ಭಾಷಾ ಪರಿಶೋಧನೆ ಮತ್ತು ವ್ಯತ್ಯಾಸಗಳ ಸೃಷ್ಟಿ

ಒಂದು ಕಡೆಗೆ, ವಿಶ್ವತ್ಮಕ ನುಡಿಗಟ್ಟೊಂದನ್ನು ರೂಪಿಸುವ ಮತ್ತು ಇನ್ನೊಂದು ಕಡೆಗೆ, ಕನ್ನಡದ ವೈದೃಶ್ಯವನ್ನು ಸ್ಪಷ್ಟಗೊಳಿಸುವ ಕಾರ್ಯಯೋಜನೆಯೊಂದಿಗೆ ಹೊರಟ ಕವಿರಾಜಮಾರ್ಗಕ್ಕೆ ಬೇರೆ ಕೆಲವು ಸಾಂಸ್ಕೃತಿಕ-ರಾಜಕೀಯ ಗುರಿಗಳೂ ಇದ್ದಾವೆ. ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತ್ರೀಯ ಮನ್ನಣೆ ದೊರಕದೇ ಹೋಗಿದ್ದರೆ ಮತ್ತು ಭಾಷಾಪರಿಶೀಲನೆಯ ಉಪಕರಣಗಳು (ಅಂದರೆ, ಲಕ್ಷಣಗ್ರಂಥಗಳು) ಲಭ್ಯವಾಗದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲಿಲ್ಲ. ಆ ಮೊದಲನೆಯ ಕೆಲಸವನ್ನು ಕವಿರಾಜಮಾರ್ಗವು ಸಾಧಿಸುವುದು ಕನ್ನಡವೆಂಬ ವಿಷಯವನ್ನು ಕುರಿತ ತಾತ್ವಿಕ ಚರ್ಚೆಯನ್ನು ಆರಂಭಿಸುವ ಮೂಲಕವೇ. ಎರಡನೆಯದನ್ನು ಅದು ತನ್ನ ಪಠ್ಯದ ಬಹುಭಾಗದಾದ್ಯಂತ, ಸಾಹಿತ್ಯ-ಭಾಷೆಯ ನಿಯಮಗಳನ್ನು ವಿಶ್ಲೇಷಿಸುವ ಮೂಲಕ, ಸಾಧಿಸುತ್ತದೆ. ಇದೆಲ್ಲದರ ಜೊತೆಗೆ ಕವಿರಾಜಮಾರ್ಗ ಪಠ್ಯವೇ ಒಂದು ರೀತಿಯಿಂದ ತನ್ನ ವಾದದ ಪ್ರದರ್ಶನವೂ ಹೌದು. ಯಾಕೆಂದರೆ ಅದು ಕನ್ನಡವನ್ನು ಸಾಹಿತ್ಯಯೋಗ್ಯ ಭಾಷೆಯನ್ನಾಗಿ ರೂಢಿಸುವ ಪ್ರಯತ್ನದ ಮೂಲಕವೇ ತಾನು ಒಂದು ವೈಜ್ಞಾನಿಕ ಭಾಷಾಪರಿಶೀಲನೆಯ ಕೃತಿಯೂ ಆಗಿ ಕಾಣಿಸಿಕೊಳ್ಳುತ್ತದೆ. (ಇದಕ್ಕೆ ಭಿನ್ನವಾಗಿ, ‘..ಇಲೋಕ್ವೆನ್ಷಿಯಾ’ವು ಲ್ಯಾಟಿನ್‌ ಭಾಷೆಯ ಸಾಹಿತ್ಯದ ಪರವಾಗಿ ಶಾಸ್ತ್ರೀಯ ವಾದವನ್ನು ಮಂಡಿಸುತ್ತದೆ, ಅಷ್ಟೇ).

ಕವಿರಾಜಮಾರ್ಗದಲ್ಲಿ ಕಾಣುವ, ತನ್ನ ಕಾಲಕ್ಕಿಂತ ಮುಂದಿರುವ ಇಂಥ ಭಾಷಾ ಪರಿಶೀಲನೆಯ ಪ್ರಯತ್ನವು ಕನ್ನಡದಲ್ಲಿ ಇನ್ನೂ ನಾಲ್ಕು ಶತಮಾನಗಳ ಕಾಲ ತಡೆಯಿಲ್ಲದೆ ಮುಂದುವರೆಯಿತು. ಹತ್ತನೆಯ ಶತಮಾನದ ತುದಿಯಿಂದಲೇ ಇಲ್ಲಿ ಶಬ್ದಕೋಶಗಳು ಕಾಣಿಸಿಕೊಳ್ಳತೊಡಗಿದವು. ಇವುಗಳಲ್ಲಿ ಹಲವು, ಉದಾಹರಣೆಗೆ ಕವಿ ರನ್ನನು ರಚಿಸಿದ ಮೊದಲ ಶಬ್ದಕೋಶವು (ಕ್ರಿ.ಶ.೯೯೦, ಇದರ‍ ತುಣುಕುಗಳು ಮಾತ್ರ ಲಭ್ಯ), ಕನ್ನಡಕ್ಕೆ ಸಂಸ್ಕೃತ ಸಮಾನಾರ್ಥಕಗಳನ್ನು ಕೊಡುವಂಥವಾಗಿದ್ದು ಸರಳವಾದ ಕನ್ನಡ ಶಬ್ದಗಳಿಗೂ ಸಂಸ್ಕೃತ ಅರ್ಥವನ್ನು ಕೊಡುವುದು ನೋಡಿದರೆ ಇದು ಸಂವಹನೆಗೆ ಉಪಯೋಗವಾಗುವುದಕ್ಕೆ ಬದಲಾಗಿ ಎರಡು ಭಾಷೆಗಳ ನಡುವಿನ ಸಮಾನಸ್ಕಂಧತೆಯನ್ನು ಸಾಧಿಸುವುದೇ ಇದರ ಗುರಿಯಾಗಿದ್ದಂತೆ ಕಾಣುತ್ತದೆ(ನೋಡಿ – ನಾಗರಾಜ್‌ರಸ ೧೯೯೬, ೨೨೩ ಎಫ್‌ ಎಫ್‌). ಇದೇ ಕಾಲದಿಂದಲೇ ಮೊದಲುಗೊಂಡು ಕನ್ನಡ ಛಂದಸ್ಸನ್ನು ಸಮರ್ಥಕವಾಗಿ ವಿಶ್ಲೇಷಿಸುವ ಗ್ರಂಥಗಳ ಸರಣಿಯೇ ಆರಂಭವಾಗಿದ್ದು ಕಾಣುತ್ತದೆ; ಅದರಲ್ಲಿ ಮೊದಲನೆಯದು ಮೊದಲನೆಯ ನಾಗವರ್ಮನ ‘ಛಂದೋಂಬುಧಿ’. ಈ ಕೃತಿಯು ಸಂಸ್ಕೃತದ ಅಕ್ಷರ ಗಣಗಳನ್ನಾಧರಿಸಿದ ಕ್ಲಿಷ್ಟ ಛಂದಸ್ಸುಗಳನ್ನು ಕನ್ನಡಕ್ಕೆ ವಿವರವಾಗಿ ಅಳವಡಿಸುವುದರ ಜೊತೆಗೆ, ‘ಕರ್ನಾಟ ವಿಷಯಭಾಷಾಜಾತಿ”ಯೆಂಬ ಭಾಗದಲ್ಲಿ ಹತ್ತು “ಸ್ಥಳೀಯ” ಛಂದೋರೂಪಗಳನ್ನೂ ಪರಿಚಯಿಸುತ್ತದೆ. ಇನ್ನು ಇಲ್ಲಿ ವ್ಯಾಕರಣದ ಪರಂಪರೆಯು ಆರಂಭವಾಗುವುದು ಎರಡನೆಯ ನಾಗವರ್ಮನು (ಈಶಾನ್ಯ ಕರ್ನಾಟಕದ ಚಾಲುಕ್ಯ ಆಸ್ಥಾನದಲ್ಲಿ ಸುಮಾರು ಕ್ರಿ.ಶ.೧೦೪೦ರಲ್ಲಿ ಇದ್ದವನು) ಸಂಸ್ಕೃತ ಸೂತ್ರಗಳ ಮೂಲಕ ಬರೆದ ‘ಕರ್ನಾಟಕ ಭಾಷಾಭೂಷಣ’ದಿಂದ. ಮುಂದೆ ಈ ಪರಂಪರೆಯಲ್ಲಿ ವಸಾಹತುಪೂರ್ವ ಭಾರತದ ಅತ್ಯಂತ ಪ್ರಮುಖ ವ್ಯಾಕರಣಗ್ರಂಥವೊಂದು ಬಂತು – ಅದು, ಕ್ರಿ.ಶ. ೧೨೬೦ರಲ್ಲಿ ಹೊಯ್ಸಳ ಆಸ್ಥಾನದಲ್ಲಿದ್ದ ಕೇಶೀರಾಜನ ‘ಶಬ್ದಮಣಿದರ್ಪಣ’. ಕವಿರಾಜಮಾರ್ಗದ ಹಾಗೆಯೇ ಕರ್ನಾಟಕದ ಹೊರಗೆ ಪರಿಚಯವೇ ಆಗದ ಈ ಅದ್ಭುತ ಕೃತಿಯು ಆಧುನಿಕ ಪೂರ್ವ ಯುಗದಲ್ಲಿ ಸಂಭವಿಸಿದ ದೇಶಭಾಷಾ ಏಕೀಕರಣ ಮತ್ತು ಪ್ರಮಾಣೀಕರಣಗಳ ಪ್ರಕ್ರಿಯೆಯನ್ನು ವಿವರಿಸುವ ಗಂಭೀರ ಪ್ರಯತ್ನಗಳಲ್ಲಿ ಕೇಂದ್ರಸ್ಥಾನವನ್ನು ಪಡೆಯಬೇಕಾದದ್ದು. ಸದ್ಯ ಅದರ ವಿವರಗಳಿಗೆ ಹೋಗದೆ ಇಷ್ಟನ್ನು ಮಾತ್ರ ಹೇಳಬಹುದು-ಕವಿರಾಜಮಾರ್ಗದಂತೆಯೇ ಶಬ್ದಮಣಿದರ್ಪಣವೂ ಕೂಡಾ ತನ್ನ ಮೊದಲ ಪದ್ಯದಿಂದ ಕಡೆಯವರೆಗೂ ಸಂಸ್ಕೃತದ ಜ್ಞಾನಶಾಸ್ತ್ರೀಯ ಚೌಕಟ್ಟಿನಲ್ಲಿ ಕನ್ನಡದ ಭಿನ್ನತೆಯನ್ನು ಪ್ರಸ್ತುತಪಡಿಸುತ್ತದೆ. ಭಾಷೆಯೆನ್ನುವುದು, ಅದರಲ್ಲೂ ಸಾಹಿತ್ಯಭಾಷೆಯೆನ್ನುವುದು, ಹೇಗಿರಬೇಕು-ಎಂಬ ಸಂಸ್ಕೃತದ ವ್ಯಾಖ್ಯಾನವನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯು ಕನ್ನಡವನ್ನು ಒಂದು ಅಭ್ಯಾಸದ ಶಿಸ್ತಿಗೆ ಒಳಪಡಿಸುತ್ತದೆ.

ಹೀಗೆ, ಕವಿರಾಜಮಾರ್ಗದಲ್ಲಿ ಕಾಣುವ ವಿಶ್ವಾತ್ಮಕತೆ-ದೇಶೀಯತೆಗಳ ಜಗ್ಗಾಟದ ಪ್ರಶ್ನೆ ಮತ್ತು ಸ್ಥಳೀಯ ಭಿನ್ನತೆಗಳ ವ್ಯವಹಾರದ ಚರ್ಚೆಯೇನಿದೆ ಅದು, ಆಮೇಲಿನ ಅರ್ಧ ಸಹಸ್ರಮಾನದವರೆಗೂ ನಿರಂತರವಾಗಿ ಕನ್ನಡಸಾಹಿತ್ಯದ ಒಂದು ವೈಶಿಷ್ಟ್ಯವೇ ಆಗಿ ಮುಂದುವರೆದಿರುವುದನ್ನು ನಾವು ಕಾಣುತ್ತೇವೆ. ಕವಿರಾಜಮಾರ್ಗವು ಯಾವೆಲ್ಲ ವಿಷಯಗಳ ಸರಣಿಯನ್ನು ನಿರೂಪಿಸಿತೋ ಅವೆಲ್ಲವೂ ಮುಂದಿನ ಐನೂರು ವರ್ಷಗಳಲ್ಲಿ ಪದೇಪದೇ ಚರ್ಚಿಗೊಳ್ಳುತ್ತ ಹೋಗಿವೆ – ಅದು ಸಾಹಿತ್ಯಪ್ರಕಾರಗಳಿಗೆ ಸಂಬಂಧಿಸಿದ ವಿಶಾಲಪ್ರಶ್ನೆಗಳಿರಬಹುದು(ಕವಿರಾಜಮಾರ್ಗ, ೧.೩೩ ಎಫ್‌ ಎಫ್‌) ಸಂಸ್ಕೃತಕ್ಕೆ ಪೂರಕವಾಗಿ ಮತ್ತು ಅನುಬಂಧವಾಗಿ ಕಟ್ಟಿದ, ಅಗತ್ಯಕ್ಕಿಂತಲೂ ಮೊದಲೇ ಉದ್ಭವಿಸಿತು ಎನ್ನಬಹುದಾದ, ಕನ್ನಡದ ಗದ್ಯಪದ್ಯಗಳ ಮೀಮಾಂಸೆಯ(ಕವಿರಾಜಮಾರ್ಗ, ೧.೨೮-೩೨) ತಾತ್ವಿಕಸಮೂಹವೇ ಆಗಿರಬಹುದು, ಅಥವಾ ಸಂಧಿಗಳ ಸ್ವರೂಪವನ್ನು ಕುರಿತಂತೆ ಮತ್ತು ಸಂಧಿಗಳಲ್ಲಿ ಹೇಗೆ ಕನ್ನಡ ಮತ್ತು ಸಂಸ್ಕೃತವನ್ನು ಕೂಡಿಸಬಹುದು ಯಾ ಕೂಡಿಸಬಾರದು)ಕವಿರಾಜಮಾರ್ಗ, ೧.೫ಎಫ್‌ ಎಫ್‌) ಎಂಬುದನ್ನು ಕುರಿತ ಚರ್ಚೆಯಿರಿಬಹುದು. ಈ ಎಲ್ಲ ಜಿಜ್ಞಾಸೆಗಳೂ ಕೇವಲ ತಾತ್ವಿಕ ಸ್ವರೂಪದವೂ ಅಲ್ಲ. ಈ ತಾತ್ವಿಕ ಜಿಜ್ಞಾಸೆಯು ಉದ್ದಕ್ಕೂ ಇಲ್ಲಿನ ಕವಿಗಳು ತಮ್ಮ ಕಾವ್ಯರಚನೆಯಲ್ಲಿ ನಡೆಸಿದ ಪ್ರಯೋಗಗಳಿಗೆ ಸಮಸಮನಾಗಿ ನಡೆದಂಥದು. ಇಂಥ ಕಾವ್ಯಗಳ ಸರಣಿಯಲ್ಲಿ, ಅವುಗಳ ಹೆಸರುಗಳನ್ನು ಗಮನಿಸಿದರೂ ಸಾಕು-ಉದಾಹರಣೆಗೆ ಆರಂಭದ ಒಂದು ಕೃತಿ ‘ಕರ್ನಟಕುಮಾರಸಂಭವ’(ಕ್ರಿ.ಶ.೮೫೩ರಲ್ಲಿ ಅಸಗ ಬರೆದ್ದೆಂದು ಹೇಳಲಾದದ್ದು)- ಆಯಾ ಕೃತಿಗಳು ಹೇಗೆ ಸಂಸ್ಕೃತದ ವಿಶ್ವಾತ್ಮಕತೆಯನ್ನು ಸ್ಥಳೀಯ ಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದವೆಂಬುದು ವೇದ್ಯವಾಗುತ್ತದೆ. ನಿಜವಾಗಿ, ಆರಂಭದ ಕನ್ನಡ ಸಾಹಿತ್ಯದ ಬಹುಪಾಲು ಕೃತಿಗಳ ಕಾಳಜಿ ಇದೇ-ಕನ್ನಡದಲ್ಲಿ ಕಾವ್ಯವೆಂಬುದನ್ನು ರಚಿಸುವ ಸಾಧ್ಯತೆಗಳ ನಿರ್ಮಾಣ.

ದೇಶಭಾಷೆಯ ರಾಜಕೀಯ ಆವರಣ

ಈ ಎಲ್ಲ ಜಿಜ್ಞಾಸೆಯನ್ನು ಇನ್ನಾವುದೇ ಕೃತಿಗಿಂತ ಹೆಚ್ಚು ಸ್ಪಷ್ಟಾಗಿ ತೋರಿಸುವಂಥದು-ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಸಾಹಿತ್ಯ ಕೃತಿ, ಪಂಪನ ‘ವಿಕ್ರಮಾರ್ಜುನ ವಿಜಯ’(ಕ್ರಿ.ಶ.೯೫೦). ಪಂಪನು ಎರಡನೆಯ ಅರಿಕೇಸರಿಯ ಆಸ್ಥಾನಕವಿಯಾಗಿದ್ದ; ಈ ಅರಿಕೇಸರಿ ಇವತ್ತು ಪಶ್ಚಿಮ ಆಂಧ್ರದಲ್ಲಿರುವ ವೇಮುಲವಾಡದಲ್ಲಿ ಸಾಮಂತನಾಗಿದ್ದು ರಾಷ್ಟ್ರಕೂಟರ ಆಳ್ವಿಕೆಯ ಕಡೆಯ ದಶಕಗಳಲ್ಲಿ ಅಧಿಕಾರ ನಡೆಸಿದವನು. ‘ವಿಕ್ರಮಾರ್ಜುನವಿಜಯ’ವನ್ನು ಸಂಸ್ಕೃತ ‘ಮಹಾಭಾರತ’ದ ಮೊದಲ ‘ಸಮಗ್ರ’ ದೇಶಭಾಷಾ ಆವೃತ್ತಿಯೆಂದು ಯೋಜಿಸಲಾಗಿತ್ತು; ಆಸ್ಥಾನ ಪಂಡಿತರ ಅಪೇಕ್ಷೆಯ ಮೇರೆಗೆ, ರಾಜನ ಪೋಷಣೆಯೊಂಧಿಗೆ ನಿರ್ಮಿತವಾದ ಕೃತಿ ಇದು. ಆ ಕೃತಿ ಹೇಳುವಂತೆ “ಪಂಡಿತರ ಅಭಿಪ್ರಾಯದ ಪ್ರಕಾರ, ಪೂರ್ವಕಾಲದ ಯಾವ ಮಹಾಕವಿಯೂ ಸಮಗ್ರಭಾರತವನ್ನು, ಆ ಕಥೆಯ ಅಗಾಧ ಹರಹನ್ನು ನಷ್ಟಗೊಳಿಸದೆಯೇ, ಸಮಪರ್ಕವಾಗಿ ಪುನರ್ರ‍ಚಿಸಿದ್ದಿಲ್ಲವಾದ್ದರಿಂದ ಇದೊಂದು ಅಭೂತಪೂರ್ವ ಪ್ರಯತ್ನ….ಇಂಥ ಪ್ರಯತ್ನವನ್ನು ಪಂಪನೊಬ್ಬನೆ ಮಾಡಬಲ್ಲನೆಂದು ಅವರು ಭಾವಿಸಿದ್ದರಿಂದ ಅವರೆಲ್ಲ ಕೂಡಿ ನನಗೆ ಇದನ್ನು ವಹಿಸಿದರು; ನಾನು ಈ ರಚನೆಯನ್ನು ಕೈಗೊಂಡೆ….ಸ್ವತಃ ಅರಿಕೇಸರಿಯೇ ನನ್ನ ಬಳಿ ದೂತರನ್ನು ಕಲಳಿಸಿ ನನಗೆ ಸಂಪತ್ತನ್ನು ಕೊಟ್ಟು ತನ್ನ ಕೀರ್ತಿ ಜಗತ್ತಿನಾದ್ಯಂತ ಹರಡುವುದಕ್ಕೆ ಸಹಾಯಕವಾಗುವ ಇಂಥ ಇತಿಹಾಸ ಕಥೆಯನ್ನು ನಿರೂಪಿಸಬೇಕೆಂದು ಒತ್ತಾಯಿಸಿದ.” ಜೊತೆಗೆ, ಮೊದಲು ಹೇಳಿದ ಸಾಂಸ್ಕೃತಿಕ ವ್ಯತ್ಯಾಸಗಳ ವ್ಯವಹಾರವೇನಿದೆ ಅದು ಈ ಕೃತಿಯ ಮುಖ್ಯ ಆಶಯಗಳಲ್ಲೊಂದಾಗಿದ್ದು ಅದನ್ನು ಕೃತಿ ಆರಂಭದಲ್ಲಿಯೇ ಪ್ರಸ್ತಾಪಿಸುತ್ತ ದೆ. -“ಒಂದು ಕಾವ್ಯಕೃತಿಯು ಸುಂದರವಾಗುವುದು ಅದರಲ್ಲಿ ನವಪ್ರತಿಭೆಯಿದ್ದಾಗ…..ಮತ್ತು ಅದು ದೇಸಿಯೊಳಗೆ ಹೊಕ್ಕು, ಆಮೇಲೆ, ಮಾರ್ಗದ ಒಳಕ್ಕೂ ಪ್ರವೇಶ ಮಾಡಿದಾಗ (ವಿಕ್ರಮಾರ್ಜುನವಿಜಯ ೧.೮).”ಆದರೆ ಪಂಪನಿಗೆ ಇದಲ್ಲದೇ ಇನ್ನೂ ಹಲವು ಉದ್ದೇಶಗಳಿವೆ; ಇವು ಸ್ಪಷ್ಟವಾಗುವುದು ಆತ ಯಾವ ಮಾದರಿಯನ್ನು ಗೆಲ್ಲಲ್ಲಿಕ್ಕೆ ಪ್ರಯತ್ನಿಸುತ್ತಿದ್ದ ಎಂಬುದನ್ನು ನೋಡಲು ಹೊರಟಾಗ.

ಈ ಲೇಖನದಲ್ಲಿ, ಹಿಂದೆ ನನ್ನ ಹ್ರಸ್ವ ವಿವರಣೆಗಳು ಸೂಚಿಸಲು ಪ್ರಯತ್ನ ಮಾಡಿದಂತೆ, ಸಂಸ್ಕೃತದ ಮಹಾಭಾರತದ ಹಲವು ಉದಿಶ್ಯಗಳಲ್ಲಿ ಒಂದು-ಸ್ಥಳಾವರಣವೊಂದರ ಮತ್ತು ಆ ಸ್ಥಳವನ್ನು ಒಳಗೊಳ್ಳುವ ರಾಜಕೀಯ ಆವರಣವೊಂದರ ಸೃಷ್ಟಿ ಅಥವಾ ಪುನರ್ ಜೋಡಣೆ. ಮೊದಲು ಗಮನಿಸಿದಂತೆ, ದೇಶತ್ಯಗದ ಸಂದರ್ಭದಲ್ಲಿ ಕಥಾನಾಯಕರು ಈ ಪುರಾಣಾವರಣದಲ್ಲಿ ಮಾಡುವ ಯಾತ್ರೆಗಳ ವಿವರಗಳನ್ನೇ ನೋಡಿ-ಸಾರ್ವತ್ರಿಕ ಚಕ್ರಾಧಿಪತ್ಯವನ್ನು ಘೋಷಿಸುವುದಕ್ಕೆ ಮೊದಲು ಅವರು ದಂಡಯಾತ್ರೆಗೆ ಹೋಗುತ್ತಾರೆ; ಚಕ್ರಾಧಿಪತ್ಯಕ್ಕೆ ಆತಂಕ ಬಂದಾಗ ಅವರು ಸೇನೆಯನ್ನು ಕಳಿಸಲು ವ್ಯವಸ್ಥೆ ಮಾಡುತ್ತಾರೆ; ಅಶ್ವಮೇಧಯಾಗದ ಸಂದರ್ಭದಲ್ಲಿ ತಮ್ಮ ಸಾಮ್ರಾಜ್ಯದ ಹತೋಟಿಯನ್ನು ಬಿಂಬಿಸುವಂತೆ ಎಲ್ಲ ದಿಕ್ಕಿಗೆ ಕುದುರೆಯನ್ನು ಕಳಿಸುತ್ತಾರೆ ಮತ್ತು ಅಂತಿಮವಾಗಿ ಕುದುರೆಯೊಂದಿಗೆ ಅವರ ಚಕ್ರಾಧಿಪತ್ಯವು ಮರುಸ್ಥಾಪನೆಗೊಳ್ಳುತ್ತದೆ. ಆದರೆ ಯಾವ ರಾಜಕೀಯ ಅಧಿಕಾರದ ಮರುಮನ್ನಣೆಗೋಸ್ಕರ ಅವರು ಈ ಯಜ್ಞವನ್ನು ನಡೆಸಿದ್ದರೋ ಅದೇ ಯಜ್ಞದ ಸಂದರ್ಭದಲ್ಲಿ, ಬಲಿಯ ಘಟನೆಯಿಂದ ಮನಸ್ಸು ಬದಲಾಗಿ, ಅವರು ಪ್ರಪಂಚವನ್ನು ನಿರಾಕರಿಸಿ ಕಟ್ಟಕಡೆಗೆ, ತಮ್ಮ ಸಾವಿಗೆ ಮೊದಲು, ಇನ್ನೊಂದು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ, ಈ ಇಡೀ ಯಾತ್ರೆಯ ಮೂಲಕ, ವಿಶಾಲವಾದ ಆದರೆ ಬಿಗಿಯಾಗಿ ಬಂಧಿಸಲ್ಪಟ್ಟ ಸಾಂಸ್ಕೃತಿಕ ರಾಜಕೀಯ ಆವರಣವನ್ನೊಳಗೊಂಡ ಜಗತ್ತೊಂದರ ಪ್ರತಿಮೆ ಗಟ್ಟಿಯಾಗಿ ನಿರ್ಮಿತವಾಗುತ್ತದೆ; ಈ ಜಗತ್ತು (ಇವತ್ತು ಹಾಗೆ ಕರೆಯಲ್ಪಡುತ್ತಿರುವ) ನೇಪಾಳದಿಂದ ಅಸ್ಸಾಮಿನವರೆಗೆ, ಅಲ್ಲಿಂದ ಒಂದು ದಿಕ್ಕಿಗೆ ದಕ್ಷಿಣದ ಪ್ರಸ್ಥಭೂಮಿಗೆ ಮತ್ತು ಇನ್ನೊಂದೆಡೆ ಸಿಂಧ್‌, ಕಂದಹಾರ್, ಕಾಶ್ಮೀರದತನಕ ವ್ಯಾಪಿಸಿಕೊಳ್ಳುತ್ತದೆ. ಇಂಥ ಒಂದು ಪುರಾಣ ಆವರಣದಲ್ಲಿ, ಆ ಆವರಣವನ್ನು ವ್ಯಾಪಿಸಿರುವ ರಾಜಕಾರಣವನ್ನೂ ಒಳಗೊಂಡು, ಅದಕ್ಕೆ ಸಂವಾದಿಯಾಗಿ ಪಂಪ ತನ್ನ ದೇಶಭಾಷಾ ಆವರಣದ ಮರುವ್ಯಾಖ್ಯಾನವನ್ನು ಮಾಡಲಿಕ್ಕೆ ಹೊರಟಿದ್ದಾನೆ.

ತನ್ನ ಕೃತಿಯನ್ನು ಪಂಪ ಹಲವು ಬಾರಿ ‘ಸಮಸ್ತ ಭಾರತ’ವೆಂದು ಕರೆದುಕೊಂಡಿದ್ದಾನೆ. ‘ಸಮಸ್ತ’ವೆಂಬ ಪದಕ್ಕೆ ಇಲ್ಲಿ ಎರಡು ಅರ್ಥಗಳು – ಮೊದಲೇ ಹೇಳಿದಂತೆ ಕವಿ ಇಲ್ಲಿ ಸಂಸ್ಕೃತ ಕಾವ್ಯದ ಮುಖ್ಯ ಕಥಾನಕದ ‘ಸಮಗ್ರತೆ’ಯನ್ನು ಪ೦ಉನರ್ನಿರ್ಮಿಸಲು ಹೊರಟಿದ್ದಾನೆ. ಜೊತೆಗೆ, ಆತ ತನ್ನ ಮಹಾಕಾವ್ಯವನ್ನು ಒಂದು “ಸಂಯುಕ್ತ” ಕಥನವನ್ನಾಗಿಯೂ ಮಾಡಲು ಹವಣಿಸಿದ್ದಾನೆ. ಸಂಸ್ಕೃತ ಮಹಾಕಾವ್ಯದ ಕಥಾನಾಯಕರು, ಮಿತ್ರಪಕ್ಷಗಳು, ವಿರೋಧಿಗಳು-ಇವರನ್ನೆಲ್ಲ ಪಂಪ ತನ್ನ ಪೋಷಕಪ್ರಭು, ಅವನ ಕುಟುಂಬ, ಆ ರಾಜ್ಯ, ಅದರ ಶತ್ರುಗಳು ಮತ್ತು ಒಟ್ಟಿನಲ್ಲಿ ತನ್ನ ಪ್ರಾಂತ್ಯವನ್ನೇ-ಇದರ ಜೊತೆಗೆ ತಳಕು ಹಾಕಿದ್ದಾನೆ. ಕವಿಯ ಈ ಕೆಲಸ ಇಲ್ಲಿ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಇದೊಂದು ಸರಳ ಅನ್ಯೋಕ್ತಿಕಥನವೆಂದು ಕಾಣಿಸುವುದಿಲ್ಲ. ಆದರೆ, ಓದುಗರಿಗೆ ಆತ ಕೊಡುವ ಸೂಚನೆಗಳು ಮಾತ್ರ ಸ್ಪಷ್ಟವಾಗಿವೆಯೇ ಇವೆ. (೧.೫೧ರಲ್ಲಿ ಇಂಥ ಗುರುತಿನ ಸೂಚನೆಗಳನ್ನು ಆತ ಸ್ಪಷ್ಟವಾಗಿವೆಯೇ ನಮೂದಿಸಿದ್ದಾನೆ). ಅದಕ್ಕಾಗಿಯೇ ಈ ಪುರಾಣ-ಮಹಾಕಾವ್ಯದ ಕಥನದ ಆಯಕಟ್ಟಿನ ಬಿಂದುಗಳಲ್ಲಿ ಕವಿಯು ಚಾಳುಕ್ಯರ ರಾಜಕೀಯ ಸ್ಥಿತಿಗತಿಗಳನ್ನೂ” ರಾಷ್ಟ್ರಕೂಟರೊಡನೆ ಅವರು ನಡೆಸುವ ಮಾರಾಮಾರಿಯನ್ನೂ ಮತ್ತು ಅರಿಕೇಸರಿಯು ಸಾಮಂತನಾಗುವ ಘಟನೆಯನ್ನೂ ತೂರಿಸುತ್ತ ಹೋಗುತ್ತಾನೆ. ಇಂಥ ದ್ವಿಮುಖಿ ಕಥನಕ್ಕೆ ಕಾವ್ಯದ ನಟ್ಟನಡುವಿನಲ್ಲಿ ಒಂದು ಒಳ್ಳೆಯ ಉದಾಹರಣೆ ಬರುತ್ತದೆ – ಧೃತರಾಷ್ಟ್ರನ ಮಕ್ಕಳು ಯುದ್ಧಕ್ಕೆ ಪೂರ್ವಭಾವಿಯಾಗಿ ತಮ್ಮ ಶತ್ರುವೂ ಕಥಾನಾಯಕನೂ ಆದ ಅರ್ಜುನನ ಶೌರ್ಯವನ್ನು ವರ್ಣಿಸತೊಡಗುತ್ತಾರೆ-ಶಿವನೊಂದಿಗೆ ಆತ ಸೆಣಸಾಡಿ ಹೆಮ್ಮೆಯಿಂದ ಮಾಯಾಸ್ತ್ರಗಳಿಸುವುದು, ವೀರನಾಗಿ ರಾಕ್ಷಸರನ್ನು ಮಣಿಸುವುದು, ದೇವರಾಜ ಇಂದ್ರನ ಸಿಂಹಾಸನವನ್ನೇ ಆತ ಹಂಚಿಕೊಳ್ಳುವುದು- ಹೀಗೆ ಕಥಾನಕವು ‘ಇಂದ್ರ’ನ ಪ್ರಸ್ತಾಪ ಮಾಡುತ್ತಿದ್ದಂತೆಯೇ, ಈತ ಅರಿಕೇಸರಿಯ ಮಾವ ರಾಷ್ಟ್ರಕೂಟರಾಜ ಮೂರನೆಯ ಇಂದ್ರನೂ ಆಗಿ ಕಾಣತೊಡಗಿ, ಈಗ ಇಡಿಯ ಕಥಾನಕವು ಸಲೀಸಾಗಿ ಕವಿಯ ಆಶ್ರಯದಾತನ ವರ್ಣನೆಗೆ ತಿರುಗಿಕೊಳ್ಳುತ್ತದೆ:

ಚಾಳುಕ್ಯ ಕುಲತಿಲಕನಾದ ವಿಜಯಾದಿತ್ಯನಿಗೆ (ರಾಷ್ಟ್ರಕೂಟರ ನಾಲ್ಕನೆಯ) ಗೋವಿಂದರಾಜನು ಪ್ರತಿಭಟಿಸಲು ಅವನನ್ನು ಸಾವಕಾಶಮಾಡದೆ ಹಿಂದಕ್ಕೆ ನೂಕಿ ರಕ್ಷಿಸಿದ ಶರಣಾಗತಸಮುದ್ರನ ಮಹಿಮೆಯನ್ನು ಗೊಜ್ಜಿಗ(ಗೋವಿಂದರಾಜ)ನೆಂಬ ಸಕಲಚಕ್ರವರ್ತಿಯು ಆಜ್ಞೆಮಾಡಲು ದಂಡೆತ್ತಿ ಬಂದ ಮಹಲಾಸಾಮಂತರನ್ನೆಲ್ಲ ಹಿಮ್ಮೆಟ್ಟುವಂತೆ ಹೊಡೆದು ಗೆದ್ದ ಸಾಮಂತಚೂಡಾಮಣಿಯ ವೀರ್ಯವನ್ನೂ, ಎಲ್ಲೆ ಮೀರಿ ಪ್ರತಿಭಟಿಸುವ ಚಕ್ರವರ್ತಿಯನ್ನು ಹಾಳುಮಾಡಿ ತನ್ನನ್ನೇ ನಂಬಿಬಂದ ಬದ್ದೆಗದೇವ (=ಮೂರನೆಯ ಅಮೋಘ ವರ್ಷ)ನಿಗೆ ಸಕಲಸಾಮ್ರಾಜ್ಯವನ್ನು ಏಕಪ್ರಕಾರವಾಗಿ ಮಾಡಿ ಸ್ಥಾಪಿಸಿದ ಅರಿಕೇಸರಿಯ ತೋಳಬಲವನ್ನು….(ವಿಕ್ರಮಾರ್ಜುನ ವಿಜಯ ೯.೫೧)

ಹೀಗೆ ಇಲ್ಲಿ ಬಂಡಾಯವೆದ್ದ ಗೋವಿಂದರಾಜನನ್ನು ಸೋಲಿಸಿದ ಅರಿಕೇಸರಿ ನ್ಯಾಯಯುತವಾದ ರಾಜನಿಗೆ ಅಧಿಕಾರವನ್ನು ದೊರಕಿಸುತ್ತಾನೆ, ಮತ್ತು ಆ ಮೂಲಕವೇ ತಾನು ೧೦ನೆಯ ಶತಮಾನದ ನಡುವಿನ ಈ ದಕ್ಷಿಣದಲ್ಲಿ ಪ್ರಮುಖ ಸಾಮಂತನೆಂಬುದನ್ನು ಸಾಬೀತುಪಡಿಸುತ್ತಾನೆ.

ಇದರ ಐತಿಹಾಸಿಕ ವಿವರಗಳ ಬಗ್ಗೆ ನಾವು ಗಮನಿಸಬೇಕಿಲ್ಲ, ಇದನ್ನು ಪ್ರಸ್ತುತಪಡಿಸಲು ಪಂಪನು ಆವಿಷ್ಕರಿಸಿಕೊಂಡ ಸಾಂಸ್ಕೃತಿಕ ಸಂವಹನ ಮಾಧ್ಯಮದ ಬಗ್ಗೆ ನಾವು ಗಮನಹರಿಸಬೇಕು. ಸಂಸ್ಕೃತ ಮಹಾಕಾವ್ಯವು ಮಾಡುವ ರಾಜಕೀಯ ಕಥನವನ್ನು ಇಲ್ಲಿ ಪಂಪ ದೇಶಭಾಷೆಯ ಕಥನವಾಗಿ ಮಾರ್ಪಡಿಸಿದ್ದಾನೆ. ಮತ್ತು ಆ ಮೂಲಕ ಸಂಸ್ಕೃತದ ಪ್ರಾಂತ್ಯಾಂತರ ವ್ಯಾಪ್ತಿಯ ರಾಜಕೀಯ ವ್ಯವಸ್ಥೆಯನ್ನು ಅದಕ್ಕೆ ಭಿನ್ನವಾಗಿದ್ದ ಒಂದು ಜಗತ್ತಿಗೆ ಅನ್ವಯಿಸುತ್ತಾನೆ. ಹಾಗೇ, ಈ ಕಾವ್ಯದ ಭೌಗೋಳಿಕ ವರ್ಣನೆಯನ್ನೂ ಪ್ರಸ್ತುತ ಜಗತ್ತಿಗೆ ಕೂರಿಸುತ್ತಾನೆ. ಸಂಸ್ಕೃತ ಮಹಾಕಾವ್ಯದಲ್ಲಿ ಭರತವಂಶಕ್ಕೆ ನೆಲೆವೀಡಾದ ಹಸ್ತಿನಾಪುರವು ಇಲ್ಲಿ ಚಾಲುಕ್ಯ ರಾಜಧಾನಿ ವೇಮುಲವಾಡವಾಗುತ್ತದೆ. ಅಲ್ಲಿ ಬರುವ ಮಹಾನ್‌ ಭೂಪ್ರದಕ್ಷಿಣೆಯ ವಿವರಗಳು ಇಲ್ಲಿ ಕೇಂದ್ರ ದಖ್ಖನ್ನಿನ ಸುತ್ತ ಹಬ್ಬಿಕೊಳ್ಳುತ್ತವೆ. ತುದಿಯಲ್ಲಿ ಬರುವ ಕಥಾನಾಯಕನ ಪಟ್ಟಾಭಿಷೇಕದ ಸಮಯದಲ್ಲಿ, ಬೇರೆ ಬೇರೆ ನದಿಗಳ ನೀರನ್ನು ಸಂಗ್ರಹಿಸುವ ವಿವರದಲ್ಲಿಯೂ ಕೂಡಾ ಕೇಂದ್ರಕನ್ನಡ ಭೂಮಿಯ ಬನವಾಸಿಯ ಒಂದು ಹೊಳೆ ಸೇರಿಕೊಳ್ಳುತ್ತದೆ (ವಿಕ್ರಮಾರ್ಜುನ ವಿಜಯ ೧.೫೧ ಎಫ್‌ ಎಫ್‌ ಮತ್ತು ನರಸಿಂಹಾಚಾರ್ ಅವರ ಟಿಪ್ಪಣಿ; ೪.೨೬ ಎಫ್‌ ಎಫ್‌; ೧೪.೩೧). ಒಂದೇ ಮಾತಿನಲ್ಲಿ ಹೇಳುವುದಾದರೆ, ಪಂಪನು ಇಲ್ಲಿ ಇಡೀ ಭರತವರ್ಷವನ್ನು ಕಿರಿದುಗೊಳಿಸಿ ಅದನ್ನು ಕನ್ನಡ ನೆಲ್ಕೆ ಸಮೀಕರಿಸಿದ್ದಾನೆ; ಆ ಮಹಾವರಣದ ರಾಜಕೀಯ ದರ್ಶನವನ್ನು ಈ ನಿಜ ಆವರಣದಲ್ಲಿ ತಂದು ಕೂರಿಸಿದ್ದಾನೆ. ಇದರ ಮೇಲೆ ಅಲ್ಲಲ್ಲಿ ನೇರಸೂಚನೆಗಳ ಮೂಲಕ, ಕಥನದ ಮೂಲಕ, ಸಾಹಿತ್ಯಕ ಗುಣಗಳ ಮೂಲಕ ಇವೆಲ್ಲವನ್ನೂ ಆತ ಹೆಣೆಯುತ್ತಾನೆ. ಆಗ ಇದು ಕವಿರಾಜಮಾರ್ಗವು ಹೇಳುವ ಕನ್ನಡನಾಡಾಗಿ ಕಾಣಿಸಿಕೊಳ್ಳುತ್ತದೆ – “ಕಾವೇರಿಯಿಂದ ಗೋದಾವರಿಯವರೆಗಿನ ಈ ಕನ್ನಡ ನಾಡು (ಇದಕ್ಕೆ ಕರ್ನಾಟಕವೆಂಬ ಹೆಸರೂ ಇತ್ತು) ಪ್ರಸಿದ್ಧವಾದ ಜನಪದವನ್ನೊಳಗೊಂಡು ಭೂವಲಯದ ನಡುವೆ ಸ್ಥಾಪಿತವಾಗಿರುವ ವಿಶೇಷ ಸ್ಥಳ (ಕವಿರಾಜಮಾರ್ಗ ೧.೩೬) ಆಗುತ್ತದೆ. ಅಷ್ಟೇ ಅಲ್ಲ, ಈ ನಾಡು ಇಲ್ಲೀಗ ಈ ಇಡೀ ಕಥನದ ರಾಜಕೀಯ ಮತ್ತು ಕಲಾತ್ಮಕ ಚೌಕಟ್ಟೂ ಆಗಿ ನಿಲ್ಲುತ್ತದೆ. ಪಂಪ ತನ್ನ ಭಾರತವನ್ನು ಬರೆದದ್ದು ಈ ನಾಡಿನ ಸಮುದಾಯದ ನೈತಿಕ-ರಾಜಕೀಯ ಶಿಕ್ಷಣಕ್ಕಾಗಿಯೇ-“ವ್ಯಾಸಮಹರ್ಷಿಗಳಿಂದ ಹೊಗಳಲ್ಪಟ್ಟ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿಯೂ… ಪಂಪನು ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ ಪುರಾಣರಚನೆ ಮಾಡಿದ ಕವಿಯೂ ಆಗಿ, ಹಾಗೆಯೇ ದೇಸಿಗುಣಗಳು ಉನ್ನತವಗಿ ಅಭಿವೃದ್ಧಿಗೊಳ್ಳುತ್ತಿರಲು, ಕವಿತಾಗುಣಾರ್ಣವನು ನಾಡೋಜನಾದನು” (ವಿಕ್ರಮಾರ್ಜುನ ವಿಜಯ ೧೪.೬೨).

ಇಂಥ ಪಠ್ಯ ಮತ್ತ ಪ್ರಯೋಗಗಳ ಸಂಪ್ರದಾಯವನ್ನು ರೂಪಿಸುವ ಮುಖಾಂತರವೇ ಕವಿರಾಜಮಾರ್ಗವು ಏಕಕಾಲಕ್ಕೆ ಕನ್ನಡ ಪ್ರಾಂತೀಯತೆಯನ್ನೂ ಪ್ರಾಂತ್ಯಾತೀತತೆಯನ್ನೂ ಸಮರ್ಥಿಸುವ ಕೃತಿಯಾಗುತ್ತದೆ; ಸಂಸ್ಕೃತ ವರ್ಗೀಕರಣ ವಿಧಾನಗಳನ್ನು ಅಳವಡಿಸಿ ಕನ್ನಡದ ಸಾಹಿತ್ಯರೂಢಿಗಳನ್ನು ನಿರ್ಮಿಸುತ್ತದೆ. ಹೀಗೆ ಪಂಪ ಮಾಡಿರುವ ಪುರಾಣಸ್ಥಳ ಮತ್ತು ರಾಜಕೀಯ ದರ್ಶನಗಳ ಸ್ಥಳೀಕರಣ ಮತ್ತು ಈಗಾಗಲೇ ಉಲ್ಲೇಖಿಸಿರುವ ಇನ್ನಿತರ ಉದಾಹರಣೆಗಳು- ಇವೆಲ್ಲ ಸೇರಿ ವಿಶ್ವಾತ್ಮಕ ದೇಶಭಾಷೆಯ ಉತ್ಪಾದನೆಯೆಂದು ನಾನು ಕರೆಯುವ ವಿದ್ಯಮಾನ ರೂಪುಗೊಳ್ಳುವುದು. ಹಾಗಿದ್ದೂ, ಕವಿರಾಜಮಾರ್ಗ, ಪಂಪಭಾರತ ಮತ್ತಿತರ ಪಠ್ಯಗಳು ಇಂಥ ಸುಸಂಸ್ಕೃತ ದೇಶಭಾಷೆಯನ್ನು ರೂಪಿಸುವ ಸಾಹಿತ್ಯಕ-ವೈಃಧಾನಿಕ ದೃಷ್ಟಾಂತಗಳನ್ನೇನೋ ಕೊಡುತ್ತವೆ, ಆದರೆ, ಇಂಥ ಪಲ್ಲಟವು ಸಂಭವಿಸುತ್ತಿರುವ ಕಾಲ-ದೇಶ ಸಂದರ್ಭಸಂಬಂಧಿ ಕಾರಣವನ್ನು ನಾವು ಅರಿಯುವುದು ಹೇಗೆ? ಯಾಕೆ ಒಂಬತ್ತು-ಹತ್ತನೆಯ ಶತಮಾನಗಳ ದೇಶಭಾಷಾ ಧೀಮಂತರು ರಾಜಕೀಯ ಅಧಿಕಾರದ ಕೇಂದ್ರಗಳಿಂದ (ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ) ರಾಜಕೀಯ ಸಂವಹನೆಗಾಗಿ ತಮ್ಮ ಗಮನವನ್ನು ಕನ್ನಡದತ್ತ ಹರಿಸುತ್ತಾರೆ? ತಮ್ಮ ಭಾಷೆಯನ್ನು ಅವರು ಹೊಸದೊಂದು ಜ್ಞಾನಶಾಸ್ತ್ರೀಯ ಸಂದರ್ಭದಲ್ಲಿ, ಹೊಸ ತಾತ್ವಿಕ ಪ್ರಸ್ಥಾನದಲ್ಲಿ, ಆಸ್ಥಾನಸಂವಹನೆಗೆ ಬಳಸತೊಡಗಿದರಲ್ಲ, ಅದರ ಹಿಂದಿರುವ ತಕ್ಷಣದ ಕಾಲ-ದೇಶಾದಿ ಪ್ರೇರಣೆಗಳು ಯಾವುವು? ಅದುವರೆಗೂ ಪ್ರಾಂತ್ಯಾಂತರ ವ್ಯಾಪ್ತಿಯ ಸಾಧ್ಯತೆಯೂ ವಾಸ್ತವವೂ ಆಗಿ, ಹೆಚ್ಚೂಕಮ್ಮಿ ಜಾಗತಿಕ ಸ್ವರೂಪವುಳ್ಳದ್ದಾಗಿ, ಕಂಡಿದ್ದ ಸಂಸ್ಕೃತವು ಈಗೇಕೆ ಅವರಿಗೆ ತ್ಯಾಜ್ಯವಾಯಿತು? ಯಾಕವರು ಮೊದಲಬಾರಿಗೆ ಸ್ಥಳೀಯ ನೆಲೆಗಳಿಂದ ಮಾತಾಡಲು ತೊಡಗಿದರು?

ದೇಶಭಾಷಾ ನಿರ್ಮಾಣ ಪ್ರಕ್ರಿಯೆಗೆ ವಿವರಣೆಗಳು

ಕನ್ನಡ ಸಾಹಿತ್ಯಸಂಸ್ಕೃತಿಯ ನಿರ್ಮಾಣದಲ್ಲಿ ನಾವು ಗುರುತಿಸಿದ ಈ ಪ್ರಕ್ರಿಯೆಗೆ ಹೋಲುವ ಸಮಾನಾಂತರ ವಿದ್ಯಮಾನಗಳು ಎರಡನೆಯ ಸಹಸ್ರಮಾನದ ಆರಂಭದಿಂದಲೇ ಸಂಸ್ಕೃತ ಮಹಾವಿಶ್ವದಾದ್ಯಂತ-ಅಂದರೆ, ಅಸ್ಸಾಂ, ಆಂಧ್ರ, ಒರಿಸ್ಸಾಗಳಿಂದ ಶ್ರೀಲಂಕಾ, ಜಾವಾದವರೆಗೆ; ಕೇರಳ, ಮಹಾರಾಷ್ಟ್ರ, ಗುಜರಾತ್‌ಗಳಿಂದ ಟಿಬೆಟ್ಟಿನವರೆಗೆ- ಸಂಭವಿಸಿರುವುದನ್ನು ಕೂಡಾ ನಾವು ಗಮನಸಿಬಹುದು. ಈ ಘಟ್ಟದಲ್ಲಿ ದೇಶಭಾಷಾ ಲೇಖಕರು ತಮ್ಮ ನಾಡಿನ ಶಾಸನ ದಾಖಲೆಗಳೂ ರಾಜಕೀಯ ನಿರೂಪಗಳೂ ಇನ್ನು ಮುಂದೆ ದೇಶಭಾಷೆಯಲ್ಲೇ ಹೊರಡುವಂತೆ ಏರ್ಪಡಿಸಿದರು; ತಮಿಳಿನ ಚೋಳಸಾಮ್ರಾಜ್ಯದಲ್ಲಿ ಇದು ಗಟ್ಟಿಯಾಗಿ ಕಾಣಿಸಿಕೊಂಡರೆ ಮರಾಠಿ, ಒರಿಯಾ, ತೆಲುಗುಗಳಲ್ಲಿ ಇದು ಇನ್ನೂ ಆರಂಭಿಕರೂಪದಲ್ಲಿ ತೋರಿಸಿಕೊಳ್ಳುತ್ತದೆ. ಹಾಗೆಯೇ ಇವರು ಸಂಸ್ಕೃತದ ಸಾಹಿತ್ಯ ಮೀಮಾಂಸೆ ಮತ್ತು ಮಾದರಿಗಳನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡು ಅದರ ಮೂಲಕ ರಾಜಕೀಯ ಮತ್ತು ಸೃಜನಾತ್ಮಕ ಸಂವಹನೆಯನ್ನು ನಡೆಸಿದರು; ಉದಾಹರಣೆಗೆ, ದಂಡಿಯನ್ನು ಸಿಂಹಳಿಯು ೧೦ನೆಯ ಶತಮಾನದಲ್ಲೂ ತಮಿಳು ೧೨ನೆಯ ಶತಮಾನದಲ್ಲೂ ಟಿಬೆಟಿನ್‌ ೧೪ನೆಯ ಶತಮಾನದಲ್ಲೂ ಅಳವಡಿಸಿಕೊಂಡಿತು. ಜೊತೆಗೆ, ಇವರೆಲ್ಲ ತಮ್ಮ ಸಾಹಿತ್ಯ ಪ್ರಸ್ತುತಿಗೆ ಹೊಸ ಭೌಗೋಲಿಕ ಚೌಕಟ್ಟನ್ನೂ ರೂಪಿಸಿಕೊಂಡರು; ಆಯಾ ಕೃತಿಗಳು ಚಲಾವಣೆಯಾಗುವ ಸ್ಥಳಗಳೇ ಆ ಹೊಸ ಭೌಗೋಳಿಕ ಚೌಕಟ್ಟಿನ ಮೇರೆಯೂ ಆಯಿತು. ಹಾಗೇ, ಸಂಸ್ಕೃತ ಮಹಾಕಾವ್ಯಗಳನ್ನು-ಹಲವೊಮ್ಮೆ ಪಂಪನಂತೆ ದ್ವಿಮುಖಿ ನಿರೂಪಣೆಯ ಮೂಲಕವೇ-ಸ್ಥಳೀಕರಿಸುವ ಮೂಲಕ ಈ ಎಲ್ಲ ಗುರಿಗಳನ್ನು ಅವರು ಒಂದೇ ಏಟಿಗೆ ಸಾಧಿಸಿಕೊಂಡರು. ಮತ್ತು ಇವೆಲ್ಲದರ ಫಲವಾಗಿ ದೇಶಭಾಷಾನಿರ್ಮಾಣ ಪ್ರಕ್ರಿಯೆ ಮಹಾನ್‌ ಉಬ್ಬರಕ್ಕೆ ಕಾರಣವಾದರು. ಇಂಥ ಪ್ರಕ್ರಿಯೆಗೆ ಸಾಕ್ಷಿಯಾಗಿ ಒದಗಿರಬಹುದಾದ ಕೃತಿಗಳ ಪಟ್ಟಿ ಇದು-೧೦ನೆಯ ಶತಮಾನದ ಜಾವಾದಲ್ಲಿ ರಚಿತವಾದ ‘ರಾಮಾಯಣ’ಪಠ್ಯ(ಇಲ್ಲೂ ದ್ವಿಮುಖಿ ಕಥನವೇ ಕೇಂದ್ರ; ನೋಡಿ-ರಾಬ್ಸನ್‌ ೧೯೮೩) ಮತ್ತು ಜಾವಾದ ಗದ್ಯ ‘ಮಹಾಭಾರತ’; ೧೧ನೆಯ ಶತಮಾನದ ನಡುವಿಗೆ ವೆಂಗಿ ಚಾಲುಕ್ಯರ ಆಸ್ಥಾನದಲ್ಲಿದ್ದ ನನ್ನಯ್ಯನ ತೆಲುಗು ‘ಮಹಾಭಾರತ’; ೧೪ನೆಯ ಶತಮಾನದ ನಡುವಿಗೆ ಬರಾಹಿ ರಾಜ ಮಹಾಮಾಣಿಕ್ಯನ ಕೇಳಿಕೆಯಿಂದ ರಚಿತವಾದ ಮಾಧವ ಕಂಡಲೀಯ ಅಸ್ಸಾಮಿ ‘ರಾಮಾಯಣ’; ೧೫ನೆಯ ಶತಮಾನದ ನಡುವಿಗೆ ಗ್ವಾಲಿಯರ್ ತೋಮಾರ್ ನ ಆಸ್ಥಾನದಲ್ಲಿ ರಚಿತವಾದ ವಿಷ್ಣುದಾಸ ಬಜ್ರನ ‘ಮಹಾಭಾರತ’(ಪಾಂಡವಚರಿತಗ) ಮತ್ತು ‘ರಾಮಾಯಣಕಥಾ’; ೧೫ನೆಯ ಶತಮಾನದ ತುದಿಗೆ ಗಜಪತಿ ಆಸ್ಥಾನದಿಂದ ಹೊರಬಂದ ಒರಿಯಾ ಭಾಷೆಯ ಇವೇ ಮಹಾಕಾವ್ಯಗಳು ಮತ್ತು ‘ಭಾಗವತ’. ಹೀಗೆ ಈ ಎಲ್ಲ ಕೃತಿಗಳ ಮೂಲಕ ಕಾಣಿಸುವ ಒಂದು ಸಂಪ್ರದಾಯವು ಜನರ ಪ್ರತಿಭಾವ್ಯಾಪಾರದಲ್ಲಿ ಮತ್ತು ಅವರ ಸ್ಥಳೀಯಜಗತ್ತಿನ ಕಲ್ಪನೆಯಲ್ಲಿ ಆಗಿರುವ ರೂಪಾಂತರದ ದ್ಯೋತಕ, ನಿಜ. ಆದರೆ, ಇದನ್ನು ಐತಿಹಾಸಿಕವಾಗಿ ವಿಶ್ಲೇಷಿಸಿ ಸಾಂಸ್ಕೃತಿಕ ಸಿದ್ಧಾಂತವಾಗಿ ನಿರೂಪಿಸುವ ದಾರಿಯಲ್ಲಿ ಹಲವಾರು ತೊಡಕುಗಳು ಎದುರಾಗುತ್ತವೆ; ಇವನ್ನು ಇಡಿಯಗಿ ನಿವಾರಿಸಿಕೊಳ್ಳುವುದು ಇನ್ನೂ ಆಗಿಲ್ಲ. ಆದ್ದರಿಂದ, ಈ ಎಲ್ಲವನ್ನೂ ಸೇರಿಸಿ ದೇಶಾಷಾನಿರ್ಮಾಣವನ್ನು ಕುರಿತ ಏಕೀಕೃತ ಸಿದ್ಧಾಂತವೊಂದನ್ನು ಮಂಡಿಸುವ ಮಾತು ಹಾಗಿರಲಿ, ನಿರ್ದಿಷ್ಟ ಪ್ರಾಂತ್ಯಗಳ ವ್ಯಾಪ್ತಿಯಲ್ಲಿ ತತ್ವೀಕರಿಸುವುದೂ ನಮಗಿನ್ನೂ ಸಾಧ್ಯವಾಗದೆ ಹೋಗಿದೆ. ಸದ್ಯ ನಾವು ಮಾಡಬಹುದಾದದ್ದು ಇಷ್ಟೇ-ಇಂಥ ತತ್ವೀಕರಣವು ಇನ್ನು ಮುನ್ನಡೆಯಲು ಸಾಧ್ಯವಿಲ್ಲದೇ ಇರುವ ದಿಕ್ಕುಗಳನ್ನು ಗುರುತಿಸುವುದು ಮತ್ತು ಅಂಥ ಮುನ್ನಡೆಗೆ ಒದಗಬಹುದಾದ ಹೊಸ ದಿಕ್ಕುಗಳನ್ನು ಹುಡುಕುವುದು. ಆ ಮೂಲಕ ನಾವು ದಕ್ಷಿಣ ಏಶಿಯಾದಾದ್ಯಂತ ನಡೆದ ಈ ಪ್ರಕ್ರಿಯೆಯ ಕೆಲವು ಸ್ಥೂಲರೂಪಗಳನ್ನದರೂ ಗ್ರಹಿಸಲಿಕ್ಕೆ ಸಾಧ್ಯವಾದೀತು.

ದಕ್ಷಿಣ ಏಶಿಯಾದ ಪ್ರಮುಖ ಸಾಂಸ್ಕೃತಿಕ ಮತ್ತು ರಾಜಕೀಯ ತತ್ವಜ್ಞ ಸುದೀಪ್ತ ಕವಿರಾಜ್‌, ತಮ್ಮ ಈಚಿನ ಎರಡು ಲೇಖನಗಳಲ್ಲಿ, ಬ್ರಿಟಿಷ್‌ ವಸಾಹತುಶಾಹಿ ಆಡಳತಿದ ಮುಂಚೆ ಬದುಕುವ ಮತ್ತು ಬರೆಯುವ ಅನುಭವಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ಪ್ರಸ್ತಾಪಗಳನ್ನು ಚರ್ಚಿಸಿದ್ದಾರೆ(ಕವಿರಾಜ್‌ ೧೯೯೨ಎ, ೧೯೯೨ಬಿ) ಅವರ ಚಿಂತನೆಗಳು ಬಹಳ ಮೌಲ್ಯವುಳ್ಳದ್ದು, ಕಾರಣ, ಅವು ಐತಿಹಾಸಿಕತೆಗೆ ಒತ್ತುಕೊಡುತ್ತವೆ; ಆದ್ದರಿಂದ ಸಮುದಾಯ, ಕುಲಸ್ವರೂಪ, ಸ್ವನಿರೂಪಣೆ ಮತ್ತು ಅವು ನಿರ್ದಿಷ್ಟ ಸೀಮೆಯಲ್ಲಿ ಸ್ಥಳೀಕರಣಗೊಳ್ಳುವ ರೀತಿ-ಇವು ವ್ಯಕ್ತವಾಗುವ ಮತ್ತು ಬದಲಾಗುವ ವಿಧಾನಗಳನ್ನು ಗ್ರಹಿಸುತ್ತವೆ. ಇದಕ್ಕಿಂತಲೂ ಮುಖ್ಯವೆಂದರೆ ಆ ಚಿಂತನೆಯು ದಕ್ಷಿಣ ಏಶಿಯಾದಲ್ಲಿ ಗುರುತಿಸಲಾಗುವ “ಸಂವಹನಾಹೀನತೆ”ಯನ್ನು, ಅಂದರೆ, ಈ ಭಾಗದ ಬರಹಗಾರರ ಬಹುಭಾಷಾಸಾಮರ್ಥ್ಯ ಮತ್ತು ಉತ್ಸಾಹಗಳು ಆಧುನಿಕತೆಯಿಂದುಂಟಾದ ಏಕಭಾಷೀಕರಣದಿಂದ ನಷ್ಟವಾಗಿರುವ ಸನ್ನಿವೇಶವನ್ನು, ಸಮರ್ಥವಾಗಿ ಗುರುತಿಸಿ ಆ ದಿಕ್ಕಿನ ಬೆಳವಣಿಗೆಯ ನಕ್ಷೆಯನ್ನು ಹುಡುಕುತ್ತದೆ. ಆದರೆ, ಅದೇ ಹೊತ್ತಿಗೆ ಅವರು, ಈ ಭಾಗದ ಜಗತ್ತಿನ ದೇಶಭಾಷಾನಿರ್ಮಾಣದ ಪ್ರಕ್ರಿಯೆಯನ್ನು ವಿವರಿಸಲು ಮಾತ್ರ, ಈಗಾಗಲೇ ಸಿದ್ಧವಾಗಿ ಲಭ್ಯವಿರುವ ಮತ್ತು ಬಹುಕಾಲದಿಂದ ಪ್ರಶ್ನಿತವೇ ಆಗದೆ ಉಳಿದಿರುವ ಕೆಲವು ದೃಷ್ಟಿ ಕೋನಗಳನ್ನು ಎತ್ತಿಕೊಳ್ಳುತ್ತಾರೆ. ಈ ವಿಷಯದ ಬಗ್ಗೆ ಬರೆದಿರುವ ಎಲ್ಲ ಪಂಡಿತರಂತೆಯೇ ಕವಿರಾಜ್‌ ಅವರೂ “ಆಗಷ್ಟೇ ಉದ್ಭವಿಸುತ್ತಿದ್ದ ದೇಶಭಾಷೆಗಳು ಉನ್ನತವಾದ ಸಂಸ್ಕೃತ ಪರಂಪರೆಯಿಂದ ಕ್ರಮೇಣ ಪ್ರತ್ಯೇಕಗೊಳ್ಳುತ್ತ ಬಂದ ಪ್ರಕ್ರಿಯೆಯನ್ನು” ನೇರವಾಗಿ “ಧಾರ್ಮಿಕ ಬೆಳವಣಿಗೆಗಳಿಗೆ” ಗಂಟು ಹಾಕುತ್ತಾರೆ; ಈ ಧಾರ್ಮಿಕ ಚಳುವಳಿಗಳು ಸಂಸ್ಕೃತ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು ದೇಶಭಾಷಾ ಸಾಹಿತ್ಯಗಳೂ ಆ ಸಂಪ್ರದಾಯದ ವಿರುದ್ಧ ‘ಅಘೋಷಿತ ಕ್ರಾಂತಿ”ಯನ್ನೇ ನಡೆಸಿದವೆಂದು ಹೇಳುತ್ತಾರೆ. ಮತ್ತು “ದೇಶಭಾಷೆಗಳ ಹುಟ್ಟಿನ ಪ್ರಕ್ರಿಯೆಯು, ಬ್ರಾಹ್ಮಣರೂಪದ ಶಾಸ್ತ್ರೀಯ ಹಿಂದುವಾದದ ಒಳಗೇ ನಡೆದ ಒಂದು ಸೈದ್ಧಾಂತಿಕ ದಂಗೆಯೊಂದಿಗೆ ತಳುಕು ಹಾಕಿಕೊಂಡಂತೆ ಕಾಣುತ್ತದೆ” ಎಂದು ಅಭಿಪ್ರಾಯಪಡುತ್ತಾರೆ.

ನಿಜವಾಗಿ, ಇಂಥ ಸಾಧಾರಣೀಕೃತ ತೀರ್ಮಾನಕ್ಕೆ ಬೆಂಬಲವಾಗಿ ಸಿಗುವ ಸಾಕ್ಷ್ಯ ಮಾತ್ರ ತುಂಬ ಕಡಿಮೆಯೇ; ಹಾಗಿದ್ದರೂ ಇದು ಸಾರ್ವತ್ರಿಕವಾಗಿ ಒಪ್ಪಿತವಾಗಿಬಿಟ್ಟಿದೆ. ದಕ್ಷಿಣ ಏಶಿಯಾದ ಇತಿಹಾಸದಲ್ಲಿ ಧಾರ್ಮಿಕ ರೂಢಿಗೂ ಮತ್ತು ಭಾಷೆಯ ಆಯ್ಕೆಗೂ ನಡುವೆ ಕೆಲವು ಸಂಬಂಧಗಳನ್ನು ಕಾಣಬಹುದು – ಎನ್ನುವುದನ್ನು ನಿರಾಕರಿಸಲಾಗದು. ಬುದ್ಧನ ಮಾತುಗಳನ್ನು ಸಂಸ್ಕೃತ ಭಾಷೆಯಲ್ಲಿ ಗ್ರಂಥಸ್ಥಗೊಳಿಸುವುದಕ್ಕೆ ಎದ್ದ ಪ್ರತಿರೋಧ ಅಥವಾ ಜೈನರು ತಮ್ಮ ಧರ್ಮಗ್ರಂಥಗಳನ್ನು ಬರೆಯಲು ಪೂರ್ವದ ಪ್ರಾಕೃತವನ್ನೇ ಹೆಚ್ಚು ಅಪೇಕ್ಷಿಸಿದ್ದು – ಇವು ಆದಿಕಾಲದಲ್ಲೇ ದೊರೆಯುವ ಇಂಥ ಸಂಬಂಧದ ಪರಿಚಿತ ದೃಷ್ಟಾಂತಗಳು. ಆದರೆ, ಎರಡನೆಯ ಸಹಸ್ರಮಾನದ ಆರಂಭದ ಸಮಯಕ್ಕಾಗಲೇ ಇಂಥ ಸಂಬಂಧವು ಸಾಕಷ್ಟು ಅಳಿಸಿಹೋಗಿತ್ತು. ಅಷ್ಟರಲ್ಲಿ ಸಂಸ್ಕೃತವು ಕೇವಲ ಬ್ರಾಹ್ಮಣವರ್ಗದ ಆಸ್ತಿಯೆನ್ನುವ ಕಲ್ಪನೆ ಬದಲಾಗಿ ಬಹುಕಾಲ ಕಳೆದಿತ್ತು; ಆಗ ಬ್ರಾಹ್ಮಣರು ತಮ್ಮ ಸಾಹಿತ್ಯವನ್ನು ಸಂಸ್ಕೃತೇತರ ಭಾಷೆಗಳಲ್ಲಿ, ಅಪಭ್ರಂಶ ಮತ್ತು ಕನ್ನಡದಲ್ಲಿಯೂ ಕೂಡಾ, ಅಭಿವ್ಯಕ್ತಿಸಲು ಆರಂಭಿಸಿದ್ದರು. ಒಟ್ಟಿನಲ್ಲಿ, ಆಧುನಿಕಪೂರ್ವ ದಕ್ಷಿಣ ಏಶಿಯಾದ ಸನ್ನಿವೇಶದಲ್ಲಿ, ಈ ಭಾಷಾ ಆಯ್ಕೆಯ ಧಾರ್ಮಿಕ ಹಿನ್ನೆಲೆಯ ಸಂಬಂಧವನ್ನು ತುಸು ಅತಿಯಾಗಿಯೇ ಉತ್ಪ್ರೇಕ್ಷಿಸಲಾಗಿದೆ. ಅದರಲ್ಲೂ ‘ಭಕ್ತಿ’ ಚಳುವಳಿಯೆಂದು ಹೆಸರಾದ, ಧಾರ್ಮಿಕ ಚಿಂತನವಿಧಾನದಲ್ಲಿಯೇ ನಡೆದ ಕ್ರಾಂತಿಯೆಂದು ಕರೆಯಲಾಗುವ ನಿರ್ದಿಷ್ಟ ಸಂದರ್ಭದಲ್ಲಿ ಇಂಥ ಉತ್ಪ್ರೇಕ್ಷೆ ಇನ್ನೂ ಹೆಚ್ಚಾಗಿದೆ. ನಮಗೆ ಸಿಗುವ ಪುರಾವೆಗಳ ಪ್ರಕಾರ ಈ ಭಕ್ತಿ ಚಳುವಳಿಯು ದಕ್ಷಿಣ ಏಶಿಯಾದ ದೇಶಭಾಷಾನಿರ್ಮಿತಿಗೆ ಮುಖ್ಯವಾದ ಪ್ರೇರಣೆ ಅಥವಾ ಅದೇ ಪ್ರಾಥಮಿಕವಾದ ಕಾರಣ ಎನ್ನಲು ಅಸಾಧ್ಯ. ಉತ್ತರಭಾರತದ ಕೆಲವು ದೇಶಭಾಷೆಗಳು ಮೊದಲ ಬಾರಿಗೆ ಲಿಖಿತ ಸಾಹಿತ್ಯಕ್ಕೆ ಬಳಕೆಯಾಗಲು ತೊಡಗಿದ್ದು ಸಂಪೂರ್ಣವಾಗಿ ಇಂಥ ಬ್ರಾಹ್ಮಣ ಪರಂಪರೆಗಿಂತ ಬೇರೆಯೇ ಆಗಿ: ಉದಾಹರಣೆಗೆ, ಪಶ್ಚಿಮದಲ್ಲಿ ಹಿಂದುಯಿ ಭಾಷೆಯು ಕ್ರಿ.ಶ. ೧೧೦೦ರಲ್ಲಿ ಲಾಹೋರಿನ ಮಸೂದ್‌ ಸೈದ್‌ ಸಲ್ಮಾನ್‌ನಿಂದ ಬಳಸಲ್ಪಟ್ಟಿತು; ಅವಧಿ ಭಾಷೆಯು ೧೪ನೆಯ ಶತಮಾನದ ತುದಿಗೆ ಪೂರ್ವದ ಜೌನ್‌ಪುರದಲ್ಲಿ ಮೌಲಾನಾ ದೌಡ್‌ನಿಂದ ಬಳಕೆಯಾಯಿತು. ಇನ್ನೂ ಹಲವು ದೇಶಭಾಷೆಯ ಆರಂಭಗಳು ಯಾವುದೇ ಧಾರ್ಮಿಕ ಭಕ್ತಿಪಂಥಗಳಿಗೆ ಏನೂ ಸಂಬಂಧ ಕಾಣಿಸುವುದಿಲ್ಲ. -ಆರಂಭದ ಬ್ರಜಭಾಷೆಯು ವಿಷ್ಣುದಾಸನ ಬರಹಗಳಲ್ಲಿ ಸಾಹಿತ್ಯಕ ನುಡಿಗಟ್ಟಾಗಿ ಹರಳುಗಟ್ಟಿದ್ದು ಗ್ವಾಲಿಯರ್ ನ ತೋಮಾರ್ ರ ಆಶ್ರಯದಲ್ಲಿ ಮತ್ತು ಸ್ಟುವರ್ಟ್ ಮೆಕ್‌ಗ್ರೆಗೋರ್ ಎಚ್ಚರಿಕೆಯಿಂದ ಗುರುತಿಸಿ ತೋರಿಸಿರುವಂತೆ, ಈತನ ದೇಶಭಾಷಾ ಮಹಾಕಾವ್ಯಗಳಿಗೂ ಭಕ್ತಿಗೂ ಏನೂ ಸಂಬಂಧವಿಲ್ಲ (ಮೆಕ್‌ ಗ್ರೆಗೋರ್‌, ಎನ್‌.ಡಿ). ಸಂಸ್ಕೃತ ಮಹಾವಿಶ್ವದ ಪಶ್ಚಿಮ ತುದಿಯ ಬಗ್ಗೆಯೂ ಇದೇ ಮಾತು ಅನ್ವಯಿಸುತ್ತದೆ – ೧೪- ೧೫ನೆಯ ಶತಮಾನದ ಗುಜರಾತಿಯ ಆರಂಭದ ಪಠ್ಯಗಳಲ್ಲಿ ಭಾಲನ್‌ನ ಆಸ್ಥಾನಕಾವ್ಯ ‘ಕಾದಂಬರಿ’ಯೂ ‘ಫಗು’, ‘ವಸಂತವಿಲಾಸ’ ಎಂಬ ಶೃಂಗಾರಪೂರಿತ ಅನಾಮಿಕ ಲೇಖಕನ ಕೃತಿಗಳೂ ಸೇರುತ್ತವೆ. ಪೂರ್ವದ ತುದಿಯಲ್ಲಿ ಜಾವಾದ ‘ಕಕವಿನ್ಸ್‌’ನಂತಹ ರಾಜಕೀಯ ಅನ್ಯೋಕ್ತಿಯ ಬರವಣಿಗೆಗಳು ಕಾಣಸಿಗುತ್ತವೆ.

ಕನ್ನಡದ ಸಂದರ್ಭದಲ್ಲಿಯೂ ಕೂಡಾ ದೇಶಭಾಷಾ ನಿರ್ಮಾಣಕ್ಕೆ ಧಾರ್ಮಿಕ ಕಾರಣಗಳನ್ನು ಸೂಚಿಸುವ ರೂಢಿ ಪಂಡಿತವಲಯಗಳಲ್ಲಿ ಅವ್ಯಾಹತವಾಗಿ ನಡೆದಿದೆ. ಆದರೆ ಇಲ್ಲಿ ಅಂಥ ಕಾರಣವೆಂದು ಸೂಚಿತವಾಗಿರುವುದು ಭಕ್ತಿಯಿಲ್ಲ; ಈಗೊಂದು ತಲೆಮಾರಿನ ಹಿಂದೆ ಪಂಡಿತರೊಬ್ಬರು ಜೈನರ ಧಾರ್ಮಿಕ ನಂಬಿಕೆ ಇದಕ್ಕೆ ಕಾರಣವೆಂದೂ “ಆ ಧರ್ಮದ ಸ್ಥಾಪಕ ಜನವರ್ಗದ ಬೋಧನೆಗೆ ದೇಶಭಾಷೆಗಳನ್ನು ಬಳಸುವುದೇ ಯುಕ್ತ ಎಂದು ಹೇಳಿರುವುದು” ಅದಕ್ಕೆ ಪ್ರೇರಣೆಯಾಯಿತೆಂದೂ ಸೂಚಿಸಿದ್ದಾರೆ (ಅಲ್ಟೇಕರ್ ೧೯೬೦ಬಿ, ೨೧೪). ಆದರೆ, ಕ್ರಿ.ಪೂ. ೩೦೦ರಿಂದಲೂ ಜೈನರು ಕರ್ನಾಟಕದಲ್ಲಿ ವಾಸಿಸುತ್ತಿದ್ದು ಅವರ ಇಂಥ ಧೋರಣೆಯು ಸಾಹಿತ್ಯಕ್ಕೆ ಸಂಬಂಧಿಸಿದಂತೆ ರೂಢಿಗೊಳ್ಳಲಿಕ್ಕೆ ಯಾಕೆ ಒಂದು ಸಹಸ್ರ ವರ್ಷ ಹಿಡಿಯಿತು-ಎಂಬುದು ಇಲ್ಲಿ ಒಗಟಾಗಿಯೇ ಉಳಿಯುತ್ತದೆ. ಇನ್ನೂ ಒಗಟಿನ ಇನ್ನೊಂದು ಸಂಗತಿಯೆಂದರೆ, ಕನ್ನಡ ಸಾಹಿತ್ಯವು ಕಡೆಗೊಮ್ಮೆ ಇತಿಹಾಸವನ್ನು ನಿರ್ಮಿಸಿ ಮೇಲೆದ್ದು ಬಂದ ಕ್ಷಣದಲ್ಲೇ, ಜೈನರ ಮಹತ್ವದ ಧಾರ್ಮಿಕ ಕವಿಗಳಾದ-ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಯಾವುದೇ ಅನುಮಾನಕ್ಕೆ ಅಸ್ಪದ ಇಲ್ಲದಂಥ-ಜಿನಸೇನ ಮತ್ತು ಗುಣಭದ್ರರು (ಕ್ರಿ.ಶ. ೮೫೦೯-೯೦೦) ತಮ್ಮ ‘ಮಹಾಪುರಾಣ’ಕ್ಕೆ ಯಾಕೆ ಸಂಸ್ಕೃತವನ್ನು ಆಯ್ದುಕೊಂಡರು ಎಂಬುದು. ಅಷ್ಟೇ ಅಲ್ಲ, ವೇಮುಲವಾಡ ಆಸ್ಥಾನದಲ್ಲಿ ಪಂಪನ ಸಮಕಾಲೀನನಾಗಿದ್ದ ಜೈನ ಆಚಾರ್ಯ ಸೋಮದೇವಸೂರಿ (‘ಯಶಸ್ವಿಲಕಚಂಪೂ’ವಿನ ಲೇಖಕ) ತನ್ನ ಲೌಕಿಕ ಕಾವ್ಯಕ್ಕೂ ಸಂಸ್ಕೃತವನ್ನೇ ಆಯ್ದುಕೊಂಡ.