ಹಿಂದಕ್ಕೆ ಸರಿದ ಗೌಡಿಕೆ

ಗೌಡರ ಆರ್ಥಿಕ ಕುಸಿತಕ್ಕೆ ಹಲವಾರು ವಿವರಣೆಗಳಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ವಿವರಿಸಿದ್ದೇನೆ. ಒಂದು, ಸಾಲ ಮತ್ತು ಅದಕ್ಕಾಗಿ ಭೂಮಿಯ ಪರಭಾರೆ, ಸ್ವಾತಂತ್ರ್ಯಾ ಪೂರ್ವದಲ್ಲಿ ಮತ್ತು ನಂತರ ಕೂಡ ಸಣ್ಣ ಕೃಷಿಕರಿಗೆ ಬ್ಯಾಂಕ್ ಸಾಲ ಸಿಗುವುದು ಕಷ್ಟ. ಅಂದರೆ ಬ್ಯಾಂಕ್ ರಾಷ್ಟ್ರೀಕೃತಗೊಳ್ಳುವವರೆಗೂ ಬಹುತೇಕ ಬ್ಯಾಂಕ್‌ಗಳು ತಮ್ಮ ಸ್ಥಾಪಕರ (ಮುಖ್ಯವಾಗಿ ವ್ಯಾಪಾರಿಗಳ) ಹಿತಾಸಕ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು.[1] ಈ ಸಮಸ್ಯೆ ಪರಿಹಾರಕ್ಕಾಗಿ ಒಂದು ಕಡೆಯಿಂದ ಬ್ಯಾಂಕ್ ರಾಷ್ಟ್ರೀಕರಣ ನಡೆದರೆ ಮತ್ತೊಂದು ಕಡೆಯಲ್ಲಿ ಸಹಕಾರಿ ಬ್ಯಾಂಕ್‌ಗಳಿಗೆ ಉತ್ತೇಜನ ನೀಡಲಾಯಿತು. ಆದರೆ ಹಳ್ಳಿಯಲ್ಲಿ ಇಂದಿಗೂ ವಾಣಿಜ್ಯ ಬ್ಯಾಂಕಿನ ಶಾಖೆ ಇಲ್ಲ; ಸಹಕಾರಿ ಬ್ಯಾಂಕ್ ಆರಂಭವಾದುದೇ ೧೯೬೮ರಲ್ಲಿ. ಅಲ್ಲಿಯವರೆಗೆ ಹಳ್ಳಿಯ ಜನರು ತಮ್ಮ ಹಣಕಾಸು ಅಗತ್ಯಗಳಿಗೆ ಬಳ್ಳಾರಿ ಮತ್ತು ಕೊಪ್ಪಳದ ಶೇಂಗಾ ಮತ್ತು ಹತ್ತಿ ಸಗಟು ವ್ಯಾಪಾರಿಗಳನ್ನೇ ನಂಬಬೇಕಿತ್ತು. ಈ ಸಗಟು ವ್ಯಾಪಾರಿಗಳು ರೈತರಿಗೆ ನೇರ ಸಾಲ ಕೊಡುತ್ತಿರಲಿಲ್ಲ, ಅವರು ಊರ ಗೌಡರಿಗೆ ಸಾಲ ಕೊಡುತ್ತಿದ್ದರು. ಗೌಡರು ವ್ಯಾಪಾರಿಯಿಂದ ಸಾಲ ತಂದು ರೈತರಿಗೆ ಕೊಡುತ್ತಿದ್ದರು. ರೈತರು ತಾವು ಬೆಳೆದ ಬೆಳೆಯನ್ನು ಗೌಡರಿಗೆ ತಲುಪಿಸುವ ಮೂಲಕ ಸಾಲ ಸಂದಾಯ ಮಾಡುತ್ತಿದ್ದರು. ರೈತರು ತಾವು ಬೆಳೆದ ಬೆಳೆಯನ್ನೂ ಕೊಡಲಿಲ್ಲ, ನಗದಾಗಿ ಸಾಲ ಸಂದಾಯ ಮಾಡಲಿಲ್ಲ. ಹಾಗಾಗಿ ಗೌಡರ ಭೂಮಿ ಸಾಲ ಕೊಟ್ಟ ವ್ಯಾಪಾರಿಗಳ ಪಾಲಾಯಿತು. ಊರವರು ಈ ವಾದವನ್ನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲ. ಆದರೆ ಈ ವಾದದ ಮತ್ತೊಂದು ಮುಖವನ್ನು ಪರಿಚಯಿಸುತ್ತಾರೆ. ಅದೇನೆಂದರೆ ಎಲ್ಲಾ ರೈತರೂ ಗೌಡರಿಗೆ ಮೋಸ ಮಾಡಿಲ್ಲ; ಕೆಲವರು ಮಾಡಿರಬಹುದು. ಆದರೆ ಬಹುತೇಕ ರೈತರು ಸಾಲ ಸಂದಾಯ ಮಾಡಿದ್ದಾರೆ. ಆದರೆ ಗೌಡರೇ ಆ ರೀತಿ ಸಂಗ್ರಹವಾದ ಮೊತ್ತವನ್ನು ತಮ್ಮ ಸ್ವಂತದ ಖರ್ಚಿಗೆ ಬಳಸಿರುವುದರಿಂದ ಸಾಲ ಸಂದಾಯವಾಗದೆ ತಮ್ಮ ಭೂಮಿ ಕಳಕೊಳ್ಳಬೇಕಾಯಿತು ಎನ್ನುವುದು ಊರ ಕೆಲವರ ಆಭಿಪ್ರಾಯ.

ಅದೇನೆ ಇರಲಿ ಗೌಡರು ಐವತ್ತರ ದಶಕದಿಂದಲೆ ಆರ್ಥಿಕ ಕುಸಿತವನ್ನು ಅನುಭವಿಸುತ್ತಾ ಬಂದಿದ್ದಾರೆ. ಇದಕ್ಕೆ ಸಾಲದ ಜತೆಗೆ ನೀರಾವರಿಯ ಕೊರತೆ, ವಾಣಿಜ್ಯ ಉತ್ಪನ್ನಗಳ ಬೆಲೆಗಳಲ್ಲಿ ಏರುಪೇರು, ಇತ್ಯಾದಿಗಳೂ ಕಾರಣವಾಗಿರಬಹುದು. ಇದರ ಜತಗೆ ಗೌಡಿಕೆಯನ್ನು ಪ್ರಶ್ನಿಸುವ ಊರಿನ ಇತರ ಬೆಳವಣಿಗೆಗಳನ್ನು ಗಮನಿಸಬೇಕಾಗಿದೆ. ಅವುಗಳಲ್ಲಿ ಮುಖ್ಯವಾದುದು ಲಿಂಗಾಯತರ ಸಾಮಾಜಿಕ ಹಾಗೂ ಆರ್ಥಿಕ ಪ್ರಾಬಲ್ಯ, ಲಿಂಗಾಯತರಿಗೆ ಕೊರತೆಯಿದ್ದರೆ ಅದು ರಾಜಕೀಯ ನಾಯಕತ್ವ ಮಾತ್ರ. ವಸಾಹತು ಸರಕಾರದ ಸ್ಥಳೀಯ ಸ್ವ – ಸರಕಾರಗಳನ್ನು ಪುನರುತ್ಥಾನಗೊಳಿಸುವ ಕಾನೂನು ಅವರ ರಾಜಕೀಯ ಆಕಾಂಕ್ಷೆಗೆ ವರದಾನವಾಯಿತು. ಮದ್ರಾಸು ಸರಕಾರದ ಗ್ರಾಮ ಪಂಚಾಯತಿ ಕಾಯಿದೆ ಸ್ಥಳೀಯ ರಾಜಕಾರಣಕ್ಕೆ ಒಂದು ಆಧುನಿಕತೆಯ ಚೌಕಟ್ಟು ಒದಗಿಸಿತು.

ಈ ಚೌಕಟ್ಟನ್ನು ಬಳಸಿಕೊಳ್ಳುವುದರಲ್ಲಿ ಲಿಂಗಾಯತರೊಳಗೆ ಪೈಪೋಟಿಯಿತ್ತು. ಅವರಲ್ಲಿ ಮುಖ್ಯವಾಗಿ ಮೂರು ಪಂಗಡಗಳು. ಇದು ಅವರ ಹಿರಿಯರು ಬಂದ ಊರಿನ ಹಿನ್ನೆಲೆಯಿಂದ ಗುರುತಿಸಲ್ಪಡುತ್ತಿದೆ. ಒಂದು ಉದ್ವಾಳರು, ಎರಡು ಮೇಟಿಗಳು ಮತ್ತು ಮೂರು ಕರೆ ತಿಮ್ಮಪ್ಪನವರು. ಐವತ್ತರ ದಶಕದಲ್ಲಿ ಸುಮಾರು ೨೫ ಲಿಂಗಾಯಿತರ ಕುಟುಂಬಗಳಿದ್ದರೆ; ಅದರಲ್ಲಿ ಉದ್ವಾಳರ ೮ ಕುಟುಂಬಗಳು, ಮೇಟಿಗಳು ೧೨ ಮತ್ತು ಕರೆ ತಿಮ್ಮಪ್ಪನವರ ೫ ಕುಟುಂಬಗಳಿದ್ದವು.[2] ಸಂಖ್ಯೆಯ ದೃಷ್ಠಿಯಿಂದ ಉದ್ವಾಳರ ಪಂಗಡ ಬಲಯುತವಾಗಿರಲಿಲ್ಲ. ಆದರೆ ಆರ್ಥಿಕವಾಗಿ ಉದ್ವಾಳರು ಇತರರಿಂದ ಮುಂದಿದ್ದರು. ಹಾಗಾಗಿ ೧೯೪೦ರ ಪಂಚಾಯತ್ ಚುನಾವಣೆಯಲ್ಲಿ ಉದ್ವಾಳರ ವೀರಪ್ಪನವರು ಅವಿರೋಧವಾಗಿ ಪಂಚಯತ್ ಅಧ್ಯಕ್ಷರಾದರು. ಅವರು ಗಟ್ಟಿ ಕುಳ. ಸಾಲ ಮತ್ತು ಜೀತ ಪದ್ಧತಿಯಿಂದ ಕೆಳ ಜಾತಿಯವರ ಮೇಲೆ ಸಂಪೂರ್ಣ ಹತೋಟಿಯಿತ್ತು. ತುಂಬಾ ಸಿಟ್ಟು ಮತ್ತು ಕಟ್ಟುನಿಟ್ಟಿನ ಮನುಷ್ಯ. ಅವರ ಸಿಟ್ಟಿಗೆ ಮತ್ತು ಊರವರ ಮೇಲೆ ಇವರಿಗೆ ಇದ್ದ ಹಿಡಿತವನ್ನು ವಿವರಿಸಲು ಜಾತ್ರೆಯಲ್ಲಿ ನಡೆದ ಒಂದು ಘಟನೆಯನ್ನು ಊರವರು ಉದಾಹರಣೆಯಾಗಿ ಕೊಡುತ್ತಾರೆ. ತಿಮ್ಮಪ್ಪನ ತೇರಿನಲ್ಲಿ ನಾಯಕರ ಕೊತ್ವಾಲಪ್ಪ ರಾಮ ಮತ್ತು ಹಂಚೆ ಈರಪ್ಪ ಕುಡಿದು ಗಲಾಟೆ ಆರಂಭಿಸಿದರು. ಊರವರು ಎಷ್ಟು ಪ್ರಯತ್ನಿಸಿದರೂ ಅವರನ್ನು ಸಮಾಧಾನ ಪಡಿಸಲು ಆಗಲಿಲ್ಲ. ಆವಾಗ ಅವರನ್ನು ಪಂಚಾಯತ್ ಆಧ್ಯಕ್ಷರು ಚೆನ್ನಾಗಿ ಥಳಿಸಿ ತೇರಿನ ಗಾಲಿಗೆ ಕಟ್ಟಿ ಜಾತ್ರೆ ನಡೆಸಿದರೆಂದು ಈಗಲೂ ಊರವರು ಆಡಿಕೊಳ್ಳುತ್ತಾರೆ. ಇದೇ ರೀತಿ ಇವರ ಕುರಿತು ಊರಲ್ಲಿ ಇಂದಿಗೂ ಪ್ರಚಾರದಲ್ಲಿರುವ ಮತ್ತೊಂದು ಅಂಶವೆಂದರೆ ವೀರಪ್ಪನವರ ನಾಟಕದ ಗೀಳು, ಊರ ಯುವಕರನ್ನು ಕಟ್ಟಿಕೊಂಡು ಹಲವಾರು ನಾಟಕಗಳನ್ನು ಆಡಿಸಿದ್ದಾರೆ. ಲವ ಕುಶ, ಮಾರ್ಕಂಡೇಯ, ಮಂಜುಘೋಷ, – ಹೀಗೆ ಕೆಲವು ನಾಟಕಗಳನ್ನು ತಾವೇ ರಚಿಸಿದ್ದಾರೆ. ಅವುಗಳು ಯಾವುವು ಕೂಡ ಅಚ್ಚಾಗಿಲ್ಲ. ಆದರೆ ಊರ ಹಿರಿಯರೆಲ್ಲರಿಗೆ ಆ ನಾಟಕಗಳ ಪರಿಚಯವಿದೆ. ಯಾಕೆಂದರೆ ವೀರಭದ್ರಪ್ಪನವರ ನಾಟಕ ಇಲ್ಲದೆ ಊರ ಹಬ್ಬಗಳೇ ಇರುತ್ತಿರಲಿಲ್ಲ.

ಗ್ರಾಮ ಪಂಚಾಯತಿಯ ಅಧಿಕಾರ ಮತ್ತು ಕಾರ್ಯಗಳು ಈಗಿನಂತೆ ವ್ಯಾಪಕವಾಗಿರಲಿಲ್ಲ. ಪಂಚಾಯತ್ ಅಧ್ಯಕ್ಷರು ಅಥವಾ ಚೇರ್‌ಮೆನ್ ಆಗುವುದು ಪ್ರತಿಷ್ಠೆಯ ಸಂಕೇತ. ಊರಲ್ಲಿ ನಡಿಯುವ ಸಣ್ಣ ಪುಟ್ಟ ಜಗಳಗಳನ್ನು ಊರ ಗೌಡರ ಜತೆ ಸೇರಿ ಬಗೆಹರಿಸುವುದು. ಅಧಿಕಾರಿಗಳು ಊರಿಗೆ ಬಂದಾಗ ಆತಿಥ್ಯ ಒದಗಿಸುವುದು, ಊರ ಜನರ ಪರವಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು, ಜಿಲ್ಲಾ ಮತ್ತು ತಾಲ್ಲೂಕು ಬೋರ್ಡ್‌ಗಳ ಸಂಪರ್ಕವಿಟ್ಟುಕೊಂಡು ಊರಿಗೆ ಅಗತ್ಯವಾದ ಕಾಮಗಾರಿಗಳನ್ನು ಮಾಡಿಸುವುದು ಇತ್ಯಾದಿಗಳು ಅಧ್ಯಕ್ಷರ ಕೆಲಸಗಳು. ಗೌಡರ ಮತ್ತು ಶ್ಯಾನುಭೋಗರ ಹುದ್ದೆಗಳು ಮುಂದುವರಿದಿದ್ದವು. ಭೂ ಕಂದಾಯ ಸಂಗ್ರಹ, ಖಾತೆ ಬದಲಾವಣೆ, ಮನೆ ತೆರಿಗೆ ಸಂಗ್ರಹ, ದನಕರುಗಳು ಬೇರೆಯವರು ಬೆಳೆಗಳನ್ನು ನಷ್ಟ ಮಾಡಿದಾಗ ಊರ ಒಂದು ಕಡೆ ಬೊಂಗಲಿ ದೊಡ್ಡಿ ಹಾಕಿ ಜುಲ್ಮಾನೆ ವಿಧಿಸುವುದು ಇತ್ಯಾದಿಗಳು ಗೌಡರು ಮತ್ತು ಶ್ಯಾನುಭೋಗರ ವ್ಯಾಪ್ತಿಗೆ ಇದ್ದ ಕೆಲಸಗಳು. ಗ್ರಾಮದ ಸಣ್ಣ ಪುಟ್ಟ ಕೆಲಸಗಳಿಗೆ ಊರವರಿಂದ ಧನ ಸಂಗ್ರಹ ಮಾಡುವುದು ಮತ್ತು ಅವುಗಳಿಂದ ಗ್ರಾಮ ಪಂಚಾಯತಿಯ ಸಣ್ಣ ಪುಟ್ಟ, ಖರ್ಚುಗಳನ್ನು ನಿಭಾಯಿಸುವುದು. ತಿಮ್ಮಪ್ಪನ ತೇರು, ಅಂಕ್ಲಮ್ಮನ ಜಾತ್ರೆ, ಮೊಹರಂ ಹಬ್ಬ ಮುಂತಾದ ಜಾತ್ರೆಗಳ ದಿನ ನಿರ್ಧಾರ, ಯಾರ್ಯಾರು ಎಷ್ಟೆಷ್ಟು ವಂತಿಗೆ ನೀಡಬೇಕು, ಇತ್ಯಾದಿಗಳನ್ನು ಪಂಚಾಯತ್ ಅಧ್ಯಕ್ಷರು ಮತ್ತು ಗೌಡರು ಊರ ಇತರ ಪ್ರಮುಖರ ಜತೆ ಚರ್ಚಿಸಿ ನಿರ್ಧರಿಸುತ್ತಿದ್ದರು. ಮೇಲೆ ವಿವರಿಸಿದ ರೀತಿಯಲ್ಲಿ ಅಧ್ಯಕ್ಷರು ಮತ್ತು ಗೌಡರ ಮಧ್ಯೆ ಅಧಿಕಾರ ತುಂಬಾ ಅಚ್ಚು ಕಟ್ಟಾಗಿ ವಿಂಗಡಿಸಲ್ಪಟ್ಟಿತ್ತು ಎನ್ನಲಾಗುವುದಿಲ್ಲ. ಆಯಾಯ ಹುದ್ದೆಯನ್ನು ವಹಿಸಿಕೊಂಡ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಿನ್ನೆಲೆ ಆತ ತನ್ನ ಅಧಿಕಾರ ವ್ಯಾಪ್ತಿಗೆ ಮತ್ತೊಬ್ಬ ಪ್ರವೇಶಿಸದಂತೆ ಮಾಡುವಲ್ಲಿ ನಿರ್ಣಾಯಕ. ಇಲ್ಲಿ ಕೂಡ ಹಾಗೆ ಆಗಿದೆ. ಹಿಂದೆ ವಿವರಿಸಿದಂತೆ ಬಾಬನ ಗೌಡರ ಆರ್ಥಿಕವಾಗಿ ಕುಸಿಯುತ್ತಾ ಇದ್ದ ಸಂದರ್ಭದಲ್ಲೆ ಈ ಪಂಚಾಯತಿ ಬಂದಿದೆ. ಊರಿನ ಮೇಲು ಜಾತಿಯ ಮತ್ತು ಆರ್ಥಿಕವಾಗಿ ಮೇಲು ಸ್ತರದಲ್ಲಿದ್ದ ವೀರಪ್ಪನವರು ಅಧ್ಯಕ್ಷರಾಗಿದ್ದಾರೆ. ಇವೆಲ್ಲದರ ಪರಣಾಮವಾಗಿ ಬಾಬನ ಗೌಡರ ಅಧಿಕಾರ ಕ್ಷೇತ್ರಗಳು ಹಂತ ಹಂತವಾಗಿ ಕ್ಷೀಣಿಸುತ್ತ ಬಂದವು. ಪಂಚಾಯತ್ ಅಧ್ಯಕ್ಷರನ್ನು ಮುಂದಿಟ್ಟುಕೊಳ್ಳದೆ ಯಾವುದೇ ನಿರ್ಧಾರ ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಯಿತು.

೧೯೪೮ರಲ್ಲಿ ಪಂಚಾಯತ್ ಅಧ್ಯಕ್ಷ ಪದವಿಗೆ ಪುನಃ ಚುನಾವಣೆ ನಡೆಯಿತು. ಹಿಂದಿನ ಬಾರಿಯಂತೆ ವೀರಪ್ಪನವರ ಆಯ್ಕೆ ಸುಗಮವಾಗಿರಲಿಲ್ಲ. ಉದ್ವಾಳ ವೀರಪ್ಪನವರ ವಿರುದ್ಧ ಮೇಟಿ ಸಿದ್ದಪ್ಪನವರು ಸ್ಪರ್ಧಿಸಿದರು. ಇದು ಸ್ಥಳೀಯ ರಾಜಕಾರಣದಲ್ಲಿ ಬಿರುಕು (ಫ್ಯಾಕ್ಷನ್) ಹಾಗೂ ಗುಂಪುಗಾರಿಕೆ ರೂಪುಗೊಳ್ಳುವುದರ ಪ್ರಥಮ ಹಂತ. ಎಂ.ಎನ್.ಶ್ರೀನಿವಾಸ್ ಹೇಳಿದಂತೆ ಯಜಮಾನಿಕೆ ನಡೆಸುವ ಜಾತಿಯ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಬಿರುಕು ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚು.[3] ಇಲ್ಲೂ ಲಿಂಗಾಯತರ ಕುಟುಂಬಗಳು ಹೆಚ್ಚಿದ್ದವು. ಜತೆಗೆ ಅವರೊಳಗೆ ಬೇರೆ ಬೇರೆ ಗುಂಪುಗಳಿದ್ದವು. ಇವರೊಳಗೆ ಊರಿನ ರಾಜಕೀಯ ಹತೋಟಿಗೆ ಸ್ಪರ್ಧೆ ಜೋರಾಗಿಯೇ ಇತ್ತು. ಉದ್ವಾಳರ ಯಜಮಾನಿಕೆಯನ್ನು ಪ್ರಶ್ನಿಸುವ ಮೂಲಕ ಮೇಟಿಯವರು ತಮ್ಮ ಕುಟುಂಬದ ಪ್ರಾಬಲ್ಯವನ್ನು ಸಾಧಿಸಲು ಹೊರಟರು. ಆದರೆ ಅದು ಅಷ್ಟು ಸುಲಭವಿರಲಿಲ್ಲ. ವೀರಪ್ಪನವರು ಊರಲ್ಲಿ ದೊಡ್ಡ ಕುಳ. ಹಲವಾರು ಎಕ್ರೆ ಜಮೀನು. ಜತೆಗೆ ಹಲವಾರು ಸಾವಿರ ರೂಪಾಯಿಗಳನ್ನು ಕೆಳ ಜಾತಿಯವರಿಗೆ ಸಾಲ ಕೊಟ್ಟಿದ್ದರು. ಒಂದು ಲೆಕ್ಕಾಚಾರದ ಪ್ರಕಾರ ಆ ಕಾಲದಲ್ಲೇ ಸುಮಾರು ರೂ. ೬೦೦೦ದಷ್ಟು ಸಾಲ ಕೊಟ್ಟಿದ್ದರು. ವೀರಪ್ಪನವರಿಂದ ಸಾಲ ಪಡೆದವರು ಮೇಟಿ ಸಿದ್ದಪ್ಪನವರನ್ನು ಬೆಂಬಲಿಸುವುದು ಕಷ್ಟ ಸಾಧ್ಯ. ಅದಕ್ಕೆ ಮುಖ್ಯ ಕಾರಣ ಅಂದಿನ ಮತದಾನ ಕ್ರಮ. ಗ್ರಾಮ ಪಂಚಾಯತ್ ಸದಸ್ಯರ ಮತ್ತು ಅಧ್ಯಕ್ಷರ ಚುನಾವಣೆ ಕೈ ಎತ್ತುವ ಮೂಲಕ ನಡಿಯುತ್ತಿತ್ತು. ಭೂ ಕಂದಾಯ ಕಟ್ಟುವವರು ಚುನಾವಣೆಯಂದು ಗ್ರಾಮ ಛಾವಡಿಯಲ್ಲಿ ಸೇರಿ ಕೈ ಎತ್ತುವ ಮೂಲಕ ಅಭ್ಯರ್ಥಿಗಳನ್ನು ಆರಿಸಬೇಕಿತ್ತು. ವೀರಪ್ಪನವರಿಂದ ಸಾಲ ಪಡೆದವರು ಅವರ ಎದುರೇ ಅವರಿಗೆ ವಿರುದ್ಧವಾಗಿ ಕೈ ಎತ್ತುವ ಸಾಧ್ಯತೆ ತುಂಬಾ ಕಡಿಮೆ. ಈ ಸಮಸ್ಯೆ ಅರಿತ ಮೇಟಿ ಸಿದ್ಧಪ್ಪನವರು ತಮ್ಮ ತಂದೆ ಪಕೀರಪ್ಪನವರ ಸಹಾಯ ಯಾಚಿಸಿದರು. ಪಕೀರಪ್ಪನವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೂ. ೨೦೦ಕ್ಕಿಂತಲೂ ಹೆಚ್ಚು ಭೂ ಕಂದಾಯ ಸಂದಾಯ ಮಾಡುತ್ತಿದ್ದ ಕೆಲವೇ ರೈತರುಗಳಲ್ಲಿ ಒಬ್ಬರು. ಆದರೆ ರಾಜಕೀಯವಾಗಿ ಹಳ್ಳಿಯಲ್ಲಿ ಅವರು ನಗಣ್ಯರಾಗಿದ್ದರು. ಹಳ್ಳಿಯ ರಾಜಕೀಯದಲ್ಲಿ ಒಂದು ಸ್ಥಾನಕ್ಕಾಗಿ ಕಾದಿದ್ದರು. ಅದನ್ನು ತಮ್ಮ ಮಕ್ಕಳ ಮೂಲಕ ಸಾಧಿಸಲು ನಿರ್ಧರಿಸಿದರು. ಮೇಟಿಯವರನ್ನು ಬೆಂಬಲಿಸಲು ಮನಸ್ಸಿದ್ದವರು ಆದರೆ ಉದ್ವಾಳದಿಂದ ಸಾಲ ಪಡೆದ ಕಾರಣಕ್ಕಾಗಿ ಅದು ಸಾಧ್ಯವಾಗದವರ ಒಂದು ಸಭೆಯನ್ನು ತಮ್ಮ ಮನೆಯಲ್ಲಿ ಕರೆದರು. ಆ ಸಭೆಯಲ್ಲಿ ಆದ ನಿರ್ಣಯದಂತೆ ಪಕೀರಪ್ಪನವರು ರೈತರಿಗೆ ಸಾಲ ಕೊಡುತ್ತಾರೆ: ಆ ಹಣದಿಂದ ಅವರು ಉದ್ವಾಳರ ಸಾಲ ತೀರಿಸಬೇಕು. ಅವರ ಯೋಜನೆಯಂತೆ ಊರ ಹಲವರು ಉದ್ವಾಳರ ಸಾಲ ತೀರಿಸಿ ಮೇಟಿಯವರ ಕಡೆಗೆ ಬಂದರು. ಹಾಗಾಗಿ ೧೯೪೮ರ ಚುನಾವಣೆಯಲ್ಲಿ ಮೇಟಿ ಸಿದ್ದಪ್ಪನವರು ಅಧ್ಯಕ್ಷರಾದರು.

ಉದ್ವಾಳ ವೀರಪ್ಪನವರ ಸೋಲು ಕೇವಲ ಆರ್ಥಿಕ ಕಾರಣಗಳಿಂದ ಆಗಿದೆ ಎನ್ನುವುದನ್ನು ಕೆಲವರು ಒಪ್ಪುವುದಿಲ್ಲ. ಅವರ ಪ್ರಕಾರ ವೀರಪ್ಪನವರ ಇತರ ಕೆಲವು ಸಂಬಂಧಗಳು ಕೂಡ ಅವರ ಸೋಲಿಗೆ ಕಾರಣವಾಗಿರಬಹುದು. ವೀರಪ್ಪನವರದ್ದು ಅವಿಭಕ್ತ ಕುಟುಂಬ. ತನ್ನ ತಮ್ಮಂದಿರ ಸಂಸಾರ ಜತೆಗೆ ಅವರ ಸಂಸಾರ. ಯಾವುದೋ ಒಂದು ಸಂದರ್ಭದಲ್ಲಿ ಸ್ಥಳೀಯ ಉಪ್ಪಾರರ ಹೆಣ್ಣುಮಗಳ ಜತೆ ವೀರಪ್ಪನವರಿಗೆ ಸಂಬಂಧ ಬೆಳೆಯಿತು. ಅದು ಎಲ್ಲಿಯವರೆಗೆ ಹೋಯಿತೆಂದರೆ ಅವಳನ್ನು ಮನೆಯಲ್ಲೇ ತಂದು ಇರಿಸಿಕೊಳ್ಳುವ ಹಂತಕ್ಕೆ ತಲುಪಿತು. ಆರಂಭದಲ್ಲಿ ಕುಟುಂಬದ ಇತರರು ವಿರೋಧಿಸಿದರು. ಆತನೆ ಕುಟಂಬಕ್ಕೆ ಹಿರಿಯ ಜತೆಗೆ ಊರಿಗೂ ನಾಯಕ ಅಂಥವನಿಗೆ ಏನು ಬುದ್ಧಿ ಹೇಳುವುದು, ಹೇಳುವುದಾದರೂ ಹೇಗೆ ಎಂದು ಕಾಲ ಕ್ರಮೇಣ ಸಂಬಂಧಿಕರು ಸುಮ್ಮನಾದರು. ಆದರೆ ಮಗಳ ಮದುವೆಯ ನಂತರ ವೀರಪ್ಪನವರ ಹೊಸ ಸಂಬಂಧ ಬೇರೆಯದೇ ರೂಪ ಪಡೆಯಿತು. ವೀರಪ್ಪನವರ ಆಸ್ತಿ ಕೂಡ ಇಟ್ಟುಕೊಂಡವಳ ಪಾಲಾಗುತ್ತದೆ ಎನ್ನುವ ಸುದ್ದಿ ಊರಲ್ಲಿತ್ತು. ಅದು ಹೊಸ ಅಳಿಯನಿಗೆ ನುಂಗಲಾಗದ ತುತ್ತಾಯಿತು. ಆತ ಸಮಸ್ಯೆ ಪರಿಹಾರಕ್ಕಾಗಿ ಮೇಟಿಗಳ ಜತೆ ಸೇರಿಕೊಂಡ. ಇದರಿಂದಾಗಿ ಮೇಟಿಗಳಿಗೆ ಹೆಚ್ಚು ಬಲ ಬಂತು. ಹೀಗೆ ವೀರಪ್ಪನವರ ಸೋಲಿಗೆ ಈ ಘಟನೆ ಕೂಡ ಸ್ವಲ್ಪ ಮಟ್ಟಿಗೆ ಕಾರಣವೆಂದು ಊರ ಕೆಲವರ ಅಭಿಪ್ರಾಯ. ಕಾರಣವೇನೆ ಇರಲಿ ಯಜಮಾನಿಕೆಯ ಜಾತಿಯೊಳಗೆ ಬಿರುಕು ರೂಪುಗೊಂಡಿದ್ದಂತೂ ನಿಜ. ಅಧಿಕಾರಕ್ಕಾಗಿ ಎರಡು ಗುಂಪುಗಳ ನಡುವೆ ಪೈಪೊಟಿ ಅಂದಿನಿಂದಲೇ ಆರಂಭವಾಯಿತು. ಊರ ಇತರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಒಂದೊಂದು ಗುಂಪಿನ ಹಿಂದೆ ನಿಂತರು.

ಸ್ವಾತಂತ್ರ್ಯ ನಂತರದ ಗ್ರಾಮ ಪಂಚಾಯತ್ ವ್ಯವಸ್ಥೆ

ಐವತ್ತರ ದಶಕ ಭಾರತ ಆಧುನಿಕತೆಯತ್ತ ದಾಪುಗಾಲು ಇಡಲು ಆರಂಭಿಸಿದ ದಶಕ. ಪಂಚಾವಾರ್ಷಿಕ ಯೋಜನೆಗಳ ಮೂಲಕ ಸಾಂಪ್ರದಾಯಿಕ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಗಳು ಭರದಿಂದ ಆರಂಭವಾಗಿದ್ದವು. ತಳಮಟ್ಟದ ಬದುಕಿನ ಸುಧಾರಣೆಗಾಗಿ ಸಮುದಾಯ ಅಭಿವೃದ್ದಿ ಯೋಜನೆಗಳು ಮತ್ತು ರಾಷ್ಟ್ರೀಯ ವಿಸ್ತರಣಾ ಸೇವಾ ಯೋಜನೆಗಳು ಒಟ್ಟು ಅಭಿವೃದ್ಧಿ ಯೋಜನೆಗಳ ಭಾಗಗಳಾಗಿದ್ದವು. ಈ ಯೋಜನೆಗಳ ಮುಖ್ಯ ಉದ್ದೇಶ ಗ್ರಾಮೀಣ ಜನರನ್ನು ಸರಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವಂತೆ ಮಾಡುವುದಾಗಿತ್ತು. ಆದರೆ ಗ್ರಾಮೀಣ ಜನರ ಆಸಕ್ತಿಯನ್ನು ಕೆರಳಿಸುವಲ್ಲಿ ಈ ಯೋಜನೆಗಳು ವಿಫಲವಾಗಿದ್ದವು.[4] ವಿಫಲತೆಗೆ ಕಾರಣಗಳೇನೆಂದು ತಿಳಿಯಲು ೧೯೫೭ರಲ್ಲಿ ಬಲವಂತ್‌ರಾಯ್ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ನೇಮಕವಾಯಿತು. ಅಭಿವೃದ್ದಿ ಯೋಜನೆಗಳಲ್ಲಿ ಗ್ರಾಮೀಣ ಜನರು ಸಕ್ರಿಯವಾಗಿ ಪಾಲುಗೊಳ್ಳುವಲ್ಲಿ ತಳ ಮಟ್ಟದ ರಾಜಕೀಯ ಮತ್ತು ಆಡಳಿತ ಪರಿಸರವೆ ದೊಡ್ಡ ತೊಡಕಾಗಿವೆ ಎಂದು ಈ ಕಮಿಟಿ ತೀರ್ಮಾನಿಸಿತು.[5] ಈ ದೋಷವನ್ನು ನಿವಾರಿಸಲು ಚುನಾವಣೆಯ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಸಂಘಟಿಸಬೇಕೆಂದು ಕಮಿಟಿ ಸಲಹೆ ನೀಡಿತು. ಜತೆಗೆ ಗ್ರಾಮೀಣ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲು ಕಾರ್ಯಕ್ರಮಗಳು ಜನರ ಆಶೋತ್ತರಗಳಿಗೆ ಅನುಗುಣವಾಗಿವೆಯೇ ಎಂದು ನಿರ್ಣಯಿಸುವ ಜವಾಬ್ದಾರಿಯನ್ನು ಚುನಾಯಿತ ಪ್ರತಿನಿಧಿಗಳು ಹೊರಬೇಕೆಂದು ಕೂಡ ಈ ಕಮಿಟಿ ಸೂಚಿಸಿತು. ಈ ರೀತಿಯಾಗಿ ಅಭಿವೃದ್ಧಿ ಯೋಜನೆಗಳ ನಿರ್ಧಾರದಲ್ಲಿ ಜನರ ಪಾಲುಗೊಳ್ಳುವಿಕೆ ಮತ್ತು ಸ್ಥಳೀಯ ಸಂಸ್ಥೆಗಳು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸ್ವತಂತ್ರವಾಗಿರಬೇಕೆಂಬ ಎರಡು ಪ್ರಮುಖ ತೀರ್ಮಾನಗಳನ್ನು ಮೆಹ್ತಾ ಕಮಿಟಿ ನೀಡಿತು. ಈ ಉದ್ದೇಶ ಈಡೇರಿಕೆಗಾಗಿ ಕಮಿಟಿ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸೂಚಿಸಿತು. ತಳ ಮಟ್ಟದಲ್ಲಿ ಪಂಚಾಯತ್‌ಗಳು, ತಾಲ್ಲೂಕು ಮಟ್ಟದಲ್ಲಿ ಪಂಚಾಯತ್ ಸಮಿತಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಪರಿಷತ್‌ಗಳನ್ನು ಜಾರಿ ತರಲು ಸಮಿತಿ ಸಲಹೆ ನೀಡಿತು. ಕಮಿಟಿಯ ಈ ತೀರ್ಮಾಗಳನ್ನು ಕೆಲವು ರಾಜ್ಯಗಳು ಯಥಾ ರೀತಿಯಲ್ಲಿ ಮತ್ತು ಕೆಲವು ರಾಜ್ಯಗಳು ಪರಿವರ್ತಿತ ರೂಪದಲ್ಲಿ ಜಾರಿಗೆ ತಂದವು.

ಕರ್ನಾಟಕಲ್ಲಿ ಏಕೀಕರಣಕ್ಕೆ ಮುನ್ನ ಹಲವು ವಿಧದ ಪಂಚಯತ್ ವ್ಯವಸ್ಥೆಗಳಿದ್ದವು. ಹಳೇ ಮೈಸೂರು ಪ್ರಾಂತ್ಯ, ಮದ್ರಾಸು ಪ್ರಾಂತ್ಯ, ಮುಂಬೈ ಪ್ರಾಂತ್ಯ ಮತ್ತು ಹೈದರಾಬಾದ್ ಕರ್ನಾಟಕ ಪ್ರಾಂತ್ಯಗಳಲ್ಲಿ ಏಕೀಕರಣಕ್ಕೆ ಮುನ್ನ ಪ್ರತ್ಯೇಕ ಪಂಚಾಯತ್ ವ್ಯವಸ್ಥೆಗಳಿದ್ದವು.[6] ಪ್ರತ್ಯೇಕ ಪಂಚಾಯತ್ ವ್ಯವಸ್ಥೆಯ ಬದಲು ಒಂದು ಏಕರೂಪಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಲು ವೆಂಕಟಪ್ಪ ಕಮಿಟಿಯನ್ನು ೧೯೫೦ರಲ್ಲಿ ಕರ್ನಾಟಕ ಸರಕಾರ ನೇಮಿಸಿತು. ಈ ಕಮಿಟಿಯ ಶಿಫಾರಸ್ಸುಗಳಲ್ಲಿ ಲೋಪದೋಷಗಳಿವೆ ಎಂದು ಮತ್ತೊಂದು ಕಮಿಟಿಯನ್ನು ಶ್ರೀ ಚಂದ್ರಶೇಖರಯ್ಯನವರ ಅಧ್ಯಕ್ಷತೆಯಲ್ಲಿ ನೇಮಿಸಿತು. ಈ ಕಮಿಟಿ ತನ್ನ ತೀರ್ಮಾನಗಳನ್ನು ೧೯೫೪ರಲ್ಲಿ ಸರಕಾರಕ್ಕೆ ಸಲ್ಲಿಸಿತು. ಇದು ಮೂರು ಹಂತದ ಪಂಚಾಯತ್ ವ್ಯವಸ್ಥೆಯನ್ನು ಸೂಚಿಸಿತು. ತಳ ಮಟ್ಟದಲ್ಲಿ ಗ್ರಾಮ ಪಂಚಾಯತ್ ನಂತರದ ಸ್ತರಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಬೋರ್ಡ್‌ಗಳು. ಈ ತೀರ್ಮಾನಗಳು ೧೯೫೯ರಲ್ಲಿ ಮೈಸೂರು ವಿಲೇಜ್ ಪಂಚಾಯತ್ ಆಂಡ್ ಲೋಕಲ್ ಬೋರ್ಡ್ ಆಕ್ಟ್ ಆಯಿತು.[7] ಈ ಕಾಯಿದೆಯ ಪ್ರಕಾರ ಪ್ರತಿ ಕಂದಾಯ ಹಳ್ಳಿ ಒಂದು ನಿರ್ದಿಷ್ಟ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುವ ಪಂಚಾಯತ್ ಹೊಂದಿರಬೇಕು. ಹರಿಜನರಿಗೆ, ಗಿರಿಜನರಿಗೆ ಮತ್ತು ಮಹಿಳೆಯರಿಗೆ ಕೆಲವು ಸೀಟುಗಳನ್ನು ಕಾದಿರಿಸಲು ಈ ಕಾಯಿದೆ ಅವಕಾಶ ಮಾಡಿಕೊಟ್ಟಿದೆ. ಈ ಕಾಯಿದೆ ಪಂಚಾಯತ್‌ಗಳಿಗೆ ಹೆಚ್ಚಿನ ಜವಾಬ್ದಾರಿಗಳನ್ನು ಇತ್ತಿದೆ. ಪಂಚಾಯತ್ ವ್ಯಾಪ್ತಿಗೆ ಬರುವ ಮುಖ್ಯ ಕೆಲಸಗಳೆಂದರೆ – ೧.ರಸ್ತೆ, ಸೇತುವೆ, ಹಳ್ಳ, ಬಾವಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳು. ೨. ಕುಡಿಯುವ ನೀರು, ಚರಂಡಿ ವ್ಯವಸ್ಥೆ ಮತ್ತು ವಿದ್ಯತ್ ದೀಪಗಳ ಪೂರೈಕೆ ೩. ಅಂಗಡಿ ಹೋಟೇಲುಗಳ ನಿಯಂತ್ರಣ ೪. ಸಾರ್ವಜನಿಕ ಕಟ್ಟಡಗಳ, ಸಮುದಾಯ ಭೂಮಿಗಳ ಮತ್ತು ಅರಣ್ಯ ಪ್ರದೇಶಗಳ ನಿರ್ವಹಣೆ ಮತ್ತು ೫. ಸಹಕಾರಿ ಬ್ಯಾಂಕ್, ಸಾರ್ವಜನಿಕ ಆರೋಗ್ಯ ಮತ್ತು ಗುಡಿಕೈಗಾರಿಕೆಗಳಲ್ಲಿ ನಿರ್ದೇಶನ ಪಾತ್ರ.

ಯಜಮಾನಿಕೆಗೆ ಪೈಪೋಟಿ

ದೇಶಕ್ಕೆ ಸ್ವಾತಂತ್ರ ಬಂದು ಮೇಲು ಸ್ತರದಲ್ಲಿ ಇಷ್ಟೆಲ್ಲಾ ಬದಲಾವಣೆಗಳು ಆಗುತ್ತಿರುವಾಗ ಪಾಪಿನಾಯಕನ ಹಳ್ಳಿಯ ರಾಜಕೀಯ ಹೆಚ್ಚು ಕಡಿಮೆ ಹಿಂದಿನ ದಾರಿಯಲ್ಲೇ ಸಾಗುತ್ತಿತ್ತು. ೧೯೪೮ರಲ್ಲಿ ಪಂಚಾಯತ್ ಅಧ್ಯಕ್ಷರಾದ ಮೇಟಿ ಸಿದ್ಧಪ್ಪನವರು ೧೯೫೨ರವರೆಗೂ ಮುಂದುವರಿದರು. ೧೯೫೨ – ೫೩ರಲ್ಲಿ ಪಂಚಾಯತ್ ಅಧ್ಯಕ್ಷ ಗಿರಿಗೆ ಪುನಃ ಉದ್ವಾಳರ ಮತ್ತು ಮೇಟಿಯವರ ಗುಂಪಿನ ನಡುವೆ ಪೈಪೋಟಿ ನಡೆಯಿತು. ಅದರಲ್ಲಿ ಮೇಟಿ ವೀರಣ್ಣನವರು ಗೆದ್ದರು. ಸ್ವಾತಂತ್ರ್ಯ ಸಿಕ್ಕಿ ದಶಕ ದಾಟಿದರೂ ಹಳ್ಳಿಯ ಸ್ಥಿತಿ ಕಿಂಚಿತ್ ಬದಲಾಗಿರಲಿಲ್ಲ ಎನ್ನುವುದಕ್ಕೆ ೧೯೫೮ರ ಪಂಚಾಯತ್ ಚುನಾವಣೆ ಒಂದು ಒಳ್ಳೆಯ ಉದಾಹರಣೆ. ೧೯೪೮ರಲ್ಲಿ ಮೇಟಿ ಸಿದ್ದಪ್ಪನವರು ಉದ್ವಾಳ ವೀರಪ್ಪನವರನ್ನು ಸೋಲಿಸಿದ ಬಳಿಕ ಮೇಟಿ ಕುಟುಂಬದವರು ಯಜಮಾನಿಕೆಯ ಪ್ರಶ್ನಾತೀತವಾಗಿತ್ತು. ಹಾಗಾಗಿ ಸಿದ್ದಪ್ಪನವರ ಎರಡನೇ ತಮ್ಮ ವೀರಣ್ಣ ಸುಲಭವಾಗಿ ಪಂಚಾಯತ್ ಅಧ್ಯಕ್ಷರಾದರು. ೧೯೫೮ರಲ್ಲಿ ಪುನಃ ಸಿದ್ದಪ್ಪನವರ ಮೂರನೇ ತಮ್ಮ ಮೇಟಿ ಚಂದ್ರಶೇಕರಪ್ಪನವರು ಅಧ್ಯಕ್ಷರಾಗಬೇಕೆಂದು ತಯಾರಿ ನಡೆಸುತ್ತಿದ್ದರು. ಆದರೆ ಈ ಬಾರಿ ಸ್ಥಿತಿ ಸ್ವಲ್ಪ ಬದಲಾಗಿತ್ತು. ಆಗ ಬೈಲುವದ್ದಿಗೇರಿ ಪಿ.ಕೆ.ಹಳ್ಳಿ ವ್ಯಾಪ್ತಿಗೆ ಸೇರಿತ್ತು. ಬೈಲು ವದ್ದಿಗೇರಿಯಿಂದ ಮತ್ತೊಬ್ಬ ಲಿಂಗಾಯತ ನಾಯಕ ಜಂಬಣ್ಣ ಪಂಚಾಯತ್ ಅಧ್ಯಕ್ಷರಾಗಬೇಕೆಂದು ಬಯಸಿದ್ದರು. ಅವರ ವಾದ ಸರಳವಾಗಿತ್ತು. ಬೈಲುವದ್ದಿಗೇರಿ ಪಿ.ಕೆ.ಹಳ್ಳಿಯ ಪಂಚಾಯತ್ ವ್ಯಾಪ್ತಿಗೆ ಸೇರಿದ ಹಳ್ಳಿ. ಹಿಂದೆ ಹಲವಾರು ಬಾರಿ ಪಿ.ಕೆ. ಹಳ್ಳಿಯವರೇ ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಬೈಲುವದ್ದಿಗೇರಿಯವರಿಗೆ ಒಂದು ಅವಕಾಶ ಕೊಡಬೇಕೆಂದು ಜಂಬಣ್ಣನವರು ವಾದಿಸಿದರು. ಆದರೆ ಮೇಟಿಯವರು ಅದಕ್ಕೆ ಒಪ್ಪಲಿಲ್ಲ.

ಊರವರ ಪ್ರಕಾರ ಆ ಚುನಾವಣೆ ತುಂಬಾ ಪ್ರಚಾರ ಪಡೆದಿತ್ತು. ಪಂಚಾಯತ್ ಚುನಾವಣೆ ಎರಡೂ ಹಳ್ಳಿಗಳ ಪ್ರತಿಷ್ಠೆಯ ವಿಷಯವಾಗಿತ್ತಂತೆ. ಹಳ್ಳಿಯಿರಲಿ ದಿಲ್ಲಿಯಿರಲಿ ರಾಜಕೀಯ ಎಲ್ಲಾ ಕಡೆ ಒಂದೇ ಅನ್ನಿಸುತ್ತದೆ. ಅನಗತ್ಯ ವಿಷಯಗಳು ಪ್ರಾಮುಖ್ಯತೆ ಪಡೆದು ಅಗತ್ಯ ವಿಚಾರಗಳು ಮೂಲೆಗುಂಪಾಗುತ್ತವೆ. ಇಲ್ಲೂ ಹಾಗೇ ಆಗಿದೆ. ಯಜಮಾನಿಕೆಗಾಗಿ ಮೇಲು ಜಾತಿಯ ಎರಡು ಕುಟುಂಬಗಳ ನಡುವೆ ಹೋರಾಟ. ಅದರಲ್ಲಿ ಯಾರು ಗೆದ್ದರೂ ಯಾರು ಸೋತರೂ ಕೆಳ ಜಾತಿ/ವರ್ಗಗಳ ಬದುಕಿನಲ್ಲಿ ವಿಶೇಷ ಬದಲಾವಣೆ ಇಲ್ಲ. ಆದರೂ ಇಡೀ ಹಳ್ಳಿಯ ಭವಿಷ್ಯ ಆ ಚುನಾವಣೆಯ ಮೇಲೆ ನಿಂತಿದೆ ಎನ್ನುವ ರೀತಿಯಲ್ಲಿ ತಯಾರಿ ನಡಿಯಿತು. ಹಳ್ಳಿಗೆ ಹಳ್ಳಿಯೇ ಈ ಪೈಪೋಟಿಯಲ್ಲಿ ಭಾಗವಹಿಸಿದ ವಾತಾವರಣದ ನಿರ್ಮಾಣವಾಗಿತ್ತಂತೆ. ಹಿಂದೆ ಕೂಡ ಹಲವು ಬಾರಿ ಪಿ.ಕೆ.ಹಳ್ಳಿಯ ಲಿಂಗಾಯತರೊಳಗೆ ಯಜಮಾನಿಕೆಗೆ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ಮೇಟಿ ಕುಟುಂಬದವರು ಉದ್ವಾಳ ಕುಟುಂಬದವರನ್ನು ಸೋಲಿಸಿ ತಮ್ಮ ಯಜಮಾನಿಕೆಯನ್ನು ದೃಢಪಡಿಸಿಕೊಂಡಿದ್ದರು. ಉದ್ವಾಳರು ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ನೇರವಾಗಿ ತಾವೇ ಸ್ಪರ್ಧಿಸುವ ಎಂದರೆ ಊರಲ್ಲಿ ಬೆಂಬಲವಿಲ್ಲ. ಅವರ ಬೆಂಬಲಿಗರನ್ನು ೧೯೪೮ರ ಚುನಾವಣೆಯಲ್ಲಿ ಮೇಟಿಗಳು ತಮ್ಮ ಕಡೆಗೆ ಸೆಳೆದುಕೊಂಡಿದ್ದರು. ಅವರುಗಳೆಲ್ಲರ ಸಾಲ ತೀರಿಸಿ ತಮ್ಮ ಕಡೆಗೆ ಸೆಳೆಯುವಷ್ಟು ಉದ್ವಾಳರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಅಂತಹ ಸಂದರ್ಭದಲ್ಲಿ ಪಕ್ಕದ ಊರಿನ ಲಿಂಗಾಯತರನ್ನು ತಮ್ಮ ವೈರಿಗಳು ವಿರುದ್ಧ ಎತ್ತಿ ಕಟ್ಟುವುದನ್ನು ಬಿಟ್ಟು ಉದ್ವಾಳರಿಗೆ ಬೇರೆ ದಾರಿ ಇರಲಿಲ್ಲ. ಜಂಬಣ್ಣವನರನ್ನು ನಮ್ಮ ವಿರುದ್ಧ ಹೋರಾಡಲು ಉದ್ವಾಳರು ಪ್ರೇರೇಪಿಸಿದರು ಎನ್ನುವ ಮೇಟಿಗಳ ವಾದದಲ್ಲಿ ಸ್ವಲ್ಪ ಸತ್ಯಾಂಶವಿದೆ. ಎರಡೂ ಕಡೆಯಿಂದಲೂ ನಡೆದ ಮಾತುಕತೆ ವಿಫಲವಾಯಿತು. ಚುನಾವಣೆ ನಡೆಯುವುದು ಖಾತ್ರಿಯಾಯಿತು.

ಈಗ ಇರುವ ಗ್ರಾಮಪಂಚಾಯತ್ ಕಟ್ಟಡವನ್ನು ಮೇಟಿ ವೀರಣ್ಣನವರು ಅಧ್ಯಕ್ಷರಾಗಿರುವಾಗ ಕಟ್ಟಿಸಲಾಗಿತ್ತು. ಅದೇ ಕಟ್ಟಡದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. ೧೯೫೮ರಲ್ಲೂ ಚುನಾವಣಾ ಪ್ರಕ್ರಿಯೆ ಬ್ರಿಟಿಷರ ಕಾಲದಲ್ಲಿ ನಡೆಯುವಂತೆ ಕೈ ಎತ್ತುವ ಮೂಲಕ ನಡೆಯುತ್ತಿತ್ತು. ಬೈಲು ವದ್ದಿಗೇರಿ ಜಂಬಣ್ಣನವರು ತಮ್ಮ ಬೆಂಬಲಿಗರೊಂದಿಗೆ ಚಕ್ಕಡಿ ಕಟ್ಟಿಕೊಂಡು ನೀರು ಸಹಿತ ಬಂದರು. ನೀರು ಯಾಕೆಂದು? ಜಂಬಣ್ಣನವರನ್ನು ಕೇಳಿದೆ. ಓಟಿಗೆ ಬರುವ ಬೈಲುವದ್ದಿಗೇರಿಯವರಿಗೆ ಪಿ.ಕೆ. ಹಳ್ಳಿಯಲ್ಲಿ ನೀರು ಸಹಿತ ಕೊಡಬಾರದೆಂದು ಮೇಟಿಯವರ ತೀರ್ಮಾನವಾಗಿತ್ತು. ಅದನ್ನು ಮುರಿಯುವ ತಾಖತ್ ಹಳ್ಳಿಯಲ್ಲಿ ಯಾರಿಗೂ ಇಲ್ಲವೆಂದು ನಮಗೆ ತಿಳಿದಿತ್ತು. ಅದಕ್ಕೆ ನಮ್ಮ ತಯಾರಿಯನ್ನು ನಾವು ಮಾಡಿಕೊಂಡು ಬಂದೆವು, ಎಂದು ಜಂಬಣ್ಣ ಉತ್ತರಿಸಿದರು. ಕಂದಾಯ ಕಟ್ಟುವವರ ಹೆಸರು ಮತ್ತು ಅವರ ತಂದೆ ಹೆಸರು ಚುನಾವಣಾ ಪಟ್ಟಿಯಲ್ಲಿರುತ್ತದೆ. ಆ ಪಟ್ಟಿಯನ್ನು ಪಡೆದುಕೊಂಡು ಚುನಾವಣಾ ಆಧಿಕಾರಿ ಒಂದೊಂದೇ ಹೆಸರನ್ನು ಓದುತ್ತಾರೆ. ಆಗ ಅವರು ಪಂಚಾಯತ್ ಕಟ್ಟಡದೊಳಗೆ ಹೋಗಬೇಕು. ಎಲ್ಲರೂ ಸೇರಿದ ನಂತರ ಕೈ ಎತ್ತುವ ಮೂಲಕ ತಮ್ಮ ಅಭ್ಯರ್ಥಿಗಳನ್ನು ಆರಿಸುವುದು ಚುನಾವಣಾ ಪ್ರಕ್ರಿಯೆ. ಆ ರೀತಿ ಒಳಗೆ ಬಿಡುವ ಸಂದರ್ಭದಲ್ಲಿ ಬೈಲುವದ್ದಿಗೇರಿ ಜಂಬಣ್ಣನವರ ಬೆಂಬಲಿಗ ಕುರುಬರ ಮರಿಯಪ್ಪನವರಲ್ಲಿ ಆತನ ತಂದೆಯ ಹೆಸರೇನೆಂದು ಮೇಟಿ ಚಂದ್ರಶೇಖರಪ್ಪನವರು ವಿಚಾರಿಸಿದರು. ಆತ ಹೆಸರು ಹೇಳಲು ತಡವರಿಸಿದ. ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಓಟು ಹಾಕಲು ಬರುತ್ತೀಯಾ ಎಂದು ಹೇಳಿ ಚಂದ್ರಶೇಖರಪ್ಪ ಆತನ ಕುತ್ತಿಗೆ ಪಟ್ಟಿ, ಜಗ್ಗಿ ಎರಡು ಬಿಗಿದರು. ಆ ಘಟನೆಯಿಂದ ಬೈಲುವದ್ದಿಗೇರಿ ಮತ್ತು ಪಿ.ಕೆ.ಹಳ್ಳಿಯವರ ನಡುವೆ ದೊಡ್ಡ ಜಗಳವೇ ನಡೆಯಿತು. ನಡೆಯಬೇಕಾದ ಚುನಾವಣೆ ನಡೆಯಲಿಲ್ಲ.

ಬೈಲು ವದ್ದಿಗೇರಿ ಜಂಬಣ್ಣನವರು ರಾಜಕೀಯವಾಗಿ ಪ್ರಬಲರಾಗಿದ್ದರು. ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯ. ಮೇಲಾಗಿ ಆ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಅಧಿಕಾರದಲ್ಲಿರುವವರ ಪ್ರಭಾವ ಬಳಸಿ ಅರ್ಧಕ್ಕೆ ನಿಂತ ಚುನಾವಣೆಯನ್ನು ಬೈಲುವದ್ದಿಗೇರಿಯಲ್ಲೇ ನಡಿಯುವಂತೆ ಮಾಡಿದರು. ಪಿ.ಕೆ.ಹಳ್ಳಿಯಲ್ಲಿನ ಜಗಳದ ೮ – ೧೦ ದಿನಗಳ ನಂತರ ಬೈಲುವದ್ದಿಗೇರಿಯಲ್ಲಿ ಮರು ಚುನಾವಣೆ ನಡೆಯಿತು. ಪುನಃ ಕೈ ಎತ್ತುವ ಪ್ರಕ್ರಿಯೆ ನಡೆಯಿತು. ಮತಗಣನೆಯ ಸಂದರ್ಭದಲ್ಲಿ ಜಂಬಣ್ಣ ೭೫ ಮತದಿಂದ ಮುಂದಿರುವುದನ್ನು ಕಂಡು ಚಂದ್ರಶೇಖರಪ್ಪನ ಕಡೆಯವರು ಗಲಭೆ ಎಬ್ಬಿಸಿದರು. ಎಣಿಕೆಯನ್ನು ಮುಂದೂಡಲಾಗಿದೆ ಎಂದು ಚುನವಣಾ ಅಧಿಕಾರಿ ಪಂಚಾಯತ್ ಬಾಗಿಲಿಗೆ ನೋಟಿಸ್ ಅಂಟಿಸಿ ಹೋದರು. ಆದರೆ ಮಾರನೆ ದಿನ ಜಂಬಣ್ಣ ಗೌಡರು ಗೆದ್ದರು ಎಂದು ಚುನಾವಣಾ ಅಧಿಕಾರಿ ಘೋಷಿಸಿದರು. ಮೇಟಿ ಚಂದ್ರಶೇಖರಪ್ಪನವರು ಹಿಂದಿನ ದಿನ ಚುನಾವಣೆ ಮುಂದೂಡಿದ ಮತ್ತು ಮಾರನೇ ದಿನ ಜಂಬಣ್ಣ ಗೌಡರು ಗೆದ್ದರು ಎಂದು ಅಂಟಿಸಿ ಎರಡು ನೋಟಿಸುಗಳನ್ನು ಹರಿದು ಜಿಲ್ಲಾ ನ್ಯಾಯದೀಶರ ಎದುರು ಹಾಜರು ಪಡಿಸಿದರು. ಚುನಾವಣಾ ಅಧಿಕಾರಿಯ ಘೋಷಣೆಯ ಆಧಾರದಲ್ಲಿ ಜಂಬನ ಗೌಡರು ತಹಸಿಲ್ದಾರರ ಮೂಲಕ ಮೇಟಿ ವೀರಣ್ಣನವರಿಗೆ (ಮಾಜಿ ಅಧ್ಯಕ್ಷರು ಮತ್ತು ಚಂದ್ರಶೇಖರಪ್ಪನವರ ಅಣ್ಣ) ಅಧಿಕಾರ ಹಸ್ತಾಂತರಿಸಲು ಒತ್ತಾಯಿಸಿದರು. ಮೇಟಿ ವೀರಣ್ಣ ಅಧಿಕಾರ ಹಸ್ತಾಂತರಿಸಲು ಒಪ್ಪಲಿಲ್ಲ. ಜಿಲ್ಲಾ ಕೋರ್ಟ್‌ನಲ್ಲಿ ತೀರ್ಪು ಮೇಟಿ ವೀರಣ್ಣನವರ ಪರವಾಯಿತು. ಬೈಲುವದ್ದಿಗೇರಿ ಜಂಬಣ್ಣ ಬಿಡಲಿಲ್ಲ. ಹೈಕೋರ್ಟ್‌ಗೆ ಆಪೀಲು ಹೋದರು. ಹೈಕೋರ್ಟ್ ಜಂಬಣ್ಣನವರ ಪರ ತೀರ್ಪು ನೀಡಿತು. ಚುನಾವಣೆ ನಡೆದ ಸುಮಾರು ಒಂಬತ್ತು ತಿಂಗಳ ನಂತರ ಜಂಬಣ್ಣನವರಿಗೆ ಅಧಿಕಾರ ಬಂತು.

ಯಜಮಾನಿಕೆಯನ್ನು ಪ್ರಶ್ನಿಸುವ ಮತ್ತು ಬದಲಾಯಿಸುವ ಕೆಲಸ ಸುಲಭವಲ್ಲ. ಬೈಲುವದ್ದಿಗೇರಿ ಜಂಬಣ್ಣ ಗೌಡರು ಅನುಕೂಲಸ್ಥರು, ಲಿಂಗಾಯತರು, ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವ ಇದ್ದವರು, ಮೇಲಾಗಿ ಊರವರ ಬೆಂಬಲ ಇದ್ದವರು. ಇಂಥವರಿಗೆ ಪಿ.ಕೆ.ಹಳ್ಳಿಯ ಯಜಮಾನಿಕೆಯನ್ನು ಅಲುಗಾಡಿಸಲು ಅಷ್ಟು ತ್ರಾಸವಾಯಿತು. ಇಂತಹ ವಾತಾವರಣದಲ್ಲಿ ಕೆಳಜಾತಿ/ವರ್ಗದವರು ಮೇಲು ಜಾತಿ/ವರ್ಗದವರ ಯಜಮಾನಿಕೆಯನ್ನು ಪ್ರಶ್ನಿಸುವುದನ್ನು ಊಹಿಸಲು ಸಾಧ್ಯವೆ? ಪ್ರತಿ ಹಳ್ಳಿಯಲ್ಲೂ ಹೆಚ್ಚು ಕಡಿಮೆ ಇಂತಹದೇ ವಾತಾವರಣ ಇದ್ದ ಸಂದರ್ಭದಲ್ಲಿ ಸ್ವತಂತ್ರ ಭಾರತ ಸಾಂಪ್ರದಾಯಿಕ ಸಮಾಜದಲ್ಲಿ ಮೂಲಭೂತ ಪರಿವರ್ತನೆಗೆ ಅದೂ ಪ್ರಜಾತಾಂತ್ರಿಕ ವ್ಯವಸ್ಥೆಯ ಮೂಲಕ ಪ್ರಯತ್ನಿಸುತ್ತಿತ್ತು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಆಧುನೀಕರಣದಿಂದ ಉತ್ಪಾದನೆ ಹೆಚ್ಚಿಸುವುದು ಪ್ರಭುತ್ವದ ಆದ್ಯತೆಯಾಗಿತ್ತು. ಸಾಂಪ್ರದಾಯಿಕ ಅಧಿಕಾರ ಕೇಂದ್ರಗಳ ಸ್ಥಳದಲ್ಲಿ ಆಧುನಿಕ ರಾಜಕೀಯ ಸಂಸ್ಥೆಗಳನ್ನು ಜಾರಿಗೆ ತರಲಾಯಿತು. ಮೈಸೂರು ವಿಲೇಜ್ ಪಂಚಾಯತ್ ಆಂಡ್ ಲೋಕಲ್ ಬೋರ್ಡ್ಸ್‌ಆಕ್ಟ್, ೧೯೫೯ ಅಂತಹ ಪ್ರಯತ್ನಗಳಲ್ಲಿ ಒಂದು. ಅದರ ಅಡಿಯಲ್ಲಿ ಪ್ರಥಮ ಪಂಚಾಯತಿ ಚುನಾವಣೆ ಪಿ.ಕೆ.ಹಳ್ಳಿಯಲ್ಲಿ ೧೯೬೦ರಲ್ಲಿ ನಡಿಯಿತು. ಅಷ್ಟೊತ್ತಿಗೆ ಬೈಲುವದ್ದಿಗೇರಿಯವರು ಪಿ.ಕೆ.ಹಳ್ಳಿಯಿಂದ ಬೇರ್ಪಟ್ಟು ತಮ್ಮದೇ ಪಂಚಾಯತ್ ಮಾಡಿಕೊಂಡಿದ್ದರು. ಅಲ್ಲಿ ಜಂಬಣ್ಣ ಗೌಡರು ಅಧ್ಯಕ್ಷರಾದರು. ಆದರೆ ಪಿ.ಕೆ.ಹಳ್ಳಿಯ ವಾತಾವರಣ ಅಷ್ಟು ಸರಳವಾಗಿರಲಿಲ್ಲ. ೧೯೬೦ರ ಚುನಾವಣೆಯಲ್ಲಿ ಮೇಟಿಯವರು ಉದ್ವಾಳರ ನಾಗೇಂದ್ರಪ್ಪನವರನ್ನು ಅಧ್ಯಕ್ಷ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದರು. ಇದು ಹಳ್ಳಿಯ ರಾಜಕಾರಣದ ಇಷ್ಟರವರೆಗಿನ ಕತೆ ತಿಳಿದವರಿಗೆ ವಿಚಿತ್ರವೇ ಆಗಬಹುದು. ಹಾವು ಮುಂಗುಸಿ ತರಹ ಕಚ್ಛಾಡುತ್ತಿದ್ದ ಉದ್ವಾಳರು ಮತ್ತು ಮೇಟಿಗಳು ಒಮ್ಮಿಂದೊಮ್ಮೆ ಒಂದಾಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕಾಡಬಹುದು. ಇಲ್ಲ; ಅವರುಗಳು ಒಂದಾಗಿಲ್ಲ. ಉದ್ವಾಳರ ನಾಗೇಂದ್ರಪ್ಪನನ್ನು ಕಣಕ್ಕೆ ಇಳಿಸಿದ್ದು ರಾಜಿಯ ಸಂಕೇತವಾಗಿ ಅಲ್ಲ; ವೈರತ್ವದ ಮುಂದುವರಿಕೆಯೇ ಆಗಿ. ಇದು ಅರ್ಥವಾಗಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಿ ಉದ್ವಾಳರ ಕುಟುಂಬದೊಳಗಿನ ಕಲಹವನ್ನು ತಿಳಿಯಬೇಕು.

 

[1]ಬ್ಯಾಂಕ್‌ಗಳನ್ನು ಆರಂಭಿಸುವವರು ವ್ಯಾಪಾರಿಗಳೇ ಆಗಿದ್ದರು. ಅವರ ಮುಖ್ಯ ಉದ್ದೇಶ ತಮ್ಮ ವ್ಯಾಪಾರಕ್ಕೆ ಅಗತ್ಯವಾದ ಬಂಡವಾಳ ಸಂಗ್ರಹ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಬ್ಯಾಂಕುಗಳು ಆರಂಭವಾಗಿದ್ದವು. ಸಿಂಡಿಕೇಟ್, ಕೇನರಾ, ಕಾರ್ಪೋರೇಶನ್, ವಿಜಯ ಮತ್ತು ಕರ್ನಾಟಕ ಬ್ಯಾಂಕುಗಳು. ಸ್ಥಳೀಯ ಮೇಲುಜಾತಿಗಳು ತಮ್ಮ ವ್ಯವಹಾರಕ್ಕೆ ಅಗತ್ಯವಾದ ಬಂಡವಾಳ ಶೇಖರಣೆಗೆ ಬಳಸಿಕೊಂಡಿದ್ದಾರೆ. (ಚಂದ್ರ ಪೂಜಾರಿ, ಟ್ರೆಂಡ್ಸ್ ಇನ್ ಎಂತ್ರ್‌ಪ್ರನರ್‌ಶಿಪ್ ಆಂಡ್ ರೀಜನಲ್ ಡೆವಲಪ್‌ಮೆಂಟ್, ಅನ್‌ಪಬ್ಲಿಶ್‌ಡ್ ಪಿಹೆಚ್.ಡಿ. ಥೀಸಿಸ್ ಸಬ್‌ಮಿಟೆಡ್ ಟು ಮಂಗಳೂರು ಯುನಿವರ್ಸಿಟಿ,೧೯೯೬).

[2]ಈ ಲೆಕ್ಕಚಾರಕ್ಕೆ ಯಾವುದೇ ದಾಖಲೆಯ ಆಧಾರವಿಲ್ಲ. ಇದನ್ನು ಊರಿನ ಹಿರಿಯರು ಕೊಟ್ಟ ಮಾಹಿತಿಯ ಆಧಾರದಲ್ಲಿ ಬಳಸಲಾಗಿದೆ.

[3]ಎಂ.ಎನ್. ಶ್ರೀನಿವಾಸ್, “ದಿ ಸೋಷಿಯಲ್ ಸಿಸ್ಟಮ್ ಆಫ್ ಮೈಸೂರು ವಿಲೇಜ್”, ಲೇಖನ ಮೆಕಿಮ್ ಮಾರಿಯೆಟ್ (ಸಂಪಾದಿಸಿದ), ವಿಲೇಜ್ ಇಂಡಿಯಾ, ಚಿಕಾಗೊ: ಚಿಕಾಗೊ ಯುನಿವರ್ಸಿಟಿ ಪ್ರೆಸ್,೧೯೫೫

[4]ರಾಮ್ ರೆಡ್ಡಿ.ಜಿ. (ಸಂಪಾದಿಸಿ), ಪ್ಯಾಟರ್ನ್ ಆಫ್ ಪಂಚಾಯತ್ ರಾಜ್ ಇನ್ ಇಂಡಿಯಾ, ಡೆಲ್ಲಿ: ಮೆಕ್‌ಮಿಲನ್ ಪ್ರೆಸ್, ೧೯೭೭.

[5]ಗವರ್ನ್‌ಮೆಂಟ್ ಆಫ್ ಇಂಡಿಯಾ, ರಿಪೋರ್ಟ್ ಆಫ್ ದಿ ಟೀಮ್ ಫಾರ ದಿ ಸ್ಟಡಿ ಆಫ್ ಕಮ್ಯುನಿಟಿ ಡೆವಲಪ್‌ಮೆಂಟ್‌ಪ್ರೊಜೆಕ್ಟ್ಸ್ ಆಂಡ್ ನೇಷನಲ್ ಎಕ್ಸ್ ಟೆನ್‌ಷನ್ ಸರ್ವಿಸ್ ನ್ಯೂಡೆಲ್ಲಿ: ಗವರ್ನ್‌ಮೆಂಟ್ ಆಫ್ ಇಂಡಿಯಾ, ೧೯೫೭.

[6]ಉಮಾಪತಿ, ಎಮ್. ಲೋಕಲ್ ಸೆಲ್ಪ್-ಗವರ್ನ್‌ಮೆಂಟ್ ಇನ್ ಕರ್ನಾಟಕ, ಮೈಸೂರು: ಮೈಸೂರು ಯುನಿವರ್ಸಿಟಿ,೧೯೮೮

[7]ಅಬ್ದುಲ್ ಅಜೀಜ್, ಡಿಸೆಂಟ್ರಲೈಸ್‌ಡ್‌ಪ್ಲಾನಿಂಗ್: ದಿ ಕರ್ನಾಟಕ ಎಕ್ಸ್‌ಪೀರಿಯನ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಷನ್ಸ್,೧೯೯೩