ಕೆಳಜಾತಿಯವರ ಸವಾಲು

ಉದ್ವಾಳರ ವೀರಪ್ಪ(ಮೊದಲ ಅಧ್ಯಕ್ಷರು), ರಮೇಶಪ್ಪ ಮತ್ತು ಬುಳ್ಳಪ್ಪ ಅಣ್ಣ ತಮ್ಮಂದಿರು. ಆಸ್ತಿ ಕಾರಣಕ್ಕಾಗಿ ಅಣ್ಣ ತಮ್ಮಂದಿರೊಳಗೆ ಕಲಹ ಶುರುವಾಗಿತ್ತು. ಯಾವುದೋ ಸಂದರ್ಭದಲ್ಲಿ ವಿವಾದ ತಲೆದೋರಿ ವೀರಪ್ಪ ಮತ್ತು ರಮೇಶಪ್ಪ ಸೇರಿಕೊಂಡು ತಮ್ಮ ಕೊನೆಯ ತಮ್ಮ ಬುಳ್ಳಪ್ಪನನ್ನು ಹೊಡಿಯುತ್ತಿದ್ದರು. ತಮ್ಮ ಅಣ್ಣಂದಿರ ಕಾಟದಿಂದ ತಪ್ಪಿಸಿಕೊಳ್ಳಲು ಬುಳ್ಳಪ್ಪನಿಗೆ ಮೇಟಿಯವರ ಕಡೆ ಸೇರುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಹಾಗೆ ಬಂದ ಬುಳ್ಳಪ್ಪನನ್ನು ಮೇಟಿಯವರು ತುಂಬ ಸಂತೋಷದಿಂದಲೇ ಸ್ವಾಗತಿಸಿದರು. ಉದ್ವಾಳರ ಕುಟುಂಬದವರಿಂದಲೇ ಉದ್ವಾಳರಿಗೆ ಪಾಠ ಕಲಿಸಲು ಇದಕ್ಕಿಂತಲು ಒಳ್ಳೆಯ ಅವಕಾಶ ಸಿಗಬಹುದೇ. ಮೇಟಿಯವರು ೧೯೬೦ರ ಪಂಚಾಯತ್ ಚುನಾವಣೆಯಲ್ಲಿ ಬುಳ್ಳಪ್ಪನ ಮಗ ನಾಗೇಂದ್ರಪ್ಪನನ್ನು ಪಂಚಾಯತ್ ಅಧ್ಯಕ್ಷ ಅಭ್ಯರ್ಥಿಯಾಗಿ ನಿಲ್ಲಿಸಿದರು. ಮೇಟಿಯವರ ಅಭ್ಯರ್ಥಿಗೆ ವಿರುದ್ದವಾಗಿ ಉದ್ವಾಳರು ಸ್ಥಳೀಯ ಗಣಿ ಮಾಲಿಕರಾದ ಗೊಗ್ಗ ಬಸಯ್ಯನವರನ್ನು ಕಣಕ್ಕೆ ಇಳಿಸಿದರು. ಗೊಗ್ಗ ಬಸಯ್ಯನವರು ಜಂಗಮರು, ಜನಪ್ರಿಯ ವ್ಯಕ್ತಿ, ಜತೆಗೆ ಅನುಕೂಲಸ್ಥರು. ಅವರ ವಿರುದ್ಧ ಗೆಲವು ಕಷ್ಟವೆಂದು ನಾಗೇಂದ್ರಪ್ಪ ಕಣದಿಂದ ಹಿಂದೆ ಸರಿದರು. ಈ ಬೆಳವಣಿಗೆಗೆಳಿಂದಾಗಿ ಮೇಟಿ ಚಂದ್ರಶೇಖರಪ್ಪ ಸ್ವತಃ ಚುನಾವಣಾ ಕಣಕ್ಕೆ ಇಳಿಯಬೇಕಾಯಿತು. ಮೇಟಿ ಚಂದ್ರಶೇಖರಪ್ಪ ಸ್ಪರ್ಧಿಸುತ್ತಾರೆಂದು ತಿಳಿದಾಗ ಗೊಗ್ಗ ಬಸಯ್ಯನವರು ಹಿಂದಕ್ಕೆ ಸರಿದರು.[1] ಹೀಗಾಗಿ ೧೯೬೦ರಲ್ಲಿ ಮೇಟಿ ಚಂದ್ರಶೇಖರಪ್ಪನವರು ಅಧ್ಯಕ್ಷರಾದರು. ಅಲ್ಲಿಂದ ಮುಂದಿನ ಎರಡು ಚುನಾವಣೆಗಳಲ್ಲೀ, ೧೯೬೫ ಮತ್ತು ೧೯೭೦ರಲ್ಲಿ ಮೇಟಿ ಚಂದ್ರಶೇಖರಪ್ಪನವರು ಅವಿರೋಧವಾಗಿ ಆಯ್ಕೆಗೊಂಡರು. ಇದು ಸ್ಥಳಿಯ ರಾಜಕಾರಣದಲ್ಲಿ ಅವರ ಪ್ರಭಾವ ಮತ್ತು ಹಿಡಿತವನ್ನು ಸೂಚಿಸುತ್ತದೆ. ಅವರ ವಿರುದ್ಧ ನಿಲ್ಲುವ ಮತ್ತು ನಿಂತು ಗೆಲ್ಲುವ ಸಾಹಸ ಮಾಡುವುದೇ ಕಷ್ಟ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಈ ರೀತಿಯ ವಾತಾವರಣ ಸೃಷ್ಟಿಯ ಹಿಂದೆ ವಿವಿಧ ಹಂತಗಳಲ್ಲಿ ಅವರು ತಮ್ಮ ಪ್ರತಿ ಸ್ಪರ್ಧಿಗಳೊಂದಿಗೆ ಮಾಡಿದ ಹೋರಾಟ ಮತ್ತು ಅವರನ್ನು ಅಧಿಕಾರದಿಂದ ದೂರವಿಡಲು ಹೂಡಿದ ತಂತ್ರಗಳು ಕಾರಣವಿರಬಹುದು. ಜತೆಗೆ ಜೀತದಾಳುಗಳ ಅಗ್ಗದ ಶ್ರಮದಿಂದ ಅವರ ಎಕರೆಗಟ್ಟಲೆ ಭೂಮಿ ಕೃಷಿಯಾಗುತ್ತಿತ್ತು. ಒಂದು ಕಡೆಯಿಂದ ರಾಜಕೀಯ ಹಿಡಿತ ಬಲಗೊಳ್ಳುತ್ತಿದ್ದಂತೆ ಮತ್ತೊಂದು ಕಡೆಯಿಂದ ಅಗ್ಗದ ಶ್ರಮದ ಮೇಲಿನ ಹಿಡಿತ ಕೂಡ ಬಲಗೊಳ್ಳುತ್ತಿತ್ತು. ಇವರೆಡು ಪರಸ್ಪರ ಸಂಬಂಧಿಸಿದನ್ನು ಅರಿತ ಮೇಟಿ ಕುಟುಂಬದವರು ಮತ್ತು ಅವರ ಬೆಂಬಲಿಗರು ಅಧಿಕಾರದಲ್ಲಿ ಮುಂದುವರಿಯುವುದರ ಲಾಭ ಅರಿತರು.

ಹಳ್ಳಿಯಲ್ಲಿ ಇವರ ಯಜಮಾನಿಕೆಗೆ ಸವಾಲೆಸೆಯ ಬಲ್ಲವರೆಂದರೆ ಉದ್ವಾಳರು ಮಾತ್ರ, ಹಲವು ಚುನಾವಣೆಗಳಲ್ಲಿ ಸೋತು ಮುಖಭಂಗಗೊಂಡಿದ್ದ ಉದ್ವಾಳರು ಹೊರನೋಟಕ್ಕೆ ಈ ಗುಂಪು ಜಗಳದಿಂದ ದೂರವಿದ್ದಂತೆ ತೋರಿಸಿಕೊಳ್ಳುತ್ತಿದ್ದರು. ಆದರೆ ಹಳ್ಳಿಯ ರಾಜಕೀಯದಲ್ಲಿ ತಮ್ಮನ್ನು ಎರಡನೇ ಸ್ಥಾನಕ್ಕೆ ಇಳಿಸಿದ ಮೇಟಿಗಳನ್ನು ಅವರು ಮರೆಯಲು ಸಾಧ್ಯವೇ ಇರಲಿಲ್ಲ. ತಮ್ಮ ಹಗೆಗಳ ಮೇಲೆ ಸೇಡು ತೀರಿಸಲು ಲಭ್ಯವಾದ ಎಲ್ಲಾ ಅವಕಾಶಗಳನ್ನು ಅವರು ಉಪಯೋಗಿಸಿಕೊಂಡಿದ್ದರು. ಆದರೆ ಅವರ ಹೋರಾಟಗಳಲ್ಲಿ ನೇರ ಸ್ಪರ್ಧೆ ಕಡಿಮೆ ಇದ್ದು ಶೀತಲ (ಪರೋಕ್ಷ/ಪ್ರಾಕ್ಸಿ) ಯುದ್ಧಗಳೇ ಹೆಚ್ಚಿದ್ದವು. ಬೈಲುವದ್ದಿಗೇರಿ ಜಂಬನಗೌಡರ ಮೂಲಕ, ಗೊಗ್ಗ ಬಸಯ್ಯನವರ ಮೂಲಕ ಹೀಗೆ ಪರೋಕ್ಷ ವ್ಯಕ್ತಿಗಳ ಮೂಲಕ ಮೇಟಿಗಳ ಯಜಮಾನಿಕೆಯನ್ನು ಮುರಿಯಲು ಪ್ರಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಊರಲ್ಲಿ ನಡೆದ ಒಂದು ಘಟನೆ ಉದ್ವಾಳರಿಗೆ ವರದಾನವಾಯಿತು. ವಿವಿಧ ಮೂಲಗಳು ಆ ಘಟನೆಯನ್ನು ವಿವಿಧ ರೀತಿಯಲ್ಲಿ ವಿವರಿಸುತ್ತವೆ. ಅವುಗಳ ಸಾರಾಂಶ ಹೀಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರಪ್ಪನವರ ಅಣ್ಣ ಸಿದ್ದಪ್ಪನವರ ಹೊಲಗಳನ್ನು ದಾಟಿ ಮುಂದಕ್ಕೆ ವಡ್ಡರ ಕಾಡಪ್ಪ, ನಾಯಕರ ಭೀಮಣ್ಣ ಮತ್ತು ಕುರುಬರ ಪೋತಣ್ಣನವರ ಹೊಲಗಳಿವೆ. ಪೈರು ಬೆಳೆದಿರುವ ಸಂದರ್ಭದಲ್ಲಿ ಈ ಮೂವರ ಹೊಲಗಳಿಗೆ ಹೋಗಬೇಕಾದರೆ ಮೇಟಿ ಸಿದ್ದಪ್ಪನವರ ಹೊಲಗಳಿಗೆ ಸುತ್ತು ಹಾಕಿ ಹೋಗಬೇಕಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಆ ಮೂವರು ಮೇಟಿಯವರಲ್ಲಿ ಹೊಲದ ಮಧ್ಯೆ ದಾರಿ ಬಿಡುವಂತೆ ವಿನಂತಿಸಿದರು. ಅವರ ಬೇಡಿಕೆಯನ್ನು ಮೇಟಿಯವರು ಕಡೆಗಣಿಸಿದರು. ಬೇಡಿಕೆ ಸಲ್ಲಿಸಿದರು ಸುಮ್ಮನಿರಲಿಲ್ಲ. ಮೇಟಿಯವರ ಪ್ರಕಾರ ಪೈರು ಬೆಳೆದು ನಿಂತಿರುವ ಸಂದರ್ಭದಲ್ಲೇ ಆ ಮೂವರು ಮೇಟಿಯವರ ಹೊಲದ ಮಧ್ಯೆ ದಾರಿ ಮಾಡಿಕೊಂಡರು. ಆ ಘಟನೆ ಮೇಟಿಯವರ ಯಜಮಾನಿಕೆಯನ್ನು ಸಾರ್ವಜನಿಕವಾಗಿ, ಅದೂ ಕೆಳಜಾತಿಯವರು, ಪ್ರಶ್ನಿಸಿದ ಚಿತ್ರಣ ಪಡೆಯಿತು. ಅದಕ್ಕೆ ಪ್ರತಿಕಾರವಾಗಿ ಮೇಟಿಯವರು ಆ ಮೂವರನ್ನು ಕಟ್ಟಿ ಹಾಕಿ ಸಾರ್ವಜನಿಕವಾಗಿ ಥಳಿಸಿದರು.

ಈ ಸಂದರ್ಭಕ್ಕಾಗಿಯೇ ಉದ್ವಾಳರು ಕಾದಿದ್ದಂತ್ತಿತ್ತು. ಹಿಂದೆ ಕೆಳಜಾತಿಯವರ ಸಾಲ ಸಂದಾಯ ಮಾಡಿ ತಮ್ಮ ಬೆಂಬಲಿಗರನ್ನು ಕಿತ್ತುಕೊಂಡ ಮೇಟಿಯವರಿಗೆ ಪಾಠ ಕಲಿಸಲು ಸರಿಯಾದ ಅವಕಾಶಕ್ಕಾಗಿ ಕಾದಿದ್ದರು. ಮೇಟಿ ಅಣ್ಣ ತಮ್ಮಂದಿರ ಮತ್ತು ಕೆಳಜಾತಿಯವರ ನಡುವೆ ನಡೆದ ಆ ಜಗಳ ಉದ್ವಾಳರಿಗೆ ವರದಾನವಾಯಿತು. ಉದ್ವಾಳರು ಪೆಟ್ಟುತಿಂದವರ ಪರ ನಿಂತರು. ಆದರೆ ಆ ಕ್ಷಣದಲ್ಲೇ ಪ್ರತಿಕಾರವಾಗಿ ಆ ಮೂವರಾಗಲೀ ಅಥವಾ ಉದ್ವಾಳರಾಗಲಿ ಮೇಟಿಯವರ ವಿರುದ್ಧ ನಿಲ್ಲುವಂತಿರಲಿಲ್ಲ. ಆ ಜಗಳದ ನಂತರ ಪಂಚಾಯತಿ ಆಧ್ಯಕ್ಷರು (ಮೇಟಿ ಚಂದ್ರಶೇಖರಪ್ಪನವರು) ಕುರುಬರ ಪೋತಣ್ಣನಿಗೆ ಆತನ ಮನೆಯ ಮುಂದಿನ ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಕಿಕೊಂಡಿದ್ದಿ; ಅದನ್ನು ತೆರವು ಮಾಡಬೇಕು, ಇಲ್ಲವಾದರೆ ದಂಡ ತೆರಬೇಕೆಂದು ನೋಟೀಸು ಜಾರಿ ಮಾಡಿದರು. ಅಧ್ಯಕ್ಷರಿಗೆ ನನ್ನ ವಿರುದ್ದ ಸೇಡು ತೀರಿಸಿಕೊಳ್ಳಬೇಕಿತ್ತು, ಅದಕ್ಕಾಗಿ ಅವರ ಬೆಂಬಲಿಗರಿಗೆ ಹೇಳಿಸಿ ನನ್ನ ವಿರುದ್ಧ ದೂರು ಬರಿಸಿಕೊಂಡರು ಎಂದು ಆ ಘಟನೆಯನ್ನು ಕುರಿತು ಪೋತಣ್ಣ ಹೇಳುತ್ತಾರೆ. ಅದೇನೆ ಇರಲಿ ಪಂಪಣ್ಣ ನೋಟೀಸು ಜಾರಿ ಮಾಡಿರುವುದಂತೂ ನಿಜ. ಪೋತಣ್ಣ ಸುಮ್ಮನಿರಲಿಲ್ಲ. ಆ ನೋಟಿಸು ವಿಚಾರವನ್ನು ಹೊಡಪೇಟೆಯ ಶಂಕರೇಗೌಡರ ಗಮನಕ್ಕೆ ತಂದರು. ಶಂಕರೇಗೌಡರು ಆಗ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಜಕಾರಣಿ. ಕುರುಬರ ನಾಯಕರೆಂದು ಸ್ಥಳೀಯವಾಗಿ ಗುರುತಿಸಲ್ಪಟ್ಟವರು. ಅವರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ರಾಜಕಾರಣಿಗಳ ಸಂಪರ್ಕವಿತ್ತು. ಅದೇ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಕೆಂಪು ರಾಮಯ್ಯ (ಕುರುಬರ ಜಾತಿಗೆ ಸೇರಿದವರು) ಎಂಬುವರು ಪೋಲಿಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಂದ್ರಶೇಖರಪ್ಪನವರು ಪೋತಣ್ಣನವರಿಗೆ ಕೊಡುವ ಕಿರುಕುಳವನ್ನು ಎಸ್.ಪಿ.ಯವರ ಗಮನಕ್ಕೆ ಶಂಕರೇಗೌಡರು ತಂದರು. ಎಸ್.ಪಿ.ಯವರು ಚಂದ್ರಶೇಖರಪ್ಪ ನವರನ್ನು ಬಳ್ಳಾರಿ ಕಛೇರಿಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ನೋಟಿಸು ಪ್ರಕರಣ ಅಂತ್ಯಗೊಂಡಿತು.

ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಪೆಟ್ಟು ತಿಂದವರು ತಮಗಾದ ಅವಮಾನಕ್ಕೆ ತಕ್ಕ ಶಾಸ್ತಿ ಮಾಡಲು ಕಾಯುತ್ತಿದ್ದರು. ಮೇಟಿಯವರ ಮೇಲಿನ ದ್ವೇಷದ ಕಿಡಿ ಒಳಗೆ ಉರಿಯುತ್ತಿತ್ತು. ಒಂದು ದಿನ ಅದು ಭುಗಿಲ್ಲೆದ್ದು ಹತ್ತಿ ಉರಿಯಿತು. ಅಂದು ಮೊಹರಂ ಹಬ್ಬದ ಕೊನೇ ದಿನ. ಗ್ರಾಮ ಛಾವಡಿಯ ಪಕ್ಕದ ಮೈದಾನದಲ್ಲಿ ಆಲಾಯಿ ಕುಣಿಯ ಸುತ್ತ ಊರ ಯುವಕರೆಲ್ಲಾ ಸೇರಿ ಆಲಾಯಿ ಆಡುತ್ತಿದ್ದರು. ಚಪ್ಪಡಿ ಬಡಿತಕ್ಕೆ ಪ್ರತಿಯೊಬ್ಬರು ಅವರದೇ ಭಂಗಿಯಲ್ಲಿ ಕುಣಿಯುತ್ತಿದ್ದರು. ಒಬ್ಬೊಬ್ಬರ ಕೈಯಲ್ಲಿ ಒಂದೊಂದು ವಿಧದ ಆಯುಧ. ಅಲ್ಲಿ ಸೇರಿದವರಲ್ಲಿ ಪೋತಣ್ಣ ಮತ್ತು ಆತನ ಸಂಗಡಿಗರ ಸಂಖ್ಯೆಯೇ ಹೆಚ್ಚಿತ್ತು. ಮೇಟಿಯವರ ಕಡೆಯ ನಾಯಕ ಜಾತಿಗೆ ಸೇರಿದ ಮೂರ‍್ನಾಲ್ಕು ಮಂದಿ ಇದ್ದರು. ಕುರುಬರ ಪೋತಣ್ಣ ಕುಣಿಯುತ್ತಾ ಕುಣಿಯುತ್ತಾ ಮೇಟಿಯವರ ಬೆಂಬಲಿಗ ನಾಯಕರ ಸಿದ್ದಪ್ಪನತ್ತ ಸಾಗಿದ. ಸಿದ್ದಪ್ಪನನ್ನು ನೂಕಿ ಕೆಳಗೆ ಬೀಳಿಸಿದ. ತನ್ನ ಕೈಯಲ್ಲಿದ್ದ ಆಯುಧದಿಂದ ಸಿಕ್ಕಿದ ಕಡೆಗೆಲ್ಲಾ ತದುಕಿದ. ಅಷ್ಟು ಸಾಲದೆಂಬಂತೆ ಪೋತಣ್ಣ ಮತ್ತು ಆತನ ಸಂಗಡಿಗರ ದೊಡ್ಡ ಗುಂಪೊಂದು ಹೆದ್ದಾರಿಯತ್ತ ಬಂದಿತು. ರಸ್ತೆ ಪಕ್ಕದಲ್ಲಿದ್ದ ಮೇಟಿಯವರ ಮತ್ತು ಅವರ ಬೆಂಬಲಿಗರೆಂದು ಗುರುತಿಸಲ್ಪಟ್ಟವರ ಮನೆಯ ಮೇಲೆ ಕಲ್ಲು ತೂರಾಟ ನಡೆಯಿತು. ಅವರ ಅಂತಿಮ ಗುರಿ ಪಂಚಾಯತಿ ಕಟ್ಟಡದ ಪಕ್ಕದಲ್ಲೇ ಇರುವ ಅಧ್ಯಕ್ಷ ಚಂದ್ರಶೇಖರಪ್ಪನವರ ಮನೆ. ಚಂದ್ರಶೇಖರಪ್ಪ ಅಂದು ಹೊಸಪೇಟಿಗೆ ಹೋಗಿದ್ದರು. ತಮ್ಮ ಮೇಲೆ ಆಗಬಹುದಾದ ದಾಳಿಯಿಂದ ಅದೃಷ್ಟವಶಾತ್ ತಪ್ಪಿಸಿಕೊಂಡರು. ಹೊಸಪೇಟೆಯಲ್ಲಿದ್ದ ಚಂದ್ರಶೇಖರಪ್ಪನಿಗೆ ಸುದ್ದಿ ತಿಳಿದು ಅವರು ಅಲ್ಲಿಂದಲೇ ಸಂಡೂರು ಪೋಲಿಸರಿಗೆ ತಿಳಿಸಿದರು. ಗಾಯಗೊಂಡ ಸಿದ್ದಪ್ಪನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮೂರು ದಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿ ಸಿದ್ದಪ್ಪ ನಾಲ್ಕನೇ ದಿನ ಕೊನೆಯುಸಿರೆಳೆದ. ಆ ಕೊಲೆಗೆ ಸಂಬಂಧಿಸಿದಂತೆ ಪೋತಣ್ಣನನ್ನು ಸೇರಿಸಿ ೫೬ ಜನರ ಮೇಲೆ ಪೋಲೀಸ್ ಕೇಸ್ ದಾಖಲಾಯಿತು. ಅವರುಗಳಲ್ಲಿ ಕುರುಬರ, ನಾಯಕರ ಮತ್ತು ಲಿಂಗಾಯತರ (ಉದ್ವಾಳರ ಗುಂಪಿಗೆ ಸೇರಿದ) ಜನರಿದ್ದರು. ಪೋತಣ್ಣನಿಗೆ ಜೀವಾವಧಿ ಶಿಕ್ಷೆಯಾಯಿತು, ಒಂಬತ್ತು ಜನರಿಗೆ ೨ ರಿಂದ ೬ ವರ್ಷಗಳ ಕಠಿಣ ಸಜೆಯಾಯಿತು.

ಸಂಪನ್ಮೂಲದ ಒಡೆತನ, ಕಾನೂನು, ಸಾಮಾಜಿಕ ಮೌಲ್ಯ, ಧಾರ್ಮಿಕ ನಂಬಿಕೆ ಇವೆಲ್ಲಾ ಸೇರಿ ವರ್ಗ ಪ್ರಜ್ಙೆಯನ್ನು ಜೀವಂತ ಇಡುತ್ತದೆ. ದಂಗೆ ಏಳುವುದು ಅಥವಾ ಮೇಲು ಜಾತಿ/ವರ್ಗವನ್ನು ಪ್ರತಿಭಟಿಸುವುದು ಎಂದರೆ ಇವೆಲ್ಲವನ್ನು ತಿರಸ್ಕರಿಸುವ ಅಥವಾ ಪ್ರತಿಭಟಿಸುವ ಪ್ರಕ್ರಿಯೆ. ಅದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ತಕ್ಕ ಮಟ್ಟಿನ ಮಾನಸಿಕ ತಯಾರಿ ಅಗತ್ಯ. ಆದುದರಿಂದ ಇಂತಹ ಘಟನೆಗಳನ್ನು ಆಕಸ್ಮಿಕ ಅಥವಾ ಆಯೋಜಿತ ಎಂದು ಬ್ರಾಂಡ್ ಮಾಡುವುದು ಸರಿಯಲ್ಲ ಎಂದು ರಂಜೀತ್ ಗುಹಾ ಅಭಿಪ್ರಾಯ ಪಡುತ್ತಾರೆ.[2] ವಸಾಹತು ಸಂದರ್ಭದಲ್ಲಿನ ರೈತ ದಂಗೆಗಳನ್ನು ವಿಶ್ಲೇಷಿಸುತ್ತಾ ಅವರು ಆ ತೀರ್ಮಾನಕ್ಕೆ ಬರುತ್ತಾರೆ. ಇಲ್ಲಿ ಆ ತೀರ್ಮಾನವನ್ನು ಯಥಾ ಪ್ರಕಾರ ಅನ್ವಯಿಸಲು ಬರುವುದಿಲ್ಲ. ಕಾರಣವಿಷ್ಟೆ ಹಳ್ಳಿಯಲ್ಲಿ ನಡೆದ ಘಟನೆಯ ಹಿನ್ನೆಲೆ ಅಥವಾ ಪೂರ್ವ ತಯಾರಿ ಬಗ್ಗೆ ಮಾಹಿತಿ ಸಂಗ್ರಹಿಸಿಲ್ಲ. ಮಾಹಿತಿ ಸಂಗ್ರಹಿಸಲು ಪ್ರಯತ್ನಿಸದೇ ಇರುವಾಗ ಪೂರ್ವ ತಯಾರಿ ಬಗ್ಗೆ ತೀರ್ಮಾನಕ್ಕೆ ಬರುವುದು ಕಷ್ಟವಾಗಬಹುದು. ಆದರೆ ಇಲ್ಲಿ ಕೂಡ ದಿನ ನಿತ್ಯದ ವ್ಯವಹಾರಕ್ಕಿಂತ ತೀರಾ ಭಿನ್ನವಾಗಿ ನಡೆದಿದೆ. ಒಂದೆರಡು ಜನ ಸೇರಿ ಆ ರೀತಿ ವ್ಯವಹರಿಸುತ್ತಿದ್ದರೆ ಅದನ್ನೊಂದು ಆಕಸ್ಮಿಕವೆಂದು ತಿಳಿಯಬಹುದಿತ್ತು. ಆದರೆ ಇಲ್ಲಿ ಹೆಚ್ಚು ಕಡಿಮೆ ಸುಮಾರು ಐವತ್ತರಷ್ಟು ಜನ ತಮ್ಮ ದಿನ ನಿತ್ಯದ ಬದುಕಿಗಿಂತ ತೀರಾ ಭಿನ್ನವಾಗಿ ವ್ಯವಹರಿಸಿದ್ದಾರೆ. ಆದುದರಿಂದ ಇಲ್ಲೂ ಕೂಡ ಮೇಟಿಯವರ ಯಜಮಾನಿಕೆಯನ್ನು ಮುರಿಯಲು ಅಥವಾ ಪ್ರತಿಭಟಿಸಲು ತಕ್ಕಮಟ್ಟಿನ ಯೋಜನೆ ನಡೆದಿರಬಹುದೆಂದು ಊಹಿಸಬಹುದು.

ಈ ಘಟನೆ ನಡೆದುದು ೧೯೬೯ರಲ್ಲಿ. ಇದು ಇತರ ಹಲವು ಬೆಳವಣಿಗೆಗಳೊಂದಿಗೆ ಪಿ.ಕೆ.ಹಳ್ಳಿಯ ರಾಜಕೀಯದಲ್ಲಿ ನಿರ್ಣಾಯಕ ಹೊಸ ತಿರುವಿಗೆ ಕಾರಣವಾಗಿದೆ. ಹಿಂದೆ ಮೇಲು ಜಾತಿಯವರನ್ನು ಕಂಡರೆ ಭಯ ಪಡುತ್ತಿದ್ದ ಕೆಳಜಾತಿಯವರು ಮೇಲು ಜಾತಿಯವರ ಬೆಂಬಲಿಗನನ್ನು ಕೊಂದರು. ಜನತೆಗೆ ಅಧ್ಯಕ್ಷ ಚಂದ್ರಶೇಖರಪ್ಪ ಅಂದು ಹಳ್ಳಿಯಲ್ಲಿರುತ್ತಿದ್ದರೆ ದಾಳಿಯಿಂದ ತಪ್ಪಸಿಕೊಳ್ಳುವುದು ಕಷ್ಟವಿತ್ತು. ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಎಲ್ಲಾ ಘಟನೆಗಳು ಕೆಳಜಾತಿಯವರು ಮೇಲು ಜಾತಿಯವರನ್ನು, ಅದರಲ್ಲೂ ಯಜಮಾನಿಕೆ ನಡೆಸುತ್ತಿದ್ದ ಮೇಟಿಯವರನ್ನು, ನೋಡುವ ದೃಷ್ಟಿಯನ್ನೇ ಬದಲಾಯಿಸಿತು. ಒಂದು ಕಾಲದಲ್ಲಿ ಮೇಟಿಯವರು ಮಾಡಿದ್ದೇ ಹಳ್ಳಿಯಲ್ಲಿ ಕಾನೂನು; ಅದನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಅವರು ಹಾಕಿದ ಗೆರೆಯನ್ನು ದಾಟುವ ಸಾಹಸ ಯಾರು ಮಾಡುತ್ತಿರಲಿಲ್ಲ. ಅದೆಲ್ಲಾ ಬದಲಾಗಿ ಯಜಮಾನಿಕೆಯನ್ನು ಪ್ರಶ್ನಿಸಬಹುದು, ಪ್ರತಭಟಿಸಬಹುದು ಎನ್ನುವ ಧೋರಣೆಗಳು ಬಲಗೊಳ್ಳುತ್ತಾ ಬಂದವು. ಇವೆಲ್ಲಾ ದೊಡ್ಡ ದೊಡ್ಡ ಘಟನೆಗಳ ರೂಪದಲ್ಲಿ ವ್ಯಕ್ತವಾದವು ಎನ್ನಲಾಗುವುದಿಲ್ಲ. ಕೆಲಸಕ್ಕೆ ಕರೆದರೆ ಹೋಗದಿರುವುದು, ದಾರಿಯಲ್ಲಿ ಎದುರಾದರೆ ದಾರಿ ಬಿಡದಿರುವುದು, ಹೋಟೇಲುಗಳಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರಮುಖರನ್ನು ಕಡೆಗಣಿಸಿ ವ್ಯವಹರಿಸುವುದು, ಇತ್ಯಾದಿ ಸಣ್ಣ ಪುಟ್ಟ ಬದಲಾವಣೆಗಳು ಸಾಮಾನ್ಯವಾದವು. ಆದಾಗ್ಯೂ ಈ ಘಟನೆಯೇ ಸ್ಥಳೀಯ ರಾಜಕೀಯದಲ್ಲಿ ಗುಣಾತ್ಮಕ ಬದಲಾವಣೆ ತಂದಿತು ಎನ್ನಲಾಗುವುದಿಲ್ಲ. ಯಜಮಾನಿಕೆಯ ಜಾತಿಯೊಳಗಿನ ಗುಂಪು ಘರ್ಷಣೆಯ ಜತೆಗೆ ಹಳ್ಳಿಯ ಸುತ್ತ ಮುತ್ತ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿನ ರಾಜಕೀಯ ಪರಿವರ್ತನೆಗಳು ಕೂಡ ಇಲ್ಲಿನ ರಾಜಕೀಯ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.

ಈ ಹಿಂದೆ ವಿವರಿಸಿದಂತೆ ಸುಮಾರು ೧೯೪೮ರಿಂದಲೇ ಹಳ್ಳಿಯ ಸಮೀಪ ಗಣಿಗಾರಿಕೆ ಆರಂಭವಾಗಿತ್ತು. ಗಣಿಗಾರಿಕೆಯ ವೃದ್ಧಿಯೊಂದಿಗೆ ಕೆಳಜಾತಿಯವರು ಕೃಷಿ ಕೂಲಿಯಿಂದ ದೂರ ಸರಿದು ಗಣಿಯತ್ತ ಆಕರ್ಷಿತರಾಗಿದ್ದರು. ಆದರೂ ಮೇಲು ಜಾತಿ/ವರ್ಗದವರಿಂದ ಸಾಲ ಪಡೆದವರು ಮತ್ತು ಜೀತಕ್ಕೆ ದುಡಿಯುತ್ತಿದ್ದ ಹರಿಜನರು ಒಮ್ಮಿಂದೊಮ್ಮೆಗೆ ತಮ್ಮ ಯಜಮಾನರಿಂದ ದೂರ ಸರಿಯುವ ಧೈರ್ಯ ತೋರಿಸಲಿಲ್ಲ. ೧೯೬೯ರ ಘಟನೆಯ ನಂತರ ಕೆಳಜಾತಿಯ ಕೆಲವು ಕೃಷಿ ಕಾರ್ಮಿಕರು ಮತ್ತು ಸಣ್ಣ ಕೃಷಿಕರು ಲಿಂಗಾಯತರ ಹೊಲಗಳಲ್ಲಿ ದುಡಿಯುವ ಬದಲು ಗಣಿಗಳಿಗೆ ಹೋಗಲು ಆರಂಭಿಸಿದರು. ಆದರೆ ಹರಿಜನರು, ಅದರಲ್ಲೂ ಹಳೇ ತಲೆಮಾರಿನವರು. ಇನ್ನೂ ಜೀತದಾಳುಗಳಾಗಿ ಮುಂದುವರಿಯುತ್ತಿದ್ದರು. ಗಣಿ ಆರಂಭವಾಗಿ ಹಲವಾರು ವರ್ಷಗಳವರೆಗೆ ಹರಿಜನರು ಅದರತ್ತ ಹೋಗದಿರಲು ಹಲವಾರು ಕಾರಣಗಳಿವೆ. ಅವುಗಳಲ್ಲೀ ಮುಖ್ಯವಾದವು ಯಜಮಾನರಿಂದ ಪಡೆದ ಸಾಲ ಮತ್ತು ಜೀತದ ಭಯ. ಹಳ್ಳಿಯಲ್ಲಿನ ಜೀತ ಪದ್ಧತಿಗೆ ಇಂದಿರಾ ಗಾಂಧಿಯವರ ಎರ್ಮಜನ್ಸಿ ಕೊನೆ ಹಾಡಿತು. ೧೯೭೫ರ ಎರ್ಮಜನ್ಸಿ ಇಡೀ ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಕರಾಳ ಘಟನೆಯೆಂಬ ಚಿತ್ರಣ ಪಡೆದಿದೆ. ಪಿ.ಕೆ.ಹಳ್ಳಿಯ ಹರಿಜನರ ದೃಷ್ಟಿಯಿಂದ ಆ ಎಮರ್ಜನ್ಸಿ ಮತ್ತು ಆ ಸಂದರ್ಭದಲ್ಲಿ ಜಾರಿ ಬಂದ ಜೀತ ಮುಕ್ತಿ ಮತ್ತು ಸಾಲ ಮನ್ನಾ ಕ್ರಮಗಳು ಅವರ ಬದುಕನ್ನೇ ಬದಲಾಯಿಸಿದ ಘಟನೆಗಳು. ನಮ್ಮ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳುವಲ್ಲಿ ಇಂತಹ ವೈರುಧ್ಯಗಳನ್ನು ಆರಂಭದಿಂದಲೇ ಅನುಭವಿಸುತ್ತಾ ಬಂದಿದ್ದೇವೆ. ರಾಷ್ಟ್ರೀಯತೆ, ಅದರ ಉದ್ಧಾರಕ್ಕಾಗಿ ಹಮ್ಮಿಕೊಳ್ಳುವ ಯೋಜನೆಗಳು, ಅದಕ್ಕೆ ವಿನಿಯೋಜನೆಯಾಗುವ ಬಂಡವಾಳ ಇತ್ಯಾದಿ ಎಲ್ಲವೂ ಕೂಡ ಕೆಳ ವರ್ಗದವರ ದೃಷ್ಟಿಯಿಂದ ಆಹಾರವಾಗಿದೆ ಎನ್ನುವಂತಿಲ್ಲ. ಹಲವಾರು ಯೋಜನೆಗಳು ಕೆಳ ವರ್ಗದ ಜನರನ್ನು ಮೂಲೆ ಗುಂಪಾಗಿಸಿವೆ. ರಕ್ಷಿತ ಅರಣ್ಯ ಯೋಜನೆ ಬುಡಕಟ್ಟು ಜನರ ಬುಡವನ್ನೇ ಅಲುಗಾಡಿಸಿದೆ. ಆಧುನಿಕ ಕೈಗಾರಿಕೆಗಳಿಗೆ ಕೊಡುವ ಪ್ರೋತ್ಸಾಹ ಗುಡಿ ಕೈಗಾರಿಕೆ ಮತ್ತು ಸಾಂಪ್ರದಾಯಿಕ ಕಸುಬಿನಲ್ಲಿ ತೊಡಗಿಸಿಕೊಂಡವರಿಗೆ ಬದುಕೇ ಇಲ್ಲದಂತೆ ಮಾಡಿದೆ. ಬೃಹತ್ ನೀರಾವರಿ ಯೋಜನೆಗಳು, ಡಿಫೆನ್ಸ್‌ಪ್ರೊಜೆಕ್ಟ್‌ಗಳು, ಸಾರಿಗೆ ಸಂಪರ್ಕ ಕಾಮಗಾರಿಗಳು, ಇತ್ಯಾದಿಗಳು ಎಷ್ಟೋ ಜನರು ಮನೆ ಮಠ ಕಳಕೊಳ್ಳುವಂತೆ ಮಾಡಿವೆ.

ಕೆಳಜಾತಿ/ವರ್ಗಗಳಿಗೆ ವರದಾನವಾಗುವ ಸಂಗತಿಗಳು ಬೆಳಕು ಕಾಣುವುದು ಸಂಕಷ್ಟದ ಸಂರ್ಭದಲ್ಲೆ ಇರಬೇಕೋ ಏನೋ. ಸಾಮಾನ್ಯರಿಗೆ ಸಾಮಾನ್ಯ ದಿನಗಳು ಸಂಕಷ್ಟದ ದಿನಕಗಳೇ, ಕ್ರೈಸಿಸ್‌ಗಳೇ ಬೆಳಕು ಕೊಡುವ ಸಂದರ್ಭಗಳಿರಬೇಕು. ಎಮರ್ಜನ್ಸಿಯ ಜೀತಮುಕ್ತಿ ಮತ್ತು ಸಾಲ ಮನ್ನಾ ಹರಿಜನರನ್ನು ಜೀತದಿಂದ ಮತ್ತು ಸಾಲದಿಂದ ಮುಕ್ತಿಗೊಳಿಸಿದವು. ಅದೇ ಸಂರ್ಭದಲ್ಲಿ ಹಳ್ಳಿಯ ಸರಹದ್ದಿನಲ್ಲೆ ಬದಲಿ ಉದ್ಯೋಗ ವ್ಯವಸ್ಥೆ, ಗಣಿ ಕೂಲಿ ರೂಪದಲ್ಲಿ, ಇದ್ದುದು ಆ ಕಾನೂನು ಪರಿಣಾಮಕಾರಿಯಾಗಿ ಜಾರಿ ಬರಲು ಅನುಕೂಲವಾಯಿತು. ಈ ಎಲ್ಲದರ ಪರಿಣಾಮ ಮೇಟಿ ಕುಟುಂಬದವರ ರಾಜಕೀಯ ಪ್ರಭಾವದ ಮೇಲೆ ಗಾಢವಾಗಿಯೇ ಆಗಿದೆ. ಜೀತದಾಳುಗಳ ಮೂಲಕ ತಮ್ಮ ಹೊಲಗಳ ಕೃಷಿಗೆ ಒಗ್ಗಿ ಹೋಗಿದ್ದ ಅವರಿಗೆ ಒಮ್ಮಿಂದೊಮ್ಮೆಗೆ ಬದಲಾದ ಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಯಿತು. ಒಣಭೂಮಿ ಕೃಷಿಯಿಂದ ಅವರ ರಾಜಕೀಯ ದರ್ಬಾರು ನಡಿಸುವಷ್ಟು ಆದಾಯ ಬರುತ್ತಿತ್ತೇ ಹೊರತು ವಿಶೇಷ ಮಿಗತೆ ಸಂಗ್ರಹವಾಗಿರಲಿಲ್ಲ. ಹೀಗಾಗಿ ಮೇಲಿನ ಬದಲಾವಣೆಗಳು ಅವರ ಆರ್ಥಿಕ ಬಲವನ್ನೆ ಕುಂದಿಸಿತು. ಅದರ ಒಟ್ಟು ಪರಿಣಾಮ ಅವರ ರಾಜಕೀಯ ಬದುಕಿನ ಮೇಲು ಕಂಡುಬರತೊಡಗಿತು. ೧೯೭೫ರ ನಂತರದ ರಾಜಕೀಯ ಬೆಳವಣಿಗೆಗಳನ್ನು ವಿವರಿಸುವ ಮುನ್ನ ಮೇಟಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಊರಿಗೆ ಮಾಡಿಸಿದ ಕಾಮಗಾರಿಗಳ ಕುರಿತು ಕೆಲವು ವಿಚಾರಗಳನ್ನು ತಿಳಿಸಲೇಬೇಕು.

ಗ್ರಾಮ ಪಂಚಾಯತಿ ಕಾರ್ಯವ್ಯಾಪ್ತಿ ಮತ್ತು ಆದಾಯ ತುಂಬಾ ಸೀಮಿತವಾಗಿತ್ತು. ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಕೊಡುವುದು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವುದು ತಾಲ್ಲೂಕು ಮತ್ತು ಜಿಲ್ಲಾ ಬೋರ್ಡ್‌ಗಳ ವ್ಯಾಪ್ತಿಯಲ್ಲಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತಾಲ್ಲೂಕು ಮತ್ತು ಜಿಲ್ಲಾ ಬೋರ್ಡ್‌ಗಳಲ್ಲಿ ಪ್ರಭಾವವಿದ್ದರೆ ಹಳ್ಳಿಗೆ ಕೆಲವು ಸವಲತ್ತುಗಳನ್ನು ಮಾಡಿಸಬಹುದಿತ್ತು. ಚಂದ್ರಶೇಖರಪ್ಪನವರ ತಂದೆ ಪಕೀರಪ್ಪನವರ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಕನಿಷ್ಠ ರೂ. ೨೦೦ರಷ್ಟು ಕಂದಾಯ ಕಟ್ಟುವವರು ಜಿಲ್ಲಾ ಬೋರ್ಡಿನ ಸದಸ್ಯರಾಗಬಹುದಿತ್ತು. ಸುತ್ತಮುತ್ತಲಿನ ಹಳ್ಳಿಗಳ ಪೈಕಿ ಚಂದ್ರಶೇಖರಪ್ಪನವರ ತಂದೆ ಪಕೀರಪ್ಪನವರು ಮತ್ತು ನೆರೆಯ ಕಾಕಬಾಳು ಗ್ರಾಮದ ಸಿದ್ದಪ್ಪನವರು ಜಿಲ್ಲಾ ಬೋರ್ಡಿನ ಸದಸ್ಯರಾಗಿದ್ದರು. ಚಂದ್ರಶೇಖರಪ್ಪನವರು ತಂದೆಯ ಮೂಲಕ ಇತರ ಸದಸ್ಯರ ಪರಿಚಯ ಮಾಡಿಕೊಂಡು ಜಿಲ್ಲಾ ಬೋರ್ಡಿನ ಅನುದಾನದಿಂದ ಹಳ್ಳಿಗೆ ಹಲವು ಕಾಮಗಾರಿಗಳನ್ನು ಮಾಡಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಕುಡಿಯುವ ನೀರಿಗಾಗಿ ಮೂರು ಬಾವಿ, ಒಂದು ಪ್ರಾಥಮಿಕ ಶಾಲೆ, ಒಂದು ಆಸ್ಪತ್ರೆ (ಅಸ್ಪತ್ರೆಯ ಕಟ್ಟಡದಲ್ಲಿ ಗೊಗ್ಗ ಗುರು ಸಾಂತಯ್ಯನವರು ದಾನವಾಗಿ ಕೊಟ್ಟದ್ದು ಎಂದು ಬರೆದಿದೆ). ಒಂದು ಪಶುವೈದ್ಯಶಾಲೆ ಮತ್ತು ಒಂದು ಯುವಕ ಮಂಡಲ ಕಟ್ಟಡ. ಇವರ ಅವಧಿಯಲ್ಲಿ, ೧೯೬೭ರಲ್ಲಿ, ಹಳ್ಳಿಗೆ ವಿದ್ಯುತ್ ಸಂಪರ್ಕವಾಯಿತು. ಗ್ರಾಮದಿಂದ ಸಂದಾಯವಾಗುತ್ತಿದ್ದ ಭೂಕಂದಾಯದ ಮೂರನೇ ಒಂದಂಶ ಗ್ರಾಮ ಪಂಚಾಯತಿಗೆ ಕೊಡುತ್ತಿದ್ದರು. ಮನೆ ತೆರಿಗೆ ಸಂಗ್ರಹವಾಗುತ್ತಿರಲಿಲ್ಲ.

೧೯೭೫ರ ನಂತರ ಮೇಟಿ ಕುಟುಂಬದವರ ರಾಜಕೀಯ ಪ್ರಭಾವ ಕುಂಟುತ್ತಾ ಬಂದುದನ್ನು ಈ ತನಕ ವಿವರಿಸಿದ್ದೇನೆ. ೧೯೭೮ರಲ್ಲಿ ಮತ್ತೊಂದು ಪಂಚಾಯತ್ ಚುನಾವಣೆ ಬಂತು. ಆ ಚುನಾವಣೆಯಲ್ಲಿ ಮೇಟಿ ಚಂದ್ರಶೇಖರಪ್ಪನವರು ಸ್ಪರ್ಧಿಸುವುದಿಲ್ಲವೆಂದು ನಿರ್ಧರಿಸಿದರು. ಸ್ಪರ್ಧಿಸದಿರಲು ಚಂದ್ರಶೇಕರಪ್ಪನವರಿಗೆ ಕೆಲವು ವೈಯಕ್ತಿಕ ಕಾರಣಗಳಿದ್ದವು. ಅದೇನೆಂದು ಅವರ ಸರಿಯಾಗಿ ವಿವರಿಸಿಲ್ಲ. ಅವರ ಕೆಲವು ಹೇಳಿಕೆಗಳ ಆಧಾರದಲ್ಲಿ ತೀರ್ಮಾನಿಸುವುದಾದರೆ ರಾಜಕೀಯದಿಂದ ಅವರಿಗೆ ಲಾಭಗಳು ಆಗುವುದಕ್ಕಿಂತ ಹೆಚ್ಚು ನಷ್ಟಗಳಾಗಿದ್ದವು. ವರ್ಷ ಪೂರ್ತಿ ರಾಜಕೀಯದಲ್ಲಿ ಮುಳುಗಿರುವುದರಿಂದ ತಮ್ಮ ಕೃಷಿಯನ್ನು ಸುಧಾರಿಸಲು ಆಗಿಲ್ಲ. ಆದುದರಿಂದ ಸ್ವಲ್ಪ ಸಮಯ ಈ ರಾಜಕೀಯದಿಂದ ದೂರ ಇರುವ ಎಂದು ಅವರು ಬಯಸಿದ್ದರು. ಆದರೆ ದೂರ ಸರಿಯಬೇಕೆಂಬ ಅವರ ನಿರ್ಧಾರವನ್ನು ಉದ್ವಾಳರು ಬೇರೆ ರೀತಿ ಪ್ರಚಾರ ಮಾಡಿದರು ಎಂದು ಚಂದ್ರಶೇಖರಪ್ಪ ಅಭಿಪ್ರಾಯಪಡುತ್ತಾರೆ. ಚಂದ್ರಶೇಖರಪ್ಪನಿಗೆ ಸೋಲುತ್ತೇನೆಂಬ ಭಯವಿದೆ; ಆದುದರಿಂದ ಆತ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಉದ್ವಾಳರು ಪ್ರಚಾರ ಮಾಡಿದರೆಂದು ಚಂದ್ರಶೇಖರಪ್ಪ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಚಂದ್ರಶೇಖರಪ್ಪನವರು ಮೇಟಿಯವರ ಕಡೆಯಿಂದ ಶಿವಶಂಕರಪ್ಪ, ಶಿವರುದ್ರಪ್ಪ ಮತ್ತು ರಾಚೂಟಪ್ಪನ ಹೆಂಡತಿಯನ್ನು ಅಭ್ಯರ್ಥಿಗಳಾಗಿ ನಿಲ್ಲಿಸಿದರು. ನಡೆದ ಚುನಾವಣೆಯಲ್ಲಿ ಉದ್ವಾಳರ ಕಡೆಯಿಂದ ಹತ್ತು ಜನ ಚುನಾಯಿತರಾದರೆ ಮೇಟಿಯವರ ಕಡೆಯಿಂದ ಕೇವಲ ಮೂರು ಮಂದಿ ಆಯ್ಕೆಯಾದರು. ಹನುಮಂತಪ್ಪನವರು ಉದ್ವಾಳರ ಕಡೆಯಿಂದ ಅಧ್ಯಕ್ಷ ಪದವಿಗೆ ಸ್ಪರ್ಧಿಸುವುದೆಂದು ತೀರ್ಮಾನಿಸಲಾಗಿತ್ತು. ಹನುಮಂತಪ್ಪನವರು ಈ ಎರಡೂ ಗುಂಪಿಗೆ ಸೇರಿದವರಲ್ಲ ಕರೆ ತಿಮ್ಮಪ್ಪನವರ ಗುಂಪಿಗೆ ಸೇರಿದವರು. ೬೦ರ ದಶಕದಲ್ಲಿ ಹೊಸಪೇಟೆಯಿಂದ ಬಂದವರು. ಪಿ.ಕೆ.ಹಳ್ಳಿಯಲ್ಲಿ ವ್ಯಾಪಾರಿಯಾಗಿ ನೆಲೆ ನಿಂತವರು. ವ್ಯಾಪಾರ ವೃದ್ಧಿಯಾಗುತ್ತಿದ್ದಂತೆ ಜಮೀನು ಕೊಂಡುಕೊಂಡು ಕೃಷಿ ಕೂಡ ಆರಂಭಿಸಿದರು, ಊರಿನ ರಾಜಕೀಯದಲ್ಲಿ ವ್ಯಾಪಾರಿಗೇನು ಕೆಲಸವೆಂದು ತಮ್ಮಷ್ಟಕ್ಕೆ ಇದ್ದವರು ಹನುಮಂತಪ್ಪ, ಪಂಚಾಯತ್ ಚುನಾವಣೆಯಲ್ಲಿ ಆಸಕ್ತಿ ತೋರಿಸಿದವರೇ ಅಲ್ಲ. ಆದರೆ ದಿನನಿತ್ಯ ತಮ್ಮ ಅಂಗಡಿಗೆ ಬರುವ ಜನರು ಮತ್ತು ಉದ್ವಾಳರ ಕಡೆಯವರು ಮೇಟಿಗಳ ದರ್ಪ ಮತ್ತು ದಬ್ಬಾಳಿಕೆಯನ್ನು ಅವರಲ್ಲಿ ದೂರುತ್ತಿದ್ದರು. ಮೇಟಿಗಳಿಗೂ ಅವರಿಗೂ ಯಾವುದೇ ವೈಯಕ್ತಿಕ ಜಗಳವಿಲ್ಲ, ದ್ವೇಷವಿಲ್ಲ. ಆದರೂ ದಿನಾ ಮೇಟಿಗಳ ವಿರುದ್ಧ ಕೇಳುವ ದೂರುಗಳು ಅವರಲ್ಲೂ ಮೇಟಿಗಳ ವಿರುದ್ಧ ದ್ವೇಷದ ಕಿಡಿ ಹಚ್ಚಿತು. ಮೇಟಿಗಳ ಕೈಯಿಂದ ಈ ಹಳ್ಳಿಯನ್ನು ಬಿಡುಗಡೆಗೊಳಿಸದಿದ್ದರೆ ಯಾರಿಗೂ ಸುಖವಿಲ್ಲವೆಂಬ ತೀರ್ಮಾನಕ್ಕೆ ಅವರೂ ಬಂದರು. ಚುನಾವಣೆಗೆ ಸ್ಪರ್ಧಿಸಲು ಒಪ್ಪಿದರು. ಅಧ್ಯಕ್ಷರ ಚುನಾವಣೆಯಂದು ತಮ್ಮ ಬೆಂಬಲಿಗರನ್ನು ಬೇರೆಯದೇ ಸ್ಥಳದಲ್ಲಿ ಇರಿಸಿ ಓಟಿನ ಹೊತ್ತಿಗೆ ಕರೆ ತಂದು ಓಟು ಹಾಕಿಸಿದರು. ಅಧ್ಯಕ್ಷರಾದರು. ಮೂವತ್ತು ವರ್ಷಗಳ ನಂತರ ಪ್ರಥಮ ಬಾರಿಗೆ ಮೇಟಿ ಮತ್ತು ಉದ್ವಾಳರನ್ನು ಹೊರತು ಪಡಿಸಿದ ಮೂರನೇ ವ್ಯಕ್ತಿ ಹಳ್ಳಿಯ ರಾಜಕೀಯದಲ್ಲಿ ಪ್ರವೇಶಿಸಿದಂತಾಯಿತು. ಮೇಟಿ ಕುಟುಂಬದವರಿಂದ ಹೊರಗಿನವರು ಪಂಚಾಯತ್ ಅಧ್ಯಕ್ಷರಾದರು.

ಹನುಮಂತಪ್ಪನ ಅಧಿಕಾರ ಅವಧಿಯಲ್ಲಿ ಆದ ಕೆಲಸಗಳ ಬಗ್ಗೆ ಜನರಿಗೆ ವಿಶೇಷ ನೆನಪಿಲ್ಲ. ಆದರೆ ಅವರ ಅವಧಿಯಲ್ಲಿ ಆದ ಒಂದು ಕೆಲಸದ ನೆನಪಂತೂ ಊರ ಎಲ್ಲರ ಮನಸ್ಸಲ್ಲಿ ಇಂದು ಕೂಡ ಹಸಿಯಾಗಿಯೇ ಇದೆ. ಅದೇನೆಂದರೆ ತಿಮ್ಮಪ್ಪನ ತೇರಿಗೆ ಪುನರ್ ಜೀವ ನೀಡಿದ್ದು. ತಿಮಪ್ಪನ ತೇರು ಹಲವಾರು ವರ್ಷಗಳ ಹಿಂದೆ ನಿಂತು ಹೋಗಿತ್ತು. ಯಾಕೆ ಎನ್ನುವುದರ ಬಗ್ಗೆ ಯಾರಲ್ಲೂ ಖಚಿತ ಉತ್ತರವಿಲ್ಲ. ಒಬ್ಬರು ತೇರಿನ ಗಾಲಿ ಮುರಿದ ನಂತರ ನಿಂತಿದೆ ಎಂದರೆ ಮತ್ತೊಬ್ಬರು ಊರ ಹಿರಿಯರ ಗಲಾಟೆಯಿಂದಾಗಿ ನಿಂತಿತು ಎನ್ನುತ್ತಾರೆ. ಕಾರಣ ಏನೇ ಇರಲಿ ಹನುಮಂತಪ್ಪನವರು ಅಧ್ಯಕ್ಷರಾದ ಸಂದರ್ಭದಲ್ಲಿ ತೇರು ನಡಿಯುತ್ತಿರಲಿಲ್ಲ ಎನ್ನುವುದಂತು ನಿಜ. ನಿಂತುಹೋದ ತಿಮ್ಮಪ್ಪನ ತೇರನ್ನು ಪುನರ್ ಆರಂಭಿಸಬೇಕೆಂದು ಅಧ್ಯಕ್ಷ ಹನುಮಂತಪ್ಪನವರು ತೀರ್ಮಾನಿಸಿದರು. ಅವರ ಈ ತೀರ್ಮಾನಕ್ಕೆ ಎರಡು ಕಾರಣಗಳಿದ್ದವು. ಒಂದು, ಹನುಮಂತಪ್ಪನವರ ಮನೆ ದೇವರು ತಿಮ್ಮಪ್ಪನೇ. ಎರಡು, ಈ ತೇರು ನಿಂತಿರುವುದೇ ಊರಿನ ಅಶಾಂತಿಗೆ ಕಾರಣವೆಂಬ ಅವರ ತಿಳುವಳಿಕೆ. ತೇರನ್ನು ಪುನರ್ ಆರಂಭಿಸುವುದು ಹುನುಂತಪ್ಪನವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೇಟಿಯವರ ವಿರೋಧ. ತೇರನ್ನು ಪುನರಾರಂಭಿಸುವುದಕ್ಕೆ ಅವರು ಒಪ್ಪಿರಲಿಲ್ಲ. ತೇರಿನ ದಿನ ಗಲಾಟೆಯಾಗಬಹುದೆಂದು ಪೋಲೀಸ್ ಬಂದೋಬಸ್ತ್ ಕೇಳಲಾಯಿತು. ಪೋಲೀಸ್ ರಕ್ಷಣೆಯಲ್ಲಿ ಕಡೆಗೂ ರಥೋತ್ಸವ ನಡೆಯಿತು. ದೇವರನ್ನು ತೃಪ್ತಿ ಪಡಿಸಿದರೂ ಹನುಮಂತಪ್ಪನವರಿಗೆ ರಾಜಕೀಯದಲ್ಲಿ ಕಿರಿಕಿರಿ ತಪ್ಪಲಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಹಿಂದಿನ ಯಜಮಾನಿಕೆಯವರ ಜತೆ ಘರ್ಷಣೆ ನಡೆದೇ ಇತ್ತು. ಅವರ ವ್ಯಾಪಾರ ಕೂಡ ದಿನೇ ದಿನೇ ಕುಸಿಯುತ್ತಾ ಬಂತು. ಅಧ್ಯಕ್ಷಗಿರಿ ಮತ್ತು ವ್ಯಾಪಾರ ಸರಿಹೊಂದುವುದಿಲ್ಲವೆಂದು ಅಧ್ಯಕ್ಷ ಪದವಿಗೆ ಎರಡು ವರ್ಷಗಳ ನಂತರ ರಾಜೀನಾಮೆ ಇತ್ತರು. ಅವರ ನಂತರ ಗವಿಯಪ್ಪನವರು ಅವಿರೋಧವಾಗಿ ಆಯ್ಕೆಯಾದರು.

 

[1]ಗೊಗ್ಗ ಬಸಯ್ಯನವರ ಕುಟುಂಬದವಲ್ಲಿ ಈ ಕುರಿತು ವಿಚಾರಿಸಿದರೆ ನಮ್ಮ ಹಿರಿಯರು ಚುನಾವಣೆಗೆ ಸ್ಪರ್ಧಿಸಿದ ವಿಚಾರ ನಮಗೆ ತಿಳಿದೇ ಇಲ್ಲ ಎನ್ನುತ್ತಾರೆ. ಒಂದು ಕಾಲದಲ್ಲಿ ಅವರ ಕುಟುಂಬ ಹಳ್ಳಿಯಲ್ಲೆ ಮನೆಮಾಡಿ ನೆಲೆಸಿತ್ತು. ತಮ್ಮ ಗಣಿ ವ್ಯವಹಾರ ಕುದುರಿದಂತೆ ಅವರು ತಮ್ಮ ವಾಸವನ್ನು ಹಳ್ಳಿಯಿಂದ ಹೊಸಪೇಟೆಗೆ ಸ್ಥಳಾಂತರಿಸಿದರು. ಅವರ ಕುಟುಂಬದ ಎಲ್ಲರ ಆರ್ಥಿಕ ಸ್ಥಿತಿ ತುಂಬಾ ಸುಧಾರಿಸಿದೆ. ಪ್ರತಿಯೊಬ್ಬರಿಗೂ ಪೇಟೆಯಲ್ಲಿ ದೊಡ್ಡ ಬಂಗಲೆಗಳಿವೆ, ಕಾರುಗಳಿವೆ, ಗೇಟುಗಳಿವೆ, ಗೇಟು ಕಾಯಲು ನಾಯಿಗಳಿವೆ ಮತ್ತು ಜನರಿದ್ದಾರೆ. ಅವರ ಹಿಂದಿನ ದೊಡ್ಡ ಮನೆ ರೈಲ್ವೆ ನಿಲ್ದಾಣದ ಹತ್ತಿರ ಈಗಲೂ ಖಾಲಿ ಇದೆ. ಹಿರಿಯರ ಕಾಲದಲ್ಲಿ ಹಳ್ಳಿಯಲ್ಲಿ ದೊಡ್ಡ ಕುಳ ಎನ್ನಿಸಿಕೊಂಡವರು ಇಂದು ಹೊಸ ತಲೆಮಾರಿನವರೆದುರು ನಗಣ್ಯರಾಗಿದ್ದಾರೆ. ಅಂಥವರ ಜತೆ ತಮ್ಮ ಹಿರಿಯರ ಸಂಬಂಧವನ್ನು ಊಹಿಸಿಕೊಳ್ಳುವುದು ಹೊಸ ಪೀಳಿಗೆಗೆ ಕಷ್ಟವಾಗಬಹುದು. ಆದುದರಿಂದ ಗೊಗ್ಗ ಬಸಯ್ಯನವರಿಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿರಬಹುದು.

[2]ರಂಜೀತ್ ಗುಹಾ, “ದಿ ಪ್ರೋಸ್ ಆಫ್ ಕೌಂಟರ್ ಇನ್‌ಸರ್‌ಜನ್‌ಸಿ”, ಇನ್ ರಂಜೀತ್ ಗುಹಾ (ಸಂಪಾದಿಸಿದ), ಸಬಾಲ್ಟ್ರರ್ನ್ ಸ್ಟಡೀಸ್-ಸಂಚಿಕೆ ಎರಡು, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೮೩,