ಹಳ್ಳಿಯ ಸಾಮಾಜಿಕ ಹಾಗೂ ಆರ್ಥಿಕ ಬದುಕನ್ನು ಹಿಂದಿನ ಅಧ್ಯಾಯಗಳಲ್ಲಿ ನೋಡಿದ್ದೇವೆ. ಅದೇ ರೀತಿ ವಸಾಹತು ಸಂದರ್ಭದಿಂದ ೧೯೯೫ ರವರೆಗಿನ ರಾಜಕೀಯ ಬೆಳವಣಿಗೆಗಳ ಒಂದು ಸ್ಥೂಲ ಚಿತ್ರಣವನ್ನು ಹಿಂದಿನ ಅಧ್ಯಾಯಗಳಲ್ಲಿ ಕಂಡಿದ್ದೇವೆ. ಈ ಹಳ್ಳಿಯಲ್ಲಿ ನಡೆದ ಮತ್ತು ನಡೆಯುತ್ತಿರುವ ವಿಕೇಂದ್ರೀಕರಣ ಮತ್ತು ಸಶಕ್ತೀಕರಣ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಈ ಅಧ್ಯಾಯದ ಉದ್ದೇಶ. ಬೇರೆ ಬೇರೆ ವಿಧಾನಗಳಿಂದ ವಿಕೇಂದ್ರೀಕರಣವನ್ನು ಅರ್ಥಮಾಡಿಕೊಳ್ಳಬಹುದು. ತುಂಬಾ ಪ್ರಚಾರದಲ್ಲಿರುವ ಮತ್ತು ಹೆಚ್ಚಿನ ಸಂಶೋಧಕರು ಅನುಸರಿಸುವ ವಿಧಾನವೆಂದರೆ ಎಂಪಿರಿಕಲ್ ವಿಧಾನ. ಈ ವಿಧಾನದಲ್ಲಿ ವ್ಯಕ್ತಿಯ ಮೂಲಕ ಸಮಾಜವನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಹತ್ವವಿದೆ. ಕೆಲವು ವ್ಯಕ್ತಿಗಳನ್ನು ಸಂದರ್ಶಿಸಿ ಅವರ ಅಭಿಪ್ರಾಯದ ಹಿನ್ನೆಲೆಯಲ್ಲಿ ಸಂಸ್ಥೆ ಮತ್ತು ಇತರ ವ್ಯವಸ್ಥೆ ಕುರಿತು ತೀರ್ಮಾನಕ್ಕೆ ಬರಲಾಗುತ್ತದೆ. ಎಂಪಿರಿಕಲ್ ವಿಧಾನ ವಿಕೇಂದ್ರೀಕರಣವನ್ನು ಹೇಗೆ ನಿರ್ವಚಿಸಿಕೊಳ್ಳುತ್ತದೆ? ವಿಕೇಂದ್ರೀಕರಣದ ಗತಿಯನ್ನು ಹೇಗೆ ಗುರುತಿಸುತ್ತದೆ? ಇತ್ಯಾದಿಗಳನ್ನು ಇಲ್ಲಿ ವಿವರಿಸಲಾಗಿದೆ. ಈ ದೃಷ್ಟಿಕೋನ ಕೊಡಮಾಡುವ ವಿಧಾನದಿಂದ ಪಿ.ಕೆ.ಹಳ್ಳಿಯ ವಿಕೇಂದ್ರೀಕರಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಈ ವಿಧಾನದ ಇತಿಮಿತಿಗಳೇನು? ಬದಲಿ ಆಲೋಚನೆಗಳೇನು? ಅವು ಎಷ್ಟರ ಮಟ್ಟಿಗೆ ವಿಕೇಂದ್ರೀಕರಣವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿವೆ ಎಂಬುದರ ಚರ್ಚೆ ಮುಂದಿನ ಅಧ್ಯಾಯದಲ್ಲಿದೆ.

ತಾಂತ್ರಿಕ ಪ್ರತಿನಿಧೀಕರಣ

ಐವತ್ತರ ದಶಕದ ಕೊನೆಯ ಹೊತ್ತಿಗೆ ಕಮ್ಯುನಿಟಿ ಡೆವಲಪ್‌ಮೆಂಟ್ ಕಾರ್ಯಕ್ರಮಗಳು ಶುರುವಾದುವು. ಈ ಕಾರ್ಯಕ್ರಮಗಳ ಉದ್ದೇಶ ಜನರನ್ನು ಅಭಿವೃದ್ಧಿ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಪಾಲುದಾರರನ್ನಾಗಿಸುವುದು. ಇದರ ಮೌಲ್ಯಮಾಪನಕ್ಕೆ ಬಲವಂತ ರಾಯ್‌ಮೆಹ್ತಾ ನೇತೃತ್ವದಲ್ಲಿ ಒಂದು ಕಮಿಟಿ ನೇಮಕವಾಯಿತೆಂದು ಪ್ರಸ್ತಾವನೆಯಲ್ಲಿ ಹೇಳಿದ್ದಾನೆ. ಆ ಕಮಿಟಿಯ ಪ್ರಕಾರ ಕಮ್ಯುನಿಟಿ ಡೆವಲಪ್‌ಮೆಂಟ್ ಕಾರ್ಯಕ್ರಮಗಳು ಕೂಡ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ, ಜತೆಗೆ ಇದು ಕೂಡ ಅಧಿಕಾರಶಾಹಿಯಿಂದ ತುಂಬಿದೆ. ಜನರನ್ನು ಸ್ವತಂತ್ರರನ್ನಾಗಿಸುವ ಬದಲು ಸರಕಾರವನ್ನೆ ಹೆಚ್ಚು ಹೆಚ್ಚು ಡಿಪೆಂಡ್ ಆಗುವ ಪ್ರವೃತ್ತಿಯನ್ನು ಈ ಕಾರ್ಯಕ್ರಮ ಕಡಿಮೆಗೊಳಿಸಿಲ್ಲ ಎನ್ನುವ ತೀರ್ಮಾನಕ್ಕೆ ಆ ಕಮಿಟಿ ಬಂತು. ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಗ್ರಾಮ ಪಂಚಾಯತ್ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಅದರ ಮೂಲಕ ಈ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆಂದು ಕಮಿಟಿ ಸಲಹೆ ನೀಡಿತು. ಹೀಗೆ ಆಡಳಿತದ ಹೊಸ ಸ್ಟ್ರಕ್ಚರ್‌ಗಳು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರೂಪಿತಗೊಂಡವು. ಆಡಳಿತದ ಸ್ಟ್ರಕ್ಚರ್‌ಗಳನ್ನು ಹೆಚ್ಚಾಗಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ಸಾಧ್ಯ ಎನ್ನುವ ನಿಲುವು ಇಲ್ಲಿದೆ.[1] ಈ ಗ್ರಹಿಕೆಯಂತೆ ಮುಂದುವರಿದ ವಿಕೇಂದ್ರೀಕರಣವನ್ನು ಈ ಕೆಳಗಿನ ಅಂಶಗಳಿಂದ ಗುರುತಿಸಬಹುದು – ೧. ಆಡಳಿತದ ಸ್ಟ್ರಕ್ಚರುಗಳ ಹೆಚ್ಚಳ ೨. ಅದರಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಪ್ರತಿನಿಧೀಕರಣ ೩. ಸಮಾಜದ ಎಲ್ಲಾ ವರ್ಗಗಳಿಗೂ ಆಡಳಿತದ ಸ್ಟ್ರಕ್ಚರ್‌ಗಳ ಇರುವಿಕೆ ಮತ್ತು ಕಾರ್ಯವಿಧಾನದ ಅರಿವು ೪. ಎಲ್ಲಾ ವರ್ಗಗಳು ಆಡಳಿತದ ಹೊಸ ಸ್ಟ್ರಕ್ಚರ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.

ವಿಕೇಂದ್ರೀಕರಣದ ಗುಣಲಕ್ಷಣಗಳು ನಿರ್ಧಾರವಾದ ನಂತರ ಅದರ ಗತಿ ಅಥವಾ ಪ್ರಮಾಣವನ್ನು ಅರಿತುಕೊಳ್ಳುವುದು ಕಷ್ಟವಲ್ಲ. ಮೇಲೆ ಸೂಚಿಸಿದ ಲಕ್ಷಣಗಳು ಎಷ್ಟರ ಮಟ್ಟಿಗೆ ವಾಸ್ತವದಲ್ಲಿ ಇದೆ ಎನ್ನುವುದನ್ನು ಮಾಪನ ಮಾಡುವ ಮೂಲಕ ವಿಕೇಂದ್ರೀಕರಣದ ಗತಿಯನ್ನು ಗುರುತಿಸಬಹುದು. ಹಳ್ಳಿಯ ಎಲ್ಲಾ ಜಾತಿ/ವರ್ಗಗಳು ಗ್ರಾಮ ಪಂಚಾಯತ್‌ನಲ್ಲಿ ಪ್ರತಿನಿಧೀಕರಣ ಹೊಂದಿದ್ದಾರೆಯೇ? ಪ್ರತಿನಿಧಿಗಳಿಗೆ ಮತ್ತು ಹಳ್ಳಿಗರಿಗೆ ಗ್ರಾಮ ಪಂಚಾಯತ್ವ್ಯವಸ್ಥೆ ಮತ್ತು ಅದರ ಕಾರ್ಯ ವಿಧಾನದ ಅರಿವಿದೆಯೇ? ಅರಿವಿದ್ದರೆ ಸಾಲದು, ಅವರೆಲ್ಲಾ ಸಕ್ರಿಯವಾಗಿ ಗ್ರಾಮ ಪಂಚಾಯತ್ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆಯೇ? ಇತ್ಯಾದಿ ಪ್ರಶ್ನೆಗಳ ಮೂಲಕ ವಿಕೇಂದ್ರೀಕರಣ ಗತಿಯನ್ನು ಅರ್ಥಮಾಡಿಕೊಳ್ಳಬಹುದೆಂಬ ಗ್ರಹಿಕೆಯಿದೆ. ಪಿ.ಕೆ. ಹಳ್ಳಿಯ ಗ್ರಾಮ ಪಂಚಾಯತ್ವ್ಯವಸ್ಥೆಯನ್ನು ಮೇಲಿನ ವಿಧಾನದಲ್ಲಿ ಅಧ್ಯಯನ ಮಾಡಲಗಿದೆ. ಅದರ ಫಲಿತಾಂಶವನ್ನು ಮುಂದೆ ಕೊಟ್ಟಿದ್ದೇನೆ.

೧೯೯೧ರ ಜನಗಣತಿ ಪ್ರಕಾರ ಪಿ.ಕೆ.ಹಳ್ಳಿಯ ಒಟ್ಟು ಜನಸಂಖ್ಯೆ ೩೬೫೪. ಅದರಲ್ಲಿ ೧೮೭೦ ಪುರುಷರು ಮತ್ತು ೧೭೮೪ ಮಹಿಳೆಯರು.[2] ಈ ಅಧ್ಯಯನ ೨೦೦೦ದಲ್ಲಿ ನಡೆದಿದೆ. ಅಂದರೆ ೧೯೯೧ರ ಜನಗಣತಿ ಕೊಡುವ ಅಂಕಿ ಅಂಶಗಳು ವಾಸ್ತವದಿಂದ ತುಂಬಾ ದೂರವಿದೆ. ವರ್ತಮಾನವನ್ನು ಹೆಚ್ಚು ನಿಖರವಾಗಿ ಬಿಂಬಿಸುವ ಲಭ್ಯವಿದ್ದ ಬೇರೆ ಅಂಕಿ ಅಂಶಗಳನ್ನು ಉಪಯೋಗಿಸಲಾಗಿದೆ. ಈ ಹಿಂದೆ ವಿವರಿಸಿದಂತೆ ೧೯೯೯ರಲ್ಲಿ ಸ್ಥಳೀಯ ಸರಕಾರೇತರ ಸಂಸ್ಥೆ ನಡೆಸಿದ ಜನಗಣತಿಯ ಅಂಕಿ ಅಂಶಗಳು ಇಲ್ಲಿ ಹೆಚ್ಚು ಉಪಯುಕ್ತ. ಇದರ ಪ್ರಕಾರ ಒಟ್ಟು ಕುಟುಂಬಗಳ ಸಂಖ್ಯೆ ೭೮೧ ಮತ್ತು ಒಟ್ಟು ಜನ ಸಂಖ್ಯೆ ೪೩೮೬. ಕೋಷ್ಠಕ – ೨ರಲ್ಲಿ ಜಾತಿವಾರು ಕುಟುಂಬಗಳು ಮತ್ತು ಅವುಗಳಿಂದ ಆಯ್ಕೆಯಾದ ಪಂಚಾಯತ್ ಸದಸ್ಯರ ಸಂಖ್ಯೆಗಳು ಇವೆ. ಲಿಂಗಾಯತರ ಕುಟುಂಬಗಳು ೧೧೫, ಕುರುಬರು ೬೬, ನಾಯಕರು ೧೪೮, ಉಪ್ಪಾರು ೨೦, ಮುಸ್ಲಿಂ ಕುಟುಂಬಗಳು ೬೭, ಹರಿಜನರು ಮತ್ತು ವಡ್ಡರು ಸೇರಿ ೨೧೮ ಮನೆಗಳು. ಪಂಚಾಯತ್ಸದಸ್ಯರ ಜಾತಿವಾರು ಲೆಕ್ಕಾಚಾರ ಇಂತಿದೆ. ಲಿಂಗಾಯತ ೧, ಕುರುಬ ೧, ನಾಯಕ ೨, ಹರಿಜನ ೧, ವಡ್ಡ ೨, ಮುಸ್ಲಿಂ ೧ ಮತ್ತು ಉಪ್ಪಾರ ೧. ಮೇಲ್ನೋಟಕ್ಕೆ ಎಲ್ಲಾ ಸುದಾಯಗಳು ಪ್ರತಿನಿಧೀಕರಣಗೊಂಡಂತೆ ಕಾಣುತ್ತದೆ. ಅದೇ ಕೋಷ್ಠಕ ತೋರಿಸುವಂತೆ ಕುಟುಂಬಗಳ ಸಂಖ್ಯೆ ಕಡಿಮೆ ಇರುವ ಹಲವು ಸಮುದಾಯಗಳಿಂದ ಪ್ರತಿನಿಧಿಗಳೆ ಇಲ್ಲ. ಉದಾಹರಣೆಗೆ ಕ್ರಿಶ್ಚಿಯನ್ನರು ೩೭, ಕುಂಬಾರರು ೨೦, ಮತ್ತು ಅಗಸರು ೧೫ ಕುಟುಂಬಗಳಿವೆ. ಇವುಗಳಿಂದ ಪ್ರತಿನಿಧಿಗಳೆ ಇಲ್ಲ. ಇದೇ ರೀತಿ ಇನ್ನೂ ಕಡಿಮೆ ಸಂಖ್ಯೆಯ ಕುಟುಂಬಗಳಿರುವ ಬ್ರಾಹ್ಮಣರು, ಕಂಬಾರರು, ಈಡಿಗರು, ಕ್ಷೌರಿಕರು ಮುಂತಾದ ಸಮುದಾಯಗಳಿಂದ ಪ್ರತಿನಿಧಿಗಳೆ ಇಲ್ಲ. ಇದೇ ರೀತಿ ಇನ್ನೂ ಕಡಿಮೆ ಸಂಖ್ಯೆಯ ಕುಟುಂಬಗಳಿರುವ ಬ್ರಾಹ್ಮಣರು, ಕಂಬಾರರು, ಈಡಿಗರು, ಕ್ಷೌರಿಕರು ಮುಂತಾದ ಸಮುದಾಯಗಳಿಂದ ಪ್ರತಿನಿಧಿಗಳೆ ಇಲ್ಲ. ಜಾತಿ ಅಥವಾ ಸಮುದಾಯದ ನೆಲೆಯಲ್ಲಿ ಪ್ರತಿನಿಧೀಕರಣ ಪರಿಗಣಿಸುವುದಾದರೆ ಸದಸ್ಯತ್ವ ಇಲ್ಲದ ಜಾತಿಗಳ ಸಂಖ್ಯೆ ಹತ್ತಕ್ಕಿಂತಲೂ ಮೇಲಿದೆ ಮತ್ತು ಕುಟುಂಬಗಳ ಸಂಖ್ಯೆ ೧೪೭ ಕ್ಕಿಂತಲೂ ಹೆಚ್ಚಿದೆ. ಎರಡು, ಹರಿಜನರ ವ್ಯಾಖ್ಯಾನ ನಿಜವಾದ ಹರಿಜನರಿಗೆ ಅನ್ಯಾಯ ಮಾಡಿದೆ. ಹಿಂದೆ ವಿವರಿಸಿದಂತೆ ಇಲ್ಲಿ ಎಲ್ಲ ವಡ್ಡರು ಸರಕಾರಿ ಲೆಕ್ಕಚಾರ ಪ್ರಕಾರ ಹರಿಜನರ ಕೆಟಗಿಯಲ್ಲಿ ಬರುತ್ತಾರೆ. ವಾಸ್ತವದಲ್ಲಿ ವಡ್ಡರಿಗೂ ಹರಿಜನರಿಗೂ ತುಂಬಾ ವ್ಯತ್ಯಾಸವಿದೆಯೆಂದು ಎರಡನೇ ಅಧ್ಯಾಯದಲ್ಲಿ ನೋಡಿದ್ದೇವೆ. ಅತಿ ಸೂಕ್ಷ್ಮ ಸಾಮಾಜಿಕ ಅಥವಾ ಸಾಂಸ್ಕೃತಿಕ ವ್ಯತ್ಯಾಸಗಳು ಮೇಲ್ನೋಟಕ್ಕೆ ಅರ್ಥವಾಗುವುದಿಲ್ಲ ಎಂದು ಒಪ್ಪುವಾ. ಆದರೆ ಎಂತಹ ದಡ್ಡನಿಗೂ ಅರ್ಥವಾಗಬಹುದಾದ ಸಾಮಾನ್ಯ ಲೆಕ್ಕಾಚಾರ ಇಲ್ಲಿ ಯಾಕೆ ಕೆಲಸ ಮಾಡಿಲ್ಲ. ಹರಿಜನರ ಒಟ್ಟು ಕುಟುಂಬಗಳ ಸಂಖ್ಯೆ ೧೨೬; ವಡ್ಡರದ್ದು ೯೨. ಈ ಲೆಕ್ಕಚಾರ ಪ್ರಕಾರ ಹರಿಜನರಿಂದ ಇಬ್ಬರು ಮತ್ತು ವಡ್ಡರಿಂದ ಒಬ್ಬ ಸದಸ್ಯ ಬರಬೇಕಿತ್ತು. ಆದರೆ ಈ ರೀತಿ ಆಗಲಿಲ್ಲ. ಕಡಿಮೆ ಸಂಖ್ಯೆಯಲ್ಲಿರುವ ವಡ್ಡರಿಂದ ಇಬ್ಬರು ಮತ್ತು ಜಾಸ್ತಿ ಸಂಖ್ಯೆಯಲ್ಲಿರುವ ಹರಿಜನರಿಂದ ಒಬ್ಬನೇ ಸದಸ್ಯ. ಇದು ಯಾವ ನ್ಯಾಯ? ಈ ಇತಿಮಿತಿಗಳ ನಡುವೆಯೂ ಜಾತಿವಾರು ಕುಟುಂಬಗಳ ಪ್ರತಿನಿಧೀಕರಣದಿಂದಲೇ ವಿಕೇಂದ್ರೀಕರಣವನ್ನು ಅಳೆಯುವುದಾದರೆ ತಕ್ಕ ಮಟ್ಟಿನ ಸುಧಾರಣೆಯಾಗಿದೆ ಎಂದು ಹೇಳಬಹುದು.

ಇನ್ನು ಸದಸ್ಯರ ಶಿಕ್ಷಣ ಮಟ್ಟದ ಪ್ರಶ್ನೆ. ಶಿಕ್ಷಣ ಮಟ್ಟ ಅಷ್ಟೇನೂ ಉತ್ತಮವಿಲ್ಲ. ನಾಲ್ಕು ಸದಸ್ಯರಿಗೆ ಶಿಕ್ಷಣವೇ ಇಲ್ಲ; ಉಳಿದ ಐವರು ಪ್ರಾಥಮಿಕ ಶಾಲೆ ದಾಟಿಲ್ಲ (ಕೋಷ್ಠಕ – ೩). ಹಳ್ಳಿಯ ಒಟ್ಟು ಶೈಕ್ಷಣಿಕ ಮಟ್ಟದ ಹಿನ್ನೆಲೆಯಲ್ಲಿ ಸದಸ್ಯರ ಶೈಕ್ಷಣಿಕ ಸಾಧನೆಯನ್ನು ನೋಡಿದರೆ ಸದಸ್ಯರಿಗೆ ಶಿಕ್ಷಣವಿಲ್ಲ ಎನ್ನುವ ವಿಚಾರ ವಿಶೇಷ ನಿರಾಸೆಗೊಳಿಸುವುದಿಲ್ಲ. ಯಾಕೆಂದರೆ ಶೇಕಡಾ ೭೩ ರಷ್ಟು ಊರವರಿಗೆ ಶಿಕ್ಷಣವೇ ಇಲ್ಲ (ಕೋಷ್ಠಕ – ೧೩). ಪ್ರಾಥಮಿಕ ಶಿಕ್ಷಣವುಳ್ಳವರ ಪ್ರಮಾಣ ಶೇಕಡಾ ೧೭. ಇದಕ್ಕೆ ಹೋಲಿಸಿದರೆ ಶಿಕ್ಷಣ ಇಲ್ಲದ ಸದಸ್ಯರು ಶೇಕಡಾ ೪೪ ಮತ್ತು ಪ್ರಾಥಮಿಕ ಶಿಕ್ಷಣವುಳ್ಳವರು ಶೇಕಡಾ ೫೬. ಲಿಂಗ ಸಮಾನತೆ ಮತ್ತು ಮಹಿಳೆಯರ ಪ್ರತಿನಿಧೀಕರಣ ತಾಂತ್ರಿಕವಾಗಿ ಸಾಧಿತವಾಗಿದೆ. ಊರಲ್ಲಿ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಹೆಚ್ಚಿದೆ. ಆದರೆ ಗ್ರಾಮ ಪಂಚಾಯತ್‌ನ ಒಟ್ಟು ೯ ಸದಸ್ಯರಲ್ಲಿ ೫ ಜನ ಮಹಿಳೆಯರೆ ಇದ್ದಾರೆ. ಆಯ್ಕೆಯಾದವರಲ್ಲಿ ೫ ಜನ ಮಧ್ಯ ವಯಸ್ಕರು, ಉಳಿದವರು ೪೫ ರಿಂದ ೬೦ ವಯಸ್ಸಿನ ಅಂತರದಲ್ಲಿರುವವರು. ಹಳ್ಳಿ ಅವಿಭಕ್ತ ಕುಟುಂಬಗಳಿಂದ ವಿಭಕ್ತ ಕುಟುಂಬಗಳತ್ತ ಚಲಿಸುತ್ತಿದೆ. ಶೇಕಡಾ ೬೫ ರಷ್ಟು ಕುಟುಂಬಗಳು ೫ ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳು. ಶೇಕಡಾ ೨೪ ರಷ್ಟು ಕುಟುಂಬಗಳಲ್ಲಿನ ಸದಸ್ಯರ ಸಂಕ್ಯೆ ೫ ರಿಂದ ೧೦. ತುಂಬಾ ವಿಶೇಷವೆಂದರೆ ಹತ್ತಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳು ಶೇಕಡಾ ೧೧ ಮಾತ್ರ (ಕೋಷ್ಠಕ – ೩). ಈ ಹಳ್ಳಿಯ ಆರ್ಥಿಕ ಪರಿವರ್ತನೆ ಮತ್ತು ವಲಸೆಗಾರರ ಕುರಿತು ಈ ಹಿಂದೆಯೇ ವಿವರಿಸಿದ್ದೇನೆ. ಹಳ್ಳಿಯಲ್ಲಿನ ಕುಟುಂಬಗಳೇ ವಿಭಜನೆಯಾಗಿ ವಿಭಕ್ತ ಕುಟುಂಬಗಳಾದುದರಿಂದ ಈ ಹೆಚ್ಚಳ ಸಾಧ್ಯ ಎನ್ನಲಾಗುವುದಿಲ್ಲ. ಅಂದರೆ ಅವಿಭಕ್ತ ಕುಟುಂಬಗಳು ವಿಭಜನೆಯೇ ಆಗಿಲ್ಲ ಎಂದಲ್ಲ. ಇಂದು ಕೂಡ ಇಲ್ಲಿನ ಮೇಲು ಜಾತಿಗಳಲ್ಲಿ ಎರಡು ಅಥವಾ ಮೂರು ತಲೆಮಾರಿನ ಸದಸ್ಯರನ್ನು ಹೊಂದಿರುವ ಕುಟುಂಬಗಳು ತುಂಬಾ ಇವೆ. ಇದಕ್ಕೆ ಕಾರಣವು ಇದೆ. ಊರಲ್ಲಿನ ದೊಡ್ಡ ಭೂಮಾಲಿಕರೆಂದರೆ ಮೇಲು ಜಾತಿಯವರೇ. ಕುಟುಂಬದ ಎಲ್ಲರಿಗೂ ಮದುವೆಯಾಗದೆ ಆಸ್ತಿ ಪಾಲಾಗುವುದಿಲ್ಲ. ವಿವಿಧ ಕಾರಣಗಳಿಂದ ಮದುವೆಗಳು ಆಗದೆ ಹಲವಾರು ಕುಟುಂಬಗಳು ಅನಿವಾರ್ಯವಾಗಿ ಅವಿಭಕ್ತ ಕುಟುಂಬಗಳಾಗಿ ಉಳಿದಿವೆ. ಇವರಿಗೆ ಹೋಲಿಸಿದರೆ ಕೆಳ ಪೇಜ್೧೨೬ – ೧೩೦

ಜಾತಿಗಳಲ್ಲಿ ಮತ್ತು ವಲಸೆ ಬಂದವರಲ್ಲಿ ಆಸ್ತಿ ಪಾಸ್ತಿಯ ಪ್ರಶ್ನೆ ಇಲ್ಲ. ತನ್ನ ದುಡಿತ ತನ್ನ ಬದುಕು ಎನ್ನುವವರೆ ಹೆಚ್ಚು. ಹಾಗಾಗಿ ಅವರಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು. ಸದಸ್ಯರಲ್ಲಿ ಶೇಕಡಾ ೪೪ ರಷ್ಟು ವಿಭಕ್ತ ಕುಟುಂಬದಿಂದ ಬಂದವರು. ಶೇಕಡಾ ೪೪ ರಷ್ಟು ಸದಸ್ಯರು ೫ ರಿಂದ ೧೦ ಸದಸ್ಯರಿರುವ ಕುಟುಂಬದಿಂದ ಬಂದವರು. ಕೇವಲ ಒಬ್ಬ ಸದಸ್ಯ ಮಾತ್ರ ಹತ್ತರಿಂದಲೂ ಹೆಚ್ಚು ಸದಸ್ಯರಿರುವ ಕೌಟುಂಬಿಕ ಹಿನ್ನೆಲೆಯುಳ್ಳವರು.

ಸದಸ್ಯರ ಆರ್ಥಿಕ ಹಿನ್ನೆಲೆ ಗುರುತಿಸಲು ಮೂರು ಸೂಚ್ಯಂಕಗಳನ್ನು ಬಳಸಿದ್ದೇನೆ. ಒಂದು ವೃತ್ತಿ, ಎರಡು ಭೂ ಹಿಡುವಳಿ ಮತ್ತು ಮೂರು ವಾರ್ಷಿಕ ಆದಾಯ. ಹಳ್ಳಿಯ ಜನರ ವೃತ್ತಿ ಮೂಲಗಳು ಇಂತಿವೆ. ಕೃಷಿಯಲ್ಲಿ ತೊಡಗಿಸಿಕೊಂಡವರ ಪ್ರಮಾಣ ತುಂಬಾ ಕಡಿಮೆ; ಊರಿನ ಶೇಕಡಾ ೨೪ ರಷ್ಟು ಜನರು ಕೃಷಿಕರು (ಕೋಷ್ಠಕ – ೨೨). ಉಳಿದವರು ಕೃಷಿಯೇತರ ಚಟುವಟಿಕೆಗಳಲ್ಲಿದ್ದಾರೆ. ಕೃಷಿಯೇತರ ಚಟುವಟಿಕೆಗಳಲ್ಲಿ ಸಿಂಹಪಾಲು ವ್ಯಾಗನ್ಲೋಡಿಂಗ್ ಮತ್ತು ಗಣಿ ಕಾರ್ಮಿಕತ್ವವೇ. ಊರಿನ ಶೇಕಡಾ ೫೦ರಷ್ಟು ಜನರು ಆ ಎರಡು ಮೂಲಗಳನ್ನು ನಂಬಿದ್ದಾರೆ. ವ್ಯಾಪಾರ ಮತ್ತು ಸೇವಾವಲಯದಲ್ಲಿ ಶೇಕಡಾ ೫ ರಷ್ಟು ಜನರಿದ್ದಾರೆ. ಸೇವಾವಲಯದಲ್ಲಿ ಬರುವ ಮುಖ್ಯ ಚಟುವಟಿಕೆಯೆಂದರೆ ವಾಹನ ಚಾಲಕರು; ಅದೂ ಗಣಿ ಸಂಬಂಧಿ ಸಾಗಾಟ – ಲಾರಿ ಅಥವಾ ಟ್ರಕ್ ಚಾಲಕರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಸೇವಾವಲಯ ಎಂದು ಗುರುತಿಸುವ ಬದಲು ಗಣಿ ಸಂಬಂಧೀ ಚಟುವಟಿಕೆಗಳ ಜತೆ ಸೇರಿಸಬಹುದಿತ್ತು. ಸದ್ಯಕ್ಕೆ ಅವರು ಸಂಚಾರಿ ವಲಯದಲ್ಲಿ ದುಡಿಯುತ್ತಿರುವುದರಿಂದ ಸೇವಾ ವಲಯದಲ್ಲಿ ಸೇರಿಸಲಾಗಿದೆ. ಊರಿನ ಜನರ ವೃತ್ತಿ ಹಿನ್ನೆಲೆಯ ಈ ಅಂಕಿ ಅಂಶಗಳ ಜತೆ ಸದಸ್ಯರ ವೃತ್ತಿ ಹಿನ್ನೆಲೆ ಹೋಲಿಸಿದರೆ ಬೇರೆ ಬೇರೆ ವಲಯದ ಪ್ರತಿನಿಧೀಕರಣ ಸಿಗುತ್ತದೆ. ಶೇಕಡಾ ೪೪ ರಷ್ಟು ಸದಸ್ಯರು ಕೃಷಿ ಹಿನ್ನೆಲೆಯಿಂದ ಬಂದರೆ ಅಷ್ಟೇ ಪ್ರಮಾಣದ ಸದಸ್ಯರು ವ್ಯಾಗನ್ಲೋಡಿಂಗ್ ಹಿನ್ನೆಲೆಯಿಂದಲೂ ಬಂದಿದ್ದಾರೆ (ಕೋಷ್ಠಕ – ೩). ವ್ಯಾಪಾರ ಅಥವಾ ಸೇವಾವಲಯದ ಹಿನ್ನೆಲೆಯಿಂದ ಒಬ್ಬ ಪ್ರತಿನಿಧಿ ಬಂದಿದ್ದಾರೆ. ಅವರು ಮಹಿಳಾ ಪ್ರತಿನಿಧಿ – ಸಂಕ್ಲಮ್ಮ. ಅವರ ಉದ್ಯೋಗ ಕಾಯಿ ಪಲ್ಲೆ ವ್ಯಾಪಾರ. ಹಿಂದೆ ತಲೆ ಮೇಲೆ ಹೊತ್ತು ಊರೂರುಸುತ್ತಿ ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಒಂದು ಪೆಟ್ಟಿಗೆ ಅಂಗಡಿ ಇರಿಸಿ ಅದರಲ್ಲೇ ಕಾಯಿಪಲ್ಲೆ ವ್ಯಾಪಾರ ಮುಂದುವರಿಸಿದ್ದಾರೆ. ಊರಿನ ವೃತ್ತಿ ಹಿನ್ನೆಲೆ ಗಮನಿಸಿದರೆ ಶೇಕಡಾ ೭೫ ರಷ್ಟು ಸದಸ್ಯರು ಕೃಷಿಯೇತರ ವೃತ್ತಿ ಹಿನ್ನೆಲೆ ಇರುವವರು ಬರಬೇಕಿತ್ತು. ಆ ರೀತಿ ಆಗಿಲ್ಲ.

ಅಂಕಿ ಅಂಶಗಳ ಪ್ರಕಾರ ಸುಮಾರು ಶೇಕಡಾ ೭೦ ರಷ್ಟು ಜನರಿಗೆ ಭೂಮಿಯೇ ಇಲ್ಲ. ಆದರೆ ಇದು ಸರಿಯಾದ ಮಾಹಿತಿಯಲ್ಲ. ಯಾಕೆಂದರೆ ಇದು ಕೇವಲ ಪಟ್ಟಾಭೂಮಿಗೆ ಸಂಬಂಧಪಟ್ಟ ಅಂಕಿ – ಅಂಶಗಳು. ಒತ್ತುವರಿ ಭೂಮಿ ಹೊಂದಿದವರನ್ನು ಇಲ್ಲಿ ಸೇರಿಸಿದರೆ ಭೂಮಿ ಇದ್ದವರ ಸಂಖ್ಯೆ ಹೆಚ್ಚಾಗುತ್ತದೆ. ಬಹುತೇಕ ಒತ್ತುವರಿ ಭೂಮಿ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಸಕ್ರಮವಾಗಿಲ್ಲ. ಕೆಲವರು ಅರ್ಜಿ ಹಾಕಿಲ್ಲ. ಇನ್ನು ಕೆಲವರಿಗೆ ಅಧಿಕಾರಶಾಹಿಯ ಅಡೆತಡೆಗಳನ್ನು ದಾಟಿ ಸಕ್ರಮಗೊಳಿಸಲು ಆಗಿಲ್ಲ. ಅಂತಹ ಭೂಮಿಗಳನ್ನು ಹಕ್ಕಿನ ಭೂಮಿಯೆಂದು ಪರಿಗಣಿಸುವುದು ಕಷ್ಟ. ಇದಕ್ಕೆ ಕಾರಣವು ಇದೆ. ಹಂಪಿಗೆ ಹೋಗುವ ರಸ್ತೆಯ ಬದಿಗಿರುವ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಇಲ್ಲಿ ಜಂಟಿ ಅರಣ್ಯ ಯೋಜನೆ ಆರಂಭವಾದ ಸಂದರ್ಭದಲ್ಲಿ ಇಲಾಖೆಯವರು ಆ ಒತ್ತುವರಿ ಭೂಮಿಗಳನ್ನು ರೈತರಿಂದ ಬಿಡಿಸಿ ಅರಣ್ಯ ಯೋಜನೆಯಡಿಯಲ್ಲಿ ತಂದಿದ್ದಾರೆ. ಈಗ ಒತ್ತುವರಿ ಭೂಮಿ ಇರುವುದು ಗಣಿಗಾರಿಕೆ ನಡಿಯುತ್ತಿರುವ ಪ್ರದೇಶಗಳಲ್ಲಿ. ಅದು ಸಂಡೂರು ತಾಲ್ಲೂಕಿಗೆ ಸೇರಿದೆ. ಆ ತಾಲ್ಲೂಕಿನ ಸರಹದ್ದಿನಲ್ಲಿ ಈ ಒತ್ತುವರಿ ಭೂಮಿಗಳಿಗೆ. ಅಲ್ಲಿನ ಅಧಿಕಾರಿಗಳು ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಇಷ್ಟರವರೆಗೆ ಕ್ರಮಕೈಗೊಂಡಿಲ್ಲ. ಹಾಗೆಂದು ಅದು ಎಂದೆಂದು ಇದೇ ರೀತಿ ಮುಂದುವರಿದೀತೆಂದು ಹೇಳುವುದು ಕಷ್ಟ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭೂ ಹಿಡುವಲಿಯ ಪ್ರಶ್ನೆಯನ್ನು ವಿಶ್ಲೇಷಿಸಿದರೆ ಭೂ ರಹಿತರ ಸಂಖ್ಯೆಯೇ ಹೆಚ್ಚು ಇದೆ. (ಕೋಷ್ಠಕ – ೧೯).

ಸದಸ್ಯರಲ್ಲಿ ಶೇಕಡಾ ೨೨ ರಷ್ಟು ಮಂದಿ ಭೂರಹಿತರು (ಕೋಷ್ಠಕ – ೩). ಶೇಕಡಾ ೫೦ ರಷ್ಟು ಸದಸ್ಯರು ಎರಡು ಎಕ್ರೆಗಳಿಗಿಂತಲೂ ಕಡಿಮೆ ಭೂಹಿಡುವಳಿದಾರರು. ಎರಡು ಎಕ್ರೆಗಿಂತ ಕಡಿಮೆ ಭೂಮಿ ನೀರಾವರಿ ಇರುವ ಪ್ರದೇಶಗಳಲ್ಲಿ ಒಂದು ಸಣ್ಣ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ಸಾಕು. ಪಿ.ಕೆ. ಹಳ್ಳಿಯಂತಹ ಒಣ ಪ್ರದೇಶದಲ್ಲಿ ಎರಡು ಎಕ್ರೆ ಭೂಮಿ ಆದಾಯದ ಮುಖ್ಯ ಮೂಲವಾಗಲು ಸಾಧ್ಯವಿಲ್ಲ. ಇವರುಗಳು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಇತರ ಮೂಲಗಳನ್ನು ಅವಲಂಭಿಸಲೇಬೇಕು. ಆದುದರಿಂದ ಇವರನ್ನೆಲ್ಲಾ ಭೂ ರಹಿತರೊಂದಿಗೆ ಸಮೀಕರಿಸಬಹುದು. ಹಾಗಾದಾಗ ಭೂ ರಹಿತರ ಪ್ರತಿನಿಧೀಕರಣ ಶೇಕಡಾ ೭೮ ರಷ್ಟಾಗುತ್ತದೆ. ಇದು ಊರಲ್ಲಿರುವ ಭೂರಹಿತ ಕುಟುಂಬಗಳ ಮತ್ತು ಎರಡು ಎಕ್ರೆಗಳಿಗಿಂತಲೂ ಕಡಿಮೆ ಭೂಮಿ ಇರುವ ಕುಟುಂಬಗಳು ಒಟ್ಟು ಸಂಖ್ಯೆಗೆ ಸಮವಾಗಿವೆ. ಹಳ್ಳಿಯ ಶೇಕಡಾ ೧೩ರಷ್ಟು ಕುಟುಂಬಗಳು ೩ ರಿಂದ ೫ ಎಕ್ರೆ ಭೂಮಿ ಹೊಂದಿವೆ. ಆ ಗುಂಪಿನಿಂದ ಶೇಕಡಾ ೧೧ ರಷ್ಟು ಸದಸ್ಯರು ಬಂದಿದ್ದಾರೆ. ಊರಿನ ಶೇಕಡಾ ೫ ರಷ್ಟು ಕುಟುಂಬಗಳು ೫ ರಿಂದ ೧೦ ಎಕ್ರೆಯಷ್ಟು ಭೂಮಿ ಒಡೆತನವುಳ್ಳವರು. ಆ ಗುಂಪಿನಿಂದ ಶೇಕಡಾ ೨೨ ರಷ್ಟು ಸದಸ್ಯರು ಇದ್ದಾರೆ. ೫ ಸದಸ್ಯರ ವಾರ್ಷಿಕ ಆದಾಯ ಹತ್ತು ಸಾವಿರಕ್ಕಿಂತಲೂ ಕಡಿಮೆ ಇದೆ. ಹತ್ತರಿಂದ ಇಪ್ಪತ್ತು ಸಾವಿರ ಆದಾಯವಿರುವ ಸದಸ್ಯರು ಒಬ್ಬರಿದ್ದಾರೆ. ಆದರೆ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವ ಸದಸ್ಯರು ಮೂವರಿದ್ದಾರೆ (ಕೋಷ್ಠಕ – ೩).

ಗ್ರಾಮ ಪಂಚಾಯತ್ಸದಸ್ಯರ ರಾಜಕೀಯ ಪಕ್ಷದ ಒಲವನ್ನು ಗುರುತಿಸುವುದು ಸ್ವಲ್ಪ ಕಷ್ಟವೇ ಸರಿ. ಆಯ್ಕೆಯಾದಾಗ ಒಂದು ಪಕ್ಷವಾದರೆ ಅಧ್ಯಕ್ಷರ ಚುನಾವಣೆಯಲ್ಲಿ ಮತ್ತೊಂದು ಪಕ್ಷ. ರಾಜ್ಯದಲ್ಲಿ ಅಧಿಕಾರ ಬದಲಾದರೆ ಪುನಃ ಪಂಚಾಯತ್ಸದಸ್ಯರ ಪಕ್ಷ ಬದಲಾಗುವ ಸಾಧ್ಯತೆ ಇದೆ. ಪಕ್ಷ ಬದಲಾಯಿಸುವ ವಿಚಾರದಲ್ಲಿ ಇವರುಗಳು ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳಿಗಿಂತ ವಿಶೇಷ ಭಿನ್ನವಲ್ಲ. ಅಧ್ಯಯನದ ಸಂದರ್ಭದಲ್ಲಿ ೩ ಜನ ಕಾಂಗ್ರೆಸ್ ಪಕ್ಷ ಮತ್ತು ಉಳಿದವರು ಜನತಾ ದಳಕ್ಕೆ ಸೇರಿದ್ದರು. ಅವಿರೋಧ ಆಯ್ಕೆಯ ಸಂದರ್ಭದಲ್ಲಿ ೫ ಜನ ಕಾಂಗ್ರೆಸ್ಸಿಗರು ಮತ್ತು ನಾಲ್ಕು ಮಂದಿ ದಳದವರಾಗಿದ್ದರು. ಆ ಸಂದರ್ಭಧಲ್ಲಿ ರಾಜ್ಯದಲ್ಲಿ ಜನತಾ ದಳ ಸರಕಾರವಿತ್ತು. ಆ ಪಕ್ಷದ ತಾಲ್ಲೂಕು ಮಟ್ಟದ ನಾಯಕರುಗಳ ಪ್ರಭಾವದಿಂದ ಇಬ್ಬರು ದಳದ ಕಡೆಗೆ ಹೋದರು. ಇದನ್ನು ಅಧ್ಯಕ್ಷರ ಆಯ್ಕೆಯನ್ನು ವಿವರಿಸುವಲ್ಲಿ ತಿಳಿಸಲಾಗಿದೆ. ಆದುದರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಅಧ್ಯಕ್ಷನಾಗಲು ಆಗಲಿಲ್ಲ. ದಳದ ಕಾರ್ಯಕ್ರಮವಿದ್ದರೆ ಎಲ್ಲಾ ಸದಸ್ಯರು (ಪುರುಷರು) ಪಕ್ಷ ಬೇಧವಿಲ್ಲದೆ ಹಾಜರಾಗುತ್ತಾರೆ. ಅದು ಪಕ್ಷದ ಒಲವಿನಿಂದ ಎಂದು ಹೇಳಲು ಸಾಧ್ಯವಿಲ್ಲ. ೨೦೦೦ ದಲ್ಲಿ ಹೊಸ ಸದಸ್ಯರು ಬಂದಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಕಾಂಗ್ರೆಸ್‌ನವರು ಬಳ್ಳಾರಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದರು. ಅದಕ್ಕೆ ಎಲ್ಲಾ ಸದಸ್ಯರು ಹಾಜರಾಗಿದ್ದಾರೆ. ಹೀಗೆ ಪಂಚಾಯತ್ ಸದಸ್ಯರ ಪಕ್ಷವನ್ನು ಗುರುತಿಸುವುದು ಕಷ್ಟ.

ಸದಸ್ಯರ ಅರಿವು ಮತ್ತು ಭಾಗವಹಿಸುವಿಕೆ

ಈಗಾಗಲೇ ಆಗಿರುವ ಅಧ್ಯಯನಗಳ ಪ್ರಕಾರ ಅರಿವು ಮತ್ತು ಭಾಗವಹಿಸುವಿಕೆ ಪರಸ್ಪರ ಸಂಬಂಧವುಳ್ಳವಾಗಿವೆ.[3] ಭಾಗವಹಿಸುವಿಕೆಗೆ ಅರಿವಿನ ಅಗತ್ಯವಿದೆ. ಅರಿವಿದ್ದವರೆಲ್ಲಾ ಭಾಗವಹಿಸುತ್ತಾರೆ ಎನ್ನಲಾಗುವುದಿಲ್ಲ. ಪಂಚಾಯತ್ ಸಂಸ್ಥೆ ಮತ್ತು ಅವುಗಳ ಪರಿಕರಗಳ ಕುರಿತು ಪಂಚಾಯತ್ ಸದಸ್ಯರ ಅರಿವು ಮತ್ತು ಭಾಗವಹಿಸುವಿಕೆಯನ್ನು ತಿಳಿಯಲು ಈ ಕೆಳಗಿನ ಪ್ರಶ್ನೆಗಳನ್ನು ಕೇಳಲಾಯಿತು. ಗ್ರಾಮಸಭೆ, ಫಲಾನುಭವಿಗಳ ಆಯ್ಕೆ, ಆಯವ್ಯಯ ಪಟ್ಟಿ, ವಾರ್ಷಿಕ ಯೋಜನೆ, ಕೃಷಿ ಅಭಿವೃದ್ದಿ ಕಾರ್ಯಕ್ರಮಗಳು, ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇತ್ಯಾದಿ ಕಾರ್ಯಕ್ರಮಗಳ ಅರಿವಿದೆಯೇ? ಇವುಗಳನ್ನು ಕಾರ್ಯಗತಗೊಳಿಸುವಲ್ಲಿ ನೀವು ಭಾಗವಹಿಸಿದ್ದೀರಾ? ಎಂದು ಸದಸ್ಯರನ್ನು ಕೇಳಲಾಯಿತು. ಅವರ ಉತ್ತರಗಳನ್ನು ಕೋಷ್ಠಕ – ೪ರಲ್ಲಿ ಕ್ರೋಢೀಕರಿಸಲಾಗಿದೆ. ಅದರ ಪ್ರಕಾರ ಗ್ರಾಮಸಭೆ ಇರುವುದರ ಬಗೆಗೆ ಎಲ್ಲಾ ಸದಸ್ಯರಿಗೂ ಅರಿವಿದೆ. ಅದು ವರ್ಷಕ್ಕೆ ಎರಡು ಬಾರಿ ನಡಿಯಬೇಕು ಎನ್ನುವುದರ ಅರಿವೂ ಇದೆ. ಒಬ್ಬರನ್ನು ಹೊರತುಪಡಿಸಿ ಹೆಚ್ಚು ಕಡಿಮೆ ಎಲ್ಲಾ ಸದಸ್ಯರು ಗ್ರಾಮಸಭೆಯಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರೆ. ಗ್ರಾಮಸಭೆಯಲ್ಲಿ ಚರ್ಚೆಗೆ ಬರುವ ಮುಖ್ಯ ವಿಚಾರ ಫಲಾನುಭವಿಗಳ ಆಯ್ಕೆ. ಆದರೆ ಫಲಾನುಭವಿಗಳ ಆಯ್ಕೆ ಗ್ರಾಮಸಭೆಯಲ್ಲಿ ಆಗುವುದಿಲ್ಲ. ಆ ವಿಚಾರ ಚರ್ಚೆಗೆ ಬಂದ ಕೂಡಲೆ ಜಗಳ ಆರಂಭವಾಗುತ್ತದೆ. ವಿತರಣೆಗಿರುವ ಮನೆ ಅಥವಾ ಭಾಗ್ಯಜ್ಯೋತಿ ದೀಪಗಳು ಅಥವಾ ಇತರ ಸವಲತ್ತುಗಳು ಕಡಿಮೆ ಇರುತ್ತವೆ. ಸವಲತ್ತುಗಳು ಬೇಕು ಎನ್ನುವವರು ಜಾಸ್ತಿ ಇರುತ್ತಾರೆ. ಸಭೆಯಲ್ಲಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲು ಅಸಾಧ್ಯವಾಗುತ್ತದೆ ಎಂದು ಎಲ್ಲಾ ಸದಸ್ಯರು ಅಭಿಪ್ರಾಯಪಡುತ್ತಾರೆ. ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಆಗದಿದ್ದರೆ ಎಲ್ಲಿ ಆಗುತ್ತದೆ? ಮತ್ತು ಅಲ್ಲಿ ನೀವು ಭಾಗವಹಿಸುತ್ತೀರಾ? ಎನ್ನುವ ಪ್ರಶ್ನೆಗೆ ಬೇರೆ ಬೇರೆ ಉತ್ತರಗಳು ದೊರೆತವು. ನಾಲ್ಕು ಜನ ಪುರುಷ ಸದಸ್ಯರ ಪ್ರಕಾರ ಫಲಾನುಭವಿಗಳ ಆಯ್ಕೆ ಗ್ರಾಮ ಪಂಚಾಯತ್ಕಚೇರಿಯಲ್ಲಿ ಆಗುತ್ತದೆ. ಈ ಅಭಿಪ್ರಾಯವನ್ನು ಮಹಿಳಾ ಸದಸ್ಯರು ಒಪ್ಪುವುದಿಲ್ಲ. ಫಲಾನುಭವಿಗಳ ಆಯ್ಕೆ ಎಲ್ಲಿ ನಡೆಯುತ್ತದೆ ಎಂದು ನಮಗೆ ಸರಿಯಾದ ತಿಳುವಳಿಕೆ ಇಲ್ಲ ಎಂದು ಮಹಿಳಾ ಸದಸ್ಯರು ಅಭಿಪ್ರಾಯ ಪಡುತ್ತಾರೆ. ಮುಂದುವರಿದು ಫಲಾನುಭವಿಗಳ ಆಯ್ಕೆಯಲ್ಲಿ ನಮ್ಮನ್ನು ಪುರುಷ ಸದಸ್ಯರು ಸೇರಿಸುತ್ತಿಲ್ಲ. ಫಲಾನುಭವಿಗಳ ಆಯ್ಕೆ ಇರುವ ಸಭೆಯಂದು ನಮಗೆ ಉಪಹಾರ ಕೊಟ್ಟು ಉಪಯೋಗವಿಲ್ಲದ ಕೆಲವು ವಿಚಾರಗಳನ್ನು ಚರ್ಚಿಸಿ ಮನೆಗೆ ಕಳುಹಿಸುತ್ತಾರೆ. ನಾವು ಮನೆಗೆ ಹೋದ ನಂತರ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೆಲವು ಪುರುಷ ಸದಸ್ಯರು ಸೇರಿಕೊಂಡು ಫಲಾನುಭವಿಗಳ ಆಯ್ಕೆ ಮಾಡುತ್ತಾರೆ ಎಂದು ಮಹಿಳಾ ಸದಸ್ಯರು ಆರೋಪಿಸುತ್ತಾರೆ.

ಸಾಂಪ್ರದಾಯಿಕ ಪರಿಸರ ಮಹಿಳೆಗೆ ತುಂಬಾ ಸೀಮಿತ ಬದುಕನ್ನಿತ್ತಿದೆ. ಆಕೆಯ ಬದುಕಿನ ಬಹುಭಾಗ ತನ್ನ ಮೂಲಭೂತ ಅವಶ್ಯಕತೆಗಳನ್ನು ರೂಢಿಸಿಕೊಳ್ಳುವುದಕ್ಕೆ ವ್ಯಯವಾಗುತ್ತಿದೆ. ಆಕೆಗೆ ತನ್ನನ್ನು ನಿಕೃಷ್ಟವಾಗಿ ಇಟ್ಟಿರುವ ರಚನೆಗಳ ಬಗ್ಗೆ ಅರಿವೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಆ ಚೌಕಟ್ಟುಗಳ ವಿರುದ್ಧ ಪ್ರತಿಭಟಿಸುವ ಪ್ರಶ್ನೆ ಎಲ್ಲಿದೆ? ಆದರೆ ಆಕೆಯ ಬಿಡುಗಡೆ ಇರುವುದು ತನ್ನ ಅಸ್ತಿತ್ವದ ಹೋರಾಟದೊಂದಿಗೆ ತನ್ನನ್ನು ನಿಕೃಷ್ಟವಾಗಿ ಇಟ್ಟಿರುವ ಚೌಕಟ್ಟಿನಿಂದಲೂ ಬಿಡುಗಡೆ ಪಡೆದಾಗ ಮಾತ್ರ. ಆದುದರಿಂದಲೇ ಮಹಿಳಾವಾದಿಗಳು ವ್ಯವಸ್ಥೆ ಕೊಡಮಾಡುವ ರಚನೆಗಳನ್ನು ಮೀರಿ ಬೆಳೆಯಲು ಮಹಿಳೆಗೆ ಅವಕಾಶ ಕೊಡಬೇಕೆಂದು ವಾದಿಸಿದ್ದಾರೆ.[4] ಅವರ ಪ್ರಯತ್ನದ ಫಲವಾಗಿ ಮಹಿಳೆಗೆ ಇಂದು ಕೇವಲ ಅವಳ ಮೇಟಿರಿಯಲ್ ಅವಶ್ಯಕತೆಗಳಿಗೆ ಸ್ಪಂದಿಸಿದರೆ ಸಾಲದು ಅವಳ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಲ್ಲೂ ಸಮಾನತೆ ಬೇಕು ಎನ್ನುವ ಅಂಶಕ್ಕೆ ಬಲ ಬಂದಿದೆ. ಅದರ ಪರಿಣಾಮವಾಗಿ ಗ್ರಾಮ ಪಂಚಾಯತ್‌ನಲ್ಲಿ ಮಹಿಳೆಯರಿಗೆ ಸೀಟುಗಳನ್ನು ಕಾದಿರಿಸುವ ಕ್ರಮ ಜಾರಿಯಲ್ಲಿದೆ. ಭಾರತದಂತಹ ವಿಸ್ತಾರವಾದ ದೇಶದಲ್ಲಿ ಎಲ್ಲಾ ಕಡೆ ಒಂದೇ ರೀತಿಯಲ್ಲಿ ಅದು ಪರಿಣಾಮ ಬೀರಿಲ್ಲ. ಪ್ರಸಕ್ತ ಅಧ್ಯಯನದಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆಯನ್ನು ನೋಡಿದ್ದೇವೆ. ಬೇರೆ ಕೆಲವು ಕಡೆ ಸ್ವಲ್ಪ ಬದಲಾವಣೆಗಳಿವೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಉದಾಹರಣೆಗೆ ಒರಿಸ್ಸಾದ ಕೆಲವೊಂದು ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆತ ನಂತರ ಪಂಚಾಯತ್‌ಗಳ ನಿರ್ಣಯ ಕೈಗೊಳ್ಳುವ ಕ್ರಮದಲ್ಲಿ ಪರಿವರ್ತನೆ ಬಂದಿದೆ ಎನ್ನುತ್ತಾರೆ ಒಬ್ಬ ಸಂಶೋಧಕಿ.[5] ಕಾನೂನು ಮಹಿಳೆಗೆ ಪ್ರಾತಿನಿಧ್ಯ ಒದಗಿಸಿದೆ. ಆದರೆ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರ ಅವರ ಪ್ರಾತಿನಿಧ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ದೊಡ್ಡ ತೊಡಕಾಗಿವೆ ಎಂದು ಕೇರಳದ ಕೆಲವು ಗ್ರಾಮ ಪಂಚಾಯತ್‌ಗಳನ್ನು ಅಧ್ಯಯನ ಮಾಡಿದವರೊಬ್ಬರ ಅಭಿಪ್ರಾಯ.[6] ವಿಕೇಂದ್ರೀಕರಣದ ವಿಚಾರದಲ್ಲಿ ಇಡೀ ದೇಶಕ್ಕೇ ಮಾದರಿಯಾಗಿರುವ ಕೇರಳದಲ್ಲೇ ಮಹಿಳೆಯರ ಪ್ರಾತಿನಿಧ್ಯದ ಸ್ಥಿತಿ ಇದಾದರೆ ಉಳಿದ ಭಾಗಗಳಲ್ಲಿ ಅವರ ಸ್ಥಿತಿ ಹೇಗಿರಬಹುದೆಂಬ ಚಿಂತೆ ಕಾಡಬಹುದು. ಇದು ಸಹಜ ಕೂಡ. ಉತ್ತರ ಭಾರತದ ಕೆಲವು ಹಳ್ಳಿಗಳಲ್ಲಿ ಮಹಿಳಾ ಪಂಚಾಯತ್ ಸದಸ್ಯರ ಸ್ಥಿತಿ ನಿರಾಶದಾಯಕವಾಗಿದೆ. ಮಧ್ಯ ಪ್ರದೇಶದ ಒಂದು ಊರಿನ ಗ್ರಾಮ ಪಂಚಾಯತ್ ಅಧ್ಯಕ್ಷೆಗೆ ಸ್ವಾತಂತ್ರ್ಯ ದಿನದಂದು ಧ್ವಜ ಹಾರಿಸಲು ಊರವರು ಅವಕಾಶ ಕೊಡಲಿಲ್ಲ. ಮತ್ತೊಂದು ಗ್ರಾಮ ಪಂಚಾಯತ್ಅಧ್ಯಕ್ಷೆಯನ್ನು ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕವಾಗಿಯೇ ಥಳಿಸಲಾಯಿತು. ರಾಜಸ್ಥಾನದ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಕೆಳಜಾತಿ ಮಹಿಳಾ ಸದಸ್ಯರನ್ನು ಗ್ರಾಮ ಸಭೆ ಮೀಟಿಂಗ್‌ಗಳನ್ನು ಮೇಲು ಜಾತಿಗಳ ಜತೆಗೆ ಕುಳಿತುಕೊಳ್ಳಲು ಬಿಡಲಿಲ್ಲ. ಪಂಚಾಯತ್‌ನ ಸೇವಕರು ಕೆಳ ಜಾತಿಯ ಮಹಿಳಾ ಸದಸ್ಯರು ಚಾ ಕುಡಿದ ಗ್ಲಾಸುಗಳನ್ನು ತೊಳೆಯಲು ನಿರಾಕರಿಸುತ್ತಾರೆ. ದಲಿತ ಮಹಿಳಾ ಸದಸ್ಯರಂತು ತಮ್ಮ ಗ್ಲಾಸು ತಟ್ಟೆಗಳನ್ನು ತಾವೇ ತೊಳೆದುಕೊಳ್ಳಬೇಕು.[7] ಹೀಗೆ ಪುರುಷ ಪ್ರಧಾನ ವ್ಯವಸ್ಥೆಯ ಲಾಭಗಳನ್ನು ಒಮ್ಮಿಂದೊಮ್ಮೆಲೆ ಬಿಟ್ಟು ಕೊಡಲು ಪುರುಷರು ತಯಾರಿಲ್ಲ. ಶತಮಾನದ ಅನ್ಯಾಯವನ್ನು ಸರಿಪಡಿಸಲು ಮಾಡುವ ಸಣ್ಣ ಪುಟ್ಟ ಬದಲಾವಣೆಗಳನ್ನು ಕೂಡ ಸಹಿಸಲಾರದಷ್ಟು ಅಸಹನೆ ಮೇಲ್ವರ್ಗಗಳಲ್ಲಿ ಮತ್ತು ಪುರುಷರಲ್ಲಿ ತುಂಬಿದೆ.

ಆರು ಜನ ಸದಸ್ಯರಿಗೆ ಆಯವ್ಯಯ ಪಟ್ಟಿ ತಯಾರಿ ಕುರಿತು ಅರಿವಿದೆ. ಅದರ ತಯಾರಿಯಲ್ಲಿ ಭಾಗವಹಿಸುತ್ತೀರಾ ಎಂದರೆ ಅಧ್ಯಕ್ಷರನ್ನು ಹೊರತು ಪಡಿಸಿ ಇತರ ಎಲ್ಲರೂ ಎಲ್ಲ ಎಂದಿದ್ದಾರೆ. ನ್ಯಾಯ ಸಮಿತಿ, ಹಣಕಾಸು ಸಮಿತಿ ಇತ್ಯಾದಿ ಸಮಿತಿಗಳ ಅರಿವಿದೆಯೇ ಎಂದರೆ ಎಲ್ಲಾ ಸದಸ್ಯರು ಅರಿವಿಲ್ಲ ಎಂದಿದ್ದಾರೆ. ಅರಿವೇ ಇಲ್ಲ ಎಂದಾದ ಮೇಲೆ ಭಾಗವಹಿಸುವ ಪ್ರಶ್ನೆಯೇ ಇಲ್ಲ. ಕೃಷಿ ಅಭಿವೃದ್ಧಿ ಯೋಜನೆಗಳೇನು?ಯಾವೆಲ್ಲಾ ಯೋಜನೆಗಳು (ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ್ದು) ನಿಮ್ಮ ಅವಧಿಯಲ್ಲಿ ಕಾರ್ಯಗತಗೊಂಡಿದೆ? ಎಂದರೆ ಕೇವಲ ಇಬ್ಬರು ಸದಸ್ಯರು, ಅಧ್ಯಕ್ಷರನ್ನು ಸೇರಿಸಿ, ಕೆಲವು ಯೋಜನೆಗಳನ್ನು ವಿವರಿಸಿದರು. ದನಗಳಿಗೆ ನೀರಿನ ತೊಟ್ಟಿ ನಿರ್ಮಾಣ, ಕಮಲಾಪುರದಲ್ಲಿ ಯಾವುದೋ ಹೊಸ ತಳಿ ಕುರಿತು ನಡಿಯುತ್ತಿದ್ದ ಕಾರ್ಯಗಾರದಲ್ಲಿ ಭಾಗವಹಿಸಲು ಕೆಲವು ರೈತರನ್ನು ಕಳುಹಿಸಿದ್ದು, ಕೃಷಿ ಇಲಾಖೆಯಿಂದ (ಹೋರ್ಟಿಕಲ್ಚರ್ಇರಬೇಕು) ಬಂದು ಜಾಹಿರಾತು ಫಿಲಂ ತೋರಿಸಿದ್ದು, ಹೀಗೆ ಉಪಯೋಗವಿಲ್ಲದ ಕೆಲವು ಕೆಲಸಗಳನ್ನು ಹೇಳಿದರು. ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಪರಿಸರ ಸಂರಕ್ಷಣೆ ಕುರಿತು ಯಾವುದೇ ಸದಸ್ಯರಿಗೆ ಅರಿವಿಲ್ಲ.

ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ವಾರ್ಷಿಕ ಯೋಜನೆಯ ಪಾತ್ರ ಮಹತ್ವದ್ದು. ಗ್ರಾಮ ಪಂಚಾಯತ್‌ಗೆ ತನ್ನ ಮೂಲ ಉದ್ದೇಶ ಸಾಧನೆಗೆ ತಳ ಮಟ್ಟದ ಯೋಜನೆ ಅಗತ್ಯ. ಆದರೆ ಯೋಜನೆ ಎಂದಾಕ್ಷಣ ಅದು ಓದು ಬರಹ ಇಲ್ಲದ ಹಳ್ಳಿ ಜನರು ಮಾಡುವ ಕೆಲಸವಲ್ಲ; ಪರಿಣಿತರು ಮಾಡುವ ಕೆಲಸವೆಂಬ ಭ್ರಮೆ ಕೂಡ ಇದೆ. ಇದಕ್ಕೆ ಪೂರಕವೇ ಎಂಬಂತೆ ಕೆಲವು ರಾಜ್ಯಗಳಲ್ಲಿ ಪಂಚಾಯತ್ವ್ಯವಸ್ಥೆ ಜಾರಿ ತರಲು ತೋರಿಸಿದ ಅರ್ಧದಷ್ಟು ಉತ್ಸಾಹವನ್ನು ಆ ವ್ಯವಸ್ಥೆ ಕಾರ್ಯರೂಪಕ್ಕೆ ಬರಲು ಅಗತ್ಯವಾದ ಇತರ ಪರಿಕರಗಳನ್ನು ರೂಪಿಸಲು ತೋರಿಸಲಿಲ್ಲ.[8] ಬಹುತೇಕ ಕಾರ್ಯಕ್ರಮಗಳು ರಾಜ್ಯ ಅಥವಾ ಕೇಂದ್ರ ಸರಕಾರ ನಿರ್ಧಾರಿತ. ಪಂಚಾಯತ್‌ಗಳ ಕೆಲಸವೇನಿದ್ದರೂ ಆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸೀಮಿತ.[9] ಸಂಪನ್ಮೂಲ ಕ್ರೋಢೀಕರಣದ ದೃಷ್ಟಿಯಿಂದಲೂ ಪಂಚಾಯತ್‌ಗೆ ತುಂಬಾ ಸೀಮಿತ ಅವಕಾಶಗಳಿವೆ.[10] ಈ ಎಲ್ಲಾ ಕಾರಣಗಳಿಂದ ವಾರ್ಷಿಕ ಯೋಜನೆಯ ಚರ್ಚೆ ನಿರುಪಯೋಗ ಎನ್ನುವ ಅಭಿಪ್ರಾಯವೂ ಇದೆ. ಈ ಇತಿಮಿತಿಗಳ ನಡುವೆಯೂ ಕೆಲವೊಂದು ಯೋಜನೆಗಳನ್ನು ಕಾರ್ಯಗತಗೊಳಿಸುವಷ್ಟು ಸ್ವಾತಂತ್ರ್ಯಾ ಮತ್ತು ಅವಕಾಶ ಪಂಚಾಯತ್‌ಗಳಿವೆ. ಅದು ಕಾರ್ಯ ರೂಪಕ್ಕೆ ಬರಬೇಕಾದರೆ ತಳಮಟ್ಟದಲ್ಲಿ ನಾಯಕತ್ವ ಮತ್ತು ಸದಸ್ಯರಿಗೆ ಪಂಚಾಯತ್ ಪರಿಕರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆಯ ಅರಿವಿರಬೇಕು. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಾರ್ಷಿಕ ಯೋಜನೆಯ ಕುರಿತು ಸದಸ್ಯರರಲ್ಲಿ ವಿಚಾರಿಸಲಾಯಿತು. ಅಧ್ಯಕ್ಷರನ್ನು ಹೊರತುಪಡಿಸಿ ಇತರ ಯಾರಿಗೂ ವಾರ್ಷಿಕ ಯೋಜನೆಯ ಅರಿವು ಇಲ್ಲ, ಅದರ ತಯಾರಿಯಲ್ಲಿ ಭಾಗವಹಿಸುವಿಕೆಯೂ ಇಲ್ಲ. ಆಯವ್ಯಯ ಪಟ್ಟಿ, ವಾರ್ಷಿಕ ಯೋಜನೆ ಇತ್ಯಾದಿಗಳ ತಯಾರಿಯಲ್ಲಿ ಭಾಗವಹಿಸುವಿಕೆಯೂ ಇಲ್ಲ. ಆಯವ್ಯಯ ಪಟ್ಟಿ, ವಾರ್ಷಿಕ ಯೋಜನೆ ಇತ್ಯಾದಿಗಳ ತಯಾರಿಯಲ್ಲಿ ಮುಖ್ಯ ಪಾತ್ರ ವಹಿಸುವುದು ಸದಸ್ಯರಲ್ಲ ; ಕಾರ್ಯದರ್ಶಿಯವರು.

 

[1]ತಾಂತ್ರಿಕ ಆಧುನೀಕರಣದ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಕ್ರಮ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಈ ದೃಷ್ಟಿಕೋನದಿಂದ ಪಂಚಾಯತ್ವ್ಯವಸ್ಥೆಯನ್ನು ನೋಡಿದ ಅಧ್ಯಯನಗಳು ಅಸಂಖ್ಯಾತ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ. ೧. ಜಾರ್ಜ್ಮೆಥ್ಯೂ, ಪಂಚಾಯತ್ರಾಜ್ ಇನ್ ಕರ್ನಾಟಕ ಟುಡೆಇಟ್ಸ್ನೇಶನಲ್ ಡೈಮೆನ್ಶನ್, ನ್ಯೂ ಡೆಲ್ಲಿ : ಕನ್‌ಸಪ್ಟ್‌ ಪಬ್ಲಿಷಿಂಗ್ ಹೌಸ್, ೧೯೮೬, ೨. ಅಬ್ದುಲ್ ಅಜೀಜ್, ಡಿಸೆಂಟ್ರಲೈಸ್ಡ್ ಪ್ಲಾನಿಂಗ್ : ದಿ ಕರ್ನಾಟಕ ಎಕ್ಸ್ಪೀರಿಯನ್ಸ್, ನ್ಯೂ ಡೆಲ್ಲಿ : ಸೇಜ್ಪಬ್ಲಿಕೇಷನ್ಸ್, ೧೯೯೩, ೩. ಇನ್‌‌ಸ್ಟಿಟ್ಯುಟ್ ಆಫ್ ಸೋಶಿಯಲ್ಸಯನ್ಸ್‌ಸ್, ಕರ್ನಾಟಕ ಜಿಲ್ಲಾ ಪರಿಷದ್ ಮೆಂಬರ್ಸ್, ನ್ಯೂ ಡೆಲ್ಲಿ : ಇನ್‌ಸ್ಟಿಟ್ಯುಟ್‌ ಆಫ್ ಸೋಶಿಯಲ್ ಸಯನ್ಸ್‌ಸ್, ೧೯೯೧, ೪. ಹೆನ್ರಿ ಮೆಡಿಕ್, ಪಂಚಾಯತ್ರಾಜ್ ಎ ಸ್ಟಡಿ ಆಫ್ ರೂರಲ್ ಲೋಕಲ್ ಗವರ್ನ್‌‌ಮೆಂಟ್ ಇನ್ ಇಂಡಿಯಾ ಲಂಡನ್ : ಲೋಂಗ್‌ಮೆನ್, ೧೯೭೦.

[2]ಡೈರೆಕ್ಟರೇಟ್ ಆಫ್‌ಸೆನ್ಸ್‌ಸ್ ಆಪರೇಷನ್, ಡಿಸ್ಟ್ರಿಕ್ಟ್‌ ಸೆನ್ಸ್‌ಸ್ ಹೇಂಡ್ ಬುಕ್ – ಬಳ್ಳಾರಿ, ೧೯೯೧.

[3]ಡಾ. ಪ್ರಭಾತ್ ದತ್ತ “ಪೀಪಲ್ಸ್ ಪಾರ್ಟಿಸಿಪೇಷನ್, ರೂರಲ್ ಎಡ್‌ಮಿನಿಸ್ಟ್ರೇಷನ್‌ ಆಂಡ್ ದಿ ಬ್ಯುರೊಕ್ರೆಸಿ ದಿ ವೆಸ್ಟ್ ಬೆಂಗಾಲ್ ಎಕ್ಸ್‌ಪೀರಿಯನ್ಸ್”, ಕುರುಕ್ಷೇತ್ರ, ಸಂಚಿಕೆ ೪೬, ಸಂಖ್ಯೆ ೭, ಏಪ್ರೀಲ್ ೧೯೯೮, ಪುಟ. ೪೯-೫೩, ಅರುಣ್‌ಕುಮಾರ್ (ಸಂ), ಪಬ್ಲಿಕ್ ಎಡ್‌ಮಿನಿಸ್ಟ್ರೇಷನ್‌ ಟುಡೆ ಅಂಡ್ ಟುಮಾರೊ, ನ್ಯೂಡೆಲ್ಲಿ : ಅನ್‌ಮೋಲ್‌ ಪಬ್ಲಿಕೇಷನ್ಸ್‌, ೨೦೦೦, ಅಬ್ದುಲ್‌ ಅಜೀಜ್ ಆಂಡ್ ಡೇವಿಡ್‌ ಆರ್‌ನಾಲ್ಡ್‌ (ಸಂ), ಡಿಸೆಂಟ್ರಲೈಸ್‌ಡ್‌ ಗವರ್‌ನೆನ್ಸ್‌ ಇನ್ ಏಶಿಯನ್‌ ಕಂಟ್ರೀಸ್, ನ್ಯೂ ಡೆಲ್ಲಿ : ಸೇಜ್‌ಪಬ್ಲಿಷರ್ಸ್, ೧೯೯೬.

[4]ಯಂಗ್ ಕೆ, ಜಂಡರ್ಆಂಡ್ ಡೆವಲಪ್ಮೆಂಟ್ಎ ರೆಲೆಷನಲ್ಎಪ್ರೋಚ್, ಆಕ್ಸ್‌ಫರ್ಡ್‌: ಆಕ್ಸ್‌ಫರ್ಡ್ಯುನಿವರ್ಸಿಟಿ ಪ್ರೆಸ್, ೧೯೯೮, ಫೈರ‍್ .ಪಿ, ಪೆಡಗೊಗಿ ಆಫ್ ದಿ ಒಪ್ರೆಸ್ಡ್, ನ್ಯೂಯೊರ್ಕ್‌: ಸೀಬರಿ ಪ್ರೆಸ್, ೧೯೭೩ ಮತ್ತು ಹೊಕ್ಸ್‌ವರ್ತ್, ಎಂ.ಇ.,ಬಿಯೊಂಡ್ ಒಪ್ರೆಷನ್‌: ಫೆಮಿನಿಸ್ಟ್ ಥಿಯರಿ ಆಂಡ್ ಪೊಲಿಟಿಕಲ್ ಸ್ಟ್ರೇಟಜಿ, ನ್ಯೂಯಾರ್ಕ್: ಕಾಂಟಿನಮ್, ೧೯೯೯೦

[5]ಡಾ. ಸ್ನೇಹಲತಾ ಪಂಡಾ, “ಪಂಚಾಯಿತಿಗಳಲ್ಲಿ ನಿರ್ಣಯಾಧಿಕಾರ ಮಹಿಳೆಯರ ಪಾತ್ರ”, ಯೋಜನಾ, ಸಂಪುಟ ೧೪, ನವೆಂಬರ‍್ ೧೯೯೮, ಪುಟ ೨-೧೦.

[6]ಮನು ಬಾಸ್ಕರ್‌, “ವಿಮೆನ್ ಪಂಚಾಯತ್ಮೆಂಬರ‍್ಸ್‌ಇನ್ಕೇರಳ: ಎ ಪ್ರೊಫೈಲ್‌”, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಸಂಚಿಕ ೩೨, ಸಂಖ್ಯೆ ೧೭, ಏಪ್ರೀಲ್ ೧೯೯೭, ಪುಟ. ೧೩-೨೦

[7]ಡಾ. ಮಹಿಪಾಲ್, “ಪಂಚಾಯತ್ಸ್ಆಂಡ್ ಹ್ಯುಮನ್ರೈಟ್ಸ್”, ಕುರುಕ್ಷೇತ್ರ, ಆಗೋಸ್ಟ್ ೨೦೦೦, ಪುಟ ೩೬-೪೦

[8]ಎಂ.ಎಸ್. ಜೋನ್ ಆಂಡ್ ಜೋಸ್ ಚಾತುಕುಲಮ್, “ಡಿಸೆಂಟ್ರಲೈಸ್‌ಡ್ ಪ್ಲಾನಿಂಗ್ ಆಂಡ್ ಪಂಚಾಯತ್ಸ್ ಇನ್ ಕೇರಳ”, ಕುರುಕ್ಷೇತ್ರ, ಸಂಚಿಕೆ ೪೭, ಸಂಖ್ಯೆ ೧೨, ಸೆಪ್ಟೆಂಬರ್ ೧೯೯೯, ಪು ೨೦-೨೩.

[9]ಟಿ.ಎಂ. ತೋಮಸ್ ಐಸಾಕ್ ಆಂಡ್ ಕೆ.ಎನ್.ಹರಿಲಾಲ್, “ಪ್ಲಾನಿಂಗ್ ಫಾರ್ ಎಂಪವರ್‌ಮೆಂಟ್: ಪೀಪಲ್ಸ್ ಕೆಂಪೆಯೆನ್ ಫಾರ್ ಡೆಸೆಂಟ್ರಲೈಸ್‌ಡ್ ಪ್ಲಾನಿಂಗ್ ಇನ್ ಕೇರಳ”, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಸಂಚಿಕೆ ೩೨, ಸಂಖ್ಯೆ ೧ ಆಂಡ್ ೨, ಜನವರಿ ೧೯೯೭, ಪುಟ ೫೩-೫೮.

[10]ಎಸ್.ಪಿ. ರಂಗ ರಾವ್, “ಅಟೊನೊಮಿ-ದಿ ಎಸೆನ್ಸ್ ಆಫ್ ಪಂಚಾಯತ್ ರಾಜ್”, ಕುರುಕ್ಷೇತ್ರ ಸಂಚಿಕೆ ೪೬, ಸಂಖ್ಯೆ ೭, ಏಪ್ರಿಲ್ ೧೯೯೮, ಪುಟ ೨೫-೩೩ ಮತ್ತು ಬಿ.ಎಸ್. ಭಾರ್ಗವ ಆಂಡ್ ಅವಿನಾಶ್ ಸಮಲ್, “ಇನ್‌ಸ್ಟಿಟ್ಯುಶನಲ್ ಮೆಕಾನಿಸಂ ಫಾರ್ ಡಿಸೆಂಟ್ರಲೈಸ್‌ಡ್ ಪ್ಲಾನಿಂಗ್”, ಕುರುಕ್ಷೇತ್ರ, ಸಂಚಿಕೆ ೪೬, ಸಂಖ್ಯೆ ೭, ಏಪ್ರಿಲ್ ೧೯೯೮, ಪುಟ ೩೫-೩೭.