ಹೋಟೆಲಿಗೆ ಪ್ರವೇಶವಿಲ್ಲ

ಮೇಲ್ನೋಟಕ್ಕೆ ಕಾಣುವ ಸಾಮಾಜಿಕ ಅಂತರ-ಊರು ಮತ್ತು ಕೇರಿ. ಬೆಳೆಯುತ್ತಿರುವ ಊರು ಮತ್ತು ಕೇರಿಗಳು ಈ ಅಂತರವನ್ನು ಕಡಿಮೆ ಮಾಡುತ್ತಿವೆ. ಆದಾಗ್ಯೂ ಇಂದು ಕೂಡ ಹರಿಜನರು ಸಮಾಜದ ಕೆಳಸ್ತರದಲ್ಲೇ ಗುರುತಿಸಲ್ಪಡುತ್ತಾರೆ. ಒಂದು ಕಾಲದಲ್ಲಿ ಅಗಸಿ ಬಾಗಿಲು ದಾಟಿ ಊರೊಳಗೆ ಸುತ್ತಾಡುವುದು ಅಪರೂಪವಾಗಿತ್ತು. ಊರಿಗೆ ತಾಗಿಕೊಂಡಂತೆ ರಾಜ್ಯ ಹೆದ್ದಾರಿ ಆಯಿತು. ಊರು ಬೆಳೆದು ಅಗಸಿಬಾಗಿಲನ್ನು ದಾಟಿ ಹೆದ್ದಾರಿಯ ಎರಡೂ ಪಕ್ಕದಲ್ಲೂ ಮನೆಗಳಾದವು. ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಹರಿಜನರನ್ನು ಪ್ರಶ್ನಿಸುವುದು ಸಾಧ್ಯವಾಗಲಿಲ್ಲ. ಆದರೆ ಅದೇ ಸಾರ್ವಜನಿಕ ರಸ್ತೆ ಬದಿಯ ಲಿಂಗಾಯತರ ಹೋಟೆಲುಗಳಲ್ಲಿ ಇಂದಿಗೂ ಹರಿಜನರಿಗೆ ಪ್ರವೇಶವಿಲ್ಲ. ಹೋಟೆಲಿನ ಹೊರಭಾಗದಲ್ಲಿ ಗ್ಲಾಸು ಇರಿಸಿದ್ದಾರೆ. ಟೀ ಕುಡಿದು ಗ್ಲಾಸು ತೊಳೆದಿಟ್ಟು ಹೋಗಬೇಕು. ಕಳೆದ ವರ್ಷ ಕೊಟ್ಟೂರಿನಿಂದ ವಲಸೆಬಂದ ಲಿಂಗಾಯತರೊಬ್ಬರು ಅರಳಿಕಟ್ಟೆ ಹತ್ತಿರ ಹೋಟೆಲು ಆರಂಭಿಸಿದರು. ಸ್ಥಳೀಯ ಲಿಂಗಾಯತ ಹೋಟೆಲಿನವರೊಂದಿಗೆ ಸ್ಪರ್ದಿಸುವ ಭರದಲ್ಲಿ ಆತ ಹರಿಜನರಿಗೆ ಹೋಟೆಲು ಪ್ರವೇಶ ನೀಡಿದ. ಇದು ಇತರ ಮೇಲು ಜಾತಿ ವ್ಯಾಪಾರಿಗಳಿಗೆ ಹಾಗೂ ಊರವರಿಗೆ ಹಿಡಿದಲಿಲ್ಲ. ವಲಸೆ ಬಮದ ಲಿಂಗಾಯತ ವ್ಯಾಪಾರಿಯನ್ನು ಕರೆದು, ಇತರ ಹೋಟೆಲುಗಳಲ್ಲಿ ಹರಿಜನರನ್ನು ಹೇಗೆ ನಡೆಸಿಕೊಳ್ಳುತ್ತಾರೋ ಹಾಗೆ ನೀನು ನಡೆಸಿಕೊಳ್ಳಬೇಕೆಂದು ತಾಕೀತು ಮಾಡಲಾಯಿತು. ಆತ ಇದಕ್ಕೆ ಒಪ್ಪಿಕೊಳ್ಳಲೇಬೇಕಾಯಿತು. ಹೀಗಾಗಿ ಹರಿಜನರಿಗೆ ಹಿಂದಿನಂತೆ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರವಿರುವ ಕುರುಬರ ಹೋಟೆಲೆ ಗತಿ.

ಹರಿಜನ ಕೇರಿಯವರು ಇರುವ ಶಾಲೆಯಲ್ಲಿ ಶೇಕಡಾ ೮೦ರಷ್ಟು ಮಕ್ಕಳು ಹರಿಜನರು. ಲಿಂಗಾಯತರು ಮಾತ್ರ ಈ ಶಾಲೆಯಿಮದ ದೂರ ಇರುವುದಿಲ್ಲ; ಇತರ ಜಾತಿಯವರು ಕೂಡ ದೂರ ಇದ್ದಾರೆ. ಈಗಾಗಲೇ ವಿವರಿಸಿದಂತೆ ಊರು ಮತ್ತು ಕೇರಿಯ ಅಂತರವನ್ನು ಕಡಿಮೆಗೊಳಿಸುವಲ್ಲಿ ಆಧುನಿಕ ಸಂಸ್ಥೆಗಳು ಸಹಕಾರಿಯಾಗಬೇಕಿತ್ತು. ಇಡೀ ಊರಿಗೆ ಒಂದೇ ಸವಲತ್ತು ಇದ್ದು, ಅದನ್ನು ಪ್ರತಿಯೊಬ್ಬರು ಉಪಯೋಗಿಸುವ ಅನಿವಾರ್ಯತೆ ಇದ್ದರೆ, ಊರು ಮತ್ತು ಕೇರಿ ಮಧ್ಯೆ ಇರುವ ಅಂತರ ಕಡಿಮೆಯಾಗುತ್ತಿತ್ತೋ ಎನೋ? ಉದಾಯರಣೆಗೆ ಊರ ಕೆರೆ ಸಮೀಪ ಈಶ್ವರನ ಗುಡಿ ಇದೆ. ಆ ಗುಡಿ ಎದುರು ಒಂದು ಬಾವಿ ಇದೆ. ಅದನ್ನು ದಾಸರಬಾವಿ ಎಂದೇ ಕರೆಯುತ್ತಾರೆ. ಒಂದು ಕಾಲದಲ್ಲಿ ಅದರಿಂದ ಕೇವಲ ದಾಸರು ಮಾತ್ರ ನೀರು ಉಪಯೋಗಿಸುತ್ತಿದ್ದರು. ಆದರೆ ಈಗ ಊರಿಗೆ ಅದೊಂದೇ ಸಿಹಿನೀರಿನ ಬಾವಿಯಾಗಿರುವುದರಿಂದ ಎಲ್ಲರೂ ನೀರನ್ನು ಅದರಿಂದಲೇ ತೆಗೆಯುತ್ತಾರೆ. ಅದೇ ರೀತಿ ಹರಿಜನರಿಗೂ ಊರವರಿಗೂ ಒಂದೇ ಸ್ಮಶಾನವಿದೆ. ಹರಿಜನರು ಸ್ಮಶಾನ ಬಳಸುವ ಬಗ್ಗೆ ತಕರಾರು ಇಲ್ಲ. ಆದರೆ ಅವರು ಸ್ಮಶಾನಕ್ಕೆ ಹೆಣ ಒಯ್ಯುವ ದಾರಿ ಕುರಿತು ತಕರಾರಿದೆ. ಊರವರು ಅಂಜನೇಯ ಗುಡಿ ಪಕ್ಕಕ್ಕಿರುವ ದಾರಿಯಿಂದ ಸ್ಮಶಾನಕ್ಕೆ ಹೆಣ ಸಾಗಿಸುತ್ತಾರೆ. ಹರಿಜನರು ಸರಕಾರಿ ಶಾಲೆಯ ಹಿಂಭಾಗದಿಂದ ಹೆಣ ಸಾಗಿಸಬೇಕೆಂದು ಊರವರ ಒತ್ತಾಯ. ಆದರೆ ಹರಿಜನರು ಈ ವಾದವನ್ನು ಒಪ್ಪುವುದಿಲ್ಲ. ಕಳೆದ ಬಾರಿ ವಡ್ಡರ ಕಲ್ಲೇಶಪ್ಪ ಪಂಚಾಯತ್ ಅಧ್ಯಕ್ಷ, ಕರಿಸಿದ್ದ ಹರಿಜನ ಪ್ರತಿನಿಧಿ. ಗ್ರಾಮ ಪಂಚಾಯತ್ ಮೀಟಿಂಗಿಗೆ ಬಂದ ಎಲ್ಲರೂ ಒಟ್ಟಿಗೆ ಕುಳಿತು ಚಾ ಮತ್ತು ತಿಂಡಿ ಸೇವನೆ ನಡೆಸುತ್ತಾರೆ. ಅದೇ ರೀತಿ ಕ್ಲಿನಿಕ್‌ಗಳಲ್ಲಿ, ವ್ಯಾಗನ್ ಲೋಡಿಂಗ್ ಮಾಡುವಲ್ಲಿ, ಗಣಿ ಕೆಲಸ ಮಾಡುವಲ್ಲಿ ಜಾತಿ ಭೇದವಿಲ್ಲದೆ ಸೇರುತ್ತಾರೆ. ಇದರ ಅರ್ಥ ಅವರು ಇದನ್ನು ಮಾನಸಿಕವಾಗಿ ಒಪ್ಪಿಕೊಳ್ಳುತ್ತಾರೆ ಎಂದಲ್ಲ. ಇದಕ್ಕೊಂದು ಒಳ್ಳೆಯ ಉದಾಯರಣೆ ಕೊಡುತ್ತೇವೆ. ಒಂದು ದಿನ ಹೋಟೆಲು ನಡೆಸುತ್ತಿರುವ ಕುರುಬರ ಸಾಂತಪ್ಪನವರು ನನಗೆ ಯಾವುದಾದರೂ ಬ್ಯಾಂಕಿನಿಂದ ಸಾಲಕೊಡಿಸಿ ಸಾರ್ ಎಂದರು. ನಿಮ್ಮ ಹೋಟೆಲು ಚೆನ್ನಾಗಿ ನಡೆಯುತ್ತಿದೆಯಲ್ಲ, ನಿಮಗೆ ಸಾಲ ಯಾಕೆ? ಅಂದೆ, ಹರಿಜನರು ತಿಂದ ಪ್ಲೇಟು ತೊಳೆದದ್ದು ಸಾಕು, ಈ ಹೋಟೆಲು ವ್ಯಾಪಾರನೂ ಸಾಕು. ನಾನು ವ್ಯಾಪಾರ ಮಾಡಬೇಕೆಂದಿದ್ದೇನೆ ಎಂದರು. ಇತರ ಹೋಟೆಲಿಗೆ ಹೋಲಿಸಿದರೆ ಸಾಂತಪ್ಪನವರಿಗೆ ಒಳ್ಳೇ ವ್ಯಾಪಾರವಾಗುತ್ತಿದೆ. ಅವರ ಗಿರಾಕಿಗಳಲ್ಲಿ ಹೆಚ್ಚಿನವರು ಹರಿಜನರು. ಅದಕ್ಕೆ ಕಾರಣವೂ ಇದೆ. ಕೇರಿಗೆ ಹತ್ತಿರವಿರುವ ಹೋಟೆಲೆಂದರೆ ಸಾಂತಪ್ಪನವರದ್ದು. ಜತೆಗೆ ಸಾಲನೂ ಕೊಡುತ್ತಾರೆ. ಇಷ್ಟಾದರೂ ಸಾಂತಪ್ಪನವರಿಗೆ ಸಮಾಧಾನವಿಲ್ಲ. ಅವರ ನೋವಿಗೆ ಕಾರಣ ಹರಿಜನರು ತಿಂದ ಪ್ಲೇಟು ತೊಳೆಯುವುದು.

ಸಾಂತಪ್ಪನವರು ಆದಾಯಕ್ಕೆ ಬೇರೆ ದಾರಿ ಇಲ್ಲದೆ ಹೋಟೆಲು ಆರಂಭಿಸಿದರು. ವ್ಯಾಪಾರ ಮತ್ತು ಅದರಿಮದ ಬರುವ ದುಡ್ಡು ಲೆಕ್ಕ ಮಾಡುವುದರಲ್ಲಿ ಜಾತಿಯವರು ಮತ್ತು ಮೇಲು ಜಾತಿಯವರು ಮಾಡುವ ಲೇವಡಿ ಮಾತುಗಳನ್ನು ಕೇಳುವಷ್ಟು ಪುರಸೊತ್ತು ಇರಲಿಲ್ಲ. ಆದರೆ ಬರುಬರುತ್ತಾ ಲೇವಡಿ ಮಾರುಗಳು ಅವರ ಮೇಲೆ ಪರಿಣಾಮ ಮುಂದುವರಿಸಬೇಕಾಗಿದೆ. ಈಗ ಒಂದು ಕಡೆ ಮಾರುಕಟ್ಟೆ ಜಾತಿಯನ್ನು ಮೀರಿ ಬದುಕಲು ಒತ್ತಾಯ ಹೇರಿದರೆ ಇನ್ನು ಕೆಲವು ಕಡೆ ಆಧುನಿಕ ಸಂಸ್ಥೆಗಳನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ ಕೂಡಾ ಜಾತಿಯ ಬಂಧನಗಳನ್ನು ಸಡಿಲಿಸುತ್ತದೆ. ಇನ್ನು ಕೆಲವು ಕಡೆ ಊರು ಮತ್ತು ಕೇರಿ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕಾದ ಆಧುನಿಕ ಸವಲತ್ತುಗಳು ಅವೆರಡರ ನಡುವಿನ ಅಂತರವನ್ನು ಹೆಚ್ಚುಸುತ್ತಿವೆ. ಊರಿಗೊಂದು ಶಾಲೆ, ಕೇರಿಗೊಂದು ಶಾಲೆ, ಊರಿಗೊಂದು ರೇಶನ್ ಅಂಗಡಿ ಕೇರಿಕೊಂದು ರೇಶನ್ ಅಂಗಡಿ, ಪ್ರತ್ಯೇಕ ನೀರು ಮತ್ತು ಇತರ ಸವಲತ್ತುಗಳ ಪೂರೈಕೆ, ಊರಿಂದ ಗಾವುದ ದೂರದಲ್ಲಿ ಹರಿಜನ ಮನೆಗಳನ್ನು ನಿರ್ಮಿಸುವುದು ಇತ್ಯಾದಿಗಳು ತಲೆಮಾರಿನ ಪ್ರತ್ಯೇಕತೆಗಳನ್ನು ಮುಂದುವರಿಸಲು ಸಹಕಾರಿಯಾಗಿವೆ. ಇದರ ಅರ್ಥ ಮೇಲಿನ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಮಾಡಲೇಬಾರದೆಂಬ ವಾದವಲ್ಲ. ಆದರೆ ಆಧುನಿಕ ವಾತಾವರಣದಲ್ಲಾದರೂ ಶತಮಾನದ ಭೇದ ಭಾವಗಳ ಮುಮದುವರಿಯಲು ಅವಕಾಶವಿಲ್ಲದಿದ್ದರೆ ಹೊಸ ಸಮಾಜ ನಿರ್ಮಾಣದ ಕೆಲಸ ಸುಲಭವಾಗಹುದು. ಇಲ್ಲವಾದರೆ ಆಧುನಿಕತೆಯ ವಿಫಲತೆಯ ಗೋರಿ ಮೇಲೆ ಸಾಂಪ್ರದಾಯಿಕ ಸಮಾಜದ ನಕಾರಾತ್ಮಕ ಆಚರಣೆಗಳು ಪುನರ್ ಜೀವ ಪಡಿಯಬಹುದು.

ಉಳಿದಿರುವ ಭೇದ ಭಾವ

ಸಾಮಾಜಿಕ ಭೇದಭಾವ ಕೇವಲ ಊರು ಮತ್ತು ಕೇರಿ ನಡುವೆ ಇದೆ ಎಂದರೆ ತಪ್ಪಾಗುತ್ತದೆ. ಊರೊಳಗೂ ಜಾತಿ ಜಾತಿಗಳ ನಡುವೆ ಸಾಕಷ್ಟು ಅಂತರವಿದೆ. ಮುಖ್ಯವಾಗಿ ಅಂತರವಿರುವುದು ಲಿಂಗಾಯತರು ಮತ್ತು ಇತರ ಜಾತಿಯವರ ನಡುವೆ. ಬ್ರಾಹ್ಮಣರ ಮನೆಗಳು ಕೆಲವೇ ಇರುವುದರಿಮದ ಅವರು ಮತ್ತು ಇತರ ಜಾತಿಯವರ ನಡುವಿನ ಅಂತರ ಪ್ರಕಾರವಾಗಿ ಗೋಚರಿಸುತ್ತಿಲ್ಲ. ಹಿಂದೆ ಲಿಂಗಾಯತರ ಮತ್ತು ಬ್ರಾಹ್ಮಣರ ಮನೆಗೆ ಇತರ ಜಾತಿಯವರು ಪ್ರವೇಶಿಸುವ ಕ್ರಮವಿರಲಿಲ್ಲ. ಈಗಲೂ ಕೆಳ ಜಾತಿಯವರಿಗೆ ಪ್ರವೇಶವಿರುವುದು-ಒಂದೋ ಹೊರಗಿನ ಕಟ್ಟೆ ತನಕ ಅಥವಾ ಒಳ ಭಾಗದ ಕಟ್ಟೆ ತನಕ. ಅಪರಿಚಿತರಾದರೆ ಕುಳಿತುಕೊಳ್ಳಲು ಚಾಪೆ ಅಥವಾ ಜಮಖಾನ ಹಾಸುತ್ತಾರೆ. ಓದಿದ ಯುವಕರಿದ್ದ ಕೆಲವು ಲಿಂಗಾಯತರ ಮನೆಗಳಲ್ಲಿ ಕೆಳ ಜಾತಿಯ ಅವರ ಸಹಪಾಠಿಗಳನ್ನು ಮನೆಯೊಳಗೂ ಸೇರಿಸಬಹುದು. ಆದರೆ ಅಂಥವರ ಸಂಖ್ಯೆ ತುಂಬಾ ಕಡಿಮೆ. ಕೆಳ ಜಾತಿಯವರ ಮನೆಯಲ್ಲಿ ಲಿಂಗಾಯತರು ಊಟ ಅಥವಾ ಪಾನೀಯ ತೆಗೆದುಕೊಳ್ಳುವ ಕ್ರಮವಿಲ್ಲ. ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತರೆ ಎನ್ನಲಾಗುವುದಿಲ್ಲ. ಉದಾಹರಣೆಗೆ ಕೆಳಜಾತಿಯವರ ಮದುವೆಯಲ್ಲಿ ಲಿಂಗಾಯತರು ಪಾಲುಗೊಳ್ಳುತ್ತಾರೆ. ಎಲ್ಲರ ಜತೆಯಲ್ಲೇ ಊಟನೂ ಮಾಡುತ್ತಾರೆ. ಆದರೆ ಇಂತಹ ಮದುವೆಗಳಲ್ಲಿ ಅಡುಗೆ ಕೆಲಸವನ್ನು ಮನೆಯವರು ಮಾಡುವುದಿಲ್ಲ; ಅಡುಗೆ ಭಟ್ರುಗಳನ್ನು ನೇಮಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಈ ಅಡುಗೆ ಭಟ್ರುಗಳು ಮೇಲು ಜಾತಿಯವರೇ ಆಗಿರುತ್ತಾರೆ. ಊಟ/ಪಾನೀಯಗಳ ಸೇವನೆಯಲ್ಲೇ ಇಷ್ಟು ಸಂಪ್ರದಾಯ ಇರುವಲ್ಲಿ ಅಂತರ್ ಜಾತಿ ವಿವಾಹಗಳನ್ನು ಊಹಿಸಲು ಅಸಾಧ್ಯ. ಮೇಲು ಜಾತಿಯವರ ಮದುವೆ ಬಹುತೇಕ ಸಂದರ್ಭದಲ್ಲಿ ಛತ್ರಗಳಲ್ಲಿ ಅಥವಾ ಹಂಪಿಯ ವರೂಪಾಕ್ಷ ದೇವಾಲಯದಲ್ಲಿ ಜರಗುತ್ತದೆ. ಅಲ್ಲಿ ಎಲ್ಲರೂ ಜತೆಯಲ್ಲೇ ಊಟ ಮಾಡುವುದು. ಮನೆಯಲ್ಲೇ ಮದುವೆ ಅಥವಾ ಇತರ ಕಾರ್ಯಕ್ರಮವಾದರೆ ಕೆಳ ಜಾತಿಯವರಿಗೆ ಚಪ್ಪರದಲ್ಲಿ ಊಟ/ಪಾನೀಯ ವ್ಯವಸ್ಥೆ ಇರುತ್ತದೆ. ಓದಿದ ಮತ್ತು ಆಧುನಿಕ ಸಂಸ್ಥೆಗಳಲ್ಲಿ ಉತ್ತಮ ಹುದ್ದೆಯಲ್ಲಿರುವ ಕೆಳಜಾತಿಯವರನ್ನು ಮನೆಯೊಳಗೂ ಕರೆಯಬಹುದು.

ಸಮಾಜದ ನೀತಿ ನಿಯಮಕ್ಕೆ ಅನುಸಾರ ನಡೆಯುವುದು ಒಂದು ಭಾಗವಾದರೆ ಅವುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿ ನಡೆಯುವವರು ಪ್ರತಿ ಸಮಾಜದಲ್ಲಿ ಸಿಗಬಹುದು. ಇಲ್ಲೂ ಇಂದಿನ ಮೇಲು ಜಾತಿ ಕೆಲವು ಯುವಕರು ತಮ್ಮ ಹಿರಿಯರ ಕಟ್ಟುಪಾಡುಗಳನ್ನು ಯಥಾ ರೀತಿಯಲ್ಲಿ ಅನುಸರಿಸುವುದಿಲ್ಲ. ಸಾರ್ವಜನಿಕವಾಗಿಯೇ ಸಾರಾಯಿ ಕುಡಿಯುವುದು, ಕುಡಿದು ರಸ್ತೆಯಲ್ಲೆ ಜಗಳ ಮಾಡುವುದು, ಇತ್ಯಾದಿಗಳು ಇಂದು ಸಾಮಾನ್ಯವಾಗಿವೆ. ಕೆಲವರಂತೂ ದಿನಗಟ್ಟಲೆ ಕೇರಿಯಲ್ಲೇ ಉಳಿಯುವುದು, ಅಲ್ಲಿಯ ಜನರೊಂದಿಗೆ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡುವುದು ನಡೆಯುತ್ತಿದೆ. ಒಂದು ಕಾಲದಲ್ಲಿ ಊರ ಮೇಲು ಜಾತಿಯವರ ಮೇಲೆ ಕೈ ಮಾಡುವುದನ್ನು ಊಹಿಸಲು ಸಾಧ್ಯವಿರಲಿಲ್ಲ. ಹಾಗೊಂದು ವೇಳೆ ಯಾರಾದರೂ ಕೈ ಮಾಡಿದರೆ ಊರಿನ ಮೇಲು ಜಾತಿಯ ಎಲ್ಲರೂ ಸೇರಿಕೊಂಡು ಕೈ ಮಾಡಿದ ಕೆಳಜಾತಿಯವರನ್ನು ಶಿಕ್ಷಿಸುತ್ತಿದ್ದರು. ಆದರೆ ಇಂದು ಇಂತಹ ಯುವಕರ ಮಧ್ಯೆ ಜಗಳಗಳು ಸಾಮಾನ್ಯವಾಗಿವೆ. ಆ ಸಂದರ್ಭದಲ್ಲಿ ಜಾತಿಯ ಪ್ರಶ್ನೆಗಳು ಬರುವುದಿಲ್ಲ. ನಮ್ಮ ಜಾತಿಯವ ಪೆಟ್ಟು ತಿಂದ ಎಂದು ಮೇಲು ಜಾತಿಯವರೆಲ್ಲಾ ಅವನ ಪರ ಹೋರಾಡಲು ಮುಂದೆ ಬರುತ್ತಿಲ್ಲ. ಅವನ ನಡೆತೆಗೆ ಸರಿಯಾದ ಪಾಠವಾಯಿತು ಎಂದು ಸುಮ್ಮನಿರುತ್ತಾರೆ. ಹೆಚ್ಚೆಂದರೆ ಆಯಾಯ ಪಂಗಡದ ಕೆಲವರು ಅಂಥವರ ಪರ ನಿಲ್ಲಬಹುದು.

ಇಂದು ಗಣಿಗಾರಿಕೆ ಕೊಡಮಾಡಿದ ಉದ್ಯೋಗದ ಅವಕಾಶ ಸಮಾಜದ ಕೆಳಸ್ಥರದಲ್ಲಿ ಬೇರೆಯದೆ ಕೆಲವು ಬೆಳವಣಿಗೆಗಳಿಗೆ ಎಡೆಮಾಡಿಕೊಟ್ಟಿದೆ. ಹಿಂದೆ ವಿವರಿಸಿದಂತೆ ವಲಸೆ ಬಂದ ಕಾರ್ಮಿಕರು ಆರಂಭದಲ್ಲಿ ರೈಲ್ವೆ ನಿಲ್ದಾಣ ಪಕ್ಕ ಜೋಪಡಿ ಮಾಡಿಕೊಳ್ಳುತ್ತಾರೆ. ಬಹುತೇಕ ವ್ಯಾಗನ್/ಗಣಿ ಕೆಲಸಗಾರರು ಹರಿಜನರು, ವಡ್ಡರು ಮತ್ತು ನಾಯಕರೇ ಇರುವುದರಿಂದ ಹೊಸತಾಗಿ ಬಂದವರಿಗೆ ಇವರ ಮೂಲಕವೇ ಊರಿನ ಸಾಮಾಜಿಕ ಬದುಕಿಗೆ ಪ್ರವೇಶ ದೊರೆಯುತ್ತದೆ. ಇಲ್ಲಿಯೇ ಮದುವೆ ಮಾಡಿಕೊಂಡು ಹೊಸ ಬದುಕು ಆರಂಭಿಸುತ್ತಾರೆ. ವಲಸೆ ಕಾರ್ಮಿಕರು ಕ್ರಮೇಣ ಊರಿನ ಸಾಮಾಜಿಕ ಬದುಕಿನ ಒಂದು ಭಾಗವಾಗುತ್ತಾರೆ. ಹೀಗೆ ಸಾಮಾಜಿಕ ಬದುಕು ಹಳ್ಳಿಯ ಬದಲಾವಣೆಯನ್ನು ಕಂಡಿದೆ. ಕೆಲವೊಂದು ವಿಚಾರಗಳಲ್ಲಿ ಸಾಂಪ್ರದಾಯಿಕ ನಡವಳಿಕೆಗಳು ಮುಂದುವರಿಯುತ್ತಿವೆ. ಆದರೆ ಖಾಸಗಿ ಬದುಕಿನಲ್ಲಿ ಈ ಅಂತರಗಳು ಹಿಂದಿನದೇ ರೀತಿಯಲ್ಲಿ ಅಥವಾ ಪರಿವರ್ತಿತರೂಪದಲ್ಲಿ ಆಚರಣೆಯಲ್ಲಿವೆ. ವ್ಯಕ್ತಿ ಮತ್ತು ಆತನ ಸಾಧನೆಗಿಂತ ಆತನ ಸಾಮಾಜಿಕ ಹಿನ್ನೆಲೆ ಆತನ ಸ್ಥಾನಮನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾಜಿಕ ಭೇದ ಭಾವಗಳು ಸಾಂಸ್ಕೃತಿಕ ಆಚರಣೆಗಳಲ್ಲಿ ಇನ್ನೂ ಸ್ಪಷ್ಟವಾಗಿ ಮೂಡಿಬರುತ್ತಿವೆ.

ಊರ ಜಾತ್ರೆಗಳಲ್ಲಿ ಭೇದ ಭಾವ

ಬದುಕು ಅಧ್ಯಾಯದ ಕೊನೆಯಲ್ಲಿ ಹಳ್ಳಿಯಲ್ಲಿ ನಡೆಯುವ ಮೂರು ಸಾಂಸ್ಕೃತಿಕ ಆಚರಣೆಗಳನ್ನು ವಿವರಿಸಿದ್ದೇನೆ-ತಿಮ್ಮಪ್ಪನ ತೇರು, ಅಂಕ್ಲಮ್ಮನ ಜಾತ್ರೆ ಮತ್ತು ಮೊಹರಂ ಹಬ್ಬ. ಈ ಮೂರು ಜಾತ್ರೆಗಳ ವಿಶ್ಲೇಷಣೆ ಹಳ್ಳಿಯ ಸಮಾಜದ ಏಣಿ ಶ್ರೇಣಿಗಳನ್ನು ಇನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಬಹುದು. ಎಲ್ಲಾ ಜಾತ್ರೆಗಳಲ್ಲೂ ಲಿಂಗಾಯತರು ಮತ್ತು ಬ್ರಾಹ್ಮಣರು ಪ್ರಮುಖ ಪಾತ್ರ ವಹಿಸುತ್ತಾರೆ. ತಿಮ್ಮಪ್ಪನ ಗುಡಿಯಲ್ಲಿ ದಿನನಿತ್ಯದ ಪೂಜಾರಿ ಮುರುಬ ಜಾತಿಗೆ ಸೇರಿದವರು. ಆದರೆ ವಾರ್ಷಿಕ ಜಾತ್ರೆಯಲ್ಲಿ ಗರುಡ ಪಟ ತಯಾರಿಸಲು, ಅಭಿಷೇಕ ನಡೆಸಲು ಲಿಂಗಾಯತ ಜಂಗಮರು ಬರತ್ತಾರೆ. ಈ ವಿಚಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಕೆಲವರ ಪ್ರಕಾರ ಜಂಗಮರು ಯಾವುದಕ್ಕೂ ಬರುವುದೇ ಇಲ್ಲ: ಕುರುಬರ ಪೂಜಾರಿಯೇ ಎಲ್ಲಾ ವಿಧಿಗಳನ್ನು ಪೂರೈಸುತ್ತಾರೆ ಎನ್ನುತ್ತಾರೆ. ಅದೇ ರೀತಿ ಅಂಕ್ಲಮ್ಮನ ಜಾತ್ರೆಯಲ್ಲಿ ಬ್ರಾಹ್ಮಣರ ಮನೆಯಲ್ಲಿ ಪಾಶಪಡುಗ ತುಂಬುವುದರೊಂದಿಗೆ ಜಾತ್ರೆ ಆರಂಭವಾಗುತ್ತದೆ. ಪೂಜಿಸಿದ ಪಾಶೆಪಡುಗವನ್ನು ತಲೆಯಮೇಲೆ ಹೊತ್ತು ಅಂಕ್ಲಮ್ಮನ ಗುಡಿಗೆ ತಲುಪಿಸುವ ಜವಾಬ್ದಾರಿ ಮತ್ತು ಭಾಗ್ಯ (ಕುರುಬರ ಜಾತಿಗೆ ಸೇರಿದವರು) ಮುಂದಿನ ವಿಧಿಗಳನ್ನು ನಡೆಸುತ್ತಾರೆ. ಈ ಎರಡು ಆಚರಣೆಗಳಿಗೆ ಹೋಲಿಸಿದರೆ ಮೊಹರಂ ಹಬ್ಬ ಸ್ವಲ್ಪ ಭಿನ್ನವಾಗಿದೆ. ಆದರೆ ಇಲ್ಲಿ ಕೂಡಾ ಮೊಹರಂ ಹಬ್ಬ ಆರಂಭವಾಗುವುದೇ ಲಿಂಗಾಯತರ ಮನೆಯಿಂದ ಕೆಂಪು ಸಕ್ಕರೆ ಗುದ್ದಲಿ ಪೂಜೆ ಮಾಡುವುದರೊಂದಿಗೆ.

ಈ ಸಾಂಸ್ಕೃತಿಕ ಆಚರಣೆಗಳಲ್ಲಿ ವಿವಿಧ ಜಾತಿಗಳಿಗೆ ವಿವಿಧ ಪಾತ್ರಗಳಿವೆ. ಆ ಪಾತ್ರಗಳು ಸಮಾಜದಲ್ಲಿ ಆಯಾಯ ಜಾತಿಗಿರುವ ಸ್ಥಾನಮಾನಕ್ಕೆ ಅನುಗುಣವಾಗಿಯೇ ಇವೆ. ಅಂಕ್ಲಮ್ಮನ ಜಾತ್ರೆಯಲ್ಲಿ ಬ್ರಾಹ್ಮಣರ ಪಾಶೆಪಡುಗ ತುಂಬಿದರೆ ಲಿಂಗಾಯತರು ಅದನ್ನು ಹೊತ್ತು ಗುಡಿಗೆ ತಲುಪಿಸುತ್ತಾರೆ. ಕುರುಬರ ಪೂಜಾರಿ ದೇವಿಯ ಪೂಜೆ ಮಾಡುತ್ತಾರೆ. ಪೂಜಾರಿಯ ಗಂಡು ಮಕ್ಕಳು ಬಾಲೆದಿಂಡೆಯಾಗುತ್ತಾರೆ. ನಾಯಕರ ಹೆಣ್ಣು ಮಕ್ಕಳು ಕಳಶ ಹೊರುವುದು ಮತ್ತು ನಾಯಕರ ಯುವಕರು ಬಾಳೆ ದಿಂಡನ್ನು ದೇವಿಗೆ ಪ್ರದಕ್ಷಿಣೆ ತರುವುದು ಸಾಂಪ್ರದಾಯವಾಗಿದೆ. ವಡ್ಡರಿಗೆ ಗಂಧದ ಕಟ್ಟಿಗೆ ತರುವ ಜವಾಬ್ದಾರಿ ಇದೆ. ಹೀಗೆ ಬೇರೆ ಬೇರೆ ಜಾತಿಯವರಿಗೆ ಬೇರೆ ಬೇರೆ ಜವಾಬ್ದಾರಿ. ಅದನ್ನು ಪೂರೈಸುವುದು ಹಕ್ಕು ಹೌದು. ಹೊಣೆಗಾರಿಕೆಯೂ ಹೌದು. ತಮ್ಮ ಪಾಲಿನ ಕೆಲಸವನ್ನು ಮಾಡದೆ ಪ್ರತಿಭಟನೆ ತೋರಿಸುವ ಸಾಧ್ಯತೆಯ ಇದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಮಾರಿ ಹಬ್ಬದಲ್ಲಿ ಇಂತಹ ಒಂದು ಘಟನೆ ನಡೆಯಿತು. ಅಗಸಿ ದಿಬ್ಬದಿಂದ ಮಾರಿಗೆ ಬಿಟ್ಟ ಕೋಣವನ್ನು ನಾಯಕರು ಹರಿಜನರಿಗೆ ಹಸ್ತಾಂತರಿಸುತ್ತಾರೆ. ಆ ಸಂದರ್ಭದಲ್ಲಿ ಊರವರು ಮತ್ತು ಕೇರಿಯವರು ಪ್ರತ್ಯೇಕ ಕಳಶಗಳನ್ನಿಡುವ ಸಂಪ್ರದಾಯವಿದೆ. ಕಳಶದಲ್ಲಿ ಊರವರು ಐದು ಎಲೆ ಇಟ್ಟರೆ ಹರಿಜನರು ಮೂರು ಎಲೆ ಇಡುವುದು ಸಾಂಪ್ರದಾಯವಿದೆ. ಕಾಳಶದಲ್ಲಿ ಊರವರು ಐದು ಎಲೆ ಇಟ್ಟರೆ ಹರಿಜನರು ಮೂರು ಎಲೆ ಇಡುವುದು ಸಾಂಪ್ರದಾಯವಂತೆ. ಆದರೆ ಆ ಬಾರಿ ಹರಿಜನರು ಮೂರು ಎಲೆ ಇಡುವುದು ಸೂತಕಕ್ಕೆ; ಶುಭ ಕಾರ್ಯಗಳಿಗೆ ಅಲ್ಲ ಎಂದು ವಾದಿಸಿದರು. ಜತೆಗೆ ತಮಗೆ ಐದು ಎಲೆ ಇಡಲು ಬಿಟ್ಟರೆ ಮಾತ್ರ ಮುಂದಿನ ಆಚರಣೆಗಳಲ್ಲಿ ಭಾಗವಹಿಸುವುದು; ಬಿಡದಿದ್ದರೆ ಭಾಗವಹಿಸುವುದಿಲ್ಲ ಎಂದು ಹಠ ಹಿಡಿದರು. ಊರವರು ಅದಕ್ಕೆ ಒಪ್ಪಲಿಲ್ಲ. ಊರವರು ಮತ್ತು ಕೇರಿಯವರು ಐದು ಎಲೆ ಇಟ್ಟರೆ ಊರು ಮತ್ತಿ ಕೇರಿಗೆ ಏನು ವ್ಯೆತ್ಯಾಸ ಉಳಿಯುತ್ತದೆ ಎಂದು ಊರವರ ವಾದ, ಐದು ಎಲೆ ಇಡಲು ಬಿಡದಿದ್ದರೆ ನಾವು ಕೋಣ ಕೊಯ್ಯುವುದಿಲ್ಲ ಎಂದು ಹರಿಜನರು ಕೇರಿಗೆ ಹೋದರು. ಆ ವರ್ಷ ಊರವರೆ ಸೇರಿ ಹೇಗೋ ಕೋಣ ಕೊಯ್ಯುವ ಕಾರ್ಯ ಮುಗಿಸಿದರು. ಆದರೆ ಅಂದಿನಿಂದ ಊರಲ್ಲಿ ಮಾರಿ ಹಬ್ಬ ನಡೆದಿಲ್ಲ. ಹೀಗೆ ಈ ಆಚರಣೆಗಳಲಿ ವಿವಿಧ ಜಾತಿಗಳ ಸ್ಥಾನಮಾನಗಳನ್ನು ಪುನರ್ ಸ್ಥಾಪಿಸುವ ಮತ್ತು ಅವುಗಳನ್ನು ಪ್ರಶ್ನಿಸುವ ಪ್ರಕ್ರಿಯ ನಡೆಯುತ್ತಲೆ ಇರುತ್ತದೆ.

ತಿಮ್ಮಪ್ಪನ ತೇರು (ಉಚ್ಚಾಯ) ಚಾವಡಿಯಿಂದ ಹೊರಟು ಬಜಾರ್ ರಸ್ತೆಯಲ್ಲಿ ಚಲಿಸಿ ಅಂಜನೇಯ ಗುಡಿಯ ಎದುರು ಹೆದ್ದಾರಿ ಸೇರುತ್ತದೆ. ಹೆದ್ದಾರಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ತನಕ ಹೋಗಿ ಅಲ್ಲಿಂದ ಅದೇ ದಾರಿಯಲ್ಲಿ ಹಿಂತಿರುಗಿ ಚಾವಡಿಗೆ ಬರುತ್ತದೆ. ತೇರು ಹೋಗುವ ಮಾರ್ಗದ ಎರಡು ಬದಿಗೂ ಮೇಲು ಮತ್ತು ಮದ್ಯಮ ಜಾತಿಗಳಿಗೆ ಸೇರಿದವರ ಮನೆಗಳಿವೆ. ಇದು ಯೋಜಿತವಲ್ಲದಿರಬಹುದು. ಆದರೆ ಊರವರು ಎರಡು ವಿಚಾರಗಳ ಕುರಿತು ತಲೆ ಕೆಡಿಸಿಕೊಂಡಂತಿಲ್ಲ. ಒಂದು, ತಮ್ಮಪ್ಪನ ಗುಡಿಯ ಮುಖದ್ವಾರದಿಂದಲೇ ತೇರು ಯಾಕೆ ಆರಂಭವಾಗಬಾರದೆಂಬ ವಿಚಾರ. ಮುಖ ದ್ವಾರದ ಎದುರು ಇರುವ ರಸ್ತೆ ಕಿರಿದಾಗಿದೆ, ಜನರು ತಮ್ಮ ಮನೆಗಳನ್ನು ರಸ್ತೆ ತನಕ ವಿಸ್ತರಿಸಿ ರಸ್ತೆಯನ್ನು ಓಣಿಯಾಗಿಸಿದ್ದಾರೆ ಚಾವಡಿಯಿಂದ ಆರಂಭವಾಗಲು ಕಾರಣವಾಗಿರಬಹುದೋ ಏನೋ.ಎರಡನೇ ವಾದ ಹಳ್ಳಿಯ ಧರ್ಮ ನಿರಪೇಕ್ಷತೆಯನ್ನು ಅರಿತವರಿಗೆ ಸರಿ ಬರಲಿಕ್ಕಿಲ್ಲ. ಮೊಹರಂ ಹಬ್ಬ ಮಾತ್ರ ಇದಕ್ಕೊಂದು ಉದಾಹರಣೆಯಲ್ಲ. ಅವರ ದಿನನಿತ್ಯದ ಬದುಕಿನಲ್ಲಿ ಧಾರ್ಮಿಕ ನೆಲೆಯಲ್ಲಿ ಗುರುತಿಸಿಕೊಳ್ಳುವ ಪರಿಪಾಠ ತುಂಬಾ ಕಡಿಮೆ. ಮೂರು, ತೇರು ಸರಕಾರಿ ಪ್ರಾಥಮಿಕ ಶಾಲೆಯಿಂದ ಮುಂದಕ್ಕೆ ಹೋಗುವುದಿಲ್ಲ. ಶಾಲೆಯಿಂದ ಕೇವಲ ಹತ್ತು ಅಥವಾ ಇಪ್ಪತ್ತು ಮೀಟರು ದೂರದಲ್ಲಿ ಹರಿಜನ ಕೇರಿ ಇದೆ. ಥರು ಆ ಕಡೆ ಮುಂದುವರಿದರೆ ಹರಿಜನರೂ ಕೂಡ ಮುಖ್ಯವಾಹಿನಿಗೆ ಸೇರಿದಂತೆ ಆಗುತ್ತದೆ. ಆದರೆ ಆ ಕೆಲಸ ಇನ್ನೂ ಆಗಿಲ್ಲ.

ಹರಿಜನರು ಇನ್ನೂ ಕೂಡ ತಿಮ್ಮಪ್ಪನ ಗುಡಿಯ ಮುಖದ್ವಾರ ದಾಟಿ ಮುಂದಕ್ಕೆ ಹೋಗಿಲ್ಲ. ಈ ಸ್ಥತಿ ಎಲ್ಲಾ ಜಾತ್ರೆಗಳಲ್ಲೂ ಮತ್ತು ಎಲ್ಲಾ ಗುಡಿಗಳಲ್ಲೂ ಇದೆ. ಮೊಹರಂ ಇಲ್ಲಿ ಎಲ್ಲರೂ ಸೇರಿ ಆಚರಿಸುವ ಹಬ್ಬ. ಜತಗೆ ಮೇಲು ಜತಿಯವರು ಸ್ವಲ್ಪ ಕೂರವಿರುವ ಹಬ್ಬ. ಇದು ಕೂಡ ಹರಿಜನರನ್ನು ದೂ ಇಟ್ಟಿದೆ. ಮಾದ್ಲಿ ಮತ್ತು ಬೆಲ್ಲದ ಹಾಲನ್ನು ಭಕ್ತರು ತರುತ್ತಾರೆ. ಅದರಲ್ಲಿ ಸ್ವಲ್ಪ ಭಾಗವನ್ನು ಮಸೀದಿಯಲ್ಲಿ ಮಾದ್ಲಿ ಸಂಗ್ರಹಕ್ಕಾಗಿ ಇಟ್ಟಿರುವ ದೊಡ್ಡ ಪಾತ್ರೆಗೆ ಸುರಿದು ಉಳಿದುದನ್ನು ಭಕ್ತರಿಗೆ ಹಿಂತಿರುಗಿಸವುದು ಇಲ್ಲಿನ ರೂಢಿ. ಆದರೆ ಹರಿಜನರು ತಂದ ಮಾದ್ಲಿ ಮತ್ತು ಬೆಲ್ಲದ ಹಾಲವನ್ನು ಪೂಜಿಸಿ ಸಂಪೂರ್ಣ ಅವರಿಗೆ ಹಿಂತಿರುಗಿಸುತ್ತಾರೆ. ಅದು ಪ್ರಸಾದವಾಗಿ ಇತರರಿಗೆ ಹಂಚಬಾರದು. ಮೊಹರಂ ಆಚರಣೆ ಗ್ರಾಮ ಚಾವಡಿ ಬದಿಗಿರುವ ಕೋಣೆಯಲ್ಲಿ ಮತ್ತು ಅದರ ಎದುರು ಇರುವ ಪುಟ್ಟ ಮೈದಾನದಲ್ಲಿ ನಡಿಯುತ್ತದೆ. ಮೈದಾನಕ್ಕೆ ಸುತ್ತು ಗೋಡೆಯಿದೆ. ಹರಿಜನರು ಹರಕೆ ತಂದು ಈ ಸುತ್ತು ಗೋಡೆಯ ಮೇಲಿರಿಸುತ್ತಾರೆ. ಅಲ್ಲಿಂದ ಪೂಜಾರಿ ಅವುಗಳನ್ನು ಗುಡಿಗೆ ಒಯ್ದು ಪೂಜಿಸಿ ಹರಿಜನರಿಗೆ ಒಪ್ಪಿಸುತ್ತಾರೆ. ಇತರರು ನೇರವಾಗಿ ಮೊಹರಂ ಗುಡಿಗೆ ಒಯ್ಯತ್ತಾರೆ. ಇದು ಯಾಕೆ ಹೀಗೆ ಎಂದು ದೇವರನ್ನು ಹೊರುವ ಹುಸೇನ್ ಪೀರ್‌ನ್ನು ಕೇಳಿದೆ. ೩೫ ವರ್ಷಗಳ ಹಿಂದೆ ಹರಿನಜರು ಅವರ ಮುಖಂಡರ ನೇತೃತ್ವದಲ್ಲಿ ಗುಡಿಯ ಒಳಗೆ ಬರಲು ಪ್ರಯತ್ನಿಸಿದರು. ಊರು ಪ್ರಮುಖರಾಗಲೀ ಮುಸ್ಲಂ ನಾಯಕರಾಗಲೀ ಅದನ್ನು ವಿರೋಧಿಸಲಿಲ್ಲ. ಹರಿಜನ ನಾಯಕನೊಬ್ಬ ಒಳಗೆ ಬಂದು, ಪೂಜೆ ಮಾಡಿಸಿದ ಕೂಡ. ಆ ಘಟನೆ ನಡೆದ ಕೆಲವೇ ದಿನಗಳಲ್ಲಿ ಆ ನಾಯಕನ ಎಂಟು ವರ್ಷದ ಮಗು ಅನಾರೋಗ್ಯ ಬಿತ್ತು. ಮತ್ತೆ ಕೆಲವು ದಿನಗಳಲ್ಲಿ ಮಗು ತೀರಿಕೊಂಡಿತು. ಅಂದಿನಿಂದ ಹರಿಜನರು ಒಳಗೆ ಬರಲು ಪ್ರಯತ್ನಿಸಿಲ್ಲ ಎಂದು ಹೇಳಿ ಹುಸೇನ್ ಪೀರ್ ತನ್ನ ವಿವರಣೆಯನ್ನು ನಿಲ್ಲಿಸಿದರು. ಈ ಘಟನೆ ನಡೆದಿದೆಯೇ ಎಂದು ಈಗಿನ ಹರಿಜನ ನಾಯಕರನ್ನು ವಿಚಾರಿಸಿದರೆ ನಮಗೆ ಅದು ತಿಳಿದೇ ಇಲ್ಲವೆಂದರು. ನೀವು ಯಾಕೆ ತಿಮ್ಮಪ್ಪನ ಗುಡಿಗೆ ಅಥವಾ ಅಂಕ್ಲಮ್ಮನ ಗುಡಿಗೆ ಪ್ರವೇಶಿಸಲು ಪ್ರಯತ್ನಿಸಿಲ್ಲ? ಎಂದೆ. ನಮ್ಮ ಆತ್ಮ ಸಾಕ್ಷಿ ಒಪ್ಪತ್ತಿಲ್ಲ. ನಾವು ಪ್ರವೇಸಿಸಬೇಕೆಂದು ಪಠ ಹಿಡಿದರೆ ಬೇಡ ಅನ್ನುವವರು ಇಲ್ಲಿ ಯಾರು ಇಲ್ಲ ಎಂದು ಅಂಬೇಡ್ಕರ್ ಸಂಘದ ಅಧ್ಯಕ್ಷರ ಅಭಿಪ್ರಾಯ. ಊರವರಿಗೂ ಹರಿಜನರಿಗೂ ಒಂದು ಭಯವಿದೆ. ಹರಿಜನರಿಗೆ ದೇವರ ಭಯವಾದರೆ; ಊರವರಿಗೆ ಹರಿಜನರು ಗುಡಿ ಪ್ರವೇಶಿಸಲು ಪ್ರಯತ್ನಿಸಿದರೆ ತಡಿಯುವುದು ಹೇಗೆಂಬ ಭಯ. ತಡಿಯುವುದು ಕಾನೂನಿಗೆ ವಿರುದ್ಧವೆಂದು ತಿಳಿದಿದೆ. ಹರಿಜನರು ಪೋಲಿಸರಿಗೆ ದೂರಿತ್ತರೆ ಜೈಲಿಗೆ ಹೋಗಬೇಕಾದೀತೆಂಬ ಭಯವೂ ಇದೆ ಊರವರಿಗೆ. ಹೋಟೆಲಿಗೆ ಹರಿಜನರು ಪ್ರವೇಶಿಸಬಾರದೆಂದು ಗಲಾಟೆ ಮಾಡುವಾಗಲೂ ಆ ಭಯ ಇತ್ತು. ಆದರೆ ಕುಡಿದ ಅಮಲಿನಲ್ಲಿ ಆ ಗಲಾಟೆ ನಡೆದು ಹೋಗಿದೆ.

ಅದೇನೆ ಇರಲಿ ಈ ಸಾಂಸ್ಕೃತಿಕ ಆಚರಣೆಗಳಂತು ಹೊರಗಿಡುವ ಮತ್ತು ಶ್ರೇಣೀಕರಣದ ಪ್ರಕ್ರಿಯೆಗೆ ಒತ್ತು ನೀಡುತ್ತಿರುವುದಂತೂ ನಿಜ. ತಿಮ್ಮಪ್ಪನ ತೇರು ಮತ್ತು ಅಂಕ್ಲಮ್ಮನ ಜಾತ್ರೆಯ ದಿನ ಗೊತ್ತು ಮಾಡುವುದು. ವಂತಿಗೆ ಮೊತ್ತ ನಿರ್ಧರಿಸುವುದು, ವಂತಿಗೆ ಸಂಗ್ರಹ ಇತ್ಯಾದಿ ನಿರ್ಧಾರಗಳನ್ನು ಊರ ಪ್ರಮುಖರು ಮಾಡುತ್ತಾರೆ. ಮೇಲು ಜಾತಿಯವರೇ ಗ್ರಾಮ ಪಂಚಾಯತ್ ಚೇರ್‌ಮನ್ ಆಗಿದ್ದ ಕಾಲದಲ್ಲಿ ಊರ ಪ್ರಮುಖರ ಪಟ್ಟಿಯಲ್ಲಿ ಅವರು ಸಹಜವಾಗಿಯೇ ಇದ್ದರು. ಯಾವಾಗ ಕೆಳಜಾತಿಯವರು ಪಂಚಾಯತ್ ಅಧ್ಯಕ್ಷರಾಗಲು ಆರಂಭವಾಯಿತೋ ಅಂದಿನಿಂದ ಊರ ಪ್ರಮುಖರ ಪಟ್ಟಿಯಲ್ಲಿ ಅವರಿರುವುದು ಗ್ಯಾರಂಟಿ ಇಲ್ಲ. ಕಳೆದ ಬಾರಿ ವಡ್ಡರ ತಿಮ್ಮಪ್ಪನವರು ಪಂಚಾಯತ್ ಅಧ್ಯಕ್ಷರಾಗಿದ್ದರು. ಊರ ಪ್ರಮುಖರ ಪಟ್ಟಿಯಲ್ಲಿ ಅವರಿರಲಿಲ್ಲ: ಯಾರೂ ಕೂಡ ಸಾಂಸ್ಕೃತಿಕ ಆಚರಣೆಗಳ ನಿರ್ಣಯಗಳಲ್ಲಿ ಅಧ್ಯಕ್ಷರು ಇರಬೇಕೆಂದು ಬಯಸಿಲ್ಲ.

ಪಿ.ಕೆ ಹಳ್ಳಿಯ ಆರ್ಥಿಕ ಬದುಕಿನಲ್ಲಿ ಗಣನೀಯ ಬದಲಾವಣೆಗಳಾಗಿವೆ. ಹಿಂದೆ ಕೃಷಿ ಹೆಚ್ಚು ಕಡಿಮೆ ಎಲ್ಲರ ಏಕಮಾತ್ರ ಆದಾಯದ ಮೂಲವಾಗಿತ್ತು. ಲಿಂಗಾಯತರು ಮುಖ್ಯ ಭೂ ಹಿಡುವಳಿದಾರರಾಗಿದ್ದರು; ಈಗಲೂ ಮುಖ್ಯ ಹಿಡುವಳಿದಾರರು ಅವರೇ. ಆದರೆ ಕೃಷಿ ಇಲ್ಲಿ ಮಹತ್ವ ಕಳಕೊಂಡಿದೆ. ಗಣಿಗಾರಿಕೆ ಮತ್ತು ಇತರ ಕೃಷಿಯೇತರ ಆದಾಯದ ಮೂಲಗಳು ಬರುತ್ತಿವೆ. ಆದರೆ ಈ ಬದಲಾವಣೆಗಳ ಪ್ರಭಾವ ಸಾಂಸ್ಕೃತಿಕ ಆಚರಣೆಗಳಲ್ಲಿ ಕಂಡು ಬರುತ್ತಿಲ್ಲ. ಇಂದು ಕೂಡ ಹಿಂದಿನದೇ ಸಾಂಸ್ಕೃತಿಕ ಆಚರಣೆಗಳು ಮುಂದುವರಿಯುತ್ತಿವೆ. ಜತೆಗೆ ಸಮಾಜದ ವಿವಿಧ ಜಾತಿಗಳ ಪಾಲುಗೊಳ್ಳುವಿಕೆ ಹೆಚ್ಚು ಕಡಿಮೆ ಹಿಂದಿನ ರೀತಿಯಲ್ಲೇ ಇದೆ. ಲಿಂಗಾಯತರು, ಬ್ಯಾಹ್ಮಣರು, ಕುರುಬರು ಮುಂಚೂಣಿಯಲ್ಲಿದ್ದಾರೆ. ಕೃಷಿ ಪ್ರಧಾನ ಅರ್ಥವ್ಯವಸ್ಥೆಯಲ್ಲಿ ಅವರ ಪ್ರಾಧಾನ್ಯತೆಗೆ ಅರ್ಥವಿತ್ತು. ಕೆಳಜಾತಿ ಜನರು ಮೇಲುಜಾತಿಯವರ ಹೊಲದಲ್ಲಿ ದುಡಿದು ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕಿತ್ತು. ಇಂದು ಸ್ಥಿತಿ ಬದಲಾಗಿದೆ. ಗಣಿ ಮಾಲಿಕರು ಕೆಳ ಜಾತಿ/ವರ್ಗದ ಜನರ ದಣಿಗಳಾಗಿದ್ದಾರೆ. ಆದಾಗ್ಯೂ ಸಾಂಸ್ಕೃತಿಕ ಯಜಮಾನಿಕೆ ಹಿಂದಿನವರದ್ದೇ ಮುಂದುವರಿಯುತ್ತಿದೆ. ಬದಲಾದ ಪರಿಸರದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕುಗಳು ಬದಲಾಗದೆ ಇರುವುದರಿಂದ ಹಿಂದಿನ ಯಜಮಾನಿಕ ಸಾಂಕೇತಿಕವಾಗಿ ಮುಂದುವರಿಯಲು ಸಾಧ್ಯವಾಗಿರಬಹುದು. ಉತ್ಪಾದನಾ ಸಂಬಂಧಗಳು ಬದಲಾದಂತೆ ಸಾಂಸ್ಕೃತಿಕ ವಿಚಾರಗಳು ಬದಲಾಗುತ್ತಿಲ್ಲ. ಬದಲಾಗಬೇಕೆಂಬ ನಿಯಮವೇನು ಇಲ್ಲ. ಬದಲಾಗುತ್ತಿದ್ದರೆ ಹೊಸ ಆಚರಣೆಗಳೂ ಬರುತ್ತಿದ್ದವು. ಹೊಸ ಆಚರಣೆಗಳು ಬರುತ್ತಿದ್ದರೆ ಹೊಸ ನಾಯಕತ್ವಗಳು ಬರುವ ಸಾಧ್ಯತೆ ಇತ್ತೋ ಏನೋ. ಈ ಕಾರಣಕ್ಕಾಗಿಯೋ ಏನೋ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯಾದರೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬದಲಾವಣೆ ಆಗಬಾರದೆಂಬ ಕೂಗು ವರ್ತಮಾನದಲ್ಲಿ ತುಂಬಾ ಬಲವಾಗಿ ಕೇಳಿ ಬರುತ್ತಿರುವುದು. ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಊಹಿಸಲಾರದಷ್ಟು ಬದಲಾವಣೆಗಳಾಗಿವೆ. ಅಂದರೆ ಅದು ಎಲ್ಲರ ಬದುಕಿನಲ್ಲೂ ಆಗಿದೆ ಎಂದಲ್ಲ. ಒಟ್ಟು ಪರಿಸರದಲ್ಲಿ ಆಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸನಾತನ ಆಚರಣೆಗಳು ಮುಂದುವರಿಯಬೇಕೆಂದು ವಾದಿಸುವುದರ ರಹಸ್ಯವೇನು? ಸಾಂಸ್ಕೃತಿಕ ಕ್ಷೇತ್ರದಲ್ಲಿ ಪರಿವರ್ತನೆ ಆಗದಿರುವುದರಿಂದ ಪರಸ್ಪರ ವಿರುದ್ಧ ಆರ್ಥಿಕ ಹಾಗೂ ರಾಜಕೀಯ ಆಸಕ್ತಿಯುಳ್ಳವರು ಒಟ್ಟಾಗಿ ಇರಬಹುದೆಂಬ ಆಶಯವೇ? ಒಂದು ವೇಳೆ ಸನಾತನ ಆಚರಣೆಗಳನ್ನು ಜೀವಂತ ಇಡುವ ಮೂಲಕ ನಾವೆಲ್ಲಾ (ಭೇದ ಭಾವಗಳಿಂದ ತುಂಬಿರುವ ನಾವು) ಒಂದೇ ಎನ್ನುವ ಭಾವನೆಯನ್ನು ಜೀವಂತ ಇಡಲು ಸಾಧ್ಯವಾದರೂ ಈ ಸಾಂಸ್ಕೃತಿಕ ಬೆಸುಗೆಯಿಂದ ಹೆಚ್ಚು ಲಾಭ ಯಾರಿಗೆ? ಸಮಾಜದ ಮೇಲ್ವರ್ಗಕ್ಕೋ ಅಥವಾ ಕೆಳ ವರ್ಗಕ್ಕೋ? ಇದೇ ಹಳ್ಳಿಯ ಕೆಲವು ಉದಾಹರಣೆಗಳೊಂದಿಗೆ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾ.

ನಂಬಿಕೆ ಮತ್ತು ದುಡಿಮೆ

ವ್ಯಾಗನ್ ಲೋಡಿಂಗ್ ಕುರಿತು ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಸ್ಟೇಷನ್ ಮಾಸ್ತರರ ಜತೆ ಮಾತುಕತೆ ನಡೆಸಿದ್ದೆ. “ವ್ಯಾಗನ್ ಲೋಡಿಂಗ್ ಇರುವುದರಿಂದ ಇಲ್ಲಿನ ಕೆಳಜಾತಿ ಜನರು ಉಸಿರಾಡಲು ಸಾಧ್ಯವಾಯಿತು. ಅಲ್ಲವೆ?” ಎಂದು ಮಾಸ್ತರರನ್ನು ಕೇಳಿದೆ. ಆವರಂದ್ರು “ಇದೇನು ಲಾಭದಾಯಕ ವ್ಯವಹಾರವಲ್ಲ.” ಧೂಳಿನಲ್ಲೇ ದುಡಿಯುವ ಕೆಲಸಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಾಸ್ತರರು ಈ ಮಾತು ಹೇಳುತ್ತಿರಬೇಕೆಂದು, “ಆರೋಗ್ಯ ಕೆಡುತ್ತದೆ ನಿಜ, ಆದರೆ ಅವರಿಗೆ ಬೇರೆ ದಾರಿಯೇ ಇಲ್ಲವಲ್ಲ,” ಎಂದೆ ನಾನು. “ಈ ಕೆಲಸಗಾರರ ಬದಲು ಮೆಶಿನ್ ಬಳಸಿ ಲೋಡಿಂಗ್ ನಡೆಸಿದರೆ ಈಗ ಲೋಡಿಂಗ್‌ಗೆ ಬೇಕಾದ ಅವಧಿಯಲ್ಲೇ ಕನಿಷ್ಠ ಮೂರು ಬಾರಿ ಲೋಡಿಂಗ್ ಮಾಡಬಹುದು,” ಎಂದು ಮಾಸ್ತರರು ಉತ್ತರಿಸಿದರು. ಆಗ ನನಗೆ ಅರಿವಾಯಿತು ಮಾಸ್ತರರು ಕೆಲಸಗಾರರ ಆರೋಗ್ಯದ ಬಗ್ಗೆ ಮಾತಾಡುತ್ತಿಲ್ಲ; ಸ್ಟೇಷನ್ ಆರೋಗ್ಯದ ಕುರಿತು ಚಿಂತಿತರಾಗಿದ್ದಾರೆ ಎಂದು.

ಮಾಸ್ತರರು ಕೆಲಸಗಾರರ ಆರೋಗ್ಯದ ಕುರಿತು ಮಾತಾಡುತ್ತಿರಬಹುದೆಂದು ನಂಬಲು ನನಗೆ ಬಲವಾದ ಕಾರಣವಿದೆ. ಹಿಂದಿನ ವರ್ಷ (೧೯೯೯ರಲ್ಲಿ) ಲೋಡಿಂಗ್ ಕೆಲಸಗಾರರಿಗೆ ಕೈತುಂಬ ಕೆಲಸ. ವಾರಕ್ಕೆ ಎರಡು ಬಾರಿ ಬರುವ ವ್ಯಾಗನ್ ಆ ವರ್ಷದ ಕೆಲವು ವಾರಗಳಲ್ಲಿ ನಾಲ್ಕು ಬಾರಿ ಬಂದದ್ದುಂಟು. ಆ ವರ್ಷದ ಅಂಕ್ಲಮ್ಮನ ಜಾತ್ರೆಯಲ್ಲಿ ಗುಡಿಯ ಪೂಜಾರಿ ಊರಿನ ಸುಖ ಸಮೃದ್ದಿ ಹೆಚ್ಚುತ್ತದೆ ಎಂದು ಹೇಳಿಕೆ ನೀಡಿದ್ದರು ಕೂಡ. ಹೀಗೆ ಇದು ದೇವಿಯ ಕೃಪೆಯಿಂದಲೇ ನಡೆದಿದೇ ಎಂದು ಕೆಲಸಗಾರರು ಮಾತಾಡಿಕೊಳ್ಳುತ್ತಿದ್ದರು. ದೇವಿಯ ಕೃಪೆಯಿಂದಲೇ ಆದಾಯ ಹೆಚ್ಚಿರುವಾಗ ಒಂದು ದಿನದ ಆದಾಯವನ್ನು ಯಾಕೆ ಅಂಕ್ಲಮ್ಮನ ಗುಡಿಯ ಜೀರ್ಣೋದ್ಧಾರಕ್ಕೆ ಕೊಡಬಾರದೆಂದು ಮಾಸ್ತರರು ಕೆಲಸಗಾರರ ಮುಂದೆ ಪ್ರಸ್ತಾಪಿಸಿದರು. ಕೆಲಸಗಾರರು ಸಂತೋಷದಿಂದಲೇ ಒಪ್ಪಿದರು. ಎಲ್ಲಾ ಕೆಲಸಗಾರರ ಒಂದು ದಿನದ ಕೂಲಿ ಸುಮಾರು ನಲ್ವತ್ತೇಳರಿಂದ ಐವತ್ತು ಸಾವಿರದಷ್ಟು ಮೊತ್ತವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಮಾಸ್ತರರು ವಹಿಸಿಕೊಂಡರು. ಆ ಹಣದಿಂದ ಅಂಕ್ಲಮ್ಮನ ಗುಡಿಯ ಸುತ್ತಗೋಡೆ ಕಟ್ಟಿಸುವುದು ಮತ್ತು ಗುಡಿಯ ಪಕ್ಕ ಜಾತ್ರೆಯಂದು ಅಡುಗೆ ಮಾಡಲು ಮತ್ತು ಇತರ ಸಾಮಗ್ರಿಗಳನ್ನು ಇಡಲು ಒಂದು ಕೋಣೆ ಕಟ್ಟಿಸುವದೆಂದು ತೀರ್ಮಾನಿಸಲಾಯಿತು. ಕೆಲಸಗಾರರು ಒಂದು ದಿನದ ಕೂಲಿಯನ್ನು ದೇವಿಗೆ ಬಿಡುತ್ತಾರೆ ಎನ್ನುವ ಸುದ್ದಿ ಊರಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆ ದುಡ್ಡಿನಿಂದ ಗುಡಿಯ ಕೆಲಸ ಮಾಡಿಸುವ ಜವಾಬ್ದಾರಿ ಹೊರಲು ಊರ ಪ್ರಮುಖರಲ್ಲಿ ಕೆಲವರು ತಯಾರಾದರು. ಮಾಜಿ ಮಂಡಲ ಪ್ರಧಾನ ಮಲ್ಲಪ್ಪ ಮತ್ತು ಮುಂದಿನ ತಾಲ್ಲೂಕು ಪಂಚಾಯತ್ ಅಭ್ಯರ್ಥಿ ಶಿವಶಂಕರಪ್ಪನವರು ದೇವಿಯ ಕೆಲಸ ಮಾಡಿಸಲು ಧಾರಾಳವಾಗಿ ಮುಂದೆ ಬಂದರು. ಕೆಲಸಗಾರರಿಂದ ಸಂಗ್ರಹವಾದ ಮೊತ್ತವನ್ನು ಮಾಸ್ತರರು ಊರ ಪ್ರಮುಖರಿಗೆ ಒಪ್ಪಿಸಿದರು. ಇಲ್ಲಿ ಪುನಃ ಪಂಚಾಯತ್ ಅಧ್ಯಕ್ಷರಾಗಲೀ ಇತರ ಸದಸ್ಯರಾಗಲೀ ಈ ಕೆಲಸದಲ್ಲಿ ಸೇರಿಕೊಂಡಿಲ್ಲ. ಒಂದು ವಿಧದಲ್ಲಿ ಪಂಚಾಯತ್ ಆಧ್ಯಕ್ಷರು ಮತ್ತು ಇತರ ಸದಸ್ಯರು ಆ ಕೆಲಸವನ್ನು ಮಾಡಿಸಬೇಕಿತ್ತು. ಯಾಕೆಂದರೆ ಅವರೆಲ್ಲಾ ವ್ಯಾಗನ್ ಲೋಡಿಂಗ್ ಕೆಲಸದಲ್ಲಿ ನೇರ ಮತ್ತು ಪರೋಕ್ಷವಾಗಿ ಪಾಲುಗೊಳ್ಳುವವರು. ಅವರು ಕೂಡ ತಮ್ಮ ದುಡಿತದ ಸ್ವಲ್ಪ ಭಾಗವನ್ನು ದೇವಿಗೆ ನೀಡಿದ್ದಾರೆ. ಆದರೂ ಕೆಲಸದ ಉಸ್ತುವಾರಿ ನೋಡಿಕೊಳ್ಳುವ ಭಾಗ್ಯ ಅವರಿಗೆ ದೊರೆಯಲಿಲ್ಲ.

ಮಾಸ್ತರರು ಕೂಡ ಅಂಕ್ಲಮ್ಮನ ಭಕ್ತರೇ. ಅವರೂ ತಮ್ಮ ಪಾಲಿನ ದೇಣಿಗೆಯನ್ನು ಕೊಟ್ಟಿದ್ದಾರೆ. ಜತೆಗೆ ಅಂಕ್ಲಮ್ಮನ ಗುಡಿತನಕ ಇರುವ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆ ಮಾಡಿಸಬೇಕೆಂಬ ಆಶೆಯೂ ಇತ್ತು ಅವರಿಗೆ. ಅದಕ್ಕಾಗಿ ಸಂಬಂಧ ಪಟ್ಟವರಲ್ಲಿ ಮಾತಾಡಿ ಎಂದು ನನ್ನನ್ನೂ ಒತ್ತಾಯಿಸಿದ್ದಾರೆ. ಹೀಗೆ ಕೆಲಸಗಾರರು ಮತ್ತು ಸ್ಟೇಷನ್ ಮಾಸ್ತರರು ಒಂದೇ ದೇವಿಯ ಭಕ್ತರು. ಇದೇ ಕೆಲಸಗಾರರು ಮಾಸ್ತರರು ನಂಬುವ (ತಾವು ನಂಬುವ) ದೇವಿಯ ಗುಡಿಯ ಜೀರ್ಣೋದ್ಧಾರಕ್ಕೆ ತಮ್ಮ ಬೆವರು ಸುರಿಸಿ ದುಡಿದ ಹಣವನ್ನು ನೀಡಿದ್ದಾರೆ. ಹೀಗಾಗಿ ಇವರಿಬ್ಬರ ಆಸಕ್ತಿ ಒಂದೇ ಅಲ್ಲದಿದ್ದರೂ ಕೆಲಸಗಾರರ ಬಗ್ಗೆ ಕನಿಷ್ಠ ಅನುಕಂಪವಾದರೂ ಇರಬಹುದೆಂದು ನನ್ನ ಊಹೆ. ಆದರೆ ಅದು ತಪ್ಪಾಯಿತು.

ನನ್ನ ಈ ಸಮಸ್ಯೆಯನ್ನು ಮಾಸ್ತರರ ಜತೆ ಮಾತಾಡಿ ಪರಿಹರಿಸುವಾ ಎಂದು ಇನ್ನೊಮ್ಮೆ ಸ್ಟೇಷನ್‌ಗೆ ಹೋದೆ. “ನೀವು ಮತ್ತು ಕೆಲಸಗಾರರು ಒಂದೇ ದೇವಿಯನ್ನು ನಂಬುತ್ತೀರಿ, ಗುಡಿಯ ಜೀರ್ಣೋದ್ಧಾರಕ್ಕೆ ವಂತಿಗೆ ನೀಡಿದ್ದೀರಿ. ಆದರೆ ನಿಮ್ಮ ಇಬ್ಬರ ಆರ್ಥಿಕ ಆಸಕ್ತಿಗಳೇ ಬೇರೆ. ಕೆಲಸಗಾರರು ವಾರದಲ್ಲಿ ಹೆಚ್ಚು ಹಚ್ಚು ಬಾರಿ ವ್ಯಾಗನ್ ಬರಲಿ ಎಂದು ದೇವಿಗೆ ದೇಣಿಗೆ ನೀಡಿದ್ದಾರೆ. ನೀವು ಮೆಶಿನ್ ಬಳಸಿ ಲೋಡಿಂಗ್ ಮಾಡುವುದರ ಪರ ಇದ್ದೀರಿ, ಇದು ವಿರೋಧಬಾಸವಲ್ಲವೆ?” ಎಂದು ಕೇಳಿದೆ. “ನೋಡಿ ಸಾರ್ ನಂಬಿಕೆ ಬೇರೆ ಕೆಲಸ ಬೇರೆ,” ಎಂದು ಹೇಳಿ ಪುನಃ ಮೆಶಿನ್ ಬಳಸುವದರಿಂದ ಆಗುವ ಲಾಭವನ್ನು ವಿವರಿಸಲು ಆರಂಭಿಸಿದರು. ಮಾಸ್ತರರ ಮಾತುಗಳು ಒಂದು ವಿಧದಲ್ಲಿ ನನ್ನ ಸಮಸ್ಯೆ ಪರಿಹರಿಸಿದಂತೆ ಕಂಡರೂ ಮತ್ತೊಂದು ದೃಷ್ಟಿಯಿಂದ ನೋಡುವಾಗ ಹೊಸ ಸಮಸ್ಯೆಗೆ ಕಾರಣವಾದಂತೆ ತೋರಿದವು. ನಂಬಿಕೆ ಮತ್ತು ಇತರ ಕ್ಷೇತ್ರಗಳು ಬೇರೆ ಬೇರೆ ಎನ್ನುವುದು ಸರಿಯೇ. ಆದರೆ ಯಾರಿಗೆ ಇದು ಬೇರೆ ಬೇರೆಯಾಗಿದೆ ಎನ್ನುವ ವಿಶ್ಲೇಷಣೆಗೆ ಇಳಿದರೆ ಹೊಸ ಸಮಸ್ಯೆ ಶರುವಾದಂತೆ. ಮಾಸ್ತರರು ಅಂದುಕೊಂಡಂತೆ ಕೆಲವರ್ಗದ ಜನರಿಗೆ ನಂಬಿಕೆಯ ಲೋಕ ಅವರ ಇತರ, ಅದರಲ್ಲೂ ದುಡಿತದ ಲೋಕಕ್ಕಿಂತ, ಕ್ಷೇತ್ರಗಳಿಂದ ಬೇರೆಯಲ್ಲ. ಬೆಸ್ತರು ಸಮುದ್ರ ಪೂಜೆ ಮಾಡುತ್ತಾರೆ. ಸಮುದ್ರವೇ ನಮ್ಮ ಅನ್ನ ಕೊಡುವ ದೇವರೆಂದು ನಂಬುತ್ತಾರೆ. ಹಾಗೆಂದು ಸಮುದ್ರದಿಂದ ದೂರ ಉಳಿಯುವುದಿಲ್ಲ. ಅದೇ ಸಮುದ್ರದಲ್ಲಿ ಮೀನು ಹಿಡಿಯುತ್ತಾರೆ. ರೈತರು ಎತ್ತುಗಳನ್ನು ಪೂಜಿಸುತ್ತಾರೆ. ನಮಗೆ ಅನ್ನ ಕೊಡುವ ದೇವರೆಂದು ತಮ್ಮ ಮನೆಯೊಳಗೆ ಅವುಗಳಿಗೆ ಆಶ್ರಯ ಕೊಡುತ್ತಾರೆ. ಹಾಗೆಂದು ಮರು ದಿವಸ ಅದನ್ನು ನೊಗಕ್ಕೆ ಕಟ್ಟಿ ಉಳದೆ ಇರುವುದಿಲ್ಲ. ಹೀಗೆ ಕೆಳವರ್ಗದ ಜನರ ನಂಬಿಕೆಯ ಲೋಕದಲ್ಲಿ ದೇವರೆಂದು ಪೂಜಿಸುವ ವಸ್ತು, ಪ್ರಾಣಿ, ಸ್ಥಳ, ಮಣ್ಣು, ಮರ ಇತ್ಯಾದಿಗಳನ್ನು ಗಾವುದ ದೂರ ಇರಿಸಿ ಪಾವಿತ್ರ್ಯ ಕಾಪಾಡುವ ಕ್ರಮವಿಲ್ಲ. ಅವುಗಳು ಕೆಳ ವರ್ಗದ ಜನರ ಜೀವನದ ಅವಿಭಾಜ್ಯಂಗವೇ ಆಗಿವೆ. ಊರ ಜಾತ್ರೆಗಳಲ್ಲಿ ಭಾಗವಹಿಸುವ ಅವರ ಕ್ರಮದಿಂದಲೂ ಇದನ್ನು ಅರ್ಥ ಮಾಡಿಕೊಳ್ಳಬಹುದು. ಜಾತ್ರೆಯಲ್ಲಿ ದೇವರ ಪೂಜೆ, ಹರಕೆ, ಇತ್ಯಾದಿಗಳಿಗೆ ಕೆಲವು ಸಮಯ ಕಳೆದರೆ ಹೆಚ್ಚು ಸಮಯ ಮನೆ ಸಾಮಾನುಗಳ ಖರೀದಿ, ಕೃಷಿ ಪರಕರಗಳ ಖರೀದಿ, ಸಂಬಂಧಿಕರೊಂದಿಗೆ ಸುಖ ದುಃಖ ವಿನಿಮಯ ಇತ್ಯಾದಿಗಳಲ್ಲಿ ಕಳೆಯುತ್ತಾರೆ. ಆದುದರಿಂದ ನಂಬಿಕೆ ಬೇರೆ ಕೆಲಸ ಬೇರೆ ಎನ್ನುಲು ಸಾಧ್ಯವಿಲ್ಲ.

ಮೇಲೆ ವಿವರಿಸಿದ ಸಾಂಸ್ಕೃತಿಕ ಆಚರಣೆಗಳೆಲ್ಲಾ ಯಾವುದೋ ಒಂದು ಉತ್ಪಾದನೆಯೊಂದಿಗೆ ಬೆರೆತಿದೆ. ಉತ್ಪಾದನಾ ಕ್ರಮ ಬದಲಾದರೆ ಅದರೊಂದಿಗೆ ಬೆಸೆದಿರುವ ಸಾಂಸ್ಕೃತಿಕ ಆಚರಣೆಗಳು ಉಳಿಯುತ್ತವೆ ಎನ್ನಲಾಗುವುದಿಲ್ಲ. ಆಹಾರ ಬೆಳೆ ಬೆಳೆಯುವ ಎಲ್ಲಾ ಕಡೆ ಅದರೊಂದಿಗೆ ಬೆಸೆದಿರುವ ಕೆಲವು ಆಚರಣೆಗಳಿರುತ್ತವೆ. ಅದೇ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಶುರುವಾದರೂ ಹಿಂದಿನ ಆಚರಣೆಗಳು ಕಾಲಕ್ರಮೇಣ ನಿಂತೆ ಹೋಗುವ ಸಾಧ್ಯತೆಗಳಿವೆ. ಕೆಳ ವರ್ಗದವರ ದೃಷ್ಟಿಯಿಂದ ಇಲ್ಲೂ ಇಂದು ಕೃಷಿ ಮುಖ್ಯ ಕಸುಬಲ್ಲ; ಹಣಿ ಮತ್ತು ವ್ಯಾಗನ್ ಲೋಡಿಂಗ್ ಅವರ ಆದಾಯ ಮುಖ್ಯ ಮೂಲಗಳು. ಇದೇ ಬದಲಾವಣೆ ಮೇಲು ಜಾತಿಯವರಲ್ಲಿ ಕಂಡು ಬರುತ್ತಿಲ್ಲ. ಅವರಲ್ಲಿ ಬಹುತೇಕ ಮಂದಿ ಈಗಲೂ ಕೃಷಿಕರೆ. ಆದುದರಿಂದಲೆ ಅಂಕ್ಲಮ್ಮ ಈಗಲೂ ಊರ ದೇವಿ. ಅವಳಿಗೆ ವರ್ಷಕ್ಕೊಮ್ಮೆ ಊರ ಜಾತ್ರೆ ನಡೆಯಲೇಬೇಕು. ಅದರಲ್ಲಿ ಎಲ್ಲರೂ ಪಾಲುಗೊಳ್ಳಲೇ ಬೇಕು. ಈ ದೃಷ್ಟಿಯಿಂದ ಮಾಸ್ತರರ ನಂಬಿಕೆ ಬೇರೆ ಕೆಲಸ ಬೇರೆ ಎನ್ನುವ ಮಾತುಗಳಿಗೆ ಅರ್ಥವಿದೆ.

ಎಲ್ಲಾ ಸಂದರ್ಭಗಳಲ್ಲೂ ಸಾಂಸ್ಕೃತಿಕ ಆಚರಣೆಗಳಿಗೂ ಉತ್ಪಾದನೆಗೂ ನೇರ ಸಂಬಂಧ ಇದೆ ಎನ್ನುವ ತರ್ಕ ಇದಲ್ಲ. ಉತ್ಪಾದನೆಯೊಂದಿಗೆ ಸಂಬಂಧವಿಲ್ಲದ ಎಷ್ಟೋ ಆಚರಣೆಗಳು ನಮ್ಮ ಬದುಕಿನ ಭಾಗವಾಗಿವೆ. ಅದರ ಜತೆಗೆ ಪಾರಂಪರಿಕ ಯಜಮಾನಿಕಾ ವರ್ಗ ತನ್ನ ಯಜಮಾನಿಕೆಯ ಮುಂದುವರಿಯುವಿಕೆಗಾಗಿ ಯಾವುದೋ ಕಾಲದ ಆಚರಣೆಗಳು ಕೂಡ ಜೀವಂತ ಇಡುವ ಸಾಧ್ಯತೆಗಳಿವೆ. ಇದೇ ಹಳ್ಳಿಯ ತಿಮ್ಮಪ್ಪನ ತೇರು ಇದಕ್ಕೊಂದು ಒಳ್ಳೆಯ ಉದಾಹರಣೆ. ತಿಮ್ಮಪ್ಪ ಇಲ್ಲಿನ ಕೃಷಿಕರ ಮನೆ ದೇವರಲ್ಲ. ಜತೆಗೆ ಕೃಷಿಗೂ ತಿಮ್ಮಪ್ಪನ ಜಾತ್ರೆಗೂ ಏನೊ ಸಂಬಂಧವಿಲ್ಲ. ಆದರು ದಿನಾ ಪೂಜೆ ಇದೆ, ವರ್ಷ ವರ್ಷ ಜಾತ್ರೆ ನಡಯುತ್ತದೆ. ಹಿಂದಿನಿಂದಲೇ ಬಂದಿರುವ ಆಚರಣೆ ಎಂದು ಮುಂದುವರಿಸುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ. ಹನುಮಂತಪ್ಪನವರು ಪುನಃ ತೇರು ಆರಂಭಿಸಿದ್ದು ಮತ್ತು ಅದರಿಂದ ಆದ ಗಲಾಟೆ ಇತ್ಯಾದಿಗಳನ್ನು ಮುಂದೆ ವಿವರಿಸಿದ್ದೇನೆ. ಹೀಗೆ ತಿಮ್ಮಪ್ಪನಿಗೂ ಊರಿನ ಆರ್ಥಿಕ ಬದುಕಿಗೂ ಸಂಬಂಧವಿಲ್ಲದಿದ್ದರೂ ತಿಮ್ಮಪ್ಪ ತೇರು ಮುಂದುವರಿದಿದೆ. ಆದರೆ ಇಲ್ಲೊಂದು ಅಂಶವನ್ನು ಗಮನಿಸಬೇಕು. ಅದೇನೆಂದರೆ ತಿಮ್ಮಪ್ಪನ ತೇರನ್ನು ಊರಿನ ಯಜಮಾನಿಕೆಯ ವರ್ಗ ಬಯಸಿ ಮುಂದುವರಿಸುತ್ತಿದೆ. ಆದುದರಿಂದ ಅದು ಊರ ಜಾತ್ರೆಯಾಗಿದೆ. ತಿಮ್ಮಪ್ಪನ ಗುಡಿಯ ಹಾಗೆ ಹಲವಾರು ಗುಡಿಗಳು ಮತ್ತು ದೇವರು ಹರಿಜನರ, ವಡ್ಡರ ಮತ್ತು ನಾಯಕರ ಓಣಿಗಳಲ್ಲಿ ಇವೆ. ಅವು ಯಾವು ಕೂಡ ಊರ ಜಾತ್ರೆಯಾಗಿಲ್ಲ. ಯಾಕೆಂದರೆ ಆ ದೇವರುಗಳನ್ನು ನಂಬುವವರು ನಿಜವಾದ ಆರ್ಥದಲ್ಲಿ ಇನ್ನು ಊರ ಯಜಮಾನಿಕೆ ಹಿಡಿದಿಲ್ಲ.

ಇದರಿಂದಾಗಿ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಕಾನೂನು ತಂದ ಬದಲಾವಣೆಗಳು ಇತರ ಕ್ಷೇತ್ರಗಳಲ್ಲೂ ಬದಲಾವಣೆ ತರುತ್ತವೆ ಎಂಬ ನಂಬಿಕೆ ವಾಸ್ತವಕ್ಕೆ ದೂರವಾದುದು. ಕೇರಿಯಲ್ಲಿ ಅಂಬೇಡ್ಕರ್ ಸಂಘವಿದೆ. ದಲಿತರ ಸ್ವಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಸಂಘ ಮಹತ್ವ ನೀಡಿದಂತೆ ಕಾಣುವುದಿಲ್ಲ. ಅಭಿವೃದ್ದಿ ಲಾಭಗಳನ್ನು ತನ್ನ ಜನರಿಗೆ ತಲುಪಿಸುವುದು ಕೂಡ ಮುಖ್ಯ ಕೆಲಸವೇ. ಅದರ ಜತೆಗೆ ಜನರ ಸ್ವಾಭಿಮಾನವನ್ನು ಹೆಚ್ಚುಸುವ ಕಾರ್ಯಕ್ರಮಗಳು ಅಗತ್ಯ. ಭವಿಷ್ಯದ ಜನಾಂಗ ತಮ್ಮ ಹಿರಿಯರು ಅನುಭವಿಸಿದ ಕೀಳರಿಮೆಯನ್ನು ಅನುಭವಿಸದೆ ಇರಬೇಕಾದರೆ ಸ್ವಾಭಿಮಾನವನ್ನು ವೃದ್ದಿಸುವ ಕಾರ್ಯಕ್ರಮಗಳು ಅಗತ್ಯ. ಹರಿಜನ ಕೇರಿಯೆದುರು ಎರಡು ಗುಡಿಗಳಿವೆ. ಅವುಗಳಲ್ಲಿ ವರ್ಷಕ್ಕೊಮ್ಮೆ ಭಜನೆ ನಡಿಯುತ್ತದೆ. ಕೇರಿಯವರೇ ಒಬ್ಬರು ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಭಜನೆಗೆ ಊರ ಕೆಲವರು ಬರುವುದುಂಟು. ಆದರೆ ಅದು ಸಂಪ್ರದಾಯವಲ್ಲ. ಭಜನೆ ನಂತರ ಊಟವಿದೆ. ಅದರಲ್ಲಿ ಕೇರಿಯವರು ಮಾತ್ರ ಭಾಗವಹಿಸುತ್ತಾರೆ; ಊರವರು ಇರುವುದಿಲ್ಲ. ಇವನ್ನೆಲ್ಲಾ ನೋಡಿ, ನೀವು ಅಂಕ್ಲಮ್ಮನ ಗುಡಿಗೆ ಅಥವಾ ತಿಮ್ಮಪ್ಪನ ತೇರಿಗೆ ಹೋದರೆ ಅಲ್ಲಿ ನಿಮಗೆ ಎರಡನೇ ದರ್ಜೆ ಸ್ಥಾನಮಾನ ನೀಡುತ್ತಾರೆ. ಅದರ ಬದಲು ನಿಮ್ಮೆದೇ ಗುಡಿಗಳಲ್ಲಿ ಯಾಕೆ ಜಾತ್ರೆಗೆಳನ್ನು ಮಾಡಬಾರದು” ಎಂದು ಹರಿಜನ ನಾಯಕರಲ್ಲಿ ವಿಚಾರಿಸಿದೆ. “ಇದೆಲ್ಲಾ ನಮ್ಮವರಿಗೆ ಎಲ್ಲಿ ಅರ್ಥವಾಗುತ್ತದೆ ಸ್ವಾಮಿ,” ಎಂದು ಒಬ್ಬ ನಾಯಕ ನುಡಿದರೆ ಮತ್ತೊಬ್ಬರು, “ಇವರಿಗೆಲ್ಲಾ ಚೆನ್ನಾಗಿ ತಿನ್ನಲು, ಕುಡಿಯಲು ಕೊಟ್ಟರೆ ಸಾಕು, ಬೇರೇನೂ ಬೇಡ,” ಎಂದರು. “ಕೇರಿಯವರೊಂದಿಗೆ ಚರ್ಚಿಸದೆ ಈ ಕುರಿತು ತೀರ್ಮಾನಕ್ಕೆ ಬರುವುದು ಸರಿಯೇ?” ಎಂದೆ. “ನಾವು ಇಲ್ಲಿಯೇ ಹುಟ್ಟಿ ಬೆಳೆದವರು ನಮ್ಮ ಜನರ ಕತೆ ನಮಗೆ ಗೊತ್ತಿಲ್ಲವೆ? ಅವರಿಗೆ ಅಂತಹ ದೊಡ್ಡ ಆಲೋಚನೆಗಳೇನೊ ಇಲ್ಲ. ಮೂರು ಹೊತ್ತು ಊಟಕ್ಕೆ ತೊಂದರೆ ಇಲ್ಲದಿದ್ದರೆ ಅದುವೇ ಅವರಿಗೆ ಸ್ವರ್ಗ” ಎಂದು ನಾಯಕರ ಪಕ್ಕದಲ್ಲೇ ಇದ್ದ ಮತ್ತೊಬ್ಬ ಮಧ್ಯ ಪ್ರಾಯಸ್ಥರು ಅಂದರು. ಕೆಲವು ಹರಿಜನ ಹಿರಿಯರಲ್ಲೂ ಈ ವಿಚಾರ ಪ್ರಸ್ತಾಪಿಸಿದೆ. ಅರುವತ್ತು ದಾಟಿದ ಒಬ್ಬಾಕೆ. “ಜಾತ್ರೆ ಮಾಡುತ್ತಾರಂತೆ ಜಾತ್ರೆ. ತಾಯವ್ವನ ಗುಡಿ ಯಾವಾಗ ಬೀಳುತ್ತದೋ ಎಂದು ಹೇಳಲು ಸಾಧ್ಯವಿಲ್ಲ. ಮೊದಲು ಆ ಗುಡಿಯನ್ನು ರಿಪೇರಿ ಮಾಡಿಸಿ” ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದಳು.

ಊರಿನ ಗುಡಿಗಳಲ್ಲಿ, ಜಾತ್ರೆಗಳಲ್ಲಿ ತಮಗೆ ಸರಿಯಾದ ಸ್ಥಾನಮಾನ ಇಲ್ಲವೆಂಬ ಅರಿವು ಹರಿಜನರಿಗೆ ಇದೆ. ಆದರೆ ಇದೊಂದು ದೊಡ್ಡ ಸಮಸ್ಯೆಯೆಂದು ಅವರು ಪರಿಗಣಿಸಿಲ್ಲ. ಅದಕ್ಕೆ ಕಾರಣವೂ ಇದೆ. ಗುಡಿ ಅಥವಾ ಜಾತ್ರೆಯಲ್ಲಿನ ಸ್ಥಾನಮಾನಕ್ಕಿಂತ ಅವರ ಹೊಟ್ಟೆಬಟ್ಟೆಯ ಸಮಸ್ಯಯೇ ಇನ್ನೂ ಸರಿಯಾಗಿ ಪರಿಹಾರವಾಗಿಲ್ಲ. ಆದುದರಿಂದ ಹೆಚ್ಚು ಒತ್ತು ಮೂಲಭೂತ ಅವಶ್ಯಕತೆಗಳ ಪೂರೈಕೆಗೆ ಅಂದರೆ ಸರಕಾರದಿಂದ ಸಿಗುವ ಅಭಿವೃದ್ದಿ ಲಾಭಗಳನ್ನು ಪಡೆಯಲು ಕೊಟ್ಟಿದ್ದಾರೆ.[1] ಹೊಟ್ಟೆ ತುಂಬಿದವರಿಗೆ ಸಣ್ಣಪುಟ್ಟ ಸಾಂಸ್ಕೃತಿಕ ಸೂಕ್ಷ್ಮಗಳು ದೊಡ್ಡ ಭಿನ್ನತೆಯ ಪ್ರಶ್ನೆಗಳಾಗುತ್ತವೆ. ಆದರೆ ಊಟಕ್ಕಿಲ್ಲದವರಿಗೆ ಸಾಂಸ್ಕೃತಿಕ ಆಕಾರಗಳು ಕೂಡ ವಿನಿಮಯದ ವಸ್ತುಗಳೇ ಎನ್ನುವ ಸುಮಿತ್ ಸರ್ಕಾರ್ ಅವರ ಮಾತು ಇಲ್ಲಿನ ಸಂದರ್ಭವನ್ನು ಗೃಹಿಸಿಯೇ ಹೇಳಿದಂತಿದೆ.[2] ಆದುದರಿಂದಲೇ ಎಲ್ಲಾ ವಿಧದಿಂದಲೂ ತಾಂತ್ರಿಕ ಆಧುನಿಕತೆಗೆ ತೆರೆದುಕೊಂಡ ಹಲವಾರು ವಿಚಾರಗಳಲ್ಲಿ ಕಂದಾಚಾರಗಳನ್ನು ಮುಂದುವರಿಸಲು ಸಾಧ್ಯವಿದೆ. ಇಲ್ಲಿ ಸಾಂಪ್ರದಾಯ ಎನ್ನುವಾಗ ಅದರ ಆಳ ಅರಿವುಗಳನ್ನು ಗಮನದಲ್ಲಿಟ್ಟುಕೊಂಡೆ ಹೇಳುತ್ತಿದ್ದೇನೆ. ಸಮಾನತೆ ಸಾಧ್ಯತೆ ಇರುವ ಸಮುದಾಯ ಬದುಕಿಗೆ ಪೂರಕವಾಗುವ ಸಾಂಪ್ರದಾಯದ ಎಲ್ಲಾ ಮೌಲ್ಯಗಳು ಮುಂದುವರಿಯಬೇಕೆಂಬುದೇ ಇಲ್ಲಿನ ಆಶಯ ಕೂಡ. ಆದರೆ ವರ್ತಮಾನದಲ್ಲಿ ಆ ರೀತಿ ಆಗುತ್ತಿಲ್ಲ. ಆಧುನಿಕತೆಯ ವ್ಯಕ್ತಿ ಪ್ರಧಾನ ಮೌಲ್ಯಗಳು, ಸ್ಪರ್ಧೆಗಳೂ, ಸಣ್ಣ ಕುಟುಂಬಗಳು ಇವೇ ಮುಂತಾದವು ಈಗ ಎಲ್ಲಾ ಕಡೆಯಲ್ಲೂ ವಿಜೃಂಭಿಸುತ್ತಿವೆ. ಇದರೊಂದಿಗೆ ಪಾರಂಪರಿಕ ಶ್ರೇಣೀಕರಣಕ್ಕೆ ಒತ್ತು ಕೊಡುವ ಮೌಲ್ಯಗಳನ್ನು ನಮ್ಮ ಸಂಸ್ಕೃತಿಯ ಮೌಲ್ಯಗಳೆಂದು ಪ್ರಚಾರ ಮಾಡಲಾಗುತ್ತಿದೆ.

 

[1]ಈ ವಿಚಾರ ಕುರಿತು ಇಡೀ ಕೇರಿಯವರ ಅಭಿಪ್ರಾಯ ಇದೇ ಎಂದು ತೀರ್ಮಾನಿಸಲು ಈ ಸೀಮಿತ ಚರ್ಚೆಯಿಂದ ಸಾಧ್ಯವಿಲ್ಲ. ಯಾಕೆಂದರೆ ಕೆಲವು ಹರಿಜನ ನಾಯಕರು ಮತ್ತು ಹಿರಿಯರ ಜತೆ ಮಾತ್ರ ನಾನು ಚರ್ಚಿಸಿದ್ದೆ. ಅಲ್ಲಿ ಓದಿರುವ ಹಲವಾರು ಯುವಕರಿದ್ದಾರೆ. ಅವರ ಅಭಿಪ್ರಾಯವೇನೆಂದು ವಿಚಾರಿಸಿಲ್ಲ. ಅವರ ಅಭಿಪ್ರಾಯ ಬೇರೆಯೇ ಇರಬಹುದು.

[2]ಸುಮಿತ್ ಸರ್ಕಾರ್, ರೈಟಿಂಗ್ ಸೋಶಿಯಲ್ ಹಿಸ್ಟರಿ, ಡೆಲ್ಲಿ: ಆಕ್ಸಫರ್ಡ್ ಯುನಿವಸ್ಸಿಟಿ ಪ್ರೆಸ್, ೧೯೯೮.