ವಸತಿ

ಗ್ರಾಮೀಣ ವಸತಿ ಸಮಸ್ಯೆ ಪರಿಹಾರಕ್ಕಾಗಿ ಮೂರು ಕಾರ್ಯಕ್ರಮಗಳಿವೆ – ಆಶ್ರಯ, ಇಂದಿರಾ ಆವಾಜ್ ಮತ್ತು ಅಂಬೇಡ್ಕರ್ ಯೋಜನೆಗಳು. ೧೯೯೫ – ೯೬ ರಿಂದ ೧೯೯೮ – ೯೯ ರವರೆಗೆ ಈ ಮೂರು ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಒಟ್ಟು ಮನೆಗಳ ಅಂಕಿ ಅಂಶಗಳನ್ನು ಕೋಷ್ಠಕ – ೧೫ರಲ್ಲಿ ಕೊಡಲಾಗಿದೆ. ಅದರ ಪ್ರಕಾರ ಒಟ್ಟು ೧೧೭ ಮನೆಗಳು ನಿರ್ಮಾಣವಾಗಿದೆ – ಆಶ್ರಯ ಯೋಜನೆಯಡಿಯಲ್ಲಿ ೩೮, ಇಂದಿರಾ ಆವಾಜ್‌ನಲ್ಲಿ ೫೪ ಮತ್ತು ಅಂಬೇಡ್ಕರ್ ಯೋಜನೆಯಲ್ಲಿ ೨೫ ಮನೆಗಳು. ಅಂಬೇಡ್ಕರ್ ಯೋಜನೆ ಹರಿಜನ ಗಿರಿಜನರಿಗೆ ಸೀಮಿತವಾದರೆ ಉಳಿದ ಎರಡು ಯೋಜನೆಗಳ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಅವಕಾಶವಿದೆ. ಪಿ.ಕೆ.ಹಳ್ಳಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಒಟ್ಟು ಕುಟುಂಬಗಳು ೨೪೯; ಹೆಚ್ಚು ಕಡಿಮೆ ಮೂರನೇ ಒಂದರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಅವುಗಳ ಜಾತಿವಾರು ವಿಂಗಡನೆಯನ್ನು ಕೋಷ್ಠಕ – ೨೧ರಲ್ಲಿ ಕೊಡಲಾಗಿದೆ. ಅದರ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ ಜಾತಿವಾರು ಕುಟುಂಬಗಳ ಸಂಖ್ಯೆ ಹೀಗಿದೆ: ನಾಯಕರಲ್ಲಿ – ೪೮, ಮುಸ್ಲಿಂರಲ್ಲಿ – ೨೭, ಲಿಂಗಾಯತರಲ್ಲಿ – ೨೭, ವಡ್ಡರು – ೧೭ ಮತ್ತು ಇತರ ಜಾತಿಗೆ ಸೇರಿದವರಲ್ಲಿ – ೧೧೨. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಅವುಗಳಿಗೆ ಹಂಚಲಾದ ಆಶ್ರಯ ಮನೆ/ಸೈಟುಗಳ ಸಂಖ್ಯೆಯನ್ನು ಕೋಷ್ಠಕದಲ್ಲಿ ಕೊಟ್ಟಿದೆ. ಅದರ ಪ್ರಕಾರ ಕುರುಬರು, ಕಮ್ಮಾರ ಮತ್ತು ಉಪ್ಪಾರ ಸಮುದಾಯಗಳಿಗೆ ಅವರಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆಗಿಂತ ಹೆಚ್ಚು ಆಶ್ರಯ ಮನೆ/ಸೈಟುಗಳು ವಿತರಣೆಯಾಗಿವೆ. ಲಿಂಗಾಯತ ಮತ್ತು ಮುಸ್ಲಿಮರಲ್ಲಿ ತಲಾ ೨೭ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ ಅವರಿಗೆ ತಲಾ ೧೧ ಆಶ್ರಯ ಮನೆ/ಸೈಟುಗಳು ದೊರಕಿವೆ. ನಾಯಕರಿಗೆ ೨೭ ಮತ್ತು ಅಗಸರಿಗೆ ೪ ಸೈಟುಗಳು ದೊರಕಿವೆ.

ವಸತಿ, ಆರೋಗ್ಯ, ಶಿಕ್ಷಣ, ನೀರು ಮತ್ತು ಇತರ ಸವಲತ್ತುಗಳ ಪೂರೈಕೆ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅದನ್ನು ಕೋಷ್ಠಕ – ೧೭ ಮತ್ತು ೧೮ ರಲ್ಲಿ ಕೊಡಲಾಗಿದೆ. ಇದರ ಪ್ರಕಾರ ೨೪೩ ಕುಟುಂಬಗಳು ವಸತಿ ವ್ಯವಸ್ಥೆಯ ಕುರಿತು ಅತೃಪ್ತಿ ಸೂಚಿಸಿದ್ದಾರೆ. ಅತೃಪ್ತಿಗೆ ಬೇರೆ ಬೇರೆ ಕಾರಣಗಳನ್ನು ಸೂಚಿಸಿದ್ದಾರೆ. ಅವುಗಳನ್ನು ಈ ಕೆಳಗಿನ ಅಂಶಗಳಿಗೆ ಸೀಮಿತಗೊಳಿಸಬಹುದು – ೧. ವಸತಿಗಳ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಆಗಿಲ್ಲ ೨. ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಇತರ ಕೆಲವು ಪ್ರಭಾವಿ ಸದಸ್ಯರು ಮತ್ತು ಹೊರಗಿನವರು ಸೇರಿ ಫಲಾನುಭವಿಗಳ ಆಯ್ಕೆ ನಡೆದಿದೆ. ೩. ಅರ್ಹರಿಗೆ ದೊರಕದೆ ಅನರ್ಹರಿಗೆ ದೊರಕಿದೆ. ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಆಗಿಲ್ಲ ಎನ್ನುವುದು ಕೇವಲ ವಸತಿಗೆ ಸೀಮಿತವಲ್ಲ. ಎಲ್ಲಾ ಸವಲತ್ತುಗಳಿಗೆ ಇದು ಅನ್ವಯವಾಗುತ್ತದೆ. ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಬಹುದು. ಊರೆಲ್ಲಾ ಸುತ್ತಾಡಿ ಆಯಾಸ ಪರಿಹಾರಕ್ಕಾಗಿ ಪಂಚಾಯತ್‌ಕಛೇರಿಯಲ್ಲಿ ಕುಳಿತಿರುವಾಗ ಕೆ.ಇ.ಬಿ. ನೌಕರರಿಬ್ಬರು ಕಚೇರಿಗೆ ಬಂದರು. ಕಾರ್ಯದರ್ಶಿ ಇರಲಿಲ್ಲ. ಅಲ್ಲೇ ಇದ್ದ ಅಟೆಂಡರಲ್ಲಿ ‘ಬಿಲ್‌ಕಲೆಕ್ಟರ್ ಇದ್ದಾನಾ?’ ಎಂದು ವಿಚಾರಿಸಿದರು. ‘ಆತ ಹೊರಗೆ ಹೋಗಿದ್ದಾನೆ ಸಾರ್, ಇನ್ನು ಸ್ವಲ್ಪ ಹೊತ್ತಿಗೆ ಬರಬಹುದೆಂದು’ ಅಟೆಂಡರ್‌ಹೇಳಿದ. ಬಿಲ್ ಕಲೆಕ್ಟರ್‌ಗೆ ಕಾಯುತ್ತಾ ಅವರು ಅಲ್ಲೇ ಖಾಲಿ ಇದ್ದ ಕುರ್ಚಿಯಲ್ಲಿ ಕುಳಿತರು. ನನಗೂ ಬೇರೆ ಕೆಲಸವಿಲ್ಲದೆ ‘ಯಾವ ಕೆಲಸದ ಮೇಲೆ ಬಂದಿದ್ದೀರಿ’, ಎಂದು ಅವರನ್ನು ಮಾತಿಗೆ ಎಳೆದೆ. ‘ಭಾಗ್ಯ ಜ್ಯೋತಿ ಫಲಾನುಭವಿಗಳ ಪಟ್ಟಿ ತಯಾರಾಗಿದೆ, ಅವರ ಮನೆ ವಿಳಾಸ ಹುಡುಕ ಬೇಕಾಗಿದೆ ಅದಕ್ಕೆ ಬಿಲ್‌ಕಲೆಕ್ಟರ್ ಬೇಕು’ ಎಂದರು.

ಸ್ವಲ್ಪ ಸಮಯದ ನಂತರ ಬಿಲ್ ಕಲೆಕ್ಟರ್ ಬಂದ. ಆತನಲ್ಲಿ ಮನೆ ತೋರಿಸಲು ಕೆ.ಇ.ಬಿ.ಯವರು ಹೇಳಿದರು. ಫಲಾನುಭವಿಗಳ ಪಟ್ಟಿ ತೋರಿಸಿ, ನಂತರ ಮನೆ ತೋರಿಸುತ್ತೇನೆಂದು ಆತ ವಾದಿಸಲು ಆರಂಭಿಸಿದ. ‘ನಿನ್ನ ಕೆಲಸ ಮನೆ ತೋರಿಸುವುದು, ಫಲಾನುಭವಿಗಳ ಪಟ್ಟಿ ನಿನಗೆ ಯಾಕೆ?’ ಎಂದು ಕೆ.ಇ.ಬಿ.ಯವರ ವಾದ. ಹೀಗೆ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು. ಅಲ್ಲೇ ಇದ್ದ ನಾನು ಮಧ್ಯ ಪ್ರವೇಶಿಸಿ ಬಿಲ್ ಕಲೆಕ್ಟರನನ್ನು ಉದ್ದೇಶಿಸಿ ‘ಮನೆ ತೋರಿಸಲು ನಿಮಗೇನು ಸಮಸ್ಯೆ’ ಎಂದೆ. ‘ನೋಡಿ ಸಾರ್ ನಾವು ಇಲ್ಲಿಂದ ಒಂದು ಪಟ್ಟಿ ತಯಾರಿಸಿ ತಾಲ್ಲೂಕು ಪಂಚಾಯತ್‌ಗೆ ಕಳುಹಿಸುತ್ತೇವೆ. ಯಾರ್ಯಾರ ಹೆಸರು ಆ ಪಟ್ಟಿಯಲ್ಲಿ ಇದೆ ಎಂದು ಊರವರಿಗೂ ನಾವು ತಿಳಿಸಿರುತ್ತೇವೆ. ಆದರೆ ಮಾರ್ಗ ಮಧ್ಯೆ ಅಥವಾ ತಾಲ್ಲೂಕು ಪಂಚಾಯತ್‌ನಲ್ಲಿ ಬೇರೆ ಹೆಸರುಗಳು ಸೇರಿಸಿ ಇಲ್ಲಿಂದ ಕಳುಹಿಸಿದ ಹೆಸರುಗಳು ಮಾಯ ಮಾಡುತ್ತಾರೆ. ಹಾಗೆ ಆದಾಗ ಊರವರು ತರಾಟೆಗೆ ತೆಗೆದುಕೊಳ್ಳುವುದು ನಮ್ಮನ್ನು. ದಿನನಿತ್ಯ ಅವರ ಮನೆ ಬಾಗಿಲಿಗೆ ಹೋಗುವವರು ನಾವು; ಇವರಲ್ಲಾ. ಇವರೆಲ್ಲಾ (ಕೆ.ಇ.ಬಿ.ಯವರನ್ನು ಉದ್ದೇಶಿಸಿ) ಅಪರೂಪಕ್ಕೊಮ್ಮೆ ಬಂದು ಹೋಗುತ್ತಾರೆ. ಇವರಿಗೆ ನಮ್ಮ ಸಮಸ್ಯೆ ಗೊತ್ತಿಲ್ಲ. ಇಲ್ಲಿಂದ ಕಳುಹಿಸಿದ ಹೆಸರುಗಳು ಇಲ್ಲದಿದ್ದರೆ ಮನೆ ತೋರಿಸಬೇಡ ಎಂದು ಕಾರ್ಯದರ್ಶಿಯವರೂ ತಿಳಿಸಿದ್ದಾರೆ. ಅದಕ್ಕೆ ‘ಪಟ್ಟಿ ತೋರಿಸಿ ಅಂದೆ’ ಎಂದು ಹೇಳಿ ತನ್ನ ಭಾಷಣ ನಿಲ್ಲಿಸಿದ. ‘ಅಲ್ಲಾರೀ ಇಲ್ಲಿಂದ ಕಳುಹಿಸಿದ ಪಟ್ಟಿ ಮಾರ್ಗ ಮಧ್ಯದಲ್ಲಿ ಬದಲಾಗುವುದು ಹೇಗೆ?’ ಎಂದು ನನ್ನ ಪೆದ್ದುತನ ಪ್ರದರ್ಶಿಸಿದೆ. ಬಿಲ್‌ಕಲೆಕ್ಟರ್ ಉತ್ತರಿಸುವ ಮುನ್ನವೇ ಕೆ.ಇ.ಬಿ. ನೌಕರರಲ್ಲಿ ಒಬ್ಬರು, ಬಹುಶಃ ಈತನ ತಲೆಹರಟೆಯಿಂದ ಕೋಪಗೊಂಡು, ‘ಇವರೆಲ್ಲಾ ಇಲ್ಲಿ ಹಣ ತೆಗೆದುಕೊಂಡು ಪಟ್ಟಿ ಮಾಡುತ್ತಾರೆ. ಹಣ ಕೊಟ್ಟವರ ಹೆಸರಿಲ್ಲದಿದ್ದರೆ ಅವರು ಇವರನ್ನು ಸುಮ್ಮನೆ ಬಿಡುವುದಿಲ್ಲ. ಇಲ್ಲದಿದ್ದರೆ ಕಾರ್ಯದರ್ಶಿ ಮತ್ತು ಈತನಿಗೆ ಯಾಕೆ ಈ ಉಸಾಬರಿ. ‘ಪಟ್ಟಿಯಲ್ಲಿ ಹೆಸರು ಸೇರಿಸುವುದು/ಬಿಡುವುದು ಸದಸ್ಯರಿಗೆ ಬಿಟ್ಟಿದ್ದು’ ಎಂದರು. ನಾನು ಬಿಲ್‌ಕಲೆಕ್ಟರ್ ಮುಖ ನೋಡಿದೆ. ಆತ ನಾವೇನು ಹಣ ತೆಗೆದುಕೊಳ್ಳುವುದಿಲ್ಲ. ತಾಲ್ಲೂಕು ಪಂಚಾಯತ್‌ಅಧ್ಯಕ್ಷರು ಇಲ್ಲಿಯವರೇ ಆಗಿರುವುದರಿಂದ ಅವರ ಮೂಲಕ ಹೊಸ ಹೆಸರುಗಳು ಸೇರ್ಪಡೆಯಾಗುತ್ತವೆ. ಅಷ್ಟೊತ್ತಿಗೆ ಕಾರ್ಯದರ್ಶಿಯವರು ಬಂದರು. ಇಷ್ಟರವರೆಗೆ ನಡೆದ ವಾಗ್ವಾದವನ್ನು ಕೇಳಿ, ಪಟ್ಟಿ ನೋಡಿ, ಬಿಲ್ ಕಲೆಕ್ಟರ್‌ಗೆ ಮನೆ ತೋರಿಸಲು ಹೇಳಿದರು. ಅವರೆಲ್ಲಾ ಹೋದ ನಂತರ ಕಾರ್ಯದರ್ಸಿಯವರಲ್ಲಿ ಪಟ್ಟಿ ಹೇಗೆ ಮತ್ತು ಯಾಕೆ ಬದಲಾಗುತ್ತದೆ ಎಂದು ಕೇಳಿದೆ. ನೋಡಿ ಸ್ವಾಮಿ ರಾಜಕೀಯವೇ ಹೀಗೆ. ಪ್ರತಿಯೊಬ್ಬನಿಗೂ ಆತನ ಬೆಂಬಲಿಗರನ್ನು ಖುಶಿ ಪಡಿಸಬೇಕು. ಇವರ ಮಧ್ಯೆ ನಾವು ಬಲಿ ಪಶುಗಳಾಗಬೇಕು ಎಂದು ತಮ್ಮ ಸಮಸ್ಯೆ ಹೇಳಿಕೊಳ್ಳಲು ಶುರು ಮಾಡಿದರು.

ಆಯ್ಕೆ ಯಾರು ಮಾಡುತ್ತಾರೆ ಎನ್ನುವುದರ ಕುರಿತು ಕಾರ್ಯದರ್ಶಿ ಹಾರಿಕೆಯ ಉತ್ತರ ಕೊಡಲು ಕಾರಣವಿದೆ. ಹಿಂದಿನ ಅಧ್ಯಾಯದಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸುವಾಗ ಕೆಲವು ಸದಸ್ಯರು ಫಲಾನುಭವಿಗಳ ಆಯ್ಕೆಯನ್ನು ವಿವರಿಸಿದ್ದಾರೆ. ಅವರ ಪ್ರಕಾರ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕೆಲವು ಪ್ರಭಾವಿ ಸದಸ್ಯರು ಮಾತ್ರ ಆಯ್ಕೆಯಲ್ಲಿ ಪಾಲುಗೊಳ್ಳುತ್ತಾರೆ. ಊರಿನ ಜನರು, ಬಿಡಿ, ಎಲ್ಲಾ ಸದಸ್ಯರು ಇದರಲ್ಲಿ ಪಾಲುಗೊಳ್ಳುವುದಿಲ್ಲ. ಪಾಲುಗೊಳ್ಳದಿರುವ ಸದಸ್ಯರಲ್ಲಿ ಮಹಿಳೆಯರೇ ಹೆಚ್ಚು. ಮುಖ್ಯ ವಿಚಾರಗಳ ಚರ್ಚೆಯಲ್ಲಿ ಅವರನ್ನು ಯಾವಾಗಲೂ ಹೊರಗಿಡಲಾಗಿತ್ತೆಂದು ಮಹಿಳಾ ಸದಸ್ಯರು ದೂರಿಕೊಂಡಿರುವುದನ್ನು ಇಲ್ಲಿ ನೆನಪಿಸಬಹುದು. ಮೀಟಿಂಗ್ ಆರಂಭವಾದ ಕೂಡಲೇ ಕೆಲವು ಮಹತ್ವವಿಲ್ಲದ ವಿಚಾರಗಳನ್ನು ಚರ್ಚಿಸಿ, ಚಾ ಕೊಟ್ಟು ಮಹಿಳಾ ಸದಸ್ಯರನ್ನು ಮನೆಗೆ ಕಳುಹಿಸುತ್ತಾರೆ. ನಂತರ ಪುರುಷ ಸದಸ್ಯರು ಮತ್ತು ಕಾರ್ಯದರ್ಶಿಗಳು ಸೇರಿ ಮುಖ್ಯ ವಿಚಾರಗಳ ಕುರಿತು ನಿರ್ಧರಿಸುತ್ತಾರೆ. ಆಶ್ರಯಯೋಜನೆ ಹಳ್ಳಿಯಲ್ಲಿ ಅನುಷ್ಠಾನಗೊಂಡಿರುವ ಪರಿಯನ್ನು ಅರ್ಥಮಾಡಿಕೊಳ್ಳಲು ಎರಡು ಉದಾಹರಣೆಗಳು ಸಾಕು. ಒಂದು, ಮಹಿಳಾ ಸದಸ್ಯರೊಬ್ಬರಿಗೆ ಸಂಬಂಧಿಸಿದ್ದು. ಎರಡು, ರೈತ ಸಂಘದಿಂದ ನಡೆದ ಆಶ್ರಯ ಸೈಟುಗಳ ವಿತರಣೆ.

ಪಂಚಾಯತ್‌ಸದಸ್ಯರು ತಮ್ಮ ವಾರ್ಡುಗಳಿಗೆ ಮಾತ್ರ ದುಡಿಯುತ್ತಾರೆ ಎನ್ನುವುದು ಬಹು ಪ್ರಚಲಿತ ದೂರು. ಇಲ್ಲಿ, ಅದರಲ್ಲೂ ಮುಖ್ಯವಾಗಿ ಮಹಿಳಾ ಸದಸ್ಯರುಗಳಿಗೆ, ತಮ್ಮ ವಾರ್ಡುಗಳ ಸಮಸ್ಯೆ ಬಿಡಿ, ತಮ್ಮದೇ ವಸತಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಯಿಪಲ್ಲೆ ಸಂಕ್ಲಮ್ಮ ಪಂಚಾಯತ್‌ಸದಸ್ಯೆ. ಪ್ರಯತ್ನಪಟ್ಟು ಆಶ್ರಯ ಸೈಟು ಪಡೆದಳು. ಆಶ್ರಯ ಸೈಟಿನಲ್ಲಿ ಮನೆಗಳ ನಿರ್ಮಾಣ ಲ್ಯಾಂಡ್‌ಆರ್ಮಿಯವರ ಜವಾಬ್ದಾರಿ. ಆ ಸಂಸ್ಥೆಯ ಇಂಜಿನಿಯರ್‌ಗಳು ಮನೆ ಕಟ್ಟಿಸುವ ಕೆಲಸವನ್ನು ಕೆಲವು ಬಾರಿ ಸ್ಥಳೀಯರಿಗೆ ಒಪ್ಪಿಸುವುದಿದೆ. ಇಲ್ಲಿ ಆ ಜವಾಬ್ದಾರಿಯನ್ನು ಪಂಚಾಯತ್ ಅಧ್ಯಕ್ಷರ ಸಂಬಂಧಿ ವಹಿಸಿಕೊಂಡಿದ್ದ. ಆತನಿಗೆ ಒಂದರಿಂದ ಒಂದೂವರೆ ಸಾವಿರ ರೂಪಾಯಿ ಕೊಟ್ಟರೆ ಸಿಮೆಂಟ್ ಮತ್ತು ಇತರ ಸಾಮಗ್ರಿಗಳು ಸರಿಯಾದ ಪ್ರಮಾಣದಲ್ಲಿ ಬಳಕೆಯಾಗುತ್ತವೆ. ಇಲ್ಲದಿದ್ದರೆ ಕಳಪೆ ಮನೆ ನಿರ್ಮಾಣವಾಗುತ್ತದೆ. ಇದು ಊರಿಗೆಲ್ಲ ತಿಳಿದಿರುವ ಸತ್ಯ. ಸಂಕ್ಲಮ್ಮ ಈ ಸತ್ಯವನ್ನು ಒಪ್ಪಿಕೊಳ್ಳಲು ರೆಡಿಯಿಲ್ಲ. ಯಾಕೆಂದರೆ ನಾನು ಪಂಚಾಯತ್ ಸದಸ್ಯೆ, ನಾನ್ಯಾಕೆ ದುಡ್ಡು ಕೊಡಬೇಕು ಎನ್ನುವುದು ಅವಳ ನಿಲುವು. ಅವಳೂ ಹಠ ಹಿಡಿದಳು. ಅವಳ ಹಠಕ್ಕೆ ಮನೆಯೇನೋ ಎದ್ದು ನಿಂತಿತು. ಆದರೆ ಸಂಕ್ಲಮ್ಮ ಗೋಡೆಗೆ ನೀರುಣ್ಣಿಸುವಾಗ ನೀರಿನ ಜತೆ ಮರಳು ಜಾರಿ (ಸಿಮೆಂಟ್ ಕಡಿಮೆಯಾಗಿ) ತಳ ಸೇರುತ್ತಿತ್ತು. ಈ ವಿಚಾರವನ್ನು ಅವಳು ಅಧ್ಯಕ್ಷರ ಮತ್ತು ಕಾರ್ಯದರ್ಶಿಯವರ ಗಮನಕ್ಕೆ ತಂದಳು. ಏನೂ ಉಪಯೋಗವಾಗಲಿಲ್ಲ. ಕೊನೆಗೂ ಸಂಕ್ಲಮ್ಮನ ಗೋಡೆ ಸಿಮೆಂಟ್ ಕಾಣಲಿಲ್ಲ. ಅವಳನ್ನು ಸಂದರ್ಶನ ಮಾಡಲು ಹೋಗಿರುವಾಗ ಈ ಕತೆಯೆಲ್ಲಾ ಹೇಳಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿ ನನಗೆ ಕನಿಷ್ಠ ಐದು ಗೋಣಿ ಸಿಮೆಂಟ್ ಕೊಡಿಸಿ ನನ್ನ ಮನೆ ಉಳಿಸಿ ಎಂದು ಕಣ್ಣೀರಿಟ್ಟಳು. ಒಬ್ಬ ಸದಸ್ಯೆಯ ಕತೆಯೇ ಇದಾದರೆ ಉಳಿದವರ ಸ್ಥಿತಿ ಹೇಗೋ ಎನ್ನುವ ಚಿಂತೆ ಓದುಗರನ್ನು ಕಾಡಬಹುದು. ಗಾಬರಿ ಪಡುವ ಅಗತ್ಯವಿಲ್ಲ. ಯಾಕೆಂದರೆ ಹಿಂದೆ ವಿವರಿಸಿದಂತೆ ಇಲ್ಲೂ, ಇತರ ಅಧಿಕಾರ ಕೇಂದ್ರಗಳಂತೆ, ಪ್ರತಿಯೊಂದರ ದರ ನಿರ್ಧಾರವಾಗಿದೆ. ನಿಗದಿತ ದರಸಂದಾಯವಾದರೆ ಸಿಗಬೇಕಾದ ಸವಲತ್ತು ಹೆಚ್ಚು ಕಿರಿಕಿರಿ ಇಲ್ಲದೆ ಸಿಗುತ್ತದೆ. ಆ ದರವನ್ನು ಕೊಡದೆ ಹಕ್ಕಿನ ಬಗ್ಗೆ ಮಾತಾಡಿದರೆ ಮಾತ್ರ ಕಷ್ಟ. ಆದುದರಿಂದ ಸದಸ್ಯೆ ಆಗಿರುವುದು ಅಥವಾ ಆಗದಿರುವುದು ಸವಲತ್ತನ್ನು ಪಡಿಯುವ ಹಕ್ಕನ್ನು ವಿಶೇಷ ಪ್ರಭಾವಿಸುವುದಿಲ್ಲ. ಆತ ಅಥವಾ ಆಕೆಯ ಸಂಪನ್ಮೂಲದ ಸ್ಥಿತಿ ನಿಜವಾಗಿಯೂ ಪ್ರಭಾವ ಬೀರುವ ಅಂಶ. ಆದಾಗ್ಯೂ ಪುರುಷ ಸದಸ್ಯರು ಇಷ್ಟೊಂದು ಸಮಸ್ಯೆ ಅನುಭವಿಸಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.

ಆಶ್ರಯ ಯೋಜನೆಯಲ್ಲಿ ಸೈಟು ಮಾಡಿ ವಿತರಿಸಲು ೧೯೯೨ರಲ್ಲೇ ಎರಡು ಎಕ್ರೆ ಭೂಮಿಯನ್ನು ಚಪ್ಪರದ ಹಳ್ಳಿಯ ಕೆಳ ಭಾಗದಲ್ಲಿ ವಿಕ್ರಯಿಸಲಾಗಿತ್ತು. ಸ್ಥಳೀಯರ ಜಗಳದಿಂದ ಸೈಟು ವಿತರಣೆ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಮಂಡಲ ಪಂಚಾಯತ್ ಹೋಗಿ ಗ್ರಾಮ ಪಂಚಾಯತ್ ಬಂತು. ಆದರೂ ಸೈಟು ವಿತರಣೆಯಾಗುವ ಲಕ್ಷಣ ಕಂಡು ಬರಲಿಲ್ಲ. ಅದೇ ಸುಮಾರಿಗೆ ಹಳ್ಳಿಯ ಕೃಷಿ ಕಾರ್ಮಿಕರ ರೈತ ಸಂಘ ಹುಟ್ಟಿಕೊಂಡಿತು. ಅದನ್ನು ಆರಂಭಿಸಿದವರು ರಾಮಪ್ಪ. ಅದರ ಈಗಿನ ಅಧ್ಯಕ್ಷರು ನಾಯಕರ ಶಿವಪ್ಪ. ಅಧ್ಯಕ್ಷರು ಮತ್ತು ಅದರ ಸದಸ್ಯರು ಕೃಷಿಕರೂ ಅಲ್ಲ, ಕೃಷಿ ಕಾರ್ಮಿಕರೂ ಅಲ್ಲ, ಅವರೆಲ್ಲಾ ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗ್‌‌ನಲ್ಲಿ ತೊಡಗಿಸಿಕೊಂಡಿರುವ ಕೆಳ ಜಾತಿ/ವರ್ಗದ ಶ್ರಮಿಕರು. ಖಾಲಿ ಭೂಮಿ ನಮ್ಮ ಕಣ್ಣೆದುರೇ ಇದ್ದರೂ ನಾವು ಮನೆ ಮಠ ಇಲ್ಲದೆ ಅಲೆದಾಡುವುದು ಸರಿ ಬರಲಿಲ್ಲ. ಪಂಚಾಯತ್ ಅಧ್ಯಕ್ಷರಲ್ಲಿ ಹಲವಾರು ಬಾರಿ ಸೈಟುಗಳನ್ನು ವಿತರಿಸಲು ಕೇಳಿಕೊಂಡೆವು. ನಮ್ಮ ಕೂಗು ಅವರಿಗೆಲ್ಲ ಕೇಳುತ್ತದೆ. ಕೊನೆಗೆ ನಾವು ಒಂದು ನಿರ್ಧಾರಕ್ಕೆ ಬಂದೆವು. ಸೈಟುಗಳನ್ನು ವಸತಿ ಇಲ್ಲದವರಿಗೆ ರೈತ ಸಂಘದಿಂದಲೇ ಹಂಚುವುದೆಂದು ತೀರ್ಮಾನಿಸಿದೆವು. ಇದು ರೈತ ಸಂಘದ ಅಧ್ಯಕ್ಷರು ಮತ್ತು ಅವರ ಜತೆ ಇದ್ದ ಸದಸ್ಯರ ಅಭಿಪ್ರಾಯ. ೧೯೯೮ರಲ್ಲಿ ಪಂಚಾಯತನ್ನು ಗಣನೆಗೆ ತೆಗೆದುಕೊಳ್ಳದೆ ಆಶ್ರಯ ಸೈಟುಗಳನ್ನು ಸಂಘ ತನ್ನ ಸದಸ್ಯರಿಗೆ ವಿತರಿಸಿತು. ರೈತ ಸಂಘದ ಈ ಕೆಲಸ ನೋಡಿದರೆ ಸೈಟು ಇವತ್ತು ವಿತರಣೆಯಾಗಬಹುದು ನಾಳೆ ವಿತರಣೆಯಾಗಬಹುದೆಂದು ಕಾದು ನಿರಾಶೆಯಾದ ಜನರೇ ಸೇರಿ ಈ ಸಂಘಟನೆ ಮಾಡಿಕೊಂಡಂತಿದೆ. ಪದಾಧಿಕಾರಿಗಳಂತು ಈ ಆರೋಪವನ್ನು ಒಪ್ಪುವುದಿಲ್ಲ. ಅದೇನೆ ಇರಲಿ ಈ ಸಂಘಟನೆ ಸುಮಾರು ೪೦ ರಿಂದ ೫೦ ರಷ್ಟು ಸೈಟುಗಳನ್ನು ವಿತರಿಸಿದ್ದಂತೂ ನಿಜ. ಈ ಬೆಳವಣಿಗೆಯಿಂದ ಪಂಚಾಯತ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ವಿಚಲಿತರಾದರು. ಯಾವ ರೀತಿ ಸಮಸ್ಯೆಯ್ನು ಪರಿಹರಿಸಬೇಕೆಂದೇ ಅವರಿಗೆ ತಿಳಿಯದಾಯಿತು. ಸ್ವಾಧೀನ ಪಡಿಡಿಕೊಂಡವರನ್ನು ಎಬ್ಬಿಸುವುದು ಕಷ್ಟವಿತ್ತು. ಹಾಗೆಂದು ಅವರನ್ನು ಮುಂದುವರಿಯಲು ಬಿಟ್ಟರೆ ಉಳಿದ ಸೈಟುಗಳನ್ನು ರೈತ ಸಂಘದವರೇ ವಿತರಿಸುವ ಸಾಧ್ಯತೆ ಇತ್ತು. ಸಮಸ್ಯೆ ಪರಿಹಾರಕ್ಕಾಗಿ ಪಂಚಾಯತ್ ವತಿಯಿಂದ ೧೯೯೯ ರಲ್ಲಿ ಸೈಟುಗಳ ಅಧಿಕೃತ ವಿತರಣೆ ನಡೆಯಿತು. ಈಗಾಗಲೇ ಸ್ವಾಧೀನ ಪಡೆದವರು ಬಡತನ ರೇಖೆಗಿಂತ ಕೆಳಗಿರುವುದರಿಂದ ಅವರ ಅಕ್ರಮವನ್ನು ಸಕ್ರಮಗೊಳಿಸಲಾಯಿತು. ಉಳಿದ ಸೈಟುಗಳನ್ನು, ಸುಮಾರು ೭೦ ಸೈಟುಗಳನ್ನು, ಇತರರಿಗೆ ವಿತರಿಸಲಾಯಿತು.

ಆರೋಗ್ಯ

ಪಂಚಾಯತ್ ಕಟ್ಟಡಕ್ಕೆ ತಾಗಿ ಕೊಂಡಂತೆ ಒಂದು ಚಿಕಿತ್ಸಾಲಯವಿದೆ. ಆಯುರ್ವೇದಿಕ್ ವೈದ್ಯರೊಬ್ಬರು ನೇಮಕವೂ ಆಗಿದೆ. ಆದರೆ ಆ ವೈದ್ಯರು ಊರಿಗೆ ಬರುವುದೇ ಸ್ವಲ್ಪ ಅಪರೂಪ. ನನ್ನ ಎರಡು ತಿಂಗಳ ತಿರುಗಾಟದಲ್ಲಿ ಒಂದು ದಿನವೂ ಅವರನ್ನು ಆಸ್ಪತ್ರೆಯಲ್ಲಿ ಕಂಡಿಲ್ಲ. ಕ್ಷೇತ್ರಕಾರ್ಯ ಮುಗಿಸುವ ಮುನ್ನ ಅವರನ್ನೊಮ್ಮೆ ಭೇಟಿಯಾಗುವ ಭಾಗ್ಯ ದೊರಕಿತು. ಯಾವುದೋ ಕೆಲಸದ ಮೇಲೆ ಎಲ್ಲಿಗೋ ಹೊರಟಿರುವ ಅವರನ್ನು ‘ಅವರೇ ನಮ್ಮ ವೈದ್ಯರು’ ಎಂದು ಊರವರು ದಾರಿಯಲ್ಲಿ ತೋರಿಸಿದರು. ನನ್ನ ಪರಿಚಯ ಮಾಡಿಕೊಂಡು, ‘ಎರಡು ತಿಂಗಳಿಂದ ನಾನು ನಿಮ್ಮನ್ನು ಭೇಟಿಯಾಗಬೇಕೆಂದು ಪ್ರಯತ್ನಿಸುತ್ತಿದ್ದೆ, ಆದರೆ ನೀವು ಸಿಗಲೇ ಇಲ್ಲ. ‘ಇಲ್ಲಿ ದಿನ ಬರುವ ಅವಶ್ಯಕತೆ ಇಲ್ಲವೇ?’ ಎಂದೆ. ನನ್ನ ಪ್ರಶ್ನೆ ಅವರಿಗೆ ಅಷ್ಟೇನೂ ಇಷ್ಟವಾದಂತೆ ತೋರಲಿಲ್ಲ. ಇವನಿಗ್ಯಾಕೆ ನನ್ನ ಉಸಾಬರಿ ಎನ್ನುವ ಅಸಡ್ಡೆ ಇತ್ತು. ಆದರೂ ನನ್ನ ವೇಷಭೂಷಣ ನೋಡಿ ಇವ ಸ್ಥಳೀಯ ಅಲ್ಲ; ಅಲ್ಲದಿರುವಾಗ ಸ್ವಲ್ಪ ಹುಷಾರಾಗಿ ಇರುವದೇ ಜಾಣತನ ಎಂದು ನನ್ನ ಪ್ರಶ್ನೆಗೆ ಉತ್ತರಿಸಲು ಮನಸ್ಸು ಮಾಡಿದರು. ‘ಹಿಂದೆ ನಾನು ಡೈಲಿ ಬರುತ್ತಿದ್ದೆ. ಆದರೆ ಇಲ್ಲಿ ಗಂಟೆಗಟ್ಟಲೆ ಕೂತರು ಒಬ್ಬ ಪೇಶಂಟ್ ಇಲ್ಲಿಗೆ ಬರುತ್ತಿರಲಿಲ್ಲ. ಅವರೆಲ್ಲಾ ಪ್ರೈವೈಟ್ ಕ್ಲಿನಿಕ್ಕಿಗೆ ಹೋಗುತ್ತಾರೆ. ಹೀಗೆ ನಾನು ಬರುವುದು ಸ್ವಲ್ಪ ಕಡಿಮೆ ಮಾಡಿದ. ಜತೆಗೆ ನಾನು ಖಾಯಂ ಆಗಿ ನೇಮಕ ಗೊಂಡಿಲ್ಲ; ಒಪ್ಪಂದದ ಮೇರೆಗೆ ದುಡಿಯುತ್ತಿದ್ದೇನೆ. ನಮಗೆ ಸರಿ ಸಂಬಳ ಇಲ್ಲ; ಯಾವುದೇ ಸವಲತ್ತು ಇಲ್ಲ. ಸಿಗಬೇಕಾದ ಸಣ್ಣ ಪುಟ್ಟ ಸವಲತ್ತು ಪಡೆಯಬೇಕಾದರೂ ದುಡ್ಡು ಖರ್ಚು ಮಾಡಬೇಕು. ನಾವೆಲ್ಲಾ (ಒಪ್ಪಂದದ ಮೇರೆಗೆ ದುಡಿಯುವವರು) ಒಂದು ಸಂಘ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಅದರಲ್ಲಿ ಸ್ವಲ್ಪ ಬಿಸಿಯಾಗಿದ್ದೇನೆ’ ಎಂದು ಸತ್ಯವನ್ನೇ ನುಡಿದರು. ‘ನೀವು ಹೇಳುತ್ತೀರಿ ಊರವರು ಇಲ್ಲಿಗೆ ಬರುವುದಿಲ್ಲ. ಊರವರು ಹೇಳುತ್ತಾರೆ ಇಲ್ಲಿ ವೈದ್ಯರೇ ಇರುವುದಿಲ್ಲ. ಒಂದು ವೇಳೆ ವೈದ್ಯರಿದ್ದರೂ ಅವರು ಚೀಟಿ ಕೊಡುವುದು ಮದ್ದು ಕೊಡುವುದಿಲ್ಲ. ಮೆಡಿಕಲ್ ಸ್ಟೋರ್‌ನಲ್ಲಿ ದುಡ್ಡು ಕೊಟ್ಟು ಮದ್ದು ತೆಗೆದುಕೊಳ್ಳಬೇಕು. ‘ಅವರ ಚೀಟಿಗ್ಯಾಕೆ ನಾವು ಅಲ್ಲಿ ಹೋಗಬೇಕೆಂದು ಊರವರು ಅಭಿಪ್ರಾಯ ಪಡುತ್ತಾರೆ’ ಅಂದೆ. ‘ಸರಕಾರದಿಂದ ಮದ್ದು ಪೂರೈಕೆ ಆಗದಿದ್ದರೆ ನಾನೆಲ್ಲಿಂದ ಕೊಡಲಿ?’ ಎಂದು ವೈದ್ಯರ ಮರು ಪ್ರಶ್ನೆ. ಹೀಗೆ ಸರಕಾರಿ ಸವಲತ್ತು ಇದ್ದು ಇಲ್ಲದ ಸ್ಥಿತಿ.

ಸುಮಾರು ೩೯೯ ಕುಟುಂಬಗಳು, ಊರಿನ ಸರಿ ಅರ್ಧದಷ್ಟು ಕುಟುಂಬಗಳು, ಆರೋಗ್ಯ ವ್ಯವಸ್ಥೆಯ ಬಗ್ಗೆ ಅತೃಪ್ತಿ ಸೂಚಿಸಿವೆ (ಕೋಷ್ಠಕ – ೧೨). ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕಿಂಚಿತ್‌ಉಪಯೋಗವೂ ಊರಿಗೆ ಇಲ್ಲ. ಅಂದ ಮಾತ್ರಕ್ಕೆ ಊರವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದಲ್ಲ. ಅದಕ್ಕೆ ವಿರುದ್ಧವಾಗಿ ಸುಮಾರು ಆರು ಜನ ಖಾಸಗಿ ವೈದ್ಯರಿಗೆ ದಿನಂಪ್ರತಿ ವ್ಯಾಪಾರ ಒದಗಿಸುವಷ್ಟು ಖಾಯಿಲೆ ಊರಲ್ಲಿದೆ. ಅವರುಗಳಲ್ಲಿ ನಾಲ್ಕು ಜನ ಕ್ಲಿನಿಕ್ ತೆರೆದು ಖಾಯಂ ಆಗಿ ವ್ಯಾಪಾರ ಮಾಡಿದರೆ ಉಳಿದವರು ಮನೆ ಮನೆಗಳಿಗೆ ಭೇಟಿ ಕೊಟ್ಟು ಉಪಚರಿಸುತ್ತಾರೆ (ಕೋಷ್ಠಕ – ೧೬). ಎಲ್ಲಾ ಆರು ಜನ ವೈದ್ಯರು ಆರ್.ಎಂ.ಪಿ.ಗಳು ಖಾಸಗಿ ಕ್ಲಿನಿಕ್ ಎಂದಾಕ್ಷಣ ಪೇಟೆಗಳಲ್ಲಿ ಸಿಗುವ ಕ್ಲಿನಿಕ್‌ಗಳ ಚಿತ್ರಣ ಕಣ್ಣ ಮುಂದೆ ಬರಬಹುದು. ಆದರೆ ಇಲ್ಲಿನ ಖಾಸಗಿ ಕ್ಲಿನಿಕ್‌ಗಳ ಚಿತ್ರಣವೇ ಬೇರೆ. ಒಬ್ಬರ ಕ್ಲಿನಿಕ್ ಮುಖ್ಯ ರಸ್ತೆಯ ಬದಿಯ ಒಂದು ಹಳೇ ಮನೆಯಲ್ಲಿದೆ. ಇತರ ಮನೆಗಳಂತೆ ಇದು ಕೂಡ ಸ್ಥಳೀಯ ಕಚ್ಚಾ ಕಟ್ಟಡ. ಕ್ಲಿನಿಕ್ ಹೊರಗೆ ಕಸ, ಧೂಳು ತುಂಬಿದೆ. ಹಾಲ್ ತರಹ ಇರುವ ಜಾಗದಲ್ಲಿ ವಿಸಿಟರ್ಸ್‌‌ಗಳಿಗೆ ಕುಳಿತುಕೊಳ್ಳಲು ಮೂರು ಹಳೇ ಬಾಟ ಚೇರ್‌ಗಳಿವೆ. ನಾನು ಭೇಟಿ ಕೊಟ್ಟ ಸಂದರ್ಭದಲ್ಲಿ ಐವರು ರೋಗಿಗಳು ಕಾಯುತ್ತಿದ್ದರು. ಸ್ವಲ್ಪ ಹೊಸಬನಂತೆ ಕಂಡ ನನ್ನನ್ನು ವೈದ್ಯರು ಏನೆಂದು ವಿಚಾರಿಸಿದರು. ಬಂದ ಉದ್ದೇಶ ತಿಳಿಸಿ, ಅವರಿಗೆ ತೊಂದರೆಯಾಗುವುದು ಬೇಡವೆಂದು, ನಿಮ್ಮ ಪೇಶಂಟ್‌ಗಳನ್ನು ಕಳುಹಿಸಿದ ನಂತರ ನನಗೆ ಮಾಹಿತಿ ನೀಡಿದರೆ ಸಾಕೆಂದೆ. ಹಾಲ್‌ಗೆ ತಾಗಿಕೊಂಡಂತೆ ಒಳಭಾಗದಲ್ಲಿ ಪುಟ್ಟ ಕೊಠಡಿ ರೀತಿಯ ಜಾಗವಿದೆ. ಅದನ್ನು ಮತ್ತು ಹಾಲ್‌ನ್ನು ಬೇರ್ಪಡಿಸಲು ಗೋಡೆ ಅಥವಾ ಪರದೆ ಇಲ್ಲ. ಅದೇ ಜಾಗದ ಒಂದು ಬದಿಗೆ ವೈದ್ಯರು ತಮ್ಮ ಟೇಬಲ್ ಇಟ್ಟುಕೊಂಡಿದ್ದಾರೆ. ಮತ್ತೊಂದು ಭಾಗದಲ್ಲಿ ಒಂದು ಹಸಿರು ಬಟ್ಟೆಯ ಸ್ಕ್ರೀನ್‌ನಿಂದ ರೋಗಿಗಳ ತಪಾಸಣೆಗೆ ಜಾಗ ಮಾಡಿಕೊಂಡಿದ್ದಾರೆ. ವೈದ್ಯರ ಟೇಬಲ್ ಪೂರ್ತಿ ಮದ್ದು ಮತ್ತು ಇತರ ಸಾಮಗ್ರಿಗಳಿಂದ ತುಂಬಿತ್ತು. ರೋಗಿಯನ್ನು ಪರೀಕ್ಷಿಸುವುದು ಇತರರಿಗೆ ಕಾಣಬಾರದೆಂದು ಸ್ಕ್ರೀನ್ ಇದ್ದರೂ ಹಾಲ್‌ನಲ್ಲಿ ಕುಳಿತವರು ಎದ್ದು ನಿಂತರೆ ಅಥವಾ ಸ್ವಲ್ಪ ಮುಂದಕ್ಕೆ ಹೋದರೆ ತಪಾಸಣೆಯ ರೋಗಿಯನ್ನು ಕಾಣಬಹುದು.

ಆರೇಳು ಪೇಶಂಟ್‌ಗಳು ಹೋದರೂ ಕ್ಯೂ ಕಡಿಮೆಯಾಗುವ ಲಕ್ಷಣ ಕಾಣಲಿಲ್ಲ. ಹಿಂದಿನ ನನ್ನ ನಾಗರಿಕ ನಟನೆಯನ್ನು ಬದಿಗಿಟ್ಟು ವೈದ್ಯರಲ್ಲಿ ಬರುವ ಮುಖ್ಯ ರೋಗಗಳ ಕುರಿತು ವಿಚಾರಿಸಿದೆ. ಶ್ವಾಶಕೋಶದ ರೋಗಗಳು, ಮಲೇರಿಯಾ, ಆಮಶಂಕೆ, ಆಸ್ತಮ, ಹಳದಿ ರೋಗ ಮತ್ತು ಕೆಲವು ಹೆಚ್.ಐ.ವಿ. ಪಾಸಿಟಿವ್‌ಕೇಸ್‌ಗಳು. ಹೆಚ್.ಐ.ವಿ. ಪಾಸಿಟಿವ್‌ಕೇಸ್‌ಗಳ ಬಗ್ಗೆ ನನ್ನ ಕುತೂಹಲ ಕೆರಳಿತು. ‘ಇಂತಹ ಹಳ್ಳಿಯಲ್ಲಿ ಹೆಚ್.ಐ.ವಿ. ಪಾಸಿಟಿವ್‌ಕೇಸ್‌ಗಳು ಇರಲು ಹೇಗೆ ಸಾಧ್ಯ?’ ಎಂದೆ. ‘ಇಲ್ಲಿನ ಗಣಿ ಕಾರ್ಮಿಕರು ಹೊಸಪೇಟೆ ಅಥವಾ ಬಳ್ಳಾರಿಯಲ್ಲಿ ವೇಶ್ಯೆಯರ ಸಂಪರ್ಕ ಮಾಡುತ್ತಾರೆ. ಅವರಿಂದ ಹೆಚ್.ಐ.ವಿ. ಪಾಸಿಟಿವ್ ಕೇಸ್‌ಗಳು ಹಳ್ಳಿಗೆ ಬರುತ್ತವೆ’ ಎಂದು ಡಾಕ್ಟರ್‌ರ ಅಭಿಪ್ರಾಯ. ಈಗಾಗಲೇ ೪ ರಿಂದ ೫ ಕೇಸುಗಳಿಗೆ, ಕನಿಷ್ಠ ಹತ್ತರಿಂದ ಹದಿನೈದು ಗಂಡಸರು ಆ ಲಕ್ಷಣ ಹೊಂದಿದ್ದಾರೆ; ಪರೀಕ್ಷಿಸಿದರೆ ಗೊತ್ತಾದೀತು ಎಂದು ಅವರ ಅಭಿಪ್ರಾಯಪಟ್ಟರು.

ಆ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿ ಹಳ್ಳಿಯಲ್ಲಿ ಇರುವ ಮುಖ್ಯ ಖಾಯಿಲೆಗಳ ಕುರಿತು ಕೇಳಿದೆ. ಅವರಲ್ಲಿ ಬರುವ ವಿವಿಧ ಖಾಯಿಲೆಗಳು ಇಂತಿವೆ – ಶೇಕಡಾ ನಲ್ವತ್ತರಷ್ಟು ಕ್ಷಯ ಮತ್ತು ಉಸಿರಾಟಕ್ಕೆ ಸಂಬಂಧಿಸಿದ್ದು, ಕಾಲರಾ (ಆಮಶಂಕೆ) ೨೫%, ಮಲೇರಿಯಾ ೨೦% ಮತ್ತು ಇತರ ಖಾಯಿಲೆಗಳು ೧೫% ವರ್ಷವಿಡೀ ಇದೇ ಲೆಕ್ಕಾಚಾರದಲ್ಲಿ ಖಾಯಿಲೆಗಳು ಇಲ್ಲ. ಉಸಿರಾಟಕ್ಕೆ ಅಥವಾ ಶ್ವಾಶಕೋಶಕ್ಕೆ ಸಂಬಂಧಿಸಿದ ರೋಗಿಗಳ ಸಂಖ್ಯೆ ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಹೆಚ್ಚಿರುತ್ತದೆ. ಕಾಲರಾ ಬೇಸಿಗೆಯಲ್ಲಿ ಶುರುವಾಗುತ್ತದೆ. ಜೂನ್‌ನಂತರ ಮಲೇರಿಯಾ ಪೇಶಂಟ್‌ಗಳು ಬರಲು ಆರಂಭಿಸುತ್ತಾರೆ. ಖಾಸಗಿ ವೈದ್ಯರುಗಳು ನೀಡಿದ ಅಂಕಿ ಅಂಶಗಳನ್ನು ಕಾರಿಗನೂರಿನಲ್ಲಿರುವ ಕಾರ್ಮಿಕ ಕಲ್ಯಾಣ ಲಾಖೆಯವರು ನಡೆಸುತ್ತಿರುವ ಆಸ್ಪತ್ರೆ ಮತ್ತು ಗಾದಿಗನೂರಿನಲ್ಲಿರುವ ಪ್ರೈಮರಿ ಹೆಲ್ತ್ ಸೆಂಟರ್‌ನಿಂದ ಪಡೆದ ಅಂಕಿ ಅಂಶಗಳೊಂದಿಗೆ ಹೋಲಿಸಿ ನೋಡಲಾಗಿದೆ. (ಕೋಷ್ಠಕ ೨೩ ಮತ್ತು ೨೪). ಕಾರಿಗನೂರು ಪಿ.ಕೆ.ಹಳ್ಳಿಯಿಂದ ಆರು ಕಿ.ಮೀ. ದೂರದಲ್ಲಿ ಹೊಸಪೇಟೆ ಕಡೆಗಿದೆ. ಇಲ್ಲಿ ಕೇಂದ್ರ ಸರಕಾರ ಗಣಿ ಕಾರ್ಮಿಕರಿಗಾಗಿಯೇ ಒಂದು ಆಸ್ಪತ್ರೆ ನಿರ್ಮಿಸಿದೆ. ಇಲ್ಲಿ ಚಿಕಿತ್ಸೆ ದೊರೆಯಬೇಕಾದರೆ ಶಾಶ್ವತ ಕಾರ್ಮಿಕ ಎಂದು ಗಣಿ ಮಾಲಿಕರಿಂದ ಚೀಟಿ ತರಬೇಕು. ಹಾಗಾಗಿ ವ್ಯಾಗನ್ ಲೋಡಿಂಗ್, ಕಾಂಟ್ರೆಕ್ಟ್ ನೆಲೆಯಲ್ಲಿ ದುಡಿಯುವ ಶ್ರಮಿಕರು, ತಾತ್ಕಾಲಿಕ ಕಾರ್ಮಿಕರಿಗೆ ಇಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಹಳ್ಳಿಯಲ್ಲಿ ಹಲವಾರು ಶಾಶ್ವತಗಣಿ ಕಾರ್ಮಿಕರಿದ್ದಾರೆ. ಇವರು ಈ ಆಸ್ಪತ್ರೆಯ ಸೌಲಭ್ಯ ಪಡಿಯುತ್ತಿದ್ದಾರೆ. ಕ್ಷಯ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳ ತೀವ್ರತೆಯನ್ನು ಗುರುತಿಸಲು ಕೇಂದ್ರ ಆಸ್ಪತ್ರೆಯ ಅಂಕಿ ಅಂಶಗಳನ್ನು ಇಲ್ಲಿ ಕೊಡಲಾಗಿದೆ. ಉಸಿರಾಟಕ್ಕೆ ಸಂಬಂಧಪಟ್ಟ ಖಾಯಿಲೆಗಳ ತೀವ್ರತೆಯನ್ನು ಗಾದಿಗನೂರಿನ ಅಂಕಿ ಅಂಶಗಳಿಂದಲೂ ತಿಳಿಯಬಹುದು. ಉಸಿರಾಟಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೆ ಔಷಧಿಯ ಜತೆ ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯ ಅಗತ್ಯವಿದೆ. ಬಹುತೇಕ ರೋಗಿಗಳು ವ್ಯಾಗನ್ ಲೋಡಿಂಗ್ ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡ ಕಾರ್ಮಿಕರು. ಇವರಿಗೆ ಒಳ್ಳೆಯ ಆಹಾರ ಮತ್ತು ವಿಶ್ರಾಂತಿ ಎರಡೂ ಲಕ್ಜುರಿಯೇ. ಸ್ಥಳೀಯವಾಗಿ ಸರಕಾರಿ ಆಸ್ಪತ್ರೆ ಇಲ್ಲದಿರುವುದು ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯ ಆಸ್ಪತ್ರೆ ಕೇವಲ ಶಾಶ್ವತ ಕಾರ್ಮಿಕರಿಗೆ ಚಿಕಿತ್ಸೆ ನೀಡುವುದು ಈ ಎರಡು ಕಾರಣಗಳಿಂದ ಈ ರೋಗಿಗಳು ಸ್ಥಳೀಯ ಖಾಸಗಿ ವೈದ್ಯರುಗಳನ್ನೇ ನಂಬಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಕಾರ್ಮಿಕರು ಅಕ್ಕಿ ಊಟ ಮಾಡುವುದರಿಂದ ಕ್ಷಯ ರೋಗ ಅವರಿಗೆ ಜಾಸ್ತಿ ಎಂದು ಡಾಕ್ಟರುಗಳ ಅಂಬೋಣ. ಅವರ ಪ್ರಕಾರ ಇಲ್ಲಿನ ಮೇಲುಜಾತಿಯವರು ರಾಗಿ ಮುದ್ದೆ ಮತ್ತು ಜೋಳ ತಿನ್ನುವುದರಿಂದ ಅವರುಗಳಲ್ಲಿ ಕ್ಷಯ ರೋಗಿಗಳು ಕಡಿಮೆ. ಇದು ಒಪ್ಪಬಹುದಾದ ವಾದವಲ್ಲ. ಯಾಕೆಂದರೆ ಕೆಲವು ಕಡೆ ಸಮಾಜದ ಎಲ್ಲರ ಆಹಾರ ಅಕ್ಕಿಯೇ ಆಗಿದೆ. ಅಂತಹ ಕಡೆ ಸಮಾಜದ ಮೇಲ್ವರ್ಗದಲ್ಲೂ ಕ್ಷಯ ರೋಗಿಗಳು ಇರಬೇಕು. ಆದರೆ ಆ ರೀತಿ ಇಲ್ಲ. ಎಲ್ಲಾ ಕಡೆ ಬಡವರೇ ಕ್ಷಯ ರೋಗಿಗಳು. ಆಹಾರದ ಕೊರತೆಯಿಂದ, ಆರೈಕೆ ಅಥವಾ ವಿಶ್ರಾಂತಿಯ ಕೊರತೆಯಿಂದ ಕ್ಷಯ ರೋಗ ಬರುತ್ತದೆ. ಇಲ್ಲಿ ಕೂಡ ಕ್ಷಯ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ಖಾಯಿಲೆಗಳು ಕೆಳಜಾತಿ/ವರ್ಗದವರಲ್ಲೇ ಕಂಡು ಬಂದಿದೆ. ವ್ಯಾಗನ್ ಲೋಡಿಂಗ್ ಮತ್ತು ಗಣಿಗಾರಿಕೆ ಎರಡು ಕೂಡ ದೂಳಿನ ವಾತಾವರಣದ ದುಡಿತ. ಕೃಷಿಗೆ ಹೋಲಿಸಿದರೆ ಇಲ್ಲಿನ ಆದಾಯ ಹೆಚ್ಚೇ. ಆದರೆ ಈ ಹೆಚ್ಚಿನ ಆದಾಯದಲ್ಲಿ ಸ್ವಲ್ಪ ಭಾಗವನ್ನು ಆಸ್ಪತ್ರೆ ಖರ್ಚಿಗೆ ತೆಗೆದಿಡಲೇಬೇಕು. ಹೀಗೆ ಈ ದುಡಿಮೆ ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮ ಅದು ಕೊಡುವ ಹೆಚ್ಚಿನ ಆದಾಯವನ್ನು ಕಿತ್ತುಕೊಳ್ಳುತ್ತಿದೆ.

ಬಡತನ, ಅತ್ಯಲ್ಪ ಬದಲೀ ಆದಾಯ ಮೂಲಗಳು ಮತ್ತು ಸಮಾಜ ಜೀವ ವಿಮೆ ಇಲ್ಲದಿರುವುದು ಇತ್ಯಾದಿಗಳು ಇವರನ್ನು ಅನಾರೋಗ್ಯದ ನಡುವೆಯೂ ದುಡಿಯುವಂತೆ ಒತ್ತಾಯಿಸುತ್ತವೆ. ದುಡಿತದ ಆಯಾಸ ಪರಿಹಾರಕ್ಕಾಗಿ ಶುರುವಾಗುವ ಕುಡಿತ ಅನಾರೋಗ್ಯದ ನೋವು ಮರೆಯಲು ಮದ್ದಾಗುತ್ತದೆ. ಇವರ ಅನಾರೋಗ್ಯಕ್ಕೆ ಮತ್ತು ಕುಡಿತಕ್ಕೆ ಇವೇ ಕಾರಣಗಳು ಅಥವಾ ಇವೇ ಬಲವಾದ ಕಾರಣವೆನ್ನುವ ವಾದ ಇದಲ್ಲ. ಕಾರ್ಮಿಕರೇ ಇಲ್ಲಿನ ಸಾರಾಯಿ ಅಂಗಡಿಗಳ ಮುಖ್ಯ ಗಿರಾಕಿಗಳೆಂದು ಊರಲ್ಲಿ ಒಂದೆರಡು ದಿನ ಸುತ್ತಾಡಿದ ಕೂಡಲೇ ತಿಳಿಯುತ್ತದೆ. ಸ್ಟೇಷನ್ ರಸ್ತೆಯಲ್ಲಿ, ಚಪ್ಪರದ ಹಳ್ಳಿ ಪಕ್ಕ ಇರುವ ಸಾರಾಯಿ ಅಂಗಡಿ ವ್ಯಾಪಾರಿಯ ಅಭಿಪ್ರಾಯದಂತೆ ಡಾಲ್ಮಿಯಾ ಗಣಿ ನಡೆಯುತ್ತಿರುವ ಸಂದರ್ಭದಲ್ಲಿ ದಿನದ ವ್ಯಾಪಾರ ಕನಿಷ್ಠ ಅಂದ್ರೆ ೫೦೦ ರಿಂದ ೭೫೦ ಪ್ಯಾಕೆಟ್‌ಗಳು. ವಾರದ ರಜಾ ದಿನವಂತೂ ಅದು ಸಾವಿರ ದಾಟುತ್ತಿತ್ತು. ೧೯೭೭ರ ನಂತರ, ಡಾಲ್ಮಿಯಾದ ಲೇ – ಆಫ್‌ಮತ್ತು ನಂತರದ ಮುಷ್ಕರದ ನಂತರ, ವ್ಯಾಪಾರ ಕುಸಿದಿದೆ. ಈಗ ದಿನಕ್ಕೆ ೨೫೦ ಪ್ಯಾಕೆಟ್‌ಮಾರಾಟವಾಗುವುದು ಕಷ್ಟ ಎಂದು ವ್ಯಾಪಾರಿ ಅಭಿಪ್ರಾಯ ಪಡುತ್ತಾನೆ. ಇದರ ಅರ್ಥ ಹಳ್ಳಿ ಒಟ್ಟು ಸಾರಾಯಿ ವ್ಯಾಪಾರವೇ ಕಡಿಮೆಯಾಗಿದೆ ಅಥವಾ ಸಾರಾಯಿ ವ್ಯಾಪಾರವಿಡೀ ವ್ಯಾಗನ್ ಮತ್ತು ಗಣಿ ಕಾರ್ಮಿಕರ ಮೇಲೆ ನಿಂತಿದೆ ಎಂದಲ್ಲ.

೧೯೭೭ರವರೆಗೆ ಇಲ್ಲಿ ಕೇವಲ ಮೂರು ಸಾರಾಯಿ ಅಂಗಡಿಗಳಿದ್ದವು. ನಂತರದ ವರ್ಷಗಳಲ್ಲಿ ಇನ್ನೂ ಎರಡು ಅಂಗಡಿಗಳು ಬಂದವು. ಈಗ ಒಟ್ಟು ಐದು ಅಂಗಡಿಗಳಿವೆ. ಪ್ರತಿ ಅಂಗಡಿಯ ದಿನದ ವ್ಯಾಪಾರ ಕನಿಷ್ಠ ಅಂದರೆ ೨೫೦ ರಿಂದ ೩೦೦ ಪ್ಯಾಕೆಟ್‌ಗಳು. ಅಂದರೆ ಐದು ಸಾರಾಯಿ ಅಂಗಡಿಗಳ ದಿನದ ವ್ಯಾಪಾರ ಸುಮಾರು ೧೨೫೦ ರಿಂದ ೧೫೦೦ ಪ್ಯಾಕೆಟ್‌ಗಳು. ಪ್ರತಿ ಪ್ಯಾಕೆಟ್‌ನ ಬೆಲೆ ರೂ. ೯; ಊರವರು ಸಾರಾಯಿಗಾಗಿ ಮಾಡುವ ದಿನದ ಖರ್ಚು ರೂ. ೧೧೨೫೦ ರಿಂದ ೧೩೫೦೦ (ಕೋಷ್ಠಕ – ೧೭). ಈ ಅಂಕಿ ಅಂಶಗಳು ಎರಡು ವಿಚಾರಗಳತ್ತ ಬೊಟ್ಟು ಮಾಡುತ್ತವೆ. ಒಂದು, ವ್ಯಾಗನ್‌/ಗಣಿ ಕಾರ್ಮಿಕರು ಮಾತ್ರ ಸಾರಾಯಿ ಅಂಗಡಿಗಳ ಗಿರಾಕಿಗಳಲ್ಲ. ಹಾಗಿದ್ದರೆ ೧೯೭೭ರ ನಂತರ ಸಾರಾಯಿ ವ್ಯಾಪಾರ ಕಡಿಮೆಯಾಗಬೇಕಿತ್ತು. ಪ್ರತಿ ಅಂಗಡಿಯ ವ್ಯಾಪಾರ ಕಡಿಮೆಯಾಗಿದೆ. ಆದರೆ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಒಟ್ಟು ಸಾರಾಯಿ ವ್ಯಾಪಾರ ಹೆಚ್ಚು ಕಡಿಮೆ ಹಿಂದಿನಷ್ಟೆ ಇದೆ. ಇಷ್ಟು ವ್ಯಾಪಾರ ನಡಿಯಬೇಕಾದರೆ ಗಣಿ/ವ್ಯಾಗನ್‌ಕಾರ್ಮಿಕರ ಜತೆಗೆ ಊರ ಇತರರು ಕೂಡ ಈ ಅಂಗಡಿಗಳ ಗಿರಾಕಿಗಳಾಗಿರಲೇ ಬೇಕು.

ಎರಡು, ಸಾರಾಯಿ ಅಂಗಡಿ ಮತ್ತು ಕಾರ್ಮಿಕರ ಆರೋಗ್ಯದ ನಡುವೆ ನೇರ ಸಂಬಂಧ ಕಲ್ಪಿಸುವುದು ಕಷ್ಟವಾಗಬಹುದು. ಆದರೆ ಮೇಲಿನ ಅಂಕಿ ಅಂಶಗಳು ಅವುಗಳ ನಡುವೆ ಏನೋ ಒಂದು ಸಂಬಂಧವಿದೆ ಎನ್ನುವುದನ್ನು ಖಾತ್ರಿ ಮಾಡುತ್ತವೆ. ಆದುದರಿಂದ ಆರೋಗ್ಯದ ಚರ್ಚೆಯಲ್ಲಿ ಸಾರಾಯಿ ಅಂಗಡಿಗಳ ಪಾತ್ರವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ಪಂಚಾಯತ್‌ಸದಸ್ಯರಲ್ಲಿ ನಾಲ್ವರು ವ್ಯಾಗನ್/ಗಣಿ ಕಾರ್ಮಿಕರು. ಆದರೂ ಪಂಚಾಯತ್ ಕಡೆಯಿಂದ ಸಾರಾಯಿ ಅಂಗಡಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕಂಡು ಬಂದಿಲ್ಲ. ಸ್ಥಳೀಯ ಸರಕಾರೇತರ ಸಂಸ್ಥೆ, ಅರುಣೋದಯ, ಸಾರಾಯಿ ಕುಡಿತ ವಿರುದ್ಧ ಮಹಿಳಾ ಜಾಗೃತಿಗೆ ಪ್ರಯತ್ನಿಸಿತ್ತು. ಹರಿಜನ ಕೇರಿ, ಸ್ಟೇಷನ್‌ಪಕ್ಕ ಇರುವ ಗುಡಿಸಲುಗಳು ಮತ್ತ ಆಶ್ರಯ ಸೈಟಿನಲ್ಲಿರುವ ಮಹಿಳೆಯರನ್ನು ಸೇರಿಸಿ ಅವರ ಗಂಡಂದಿರ ಕುಡಿತವನ್ನು ತಡೆಯುವುದು ಹೇಗೆ ಎಂದು ಚರ್ಚಿಸಿದೆ. ಕೆಲವರು ಸಾರಾಯಿ ಅಂಗಡಿಗಳನ್ನು ಮುಚ್ಚುವಂತೆ ಚಳವಳಿ ಹೂಡಲು ಸಲಹೆ ನೀಡಿದರು. ಆದರೆ ಹೆಚ್ಚಿನ ಮಹಿಳೆಯರು, ಹಳ್ಳಿಯ ಸಾರಾಯಿ ಅಂಗಡಿ ಮುಚ್ಚಿದರೆ ಆತ ಹೊಸಪೇಟೆಗೆ ಹೋಗಿ ಕುಡಿದು ಬರುತ್ತಾನೆ; ಅದು ಇದಕ್ಕಿಂತಲೂ ಅಪಾಯಕಾರಿ. ಅದರಿಂದ ಆತ ಇಲ್ಲೇ ಕುಡಿಯುವುದು ವಾಸಿ, ಎಂದು ಸಲಹೆ ನೀಡಿದರು. ಹೀಗೆ ಅರುಣೋದಯ ಸಂಸ್ಥೆಯ ಸಾರಾಯಿ ವಿರುದ್ಧದ ಹೋರಾಟ ಹುಟ್ಟುವ ಮೊದಲೇ ಸತ್ತಿತು.

ಕ್ಷಯ ಮತ್ತು ಶ್ವಾಶಕೋಶದ ರೋಗದ ನಂತರ ಸ್ಥಳೀಯರನ್ನು ಕಾಡುವ ರೋಗಗಳೆಂದರೆ ಕಾಲರಾ (ಆಮಶಂಕೆ, ಭೇದಿ) ಮತ್ತು ಮಲೇರಿಯಾ. ಈ ರೋಗಗಳಿಗೂ ಹಳ್ಳಿಯ ನೈರ್ಮಲ್ಯೀಕರಣಕ್ಕೂ ನೇರ ಸಂಬಂಧವಿದೆ. ಮಲೇರಿಯಾ ನಿಂತ ನೀರಿನಲ್ಲಿ ಹುಟ್ಟಿಕೊಳ್ಳುವ ಸೊಳ್ಳೆಗಳಿಂದ ಹರಡುವ ರೋಗ. ಮಲೇರಿಯಾ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಎಂದು ಡಾಕ್ಟರುಗಳ ಅಭಿಪ್ರಾಯ. ಆದರೆ ಮಲೇರಿಯಾ ಯಾವತ್ತು ಕೂಡ ಮರುಕಳಿಸುವ ಸಾಧ್ಯತೆಗಳು ಇಲ್ಲಿವೆ. ಖಾತ್ರಿಯಾಗಿ ಭವಿಷ್ಯ ಹೇಳುವಷ್ಟು ಸಾಕ್ಷಿಯನ್ನು ಇಲ್ಲಿನ ಚರಂಡಿ ವ್ಯವಸ್ಥೆಯೇ ಒದಗಿಸುತ್ತದೆ. ಒಂದನೆಯ ಅಧ್ಯಾಯದಲ್ಲಿ ಹಳ್ಳಿಯ ಮನೆಗಳು ಮತ್ತು ಅವುಗಳು ಇರುವ ಕ್ರಮವನ್ನು ವಿಸ್ತರಿಸಿದ್ದೇನೆ. ಮನೆಗಳ ಮುಂದೆ ಚಿಕ್ಕ ಓಣಿ ಇದೆ. ಈ ಓಣಿ ಜನರು ಓಡಾಡುವ ದಾರಿಯಾಗಿ ಕೆಲಸ ಮಾಡುತ್ತಿದೆ. ಒಂದು ಕಾಲದಲ್ಲಿ ಈ ಓಣಿ ಬದಿಯೇ ಮನೆಯವರು ಬಳಸಿದ ನೀರು ಹೋಗುವ ಚರಂಡಿಯಾಗಿತ್ತು. ಪಂಚಾಯತ್ ಬಂದ ನಂತರ ಕೆಲವು ವಾರ್ಡ್‌‌ಗಳಲ್ಲಿ ಸದಸ್ಯರುಗಳು ಸ್ಪರ್ಧೆಯಿಂದ ತಮ್ಮ ತಮ್ಮ ಓಣಿಗಳಿಗೆ ಬಂಡೆ ಹಾಸಲು ಆರಂಭಿಸಿದರು. ಬಂಡೆ ಹಾಕಿಸುವ ಸ್ಪರ್ಧೆಗೆ ಎರಡು ಕಾರಣಗಳು. ಒಂದು, ಓಟು ಹಾಕಿದ್ದಕ್ಕೆ ಕೆಲಸ ಮಾಡಿಸಿದ್ದೇವೆ ಎಂದು ತೋರಿಸುವ ತಂತ್ರ. ಎರಡು, ಸದಸ್ಯನಾಗಿ ಏನಾದರೂ ಸ್ವಲ್ಪ ದುಡ್ಡು ಮಾಡಲು ಸಾಧ್ಯವಾಗುವುದು ಕೂಡ ಇಂತಹ ಕಾಮಗಾರಿಗಳನ್ನು ಮಾಡಿಸಿದರೆ ಮಾತ್ರ. ಇದರ ಅರ್ಥ ಓಣಿಗೆ ಬಂಡೆ ಹಾಸುವ ಅಗತ್ಯವೇ ಇಲ್ಲವೆಂದಲ್ಲ. ಖಂಡಿತವಾಗಿಯೂ ಇದೆ. ಆದರೆ ಇಲ್ಲಿನ ಕೆಲಸ ಅದರ ಮೂಲ ಉದ್ದೇಶಕ್ಕೆ ಪೂರಕವಾಗಿಲ್ಲ. ಬಂಡೆ ಹಾಸುವ ಭರದಲ್ಲಿ ಚರಂಡಿಗೆ ಸ್ಥಳವೇ ಉಳಿದಿಲ್ಲ. ಮನೆಯವರು ಬಳಸಿದ ನೀರು ದಾರಿ ಮಧ್ಯನೇ ಹರಿಯುತ್ತಿದೆ. ಕೆಲವು ಕಡೆ ಹರಿಯದೆ ಕೊಳಚೆ ನಿರ್ಮಾಣವಾಗಿದೆ.

ಜವಾಹರ್ ರೋಜ್‌ಗಾರ್ ಯೋಜನೆಯಡಿಯಲ್ಲಿ ಪ್ರತಿವರ್ಷ ಕನಿಷ್ಠ ಅಂದರೆ ಒಂದೂವರೆಯಿಂದ ಎರಡು ಲಕ್ಷದಷ್ಟು (ಕೋಷ್ಠಕ – ೯) ದುಡ್ಡು ಬಂಡೆ ಹಾಸುವುದು ಮತ್ತು ಚರಂಡಿ ನಿರ್ಮಾಣಕ್ಕಾಗಿ ವಿನಿಯೋಜನೆ ಆಗುತ್ತಿದೆ. ಇದರ ಜತೆಗೆ ಪ್ರತಿ ವರ್ಷದ ಆಯವ್ಯಯ ಪಟ್ಟಿಯಲ್ಲಿ ಊರಿನ ನೈರ್ಮಲ್ಯೀಕರಣಕ್ಕೆಂದು ಕನಿಷ್ಠ ಹದಿನೈದರಿಂದ ಇಪ್ಪತ್ತು ಸಾವಿರ ಖರ್ಚು ತೋರಿಸಲಾಗುತ್ತಿದೆ (ಕೋಷ್ಠಕ – ೧೦). ಇಷ್ಟಾದಾಗ್ಯೂ ಈ ಅಧ್ಯಯನ ನಡೆಸುವ ಸಂದರ್ಭದಲ್ಲಿ ಹಳ್ಳಿಯ ಬಹುತೇಕ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಇರಲಿಲ್ಲ. ಅಂದರೆ ಎರಡೂ ಕಡೆ ಕಲ್ಲುಕಟ್ಟಿ ನೀರು ಹರಿದು ಹೋಗಲು ಅನುಕೂಲವಾಗುವ ವ್ಯವಸ್ಥೆ ಇಲ್ಲ. ಮನೆಯವರು ಬಳಸಿ ಹೊರ ಬಿಡುವ ಬಚ್ಚಲು ನೀರು, ಬಟ್ಟೆ ಒಗೆದ ನೀರು (ಊರ ಕೆರೆಯಲ್ಲಿ ನೀರಿರುವ ತನಕ ಅಗಸರು ಕೆರೆಯಲ್ಲೆ ಬಟ್ಟೆ ಒಗೆದು ಕೊಡುತ್ತಾರೆ. ಫೆಬ್ರವರಿ ನಂತರ ಮುಂದಿನ ಐದಾರು ತಿಂಗಳು ಕೆರೆ ನೀರು ಖಾಲಿಯಾದ ಸಂದರ್ಭದಲ್ಲಿ ಮನೆಯವರು ತಮ್ಮ ಮನೆಯ ಎದುರು ಭಾಗದಲ್ಲಿ ಬಟ್ಟೆ ಒಗೆದು ಕೊಳ್ಳುತ್ತಾರೆ), ಪಾತ್ರೆ ತೊಳೆದ ನೀರು ಇತ್ಯಾದಿಗಳು ಈ ಓಣಿ ಅಂಚಿಗಿರುವ ಕಿರು ಚರಂಡಿಯಲ್ಲಿ ಹರಿಯಬೇಕಾಗಿದೆ. ತಗ್ಗು ದಿನ್ನೆಗಳಿರುವ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿದೆ; ಸಮತಟ್ಟಾದ ಜಾಗಗಳಲ್ಲಿ ನೀರು ಹರಿಯುವುದಿಲ್ಲ. ಹೀಗೆ ಒಂದು ಮನೆಯ ಕೊಳಚೆ ನೀರು ಒಂದೋ ಅದೇ ಮನೆಯೆದುರು ಅಥವಾ ಪಕ್ಕದ ಮನೆಯೆದುರು ನಿಂತಿರುವುದು ಇಲ್ಲಿ ಸಹಜ. ಕೆಲವು ಕಡೆ ಬಚ್ಚಲು ನೀರು ಮನೆಯ ಹಿಂದುಗಡೆಯಿಂದ ಹೋಗುತ್ತದೆ. ಗುಂಪು ಮನೆಗಳಿರುವ ಇಂತಹ ಕಡೆ ಒಂದು ಮನೆಯ ಹಿತ್ತಲು ಮತ್ತೊಂದು ಮನೆಯೆದುರಿನ ಓಣಿಯಾಗಿದೆ. ಹೀಗಾಗಿ ಹಿತ್ತಲಿಂದ ಹರಿಯುವ ಬಚ್ಚಲು ನೀರು ಮತ್ತೊಂದು ಮನೆಯೆದುರಿನ ಕಿರು ಚರಂಡಿ ಸೇರುತ್ತದೆ. ಕೆಲವು ಓಣಿಗಳಲ್ಲಿ ಮತ್ತು ಬೀದಿಗಳಲ್ಲಿ ಚರಂಡಿ ವ್ಯವಸ್ಥೆ ಇದೆ. ಬೀದಿ ಬದಿಯ ಮಣ್ಣು ಜಾರಿಯೋ ಅಥವಾ ಮನೆಯವರೇ ತಂದು ಹಾಕಿದ ಕಸ ಕಡ್ಡಿಯಿಂದಲೋ ಕ್ರಮ ಪ್ರಕಾರ ಮಾಡಿದ ಚರಂಡಿಗಳೂ ಮುಚ್ಚಿವೆ. ಕೊಳಚೆ ನೀರು ಹರಿಯದೆ ಕೊಚ್ಚೆ ನಿರ್ಮಾಣವಾಗಿದೆ. ಹೀಗೆ ಕೆಲವು ವಾರ್ಡುಗಳ ಎಲ್ಲಾ ಕಡೆ ಮತ್ತು ಎಲ್ಲಾ ವಾರ್ಡುಗಳ ಕೆಲವು ಕಡೆ ಕೊಳಚೆ ನೀರು ನಿಂತಿರುವುದು ಇಲ್ಲಿ ಸಾಮಾನ್ಯ. ಇವೆಲ್ಲಾ ಸೊಳ್ಳೆ ವೃದ್ಧಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿವೆ.

ಕಾಲರಾ (ಆಮಶಂಕೆ, ಭೇದಿ ಇತ್ಯಾದಿ) ನೀರಿನಿಂದ ಬರುವ ಖಾಯಿಲೆ. ಸದ್ಯಕ್ಕೆ ನೀರಿನ ವ್ಯವಸ್ಥೆ ಸುಧಾರಿಸಿದೆ ಎಂದು ಊರವರು ಅಭಿಪ್ರಾಯ ಪಡುತ್ತಾರೆ. ಪಂಚಾಯತ್‌ನ ಒಟ್ಟು ಖರ್ಚಿನಲ್ಲಿ ಬಹುಪಾಲು ಹೋಗುವುದು ಕೂಡ ನೀರು ಪೂರೈಕೆಗೆ. ಕೆಲವು ಮನೆಗಳ ಎದುರಿನಲ್ಲಿ ನಳ ಇದೆ. ನಿರ್ದಿಷ್ಟ ಸಮಯದಲ್ಲಿ ನೀರು ಬಿಡುತ್ತಾರೆ. ನೀರನ್ನು ಪಾತ್ರೆಗಳಲ್ಲಿ ತುಂಬಿಸಿ ಇಟ್ಟುಕೊಳ್ಳಬೇಕಾಗಿದೆ. ಹೆಚ್ಚು ಕಡಿಮೆ ಎಲ್ಲಾ ಮನೆಗಳಲ್ಲಿ ಪಾಯಿಖಾನೆ ಇಲ್ಲ. ನಿರ್ಮಲ ಕರ್ನಾಟಕ ಯೋಜನೆಯಲ್ಲಿ ೨೦ ರಿಂದ ೩೦ ಪಾಯಿಖಾನೆಗಳು ಆಗಿವೆ. ಮಲ ವಿಸರ್ಜನೆಗಾಗಿ ಒಂದನೆಯ ವಾರ್ಡ್‌‌ನವರು ಗುಡ್ಡಕ್ಕೆ ಹೋದರೆ ಎರಡು ಮತ್ತು ಮೂರನೆಯ ವಾರ್ಡ್‌‌ನವರು ಹೊಲಕ್ಕೆ ಹೋಗಬೇಕು. ಹಾಗೆ ಹೋಗುವಾಗ ಒಂದು ಚೆಂಬು ನೀರು ಒಯ್ಯುತ್ತಾರೆ. ಆ ಒಂದು ಚೆಂಬು ನೀರಿನಲ್ಲಿ ತಿಕ ಮತ್ತು ಕೈ ತೊಳೆದುಕೊಳ್ಳಬೇಕು. ಮನೆಗೆ ಬಂದು ಪುನಃ ಸಾಬೂನು ಹಚ್ಚಿ ಕೈ ತೊಳೆಯುವ ಅಭ್ಯಾಸವಿಲ್ಲ. ಇವೆಲ್ಲಾ ಈ ಹಳ್ಳಿಯ ಸ್ಪೆಶಾಲಿಟಿಯಲ್ಲ; ಎಲ್ಲಾ ಹಳ್ಳಿಗಳಲ್ಲೂ ಇದೇ ಕ್ರಮ. ಮಲ ವಿಸರ್ಜನೆಗೆ ಜಾಗ ಕಡಿಮೆಯಾದಂತೆ ಈಗಾಗಲೇ ಮಲವಿರುವ ಜಾಗದಲ್ಲೇ ಕೂತುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಗುಂಪು ಮನೆಗಳಿರುವ ಕಡೆ ಈ ಕ್ರಮದ ಮಲ ವಿಸರ್ಜನೆ ರೋಗ ಹರಡಲು ಪೂರಕವಾಗಿದೆ. ಮನೆಗೊಂದು ಪಾಯಿಖಾನೆ ಮಾಡುವುದು ನೀರು ಮತ್ತು ದುಡ್ಡಿನ ದೃಷ್ಟಿಯಿಂದ ಅಸಾಧ್ಯವೆಂದಾಗಿದೆ. ಆದುದರಿಂದ ಈ ಕಡೆ ಕಾಮನ್ ಪಾಯಿಖಾನೆ ಮಾಮೂಲು. ಹೆಂಗಸರಿಗಂತು ಇದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಆದರೆ ಒಂದೇ ಕಡೆ ಹಲವಾರು ಹೆಂಗಸರು ಪ್ರತೀ ದಿನ ಮಲವಿಸರ್ಜನೆ ಮಾಡಿದರೆ ಯಾವ ಸ್ಥಿತಿ ನಿರ್ಮಾಣವಾಗಬಹುದೆಂದು ವಿವರಿಸುವುದು ಕಷ್ಟ. ಇದು (ಕಾಮನ್ ಪಾಯಿಖಾನೆ) ಕೂಡ ರೋಗ ಹರಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇಷ್ಟಾಗ್ಯೂ ಪಂಚಾಯತ್‌ನವರು ಮಹತ್ವ ಕೊಡುವುದು ಕಾಮನ್ ಪಾಯಿಖಾನೆಗಳಿಗೇ. ಯಾಕೆಂದರೆ ಕಡಿಮೆ ಖರ್ಚಿನಲ್ಲಿ ದೊಡ್ಡ ಸಮಸ್ಯೆ ಪರಿಹಾರವಾಗುವುದು ಈ ವಿಧಾನದಿಂದಲೇ. ಪಂಚಾಯತ್‌ವತಿಯಿಂದ ಪಾಯಿಖಾನೆ ಬಳಸಲು ಪ್ರೋತ್ಸಾಹ ಅಥವಾ ಇರುವ ಆರೋಗ್ಯ ಸಿಬ್ಬಂದಿಗಳ ಮೂಲಕ ಸ್ವಚ್ಛತೆಯ ಅರಿವು ಮೂಡಿಸಲು ಯಾವುದೇ ಕಾರ್ಯಕ್ರಮಗಳಿಲ್ಲ.