ಹರಿಜನರ ಒಟ್ಟು ಕುಟುಂಬಗಳು ೧೨೬. ಅವರಲ್ಲಿ ಎರಡು ಮುಖ್ಯ ಬೆಡಗುಗಳಿವೆ – ಮಳಲೇರು ಮತ್ತು ಡಣಲೇರು. ಮಳಲೇರು ಬೆಡಗಿನವರ ಸಂಖ್ಯೆ ಹೆಚ್ಚಿದೆ. ಸುಮಾರು ೬೦ ಕುಟುಂಬಗಳಿರಬಹುದು. ೨೦ ಕುಟುಂಬಗಳು ಡಣಲೇರು ಬೆಡಗಿನವರದ್ದು. ಉಳಿದದ್ದು ಇತರ ಹರಿಜನರದ್ದು. ಇತರ ಹರಿಜನ ರೂಪುಗೊಳ್ಳುವಿಕೆ ತುಂಬಾ ಕುತೂಹಲಕಾರಿ. ಐವತ್ತರ ದಶಕದಿಂದಲೂ ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗ್ ಹಳ್ಳಿಯ ಸರಹದ್ದಿನಲ್ಲಿ ನಡೆಯುತ್ತಿದೆ. ನೆರೆಯ ಆಂಧ್ರದ ಶೋಷಿತ ವರ್ಗಕ್ಕೆ ಬಿಡುಗಡೆ ಪಡೆಯಲು ಕರ್ನಾಟಕದ ಈ ಹಳ್ಳಿಗಳು ಉತ್ತಮ ತಾಣಗಳಾಗಿವೆ. ತಮ್ಮ ಊರು ಬಿಟ್ಟು ಓಡಿ ಬಂದವರಿಗೆ ಇಲ್ಲಿನ ಹಳ್ಳಿಗಳ ಆದಾಯದ ಹೊಸ ಮೂಲವನ್ನಿತ್ತಿವೆ, ಹೊಸ ಬದುಕನ್ನಿತ್ತಿವೆ. ಹಾಗೆ ಬಂದವರು ಮತ್ತು ಬರುವವರು ತಮ್ಮ ಹೊಸ ಜೀವನ ಆರಂಭಿಸುವುದೇ ರೈಲ್ವೆ ನಿಲ್ದಾಣ ಪಕ್ಕದ ಜೋಪಡಿಗಳಲ್ಲಿ. ಜೋಪಡಿಗಳನ್ನು ಬಾಡಿಗೆಗೆ ಕೊಡುವಷ್ಟರ ಮಟ್ಟಿಗೆ ಈ ಕ್ರಮ ಬೆಳೆದಿದೆ. ಪೇಟೆ ಪಟ್ಟಣಗಳಲ್ಲಿ ಜೋಪಡಿ ಜೀವನ ಒಂದು ಸಾಮಾನ್ಯ ವಿಷಯ. ಇಡೀ ನಗರದ ಶ್ರಮಿಕ ವರ್ಗ ಇರುವುದೇ ಈ ಜೋಪಡಿಗಳಲ್ಲಿ.[1] ಅವರ ಶ್ರಮವನ್ನು ಹೊರತುಪಡಿಸಿ ಆ ನಗರಗಳು ಒಂದು ದಿನ ಕೂಡ ಉಸಿರಾಡುವುದು ಕಷ್ಟ. ನಗರಗಳಿಗೆ ಉಸಿರು ಕೊಡುವ ಜನರಿಗೇ ಉಸಿರಾಡುವಷ್ಟು ಜಾಗ ಇಲ್ಲದಿರುವುದು ನಮ್ಮ ಉದಾತ್ತ ಸಂಸ್ಕೃತಿಯ ಒಂದು ದೊಡ್ಡ ವಿಪರ್ಯಾಸ. ಈ ದೃಷ್ಟಿಯಿಂದ ನಗರದ ಜೋಪಡಿಗಳು ನಮ್ಮ ಶತಮಾನದ ಊರು ಮತ್ತು ಕೇರಿ ಸಂಸ್ಕೃತಿಯ ಮುಂದುವರಿಕೆಯೇ ಅಲ್ಲವೇ? ಇಲ್ಲೂ ಹಾಗೆ ಊರ ಹೊಲಗಳಲ್ಲಿ ದುಡಿಯುವ, ಸುತ್ತಲಿನ ಗಣಿಗಳಲ್ಲಿ ದುಡಿಯುವ ಊರಿನ ಎಲ್ಲರಿಗೂ ಶ್ರಮ ಒದಗಿಸುವವರು ಊರಿಂದ ಹೊರಗೆ. ಒಂದು ಕಡೆಯಿಂದ ವಲಸಿಗರ ಸಂಖ್ಯೆ ಹೆಚ್ಚಾದಂತೆ ಜೋಪಡಿ ಪಟ್ಟಿಗಳ ಸಂಖ್ಯೆ ಹೆಚ್ಚಾಗಿ ಅದು ಹರಿಜನ ಕೇರಿಯತ್ತ ಮತ್ತು ಊರಿನತ್ತ ಬೆಳೆಯತೊಡಗಿತ್ತು. ಇನ್ನೊಂದು ಕಡೆಯಿಂದ ಹರಿಜನ ಕೇರಿ ಬೆಳೆಯುತ್ತಾ ರೈಲ್ವೆ ನಿಲ್ದಾಣದತ್ತ ಮುಂದುವರಿಯುತ್ತಿದೆ. ಈಗ ಇವುಗಳ ಸಂಧಿಸಿವೆ. ಅವುಗಳು ಕೇವಲ ಪ್ರಾದೇಶಿಕವಾಗಿ ಮಾತ್ರ ಸಂಧಿಸಿರುವುದಲ್ಲ; ಸಾಮಾಜಿಕವಾಗಿಯೂ ಸಂಧಿಸಿವೆ. ತಮ್ಮ ಊರುಗಳನ್ನು ಶಾಶ್ವತವಾಗಿ ಬಿಟ್ಟಯ ಬಂದವರು ಇಲ್ಲಿನ ಹರಿಜನ ಮತ್ತು ಕೆಳ ಜಾತಿಯವರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾರೆ. ಬರುವಾಗ ಅವರ ಜಾತಿ, ಒಳಪಂಗಡ ಯಾವುದಿತ್ತೋ ಏನೋ. ಹೊಸ ಸಂಬಂಧದೊಂದಿಗೆ ಸ್ಥಳೀಯ ಸಾಮಾಜಿಕ ಚೌಕಟ್ಟಿನೊಳಗೆ ಸೇರ್ಪಡೆಯಾದರು. ಇಂದು ಊರಲ್ಲಿ ಅತೀ ಹೆಚ್ಚು ಕುಟುಂಬಗಳಿರುವ ಎರಡು ಸಮುದಾಯಗಳೆಂದರೆ ನಾಯಕರು ಮತ್ತು ಹರಿಜನರದ್ದು.

ಹರಿಜನ ಕೇರಿಯ ನಾಯಕತ್ವ ಈಗ ಮಳಲೇರು ಬೆಡಗಿನವರದ್ದು. ಈಗ ನಾಯಕರಾಗಿರುವವರ ತಂದೆ ಸಣ್ಣ ಹನುಮಂತಪ್ಪ ಹರಿಜನರಲ್ಲಿ ಗಣ್ಯ ವ್ಯಕ್ತಿ. ಒಂದು ಕಾಲದಲ್ಲಿ ೬೦ ಎಕರೆ ಭೂಮಿ ಇತ್ತು. ೧೯೫೮ ರಿಂದ ೧೯೭೮ರವರೆಗೆ ಪಂಚಾಯತ್ ವೈಸ್ ಚೇರ್‌ಮೆನ್ ಆಗಿದ್ದರು. ಅಂದರೆ ಮೇಟಿ ಚಂದ್ರಶೇಖರಪ್ಪನವರು ಚೇರ್‌ಮೆನ್ ಆಗಿದ್ದಾಗ ಇವರು ವೈಸ್ ಚೇರ್‌ಮೆನ್, ಇವರ ಇಬ್ಬರು ಮಕ್ಕಳು ಹರಿಜನ ಕೇರಿಯ ರಾಜಕೀಯದಲ್ಲಿ ಇಂದು ಸಕ್ರಿಯವಾಗಿದ್ದಾರೆ. ಇವರ ಮನೆಗಳು ಅಂಬೇಡ್ಕರ್ ಶಾಲೆಯ ಹಿಂದಿನಿಂದ ಎರಡನೇ ಸಾಲಿನಲ್ಲಿ ಬರುತ್ತವೆ. ಕೇರಿಯ ಇತರ ಮನೆಗಳಿಗೆ ಹೋಲಿಸಿದರೆ ನಾಯಕರ ಮನೆಗಳು ದೊಡ್ಡದಿವೆ. ಇಡೀ ಕೇರಿಯಲ್ಲಿ ಮನೆಯೊಳಗೆ ನೀರಿನ ಪೈಪ್ ಇರುವ ಮೂರೋ ನಾಲ್ಕೋ ಮನೆಗಳಿವೆ. ಅದರಲ್ಲಿ ಎರಡು ಮನೆಗಳೂ ನಾಯಕರದ್ದೇ. ಆದರೆ ಹಿಂದಿನ ಭೂಮಿ ಇಲ್ಲ. ಬಾವಿ ತೋಡಿಸುವುದಕ್ಕಾಗಿ ಸಾಲ ಮಾಡಿ ಭೂಮಿ ಸಾಲಗಾರರ ಪಾಲಾಯಿತೆಂದು ಮಕ್ಕಳ ಅಂಬೋಣ. ಈಗ ಆರೇಳು ಎಕರೆ ಪಟ್ಟಾ ಭೂಮಿ ಮತ್ತು ಅಷ್ಟೇ ಪ್ರಮಾಣದ ಒತ್ತುವರಿ ಭೂಮಿಯ ಒಡೆಯರು ಇವರು. ಇವರ ತಂದೆಯವರ ಯಜಮಾನಿಕೆಗೆ ಮುನ್ನ ಮಳಲೇರು ಪೈಕಿಯ ಪಕೀರಪ್ಪ ಎನ್ನುವವರು ಹರಿಜನರ ಪ್ರಶ್ನಾತೀತ ಗುರಿಕಾರ. ‘ಅವರ ಅಧಿಕಾರ ವಿಪರೀತವಾಗಿತ್ತು. ಮದುವೆ ಮತ್ತು ಇತರ ಆಚರಣೆಗಳಲ್ಲಿ ಅವರದ್ದೇ ನಾಯಕತ್ವ. ಅಧಿಕಾರ ದುರುಪಯೋಗ ಮಾಡಿಕೊಂಡು ಇಡಿ ಹರಿಜನ ಕೇರಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಅವರ ತಾಳಕ್ಕೆ ತಕ್ಕಂತೆ ಇತರರು ಕುಣಿಯಬೇಕು. ಅವರು ತೋರಿಸುವ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕು. ಅಂತಹ ವಿಪರೀತ ಸರ್ವಾಧಿಕಾರಿ ಆತ, ‘ಈಗಿನ ನಾಯಕರು ಪಕೀರಪ್ಪನವರನ್ನು ಬಣ್ಣಿಸಿದ್ದು ಹೀಗೆ. ಅವರು ಮುಂದುವರಿಸಿ,’ ಅದನ್ನು ಸಹಿಸದ ಕೇರಿಯವರು ವೈಸ್ ಚೇರ್‌ಮೆನ್ (ಆ ಘಟನೆ ನಡೆಯುವ ಸಂದರ್ಭದಲ್ಲಿ ಸಣ್ಣ ಹನುಮಂತಪ್ಪನವರು ವೈಸ್ ಚೇರ್‌ಮೆನ್ ಆಗಿದ್ದಾರೋ ಇಲ್ಲವೋ ಎಂದು ಖಾತ್ರಿ ಇಲ್ಲ) ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು.’ ಪ್ರತಿಭಟಿಸಿದವರಿಗೆ ಆಗ ಯಜಮಾನಿಕೆಯಲ್ಲಿದ್ದ ಲಿಂಗಾಯತರ ಜತೆ ಸಂಪರ್ಕವೂ ಇತ್ತು. ಇವರೆಲ್ಲಾ ಸೇರಿ ಪಕೀರಪ್ಪನ ಯಜಮಾನಿಕೆಯನ್ನು ಕೊನೆಗಾಣಿಸಿದರು.

ಮಳಲೇರು ಪಂಗಡದವರ ಈಗಿನ ನಾಯಕತ್ವ ಪ್ರಶ್ನಾತೀತವಲ್ಲ. ಹರಿಜನರಲ್ಲೇ ಹಲವಾರು ಮಂದಿಗೆ ಇವರ ಬಗ್ಗೆ ಅಸಮಾಧಾನವಿದೆ. ಕೇರಿಗೆ ಬರುವ ಅಧಿಕಾರಿಗಳು ಈ ನಾಯಕರಲ್ಲೇ ಮಾತಾಡಿಸಿ ಹೋಗುತ್ತಾರೆ; ಉಳಿದವರ ಅಭಿಪ್ರಾಯ ಏನೆಂದು ತಿಳಿಯಲು ಪ್ರಯತ್ನಿಸುವುದಿಲ್ಲ. ಇವರೆಂದರೆ ಇಡೀ ಕೇರಿ ಎಂದು ತಿಳಿದುಕೊಳ್ಳುವ ಹೊರಗಿನವರ ಬಗೆಗೆ ಕೇರಿಯ ಇತರರಿಗೆ ಅಸಮಾಧಾನವಿದೆ. ಸರಕಾರದಿಂದ ಬರುವ ಅಭಿವೃದ್ಧಿ ಲಾಭಗಳು ಇವರ ಮೂಲಕವೆ ಹಾದು ಬರುವ ಸಂದರ್ಭಗಳಿವೆ. ತಕ್ಷಣಕ್ಕೆ ಅವರಿಗೆ ಸಿಕ್ಕ ಉದಾಹರಣೆ ಎಂದರೆ ಬಳ್ಳಾರಿ ಕ್ಷೇತ್ರದ ಮರು ಚುನಾವಣೆಯ ಹಿಂದಿನ ದಿನ ಹಂಚಲಾದ ಸಾರಾಯಿ ಪ್ಯಾಕೆಟ್. ದೂರಿಕೊಂಡವರ ಪ್ರಕಾರ ಸುಮಾರು ೩೦೦ ಸಾರಯಿ ಪ್ಯಾಕೆಟ್ ಕೇರಿಯಲ್ಲಿ ಹಂಚಲೆಂದು ನಾಯಕರಲ್ಲಿ ಕೊಡಲಾಯಿತು. ಆದರೆ ಇದರ ಅರ್ಧ ಭಾಗ ಕೂಡ ಹಂಚಿಲ್ಲವೆಂದು ಅವರ ದೂರು. ಹಂಚುವ ಜವಾಬ್ದಾರಿ ತೆಗೆದುಕೊಂಡವರ ಪ್ರಕಾರ (ನಾಯಕರ ಗುಂಪಿಗೆ ಸೇರಿದವರು) ಸಿಕ್ಕಿರುವುದು ಕೇವಲ ೧೦೦ ಪ್ಯಾಕೆಟ್. ಅದು ಇಡಿ ಕೇರಿಗೆ ಹಂಚಲು ಸಾಕಾಗುವುದಿಲ್ಲ. ಅದನ್ನು ಎಲ್ಲರಿಗೂ ಹಂಚುತ್ತಾ ಹೋದರೆ ಅನಗತ್ಯ ಬೈಗುಳ ತನ್ನಬೇಕಾದೀತೆಂದು ಪ್ಯಾಕೆಟ್ ಪಡಕೊಂಡ ವ್ಯಕ್ತಿ ಒಂದೆರಡು ಪ್ಯಾಕೆಟ್ ಜೇಬಿಗೆ ಸೇರಿಸಿ ಉಳಿದುದನ್ನು ತನ್ನ ಮನೆಯ ಜಗಲಿಯಲ್ಲೇ ವ್ಯಕ್ತಿ ಒಂದೆರಡು ಪ್ಯಾಕೆಟ್‌ಗಳಿಗೆ ನೂಕುನುಗ್ಗಲು ಶುರುವಾಯಿತು; ಕೆಲವರಿಗೆ ಸಿಕ್ಕಿದರೆ ಇನ್ನು ಕೆಲವರಿಗೆ ಸಿಗಲಿಲ್ಲ. ಇದರಿಂದ ಕೋಪಗೊಂಡ ಒಬ್ಬಾತ, ನನಗೆ ಸಿಗದಿದ್ದರೆ ಯಾರಿಗೂ ಸಿಗಬಾರದೆಂದು, ಪ್ಯಾಕೆಟ್‌ಗಳಿರುವ ಚೀಲವನ್ನು ಎತ್ತಿ ಅಂಗಳದಲ್ಲಿರುವ ಬಂಡೆಗೆ ಒಗೆದ. ಇದು ನಡೆದ ಘಟನೆ ಎಂದು ನಾಯಕರ ಗುಂಪಿಗೆ ಸೇರಿದವರ ಪ್ರತಿಕ್ರಿಯೆ. ಹರಿಜನ ಪ್ರತಿನಿಧಿಯ ಕುರಿತು ಇದೇ ರೀತಿಯ ದೂರು. ಆತ, ಈಗಿನ ನಾಯಕರ ಶೈಲಿಯನ್ನು ವಿರೋಧಿಸುವವರ ಪ್ರಕಾರ, ಹರಿಜನ ಮುಖಂಡರ ತಾಳಕ್ಕೆ ತಕ್ಕಂತೆ ಕುಣಿಯುತ್ತಾನೆ. ನಮಗೆ ನೀರಿಲ್ಲದಿದ್ದರೆ, ವಿದ್ಯುತ್ ಇಲ್ಲದಿದ್ದರೆ ಆತ ತಲೆಕೆಡಿಸಿಕೊಳ್ಳವುದಿಲ್ಲ; ದೊಡ್ಡ ಮನೆಯವರಿಗೆ ಸಮಸ್ಯೆಯಾದರೆ ಆತ ಕಂಬ ಹತ್ತಲು ರೆಡಿಯಾಗುತ್ತಾನೆ. ಹೀಗೆ ಪಂಚಾಯತ್ ಸದಸ್ಯರ ವಿರುದ್ಧ ಅವರಿಗಿದ್ದ ಆಕ್ರೋಶವನ್ನು ತೋಡಿಕೊಂಡರು.

ಊರಲ್ಲಿನ ದೇವದಾಸಿಯರಲ್ಲಿ ಶೇಕಡಾ ೯೫ರಷ್ಟು ಹರಿಜನ ಕೇರಿಯಲ್ಲೇ ಇದ್ದಾರೆ. ದೇವದಾಸಿಯರ ಸ್ಥಿತಿ ಚಿಂತಾಜನಕವಾಗಿದೆ. ಯೌವನ ಇರುವವರೆಗೆ ಯಾರಾದರೂ ಒಬ್ಬರ ಜತೆಗೆ ಇರುತ್ತಾರೆ. ಒಬ್ಬನಿಗೆ ಅಂಟಿಕೊಂಡರೆ ಆತ ಇವರ ಮತ್ತು ಮಕ್ಕಳ ಊಟ, ಬಟ್ಟೆ ವ್ಯವಸ್ಥೆ ನೋಡಿಕೊಳ್ಳುತ್ತಾನೆ. ಯೌವನ ಕುಂದುತ್ತಾ ಬಂದಂತೆ ಇವರ ಬದುಕಿನ ಬವಣೆ ಆರಂಭ. ಒಂದು ಕಡೆಯಿಂದ ಇಟ್ಟುಕೊಂಡವನು ದೂರವಾಗುತ್ತಾನೆ; ಅವನಿರುವಾಗ ಬರುತ್ತಿದ್ದ ಕನಿಷ್ಠ ಆದಾಯ ಕೂಡ ದೂರವಾಗುತ್ತದೆ. ಆತ ಹುಟ್ಟಿಸಿದ ಮಕ್ಕಳನ್ನು ಮತ್ತು ತಮ್ಮನ್ನು ಹೆತ್ತ ತಂದೆ/ತಾಯಿಯನ್ನು ಸಾಕುವ ಹೊಣೆ ದೇವದಾಸಿಯರದ್ದು. ಕೃಷಿ ಕೂಲಿ, ಗಣಿ/ವ್ಯಾಗನ್ ಲೋಡಿಂಗ್ ಇತ್ಯಾದಿಗಳಿಂದ ತಮ್ಮ ಸಂಸಾರ ದೂಗಿಸಬೇಕು. ‘ಇಷ್ಟೆಲ್ಲಾ ಸಂಕಷ್ಟ ದೇವದಾಸಿಯಾಗುವುದರಿಂದ ಇರುವಾಗ ಯಾಕೆ ದೇವದಾಸಿಯರಾಗಲು ಒಪ್ಪುತ್ತೀರಾ?’ ಎನ್ನುವ ಒಂದು ಮೂರ್ಖ ಪ್ರಶ್ನೆ ಕೇಳಿದೆ. ‘ಸ್ವಂತ ಇಚ್ಛೆಯಿಂದ ಯಾರು ದೇವದಾಸಿಯರಾಗುವುದಿಲ್ಲ. ನಮಗೇನು ಆಗುತ್ತದೆ ಎಂದು ತಿಳಿಯುವ ಮೊದಲೇ ನಾವು ದೇವದಾಸಿಯರಾಗುತ್ತೇವೆ,’ ಎಂದು ಅವರಲ್ಲಿ ಸ್ವಲ್ಪ ತಿಳಿದವರು ಉತ್ತರಿಸಿದರು. ದುಡಿಯುವ ಗಂಡು ಮಕ್ಕಳಿಲ್ಲದ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿಸುತ್ತಾರೆ ಎಂದು ಸ್ಥಳೀಯ ಸಮಾಜ ಸೇವಕಿ ಅಭಿಪ್ರಾಯ ಪಡುತ್ತಾರೆ.[2] ಅವರ ಪ್ರಕಾರ ದೇವದಾಸಿಯ ರಾದವರು ತಮ್ಮ ಹೆಣ್ಣು ಮಕ್ಕಳು ದೇವದಾಸಿಯರಾಗಬಾರದೆಂದು ಅಭಿಪ್ರಾಯ ಪಡುತ್ತಾರೆ. ಇದು ಆಶಾದಾಯಕ ಬೆಳವಣಿಗೆ. ಆದರೆ ಇದು ಕಾರ್ಯರೂಪಕ್ಕೆ ಬರಬೇಕಾದರೆ ಇವರ ಹೆಣ್ಣು ಮಕ್ಕಳನ್ನು ಮದುವೆಯಾಗಲು ಇತರರು ಮುಂದೆ ಬರಬೇಕು. ಅಂತಹ ಸಾಧ್ಯತೆ ಇದೆಯೇ ಎಂದು ಕೇರಿಯಲ್ಲಿ ವಿಚಾರಿಸಲು ದೇವದಾಸಿಯರ ಮಕ್ಕಳನ್ನು ಮದುವೆಯಾಗಲು ಕೇರಿಯ ಯುವಕರು ಹಿಂಜರಿಯುವುದಿಲ್ಲವೆಂದು ತಿಳಿಯಿತು.

ಸರಕಾರಿ ನಿಯಮದಂತೆ ವಡ್ಡರ ಒಂದು ನಿರ್ದಿಷ್ಟ ಪಂಗಡ, ಕಡಪೆ ವಡ್ಡರು, ಪರಿಶಿಷ್ಟ ಜಾರಿ ವ್ಯಾಖ್ಯಾನದೊಳಗೆ ಬರುತ್ತಾರೆ. ಇಲ್ಲಿನ ಎಲ್ಲಾ ವಡ್ಡರು ಅ ಪಂಗಡಕ್ಕೆ ಸೇರಿದವರಲ್ಲ ಆದರೆ ಸರಕಾರಿ ಪ್ರಕಾರ ಇಲ್ಲಿನ ಎಲ್ಲಾ ವಡ್ಡರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಇದನ್ನು ಇಲ್ಲಿ ಹಂಚಿಕೆಯಾಗುವ ಆಶ್ರಯ ಮನೆಗಳು, ಭಾಗ್ಯ ಜ್ಯೋತಿ ದೀಪಗಳು, ಪಂಚಾಯತ್ ಸದಸ್ಯರ ಸಂಖ್ಯೆ ಇತ್ಯಾದಿಗಳಿಂದ ತಿಳಿಯಬಹುದು. ಹರಿಜನ ಮತ್ತು ವಡ್ಡರನ್ನು ಸೇರಿಸಿ ಒಟ್ಟು ೨೧೮ ಮನೆಗಳಿವೆ. ಅದಕ್ಕಾಗಿಯೇ ಅವರಿಗೆ ಅತಿ ಹೆಚ್ಚಿನ ಪಂಚಾಯತ್ ಪ್ರತಿನಿಧೀಕರಣ ಒಂಭತ್ತರಲ್ಲಿ ಮೂರು ಸೀಟುಗಳು ಪರಿಶಿಷ್ಟರಿಗೆ ಕಾದಿರಿಸಲಾಗಿದೆ. ಈ ಹಳ್ಳಿಯಲ್ಲಿ ೯೨ ವಡ್ಡರ ಕುಟುಂಬಗಳಿವೆ. ಆದರೆ ಇಲ್ಲೊಂದು ವಿಪರ್ಯಾಸವಿದೆ. ಹರಿಜನರ ಕುಟುಂಬಗಳು ೧೨೬, ಆದರೂ ಅವರಿಗೆ ಒಂದೇ ಸೀಟು; ವಡ್ಡರ ಮನೆಗಳು ೯೨ ಆದಾಗ್ಯೂ ಅವರಿಗೆ ೨ ಸೀಟುಗಳು. ಇದು ಸ್ಥಳೀಯ ರಾಜಕೀಯ ಶಕ್ತಿಗಳ ಪ್ರಭಾವದಿಂದಲೂ ಇರಬಹುದು. ಅದೇನೆ ಇರಲಿ ಸರಕಾರಿ ದಾಖಲೆಗಳಲ್ಲಿ ವಡ್ಡರು ಮತ್ತು ಹರಿಜನರು ಸಮಾನರು. ಆದರೆ ಸ್ಥಳೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಇವರಿಬ್ಬರೂ ಸಮಾನರೇ? ಖಂಡಿತವಾಗಿಯೂ ಅಲ್ಲ. ವಡ್ಡರ ಮನೆಗಳು ಊರಲ್ಲೇ ಇದ್ದರೆ ಹರಿಜನರ ಮನೆಗಳು ಕೇರಿಯಲ್ಲಿವೆ. ವಡ್ಡರು ಒಂದು ವಿಧದಲ್ಲಿ ಇತರ ಹಿಂದುಳಿದ ಜಾತಿಗಳು ಅನುಭವಿಸುವ ಎಲ್ಲಾ ಸ್ಥಾನಮಾನಗಳನ್ನು ಅನುಭವಿಸುತ್ತಾರೆ. ಹೋಟೆಲುಗಳಿಗೆ ಪ್ರವೇಶವಿದೆ, ಗುಡಿಗಳಿಗೆ ಪ್ರವೇಶವಿದೆ; ಬಹುತೇಕ ಎಲ್ಲಾ ಸಾಂಸ್ಕೃತಿಕ ಆಚರಣೆಗಳಲ್ಲಿ ಹಿಂದುಳಿದ ಜಾತಿಗಳಿಗಿರುವ ಎಲ್ಲಾ ಸವಲತ್ತುಗಳು ಇವರಿಗೂ ಇವೆ. ಹೆಚ್ಚಿನ ಸಂಖ್ಯೆಯ ವಡ್ಡರು ಚಪ್ಪರದ ಹಳ್ಳಿಯಲ್ಲಿದ್ದಾರೆ. ಇಲ್ಲ ವಾಸಿಸುವವರಲ್ಲಿ ಸಣ್ಣ/ಅತಿ ಸಣ್ಣ ಕೃಷಿಕರು ಮತ್ತು ಕೃಷಿ ಕೂಲಿಗಳೇ ಹೆಚ್ಚು. ಇಷ್ಟೆ ಸಂಖ್ಯೆಯ ಅಥವಾ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಡ್ಡರ ಮನೆಗಳು ರೈಲ್ವೆ ನಿಲ್ದಾಣದ ಪಕ್ಕ ಇವೆ. ಇವರಲ್ಲಿ ಹೆಚ್ಚಿನವರು ಅರುವತ್ತರ ದಶಕದಲ್ಲಿ ಆಂಧ್ರದ ಕಡೆಯಿಂದ ನಲಸೆ ಬಂದವರು. ಇವರಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಹೆಚ್ಚು. ವ್ಯಾಗನ್ ಲೋಡಿಂಗ್, ಗಣಿ ಕೆಲಸ, ಕಟ್ಟಡ ನಿರ್ಮಾಣ, ಬೀಡಿ ಕಟ್ಟುವುದು ಇತ್ಯಾದಿ ಇಲ್ಲಿನ ವಡ್ಡರ ಕಸುಬುಗಳು. ಚಪ್ಪರದ ಹಳ್ಳಿಯಲ್ಲಿ ಒಂದು ಮಾರಿಯಮ್ಮನ ಗುಡಿ ಇದೆ. ಮಾರಿಯಮ್ಮನಿಗೆ ಗುಡಿ ಆದುದೇ ೧೯೮೫ರಲ್ಲಿ. ಅಲ್ಲಿವರೆಗೆ ಮಾರಿಯಮ್ಮನ ಮೂರ್ತಿ ತೆರೆದ ಸ್ಥಳದಲ್ಲಿ ಇತ್ತು. ವಾರಕ್ಕೊಮ್ಮೆ, ಶುಕ್ರವಾರ, ವಡ್ಡರ ಪೂಜಾರಿಯಿಂದ ಮಾರಿಯಮ್ಮನಿಗೆ ಪೂಜೆ. ವಾರ್ಷಿಕ ಉತ್ಸವ ಇದೆ. ಆದರೆ ಅದು ವಡ್ಡರಿಗೆ ಮತ್ತು ಊರ ಗಣ್ಯರಿಗೆ ಮಾತ್ರ ಸೀಮಿತ. ಊರವರೆಲ್ಲಾ ಸೇರಿ ಜಾತ್ರೆ ಇಲ್ಲ.

ಕುರುಬರ ಕುಟುಂಬಗಳು ೬೬ ಹಳ್ಳಿಯ ಸಾಂಸ್ಕೃತಿಕ ಬದುಕಿನಲ್ಲಿ ಕುರುಬರ ಸ್ಥಾನಮಾನ ವಿಚಿತ್ರವಾಗಿದೆ. ಊರಲ್ಲಿರುವ ಎಲ್ಲಾ ಗುಡಿಗಳಲ್ಲೂ ಪೂಜಾರಿಗಳು (ತಿಮ್ಮಪ್ಪನ ಗುಡಿ, ಅಂಜನೇಯನ ಗುಡಿ ಮತ್ತು ಅಂಕ್ಲಮ್ಮನ ಗುಡಿ) ಕುರಬರೇ. ತಿಮ್ಮಪ್ಪನ ಗುಡಿಯ ವಾರ್ಷಿಕ ಉತ್ಸವದಂದು (ಇದನ್ನು ಊರವರು ಉಛ್ಛಾಯವೆಂದು ಕರೆಯುತ್ತಾರೆ) ಮೂರ್ತಿಗಳ ಅಭಿಷೇಕಕ್ಕೆ ಅಯ್ನೋರನ್ನು ಕರೆಸುವ ಕ್ರಮವಿದ್ದರೂ ಜಾತ್ರೆಯ ಇಡೀ ಪುರೋಹಿತ್ಯ ವಹಿಸುವವರು ಕುರುಬರ ಜಾತಿಗೆ ಸೇರಿದ ಪೂಜಾರಿ. ಅದೇ ರೀತಿ ಅಂಕ್ಲಮ್ಮನ ದಿನನಿತ್ಯದ ಪೂಜೆ ಮತ್ತು ಜಾತ್ರೆಯ ಪೂಜೆ ಕೂಡ ಕುರುಬರ ಪೂಜಾರಿಯದ್ದು. ಬಾಳೆದಿಂಡೆಯಾಗಿ ಭಾಗಿಯಾಗುವವರು ಪೂಜಾರಿಯ ಮಕ್ಕಳು. ಒಂದು ವಿಧದಲ್ಲಿ ಕುರುಬರು ಹಳ್ಳಿಯ ಪುರೋಹಿತರೆನ್ನಬಹುದು. ಹಾಗಂತ ಇವರಿಗೆ ಬ್ರಾಹ್ಮಣರ ಸ್ಥಾನಮಾನ ಉಂಟೆಂದು ಹೇಳಲು ಸಾಧ್ಯವಿಲ್ಲ. ಹಳ್ಳಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಜಂಗಮರು, ಲಿಂಗಾಯತರ ನಂತರದ ಸ್ಥಾನ ಕುರುಬರದ್ದು. ಸಂಪ್ರದಾಯ ಪ್ರಕಾರ ಇವರಿಗೆ ಲಿಂಗಾಯತರ ಮನೆಯೊಳಗೆ ಪ್ರವೇಶವಿಲ್ಲ. ಲಿಂಗಾಯತರು ಇವರ ಮನೆಯಲ್ಲಿ ಊಟ, ಪಾನೀಯ ತೆಗೆದುಕೊಳ್ಳುವ ಕ್ರಮವಿಲ್ಲ. ಇಲ್ಲಿನ ಕುರುಬರಲ್ಲಿ ಮುಖ್ಯವಾಗಿ ಮೂರು ಬೆಡಗುಗಳಿವೆ. ಬಿಳಿಕುದುರೆ ಅಥವಾ ಗೌಡಿಕೆ ಬೆಡಗಿನವರು, ಮರಿಕುದುರೆ ಅಥವಾ ಶ್ಯಾನಭೋಗ ಬೆಡಗಿನವರು. ಆಂಧ್ರದ ಕಡೆಯಿಂದ ವಲಸೆ ಬಂದವರದ್ದು ಪ್ರತ್ಯೇಕ ಬೆಡಗು. ಅವರವರ ಬೆಡಗಿಗನುಸಾರ ಮನೆದೇವರು – ವೆಂಕಟೇಶ್ವರ, ಗವಿಸಿದ್ದೇಶ್ವರ, ಗಾದಿಲಿಂಗಪ್ಪ, ಇವೆಲ್ಲಾ ಒಂದೇ ದೇವರ ಬೇರೆ ಬೇರೆ ಹೆಸರುಗಳಿರಬಹುದು. ಕುರುಬರೆಂದರೆ ಕುರಿ ಸಾಕುವವರು ಎನ್ನುವ ಸಾಮಾನ್ಯ ಜ್ಞಾನ ಇಲ್ಲಿ ಅನ್ವಯವಾಗುವುದಿಲ್ಲ. ಇಲ್ಲಿನ ಕುರುಬರಂತೂ ಸಂಪೂರ್ಣ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು. ಗಣಿಗಾರಿಕೆ ಆರಂಭವಾದ ನಂತರ ಕೃಷಿ ಕೂಲಿಗಳು, ಸಣ್ಣ ಮತ್ತು ಅತಿ ಸಣ್ಣ ಕೃಷಿಕ ಕುರುಬರು ಆ ಕಡೆಗೆ ವಾಲಿದ್ದಾರೆ. ಕುರಿ ಸಾಕಾಣೆ ಮಾಡುವ ಕುರುಬರೆಂದರೆ ಆಂಧ್ರದ ಕಡೆಯಿಂದ ವಲಸೆ ಬಂದ ಕುರುಬರು. ೫೦ರ ದಶಕದಲ್ಲಿ ಈ ಕಡೆ ಹುಲ್ಲು ಹುಲುಸಾಗಿ ಇದೆ, ಕುರಿ ಸಾಕಣೆಗೆ ಯೋಗ್ಯ ಪ್ರದೇಶವೆಂದು ಮೂರು ಕುಟುಂಬಗಳು ವಲಸೆ ಬಂದವು. ಅವುಗಳ ಬೆಳದು ಇಂದು ೧೨ ಕ್ಕೂ ಹೆಚ್ಚು ಕುಟುಂಬಗಳಾಗಿವೆ. ಕುರಿ ಸಾಕಣೆಗೆಂದು ಬಂದ ಅವರು ಕೂಡ ಕಾಲಕ್ರಮೇಣ ಕೃಷಿ ಮತ್ತು ಗಣಿ ಕೆಲಸಗಳತ್ತ ಆಕರ್ಷಿತರಾದರು. ಕುರುಬರ ಬಹುತೇಕ ಮನೆಗಳು ಒಂದು ಎರಡು ಮತ್ತು ಮೂರನೇ ವಾರ್ಡುಗಳಲ್ಲಿವೆ.

ಜನಸಂಖ್ಯೆಯ ದೃಷ್ಟಿಯಿಂದ ಬಲಿಷ್ಟ ಸಮುದಾಯವೆಂದರೆ ನಾಯಕರದ್ದು. ೧೪೮ ನಾಯಕರ ಕುಟುಂಬಗಳಿವೆ. ಗ್ರಾಮ ಚಾವಡಿಯ ಮುಂದೆ ಬಜಾರ್ ರಸ್ತೆಯ ಎಡಭಾಗಕ್ಕೆ ನಾಯಕರ ಓಣಿ. ಓಣಿಯ ಒಂದು ಭಾಗಕ್ಕೆ ನಾಯಕರ ಮನೆಗಳು ಮತ್ತೊಂದು ಭಾಗಕ್ಕೆ ಲಿಂಗಾಯತರ ಮನೆಗಳು. ಓಣಿಯ ತುದಿ ಭಾಗದಲ್ಲಿ ಅಗಸರ, ಈಡಿಗರ, ಕ್ಷೌರಿಕರ ಮನೆಗಳಿವೆ. ಅದೇ ರೀತಿ ಆಂಜನೇಯ ಗುಡಿ ಪಕ್ಕಕ್ಕೆ ಈಶ್ವರನ ಗುಡಿಗೆ ಹೋಗುವ ದಾರಿಯಲ್ಲೂ ನಾಯಕರ ಮನೆಗಳಿವೆ. ಚಪ್ಪರದ ಹಳ್ಳಿಯಲ್ಲಿ, ಆಶ್ರಯ ಯೋಜನೆ ಸೈಟಿನಲ್ಲಿ, ನಂತರ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಕೆಲವು ಮನೆಗಳಿವೆ. ಹಳ್ಳಿಯ ಸಾಂಸ್ಕೃತಿಕ ಬದುಕಿನಲ್ಲಿ ನಾಯಕರುಗಳಿಗೆ ಕುರುಬರಷ್ಟು ಪ್ರಾಮುಖ್ಯತೆಯಿಲ್ಲ. ಆದಾಗ್ಯೂ ಅಂಕ್ಲಮ್ಮನ ಜಾತ್ರೆಯಲ್ಲಿ ಇವರಿಗೆ ಪ್ರಮುಖ ಪಾತ್ರವಿದೆ. ದೇವರಿಗೆ ಕಲಶ ಹೊರುವುದು ನಾಯಕರ ಹುಡುಗಿಯರೇ, ಬಾಳೆದಿಂಡೆಯನ್ನು ಗುಡಿಯ ಸುತ್ತ ಪ್ರದಕ್ಷಿಣೆ ತರುವುದು ನಾಯಕರ ಹುಡುಗರು.[3] ನಾಯಕರುಗಳಲ್ಲಿ ಹಲವಾರು ಬಡಗು/ಪಂಗಡಗಳಿವೆ. ನಾಡಿಗರು, ತಳವಾರರು, ಜಬ್ಬಲಿಯಪ್ಪನವರು, ದನಕಾಯುವವರು, ಕಾವಲಿಯವರು ಮತ್ತು ಬುರ್ಲೆಯವರು ಎಂಬ ಪಂಗಡಗಳಿವೆ. ಮೊದಲು ನಾಲ್ಕು ಬೆಡಗುಗಳ ಮಧ್ಯೆ ಸಾಮಾಜಿಕ ಸಂಬಂಧಗಳಿವೆ. ಅಂದರೆ ಹೆಣ್ಣು ಕೊಡುವ ಮತ್ತು ತರುವ ಸಂಬಂಧಗಳಿವೆ. ಬುರ್ಲೆಯವರು ಮತ್ತು ಕಾವಲಿಯವರು ಮೇಲಿನ ಪಂಗಡಗಳೊಂದಿಗೆ ಸಾಮಾಜಿಕ ಸಂಬಂಧ ಹೊಂದಿಲ್ಲ. ಶುಭ, ಅಶುಭ ಕಾರ್ಯಕ್ರಮಗಳಲ್ಲಿ ಎಲ್ಲರೂ ಸೇರುತ್ತಾರೆ. ಆದರೆ ಸಾಮಾಜಿಕ ಸಂಬಂಧ ಇರುವವರು ಮಾತ್ರ ಕ್ರಿಯೆಗಳಲ್ಲಿ ಪಾಲುಗೊಳ್ಳುತ್ತಾರೆ. ಈಗ ಹಿಂದಿನ ಬೆಡಗು ಪಂಗಡಗಳು, ಗುರುತುಗಳು ಮುಂದುವರಿಯುವ ಜತೆಗೆ ಹೊಸ ಗುರುತುಗಳು ಬರುತ್ತಿವೆ. ಉದಾಹರಣೆಗೆ ಒಂದೇ ಓಣಿಯಲ್ಲಿ ವಾಸಿಸುವ ನಾಯಕ ಸಮುದಾಯಕ್ಕೆ ಸೇರಿದ ಎಲ್ಲರೂ ಒಂದೇ ಎನ್ನುವ ಭಾವನೆಯಿದೆ. ಆ ಓಣಿಯಲ್ಲಿ ವಾಸಿಸುವ ಅಥವಾ ವಾಸಿಸುತ್ತಿದ್ದ ಹಿರಿಯರ ಹೆಸರಿನಿಂದ ಆ ಪಂಗಡಗಳು ಗುರುತಿಸಲ್ಪಡುತ್ತಿವೆ. ಹಾಗಾಗಿ ಮೇಲಿನ ಬೆಡಗುಗಳ ಜತೆ ಕನಕಪ್ಪನವರ, ಭೀಮಪ್ಪನವರ ಪಂಗಡಗಳು ಇಂದು ಕಾಣ ಸಿಗುತ್ತವೆ. ಈ ಹೊಸ ಬೆಡಗುಗಳೊಂದಿಗೆ ಹಿಂದಿನ ಬೆಡಗುಗಳು, ಯಾವುದೆ ಇರಲಿ, ಹೆಣ್ಣು ಕೊಡುವ ತರುವ ಸಂಬಂಧಗಳನ್ನು ಮಾಡುತ್ತವೆ.

ನಾಡಿಗರ, ತಲವಾರರ, ಜಬ್ಬಲಿಯಪ್ಪನವರ ಮತ್ತು ದನಕಾಯುವವರ ಬಹುತೇಕ ಮಂದಿ ಕೃಷಿಕರು. ಉಳಿದ ಪಂಗಡಗಳ ಮಂದಿ ಗಣಿ, ವ್ಯಾಗನ್ ಲೋಡಿಂಗ್ ಮತ್ತು ಇತರ ಕೃಷಿಯೇತರ ಚಟುವಟಿಕೆಗಳನ್ನು ನಂಬಿದ್ದಾರೆ. ಇಲ್ಲಿನ ಎಲ್ಲಾ ಸಮುದಾಯಗಳಿಗೆ ಅನ್ವಯವಾಗುವಂತಹ ಕೆಲವು ವಿಚಾರಗಳಿವೆ. ಅವುಗಳಲ್ಲಿ ಒಂದು ವಲಸೆ ಸಂಬಂಧಗಳು. ಆಂಧ್ರದ ಕಡೆಯಿಂದ ಕೆಳವರ್ಗದ ಜನರು ಈ ಕಡೆಗೆ ಬಂದಿದ್ದಾರೆ. ಬಂದವರು ತಮ್ಮ ಹಿಂದಿನ ಸಂಬಂಧವನ್ನು ಕಡಿದುಕೊಂಡು ಇಲ್ಲಿನವರೊಂದಿಗೆ ಸಂಬಂಧ ಬೆಳೆಸಿದ್ದಾರೆ. ಹರಿಜನರ ಕುಟುಂಬಗಳು ಹೆಚ್ಚುವಲ್ಲಿ ಈ ವಲಸೆ ಬಂದವರ ಕೊಡುಗೆಯೂ ಇದೆ ಎಂದು ಮೇಲೆ ವಿವರಿಸಿದ್ದೇನೆ. ಅದೇ ವಿವರಣೆ ನಾಯಕರ ಸಮುದಾಯಕ್ಕೂ ಅನ್ವಯವಾಗುತ್ತದೆ. ಆರ್ಥಿಕ ಚಟುವಟಿಕೆ ಕುರಿತಂತೆ ಇಲ್ಲಿ ಸಣ್ಣ ಅಥವಾ ಅತಿ ಸಣ್ಣ ರೈತ, ಕೂಲಿ ಅಥವಾ ಕೃಷಿಕೂಲಿ ಎನ್ನುವ ವರ್ಗಿಕರಣ ಅರ್ಥಪೂರ್ಣವಲ್ಲ. ಯಾಕೆಂದರೆ ಅವರು ಕೃಷಿಕರು ಕೃಷಿಕೂಲಿಗಳು ಮತ್ತು ಗಣಿ ಕಾರ್ಮಿಕರು ಏಕ ಕಾಲದಲ್ಲೇ ಆಗಿರುತ್ತಾರೆ. ಅಂತವರ ಸಂಖ್ಯೆ ನಾಯಕರಲ್ಲಿ ತುಂಬಾ ಇದೆ. ಕಾವಲಿಯವರು, ಬುರ್ಲೆಯವರು, ಕನಕಪ್ಪನವರು ಮತ್ತು ಭೀಮಪ್ಪನವರ ಪಂಗಡಗಳಿಗೆ ಸೇರಿದ ಬಹುತೇಕ ಮಂದಿ ಮೇಲೆ ವಿವರಿಸಿದ ರೀತಿಯ ಕೃಷಿ ಮತ್ತು ಕೃಷಿಯೇತರ ಕೆಲಸಗಳಲ್ಲಿ ತೊಡಗಿದ್ದಾರೆ.

ಸಾಮಾಜಿಕ ಭಿನ್ನತೆಯನ್ನು ಗುರುತಿಸುವಲ್ಲಿ ಉಪಹೋಗಿಸುವ ಸರ್ವೆಸಾಮಾನ್ಯ ಪದಗಳೆಂದರೆ ಜಾತಿ ಮತ್ತು ಧರ್ಮ. ಇಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನ ಸಮುದಾಯಗಳಿವೆ. ಒಂದು ಕಾಲದಲ್ಲಿ ಈ ಹಳ್ಳಿಯ ಗೌಡಿಕೆ ಮುಸ್ಲಿಂ ಕುಟುಂಬದವರಲ್ಲಿತ್ತು. ಚಾರಿತ್ರಿಕವಾಗಿಯೇ ಇಲ್ಲಿ ೨೦ ರಿಂದ ೨೫ ಮುಸ್ಲಿಂ ಕುಟುಂಬಗಳಿದ್ದವು. ಈಗ ಅವುಗಳು ಬೆಳೆದು ಮತ್ತು ಹೊರಗಿನಿಂದ ಬಂದವರನ್ನು ಸೇರಿಸಿ ಮುಸ್ಲಿಂ ಕಟುಂಬಗಳ ಸಂಖ್ಯೆ ೬೭ಕ್ಕೆ ಏರಿದೆ. ತಿಮ್ಮಪ್ಪನ ಗುಡಿ ಪಕ್ಕದಲ್ಲಿ ಎರಡು ಲಿಂಗಾಯತ ಕುಟುಂಬಗಳನ್ನು ಹೊರತುಪಡಿಸಿ ಬಹುತೇಕ ಮನೆಗಳು ಮುಸ್ಲಿಮರದ್ದು. ಮುಸ್ಲಿಂ ಮನೆಗಳಿರುವ ಇತರ ಜಾಗಗಳೆಂದರೆ ಚಪ್ಪರದಹಳ್ಳಿ ಮತ್ತು ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಕಾಲೋನಿ. ಮುಸ್ಲಿಮರೊಳಗಿರುವ ಶೀಯಾ/ಸುನ್ನಿ ಪಂಗಡಗಳು ಇಲ್ಲಿಲ್ಲ. ಆದರೆ ಸ್ಥಳೀಯರು ಮತ್ತು ಹೊರಗಿನಿಂದ ಬಂದವರು ಎಂಬ ಭಿನ್ನತೆಯಿದೆ. ಈ ಭಿನ್ನತೆ ಹಲವಾರು ಹಂತಗಳಲ್ಲಿ ವ್ಯಕ್ತವಾಗುತ್ತದೆ. ಉದಾಹರಣೆಗೆ ಸ್ಮಶಾನದ ತಕರಾರು. ಗೌಡರ ಮನೆಯವರು ಸ್ಮಶಾನಕ್ಕಾಗಿ ಒಂದು ಹೊಲ ಬಿಟ್ಟಿದ್ದರು. ಈ ಹೊಲ ಹೆದ್ದಾರಿ ಪಕ್ಕದಲ್ಲೇ ಅಂಬೇಡ್ಕರ್ ಪ್ರಾಥಮಿಕ ಶಾಲೆ ಮುಂದೆ ಇದೆ. ಈಗ ಗೌಡರ ಮನೆಯವರು ಈ ಭೂಮಿಯನ್ನು ಇನ್ನು ಮುಂದೆ ಸ್ಮಶಾನವಾಗಿ ಬಳಸಲು ಬಿಡುವುದಿಲ್ಲ, ಮುಸ್ಲಿಮರು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಈ ಹಕ್ಕು ಆದಿಯಿಂದಲೇ ಬಂದಿದೆ, ಈಗಿನ ತಲೆಮಾರಿನವರು ಬೇಡವೆಂದರೆ ಹೇಗೆ ಎಂದು ಇತರ ಮುಸ್ಲಿಂ ಬಾಂಧವರು ಆಕ್ಷೇಪವೆತ್ತಿದ್ದಾರೆ. ಹಿಂದೆ ಇಲ್ಲಿ ಕೇವಲ ೨೦ ರಿಂದ ೨೫ ಮುಸ್ಲಿಂ ಕುಟುಂಬಗಳಿದ್ದವು. ಅವರಿಗೆ ಅನುಕೂಲವಾಗಲೆಂದು ಅವಕಾಶ ಕೊಟ್ಟೆವು. ಈಗ ನೋಡಿದರೆ ಹೊರಗಿನಿಂದ ಬಂದವರೆಲ್ಲಾ ಸೇರಿ ೬೦ಕ್ಕಿಂತಲೂ ಹೆಚ್ಚು ಕುಟುಂಬಗಳಿವೆ. ಇವರಿಗೆಲ್ಲಾ ಅವಕಾಶ ಕೊಟ್ಟರೆ ಕೃಷಿಗೆ ಬಿಡಿ ನಮ್ಮ ಹೆಣ ಇಡಲು ಭೂಮಿ ಉಳಿಯುವುದಿಲ್ಲ ಎಂದು ಗೌಡರ ಮನೆಯವರ ವಾದ. ಈ ವಾದದಲ್ಲಿ ಸ್ವಲ್ಪ ಸತ್ಯಾಂಶವಿದೆ. ಅದರ ಜತೆಗೆ ಇಲ್ಲಿ ಏರುತ್ತಿರುವ ಭೂಮಿ ಬೆಲೆ ಕೂಡ ಸ್ವಲ್ಪ ಪ್ರಭಾವ ಬೀರಿದೆ ಎಂದರೆ ತಪ್ಪಾಗದು. ಜಿಂದಾಲ್ ಫ್ಯಾಕ್ಟರಿ ಬಂದ ನಂತರ ಹೆದ್ದಾರಿ ಪಕ್ಕಕ್ಕಿರುವ ಹೊಲಗಳ ನೆಲೆ ಏಕ್‌ದಂ ಏರಿದೆ. ಒಂದು ಎಕರೆಗೆ ಕಡಿಮೆಯಿಂದರೆ ೧.೫ ರಿಂದ ೨ ಲಕ್ಷ ಬೆಲೆಯಿದೆ. ಅಂತಹ ಭೂಮಿಯನ್ನು ಸ್ಮಶಾನಕ್ಕೆ ಬಿಡಲು ಯಾರು ತಾನೇ ತಯಾರಿರುತ್ತಾರೆ.

ಇತರ ಮುಸ್ಲಿಮರ ಪ್ರಕಾರ ಗೌಡರ ಮನೆಯವರು ಸ್ಮಶಾನದ ಕುರಿತು ತಕರಾರು ಎತ್ತಲು ಬೇರೆ ಕಾರಣವೂ ಇದೆ. ಅದೇನೆಂದರೆ ಗೌಡರ ಮನೆಯವರಿಂದ ಊರಿನ ಗೌಡಿಕೆ ಹೋಗಿರಬಹದು; ಮುಸ್ಲಿಮರು ಗೌಡಿಕೆ ಹೋಗಿಲ್ಲ. ಹಳ್ಳಿಯ ಮುಸ್ಲಿಂ ಸಮುದಾಯದ ಪ್ರಶ್ನಾತೀತನಾಯಕರು ಅವರೇ ಆಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ; ತಮ್ಮ ಆಸ್ತಿ ಪಾಸ್ತಿ ಬಗ್ಗೆ ಅವರಿಗೆ ಹೆಚ್ಚು ಕಾಳಜಿ ಎಂಬ ಆತಂಕ ಇತರ ಮುಸ್ಲಿಮರಲ್ಲಿ ಬರುತ್ತಿದೆ. ಇದಕ್ಕೆ ಉದಾಹರಣೆಯಾಗಿ ಮಸೀದಿ ಕಟ್ಟಡದ ದುಡ್ಡಿನಲ್ಲಿ ಗೌಡರ ಮನೆಯವರು ಅವ್ಯವಹಾರ ನಡೆಸಿದ್ದಾರೆ ಎಂದು ಇತರ ಮುಸ್ಲಿಮರು ಮಾಡುವ ಅರೋಪವನ್ನು ತೆಗೆದುಕೊಳ್ಳಬಹುದು. ಗೌಡರ ಕಿರಿಯ ಮಗ ಕರೀಂಖಾನ್ ಅವರು ಹೊಸಪೇಟೆ ತಾಲ್ಲೂಕು ಪಂಚಾಯತ್ ಅಧ್ಯಕ್ಷರು. ಅವರೇ ಮಸೀದಿ ಕಮಿಡಿಯ ಅಧ್ಯಕ್ಷರು ಕೂಡ. ಅವರು ಮಸೀದಿಗೆಂದು ವಕ್ಪ್ ಬೋರ್ಡ್‌‌ನಿಂದ ಮತ್ತು ಇತರ ಮೂಲಗಳಿಂದಲೂ ಹಣ ಪಡೆದಿದ್ದಾರೆ. ಆ ರೀತಿ ಸಂಗ್ರಹವಾದ ಎಲ್ಲಾ ಹಣವನ್ನು ಮಸೀದಿ ಕಟ್ಟಡಕ್ಕೆ ಬಳಸಿಲ್ಲ. ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂದು ಇತರ ಮುಸ್ಲಿಮರು ಆರೋಪಿಸುತ್ತಾರೆ. ಇದನ್ನು ಗೌಡರ ಮನೆಯವರು ಮತ್ತು ಕರೀಂಖಾನ್ ಅವರು ಒಪ್ಪುವುದಿಲ್ಲ.[4] ಇತರ ಮುಸ್ಲಿಮರ ಪ್ರಕಾರ ಸ್ಮಶಾನದ ಕುರಿತು ಈಗ ಗೌಡರ ಮನೆಯವರು ಎತ್ತಿರುವ ತಕರಾರು ಒಂದು ವಿಧದಲ್ಲಿ ಊರಿನ ಇತರ ಮುಸ್ಲಿಮರು ಗೌಡರ ಮನೆಯವರ ಮೇಲೆ ಹಣದ ದುರುಪಯೋಗ ಕುರಿತು ಮಾಡಿದ ಆರೋಪಕ್ಕೆ ಪ್ರತೀಕಾರ. ಈ ಉದಾಹರಣೆಯನ್ನು ಮುಸ್ಲಿಮರಿಗೆ ಸಂಬಂಧಿಸಿದಂತೆ ಕೊಡಲು ಕಾರಣವಿದೆ. ಮುಸ್ಲಿಮರೆಂದರೆ ಯಾವುದೇ ಆಂತರಿಕ ಬಿರುಕುಗಳಿಲ್ಲದ ಒಮದು ಸಂಘಟಿತ ಸಮುದಾಯವೆಂಬ ಚಿತ್ರಣ ವರ್ತಮಾನದಲ್ಲಿ ತುಂಬಾ ಪ್ರಚಾರದಲ್ಲಿದೆ. ಅದು ಸರಿಯಲ್ಲ. ಇಂತಹ ಹಳ್ಳಿಯಲ್ಲೂ ಅವರೊಳಗಿನ ಗುಂಪುಗಳು, ಅವುಗಳೊಗಿನ ವರ್ಗ ಪ್ರಶ್ನೆಗಳು, ಜೀವಂತವಾಗಿವೆ. ಅದೇ ರೀತಿ ಹಳ್ಳಿಯಲ್ಲಿ ಆಚರಿಸುವ ಮೊಹರಂ ಹಬ್ಬ ಹಿಂದುತ್ವವಾದಿಗಳು ಕಟ್ಟಿಕೊಡುವ ಮುಸ್ಲಿಂ ಸಮುದಾಯದ ಚಿತ್ರಣಕ್ಕೆ ಭಿನ್ನವಾಗಿದೆ. ಮೊಹರಂ ಹಬ್ಬ ಮುಸ್ಲಿಂ ಹಬ್ಬವಲ್ಲ; ಊರ ಹಬ್ಬ. ಎಲ್ಲಾ ಸಮುದಾಯಗಳು ಇದರಲ್ಲಿ ಭಾಗವಹಿಸುತ್ತಾರೆ, ಪ್ರಾರ್ಥಿಸುತ್ತಾರೆ, ಹರಕೆ ಹೊರುತ್ತಾರೆ, ಪ್ರಸಾದ ಸ್ವೀಕರಿಸುತ್ತಾರೆ. ಮೊಹರಂ ಹಬ್ಬದಂದು ದೇವರ ಮೂರ್ತಿಗಳನ್ನು ಹೊತ್ತು ಮುಸ್ಲಿಂ ಪೂಜಾರಿ ಪ್ರತಿ ಮನೆಗೂ, ಹರಿಜನ ಕೇರಿಯನ್ನು ಹೊರತುಪಡಿಸಿ, ಭೇಟಿ ನೀಡುತ್ತಾರೆ, ಪ್ರಸಾದ ನೀಡುತ್ತಾರೆ, ಆಶೀರ್ವದಿಸುತ್ತಾರೆ. ಮುಸ್ಲಿಮರು ಮತ್ತು ಇತರರು ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಮನಾಗಿ ಪಾಲುಗೊಳ್ಳುವುದರಿಂದ ಇವರ ಮಧ್ಯೆ ಗೋಡೆಗಳು ಸದ್ಯಕ್ಕೆ ನಿರ್ಮಾಣವಾಗಿಲ್ಲ.

ಮುಸ್ಲಿಮರಿಗೆ ಹೋಲಿಸಿದರೆ ಕ್ರಿಶ್ಚಿಯನ್ನರು ಎಲ್ಲಾ ವಿಧದಿಂದಲೂ ಊರಿಗೆ ಹೊರಗಿನವರು. ಸುಮಾರು ೩೨ ಕ್ರಿಶ್ಚಿಯನ್ ಕುಟುಂಬಗಳಿವೆ. ಇವರಲ್ಲಿ ಬಹುತೇಕ ಕುಟುಂಬಗಳು ಐವತ್ತರ ದಶಕದಲ್ಲಿ ತುಂಗಾಭದ್ರ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಮದರಾಸು ಕಡೆಯಿಂದ ವಲಸೆ ಬಂದವರು. ಆಣೆಕಟ್ಟು ಕೆಲಸ ಮುಗಿದು ಕೆಲವರು ತಮ್ಮ ಊರಿಗೆ ಮರಳಿದರೆ ಕೆಲವರು ಇಲ್ಲೇ ಸುತ್ತ ಮುತ್ತ ಹುಡುಕಿದರು. ಆಗ ಅವರಿಗೆ ದೊರಕಿದ್ದು ಬಳ್ಳಾರಿ ಹೊಸಪೇಟೆ ಹೆದ್ದಾರಿ ಬದಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ. ಕೆಲವು ಕುಟುಂಬಗಳು ಪಿ.ಕೆ. ಹಳ್ಳಿಯ ನೆರೆಯಲ್ಲಿರುವ ಡಾಲ್ಮಿಯಾ ಗಣಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಗಣಿಗಾರಿಕೆ ನಡೆಯುತ್ತಿದ್ದ ಗುಡ್ಡದ ಸಮೀಪವೆ ಅವರಿಗೆ ವಾಸದ ವ್ಯವಸ್ಥೆಯನ್ನು ಕಂಪೆನಿ ಮಾಡಿತ್ತು. ಅಲ್ಲೆ ಅವರ ಮಕ್ಕಳಿಗೆ ಒಂದು ಪ್ರಾಥಮಿಕ ಶಾಲೆ ಕೂಡ ತೆರೆಯಲಾಯಿತು. ಆದರೆ ೧೯೯೭ರಿಂದ ಆರಂಭವಾದ ಕಂಪೆನಿ ಮುಚ್ಚುವಿಕೆ ಮತ್ತು ನಂತರದ ಮುಷ್ಕರದಿಂದ ಇವರು ನಿರ್ಗತಿಕರಾಗುವ ಸ್ಥಿತಿ ಬಂತು. ಆ ಸಂದರ್ಭದಲ್ಲಿ ಕೆಲವರು ಹೊಸಪೇಟೆ ಚರ್ಚ್ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆ ತೊಡಿಕೊಂಡರು. ಹೊಸಪೇಟೆಯ ಚರ್ಚ್‌ನವರು ಪಿ.ಕೆ.ಹಳ್ಳಿಯಿಂದ ಹಂಪಿಗೆ ಹೋಗುವ ರಸ್ತೆ ಕವಲೊಡೆಯುವಲ್ಲಿ ಎರಡು ಎಕರೆ ಭೂಮಿ ವಿಕ್ರಯಿಸಿದ್ದರು; ಅಲ್ಲೆ ಒಂದು ಚರ್ಚ್ ಕೂಡ ಕಟ್ಟಿಸಿದ್ದರು ಎಂದು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಈ ಜನರ ಸಮಸ್ಯೆಗೆ ಸ್ಪಂದಿಸಿ ಆ ಖಾಲಿ ಜಾಗದಲ್ಲಿ ೩೨ ಮನೆಗಳನ್ನು ಚರ್ಚ್‌ವತಿಯಿಂದ ಕಟ್ಟಿಸಿ ಕೊಟ್ಟರು. ಹೀಗೆ ಈ ಕ್ರಿಶ್ಚಿಯನ್ ಕುಟುಂಬಗಳು ಕೆಲವೇ ವರ್ಷಗಳ ಹಿಂದೆ ಹಳ್ಳಿಯ ಬದುಕಿಗೆ ಸೇರ್ಪಡೆಯಾಗಿವೆ. ಹಳ್ಳಿಯಲ್ಲಿದ್ದಾರೆ ಎಂಬುದನ್ನು ಬಿಟ್ಟರೆ ಇವರಿಗೂ ಹಳ್ಳಿಗೂ ಏನೇನೂ ಸಂಬಂಧವಿಲ್ಲ. ಈಗಲೂ ಇವರುಗಳು ತಮ್ಮ ಜೀವನೋಪಾಯಕ್ಕೆ ಸುತ್ತ ಮುತ್ತಲಿನ ಗಣಿಗಳಿಗೆ ದುಡಿಯಲು ಹೋಗುತ್ತಾರೆ. ಹೆಂಗಸರು ಅನಿವಾರ್ಯವಾದರೆ ಕೃಷಿ ಕೂಲಿಗೆ ಹೋಗುತ್ತಾರೆ.

ಇದೇ ರೀತಿ ದಾಖಲೆಯಲ್ಲಿ ಊರಿನ ಭಾಗವಾಗಿದ್ದು ಬದುಕಿನಲ್ಲಿ ಊರಿನಿಂದ ಬೇರ್ಪಟ್ಟಿರುವ ಮತ್ತೊಂದು ಸಮುದಾಯವೆಂದರೆ ಡಾಲ್ಮಿಯಾ ಕಾಲೋನಿಗಳಲ್ಲಿರುವ ಗಣಿ ಕಾರ್ಮಿಕರು ಸುಮಾರು ೮೦ ಕುಟುಂಬಗಳು ಈ ಕಾಲೋನಿಯಲ್ಲಿದ್ದಾರೆ. ಮುಷ್ಕರ ಆರಂಭವಾದ ನಂತರ ಇಲ್ಲಿನ ಕುಟುಂಬಗಳ ಬದುಕು ಚಿಂತಾಜನಕ. ಕಂಪೆನಿಯವರಿಗೆ ಈ ಕಾರ್ಮಿಕರ ಮೇಲೆ ಯಾವುದೇ ಕಾಳಜಿಯಿಲ್ಲ. ಕೋರ್ಟ್‌ನಲ್ಲಿ ಕೇಸು ಮುಂದುವರಿಯುತ್ತಿದೆ. ೧೯೯೭ರಿಂದ ಕಂಪೆನಿ ಮತ್ತು ಕಾರ್ಮಿಕರ ಜನಳ ಬಗೆ ಹರಿದು ನೆಮ್ಮದಿಯ ದಿನ ಇಂದು ಬರಬಹುದು ನಾಳೆ ಬರಬಹುದೆಂದು ಕಾರ್ಮಿಕರು ಎದುರು ನೋಡುತ್ತಲ್ಲೇ ಇದ್ದಾರೆ. ಆದರೆ ಅವರು ಬಯಸುವ ದಿನ ಮರೀಚೆಕೆಯಾಗಿ ಅವರನ್ನು ಕಾಡುತ್ತಲೇ ಇದೆ. ೧೯೯೮ರಿಂದ ಕಂಪೆನಿಯವರು ನೀರು ಮತ್ತು ವಿದ್ಯತ್ ಪೂರೈಕೆ ನಿಲ್ಲಿಸಿದ್ದಾರೆ. ನೀರಿಗಾಗಿ ಮಹಿಳೆಯರು ಕಿಲೋಮೀಟರು ದೂರ ನಡಿಯಬೇಕಾಗಿದೆ. ಕಂಪೆನಿಯವರು ಮನೆ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಸ್ಥಳೀಯ ಪಂಚಾಯತ್ ಏಪ್ರಿಲ್ ೨೦೦೦ದವರೆಗೂ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಕಾಲೋನಿಯಲ್ಲಿ ಶೇಕಡಾ ೩೦ ರಷ್ಟು ಮಂದಿ ತಮಿಳರಾದರೆ ಅದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರದವರಿದ್ದಾರೆ. ಗಡಿನಾಡಿನಲ್ಲಿ ಕುಳಿತು ಭಾಷೆಯ ಬಗ್ಗೆ ಮಾತಾಡುವುದೆ ಅಸಹಜ ಅನ್ನಿಸುತ್ತದೆ. ಯಾಕೆಂದರೆ ಇದೊಂದು ಬಹುಭಾಷಿಕ ನೆಲ. ಇಲ್ಲಿ ವಿವಿಧ ಭಾಷೆಗಳು ಇಲ್ಲದಿದ್ದರೆ ಆಶ್ವರ್ಯ ಪಡಬೇಕೆ ಹೊರತು ಇರುವುದಕ್ಕಲ್ಲ. ಇವರ ಸಂಘಡಿತ ಹೋರಾಟ ನೋಡಿದರೆ ಜನರು ಭಾಷೆಗಾಗಿ ಬದುಕುತ್ತಾರೆ ಎಂದು ಅನ್ನಿಸುತ್ತಿಲ್ಲ; ಬದುಕಿಗಾಗಿ ಒಂದು ಭಾಷೆ ಅಷ್ಟೇ. ಊಟಕ್ಕಿಲ್ಲದವರಿಗೆ ಭಾಷೆಯ ಹಂಗೇನು? ಊಟ ಕೊಡುವ ಭಾಷೆ ಆತನ ಭಾಷೆಯಾಗಬಹುದು. ಇವರಿಗೂ ಹಾಗೇ ಆಗಿದೆ. ತಮ್ಮ ತಮಿಳಿನ ವಾಸನೆಯೊಂದಿಗೆ ಕನ್ನಡ ಮಾತಾಡುತ್ತಾರೆ; ಅದು ಅತ್ತ ತಮಿಳು ಅಲ್ಲ ಇತ್ತ ಕನ್ನಡವೂ ಅಲ್ಲ. ಆ ಎರಡರ ಮಿಶ್ರಣ. ಹೀಗೆ ಇದೊಂದು ವಿವಿಧ, ಧರ್ಮ, ಭಾಷೆ, ಆರ್ಥಿಕ ಚಟುನಟಿಕೆಗಳಿಂದ ಕೂಡಿರುವ ಹಳ್ಳಿ, ಇಲ್ಲಿ ವಿಕೇಂದ್ರೀಕರಣ ಹೇಗೆ ನಡೆದಿದೆ ಎನ್ನುವುದರ ವಿಶ್ಲೇಷಣೆಯನ್ನು ಮುಂದಿನ ಅಧ್ಯಾಯಗಳಲ್ಲಿ ನೋಡಲಿದ್ದೇವೆ.

 

[1]ಹಳ್ಳಿಯ ಸಾಮಾಜಿಕ ವ್ಯವಸ್ಥೆಯಲ್ಲಿ ತಳ ಮಟ್ಟದಲ್ಲಿರುವವರು ಪೇಟೆ ಸೇರಿದಾಗ ಪುನಃ ನಗರಗಳ ತಳ ಮಟ್ಟದಲ್ಲೇ ಜೀವನ ಆರಂಭಿಸಬೇಕಾಗುತ್ತದೆ. ಜೋಪಡಿಗಳಲ್ಲಿ ಬದುಕುವವರ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಗಳನ್ನು ವಿವರಿಸುವ ಹಲವಾರು ಅಧ್ಯಯನಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.-೧.ಅಲೆನ್ ಗಿಲ್ಬರ್ಟ್ ಆಂಡ್ ಜೋಸೆಫ್ ಲಿಟೆನ್, ಪಾವರ್ಟಿ ಆಂಡ್ ಡೆವಲಪ್ಮೆಂಟ್: ಅರ್ಬನೈಸೇಷನ್ ಇನ್ ಥರ್ಡ್ ವರ್ಲ್ಡ್, ಆಕ್ಸ್‌ಪರ್ಡ್, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೮೩ ಮತ್ತು ೨.ಜೂನ್ ಡಬ್ಲ್ಯ ಡಿವಿಟ್, ಪಾವರ್ಟಿ, ಪಾಲಿಸಿ ಆಂಡ್ ಪೊಲಿಟಿಕ್ಸ್ ಇನ್ ಮೆಡ್ರಾಸ್ ಸ್ಲಮ್ಸ್, ನ್ಯೂಡೆಲ್ಲಿ: ಡೇಜ್ ಪಬ್ಲಿಷರ್ಸ್, ೧೯೯೬.

[2]ಸ್ಥಳೀಯ ಸರಕಾರೀತರ ಸಂಸ್ಥೆ ಅರುಣೋದಯ ಸುಮಾರು ಏಳೆಂಟು ವರ್ಷದಿಂದ ಹಳ್ಳಿಯಲ್ಲಿ ದುಡಿಯುತ್ತಿದೆ. ಬಂದ ಆರಂಭದಲ್ಲಿ ಊರವರಿಗೆ ಸಂಸ್ಥೆಯ ಬಗ್ಗೆ ಒಳ್ಳೆ ಅಭಿಪ್ರಾಯ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಊರವರಿಗೆ ಸಂಸ್ಥೆಯ ಬಗ್ಗೆ ತುಂಬಾ ಅಸಮಾಧಾನವಿದೆ. ಅದಕ್ಕೆ ಊರವರು ಕೊಡುವ ಕಾರಣಗಳು ಹಲವು. ಅದರಲ್ಲಿ ಮುಖ್ಯವಾದ ಒಂದು ಕಾರಣವೆಂದರೆ ಸಂಸ್ಥೆ ಸಮಾಜ ಸೇವೆಗೆಂದು ಬಂದು ಈಗ ದುಡ್ಡು ಮಾಡಲು ಶುರು ಮಾಡಿದೆ ಎನ್ನುವುದು. ಇದನ್ನು ಸಂಸ್ಥೆ ವ್ಯವಸ್ಥಾಪಕರು ಒಪ್ಪುವುದಿಲ್ಲ. ಅವರ ಪ್ರಕಾರ ಈಗಲೂ ಹಲವಾರು ಅಭಿವೃದ್ಧಿ ಯೋಜನೆಯಲ್ಲಿ ಪಾಲುಗೊಂಡಿದ್ದು, ಗಣಿ ಕಾರ್ಮಿಕರಿಗೆ ವಸತಿ ಕಲ್ಪಿಸಲು ಪ್ರಯತ್ನಿಸಿದ್ದು, ಗರ್ಭಿಣಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿ ತಂದದ್ದು ಹೀಗೆ ಹಲವು ಉದಾಹರಣೆಗಳನ್ನು ಕೊಡುತ್ತಾರೆ. ನಾನು ಹರಿಜನ ಕೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಂಸ್ಥೆಯ ಇಬ್ಬರು ಸಮಾಜ ಸೇವಕಿಯರು ಹರಿಜನ ಕೇರಿಯಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಲು ಪ್ರಯತ್ನಿಸುತ್ತಿದ್ದರು. ಅವರಲ್ಲಿ ಒಬ್ಬ ಸಮಾಜ ಸೇವಕಿ ಸ್ಥಳೀಯರೆ ಅಂದರೆ ಡಾಲ್ಮಿಯಾ ಕಾಲೋನಿಯವರು. ಅವರಿಗೆ ದೇವದಾಸಿಯರ ಜತೆ ಕೆಲಸ ಮಾಡಿದ ಅನುಬವ ಇದೆ.

[3]ಬಾಳೆದಿಂಡೆಯ ವಿವರಕ್ಕೆ ಎರಡನೇ ಅಧ್ಯಾಯದ ೭೧ನೇ ಪುಟ ನೋಡಿ.

[4]ಕರೀಂಖಾನ್ ಅವರ ಪ್ರಕಾರ ದುಡ್ಡಿನ ಅವ್ಯವಹಾರದ ಆರೋಪದ ಹಿಂದೆ ಊರಿನ ಕೆಲವು ಪ್ರಮುಖರ ಕೈವಾಡ ಇದೆ. ಪ್ರಮುಖರಲ್ಲಿ ಕೆಲವರು ತಾಲ್ಲೂಕು ಪಂಚಯತ್ ಸದಸ್ಯರಾಗಬೇಕೆಂದು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. “ನಾನು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಆದುದು ಅವರ ನೋವನ್ನು ಇನ್ನೂ ಹೆಚ್ಚಿಸಿತು. ಆದರೇನು ಮಾಡುವುದು ಎಂ.ಪಿ. ಪ್ರಕಾಶರ ಕೃಪೆಯಿಂದ ನಾನು ಅಧ್ಯಕ್ಷನಾಗಿದ್ದೇನೆ, ಆಗದವರು ಸಹಿಸಿಕೊಳ್ಳಲೇ ಬೇಕಾಗಿದೆ. ಈಗ ಹೇಗಾದರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಸರಿಯಾಗಿ ಊರಿನ ಕೆಲವು ಮುಸ್ಲಿಂ ಯುವಕರು ಅಂಥವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ” ಇತ್ಯಾದಿ ವಿವರಗಳಿಂದ ಕರೀಂಖಾನ್ ತಮ್ಮ ಸಾಚಾತನವನ್ನು ಸಾಧಿಸುತ್ತಿದ್ದಾರೆ.