ಊರವರ ಅರಿವು ಮತ್ತು ಭಾಗವಹಿಸುವಿಕೆ

ಕೇವಲ ಸದಸ್ಯರ ಅರಿವು ಮತ್ತು ಭಾಗವಹಿಸುವಿಕೆಯಿಂದ ವಿಕೇಂದ್ರೀಕರಣ ಪರಿಣಾಮಕಾರಿಯಾಗುವುದಿಲ್ಲ. ಊರವರು ಕೂಡ ಸಕ್ರಿಯವಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಊರವರ ಅರಿವು ಮತ್ತು ಭಾಗವಹಿಸುವಿಕೆಯನ್ನು ಪರಿಶೀಲಿಸಲಾಯಿತು. ಒಟ್ಟು ಎಂಬತ್ತೊಂದು ಮಂದಿಯನ್ನು ಕಂಡು ಪಂಚಾಯತ್ ಸಂಸ್ಥೆಗಳ ಅರಿವು ಮತ್ತು ಭಾಗವಹಿಸುವಿಕೆ ಕುರಿತು ಅವರಲ್ಲಿ ಪ್ರಶ್ನೆ ಕೇಳಲಾಯಿತು. ಸಂದರ್ಶಿಸಿದ ಊರವರ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಕೋಷ್ಠಕ – ೫ರಲ್ಲಿ ಕೊಟ್ಟಿದ್ದೇನೆ. ಎಂಬತ್ತೊಂದು ಮಂದಿಯಲ್ಲಿ ಅರವತ್ತು ಪುರುಷರು ಮತ್ತು ೨೧ ಮಹಿಳೆಯರು. ಅವರಲ್ಲಿ ಎಲ್ಲಾ ಪ್ರಾಯದವರು ಒಳಗೊಳ್ಳುವಂತೆ ನೋಡಿಕೊಳ್ಳಲಾಗಿದೆ. ೪೫ ವರ್ಷದಿಂದ ಕೆಳಗಿನವರು ೪೯ ಮಂದಿ, ಉಳಿದವರು ೪೫ ವರ್ಷಗಳಿಂದ ಮೇಲ್ಪಟ್ಟವರು. ೧೦ ಮಂದಿ ೬೦ ವರ್ಷ ಮೇಲ್ಪಟ್ಟವರು. ಸಂದರ್ಶನ ಮಾಡಿದ ಊರವರಲ್ಲಿ ಶಿಕ್ಷಣದ ಪ್ರಮಾಣ ಹೀಗಿದೆ: ೪೩ ಜನ ಶಾಲೆಗೆ ಹೋಗಿಲ್ಲ, ೨೫ ಮಂದಿ ಪ್ರಾಥಮಿಕ ಶಿಕ್ಷಣ ಪಡೆದವರು, ಪ್ರೌಢ ಶಾಲಾ ಮತ್ತು ಕಾಲೇಜು ಶಿಕ್ಷಣ ಹೊಂದಿದವರು ಕ್ರಮವಾಗಿ ೫ ಮತ್ತು ೭ ಮಂದಿ. ೧೭ ಮಂದಿ ನಾಯಕರು, ೧೧ ಮಂದಿ ಹರಿಜನರು, ೬ ಜನ ವಡ್ಡರು, ೧೧ ಮಂದಿ ಕುರುಬರು, ೩ ಉಪ್ಪಾರರು, ೭ ಮುಸ್ಲಿಂರು, ೧೨ ಲಿಂಗಾಯಿತರು, ೧೦ ಕ್ರಿಶ್ಚಿಯನ್ನರು, ವೈಶ್ಯರು, ಬ್ರಾಹ್ಮಣರು, ಕ್ಷೌರಿಕರುಗಳಿಂದ ತಲಾ ಒಬ್ಬೊಬ್ಬರನ್ನು ಕಂಡು ಮಾಹಿತಿ ಸಂಗ್ರಹಿಸಲಾಗಿದೆ. ಜಾತಿಯಂತೆ ಎಲ್ಲಾ ಕಸುಬಿನವರನ್ನು ಸೇರಿಸಿಕೊಳ್ಳಲಾಗಿದೆ. ೨೩ ಕೃಷಿಕರು, ೧೦ ಕೃಷಿ ಕೂಲಿಗಳು ಮತ್ತು ೪೮ ಮಂದಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಸಂದರ್ಶನ ಮಾಡಲಾಗಿದೆ. ಅವರ ಅಭಿಪ್ರಾಯಗಳನ್ನು ಕೋಷ್ಠಕ – ೬ರಲ್ಲಿ ಕ್ರೋಢೀಕರಿಸಲಾಗಿದೆ.

ಗ್ರಾಮ ಸಭೆ

ಊರವರು ಗ್ರಾಮಸಭೆಯಲ್ಲಿ ಭಾಗವಹಿಸುವುದು ಗ್ರಾಮ ಪಂಚಾಯತ್ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯ. ಹಳ್ಳಿಯಲ್ಲಿ ಸಂದರ್ಶನ ಮಾಡಿದ ೮೧ ಮಂದಿಯಲ್ಲಿ ೩೯ ಜನರಿಗೆ ಅಂದರೆ ಶೇಕಡಾ ಲೆಕ್ಕಾಚಾರದಲ್ಲಿ ೪೦% ಕ್ಕಿಂತಲೂ ಹೆಚ್ಚಿನವರಿಗೆ ಗ್ರಾಮ ಸಭೆ ಊರಲ್ಲಿ ನಡೆಯುವುದರ ಬಗ್ಗೆ ಅರಿವೇ ಇಲ್ಲ. ಭಾಗವಹಿಸುವವರ ಪ್ರಮಾಣವಂತೂ ತುಂಬಾ ಕಡಿಮೆ. ಕೇವಲ ೧೩ ಜನ ಗ್ರಾಮ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರೆ. ಗ್ರಾಮ ಸಭೆಯಲ್ಲಿ ಏನೆಲ್ಲಾ ವಿಚಾರಗಳು ಚರ್ಚೆಗೆ ಬರುತ್ತವೆ ಎನ್ನುವ ಪ್ರಶ್ನೆಗೆ ಎಲ್ಲರೂ ಫಲಾನುಭವಿಗಳ ಆಯ್ಕೆ ಮಾತ್ರ ಎನ್ನುತ್ತಾರೆ. ಫಲಾನುಭವಿಗಳ ಆಯ್ಕೆ ಗ್ರಾಮಸಭೆಯಲ್ಲಿ ನಡೆಯುತ್ತದೆಯೇ ಎನ್ನುವ ಪ್ರಶ್ನೆಗೆ ಏಳು ಜನ ಹೌದೆಂದರೆ; ೭೪ ಮಂದಿ ಇಲ್ಲ ಎಂದಿದ್ದಾರೆ. ಈ ಏಳು ಹೌದೆನ್ನಲು ಕಾರಣ ಅವರು ಹಾಜರಾದ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ವಿಚಾರ ಬಂದಿದೆ. ಇಲ್ಲ ಎಂದ ೭೪ ಮಂದಿಯಲ್ಲಿ ಗ್ರಾಮ ಸಭೆಗೆ ಹಾಜರಾಗದವರು ಸೇರಿದ್ದಾರೆ. ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ನಡೆಯುತ್ತದೆಯೇ? ಎಂದರೆ ಗ್ರಾಮ ಸಭೆಯಲ್ಲಿ ಆಯ್ಕೆ ಆಗುವುದಿಲ್ಲ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆಗದಿರಲು ಕಾರಣ ಕೊಡುವಲ್ಲಿ ಎಲ್ಲರ ಅಭಿಪ್ರಾಯ ಒಂದೇ ಆಗಿಲ್ಲ. ಕೆಲವರು ಮುಖ್ಯವಾಗಿ ಮೇಲು ಜಾತಿಗೆ ಸೇರಿದವರು ಅಧಿಕಾರಿಗಳು ಸವಲತ್ತುಗಳ ಕುರಿತು ಸರಿಯಾಗಿ ವಿವರಣೆ ನೀಡುವುದಿಲ್ಲ ಎಂದಿದ್ದಾರೆ. ಅವರ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಬರುವುದೇ ಇಲ್ಲ. ಬಂದವರಿಗೆ ಯಾವ ಸವಲತ್ತುಗಳು ಯಾರಿಗೆ ಮತ್ತು ಎಷ್ಟು ಪ್ರಮಾಣದಲ್ಲಿ ಮತ್ತು ಯಾಕೆ ಎನ್ನುವುದನ್ನು ಜನರಿಗೆ ತಿಳಿಯುವಂತೆ ವಿವರಿಸಲು ವ್ಯವಧಾನವೇ ಇರುವುದಿಲ್ಲ. ಹಲವಾರು ಹಳ್ಳಿಗಳಲ್ಲಿ ಒಂದೇ ದಿನ ಗ್ರಾಮ ಸಭೆ ಇರುವುದರಿಂದ ಬರುವ ಅಧಿಕಾರಿಗಳು ಯಾವಾಗ ನೋಡಿದರೂ ಅವಸರದಲ್ಲೇ ಇರುತ್ತಾರೆ. ಅಧಿಕಾರಿಗಳ ವಿವರಣೆ ಜನರಿಗೆ ಸಮಾಧಾನಕರವಲ್ಲದಿದ್ದರೆ ಸಭೆಯಲ್ಲಿ ಜಗಳ ಆರಂಭವಾಗುತ್ತದೆ ಎಂದು ಮೇಲು ಜಾತಿಯವರು ಅಭಿಪ್ರಾಯಪಡುತ್ತಾರೆ. ಹರಿಜನರು ಮತ್ತು ನಾಯಕರ ಪ್ರಕಾರ ಜಗಳಕ್ಕೆ ಕಾರಣ ಈ ಮೇಲು ಜಾತಿಯವರು. ಹೆಚ್ಚಿನ ಸವಲತ್ತುಗಳು ಹರಿಜನ ಮತ್ತು ಗಿರಿಜನರಿಗೆ ಬಂದಿರುತ್ತದೆ. ಅದನ್ನು ಗ್ರಾಮ ಸಭೆಯಲ್ಲಿ ಚರ್ಚೆಗೆ ಇಟ್ಟ ಕೂಡಲೇ ಎಲ್ಲಾ ಸವಲತ್ತುಗಳು ಹರಿಜನ ಗಿರಿಜನರಿಗೆ ಆದರೆ ನಮ್ಮನೆಲ್ಲಾ ಏಕೆ ಸಭೆ ಕರಿಯುತ್ತೀರಾ ಎಂದು ಜಗಳ ತೆಗೆಯುತ್ತಾರೆ ಎಂದು ಕೆಲವರು ಅಭಿಪ್ರಾಯಪಟ್ಟರು. ಒಂದು ವಿಧದಲ್ಲಿ ಇಬ್ಬರೂ, ಮೇಲು ಮತ್ತು ಕೆಳ ಜಆತಿಯವರು ಒಂದೇ ಸಮಸ್ಯೆಯ ಎರಡು ಮುಖಗಳನ್ನು ಪರಿಚಯಿಸಿದ್ದಾರೆ. ಹರಿಜನ ಮತ್ತು ಗಿರಿಜನರಿಗೆ ಹೆಚ್ಚಿನ ಸವಲತ್ತು ಸಿಗುವಾಗ ಮೇಲು ಜಾತಿಯವರಿಗೆ ಅಸಮಾಧಾನವಾಗುವುದು ಸಹಜ. ಮೇಲು ಜಾತಿಯವರ ದೂರು ಇರುವುದು ಹರಿಜನರಿಗೆ ಕೊಟ್ಟಿದ್ದನ್ನೆಲ್ಲಾ ನಮಗೂ ಕೊಡಿ ಎಂದಲ್ಲ. ನಮಗೆ ಇಲ್ಲವಾದರೆ ಯಾಕಿಲ್ಲ ಎಂದು ವಿವರಿಸುವಲ್ಲಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಪ್ರತಿನಿಧಿಗಳನ್ನು ಸೇರಿಸಿ, ವಿಫಲರಾದುದರ ವಿರುದ್ಧ ಮೇಲು ಜಾತಿಯವರ ಅಸಮಾಧಾನ.

ಕ್ಷೇತ್ರಕಾರ್ಯ ಆರಂಭಿಸುವಾಗ ಹಿಂದಿನ ಪಂಚಾಯತ್‌ನ ಅವಧಿ ಮುಗಿದಿತ್ತು. ಆದುದರಿಂದ ಗ್ರಾಮ ಸಭೆ ಅಥವಾ ಸದಸ್ಯರ ಸಭೆಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗಲಿಲ್ಲ. ಎರಡು ಸಾವಿರ ಇಸವಿಯಲ್ಲಿ ಹೊಸ ಪಂಚಾಯತ್ ಸಮಿತಿ ಸಂಘಟಿತವಾದ ಕೂಡಲೇ ಒಂದು ಗ್ರಾಮಸಭೆ ನಡೆಯಿತು. ಆ ಗ್ರಾಮಸಭೆಗೆ ಹಾಜರಾಗಿ ಗ್ರಾಮಸಭೆ ಕುರಿತು ಊರವರು ನೀಡಿದ ಮಾಹಿತಿ ಸರಿಯೇ ಎಂದು ತಿಳಿಯುವ ಕುತೂಹಲ ನನಗೂ ಇತ್ತು. ದಿನಾಂಕ: ೨೮.೦೬.೨೦೦೦, ಮಂಗಳವಾರ ಮುಂಜಾನೆ ಗಂಟೆ ೯ಕ್ಕೆ ಪಂಚಾಯತ್ ವಠಾರದಲ್ಲಿ ಗ್ರಾಮ ಸಭೆ ಸೇರುತ್ತದೆ ಎಂಬ ಸುದ್ದಿ ತಿಳಿಯಿತು. ಒಂಭತ್ತು ಗಂಟೆಗೆ ಸರಿಯಾಗಿ ಪಂಚಾಯತ್ ಕಚೇರಿ ತಲುಪಿದೆ. ಸಂಬಂಧಪಟ್ಟ ಯಾರೂ ಅಲ್ಲಿರಲಿಲ್ಲ. ಅಲ್ಲಿಂದ ಸ್ವಲ್ಪ ದೂರದಲ್ಲಿ ನನ್ನ ವಿದ್ಯಾರ್ಥಿಯ ಸ್ಟೇಷನರಿ ಅಂಗಡಿ ಇದೆ. ಅಲ್ಲಿ ಹೋಗಿ ವಿಚಾರಿಸುವಾ ಎಂದು ಸ್ವಲ್ಪ ದೂರ ಹೋಗುವಷ್ಟರಲ್ಲೇ ವಿದ್ಯಾರ್ಥಿ ಮತ್ತು ಆತನ ಮಿತ್ರರು ಪಂಚಾಯತ್ ಕಡೆ ಬರುತ್ತಿದ್ದರು. “ಏನ್ರಿ ಇದು ಒಂಭತ್ತು ಹೋಗಿ ಗಂಟೆ ಒಂಭತ್ತೂವರೆ ಆಗುತ್ತಿದೆ. ನಿಮ್ಮ ಗ್ರಾಮಸಭೆ ನಡೆಯುವ ಲಕ್ಷಣ ಕಾನುತಿತಲ್ಲ” ಅಂದೆ. “ಇದು ಇಲ್ಲಿ ಸಾಮಾನ್ಯ ಸಾರ್, ಹನ್ನೊಂದು ಗಂಟೆಗೆ ಶುರುವಾದರೆ ನಮ್ಮ ಪುಣ್ಯ” ಎಂದು ವಿದ್ಯಾರ್ಥಿಯ ಜತೆಗಿದ್ದವರು ಅಂದ್ರು. ಅವರಂದಂತೆ ಗ್ರಾಮ ಸಭೆ ಶುರುವಾಗುವಾಗ ಗಂಟೆ ಹನ್ನೊಂದಾಯಿತು. ಕುರಿ ಮತ್ತು ಉಣ್ಣೆ ಇಲಾಖೆಯ ಸಹ ನಿರ್ದೇಶಕರಾದ ಹನುಮಂತಪ್ಪನವರು ಗ್ರಾಮ ಸಭೆಯ ಮಾರ್ಗದರ್ಶಿಯಾಗಿದ್ದರು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ರಾಮಪ್ಪನವರು ವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ರಾಜಕೀಯ ಪ್ರಮುಖರೆಂದರೆ: ಜಿಲ್ಲಾ ಪಂಚಾಯತ್ ಸದಸ್ಯ ಹಾಲಪ್ಪನವರು, ತಾಲ್ಲೂಕು ಪಂಚಾಯತ್ ಸದಸ್ಯ ಶಿವಶಂಕರಪ್ಪನವರು, ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರು, ಸರಕಾರಿ ಇಲಾಖೆಗಳಿಂದ ಪ್ರತಿನಿಧಿಗಳು ಬಂದಿದ್ದರು. ಸಮಾಜ ಕಲ್ಯಾಣ ಇಲಾಖೆ, ಪಶು ಸಂಗೋಪನಾ ಇಲಾಖೆಯ ವಿಸ್ತರಣಾಧಿಕಾರಿ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಕೆ.ಇ.ಬಿ., ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಪ್ರತಿನಿಧಿಗಳು ಹಾಜರಿದ್ದರು. ಬ್ಯಾಂಕಿನ ಕಡೆಯಿಂದ ಯಾರೂ ಬಂದಿರಲಿಲ್ಲ. ಊರಿನ ಪ್ರಮುಖರು, ಶಾಲೆಯ ಉಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಸರಕಾರೇತರ ಸಂಸ್ಥೆಯ ಪ್ರತಿನಿಧಿಗಳು ಮತ್ತು ಊರವರು ಎಲ್ಲಾ ಕೂಡಿ ೧೫೦ ರಿಂದ ೨೦೦ ಜನ ಸೇರಿದ್ದರು. ಅದರಲ್ಲಿ ಸುಮಾರು ೫೦ ಜನ ಮಹಿಳೆಯರಿದ್ದರು.

ಸಭೆಯ ಪ್ರಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಪಂಚಾಯತ್ ಕಾರ್ಯದರ್ಶಿಯವರು ಕನಿಷ್ಠ ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ಸೇರಲೇಬೇಕು; ಸದಸ್ಯರು ಮತ್ತು ಊರವರು ಬಯಸಿದರೆ ನಾಲ್ಕರಿಂದ ಐದು ಬಾರಿ ಕೂಡ ಸೇರಬಹುದು ಎಂದರು. ಮುಂದುವರಿಸಿ ಅವರು, ‘ಯಾಕೆಂದರೆ ಗ್ರಾಮ ಪಂಚಾಯತಿಯ ಆಗುಹೋಗುಗಳು ಅಂದರೆ ಅಭಿವೃದ್ಧಿ ಕಾರ್ಯಕ್ರಮಗಳು ಇಲ್ಲಿಯೇ ನಿರ್ಧಾರವಾಗುತ್ತವೆ. ಕಡು ಬಡವರಿಗೆ ಇರುವ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಲ್ಲಿ ಸುಲಭವಾಗುತ್ತದೆ’ ಎಂದರು. ಗ್ರಾಮ ಸಭೆಯಲ್ಲಿ ಇಷ್ಟೊಂದು ಕಾಳಜಿಯಿಂದ ಮಾತಾಡಿದ ಕಾರ್ಯದರ್ಶಿಯವರ ನಿಜ ಸ್ವರೂಪವೇನೆಂದು ಮುಂದೆ ನೋಡಲಿದ್ದೇವೆ. ನಂತರ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತಮ್ಮ ಕಿರು ಪರಿಚಯ ಮಾಡಿಕೊಳ್ಳುತ್ತ ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ತಿಳಿಸಿ ಅವುಗಳ ಪ್ರಯೋಜನ ಪಡೆಯಲು ಜನರಲ್ಲಿ ಕೇಳಿಕೊಂಡರು. ಸಮಾಜ ಕಲ್ಯಾಣ ಇಲಾಖೆಯ ಶ್ರೀಧರರಾವ್ ಅವರು ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕೃಷಿಯೇತರ ವಿನಿಯೋಜನೆಗಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಇರುವ ಸಾಲ ಸೌಲಭ್ಯಗಳನ್ನು ತಿಳಿಸಿದರು. ತೆನೆ ಹೊಡೆಯುವ ಯಂತ್ರ, ಹಿಟ್ಟಿನ ಗಿರಣಿ, ಸೈಕಲ್ ರಿಪೇರಿ ಶಾಪ್ ಇತ್ಯಾದಿ ಘಟಕಗಳನ್ನು ಆರಂಭಿಸುವ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಕಡಿಮೆ ಬಡ್ಡಿಗೆ ಸಾಲ ನೀಡಲಾಗುತದೆ. ಸಾಲದಲ್ಲಿ ಶೇಕಡಾ ೬೦ ರಿಯಾಯಿತಿ ಇದೆ; ಕೇವಲ ಶೇಕಡಾ ೪೦ ಸಾಲವನ್ನು ತುಂಬಿದರೆ ಸಾಕು ಎಂದರು. ಅವರು ಮುಂದುವರಿಸಿ ಈ ಹಳ್ಳಿಯಲ್ಲಿ ಒಟ್ಟು ಎಂಟು ಜನ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಅವಕಾಶವಿದೆ (೫ ಜನ ಪರಿಶಿಷ್ಟ ಜಾತಿ ಮತ್ತು ೩ ಜನ ಪರಿಶಿಷ್ಟ ವರ್ಗದವರು); ಅವರ ಆಯ್ಕೆ ಈ ಸಭೆಯಲ್ಲಿ ಆಗಬೇಕಾಗಿದೆ ಎಂದರು.

ಫಲಾನುಭವಿಗಳ ಆಯ್ಕೆ ಮಾಡಬೇಕೆನ್ನುವಾಗ ಸಭಿಕರಲ್ಲಿ ಗದ್ದಲ, ಗೊಂದಲ ಆರಂಭವಾಯಿತು. ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸಂತಾಯಿತು. ಅಲ್ಲಿ ಸೇರಿದ್ದ ಜನ ಪ್ರತಿನಿಧಿಗಳು ಹೇಗೋ ಕಷ್ಟ ಪಟ್ಟು ಜನರನ್ನು ಸುಮ್ಮನಿರಿಸಿದರು. ಉಳಿದ ಇಲಾಖೆಯವರು ತಮ್ಮ ತಮ್ಮ ಇಲಾಖೆಯ ಕಾರ್ಯಕ್ರಮಗಳನ್ನು ಹೇಳಲು ಆರಂಭಿಸಿದರು. ದುರಾದೃಷ್ಟವೆಂದರೆ ಅಂದು ಎಲ್ಲಾ ಇಲಾಖೆಯವರು ಕೇವಲ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಇರುವ ಯೋಜನೆಗಳನ್ನು ತಇಳಿಸಿ ಅವರಿಂದ ಫಲಾನುಭವಿಗಳ ಆಯ್ಕೆಗೆ ಪ್ರಯತ್ನಿಸುತ್ತಿದ್ದರು. ಇದರಿಂದ ರೋಸಿ ಹೋದ ಜನರು ‘ಎಲ್ಲಾ ಅವರಿಗೆ ಕೊಟ್ಟುಬಿಡಿ ನಮಗೇನು ಬೇಡ, ಸಭೆ ಬೇಡ, ಏನು ಬೇಡ, ಮೇಲೇಳಿ ಹೊರಗೆ ಹೋಗುವಾ’ ಎಂದು ಜಗಳ ತೆಗೆದರು. ಈ ಬಾರಿ ಜನರನ್ನು ಸಮಾಧಾನಿಸಲು ಯಾರೂ ಪ್ರಯತ್ನಿಸಲಿಲ್ಲ. ಸಭೆಯನ್ನು ಮುಕ್ತಾಯಗೊಳಿಸಿದರು. ಗ್ರಾಮ ಪಂಚಾಯಿತಿಯ ಇತರ ಯಾವ ವಿಚಾರಗಳೂ ಚರ್ಚೆಗೆ ಬರಲಿಲ್ಲ. ಆವಾಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಇನ್ನೂ ಎರಡು ಹಳ್ಳಿಗಳಲ್ಲಿ ಗ್ರಾಮಸಭೆ ನಡೆಯಬೇಕಾಗಿತ್ತು. ಊರವರು ಮತ್ತು ಸದಸ್ಯರು ಸೇರಿ ಫಲಾನುಭವಿಗಳ ಆಯ್ಕೆ ಮಾಡಿ ಎಂದು ತಿಳಿಸಿ ಅಧಿಕಾರಿಗಳು ಮುಂದಿನ ಹಳ್ಳಿಗೆ ಹೊರಟರು.

ಮುಂದಿನ ಸಭೆ ವಡ್ಡರಹಳ್ಳಿಯಲ್ಲಿ. ಅಲ್ಲಿ ಸುಮಾರು ಎರಡೂವರೆ ಗಂಟೆಗೆ ಸಭೆ ಶುರುವಾಯಿತು. ಹಿಂದಿನ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇಲ್ಲೂ ಇದ್ದರು. ಕಾರ್ಯದರ್ಶಿ ಸ್ವಾಗತ ಭಾಷಣ ಮಾಡಿದರು. ಗ್ರಾಮ ಸಭೆಯ ಪ್ರಾಮುಖ್ಯತೆಯನ್ನು ತಿಳಿಸುತ್ತಾ, ನೋಡಿ ನಮ್ಮ ಪಂಚಾಯತ್‌ಗೆ ಈಗ ೨.೬೦ ಲಕ್ಷ ಅನುದಾನ ಬಂದಿದೆ. ಅದರಲ್ಲಿ ಏನೇನು ಮಾಡಬೇಕೆಂದು ನೀವು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಎಂದಾಗ ಸಭಿಕರಲ್ಲೊಬ್ಬರು ಮಧ್ಯ ಬಾಯಿ ಹಾಕಿ ನಮ್ಮ ಪಂಚಾಯಿತಿಗೆ ಎಲ್ಲಾ ಮೂಲಗಳಿಂದ ಬರುವ ಆದಾಯ ಎಷ್ಟು, ಖರ್ಚು ಎಷ್ಟು ಎಂದು ಮೊದಲು ತಿಳಿಸಿ, ನಂತರ ಅಧಿಕಾರಿಗಳ ಸರದಿ. ತಮ್ಮನ್ನು ಪರಿಚಯಿಸಿಕೊಳ್ಳುವ ಔಪಚಾರಿಕತೆಯನ್ನು ಬದಿಗಿಟ್ಟು ನೇರವಾಗಿ ನಿಮ್ಮ ಸಮಸ್ಯೆಗಳೇನು ಮತ್ತು ನಿಮ್ಮ ಬೇಡಿಕೆಗಳೇನು ಎಂದು ಸಭಿಕರನ್ನು ಕೇಳಿದರು. ಸಭೆ ಸೇರಿದ್ದು ಆಂಜನೇಯ ದೇವಸ್ಥಾನದ ಒಳಭಾಗದಲ್ಲಿ. ಒಳ ಭಾಗದಲ್ಲಿದ್ದವರು ಹಿಂದಿನ ಅವದಿಯಲ್ಲಿ ನಡೆದ ಅವಾಂತರಗಳನ್ನು ಹೇಳಲು ಆರಂಭಿಸಿದರು. ಆಶ್ರಯ ಮನೆಗಳನ್ನು ಸ್ಥಿತಿವಂತರಿಗೆ ಹಂಚಿದ್ದಾರೆ. ನಿಜವಾಗಿ ಮನೆ ಇಲ್ಲದ ನಿರ್ಗತಿಕರಿಗೆ ಕೊಟ್ಟಿಲ್ಲ ಎಂದಾಗ ಇಲ್ಲೂ ಪಾಪಿನಾಯಕನ ಹಳ್ಳಿಯಂತೆ ಗಲಾಟೆ ಶುರುವಾಯಿತು. ಗುಡಿಯಿಂದ ಹೊರಗಿದ್ದ ಹರಿಜನರಿಗೆ ಒಳಗೆ ಏನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. ಹರಿಜನ ಯುವಕ, ಕರಿಯಪ್ಪ ಎಂಬುವರು ನಮಗೆ ಏನೂ ಕೇಳಿಸುತ್ತಿಲ್ಲ ಎಂದಾಗ ಒಳಗಡೆ ಬಂದು ನಿಮ್ಮ ಅಭಿಪ್ರಾಯ ತಿಳಿಸಿ ಎಂದರು ಕಾರ್ಯದರ್ಶಿಗಳು. ನಾವು ಒಳಗಡೆ ಬರುವಂತಿದ್ದರೆ ಇಲ್ಯಾಕಿರುತ್ತೇವೆ ಎಂದು ಹೇಳುತ್ತ ದೊಡ್ಡ ಧ್ವನಿಯಲ್ಲಿ ಆಶ್ರಯ ಯೋಜನೆಯಲ್ಲಿ ಆದ ಅನ್ಯಾಯವನ್ನು ಪ್ರತಿಭಟಿಸಿದರು. ರಾಜಕೀಯ ನಾಯಕರು ಸಮಾಧಾನ ಹೇಳಿದರು. ಈ ಬಾರಿ ನಿಮಗೆ ಅನ್ಯಾಯ ಆಗುವುದಿಲ್ಲ ಎಂದು ಭರವಸೆ ನೀಡಿ ಸಭೆ ಮುಕ್ತಾಯಗೊಳಿಸಿದರು. ಇಲ್ಲಿ ಫಲಾನುಭವಿಗಳ ಆಯ್ಕೆ ನಡೆಯಲಿಲ್ಲ. ಜನರ ಬೇಡಿಕೆಗಳನ್ನು ಪಟ್ಟಿ ಮಾಡಿಕೊಂಡರು. ಇಲ್ಲಿನ ವಿಶೇಷವೆಂದರೆ ಸುಮಾರು ಐವತ್ತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹರಿಜನರು ಸೇರಿದ್ದರು; ಅದರಲ್ಲಿ ಎಂಟರಿಂದ ಹತ್ತು ಮಂದಿ ಮಹಿಳೆಯರಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಿನ ಹಳ್ಳಿಗೆ ಹೋದರು.

ಗ್ರಾಮಸಭೆ ಕುರಿತು ಊರವರು ನೀಡಿದ ಮಾಹಿತಿ ಹೆಚ್ಚುಕಮ್ಮಿ ಸರಿಯಾಗಿಯೇ ಇದೆ. ಜತೆಗೆ ಹಲವಾರು ಹೊಸ ವಿಷಯಗಳು ಕೂಡ ಗಮನಕ್ಕೆ ಬಂದವು. ಕ್ರಾಂತಿಕಾರಕ ಸಾಮಾಜಿಕ ಪರಿವರ್ತನೆಗೆ ಪ್ರಭುತ್ವ ನಮ್ಮಲ್ಲಿ ಪ್ರಯತ್ನಿಸುತ್ತಿಲ್ಲ. ಈಗಾಗಲೇ ಇರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕನ್ನು ವಿಶೇಷವಾಗಿ ಕೆದಕದೆ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ತುದಿಯಿಂದ ಬುಡ ತನಕ ಸಾಂಪ್ರದಾಯಿಕ ಶಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಪ್ರಭಾವ ಬೀರುತ್ತಲೇ ಇರುತ್ತಾರೆ. ಅಧಿಕಾರಿಗಳು ಮತ್ತು ಸದಸ್ಯರು ಈ ಅಂಶವನ್ನು ಗಮನದಲ್ಲಿರಿಸಿಕೊಳ್ಳುತ್ತಿದ್ದರೆ ಆ ಎರಡು ಹಳ್ಳಿಗಳಲ್ಲಿ ನಡೆದ ಅವಾಂತರಗಳು ನಡೆಯುತ್ತಿರಲಿಲ್ಲ. ವಡ್ಡರ ಹಳ್ಳಿಯ ಉದಾಹರಣೆಯನ್ನೇ ನೋಡುವಾ. ಜನರ ದಿನ ನಿತ್ಯದ ಬದುಕಿನಲ್ಲಿ ಜಾತಿ ಜಾತಿ ನಡುವೆ ಸಾಕಷ್ಟು ಅಂತರವಿದೆ. ಹರಿಜನರು ಆಂಜನೇಯ ಗುಡಿಯೊಳಗೆ ಬರುವುದಿಲ್ಲ ಎನ್ನುವುದು ಸದಸ್ಯರಿಗೆ ಮತ್ತು ಕಾರ್ಯದರ್ಶಿಯವರಿಗೆ ತಿಳಿದ ವಿಷಯ. ಅದನ್ನು ತಿಳಿದೂ ಗುಡಿಯೊಳಗೆ ಗ್ರಾಮಸಭೆ ನಡೆಸುವವರನ್ನು ಏನೆಂದು ಕರೆಯಬೇಕು? ಗುಡಿಯೊಳಗೆ ಗ್ರಾಮ ಸಭೆ ನಡೆಸಿ ಅಲ್ಲಿ ಎಲ್ಲರನ್ನು ಸೇರಿಸಿ ಸಾಮಾಜಿಕ ಲೋಪಗಳನ್ನು ತಿದ್ದುವ ಉದ್ದೇಶವಿದ್ದರೆ ಅದನ್ನು ಬೇರೆ ಸಂದರ್ಭದಲ್ಲೂ ಮಾಡಬಹುದು. ಅಂತಹ ಕಾಳಜಿ ಇವರಿಗಿಲ್ಲ. ಇರುತ್ತಿದ್ದರೆ ಗ್ರಾಮ ಸಭೆ ಆರಂಭವಾದ ಕೂಡಲೇ ಹರಿಜನರನ್ನು ಒಳಗೆ ಸೇರಿಸಬೇಕಿತ್ತು. ಆಗ ನೆನಪಾಗಿಲ್ಲ ಅಂದುಕೊಳ್ಳುವಾ, ನಂತರ ಹರಿಜನ ಯುವಕ ನಮಗೆ ಏನೂ ಕೇಳಿಸುತ್ತಿಲ್ಲ ಎನ್ನುವಾಗ ಕಾರ್ಯದರ್ಶಿಯವರು ಆತನನ್ನು ಒಳಗೆ ಬಂದು ಮಾತಾಡಲು ಸೂಚಿಸಿದರು. ಆತ ಒಳಗೆ ಬರುವಂತಿದ್ದರೆ ನಾವ್ಯಾಕೆ ಇಲ್ಲಿರುತ್ತಿದ್ದೆವು ಎಂದ.[1] ಅಂದರೆ ಹರಿಜನರನ್ನು ಗುಡಿಯಿಂದ ಹೊರಗಿಡುವುದು ನಮ್ಮ ಹಳ್ಳಿಯ ರೂಢಿ. ಅದೂ ನಿಮಗೆ ತಿಳಿದಿಲ್ಲವೇ ಎನ್ನುವ ಧ್ವನಿ ಆತನ ಮಾತಿನಲ್ಲಿತ್ತು. ಆತ ಒಳಗೆ ಬರಲಿಲ್ಲ. ಕಾರ್ಯದರ್ಶಿಯವರು ಆತನನ್ನು ಒಳಗೆ ಸೇರಿಸಲು ಪ್ರಯತ್ನಿಸಲೂ ಇಲ್ಲ.

ಕಾರ್ಯದರ್ಶಿಯವರು ಹೊಸಪೇಟೆಯವರೇ, ಅವರಿಗೆ ಇಲ್ಲಿನ ಹಳ್ಳಿಗಳ ನೀತಿ ರಿವಾಜುಗಳ ಬಗ್ಗೆ ಅರಿವಿರಲೇಬೇಕು. ಅರಿವಿದ್ದು ಒಳಗೆ ಬಾ ಎನ್ನುವುದು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಹಿಂಜರಿಯವುದು ಶತಮಾನದ ಅಸ್ಪೃಶ್ಯತೆಯನ್ನು ಮುಂದುವರಿಸಲು ಪರವಾನಿಗೆ ಕೊಟ್ಟಂತೆ. ಯಾಕೆಂದರೆ ಇವೆಲ್ಲಾ ನಡೆಯುತ್ತಿರುವುದು ಆಧುನಿಕ ಸಮಾಜವನ್ನು ಕಾರ್ಯರೂಪಕ್ಕೆ ತರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ. ಇವರುಗಳೇ ಇದಕ್ಕೆಲ್ಲಾ ಮೂಕ ಪ್ರೇಕ್ಷಕರಾದರೆ ಕೆಳ ವರ್ಗದ ಜನರಾದರೂ ಏನು ಮಾಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಈ ನಡವಳಿಕೆ ಹರಿಜನರಿಗೆ ಸಾಂಪ್ರದಾಯಿಕ ವ್ಯವಸ್ಥೆ ಕೊಡಮಾಡಿದ್ದು ಸ್ಥಾನವನ್ನು ಪುಷ್ಟೀಕರಿಸಿತು. ನಮ್ಮಲ್ಲಿ ನಡೆಯುತ್ತಿರುವ ಆಧುನಿಕತೆಯ ಪ್ರತಿಬಿಂಬ ಇದು. ಆಧುನಿಕತೆಯ ಬಹುದೊಡ್ಡ ತತ್ವ. ಕಾನೂನು ಎಲ್ಲರನ್ನು ಸಮಾನರಾಗಿ ನೋಡುವುದು. ಕಾನೂನಿಗೆ ಜೀವ ಇದ್ದು ಅದರಷ್ಟಕ್ಕೆ ಅದು ಕಾರ್ಯರೂಪಕ್ಕೆ ಬರುತ್ತಿದ್ದರೆ ಇಷ್ಟೊಂದು ಸಮಸ್ಯೆ ಇರಲಿಲ್ಲ. ಇವೆಲ್ಲವನ್ನೂ ಸಮಸ್ಯೆಯಾಗಿಸುವುದರಲ್ಲಿ ಸಮಾನತೆಯನ್ನು ಜಾರಿಗೆ ತರಬೇಕಾದವರ ಪಾತ್ರವೂ ಇದೆ. ಅವುಗಳನ್ನು ಜಾರಿಗೆ ತರುವವರಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನ, ಪ್ರಾಮಾಣಿಕತೆ, ಕೆಳವರ್ಗದ ಬಗೆ ಕನಿಷ್ಠ ಕಾಳಜಿ ಇರುತ್ತಿದ್ದರೆ ಆಧುನಿಕತೆಯ ಕೆಲವೊಂದು ಸವಲತ್ತುಗಳಾದರೂ ತಳಮಟ್ಟಕ್ಕೆ ತಲುಪುತ್ತಿತ್ತೋ ಏನೋ. ಇದಕ್ಕೆ ಪೂರಕವಾಗಿ ಗಣಿಗಾರಿಕೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಾಗ ಆದ ನನ್ನ ಅನುಭವವನ್ನು ಇಲ್ಲಿ ವಿವರಿಸುತ್ತೇನೆ. ಹಳ್ಳಿಯ ಸುತ್ತಮುತ್ತ ನಡೆಯುವ ಗಣಿಗಾರಿಕೆ ಕುರಿತು ಮಾಹಿತಿ ನೀಡಲು ಗಣಿ ಮತ್ತು ಭೂಗರ್ಭ ಕಚೇರಿಯವರನ್ನು ಸಂಪರ್ಕಿಸಬೇಕಾಯಿತು. ಇಂದು ಬನ್ನಿ ನಾಳೆ ಬನ್ನಿ ಎಂದು ಕೆಲವು ದಿನ ಕಳೆದವು. ನೀವು ಅನಗತ್ಯ ಮಾಹಿತಿ ಕೇಳುತ್ತೀರಿ ಎಂದು ಮತ್ತೆ ಕೆಲವು ದಿನ ಕಳೆದವು. ಕಡೆಗೂ ಪಾಪಿನಾಯಕನ ಹಳ್ಳಿಯ ಸರಹದ್ದಿನಲ್ಲಿ ಇರುವ ಎಲ್ಲಾ ಗಣಿಗಳ ಸಂಖ್ಯೆ, ಅವುಗಳಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆ, ಅವುಗಳು ಉತ್ಪಾದಿಸುವ ಅದಿರಿನ ಪ್ರಮಾಣ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು ಗಣಿ ಮತ್ತು ಭೂಗರ್ಭ ಕಚೇರಿಯಿಂದ ಸಿಗಲಿಲ್ಲ. ಗಣಿಗಳಲ್ಲಿ ದುಡಿಯುವ ಕಾರ್ಮಿಕರು ಮತ್ತು ಅವರಿಗೆ ನೀಡುವ ಸೌಲಭ್ಯದ ಬಗ್ಗೆ ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯವರು ನೋಡಿಕೊಳ್ಳುತ್ತಾರೆ. ಅವರ ಇಲಾಖೆಯ ಕಚೇರಿಯೊಂದು ಕಾರಿಗನೂರಿನಲ್ಲಿ ಇದೆ. ನೀವು ಅಲ್ಲಿಂದಲೇ ಆ ವಿವರಗಳನ್ನು ಸಂಗ್ರಹಿಸಬಹುದೆಂದು ಸಾಗಹಾಕಿದರು.

ಅಂತೆಯೇ ಒಂದು ದಿನ ಹನ್ನೊಂದು ಗಂಟೆ ಸುಮಾರಿಗೆ ಆ ಕಚೇರಿಗೆ ಹೋದರೆ ಕಚೇರಿಯ ಒಳಗಿಂದ ದೇವರ ಪೂಜೆಯ ಮಣಿಗಂಟೆ ಶಬ್ದ ಕೇಳಿಬರುತ್ತಿತ್ತು. ದಾರಿ ತಪ್ಪಿ ಯಾವುದೋ ಗುಡಿಗೆ ಹೋಗಿದ್ದೇನೋ ಎಂದು ಪುನಃ ಕಚೇರಿಯ ಸುತ್ತಮುತ್ತ ನೋಡಿದೆ. ಇಲ್ಲ, ಅದು ಕೇಂದ್ರ ಸರಕಾರದ ಕಾರ್ಮಿಕರ ಕಲ್ಯಾಣ ಇಲಾಖೆಯವರ ಕಚೇರಿಯೇ ಆಗಿತ್ತು. ಧೈರ್ಯ ಮಾಡಿ ಕಚೇರಿಯ ಒಳನುಗ್ಗಿದೆ. ಅಧಿಕಾರಿಯೊಬ್ಬರ ಕೋಣೆ ಪ್ರವೇಶ ಬಾಗಿಲಿನ ಹತ್ತಿರವೇ ಇತ್ತು. ಆದರೆ ಅವರು ಕುರ್ಚಿಯಲ್ಲಿ ಇರಲಿಲ್ಲ. ಅಲ್ಲೇ ಹೊರಗಿದ್ದ ಜವಾನನ ಜತೆ ವಿಚಾರಿಸಿದೆ. ಆತ ಮತ್ತೊಂದು ಕೋಣೆಯತ್ತ ಬೆರಳು ತೋರಿಸಿದ. ಅಲ್ಲಿ ನೋಡಿದರೆ ಹಲವಾರು ದೇವರುಗಳ ಫೋಟೋ ಇಟ್ಟು ಒಂದು ಪುಟ್ಟ ಗುಡಿಯ ದೃಶ್ಯ ಸೃಷ್ಟಿಯಾಗಿತ್ತು. ಕಚೇರಿಯ ಬಹುತೇಕ ಸಿಬ್ಬಂದಿಗಳು ತಮ್ಮ ಪಾದರಕ್ಷೆಗಳನ್ನು ಕಳಚಿ ಅಂದಿನ ಪೂಜೆಯ ಪ್ರಸಾದ ಸ್ವೀಕರಿಸುವುದರಲ್ಲಿ ಮಗ್ನರಾಗಿದ್ದರು. ಅಲ್ಲಿಗೆ ಹೋಗುವುದು ಸರಿಯಲ್ಲ ಎಂದು ಅಧಿಕಾರಿಗಳ ಕಚೇರಿಯಲ್ಲೇ ಕುಳಿತು ಅವರಿಗಾಗಿ ಕಾದೆ. ಸ್ವಲ್ಪ ಹೊತ್ತಿಗೆ ಅವರು ಬಂದರು. “ಏನು ಸಾರ್, ನಿಮ್ಮಲ್ಲಿ ಪ್ರತಿದಿನ ಪೂಜೆ ಇದೆಯೇ”? ಎಂದೆ “ಪ್ರತಿ ದಿನ ಇಲ್ಲ ವಾರಕ್ಕೆ ಒಂದು ದಿನ, ಶುಕ್ರವಾರ ಮಾತ್ರ” ಎಂದರು. “ಅಲ್ಲಿ ಕೇವಲ ಹಿಂದೂ ದೇವರ ಫೋಟೋ ಮಾತ್ರ ಇದೆ, ಇತರ ಧರ್ಮಗಳ ಫೋಟೋ” ಎನ್ನುವಷ್ಟರಲ್ಲೇ ನನ್ನ ಮಾತನ್ನು ಅರ್ಧಕ್ಕೆ ನಿಲ್ಲಿಸಿ “ನೀವು ಬಂದ ಉದ್ದೇಶ ಏನು”? ಎಂದು ಗಂಭೀರವಾಗಿಯೇ ಕೇಳಿದರು. ನನ್ನ ಅಧ್ಯಯನ ಮತ್ತು ಅದರ ಉದ್ದೇಶಗಳು ಮತ್ತು ಅದಕ್ಕೆ ಬೇಕಾದ ಮಾಹಿತಿ ಬಗ್ಗೆ ತಿಳಿಸಿದೆ. “ನೋಡಿ ನಮ್ಮಲ್ಲಿ ಕೇಂದ್ರ ಸರಕಾರ ನಡೆಸುವ ಕೆಲವು ಯೋಜನೆಗಳ ವಿವರ ಬಿಟ್ಟರೆ ಬೇರೇನೂ ಇಲ್ಲ. ನಿಮಗೆ ಬೇಕಾದ ಅಸಂಘಟಿತ ಕಾರ್ಮಿಕರ ವಿವರಗಳು ನಮ್ಮಲ್ಲಿ ಇಲ್ಲ” ಎಂದು ಹೇಳಿ ನೀವಿನ್ನು ಹೋಗಬಹುದು ಎನ್ನುವ ರೀತಿಯಲ್ಲಿ ನನ್ನ ಮುಖ ನೋಡಿದರು. ಕಡೆಗೂ ಅಸಂಘಟಿತ ಗಣಿ ಕಾರ್ಮಿಕರ ಕುರಿತು ಅಂಕಿ ಅಂಶಗಳು ದೊರೆಯಲಿಲ್ಲ.

ಇವೆಲ್ಲವನ್ನೂ ಇಷ್ಟು ವಿವರವಾಗಿ ವಿವರಿಸಲು ಕಾರಣವಿದೆ. ಹಿಂದೆ ವಿವರಿಸಿದಂತೆ ಹೊಸಪೇಟೆಯ ಒಣ ಭೂಪ್ರದೇಶದ ಜನರಿಗೆ ಗಣಿ ಕೆಲಸ ಬದಲಿ ಆದಾಯದ ಮೂಲವಾಗಿದೆ. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಹೆದ್ದಾರಿ ಬಲಭಾಗಕ್ಕೆ ಬರುವ ಹಲವಾರು ಹಳ್ಳಿಗಳ ಕೆಳವರ್ಗದ ಜನ ಇದನ್ನೇ ನಂಬಿದ್ದಾರೆ. ಗಣಿಯಲ್ಲಿ ದುಡಿಯುವ ಕಾರ್ಮಿಕರಿಗೆ ಕೊಡಬೇಕಾದ ಸಂಬಳ ಮತ್ತು ಇತರ ಸೌಲಭ್ಯಗಳ ಕುರಿತು ಬೇಕಾದಷ್ಟು ಕಾನೂನುಗಳಿವೆ. ಅವುಗಳನ್ನು ಜಾರಿಗೆ ತರುವವರು ಆಧುನಿಕ ಸಂಸ್ಥೆಗಳಲ್ಲಿ ದುಡಿಯುವ ಅಧಿಕಾರಿಗಳು. ಗಣಿ ಮಾಲೀಕರು ಕಾನೂನು ಪ್ರಕಾರ ವ್ಯವಹರಿಸುವಂತೆ ನೋಡಿಕೊಳ್ಳುವುದು ಇಂತಹ ಅಧಿಕಾರಿಗಳ ಜವಾಬ್ದಾರಿ. ಆದರೆ ಅಧಿಕಾರಿಗಳು ಆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎನ್ನುವುದು ಮೇಲಿನ ವಿವರಣೆಗಳಿಂದ ಅರ್ಥವಾಗಬಹುದು. ಯಾವುದನ್ನು ಜಾತಿಗೆ ತರಬೇಕೋ ಅದನ್ನ ತರಲಿಲ್ಲ. ಜಾರಿಗೆ ತರುತ್ತಿದ್ದರೆ ಆಗಬಹುದಾದ ಸಣ್ಣ ಪುಟ್ಟ ಬದಲಾವಣೆಗಳು ಆಗಲಿಲ್ಲ. ಅದಕ್ಕೆ ತಮ್ಮಲ್ಲಿ ಇರುವ ಕುಂದು ಕೊರತೆಗಳನ್ನು ಪಟ್ಟಿ ಮಾಡದೆ; ಆಧುನೀಕರಣವನ್ನು ದೂರಿದರೆ ತಾವು ಬಚಾವಾಗಬಹುದು, ತಮ್ಮ ವರ್ಗದ ಆಸಕ್ತಿಯೂ ಮುಂದುವರಿಯಬಹುದು.[2] ಹೀಗೆ ಸಂಪ್ರದಾಯವಾದಿಗಳು ಮುಂದಿಡುವ ನಮ್ಮ ತನದಲ್ಲಿ ಸಾಕಷ್ಟು ಕೊಳೆತು ನಾರುವ ಅಂಶಗಳಿವೆ. ಅವುಗಳ ತತ್ವನಿಷ್ಠ ವಿಮರ್ಶೆ ಅಗತ್ಯ.

ಇನ್ನು ಇಲ್ಲಿನ ಗ್ರಾಮಸಭೆಗಳಿಗೆ ಕುರಿತಂತೆ ಹೇಳುವುದಾದರೆ ಕೆಳ ಜಾತಿ/ವರ್ಗದವರಿಗೆ ಅನಗತ್ಯ ಕಿರುಕುಳ ಉಂಟು ಮಾಡುವ ಇಂತಹ ಘಟನೆಗಳನ್ನು ತಪ್ಪಿಸಲು ಸುಲಭ ಮಾರ್ಗವೆಂದರೆ ಗ್ರಾಮಸಭೆಗಳನ್ನು ಎಲ್ಲರೂ ಸೇರಬಹುದಾದ ಸ್ಥಳದಲ್ಲಿ ನಡೆಸುವುದು. ಪಾಪಿನಾಯಕನ ಹಳ್ಳಿಯಲ್ಲಿ ಜನರು ಗಲಾಟೆ ಮಾಡಲು ಕಾರಣ ಎಲ್ಲಾ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾತ್ರ ಹೇಳಿದ್ದು. ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಯಾರ ಪರ ಇವೆ ಯಾರ ಪರ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ವಿಶೇಷ ಬುದ್ಧಿವಂತಿಕೆ ಬೇಡ. ಸರಕಾರ ಖಂಡಿತವಾಗಿಯೂ ಬಡವರ ಉದ್ಧಾರಕ್ಕಾಗಿ ಕೆಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅವುಗಳ ಒಟ್ಟು ಪರಿಣಾಮ ಕ್ರಾಂತಿಕಾರಕವಾಗಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ಅವು ಯಾವುವು ಕೂಡ ಕೆಳವರ್ಗದವರ ಸಂಪನ್ಮೂಲದ ಸ್ಥಿತಿಯನ್ನು ಮೂಲಭೂತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬಡವರ ಉದ್ಧಾರಕ್ಕೆ ಎಷ್ಟು ಕಾರ್ಯಕ್ರಮಗಳಿವೆಯೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚಚಿನ ಪ್ರಮಾಣದಲ್ಲಿ ಉಳ್ಳವರ ಉದ್ಧಾರಕ್ಕೂ ಕಾರ್ಯಕ್ರಮಗಳಿವೆ. ಅಂದರೆ ಬಡವರ ಸ್ಥಿತಿ ಸ್ವಲ್ಪ ಸುಧಾರಣೆಯಾದಾಗ ಅನುಕೂಲಸ್ಥರು ಇನ್ನೂ ಮೇಲಿರುತ್ತಾರೆ. ಹೀಗೆ ಇವರಿಬ್ಬರ ನಡುವಿನ ಅಂತರ ಮುಂದುವರಿಯುತ್ತಲೇ ಇರುತ್ತದೆ. ಇದು ನಮ್ಮ ಅಭಿವೃದ್ಧಿ ಯೋಜನೆಗಳ ಒಟ್ಟು ಫಲಶೃತಿ.

ಇದರ ಜತೆಗೆ ಹಿಂದೆ ವಿವರಿಸಿದಂತೆ ಹಳ್ಳಿಯ ಸಾಮಾಜಿಕ ಸ್ಥಿತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಉದ್ದೇಶ ಪ್ರಭುತ್ವಕ್ಕಿಲ್ಲ. ಹೀಗಿರುವಾಗ ಕ್ರಾಂತಿಕಾರಕ ಮಾನಸಿಕ ಪರಿವರ್ತನೆಯನ್ನು ಹಳ್ಳಿಗರಿಂದ ಅಧಿಕಾರಿಗಳು ಯಾಕೆ ಬಯಸಬೇಕು? ಒಟ್ಟು ವ್ಯವಸ್ಥೆ ಮತ್ತು ನಮ್ಮ ಅಭಿವೃದ್ಧಿ ಯೋಜನೆಗಳು ಮೇಲ್ವರ್ಗದವರ ಆಸಕ್ತಿಗೆ ಪೂರಕವಾಗಿಯೇ ಇದೆ. ವಾಸ್ತವಿಕತೆ ಹೀಗಿದ್ದರೂ ಕೆಳ ವರ್ಗದವರ ಉದ್ಧಾರ ಬಿಟ್ಟರೆ ಸರಕಾರಕ್ಕೆ ಬೇರೆ ಉದ್ದೇಶವೇ ಇಲ್ಲ ಎನ್ನುವ ರೀತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿದರೆ ಜನರು ಗಲಾಟೆ ಮಾಡದೆ ಇರಲು ಸಾಧ್ಯವೆ? ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಜನರ ಸಂಶಯ ದೂರ ಮಾಡಲು ಪ್ರಯತ್ನಿಸಿಲ್ಲ. ಊರ ಇತರರಿಗೆ ಇರುವ ಯೋಜನೆಗಳನ್ನು ವಿವರಿಸಲೂ ಇಲ್ಲ. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಗುವ ವೈಫಲ್ಯಗಳೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎನ್ನುವ ಉದ್ದೇಶ ಇದಲ್ಲ. ಮೇಲೆ ವಿವರಿಸಿದಂತೆ ನಮ್ಮ ಸಮಾಜ, ಪ್ರಭುತ್ವ ಹಾಗೂ ಅದು ಸಾಮಾಜಿಕ ಪರಿವರ್ತನೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಇತ್ಯಾದಿಗಳ ಕನಿಷ್ಠ ಅರಿವಾದರೂ ಸಂಬಂಧಪಟ್ಟವರಿಗೆ ಇರುವುದು ಅಗತ್ಯ.

ಕರ್ನಾಟಕದ ಇತರ ಹಳ್ಳಿಗಳಲ್ಲೂ ಗ್ರಾಮಸಭೆ ಯಶಸ್ವಿಯಾಗಿ ನಡೆದ ಉದಾಹರಣೆಗಳು ಕಡಿಮೆ. ೧೯೯೦ರಲ್ಲಿ ಜೊಸ್ ರಾಫೆಲ್ ಅವರ ಧಾರವಾಡ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿನ ಪಂಚಾಯತ್‌ನ ಅಧ್ಯಯನ ಮಾಡಿದ್ದಾರೆ. ಅದು ಮಂಡಲ ವ್ಯವಸ್ತೆ ಆರಂಭವಾದ ದಿನಗಳು. ೧೯೮೭ರಲ್ಲಿ ಪ್ರಥಮ ಗ್ರಾಮ ಸಭೆ ಕೆಲವು ಮಂಡಲಗಳಲ್ಲಿ ನಡೆಯಿತು. ಊರವರಿಗೆ ಇದೇನೆಂದು ತಿಳಿಯುವ ಕುತೂಹಲ. ಜತೆಗೆ ತಮ್ಮ ಅಗತ್ಯಗಳನ್ನು ಗ್ರಾಮಸಭೆಯಲ್ಲಿ ಹೇಳಿದರೆ ಪರಿಹಾರ ಸಿಗುತ್ತದೆ ಎಂಬ ಭರವಸೆ ಕೂಡ ಇತ್ತು. ಹಾಗಾಗಿ ಅಧಿಕ ಸಂಖ್ಯೆಯಲ್ಲಿ ಹಾಜರಾಗುವ ಮೂಲಕ ತಮ್ಮ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಅರಿವಾಗುತ್ತಲೇ ಹಾಜರಿ ಕೂಡ ಕಡಿಮೆಯಾಗುತ್ತಾ ಬಂತು ಎಂದು ರಾಫೆಲ್ ಅಭಿಪ್ರಾಯ ಪಡುತ್ತಾರೆ.[3] ಗ್ರಾಮ ಸಭೆ ಕುರಿತು ಹೆಚ್ಚು ಕಡಿಮೆ ಇದೆ ತೀರ್ಮಾನಕ್ಕೆ ಕೆ.ಎಸ್. ನಾರಾಯಣ ಕೂಡ ಬರುತ್ತಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೆಲವು ಪಂಚಾಯತ್‌ಗಳಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಗ್ರಾಮ ಸಭೆ ಸೇರಿಸಲು ಉತ್ಸಾಹ ತೋರಿಸುವುದಿಲ್ಲ. ಯಾಕೆಂದರೆ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸದೆ ಅವರನ್ನು ಎದುರಿಸುವುದು ಹೇಗೆಂಬ ಭಯ ಅವರಿಗಿತ್ತೆಂದು ನಾರಾಯಣ ಅಭಿಪ್ರಾಯ ಪಡುತ್ತಾರೆ.[4] ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಹೆಚ್ಚು ಕಡಿಮೆ ಇದೆ ಸ್ಥಿತಿ ಎಂದು ಅಧ್ಯಯನಗಳಿಂದ ತಿಳಿದು ಬರುತ್ತದೆ.[5] ಇನ್ನು ಇತರ ಅಂಶಗಳ ಕುರಿತಂತೆ ವಾರ್ಷಿಕ ಯೋಜನೆ, ಆಯವ್ಯಯ ಪಟ್ಟಿ, ಸಮಿತಿಗಳ ಅಸ್ತಿತ್ವ, ಪರಿಸರ ಸಂರಕ್ಷಣೆ ಇತ್ಯಾದಿಗಳು – ಜನರ ಅರಿವು ಮತ್ತು ಭಾಗವಹಿಸುವಿಕೆ ನಿರಾಶದಾಯಕ.

ಈ ಮೇಲಿನ ಅಂಕಿ ಅಂಶಗಳು ಪಿ.ಕೆ.ಹಳ್ಳಿಯ ಗ್ರಾಮ ಪಂಚಾಯತ್ ಮತ್ತು ಅದರ ಕಾರ್ಯವಿಧಾನದ ಕುರಿತು ಕೆಲವೊಂದು ತೀರ್ಮಾನಗಳಿಗೆ ಬರಲು ಸಹಕಾರಿಯಾಗಬಹುದು. ಗ್ರಾಮ ಪಂಚಾಯತ್ ಸದಸ್ಯರಲ್ಲಿ ಸಿಂಹ ಪಾಲು ಕೆಳಜಾತಿಯವರದ್ದೇ. ಕೇವಲ ಜಾತಿ ಮಾತ್ರವಲ್ಲ, ಆರ್ಥಿಕವಾಗಿಯೂ ಬಹುತೇಕ ಸದಸ್ಯರು ಕೆಳವರ್ಗಕ್ಕೆ ಸೇರಿದವರು. ಪ್ರತಿನಿಧೀಕರಣದ ದೃಷ್ಟಿಯಿಂದ ಗ್ರಾಮ ಪಂಚಾಯತ್ ವ್ಯವಸ್ಥೆ ಕ್ರಾಂತಿ ಮಾಡಿದೆ ಎನ್ನಬೇಕು. ಯಾಕೆಂದರೆ ಕೆಲವೇ ದಶಕಗಳ ಹಿಂದೆ ಮೇಲು ಜಾತಿಯವರ ಎದುರು ನಿಂತು ಮಾತನಾಡುವುದನ್ನು ಊಹಿಸಲು ಅಸಾಧ್ಯವಾಗಿದ್ದ ಒಂದು ವಾತಾವರಣದಲ್ಲಿ ಇಂದು ಕೆಳಜಾತಿಯವರೇ ಹಳ್ಳಿಯ ರಾಜಕೀಯದಲ್ಲಿ ತುಂಬಿದ್ದಾರೆ. ಇದು ನಂಬಲು ಸಾಧ್ಯವಿಲ್ಲದ ಪರಿವರ್ತನೆಯೇ ಸರಿ. ಈ ಪರಿವರ್ತನೆಯನ್ನು ಮುಖ ಬೆಲೆಯಲ್ಲಿ ತೆಗೆದುಕೊಂಡರೆ ಕೆಲವು ಅಪಾಯಗಳಿವೆ. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ಈ ಪರಿವರ್ತನೆ ಸಾಧ್ಯವಾದುದು ಹೇಗೆ ಎನ್ನುವ ಪ್ರಶ್ನೆ. ಇದು ಕೆಳಜಾತಿ/ವರ್ಗ ಮೇಲು ಜಾತಿ/ವರ್ಗದ ವಿರುದ್ಧ ಸತತವಾಗಿ ನಡೆಸಿದ ಹೋರಾಟದ ಫಲವಲ್ಲ. ಇಲ್ಲಿನ ಕೆಳಜಾತಿಯವರು ಮೇಲು ಜಾತಿಯವರ ದಬ್ಬಾಳಿಕೆಯನ್ನು ಪ್ರತಿಭಟಿಸಲೇ ಇಲ್ಲವೆಂದಲ್ಲ. ಇವರ ಮಧ್ಯೆ ಘರ್ಷಣೆ ಸದಾ ಇತ್ತು. ಕೆಲವು ಬಾರಿ ಅದು ಸ್ಫೋಟಗೊಂಡು ಊರಿನ ಸಮಸ್ಯೆಯಾಗುತ್ತಿತ್ತು. ಉದಾಹರಣೆಗೆ ಮೇಟಿಯವರ ವಿರುದ್ಧ ಮೊಹರಂ ದಿನ ನಡೆದ ದಾಳಿ. ಆದರೆ ಅವು ಯಾವುವು ಕೂಡ ಮೇಲು ಜಾತಿಯವರ ರಾಜಕೀಯ ಹಿತವನ್ನು ಸಂಪೂರ್ಣ ಬುಡಮೇಲು ಮಾಡುವ ರೀತಿ ಇರಲಿಲ್ಲ. ಸ್ಥಳೀಯ ಯಜಮಾನಿಕೆಯನ್ನು ಪ್ರಶ್ನಿಸುವುದು ಎಷ್ಟು ಕಷ್ಟವೆಂದು ಮೇಟಿ ಚಂದ್ರಶೇಖರಪ್ಪ ಮತ್ತು ಬೈಲುವದ್ದಿಗೇರಿ ಜಂಬನ ಗೌಡರ ಜಗಳದಿಂದ ಅರ್ಥವಾಗುತ್ತದೆ. ಜಂಬನ ಗೌಡರು ಲಿಂಗಾಯತರು, ಮೇಲಾಗಿ ಆರ್ಥಿಕವಾಗಿಯೂ ಬಲಾಢ್ಯರು. ಅಂತಹವರಿಗೆ ಹಳ್ಳಿಯ ಯಜಮಾನಿಕೆಯನ್ನು ಪ್ರಶ್ನಿಸಲು ಸಾಧ್ಯವಾಗದೇ ಬೈಲು ವದ್ದಿಗೇರಿಯನ್ನು ಪಿ.ಕೆ.ಹಳ್ಳಿಯಿಂದ ಬೇರ್ಪಡಿಸಿ ತಮ್ಮ ಯಜಮಾನಿಕೆ ಸ್ಥಾಪಿಸಿಕೊಳ್ಳಬೇಕಾಇತು. ಮೇಲು ಜಾತಿ/ವರ್ಗಗಳ ಹಿಡಿತ ಇಷ್ಟು ಬಲಯುತವಾಗಿ ಇರುವಲ್ಲಿ ತತ್‌ಕ್ಷಣಕ್ಕೆ ಕ್ರಾಂತಿ ಬಯಸುವುದು ಸರಿಯಲ್ಲ. ಆದರೆ ವಾಸ್ತವಕ್ಕೆ ವಿರುದ್ಧವಾಗಿ ಕ್ರಾಂತಿಯಾಗಿದೆ. ಊರಲ್ಲಿ ಮೇಲು ಜಾತಿಯವರು ಕಾನೂನಿನ ದೃಷ್ಟಿಯಿಂದ ಸಂಪೂರ್ಣವಾಗಿ ರಾಜಕೀಯದಿಂದ ಹೊರಗಿದ್ದಾರೆ. ಕೆಳಜಾತಿಯವರು ಹಳ್ಳಿಯ ರಾಜಕೀಯದಲ್ಲಿ ಸಿಂಹಪಾಲು ಪಡೆದಿದ್ದಾರೆ. ಕೆಳಜಾತಿಯವರಿಗೆ ಅಧಿಕಾರ ಒದಗಿಸಿದ ಕಾನೂನಿಗಾಗಿ ಹಳ್ಳಿಯ ಕೆಳ ಜಾತಿಯವರು ಹೋರಾಡದಿರಬಹುದು. ಆದರೆ ಆ ಕಾನೂನು ಬಂದಿರುವುದರಲ್ಲಿ ಎಲ್ಲೋ ಯಾವುದೋ ಕೆಳ ಜಾತಿ/ವರ್ಗಗಳ ಹೋರಾಟದ ಅಂಶವಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ತಳಮಟ್ಟದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕು ವಿಶೆಷ ಪರಿವರ್ತನೆ ಕಾಣುವ ಮುನ್ನವೇ ಕಾನೂನು ಕೆಳ ಜಾತಿ/ವರ್ಗಗಳಿಗೆ ರಾಜಕೀಯ ಅಧಿಕಾರವನ್ನು ಕೊಟ್ಟಿದೆ. ಈ ಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಸಂಸ್ಥೆಗಳು ಮತ್ತು ಇತರ ಪರಿಕರಗಳ ಕುರಿತು ಸದಸ್ಯರಿಗೆ ಅರಿವು ಇಲ್ಲ ಎಂದಾದ ಮೇಲೆ ಭಾಗವಹಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದರಿಂದಾಗಿ ಗ್ರಾಮ ಪಂಚಾಯತ್ ಸಂಸ್ಥೆಗಳು ಇದ್ದು ಅವುಗಳಲ್ಲಿ ಕೆಳಜಾತಿ/ವರ್ಗದವರೇ ತುಂಬಿದ್ದರೂ ಹಳ್ಳಿಯ ಕೆಳಜಾತಿ/ವರ್ಗದ ಜನರ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಗ್ಯಾರಂಟಿಯಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೆಳಜಾತಿ/ವರ್ಗಗಳ ಪ್ರತಿನಿಧೀಕರಣ ಇದ್ದ ಕೂಡಲೇ ಕೆಳ ಜಾತಿ/ವರ್ಗಗಳ ಸಶಕ್ತೀಕರಣ ನಡೆಯುತ್ತದೆ ಎನ್ನುವ ಗ್ಯಾರಂಟಿಯಿಲ್ಲ. ಸದಸ್ಯರ ಅಭಿಪ್ರಾಯದಿಂದ ಸಶಕ್ತೀಕರಣ ಕುರಿತು ತೀರ್ಮಾನಕ್ಕೆ ಬರುವುದು ಸರಿಯಲ್ಲವೆಂದು ಊರವರ ಅಭಿಪ್ರಾಯ ಕೇಳಲಾಯಿತು. ೮೧ ಮಂದಿಯನ್ನು ಕಂಡು ಮಾತಾಡಿಸಿ ಪಂಚಾಯತ್ ಸಂಸ್ಥೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ತಿಳಿಯಲಾಯಿತು. ಊರವರಿಗೆ ಸಂಬಂಧಿಸಿದ ಮಾಹಿತಿ ಕೂಡ ನಿರಾಶದಾಯಕವಾಗಿದೆ. ಬಹುತೇಕ ಮಂದಿ ಗ್ರಾಮ ಸಭೆಯಲ್ಲಿ ಪಾಲುಗೊಳ್ಳುತ್ತಿಲ್ಲ. ಉಳಿದಂತೆ ಇತರ ವಿಚಾರಗಳ ಅರಿವೂ ಇಲ್ಲ. ಭಾಗವಹಿಸುವಿಕೆಯೂ ಇಲ್ಲ. ಊರಿನ ಒಟ್ಟು ಜನಸಂಖ್ಯೆ ೪೩೮೬. ಅದರಲ್ಲಿ ಕೇವಲ ೮೧ ಮಂದಿಯನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇವರ ಅಭಿಪ್ರಾಯದ ಆಧಾರದಲ್ಲಿ ಇಡೀ ಊರಿನ ಜನರ ಪಂಚಾಯತ್ ಸಂಸ್ಥೆಗಳ ಬಗ್ಗೆ ಅರಿವು ಮತ್ತು ಭಾಗವಹಿಸುವಿಕೆ ಕುರಿತು ತೀರ್ಮಾನಕ್ಕೆ ಬರುವುದು ಸರಿಯಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕು ಮತ್ತು ರಾಜಕೀಯ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಂಡ ನಂತರವೇ ಹಳ್ಳಿಯ ರಾಜಕೀಯ ಕುರಿತು ಕೆಲವು ತಾತ್ಕಾಲಿಕ ತೀರ್ಮಾನಗಳಿಗೆ ಬರಬಹುದೇನೋ ಏನೋ. ಆ ಪ್ರಯತ್ನವನ್ನು ಮುಂದಿನ ಅಧ್ಯಾಯಗಳಲ್ಲಿ ಮಾಡಿದ್ದೇನೆ.

 

[1]ಇತರ ಕೆಲವು ಪ್ರದೇಶಗಳಲ್ಲಿ ಹರಿಜನರು ಗ್ರಾಮ ಸಭೆ ಹಾಜರಾಗುವುದೇ ಕಡಿಮೆ. ಒಂದು ವೇಳೆ ಬಂದರೂ ಅವರು ಮೌನ ಪ್ರೇಕ್ಷಕರಾಗಿಯೇ ಇರುವುದು. ಚರ್ಚೆ, ಮಾತುಕತೆ ಏನಿದ್ದರೂ ಊರಿನ ಮೇಲುವರ್ಗದ ಹಕ್ಕು. (ಎಸ್.ಎಸ್. ಮೀನಾಕ್ಷಿ ಸುಂದರಂ, “ಗ್ರಾಮ ಸಭಾ: ಲೆಸನ್ಸ್ ಫ್ರೋಮ್ ಕರ್ನಾಟಕ”, ಕುರುಕ್ಷೇತ್ರ, ಸಂಚಿಕೆ ೪೮, ಸಂಖ್ಯೆ ೧, ಅಕ್ಟೋಬರ್, ೧೯೯೯, ಪುಟ ೫೫-೬೦)

[2]ದೀಪಾಂಕರ್ ಗುಪ್ತ, ಮಿಸ್ಟೇಕನ್ ಮಾಡರ್ನಿಟಿ: ಇಂಡಿಯಾ ಬಿಟ್ವಿನ್ ವರ್ಲ್ಡ್ಸ್, ಹಾರ್ಪರ್ ಕೊಲಿನ್ಸ್, ೨೦೦೦

[3]ಜೊಸ್ ಸಿ.ರಾಫೆಲ್, ಡಿಸೆಂಟ್ರಲೈಸ್‌ಡ್ ಪ್ಲಾನಿಂಗ್ ಇನ್ ಕರ್ನಾಟಕ, ಪೂನಾ: ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಆಕ್ಟಿವಿಟಿಸ್, ೧೯೯೦.

[4]ಕೆ.ಎಸ್. ನಾರಾಯಣ, “ಕರ್ನಾಟಕ ಗ್ರಾಮ ಪಂಚಾಯತ್: ಒನ್ ಇಯರ್ ಆಫ್ ಎಕ್ಸ್‌ಪೀರಿಯನ್ಸ್ ಫ್ರೋಮ್ ಫೀಲ್ಡ್”, ಕುರುಕ್ಷೇತ್ರ, ಏಪ್ರಿಲ್ ೧೯೯೫.

[5]ಬಿ.ಎಸ್. ಭಾರ್ಗವ ಮತ್ತು ಜೋಸ್ ಸಿ.ರಾಫೆಲ್, “ವರ್ಕಿಂಗ್ ಆಫ್ ಗ್ರಾಮ ಸಭಾಸ್ ಇನ್ ಕರ್ನಾಟಕ: ಎ ಸ್ಟಡಿ ಎಟ್ ಮೈಕ್ರೋ ಲೆವೆಲ್”, ಜರ್ನಲ್ ಆಫ್ ರೂರಲ್ ಡೆವಲಪ್‌ಮೆಂಟ್, ಸಂಚಿಕೆ ೧೩, ಏಪ್ರಿಲ್-ಜೂನ್, ೧೯೯೪ ಮತ್ತು ಜಿ.ವಿ.ಜೋಷಿ, “ಗ್ರಾಮ ಸಭಾ ಇನ್ ಕರ್ನಾಟಕ: ಎ ನಾನ್ ಸ್ಟಾರ್‌ಟರ್”, ಕುರುಕ್ಷೇತ್ರ, ಏಪ್ರಿಲ್ ೧೯೯೫.