ಹಿಂದೆ ಮೂರು ಹಂತಗಳ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿತ್ತು. ತಳಮಟ್ಟದಲ್ಲಿ ಗ್ರಾಮ ಪಂಚಾಯತ್ ನಂತರ ತಾಲ್ಲೂಕು ಮತ್ತು ಜಿಲ್ಲಾ ಬೋರ್ಡ್‌ಗಳು. ಗ್ರಾಮ ಪಂಚಾಯತ್ ನಾಮಕಾವಸ್ಥೆ; ಎಲ್ಲಾ ಕಾಮಗಾರಿಗಳ ತಾಲ್ಲೂಕು ಮತ್ತು ಜಿಲ್ಲಾ ಬೋರ್ಡ್‌ಗಳಿಂದ ನಡೆಯಬೇಕಿತ್ತು. ಪಂಚಾಯತ್‌ಗೆ ನಿಶ್ಚಿತ ಅನುದಾನ ಅಥವಾ ಇತರ ಆದಾಯ ಮೂಲಗಳಿರಲಿಲ್ಲ. ಈ ಎಲ್ಲಾ ಲೋಪದೋಷಗಳನ್ನು ದೂರ ಮಾಡಲು ಹೊಸ ಪಂಚಾಯತ್ ರಾಜ್ ವ್ಯವಸ್ಥೆ ೧೯೮೫ರಲ್ಲಿ ಬಂತು. ಕರ್ನಾಟಕ ಜಿಲ್ಲಾ ಪರಿಷತ್ಸ್, ತಾಲೂಕು ಪಂಚಾಯತ್ ಸಮಿತಿಸ್‌, ಮಂಡಲ ಪಂಚಾಯತ್ ಆಂಡ್ ನ್ಯಾಯ ಪಂಚಾಯತ್ಸ್ ಆಕ್ಟ್ ೧೯೮೫ ಜಾರಿಗೊಳ್ಳುವುದರೊಂದಿಗೆ ಮಂಡಲ ಪಂಚಾಯತ್ ವ್ಯವಸ್ಥೆ ಜಾರಿ ಬಂತು.[1] ಎಂಟರಿಂದ ಹತ್ತು ಸಾವಿರ ಜನ ಸಂಖ್ಯೆಯ ಹಲವಾರು ಹಳ್ಳಿಗಳನ್ನು ಸೇರಿಸಿ ತಳಮಟ್ಟದಲ್ಲಿ ಮಂಡಲ ಪಂಚಾಯತ್ ಇರುತ್ತದೆ. ಇದರಲ್ಲಿ ಮಹಿಳೆಯರಿಗೆ, ಹರಿಜನರಿಗೆ, ಗಿರಿಜನರಿಗೆ ಮತ್ತು ಹಿಂದುಳಿದ ಜಾತಿಗಳಿಗೆ ಸೀಟುಗಳನ್ನು ಕಾದಿರಿಸಲಾಗಿದೆ. ಮಂಡಲ ಪಂಚಾಯತ್‌ನ ಮುಖ್ಯ ಕಾರ್ಯಗಳು ಆರೋಗ್ಯ, ಶಿಕ್ಷಣ, ಚರಂಡಿ ಮತ್ತು ಗ್ರಾಮೀಣ ನೈರ್ಮಲೀಕರಣ ಇತ್ಯಾದಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಕಾಮಗಾರಿಗಳನ್ನು ಮಾಡಿಸುವುದು. ಜತೆಗೆ ಕೃಷಿ ಮತ್ತು ಪಶು ಸಂಗೋಪನೆ, ಹರಿಜನ ಗಿರಿಜನ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವುದು ಕೂಡ ಮಂಡಲದ ಜವಾಬ್ದಾರಿ.

ಮಂಡಲ ಪಂಚಾಯತ್

ಮಂಡಲ ಪಂಚಾಯತ್ ಜಾರಿ ಬರುವ ಸಂದರ್ಭದಲ್ಲಿ ಹಳ್ಳಿಯ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣ ತುಂಬಾ ಬದಲಾಗಿತ್ತು. ಈ ಹಿಂದೆ ವಿವರಿಸಿದಂತೆ ಕೃಷಿ ಕುಸಿದಿತ್ತು. ಶೇಕಡಾ ೫೦ ಕ್ಕಿಂತಲೂ ಹೆಚ್ಚು ಜನರಿಗೆ ಗಣಿಗಾರಿಕೆ ಆದಾಯದ ಮುಖ್ಯ ಮೂಲವಾಗಿತ್ತು. ಸ್ಥಳೀಯ ಮೇಲು ಜಾತಿಯವರು ಊಟ ಕೊಡುವ ಏಕ ಮಾತ್ರ ದಣಿಗಳಾಗಿ ಉಳಿದಿರಲಿಲ್ಲ. ಹೊರಗಿನಿಂದ ಬಂದ ಡಾಲ್ಮಿಯಾ, ಗೊಗ್ಗಗುರು ಸಾಂತಯ್ಯ, ಸಸಿ ಗೋವಾ, ಎಸ್.ವಿ.ಕೆ. ಮುಂತಾದ ಗಣಿ ಮಾಲಿಕರು ದುಡಿಯುವ ಜನರ ದಣಿಗಳಾಗಿದ್ದರು. ಗಣಿಗಾರಿಕೆ ಸುಮಾರು ೪೦೦ ರಿಂದ ೫೦೦ ಜನರಿಗೆ ವ್ಯಾಗನ್ ಲೋಡಿಂಗ್ ಉದ್ಯೋಗ ಒದಗಿಸಿತ್ತು. ಆರಂಭದ ದಿನಗಳಲ್ಲಿ ಸ್ಥಳೀಯ ಕೃಷಿ ಕೂಲಿಗಳು ಗಣಿಗಾರಿಕೆಯತ್ತ ಹೋಗದಿದ್ದುದರಿಂದ ನೆರೆಯ ಆಂಧ್ರದಿಂದ ಕಾರ್ಮಿಕರನ್ನು ತರಬೇಕಾಯಿತು. ಇದರಿಂದ ನಂತರದ ದಿನಗಳಲ್ಲಿ ಬದುಕಿಗೆ ಹೊಸ ಆಸರೆ ಬಯಸಿ ಬರುವ ಆಂಧ್ರದ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಬಂದವರಲ್ಲಿ ಬಹುತೇಕ ಮಂದಿ ಕೆಳಜಾತಿಗೆ ಸೇರಿದವರು. ಅವರಿಗೆ ಸ್ಥಳೀಯ ಸಮಾಜದ ಏಣಿ ಶ್ರೇಣಿಯಲ್ಲಿ ಎಲ್ಲಿ ಸೇರಬೇಕೆಂಬ ಗೊಂದಲವಿರಲಿಲ್ಲ. ಸಹಜವಾಗಿಯೇ ಅವರು ಸ್ಥಳೀಯ ಕೆಳಜಾತಿಯವರೊಂದಿಗೆ ಸಂಬಂಧ ಬೆಳೆಸಿಕೊಂಡು ಹಳ್ಳಿಯ ಭಾಗವಾಗಿ ಬಿಟ್ಟರು. ಇದರಿಂದಾಗಿ ಹರಿಜನರ ಮತ್ತು ನಾಯಕರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಇವೆಲ್ಲಾ ಸಾಂಪ್ರದಾಯಿಕ ಸಮಾಜದ ಶ್ರೇಣೀಕರಣವನ್ನು ಬುಡಮೇಲು ಮಾಡದಿದ್ದರೂ ಅದರ ಮೇಲೆ ಗಾಢ ಪರಿಣಾಮ ಬೀರತೊಡಗಿದವು. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಗಣ್ಯರೆಂದು ಪರಿಗಣಿಸಲ್ಪಟ್ಟವರು ಬದಲಾದ ವ್ಯವಸ್ಥೆಯಲ್ಲಿ ತಮ್ಮ ಪ್ರಭಾವ ಬೀರಲು ವಿಫಲರಾದರು. ಸಾರ್ವಜನಿಕ ಸ್ಥಳಗಳಲ್ಲಿ ಮೇಲು ಜಾತಿಯವರಿಗೆ ಈ ಹಿಂದೆ ಸಿಗುತ್ತಿದ್ದ ಸಾಂಕೇತಿಕ ಮರ್ಯಾದೆಗಳು ಹಂತ ಹಂತವಾಗಿ ಕಡಿಮೆಯಾದವು. ಇಂತಹ ಸಂದರ್ಭದಲ್ಲಿ ಮಂಡಲ ಪಂಚಾಯತ್ ವ್ಯವಸ್ಥೆ ಜಾತಿ ಬಂತು.

ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ ಮಂಡಲ ವ್ಯವಸ್ಥೆಯಲ್ಲಿ ಬೇರೆ ಬೇರೆ ಸಾಮಾಜಿಕ ವರ್ಗಗಳಿಗೆ ಸೀಟು ಕಾದಿರಿಸುವಿಕೆಯ ಕುರಿತು ಹೆಚ್ಚು ಮಹತ್ವ ನೀಡಲಾಗಿತ್ತು.[2]ಎಷ್ಟೇ ಲೆಕ್ಕಾಚಾರ ಮಾಡಿದರೂ ಮೇಲು ಜಾತಿಯವರು ಹೊಸ ಪಂಚಾಯತ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟ ಸಾಧ್ಯವಾಯಿತು. ಮೇಲು ಜಾತಿಯವರ ಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ ಹೆಚ್ಚೆಂದರೆ ಎರಡು ಸೀಟುಗಳು ಕಷ್ಟದಲ್ಲಿ ದೊರೆಯಬಹುದಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಊರ ಪ್ರಮುಖರ ಹೊಸ ಚರ್ಚೆಯನ್ನು ಮುಂದಿಟ್ಟರು. ಅದೇನೆಂದರೆ ಚುನಾವಣೆಗಳು ಊರಿನ ಶಾಂತಿಯನ್ನು ಭಂಗ ಮಾಡಿವೆ. ಚುನಾವಣೆಗಳು ಒಂದು ಕಡೆ ಗುಂಪು ಘರ್ಷಣೆಗೆ ಎಡೆಮಾಡಿದರೆ ಮತ್ತೊಂದು ಕಡೆ ದುಂದು ವೆಚ್ಚಕ್ಕೆ ಅವಕಾಶ ಮಾಡುತ್ತವೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಒಳ್ಳೆಯ ಉಪಾಯವೆಂದರೆ ಪ್ರತಿನಿಧಿಗಳ ಅವಿರೋಧ ಆಯ್ಕೆ ಊರ ಪ್ರಮುಖರೇ ಈ ವಾದವನ್ನು ಮುಂದಿಟ್ಟಾಗ ಅದನ್ನು ವಿರೋಧಿಸುವುದಾದರೂ ಹೇಗೆ? ಊರ ಪ್ರಮುಖರ ಪಟ್ಟಿಯಲ್ಲಿ ಮೇಟಿ ಮತ್ತು ಉದ್ವಾಳರ ಗುಂಪಿನವರ ಸಂಖ್ಯೆಯೇ ಹೆಚ್ಚಿತ್ತು. ಹಾಗೆಂದು ಉಳಿದ ಜಾತಿ ನಾಯಕರನ್ನು ಕಡೆಗಣಿಸಿರಲಿಲ್ಲ. ಅವರಿಗೂ ತಕ್ಕ ಮಟ್ಟಿನ ಪ್ರಾತಿನಿಧ್ಯ ಕೊಡಲಾಗಿತ್ತು. ಹೀಗಾಗಿ ಆ ನಿರ್ಧಾರ ಒಂದು ವಿಧದಲ್ಲಿ ಎಲ್ಲಾ ಜಾತಿ ನಾಯಕರ ಒಮ್ಮತದ ನಿರ್ಧಾರದಂತಿತ್ತು. ಅದನ್ನು ಯಾರು ಕೂಡ ವಿರೋಧಿಸುವ ಪ್ರಶ್ನೆಯೇ ಇರಲಿಲ್ಲ. ಮಂಡಲ ಪಂಚಾಯತ್ ವ್ಯಾಪ್ತಿಗೆ ಪಿ.ಕೆ.ಹಳ್ಳಿ ವಡ್ಡರಹಳ್ಳಿ, ಕಲ್ಲಳ್ಳಿ ಮತ್ತು ಇಂಗಳಗಿ ಸೇರಿತ್ತು. ಪಿ.ಕೆ. ಹಳ್ಳಿಯಿಂದ ಒಂಬತ್ತು ಸದಸ್ಯರ ಆಯ್ಕೆಯಾಗಬೇಕಿತ್ತು.

ಸದಸ್ಯರ ಆಯ್ಕೆ ಮೊದಲಿಗೆ ಅವಿರೋಧ ಆಯ್ಕೆಯಾಗಬೇಕೆಂದು ಊರ ಪ್ರಮುಖರ ಸಭೆಯಲ್ಲಿ ತೀರ್ಮಾನವಾಗಿತ್ತು. ಊರ ಪ್ರಮುಖರ ಸಭೆ, ಅದು ಕಾರ್ಯ ನಿರ್ವಹಿಸುವ ರೀತಿ, ಜಾತಿ ನಾಯಕರು, ಅವರು ತಮ್ಮ ಜಾತಿ ಪ್ರತಿನಿಧಿಗಳನ್ನು ಆರಿಸುವ ವಿಧಾನ ಇತ್ಯಾದಿಗಳನ್ನು ೧೯೯೫ರ ಚುನಾವಣೆಯನ್ನು ವಿವರಿಸುವ ಸಂದರ್ಭದಲ್ಲಿ ವಿವರಿಸಲಿದ್ದೇನೆ. ಇಲ್ಲಿ ಮಂಡಲ ಸದಸ್ಯರ ಆಯ್ಕೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಪ್ರಮುಖರ ನಿರ್ಣಯದಂತೆ ೧೯೯೦ರಲ್ಲಿ ಹಳ್ಳಿಯ ಎಲ್ಲಾ ಮಂಡಲ ಸದಸ್ಯರ ಅವಿರೋಧ ಆಯ್ಕೆ ನಡಿಯಿತು. ಕುರುಬರ ಮಲ್ಲಪ್ಪನವರು ಮೊದಲಿನ ಎರಡೂವರೆ ವರ್ಷ ಪ್ರಧಾನರಾಗಬೇಕು ನಂತರದ ಅವಧಿಯಲ್ಲಿ ಪಿ.ಕೆ.ಹಳ್ಳಿಯ ಇನ್ನೊಬ್ಬ ಸದಸ್ಯ ಕರೀಂಖಾನ್ ಅವರಿಗೆ ಪ್ರಧಾನ ಹುದ್ದೆ ಬಿಟ್ಟುಕೊಡಬೇಕೆಂದು ಪ್ರಮುಖರೇ ತೀರ್ಮಾನಿಸಿದರು.[3] ಆ ತೀರ್ಮಾನ ಕೈಗೊಂಡ ಪ್ರಮುಖ ಸಭೆಯಲ್ಲಿ ಮೇಟಿಗಳ ಕಡೆಯಿಂದ ಯಾರು ಹಾಜರಿರಲಿಲ್ಲ. ಯಾವುದೇ ಗಲಾಟೆ ಘರ್ಷಣೆ ಇಲ್ಲದೆ ಪ್ರಧಾನರ ಆಯ್ಕೆಯಾಯಿತು. ಮಲ್ಲಪ್ಪನವರು ಪ್ರಧಾನರಾದರು. ಅವರ ಎರಡು ವರ್ಷ ಪೂರ್ತಿಯಾಗುತ್ತಿದ್ದಂತೆ ಉದ್ವಾಳರ ಜತಿಗಿದ್ದ ಕರೀಂಖಾನ್ ಮೇಟಿಗಳ ಕಡೆಗೆ ಸರಿದರು. ಯಾಕೆ ಹೀಗಾಯಿತು ಎನ್ನುವುದು ಯಾರಿಗೂ ಸರಿಯಾಗಿ ತಿಳಿಯಲಿಲ್ಲ. ಉದ್ವಾಳರ ಜತೆ ಊರಿನ ಇತರ ಪ್ರಮುಖರು ಕೂಡ ಕರೀಂಖಾನ್‌ನಲ್ಲಾದ ಈ ಪರಿವರ್ತನೆಯನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಕರೀಂಖಾನ್‌ನ ತಂದೆ ಮೇಟಿಗಳ ಜತೆ ಸಾಲ ಮಾಡಿದ್ದರು; ಆ ಸಾಲವನ್ನು ಮನ್ನಾ ಮಾಡುವ ಭರವಸೆ ಮೇಟಿಗಳು ಕೊಟ್ಟಿರಲೇಬೇಕು, ಅದಕ್ಕಾಗಿ ಕರೀಂಖಾನ್ ಮೇಟಿಗಳ ಕಡೆಗೆ ಹೋಗಿರಬೇಕೆಂದು ಊರವರು ಆಡಿಕೊಳ್ಳುತ್ತಿದ್ದರು. ಮೇಟಿಗಳು ಸಾಲ ಮನ್ನಾ ಯಾಕೆ ಮಾಡಬೇಕೆಂದರೆ ಅದಕ್ಕೂ ಅವರಲ್ಲಿ ಉತ್ತರ ರೆಡಿಯಿದೆ. ಹಲವಾರು ವರ್ಷ ಅಧಿಕಾರದಲ್ಲಿದ್ದ ಮೇಟಿಗಳಿಗೆ ಅಧಿಕಾರದಿಂದ ದೂರ ಇರುವುದನ್ನು ಊಹಿಸಲು ಆಗುವುದಿಲ್ಲ. ಹೊಸ ವ್ಯವಸ್ಥೆಯಲ್ಲಿ ಅವರೇ ನೇರ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಆದುದರಿಂದ ಅಧಿಕಾರಕ್ಕೆ ಬರುವವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರೆ ತಮ್ಮ ಕೆಲಸವೆಲ್ಲ ಯಾವುದೇ ಅಡ್ಡಿ ಆತಂಕವಿಲ್ಲದೆ ಆಗಬಹುದೆಂಬ ದೃಷ್ಟಿಯಿಂದ ಮೇಟಿಗಳು ಕರೀಂಖಾನ್‌ಗೆ ಸಹಾಯ ಮಾಡಿದ್ದಾರೆ ಎಂದು ಊರ ಕೆಲವರ ಅಭಿಪ್ರಾಯ.

ಕರೀಂಖಾನ್ ಅವರನ್ನು ಈ ಕುರಿತು ವಿಚಾರಿಸಿದರೆ, ನಮ್ಮ ತಂದೆ ಗೌಡಿಕೆ ನಡಿಸುತ್ತಿದ್ದ ದಿನಗಳಿಂದಲೇ ಮೇಟಿಗಳ ಜತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದು ನಮಗೆ ಅನಿವಾರ್ಯಗಿತ್ತು. ಅವರನ್ನು ಎದುರು ಹಾಕಿಕೊಂಡು ಗೌಡಿಕೆ ನಡಿಸುವುದೇ ಕಷ್ಟವಾಗಿತ್ತು. “ಹಾಗಾಗಿ ನಮ್ಮ ತಂದೆ ಮೇಟಿಯವರು ಜತೆ ಹೊಂದಾಣಿಕೆ ಮಾಡಿಕೊಂಡು ಬದುಕಿ; ಅವರ ಜತೆ ಜಗಳ ಕಾಯಬೇಡಿ” ಎಂದು ಸಲಹೆ ನೀಡುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಪ್ಪ ಬಾಬನ ಗೌಡ ಮತ್ತು ಮೇಟಿಗಳಿಗೂ ಭಿನ್ನಾಭಿಪ್ರಾಯ ಬಂದು, ಮೇಟಿಗಳು ಸಾರ್ವಜನಿಕವಾಗಿಯೇ ನನ್ನ ಚಿಕ್ಕಪ್ಪನನ್ನು ಹೊಡೆದರು. ಆ ಅವಮಾನವನ್ನು ತಾಳಲಾರದೆ ಅವರು ತೀರಿಕೊಂಡರು. ಅಂದಿನಿಂದ ನಾನು ಮೇಟಿಗಳಿಂದ ದೂರ ಸರಿದು ಉದ್ವಾಳರ ಕಡೆ ಸೇರಿಕೊಂಡೆ. ಆದರೆ ಈ ಉದ್ವಾಳರನ್ನು ಸಂಪೂರ್ಣ ನಂಬುವಂತಿಲ್ಲ. ಯಾವಾಗ ಕೈ ಕೊಡುತ್ತಾರೆಂದು ತಿಳಿಯುವುದೇ ಇಲ್ಲ. ಇವರಿಗೆ ಹೋಲಿಸಿದರೆ ಮೇಟಿಗಳು ಕ್ರೂರಿಗಳಾದರೂ ತಮ್ಮನ್ನು ನಂಬಿದವರನ್ನು ಕೈ ಬಿಡುವುದಿಲ್ಲ. ಪ್ರಧಾನ ಹುದ್ದೆ ನನ್ನ ಕೈ ತಪ್ಪಿ ಹೋಗಬಾರದೆಂದು ಪುನಃ ನಾನು ಅವರ ಕಡೆ ಸೇರಿಕೊಂಡೆ. ಹೀಗೆ ಉದ್ವಾಳರ ಜತೆಗಿದ್ದರೆ ಎಲ್ಲಿ ನನ್ನ ಪ್ರಧಾನ ಹುದ್ದೆ ತಪ್ಪಿ ಹೋಗುತ್ತದೆ ಎಂಬ ಭಯದಿಂದ ಕರೀಂಖಾನ್ ಮೇಟಿಗಳ ಕಡೆ ಸೇರಿಕೊಂಡರು. ಕರೀಂಖಾನ್‌ನ ಈ ನಡವಳಿಕೆಯನ್ನು ಇತರ ಪ್ರಮುಖರು ಸಹಿಸಲಿಲ್ಲ. ಮೇಟಿಗಳೇ ಕರೀಂಖಾನ್‌ ಅವರನ್ನು ಪ್ರಧಾನ ಮಾಡುತ್ತಿದ್ದರೆ ಮಾಡಲಿ, ನಾವ್ಯಾರು ಆ ಕೆಲಸದಲ್ಲಿ ಭಾಗಿಗಳಾಗುವುದಿಲ್ಲ ಎಂದು ಅವರು ದೂರ ಸರಿದರು. ಊರ ಪ್ರಮುಖ ಸಭೆಯಲ್ಲಿ ನಡೆದ ಈ ಬೆಳವಣಿಗೆ ಹಾಲಿ ಪ್ರಧಾನ ಮಲ್ಲಪ್ಪನವರಿಗೆ ತುಂಬಾ ಅನುಕೂಲವಾಯಿತು. ಎರಡು ವರ್ಷ ಅಧಿಕಾರದ ರುಚಿ ಕಂಡ ಮಲ್ಲಪ್ಪನವರಿಗೂ ಅಧಿಕಾರ ಬಿಟ್ಟು ಕೊಡಲು ವಿಶೇಷ ಆಸಕ್ತಿ ಇರಲಿಲ್ಲ. ಊರ ಪ್ರಮುಖರ ಒತ್ತಾಯಕ್ಕೆ ಬಿಟ್ಟು ಕೊಡಬೇಕಿದ್ದರೂ ಅದನ್ನು ಕರೀಂಖಾನ್‌ನಿಗೆ ಬಿಟ್ಟು ಕೊಡಲು ಆಸಕ್ತಿಯಿಲ್ಲ. ಕರೀಂಖಾನ್ ಮೇಟಿಗಳ ಜತೆ ಸೇರಿರುವುದರಿಂದ ಕರೀಂಖಾನ್ ಪ್ರಧಾನರಾದರೂ ನಿಜವಾದ ಅಧಿಕಾರ ಚಲಾವಣೆಯನ್ನು ಮೇಟಿಗಳೇ ಮಾಡಬಹುದೆಂಬ ತರ್ಕ ಮಲ್ಲಪ್ಪನವರದ್ದು. ಅದಕ್ಕಾಗಿ ಅವರಿಗೆ ಅನುಕೂಲವಾದ, ಅಂದರೆ ಅವರ ಇಚ್ಛೆಯಂತೆ ನಡಿಯುವ ಕಾರಿಗನೂರು ಬಸಣ್ಣನಿಗೆ (ಪ್ರಧಾನ ಹುದ್ದೆಗೆ) ಬೆಂಬಲಿಸಲು ತೀರ್ಮಾನಿಸಿದರು.

ಕಾರಿಗನೂರು ಬಸಣ್ಣ ಮಾಜಿ ಅಧ್ಯಕ್ಷ ಚಂದ್ರಶೇಖರಪ್ಪನವರಿಗೂ ಪರಿಚಿತ. ಅವರಿಬ್ಬರ ಸ್ನೇಹ ಶುರುವಾದುದು ವ್ಯಾಗನ್ ಲೋಡಿಂಗ್ ವ್ಯವಹಾರದಲ್ಲಿ. ವ್ಯಾಗನ್ ಲೋಡಿಂಗ್ ವ್ಯವಹಾರವನ್ನು ಹಲವಾರು ವರ್ಷಗಳಿಂದ ಬಳ್ಳಾರಿಯವರು ನಡೆಸುತ್ತಿದ್ದರು. ಅದನ್ನು ನೋಡುತ್ತಿದ್ದ ಸ್ಥಳೀಯರಿಗೆ ನಾವು ಯಾಕೆ ಲೇಬರ್ ಕಂಟ್ರಾಕ್ಟ್ ಮಾಡಬಾರದೆಂಬ ಆಲೋಚನೆ ಬಂತು. ೧೯೭೫ರ ಸುಮಾರಿಗೆ ಪಿ.ಕೆ.ಹಳ್ಳಿಯಿಂದ ಚಂದ್ರಶೇಖರಪ್ಪ ಮತ್ತು ಕಾರಿಗನೂರಿನಿಂದ ಬಸಣ್ಣ ಲೇಬರ್ ಕಂಟ್ರಾಕ್ಟ್ ವಹಿಸಿಕೊಂಡರು.[4] ಆದರೆ ಹಳೇ ಕಂಟ್ರಾಕ್ಟ್‌ದಾರರು ಹೊಸಬರನ್ನು ಲೇಬರ್ ಗುತ್ತಿಗೆಯಿಂದ ಹೊರಗಿಡಬೇಕೆಂದು ಕೆಲಸಗಾರರನ್ನು ಹೊಸ ಗುತ್ತಿಗೆದಾರರ ವಿರುದ್ಧ ಎತ್ತಿ ಕಟ್ಟಿದರು. ಹೊಸ ಗುತ್ತಿಗೆದಾರರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಕಾರಿಗನೂರಿನ ಕೆಲಸಗಾರರು ಬಸಣ್ಣನಿಗೆ ಸಹಕರಿಸಲಿಲ್ಲ. ಬಸಣ್ಣನಿಗೆ ಏನು ಮಾಡುವುದೆಂದು ತೋಚಲಿಲ್ಲ. ಆವಾಗ ಅವರ ಸ್ನೇಹಿತರು ಚಂದ್ರಶೇಖರಪ್ಪನ ಸಹಾಯ ಪಡೆಯಲು ಸೂಚಿಸಿದರು. ಪಂಚಾಯತ್ ಅಧ್ಯಕ್ಷರಾಗಿ ಚಂದ್ರಶೇಖರಪ್ಪ ಮಾಡಿದ ಸಾಹಸ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುದ್ದಿಯಾಗಿತ್ತು. ಅವರನ್ನು ಯಾರು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲವೆಂದು ಜನ ಮಾತಾಡಿಕೊಳ್ಳುತ್ತಿದ್ದರು. ತನ್ನ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಬೇಕೆಂದು ಬಸಣ್ಣ ಚಂದ್ರಶೇಖರಪ್ಪನವರಲ್ಲಿ ಕೇಳಿಕೊಂಡರು. ಚಂದ್ರಶೇಖರಪ್ಪನವರು ಸ್ಥಳೀಯ ಕಾರ್ಮಿಕರನ್ನು ಉಪಯೋಗಿಸಿಕೊಂಡು ಕಾರ್ಮಿಕರ ಸಂಘಟನೆಯನ್ನು ಒಡೆದು ಕಾರ್ಮಿಕ ಸಮಸ್ಯೆ ಪರಿಹರಿಸಿದರು. ಹೀಗೆ ಚಂದ್ರಶೇಖರಪ್ಪ ಮತ್ತು ಬಸಣ್ಣ ಸ್ನೇಹಿತರಾಗಿದ್ದರು.

ಪಿ.ಕೆ. ಹಳ್ಳಿಯ ಮಂಡಲಕ್ಕೆ ಎರಡನೇ ಅವಧಿಗೆ ಪ್ರಧಾನ ಹುದ್ದೆಯ ಚುನಾವಣೆ ನಡಿಯುವ ಸಂದರ್ಭದಲ್ಲಿ ಬಸವರಾಜೇಶ್ವರಿಯವರು ಬಳ್ಳಾರಿಯ ಎಂ.ಪಿ.ಆಗಿದ್ದರು. ಕಾರಿಗನೂರು ಬಸಣ್ಣನವರು ಕಾಂಗ್ರೆಸ್ ಅಭ್ಯರ್ಥಿ. ಬಸಣ್ಣ ಎಂ.ಪಿ.ಯವರನ್ನು ಭೇಟಿಯಾಗಿ ತನಗೆ ಪ್ರಧಾನನಾಗಲು ಸಹಾಯ ಮಾಡಬೇಕೆಂದು ಕೇಳಿಕೊಂಡರು. ಪಕ್ಷ ಒಂದೇ ಆಗಿರುವಾಗ ಎಂ.ಪಿ.ಯವರ ಸಯಾಯ ಹಸ್ತ ಸಿಗುವುದು ಕಷ್ಟವಾಗಲಿಲ್ಲ. ಎಂ.ಪಿ.ಯವರು ಮಾಜಿ ಅಧ್ಯಕ್ಷ ಚಂದ್ರಶೇಖರಪ್ಪನವರನ್ನು ಬರಮಾಡಿಕೊಂಡು ಬಸಣ್ಣನನ್ನು ಗೆಲ್ಲಿಸಬೇಕೆಂದು ಕೇಳಿಕೊಂಡರು. ಚಂದ್ರಶೇಖರಪ್ಪನವರು ಕಾಂಗ್ರೆಸ್ ಪಕ್ಷದವರಲ್ಲ. ಆದಾಗ್ಯೂ ತಮ್ಮ ಜಾತಿಯವರೇ ಆದ ಸಂಸದರ ಕೋರಿಕೆಯನ್ನು ಅವರಗೆ ತಿರಸ್ಕರಿಸಲು ಆಗಲಿಲ್ಲ. ತೆರೆಯ ಮರೆಯಲ್ಲಿ ಇದ್ದುಕೊಂಡೆ ಮಾಜಿ ಅಧ್ಯಕ್ಷ ಚಂದ್ರಶೇಖರಪ್ಪ ಓಟಿಗೆ ಮುನ್ನ ಇಷ್ಟೆಲ್ಲಾ ಕೆಲಸ ಮಾಡಿದರು.

ಒಂದು ಕಡೆಯಿಂದ ಚಂದ್ರಶೇಖರಪ್ಪನವರ ಅಣ್ಣ ಈರಣ್ಣ ಕರೀಂಖಾನ್ ಆವರನ್ನು ಪ್ರಧಾನ ಮಾಡುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿ ಊರಲ್ಲಿ ಕರೀಂಖಾನ್‌ಗೆ ಊರ ಪ್ರಮುಖರ ಸಹಾನುಭೂತಿ ಇಲ್ಲದಂತೆ ಮಾಡಿದರು. ಇನ್ನೊಂದು ದಿಕ್ಕಿನಲ್ಲಿ ಚಂದ್ರಶೇಖರಪ್ಪನವರು ಹಳ್ಳಿಯ ಮಂಡಲ ಸದಸ್ಯರನ್ನು ಕಾರಿಗನೂರು ಬಸಣ್ಣನಿಗೆ ಬೆಂಬಲಿಸಲು ಪ್ರೋತ್ಸಾಹಿಸುತ್ತಿದ್ದರು. ಇವರಿಬ್ಬರು ಸೇರಿಯೆ ಈ ಆಟ ಆಡುತ್ತಿದ್ದಾರೆಯೆ ಎನ್ನುವುದು ಕಷ್ಟಕರ. ಅಣ್ಣ ತಮ್ಮಂದಿರ ಮಧ್ಯೆ ಜಗಳವಾಗಿರಲಿಲ್ಲ. ಇಬ್ಬರೂ ಸೇರಿ ಯೋಜನೆ ನಡೆಸಿದ್ದಾರೆ ಎನ್ನಲು ಪುರಾವೆ ಇಲ್ಲ. ಆದರೆ ಈ ರೀತಿ ಆದುದಂತೂ ನಿಜ. ಚುನಾವಣೆಯ ದಿನ ಬಂತು. ಮಾಜಿ ಪ್ರಧಾನ ಮಲ್ಲಪ್ಪನವರು ಓಟು ಹಾಕಿರಲಿಲ್ಲ; ಅವರ ಓಟ ನಿರ್ಣಾಯಕವಾಗಿತ್ತು. ಕೊನೆ ಕ್ಷಣದಲ್ಲಿ ಅವರು ಬಸಣ್ಣನಿಗೆ ಓಟು ಹಾಕಿದರು. ಕರೀಂಖಾನ್ ಸೋತರು. ಕರೀಂಖಾನ್ ಮತ್ತು ಆತನ ಬೆಂಬಲಿಗರು ಸೋಲಿನ ಸಿಟ್ಟನ್ನು ತಾಳಲಾರದೆ ಅಲ್ಲೇ ಇದ್ದ ಮಲ್ಲಪ್ಪನವರನ್ನು ಪೋಲಿಸರ ಸಮ್ಮುಖದಲ್ಲೇ ಹಿಗ್ಗಾ ಮುಗ್ಗಾ ಬಡಿದರು.[5] ಊರಿನ ಅರ್ಧದಷ್ಟು ಜನ ಓಟಿನ ಫಲಿತಾಂಶಕ್ಕಾಗಿ ಕಾದಿದ್ದರು. ಅವರಲ್ಲಿ ಹೆಚ್ಚಿನವರಿಗೆ ಪಾರ್ಟಿಗಿಂತ ಹೆಚ್ಚು ತಮ್ಮ ಊರಿನವನೆ ಆದ ಕರೀಂಖಾನ್ ಪ್ರಧಾನನಾದರೆ ಒಳ್ಳೆಯದೆಂಬ ನಂಬಿಕೆಯಿತ್ತು. ಆತ ಆಗದಿರುವಲ್ಲಿ ಮಲ್ಲಪ್ಪನ ಪಾತ್ರವೇ ಮುಖ್ಯವೆಂದು ಅಲ್ಲಿ ಸೇರಿದವರು ಗ್ರಹಿಸಿದ್ದರು. ಆದುದರಿಂದ ಊರವರು ಯಾರೂ ಕೂಡ ಮಲ್ಲಪ್ಪನ ರಕ್ಷಿಸಲು ಬರಲಿಲ್ಲ. ಪೋಲಿಸರು ಮಲ್ಲಪ್ಪನವರನ್ನು ಆ ಜನ ಜಂಗುಳಿಯಿಂದ ತಪ್ಪಿಸಿ ಹೊಸಪೇಟೆಗೆ ಸಾಗಿಸಿದರು. ಯಾರ ಮೇಲೂ ಕೇಸು ದಾಖಲಾಗಿಲ್ಲ.

ಕೊನೆಗೂ ಊರ ಪ್ರಮುಖರ ಮಾತೇ ಸತ್ಯವಾಯಿತು. ಹಳ್ಳಿಯಲ್ಲಿ ಚುನಾವಣೆ ಎಂದರೆ ಜಗಳ ಎನ್ನುವುದು ಸಾಧಿತವಾಯಿತು. ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಒಂದು, ಮೊದಲ ಬಾರಿಗೆ ಅಧಿಕಾರ ಲಿಂಗಾಯಿತರನ್ನು ಬಿಟ್ಟು ಬೇರೆ ಜಾತಿಗೆ ಬಂದಿದೆ. ಮಲ್ಲಪ್ಪನವರು ಜಾರಿಯಲ್ಲಿ ಕುರುಬರು. ಜತೆಗೆ ವಿಶೇಷ ಅನುಕೂಲಸ್ಥರಲ್ಲ. ಅವರು ಪ್ರಧಾನರಾಗುವ ಮುನ್ನಾ ಜಿ.ಜಿ.ಬ್ರದರ್ಸ್ ಅವರ ಗಣಿಯಲ್ಲಿ ಡ್ರಿಲ್ ಮೆಷಿನ್ ಆಪರೇಟರ್ ಆಗಿದ್ದರು. ಸ್ವಲ್ಪ ಭೂಮಿ ಇದೆ. ಅದರಿಂದ ವಿಶೇಷ ಆದಾಯವಿರಲಿಲ್ಲ. ರಾಜಕಾರಣಕ್ಕಾಗಿ ಕೆಲಸ ಬಿಟ್ಟಿದ್ದರು, ಪಕ್ಷದ ದೃಷ್ಟಿಯಿಂದ ಅವರೂ ಕಾಂಗ್ರಸಿಗರೇ. ಬಸಣ್ಣ ಕೂಡ ಕಾಂಗ್ರೆಸಿಗ, ಕೇವಲ ಪಕ್ಷದ ಒಲವಿಂದ ಮಲ್ಲಪ್ಪನವರು ಬಸಣ್ಣನನ್ನು ಬೆಂಬಲಿಸಿದ್ದಾರೆ ಎನ್ನಲಾಗುವುದಿಲ್ಲ. ಎರಡು, ಇವೆಲ್ಲಕ್ಕಿಂತ ಮುಖ್ಯ ಇಡೀ ಘಟನೆಯಲ್ಲಿ ಮಲ್ಲಪ್ಪನವರು ನಿರ್ಧಾರಕ ಅಲ್ಲ ಎನ್ನುವ ಅಂಶ. ಮೇಟಿಯವರು ವೀರಣ್ಣ ಮತ್ತು ಚಂದ್ರಶೇಖರಪ್ಪ; ಇಬ್ಬರೂ ಮಾಜಿ ಚೇರ್‌ಮನ್‌ಗಳು ಆಡಿದ ಆಟದಲ್ಲಿ ಮಲ್ಲಪ್ಪ ಮತ್ತು ಕರೀಂಖಾನ್ ದಾಳಗಳಂತೆ ಬಳಕೆಯಾದರು. ಚಂದ್ರಶೇಖರಪ್ಪನವರು ತೆರೆಯ ಮರೆಯಲ್ಲಿದ್ದುಕೊಂಡೆ ಕೆಲಸ ಮಾಡಿದರು. ಕೇವಲ ಸ್ನೇಹಿತ ಎನ್ನುವ ಕಾರಣಕ್ಕಾಗಿ ಇಡೀ ಚುನಾವಣೆಯ ದಿಕ್ಕನ್ನೇ ಬದಲಾಯಿಸಿದರು. ಇಷ್ಟೆಲ್ಲಾ ಆಟ ಆಡಿದರು ಊರವರ ದೃಷ್ಟಿಗೆ ಅವರು ಬೀಳಲೇ ಇಲ್ಲ. ಊರವರ ಕೋಪಕ್ಕೆ ಬಲಿಯಾದುದು ಮಲ್ಲಪ್ಪನವರು ಮಾತ್ರ. ಈ ಘಟನೆಯ ಮೂಲಕ ಊರಿನ ಯಜಮಾನಿಕೆ ಅಷ್ಟು ಸುಲಭವಲ್ಲ ಎನ್ನುವುದನ್ನು ಕೆಳಜಾತಿಗೆ ತಿಳಿಸುವ ಒಂದು ಪ್ರಯತ್ನ ನಡೆದಿರಬಹುದೋ ಏನೋ. ಜತೆಗೆ ಮೇಟಿಯವರನ್ನು ಸಂಪೂರ್ಣವಾಗಿ ಕಡೆಗಣಿಸಿ ಯಜಮಾನಿಕೆ ಮಾಡುತ್ತೇನೆ ಎನ್ನುವವರಿಗೆ ಒಂದು ಪಾಠ ಕಲಿಸಬೇಕೆನ್ನುವ ಆಂತರಿಕ ಬಯಕೆ ಪರೋಕ್ಷವಾಗಿ ಇಲ್ಲಿ ಕೆಲಸ ಮಾಡಿರಲೂಬಹುದು.

೧೯೯೪ರ ಚುನಾವಣೆ

೧೯೮೭ರ ನಂತರ ಹಳ್ಳಿಯ ರಾಜಕೀಯ ಹೊಸ ತಿರುವನ್ನು ಕಂಡಿದೆ. ಹಿಂದೆ ರಾಜಕೀಯ ಕ್ಷೇತ್ರ ಮೇಲು ಜಾತಿಯವರು ಊರಿನ ಯಜಮಾನಿಕೆಗಾಗಿ ತಮ್ಮೊಳಗೆ ಸೆಣಸಾಡುವ ಒಂದು ಕಣವಾಗಿತ್ತು. ಈ ಸ್ಪರ್ಧೆ ಮೇಲು ಜಾತಿಯ ಕುಟುಂಬಗಳ ನಡುವೆ ನಡೆಯುತ್ತಿದ್ದರೂ ಇಡೀ ಊರಿಗೆ ಊರೇ ಪಾಲುಗೊಂಡು ಒಂದು ಆತಂಕದ ವಾತಾವರಣದ ಸೃಷ್ಟಿಯಾಗುತ್ತಿತ್ತು. ಸ್ಪರ್ಧಿಗಳು ತಮ್ಮ ಬೆಂಬಲಿಗ ಸಂಖ್ಯೆ ಹೆಚ್ಚಿಸಲು ತಂತ್ರ ಹೊಡುವುದು, ಕುಡಿಸುವುದು, ಊಟ ಹಾಕಿಸುವುದು, ಉಡುಗೊರೆ ಕೊಡುವುದು ಇತ್ಯಾದಿಗಳು ಸರ್ವೇಸಾಮಾನ್ಯ. ಈ ಎಲ್ಲಾ ಕಾರಣಗಳಿಂದ ಚುನಾವಣೆ ಎಂದರೆ ಒಂದು ನಕಾರಾತ್ಮಕ ಪ್ರಕ್ರಿಯೆ ಎಂಬ ಅಭಿಪ್ರಾಯ ಊರಲ್ಲಿ ರೂಢಿಯಾಗಿತ್ತು. ಇದನ್ನು ನಕಾರತ್ಮಕ ಪ್ರಕ್ರಿಯೆಯಾಗಿಸುವಲ್ಲಿ ಮೇಲು ಜಾತಿಯವರ ಪಾತ್ರ ದೊಡ್ಡದಿದೆ. ಅಧಿಕಾರ ಅವರೊಳಗೆ ಉಳಿಯುವ ಸಾಧ್ಯತೆ ಇರುವಾಗಲೆಲ್ಲಾ ಚುನಾವಣೆಯೊಂದು ನಕಾರಾತ್ಮಕ ಪ್ರಕ್ರಿಯೆಯಾದರೂ ಮೇಲು ಜಾತಿ ಸ್ಪರ್ಧೆ ಬೇಡ ಎನ್ನುವ ಧೋರಣೆ ತಾಳಿಲ್ಲ. ೧೯೮೭ರ ನಂತರ ಬಂದ ಹೊಸ ಪಂಚಾಯತ್ ಕಾಯ್ದೆ ಕಟ್ಟುನಿಟ್ಟಿನ ರಿಸರ್‌ವೇಶನ್ ಜಾರಿ ತಂದಿತು. ಈ ಕಾಯ್ದೆಯಿಂದಾಗಿ ಮೇಲು ಜಾತಿಯವರಿಗೆ ಕೇವಲ ಒಂದು ಸೀಟು ದೊರೆಯುವ ಸ್ಥಿತಿ ನಿರ್ಮಾಣವಾಯಿತು. ಈ ಒಂದು ಸೀಟಿನಿಂದ ಇಡೀ ಪಂಚಾಯತನ್ನು ನಿಯಂತ್ರಿಸುವ ಅಥವಾ ತಾವೆ ಅಧ್ಯಕ್ಷರಾಗುವ ಕನಸು ದೂರವಾಯಿತು. ಆ ಸಂದರ್ಭದಲ್ಲಿ ಅವಿರೋಧ ಆಯ್ಕೆಯ ಚರ್ಚೆ ಆರಂಭವಾಯಿತು. ರಾಜಕೀಯವನ್ನು ನಕಾರಾತ್ಮಕ ಪ್ರಕ್ರಿಯೆಯಾಗಿ ಬೆಳೆಸುವುದರಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದವರು ಮೇಲು ಜಾತಿಯವರು. ಪರಿಹಾರವಾಗಿ ಇಡೀ ಊರೇ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಇದೊಂದು ರೀತಿ ನಮ್ಮ ದೇಶದ ಆರ್ಥಿಕ ನೀತಿಗಳಲ್ಲಿನ ಪ್ರಯೋಗದಂತೆ.[6] ಅದೇನೆ ಇರಲಿ, ಈ ಅವಿರೋಧ ಆಯ್ಕೆ ಎಷ್ಟರ ಮಟ್ಟಿಗೆ ಅವಿರೋಧ ಎನ್ನುವುದನ್ನು ವಿಶ್ಲೇಷಿಸಬೇಕಾಗಿದೆ.

ಅವಿರೋಧ ಆಯ್ಕೆಕಲ್ಪನೆ ಮತ್ತು ವಾಸ್ತವ

ಒಂದು ಹಳ್ಳಿಯಲ್ಲಿ ಎಲ್ಲಾ ಪಂಚಾಯತ್ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದಾಗ ಈ ಅವಿರೋಧ ಪ್ರಕ್ರಿಯೆ ಹೇಗೆ ನಡೆದಿರಬಹುದೆಂಬ ಕುತೂಹಲ ಸಹಜ. ಅವಿರೋಧ ಆಯ್ಕೆ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಸಾಮಾನ್ಯ ಚಿತ್ರಣ ಈ ಕೆಳಗಿನಂತಿರಬಹುದು –

೧. ಊರಿನ ಪ್ರಮುಖರು ಮತ್ತು ಊರ ಸಮಸ್ತರು ಒಂದು ನಿರ್ದಿಷ್ಟ ಸ್ಥಳದಲ್ಲಿ ಸಭೆ ಸೇರಿ ಈ ಬಾರಿ ಚುನಾವಣೆ ಬೇಕೇ ಅಥವಾ ಬೇಡವೇ ಎಂದು ಚರ್ಚಿಸುತ್ತಾರೆ. ಚರ್ಚೆಯ ನಂತರ ಚುನಾವಣೆ ಬೇಡ; ಅವಿರೋಧ ಆಯ್ಕೆ ನಡೆಯಲಿ ಎಂದು ಸಭೆ ತೀರ್ಮಾನಿಸುತ್ತದೆ,

೨. ಅದೇ ಸಭೆಯಲ್ಲಿ ಹಾಜರಿರುವ ಜಾತಿ ನಾಯಕರುಗಳಿಗೆ ಅವರವರ ಜಾತಿಯಿಂದ ಪಂಚಾಯತ್ ಪ್ರತಿನಿಧಿಗಳನ್ನು ಆರಿಸಲು ಸಭೆ ಸೂಚಿಸುತ್ತದೆ,

೩. ಜಾತಿ ನಾಯಕರು ತಮ್ಮ ಜನರನ್ನು ಸಭೆ ಸೇರಿಸಿ ಅಲ್ಲಿ ಆಯಾಯ ಜಾತಿಯ ಪ್ರತಿನಿಧಿಗಳ ಆಯ್ಕೆ ಮಾಡುತ್ತಾರೆ,

೪. ಅವಿರೋಧವಾಗಿ ಆಯ್ಕೆಗೊಂಡ ಪ್ರತಿನಿಧಿಗಳು ಎಲ್ಲಾ ಸೇರಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಪದಾಧಿಕಾರಗಳನ್ನು ಆರಿಸುತ್ತಾರೆ.

ವಾಸ್ತವದಲ್ಲಿ ಅವಿರೋಧ ಆಯ್ಕೆ ಮೇಲಿನ ರೀತಿಯಲ್ಲಿ ನಡಿಯುವುದಿಲ್ಲ, ಚುನಾವಣೆಯ ದಿನಾಂಕ ಪ್ರಕಟಗೊಂಡ ನಂತರ ಹಳ್ಳಿಯಲ್ಲಿ ರಾಜಕೀಯ ಪ್ರಕ್ರಿಯೆ ಬಿರುಸುಗೊಳ್ಳುತ್ತದೆ. ಅಂದರೆ ಅದರ ಹಿಂದೆ ಯೋಜನಗೆಗಳು, ಅದನ್ನು ಕಾರ್ಯಗತಗೊಳಿಸುವ ವಿಧಾನ ಕುರಿತು ಚರ್ಚೆಗಳು ನಡೆಯುವುದಿಲ್ಲವೆಂದಲ್ಲ; ನಡೆಯುತ್ತವೆ, ಅವುಗಳು ತುಂಬಾ ಅಸ್ಪಷ್ಟ ಮತ್ತು ತುಂಬಾ ಸೀಮಿತ ನೆಲೆಯಲ್ಲಿ ನಡೆಯುತ್ತಿರುತ್ತವೆ. ಚುನಾವಣೆ ಹತ್ತಿರ ಬಂದಂತೆ ಊರ ರಾಜಕೀಯದಲ್ಲಿ ಸಕ್ರಿಯವಾಗಿರುವವರು, ಅಧಿಕಾರವನ್ನು ತಮ್ಮಲ್ಲೇ ಇರಿಸಿಕೊಳ್ಳಬೇಕೆಂದು ಬಯಸುವವರು, ಅಧಿಕಾರ ಈ ಬಾರಿ ಬದಲಾಗಬೇಕೆಂದು ಬಯಸುವವರು, ಹೀಗೆ ಇನ್ನೂ ಹಲವಾರು ಪೂರ್ವ ಸಿದ್ಧತೆಗಳನ್ನು ಆರಂಭಿಸುತ್ತಾರೆ. ಈ ಹಳ್ಳಿಯ ದೃಷ್ಟಿಯಿಂದ ಅಂತಹ ರಾಜಕೀಯ ಪ್ರಕ್ರಿಯೆ ನಡೆಸುವ ಗುಂಪುಗಳು ಹಿಂದಿನಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿರುವವರ ನೆರಳಿನಿಂದ ಸಂಪೂರ್ಣ ಹೊರ ಬಂದಂತಿಲ್ಲ. ಹಿಂದೆ ಇಡೀ ರಾಜಕೀಯ ಚಟುವಟಿಕೆಗಳು ಮೇಟಿ ಮತ್ತು ಉದ್ವಾಳ ಕುಟುಂಬಗಳಿಂದ ಪ್ರಭಾವಿತ. ಇಂದು ಅಂತಹ ಸನ್ನಿವೇಶ ಇಲ್ಲ. ಅವರುಗಳು ನೇರವಾಗಿ ಸ್ಪರ್ದಿಸುತ್ತಾ ಇಲ್ಲ. ಈ ಬಣಗಳಿಗೆ (ಫ್ಯಾಕ್ಷನ್‌ಗಳಿಗೆ) ಸೇರಿದವರು ಅಥವಾ ಅವರ ಕುಟುಂಬಕ್ಕೆ ಸೇರಿದವರು ನೇರವಾಗಿ ಅಥವಾ ಪರೋಕ್ಷವಾಗಿ ಅವಿರೋಧ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಇವರುಗಳು ಸ್ಥೂಲವಾಗಿ ಎರಡು ಪಕ್ಷಗಳ ಸುತ್ತ ಗುರುತಿಸಿಕೊಳ್ಳುತ್ತಾರೆ. ಒಂದು ವಿಧದಲ್ಲಿ ರಾಜಕೀಯ ಪಕ್ಷ ಮತ್ತು ಅದರ ಮೂಲಕ ಗುರುತಿಸಿಕೊಳ್ಳುವುದು ಇಲ್ಲಿ ಕೇವಲ ಅನುಕೂಲ ಶಾಸ್ತ್ರ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರುಗಳಂತೆ ಇಲ್ಲಿ ಕೂಡ ಒಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಆ ಪಕ್ಷದ ತಾತ್ವಿಕ ವಿಚಾರಗಳಿಂದ ಪ್ರಭಾವಿತರಾಗಿ ಅಲ್ಲ. ಬದಲಿಗೆ ಆ ಪಕ್ಷ ಸಾಧ್ಯವಾಗಿಸುವ ಅಧಿಕಾರದ ದೃಷ್ಟಿಯಿಂದ. ಅಧಿಕಾರದಲ್ಲಿದ್ದಾಗ ಮಾತ್ರ ಒಂದು ಪಕ್ಷ ತನ್ನ ಬೆಂಬಲಿಗರಿಗೆ ಅಧಿಕಾರ ಕೊಡಲು ಸಾಧ್ಯ. ಹೀಗಾಗಿ ಇಲ್ಲಿ ಯಾವುದೇ ಪಕ್ಷದಿಂದ ಗೆಲ್ಲಲಿ ಕಡೆಗೆ ಅಧಿಕಾರದಲ್ಲಿ ಯಾವ ಪಕ್ಷ ಇದೆಯೋ ಆ ಪಕ್ಷದ ಸದಸ್ಯರಾಗುವ ಕ್ರಮ ಸ್ವಲ್ಪ ಜಾಸ್ತಿಯೇ ಇದೆ. ಇದರ ಮಧ್ಯೆ ಕೂಡ ಒಟ್ಟು ಸದಸ್ಯರನ್ನು ಸ್ಥೂಲವಾಗಿ ಕಾಂಗ್ರೆಸ್ ಮತ್ತು ದಳ ಪಕ್ಷದೊಂದಿಗೆ ಗುರುತಿಸಬಹುದು. ಮೇಲು ಜಾತಿಯವರು ದಳ ಪಕ್ಷದೊಂದಿಗೆ ಗುರುತಿಸಿಕೊಂಡರೆ ಕೆಳ ಜಾತಿಯವರು ಕಾಂಗ್ರೆಸ್‌ನೊಂದಿಗೆ ಹೋಗುತ್ತಾರೆ. ಹಿಂದೆ ಸೂಚಿಸಿದಂತೆ ಇದೊಂದು ಸ್ಥೂಲ ಚಿತ್ರಣ. ಯಾಕೆಂದರೆ ಹಳ್ಳಿಯ ಕೆಲವು ಲಿಂಗಾಯತ ಪ್ರಮುಖರು ಕಾಂಗ್ರೆಸ್‌ನಲ್ಲೂ ಇದ್ದಾರೆ. ಅದೇ ರೀತಿ ಕೆಳ ಜಾತಿಯವರು ದಳದೊಂದಿಗೂ ಇದ್ದಾರೆ.

ರಾಜಕೀಯದಲ್ಲಿ ಸಕ್ರಿಯವಗಿರುವ ಊರ ಪ್ರಮುಖರು ದಿನನಿತ್ಯದ ತಮ್ಮ ಭೇಟಿಯಲ್ಲಿ ಚುನಾವಣೆಯನ್ನು ಯಾವ ರೀತಿ ಮಾಡಬೇಕೆಂದು ಚರ್ಚಿಸುತ್ತಿರುತ್ತಾರೆ. ಅದು ಊರ ಹೋಟೇಲುಗಳಲ್ಲಿ ಇರಬಹುದು, ತಿಮ್ಮಪ್ಪನ ಗುಡಿಯಲ್ಲಿರಬಹುದು ಅಥವಾ ಇನ್ಯಾವುದೋ ಸ್ಥಳದಲ್ಲಿ ಇರಬಹುದು. ರಾಜ್ಯದಲ್ಲಿ ಹೊಸ ಪಂಚಾಯತ್ ಚುನಾವಣೆ ಫೆಬ್ರವರಿ ತಿಂಗಳಲ್ಲಿ ನಡೆಯಿತು. ಬಳ್ಳಾರಿಯಲ್ಲಿ ಲೋಕಸಭೆಯ ಮರು ಚುನಾವಣೆ ಇದ್ದುದರಿಂದ ಜಿಲ್ಲೆಯ ಪಂಚಾಯತ್ ಇಲೆಕ್ಷನ್‌ಗಳು ಮುಂದೂಡಲ್ಪಟ್ಟಿದ್ದವು. ಆದರೂ ಹಳ್ಳಿಯಲ್ಲಿ ಫೆಬ್ರವರಿಯಿಂದಲೇ ಚುನಾವಣಾ ಕಾವು ಆರಂಭವಾಗಿತ್ತು. ಹಳ್ಳಿಗರು ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆ ಕುರಿತು ಚರ್ಚಿಸುತ್ತಿದ್ದರು. ಅಂತಹ ಒಂದು ಚರ್ಚೆಯನ್ನು ಪರಿಶೀಲಿಸುವ. ಹಳ್ಳಿಯ ಬಸ್ ನಿಲ್ದಾಣದ ಹತ್ತಿರವೇ ಲಿಂಗಾಯತರ ಒಂದು ಚಾದ ಅಂಗಡಿ ಇದೆ. ಅಂದು ಬಸ್ ಇಳಿದು ನಾನು ಪಂಚಾಯತ್ ಕಛೇರಿ ಕಡೆ ಹೊರಟಿದ್ದೆ. ಚಾದ ಅಂಗಡಿಯಿಂದ ಇಲ್ಲಿ ‘ಬನ್ನಿ ಸಾರ್’ ಎಂದು ಕರೆದ ಹಾಗಾಯಿತು. ಯಾರಿರಬಹುದೆಂದು ಆ ಕಡೆ ನೋಡಿದರೆ ಮಲ್ಲಪ್ಪನವರು ಉರಿ ಹಗ್ಗದ ಮಂಚದಲ್ಲಿ ಕುಳಿತ್ತಿದ್ದರು. ಅದರ ಮತ್ತೊಂದು ತುದಿಯಲ್ಲಿ ಉದ್ವಾಳರ ನೀಲೇಶಪ್ಪನವರಿದ್ದರು. ಒಳಗಿನ ಕಟ್ಟೆ ಮೇಲೆ ಇನ್ನಿಬ್ಬರಿದ್ದರು. ಪುನಃ ‘ಬನ್ನಿ ಸಾರ್’ ಎಂದರು. ನನ್ನ ಅಧ್ಯಯನದ ಮುಖ್ಯ ಮಾಹಿತಿಗಾರರೇ ಕರೆಯುವಾಗ ಹೋಗದಿದ್ದರ ಸರಿಯಲ್ಲ ಎಂದು ಹೋದೆ. ಅವರಿಬ್ಬರ ಮಧ್ಯೆ ಕುಳಿತೆ. ಅಂದಿನ (ತಾ.೪ – ೨ – ೨೦೦೦ದ) ಪ್ರಜಾವಾಣಿ ಪೇಪರನ್ನು ನನ್ನ ಕೈಗಿತ್ತು ಅದರಲ್ಲಿರುವ ಸುದ್ದಿ ಓದಿ ನಮ್ಮ ಒಂದು ಪ್ರಶ್ನೆಗೆ ಉತ್ತರಿಸಬೇಕೆಂದರು. ಕುತೂಹಲದಿಂದ ನಾನು ಪೇಪರ್ ಮೇಲೆ ಕಣ್ಣಾಡಿಸಿದೆ. ಅವರ ಆಸಕ್ತಿ ಕೆರಳಿಸಿದ ಸುದ್ದಿಯ ಸಾರಾಂಶವಿಷ್ಟು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಎತ್ತಂಬಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಘಟನೆಯನ್ನು ಪೇಪರ್‌ನವರು ಸುದ್ದಿ ಮಾಡಿದ್ದರು. ಪಂಚಾಯತ್ ಚುನಾವಣೆಯ ದಿನ ನಿರ್ಧಾರವಾದಂತೆ ಆ ಹಳ್ಳಿಯಲ್ಲೂ ಚುನಾವಣೆಯ ಕಾವು ಏರಿತ್ತು. ಆ ಸಂದರ್ಭದಲ್ಲಿ ಊರ ಪ್ರಮುಖರೆಲ್ಲಾ ಸೇರಿ ಚುನಾವಣೆಗೆ ದುಡ್ಡು ಪೋಲು ಮಾಡುವ ಬದಲು ಅದೇ ಹಣವನ್ನು ಊರ ಅಭಿವೃದ್ದಿಗೆ ಬಳಸಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ. ಆ ನಿರ್ಧಾರವನ್ನು ಕಾರ್ಯ ರೂಪಕ್ಕೆ ತರಲು ಒಂದು ನವೀನ ಯೋಜನೆ ಹಾಕಿದರು. ಅದರ ಪ್ರಕಾರ ಊರಿಗೆ ಬಂದ ಮೂರು ಪಂಚಾಯತ್ ಸೀಟುಗಳನ್ನು (ಜನರಲ್, ಮಹಿಳೆ ಮತ್ತು ಹಿಂದುಳಿದ ವರ್ಗದವರಿಗೆ ಕ್ರಮವಾಗಿ ಒಂದೊಂದು ಸೀಟು) ಹರಾಜು ಹಾಕುವುದೆಂದಾಯಿತು. ಅತೀ ಹೆಚ್ಚು ಬಿಡ್ಡಿಂಗ್ ಯಾರು ಮಾಡುತ್ತಾರೋ ಅವರು ಪಂಚಾಯತ್ ಸದಸ್ಯರಾಗುತ್ತಾರೆ. ಊರವರ ಒಪ್ಪಿಗೆಯ ಮೇರೆಗೆ ಹರಾಜು ನಡೆಯಿತು. ಜನರಲ್ ಸೀಟು ರೂ. ೨೧೦೦೦ ಕ್ಕೆ, ಮಹಿಳಾ ಸೀಟು ರೂ. ೬೦೦೦ಕ್ಕೆ ಮತ್ತು ಹಿಂದುಳಿದ ವರ್ಗದ ಸೀಟು ರೂ. ೩೦೦೦ಕ್ಕೆ ಹೋದವು. ಆ ರೀತಿ ಸಂಗ್ರಹವಾದ ದುಡ್ಡನ್ನು ಊರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಬಳಸುವುದೆಂದು ತೀರ್ಮಾನಿಸಲಾಯಿತು. ಇದಿಷ್ಟು ಸುದ್ದಿಯ ಸಾರಾಂಶ.

ನಾನು ಓದಿ ಮುಗಿಸಿದ ಕೂಡಲೇ ಈಗ ಹೇಳಿ ಈ ಸುದ್ದಿಯ ಕುರಿತು ನಿಮ್ಮ ಅಭಿಪ್ರಾಯ ಎಂದು ಮಲ್ಲಪ್ಪನವರು ಒತ್ತಾಯಿಸಿದರು. ಒಂದು ರೌಂಡ್ ಚರ್ಚೆ ಮುಗಿಸಿ ಪರಿಣಿತರ ಅಭಿಪ್ರಾಯ ಕಾದಿದ್ದಂತೆ ಇತ್ತು ಅಲ್ಲಿನ ವಾತಾವರಣ. ಬಳ್ಳಾರಿಯ ಮರು ಚುನಾವಣೆ ಯಿಂದಾಗಿ ಹಳ್ಳಿಯ ಪಂಚಾಯತ್ ಚುನವಣೆ ಏಪ್ರಿಲ್ ತಿಂಗಳಿಗೆ ಮುಂದೂಡಲಾಗಿತ್ತು. ಆದರೂ ಚುನಾವಣೆ ಬೇಕೆ ಬೇಡವೇ ಎಂಬ ಚರ್ಚೆ ಇಲ್ಲೂ ಆರಂಭವಾಗಿತ್ತು. ಆವಾಗಲೇ ನಾಲ್ಕು ಜನ ಸೇರಿದ್ದರು, ಗಂಟೆ ಹನ್ನೊಂದಾಗುವ ಹೊತ್ತಿಗೆ ಇನ್ನೂ ಜನ ಸೇರುತ್ತಾರೆ ಇವರೆಲ್ಲಾ ಸೇರಿ ಈ ಸುದ್ದಿಯನ್ನು ಚರ್ಚಿಸಿದರೆ ನನಗೂ ಸ್ವಲ್ಪ ಮಾಹಿತಿ ಸಿಗಬಹುದೆಂಬ ದೂರದ ಆಶೆಯಿಂದ ‘ನನಗೇನೂ ಈ ವಿಚಾರದ ಕುರಿತು ಹೇಳು ಸಾಧ್ಯವಿಲ್ಲ, ನೀವೆ ಹೇಳಿದರೆ ನಾನು ತಿಳಿದುಕೊಳ್ಳಬಹುದು’ ಎಂದೆ. ‘ನನ್ನ ಪ್ರಕಾರ ಇದು ಸರಿಯಾದ ಕ್ರಮ’ ಎಂದರು. ಮಾಜಿ ಮಂಡಲ ಪ್ರಧಾನರಾಗಿದ್ದ ಮಲ್ಲಪ್ಪನವರು. ‘ಹೇಗೆ ಸರಿಯಾದ ಕ್ರಮ, ಹರಾಜು ಮಾಡಿದರೆ ಕೇವಲ ಶ್ರೀಮಂತರು ಮಾತ್ರ ಸದಸ್ಯರಾಗಬಹುದು, ಹಣವಿಲ್ಲದ ಪ್ರಾಮಾಣಿಕನೊಬ್ಬ ಸದಸ್ಯವಾಗುವುದು ಹೇಗೇ?’ ಎಂದು ಮೇಟಿ ಕುಟುಂಬದವರೊಬ್ಬರು ಪ್ರಶ್ನಿಸಿದರು. ‘ಹಣವಿಲ್ಲದ ಪ್ರಾಮಾಣಿಕರಿಗೆ ಕಾದಿರಿಸಿದ ಸೀಟುಗಳಿವೆ. ಹಿಂದುಳಿದ ವರ್ಗದ ಸೀಟು ಕೇವಲ ರೂ. ೩೦೦೦ಕ್ಕೆ ಹೋಗಿದೆ. ಅಲ್ಲಿ ಅವರು ಬರಬಹುದು’ ಎಂದು ಮಲ್ಲಪ್ಪನವರು ತಮ್ಮ ಅಭಿಪ್ರಾಯ ನೀಡಿದರು. ಮಲ್ಲಪ್ಪನವರು ವಾದಕ್ಕೆ ಪ್ರತಿವಾದ ಮಂಡಿಸಲು ಉಳಿದವರು ವಿಫಲರಾಗಿ ಅದು ತೀರ್ಮಾನವಾಗುವ ಸಾಧ್ಯತೆ ಕಂಡು ‘ಕೆಳ ಜಾತಿಗಳ ಪ್ರಾಮಾಣಿಕರಿಗೆ ಕಾದಿರಿಸದ ಸೀಟು ಇದೆ ಎಂದು ಒಪ್ಪುವ ಆದರೆ ಮೇಲು ಜಾತಿಗಳ ಪ್ರಾಮಾಣಿಕರು ಏನು ಮಾಡಬೇಕು?’ ಎಂದು ಸೇರಿಸಿದೆ. ಉಳಿದವರು ಹೌದು ಮೇಲು ಜಾತಿಯ ದುಡ್ಡಿಲ್ಲದ ಪ್ರಾಮಾಣಿಕರು ಏನು ಮಾಡಬೇಕೆಂದು ಮಲ್ಲಪ್ಪನವರ ಮುಖ ನೋಡಿದರು.

ಅಷ್ಟೊತ್ತಿಗೆ ರಾಮಪ್ಪನವರು ಚಾದ ಅಂಗಡಿಗೆ ಬಂದರು. ಈಗಾಗಲೇ ಚರ್ಚೆಯಲ್ಲಿ ಪಾಲುಗೊಂಡವರು ಹೆಚ್ಚು ಕಡಿಮೆ ಒಂದೇ ಪಕ್ಷಕ್ಕೆ ಸೇರಿದವರು. ರಾಮಪ್ಪನವರು ಕಾಂಗ್ರೇಸಿಗ; ಪಕ್ಷದ ತಾಲ್ಲೂಕು ಅಧ್ಯಕ್ಷ. ಜತೆಗೆ ಈ ಬಾರಿ ಚುನಾವಣೆಗೆ ನಿಂತು ಪಂಚಾಯತ್ ಅಧ್ಯಕ್ಷನಾಗಬೇಕೆಂದು ಸಾಕಷ್ಟು ತಯಾರಿ ನಡೆಸಿದವರು. ಮಲ್ಲಪ್ಪ ಮತ್ತು ರಾಮಪ್ಪ ಇಬ್ಬರು ಕುರುಬರೇ. ಮಲ್ಲಪ್ಪನವರು ಹಿಂದೆ ಮಂಡಲ ಪ್ರಧಾನರಾಗಿ ತಮ್ಮ ರಾಜಕೀಯ ಆಕಾಂಕ್ಷೆ ಪೂರೈಸಿಕೊಂಡಿದ್ದಾರೆ. ಆದರೆ ರಾಮಪ್ಪನಿಗೆ ಅದು ಸಾಧ್ಯವಾಗಿಲ್ಲ. ಉದ್ವಾಳ ನೀಲೇಶಪ್ಪನವರು ಪೇಪರನ್ನು ರಾಮಪ್ಪನ ಕೈಗಿತ್ತು ಓದಿ ನಿನ್ನ ಅಭಿಪ್ರಾಯ ತಿಳಿಸು ಎಂದರು. ‘ಹರಾಜು ಹಾಕುವುದೆಲ್ಲಾ ಸರಿಯಲ್ಲ. ಚುನಾವಣೆ ನಡೆಯಬೇಕು; ಸೂಕ್ತ ಅಭ್ಯರ್ಥಿ ಆರಿಸಿ ಬರಬೇಕು’ ಎಂದು ರಾಮಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಚುನಾವಣೆ ನಡೆದರೆ ದುಡ್ಡು ಖರ್ಚಾಗುವುದಿಲ್ಲವೇ ಎನ್ನುವ ಪ್ರಶ್ನೆ ಪುನಃ ಬಂತು. ‘ಚುನಾವಣೆಗೆ ಹಣ ಖರ್ಚಾಗುತ್ತದೆ ಎಂದು ನಮ್ಮಲ್ಲಿ ರಾಜ್ಯ ಮತ್ತು ಕೇಂದ್ರ ಚುನಾವಣೆಗಳು ನಿಂತಿಲ್ಲ. ಹಾಗಿರುವಾಗ ಪಂಚಾಯತಿಗೆ ಯಾಕೆ ಈ ನೀತಿ’ ಎಂದು ಮರು ಪ್ರಶ್ನೆ ಹಾಕಿದರು ರಾಮಪ್ಪನವರು. ಇದೇ ರೀತಿ ಊರಲ್ಲಿ ಚುನಾವಣೆ ಬೇಕೆ ಬೇಡವೇ ಎಂಬ ಚರ್ಚೆ ಮುಂದುವರಿಯಿತು. ಊರ ಪ್ರಮುಖರ ಪಟ್ಟಿಯಲ್ಲಿರುವ ನಾಲ್ಕೈದು ಮಂದಿ ಅಲ್ಲಿದ್ದರು. ಅವರ ಅಭಿಪ್ರಾಯ ಏಪ್ರಿಲ್ ತಿಂಗಳಲ್ಲಿ ಬರುವ ಪಂಚಾಯತ್ ಚುನಾವಣೆಯ ಕೆಲವು ಸತ್ಯಗಳನ್ನು ಹೊರಹಾಕಿದ್ದವು. ಮಲ್ಲಪ್ಪ ಮತ್ತು ಅವರ ಸಂಗಡಿಗರು ಹಿಂದಿನ ಬಾರಿಯ ಅವಿರೋಧ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದುದರಿಂದ ಅವರಿಗೆ ಅವಿರೋಧ ಆಯ್ಕೆಯೇ ಸರಿ. ಪಂಚಾಯತ್ ಅಧ್ಯಕ್ಷನಾಗಬೇಕೆಂದು ಹಿಂದೆ ರಾಮಪ್ಪನವರು ಹಲವಾರಿ ಬಾರಿ ಪ್ರಯತ್ನಿಸಿದರು. ಆದರೆ ಒಂದಲ್ಲ ಒಂದು ಕಾರಣಗಳಿಂದ ಅದು ಸಾಧ್ಯವಾಗಿಲ್ಲ, ರಾಮಪ್ಪನವರಿಗೆ ಬದಲಾವಣೆ ಬೇಕಾಗಿದೆ. ಅವಿರೋಧ ಆಯ್ಕೆ ರಾಮಪ್ಪನವರಿಗೆ ಇಷ್ಟವಿಲ್ಲ.[7]

 

[1]ಗವರ್ನ್‌ಮೆಂಟ್ ಆಫ್ ಕರ್ನಾಟಕ, ಕರ್ನಾಟಕ ಆಕ್ಟ್ ನಂ.೨೦ ಆಫ್ ೧೯೮೫; ದಿ ಕರ್ನಾಟಕ ಜಿಲ್ಲಾ ಪರಿಷದ್ಸ್, ತಾಲ್ಲೂಕ್ ಪಂಚಾಯತ್ ಸಮಿತಿಸ್, ಮಂಡಲ್ ಪಂಚಾಯತ್ಸ್ ಆಕ್ಟ್, ೧೯೮೩, ಬೆಂಗಳೂರು: ಗವರ್ನ್‌ಮೆಂಟ್ ಆಫ್ ಕರ್ನಾಟಕ, ೧೯೮೭.

[2]ಮಂಡಲ ವ್ಯವಸ್ಥೆಯಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಈ ಕೆಳಗಿನಂತೆ ಸೀಟುಗಳನ್ನು ಕಾದಿರಿಸಲಾಗಿತ್ತು.-ಮಹಿಳೆಯರಿಗೆ ಶೇಕಡಾ ೨೫, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಶೇಕಡಾ ೧೮ ಮತ್ತು ಹಿಂದುಳಿದ ಜಾತಿಗಳಿಂದ ಸದಸ್ಯರು ಆಯ್ಕೆಯಾಗದಿದ್ದರೆ ಕನಿಷ್ಠ ಇಬ್ಬರು ಸದಸ್ಯರನ್ನು ನೇಮಕ ಮಾಡಬೇಕೆಂಬ ನಿಯಮವಿತ್ತು. (ಅಬ್ದುಲ್ ಅಜೀಜ್ ಡಿಸೆಂಟ್ರಲೈಸ್‌ಡ್ ಪ್ಲಾನಿಂಗ್, ಪುಟ ೩೯).

[3]ಹಳ್ಳಿಯಲ್ಲಿ ಹಿಂದುಳಿದ ಜಾತಿಗಳ ಮತ್ತು ಕೆಳ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಮಂಡಲ ಪಂಚಾಯತ್ ಬಂದ ನಂತರ ರಾಜಕೀಯಕ್ಕೆ ಬಂದರು. ಆದರೆ ರಾಜ್ಯದ ಒಟ್ಟಾರೆ ಚಿತ್ರಣ ಆಶಾದಾಯಕವಾಗಿರಲಿಲ್ಲ. ಶೇಕಡಾ ೩೦ ರಷ್ಟು ಜನಸಂಖ್ಯೆ ಇರುವ, ರಾಜ್ಯದ ಯಜಮಾನಿಕೆಯನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿರುವ, ಮುಖ್ಯ ಎರಡು ಜಾತಿಗಳು-ಲಿಂಗಾಯತರು ಮತ್ತು ಒಕ್ಕಲಿಗರು-ಜಿಲ್ಲಾ ಪಂಚಾಯತ್‌ನ ಶೇಕಡಾ ೫೧ರಷ್ಟು ಸೀಟುಗಳನ್ನು ಪಡೆದರು. ಶೇಕಡಾ ೩೦ರಷ್ಟು ಜನಸಂಖ್ಯೆ ಇರುವ ಹಿಂದುಳಿದ ಜಾತಿಗಳು ಶೇಕಡಾ ೧೮ರಷ್ಟು ಸೀಟುಗಳಲ್ಲಿ ತೃಪ್ತರಾಗಬೇಕಾಯಿತು. ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಕ್ರಮವಾಗಿ ಶೇಕಡಾ ೨೫ರಷ್ಟು ಸೀಟುಗಳು ಬಂದವು. (ಅಬ್ದುಲ್ ಅಜೀಜ್, ಡಿಸೆಂಟ್ರಲೈಸ್‌ಡ್ ಪ್ಲಾನಿಂಗ್, ಪುಟ ೪೩).

[4]ಇದೇ ಸಂದರ್ಭದಲ್ಲಿ ಜೀತಮುಕ್ತಿಯಾಗಿ ಮೇಲುಜಾತಿಯವರು ಅಗ್ಗದ ಶ್ರಮದಿಂದ ವಂಚಿತರಾಗಿದ್ದರೆಂದು ಹಿಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಕೃಷಿಯಲ್ಲಿ ಕಡಿಮೆಯಾದ ಆದಾಯವನ್ನು ತುಂಬಿಕೊಳ್ಳಲು ಮೇಲು ಜಾತಿಯವರು ಕೃಷಿಯೇತರ ಚಟುವಟಿಕೆಗಳತ್ತ ಚಲಿಸಿದರು. ಅವುಗಳಲ್ಲಿ ಮುಖ್ಯವಾದುದು ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗ್. ಅನುಕೂಲಸ್ಥ ಮೇಲು ಜಾತಿಯ ಕೃಷಿಕರು ಗಣಿಯಲ್ಲಿ ಕೂಲಿಯಾಗಿ ಅಥವಾ ವ್ಯಾಗನ್ ಲೋಡಿಂಗ್ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ಹಳ್ಳಿಯಲ್ಲಿ ಊಹಿಸಲು ಸಾಧ್ಯವಿಲ್ಲ. ಆದುದರಿಂದ ಅವರು ಗಣಿಗಾರಿಕೆ ಅಥವಾ ವ್ಯಾಗನ್ ಲೋಡಿಂಗ್ ವ್ಯವಹಾರ ಶುರುಮಾಡಬೇಕಿತ್ತು. ಗಣಿಗಾರಿಕೆಗೆ ಬಂಡವಾಳ ಹೆಚ್ಚು ಬೇಕಿತ್ತು; ವ್ಯಾಗನ್ ಲೋಡಿಂಗ್‌ನಲ್ಲಿ ಬಂಡವಾಳ ಕಡಿಮೆ. ಕಾರ್ಮಿಕರ ಮೇಲೆ ಹಿಡಿತ ಬೇಕಿತ್ತು. ಹಾಗೆ ದೊಡ್ಡ ಕೃಷಿಕರಲ್ಲಿ ಕೆಲವರು ವ್ಯಾಗನ್ ಲೋಡಿಂಗ್‌ನ ಕಾರ್ಮಿಕರ ಗುತ್ತಿಗೆ ವ್ಯವಹಾರ ಆರಂಭಿಸಿದರು.

[5]ಕಾನೂನು ಮತ್ತು ಶಿಸ್ತು ಕಾಪಾಡುವಲ್ಲಿ ಪೋಲೀಸರ ಪಾತ್ರ ಮಹತ್ತರವಾದುದು. ಅದರೆ ಹಳ್ಳಿಗಳಲ್ಲಿ ಪೋಲೀಸರ ಎದುರೇ ಕಾನೂನು ಭಂಗವಾದರೂ ಶಿಸ್ತುಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ. ಇದರಿಂದಾಗಿ ಈ ಕಡೆ ಊಳಿಗ ಮಾನ್ಯ ವ್ಯವಸ್ಥೆಯ ದಬ್ಬಾಳಿಕೆ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ. ದಲಿತರಿಗೆ ಮಲ ತಿನ್ನಿಸುವುದು, ದಲಿತ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುವುದು, ದಲಿತರು ದೇವಸ್ಥಾನ ಪ್ರವೇಶ ಮಾಡಿದರೆಂದು ಅವರನ್ನು ದನ ಬಡಿದ ಹಗೆ ಬಡಿಯುವುದು ಅದು ಸಾಕಾಗಿಲ್ಲವೆಂದು ಅವರ ಗುಡಿಸಲನ್ನು ಸುಡುವುದು ಇವೆಲ್ಲಾ ಹೊಸಪೇಟೆ ತಾಲ್ಲೂಕಿನ ಸುತ್ತಮುತ್ತ ಹಳ್ಳಿಗಳಲ್ಲಿ ನಡೆದ ಘಟನೆಗಳೇ.

[6]ಸ್ವಾತಂತ್ರ್ಯ ಮೇಲ್ವರ್ಗಗಳ ಆಸಕ್ತಿಗೆ ಪೂರಕವಾದ ನೀತಿಗಳನ್ನು ಅನುಸರಿಸಲಾಯಿತು. ಕಡೆಗೆ ಅದು ಸರಿಯಿಲ್ಲವೆಂದು ಸ್ವಯಂತಂತ್ರ ನೀತಿಗಳನ್ನು ಅನುಸರಿಸಲು ಆರಂಭಿಸಿದ್ದೇವೆ. ಇದಕ್ಕಾಗಿ ಹಿಂದಿನ ನೀತಿಗಳಿಂದ ನಷ್ಟ ಅನುಭವಿಸಿದವರು, ಲಾಭ ಮಾಡಿದವರಲ್ಲ, ಪುನಃ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.

[7]ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಿತು. ಹಿಂದಿನ ಬಾರಿಯಂತೆ ಅವಿರೋಧ ಆಯ್ಕೆ ನಡೆಯಲಿಲ್ಲ. ರಾಮಪ್ಪನವರು ಸ್ಪರ್ಧಿಸಿ ಗೆದ್ದಿದ್ದಾರೆ ಮತ್ತು ಹೊಸ ಪಂಚಾಯತ್‌ನ ಅಧ್ಯಕ್ಷರಾಗಿದ್ದಾರೆ.