ಶಿಕ್ಷಣ

ಹಳ್ಳಿಯ ಒಟ್ಟು ಐದು ಪ್ರಾಥಮಿಕ ಶಾಲೆಗಳಿವೆ (ಕೋಷ್ಠಕ – ೧೪). ಅವುಗಳಲ್ಲಿ ನಾಲ್ಕು ಸರಕಾರಿ, ಒಂದು ಖಾಸಗಿ ಸರಕಾರೇತರ ಸಂಸ್ಥೆ ಅರುಣೋದಯ ಒಂದು ಖಾಸಗಿ ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದೆ. ಇದು ವಾಸ್ತವವಾಗಿ ಇಂಗ್ಲೀಶ್ ಮಾಧ್ಯಮ ಶಾಲೆ. ಕಾನೂನು ಪ್ರಕಾರ ಕನ್ನಡ ಮಾಧ್ಯಮ ಶಾಲೆ. ಯಾಕೆಂದರೆ ಕರ್ನಾಟಕದಲ್ಲಿ ನಾಲ್ಕನೆಯ ತರಗತಿ ತನಕ ಕನ್ನಡದಲ್ಲಿ ಶಿಕ್ಷಣ ಕಡ್ಡಾಯ. ಹಾಗಾಗಿ ಎಲ್ಲಾ ಇಂಗ್ಲೀಶ್ ಮಾಧ್ಯಮ ಶಾಲೆಗಳು ನಾಲ್ಕನೆಯ ತರಗತಿ ತನಕ ಕನ್ನಡ ಮಾಧ್ಯಮ ಶಾಲೆಯೆಂದು ದಾಖಲಿಸುತ್ತಾರೆ. ಈ ಅಧ್ಯಯನದ ಸಂದರ್ಭಧಲ್ಲಿ ನಾಲ್ಕನೆಯ ತರಗತಿ ತನಕ ಕ್ಲಾಸುಗಳು ನಡೆಯುತ್ತಿದ್ದವು. ಇಲ್ಲೂ ಇಂಗ್ಲೀಶ್ ಪಾಠಗಳು, ಸಮವಸ್ತ್ರಗಳು, ಶೂಗಳು ಇದ್ದವು. ಬಹುತೇಕ ಮಕ್ಕಳು ನೆರೆಯ ಹಳ್ಳಿಯಿಂದ ಬರುತ್ತಾರೆ. ಸಂಸ್ಥೆಯ ಪ್ರಕಾರ ಹಳ್ಳಿಯ ಮಕ್ಕಳ ಸಂಖ್ಯೆ ಕಡಿಮೆ.

ಸರಕಾರಿ ಶಾಲೆಗಳಲ್ಲಿ ಒಂದು ಉರ್ದು ಶಾಲೆ. ಅದಕ್ಕೆ ಸ್ವಂತ ಕಟ್ಟಡವಿಲ್ಲ. ಸದ್ಯಕ್ಕೆ ಮೊಹರಂ ಕೊಠಡಿಯಲ್ಲಿ ಶಾಲೆ ನಡೆಯುತ್ತಿದೆ. ತಾಲ್ಲೂಕು ಪಂಚಾಯತ್‌ಅಧ್ಯಕ್ಷ ಕರೀಂಖಾನ್ ಅವರ ಪರಿಶ್ರಮದಿಂದ ಉರ್ದು ಶಾಲೆ ಸಾಧ್ಯವಾಯಿತು ಎನ್ನುತ್ತಾರೆ ಮೇಸ್ಟ್ರು. ಕನ್ನಡ ಕಲಿತವರಿಗೆ ಕೆಲಸ ಕಷ್ಟವಾಗಿರುವ ಉರ್ದು ಕಲಿತ ಮಕ್ಕಳಿಗೆ ಉದ್ಯೋಗ ಅವಕಾಶ ಏನು? ಎಂದು ಮೇಷ್ಟ್ರನ್ನು ವಿಚಾರಿಸಿದೆ.[1] ಉತ್ತರ ಕೊಡಲು ಮೇಸ್ಟ್ರು ಸ್ವಲ್ಪ ಆಲೋಚಿಸಬೇಕಾಯಿತು. ಗಲ್ಫ್‌ದೇಶಗಳಿಗೆ ಹೋಗಲು ಅನುಕೂಲವಾಗುತ್ತದೆ, ಉರ್ದು ಶಾಲೆಗಳಲ್ಲಿ ಮೇಸ್ಟ್ರು ಆಗಬಹುದೆಂದು ತಡೆ ತಡೆದು ಉತ್ತರಿಸಿದರು ಮೇಸ್ಟ್ರು. ಒಟ್ಟು ೧೭ ಮಕ್ಕಳು ಉರ್ದು ಶಾಲೆಯಲ್ಲಿ ಓದುತ್ತಿದ್ದಾರೆ. ಒಂದು ಸರಕಾರಿ ಪ್ರಾಥಮಿಕ ಶಾಲೆ ತಿಮ್ಮಪ್ಪನ ಗುಡಿ ಪಕ್ಕದ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಇದು ಹಿಂದೆ ಡಾಲ್ಮಿಯಾ ವಸತಿಗಳ ಪಕ್ಕ ಇತ್ತು. ಕಾರ್ಮಿಕರ ಮುಷ್ಕರ ಆರಂಭವಾದ ನಂತರ ಶಾಲೆ ಸಮುದಾಯ ಭವನಕ್ಕೆ ವರ್ಗಾವಣೆಯಾಗಿದೆ. ಈ ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ ೧೧. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಗಳೆಂದರೆ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಹರಿಜನ ಕೇರಿ ಎದುರು ಇರುವ ಅಂಬೇಡ್ಕರ್‌ಶಾಲೆ. ಸರಕಾರಿ ಶಾಲೆಯಲ್ಲಿ ಒಟ್ಟು ೪೯೩ ಮಕ್ಕಳಿದ್ದರೆ ಅಂಬೇಡ್ಕರ್‌ಶಾಲೆಯಲ್ಲಿ ೨೭೨ ಮಕ್ಕಳಿದ್ದಾರೆ. ಶಾಲೆಯಲ್ಲಿರುವ ಮಕ್ಕಳ ಸಾಮಾಜಿಕ ಹಿನ್ನೆಲೆ ನೋಡಿದರೆ ಈ ಎರಡು ಶಾಲೆಗಳು ಊರು ಮತ್ತು ಕೇರಿ ನಡುವೆ ಇರುವ ಶತಮಾನದ ಅಂತರವನ್ನು ಇಂದೂ ಮುಂದುವರಿಸಿದಂತೆ ಕಾಣುತ್ತದೆ. ಅಂಬೇಡ್ಕರ್‌ಶಾಲೆಯ ೨೭೨ ಮಕ್ಕಳಲ್ಲಿ ೨೨೦ ಕೂಡ ಹರಿಜನ ಮಕ್ಕಳೇ. ಉಳಿದ ಜಾತಿಗಳೆಂದರೆ ನಾಯಕರ ಮಕ್ಕಳು ೨೩, ಅಲ್ಪಸಂಖ್ಯಾತರ ಮಕ್ಕಳು ೧೮ ಮತ್ತು ಇತರರು ೧೭. ೧೭ರಲ್ಲಿ ಕುರುಬರು, ಅಗಸರು, ಮುಂತಾದವರು ಬರುತ್ತಾರೆ. ಆದರೆ ಲಿಂಗಾಯತರ ಮಕ್ಕಳು ಒಬ್ಬರೂ ಇಲ್ಲ. ಅದಕ್ಕೆ ವಿರುದ್ಧವಾಗಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತರರು ೨೫೪ ಇದ್ದರೆ, ಹರಿಜನರೂ ೬೫, ನಾಯಕರು ೯೨ ಮತ್ತು ಅಲ್ಪ ಸಂಖ್ಯಾತರು ೭೧. ಹೀಗೆ ಅಂಬೇಡ್ಕರ್‌ಶಾಲೆ ಹರಿಜನರಿಗೆ ಮೀಸಲೆಂಬಂತಿದೆ.

ಶಿಕ್ಷಣವನ್ನು ಶಾಲೆಗಳ ಸಂಖ್ಯೆಯಿಂದ ಅಳೆಯುವುದಾದರೆ ಪ್ರಾಥಮಿಕ ಶಿಕ್ಷಣ ಸೌಕರ್ಯ ಇದೆ ಎನ್ನಬಹುದು. ನಾಲ್ಕು ಪ್ರಾಥಮಿಕ ಶಾಲೆಗಳಿವೆ, ಒಂದು ಇಂಗ್ಲೀಷ್ ಮಾಧ್ಯಮ ಶಾಲೆಯೂ ಇದೆ. ಬಹುತೇಕ ಎಲ್ಲಾ ಶಾಲೆಗಳ ಮತ್ತು ಎಲ್ಲಾ ತರಗತಿಗಳ ಮಕ್ಕಳು ನೆಲದಲ್ಲೆ ಕುಳಿತು ಅಭ್ಯಾಸ ಮಾಡುವುದು. ಎಲ್ಲಾ ಶಾಲೆಗಳಲ್ಲೂ ಮೇಸ್ಟ್ರುಗಳಿದ್ದಾರೆ. ಆದರೆ ಯಾರು ಕೂಡ ಹಳ್ಳಿಯಲ್ಲಿ ಮನೆ ಮಾಡಿಲ್ಲ. ಇಲ್ಲಿ ಯಾಕೆ ನೀವು ಮನೆ ಮಾಡಿಲ್ಲ ಎಂದಾಗ ಸ್ಥಳೀಯ ಸಮಸ್ಯೆಗಳ ಪಟ್ಟಿಯನ್ನೇ ನೀಡಿದರು. ವಾಸಕ್ಕೆ ಯೋಗ್ಯವಾದ ಬಾಡಿಗೆ ಮನೆಗಳು ಸಿಗುವುದಿಲ್ಲ. ಮನೆಗಳು ಇದ್ದರೆ ಅವುಗಳಲ್ಲಿ ಪಾಯಿಖಾನೆ ವ್ಯವಸ್ಥೆ ಇಲ್ಲ. ಹೆಚ್ಚಿನವರು ಪಾಯಿಖಾನೆ ವ್ಯವಸ್ಥೆಗೆ ಒಗ್ಗಿರುವುದರಿಂದ ಇಲ್ಲಿ ಹೊಲಕ್ಕೆ – ಅದೂ ಮಹಿಳಾ ಶಿಕ್ಷಕಿಯರು ಹೋಗುವುದನ್ನು – ಊಹಿಸಲು ಅಸಾಧ್ಯವಾಗಿದೆ. ಎರಡು, ಇಲ್ಲಿನ ನೀರಿನ ವ್ಯವಸ್ಥೆ ಸರಿ ಇಲ್ಲ. ಅವರ ಪ್ರಕಾರ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಜಾಸ್ತಿ ಇದೆ; ಅದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ. ಮೂರು, ಹೊಸಪೇಟೆ ಮತ್ತು ಹಳ್ಳಿ ನಡುವೆ ಬೇಕಾದಷ್ಟು ಸಾರಿಗೆ ವ್ಯವಸ್ಥೆ ಇದೆ. ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಮೇಸ್ಟ್ರುಗಳಿಗೆ ಸಮಸ್ಯೆ ಆಗಿಲ್ಲ; ಶಾಲೆಗಳು ಕೂಡ ಸರಿಯಾಗಿ ನಡೆಯುತ್ತಿವೆ. ಹೀಗಿರುವಾಗ ಇಲ್ಲೇ ಮನೆ ಮಾಡಿಲ್ಲ ಎನ್ನುವ ಪುಕಾರು ಯಾಕೆ? ಎಂದು ಮೇಸ್ಟ್ರುಗಳು ನನ್ನ ಮುಖ ನೋಡಿದರು.

ಐದು ಪ್ರಾಥಮಿಕ ಶಾಲೆಗಳಿದ್ದರೂ ಊರಿನ ೨೪೮ ಕುಟುಂಬಗಳು ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಅತೃಪ್ತಿ ಸೂಚಿಸಿವೆ (ಕೋಷ್ಠಕ – ೧೨). ಅವರು ಅತೃಪ್ತಿ ಸೂಚಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇಷ್ಟೆಲ್ಲಾ ಶಾಲೆಗಳಿದ್ದರೂ ಪ್ರಾಥಮಿಕ ಶಿಕ್ಷಣ ಪಡೆದ ಒಬ್ಬ ಸದಸ್ಯನೂ ಇಲ್ಲದ ಸುಮಾರು ೨೦೮ ಕುಟುಂಬಗಳಿವೆ (ಕೋಷ್ಠಕ – ೧೩). ಅವುಗಳಲ್ಲಿ ೩೩ ಹರಿಜನ, ೪೧ ವಡ್ಡರ ಮತ್ತು ೫೨ ನಾಯಕರ ಕುಟುಂಬಗಳು ಸೇರಿವೆ. ಇತರ ಜಾತಿಗಳಲ್ಲೂ ಪ್ರಾಥಮಿಕ ಶಿಕ್ಷಣ ಪಡೆದ ಒಬ್ಬ ಸದಸ್ಯನೂ ಇಲ್ಲದ ಕುಟುಂಬಗಳಿವೆ. ಆದರೆ ಅವುಗಳ ಸಂಖ್ಯೆ ಹರಿಜನರಿಗೆ ಮತ್ತು ನಾಯಕರಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ (ಕೋಷ್ಠಕ – ೧೩). ಆದಾಗ್ಯೂ ಊರವರು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ದೂರಿಲ್ಲ. ಅವರ ದೂರು ಇರುವುದು ಪ್ರೌಢ ಶಾಲಾ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದಂತೆ. ಅದಕ್ಕೆ ಕಾರಣವಿದೆ. ಪ್ರೌಢ ಶಾಲಾ ಶಿಕ್ಷಣ ಪಡೆದ ಒಬ್ಬ ಸದಸ್ಯನೂ ಇಲ್ಲದ ಸುಮಾರು ೫೨೨ ಕುಟುಂಬಗಳು ಇವೆ. ಅಂದರೆ ಶೇಕಡಾ ೬೭ ಕುಟುಂಬಗಳಲ್ಲಿ ಪ್ರೌಢ ಶಾಲಾ ಶಿಕ್ಷಣ ಪಡೆದ ಒಬ್ಬ ಸದಸ್ಯನೂ ಇಲ್ಲ. ಇದರ ಅರ್ಥ ಹಳ್ಳಿಯಲ್ಲಿ ಪ್ರೌಢ ಶಾಲಾ ಶಿಕ್ಷಣ ಒದಗಿಸುವ ಪ್ರಯತ್ನಗಳು ನಡೆದೇ ಇಲ್ಲವೆಂದಲ್ಲ. ೧೯೯೧ – ೯೨ರಲ್ಲಿ ಹೊಸಪೇಟೆ ಯವರೊಬ್ಬರ ಪ್ರಯತ್ನದಿಂದ ಖಾಸಗಿ ಪ್ರೌಢ ಶಾಲೆ ಆರಂಭವಾಯಿತು. ಸರಕಾರದ ಸಹಾಯ ಧನ ಸಿಗಬಹುದೆಂಬ ಭರವಸೆಯಿಂದ ಅವರು ೧೯೯೫ರವರೆಗೆ ಶಾಲೆ ನಡೆಸಿದರು. ಸಹಾಯ ಧನ ಸಿಗದೆ ೧೯೯೫ರಲ್ಲಿ ಶಾಲೆ ಮುಚ್ಚಿದರು. ಅಲ್ಲಿಂದ ಅದೇ ಶಾಲೆಯನ್ನು ಬಳ್ಳಾರಿಯ ಹರಿಜನ/ಗಿರಿಜನ ಸಂಘದವರು ಮುಂದುವರಿಸುತ್ತಿದ್ದಾರೆ. ಕೆಲವು ಸಮಯ ಆಶ್ರಯ ಸೈಟಿನ ಒತ್ತಿಗಿರುವ ಬಿ.ಡಿ.ಓ. ಕಚೇರಿಗೆ ಸೇರಿದ ಒಂದು ಕಟ್ಟಡದಲ್ಲಿ ಶಾಲೆ ನಡೆಯಿತು. ಬಿ.ಡಿ.ಓ. ಕಛೇರಿಯವರು ತಮ್ಮ ಕಟ್ಟಡ ಖಾಲಿ ಮಾಡಬೇಕೆಂದಾಗ ಶಾಲೆಯನ್ನು ಅಲ್ಲೇ ಪಕ್ಕದಲ್ಲಿರುವ ಒಂದು ಮನೆಗೆ ಸ್ಥಳಾಂತರಿಸಲಾಯಿತು. ಮನೆಯ ವರಾಂಡ ಒಂದು ತರಗತಿಯಾದರೆ ಒಳಗಿನ ಎರಡು ಕೋಣೆಗಳು ಮತ್ತುಳಿದ ಎರಡು ತರಗತಿಗಳು. ಅಡುಗೆ ಕೋಣೆ, ಕಚೇರಿ ಮತ್ತು ಸಿಬ್ಬಂದಿ ಕೋಣೆಯಾಗಿ ಉಪಯೋಗವಾಗುತ್ತಿದೆ. ವಿದ್ಯಾರ್ಥಿಗಳಿಗೆ ಬೆಂಚು ಡೆಸ್ಕ್‌ಗಳಿಲ್ಲ; ನೆಲದಲ್ಲೇ ಪಾಠ.

ನಾನು ಭೇಟಿ ನೀಡಿದ ಸಂದರ್ಭದಲ್ಲಿ ಮೇಸ್ಟ್ರುಗಳು ಒಬ್ಬರೂ ಇರಲಿಲ್ಲ. ಕಚೇರಿ ಗುಮಾಸ್ತರೇ ಮುಖ್ಯೋಪಾಧ್ಯಾಯ, ಟೀಚರ್, ಗುಮಾಸ್ತ ಎಲ್ಲಾ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಮಧ್ಯಾಹ್ನದ ನಂತರ ಮೇಸ್ಟ್ರುಗಳು ಶಾಲೆಗೆ ಬರುವುದಿಲ್ಲವೇ ಎಂದು ನನ್ನ ಸಂಶಯ ವ್ಯಕ್ತಪಡಿಸಿದೆ. ಬರುತ್ತಾರೆ ಸಾರ್, ಇವತ್ತು ಮುಖ್ಯೋಪಾಧ್ಯಾಯರು ಶಾಲಾ ಆಡಳಿತ ಕಮಿಟಿಯವರೊಂದಿಗೆ ಸರಕಾರದ ಒಪ್ಪಿಗೆ ಪತ್ರ ಕುರಿತು ಚರ್ಚಿಸಲು ಕಂಪ್ಲಿಗೆ ಹೋಗಿದ್ದಾರೆ. ಉಳಿದ ಮೇಸ್ಟ್ರುಗಳು ಇಡೀ ದಿನ ಇರುವುದಿಲ್ಲ. ಅವರ ತರಗತಿ ಇರುವಾಗ ಬಂದು ಪಾಠ ಮಾಡಿ ಹೋಗುತ್ತಾರೆ, ಎಂದರು. ಅದ್ಯಾಕೆ ಇಡೀ ದಿನ ಇರುವುದಿಲ್ಲ ಎಂದು ವಿಚಾರಿಸಿದೆ. ಅವರೆಲ್ಲಾ ಎರಡು ಮೂರು ವರ್ಷಗಳಿಂದ ತಿಂಗಳಿಗೆ ಕೇವಲ ರೂ. ೩೦೦ಕ್ಕೆ ದುಡಿಯುತ್ತಿದ್ದಾರೆ. ಅವರಲ್ಲಿ ಸಂಸಾರಿಗರು ಇದ್ದಾರೆ. ತಮ್ಮ ಸಂಸಾರದ ಖರ್ಚು ಭರಿಸಲು ಹೊಸಪೇಟೆಯಲ್ಲಿ ಟ್ಯೂಶನ್‌ನಡೆಸುತ್ತಾರೆ ಎಂದು ನನ್ನ ಸಂಶಯ ಪರಿಹರಿಸಿದರು. ಸರಕಾರದ ಸಹಾಯ ಧನವಿಲ್ಲದ ಖಾಸಗಿ ಶಾಲೆಗಳಲ್ಲಿ ದುಡಿಯುವ ಮೇಸ್ಟ್ರುಗಳ ಮತ್ತು ಕಲಿಯುವ ಮಕ್ಕಳ ಸ್ಥಿತಿ ಚಿಂತಾಜನಕ. ಮೇಸ್ಟ್ರುಗಳು ತಮ್ಮ ಕಷ್ಟ ಮರೆತು ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿಯಬೇಕೆಂದು ಪೋಷಕರು ಮತ್ತು ಊರವರು ಬಯಸುತ್ತಾರೆ. ಇನ್ನೊಂದೆಡೆ ಇಂತಹ ಶಾಲೆಗಳಲ್ಲಿ ಓದಿದ ಮಕ್ಕಳು ಎಲ್ಲಾ ರೀತಿಯ ಸೌಲಭ್ಯವಿರುವ ಶಾಲೆಯಲ್ಲಿ ಓದಿದ ಮಕ್ಕಳೊಂದಿಗೆ ಉದ್ಯೋಗಕ್ಕಾಗಿ ಸ್ಪರ್ಧಿಸಬೇಕಾಗಿದೆ. ಮೆರಿಟ್, ಮುಕ್ತ ಸ್ಪರ್ಧೆ ಇತ್ಯಾದಿ ಕುರಿತು ಮಾತಾಡುವವರು ಯಾವತ್ತೂ ಕೂಡ ಸ್ಪರ್ಧೆಯ ಹಿಂದಿನ ತಯಾರಿ ಮತ್ತು ಸವಲತ್ತುಗಳ ಕಡೆಗೆ ಗಮನ ಹರಿಸುವುದಿಲ್ಲ. ಅವರ ಮೌಲ್ಯಮಾಪನವೆಲ್ಲ ಆರಂಭವಾಗುವುದು ಸ್ಪರ್ಧೆಯೊಂದಿಗೆ.

ನಿಮ್ಮ ಶಾಲೆಗೆ ಸ್ವಂತ ಕಟ್ಟಡಕ್ಕೆ ಪ್ರಯತ್ನಿಸಿಲ್ಲವೇ? ಎಂದರೆ ಅದಕ್ಕೆ ತುಂಬಾ ಹಣ ಬೇಕೆಂದು ಮರುದಿನ ಸಿಕ್ಕಿದ ಮುಖ್ಯೋಪಾಧ್ಯಯರು ಹೇಳಿದರು. ನಾವು ಈಗ ಸಂಗ್ರಹಿಸುವ ಫೀಸು ಮತ್ತು ಡೊನೇಶನ್ ಶಾಲಾ ಬಾಡಿಗೆ ಮತ್ತು ಸಿಬ್ಬಂದಿಗಳ ಸಂಬಳಕ್ಕೆ ಸರಿಯಾಗುತ್ತಿದೆ. ಡೊನೇಷನ್ ಕೂಡ ಹೆಚ್ಚು ಸಂಗ್ರಹವಾಗುವುದಿಲ್ಲ. ನಮ್ಮಲ್ಲಿ ಬರುವವರಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡ ಕಾರ್ಮಿಕರ ಮಕ್ಕಳು. ಅನುಕೂಲಸ್ಥರು ತಮ್ಮ ಮಕ್ಕಳನ್ನು ಹೊಸಪೇಟೆಗೆ ಅಥವಾ ಇತರ ಸಮೀಪದ ಊರುಗಳಲ್ಲಿರುವ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ವಿವರಿಸಿದರು. ವ್ಯಾಗನ್‌/ಗಣಿ ಕಾರ್ಮಿಕರ ಮಕ್ಕಳೇ ಹೆಚ್ಚಿರುವುದರಿಂದ ಹಾಜರಾಗಿ ಮತ್ತು ವ್ಯಾಗನ್ ಬರುವುದಕ್ಕೂ ಸಂಬಂಧವಿದೆ ಎಂದು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ. ತಿಂಗಳುಗಟ್ಟಲೆ ವ್ಯಾಗನ್ ಬರದಿದ್ದರೆ ಪಾಲಕರು ಬೇರೆ ಕಡೆ ಕೆಲಸ ಹುಡುಕಬೇಕಾಗುತ್ತದೆ. ಊರು ಬಿಟ್ಟು ದೂರ ವಲಸೆ ಹೋಗುವುದಾದರೆ ಅವರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮೊಂದಿಗೆ ಒಯ್ಯುತ್ತಾರೆ. ಹೀಗೆ ವ್ಯಾಗನ್ ಬರುವುದು ತಡವಾದಂತೆ ಹಾಜರಾತಿ ಸಮಸ್ಯೆಯು ಹೆಚ್ಚಾಗುತ್ತದೆ.

ಈ ಅಧ್ಯಾಯದ ಆರಂಭದಲ್ಲಿ ವಿಕೇಂದ್ರೀಕರಣವನ್ನು ವಿಶ್ಲೇಷಿಸುವ ಎರಡು ವಿಧಾನಗಳ ಕುರಿತು ಚರ್ಚಿಸಿದ್ದೇನೆ. ಮುಖ್ಯವಾಹಿನಿಯ (ಟೆಕ್ನಾಲೋಜಿಕಲ್ ಮಾಡರ್ನಿಟಿ) ವಿಧಾನ ವಿಕೇಂದ್ರೀಕರಣವನ್ನು ತುಂಬಾ ಸೀಮಿತ ನೆಲೆಯಲ್ಲಿ ನಿರ್ವಚಿಸಿಕೊಳ್ಳುವುದನ್ನು ನೋಡಿದ್ದೇವೆ. ಸಮಾಜದ ಎಲ್ಲಾ ವರ್ಗಗಳಿಂದ ಪ್ರತಿನಿಧಿಗಳು ಆಯ್ಕೆಯಾದ ಕೂಡಲೇ ವಿಕೇಂದ್ರೀಕರಣ ನಡೆದಿದೆ ಎನ್ನುವ ತೀರ್ಮಾನಕ್ಕೆ ಈ ವಿಧಾನದಲ್ಲಿ ಬರಲಾಗುತ್ತದೆ. ಆದರೆ ಈ ತೀರ್ಮಾನ ಎಷ್ಟು ಸರಿ? ಇದು ಅರ್ಥವಾಗಬೇಕಾದರೆ ಈ ತೀರ್ಮಾನಕ್ಕೆ ಬರಲು ಅನುಸರಿಸಿದ ವಿಧಾನದ ಲೋಪದೋಷಗಳನ್ನು ಗುರುತಿಸಬೇಕಾಗಿದೆ. ಮುಖ್ಯವಾಹಿನಿಯ ಈ ವಿಧಾನ ಅಧ್ಯಯನಕ್ಕೆ ಒಳಗಾಗುವ ಬೆಳವಣಿಗೆ/ಅಂಶ/ವಿಷಯವನ್ನು ಅದು ಇರುವ ಒಟ್ಟು ಪರಿಸರದಿಂದ ಬೇರ್ಪಡಿಸಿ ಪರೀಕ್ಷಿಸಲು ಪ್ರಯತ್ನಿಸುತ್ತದೆ. ಗ್ರಾಮ ಪಂಚಾಯತ್‌ರಾಜಕೀಯವನ್ನು ಗ್ರಾಮದಲ್ಲಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರದಿಂದ ಬೇರ್ಪಡಿಸಿ ವಿಶ್ಲೇಷಿಸಲಾಗುತ್ತದೆ. ಸಂಸ್ಥೆಗಳ ಇರುವಿಕೆ, ಅವುಗಳಲ್ಲಿ ಸಮಾಜದ ವಿವಿಧ ವರ್ಗಗಳ ಪ್ರತಿನಿಧೀಕರಣ, ಅವರ ಕಾರ್ಯವೈಖರಿ ಇತ್ಯಾದಿಗಳಿಂದ ವಿಕೇಂದ್ರೀಕರಣವನ್ನು ಗುರುತಿಸಲಾಗುತ್ತದೆ. ಒಂದು ವೇಳೆ ಪ್ರತಿನಿಧಿಗಳು ಬಯಸಿದ ಮಟ್ಟದಲ್ಲಿ ಕಾರ್ಯನಿರ್ವಹಿಸಲು ವಿಫಲವಾದರೆ ಅದನ್ನು (ವಿಫಲತೆಯನ್ನು) ಅವರ ಅರಿವು ಮತ್ತು ಭಾಗವಹಿಸುವಿಕೆಗೆ ಸೀಮಿತಗೊಂಡಂತೆ ಚರ್ಚಿಸಲಾಗುತ್ತದೆ.

ಅರಿವು ಮತ್ತು ಭಾಗವಹಿಸುವಿಕೆ ಪ್ರತಿನಿಧಿಗಳ ಕಾರ್ಯನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬ ಗ್ರಹಿಕೆ ಎರಡು ವಿಧದ ತೀರ್ಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಒಂದು, ಸಂಸ್ಥೆಗಳ ಇರುವಿಕೆಯೇ ಪ್ರಧಾನ. ಅದು ಕಾರ್ಯ ರೂಪಕ್ಕೆ ಬರಬೇಕಾದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರ ನಗಣ್ಯವಾಗುತ್ತವೆ. ಎರಡು, ಕೊಡಮಾಡಿದ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸಾಮಾಜಿಕ ಪರಿವರ್ತನೆ, ಇಲ್ಲಿ ವಿಕೇಂದ್ರೀಕರಣ, ಗ್ಯಾರಂಟಿ. ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ದೊಡ್ಡ ತೊಡಕು ಸದಸ್ಯರ ಅರಿವು ಮತ್ತು ಭಾಗವಹಿಸುವಿಕೆಯ ಕೊರತೆ ಎನ್ನುವುದು ಎರಡನೆಯ ಅಂಶದ ಮುಂದುವರಿಕೆಯೇ ಆಗಿದೆ. ಇದಕ್ಕೆ ಪರಿಹಾರ ತರಬೇತಿ. ಪಂಚಾಯತ್ ಸಂಸ್ಥೆಗಳ ಕಾರ್ಯವಿಧಾನ, ವಿಧಿ ವಿಧಾನಗಳು, ಅಧ್ಯಕ್ಷರು ಮತ್ತು ಇತರ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳು ಇವೇ ಮುಂತಾದ ವಿಚಾರಗಳಲ್ಲಿ ತರಬೇತಿ ನೀಡಿದರೆ ಮೇಲಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆಯಿದೆ. ಸದಸ್ಯರ ಸಾಮಾಜಿಕ ಹಿನ್ನೆಲೆ, ಅವರು ಬದುಕುವ ಪರಿಸರ, ಅಲ್ಲಿನ ಮೌಲ್ಯಗಳು, ನಂಬಿಕೆಗಳು ಇವು ಯಾವುವು ಕೂಡ ಗಣನೆಗೆ ಬರುವುದೇ ಇಲ್ಲ.

ಗ್ರಾಮ ಪಂಚಾಯತ್‌ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಿದ ಕೂಡಲೇ ಗ್ರಾಮೀಣ ಜನರ ಬದುಕಿನಲ್ಲಿ ಮೂಲಭೂತ ಸುಧಾರಣೆಯಾಗುತ್ತಿದ್ದರೆ ೧೯೪೭ರ ನಂತರ ಭಾರತ ಸರಕಾರ ಅನುಸರಿಸಿದ ಆಧುನೀಕರಣ ಪ್ರಕ್ರಿಯೆಯಿಂದ ಇಡೀ ದೇಶದ ಚಿತ್ರಣವೇ ಬದಲಾಗಬೇಕಿತ್ತು. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ನಡೆದ ಪ್ರಯೋಗಗಳು ಒಂದೇ ಎರಡೇ. ಚಾರಿತ್ರಿಕವಾಗಿ ರೂಪುಗೊಂಡ ರಾಜಕೀಯ ಪ್ರಕ್ರಿಯೆಯನ್ನು ಮೂಲೆಗೊತ್ತಿ ಪ್ರಜಾಪ್ರಭುತ್ವ ವ್ಯವಸ್ಥೇಯನ್ನು ಅಳವಡಿಸಿಕೊಳ್ಳಲಾಗಿದೆ. ಇಷ್ಟಾದರೂ ಸಮಾಜದಲ್ಲಿನ ಅಧಿಕಾರದ ಹಂಚಿಕೆಯಲ್ಲಿ ಮೂಲಭೂತ ಪರಿವರ್ತನೆಯಾಗಿದೆ ಎನ್ನುವಂತಿಲ್ಲ. ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಬಹುದು. ಅವುಗಳಲ್ಲಿ ಒಂದು ಆಧುನೀಕರಣ ಪ್ರಕ್ರಿಯೆ ಸಾಂಪ್ರದಾಯಿಕ ಸಮಾಜದ ಸಾಂಸ್ಕೃತಿಕ ಚೌಕಟ್ಟಿನೊಳಗೆ ನಡೆದಿರುವುದು. ಇದೇ ವಿವರಣೆ ಗ್ರಾಮಪಂಚಾಯತ್‌ಕಾರ್ಯನಿರ್ವಹಣೆಗೂ ಅನ್ವಯಿಸುತ್ತದೆ.

ಮೇಲ್ನೋಟಕ್ಕೆ ಪಿ.ಕೆ. ಹಳ್ಳಿಯಲ್ಲಿ, ಕೆಳಜಾತಿಯವರ ಪ್ರತಿನಿಧೀಕರಣದ ದೃಷ್ಟಿಯಿಂದ ಅಥವಾ ಮಹಿಳಾ ಸದಸ್ಯರ ಸಂಖ್ಯೆಯ ದೃಷ್ಟಿಯಿಂದ, ವಿಕೇಂದ್ರೀಕರಣ ಆಗಿದೆ, ಒಟ್ಟು ಒಂಬತ್ತು ಪ್ರತಿನಿಧಿಗಳಲ್ಲಿ ಒಬ್ಬ ಲಿಂಗಾಯತರನ್ನು ಬಿಟ್ಟು ಉಳಿದವರೆಲ್ಲರೂ ಕೆಳ ಜಾತಿಯವರು ಮತ್ತು ಆರ್ಥಿಕವಾಗಿಯೂ ಹಿಂದುಳಿದವರು. ಅವರುಗಳಲ್ಲಿ ಆರು ಜನ ಕೃಷಿಯೇತರ ಚಟುವಟಿಕೆಗಳ ಹಿನ್ನೆಲೆಯಿಂದ ಬಂದವರು. ಮಹಿಳಾ ಸದಸ್ಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿತ್ತು – ಒಟ್ಟು ಒಂಬತ್ತು ಸದಸ್ಯರಲ್ಲಿ ಐವರು ಮಹಿಳಾ ಸದಸ್ಯರು. ಪರಿಶಿಷ್ಟ ಜಾತಿಗೆ ಸೇರಿದವರು ಅಧ್ಯಕ್ಷರು. ಈ ಎಲ್ಲಾ ಅಂಶಗಳ ದೃಷ್ಟಿಯಿಂದ ವಿಕೇಂದ್ರೀಕರಣ ನಡೆದಿದೆ ಎನ್ನುವ ತೀರ್ಮಾನಕ್ಕೆ ಬರಲೇಬೇಕು. ಈ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಮೇಲಿನ ಅಂಶಗಳ ಜತೆ ಇತರ ಕೆಲವು ವಿಚಾರಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಅವುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರಗಳೆಂದರೆ ಪಂಚಾಯತ್‌ಸಂಸ್ಥೆಗಳ ಪರಿಣಾಮಕಾರಿ ಬಳಕೆ ಮತ್ತು ಕೆಳವರ್ಗದ ಜನರ ಸಶಕ್ತೀಕರಣ. ಇದಕ್ಕೆ ಮುನ್ನ ಸದಸ್ಯರ ಆಯ್ಕೆ ಕುರಿತು ಕೆಲವು ಅಂಶಗಳನ್ನು ಹೇಳಬೇಕಾಗಿದೆ. ಇದು ಹಿಂದಿನ ಪುಟಗಳಲ್ಲಿ ವಿವರಿಸಿರುವುದರ ಮುದುವರಿಕೆಯೇ ಆಗಿದೆ. ಸದಸ್ಯರುಗಳ ಆಯ್ಕೆಯಲ್ಲಿ ಜಾತಿ ನಾಯಕರುಗಳ ಪಾತ್ರವಿದೆ ಎಂದು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಜಾತಿ ನಾಯಕರುಗಳು ಊರ ಪ್ರಮುಖರ ಪಟ್ಟಿಯಲ್ಲಿದ್ದಾರೆ. ಆದರೆ ಪ್ರಮುಖರ ಸಾಲಲ್ಲಿ ಬರಬೇಕಾದರೆ ಜಾತಿ ನಾಯಕನಾಗಬೇಕೆಂದು ಕಡ್ಡಾಯವಿಲ್ಲ. ಇದೊಂದು ಅಧಿಕೃತ ಒಕ್ಕೂಟವಲ್ಲ. ಹೀಗಾಗಿ ಎಲ್ಲಾ ಜಾತಿಯ ನಾಯಕರುಗಳಿಗೆ ಇದರಲ್ಲಿ ಪ್ರತಿನಿಧೀಕರಣ ಇದೆ ಎನ್ನುವಂತಿಲ್ಲ. ಊರ ಪ್ರಮುಖರ ಪಟ್ಟಿಯಲ್ಲಿ ಸೇರಲು ಅರ್ಹತೆ ಹಳ್ಳಿಯ ಸಾಮಾಜಿಕ ಪರಿಸರದಲ್ಲಿ ಒಬ್ಬ ವ್ಯಕ್ತಿಗಿರುವ ಸ್ಥಾನಮಾನ. ಈ ಸ್ಥಾನಮಾನ ಹೆಚ್ಚು ಕಡಿಮೆ ಸಾಂಪ್ರದಾಯಿಕ ಮಾನದಂಡಗಳಿಂದ ನಿರ್ಧರಿತ, ಜತೆಗೆ ವಂಶ ಪಾರಂಪರ್ಯವಾಗಿ ಮುಂದುವರಿಯುತ್ತದೆ. ಪ್ರಮುಖರ ಪಟ್ಟಿಯಲ್ಲಿ ಲಿಂಗಾಯಿತ ಸದಸ್ಯರ ಸಂಖ್ಯೆಯೇ ಹೆಚ್ಚು. ನಂತರದ ಸ್ಥಾನದಲ್ಲಿ ಕುರುಬರು ಮತ್ತು ಇತರ ಜಾತಿಯವರು ಬರುತ್ತಾರೆ. ಹರಿಜನ ೧೨೬ ಕುಟುಂಬಗಳಿದ್ದರೂ ಅವರಿಂದ ಯಾರು ಪ್ರಮುಖರ ಸಾಲಿನಲ್ಲಿ ಬರುವುದಿಲ್ಲ. ಪಂಚಾಯತ್‌ಸದಸ್ಯರ ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖರು ಸಾಕಷ್ಟು ಪ್ರಭಾವ ಬೀರುತ್ತಾರೆ. ಇವರು ಪ್ರಭಾವ ಬೀರಲು ಅನುಕೂಲವಾಗುವ ವಾತಾವರಣ ಸೃಷ್ಟಿಯಾಗುವುದು ಸದಸ್ಯರ ಅವಿರೋಧ ಆಯ್ಕೆಯಿಂದ.

ಯಾವುದೇ ಘರ್ಷಣೆ ಇಲ್ಲದ ಹಳ್ಳಿಯ ರಾಜಕೀಯ ನಾಯಕತ್ವದ ಪ್ರಶ್ನೆ ನಿರ್ಧರಿಸಲ್ಪಡುತ್ತದೆ ಎನ್ನುವ ಕಾರಣಕ್ಕಾಗಿ ಅವಿರೋಧ ಆಯ್ಕೆ ತುಂಬಾ ಆದರ್ಶಮಯವಾಗಿ ಕಾಣಬಹುದು. ಆದರೆ ನಿಜವಾಗಿಯೂ ಇದೊಂದು ಆದರ್ಶ ಸ್ಥಿತಿಯೇ? ಈ ಊರಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಇದೊಂದು ಆದರ್ಶ ಸ್ಥಿತಿ ಅಲ್ಲ. ಯಾಕೆಂದರೆ ಘರ್ಷಣೆ ಇಲ್ಲದೆ ರಾಜಕೀಯ ಅಧಿಕಾರ ವಿತರಣೆಯ ಪ್ರಶ್ನೆ ನಿರ್ಧರಿಸಲ್ಪಡುವುದರಿಂದಲೇ ಪಾರಂಪರಿಕ ಅಧಿಕಾರ ಕೇಂದ್ರಗಳ ಪಲ್ಲಟ ಸಾಧ್ಯವಾಗುತ್ತಿಲ್ಲ. ಹೆಸರಿಗೆ ಹೊಸ ನಾಯಕರು ಬರುತ್ತಾರೆ. ಈ ನಾಯಕರುಗಳು ಈಗಾಗಲೇ ಪರಿಗಣಿಸಲ್ಪಟ್ಟ ಯಜಮಾನಿಕೆ ಸ್ಥಾನಗಳನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ. ಇವರುಗಳು ಅಂತಹ ಯಜಮಾನಿಕೆ ಸ್ಥಾನಗಳನ್ನು ಗೌರವಿಸಿಯೇ ಮುಂದುವರಿಯಬೇಕು. ಉದಾಹರಣೆಗೆ ೧೯೮೭ರಲ್ಲಿ ಮಲ್ಲಪ್ಪನವರು ಮಂಡಲ ಪಂಚಾಯತ್‌ಅಧ್ಯಕ್ಷರಾದಾಗ ಪಂಚಾಯತ್ ಕಛೇರಿಯನ್ನು ೧೯೫೫ರಲ್ಲಿ ಮೇಟಿ ವೀರಣ್ಣನವರು ಕಟ್ಟಿಸಿದ ಕಟ್ಟಡದಿಂದ ಗ್ರಾಮ ಛಾವಡಿ ಕಟ್ಟಡಕ್ಕೆ ಸ್ಥಳಾಂತರಿಸಿದರು. ಗ್ರಾಮ ಛಾವಡಿ ಒಂದು ವಿಧದಲ್ಲಿ ಊರಿನ ಮಧ್ಯದಲ್ಲಿ, ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲೇ ಇದೆ. ಆದಾಗ್ಯೂ ಮೇಟಿಯವರು ಅದನ್ನು ವಿರೋಧಿಸಿದರು. ಎರಡು ವರ್ಷಗಳ ನಂತರ ಪುನಹ ಹಿಂದಿನ ಕಟ್ಟಡಕ್ಕೆ ಒಯ್ಯಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರು ಮೇಲು ಜಾತಿಯವರು ಆಗಿದ್ದಾಗ ಅವರುಗಳು ಊರಿನ ಪ್ರಮುಖರ ಪಟ್ಟಿಯಲ್ಲಿ ಸಹಜವಾಗಿಯೇ ಇರುತ್ತಿದ್ದರು. ಪ್ರಮುಖರ ಸ್ಥಾನದಿಂದ ಊರ ಸಾಂಸ್ಕೃತಿಕ ಆಚರಣೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಧ್ಯಕ್ಷರು ಪ್ರಮುಖ ಪಾತ್ರವಹಿಸುತ್ತಿದ್ದರು. ಯಾವಾಗ ಕೆಳಜಾತಿಯವರು ಪಂಚಾಯತ್ ಅಧ್ಯಕ್ಷರಾಗಲು ಆರಂಭವಾಯಿತೋ ಅಂದಿನಿಂದ ಊರ ಪ್ರಮುಖರ ಪಟ್ಟಿಯಲ್ಲಿ ಪಂಚಾಯತ್ ಅಧ್ಯಕ್ಷರು ಇರುತ್ತಾರೆ ಎನ್ನುವ ಖಾತ್ರಿ ಇಲ್ಲ. ಉದಾಹರಣೆಗೆ ಕಳೆದ ಬಾರಿಯ ಪಂಚಾಯತ್‌ಅಧ್ಯಕ್ಷ ವಡ್ಡರ ತಿಮ್ಮಪ್ಪನವರು ಪ್ರಮುಖರ ಪಟ್ಟಿಯಲ್ಲಿ ಇರಲಿಲ್ಲ.

ಪ್ರಮುಖರ ಯಜಮಾನಿಕೆಯನ್ನು ಮತ್ತೊಂದು ಘಟನೆಯಿಂದಲೂ ಅರ್ಥಮಾಡಿ ಕೊಳ್ಳಬಹುದು. ೧೯೮೭ರಲ್ಲಿ ಮಲ್ಲಪ್ಪನವರ ಅವಧಿ ಮುಗಿದ ನಂತರ ಕರೀಂಖಾನ್ ಅಧ್ಯಕ್ಷನಾಗಬೇಕೆಂದು ಪ್ರಮುಖರ ಸಭೆಯಲ್ಲಿ ನಿರ್ಧಾರವಾಗಿತ್ತು. ಮಧ್ಯದಲ್ಲಿ ಹಲವಾರು ಘಟನೆಗಳು ನಡೆದು ಪ್ರಮುಖರು ತಮ್ಮ ಹಿಂದಿನ ನಿರ್ಧಾರವನ್ನು ಪುನರುಚ್ಚರಿಸಲಿಲ್ಲ. ಕರೀಂಖಾನ್ ಆಗಬಾರದೆಂದು ಅವರು ತೀಮಾನಿಸಿರಲಿಲ್ಲ. ಆದರೆ ಮಲಿಯಪ್ಪನವರು ಪ್ರಮುಖರ ಆ ಡೋಲಾಯಮಾನ ಸ್ಥಿತಿಯ ಲಾಭ ಪಡೆದು ನೆರೆಯ ಬಸಪ್ಪನವರಿಗೆ ಬೆಂಬಲ ನೀಡಿದರು. ಇದರಿಂದಾಗಿ ಸ್ಥಳೀಯ ಅಭ್ಯರ್ಥಿ ಕರೀಂಖಾನ್ ಸೋಲಬೇಕಾಯಿತು. ಇದರಿಂದ ಸಿಟ್ಟಿಗೆದ್ದ ಊರ ಪ್ರಮುಖರಲ್ಲಿ ಕೆಲವರು ಮಲ್ಲಪ್ಪನವರನ್ನು ಪಂಚಾಯತ್ ಕಛೇರಿಯಲ್ಲಿ ಪೊಲೀಸರ ಎದುರೇ ಥಳಿಸಿದರು. ಥಳಿಸಿದವರ ಮೇಲೆ ಕೇಸು ದಾಖಲಿಸುವ ಬದಲು ಪೊಲೀಸರು ಮಲ್ಲಪ್ಪನವರನ್ನು ಹೊಸಪೇಟೆಗೆ ಸಾಗಿಸಿದರು. ಅಂದರೆ ಸಾಮಾಜಿಕ ಪರಿವರ್ತನೆಯನ್ನು ಕಾರ್ಯ ರೂಪಕ್ಕೆ ತರಬೇಕಾದ ಅಧಿಕಾರಿಗಳೇ ಅಸಹಾಯಕರಾಗುವಷ್ಟು ಸಾಂಪ್ರದಾಯಿಕ ಶಕ್ತಿಗಳು ಬಲವಾಗಿವೆ. ಇದೇ ರೀತಿಯ ಅಸಹಾಯಕತೆಯನ್ನು ಹರಿಜರನ್ನು ಹೊರಗಿಟ್ಟು ಗುಡಿಯಲ್ಲಿ ಗ್ರಾಮ ಸಭೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಪ್ರದರ್ಶಿಸಿದ್ದಾರೆ.

ಇನ್ನು ಪಂಚಾಯತ್ ವ್ಯವಸ್ಥೆಯ ಬಳಕೆ ಮತ್ತು ಕೆಳವರ್ಗದ ಸಶಕ್ತೀಕರಣದ ಅಂಶಗಳನ್ನು ಪರಿಶೀಲಿಸುವ. ಊರಲ್ಲಿ ಕೃಷಿ ಇಂದು ಮುಖ್ಯ ಆದಾಯ ಮೂಲವಲ್ಲ. ಕೃಷಿಯಲ್ಲಿ ತೊಡಗಿಸಿಕೊಂಡವರ ಪ್ರಮಾಣ ಶೇಕಡಾ ೨೪ಕ್ಕೆ ಇಳಿದಿದೆ. ಗಣಿ/ವ್ಯಾಗನ್ ಕಾರ್ಮಿಕತ್ವ ಮತ್ತು ಇತರ ಕೃಷಿಯೇತರ ಚಟುವಟಿಕೆಗಳು ಆದಾಯದ ಬದಲಿ ಮೂಲಗಳಾಗಿವೆ. ಶೇಕಡಾ ೭೦ ಕ್ಕಿಂತಲೂ ಹೆಚ್ಚು ಜನ ಕೃಷಿಯೇತರ ಕೆಲಸಗಳಲ್ಲಿ ಇದ್ದಾರೆ. ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಪ್ರಮುಖ ಸಮಸ್ಯೆ ಆರೋಗ್ಯ, ವಸತಿ, ಶಿಕ್ಷಣ, ನೀರು ಮತ್ತು ಇತರ ಮೂಲಭೂತ ಸೌಲಭ್ಯಗಳು ಸರಿಯಾಗಿ ದೊರೆಯದಿರುವುದು. ಗಣಿ/ವ್ಯಾಗನ್ ಕಾರ್ಮಿಕರಲ್ಲಿ ಬಹುತೇಕ ಮಂದಿಗೆ ಕ್ಷಯ ಮತ್ತು ಶ್ವಾಶಕೋಶದ ರೋಗ ಸಾಮಾನ್ಯ. ಅವರಿಗೆ ಪ್ರತ್ಯೇಕ ಆಸ್ಪತ್ರೆಯ ವ್ಯವಸ್ಥೆ ಮಾಡುವುದು ಪಂಚಾಯತ್‌ನ ಶಕ್ತಿಗೆ ಮೀರಿದ್ದು. ಆದರೆ ಸ್ಥಳೀಯ ಆಸ್ಪತ್ರೆಗೆ ನೇಮಕವಾದ ಸರಕಾರಿ ವೈದ್ಯರು ತಿಂಗಳುಗಟ್ಟಲೆ ಬರದಿದ್ದರೆ ಅವರ ವಿರುದ್ಧ ಮೇಲಾಧಿಕಾರಿಗಳಿಗೆ ದೂರ ನೀಡುವಷ್ಟು ಶ್ರಮ ವಹಿಸಿಲ್ಲ ಈ ಪಂಚಾಯತ್. ನೀವು ಯಾಕೆ ಸರಕಾರಿ ಡಾಕ್ಟರ್‌ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದರೆ ಅವರೆಲ್ಲಿ ನಮ್ಮ ಮಾತು ಕೇಳುತ್ತಾರೆ ಸಾರ್ ಅನ್ನುತ್ತಾರೆ ಅಧ್ಯಕ್ಷರು. ವಸತಿ ಮತ್ತೊಂದು ಸಮಸ್ಯೆ. ನಿರ್ವಸತಿಗರು ಅದರ ಪರಿಹಾರಕ್ಕಾಗಿ ಕಾದು ಕಾದು ಕೊನೆಗೆ ರೈತ ಸಂಘದ ಹೆಸರಿನಲ್ಲಿ ತಾವೇ ಸ್ವತಃ ಆಶ್ರಯ ಸೈಟುಗಳನ್ನು ವಿತರಣೆ ಮಾಡಲು ಆರಂಭಿಸಿದರು. ಆವಾಗ ಪಂಚಾಯತ್‌ಎಚ್ಚೆತ್ತು ಅನಧಿಕೃತ ವಿತರಣೆಯನ್ನು ಅಧಿಕೃತಗೊಳಿಸಿತು. ಆಶ್ರಯ ಸೈಟುಗಳಲ್ಲಿ ನಿರ್ಮಾಣವಾಗುವ ಮನೆಗಳ ಸ್ಥಿತಿ, ಅದಕ್ಕಾಗಿ ಜನರು ಪಡಬೇಕಾದ ಪಾಡು, ಮಧ್ಯವರ್ತಿಗಳ ಹಾವಳಿ ಇತ್ಯಾದಿಗಳನ್ನು ಪಂಚಾಯತ್ ಸದಸ್ಯೆ ಸಂಕ್ಲಮ್ಮನ ಘಟನೆಯಿಂದ ಅರ್ಥಮಾಡಿಕೊಳ್ಳಬಹುದು. ೧೯೭೭ರಿಂದ ಡಾಲ್ಮಿಯಾ ಕಂಪೆನಿಯ ಕಾರ್ಮಿಕರು ಹಂತ ಹಂತವಾಗಿ ತಮ್ಮ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ೧೯೮೮ರಿಂದ ಕಾರ್ಮಿಕರ ಕಾಲೋನಿಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಕಂಪೆನಿ ನಿಲ್ಲಿಸಿದೆ. ಕಾರ್ಮಿಕರು ವಾಸಿಸುವ ಮನೆಗಳು ಪಂಚಾಯತ್‌ವ್ಯಾಪ್ತಿಗೆ ಬರುತ್ತಿವೆ. ಕಂಪೆನಿ ಈ ಮನೆಗಳ ತೆರಿಗೆಯನ್ನು ಪಂಚಾಯತ್‌ಗೆ ಸಲ್ಲಿಸುತ್ತಿದೆ. ಪಂಚಾಯತ್‌ಸದಸ್ಯರಲ್ಲಿ ಕೆಲವರು ನೇರವಾಗಿ ಮತ್ತೆ ಕೆಲವು ಪರೋಕ್ಷವಾಗಿ ಗಣಿ/ವ್ಯಾಗನ್ ಕಾರ್ಮಿಕರೊಂದಿಗೆ ಸಂಬಂಧವುಳ್ಳವರು. ಇಷ್ಟಾಗ್ಯೂ ಕಾಲೋನಿಯಲ್ಲಿರುವ ಕಾರ್ಮಿಕರಿಗೆ ವಿದ್ಯುತ್‌ಅಥವಾ ನೀರು ಪೂರೈಕೆ ಮಾಡುವ ಕ್ರಮ ಪಂಚಾಯತ್‌೧೯೯೯ರವರೆಗೂ ಕೈಗೊಂಡಿಲ್ಲ. ಶಿಕ್ಷಣದ ಸ್ಥಿತಿಯೂ ಇದೆ. ಪ್ರೌಢ ಶಾಲೆ ಇಲ್ಲ. ಅನುಕೂಲಸ್ಥರು ತಮ್ಮ ಮಕ್ಕಳನ್ನು ಹೊಸಪೇಟೆಗೋ ಅಥವಾ ಇತರ ಸ್ಥಳಗಳಿಗೋ ಕಳುಹಿಸುತ್ತಾರೆ. ಇತರರು ಊರಲ್ಲೇ ಪ್ರೌಢ ಶಿಕ್ಷಣಕ್ಕೆ ಪ್ರಯತ್ನಿಸಬೇಕು. ಆದರೆ ಪಂಚಾಯತ್‌ಕಡೆಯಿಂದ ಪ್ರೌಢ ಶಾಲಾ ಶಿಕ್ಷಣದ ಸ್ಥಿತಿ ಸುಧಾರಣೆಗಳಿಗೆ ಯಾವುದೇ ಕ್ರಮಗಳಿಲ್ಲ.

ವಿಕೇಂದ್ರೀಕರಣವನ್ನು ಯಾಂತ್ರಿಕವಾಗಿ ಅರ್ಥೈಸಿಕೊಳ್ಳುವ ಪರಿಪಾಠ ಮುಖ್ಯವಾಹಿನಿಯ ವಿಧಾನದಲ್ಲಿದೆ. ಇದರಿಂದಾಗಿ ಆಡಳಿತದ ಸ್ಟ್ರಕ್ಚರ್‌ಗಳು, ಅವುಗಳಲ್ಲಿ ಬಾಗವಹಿಸುವವರು, ಅವರ ಅರಿವು ಇತ್ಯಾದಿಗಳು ಮುಖ್ಯವಾಗುತ್ತವೆ. ಅವುಗಳು ಕಾರ್ಯನಿರ್ವಹಿಸುವ ಸಾಮಾಜಿಕ ಪರಿಸರ, ಜನರ ಬದುಕು, ನಂಬಿಕೆ, ಮೌಲ್ಯ ಇತ್ಯಾದಿಗಳು ಇಲ್ಲಿ ನಗಣ್ಯವಾಗುತ್ತವೆ. ಒಂದು ವೇಳೆ ಈ ಸ್ಟ್ರಕ್ಚರ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಅದನ್ನು ಸದಸ್ಯರ ಅರಿವು ಮತ್ತು ಭಾಗವಹಿಸುವಿಕೆಗೆ ಆರೋಪಿಸಿ ಅವುಗಳ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ. ಸದಸ್ಯರಿಗೆ ತರಬೇತಿ ನೀಡುವುದು ಅವರ ಅರಿವು ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಉಪಯುಕ್ತ ಎಂದು ಪರಿಭಾವಿಸಲಾಗಿದೆ. ಇವೆಲ್ಲಾ ಸರಿಯಲ್ಲ ಎಂದು ಇಲ್ಲಿ ವಾದಿಸುತ್ತಿಲ್ಲ. ವಿಕೇಂದ್ರೀಕರಣವನ್ನು ಅರ್ಥಮಾಡಿಕೊಳ್ಳಲು ಇಷ್ಟು ಸಾಕಾಗುವುದಿಲ್ಲ. ಇದರ ಜತೆಗೆ ಇತರ ಅಂಶಗಳನ್ನು ಪರಿಗಣಿಸಬೇಕೆಂಬುದೇ ಇಲ್ಲಿನ ವಾದ. ಮುಖ್ಯವಾಗಿ ಪಂಚಾಯತ್‌ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕಾದ ಒಟ್ಟು ಪರಿಸರವನ್ನು ಗಣನೆಗೆ ತೆಗೆದುಕೊಳ್ಳುವುದು ವಿಕೇಂದ್ರೀಕರಣವನ್ನು ಅರ್ಥಮಾಡಿಕೊಳ್ಳಲು ತುಂಬಾ ಅವಶ್ಯ. ಮುಂದಿನ ಅಧ್ಯಾಯದಲ್ಲಿ ಹಳ್ಳಿಯ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರ ಹಾಗೂ ವಿಕೇಂದ್ರೀಕರಣದ ಸಂಬಂಧವನ್ನು ವಿಶ್ಲೇಷಿಸಲಾಗಿದೆ.

 

[1]ಭಾಷೆ ಮತ್ತು ಕಸುಬಿನ ಪ್ರಶ್ನೆ ಒಂದು ಕಗ್ಗಂಟಾಗಲು ಆಧುನಿಕ ರಾಷ್ಟ್ರೀಯತೆಯ ಕಲ್ಪನೆಯೂ ಒಂದು ಕಾರಣವಾಗಿರಬಹುದು. ಭಾಷೆ ಮತ್ತು ಅಭಿವೃದ್ಧಿಯ ಸಂಬಂಧ ವಿಶ್ಲೇಷಿಸುವವರಿಗೆ ಬಹು ಭಾಷಿಕತೆ ಆರ್ಥಿಕ ಹಿನ್ನಡೆಯನ್ನು ತೋರಿಸುತ್ತದೆ. ಯಾಕೆಂದರೆ ಆರ್ಥಿಕ ಅಭಿವೃದ್ಧಿ ಮತ್ತು ಏಕ ಭಾಷಿಕತೆ ಜತೆ ಜತೆಗಿದೆ. ಹೊಸ ರಾಷ್ಟ್ರಗಳೂ ತಮ್ಮ ರಾಷ್ಟ್ರೀಯತೆಯನ್ನು ಶ್ರೀಮಂತ ರಾಷ್ಟ್ರಗಳ ಮಾದರಿಯಲ್ಲೇ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಒಂದೇ ಭಾಷೆ, ಒಂದೇ ಧರ್ಮ, ಹೀಗೆ ಎಲ್ಲವೂ ಒಂದೇ ಆಗುವುದೇ ಅಭಿವೃದ್ಧಿ ಆಗಿದೆ. ಅಂದರೆ ನಮ್ಮದಲ್ಲದ ಇನ್ಯಾವುದೋ ಭಾಷೆಯಲ್ಲಿ ಪಾಂಡಿತ್ಯ ನಮ್ಮ ಅಭಿವೃದ್ಧಿಗೆ ಅಗತ್ಯ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಭಿವೃದ್ಧಿ ಮತ್ತು ಬಹುಭಾಷಿಕತೆ ಅಥವಾ ವಿವಿಧತೆ ಜತೆಯಾಗಿ ಇರುವುದಿಲ್ಲ. ಹಠತೊಟ್ಟು ಪ್ರತ್ಯೇಕತೆ ಬಯಸಿದರೆ ಅಭಿವೃದ್ಧಿ ಕೊಡಮಾಡುವ ಕೆಲವು ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ವಿವಿಧತೆ ಮತ್ತು ಅದರ ಪರಿಗಣನೆ ಕುರಿತು ಸಾಕಷ್ಟು ಚರ್ಚೆ ನಡೆದಿದೆ; ಬೇಕಾದಷ್ಟು ಪುಸ್ತಕಗಳಿವೆ. ಕೆಲವು ಪುಸ್ತಕಗಳ ವಿವರಗಳನ್ನು ಈ ಅಧ್ಯಾಯದ ಎರಡನೇ ಪುಟದಲ್ಲಿ ಕೊಟ್ಟಿದ್ದೇನೆ.