ಮುಡಿ ತುಂಬ ಜೋಳ ಮೊಗ ತುಂಬ ನಗು

ಈ ಹಿಂದೆ ಒಂದೊಂದು ಸೀಮೆಗೂ ನಾಲ್ಕಾರು ಜೋಳದ ತಳಿಗಳಿದ್ದು ಆಯಾ ಪ್ರದೇಶಕ್ಕನುಗುಣವಾಗಿ ತಿನ್ನಲು ಒಂದು ಜೋಳದ ತಳಿ, ಜಾನುವಾರು ಮೇವಿಗೆ ಮತ್ತೊಂದು ತಳಿ, ಹಬ್ಬ-ಹುಣ್ಣಿಮೆಗಳಲ್ಲಿ ವಿಶೇಷ ಖಾದ್ಯ ತಯಾರಿಸಲು ಮತ್ತೊಂದು ತಳಿ,.. ಹೀಗೆ ಹತ್ತಾರು ತಳಿಗಳ ಜೋಳದ ಬೀಜಗಳು ಉತ್ತರ ಕರ್ನಾಟಕದ ರೈತರ ಉಡಿಗಳಲ್ಲಿ ಇದ್ದವು. ಅದರಲ್ಲಿಯೇ ಮುಂಗಾರು ಹಂಗಾಮಿಗೆ ಬಿತ್ತುವ ತಳಿಗಳೆ ಬೇರೆ, ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡುವ ತಳಿಗಳೇ ಬೇರೆಯಾಗಿದ್ದವು. ರೋಗ-ರುಜಿನಗಳ ಕಾಟವಿಲ್ಲದೆ ಸೊಗಸಾಗಿ ಬೆಳೆದು ಸಮೃದ್ಧ ಫಸಲು ನೀಡುವುದರ ಜೊತೆಗೆ ದನಕರುಗಳಿಗೆ ವರ್ಷಕ್ಕಾಗುವಷ್ಟು ಮೇವು ಒದಗಿಸುತ್ತಿದ್ದವು. ಯಾವಾಗ ಹೈಬ್ರಿಡ್ ಬೀಜದ ತಳಿಗಳು, ಅದರಲ್ಲಿಯೇ ಮರುಹುಟ್ಟು ಪಡೆಯದ ಬಂಜೆ ಬೀಜಗಳು ಮಾರುಕಟ್ಟೆಗೆ ಬರಲಾರಂಭಿಸಿದವೋ ನೋಡಿ, ಕ್ರಮೇಣ ಆ ಎಲ್ಲ ದೇಶಿ ತಳಿಗಳು ಒಂದರ ಹಿಂದೆ ಒಂದು ಮಾಯವಾಗಿ ಈಗ ಹತ್ತಾರು ಸೀಮೆ ಸುತ್ತಿದರೂ ನಾಲ್ಕಾರು ಜೋಳದ ಬೀಜದ ತಳಿಗಳು ಸಿಗುವುದೂ ದುರ್ಲಭ.

ವೈವಿಧ್ಯಮಯ ತಳಿಗಳು:

ಸುಮಾರು ನಾಲ್ಕೈದು ತಿಂಗಳ ಕಾಲ ಬೆಳೆದು ಗಟ್ಟಿ ಆಹಾರ ಕೊಡುತ್ತಿದ್ದ ದೇಶಿ ಜೋಳದ ತಳಿಗಳಾದ ಮಾಲದಂಡಿ, ಭಗವತಿ, ಭೋಗಾಪುರ, ಮುತ್ತಿನದಂಡೆ, ಹಳೆ ಮುಂಗಾರು, ಹೊಸ ಮುಂಗಾರು, ಯಕ್ಕರನಾಳ, ಗಿಡ್ಡಜೋಳ, ಅರಳುಜೋಳ, ಕೆಂಪುಜೋಳ, ಕಡುಬಿನ ಜೋಳ,..ಇತ್ಯಾದಿ ಬೀಜಗಳು ಈ ಹಿಂದೆ ಬಳಕೆಯಲ್ಲಿದ್ದವು.

ಆದರೆ, ಈಗ ಕೆಲವೇ ಬೀಜದ ತಳಿಗಳು ಉಳಿದಿದ್ದು ಎರೆ ಭಾಗದಲ್ಲಿ ಕಾಣುವುದು ಮಾಲದಂಡಿ, ಬಸವನ ಮೋತಿ ಜೋಳದ ತಳಿಗಳಾದರೆ ಮಸಾರಿ ಜಮೀನಿನಲ್ಲಿ ಗಿಡ್ಡಜೋಳ, ಎಕ್ಕರನಾಳ ಕಾಣುತ್ತವೆ. ಇನ್ನು ಅಲ್ಲೊಂದು ಇಲ್ಲೊಂದು ಜಮೀನುಗಳಲ್ಲಿ ರೈತರು ಆಸಕ್ತಿಯಿಂದ ಕೆಂಪುಜೋಳ ಹಾಗೂ ಕಡುಬಿನ ಜೋಳ, ಅರಳುಜೋಳ ಬೆಳೆದಿರುತ್ತಾರೆ. ಸುಮಾರು ಎಂಟು ಅಡಿಗಳಷ್ಟು ಬೆಳೆ ಬೆಳೆದು ಕೈ ಹಿಡಿಗೆ ಹಿಡಿಯಲಾರದಷ್ಟು ದೊಡ್ಡ ಗಾತ್ರದ ತೆನೆಗಳನ್ನು ಬೆಳೆಯುತ್ತಿದ್ದ ಭಗವತಿ ಜೋಳದ ತಳಿಗಳು ಈಗ ಅಳಿದು ಹೋಗಿ ಮೂರು ದಶಕಗಳಾದರೆ ಸಾಕಷ್ಟು ಪೋಷಕಾಂಶ ಹೊಂದಿದ್ದ ಮಕ್ಕರ ಜೋಳದ ತಳಿ ರೊಟ್ಟಿಗಳು ರುಚಿಕರವಾಗುತ್ತಿಲ್ಲ ಎಂದು ಹೈಟೆಕ್ ಯುಗದ ರೈತರು ಮರತೇಬಿಟ್ಟರು. ಇನ್ನು ಕೆಲವೊಂದು ತಳಿಗಳು ಕೊಂಚ ದೀರ್ಘ ಅವಧಿಯ ಬೆಳೆಗಳಾದ್ದರಿಂದ ಕ್ರಮೇಣ ಮರೆಯಾದವು. ಅವುಗಳ ಲಾಭಾಂಶ ಕೂಡ ಬೆಳೆಗಾರರನ್ನು ಹಿಡಿದಿಟ್ಟುಕೊಳ್ಳಲಿಲ್ಲ.

ಇನ್ನೊಂದು ವಿಚಿತ್ರ ಅಂಶವೆಂದರೆ, ಎರೆ ಭೂಮಿಯಲ್ಲಿ ಹೆಸರುವಾಸಿಯಾಗಿ ರೈತರ ಬದುಕಿನ ಜೋಳದ ಬೆಳೆಯಾಗಿದ್ದ ಮುತ್ತಿನದಂಡೆ ತಳಿ ಹಲವಾರು ಬೀಜಗಳೊಂದಿಗೆ ಕಲಬೆರಕೆಯಾಗಿದ್ದು ಬಿತ್ತಿದರೆ ಅದೀಗ ಮರುಹುಟ್ಟು ಪಡೆಯಬಹುದೆ ಎಂಬ ಸಂದೇಹ ರೈತರಲ್ಲಿದೆ. ಮೂರು ವರ್ಷದ ಹಿಂದೆ ಎರೆ ಭೂಮಿಯಲ್ಲಿ ಹಿಂಗಾರು ಬಿತ್ತನೆ ಮಾಡಿದ್ದ ಮುತ್ತಿನದಂಡೆ ತಳಿ ಬಹುತೇಕ ಜಮೀನುಗಳಲ್ಲಿ ಮೊಳಕೆಯೊಡೆಯಲಿಲ್ಲ. ಇನ್ನು ಕೆಲವೆಡೆ ಬೆಳೆದ ಬೆಳೆಯಲ್ಲಿ ತೆನೆ ಬಿಡಲಿಲ್ಲ, ತೆನೆ ಬಿಟ್ಟ ಕೆಲವೆಡೆ ಬೆಳೆಗಳಲ್ಲಿ ಕಾಳು ಕಟ್ಟಲಿಲ್ಲ. ಹೀಗಾಗಿ ಜನ ಈ ತಳಿಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಮುತ್ತಿನದಂಡೆಯನ್ನೇ ಹೋಲುವ ಹೈಬ್ರಿಡ್ ಜೋಳದ ತಳಿಯೊಂದು ಈ ಭಾಗದಲ್ಲಿ ಬಂದಿದ್ದು ಅದು ಮರುಹುಟ್ಟು ಪಡೆಯದ ಬೀಜವಾಗಿರುವುದೇ ಬೀಜ ಕಲಬೆರಕೆಯಾಗಲು ಕಾರಣವಾಗಿದೆ.

ಆದರೆ, ಕೆಲ ರೈತರು ಅದೇ ಬೀಜವನ್ನು ದೇಶಿ ತಳಿ ಮುತ್ತಿನದಂಡೆ ಬೀಜ ಎಂದು ಭಾವಿಸಿ ಮುಂದಿನ ಬಿತ್ತನೆಗೆಂದು ಸಂಗ್ರಹಿಸುತ್ತಾ ಬರುತ್ತಿರುವುದೇ ಬಿತ್ತಿದ ಬೀಜ ಮೊಳಕೆಯೊಡೆಯದೆ ಇರಲು ಕಾರಣವಾಗಿದೆ. ಇಂತಹ ಕಾರಣಗಳಿಂದಲೇ ಹಲವಾರು ತಳಿಗಳು ಕಾಣೆಯಾಗಿದ್ದು, ಉಳಿದ ಕೆಲ ತಳಿಗಳನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ. ಅದರಲ್ಲಿ ಸದ್ಯ ಉತ್ತರ ಕರ್ನಾಟಕದಲ್ಲಿ ಮುಂಗಾರು ಬೆಳೆಯಾಗಿ ಎಕ್ಕರನಾಳ ಜೋಳ, ಕೆಂಪುಜೋಳ, ಅರಳುಜೋಳ, ಗಿಡ್ಡಜೋಳದ ತಳಿ ಬೆಳೆದರೆ ಹಿಂಗಾರು ಹಂಗಾಮಿನಲ್ಲಿ ಮಾಲದಂಡಿ, ಬಸವನಮೋತಿ ತಳಿಗಳನ್ನು ಬೆಳೆಯುತ್ತಾರೆ.

ಮಾಲದಂಡಿ ಜೋಳ

ಕೊಪ್ಪಳ, ಗದಗ ಭಾಗದಲ್ಲಿ ರೈತರು ಸಾಮೂಹಿಕವಾಗಿ ದೇಶಿ ತಳಿಯಾದ ಈ ಮಾಲದಂಡಿ ಜೋಳದ ಬೀಜವನ್ನು ಹಿಂಗಾರು ಬಿತ್ತನೆಗಾಗಿ ಬಳಸುತ್ತಾರೆ. ಈ ಬೀಜವನ್ನು ಆಶ್ಲೇಷ ಮಳೆಯಿಂದ ಹಸ್ತ ಮಳೆಯವರೆಗೂ ಬಿತ್ತನೆ ಮಾಡಬಹುದಾಗಿದೆ. ನಂತರದ ದಿನಗಳಲ್ಲಿ ಬಿತ್ತನೆ ಮಾಡಿದರೂ ಬೆಳೆ ಬರುತ್ತದೆ, ಆದರೆ ನಿರೀಕ್ಷಿತ ಫಸಲು ದಕ್ಕುವುದಿಲ್ಲ.

ಸುಮಾರು ನಾಲ್ಕು ತಿಂಗಳಲ್ಲಿ ಕೊಯ್ಲಾಗುವ ಈ ಬೆಳೆಯನ್ನು ಬಿಳಿಜೋಳ ಎಂತಲೂ ಕರೆಯುತ್ತಾರೆ. ಸುಮಾರು ಐದರಿಂದ ಆರು ಅಡಿ ಎತ್ತರದವರೆಗೆ ಬೆಳೆಯುವ ಬೆಳೆ ದುಂಡಗೆ ತೆನೆಯನ್ನು ಹೊಂದಿ ಬೆಳಗಿನ ಹಾಗೂ ಸಾಂಯಕಾಲದ ಬಿಸಿಲಿಗೆ ಕಣ್ಣು ಕುಕ್ಕುವ ಹಾಗೆ ಫಳಫಳ ಹೊಳೆಯುವ ಕಾಳು ಹೊಂದಿರುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ ಜಾನುವಾರುಗಳ ಬಾಯಿಗೆ ಇದರ ಮೇವು ಸಿಹಿ ರುಚಿ ನೀಡುವುದರಿಂದ ದನಗಳು ಹೊಟ್ಟೆ ತುಂಬ ತಿನ್ನುತ್ತವೆ. ಈ ತನೆಗಳು ಮುತ್ತಿನನಿಂದ ಪೋಣಿಸಿದಂತೆ ಕಾಣುವುದರಿಂದ ರೈತರು ಇದನ್ನು ಮಾಲದಂಡಿ ಎಂದಿರಬಹುದು.

ಮಾಲದಂಡಿಯ ವಿವಿಧ ಖಾದ್ಯ: ಈ ಜೋಳವನ್ನು ಬಹುತೇಕ ರೊಟ್ಟಿ ಮಾಡಲು ಬಳಸುತ್ತಾರೆ. ಅತ್ಯಂತ ಬಿಳುಪು ಮತ್ತು ರುಚಿ ಹೊಂದಿರುವ ಈ ಜೋಳದ ಹಿಟ್ಟಿನಿಂದ ತಯಾರಾಗುವ ರೊಟ್ಟಿ ಉತ್ತರ ಕರ್ನಾಟಕದ ಅಡುಗೆ ಮನೆಗಳಲ್ಲಿ ಮನೆಮಾತಾಗಿವೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದಿಂದ ತಯಾರಾಗುವ ಮಾಲದಂಡಿ ಜೋಳದ ರೊಟ್ಟಿಗಳಿಗೆ ರಾಜ್ಯದ ವಿವಿಧ ಪಟ್ಟಣಗಳಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಕೂಡ ಉತ್ತಮ ಬೇಡಿಕೆ ಇದೆ. ಹಾಗಾಗಿ ಭಾಗ್ಯನಗರದ ನೂರಾರು ಕುಟುಂಬಗಳಿಗೆ ಉದ್ಯೋಗ ದೊರೆತಿದೆ.

ಜೊತೆಗೆ ಬಾನ, ಸಂಗಟಿ, ನುಚ್ಚು, ಮುದ್ದೆ, ಅರಳು,.. ಹೀಗೆ ವಿವಿಧ ಖಾದ್ಯಗಳನ್ನು ಈ ಮಾಲದಂಡಿ ಜೋಳದಿಂದ ತಯಾರಿಸುತ್ತಾರೆ. ಸಧ್ಯ ಬಹುತೇಕ ಎರೆ ಭೂಮಿಯ ರೈತರು ಉಡಿಯಲ್ಲಿ ಕಂಡುಬರುವ ಈ ಮಾಲದಂಡಿ ಇನ್ನೂ ಬಹುರಾಷ್ಟ್ರೀಯ ಕಂಪನಿಗಳ ಕಣ್ಣಿಗೆ ಬಿದ್ದಿಲ್ಲ. ರೈತರು ಈವರೆಗೆ ಈ ತಳಿ ಬೀಜಗಳನ್ನು ಕಾಪಾಡಿಕೊಂಡು ಬಂದಿರುವುದರಿಂದ ನೂರಾರು ವರ್ಷಗಳಷ್ಟು ಹಳೆಯದಾದ ಈ ತಳಿ ಮರುಹುಟ್ಟು ಪಡೆಯಬಲ್ಲ ದೇಶಿ ತಳಿಯಾಗಿದೆ.

ಅರಳು ಜೋಳ:

ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಮಸಾರಿ ಜಮೀನಿನ ಕಡೆ ಬಂದರೆ ಅಲ್ಲಿನ ಯಾವುದಾದರು ಒಂದು ಜೋಳದ ಹೊಲದಲ್ಲಿ ಎಲ್ಲ ಬೆಳೆಗಿಂತ ಎತ್ತರವಾಗಿ ಬೆಳೆದು ಬಿಡಿ-ಬಿಡಿಯಾಗಿ ತನೆಗಳನ್ನು ಹೊಂದಿರುವ ಜೋಳದ ಬೆಳೆಯೊಂದು ಕಾಣುತ್ತದೆ. ಅದನ್ನು ನೋಡಿದಾಗ ಎಲ್ಲ ಬೆಳೆಗಳು ಒಂದೇ ರೀತಿ ಎತ್ತರದಲ್ಲಿ ಬೆಳೆದಿರುವಾಗ ಈ ಬೆಳೆ ಮಾತ್ರ ಏಕೆ ಅತಿ ಎತ್ತರ ಬೆಳೆದಿದೆ ಎಂದು ಅಪರಿಚಿತರಿಗೆ ಅಚ್ಚರಿಯಾಗುತ್ತದೆ. ಆದರೆ, ಮುಂಗಾರು ಬೆಳೆಯಲ್ಲಿನ ಈ ತಳಿಯೇ ಬೇರೆ.

ರೋಹಿಣಿ ಮೃಗಶಿರ ಮಳೆಯಲ್ಲಿ ಮಸಾರಿ ಭಾಗದ ರೈತರು ಬಿತ್ತನೆ ಮಾಡುವ ಎಕ್ಕರನಾಳ ಜೋಳದ ಮುಖ್ಯ ಬೆಳೆಯಲ್ಲಿ ಇಂತಹ ಜೋಳದ ಬೀಜಗಳನ್ನು ಕೂರಿಗೆಯಲ್ಲಿ ಬೆರೆಸಿಕೊಂಡು ಬಿತ್ತನೆ ಮಾಡುತ್ತಾರೆ. ಹಿಂದಿನಿಂದಲೂ ಈ ಬೀಜದ ತಳಿಯನ್ನು ಅರಳುಜೋಳ ಎಂದೇ ಕರೆಯುತ್ತಿದ್ದಾರೆ. ಬೀಜಗಳು ಅರಳಿನಂತೆ ಬಿಳಿಯಾಗಿ, ದೊಡ್ಡದಾಗಿ ಹಾಗೂ ಹಗುರವಾಗಿರುವುದರಿಂದ ಪಂಚಮಿ ಹಬ್ಬದಲ್ಲಿ ಅರಳು ಹುರಿಯಲು ರೈತರು ಈ ಬೀಜಗಳನ್ನೇ ಬಳಸುತ್ತಾರೆ.

ಸುಮಾರು ಹತ್ತರಿಂದ ಹನ್ನೆರಡು ಅಡಿಗಳವರೆಗೆ ಎತ್ತರವಾಗಿ ಬೆಳೆಯುವ ಈ ಬೆಳೆ ನಾಲ್ಕೂವರೆ ತಿಂಗಳಿಗೆ ಕೊಯ್ಲಿಗೆ ಬರುತ್ತದೆ. ಅಂದರೆ; ಎಕ್ಕರನಾಳ ಜೋಳ ಕೊಯ್ಲಾದ ನಂತರ ಇಪ್ಪತ್ತು ದಿನಗಳಲ್ಲಿ ಈ ಜೋಳದ ಕೊಯ್ಲು ಮಾಡಿ ಪ್ರತ್ಯೇಕ ಗೂಡು ಹಾಕಿ ರಾಶಿ ಮಾಡುತ್ತಾರೆ. ಈ ಜೋಳದ ಬೀಜಗಳು ಹಗುರವಾಗಿರುವುದರಿಂದ ಹಿಂದಿನಿಂದಲೂ ಇದನ್ನು ಮುಖ್ಯ ಆಹಾರ ಬೆಳೆಯಾಗಿ ಬೆಳೆಯುವುದರ ಬದಲಿಗೆ ಕೇವಲ ಅರಳು ಮಾಡುವ ಉದ್ದೇಶದಿಂದಲೇ ಬೆಳೆಯುತ್ತಿದ್ದಾರೆ. ಹಾಗೆ ನೋಡಿದರೆ ಎತ್ತರವಾಗಿ ಬೆಳೆಯುವ ಈ ಬೆಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮೇವು ದೊರೆಯುತ್ತದೆ.

ಕೆಂಜೋಳ

ಕೆಂಪುಜೋಳ: 

ಕೆಂಪುಜೋಳ, ಕೆಂಜೋಳ, ಕಡುಬಿನ ಜೋಳ ಎಂದೆಲ್ಲ ಕರೆಯುವ ಈ ಕೆಂಪು ಜೋಳ ತನ್ನೊಳಗೆ ಪೋಷಕಾಂಶಗಳನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಉತ್ತರಕರ್ನಾಟಕದ ಭಾಗದಲ್ಲಿ ಈ ಬೀಜಗಳನ್ನು ಆಯುರ್ವೇದ ಔಷಧಿಯಾಗಿ ಕೂಡ ಬಳಸುತ್ತಾರೆ. ವಿಶೇಷವಾಗಿ ಈ ಜೋಳದ ದಂಟಿಗಾಗಲೀ, ತೆನೆಗಾಗಲೀ ಯಾವುದೇ ರೋಗ-ರುಜಿನ ಬರುವುದೇ ಇಲ್ಲ. ಅಂತಹ ವೈಶಿಷ್ಟ್ಯ ಈ ಕೆಂಪು ಜೋಳದ್ದು. ಆಶ್ಲೇಷ ಹಾಗೂ ಮಾಘ ಮಳೆಯಲ್ಲಿ ಬಿತ್ತನೆಯಾಗುವ ಈ ಜೋಳದ ಬೆಳೆ ತೆನೆ ಬಿಟ್ಟಾಗ ಕಡುಕೆಂಪು ಬಣ್ಣದಿಂದ ಕೂಡಿದ್ದು ಗಮನಸೆಳೆಯುತ್ತದೆ.

ಈ ಜೋಳದಿಂದ ಮುಖ್ಯವಾಗಿ ಹಬ್ಬ-ಹುಣ್ಣಿಮೆಗಳಲ್ಲಿ ಎಳ್ಳು ಹಚ್ಚಿದ ರೊಟ್ಟಿ, ಕಡುಬು, ಪಡ್ಡು, ದೋಸೆ, ಸಂಗಟಿ, ಮುದ್ದೆ ಮುಂತಾದ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಸಂಪೂರ್ಣ ಹೊಲಕ್ಕೆ ಬಿತ್ತುವ ಬದಲಾಗಿ ಹೊಲದ ಉಡಿಸಾಲು, ಮೇರೆ, ಅಕ್ಕಡಿ ಸಾಲುಗಳಲ್ಲಿ ಇತರ ಧಾನ್ಯಗಳೊಂದಿಗೆ ಬೆರಸಿ ಬಿತ್ತುತ್ತಾರೆ. ತೆನೆ ಸಣ್ಣದು ಹಾಗೂ ಇದರ ಹಿಟ್ಟು ಭಾರೀ ಜಿಗಿ ಹೊಂದುವ ಕಾರಣ ಇದರ ಹಿಟ್ಟನ್ನು ತಿಕ್ಕಿ ರೊಟ್ಟಿ ಬಡಿಯಲು ರಟ್ಟಿ ಗಟ್ಟಿ ಇದ್ದವರೇ ಬೇಕು. ಈ ಕಾರಣಗಳಿಂದ ಹೊಲದಲ್ಲಿ ಸ್ವಲ್ಪ ಭಾಗ ಮಾತ್ರ ಬಿತ್ತುತ್ತಾರೆ. “ಹರೆದು ಹುಡುಗ ಕೆಂಜೋಳದ ರೊಟ್ಟಿಗೆ ಖಾರ ಮೆಣಸಿನ ಚಟ್ನಿ ಸವರಿ ತಿಂದ್ರ ಕಂಚಾಣದ ಹೋರಿಯಂಗ ಜಟ್ಟಿಗನಾಗತಾನ” ಎಂಬಂತಹ ನುಡಿಗಟ್ಟು ಉತ್ತರಕರ್ನಾಟಕ ಭಾಗದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಆದರೆ, ಕೆಂಜೋಳದ ಹಿಟ್ಟನ್ನು ತಟ್ಟಿ ರೊಟ್ಟಿ ಮಾಡಿಕೊಡುವ ಗಟ್ಟಿ ರಟ್ಟೆಯ ಹೆಂಗಳೆಯರು ಈಗೆಲ್ಲಿ? ಹೇಳಿ!

ಮಾರುಕಟ್ಟೆಯಲ್ಲಿ ಈ ಜೋಳದ ಬೀಜಗಳು ಸಿಗುವುದಿಲ್ಲ. ಬೆಳೆ ಕೂಡ ಅಧಿಕ ಅವಧಿಯದ್ದು. ಹಾಗಾಗಿ ಇಂತಹ ವಿವಿಧ ಕಾರಣಗಳಿಂದ ಈ ತಳಿಯೇ ಮಾಯವಾಗುವ ಸ್ಥಿತಿಯಲ್ಲಿದೆ. ಇನ್ನೂ ಅಲ್ಲಲ್ಲಿ ಉಳಿದುಕೊಂಡಿರುವ ಬೀಜಗಳನ್ನು ಪತ್ತೆ ಮಾಡಿ ಅಭಿವೃದ್ಧಿಪಡಿಸಿದರೆ ನಾಳೆ ಮತ್ತೆ ಕೆಂಜೋಳ ತಿಂದ ಜಟ್ಟಿಗರನ್ನು ಕಾಣಬಹುದೇನೋ?!

ಗಿಡ್ಡಜೋಳ:

ತಿದ್ದಿ ತೀಡಿದ ಹಾಗಿದ್ದ ತೆನೆಗಳಲ್ಲಿ ಮುತ್ತು ಪೋಣಿಸಿದಂತಹ ಕಾಳುಗಳು, ಅಗಲವಾದ ಗರಿ ಹೊಂದಿ ಗಿಡ್ಡದಾಗಿ ಬೆಳೆಯುವ ಈ ತಳಿಯ ಸಸಿಯ ದಂಟು ದಟ್ಟ ಹಸಿರಿನಿಂದ ಕಂಗೊಳಿಸುತ್ತದೆ. ಆಶ್ಲೇಷ ಹಾಗೂ ಮಾಘ ಮಳೆಯಲ್ಲಿ ಬಿತ್ತನೆ ಮಾಡುವ ಈ ಮುಂಗಾರು ಬೆಳೆ ಹಳೆಯ ದೇಶಿ ಜೋಳದ ತಳಿಗಳಲ್ಲಿ ಒಂದು. ಈ ಗಿಡ್ಡ ಜೋಳ ಬಿಳಿಜೋಳವನ್ನೇ ಹೋಲುತ್ತಿದ್ದರೂ ಇದನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವುದು ವಿಶೇಷ. ಗಟ್ಟಿ ಬೀಜ, ರುಚಿಯಲ್ಲಿ ಸಿಹಿ ಹೊಂದಿ ಸಾಕಷ್ಟು ಪೋಷಕಾಂಶಗಳ ಕಣಜವಾಗಿರುವ ಇದರ ಮೇವು ದನಗಳಿಗಂತೂ ಅತಿ ಪ್ರಿಯ.

ಅಷ್ಟೊಂದು ಉದ್ದವಲ್ಲದ ಹಾಗೂ ದಪ್ಪ ಕಾಂಡ ಹೊಂದಿರದ ಈ ತಳಿಯ ತೆನೆ ಮಾತ್ರ ಸಾಮಾನ್ಯ ತೆನೆಗಳಿಗಿಂತ ದೊಡ್ಡವು. ಜೊತೆಗೆ ಆರೋಗ್ಯಯುತ ತೆನೆಗಳಲ್ಲಿನ ಗೊಣಸಾದ ಕಾಳುಗಳು ಯಾವುದೇ ರೋಗಬಾಧೆ ತಟ್ಟಿಲ್ಲವೆಂಬುದನ್ನು ಸಾರಿ ಹೇಳುತ್ತವೆ. ಕೊಪ್ಪಳ ಜಿಲ್ಲೆಯ ಹಿರೇಅರಳಹಳ್ಳಿ, ಕೊರಡಕೇರಾ, ನೆರೆಬೆಂಚಿ, ಮಾಟರಂಗಿ, ಕೊನಸಾಗರ, ದೋಟಿಹಾಳ,.. ಹೀಗೆ ಜಿಲ್ಲೆಯ ಬಹುತೇಕ ಹೊಲಗಳಲ್ಲೀಗ ಗಿಡ್ಡ ಜೋಳ ಬೆಳೆ ಬೆಳೆಯುತ್ತಾರೆ.

ಗಿಡ್ಡಜೋಳದ ತೆನೆ

ಬಸವನಮೋತಿ:

ಉತ್ತರಕರ್ನಾಟಕದ ಗುಲ್ಬರ್ಗಾ, ಯಾದಗೀರ ಹಾಗೂ ಬೀದರ್ ಭಾಗದಲ್ಲಿ ಹಿಂಗಾರು ಬೆಳೆಯಾಗಿ ಬೆಳೆಯುವ ಈ ಜೋಳ ಆ ಪ್ರದೇಶದ ಮುಖ್ಯ ಆಹಾರ ಬೆಳೆಯಾಗಿದೆ. ದುಂಡಗೆ ಬುಗುರಿಯಂತೆ ಕಾಣುವ ಇದರ ತೆನೆಗಳಲ್ಲಿನ ಬೀಜಗಳು ಮುತ್ತಿನ ಹಾಗೆ ಕಾಣುತ್ತವೆ. ದೇಶಿ ತಳಿಗಳಲ್ಲಿ ಒಂದಾಗಿರುವ ಈ ಬೆಳೆಯ ತೆನೆಗಳು ಬಸವನ ಮೋತಿ ಹಾಗೆ ಕಾಣುವುದರಿಂದ ಬಸವನಮೋತಿ ಜೋಳ ಎಂದು ಹೆಸರು ಪಡೆದಿದೆ.

ಈ ಎಲ್ಲ ತಳಿಗಳು ಇನ್ನೂ ಉತ್ತರ ಕರ್ನಾಟಕದ ಭಾಗದಲ್ಲಿ ಇರುವುದರಿಂದಾಗಿ ಈ ಭಾಗದ ಬಹುತೇಕ ರೈತರು ಕೈತುಂಬ ಹಣ ಹಿಡಿದುಕೊಂಡು ಜೋಳದ ಬೀಜಕ್ಕಾಗಿ ಬೀಜದ ಅಂಗಡಿಗಳ ಮುಂದೆ ಸಾಲುಗಟ್ಟುವುದಿಲ್ಲ. ಬದಲಾಗಿ ಹಿಂದಿನ ವರ್ಷದ ಬೆಳೆಯ ಆರೋಗ್ಯಕರ ದೊಡ್ಡ ತೆನೆಗಳನ್ನು ಆಯ್ದು ಪ್ರತ್ಯೇಕ ರಾಶಿ ಮಾಡಿ ಬಿತ್ತನೆ ಬೀಜಕ್ಕಾಗಿ ಸಂಗ್ರಹಿಸುತ್ತಾರೆ. ಅಲ್ಲದೆ ಬಿತ್ತನೆ ಸಮಯದಲ್ಲಿ ಗಿಡ್ಡಜೋಳದ ಬೀಜಗಳನ್ನು ಉಳಿದ ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಮನೆ- ಮನೆಗಳಲ್ಲೂ ಪರಸ್ಪರ ಬೀಜ ವ್ಯವಹಾರ ಮಾಡಿ ರಾಸಾಯನಿಕ ಗೊಬ್ಬರ ಬಯಸದ ಹಾಗೂ ರೋಗರಹಿತವಾದ ಈ ಜವಾರಿ ಜೋಳದ ಬೀಜದ ತಳಿ ಬಿತ್ತಿ ಉತ್ತಮ ಇಳವರಿ ಪಡೆಯುತ್ತಾರೆ.