನು ಸ್ಥಳೀಯಗೊಳಿಸುವಿಕೆ: ಕವಿರಾಜಮಾರ್ಗ ಮತ್ತು ಕಾವ್ಯದ ದಾರಿಗಳು

ಕವಿರಾಜಮಾರ್ಗ ಕೃತಿಯು ದಂಡಿಯ ‘ಕಾವ್ಯಾದರ್ಶನ’ದ ಸಂರಚನೆಯನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸುತ್ತದೆ ಮತ್ತು ಕೆಲವು ದೃಷ್ಟಿಗಳಿಂದ ಇದು ದಂಡಿಯ ಆ ಕೃತಿಯನ್ನು ಕುರಿತು ನಮಗೆ ಲಭ್ಯವಿರುವ ಅತ್ಯಂತ ಹಳೆಯ ವ್ಯಾಖ್ಯಾನವೂ ಹೌದು. ಮೊದಲಿಗೆ ಅದು ಕಾವ್ಯವನ್ನು ನಿರ್ವಹಿಸುತ್ತದೆ, ಕಾವ್ಯಕ್ಕೆ ತೊಂದರೆಯಾಗುವ ದೋಷಗಳನ್ನೂ ಅನುಕೂಲವಾಗುವ ಗುಣಗಳನ್ನೂ ಗುರುತಿಸುತ್ತದೆ (ಪರಿಚ್ಛೇದ ೧); ಆ ಮೇಲೆ ಶಬ್ದಾಲಂಕರಗಳನ್ನೂ (ಪರಿಚ್ಛೇದ ೨) ಅರ್ಥಾಲಂಕಾರಗಳನ್ನೂ (ಪರಿಚ್ಛೇದ) ೩) ಪಟ್ಟಿ ಮಾಡುತ್ತದೆ. ಸಂರಚನೆಯಲ್ಲಿ ಕಾಣುವ ಸಾಮ್ಯದ ಜೊತೆಗೇ, ಇದರಲ್ಲಿ ಬರುವ ಸುಮಾರು ಇನ್ನೂರು ಉದಾಹರಣೆಯ ಪದ್ಯಗಳನ್ನು ಈ ಕೃತಿಯು ಪ್ರಾಯಶಃ ತನ್ನ ಸಂಸ್ಕೃತದ ಪೂರ್ವಕೃತಿಗಳಿಂದ ಅನುಸರಿಸುತ್ತದೆ. ಹಾಗಿದ್ದರೂ, ಹಲವೊಮ್ಮೆ ತಿಳಿಯಲಾಗುವಂತೆ, ಇದು ಸಂಸ್ಕೃತದ ಅನುವಾದವಲ್ಲ. ಯಾಕೆಂದರೆ, ಕನ್ನಡದ ಜ್ಞಾನವಿರಬೇಕಾದರೆ ಅದಕ್ಕೂ ಮೊದಲು ಸಂಸ್ಕೃತದ ಜ್ಞಾನವು ಅನಿವಾರ್ಯವೆಂದಾಗಿದ್ದ ಈ ಜಗತ್ತಿನಲ್ಲಿ, ‘ಅನುವಾದ’ವೆಂದು ನಮಗೀಗ ಪರಿಚಿತವಾಗಿರುವ ಪರಿಕಲ್ಪನೆಗೆ ಅವಕಾಶವೇ ಇಲ್ಲ, ಮಾತ್ರವಲ್ಲ, ಈ ಕೃತಿಯು ತನ್ನ ಸಂಸ್ಕೃತ ಮಾದರಿಗಿಂತಲೂ ಭಿನ ನವಾದ ಒಂದು ಕಾರ್ಯಸೂಚಿಯನ್ನು ಹೊಂದಿದೆ. ಕವಿರಾಜಮಾರ್ಗವು ಪ್ರಸ್ತುತ ಪಡಿಸುತ್ತಿರುವುದು ಸಾರ್ವತ್ರಿಕ ಸಂಸ್ಕೃತ ಕಾವ್ಯಮೀಮಾಂಸೆಯನ್ನು ಸ್ಥಳೀಯಗೊಳಿಸುವ ಒಂದು ಪ್ರಯೋಗವನ್ನು, ಮತ್ತು ಆ ಮೂಲಕ ಅದು ಕನ್ನಡಕಾವ್ಯದ ಸ್ವನಿರೂಪಣೆ ಯೊಂದನ್ನು ಮುಂದಿಡಲು ಹೊರಟಿದೆ. ಹಾಗಿದ್ದರೂ ಇನ್ನೊಂದು ದಿಕ್ಕಿನಿಂದ, ಇದು ಇಂಥ ಕಾವ್ಯಮೀಮಾಂಸೆಯ ನಿರ್ಮಾಣವನ್ನು ಕುರಿತಂತೆಯೂ ಹಾಗೂ ಈ ಕಾಲದ ಜಾಗತಿಕ-ಸ್ಥಳೀಯ ಲೇವಾದೇವಿಯ ಚಲನಶೀಲತೆಯನ್ನು ಕುರಿತಂತೆಯೂ ಕೆಲವು ಒಳನೋಟಗಳನ್ನು ಕೊಡಬಲ್ಲುದಾಗಿದೆ. ನಾನಿಲ್ಲಿ ಈ ಕೃತಿಯ ಇಂಥ ಎರಡೂ ಸ್ವರೂಪಗಳನ್ನು ವಿವರಿಸಲು ಹೊರಟಿದ್ದೇನೆ-ಸಂಸ್ಕೃತದ ಮಾರ್ಗಕಾವ್ಯದ ಪ್ರಸ್ಥಾನವನ್ನು ಇದು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ಸಂಗತಿಯನ್ನು ವಿಶ್ಲೇಷಿಸುವ ಮೂಲಕ. ಬಹುಕಾಲದಿಂದ ಕವಿರಾಜಮಾರ್ಗದ ಅಭ್ಯಾಸಕಾರರಿಗೆ ತೊಡಕಾಗಿರುವ ಒಂದು ವಿಷಯ ಇದು.

ಮಾರ್ಗ – ಎಂಬ ವರ್ಗೀಕರಣವನ್ನು ಕವಿರಾಜಮಾರ್ಗವು, ಮೊದಲಿಗೆ ಅದರ ವಿಶಾಲಾರ್ಥದಲ್ಲಿ, ಒಂದು ಸಾಹಿತ್ಯಕ ಪದ್ಧತಿಯೆಂದು ಪರಿಚಯಿಸುತ್ತದೆ; ‘ಕವಿರಾಜಮಾರ್ಗ’ವೆಂಬ ಹೆಸರಿನಲ್ಲಿಯೇ ಅಂತರ್ಗತವಾಗಿರುವ ಸೂಚನೆ ಇದು. ಇಲ್ಲಿ ಮಾರ್ಗವೆನ್ನುವುದು ‘ಒಳ್ಳೆಯ ಕಾವ್ಯ’ವೆಲ್ಲವನ್ನೂ ಒಳಗೊಳ್ಳುವ ಒಂದು ಪದವಾಗುತ್ತದೆ (ದೂಷ್ಯಗುಣದ ಕಾವ್ಯಕ್ಕೆ ವಿರುದ್ಧವಾಗಿ, ೨,೭-೮, ಹಾಗೆಯೇ ನೋಡಿ-ಜಿನಸೇನ, ಆದಿಪುರಾಣ, ೧.೩೧;೨೦೮-೯), ಮತ್ತು ಆದ್ದರಿಂದಲೇ, ಕಾವ್ಯಮಾರ್ಗವೆನ್ನುವುದು ಭಾಷೆಯನ್ನು ಅದರ ಎಲ್ಲ ರಾಚನಿಕ ಮತ್ತು ಆಲಂಕಾರಿಕ ಸಂಕೀರ್ಣತೆಯೊಂದಿಗೆ ಅತ್ಯುತ್ಕೃಷ್ಟವಾಗಿ ಬಳಸುವ ವಿಧಾನವಾಗುತ್ತದೆ:

ಭಾಷೆಯನ್ನು ಅರಿತಂಥವನು ಇನ್ನೊಬ್ಬರಿಗೆ ತನ್ನ ಯೋಚನೆಗಳು ತೆರೆದು ತಿಳಿಯುವಂತೆ ಅವರೊಂದಿಗೆ ಸಂವಹನೆ ನಡೆಸಬಲ್ಲ. ಕಿರಿದರಲ್ಲಿಯೇ ಹಿರಿದಾದ ಅರ್ಥವನ್ನಡಗಿಸಿ ತಿಳಿಸಬಲ್ಲಂಥವನು ಅವನಿಗಿಂತಲೂ ಚದುರ. ಇನ್ನು, ಛಂದೋಬಂಧದಲ್ಲಿ ನುಡಿಯನ್ನು ಅಳವಡಿಸಬಲ್ಲಾತ ಅವನಿಗಿಂತಲೂ ಜಾಣ. ಇನ್ನು, ಮಾರ್ಗಕಾವ್ಯಗಳನ್ನು (ಮಹಾಧ್ವ ಕೃತಿಗಳ್‌) ರಚಿತ ಬಲ್ಲಂಥವನು ಎಲ್ಲರಿಗಿಂತಲೂ ಬಲ್ಲಿದನು. (ಕವಿರಾಜಮಾರ್ಗ, ೧.೧೫-೧೬)

ಈ ವರ್ಣನೆ ಸ್ಪಷ್ಟವಾಗಿಯೇ ಅರ್ಥವಾಗುವಂಥದು. ಆದರೆ ಗೊಂದಲ ಹುಟ್ಟಿಸುತ್ತದೆಯೆಂದು ಗುರುತಿಸಲಾಗಿರುವುದು ಕವಿರಾಜಮಾರ್ಗದ ಮುಂದಿನ ನಡೆ. ಅಲ್ಲಿ ಈ ಕೃತಿಯು ಕನ್ನಡ ಕಾವ್ಯದ ವೈಶಿಷ್ಟ್ಯವನ್ನು ಗುರುತಿಸುವ ಸಾಧನವಾಗಿ, ಸಂಸ್ಕೃತವು ಯಾವುದನ್ನು ಪ್ರಸ್ತುತಪಡಿಸಿತ್ತೋ-ಮತ್ತು ಯಾವ ಪ್ರಸ್ತುತಿಯು ಸಂಸ್ಕೃತಕ್ಕೆ ಎಲ್ಲ ಸಾಹಿತ್ಯಾವರಣಗಳನ್ನು ವ್ಯಾಪಿಸಿಕೊಳ್ಳಲು ಸಹಾಯಕವಾಯಿತೋ-ಅದೇ ಪ್ರಾಂತೀಯ ಮಾರ್ಗಗಳ ತತ್ವವನ್ನು ಅಳವಡಿಸಿಕೊಳ್ಳುತ್ತದೆ:

ಅನೇಕ ಪ್ರಕಾರಗಳನ್ನೊಳಗೊಳ್ಳುವ ಕಾವ್ಯಮಾರ್ಗದ ಸೂಕ್ಷ್ಮಗತಿಗಳನ್ನು ಅರಿತು ತೀರ್ಮಾನ ಕೊಡುವುದು ಅಸಾಧ್ಯವಾದ ವಿಷಯ. ಪೂರ್ವದ ಶಾಸ್ತ್ರಗಳ ಸರಣಿಯಿಂದ ತಿಳಿಯುವ ನಿಯಮಗಳನ್ನು ಪರಿಶೀಲಿಸಿ, ಈ ವಿಷಯವು ಒಟ್ಟಿನಲ್ಲಿ ಸ್ಪಷ್ಟವಾಗುವಂತೆ, ಕನ್ನಡಕ್ಕೆ ಸಂಬಂಧಿಸಿದಂತೆ ಕೆಲವನ್ನು ಸ್ವಲ್ಪದರಲ್ಲೇ ಹೇಳುತ್ತೇನೆ ….ಲೋಕವು ಅನಾದಿಯಾಗಿರುವುದರಿಂದ ಇಲ್ಲಿ ಹುಟ್ಟುವ ಕವಿಗಳೂ ಅಸಂಖ್ಯರು, ಅವರ ವ್ಯಕ್ತಿಗಳ ಅಭಿವ್ಯಕ್ತಿಯ ವಿಧಾನಗಳೂ ಅಸಂಖ್ಯ, ಆದ್ದರಿಂದಲೇ ಕಾವ್ಯಮಾರ್ಗದ ವೈವಿಧ್ಯಗಳೂ ಅಸಂಖ್ಯವೇ ಸರಿ….ಆದರೆ ನನಗೆ ಸಾಧ್ಯವಿರುವಷ್ಟರಮಟ್ಟಿಗೆ, ಈ ವಿಷಯವನ್ನು ಕುರಿತು ಬರೆದ ಪೂರ್ವದ (ಸಂಸ್ಕೃತ) ಕವಿಗಳು ಈ ವ್ಯತ್ಯಾಸಗಳನ್ನು ಗುರುತಿಸಿರುವುದನ್ನು ಆಧರಿಸಿ, ದಕ್ಷಿಣಉತ್ತರಗಳೆಂಬ ಮಾರ್ಗದ ಇಂಥ ಭೇದಗಳನ್ನು ಸಾಧ್ಯವಾದಷ್ಟು ನಾನು ಚರ್ಚಿಸುತ್ತೇನೆ….ಇವೆರಡರಲ್ಲಿ ದಕ್ಷಿಣ ಮಾರ್ಗವು (ಹತ್ತು ಭಾಷಾ ಗುಣಗಳಿಂದಾಗಿ) ಹತ್ತು ಬಗೆಯದಾಗುತ್ತದೆಉತ್ತರದ ಮಾರ್ಗವು ಈ ಗುಣಗಳ ಲವಿಪರ್ಯಯ ಸ್ವರೂಪವುಳ್ಳದ್ದಾಗಿದ್ದು ಆ ಮೂಲಕ ಭಿನ್ನವಾದದ್ದಾಗಿರುತ್ತದೆ. (ಕವಿರಾಜಮಾರ್ಗ, ೨,೪೬, ೪೯-೫೧)

ಆ ಬಳಿಕ, ಈ ಕೃತಿಯು ಸಂಸ್ಕೃತ ಸಂಪ್ರದಾಯದಿಂದ ಕನ್ನಡವು ಪಡೆದುಕೊಂಡ ಎಲ್ಲ ಭಾಷಾ ಲಕ್ಷಣಗಳ ದೃಷ್ಟಾಂತ, ತಪಶೀಲುಗಳನ್ನು ವಿವರವಾಗಿ ಮುಂದಿಡುತ್ತದೆ. ಅಂತಿಮವಾಗಿ, ಈ ಲಕ್ಷಣಗಳು ಕನ್ನಡ ಮೀಮಾಂಸೆಗೂ ಆಧಾರರೂಪಿಯೆಂದು ಕರ್ತೃ ಹೇಳುತ್ತಾನೆ-“ಕಾವ್ಯದಲ್ಲಿ ಯಾವುದೇ ಶಬ್ದವನ್ನು ಬಳಸಿಕೊಂಡಿರಲಿ, ಅವು ಪೂರ್ವೋಕ್ತವಾದ ಮಾರ್ಗಗಳ ಲಕ್ಷಣಗಳಿಗನುಸಾರವಾಗಿ ಪ್ರಯುಕ್ತಗೊಂಡಿದ್ದರೆ, ಕನ್ನಡದ ಗುಣವನ್ನು ವರ್ಧಿಸಲಿಕ್ಕೂ ಸಹಾಯಕವಾಗುತ್ತವೆ” (ಕವಿರಾಜಮಾರ್ಗ, ೨.೦೦೦). ಒಟ್ಟಿನಲ್ಲಿ ಕವಿರಾಜಮಾರ್ಗವು ಮಾಡಿರುವ ಕೆಲಸ-ಸಂಸ್ಕೃತ ವಿಶ್ವಾತ್ಮಕತೆಗೆ ಆಧಾರವಾಗಿರುವ ಸಾರ್ವತ್ರಿಕ ಶೈಲಿಗಳನ್ನೊಳಗೊಂಡ ಪ್ರಸ್ಥಾನವನ್ನು ಕನ್ನಡದ ಸ್ಥಳೀಯ ಜಗತ್ತಿಗೆ ಪೂರ್ಣವಾಗಿ ಕಸಿಮಾಡುವಂಥದು.

ಕವಿರಾಜಮಾರ್ಗದಿಂದ ಮೊದಲುಗೊಂಡು, ಮುಂದೆ ‘ಕಾವ್ಯಾವಲೋಕನ’ (ಕ್ರಿ.ಶ. ೧೦೪೦ರಲ್ಲಿ ನಾಗವರ್ಮನಿಂದ ರಚಿತ, ಈತ ಕಲ್ಯಾಣಿ ಚಾಲುಕ್ಯರ ವಂಶಸ್ಥ ಎರಡನೆಯ ಜಯಸಿಂಹನ ಆಸ್ಥಾನದಲ್ಲಿದ್ದ) ಎಂಬ ಮಧ್ಯಯುಗೀನ ಕನ್ನಡದ ಎರಡನೆಯ ಪ್ರಮುಖ ಕಾವ್ಯಮೀಮಾಂಸೆಯ ಗ್ರಂಥದಲ್ಲಿಯೂ ಪುನಃ ಚರ್ಚಿತವಾಗುವ ಈ ಒಟ್ಟೂ ಜಿಜ್ಞಾಸೆಯನ್ನು ಕನ್ನಡದ ಆಧುನಿಕ ಪಂಡಿತರು ಕನ್ನಡ ಕಾವ್ಯಕ್ಕೆ ಅಪ್ರಸ್ತುತವೆಂದೂ ಅಸ್ಪಷ್ಟವೆಂದೂ ಹೇಳಿ ತಳ್ಳಿಹಾಕಿದ್ದಾರೆ. ಆರ್.ನರಸಿಂಹಾಚಾರ್ ಅವರು ತಾಳ್ಮೆಯಿಲ್ಲದೆ ಇದನ್ನು ತಳ್ಳಿಹಾಕಿದ ಬಳಿಕ ಈ ಚರ್ಚೆ ಇಲ್ಲಿ ಮುಂದುವರೆಯಲೇ ಇಲ್ಲ. ನರಸಿಂಹಾಚಾರ್ ಅವರ ಪ್ರಕಾರ, ಕನ್ನಡ ಕಾವ್ಯಮೀಮಾಂಸೆಯ ಈ ‘ಉತ್ತರ’ ಮತ್ತು ‘ದಕ್ಷಿಣ’ಗಳೆಂಬ ಪ್ರಸ್ತಾಪವು “ಸಂಸ್ಕೃತದ ಶೈಲಿ ಯಾ ಶಾಖೆಗಳಿಗೆ” ಅನ್ವಯವಾಗಬಹುದೆ ಹೊರತು ವಾಸ್ತವವಾಗಿ ಕನ್ನಡದಲ್ಲಿ ಬಿಂಬಿತವಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ (೧೯೩೪, ೧೨೧-೨೨). ಇಂಥ ಒಂದು ತೀರ್ಮಾನವನ್ನು ತೆಗೆದುಕೊಂಡುಬಿಟ್ಟರೆ, ಆಗ ನಾವು, ಕವಿರಾಜಮಾರ್ಗವು ಸಂಸ್ಕೃತದ ಮಾರ್ಗ ಪ್ರಸ್ಥಾನವನ್ನು ಬಳಸಿ ಕನ್ನಡ ಕಾವ್ಯದ ವಿಶ್ಲೇಷಣೆಗೆ ಯಾಕೆ ತೊಡಗಿತು-ಎಂಬುದನ್ನು ವಿವರಿಸಲು ಅಸಾಧ್ಯವಾಗಿಬಿಡುತ್ತದೆ. ಅಷ್ಟೇ ಅಲ್ಲ, ಕವಿರಾಜಮಾರ್ಗವು ಮಾರ್ಗಪ್ರಸ್ಥಾನವನ್ನು ಬಳಸಿಕೊಳ್ಳುವ ಜೊತೆಗೇ ಅಂಥ ಬಳಕೆಯು ಸ್ಥಳೀಯ ಕಾವ್ಯಸಂಸ್ಕೃತಿಯೊಂದಕ್ಕೆ ಅನ್ಯವೂ ಅರ್ಥಹೀನವೂ ಆಗಿ ಕಾಣುತ್ತಿರುವ ದ್ವಂದ್ವವನ್ನು ವ್ಯಾಖ್ಯಾನಿಸಲಿಕ್ಕೆ ನಮಗೆ ಅವಕಾಶ ಒದಗಿಸುತ್ತದೆ. ಮಾರ್ಗಪ್ರಸ್ಥಾನವು ರೂಪತಿವಾಗಿರುವುದು ಮೂಲತಃ ಸಂಸ್ಕೃತ ಕಾವ್ಯದ ಪ್ರಾಂತ್ಯಾತರ ವ್ಯಾಪ್ತಿಯ ಸ್ವರೂಪದ ಮೇಲೆ ಅವಧಾರಣೆ ಕೊಡಲಿಕ್ಕಾಗಿ; ಅದು ಅರೆ ಪ್ರಾಂತೀಯ ವೈವಿಧ್ಯಗಳನ್ನು ಗುರುತಿಸುವುದೂ ಅದಕ್ಕಾಗಿಯೇ. ಆದರೆ ಇಲ್ಲಿ, ಮಾರ್ಗಪ್ರಸ್ಥಾನವು ಕನ್ನಡಕಾವ್ಯದ ಯಾವುದೇ ಸ್ಥಳೀಯ ಲಕ್ಷಣವನ್ನು ಗ್ರಹಿಸಲು ಸೋಲುವುದರಿಂದ ಕೇವಲ ಸಂಸ್ಕೃತ ಸಾಹಿತ್ಯವನ್ನು ಅನುಕರಿಸಿರುವ ಕನ್ನಡದ ಭಾಗಕ್ಕಷ್ಟೇ ಸೀಮಿತವಾಗಿ ಅನ್ವಯಗೊಳ್ಳುತ್ತದೆ; ಹಾಗೂ ಆ ಕಾರಣದಿಂದ ಅಂತಿಮವಾಗಿ, ಇಲ್ಲಿ ಅದು, ಕನ್ನಡವೆಂಬ ನಿಜಪ್ರಾಂತ್ಯದ ಜಗತ್ತಿಗೆ ಅನುಚಿತವೂ ಅಸಂಬದ್ಧವೂ ಆಗಿ ಗೋಚರಿಸುತ್ತದೆ.

ಕವಿರಾಜಮಾರ್ಗ ಪಠ್ಯವು ಹೊರಬಂದಿರುವುದು ಮಧ್ಯಕಾಲೀನ ಭಾರತದ ಅತ್ಯಂತ ಪ್ರಬಲವಾದ ಒಂದು ರಾಜಕೀಯ ಕೇಂದ್ರದಿಂದ (ನೋಡಿ-ಇಂಡೆನ್‌ ೧೯೯೦, ೨೨೮ ಎಫ್‌ ಎಫ್‌). ಆದಕಾರಣ, ಕವಿರಾಜಮಾರ್ಗವನ್ನು ಕೇವಲ ಮೂಲಾರ್ಥ ವಿಶ್ಲೇಷಣೆಯ ಔದಾರ್ಯದಿಂದಷ್ಟೇ ನಾವು ವಿಶ್ಲೇಷಿಸಬಾರದು ಎನ್ನುವುದಾದರೆ, ಕಡೆಯಪಕ್ಷ ಈ ರಾಜಕೀಯ ಸಂದರ್ಭದ ಸಂಗತಿಯದರೂ ನಮ್ಮನ್ನು ಈ ಕೃತಿಯ ಚರ್ಚೆಗೆ ಒತ್ತಾಯಿಸಬೇಕು; ದೇಶಭಾಷಾಮೀಮಾಂಸೆಯ ಚರ್ಚೆಗೆ ಯಾಕೆ ಇಲ್ಲಿ ವಿಶ್ವಾತ್ಮಕ ಸಂಸ್ಕೃತದ ಪ್ರಸ್ತಾವನೆಗಳು ಬಂದಿವೆಯೆಂಬುದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸುವಂತಾಗಬೇಕು. ಹಾಗೆ ವಿಶಾಲವಾದ ಒಂದು ವ್ಯಾಪ್ತಿಯಲ್ಲಿಟ್ಟು ಈ ಪ್ರಶ್ನೆಯನ್ನು ಚರ್ಚಿಸುವುದಾದರೆ, ಈ ಸಂದರ್ಭದಲ್ಲಿ ಕನ್ನಡವು ಸಂಸ್ಕೃತದ ಪ್ರಾಂತ್ಯಾಂತರವ್ಯಾಪ್ತಿಯ ವಲಯದಿಂದ ಹೊರದೂಡಲ್ಪಟ್ಟಿದೆ ಮತ್ತು ಜೊತೆಗೇ, ಸ್ಥಳೀಯವೆಂಬ ಸೀಮಿತತೆಯಲ್ಲಿ ಸಿಲುಕಿಕೊಳ್ಳಲು ಬಯಸದೇ ಇರುವ ಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಸ್ಥಾಪಿತವಾದ ಕವಿರಾಜಮಾರ್ಗವು ಕರ್ನಾಟಕದ ಸ್ಥಳೀಯ ಜಗತ್ತಿಗೆ ಮಾರ್ಗ ಪ್ರಸ್ಥಾನವನ್ನು ಅನ್ವಯಿಸುವ ಮೂಲಕ ಅದಕ್ಕೆ ಹೊಸದೊಂದು ಪರಿಪ್ರೇಕ್ಷ್ಯವನ್ನು ಸೃಷ್ಟಿಸಿಕೊಡುತ್ತಿದೆ- ಆ ಪ್ರಕಾರ, ಕನ್ನಡದಲ್ಲಿ ಉತ್ತರ-ದಕ್ಷಿಣಗಳೆಂಬ ಕಾವ್ಯದ ಎರಡು ಭೇದಗಳು ಇರಲೇಬೇಕು; ಕನ್ನಡನಾಡು ಒಂದು ಪ್ರಾಂತೀಯ ಜಗತ್ತು ಎನ್ನುವುದು ಸ್ಥಾಪಿತಗೊಳ್ಳಲು ಅದಕ್ಕೆ ಉತ್ತರ-ದಕ್ಷಿಣವೆಂಬ ಬೇಧ ಸೃಷ್ಟಿಯಾಗಲೇ ಬೇಕು; ಅಂಥ ವಿಭಜನೆಯು ಇಲ್ಲಿ ಇರುವ ಕಾವ್ಯಕ್ಕೆ ಅನ್ವಯವಾಗುತ್ತದೆಯೋ ಇಲ್ಲವೋ ಎಂಬುದು ಈ ಸಂದರ್ಭದಲ್ಲಿ ಅಪ್ರಸ್ತುತ. ಅಂದರೆ, ಸಂಸ್ಕೃತದಿಂದ ವ್ಯಾಖ್ಯಾನಿತವಾದ ಕಾವ್ಯ ಎಂಬ ಜಗತ್ತಿನಲ್ಲಿ ಕನ್ನಡವು ಕಾಲಿಡಬೇಕಿದ್ದರೆ ಕನ್ನಡವೂ ಆ ಜಗತ್ತಿನ ಲಕ್ಷಣಗಳನ್ನು ಕಾಣಿಸುವುದು ಅನಿವಾರ್ಯ.. ಅರ್ಥಾತ್‌, ಸ್ಥಳೀಯತೆಯು ತನ್ನ ಸ್ಥಳೀಯೇತರ ಸ್ವರೂಪವನ್ನು ಪ್ರದರ್ಶಿಸುವುದು ಇಲ್ಲಿ ಅತ್ಯಗತ್ಯ.

ಇಂಥ ಒಂದು ವಿವರಣೆಯು ಮಾತ್ರವೇ ಕವಿರಾಜಮಾರ್ಗದ ಹಿನ್ನೆಲೆಯೆಲ್ಲಿರುವ ರಾಜಕೀಯ-ಸಾಂಸ್ಕೃತಿಕ ಒತ್ತಾಸೆಗಳನ್ನು ಗ್ರಹಿಸಲು ಸಾಧ್ಯ; ಮುಂದೆ ನಾನು ಕೊಡುವ ಸಾಕ್ಷ್ಯಗಳೂ ಇದಕ್ಕೆ ಪೂರಕವಾಗಿವೆ. ಆದರೆ ಇದೆಲ್ಲದಕ್ಕಿಂತ ಪ್ರಾಥಮಿಕವೂ ಅತಿಮುಖ್ಯವೂ ಆದ ಇನ್ನೂ ಒಂದು ಪ್ರೇರಣೆ – ಅರ್ಥೈಸಲಿಕ್ಕೆ ತುಸು ಕ್ಲಿಷ್ಟವೆನ್ನಿಸುವಂಥದ್ದು – ಇಲ್ಲಿ ಕೆಲಸ ಮಾಡಿದೆ. ಕವಿರಾಜಮಾರ್ಗವು ಹೇಗೆ ತನ್ನ ಮೂಲಸಂಸ್ಕೃತ ಮಾದರಿಗಳಿಗಿಂತ ಭಿನ್ನವಾದ ಹೊಸ ಜೋಡಣೆಗಳನ್ನು ಮಾಡುತ್ತದೆಯೆಂಬ ಸಂಗತಿಯನ್ನು ಪರಿಶೀಲಿಸತೊಡಗಿದರೆ ನಮಗೆ ಈ ಕಾರಣವು ಕಾಣಲಾರಂಭಿಸುತ್ತದೆ. ಮೊದಲನೆಯದಾಗಿ, ಇದು ‘ಮಾರ್ಗ’ಗಳನ್ನು ‘ಉತ್ತರ’ ಮತ್ತು ‘ದಕ್ಷಿಣ’ಗಳೆಂದು ಹೆಸರಿಸುತ್ತದೆ (ಕನ್ನಡದ ಸನ್ನಿವೇಶದಲ್ಲಿ ಗೌಡ, ವೈದರ್ಭ ಎಂಬ ವರ್ಗೀಕರಣ ಅಸಹಜವೂ ಹೌದು). ಆದರೆ ಹಾಗೆ ಮಾಡುವ ಮೂಲಕ ಇದು ಸಂಸ್ಕೃತದ ವರ್ಗೀಕರಣಕ್ಕಿರುವ ಸ್ಥಳನಿರ್ದಿಷ್ಟತೆಯನ್ನು ತೆಳುವಾಗಿಸುತ್ತದೆ. ಅದಕ್ಕಿಂತ ಮುಖ್ಯವಾದ ಎರಡನೆಯ ವ್ಯತ್ಯಾಸ ಇದು – ಮಾರ್ಗಗಳ ನಡುವಿನ ಭಿನ್ನತೆಯನ್ನು ವಿವರಿಸುವಾಗ ಕವಿರಾಜಮಾರ್ಗವು ಸಂಸ್ಕೃತ ಅಲಂಕಾರ ಪ್ರಸ್ಥಾನದ ಸ್ವಭಾವೋಕ್ತಿ ಮತ್ತು ವಕ್ರೋಕ್ತಿಗಳೆಂಬ ಪರಿಕಲ್ಪನೆಗಳನ್ನು ಉಪಯೋಗಿಸಿಕೊಳ್ಳುತ್ತದೆ; ಪ್ರಮಾಣಿತ ಸಂಸ್ಕೃತ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಇದು ಪರಿಭಾಷೆಯ ದೋಷವೆಂದೇ ಕಾಣುವಂಥದು:

ಈ ರೀತಿ, ಎರಡು ಮಾರ್ಗಗಳು ಇಲ್ಲಿ ಪ್ರಾಮುಖ್ಯತೆಯನ್ನು ಪಡೆದವು, ಅವುಗಳೊಂದಿಗೇ ವಕ್ರೋಕ್ತಿ ಮತ್ತು ಸ್ವಭಾವೋಕ್ತಿಗಳೆಂಬ ಎರಡು ವಿಭಿನ್ನ ಅಭಿವ್ಯಕ್ತಿ ವಿಧಾನಗಳೂ ಕೂಡಾ. ಅವುಗಳಲ್ಲಿ ಸ್ವಭಾವೋಕ್ತಿಯೆಂಬುದು ದಕ್ಷಿಣದ ಮಾರ್ಗದ ವಿಶಿಷ್ಟ ಧರ್ಮವಾಗಿದ್ದರೆ, ವಕ್ರೋಕ್ತಿಯ ಹಲವಾರು ವಿಕಲ್ಪಗಳು ಉತ್ತರಮಾರ್ಗದಲ್ಲಿ ಅಂತರ್ಗತವಾಗಿರುತ್ತವೆ. (ಕವಿರಾಜ ಮಾರ್ಗ, ೨.೫೨-೫೩).

ಸಂಸ್ಕೃತ ಸಂಪ್ರದಾಯದ ಪ್ರಕಾರ, ನಾವು ಈಗಾಗಲೇ ಗಮನಿಸಿರುವಂತೆ ಮಾರ್ಗಮಾರ್ಗಗಳನ್ನು ಪ್ರತ್ಯೇಕಿಸುವ ಲಕ್ಷಣಗಳೆಂದರೆ -ಧ್ವನಿ, ವಾಕ್ಯ, ಶಬ್ದಕೋಶಗಳಿಗೆ ಸಂಬಂಧಿಸಿದ ನಿರ್ದಿಷ್ಟ ಭಾಷಾ ಗುಣಗಳ ಅಸ್ತಿತ್ವ ಅಥವಾ ಅದರ ಅನುಪಸ್ಥಿತಿ ಯಾ ವಿಪರ್ಯಯ. ಆದರೆ ಕವಿರಾಜಮಾರ್ಗದಲ್ಲಿ ಇನ್ನೂ ಒಂದು ಭಿನ್ನತೆಯನ್ನು ಕೂಡಿಸಲಾಗುತ್ತಿದೆ – ಈ ಭಿನ್ನತೆಯ ಬಗ್ಗೆ ಮೂಲಸಂಪ್ರದಾಯದಲ್ಲಿ ಪ್ರಸ್ತಾಪವಿಲ್ಲ, ಆದರೆ ಅದು ಮೂಲಕ್ಕೆ ಪೂರಕವೇ ಆಗುವಂಥದು-ದಕ್ಷಿಣ ಮಾರ್ಗದ ಕಾವ್ಯದಲ್ಲಿ ರೂಪಕಾದಿ ಅಲಂಕಾರಗಳಿಲ್ಲ, ಆದ್ದರಿಂದ ಅದು ಸಾಹಿತ್ಯಾಭಿವ್ಯಕ್ತಿಗೆ ಭಾಷೆಯನ್ನೇ ಪ್ರಧಾನವನ್ನಾಗಿಸುವಂಥದು. ಅದೇ, ಉತ್ತರದ ಕಾವ್ಯವು ಅಲಂಕರಾವಲಂಬಿ, ಮೇಲೆ ಉಲ್ಲೇಖಿಸಿದ ಅಲಂಕಾರದ ಹಲವು ವೈವಿಧ್ಯಗಳು ಅಲ್ಲಿವೆ. ಕವಿರಾಜಮಾರ್ಗಕ್ಕಿಂತ ಮೊದಲೂ ತುಂಬ ಮಸುಕಾಗಿ ಇಂಥ ಭಿನ್ನತೆಯೊಂದರೆ ಪ್ರಸ್ತಾಪ ಇತ್ತು. ಆದರೆ ಅದು ಸ್ಪಷ್ಟವಾಗಿ ಪ್ರತಿಪಾದಿತವಾಗುವುದು ಮಾತ್ರ ಕೆಲವು ಕಾಲಾನಂತರ ಬಂದ ಭೋಜರಾಜನ ‘ಶೃಂಗಾರ ಪ್ರಕಾಶ’ದಲ್ಲಿ(೧೧ನೆಯ ಶತಮಾನದ ಮೊದಲ ಭಾಗ):“ಕಾವ್ಯದಲ್ಲಿ ಸೌಂದರ್ಯದ ಮೂರು ಆಕರಗಳಿವೆ-ಪರೋಕ್ಷ ಅಭಿವ್ಯಕ್ತಿ (ವಕ್ರೋಕ್ತಿ), ನೇರ ಅಭಿವ್ಯಕ್ತಿ(ಸ್ವಭಾವೋಕ್ತಿ) ಮತ್ತು ಭಾವಾಭಿವ್ಯಕ್ತಿ(ರಸೋಕ್ತಿ). ಅಲಂಕಾರಗಳಿಗೆ ಪ್ರಾಮುಖ್ಯವನ್ನು ಕೊಟ್ಟಾಗ ಅದು ವಕ್ರೋಕ್ತಿಯಾಗುತ್ತದೆ; ಭಾಷಾಗುಣ ಗಳಿಗೆ ಪ್ರಾಮುಖ್ಯವನ್ನು ಕೊಟ್ಟಾಗ ಅದು ವಕ್ರೋಕ್ತಿಯಾಗುತ್ತದೆ (೬೭೮).” ಹೀಗೆ, ಸ್ವಭಾವೋಕ್ತಿಯನ್ನು ವೈದರ್ಭಮಾರ್ಗಕ್ಕೆ ಮತ್ತು ವಕ್ರೋಕ್ತಿಯನ್ನು ಗೌಡಮಾರ್ಗಕ್ಕೆ ಸಮೀಕರಿಸುವ ಈ ಪ್ರಸ್ತಾಪವು ಸಂಸ್ಕೃತ ಪರಂಪರೆಯಿಂದ ಎಷ್ಟು ಪ್ರತ್ಯೇಕಿತವಾಗಿ ಕಾಣುತ್ತದೆಯೆಂದರೆ ಸ್ವತಃ ಭೋಜನ ಕೃತಿಯನ್ನು ಸಂಪಾದಿಸಿದ ಸಂಪಾದಕರಿಗೇ ಅದು ಅರ್ಥಹೀನವೆಂದು ಗೋಚರಿಸಿದೆ (ರಾಘವನ್‌ ೧೯೬೩, ೧೩೬-೩೭; ಇದು ಇಂಡಾಲಜಿ ವಿದ್ವಾಂಸರಿಗೂ ಅಪರಿಚಿತ). ಕವಿರಾಜಮಾರ್ಗದ ಬೆಳಕಿನಲ್ಲಿ ನೋಡಿದಾಗ ನಮಗೆ ಈ ಸಂಗತಿ ಸ್ಪಷ್ಟಗೊಳ್ಳುವಂತಿದೆ.

ಕವಿರಾಜಮಾರ್ಗವು ನಿರೂಪಿಸುವ ವಾದ ಮತ್ತು ಮುಂದಿಡುವ ಉದಾಹರಣೇಗಳ ಮೂಲಕ ಅನಾವರಣಗೊಳ್ಳುವ ಕನ್ನಡ ಶೈಲಿಗಳ ಒಂದು ಭೂಪಟದಲ್ಲಿ, ವಿವರಗಳನ್ನೆಲ್ಲ ಕಳಚಿ ಮುಖ್ಯವಾದದ್ದನ್ನು ಮಾತ್ರ ಗಮನಿಸುವುದಾದರೆ, ಅಲ್ಲಿ ದೇಶಭಾಷಾ ಲೇಖಕರ ಪ್ರಯೋಗಗಳಲ್ಲಿ ಅಂತರ್ಗತವಾಗಿದ್ದ ಒಂದು ವಿಭಜನೆ ವೇದ್ಯವಾಗುವಂತಿದೆ-೧. ‘ದಕ್ಷಿಣ’ದ ಕನ್ನಡಕಾವ್ಯವು ಭಾಷಾಕೇಂದ್ರಿತ; ಅಲ್ಲಿ ಸಾಹಿತ್ಯವು “ಮಾತಿನಿಂದ ನಿರ್ದೇಶಿತವಾದ ಮಾತು”. ಅದಕ್ಕಾಗಿಯೇ ಇದು ಅಲಂಕಾರಿಕವಲ್ಲದ ವಿವರಣೆಯನ್ನು ಬಳಸುತ್ತದೆ (ಸ್ವಭಾವೋಕ್ತಿಯೆಂಬುದರ ಅರ್ಥ ಇದೆ). ಮತ್ತು ಅದಕ್ಕೆ ಪ್ರತಿಯಾಗಿ “ಉತ್ತರ”ದ ಕನ್ನಡಕಾವ್ಯವು ಅಲಂಕಾರಕೇಂದ್ರಿತ (ವಕ್ರೋಕ್ತಿ). ೨. ಭಾಷಾಭಿನ್ನತೆಗಳನ್ನು ಪ್ರಮುಖ ಗುಣಗಳೆಂದು ಹೆಸರಿಸಲ್ಪಟ್ಟಿರುವುದು ನಾಮವಾಚಕ ನಿರ್ಮಾಣದಲ್ಲಿ ಕಾಣುವ ವ್ಯತ್ಯಾಸ.“ದಕ್ಷಿಣ”ದ ಕನ್ನಡಕಾವ್ಯ ಸಂಧಿಸಮಾಸರಹಿತವಾದದ್ದು, “ಉತ್ತರ”ದ್ದು ಅದಕ್ಕೆ ವಿರುದ್ಧ. ೩. “ದಕ್ಷಿಣ”ದ ಕನ್ನಡಕಾವ್ಯವು ದೇಶೀ ಶಬ್ದಗಳಿಂದ ಕೂಡಿದ್ದರೆ “ಉತ್ತರ”ದ ಕಾವ್ಯವು. ಸಂಸ್ಕೃತದ ಶಬ್ದಗಳನ್ನು ಬದಲಾಯಿಸದೆ ಬಳಸುತ್ತದೆ (ಸಮಸಂಸ್ಕೃತಯಾ ಆಮೇಲಿನ ಬಳಕೆಗಳಲ್ಲಿ ತತ್ಸಮ).

ಈ ರೀತಿ, ಇಲ್ಲಿ, ದಾಕ್ಷಿಣಾತ್ಯ ಮತ್ತು ಔತ್ತರೇಯವೆಂದು ವಿಭಜಿತವಾದ ಕನ್ನಡಕಾವ್ಯದ ವ್ಯತ್ಯಾಸಗಳೇ ಮುಂದೆ ಮಾರ್ಗಿ-ದೇಶಿ ಎಂಬ ನಾಮಕರಣದ ವಿಂಗಡಣೆಗೆ ಒಳಗಾದವು. ಆದ್ದರಿಂದ ಕವಿರಾಜಮಾರ್ಗವು ಕನ್ನಡಕ್ಕೆ ಅಪ್ರಸ್ತುತವಾದ ಒಂದು ವರ್ಗೀಕರಣವನ್ನು ಮಾಡಲಿಲ್ಲ; ಅದು ಕನ್ನಡ ಭಾಷೆಗೆ-ಅಷ್ಟೇಕೆ, ದಕ್ಷಿಣ ಏಶಿಯಾದ ಎಲ್ಲ ಭಾಷೆಗಳಿಗೂ -ಅನ್ವಯಿಸಬಹುದಾದ ಪ್ರಾಥಮಿಕ ಸ್ವನಿರೂಪಣೆಯೊಂದನ್ನು ಮಾಡಿದೆ, ಅದಕ್ಕಾಗಿಯೇ ಈ ಎರಡು ಕಾವ್ಯ ಮಾದರಿಗಳನ್ನು ಪ್ರಾತಿನಿಧಿಕವೆಂದು ಕರೆದಿದೆ. ಆದರೆ, ವಿಶ್ವಾತ್ಮಕತೆ ಮತ್ತು ದೇಶೀಯತೆಯ ಈ ದ್ವಂದ್ವದಲ್ಲಿ, ಇನ್ನೂ ಒಂದು ಗಹನವ್ಯಂಗ್ಯವೂ ಮಿಳಿತವಾಗಿದೆ-ಸಂಸ್ಕೃತ ಕಾವ್ಯದ ಇಂಥ ವರ್ಗೀಕರಣಕ್ಕೆ ಮೂಲವಾಗಿ ಒದಗಿಬರುವ ಆಕರಗಳೇನಿವೆ, ಅವು, ಸಂಸ್ಕೃತ ಕಾವ್ಯದ ಮೂಲರೂಪಕ್ಕೇ ನೇರವಾಗಿ ಸಂಬಂಧಿಸಿದವಲ್ಲ. ಇವು-ನೃಪತುಂಗನ ಆಸ್ಥಾನದಲ್ಲಿದ್ದ ಕನ್ನಡ ಕವಿಗಳ ಅಥವಾ ತಮಿಳು ಮೂಲದ ದಂಡಿಯಂತಹ ಕವಿಗಳು-ಇಂಥ ದಾಕ್ಷಿಣತ್ಯ ಭಾಷೆಗಳ ಪ್ರಜ್ಞೆಯೊಂದಿಗೆ ಬಳಸಿ ಮುಂದೆ ಬಂದ ದೇಶಭಾಷಾ ಕಾವ್ಯ ಮತ್ತು ಕಾವ್ಯಮೀಮಾಂಸೆಗಳಿಗೆ ಮುನ್ಸೂಚನೆಯಾದರು. ಒಂಬತ್ತು ಮತ್ತು ಹತ್ತನೆಯ ಶತಮಾನಗಳ ಕರ್ನಾಟಕದಲ್ಲಿ, ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಈ ದೇಶಭಾಷಾನಿರ್ಮಾಣದ ಪ್ರಕ್ರಿಯೆಯ ಸಂದರ್ಭದಲ್ಲಿ, ಅಷ್ಟರಲ್ಲಾಗಲೀ ದಾಕ್ಷಿಣಾತ್ಯ ಲೇಖಕರು ಸಂಸ್ಕೃತದಲ್ಲಿ ರೂಪಿಸಿದ್ದ ಶೈಲಿಯ ವೈಶಿಷ್ಟ್ಯಗಳೇ ಕನ್ನಡಕ್ಕೂ ಪ್ರಧಾನವಾದ ವೈಶಿಷ್ಟ್ಯಗಳೆಂದು ಸೂಚಿತವಾದವು-ಸಮಾಸವಿಹೀನತೆ, ಆದಿಪ್ರಾಸ, ನೇರವಾದ ವರ್ಣನೆ ಮೊದಲಾದ ಈ ಅಂಶಗಳು ಆಗ ಕನ್ನಡದಲ್ಲಿ ರೂಢವಾದವೆಂಬುದಕ್ಕೆ ಹಳೆಗನ್ನಡದ ಯಾವುದೇ ಕಾವ್ಯಭಾಗವೂ ಪುರಾವೆ ಒದಗಿಸುತ್ತದೆ.

ಸೀಮಿತ ಸ್ವರೂಪದ ಇಂಥ ದೃಷ್ಟಾಂತವೊಂದರ ಚರ್ಚೆಯ ಮೂಲಕ, ನಾವು ಸಂಗ್ರಹಿಸಬಹುದಾದ ವಿಶಾಲ ತತ್ವ ಇದು – ಸ್ಥಳೀಯ ಮತ್ತು ಜಾಗತಿಕ ಇವೆರಡೂ ಒಂದಕ್ಕೊಂದು ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಕೂಡಿಕೊಂಡಿರುವಂಥವು; ಒಂದು ಇನ್ನೊಂದನ್ನು ಒಳಗೊಂಡಿರುವಂಥದು. ವಿಶ್ವಾತ್ಮಕತೆಯು ದೇಶಭಾಷೆಯಿಂದ ಹರಿದು ಬರುವ ಪ್ರವಾಹಗಳಿಂದ ರೂಪುಗೊಳ್ಳುತ್ತದೆ, ಹಾಗೇ, ವಿಶ್ವಾತ್ಮಕವಾದದ್ದನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ದೇಶಭಾಷೆಯು ತನ್ನನ್ನು ತಾನೇ ಕಟ್ಟಿಕೊಳ್ಳುತ್ತದೆ. ಕೆಲವೊಮ್ಮೆ ಈ ಪ್ರಕ್ರಿಯೆ ಇಲ್ಲಿ ಕಾಣಿಸದ ಹಾಗೆ-ಅಪ್ರಜ್ಞಾಪೂರ್ವಕವಾದ ಮರುಸ್ವಾಧೀನದ ಕ್ರಿಯೆಯೂ ಆಗುವುದು ಸಾಧ್ಯವಿದೆ.