ಅವಿರೋಧ ಆಯ್ಕೆ ಬೇಕು ಎನ್ನುವವರ ಮುಖ್ಯ ಆಶಯ ಊರ ರಾಜಕೀಯ ತಮ್ಮ ಹಿಡಿತದಲ್ಲೆ ಇರಬೇಕು ಎನ್ನುವುದು. ತಾವು ತೀರ್ಮಾನಿಸಿದ ರೀತಿಯಲ್ಲಿ ಮತ್ತು ತಾವೂ ಸೂಚಿಸಿದ ಜನರೇ ಪಂಚಾಯತ್ ಪ್ರತಿನಿಧಿಗಳಾದರೆ ಒಳ್ಳೆಯದೆಂಬ ಬಯಕೆ ಇವರದ್ದು. ಈ ಪ್ರಮುಖರು ಒಂದು ಸ್ಥಳದಲ್ಲಿ ಸಭೆ ಸೇರಿ ಊರ ಇತರರನ್ನು ಕರೆಸಿ ಚುನಾವಣೆಯ ಕುರಿತು ತೀರ್ಮಾನಿಸುವುದಿಲ್ಲ. ಅವಿರೋಧ ಆಯ್ಕೆ ನಡೆಯಬೇಕೆಂದು ತಮ್ಮಲ್ಲೇ ತೀರ್ಮಾನಿಸಿ (ಊರ ಪ್ರಮುಖರ ಪಟ್ಟಿಯಲ್ಲಿ ಇರುವವರು, ಆದರೆ ಎಲ್ಲಾ ಜಾತಿ ಪ್ರತಿನಿಧಿಗಳು ಇರುವುದಿಲ್ಲ) ಊರವರನ್ನು ಕರೆಸಿ ವಿಚಾರ ಮುಂದಿಡುತ್ತಾರೆ. ಊರವರೆಂದರೆ ಊರಿನ ಎಲ್ಲಾ ವಯಸ್ಕರು ಸೇರುತ್ತಾರೆ ಎಂದಲ್ಲ. ಪ್ರತಿ ಜಾತಿಯ ನಾಯಕರುಗಳು, ಆ ನಾಯಕರುಗಳು ತಿಳಿಸಿ ತರುವ ಇತರ ತಮ್ಮ ಜಾತಿಯ ಪ್ರತಿಷ್ಠಿತರು ಮತ್ತು ಸುದ್ದಿ ತಿಳಿದು ಹಳ್ಳಿಯ ರಾಜಕೀಯದಲ್ಲಿ ತಮಗೂ ಪಾಲು ಬೇಕೆಂಬ ಆಶಯ ಉಳ್ಳ ಇತರರು ಹಾಜರಾಗುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಈ ಸಭೆ ತಿಮ್ಮಪ್ಪನ ಗುಡಿಯ ಮುಂದಿನ ಜಗಲಿಯಲ್ಲಿ ಸೇರುತ್ತದೆ. ಐವತ್ತು ಜನ ಕುಳಿತುಕೊಳ್ಳಬಹುದಾದಷ್ಟು ಜಗಲಿ ವಿಶಾಲವಾಗಿದೆ, ಜನರು ಹೆಚ್ಚಾದರೆ ಸುತ್ತಲಿನ ಅಂಗಳದಲ್ಲು ಸೇರುತ್ತಾರೆ. ಸೇರಿದವರಲ್ಲಿ ಪ್ರಮುಖರು ಮುಂದಿಟ್ಟ ವಿಚಾರಕ್ಕೆ ಬಲವಾದ ವಿರೋಧವಿದ್ದು ಚರ್ಚೆ ಕೈ ಮೀರಿ ಹೋಗುವ ಲಕ್ಷಣವಿದ್ದರೆ ಪ್ರಮುಖರು ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿ ಸಭಾತ್ಯಾಗ ಮಾಡುವ ಸಾಧ್ಯತೆಗಳೂ ಇವೆ. ಹಿಂದಿನ ನೇರ ಯಜಮಾನಿಕೆಗೂ ಈಗಿನ ಪರೊಕ್ಷ ಯಜಮಾನಿಕೆಗೂ ತುಂಬಾ ವ್ಯತ್ಯಾಸಗಳಿವೆ. ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ; ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದ ಕುಟುಂಬಗಳು ಮತ್ತು ಜನರು ಸ್ಪಷ್ಟವಾಗಿದ್ದರು. ಈಗ ಆ ಕುಟುಂಬಗಳು ಮತ್ತು ಜನರು ನೇರವಾಗಿ ಭಾಗವಹಿಸುತ್ತಿಲ್ಲ. ಅವುಗಳಿಗೆ ದೂರದಲ್ಲಿ ಸಂಬಂಧಿಸಿದ ಜನರು ಇಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಹಿಂದಿನವರು ತಮ್ಮ ಗುರಿ ಸಾಧನೆಯಾಗದೆ ಬಿಡುತ್ತಿರಲಿಲ್ಲ. ಗುರಿ ಸಾಧನೆಗಾಗಿ ಬಲ ಪ್ರಯೋಗ ಸೇರಿದಂತೆ ಯಾವುದೇ ಮಾರ್ಗ ಹಿಡಿಯಲು ಹಿಂಜರಿಯುತ್ತಿರಲಿಲ್ಲ. ಈಗ ಗುರಿ ಸಾಧನೆಗಾಗಿ ಬಲ ಪ್ರಯೋಗ ಸಾಧ್ಯವೇ ಇಲ್ಲ. ನಯ ಮಾತಿನಿಂದ, ತಂತ್ರಗಾರಿಕೆಯಿಂದ ಅಥವಾ ಯಾವುದಾದರೂ ಆಮಿಷ ಒಡ್ಡಿ ಒಪ್ಪಿಸುವುದು ಈಗಿನ ಸಾಧ್ಯತೆಗಳು. ಹೀಗಾಗಿ ತಮ್ಮ ಅಭಿಪ್ರಾಯವನ್ನು ಸಾಧಿಸಿಯೇ ತೀರುತ್ತೇವೆ ಎನ್ನುವ ಛಲ ಇಲ್ಲ. ಸುಲಭವಾಗಿ ಆಗುತ್ತಿದ್ದರೆ ಆಗಲಿ ಎನ್ನುವ ಒಂದು ಕಿರು ಪ್ರಯತ್ನವಿದು. ಒಂದು ವೇಳೆ ಅವಿರೋಧ ಆಯ್ಕೆ ಆದೀತೆಂಬ ತೀರ್ಮಾನ ನಡೆದರೆ ಯಾವ ಜಾತಿಯಿಂದ ಯಾರು ಎಂಬ ತೀರ್ಮಾನವೂ ಅಲ್ಲೆ ನಡೆಯುತ್ತದೆ.

ಆಯಾಯ ಜಾತಿ ಪ್ರತಿನಿಧಿಗಳ ಆಯ್ಕೆ ಸಂಕೀರ್ಣವಾದುದು. ಉದಾಹರಣೆಗೆ ಕುರುಬರಿಂದ ಇಂಥವರು ಪ್ರತಿನಿಧಿಯೆಂದು ಪ್ರಮುಖರು ತೀರ್ಮಾನಿಸುತ್ತಾರೆ ಎಂದಿಟ್ಟುಕೊಳ್ಳೋಣ. ಅದು ಸುದ್ದಿಯಾಗಿ ಕುರುಬರಲ್ಲೇ ಮತ್ತೊಬ್ಬ ರೆಡಿಯಾಗಿ ನನಗೆ ಪ್ರತಿನಿಧಿಯಾಗಲು ಆಸಕ್ತಿಯಿದೆ; ಈ ಬಾರಿ ನನಗೆ ಅವಕಾಶ ಕೊಡಬೇಕು, ಇಲ್ಲವಾದರೆ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದರೆ ಪ್ರಮುಖರು ಮತ್ತು ಜಾತಿ ನಾಯಕರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ. ಈ ಸಂಕಷ್ಟದಿಂದ ಪಾರಾಗಲು ಜಾತಿಗೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜಾತಿ ನಾಯಕರಿಗೆ ಒಪ್ಪಿಸುತ್ತಾರೆ. ಜಾತಿ ನಾಯಕರುಗಳು ತಮ್ಮ ಜಾತಿಯ ಪ್ರತಿಷ್ಠಿತರ ಸಮ್ಮುಖದಲ್ಲಿ ತಾವು ನಿರ್ಧರಿಸಿದ ಅಭ್ಯರ್ಥಿ ಮತ್ತು ಅದನ್ನು ವಿರೋಧಿಸುವವರನ್ನು ಒಂದು ಕಡೆ ಕಲೆ ಹಾಕಿ ಚರ್ಚಿಸಿ ತೀರ್ಮಾನಕ್ಕೆ ಬರುತ್ತಾರೆ. ಆಯಾಯ ಜಾತಿಯ ಪ್ರತಿಷ್ಟಿತರು ಯಾರೆಂದು ನೋಡಿ ಮುಂದುವರಿಯುವ. ಪ್ರತಿಷ್ಟೆ – ಸಾಂಪ್ರದಾಯಿಕ ಮತ್ತು ಆಧುನಿಕ ಮಾನದಂಡಗಳಿಂದ ನಿರ್ಧಾರವಾಗುತ್ತದೆ. ಹಿಂದಿನಿಂದಲೂ ಕೃಷಿಕನಾಗಿದ್ದು ಈಗಲೂ ಕೃಷಿಕನಾಗಿದ್ದುಕೊಂಡು ಪ್ರತಿಷ್ಠಿತ ಅನ್ನಿಸಿಕೊಳ್ಳಬೇಕಾದರೆ ಆತ ತನ್ನ ಆರ್ಥಿಕ ಸ್ಥಿತಿಯನ್ನು ಸತತವಾಗಿ ಸುಧಾರಿಸಿ ಕೊಂಡಿರಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೆಚ್ಚು ಹೆಚ್ಚು ಕೃಷಿ ಮಾಡುತ್ತಿರಬೇಕು. ಅದಿಲ್ಲದಿದ್ದರೆ ಕೃಷಿಯೇತರ ವಲಯದಲ್ಲಿ ಮುಖ್ಯವಾಗಿ ಗಣಿಗಾರಿಕೆ ಅಥವಾ ಇತರ ಕಸುಬಿನಲ್ಲಿ ತನ್ನ ಆರ್ಥಿಕ ಸ್ಥಿತಿಯನ್ನು ತನ್ನ ಜಾತಿಯ ಇತರರಿಂದ ಉತ್ತಮಮಾಗಿ ಸುಧಾರಿಸಿಕೊಂಡಿರಬೇಕು. ಇದರ ಜತೆಗೆ ಆಧುನಿಕ ಶಿಕ್ಷಣ ಪಡೆದು ಆಧುನಿಕ ಸಂಸ್ಥೆಗಳಲ್ಲಿ ದುಡಿಯುವವರು ಕೂಡ ಸೇರುತ್ತಾರೆ. ಇವರೆಲ್ಲ ಪ್ರತಿಷ್ಟಿತರ ಸ್ಥಾನದಲ್ಲಿ ಇರಲು ಸಾಧ್ಯ. ಇಲ್ಲಿ ಪುನಃ ಪ್ರಮುಖರ/ ಜಾತಿ ನಾಯಕರ ತೀರ್ಮಾನವನ್ನು ವಿರೋಧಿಸುವಾತನ ಶಕ್ತಿ ನಿರ್ಣಾಯಕವಾಗುತ್ತದೆ. ಆತನೂ ಆರ್ಥಿಕವಾಗಿ ಬಲಿಷ್ಠನಾಗಿದ್ದು, ಜಾತಿಯ ಹಲವಾರು ಬೆಂಬಲಿಗರನ್ನು ಹೊಂದಿದ್ದರೆ ಆತನ ಮಾತೇ ನಡಿಯುವ ಸಾಧ್ಯತೆಗಳಿವೆ. ಒಂದು ವಿಧದಲ್ಲಿ ಇಲ್ಲಿ ಚರ್ಚೆ ನಿರ್ಣಾಯಕವಲ್ಲ. ಚರ್ಚೆಗೆ ಬರುವ ಪಕ್ಷಗಳ ಬಲಾಬಲಗಳು ನಿರ್ಣಾಯಕ. ಇನ್ನು ಕೆಲವು ಸಂದರ್ಭಗಳಲ್ಲಿ ಈ ಜಾತಿ ನಾಯಕರು ವಿರೋಧಿಸುವಾತನನ್ನು ಪುಸಲಾಯಿಸಿ ಅಥವಾ ಮುಂದಿನ ಬಾರಿ ನೀನೇ ಅಭ್ಯರ್ಥಿ ಎಂದು ಭರವಸೆ ಇತ್ತು ಅಥವಾ ಇತರ ಆಮಿಷ ತೋರಿಸಿ ಆತನನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುತ್ತಾರೆ. ಅವಿರೋಧ ಆಯ್ಕೆಯ ಈ ಚಿತ್ರಣದೊಂದಿಗೆ ಪಿ.ಕೆ.ಹಳ್ಳಿಯಲ್ಲಿ ೧೯೯೫ರ ಪಂಚಾಯತ್ ಪ್ರತಿನಿಧಿಗಳ ಅವಿರೋಧ ಆಯ್ಕೆಯ ಪ್ರಕ್ರಿಯೆಯನ್ನು ತಿಳಿಯುವ.

ಕುರುಬರ ಪ್ರತಿನಿಧಿಯನ್ನು ಆರಿಸಲು ಮಲ್ಲಪ್ಪನವರ ಮನೆಯಲ್ಲಿ ಬೈಠಕ್ ನಡಿಯಿತು. ಆಧಿನಿಯಮದ ಪ್ರಕಾರ ಕುರುಬರ ಜಾತಿಗೆ ಒಬ್ಬ ಪ್ರತಿನಿಧಿ; ಅದು ಮಹಿಳೆ. ಯಾರು ಯಾರೆಂದು ಮಾತುಕತೆ ನಡೆಯುವಾಗ ವೆಂಕಮ್ಮನ ಮಗ ನನ್ನ ತಾಯಿ ಆಗುತ್ತಾರೆಂದು ಸೂಚಿಸಿದ. ವೆಂಕಮ್ಮನಿಗೆ ಆಗಲೇ ೬೦ ದಾಟಿದೆ, ಓದು ಬರಹ ಇಲ್ಲ. ಜತೆಗೆ ಆರ್ಥಿಕ ಬಲಹೀನತೆ. ವ್ಯಾಗನ್ ಲೋಡಿಂಗ್ ಮನೆಯವರ ಮುಖ್ಯ ಆದಾಯದ ಮೂಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವೆಂಕಮ್ಮ ಸರಿಯಾದ ಪ್ರತಿನಿಧಿಯಲ್ಲ ಎಂಬ ಗುಸುಗುಸು ಆರಂಭವಾಯಿತು. ರಾಮಪ್ಪನವರ ಸಣ್ಣಮಗ ತನ್ನ ದೊಡ್ಡಣ್ಣನ ಪತ್ನಿಯನ್ನು ಪ್ರತಿನಿಧಿ ಮಾಡುವ ಪ್ರಸ್ತಾಪ ಮುಂದಿಟ್ಟ. ಆತನ ಅತ್ತಿಗೆಗೆ ಎಸ್.ಎಸ್.ಎಲ್.ಸಿ. ಆಗಿದೆ; ಓದು ಬರಹ ಇದೆ, ತಿಳುವಳಿಕೆ ಇದೆ. ಹಾಗಾಗಿ ಉತ್ತಮ ಪ್ರತಿನಿಧಿಯಾಗಬಹುದೆಂಬ ವಾದವನ್ನು ಮಾಡಿದ. ಇದರಿಂದ ಪ್ರೇರಿತನಾದ ಮತ್ತೊಬ್ಬ ಯುವಕ ತನ್ನ ಅತ್ತಿಗೆಯ ಹೆಸರನ್ನೂ ಹೇಳಿದ. ಆದರೆ ಸಭೆಯಲ್ಲಿ ಹಾಜರಿದ್ದ ಹಿರಿಯರಿಗೆ ತಮ್ಮ ಕಿರಿಯ ಸೊಸೆಯರು ಪಂಚಾಯತ್ ಸದಸ್ಯರಾಗುವುದು ಸರಿ ಬರಲಿಲ್ಲ. ಕಿರಿಯರನ್ನು ದಬಾಯಿಸಿ ಬಾಯಿ ಮುಚ್ಚಿಸಿದರು. ಪಂಚಾಯತ್ ಸದಸ್ಯೆ ಎಂದರೇನು? ಎಲ್ಲಿ ಬೇಕಾದರೂ, ಯರ ಜತೆಯದರೂ ಓಡಾಡಲು ತಯಾರಿರಬೇಕು. ಅದೆಲ್ಲ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳು ಮಾಡುವ ಕೆಲಸವಲ್ಲ. ವೆಂಕಮ್ಮನೇ ಸರಿ. ಅವಳಿಗೆ ವಯಸ್ಸಾಗಿದೆ. ಎಲ್ಲಿ ಬೇಕೆಂದರಲ್ಲಿ; ಯಾರ ಜತೆಗೂ ಓಡಾಡಬಹುದು. ಅವಳೇ ಆಗಲಿ ಎಂದು ತೀರ್ಮಾನವಾಯಿತು.

ಹರಿಜನರಲ್ಲಿ ಆರಂಭದಿಂದಲೇ ತಾಯಪ್ಪ ಪ್ರತಿನಿಧಿಯಾಗುತ್ತಾನೆ ಎಂದು ಪ್ರಚಾರ ಮಾಡಿದ್ದರು. ಆದರೆ ಇದು ಈಗಾಗಲೇ ಹರಿಜನರ ಯಜಮಾನಿಕೆಯ ಗುತ್ತಿಗೆ ಹಿಡಿದವರಿಗೆ ಸರಿ ಬರಲಿಲ್ಲ. ಈ ತಾಯಪ್ಪ ಯಾವತ್ತೂ ನೋಡಿದರೂ ಯಜಮಾನಿಕೆ ನಡೆಸುವ ಗುಂಪಿಗೆ ವಿರುದ್ಧವೇ. ಕಳೆದ ವರ್ಷ ಯಜಮಾನಿಕೆ ನಡೆಸುತ್ತಿರುವವರ ಗುಂಪಿಗೆ ಸೇರಿದ ಒಬ್ಬ ಯುವಕ ಕೇರಿಯ ಯುವತಿಯೊಬ್ಬಳನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಬಸುರಾಗಿಸಿದ್ದ. ಹುಡುಗಿಯ ಮನೆಯವರು ಎಷ್ಟು ಬೇಡಿಕೊಂಡರು ಮದುವೆಯಗಲು ತಿರಸ್ಕರಿಸಿದ. ಹುಡುಗಿಯ ತಂದೆ ಈ ವಿಚಾರವನ್ನು ಕೇರಿಯ ನಾಯಕರ ಗಮನಕ್ಕೆ ತಂದರು. ಕೇರಿಯ ನಾಯಕರು ಹುಡುಗಿಯ ತಂದೆಗೆ ಸಮಾಧಾನ ಹೇಳಿ ಹುಡುಗಿಗೆ ಬೇರೆ ಹುಡುಗನನ್ನು ಹುಡುಕಲು ಸಲಹೆ ನೀಡಿದರು. ಇದರಿಂದ ನೊಂದುಕೊಂಡ ಅವರು ತಾಯಪ್ಪನಿಗೆ ವಿಷಯ ತಿಳಿಸಿದರು. ತಾಯಪ್ಪ ಗಾದಿಗನೂರು ಪೋಲೀಸ್ ಠಾಣೆಯಲ್ಲಿ ಹುಡುಗನ ವಿರುದ್ಧ ದೂರು ಬರೆಯಿಸಿ ಹುಡುಗಿಗೆ ನ್ಯಾಯ ದೊರಕುವಂತೆ ಮಾಡಿದ. ಈ ಘಟನೆಯ ನಂತರವಂತೂ ತಾಯಪ್ಪನನ್ನು ಕಂಡರೆ ಕೇರಿಯ ನಾಯಕರು ಉರಿದು ಬೀಳುತ್ತಾರೆ. ಅದಕ್ಕೆ ಅವರು ಹರಿಜನ ಪ್ರತಿನಿಧಿಯಾಗಿ ತನ್ನವನೇ ಆದ ಕರಿಸಿದ್ದ ಆಗಬೇಕೆಂದು ಸುದ್ದಿ ಹರಡಿಸಿದರು. ಹರಿಜನ ಹಿರಿಯರಿಗೆ ಈ ಬೆಳವಣಿಗೆ ಸರಿಬರಲಿಲ್ಲ. ಇಡೀ ಊರಿನ ಸದಸ್ಯರೆಲ್ಲಾ ಅವಿರೋಧ ಆಯ್ಕೆಯಗುವಾಗ ನಮ್ಮದೇನು ವಿಶೇಷ. ಕೇರಿಗೆ ಯಾಕೆ ಚುನಾವಣೆ ಎಂದು ಹರಿಜನರೂ ಅವಿರೋಧ ಆಯ್ಕೆಗೆ ಪ್ರಯತ್ನಿಸಿದರು. ಆದರೆ ಇಬ್ಬರೂ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯಲು ಒಪ್ಪುತ್ತಿಲ್ಲ. ಅದು ಅವರ ವೈಯಕ್ತಿಕ ಆಶಯ ಎನ್ನಲಾಗುವುದಿಲ್ಲ. ಅವರವರು ಪ್ರತಿನಿಧಿಸುವ ಒಳಪಂಗಡಗಳ ಆಶಯ ಕೂಡಾ ಇರಬಹುದು. ಮಾತುಕತೆ ನಡೆಯಿತು. ಒಂದು ರಾಜಿ ಸೂತ್ರ ತಯಾರಾಯಿತು. ಅದರ ಪ್ರಕಾರ ಮೊದಲ ಎರಡೂವರೆ ವರ್ಷ ತಾಯಪ್ಪ ನಂತರದ ಅವಧಿಯಲ್ಲಿ ಕರಿಸಿದ್ದ ಪ್ರತಿನಿಧಿಯಾಗುವುದೆಂದು ತೀರ್ಮಾನವಾಯಿತು.

ನಾಯಕರಿಗೆ ಎರಡು ಸೀಟುಗಳು – ಒಂದು ಪುರುಷ ಮತ್ತು ಒಂದು ಮಹಿಳಾ ಸದಸ್ಯೆಯ ಸೀಟು. ನಾಡಿಗರ ಗುಂಪು (ಅದರಲ್ಲಿ ದನಕಾಯುವವರು, ಜಬ್ಬಲಿಯಪ್ಪನವರು, ತಳವಾರರು ಸೇರುತ್ತಾರೆ.) ಊರ ಒಟ್ಟು ರಾಜಕೀಯ ದೃಷ್ಟಿಯಿಂದ ನಾಯಕರ ಪ್ರತಿನಿಧಿಗಳು ಎಂದು ಗುರುತಿಸಲ್ಪಡುತ್ತಾರೆ. ಇತ್ತೀಚೆಗೆ ರೂಪುಗೊಂಡ ಹನುಮಪ್ಪ, ಭೀಮಪ್ಪನವರ ಗುಂಪು ಮತ್ತು ಬುರ್ಲೆಯವರು ನಾಡಿಗರ ಗುಂಪಿನ ಯಜಮಾನಿಕೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಜತೆಗೆ ಭೀಮಪ್ಪನವರ ಪಂಗಡದ ಶಿವಪ್ಪ ತಾನು ಪಂಚಾಯತ್ ಸದಸ್ಯನಾಗುತ್ತೇನೆಂದು ಪ್ರಚಾರ ಮಾಡಿದ್ದ. ತಮ್ಮ ಜಾತಿ ನಾಯಕರು ಯಾರನ್ನೇ ನಿರ್ಧರಿಸಿದರೂ ತಾನು ಕಣದಿಂದ ಹಿಂದಕ್ಕೆ ಸರಿಯುವುದಿಲ್ಲವೆಂದು ಸುದ್ದಿ ಕೂಡ ಮಾಡಿದ್ದ. ಶಿವಪ್ಪ ಆರ್ಥಿಕವಾಗಿ ಬಲಾಢ್ಯನಲ್ಲದಿದ್ದರೂ ಆತನಿಗೆ ಆತನ ಪಂಗಡದ ಮತ್ತು ಬುರ್ಲೆಯವರ ಬೆಂಬಲವಿತ್ತು. ಆತನನ್ನು ಎದುರು ಹಾಕಿಕೊಂಡರೆ ಚುನಾವಣೆ ನಡೆಯಬೇಕು. ಊರೇ ಒಂದು ನಿರ್ಧರಿಸುವಾಗ ನಾವು ಮತ್ತೊಂದು ನಿರ್ಧರಿಸುವುದು ನಮ್ಮ ಜಾತಿಯ ಒಡಕನ್ನು ಮತ್ತು ನಮ್ಮ ನಾಯಕತ್ವದ ಕೊರತೆಯನ್ನು ತೋರಿಸುತ್ತದೆ ಎಂದು ನಾಡಿಗರ ಗುಂಪು ಮೆಟ್ನಯ್ಯನ ಸದಸ್ಯತ್ವವನ್ನು ಅನುಮೋದಿಸಿತು. ನಾಡಿಗರ ಗುಂಪಿಗೆ ಮಹಿಳಾ ಸದಸ್ಯತ್ವ ಹೋಯಿತು. ಮಹಿಳಾ ಸದಸ್ಯೆಯಾಗಲು ಅಭ್ಯರ್ಥಿಯ ಹುಡುಕಾಟ ಶುರುವಾಯಿತು.

ನಾಯಕರು ಕೂಡ ತಮ್ಮ ಮಹಿಳಾ ಪ್ರತಿನಿಧಿಯ ಹುಡುಕಾಟದಲ್ಲಿ ಕುರುಬರು ಬಳಸಿದ ಮಾನದಂಡವನ್ನೇ ಬಳಸಿದರು. ಚಿಕ್ಕ ಪ್ರಾಯದವರು ಅಥವಾ ಅವಿವಾಹಿತರು ಆಯ್ಕೆಯಾದರೆ ಸಮಸ್ಯೆಯಾಗುತ್ತದೆಂದು ಪ್ರಾಯಸ್ಥರಿಗೆ ಹುಡುಕಾಟ ನಡೆಯಿತು. ಕಾಯಿಪಲ್ಲೆ ಸಂಕ್ಲಮ್ಮನನ್ನು ಮೆಂಬರ್ ಮಾಡುವುದೆಂದು ಪ್ರಮುಖರು ನಿರ್ಧರಿಸಿದರು. ಸಭೆಯಲ್ಲಿ ಸಂಕ್ಲಮ್ಮ ಹಾಜರಿರಲಿಲ್ಲ; ಏನೋ ಕೆಲಸದ ಮೇಲೆ ಹೊಸಪೇಟೆಗೆ ಹೋಗಿದ್ದಳು. ಪೇಟೆಯಿಂದ ಹಿಂತಿರುಗಿ ಬಂದಾಗ ಸಂಕ್ಲಮ್ಮನಿಗೆ ಆಶ್ಚರ್ಯ ಕಾದಿತ್ತು. ನೀನು ಈ ಬಾರಿ ಪಂಚಾಯತ್ ಮೆಂಬರ್ ಆಗಬೇಕೆಂದು ನಾವೆಲ್ಲಾ ಸೇರಿ ತೀರ್ಮಾನಿಸಿದ್ದೇವೆ ಎಂದು ಜಾತಿ ಪ್ರಮುಖರು ತಿಳಿಸಿದರು. ಸಂಕ್ಲಮ್ಮನಿಗೆ ಈ ಸುದ್ದಿಯನ್ನು ಹೇಗೆ ಜೀರ್ಣಿಸಿಕೊಳ್ಳಬೇಕೆಂದೇ ತಿಳಿಯಲಿಲ್ಲ. ಸಂತೋಷ ಪಡುವ ಎಂದರೆ ಮೆಂಬರಾಗಿ ಏನಾಗುತ್ತದೆ ಎಂಬ ಅರಿವಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಬೆಟ್ಟದಷ್ಟು ಗಾತ್ರದ ಖಾಸಗಿ ಸಮಸ್ಯೆಗಳೇ ಅವಳ ಮುಂದೆ ಬಂದವು. ಗಂಡ ಇಲ್ಲವಾದ ನಂತರ ಮನೆಯಿಲ್ಲದೆ, ಊಟಕ್ಕೆ ಗತಿಯಿಲ್ಲದೆ ಮಕ್ಕಳನ್ನು ಸಾಕಲು ಪಟ್ಟಪಾಡು. ತಲೆ ಮೇಲೆ ಹೊತ್ತು ಕಾಯಿಪಲ್ಲೆ ವ್ಯಾಪಾರ ಶುರು ಮಾಡಿದ್ದು. ಪ್ರಾಯವಾದಂತೆ ಊರೂರು ಸುತ್ತುವುದ ಕಷ್ಟವೆಂದು ಸ್ಟೇಷನ್ ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿ ತೆರದದ್ದು. ಇನ್ನೇನು ಇದ್ದೊಬ್ಬ ಮಗನಿಗೆ ಮದುವೆಯಾಗಿ ಮೊಮ್ಮಕ್ಕಳ ಮುಖ ನೋಡಿಕೊಂಡು ಸಂತೋಷದಿಂದ ಇರುವ ಎಂದಾಗ ಸೊಸೆಯಿಂದಾಗಿ ಮನೆ ಬಿಟ್ಟು ಪೆಟ್ಟಿಗೆ ಅಂಗಡಿಯಲ್ಲೇ ವಾಸ ಆರಂಭಿಸಿದ್ದು. ಅವರಾದರು ಸುಖದಿಂದ ಇರಲಿ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮಗನ ಕ್ಷಯರೋಗ ನೋಡಿ ಪರಾರಿಯಾದ ಸೊಸೆ; ಮಗನ ಜತೆ ಮೊಮ್ಮಕ್ಕಳನ್ನು ಸಾಕುವ ಹೊಣೆ ಪುನಃ ಸಂಕ್ಲಮ್ಮನ ಮೇಲೆ ಬಂದದ್ದು. ಹೀಗೆ ಸಮಸ್ಯೆಗಳು ಸಾಲು ಸಾಲಾಗಿ ಸಂಕ್ಲಮ್ಮನ ಮುಂದೆ ಬಂದವು.

ನನ್ನ ಸಮಸ್ಯೆಗಳೇ ತುಂಬಾ ಇವೆ ಇದರ ಮಧ್ಯೆ ಈ ಮೆಂಬರ್ ಗಿರಿ ನನಗೆ ಯಾಕೆ? ಎಂದು ಸಂಕ್ಲಮ್ಮ ಆಕ್ಷೇಪವೆತ್ತಿದಳು. ನೋಡು ಸಂಕ್ಲಮ್ಮ, ಸಾರಾಯಿ ಅಂಗಡಿಯ ವೆಂಕಟೇಶನ ಹೆಂಡತಿಯನ್ನು ಮೆಂಬರು ಮಾಡುವುದೆಂದು ಕೆಲವರು ಸಲಹೆ ಇತ್ತರು. ಆದರೆ ಅವಳು ಚಿಕ್ಕ ವಯಸ್ಸಿನವಳು, ಹೊರಗೆ ವ್ಯವಹರಿಸಿ ತಿಳುವಳಿಕೆಯಿಲ್ಲ. ಜತೆಗೆ ಅವಳ ಬಾವನೇ ಬೇಡವೆಂದು ಹೇಳಿದ್ದಾನೆ. ಅಲ್ಲಿ ಸೇರಿದ್ದ ಎಲ್ಲರೂ ನೀನೇ ಮೆಂಬರಾಗಲು ಲಾಯಕ್ಕು ಎಂದು ತೀರ್ಮಾನಿಸಿದ್ದಾರೆ. ನಿನಗೆ ವಯಸ್ಸಾಗಿದೆ, ಮೇಲಾಗಿ ಪ್ರಪಂಚ ನೋಡಿದ್ದಿ. ದಿಲ್ಲಿಗೆ ಕರೆದರೂ ನೀನು ಹೋಗಲು ಹಿಂಜರಿಯುವುದಿಲ್ಲ, ಯಾರ ಜತೆ ಮಾತಾಡಲು ನೀನು ಹೆದರುವುದಿಲ್ಲ ನೀನೇ ಮೆಂಬರಾಗಬೇಕು ಎಂದು ಜಾತಿ ಪ್ರಮುಖರು ಒತ್ತಾಯಿಸಿದರು. ಆಶ್ರಯ ಯೋಜನೆ ಮತ್ತು ಅದು ಪಂಚಾಯತ್‌ನಿಂದಲೇ ನಿರ್ಧಾರವಾಗುವ ವಿಚಾರ ಸಂಕ್ಲಮ್ಮನಿಗೆ ಅವಳ ಮನೆ ಹುಡುಕಾಟದಿಂದ ತಿಳಿದಿತ್ತು. ಮನೆಯಿಲ್ಲದ ತನಗೆ ಒಂದು ಮನೆ ಮಾಡಿಕೊಳ್ಳಲಾದರೂ ಈ ಮೆಂಬರ್‌ಗಿರಿ ನೆರವಾದೀತು ಎಂಬ ನಂಬಿಕೆ ಸಂಕ್ಲಮ್ಮನದು. ಜತೆಗೆ ತನ್ನ ಓಣಿ ಜನರಗೆ ಕೆಲವು ಕೆಲಸಗಳನ್ನಾದರೂ ಮಾಡಿಸಬಹುದು ಎಂಬ ಭರವಸೆಯಿಂದ ಮೆಂಬರಾಗಲು ಒಪ್ಪಿದಳು ಸಂಕ್ಲಮ್ಮ.[1]

ವಡ್ಡರಲ್ಲಿ ಕೂಡ ಎರಡು ಗುಂಪುಗಳು. ಒಂದು ಹಿಂದಿನಿಂದಲೇ ಊರಲ್ಲೇ ಇದ್ದವರು, ಮತ್ತೊಂದು ಆಂಧ್ರದ ಕಡೆಯಿಂದ ವಲಸೆ ಬಂದವರು. ವಲಸಿಗರ ಕುಟುಂಬಗಳು ರೈಲ್ವೆ ನಿಲ್ದಾಣ ಪಕ್ಕ ಗುಡಿಸಲು ಮಾಡಿಕೊಂಡಿದ್ದಾರೆ. ಒಂದು ವಿಧದಲ್ಲಿ ಇವರುಗಳು ಊರಿನಿಂದ ದೂರ. ಹಾಗೆ ಊರಿನ ಪ್ರಮುಖರು, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕಿನಿಂದಲೂ ಇವರೂ ಸ್ವಲ್ಪ ದೂರವೇ. ವಲಸಿಗರಿಗೆ ಹೋಲಿಸಿದರೆ ಊರಲ್ಲೇ ಇರುವ ವಡ್ಡರು ಇತರ ಕೆಳಜಾತಿಯವರಂತೆ ಊರಿನ ಭಾಗವೇ ಆಗಿದ್ದಾರೆ. ಊರ ಪ್ರಮುಖರ ಪಟ್ಟಿಯಲ್ಲಿ ಊರ ವಡ್ಡರ ಹೆಸರಿದೆ; ವಲಸಿಗರ ಹೆಸರಿಲ್ಲ. ವಡ್ಡರಿಗೆ ಎರಡು ಸೀಟುಗಳು. ಒಂದು ಮಹಿಳೆಗೆ ಕಾದಿರಿಸಿದರೆ ಇನ್ನೊಂದು ಪುರುಷರಿಗೆ. ಊರ ವಡ್ಡರು ಪುರಷರು ಸೀಟು ಪಡೆದರೆ ಮಹಿಳೆಗೆ ಕಾದಿರಿಸಿದ ಸೀಟು ವಲಸಿಗರ ಪಲಿಗೆ. ಮಹಿಳಾ ಸೀಟು ಇಲ್ಲಿ ನಾಮಕಾವಸ್ಥೆ. ಆದುದರಿಂದ ಎಲ್ಲಾ ಜಾತಿಯವರು ಅದನ್ನು ಧಾರಾಳವಾಗಿ ಬಿಟ್ಟಿಕೊಡುತ್ತಾರೆ. ವಡ್ಡರು ಇದಕ್ಕೆ ಹೊರತಾಗಿಲ್ಲ. ಮುಸ್ಲಿಮರ ಒಂದು ಸೀಟು ಮಹಿಳೆಯರಿಗೆ ಕಾದಿರಿಸಿದ್ದು. ಗೌಡರ ಮನೆಯವರು ಮುಸ್ಲಿಂ ಸಮುದಾಯದ ನಾಯಕರೆಂದು ಪರಿಗಣಿಸಲಾಗಿದೆ. ಆದರೆ ಅವರ ನಾಯಕತ್ವ ಪ್ರಶ್ನಾತೀತವಲ್ಲ ಎಂದು ಈ ಹಿಂದೆಯೇ ನೋಡಿದ್ದೇವೆ. ಪ್ರಶ್ನಿಸುವ ಇತರ ಮುಸ್ಲೀಮರಿದ್ದಾರೆ. ಜತೆಗೆ ಗೌಡರ ಮನೆಯ ಕರೀಂಖಾನ್ ಆವಾಗಲೇ ಜನತಾದಳದಿಂದ ತಾಲ್ಲೂಕು ಪಂಚಾಯತ್‌ಗೆ ಸ್ಪರ್ಧಿಸುವುದೆಂದು ತೀರ್ಮಾನವಾಗಿತ್ತು. ಹಾಗಾಗಿ ಮಹಿಳಾ ಸೀಟು ಅವರ ಮನೆಯವರಿಗೆ ಹೋಗುವ ಸಾಧ್ಯತೆ ಇರಲಿಲ್ಲ. ತಮ್ಮ ಮನೆಯ ಹೆಂಗಸರು ಪಂಚಾಯತ್ ಸದಸ್ಯೆ ಆಗಬೇಕೆಂದು ವಿಶೇಷ ಮುತುವರ್ಜಿ ವಹಿಸುವ ಮುಸ್ಲಿಮರು ಇರಲಿಲ್ಲ.

ಆ ಸಂದರ್ಭದಲ್ಲಿ ದೇವರು ಹೊರುವ ಪೀರ್ ಸಾಬರ ಪತ್ನಿಯನ್ನು ಮೆಂಬರು ಮಾಡುವುದೆಂದು ಸಮುದಾಯದ ಹಿರಿಯರು ಸೂಚಿಸಿದರು. ಆ ಅಭಿಪ್ರಾಯಕ್ಕೆ ಪೀರ್ ಸಾಬರು ವಿರೋಧಿಸಲಿಲ್ಲ. ಹೀಗೆ ಅಮ್ಮೀನಮ್ಮ ಪಂಚಾಯತ್ ಮೆಂಬರಾದರು. ಅಮ್ಮೀನಮ್ಮನನ್ನು ಭೇಟಿಯಾದಾಗ ನಿಮಗೆ ಮೆಂಬರಾಗಲು ಆಸಕ್ತಿಯಿತ್ತೇ? ಎಂದು ಕೇಳಿದೆ. ನಮ್ಮವರು ಹೇಳಿದರು ನಾನು ಆದೆ ಎಂದರು. ನಿಮಗೆ ಆಸಕ್ತಿಯಿತ್ತೇ ಎಂದು ಪುನಃ ಕೇಳಿದೆ. ಪಂಚಾಯತ್ ಕಟ್ಟಡವೇ ಸರಿಯಾಗಿ ನೋಡಿಲ್ಲ ನನಗೆಂತ ಆಸಕ್ತಿ ಎಂದರು ಅಮೀನಮ್ಮ. ಸ್ವಲ್ಪ ಹೊತ್ತು ಬಿಟ್ಟು ಅವರೆ ಮುಂದುವರಿಸಿದರು ನಮಗೆ ನಮ್ಮ ಮನೆಯ ಕೆಲಸವೇ ತುಂಬಾ ಇರುತ್ತದೆ; ಮೆಂಬರ್ ಆಗುವುದು ಗಂಡಸರ ಕೆಲಸ; ನಮ್ಮ ಕೆಲಸವಲ್ಲ. ಪ್ರಪಂಚ ಸುತ್ತುವವರು ಅವರು. ಅವರಿಗೆ ಹೊರಗೆ ಏನು ನಡೆಯುತ್ತದೆ ಎಂದು ತಿಳಿಯುತ್ತದೆ ಎಂದರು. ಈಗ ನೀವು ಮೆಂಬರಲ್ಲವೆ ಎಂದೆ. ಅದೇನೋ ಸರಕಾರದ ಕಾನೂನಿನಂತೆ; ಅದಕ್ಕೆ ಹೆಂಗಸರೂ ಮೆಂಬರಾಗಬೇಕಂತೆ ಎಂದರು ಅಮೀನಮ್ಮ. ಅಂದರೆ ಸರಕಾರದ ಲೆಕ್ಕಚಾರ ಸರಿದೂಗಿಸಲು ಹಳ್ಳಿಯ ಹೆಂಗಸರು ಮೆಂಬರಾಗಬೇಕು; ಇಲ್ಲವಾದರೆ ಅದು ಗಂಡಸರ ಕ್ಷೇತ್ರ. ಅಲ್ಲಿ ಮಹಿಳೆಯರಿಗೆ ಯಾವ ಪಾತ್ರನೂ ಇಲ್ಲ ಎಂದು ಅಮೀನಮ್ಮ ಬಲವಾಗಿ ನಂಬಿದ್ದಾರೆ.

ಹೀಗೆ ಅವಿರೋಧ ಆಯ್ಕೆ ನಿಜವಾಗಿಯೂ ಅವಿರೋಧ ಆಗಿರಲಿಲ್ಲ. ಜಾತಿಯ ಎಲ್ಲರೂ ಸೇರಿ ಮಾಡುವ ನಿರ್ಧಾರವು ಆಗಿಲ್ಲ. ಜಾತಿ ಪ್ರಮುಖರೆಂದು ಗುರುತಿಸಲ್ಪಟ್ಟವರ ನಾಯಕತ್ವವನ್ನು ಪ್ರಶ್ನಿಸುವ ಮತ್ತು ಆ ಮೂಲಕ ತಮ್ಮ ನಾಯಕತ್ವವನ್ನು ಸ್ಥಾಪಿಸುವ ಕೆಲಸ ನಡೆಯುತ್ತಲೆ ಇರುತ್ತದೆ. ಇಂತಹ ಪ್ರಶ್ನಿಸುವ ಕೆಲಸಗಳು ಹೆಚ್ಚಾಗಿ ಒಗ್ಗಟ್ಟನ್ನು ಬಯಸುವ ಸಂದರ್ಭದಲ್ಲೇ ವ್ಯಕ್ತವಾಗುತ್ತಿವೆ. ಇದು ಊರೊಳಗೆ ಮತ್ತು ಹೆಚ್ಚು ಕಡಿಮೆ ಎಲ್ಲಾ ಜಾತಿಯೊಳಗೆ ಕಂಡು ಬಂದಿದೆ. ಪ್ರಶ್ನಿಸುವವರ ಆಶಯಕ್ಕೆ ಪೂರಕವಾಗಿ ನಡೆಯುವ ಮೂಲಕ ಸಾಂಪ್ರದಾಯಿಕ ನಾಯಕತ್ವ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದುದರಿಂದ ಮೇಲ್ನೋಟಕ್ಕೆ ಒಂದು ರೀತಿಯ ಮುಂದುವರಿಕೆ ಕಂಡು ಬರುತ್ತಿದೆ. ಆದರೆ ಆಳದಲ್ಲಿ ಬೇಕಾದಷ್ಟು ಘರ್ಷಣೆಗಳು, ಪ್ರತಿಭಟನೆಗಳು ಮತ್ತು ಪ್ರಶ್ನಿಸುವ ಪ್ರಕ್ರಿಯೆ ನಡೆದೇ ಇದೆ. ಆಳದಲ್ಲಿ ನಡೆಯುವ ಈ ಪ್ರಕ್ರಿಯೆ ಬೆಳಕಿಗೆ ಬರುವಲ್ಲಿ ಹೊರ ವಾತಾವರಣ ಕೊಡಮಾಡುವ ಹೊಸ ಬದುಕಿನ ಸಾಧ್ಯತೆಗಳು ಗಣನೀಯ ಪ್ರಭಾವ ಬೀರುತ್ತವೆ. ಹಳ್ಳಿಗೆ ಸೀಮಿತಗೊಂಡಂತೆ ನೋಡಿದರೆ ಪ್ರತಿ ಜಾತಿಯಲ್ಲೂ ಸಾಂಪ್ರದಾಯಿಕ ನಾಯಕತ್ವವನ್ನು ಪ್ರಶ್ನಿಸಿದವರು ಗಣಿ ಅಥವಾ ವ್ಯಾಗನ್ ಲೋಡಿಂಗ್‌ನಲ್ಲಿ ತೊಡಗಿಸಿಕೊಂಡವರು. ಊರ ಆರ್ಥಿಕ ಹಾಗೂ ರಾಜಕೀಯ ಬದುಕಿನಿಂದ ಇವರುಗಳು ತಾತ್ಕಾಲಿಕವಾಗಿ ಬೇರ್ಪಟ್ಟಿರುತ್ತಾರೆ. ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗ್ ಈ ಎರಡು ಕೃಷಿಯೇತರ ಚಟುವಟಿಕೆಗಳು ಇವರನ್ನು ಸಾಂಪ್ರದಾಯಿಕ ಯಜಮಾನಿಕೆಯ ನೆರಳಿನಿಂದ ದೂರವಿಟ್ಟಿವೆ. ದಿನನಿತ್ಯದ ಕೆಲಸದಲ್ಲಿ ಹೊಸ ಯಜಮಾನರ ದಬ್ಬಾಳಿಕೆಯಿಂದ ರಕ್ಷಿಸಿಕೊಳ್ಳಲು ಕಾರ್ಮಿಕರ ಸಂಘಟನೆಗಳು ರೂಪುಗೊಂಡಿವೆ. ಇಲ್ಲಿ ಇವರಿಗೆ ಪ್ರತಿಭಟನೆಯ ಮೂಲ ಶಿಕ್ಷಣ ದೊರೆಯುತ್ತಿದೆ. ತಮ್ಮ ಅಭಿಪ್ರಾಯವನ್ನು ಪರಿಣಾಮಕಾರಿಯಾಗಿ ಮಂಡಿಸುವ ಮತ್ತು ಅದರ ಈಡೇರಿಕೆಗಾಗಿ ಸಂಘಟಿತರಾಗಿ ಹೋರಾಡುವ ತರಬೇತಿ ಕಾರ್ಮಿಕ ಸಂಘಟನೆಗಳಲ್ಲಿ ದೊರೆಯುತ್ತಿವೆ. ಈ ತರಬೇತಿಯ ಫಲಶೃತಿಯನ್ನು ಜಾತಿ ಸಭೆಗಳಲ್ಲಿ ಕಾಣಬಹುದು. ಎಲ್ಲಾ ಜಾತಿ ಸಭೆಗಳಲ್ಲಿ ಯಾರು ಬಲಯುತವಾಗಿ ತಮ್ಮ ನಿಲುವನ್ನು ಮಂಡಿಸಿದ್ದಾರೋ ಅವರೆಲ್ಲಾ ಸದಸ್ಯರಾಗಿದ್ದಾರೆ. ಹಾಗೆ ಮಾಡಿದವರಲ್ಲಿ ಹೆಚ್ಚಿನವರು ಗಣಿ ಮತ್ತು ವ್ಯಾಗನ್ ಲೋಡಿಂಗ್ ಕಾರ್ಮಿಕರು. ಹೀಗೆ ಬದುಕಿನ ಬದಲೀ ಅವಕಾಶಗಳು ಸಾಂಪ್ರದಾಯಿಕ ಬದುಕಿನ ನಕಾರಾತ್ಮಕ ಅಂಶಗಳನ್ನು ಪ್ರಶ್ನಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಅಧ್ಯಕ್ಷರ ಆಯ್ಕೆ

ತಾತ್ವಿಕವಾಗಿ ಮೇಲಿನ ಕ್ರಮದಲ್ಲಿ ಅವಿರೋಧವಾಗಿ ಆಯ್ಕೆಯಾದವರು ತಮ್ಮಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಿತ್ತು. ಆದರೆ ಆ ರೀತಿ ಆಗಲಿಲ್ಲ. ಪಂಚಾಯತ್ ಚುನಾವಣೆಯಲ್ಲಿ, ಅದೂ ಅವಿರೋಧ ಆಯ್ಕೆಯಾಗುವ ಸಂದರ್ಭದಲ್ಲಿ, ಪಕ್ಷವೂ ಇಲ್ಲ, ಪ್ರಚಾರವೂ ಇಲ್ಲ ಎನ್ನುವ ಅಭಿಪ್ರಾಯವಿದೆ. ಆದರೆ ಒಳಗೊಳಗೆ ಪಕ್ಷವೂ ಇದೆ, ಪ್ರಚಾರವೂ ಇದೆ. ಇಲ್ಲಿ ಆಯ್ಕೆಯಾದವರಲ್ಲಿ ಐದು ಜನ ಕಾಂಗ್ರೆಸಿಗರು (ಶಿವಪ್ಪ, ಸಂಕ್ಲಮ್ಮ, ವೆಂಕಮ್ಮ, ತಾಯಪ್ಪ ಮತ್ತು ಅಮೀನಮ್ಮ). ನಾಲ್ವರು ದಳಕ್ಕೆ ಸೇರಿದವರು (ಕಲ್ಲೇಶಪ್ಪ, ಬಸಪ್ಪ, ಹೂವಮ್ಮ ಮತ್ತು ಚಿನ್ನಮ್ಮ). ವಡ್ಡರ ಹಳ್ಳಿ ಪಿ.ಕೆ.ಹಳ್ಳಿಯ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಅಲ್ಲಿಂದ ಇಬ್ಬರೂ ಸದಸ್ಯರಿದ್ದರು. ಅಲ್ಲಿನ ಸದಸ್ಯರು ಹಳ್ಳಿಯಲ್ಲಿ ಯಾರಿಗೆ ಮೆಜಾರಿಟಿ ಇದೆಯೋ ಅವರಿಗೆ ಬೆಂಬಲಿಸುತ್ತೇವೆ ಎಂದು ತಮ್ಮ ನಿರ್ಣಯ ತಿಳಿಸಿದರು. ಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಶಿವಪ್ಪ ಅಧ್ಯಕ್ಷನಾಗುವುದೆಂದು ಸುದ್ದಿಯಾಯಿತು. ಅಧ್ಯಕ್ಷರ ಆಯ್ಕೆಗೆ ಕೆಲವು ದಿನಗಳು ಇರುವಾಗ ವಡ್ಡರ ಕಲ್ಲೇಶಪ್ಪ, ಕುರುಬರ ವೆಂಕಮ್ಮ, ವಡ್ಡರ ಮಹಿಳಾ ಸದಸ್ಯೆ ಹೂವಮ್ಮ ಮತ್ತು ಲಿಂಗಾಯತರ ಬಸಪ್ಪನವರನ್ನು ದಳದ ಕರೀಂಖಾನ್ ಕರಕೊಂಡು ಹೋಗಿ ತಿಮ್ಮಪ್ಪನ ತೋಟದ ಮನೆಯಲ್ಲಿ ಇರಿಸಿದರು. ಅಲ್ಲೇ ಅವರಿಗೆ ಊಟ, ತಿಂಡಿ ಮತ್ತು ಮನೋರಂಜನಾ ವ್ಯವಸ್ಥೆಯಾಯಿತು.

ಪಂಚಾಯತ್ ಚುನಾವಣೆಗೆ ಆರು ತಿಂಗಳು ಮುನ್ನ ಕುರುಬರ ವೆಂಕಮ್ಮನ ಮನೆಯವರು ಅವಳ ಮೊಮ್ಮಗನ ಮದುವೆಗೆಂದು ಬಸಪ್ಪನ ತಮ್ಮ ಪಂಪಣ್ಣನಿಂದ ರೂ. ೧೦೦೦೦ ಸಾಲ ಮಾಡಿದ್ದರು. ಬಸಪ್ಪ ಅಧ್ಯಕ್ಷನಾಗಲು ನೀನು ಬೆಂಬಲಿಸಿದರೆ ಆ ಹತ್ತು ಸಾವಿರ ಸಾಲ ಮನ್ನ ಮಾಡುತ್ತೇವೆ ಎಂದು ಬಸಪ್ಪನ ಕಡೆಯವರು ವೆಂಕಮ್ಮನಿಗೆ ಆಮಿಷ ತೋರಿಸಿದರೆಂದು ಊರಲ್ಲಿ ಸುದ್ದಿಯಿದೆ. ವೆಂಕಮ್ಮನ ಪ್ರಕಾರ ಸಾಲ ಮನ್ನಾ ಮಾಡಿಲ್ಲ. ಬಸಪ್ಪ ಅಧ್ಯಕ್ಷನಾಗಲು ಬೆಂಬಲಿಸಿದರೆ ಸಾಲವನ್ನು ನಿಧಾನವಾಗಿ ತೀರಿಸಬಹುದು; ಇಲ್ಲ ಶಿವಪ್ಪನಿಗೆ ಓಟು ಹಾಕುತ್ತಿಯಾದರೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ನಮ್ಮ ಸಾಲ ಸಂದಾಯ ಮಾಡಿ ನೀನು ಶಿವಪ್ಪನಿಗೆ ಓಟು ಹಾಕಬಹುದೆಂದು ಬಸಪ್ಪನ ಕಡೆಯವರು ಕಂಡೀಶನ್ ಹಾಕಿದರೆಂದು ವೆಂಕಮ್ಮ ಹೇಳುತ್ತಾರೆ. ಸಾಲ ಮನ್ನಾ ಮಾಡಿದ್ದಾರೋ ಇಲ್ಲವೋ ಅದು ಹೇಳುವುದು ಕಷ್ಟ ಅಧ್ಯಕ್ಷರ ಆಯ್ಕೆಯಲ್ಲಿ ಒತ್ತಡ ಮತ್ತು ದುಡ್ಡಿನ ಪ್ರಭಾ ಕೆಲಸ ಮಾಡಿದ್ದಂತೂ ನಿಜ. ಬಸಪ್ಪನನ್ನು ಬೆಂಬಲಿಸಲು ವಡ್ಡರ ಕಲ್ಲೇಶಪ್ಪನಿಗೂ ದುಡ್ಡು ಕೊಡಲಾಗಿದೆ ಎಂದು ಸುದ್ದಿಯಿದೆ. ಹೀಗೆ ಒಟ್ಟು ಐದು ಮಂದಿ ದಳದ ಅಭ್ಯರ್ಥಿ ಬಸಪ್ಪನಿಗೆ ಬೆಂಬಲಿಸುವುದು ಗ್ಯಾರಂಟಿಯಾಯಿತು. ಇವರುಗಳನ್ನು ತೋಟದ ಮನೆಯಿಂದ ಚುನಾವಣೆಯಂದು ನೇರ ಪಂಚಾಯತ್ ಕಚೇರಿಗೆ ತರಲಾಯಿತು. ವಡ್ಡರಹಳ್ಳಿಯವರು ಈಗಾಗಲೇ ಮೆಜಾರಿಟಿ ಇದ್ದ ಕಡೆ ನಾವು ಬೆಂಬಲಿಸುತ್ತೇವೆ ಎಂದಿರುವುದರಿಂದ ದಳದ ಬೆಂಬಲಿಗರ ಸಂಖ್ಯೆ ಏಳಕ್ಕೆ ಏರಿತು. ಕೇವಲ ನಾಲ್ಕು ಜನ ಸದಸ್ಯರನ್ನು ಜತೆಗಿಟ್ಟುಕೊಂಡು ಗೆಲ್ಲುವುದು ಅಸಾಧ್ಯವೆಂದು ಕಾಂಗ್ರೆಸ್ ಅಭ್ಯರ್ಥಿ ಬಸಪ್ಪನಿಂದ ಹಣ ಪಡೆದಿದ್ದಾನೆಂದು ಕೆಲವು ಸದಸ್ಯರು ಅಭಿಪ್ರಾಯ ಪಡುತ್ತಾರೆ. ಈ ವಿಚಾರವನ್ನು ಹಣ ಕೊಟ್ಟ ಬಸಪ್ಪ ಕೂಡ ದೃಢೀಕರಿಸುತ್ತಾರೆ. ಅದೇ ರೀತಿ ಕಾಂಗ್ರೆಸ್‌ನ ಮಹಿಳಾ ಪ್ರತಿನಿಧಿಗಳು ಕೂಡ ಶಿವಪ್ಪನನ್ನು ಬೈಯ್ಯುತ್ತಾರೆ. ಅವರ ಪ್ರಕಾರ ಈ ವ್ಯಕ್ತಿಯನ್ನು ನಂಬಿ ನಾವು ಈತನ ಹಿಂದೆ ನಿಂತರೆ ಈತ ಅವರ ಕಡೆ ಸೇರುವುದೇ. ಈ ವಿಚಾರ ನಮಗೆ ತಿಳಿದದ್ದೇ ಎಂ.ಎಲ್.ಸಿ. ಓಟಿನಲ್ಲಿ. ಓಟಿನ ಒಂದು ದಿನ ಮುಂಚೆ ನಮ್ಮನೆಲ್ಲಾ ತಿಮ್ಮಪ್ಪನ ತೋಟದ ಮನೆಯಲ್ಲಿ ಇರಿಸಿದ್ದರು.[2] ಅಲ್ಲಿ ಗಂಡಸರು ಕುಡಿದು ಮಾತನಾಡುವ ಭರದಲ್ಲಿ ಶಿವಪ್ಪ ಬಸಪ್ಪನಿಂದ ಹಣ ಪಡೆದ ವಿಚಾರ ಹೊರಬಂತು ಎಂದು ಮಹಿಳಾ ಸದಸ್ಯರು ಹೇಳುತ್ತಾರೆ.

ಅವಿರೋಧ ಆಯ್ಕೆಗೆ ಕೊಡುವ ಕಾರಣಗಳು ಜಗಳ ಬೇಡ, ದುಂದು ವೆಚ್ಚ ಬೇಡ ಇತ್ಯಾದಿಗಳು ಮೇಲ್ನೋಟಕ್ಕೆ ಸಮಂಜಸವಾಗಿಯೇ ಇವೆ. ಮೆಲು ಜಾತಿಯವರು ರಾಜಕೀಯ ಪೈಪೋಟಿಯಲ್ಲಿ ಇಡೀ ಹಳ್ಳಿಯೇ ರಣರಂಗವಾಗುತ್ತಿತ್ತು. ಇದನ್ನು ತಪ್ಪಿಸಲು ಅವಿರೋಧ ಆಯ್ಕೆಗೆ ಬೆಂಬಲ. ಈ ಸಲಹೆಯನ್ನು ಮುಂದಿಡುವವರು ಊರ ಪ್ರಮುಖರು. ಅವರಲ್ಲಿ ಸಿಂಹಪಾಲು ಮೇಲುಜಾತಿಯವರೇ. ಜಗಳ ಬೇಡ ಎನ್ನುವ ಒಂದೆ ಕಾರಣಕ್ಕಾಗಿ ಅವಿರೋಧ ಆಯ್ಕೆಯನ್ನು ಸಾಂಪ್ರದಾಯಿಕ ಯಜಮಾನಿಕೆಯ ಜಾತಿಗಳು ಮುಂದಿಡುತ್ತಿಲ್ಲ. ಇದರ ಜತೆಗೆ ಕೆಲಸ ಮಡುತ್ತಿರುವ ಇತರ ಕಾರಣಗಳೆಂದರೆ ರಿಸರ್‌ವೇಶನ್ ಮತ್ತು ಕೆಳ ಜಾತಿಯವರ ರಾಜಕೀಯ ಆಸಕ್ತಿ ಈಗಿನ ಕಾದಿರಿಸುವಿಕೆ ನಿಯಮದಂತೆ ಲಿಂಗಾಯತರಿಗೆ ದಕ್ಕುವುದು ಕೇವಲ ಒಂದು ಸೀಟು. ಆ ಒಂದು ಸೀಟು ಪಡೆದು ಅಧ್ಯಕ್ಷನಾಗುವ ಗ್ಯಾರೆಂಟಿ ಇಲ್ಲ. ಇಷ್ಟೆಲ್ಲಾ ಇತಿಮಿತಿಗಳ ನಡುವೆಯೂ ಈ ಹುದ್ದೆಗೆ ಪ್ರಯತ್ನಿಸುವುದಾದರೆ ಎಲ್ಲರ ಕಾಲು ಹಿಡಿಯಬೇಕು, ದುಡ್ಡು ಖರ್ಚು ಮಾಡಬೇಕು. ಹಿಂದಿನಂತೆ ದಬ್ಬಾಳಿಕೆಯಿಂದ ಓಟು ಪಡೆಯುವ ಸಾಧ್ಯತೆ ಇಲ್ಲ. ಇಷ್ಟೆಲ್ಲಾ ಮಾಡಿ ಅಧ್ಯಕ್ಷನಾಗುವ ಗ್ಯಾರಂಟಿ ಇಲ್ಲ. ಒಂದು ವೇಳೆ ಅಧ್ಯಕ್ಷನಾದರೂ ಹಿಂದಿನ ರೀತಿಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುವುದು ಅಸಾಧ್ಯ. ಆಯ್ಕೆಯಾದ ಸದಸ್ಯರಿಗಿಂತ ಹೆಚ್ಚು ಹೊರಗಿನವರ ಗಲಾಟೆಯನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ಈ ಎಲ್ಲಾ ಕಾರಣಗಳಿಂದ ಮೇಲು ಜಾತಿಯವರು ನೇರ ಸ್ಪರ್ಧೆ ಮತ್ತು ಆ ಮೂಲಕ ಸ್ಥಳೀಯ ರಾಜಕೀಯ ನಿಯಂತ್ರಣದ ಆಶೆಯನ್ನು ಕೈ ಬಿಟ್ಟಿರಬಹುದು. ಆದಾಗ್ಯೂ ತಾವು ದಿನನಿತ್ಯ ವ್ಯವಹರಿಸಬೇಕಾದ ಸಮಾಜದ ರಾಜಕೀಯ ಸಂಪೂರ್ಣ ತಮ್ಮ ಹತೋಟಿ ಮೀರಿದರೆ ಕಷ್ಟವೆಂಬ ಆಲೋಚನೆಯೂ ಇದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅವರ ಸಹಾಯಕ್ಕೆ ಬಂದ ತಂತ್ರ ಅವಿರೋಧ ಆಯ್ಕೆ, ತಮ್ಮ ಮುಖಂಡತ್ವದಲ್ಲಿ ಸದಸ್ಯರ ಮತ್ತು ಅಧ್ಯಕ್ಷರ ಆಯ್ಕೆಯಾದರೆ ಪಂಚಾಯತ್ ರಾಜಕೀಯ ತಮ್ಮ ಹಿತಾಸಕ್ತಿಗೆ ಸಂಪೂರ್ಣ ವಿರುದ್ದವಾಗಿ ನಡೆಯಲಾರದೆಂಬ ಭರವಸೆ. ಆದರೆ ಅವರ ಲೆಕ್ಕಚಾರ ತಪ್ಪಾಗಿದೆ. ಅಧ್ಯಕ್ಷರ ಆಯ್ಕೆ ಅವರ ಲೆಕ್ಕಚಾರದಂತೆ ನಡೆಯಲೇ ಇಲ್ಲ. ಇಲ್ಲಿ ಹೊರಗಿನ ರಾಜಕೀಯಶಕ್ತಿ ಕೆಲಸ ಮಾಡಿದೆ. ಇನ್ನೊಂದು ರೀತಿಯಲ್ಲಿ ನೋಡಿದರೆ ಈ ಒಳಗಿನ ಮತ್ತು ಹೊರಗಿನ ವಿಂಗಡಣೆಯೇ ಸರಿಯಲ್ಲ. ಯಾಕೆಂದರೆ ಒಳಗಿನವರ ಸಂಪರ್ಕವಿಲ್ಲದೆ ಹೊರಗಿನ ಶಕ್ತಿ ಕೆಲಸ ಮಾಡಲು ಸಾಧ್ಯವೇ ಇಲ್ಲ.

ಸದಸ್ಯರ ಆಯ್ಕೆಯಲ್ಲಿ ಹೊರಗಿನ ಶಕ್ತಿಗಳು ಇರಲೇ ಇಲ್ಲ ಎನ್ನಲಾಗುವುದಿಲ್ಲ. ಆದರೂ ಅದು ಸ್ಪಷ್ಟವಾಗಿ ಪ್ರಕಟವಾಗಿಲ್ಲ. ಅಧ್ಯಕ್ಷರ ಆಯ್ಕೆಯಲ್ಲಿ ಹೊರಗಿನ ಶಕ್ತಿಗಳು ನೇರವಾಗಿ ಹಸ್ತಕ್ಷೇಪ ಮಾಡಿವೆ. ಊರ ಪ್ರಮುಖರು ಒಂದಲ್ಲ ಒಂದು ಪಕ್ಷದ ಬೆಂಬಲಿಗರು. ಈ ನೆಲೆಯಲ್ಲಿ ಅವರಿಗೆ ಸ್ಥಳೀಯ ಎಂ.ಎಲ್.ಎ. ಮತ್ತು ಆಯಾ ಪಕ್ಷದ ತಾಲೂಕು ಮತ್ತು ಜಿಲ್ಲಾ ನಾಯಕರುಗಳು ಸಂಪರ್ಕವಿರುತ್ತದೆ. ಇದು ಮಂಡಲ ಪ್ರಧಾನರ ಚುನಾವಣೆ ಮತ್ತು ೧೯೯೫ರ ಪಂಚಾಯತಿ ಅಧ್ಯಕ್ಷರ ಚುನಾವಣೆಯಲ್ಲಿ ತುಂಬಾ ಸ್ಪಷ್ಟವಾಗಿ ಮೂಡಿ ಬಂದಿದೆ. ಈ ನಾಯಕರುಗಳು ತಮ್ಮದೇ ಪಕ್ಷದ ಪಂಚಾಯತ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕೆಂದು ಬಯಸುತ್ತಾರೆ. ಇದಕ್ಕೆ ಚುನಾವಣೆಯ ಮುನ್ನವೇ ಗ್ರಾಮ ಪಂಚಾಯತಿ ಚುನಾವಣೆಯನ್ನು ಮ್ಯಾನೇಜ್ ಮಾಡುವ ಕುರಿತು ಮಾತುಕತೆ ನಡಿಯುತ್ತದೆ. ಹಿಂದಿನ ಎರಡು ಚುನಾವಣೆಗಳಲ್ಲೂ ಹೊರಗಿನ ಪ್ರಭಾವ ಕೆಲಸ ಮಾಡಿವೆ. ಮಂಡಲ ಪ್ರಧಾನರ ಚುನಾವಣೆಯಲ್ಲಿ ಮೇಟಿ ಚಂದ್ರಶೇಖರಪ್ಪನವರು ಸ್ಥಳೀಯ ಎಂ.ಪಿ. ಬಸವರಾಜೇಶ್ವರಿಯ ಆದೇಶ ಪ್ರಕಾರಿ ಕೆಲಸ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಊರಿನವರೇ ಆದ ಕರೀಂಖಾನ್ ಹೊಸಪೇಟೆಯ ಇತರ ದಳದ ನಾಯಕರ ಜತೆ ಸೇರಿ ತಮ್ಮ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ. ಈ ಯೋಜನೆಯಲ್ಲಿ ಎಲ್ಲಾ ಪಕ್ಷಗಳು ಸಕ್ರಿಯವಾದರೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪ್ರಭಾವವೇ ಹೆಚ್ಚು. ಇದಕ್ಕೆ ಹಲವಾರು ಕಾರಣಗಳಿರಬಹುದು. ಅವುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಮೂಲಕ ತಮ್ಮ ಪಂಚಾಯತ್‌ಗೆ ಮತ್ತು ತಮಗೆ ಬೇಕಾದ ಕೆಲಸಗಳನ್ನು ಸುಲಭದಲ್ಲಿ ಮಾಡಿಸಿಕೊಳ್ಳಬಹುದೆನ್ನುವ ನಂಬಿಕೆ. ಜತೆಗೆ ಸರಕಾರಿ ಮೆಶಿನರಿಯನ್ನು ಅಧಿಕಾರದಲ್ಲಿರುವ ಪಕ್ಷ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವುದು ಕೂಡ ಕಾರಣವಾಗಿರಬಹುದು. ಅದೇನೆ ಇರಲಿ ಎಲ್ಲಾ ಪಕ್ಷಗಳು ಪಂಚಾಯತ್‌ಚುನಾವಣೆಯನ್ನು ಪ್ರಭಾವಿಸಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪಂಚಾಯತ್‌ಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅವರ ಪ್ರಯತ್ನ ಕಾರ್ಯರೂಪಕ್ಕೆ ಬರುವುದು ಸ್ಥಳೀಯ ಮುಖಂಡರ ಮೂಲಕ. ಹಾಗಾಗಿ ಅಧ್ಯಕ್ಷರ ಚುನಾವಣೆಗಳು ಊರ ಪ್ರಮುಖರ ಲೆಕ್ಕಚಾರದಂತೆ ನಡಿಯಲಿಲ್ಲ.

ಸಮುದಾಯವಾದಿಗಳು ನಮ್ಮ ಸಂಸ್ಕೃತಿಯ ರಾಜಕೀಯ ಪ್ರಕ್ರಿಯೆಗಳಿಗೆ ಮಹತ್ವ ನೀಡಬೇಕೆಂದು ವಾದಿಸುತ್ತಾರೆ. ಆ ರೀತಿ ವಾದಿಸುವಾಗ ಅದೊಂದು ಆದರ್ಶ ಸ್ಥಿತಿ ಎನ್ನುವ ಗ್ರಹಿಕೆ ಇದೆ. ಅದು ಸಮಾಜದ ಎಲ್ಲಾ ವರ್ಗಗಳ ಆಸಕ್ತಿಗಳನ್ನು ಕಾಪಾಡುತ್ತದೆ ಮತ್ತು ಪ್ರತಿಯೊಂದು ಜಾತಿಗೂ ತನ್ನ ಆಸಕ್ತಿಗಳನ್ನು ಪ್ರತಿನಿಧೀಕರಿಸಲು ಅವಕಾಶ ಮಾಡಿಕೊಡುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಪಾಪಿನಾಯಕನಹಳ್ಳಿಯ ರಾಜಕೀಯ ಚರಿತ್ರೆ ಸಮುದಾಯವಾದಿಗಳು ಮುಂದಿಡುವ ಆದರ್ಶಗಳಿಗೆ ಪೂರಕವಾಗಿಲ್ಲ. ಮಂಡಲ ಪಂಚಾಯತ್ಬರುವವರೆಗೂ ಕೆಳ ಜಾತೀಯವರು ಪಂಚಾಯತ್ ರಾಜಕೀಯದ ನಾಯಕತ್ವ ವಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಡೀ ಹಳ್ಳಿಯ ಯಜಮಾನಿಕೆ ಒಂದೇ ಕುಟುಂಬದ ಹತೋಟಿಯಲ್ಲಿ ಹೆಚ್ಚು ಕಡಿಮೆ ಮೂವತ್ತು ವರ್ಷಗಳವರೆಗೆ ಇತ್ತು. ಅವರ ಯಜಮಾನಿಕೆಯನ್ನು ಅಲುಗಾಡಿಸಲು ಮೇಲುಜಾತಿಯವರೇ ಆದ ಜಂಬನ ಗೌಡರಿಂದ ಸಾಧ್ಯವಾಗಲಿಲ್ಲ. ಅಂತಹ ವಾತಾವರಣದಲ್ಲಿ ಕೆಳಜಾತಿಯವರು ಅವರ ಯಜಮಾನಿಕೆಯನ್ನು ಪ್ರಶ್ನಿಸುವುದಾದರೂ ಹೇಗೆ? ಅಧಿಕಾರ ಯಾರಲ್ಲಾದರೂ ಇರಲಿ ಅವರಿಂದ ಊರ ಉದ್ಧಾರವಾದರೆ ಸಾಕು ಎನ್ನುವ ನಿರ್ಣಯಕ್ಕೆ ಬಂದರೂ ಸಾಂಪ್ರದಾಯಿಕ ಯಜಮಾನಿಕೆ ಊರನ್ನು ಉದ್ಧಾರ ಮಾಡುವ ಕೆಲಸಗಳನ್ನು ಮಾಡಲಿಲ್ಲ. ಸಾಂಪ್ರದಾಯಿಕ ಯಜಮಾನಿಕೆಯ ಸಂದರ್ಭದಲ್ಲೇ ಸೆಟ್ಟಿಕೆರೆಯ ಕೋಡಿ ಹರಿದಿತ್ತು. ಅದನ್ನು ದುರಸ್ತಿ ಮಾಡಿಸಿ ನೀರಾವರಿ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ ಹಿಂದಿನ ನಾಯಕತ್ವ. ಊರಲ್ಲಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಳಜಾತಿಯವರನ್ನು ಹತ್ತಿರ ಸೇರಿಸುವ ಯಾವುದೇ ಕ್ರಮಗಳು ಇರಲಿಲ್ಲ. ಆಧುನಿಕ ಪಂಚಾಯತ್ ಕೆಳಜಾತಿಯವರಿಗೆ ಪ್ರಾತಿನಿಧ್ಯ ನೀಡಿದರೆ ಅಲ್ಲೂ ಅವಿರೋಧ ಆಯ್ಕೆಯ ವಾದ ಮಂಡಿಸಿ ಊರಿನ ಯಜಮಾನಿಕೆ ತಮ್ಮ ಹತೋಟಿಯಲ್ಲಿರುವಂತೆ ಮೇಲು ಜಾತಿಯವರು ನೋಡಿಕೊಂಡರು.

 

[1]ಹಿ.ಚಿ. ಬೋರಲಿಂಗಯ್ಯನವರು ಒಂದು ಕಡೆ ಹಲಸರ ಮಂಡಲ ಸದಸ್ಯರೊಬ್ಬರ ಬಗ್ಗೆ ಇದೇ ಮಾತುಗಳನ್ನು ಹೇಳಿದ್ದಾರೆ. ರಾಮಪ್ಪ ಎನ್ನುವವರು ಹಸಲರ ಮಂಡಲ ಪ್ರತಿನಿಧಿ. ಪ್ರತಿನಿಧಿಯಾಗಿ ನೀವು ನಿಮ್ಮವರಿಗೆ ಏನು ಮಾಡಿದ್ದೀರಿ ಎಂದು ವಿಚಾರಿಸಿದರೆ ಆತ, ಒಂದಿಷ್ಟು ಗದ್ದೆ ಮಾಡಿಕೊಂಡಿದ್ದೇನೆ ಎಂದು ಸಂತೋಷದಿಂದ ಹೇಳಿಕೊಂಡ. ಮಂಡಲ ಸದಸ್ಯನಾಗಿ ತನ್ನ ಜನರಿಗೆ ಏನಾದರೂ ಮಾಡಬೇಕೆಂಬ ಆಸ್ತೆಯಾಗಲಿ ಅಥವಾ ತಾನೊಬ್ಬ ಮಂಡಲ ಸದಸ್ಯನಾಗಿ ಇಂಥ ಕೆಲಸಗಳನ್ನು ಮಾಹಬಹುದೆಂಬ ಎಚ್ಚರವಾಗಲಿ ಇರಲಿಲ್ಲ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. (ಗಿರಿಜನ ನಾಡಿಗೆ ಪಯಣ, ಬೆಂಗಳೂರು ರಾಗಿರೊಟ್ಟಿ,ಪ್ರಕಾಶನ.೧೯೯೧)

[2]ಎಂ.ಎಲ್.ಸಿ. ಚುನಾವಣೆಗೆ ಪಂಚಾಯತ್ ಸದಸ್ಯರು ಓಟು ಹಾಕಬೇಕು. ಅದಕ್ಕಾಗಿ ಪ್ರತಿ ಪಕ್ಷದವರು ಆದಷ್ಟು ಸಂಖ್ಯೆಯಲ್ಲಿ ಪಂಚಾಯತ್ ಸದಸ್ಯರನ್ನು ಒಟ್ಟು ಸೇರಿಸಲು ಪ್ರಯತ್ನಿಸುತ್ತಾರೆ.