ಸಮಾಜದ ವಿವಿಧ ವರ್ಗಗಳಿಗೆ ಇರುವ ಪ್ರತಿನಿಧೀಕರಣವನ್ನು ಪಂಚಾಯತ್ ಅಧಿನಿಯಮಗಳು ಸ್ಪಷ್ಟವಾಗಿ ಸೂಚಿಸಿವೆ. ಆ ಪ್ರಕಾರ ಇಲ್ಲದಿದ್ದರೆ ತಾಂತ್ರಿಕ ಲೋಪವಾಗುತ್ತದೆ. ಇದು ಮೇಲ್ನೋಟಕ್ಕೆ ಕಾಣುವ ಲೋಪವಾಗಿದೆ. ಇದನ್ನು ಯಾರೂ ಕೂಡ ಪ್ರಶ್ನಿಸಬಹುದು. ಆದುದರಿಂದ ಯಾವ ಪಂಚಾಯತಲ್ಲೂ ಈ ನಿಯಮಗಳನ್ನು ಮುರಿಯಲು ಪ್ರಯತ್ನಿಸುವುದಿಲ್ಲ. ಇದನ್ನೇ ಇಲ್ಲಿ ತಾಂತ್ರಿಕ ಪ್ರತಿನಿಧೀಕರಣ ಎಂದು ಗುರುತಿಸಿದ್ದು. ಇಲ್ಲಂತೂ ಹೆಚ್ಚು ಕಡಿಮೆ ಎಲ್ಲಾ ಸದಸ್ಯರು, ಒಬ್ಬ ಲಿಂಗಾಯತರನ್ನು ಬಿಟ್ಟು, ಕೆಳ ಜಾತಿ ಮತ್ತು ವರ್ಗಕ್ಕೆ ಸೇರಿದವರು. ಗ್ರಾಮಪಂಚಾಯತ್ ಸದಸ್ಯರಾಗಿ ಕೆಳಜಾತಿಯವರು ಆಯ್ಕೆಯಾಗಿದ್ದಾರೆ ಎಂದಾಕ್ಷಣ ಕೆಳಜಾತಿ/ವರ್ಗಗಳ ಸಶಕ್ತೀಕರಣ ನಡೆದಿದೆ ಎಂದು ತಿಳಿಯಬೇಕೇ? ವಿಕೇಂದ್ರೀಕರಣದ ಮೌಲ್ಯಮಾಪನಕ್ಕೆ ಆಯ್ಕೆಯಾದ ಸದಸ್ಯರು ಪಂಚಾಯತ್ ಸಂಸ್ಥೆಗಳನ್ನು ಬಳಸಿಕೊಂಡ ಕ್ರಮ ಅಥವಾ ನಡೆಸಿದ ಕಾರ್ಯಕ್ರಮಗಳ ಮೌಲ್ಯಮಾಪನವು ಅಗತ್ಯವಲ್ಲವೇ ಕೆಳಜಾತಿಯವರೇ ಮೆಜಾರಿಟಿಯಲ್ಲಿದ್ದು ಕೂಡಾ ಪಂಚಾಯತ್ ಸಂಸ್ಥೆಗಳು ಕೆಳಜಾತಿ/ವರ್ಗಗಳ ಆಸಕ್ತಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ನಡೆಸದಿದ್ದರೆ ವಿಕೇಂದ್ರೀಕರಣ ಕುರಿತು ಯಾವ ತೀರ್ಮಾನಕ್ಕೆ ಬರಬಹುದು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಭಾಗದಲ್ಲಿದೆ. ಇದಕ್ಕೆ ಮುನ್ನ ಮೇಲಿನ ಪ್ರಶ್ನೆಗಳಿಗೆ ಸಂಬಂಧಿಸಿದ ಕೆಲವು ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.

ಕೆಲವು ಸಂದೇಹಗಳು

ಒಂದು, ವಿಕೇಂದ್ರೀಕರಣದ ಉದ್ದೇಶ ಸಮಗ್ರ ಗ್ರಾಮೀಣಾಭಿವೃದ್ಧಿ, ಸಮಗ್ರತೆಯ ಕುರಿತು ಚರ್ಚಿಸುವಾಗ ಯಾವುದೇ ಒಂದು ವರ್ಗ ಅಥವಾ ಕೆಲವು ಜಾತಿಗೆ ಸೇರಿದವರ ಆಸಕ್ತಿಗೆ ಪೂರಕವಾದ ಕಾರ್ಯಕ್ರಮಗಳ ಕುರಿತು ಪರಿಭಾವಿಸುವುದು ಅಸಂಬದ್ಧ ಅನ್ನಿಸಬಹುದು. ಆದರೆ ಅಸಂಬದ್ಧತೆಯ ಪ್ರಶ್ನೆ ಬರುವುದೇ ಸಮಾನತೆಯನ್ನು ಮೆಕಾನಿಕಲ್ ಆಗಿ ಪರಿಭಾವಿಸುವುದರಿಂದ. ಹಲವಾರು ಭಾಷೆ, ಜಾತಿ, ಧರ್ಮ, ಸಂಸ್ಕೃತಿ ಇರುವಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಬೇಕೆನ್ನುವುದು ಸಮಾನತೆ ಆಗುವುದಿಲ್ಲ; ಅಸಮಾನತೆ ಆಗುತ್ತದೆ. ಬಹುಭಾಷಿಕ ಸಮಾಜದಲ್ಲಿ ಯಾವುದೋ ಒಂದು ಭಾಷೆಯಲ್ಲಿ ಶಿಕ್ಷಣ, ಆಡಳಿತ, ವ್ಯವಹಾರ ನಡೆದರೆ ಭಾಷಾ ಅಲ್ಪಸಂಖ್ಯಾತರ ಆಸಕ್ತಿ ಮೂಲೆ ಗುಂಪಾಗಬಹುದು. ಅದೇ ರೀತಿ ನಮ್ಮಲ್ಲಿ ಜಾತಿ ಕೇವಲ ಸಾಮಾಜಿಕ ಅಥವಾ ಸಾಂಸ್ಕೃತಿಕ ವಿಂಗಡನೆಯಲ್ಲ. ಅದು ಕಸುಬು ಮತ್ತು ಸಂಪನ್ಮೂಲ ಒಡೆತನದೊಂದಿಗೆ ತಕ್ಕಮಟ್ಟಿನ ಸಂಬಂಧ ಹೊಂದಿದೆ. ಇಲ್ಲಿ ಏಕರೂಪಿಯಾಗಿ ಆಧುನಿಕ ತಂತ್ರ ಆಧಾರಿತ ಕಸುಬುಗಳಿಗೆ ಮಹತ್ವ ನೀಡಬಾರದು. ನೀಡಿದರೆ ವಿವಿಧ ಸಾಂಪ್ರದಾಯಿಕ ಕಸುಬುಗಾರಿಕೆಯಲ್ಲಿ ತೊಡಗಿಸಿಕೊಂಡವರು ಬೀದಿ ಪಾಲಾಗಬೇಕಾಗುತ್ತದೆ. ಇಂತಹ ಪರಿಸರದಲ್ಲಿ ವಿವಿಧತೆಯ ಪರಿಗಣನೆ ಮತ್ತು ಅವುಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುವುದು ಅಗತ್ಯ.[1] ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಸಮಗ್ರತೆಯ ಚರ್ಚೆಯೇ ಆರಂಭ ಆಗಬೇಕಾಗಿರುವುದು ಹೆಚ್ಚು ಕಡಿಮೆ ಸಮಾತೆಯಿರುವ ಒಂದು ನೆಲೆಯಿಂದ. ಹಾಗಾಗಿ ಈಗಾಗಲೇ ಇರುವ ಅಸಮಾನತೆಯನ್ನು ಕಡಿಮೆ ಮಾಡಲು ನಡೆಸುವ ಎಲ್ಲಾ ಕಾರ್ಯಕ್ರಮಗಳನ್ನು ಸಮಗ್ರ ಗ್ರಾಮೀಣಾಭಿವೃದ್ಧಿಯ ವ್ಯಾಖ್ಯೆಯಲ್ಲಿ ನೋಡಬಹುದು.

ಎರಡು, ಈಗ ಕಾರ್ಯರೂಪದಲ್ಲಿ ಇರುವ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ನಿರ್ದಿಷ್ಟ ಜಾತಿ/ವರ್ಗದ ಆಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಷ್ಟು ಸ್ವಾತಂತ್ರ್ಯ ತಳಮಟ್ಟದ ಸಂಸ್ಥೆಗಳಿಗೆ ಇದೆಯೇ? ಈ ಪ್ರಶ್ನೆ ಯಾಕೆಂದರೆ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಪಂಚಾಯತ್ ರಾಜ್ ತಳಮಟ್ಟದ ಜನರ ಭಾಗವಹಿಸುವಿಕೆಗೆ ಅಷ್ಟೊಂದು ಮಹತ್ವ ಕೊಡುವುದು ಕಾಣುತ್ತಿಲ್ಲ. ಗ್ರಾಮ ಪಂಚಾಯತ್ ಸಂಸ್ಥೆಗಳು ನಡೆಸುವ ಬಹುತೇಕ ಕಾರ್ಯಕ್ರಮಗಳು ರಾಜ್ಯ ಮತ್ತು ಕೇಂದ್ರ ಸರಕಾರ ನಿರ್ಧಾರಿತ.[2] ಗ್ರಾಮ ಪಂಚಾಯತ್ ಕೆಲಸವೇನಿದ್ದರೂ ಆ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ಮಾತ್ರ. ತನ್ನದೇ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯರೂಪಕ್ಕೆ ತರುವಷ್ಟು ಬಲಯುತವಾಗಿಲ್ಲ ನಮ್ಮ ಪಂಚಾಯತ್‌ಗಳು. ಜತೆಗೆ ಗ್ರಾಮಪಂಚಾಯತ್ ಆದಾಯ ಮೂಲಗಳು ಕೂಡಾ ಸೀಮಿತವಾಗಿದೆ. ಬಹುತೇಕ ಗ್ರಾಮಪಂಚಾಯತ್‌ಗಳು ತಮ್ಮ ಆದಾಯವನ್ನು ಕೇಂದ್ರ/ರಾಜ್ಯದಿಂದ ಬರುವ ಅನುದಾನಕ್ಕೆ ಸೀಮಿತಗೊಳಿಸಿವೆ. ವಾರ್ಷಿಕ ಯೋಜನೆಗಳು ಕೇವಲ ನಾಮಕಾವಸ್ಥೆ. ಅವುಗಳು ಸ್ಥಳೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಆಗುತ್ತಿಲ್ಲ. ಅವುಗಳು ರಾಜ್ಯ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ತಯಾರಾಗಿ ಪಂಚಾಯತ್ ಮಟ್ಟದಲ್ಲಿ ಕಾರ್ಯಗತಗೊಳ್ಳುತ್ತವೆ. ಮೇಲಿನ ಸಮಸ್ಯೆಗಳನ್ನು ಹೆಚ್ಚು ಬಿಗಾಡಯಿಸಲೆಂಬಂತೆ ದಿನೇ ದಿನೇ ಅಧಿಕಾರಶಾಹಿಯ ಹಿಡಿತ ಬಿಗಿಯಾಗುತ್ತಿದೆ. ಹಿಂದೆ ಪಂಚಾಯತ್ ವ್ಯಾಪ್ತಿಗೆ ಬರುವ ಹಣದ ಬಳಕೆ ಅಧ್ಯಕ್ಷರು ಮತ್ತು ಸ್ಥಳೀಯ ಅಧಿಕಾರಗಳ ವ್ಯಾಪ್ತಿಯಲ್ಲಿತ್ತು. ಇದರಿಂದ ಹಣ ದುರುಪಯೋಗವಾಗುತ್ತದೆ ಎಂದು ಹೊಸ ಕಾನೂನು ಬಂದಿದೆ. ಅದರ ಪ್ರಕಾರ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿರುವ ಹಣದ ಬಳಕೆಗೆ ಜಿಲ್ಲಾ ಪಂಚಾಯತ್ ಅಥವಾ ತಾಲ್ಲೂಕು ಪಂಚಾಯತ್ ಅಧಿಕಾರಿಗಳ ಕೌಂಟರ್ ಸಹಿ ಮಾಡಿಸಿಕೊಳ್ಳಬೇಕಾಗಿದೆ. ಪಂಚಾಯತ್ ಸಂಗ್ರಹಿಸುವ ಮನೆ ತೆರಿಗೆಯನ್ನು ಸರಕಾರಿ ಖಜಾನೆಗೆ ಭರ್ತಿ ಮಾಡಿ ನಂತರ ಅಲ್ಲಿಂದ ಡ್ರಾ ಮಾಡಿ ಬಳಸಬೇಕಾಗಿದೆ. ಈ ಕ್ರಮಗಳೆಲ್ಲಾ ಪಂಚಾಯತ್ ಮಟ್ಟದಲ್ಲಿನ ಹಣದ ದುರುಪಯೋಗ ತಡೆಯಲು ರೂಪುಗೊಂಡಿದೆ. ಆದರೆ ಇವುಗಳಿಂದಾಗಿ ಹಣದ ಸರಿಯಾದ ಬಳಕೆಯಾಗುತಿತದೆ ಎಂದರೆ ತಪ್ಪಾಗಬಹುದು. ಅಧಿಕಾರಿಗಳ ಸಹಿಬೇಕೆಂದರೆ ಪಡೆಯುವುದೇನು ಕಷ್ಟವಿಲ್ಲ. ಅವರಿಗೆ ಸಲ್ಲಬೇಕಾದನ್ನು ಕೊಟ್ಟರೆ ಸಹಿ ಹಾಕುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅಂದರೆ ಈಗಾಗಲೇ ಇರುವ ಪರ್ಸೆಂಟೇಜ್ ಜಾಲದಲ್ಲಿ ಇದೊಂದು ಹೊಸ ಸೇರ್ಪಡೆ ಅಷ್ಟೆ. ಇಂಥಹ ಪಂಚಾಯತ್ ವ್ಯವಸ್ಥೆಯಲ್ಲಿ ಯಾರೇ ಪ್ರತಿನಿಧಿಯಾಗಿ ಬಂದರೂ ತಮ್ಮ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಸ್ಥೆಗಳನ್ನು ಬಳಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ. ಹೀಗಿರುವಾಗ ಕಾರ್ಯಕ್ರಮಗಳ ಅನುಷ್ಠಾನದ ಆಧಾರದಲ್ಲಿ ವಿಕೇಂದ್ರೀಕರಣವನ್ನು ಅಳೆಯುವ ಪ್ರಯತ್ನ ನಿರರ್ಥಕವಲ್ಲವೇ?

ಮೇಲೆ ವಿವರಿಸಿದ ಅಂಶಗಳು ಸರಿ. ಆದರೆ ಆ ವಾದವನ್ನು ಮುಂದಿಡುವ ಮೂಲಕ ಆಧುನಿಕ ಸಂಸ್ಥೆಗಳನ್ನು ಅಳವಡಿಸಿದ ಕೂಡಲೇ ಆಧುನೀಕರಣ ಸಾಧ್ಯ ಎನ್ನುವ ತುಂಬಾ ಸೀಮಿತ ಅರ್ಥದ ಆಧುನೀಕರಣ ಪ್ರಕ್ರಿಯೆಗೆ ಒತ್ತುಕೊಟ್ಟಂತಾಗುತ್ತದೆ. ಜತೆಗೆ ಅಂಥಹ ಪ್ರಯತ್ನಗಳು ವಿಫಲವಾದಾಗಲೆಲ್ಲ ಆಧುನಿಕ ಸಂಸ್ಥೆಗಳನ್ನು ದೂರುವ ಪರಿಪಾಠ ಮುಂದುವರಿಯಬಹುದು. ಈ ಸಂಸ್ಥೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವು ಕಾರ್ಯವೆಸಗುವ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರ. ಸಂಸ್ಥೆಗಳೇ ಮುಖ್ಯವಾದಾಗ ಅವು ಕಾರ್ಯರೂಪಕ್ಕೆ ಬರುವ ಪರಿಸರ ವಿಶ್ಲೇಷಣೆಯಿಂದ ದೂರ ಉಳಿಯುತ್ತದೆ. ಎರಡನೆಯದಾಗಿ ಮೇಲೆ ವಿವರಿಸಿದ ಇತಿಮಿತಿಗಳ ನಡುವೆಯೂ ಈ ಸಂಸ್ಥೆಗಳನ್ನು ತಮ್ಮ ಅವಶ್ಯಕತೆಗೆ ಅನುಗುಣವಾಗಿ ರೂಪಿಸಿಕೊಳ್ಳುವ ಮತ್ತು ಪುನರ್ ನಿರ್ವಚಿಸಿಕೊಳ್ಳುವ ಪ್ರಯತ್ನಗಳು ತಳ ಮಟ್ಟದಲ್ಲಿ ನಡೆಯುತ್ತಿಲ್ಲವೇ? ಉದಾಹರಣೆಗೆ ಜವಾಹರ್ ರೋಜ್‌ಗಾರ್ ಯೋಜನೆಯ ಹಣವನ್ನು ಬಳಸುವ ಒಂದು ನಿರ್ದಿಷ್ಟ ಕ್ರಮವಿದೆ.[3] ಆದರೆ ಗ್ರಾಮ ಪಂಚಾಯಿತಿಗಳು ಅದನ್ನು ಅದೇ ಕ್ರಮದಲ್ಲಿ ಬಳಸುತ್ತಾರೆ ಎನ್ನಲಾಗುವುದಿಲ್ಲ. ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ದಾಖಲೆ ಮಾತ್ರ ಕೇಂದ್ರ/ರಾಜ್ಯ ಸರಕಾರದ ನಿಯಮದಂತೆ ಮಾಡುತ್ತಾರೆ. ಇದೇ ರೀತಿ ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ನಡೆಯಬೇಕೆಂದಿದೆ. ಕೆಲವೊಂದು ಗ್ರಾಮ ಪಂಚಾಯತ್‌ಗಳಲ್ಲಿ ಒಂದು ಬಾರಿ ಕೂಡ ಗ್ರಾಮ ಸಭೆ ಕರೆಯುವುದಿಲ್ಲ. ವಾಸ್ತವ ಹೀಗಿದ್ದರೂ ಅವರ ದಾಖಲೆಗಳು ಬೇರೆಯದೇ ಚಿತ್ರಣ ಕೊಡುತ್ತವೆ. ಕನಿಷ್ಠ ಎರಡು ಗ್ರಾಮಸಭೆಗಳು ನಡೆದಿರುತ್ತದೆ; ಜತೆಗೆ ಹಾಜರಾದವರ ಸಹಿಣು ಇರುತ್ತೆ. ನಿಯಮ ಪ್ರಕಾರ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ನಡೆಯಬೇಕು. ಇದೇ ಗ್ರಾಮ ಪಂಚಾಯತ್‌ನಲ್ಲಿ ಫಲಾನುಭವಿಗಳ ಆಯ್ಕೆ ಹೇಗೆ ನಡೆದಿದೆ ಎಂದು ಹಿಂದಿನ ಪುಟಗಳಲ್ಲಿ ವಿವರಿಸಲಾಗಿದೆ. ಸದಸ್ಯರೇ ತಮ್ಮನ್ನು ಫಲಾನುಭವಿಗಳ ಆಯ್ಕೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲವೆಂದು ದೂರಿದ್ದಾರೆ. ಇವು ಯಾವುವು ಕೂಡ ಪಂಚಾಯತ್ ದಾಖಲೆಗಳಿಂದ ತಿಳಿಯುವುದಿಲ್ಲ. ದಾಖಲೆ ಪ್ರಕಾರ ಎಲ್ಲವೂ ಕ್ರಮ ಪ್ರಕಾರವಾಗಿಯೇ ನಡೆದಿದೆ. ಇವೆಲ್ಲಾ ಸಂಸ್ಥೆಯನ್ನು ಯಾವುದೋ ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಂಡಿರುವುದಕ್ಕೆ ಉದಾಹರಣೆಗಳು. ಇಲ್ಲಿ ಕೆಲವೇ ಪ್ರತಿನಿಧಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ನಿಯಮಗಳನ್ನು ಗಾಳಿಗೆ ತೂರಿ ಜನರ ಏಳಿಗೆಗಾಗಿ ಬಂದಿರುವ ಸಂಪನ್ಮೂಲಗಳನ್ನು ದುರಪಯೋಗಪಡಿಸಿಕೊಂಡಿದ್ದಾರೆ. ಆದರೆ ದಾಖಲೆ ಮತ್ತು ಲೆಕ್ಕ ಪತ್ರಗಳು ಕಾನೂನು/ನಿಯಮಕ್ಕೆ ಅನುಗುಣವಾಗಿಯೇ ಇವೆ. ಇವುಗಳ ಅರ್ಥವೇನು? ಇಷ್ಟೆಲ್ಲಾ ಇತಿಮಿತಿಗಳ ನಡುವೆಯೂ ಪಂಚಾಯತ್ ಸಂಸ್ಥೆಗಳು ಅವುಗಳ ಘೋಷಿತ ಉದ್ದೇಶಕ್ಕಿಂತ ಭಿನ್ನವಾಗಿ ಕಾರ್ಯನಿರ್ವಹಿಸಿರುವುದರ ಸಾಕ್ಷಿಯಲ್ಲವೇ? ಅಂದರೆ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲವೆಂದು ಇವುಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಇವುಗಳು ಕಾರ್ಯನಿರ್ವಹಿಸಬೇಕಾದ ಪರಿಸರ ಕೂಡ ಮುಖ್ಯ ಎನ್ನುವ ಅಂಶದೊಂದಿಗೆ ಪಂಚಾಯತ್ ನಡೆಸಿದ ಕಾರ್ಯಕ್ರಮಗಳ ವಿಶ್ಲೇಷಣೆಯನ್ನು ಮಾಡಬೇಕಾಗಿದೆ.

ಗ್ರಾಮಪಂಚಾಯತ್ ನಡೆಸಿದ ಕಾರ್ಯಕ್ರಮಗಳನ್ನು ಯಾವ ಮಾದರಿಗೆ ಹೋಲಿಸಿ ಮೌಲ್ಯಮಾಪನ ಮಾಡುವುದು ಎನ್ನುವುದು ಮೂರನೇ ಸಮಸ್ಯೆ. ಪ್ರತಿಹಳ್ಳಿಯ ಅವಶ್ಯಕತೆಗಳು ಮತ್ತೊಂದು ಹಳ್ಳಿಯ ಬೇಕುಬೇಡಗಳಿಗಿಂತ ಖಂಡಿತವಾಗಿಯೂ ಭಿನ್ನವಾಗಿವೆ. ಈ ಭಿನ್ನತೆಗಳ ಮಧ್ಯೆಯೂ ಒಂದು ಹಳ್ಳಿ ಮತ್ತೊಂದರಿಂದ ಮೂಲಭೂತವಾಗಿ ಭಿನ್ನವೆಂದು ತಿಳಿಯಲಾಗದು. ಜತೆಗೆ ಇಷ್ಟರವರೆಗಿನ ಆಧುನೀಕರಣ ಗ್ರಾಮವನ್ನು ತಾಲ್ಲೂಕಿನೊಂದಿಗೆ, ತಾಲ್ಲೂಕನ್ನು ಜಿಲ್ಲೆಯೊಂದಿಗೆ ಮತ್ತು ಜಿಲ್ಲೆಯನ್ನು ರಾಜ್ಯದೊಂದಿಗೆ ಜೋಡಿಸುವಲ್ಲಿ ಸಫಲವಾಗಿದೆ. ಈ ಜೋಡಣೆಯಿಂದ ಅನುಕೂಲಗಳು ಆಗಿವೆ. ಅನಾನುಕೂಲಗಳು ಆಗಿವೆ. ಅವೇನೆಂದು ಚರ್ಚಿಸುವ ಉದ್ದೇಶ ಇಲ್ಲಿಲ್ಲ. ಗ್ರಾಮವೊಂದರ ಬೇಕು ಬೇಡಗಳನ್ನು ಅದು ಇರುವ ಒಟ್ಟು ಪರಿಸರದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಈ ಜೋಡಣೆಯಿಂದ ನಿರ್ಮಾಣವಾಗಿದೆ. ಆಧುನೀಕರಣ ತಂದ ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾದರಿಯ ಕುರಿತು ಚರ್ಚಿಸುವುದಾದರೆ ಗಮನಕ್ಕೆ ಬರುವ ಮುಖ್ಯ ಮಾದರಿ ಮಾನವಮುಖಿ ಅಭಿವೃದ್ಧಿಯ ಪರಿಕಲ್ಪನೆ.[4]

ಪ್ರಭುತ್ವ ಮತ್ತು ಇತರ ಸಾಮಾಜಿಕ ಚಳವಳಿಗಳ ಮುಖ್ಯ ಉದ್ದೇಶ ಸಮಾನತೆಯುಳ್ಳ ಸಮಾಜ ನಿರ್ಮಾಣ ಎಂಬ ಸಾಮಾನ್ಯ ಗ್ರಹಿಕೆಯಿತ್ತು. ಆ ಗ್ರಹಿಕೆಯನ್ನು ಪ್ರಶ್ನಿಸದೇ ಮುಂದುವರಿಯುವುದಾದರೆ ಒಂದು ಕಾಲದಲ್ಲಿ ಸಂಪತ್ತಿನ ಮರು ವಿತರಣೆಯ ವಿಚಾರದಿಂದ ಬೇರ್ಪಡಿಸಿ ಸಮಾನತೆಯ ಚರ್ಚೆ ಊಹಿಸಲು ಅಸಾಧ್ಯವಾಗಿತ್ತು. ರಷ್ಯಾ ಮತ್ತು ಇತರ ಎಡಪಂಥೀಯ ರಾಷ್ಟ್ರಗಳಲ್ಲಿ ಸರಕಾರಿ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆ ಮೂಲೆ ಗುಂಪಾಗುವುದರೊಂದಿಗೆ ಸಂಪತ್ನಿಕ ಮರುವಿತರಣೆಯ ಪ್ರಶ್ನೆ ಕೂಡ ನೆನೆಗುದಿಗೆ ಬಿದ್ದಿದೆ. ಮುಕ್ತ ಮಾರುಕಟ್ಟೆ ಮತ್ತು ವ್ಯಕ್ತಿಯ ಸಶಕ್ತೀಕರಣ ಈಗ ಚಾಲ್ತಿಯಲ್ಲಿರುವ ಪದಗಳು. ಅಂತರಾಷ್ಟ್ರೀಯ/ರಾಷ್ಟ್ರೀಯ ಪರಿಸರ ನಿರ್ಮಿಸಿರುವ ಈ ಇತಿಮಿತಿಯೊಳಗೆ ಸಾಧ್ಯವಾಗುವ ಸಮಾಜ ಪರಿವರ್ತನೆಯನ್ನು ಮಾದರಿಯೆಂದರೆ ಮಾನವ ಮುಖಿ ಅಭಿವೃದ್ಧಿ ಮಾತ್ರ. ಇಲ್ಲಿ ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವಿಲ್ಲ. ವ್ಯಕ್ತಿಯ ಪರಿವರ್ತನೆಗೆ ಮಹತ್ವ. ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಯಹಾವುದಾದರೂ ಒಂದು ಕೆಲಸದಲ್ಲಿ ಪರಿಣತಿ ಪಡೆದರೆ ವ್ಯಕ್ತಿಯೊಬ್ಬನ ಬದುಕುವ ಸಾಧ್ಯತೆಯೇ ಸಕಾರಾತ್ಮಕವಾಗಿ ಬದಲಾಗಬಹುದೆನ್ನುವ ಗ್ರಹಿಕೆ ಇಲ್ಲಿದೆ. ಆರೋಗ್ಯ, ಶಿಕ್ಷಣ ಮತ್ತು ಇತರ ಸವಲತ್ತುಗಳ ಮೂಲಕ ವ್ಯಕ್ತಿಯೊಬ್ಬನ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುವುದಕ್ಕೆ ಈ ಮಾದರಿಯ ಪ್ರಾಮುಖ್ಯತೆ. ಉತ್ತಮ ಆರೋಗ್ಯ ಮತ್ತು ಶಿಕ್ಷಣದಿಂದ ಆಧುನಿಕ ಕಸುಬಿಗೆ ಅಗತ್ಯವಾದ ಪರಿಣತಿ ಹೊಂದಿ ಹೊಸತಾಗಿ ರೂಪುಗೊಳ್ಳುವ ಶ್ರಮ ಮಾರುಕಟ್ಟೆಯಲ್ಲಿ ಪಾಲುಗೊಳ್ಳಲು ಅನುಕೂಲ. ಆ ಮೂಲಕ ತನ್ನ ಮತ್ತು ಕುಟುಂಬದ ಆದಾಯವನ್ನು ಸುಧಾರಿಸಿಕೊಳ್ಳಬಹುದೆಂಬ ಗ್ರಹಿಕೆಯಿದೆ. ಈ ಮಾದರಿಗೆ ಅದರದ್ದೇ ಆದ ಇತಿಮಿತಿಗಳಿವೆ. ಆ ಚರ್ಚೆಯನ್ನೆಲ್ಲಾ ಇಲ್ಲಿ ಮಾಡಿಲ್ಲ. ಸದ್ಯಕ್ಕೆ ಮಾನವಮುಖಿ ಅಭಿವೃದ್ಧಿ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಪಂಚಾಯತ್ ಕೆಲಸಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಮೊದಲಿಗೆ ಗ್ರಾಮ ಪಂಚಾಯತ್ ತನ್ನ ಅವಧಿಯಲ್ಲಿ ಸಂಗ್ರಹಿಸಿದ ಸಂಪನ್ಮೂಲ ಮತ್ತು ಅದನ್ನು ಬಳಸಿಕೊಂಡ ಕ್ರಮವನ್ನು ವಿಶ್ಲೇಷಿಸಲಾಗಿದೆ.

ಸಂಪನ್ಮೂಲ ಸಂಗ್ರಹ

ಮೊದಲಿಗೆ ಸಂಪನ್ಮೂಲ ಸಂಗ್ರಹ ಅಥವಾ ಆದಾಯದ ಮೂಲಗಳು ಮತ್ತು ಅವುಗಳಿಂದ ಸಂಗ್ರಹವಾದ ಸಂಪನ್ಮೂಲಗಳನ್ನು ಪರಿಶೀಲಿಸುವಾ. ಈ ಹಿಂದೆ ವಿವರಿಸಿದಂತೆ ಪಂಚಾಯತ್‌ನ ಆದಾಯದ ಮೂಲಗಳು ತುಂಬಾ ಸೀಮಿತವಾಗಿಯೇ ಇವೆ. ಮುಖ್ಯ ಆದಾಯದ ಮೂಲಗಳೆಂದರೆ ರಾಜ್ಯ/ಕೇಂದ್ರ ಸರಕಾರದಿಂದ ಬರುವ ಅನುದಾನ, ಮನೆ ತೆರಿಗೆ, ಭೂ ತೆರಿಗೆಯಲ್ಲಿ ಪಾಲು, ನೀರಿನ ಮೇಲಿನ ತೆರಿಗೆ, ಆರೋಗ್ಯಕರ, ಲೈಬ್ರೇರಿ ಕರ, ಶಿಕ್ಷಣ ಕರ ಮತ್ತು ಇತರ ಕರಗಳು ರಾಜ್ಯ/ಕೇಂದ್ರ ಸರಕಾರಗಳ ಅನುದಾನ ನಿಗದಿತ ; ಅದು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಗುವುದಿಲ್ಲ. ಪಂಚಾಯತ್‌ಗೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯತೆ ಇರುವುದು ಸ್ಥಳೀಯ ತೆರಿಗೆಗಳ ಮೂಲಕ ಮಾತ್ರ. ಆ ಸಾಲಿನಲ್ಲಿ ಬರುವ ಮುಖ್ಯ ಮೂಲವೆಂದರೆ ಮನೆ ತೆರಿಗೆ ಮತ್ತು ಇತರ ಕರಗಳು. ಪಂಚಾಯತ್‌ಗಳು ಮೇಲಿನ ಕರಗಳನ್ನು ಬಿಡಿ ಬಿಡಿಯಾಗಿ ಸಂಗ್ರಹಿಸುತ್ತಿಲ್ಲ. ಇವುಗಳನ್ನೆಲ್ಲಾ ಸೇರಸಿ ಮನೆ ತೆರಿಗೆಗಳಿವೆ. ಒಂದು, ಆರ್.ಸಿ.ಸಿ. ಮನೆಗಳಿಗೆ ವಾರ್ಷಿಕ ರೂ. ೮೦, ಎರಡು, ಮಧ್ಯಮ ಗಾತ್ರದ ಮನೆಗಳಿಗೆ ರೂ. ೫೩ ಮತ್ತು ಸಣ್ಣ ಮನೆಗಳಿಗೆ ರೂ. ೩೨ (ಕೋಷ್ಠಕ – ೭). ಮನೆ ತೆರಿಗೆಯ ರಿಜಿಸ್ಟರ್ ಪ್ರಕಾರ ಹಳ್ಳಿಯಲ್ಲಿ ಒಟ್ಟು ೮೫೩ ಮನೆಗಳಿವೆ. ಅವುಗಳಲ್ಲಿ ರೂ. ೮೦ ಮನೆ ತೆರಿಗೆ ಕೊಡುವ ಆರ್.ಸಿ.ಸಿ. ಮನೆಗಳು ೨೧ ರೂ. ೫೩ ತೆರಿಗೆ ಕೊಡುವ ಮಧ್ಯಮ ಗಾತ್ರದ ಮನೆಗಳು ೨೭೬ ಉಳಿದವು ೫೫೬, ರೂ. ೩೨ ರ ಸಣ್ಣ ಮನೆಗಳು. ಈ ಎಲ್ಲಾ ಮನೆಗಳಿಂದ ೧೯೯೫ – ೯೬ರಿಂದ ೧೯೯೮ – ೯೯ ರವರೆಗೆ ಸಂಗ್ರಹವಾದ ತೆರಿಗೆಯ ವಿವರವನ್ನು ಕೋಷ್ಠಕ – ೮ರಲ್ಲಿ ಕೊಡಲಾಗಿದೆ. ೧೯೯೫ – ೯೬ ರಲ್ಲಿ ಸಂಗ್ರಹವಾದ ತೆರಿಗೆ ರೂ. ೩೨೪೯೦. ಅದೇ ವರ್ಷ ಹಿಂದಿನ ಬಾಕಿ ರೂ. ೬೬೭೭೧ ಇತ್ತು. ಹಿಂದಿನ ಬಾಕಿಯಲ್ಲಿ ಕೇವಲ ರೂ. ೬೯೬೩ ಮಾತ್ರ ಸಂಗ್ರಹವಾಗಿದೆ. ಹೀಗಾಗಿ ವರ್ಷದ ಕೊನೆಗೆ ಬಾಕಿ ರೂ. ೬೦೮೦೮ ಉಳಿದಿದೆ. ೧೯೯೬ – ೯೭ರಲ್ಲಿ ತೆರಿಗೆ ಬೇಡಿಕೆ ರೂ. ೪೬೦೨೭, ಸಂಗ್ರಹವಾದ ಮೊತ್ತ ಕೇವಲ ರೂ. ೩೦೦೮೯. ಅಂದರೆ ಆ ವರ್ಷದ ಬೇಡಿಕೆಯಲ್ಲಿ ರೂ. ೧೫೯೮ರಷ್ಟು ಸಂಗ್ರಹವಾಗಿಲ್ಲ. ವರ್ಷದ ಕೊನೆಗೆ ರೂ. ೭೮೭೪೬ ಬಾಕಿ ಉಳಿಯಿತು. ೧೯೯೭ – ೯೮ರಲ್ಲಿ ಬೇಡಿಕೆ ಹಿಂದಿನ ವರ್ಷದಷ್ಟೆ. ಆದರೆ ಸಂಗ್ರಹ ಇನ್ನೂ ಕೆಳಗೆ ಇಳಿಯಿತು, ಕೇವಲ ರೂ. ೧೮೬೫೧. ೧೯೯೮ – ೯೯ರಲ್ಲಿ ಬೇಡಿಕೆ ರೂ. ೬೭೭೧೦, ಸಂಗ್ರಹ ರೂ. ೭೩೧೦೦. ಆದಾಗ್ಯೂ ವರ್ಷದ ಕೊನೆಗೆ ಒಟ್ಟು ಬಾಕಿ ರೂ. ೧೦೦೭೩೨ ಉಳಿದಿದೆ.

ಮೇಲಿನ ಅಂಕಿ ಅಂಶಗಳಲ್ಲಿ ಮನೆ ತೆರಿಗೆಗಳ ಜತೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಇತರ ಆದಾಯಗಳು ಸೇರಿವೆ. ಹಳ್ಳಿಯಲ್ಲಿರುವ ಇತರ ಮೂಲಗಳೆಂದರೆ ಒಂದು ಜಲ್ಲಿ ಕ್ರಶರ್, ಜಿಂದಾಲ್ ಕಂಪೆನಿಗೆ ನೀರು ಪೂರೈಸುವ ಒಂದು ದೊಡ್ಡ ನೀರಿನ ಟ್ಯಾಂಕಿ, ಗೊಗ್ಗ ಸಂತಯ್ಯನವರ ರೆಡ್ ಆಕ್ಸೈಡ್ ಫ್ಯಾಕ್ಟರಿ, ಐದು ಕಿರಾಣಿ ಅಂಗಡಿಗಳು (ಎರಡು ಅಂಗಡಿಗಳ ಜತೆ ಹಿಟ್ಟಿನ ಗಿರಣಿಗಳು ಇವೆ) ಎಂಟು ಹೋಟೆಲುಗಳು, ಐದು ಸಾರಾಯಿ ಅಂಗಡಿಗಳು, ಒಂದು ಮೆಡಿಕಲ್ ಸ್ಟೋರ್, ಎರಡು ಪುಟ್ಟ ಕ್ಲಿನಿಕ್‌ಗಳು ಮತ್ತು ಏಳೆಂಟು ಪೆಟ್ಟಿಗೆ ಅಂಗಡಿಗಳು. ಇವುಗಳ ಮೇಲಿನ ತೆರಿಗೆ ಮನೆ ತೆರಿಗೆ ಜತೆ ಸೇರಿದೆ. ವ್ಯಾಪಾರ ಮತ್ತು ಫ್ಯಾಕ್ಟರಿಗಳ ತೆರಿಗೆ ಕ್ರಮಪ್ರಕಾರವಾಗಿ ವಸೂಲಾಗುತ್ತಿದೆ. ಬಾಕಿಯಲ್ಲಿ ಸಿಂಹಪಾಲು ಮನೆ ತೆರಿಗೆಯದ್ದೇ. ಬಹುತೇಕ ಕುಟುಂಬಗಳು ಕೊಡಬೇಕಾದ ವಾರ್ಷಿಕ ತೆರಿಗೆ ಕೇವಲ ರೂ. ೩೨ ಮಾತ್ರ. ವರ್ಷಕ್ಕೆ ರೂ. ೩೨ ಮನೆ ತೆರಿಗೆ ಕಟ್ಟಲಾರದಷ್ಟು ಬಡತನ ಹಳ್ಳಿಯಲ್ಲಿ ಯಾರಿಗೂ ಇಲ್ಲ. ಆದರೂ ಲಕ್ಷಕ್ಕಿಂತ ಮೇಲೆ ತೆರಿಗೆ ಬಾಕಿ ಇದೆ. ಮನೆ ತೆರಿಗೆ ಯಾಕೆ ಬಾಕಿ ಇದೆ ಎಂದು ಬಿಲ್ ಕಲೆಕ್ಟರ್ ಅಥವಾ ಕಾರ್ಯದರ್ಶಿಯವರನ್ನು ಕೇಳಿದರೆ ಊರವರು ಕೊಡುತ್ತಿಲ್ಲ ಎನ್ನುತ್ತಾರೆ. ತೆರಿಗೆ ಯಾಕಿ ಕಟ್ಟುತ್ತಿಲ್ಲ ಎಂದು ಊರವರಲ್ಲಿ ವಿಚಾರಿಸಿದರೆ ಅವರ ಉತ್ತರ ಈ ಕೆಳಗಿನವುಗಳಲ್ಲಿ ಒಂದಾಗಿರುತ್ತದೆ. ೧. ಕಟ್ಟಿದ್ದೇವೆ; ಸ್ವಲ್ಪ ಬಾಕಿ ಇದೆ, ೨. ಪಂಚಾಯತ್ ಬಾಗಿಲಿಗೆ ಒಯ್ಯಬೇಕೆ? ವಸೂಲಿಗೆ ಯಾರು ಬಂದಿಲ್ಲ, ೩. ತೆರಿಗೆ ಕಟ್ಟುವುದಾದರೂ ಯಾಕೆ? ನಮ್ಮ ಕೆಲಸಗಳು ಆಗಬೇಕೆಂದು ತಾನೇ? ಆದರೆ ಗ್ರಾಮ ಪಂಚಾಯತ್‌ನಿಂದ ನಮಗೆ ಯಾವುದೇ ಕೆಲಸವಾಗುತ್ತಿಲ್ಲ. ಹೀಗಿರುವಾಗ ತೆರಿಗೆ ಯಾಕೆ ಕಟ್ಟಬೇಕು? ೪. ಕಟ್ಟದವರು ನಾವು ಮಾತ್ರವಲ್ಲ, ಬೇಕಾದಷ್ಟು ಜನರಿದ್ದಾರೆ, ಅವರು ಕಟ್ಟಲಿ, ಮತೆ ನೋಡುವ, ಇತ್ಯಾದಿ ಉತ್ತರಗಳು ಜನರಿಂದ ಬರುತ್ತವೆ.

ಊರವರ ಅಭಿಪ್ರಾಯಗಳಲ್ಲೂ ಸತ್ಯವಿದೆ. ಮುಖ್ಯವಾಗಿ ಗ್ರಾಮ ಪಂಚಾಯತ್‌ನಿಂದ ನಮಗೇನೂ ಉಪಯೋಗವಿಲ್ಲ ಎನ್ನುವವರ ದೂರ ನೀರು, ಚರಂಡಿ, ಬಂಡೆ ಹಾಸುವುದು, ವಸತಿ, ವೈದ್ಯಕೀಯ, ವಿದ್ಯುತ್ ಮತ್ತು ಇತರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸಂಬಂಧಿಸಿವೆ. ಈ ಕುರಿತು ಮುಂದೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಸದ್ಯಕ್ಕೆ ತೆರಿಗೆ ಸಂಗ್ರಹ ಏಕೆ ಆಗಿಲ್ಲ ಎನ್ನುವುದರತ್ತ ಗಮನ ಹರಿಸುವಾ, ಕ್ರಮ ಪ್ರಕಾರ ತೆರಿಗೆ ವಸೂಲಿ ಆಗುವುದಿಲ್ಲ ಎನ್ನುವುದರಲ್ಲಿ ಸ್ವಲ್ಪ ಸತ್ಯಾಂಶವಿದೆ. ಕ್ರಮ ಪ್ರಕಾರವೆಂದರೆ ಸಮಯಕ್ಕೆ ಸರಿಯಾಗಿ ತೆರಿಗೆ ವಸೂಲಿಗೆ ಪ್ರಯತ್ನಿಸುವುದು ಮತ್ತು ತೆರಿಗೆ ಕಟ್ಟದಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು. ಕಟ್ಟದವರ ವಿರುದ್ಧ ಕ್ರಮವೇ ಇಲ್ಲವೆಂದಾಗ ಪಾವತಿಸಿದವರಿಗೂ ಬಾಕಿ ಇರುವವರಿಗೂ ವ್ಯತಾಸ ಇಲ್ಲದಾಗುತ್ತದೆ. ಇದೇ ರೀತಿ ಮುಂದುವರಿದಾಗ ಸರಿಯಾಗಿ ಕಟ್ಟುವವರು ಕೂಡ ನಾವು ಯಾಕೆ ಕಟ್ಟಬೇಕು ಎಂದು ಆಲೋಚಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ತೆರಿಗೆ ಪಾವತಿಸದೆ ಇರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ತೆರಿಗೆ ಸಂಗ್ರಹವಾಗಬಹುದೆಂಬ ವಾದಕ್ಕೆ ಪೂರಕವಾಗಿ ಇದೇ ಹಳ್ಳಿಯ ಒಂದು ಉದಾಹರಣೆಯನ್ನು ಕೊಡಬಹುದು. ಪಂಚಾಯತ್ ಸದಸ್ಯರೊಬ್ಬರನ್ನು ಭೇಟಿಯಾಗಲು ಒಂದು ಆದಿತ್ಯವಾರ ಗ್ರಾಮಪಂಚಾಯತ್ ಕಛೇರಿಗೆ ಹೋಗಿದ್ದೆ. ಪಂಚಾಯತ್ ಕಚೇರಿಯ ಹೊರ ಕೊಠಡಿಯಲ್ಲಿ ಕೆ.ಇ.ಬಿ. ನೌಕರರೊಬ್ಬರು ಊರವರಿಂದ ಕರೆಂಟ್ ಬಿಲ್ಲು ಸಂಗ್ರಹಿಸುತ್ತಿದ್ದರು. “ಕರೆಂಟ್ ಬಿಲ್ಲು ಸರಿಯಾಗಿ ಪಾವತಿಯಾಗುತ್ತಿದೆಯೇ?” ಎಂದು ಅವರಲ್ಲಿ ವಿಚಾರಿಸಿದೆ. ಸರಿಯಾಗಿ ಸಂದಾಯವಾಗುತ್ತಿದೆ ಅಂದ್ರು ಅವರು. “ಅದು ಹೇಗೆ ಸಾಧ್ಯ? ಇವರು ವರ್ಷಕ್ಕೊಮ್ಮೆ ಕಟ್ಟಬೇಕಾದ ಮನೆ ತೆರಿಗೆಯನ್ನೇ ಕಟ್ಟುತ್ತಿಲ್ಲ; ತಿಂಗಳಿಗೊಮ್ಮೆ ಕಟ್ಟಬೇಕಾದ ನಿಮ್ಮ ಬಿಲ್ಲನ್ನು ಗೇಗೆ ಕಟ್ಟುತ್ತಾರೆ?” ಅಂದೆ. ಅದಕ್ಕೆ ಆತ, “ಕಟ್ಟದಿದ್ದರೆ ಕರೆಂಟ್ ಕಟ್ ಮಾಡುತ್ತೇವೆ”, ಎಂದ. ಅಂದರೆ ಕರೆಂಟ್ ಬಿಲ್ ಕಟ್ಟದಿದ್ದರೆ ಕರೆಂಟ್ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಆವಾಗ ಕರೆಂಟ್ ಬಿಲ್ಲು ಬಾಕಿ ಉಳಿಯುವುದಿಲ್ಲ. ಅಂತಹ ಕ್ರಮ ಮನೆ ತೆರಿಗೆ ಸಂಗ್ರಹದಲ್ಲಿ ಜಾರಿಯಾಗಿಲ್ಲ; ಜಾರಿ ಬಂದರೆ ಪರಿಣಾಮ ಬೀರಬಹುದು. ಈ ಕ್ರಮ ಪರಿಣಾಮಕಾರಿ ಆಗಬೇಕಾದರೆ ಪಂಚಾಯತ್‌ನ ಸೇವೆ ನೀರು, ವಿದ್ಯುತ್, ಚರಂಡಿ ವ್ಯವಸ್ಥೆ ಇತ್ಯಾದಿಗಳು – ಅನಿವಾರ್ಯವಾಗಬೇಕು. ಜತೆಗೆ ಅಂತಹ ಸೇವೆಯನ್ನು ಪಂಚಾಯತ್, ಹೆಚ್ಚು ಕಡಿಮೆ, ನಿರಂತರವಾಗಿ ಮತ್ತು ಪರಿಪೂರ್ಣವಾಗಿ ಒದಗಿಸುತ್ತಿರಬೇಕು. ಹಾಗಾದಾಗ ತೆರಿಗೆ ಯಾಕೆ ಕಟ್ಟಬೇಕು, ನಮಗೆ ಪಂಚಾಯತ್‌ನಿಂದ ಏನೂ ಉಪಯೋಗವಿಲ್ಲ ಎನ್ನುವ ಮಾತು ಜನರಿಂದ ಬರಲಾರದು.

ಕಟ್ಟದವರು ನಾವು ಮಾತ್ರವಲ್ಲ, ತುಂಬಾ ಜನ ಇದ್ದಾರೆ. ಅವರಲ್ಲಿ ಅನುಕೂಲಸ್ಥರು ಇದ್ದಾರೆ. ಅವರು ಮೊದಲು ಕಟ್ಟಲಿ; ನಂತರ ನಾವು ಕಟ್ಟುತ್ತೇವೆ, ಎನ್ನುವ ಮಾತಲ್ಲಿ ಸತ್ಯಾಂಶವಿದೆ. ತೆರಿಗೆ ಬಾಕಿ ಇರಿಸಿದವರಲ್ಲಿ ಮೇಲು ಜಾತಿಯವರು ಮತ್ತು ಅನುಕೂಲಸ್ಥರೂ ಇದ್ದಾರೆ. ಅಂತವರಿಂದ ತೆರಿಗೆ ವಸೂಲು ಮಾಡದೆ ನಮ್ಮಂತಹ ಬಡವರ ಬಾಗಿಲಿಗೆ ಯಾಕೆ ಬರಬೇಕು ಎನ್ನುವುದು ಈ ವಾದದ ಮುಂದುವರಿಕೆ. ಊರ ಗಣ್ಯರೇ ಸಾರ್ವಜನಿಕ ನಿಯಮಗಳನ್ನು ಗಾಳಿಗೆ ತೂರಿದರೆ ಉಳಿದವರ ಮೇಲೆ ಅದೇ ನಿಯಮವನ್ನು ಅನ್ವಯಿಸುವುದಾದರೂ ಹೇಗೆ? ಇದು ತುಂಬಾ ಸಂಕೀರ್ಣ ಸಂಗತಿ. ಇದನ್ನು ಮುಂದೆ ವಿಸ್ತಾರವಾಗಿ ಚರ್ಚಿಸಿದ್ದೇನೆ. ಇಲ್ಲಿ ಅನುಕೂಲಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿ ಯಾಕಿದೆ ಎನ್ನುವುದನ್ನು ಸ್ಥೂಲವಾಗಿ ವಿವರಿಸಿದ್ದೇನೆ. ತೆರಿಗೆ ಕಟ್ಟದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದರೆ ಯಾರು? ಮತ್ತು ಹೇಗೆ ಕ್ರಮ ತೆಗೆದುಕೊಳ್ಳಬೇಕು? ಪಂಚಾಯತ್ ಅಧ್ಯಕ್ಷರು ಕೆಳ ಜಾತಿಯವರು. ಅವರು ಮತ್ತು ಇತರ ಕೆಳಜಾತಿ ಸದಸ್ಯರು ಪಂಚಾಯತ್ ಮೀಟಿಂಗ್ ನಡೆಯುವಾಗ ಮಾತ್ರ ಊರಿನ ಇತರ ಮೇಲುಜಾತಿಯವರಿಗೆ ಸಮಾನ. ಇತರ ಎಲ್ಲಾ ಸಂದರ್ಭಗಳಲ್ಲೂ ಮೇಲುಜಾತಿಯವರಿಗಿಂತ ಇವರು ಕೆಳಗೆ ಇರಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹಳ್ಳಿಯಲ್ಲಿ ಸಾಂಪ್ರದಾಯಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ ಮುಂದುವರಿಯುತ್ತಿದೆ. ಇಂತಹ ವಾತಾವರಣದಲ್ಲಿ ಬಹುತೇಕ ಕೆಳಜಾತಿಯವರೇ ಇರುವ ಪಂಚಾಯತ್‌ನಲ್ಲಿ ತೆರಿಗೆ ಬಾಕಿ ಉಳಿಸಿದ ಮೇಲು ಜಾತಿಯವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಭಾವಿ ಕುಳಗಳೇ ಬಾಕಿದಾರರ ಪಟ್ಟಿಯಲ್ಲಿರುವಾಗ ಉಳಿದವರ ಉಸಾಬರಿ ನಮಗೆ ಯಾಕೆ ಎನ್ನುವ ನಿಲುವು ಸದಸ್ಯರ ಮಾತಲ್ಲೂ ವ್ಯಕ್ತವಾಗುತ್ತಿತ್ತು. ಅವರು ಮೊದಲು ಕಟ್ಟಲಿ, ನಂತರ ನಾವು ಕಟ್ಟುತ್ತೇವೆ ಎನ್ನುವ ಊರವರ ವಾದಕ್ಕೆ ಈ ಬೆಳವಣಿಗೆಗಳು ಕಾರಣ.

ವಿಕೇಂದ್ರೀಕರಣ ಅದರ ನಿಜ ಅರ್ಥದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಕೇವಲ ಹಕ್ಕಿನ ಬಗ್ಗೆ ಜಾಗರೂಕರಾದರೆ ಸಾಲದು; ಜವಾಬ್ದಾರಿಯ ಬಗೆಗೂ ಅರಿತಿರಬೇಕು. ಜವಾಬ್ದಾರಿಯನ್ನು ಸರಿಯಾಗಿ ಪೂರೈಸಿದ ನಂತರವೇ ಹಕ್ಕಿನ ಬಗ್ಗೆ ಮಾತಾಡಲು ನೈತಿಕತೆ ಬರುವುದು. ತನ್ನದೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದ ಪಂಚಾಯತ್‌ಗೆ ವಿಶೇಷ ಮಹತ್ವ ಇರಲು ಸಾಧ್ಯವಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಅಂತಹ ಪಂಚಾಯತ್‌ಗಳು ಹೊರಗಿನಿಂದ ಬರುವ ಅನುದಾನ ಮತ್ತು ಕಾರ್ಯಕ್ರಮಗಳಿಗೆ ಒಂದು ಮಾಧ್ಯಮವಾಗಿ ಕೆಲಸ ಮಾಡಬಹುದು. ಕೆಳವರ್ಗದ ಜನರನ್ನು ಸಶಕ್ತೀಕರಣಗೊಳಿಸುವ ಒಂದು ಪ್ರಕ್ರಿಯೆಯಾಗಿ ಅಂತಹ ಪಂಚಾಯತ್‌ಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ತೆರಿಗೆ ಸಂಗ್ರಹ ಮತ್ತು ಆ ಮೂಲಕ ಜನರು ಪಂಚಾಯತ್ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವಂತೆ ಮಾಡುವುದು ಆರೋಗ್ಯಕರ ವಿಕೇಂದ್ರೀಕರಣಕ್ಕೆ ಪೂರಕವೇ ಆಗಿದೆ.

ಸಂಪನ್ಮೂಲದ ಬಳಕೆ

ಸಂಗ್ರಹವಾದ ತೆರಿಗೆ ಮತ್ತು ಹೊರಗಿನಿಂದ ಬರುವ ಅನುದಾನಗಳು ಹೇಗೆ ಬಳಕೆಯಾಗಿವೆ ಎನ್ನುವುದು ಎರಡನೆಯ ಹಂತದ ವಿಶ್ಲೇಷಣೆ. ಬಳಕೆಯ ವಿಶ್ಲೇಷಣೆಯನ್ನು ಮಾನವಮುಖಿ ಅಭಿವೃದ್ಧಿ ಮಾದರಿಗೆ ಹೋಲಿಸಿ ಮಾಡಬೇಕೆಂದು ಈ ಹಿಂದೆ ಚರ್ಚಿಸಿದ್ದೇವೆ. ಎರಡು ಕಾರಣಗಳಿಗಾಗಿ ಮಾನವಮುಖಿ ಅಭಿವೃದ್ಧಿಯನ್ನು ಅದರ ಶಾಸ್ತ್ರೀಯ ಅರ್ಥಕ್ಕೆ ಸೀಮಿತಗೊಂಡಂತೆ ಬಳಸಿಲ್ಲ. ಒಂದು ವೇಳೆ ಆ ರೀತಿ ಬಳಸಿದರೆ ಒಂದು ತಾಂತ್ರಿಕ ಲೋಪವನ್ನು ಗುರುತಿಸುವ ಸಾಧ್ಯತೆ ಇದೆ. ಅದೇನೆಂದರೆ ಗ್ರಾಮ ಪಂಚಾಯತ್ ಕಾರ್ಯನಿರ್ವಹಣೆಯಲ್ಲಿ ಯಾವುದೇ ಮಾದರಿಯ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಒಂದು ಗ್ರಾಮ ಪಂಚಾಯತ್‌ನ ಕಾರ್ಯಕ್ರಮಗಳನ್ನು ಮಾನವಮುಖಿ ಅಭಿವೃದ್ದಿಯ ಮಾದರಿಗೆ ಹೋಲಿಸಿ ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ. ಒಂದು ವಿಧದಲ್ಲಿ ಈ ವಾದ ಗ್ರಾಮ ಪಂಚಾಯತ್ ರಾಜಕೀಯದಲ್ಲಿ ಪಕ್ಷ ಇಲ್ಲ ಎನ್ನುವ ರೀತಿಯದ್ದೇ. ಅದೇನೆ ಇರಲಿ ಇಲ್ಲಿ ಮಾನವಮುಖಿ ಅಭಿವೃದ್ಧಿಯನ್ನು ಶಾಸ್ತ್ರೀಯ ಅರ್ಥದಲ್ಲಿ ನಿರ್ವಹಿಸಿಕೊಂಡಿಲ್ಲ ಎನ್ನುವುದು ಮುಖ್ಯ. ಎರಡು, ಶಿಕ್ಷಣ, ಆರೋಗ್ಯ ಮತ್ತು ಇತರ ಮೂಲಭೂತ ಸವಲತ್ತುಗಳು – ನೀರು, ಚರಂಡಿ, ವಿದ್ಯುತ್, ರಸ್ತೆ ಇತ್ಯಾದಿಗಳನ್ನು – ಮಾನವಮುಖಿ ಅಭಿವೃದ್ಧಿಯ ಅಂಶಗಳೆಂದೇ ಪರಿಗಣಿಸಲಾಗಿದೆ. ಈ ಸವಲತ್ತುಗಳ ಪೂರೈಕೆ ಮುಖ್ಯವಾಹಿನಿಯ ಅಭಿವೃದ್ಧಿಯ ಅಂಶಗಳು ಕೂಡ. ಮೇಲಿನ ಸವಲತ್ತುಗಳನ್ನು ಸ್ಥಳೀಯ ಜನರಿಗೆ ಪೂರೈಸುವುದೇ ಬಹುತೇಕ ಎಲ್ಲಾ ಪಂಚಾಯತ್‌ಗಳ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮತ್ತು ಅವುಗಳಿಗೆ ವಿನಿಯೋಜನೆಯ ಮೊತ್ತದ ಮೇಲೆ ಪಂಚಾಯತ್‌ಗಳಿಗೆ ವಿಶೇಷ ಅಧಿಕಾರ ಇಲ್ಲದಿರಬಹುದು. ಆದರೆ ಈ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಜವಾಬ್ದಾರಿ, ಅರ್ಹರನ್ನು ಆಯ್ಕೆ ಮಾಡುವ ಹಕ್ಕು, ನಿರ್ದಿಷ್ಟ ಕಾರ್ಯಕ್ರಮಗಳಿಗೆ ಅಂಟಿಕೊಂಡಿರದ ಅನುದಾನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವ ಸ್ವಾತಂತ್ರ್ಯ ಇತ್ಯಾದಿಗಳು ಪಂಚಾಯತ್‌ಗಿದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ೧೯೯೪ – ೯೯ರ ಅವಧಿಯಲ್ಲಿ ವಸತಿ, ಶಿಕ್ಷಣ, ಆರೋಗ್ಯ, ನೀರು ಪೂರೈಕೆ ಮತ್ತು ಇತರ ಸವಲತ್ತುಗಳ ಪೂರೈಕೆಯನ್ನು ವಿಶ್ಲೇಷಿಸಲಾಗಿದೆ. ಯಾವುದೇ ಮಾದರಿಗೆ ಹೋಲಿಸಿ ಮೌಲ್ಯಮಾಪನ ಮಾಡುವುದಕ್ಕಿಂತ ಹೆಚ್ಚು ಈ ಕಾರ್ಯಕ್ರಮಗಳು ತಳಮಟ್ಟದಲ್ಲಿ ಕಾರ್ಯಗತಗೊಳ್ಳುವ ಬಗೆಯನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ವಿವಿಧ ಕಾರ್ಯಕ್ರಮಗಳು, ಅವುಗಳ ಫಲಾನುಭವಿಗಳ ಆಯ್ಕೆ, ಅದಕ್ಕಾಗಿ ಸದಸ್ಯರು ಮತ್ತು ಊರವರು ನಡೆಸುವ ತಂತ್ರಗಳು, ಆಟಗಳು, ಆಮಿಷಗಳು ಮತ್ತು ಕೊನೆಗೆ ಅವು ಯಾವ ರೂಪದಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಸೇರುತ್ತವೆ ಎನ್ನುವುದನ್ನು ಅರಿಯಲು ಇಲ್ಲಿ ಪ್ರಯತ್ನಿಸಲಾಗಿದೆ.

 

[1]ಪ್ರಜಾಪ್ರಭುತ್ವದಲ್ಲಿ ವಿವಿಧತೆ ಮತ್ತು ಅದರ ಪರಿಗಣನೆ ಕುರಿತು ಸಾಕಷ್ಟು ಚರ್ಚೆ ನಡೆದಿದೆ, ಬೇಕಾದಷ್ಟು ಪುಸ್ತಕಗಳಿವೆ. ಇಲ್ಲಿ ಕೆಲವನ್ನು ಸೂಚಿಸಿದ್ದೇನೆ. ಬಿಕು ಪರೇಕ್, “ಕಲ್ಚರಲ್ ಡೈವರ್ಸಿಟಿ ಆಂಡ್ ಲಿಬರಲ್ ಡೆಮಾಕ್ರಸಿ”, ಲೇಖನ ಗುರ್‌ಪ್ರೀತ್ ಮಹಾಜನ್ (ಸಂಪಾದನೆ), ಡೆಮಾಕ್ರಸಿ, ಡಿಫರೆನ್ಸ್ ಅಂಡ್ ಸೋಶಿಯಲ್ ಜಸ್ಟೀಸ್, ಡೆಲ್ಲಿ ಆರ್ಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೮, ಕಿಮ್ಲಿಕ.ಡಬ್ಲ್ಯೂ, ಲಿಬರಲಿಸಂ, ಕಮ್ಯುನಿಟಿ ಆಂಡ್ ಕಲ್ಚರ್, ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯನಿವರ್ಸಿಟಿ ಪ್ರೆಸ್, ೧೯೮೯ ಮತ್ತು ಆಂಡ್ರೆ ಬಿಟೆ, ದಿ ಐಡಿಯ ಆಫ್ ನ್ಯಾಚುರಲ್ ಇನ್ ಇಕ್ವಾಲಿಟಿ ಅಂಡ್ ಅದರ್ ಎಸ್ಸೆಯಸ್, ಡೆಲ್ಲಿ : ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೭೮.

[2]ಕರ್ನಾಟಕದಲ್ಲಿ ಗ್ರಾಮ ಪಂಚಾಯತ್‌ಗೆ ಮಹತ್ವ ಪೇಪರ್‌ನಲ್ಲಿ ಮಾತ್ರ. ವಾಸ್ತವದಲ್ಲಿ ಗ್ರಾಮ ಪಂಚಾಯತ್ ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಒಂದು ಮಾಧ್ಯಮವಾಗಿದೆ. ಇದನ್ನು ಬಳ್ಳಾರಿ ಜಿಲ್ಲಾ ಪಂಚಾಯತ್‌ನ ವಾರ್ಷಿಕ ಯೋಜನೆಗಳ ಅಂಕಿ ಅಂಶಗಳಿಂದ ತಿಳಿಯಬಹುದು. ಬಳ್ಳಾರಿ ಜಿಲ್ಲಾ ಪಂಚಾಯತ್‌ನ ೨೦೦೦ – ೨೦೦೧ನೇ ವರ್ಷದಲ್ಲಿ ಅನುಷ್ಠಾನ ಗೊಳಿಸುತ್ತಿರುವ ಯೋಜನೆಗಳ ಅಂಕಿ ಅಂಶಗಳನ್ನು ನೋಡುವ, ಒಟ್ಟು ಯೋಜನೆಗಳು ೧೮೮. ಅದರಲ್ಲಿ ೧೪೮ ಯೋಜನೆಗಳು ರಾಜ್ಯ ಸರಕಾರ ನಿರ್ಧಾರಿತ, ೨೫ ಕೇಂದ್ರ ಸರಕಾರದ್ದು, ೧೫ ಕೇಂದ್ರ ಸರಕಾರ ಪುರಸ್ಕೃತ, ಒಟ್ಟು ಅನುದಾನ ರೂ. ೬೫೦೦.೯೮ ಲಕ್ಷ. ಅದರಲ್ಲಿ ಶೇಕಡಾ ೫೫ ರಷ್ಟು ರಾಜ್ಯ ಸರಕಾರದ ಅನುದಾನವಾದರೆ ಶೇಕಡಾ ೪೫ ಕೇಂದ್ರ ಸರಕಾರದ ಅನುದಾನ. ಮೇಲಿನ ಅನುದಾನದಲ್ಲಿ ವಿವಿಧ ಹಂತದ ಪಂಚಾಯತ್‌ಗಳ ಪಾಲು ಇಂತಿದೆ. – ಜಿಲ್ಲಾ ಪಂಚಾಯತ್ ೩೭% ತಾಲ್ಲೂಕ್ ಪಂಚಾಯತ್ ೫೧% ಮತ್ತು ಗ್ರಾಮ ಪಂಚಾಯತ್ ಕೇವಲ ೧೨% (ಕರ್ನಾಟಕ ಸರಕಾರ, ವಾರ್ಷಿಕ ಯೋಜನೆ ೨೦೦೦ – ೨೦೦೧ : ಒಂದು ಪಕ್ಷಿ ನೋಟ, ಬಳ್ಳಾರಿ ಜಿಲ್ಲಾ ಪಂಚಾಯತ್, ೨೦೦೦)

[3]ಜವಾಹಾರ್ ರೋಜ್‌ಗಾರ್ ಯೋಜನೆಯ ಹಣ ಈ ಕೆಳಗಿನಂತೆ ವಿನಿಯೋಜನೆಯಾಗಬೇಕು – ೩೫% ಮಿತ ಉತ್ಪಾದನಾ ಆಸ್ತಿಗಳಿಗೆ, ೨೫% ಸಾಮಾಜಿಕ ಅರಣ್ಯ ಬೆಳೆಸುವುದಕ್ಕೆ ೨೨.೫% ಪರಿಶಿಷ್ಟ ಜಾತಿ/ವರ್ಗಗಳಿಗೆ ಮತ್ತು ೧೭.೫% ಇತರ ಕಾಮಗಾರಿಗಳಿಗೆ.

[4]ಮಾನವಮುಖಿ ಅಭಿವೃದ್ಧಿಯ ಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸುದ್ದಿಯಲ್ಲಿದೆ. ಆದರೆ ಇದು ಸುಮಾರು ಎಪ್ಪತ್ತರ ದಶಕದಿಂದಲೇ ರೂಪು ಪಡೆಯುತ್ತಿದೆ. ಶ್ರೀಮಂತ ರಾಷ್ಟ್ರಗಳ ಬಂಡವಾಳ ಮತ್ತು ತಂತ್ರಜ್ಞಾನ ಬಡ ರಾಷ್ಟ್ರಗಳನ್ನೂ ಶ್ರೀಮಂತಗೊಳಿಸುತ್ತವೆ ಎನ್ನುವ ಗ್ರಹಿಕೆ ಐವತ್ತರ ದಶಕದಲ್ಲಿ ಇತ್ತು. ಆದರೆ ಹಲವಾರು ದಶಕಗಳ ಆಧುನೀಕರಣ ಪ್ರಕ್ರಿಯೆ ಬಡರಾಷ್ಟ್ರಗಳಲ್ಲಿನ ಬಡತನ, ನಿರುದ್ಯೋಗ, ಅಸಮಾನತೆ ಇತ್ಯಾದಿಗಳನ್ನು ದೂರ ಮಾಡಲಿಲ್ಲ. ಈ ಸಂದರ್ಭದಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಹೊಸತೊಂದು ಮಾದರೆ ತೋರಿಸದಿದ್ದರೆ ಅವರೆಲ್ಲಾ ಶ್ರೀಮಂತ ದೇಶಗಳು ಕೊಡ ಮಾಡುವ ಮಾದರಿಗಳಿಂದ ದೂರ ಸರಿಯುವ ಸಾಧ್ಯತೆ ಇದೆ ಎಂದು ಮನಗಾಣಲಾಯಿತು. ಆವಾಗ ಉಪಯೋಗಕ್ಕೆ ಬಂದ ಅಸ್ತ್ರವೆಂದರೆ ಮಾನವ ಮುಖಿ ಅಭಿವೃದ್ಧಿ. ಇಲ್ಲಿ ಬಂಡವಳ ಅಥವಾ ತಂತ್ರಜ್ಞಾನದ ಅವಶ್ಯಕತೆ ಇಲ್ಲ. ಬಡರಾಷ್ಟ್ರಗಳಲ್ಲಿ ಧಾರಾಳ ಇರುವುದೆಂದರೆ ಮಾನವ ಸಂಪತ್ತು. ಅವರಿಗೆ ಸರಿಯಾದ ಶಿಕ್ಷಣ ಮತ್ತು ಆರೋಗ್ಯ ಕೊಡಿ ನಾವು (ಎಮ್.ಎನ್.ಸಿ.ಗಳು) ಉದ್ಯೋಗ ಕೊಡುತ್ತೇವೆ ಎನ್ನುವ ಹೊಸ ಸ್ಲೋಗನ್ ಆರಂಭವಾಯಿತು.