ದೇಶೀಯತೆಯ ನೆರಳಲ್ಲಿ ವಿಕೇಂದ್ರೀಕರಣ:

ವಿಕೇಂದ್ರೀಕರಣವನ್ನು ಯಾಂತ್ರಿಕವಾಗಿ ಅರ್ಥೈಸಿಕೊಳ್ಳುವ ಪರಿಪಾಠ ಮುಖ್ಯವಾಹಿನಿಯ ವಿಧಾನದಲ್ಲಿದೆ ಎಂದು ಹಿಂದಿನ ಅಧ್ಯಾಯದಲ್ಲಿ ವಿವರಿಸಿದ್ದೇನೆ. ಇದರಿಂದಾಗಿ ಆಡಳಿತದ ರಚನೆಗಳು (ಸ್ಟ್ರಕ್ಚರ್‌ಗಳು), ಅವುಗಳಲ್ಲಿ ಭಾಗವಹಿಸುವವರು, ಅವರ ಅರಿವು ಇತ್ಯಾದಿಗಳು ಮುಖ್ಯವಾಗುತ್ತವೆ. ಅವುಗಳ ಕಾರ್ಯ ನಿರ್ವಹಿಸುವ ಸಾಮಾಜಿಕ ಪರಿಸರ, ಜನರ ಬದುಕು, ನಂಬಿಕೆ, ಮೌಲ್ಯ ಇತ್ಯಾದಿಗಳು ಇಲ್ಲಿ ನಗಣ್ಯವಾಗುತ್ತವೆ. ಎರಡನೇಯದಾಗಿ ಆಡಳಿತದ ರಚನೆಗಳನ್ನು ಹೆಚ್ಚಿಸಿದ ಕೂಡಲೆ ಅಥವಾ ಸಮಾಜದ ಎಲ್ಲಾ ಜಾತಿ/ವರ್ಗಗಳಿಂದ ಪ್ರತಿನಿಧಿಗಳು ಬಂದ ಕೂಡಲೇ ವಿಕೇಂದ್ರೀಕರಣ ಸಾಧ್ಯವಾಗುತ್ತದೆ ಎನ್ನುವ ತೀರ್ಮಾನಕ್ಕೆ ಬರಲಾಗುತ್ತದೆ. ಇದು ಸರಿಯಲ್ಲ. ಕೆಳಜಾತಿ/ವರ್ಗಗಳಿಂದ ಪ್ರತಿನಿಧಿಗಳು ಬರುವುದು ಎಷ್ಟು ಮುಖ್ಯವೋ ಅವರು ಪಂಚಾಯತ್ ಸಂಸ್ಥೆಗಳು ಕೆಳವರ್ಗದವರ ಸಶಕ್ತೀಕರಣಕ್ಕೆ ಬಳಸಿಕೊಳ್ಳುವುದು ಅಷ್ಟೇ ಮುಖ್ಯ. ಯಾಕೆಂದರೆ ಕೆಳಜಾತಿಗಳಿಂದ ಸಾಕಷ್ಟು ಪ್ರಾತಿನಿಧ್ಯ ಇದ್ದಾಗಲೂ ಪಂಚಾಯತ್ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣಕ್ಕೆ ಪ್ರಯತ್ನಿಸುತ್ತವೆ ಎನ್ನುವ ಗ್ಯಾರಂಟಿ ಇಲ್ಲ. ಈ ಎಲ್ಲಾ ಅಂಶಗಳನ್ನು ಹಿಂದಿನ ಅಧ್ಯಾಯದಲ್ಲಿ ಅಂಕಿ ಅಂಶಗಳ ಸಮೇತ ಪರಿಶೀಲಿಸಲಾಗಿದೆ. ಯಾಕೆ ಸಾಧ್ಯವಾಗುತ್ತಿಲ್ಲ? ಯಾವ ಯಾವ ಅಂಶಗಳು ವಿಕೇಂದ್ರೀಕರಣ ತಳಮಟ್ಟದಲ್ಲಿ ಪ್ರಕಟಗೊಳ್ಳುವಲ್ಲಿ ಅಡ್ಡಿಯಾಗಿವೆ? ಪರಿಣಾಮಕಾರಿ ವಿಕೇಂದ್ರೀಕರಣಕ್ಕೆ ಪೂರಕವಾದ ಪರಿಸರವೇನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಅಧ್ಯಾಯದಲ್ಲಿದೆ.

ಪಂಚಾಯತ್ ರಾಜ್ ಸಂಸ್ಥೆಗಳನ್ನು ನಮ್ಮದೇ ಸಂಸ್ಕೃತಿಯ ಭಾಗವೆಂದು ತಿಳಿಯಲಾಗುತ್ತಿದೆ. ಇದರಲ್ಲಿ ಸ್ವಲ್ಪ ಸತ್ಯಾಂಶವೂ ಇದೆ. ಆದರೆ ಇದು ಪೂರ್ಣ ಸತ್ಯವಲ್ಲ. ಪಂಚಾಯತ್‌ರಾಜ್ ಎಂಬ ಪದವೇ ಸೂಚಿಸುವಂತೆ ಇದರಲ್ಲಿ ಸಂಪ್ರದಾಯವೂ ಇದೆ; ಆಧುನಿಕತೆಯೂ ಇದೆ.[1] ಸಾಮೂಹಿಕವಾಗಿ (ಕಲೆಕ್ಟಿವ್) ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳುವುದು ಚಾರಿತ್ರಿಕವಾಗಿ ಪಂಚಾಯತ್ ವ್ಯವಸ್ಥೆಯ ಭಾಗವೇ ಆಗಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ವಿಧಿ ವಿಧಾನಗಳಲ್ಲಿ ಹಿಂದಿಗೂ ಇಂದಿಗೂ ತುಂಬಾ ವ್ಯತ್ಯಾಸವಿದೆ. ಹಿಂದೆ ಪಂಚಾಯತ್ ವ್ಯವಸ್ಥೆಯ ನಾಯಕತ್ವ ಮೇಲುಜಾತಿಯವರ ವಂಶ ಪಾರಂಪರಿಕ ಹಕ್ಕು. ಇಂದು ಈ ಹಕ್ಕು ಹುಟ್ಟಿನಿಂದ ನಿರ್ಧಾರವಾಗುವುದಿಲ್ಲ; ಓಟಿನಿಂದ ನಿರ್ಧಾರವಾಗುತ್ತದೆ. ಪಂಚಾಯತ್ ಸಂಸ್ಥೆಗಳು ಕಾರ್ಯವಿಧಾನ, ಗುರಿ, ಉದ್ದೇಶ ಇತ್ಯಾದಿಗಳ ತೀರ್ಮಾನ ಪಾರಂಪರಿಕ ಯಜಮಾನಿಕೆಯವರ ಇಚ್ಛೆಗೆ ಬಿಟ್ಟಿದ್ದು. ಅವುಗಳಲ್ಲಿ ಊರವರ ಅಭಿಪ್ರಾಯಕ್ಕೆ ಅವಕಾಶವೇ ಇಲ್ಲವೆಂದಲ್ಲ; ಇತ್ತು. ಆದರೆ ಅದೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯ ಮಹತ್ವ. ಇಂದು ಪಂಚಾಯತ್ ಕಾರ್ಯ ವಿಧಾನ, ಯಾವುದಕ್ಕೆ ಮಹತ್ವ ಕೊಡಬೇಕು. ಯಾವುದಕ್ಕೆ ಎಷ್ಟು ಸಂಪನ್ಮೂಲ ವಿನಿಯೋಜಿಸಬೇಕು ಇತ್ಯಾದಿಗಳ ನಿರ್ಧಾರ ಆಧುನಿಕ ಪ್ರಜಾಪ್ರಭುತ್ವ ನಿಯಮಕ್ಕೆ ಅನುಸಾರ ನಡೆಯಬೇಕು. ಅದೇ ರೀತಿ ನಡೆಯುತ್ತದೋ ಎಂದರೆ ಉತ್ತರಿಸುವುದು ಕಷ್ಟ. ತತ್ವ ಮತ್ತು ವಾಸ್ತವಗಳಿಗೆ ತುಂಬಾ ಅಂತರವಿದೆ. ಪ್ರಜಾಪ್ರಭುತ್ವ ತತ್ವಕ್ಕೆ ಅನುಸಾರ ನಡಿಯಬೇಕು ಎನ್ನುವುದು ತಾಂತ್ರಿಕ ಅವಶ್ಯಕತೆ. ಆ ರೀತಿ ಆಗದಿದ್ದರೆ ತಾಂತ್ರಿಕ ಲೋಪವಾಗುತ್ತದೆ. ಅದರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ.

ಹೀಗೆ ವರ್ತಮಾನದಲ್ಲಿ ಕಾರ್ಯರೂಪದಲ್ಲಿರುವ ಪಂಚಾಯತ್‌ರಾಜ್ ವ್ಯವಸ್ಥೆ ಪರಿವರ್ತಿತ ರೂಪದ್ದು. ಇಂತಹ ಪಂಚಾಯತ್ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವಾಗ ಉಂಟಾಗುವ ಪರಿಣಾಮಗಳ ಕುರಿತು ಈಗಾಗಲೇ ನಡೆದಿರುವ ಅಧ್ಯಯನಗಳು ಕೆಲವು ತೀರ್ಮಾನಗಳನ್ನು ಕೊಟ್ಟಿವೆ.[2] ಒಂದು, ಪಾರಂಪರಿಕ ಶಕ್ತಿಗಳೂ ಒಮ್ಮಿಂದೊಮ್ಮೆಯೇ ಹೊಸ ವ್ಯವಸ್ಥೆಗೆ ಅನುವು ಮಾಡಿಕೊಡುವುದಿಲ್ಲ. ತಮ್ಮ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಬಳಸಿ ಹೊಸ ವ್ಯವಸ್ಥೆಯನ್ನು ತಮ್ಮ ಅಂಕಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ಎರಡು,ಹೊಸ ವಿಧಾನಗಳ ಮೂಲಕ ಪಂಚಾಯತ್ ವ್ಯವಸ್ಥೆಗಳ ಅಧಿಕಾರ ಹಿಡಿಯುವವರು ಮತ್ತು. ಸಾಂಪ್ರದಾಯಿಕ ಸಾಮಾಜದಲ್ಲಿ ಯಜಮಾನಿಕೆ ನಡೆಸುವವರ ನಡುವೆ ಆಗಾಧವಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳಿವೆ. ಮೂರು, ಒಂದಲ್ಲ ಒಂದು ಕಾರಣಕ್ಕೆ ಸಾಂಪ್ರದಾಯಿಕ ನಾಯಕತ್ವವನ್ನು ಮೆಚ್ಚುವ ಮತ್ತು ಬೆಂಬಲಿಸುವ ಗಣನೀಯ ಪ್ರಮಾಣದ ಜನರಿರುತ್ತಾರೆ.

ಹಿಂದೆ ಒಳ್ಳೇದಿತ್ತು

ಹಳ್ಳಿಯ ಜನರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುವಾಗ ಕೊನೆಯ ಪ್ರಶ್ನೆಯೆಂದು ಕುತೂಹಲಕ್ಕಾಗಿ ಈಗಿನ ಮತ್ತು ಹಿಂದಿನ ಪಂಚಾಯತ್ ವ್ಯವಸ್ಥೆ ಹೋಲಿಸಿ ನೋಡಿದರೆ ಯಾವುದು ಒಳ್ಳೆಯದಿತ್ತು. ಎಂದು ಕೇಳಿದೆ. ಮೇಲು ಜಾತಿಯವರಿಂದ ಹಿಂದಿನದ್ದು, ಕೆಳ ಜಾತಿಯವರಿಂದ ಇಂದಿನದ್ದು ಎನ್ನುವ ಉತ್ತರ ನಿರೀಕ್ಷಿಸಿದ್ದೆ. ಆದರೆ ದೊರೆತ ಉತ್ತರ ನನ್ನ ಊಹೆಯನ್ನು ಬುಡಮೇಲು ಮಾಡಿದೆ. ಹರಿಜನ ಪ್ರಾಯಸ್ಥರು ಹಿಂದಿನ ಗ್ರಾಮಪಂಚಾಯತ್ ವ್ಯವಸ್ಥೆ ಒಳ್ಳೆದಿತ್ತೆಂದು ಅಭಿಪ್ರಾಯ ಪಡುತ್ತಾರೆ. ಯಾಕೆ? ಎಂದು ವಿಚಾರಿಸಿದರೆ ಆಗ ಇಡೀ ಹಳ್ಳಿಯಲ್ಲಿ ಒಂದು ವ್ಯವಸ್ಥೆ ಇತ್ತು. ಪಂಚಾಯತ್ ಚೇರ್‌ಮೆನ್ ಕೊಟ್ಟ, ತೀರ್ಮಾನ ಅಂತಿಮ. ನಮ್ಮ ಯಾವುದೇ ಜಗಳವಿದ್ದರೂ ಅದು ಹಳ್ಳಿಯಲ್ಲೇ ತೀರ್ಮಾನವಾಗುತ್ತಿತ್ತು. ಆದರೆ ಈಗ ಇಲ್ಲಿ ಯಾವುದು ತೀರ್ಮಾನವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಅದು ಸರಿ ಆದರೆ ಅವರು ನಿಮ್ಮನ್ನು ಜೀತಕ್ಕೆ ದುಡಿಸುತ್ತಿದ್ದರು, ಸರಿಯಾಗಿ ಕೂಲಿ ಕೊಡುತ್ತಿರಲಿಲ್ಲ, ನಿಮಗೆ ಅನ್ಯಾಯವಾದರೆ ಕೇಳುವವರು ಯಾರೂ ಇರಲಿಲ್ಲ ಅಂದೆ. ಜೀತಕ್ಕೆ ದುಡಿಸುತ್ತಿದ್ದರು ಆದರೆ ಹೊಟ್ಟೆ ಬಟ್ಟೆಗೆ ಕಡಿಮೆ ಮಾಡುತ್ತಿರಲಿಲ್ಲ. ಈಗ ನಮ್ಮ ಮನೆಯವರೆಲ್ಲ ದುಡಿದರೂ ನಮ್ಮ ಬೇಕು ಬೇಡಗಳನ್ನು ಕೇಳುವವರಿಲ್ಲ. ಎಲ್ಲರಿಗೂ ಅವರದ್ದೇ ಲೋಕ. ಹೀಗೆ ಹಿಂದಿನ ಅನ್ಯಾಯದ ಮಧ್ಯೆಯೂ ಒಂದು ನ್ಯಾಯವನ್ನು ಹುಡುಕುವ ಅವರ ಪ್ರಯತ್ನ ವಿಚಿತ್ರವಾಗಿತ್ತು.

ಹಿರಿಯರ ಈ ಹಿಂದಕ್ಕೆ ಹೋಗುವ ವಾದ ಆರಂಭದಲ್ಲಿ ನನಗೆ ಅರ್ಥವೇ ಆಗಿರಲಿಲ್ಲ. ಸ್ವಲ್ಪ ಆಳವಾಗಿ, ಕೆಲವು ಹಿರಿಯರ ಬದುಕನ್ನು, ಕೆದಕಿದಾಗ ಕೆಲವೊಂದು ವಿಚಾರಗಳು ಹೊರಬಂದವು. ಬಹುತೇಕ ಹರಿಜನ ಕುಟುಂಬಗಳು ಇಂದು ಕೃಷಿಯೇತರ ಚಟುವಟಿಕೆಗಳನ್ನು ನಂಬಿವೆ. ಅದರಿಂದ ಬರುವ ಆದಾಯ ಹೆಚ್ಚು ಕಡಿಮೆ ನಿಗದಿತ. ಇತರ ಹಳ್ಳಿಗಳಿಗೆ ಹೋಲಿಸದರೆ ಈ ಆದಾಯ ಸ್ವಲ್ಪ ಹೆಚ್ಚಾಗಿಯೇ ಇದೆ. ಆದರೆ ಇದು ಇವರಿಗೆ ಹಲವಾರು ಹೆಚ್ಚಿನ ಖರ್ಚುಗಳಿಗೂ ದಾರಿ ಮಾಡಿವೆ. ಹಿಂದಿನ ಪುಟಗಳಲ್ಲಿ ವಿವರಿಸಿದಂತೆ ಅವರ ಹೆಚ್ಚಿನ ಆದಾಯದ ಸ್ವಲ್ಪ ಭಾಗ ಮದ್ದಿಗೆ ಹೋದರೆ ಮತ್ತೆ ಸ್ವಲ್ಪ ಭಾಗ ಕುಡಿತಕ್ಕೆ ಮೀಸಲು. ವಾರದ ರಜಾ ದಿನವಂತೂ ಯುವಕರಿಗೆ ಜಾತ್ರೆ ಇದ್ದಂತೆ; ಹೊಸಪೇಟೆ ಅಥವಾ ಬಳ್ಳಾರಿಗೆ ಹೋಗಲೇ ಬೇಕು. ಒಂದೆರಡು ಸಿನಿಮಾ ನೋಡುವುದು ಮತ್ತು ಮೋಜು ಮಾಡುವುದು ಕೆಲವರಿಗೆ ಸಾಮಾನ್ಯ ಸಂಗತಿ. ದುಡಿಯುವ ಯುವಕರು ಮದುವೆ ಆದ ಕೂಡಲೇ ಬೇರೆಯದೇ ಮನೆ ಮಾಡಿ ಇರಲು ಆರಂಭಿಸುತ್ತಾರೆ. ಇದರಿಂದ ಪ್ರಾಯಸ್ಥ ತಂದೆ ತಾಯಿಗಳಿಗೆ ದಿಕ್ಕೇ ಇಲ್ಲದಂತಾಗುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ಹಿಂದೆ ಜೀತ ಮಾಡುತ್ತಿದ್ದ ಮನೆಗಳೇ ಇವರಿಗೆ ಊಟ ಕೊಡುತ್ತಿವೆ. ಆದುದರಿಂದ ಹಿಂದಕ್ಕೆ ಹೋಗುವ ಈ ಬಯಕೆ ಹಿಂದಿನ ಸುಖಕ್ಕಿಂತಲೂ ಇಂದಿನ ಕೌಟುಂಬಿಕ ಬಿರುಕುಗಳಿಂದ ಸಾಧ್ಯವಾಗಿರಬಹುದು.[3] ಹೀಗೆ ಹಿಂದಕ್ಕೆ ಹೋಗುವ ವಾದ ನಡೆದಿತ್ತು. ಹರಿಜನ ಯುವಕರು ಈಗ ಇರುವುದನ್ನು ಯಥಾರೀತಿಯಲ್ಲಿ ಇಷ್ಟಪಡುವುದಿಲ್ಲ. ಆದರೆ ಹಿಂದಿನ ವ್ಯವಸ್ಥೆಯನ್ನು ಒಳ್ಳೆಯದೆಂದು ಒಪ್ಪಿಕೊಳ್ಳುವುದೂ ಇಲ್ಲ.

ಇದಕ್ಕೆ ವಿರುದ್ಧವಾಗಿ ಮೇಲು ಜಾತಿಯ ಹೆಚ್ಚು ಕಡಿಮೆ ಎಲ್ಲಾ ವಯಸ್ಸಿನವರು ಹಿಂದೆ ಚೆನ್ನಾಗಿತ್ತು ಅನ್ನುತ್ತಾರೆ. ಕಿರಾಣಿ ಅಂಗಡಿ ನಡೆಸುವ ಹನುಮಂತಪ್ಪನವರ ಮಗನ ಉತ್ತರ ಇದಕ್ಕೊಂದು ಒಳ್ಳೆಯ ಮಾದರಿಯಾಗಬಹುದು. ಆತ ಬಿ.ಎ. ಓದಿದ್ದಾನೆ. ತಂದೆಯ ಕಿರಾಣಿ ಅಂಗಡಿ ನಡೆಸಲು ಜನ ಇಲ್ಲದ ಕಾರಣ ತಾನೇ ವ್ಯಾಪಾರ ಮುಂದುವರಿಸುತ್ತಿದ್ದಾನೆ. ಆತ ನನ್ನ ತಂದೆ ಹೊಸಪೇಟೆ ಬಿಟ್ಟು ಬಂದು ಇಲ್ಲಿ ವ್ಯಾಪಾರ ನಡೆಸುವಾಗ ನಾನು ಚಿಕ್ಕ ಹುಡುಗ. ಈ ಹಳ್ಳಿ ಕುರಿತು ವಿಶೇಷ ಜ್ಞಾನವಿರಲಿಲ್ಲ. ಆದರೆ ಅವರಿವರು ಮಾತಾಡುವುದನ್ನು ಕೇಳಿ ಮತ್ತೆ ಕೆಲವು ಬಾರಿ ನಾನು ಕಣ್ಣಾರೆ ನೋಡಿ ತಿಳಿದುದರ ಪ್ರಕಾರ ಅಂದಿಗೂ ಇಂದಿಗೂ ತುಂಬಾ ವ್ಯತ್ಯಾಸಗಳಿವೆ. ಮೇಟಿಯವರ ದಬ್ಬಾಳಿಕೆಯ ಕುರಿತು ದಿನಾ ನಮ್ಮ ತಂದೆಯ ಜತೆ ಕೆಳಜಾತಿಯವರು ಮತ್ತು ಮೇಟಿಯವರ ಪ್ರತಿಸ್ಪರ್ದಿ ಉದ್ವಾಳರು ದೂರುತ್ತಿದ್ದರು. ಆಗ ಈ ಕೆಳಜಾತಿಯವರು ಯಾರೂ ತಲೆ ಎತ್ತಿ ನಮ್ಮ ಜತೆ ಮಾತನಾಡುತ್ತಿರಲಿಲ್ಲ. ಕೆಲಸಕ್ಕೆ ಕರೆದರೆ ಎದುರುತ್ತರ ಕೊಡದೆ ಬರುತ್ತಿದ್ದರು. ದಿನಾ ಕುಡಿದು ಬಂದು ಬೀದಿಯಲ್ಲೇ ಜಗಳ, ಸಾಲ ಬಾಕಿ ಇದೆ ಎಂದು ಕೇಳಿದರೆ ರಸ್ತೆಯಲ್ಲಿ ನಿಂತು ಬೈಗುಳ, ಅವರು ಬೈಯ್ಯುತ್ತಾರೆಂದು ಹೊಡೆಯಲು ಹೋದರೆ ಪೋಲಿಸರಿಗೆ ದೂರು. ಅವರದ್ದೇ ತಪ್ಪಿದ್ದರೂ ಪೋಲೀಸರು ನಮಗೆ ಬುದ್ದಿವಾದ ಹೇಳುತ್ತಾರೆ. ಇದನ್ನೆಲ್ಲಾ ನೋಡಿದರೆ ನಮ್ಮ ತಂದೆ ಮೇಟಿಗಳ ವಿರುದ್ದ ಹೋರಾಡಿದ್ದೇ ತಪ್ಪು ಎಂದು ಅನ್ನಿಸುತ್ತದೆ, ಅಂದ.[4] ಇದೇ ಅಭಿಪ್ರಾಯ ಬೇರೆ ಬೇರೆ ರೂಪದಲ್ಲಿ ಮೇಲು ಜಾತಿಗೆ ಸೇರಿದ ಇತರರಿಂದಲೂ ಬಂದಿದೆ. ಸದಸ್ಯರು ಯೋಗ್ಯರಲ್ಲ, ಅವರಿಗೆ ಶಿಕ್ಷಣವಿಲ್ಲ. ದಿನಾ ಕುಡಿದು ಗಲಾಟೆ ಮಾಡುವ ಇವರು ಹೇಗೆ ಹಳ್ಳಿಯನ್ನು ಸುಧಾರಿಸಲು ಸಾಧ್ಯ? ಹಳ್ಳಿಯ ಅಭಿವೃದ್ದಿಗೆ ಬಂದ ಹಣವನ್ನು ತಮ್ಮ ತಮ್ಮಲ್ಲೇ ಹಂಚಿಕೊಂಡರೆ ಊರು? ಉದ್ಧಾರವಾಗುವುದಾದರೂ ಹೇಗೆ? ಹೀಗೆ ಈಗಿನ ಪಂಚಾಯತ್ ಸದಸ್ಯರ ಆಯೋಗ್ಯತೆ, ಅವ್ಯವಹಾರಗಳ ದೊಡ್ಡ ಪಟ್ಟಿಯನ್ನೇ ಮೇಲು ಜಾತಿಯವರು ಕೊಡುತ್ತಾರೆ. ಹಿಂದೆ ಕುಡಿತವಿರಲಿಲ್ಲ. ಪಂಚಾಯತ್‌ಗೆ ಸರಕಾರದಿಂದ ಹಣವೆ ಇರಲಿಲ್ಲ. ಹಾಗಾಗಿ ಸಾರ್ವಜನಿಕ ಹಣವನ್ನು ಪೋಲು ಮಾಡುವ ಪ್ರಶ್ನೆಯೇ ಇರಲಿಲ್ಲ. ಇಲೆಕ್ಷನ್‌ಗೆ ಮೊದಲು ಮತ್ತು ನಂತರ ಊರಿನ ಕೆಲಸಕ್ಕೆ ಅಭ್ಯರ್ಥಿ ತನ್ನ ಜೇಬಿನಿಂದ ಖರ್ಚು ಮಾಡಬೇಕಿತ್ತು. ಈಗಿನಂತೆ ಆಗ ಪಾರ್ಟಿ ಫಂಡ್ ಇರಲಿಲ್ಲ. ಹೀಗೆ ಹಿಂದಿನ ಪಂಚಾಯತ್ ವ್ಯವಸ್ಥೆ ಕುರಿತು ಸಮಾಧಾನದ ಮಾತುಗಳು ಬರುತ್ತವೆ.

ಇನ್ನು ಕೆಳಜಾತಿಯವರಲ್ಲಿ-ಕುರುಬರು, ನಾಯಕರು, ಉಪ್ಪಾರರು ಮತ್ತು ಇತರರು-ಹಿಂದಿನ ಮತ್ತು ಈಗಿನ ವ್ಯವಸ್ಥೆಯ ಬಗೆಗೆ ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಹಿಂದೆ ಒಳ್ಳೆದಿತ್ತು. ಅಂದರೆ ಇನ್ನು ಕೆಲವರು ಈಗಿನ ವ್ಯವಸ್ಥೆ ಪರವಾಗಿಲ್ಲ. ಆದರೆ ಚುನಾಯಿತ ಪ್ರತಿನಿಧಿಗಳು ಯೋಗ್ಯರಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಹಿಂದಿನ ವ್ಯವಸ್ಥೆಯನ್ನು ಹಳ್ಳಿಯ ಪ್ರತಿಯೊಬ್ಬರು ದೂರುತ್ತಾರೆ ಮತ್ತು ಈಗಿನದನ್ನು ಪ್ರತಿಯೊಬ್ಬರು ಮೆಚ್ಚುತ್ತಾರೆ ಎನ್ನಲಾಗುವುದಿಲ್ಲ. ಜಾತಿ ಅಥವಾ ವರ್ಗ ಕಾರಣಕ್ಕಾಗಿ ಎರಡರಲ್ಲೂ ಕೆಲ ಒಳ್ಳೆಯ ಅಂಶಗಳನ್ನು ಗುರುತಿಸಿ ಮೆಚ್ಚುವ ಜನರಿದ್ದಾರೆ. ಹೊಸತಾಗಿ ಬಂದ ವ್ಯವಸ್ಥೆ ಮತ್ತು ಅದರಲ್ಲಿ ಅಧಿಕಾರ ಹಿಡಿಯುವ ಸದಸ್ಯರ ನಡವಳಿಕೆ ಮತ್ತು ಅವರು ಸಂಸ್ಥೆಯನ್ನು ಬಳಸಿಕೊಂಡ  ಕ್ರಮ ಕೂಡಾ ಕೆಲವರನ್ನು ಹಿಂದಿನದ್ದೇ ಒಳ್ಳೆಯದಿತ್ತು ಎನ್ನುವಂತೆ ಮಾಡಿರಬಹುದು. ಹೀಗೆ ಸಾಂಪ್ರದಾಯಿಕ ಯಜಮಾನಿಕ ತನ್ನ ವರ್ಚಸ್ಸನ್ನು ಸಂಪೂರ್ಣ ಕಳಕೊಂಡಿಲ್ಲ. ಹಲವಾರು ಪ್ರಮುಖ ವಿಚಾರಗಳ ತೀರ್ಮಾನದಲ್ಲಿ ಹಿಂದಿನ ನಾಯಕರ ಪ್ರಭಾವ ತುಂಬಾ ಇದೆ.

ಮೇಲಿನ ವಿವರಣೆಗಳಿಂದ ಮೇಲು ಜಾತಿಯವರೆಲ್ಲಾ ಒಟ್ಟಾಗಿ ಅಥವಾ ಅವರಲ್ಲಿ ಯಜಮಾನಿಕ ನಡೆಸುತ್ತಿದ್ದ ಕುಟುಂಬಗಳು ಒಂದು ಸಿಂಡಿಕೇಟ್ ಮಾಡಿಕೊಂಡು ಇಡೀ ರಾಜಕೀಯವನ್ನು ನಿರ್ಣಯಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಕಲ್ಪನೆ ಬರಬಹುದು ಆದರೆ ಆ ರೀತಿ ಇಲ್ಲ. ಮೇಲು ಜಾತಿಯವರು ಜಾತಿ ನೆಲೆಯಲ್ಲಿ ಸಿಂಡಿಕೇಟ್ ಹೊಂದಿಲ್ಲ. ಅವರುಗಳು ಈಗಿನ ರಾಜಕೀಯದಲ್ಲಿ ನೇರವಾಗಿ ಪಾಲುಗೊಳ್ಳಲು ಆಸಕ್ತಿನೂ ತೋರಿಸುತ್ತಿಲ್ಲ. ಭಾರತದ ಇತರ ಕಡೆಗಳಲ್ಲಿ ಕೂಡ ಮೇಲು ಜಾತಿಯವರು ಸ್ಥಳೀಯ ರಾಜಕಾರಣದಿಂದ ದೂರ ಸರಿದ ಉದಾಹರಣೆಗಳಿವೆ. ಅದಕ್ಕೆ ಎರಡು ಕಾರಣಗಳನ್ನು ಗುರುತಿಸಿದ್ದಾರೆ. ಒಂದು, ಕೆಳ ಜಾತಿ ಜನರು ರಾಜಕೀಯ ಕ್ಷೇತ್ರವನ್ನು ಆಕ್ರಮಿಸಿದ್ದು. ಮೇಲು ಜಾತಿಯವರು ಇತರ ಕ್ಷೇತ್ರಗಳತ್ತ ಮುಖ್ಯವಾಗಿ ಆಧುನಿಕ ಕೃಷಿ ವ್ಯಾಪಾರ, ಉದ್ಯಮ, ಉದ್ಯೋಗ ಇತ್ಯಾದಿಗಳ ಕಡೆ ಗಮನಹರಿಸಿದ್ದು ಎರಡನೇ ಕಾರಣ.[5] ಇಲ್ಲೂ ಮೇಲು ಜಾತಿಯವರು ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಹಿಂದೆ ವಿವರಿಸಿದಂತೆ ಕೆಳಜಾತಿಯವರು ಹೆಚ್ಚು ಸಂಖ್ಯೆಯಲ್ಲಿ ಸ್ಥಳೀಯ ರಾಜಕೀಯದಲ್ಲಿ ಪಾಲುಗೊಳ್ಳುತ್ತಿರುವುದು ಮುಖ್ಯ ಕಾರಣ. ಆದರೆ ಇಲ್ಲಿನ ಮೇಲು ಜಾತಿಯವರು ಹೆಚ್ಚು ಪ್ರಮಾಣದಲ್ಲಿ ಆಧುನಿಕ ಕ್ಷೇತ್ರಗಳಲ್ಲಿ ಸ್ಥಾನ ಪಡೆದಿಲ್ಲ. ದೊಡ್ಡ ಮಟ್ಟಿನ ವ್ಯಾಪಾರ ಉದ್ಯಮ ಆರಂಭಿಸಿದವರು ಇವರಲ್ಲಿ ತುಂಬಾ ಕಡಿಮೆ. ಉನ್ನತ ಶಿಕ್ಷಣ ಒಡೆದು ದೊಡ್ಡ ಹುದ್ದೆಗಳಲ್ಲಿ ಇವರು ಮೇಲು ಜಾತಿಯವರೂ ಇಲ್ಲ. ಪಂಚಾಯತ್ ಕಾರ್ಯದರ್ಶಿ, ಸಣ್ಣ ಮಟ್ಟಿನ ತಾಂತ್ರಿಕ ಹುದ್ದೆಗಳು, ಎರಡನೇ ದರ್ಜೆ ಗುಮಾಸ್ತ, ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ, ಲಾರಿ ಚಾಲಕ ಅಥವಾ ನಿರ್ವಾಹಕ ಇತ್ಯಾದಿ ಹುದ್ದೆಗಳಲ್ಲಿ ಮಾತ್ರ ಇದ್ದಾರೆ.ಅವರಲ್ಲೂ ಸ್ನಾತಕೋತ್ತರ ಪದವಿ ಪಡೆದ ಕೆಲವು ಯುವಕರಿದ್ದಾರೆ. ಕೆಲಸಸಿಗದೆ ಕೃಷಿಯ ಜತೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಊರಲ್ಲೇ ಇದ್ದಾರೆ. ಉಳಿದವರ ಸಾಧನೆ ಏನಿದ್ದರೂ ಕೃಷಿಯಲ್ಲಿ ಮಾತ್ರ. ಕೃಷಿಯಲ್ಲಿ ಕೂಡ ದೊಡ್ಡ ಮಟ್ಟಿನ ಕೃಷಿಕರೆಂದು ಬೆರಳೆಣಿಕೆಯಷ್ಟು ಮೇಲ್ ಜಾತಿಯವರನ್ನು ಗುರುತಿಸಬಹುದು. ಇವರು ಆಧುನಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಕ್ಕ ಮಟ್ಟಿಗೆ ಅನುಕೂಲಸ್ಥ ಕೃಷಿಕರೇ ಆಗಿದ್ದಾರೆ. ಉಳಿದವರು ಮಧ್ಯಮ ಮತ್ತು ಸಣ್ಣ ಮಟ್ಟಿನ ಕೃಷಿಕರು. ಈ ಎಲ್ಲಾ ಅಂಶಗಳು ಇಲ್ಲಿನ ಮೇಲು ಜಾತಿಯವರು ಸ್ಥಳೀಯ ರಾಜಕೀಯದಿಂದ ದೂರ ಇರಲು ಕೆಳ ಜಾತಿಯವರಿಗೆ ಹೆಚ್ಚು ಪ್ರಮಾಣದಲ್ಲಿ ಪಂಚಾಯತ್ ಸೀಟುಗಳನ್ನು ಕಾದಿರಿಸಿರುವದೇ ಕಾರಣ ಆಗಿದೆ ಎನ್ನುವ ಹಿಂದಿನ ತೀರ್ಮಾನವನ್ನು ಗಟ್ಟಿ ಮಾಡುತ್ತವೆ.

ಮೇಲು ಜಾತಿಯವರು ಸಂಘಟಿತರಾಗಿ ತಮ್ಮ ಯಜಮಾನಿಕೆಯನ್ನು ಮುಂದುವರಿಸಲು ಪ್ರಯತ್ನಿಸದಿದ್ದರೂ ಕೆಳ ಜಾತಿಯವರಿಗೆ ಯಾಕೆ ತಮ್ಮ ವರ್ಗದ ಹಿತಾಸಕ್ತಿಗಳಿಗೆ ಪೂರಕವಾಗಿ ಪಂಚಾಯತ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಶ್ನೆ ಇತರ ಹಲವು ಪ್ರಶ್ನೆಗಳಿಗೆ ಎಡೆಮಾಡುತ್ತದೆ. ಒಂದು, ಜಾತಿಯನ್ನು ವರ್ಗಕ್ಕೆ ಸಮೀಕರಿಸಬಹುದೇ? ಎರಡು,ಯವುದೋ ಒಂದು ಜಾತಿ/ವರ್ಗಕ್ಕೆ ಸೇರಿದ ಕೂಡಲೇ ಜಾತಿ/ವರ್ಗ ಪ್ರಜ್ಞೆ ಇರಬೇಕೆ? ಕೆಳ ಜಾತಿಗೆ ಸೇರಿದ ನವೆಲ್ಲಾ ಒಂದೇ ಎನ್ನುವ ಕಲ್ಪನೆ ಬಂದ ನಂತರವೇ ಕೆಳಜಾತಿಯವರು ಹಿತಾಸಕ್ತಿಗೆ ಪೂರಕವಾಗಿ ಪಂಚಾಯತ್‌ನ್ನು ಬಳಸುವ. ಪ್ರಶ್ನೆ ಮೊದಲಿಗೆ ನಾವು ಕೆಲ ಜಾತಿಯವರು ಎನ್ನುವ ಭಾವನೆ ಇದೆಯೇ ಎಂದು ನೋಡಬೇಕು, ನಂತರ ನಾವೆಲ್ಲಾ ಒಂದೇ ಎನ್ನುವ ಭಾವನೆ ಇದೆಯೇ? ಇಲ್ಲದಿದ್ದರೆ ಯಾಕಿಲ್ಲ? ಎನ್ನುವ ವಿಶ್ಲೇಷಣೆ ಮಾಡಬೇಕಾಗಿದೆ. ಮೊದಲಿಗೆ ಸ್ಥಳೀಯ ಸಮಾಜದಲ್ಲಿ ಜಾತಿ ಜಾತಿ ನಡುವಿನ ಅಂತರ ಹೇಗಿದೆ ಮತ್ತು ಆ ನಂತರ ದಿನನಿತ್ಯದ ಜೀವನದಲ್ಲಿ ಹೇಗೆ ಅಭಿವ್ಯಕ್ತಿಗೊಳ್ಳುತ್ತದೆ ಎಂದು ನೋಡುವಾ. ಇದು ಜಾತಿ ಪ್ರಜ್ಞೆಯನ್ನು ಜೀವಂತ ಇಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ತೊಲಗದ ಕೀಲುರಿಮೆ

ಊರೆಲ್ಲ ಸುತ್ತಾಡಿ ಸುಸ್ತಾದರೆ ವಿಶ್ರಾಂತಿಗಾಗಿ ಪಂಚಾಯತ್ ಕಚೇರಿಗೆ ಹೋಗುವುದು ನನಗೆ ರೂಢಿಯಾಗಿತ್ತೆಂದು ಹಿಂದಿನ ಅಧ್ಯಾಯದಲ್ಲಿ ತಿಳಿಸಿದ್ದೆ. ಪಂಚಾಯತ್ ಕಚೇರಿಯ ಹೊರಗಿನ ಕೋಣೆ ಒಂದು ವಿಧದಲ್ಲಿ ಪೇಪರ್ ಓದುವವರಿಗೆ ಮತ್ತು ಕೆಲಸವಿಲ್ಲದವರಿಗೆ ಹರಟೆ ಹೊಡಿಯುವವರಿಗೆ ಒಂದು ತಾಣ. ಆವತ್ತು ಕೂಡ ಕೆಲವು ಯುವಕರು ಮತ್ತು ಹರಿಜನ ಪ್ರತಿನಿಧಿ ಕರಿಸಿದ್ದನವರು ಹರಟೆ ಹೊಡಿಯುತ್ತಿದ್ದರು. ನಾನು ಕೋಣೆ ಪ್ರವೇಶಿಸಿದ ಕೂಡಲೇ ಕರಿಸಿದ್ದನವರು ತಾವು ಕುಳಿತ ಜಾಗದಿಂದ ಎದ್ದು ನಿಂತರು. ಆ ಯುವಕರ‍್ಯಾರು ಎದ್ದು ನಿಲ್ಲುವ ಗೋಜಿಗೆ ಹೋಗಿಲ್ಲ. ಅವರೆಲ್ಲಾ ಲಿಂಗಾಯತ ಮತ್ತು ಇತರ ಹಿಂದುಳಿದ ಜಾತಿಗೆ ಸೇರಿದ ಯುವಕರು. ಹರಿಜನರು ಈಗಲೂ ಸ್ಟೇಷನ್ ರಸ್ತೆಯಲ್ಲಿರುವ ಅಂಗಡಿ ಸುತ್ತ ಮುತ್ತ ಅದರ ಆಚೆಗಿರುವ ಕುರುಬರ ಹೋಟೇಲುಗಳಿಗೆ ಸೀಮಿತವಾಗಿದೆ. ಹಾಗಿರುವಾಗ ಕೇರಿಯ ಮತ್ತೊಂದು ತುದಿಯಲ್ಲಿರುವ ಗ್ರಾಮ ಪಂಚಾಯತ್ ಕಚೇರಿಗೆ ಅನಗತ್ಯವಾಗಿ ಬರುವ ವಿಚಾರವೇ ಇಲ್ಲ. ಕರಿಸಿದ್ದ ಪಂಚಾಯತ್ ಪ್ರತಿನಿಧಿ ಯಾಗಿರುವುದರಿಂದ ಗ್ರಾಮ ಪಂಚಾಯತ್ ಕಚೇರಿಗೆ ಬೇಕೆಂದಾಗ ನುಗ್ಗುವ ಮತ್ತು ಹರಟುವ ಸಲಿಗೆ ಇಟ್ಟುಕೊಂಡಿದ್ದಾರೆ. ಇಷ್ಟಾದರೂ ಅಂತರ್ಗತವಾಗಿರುವ ಶತಮಾನಗಳ ಕೀಳರಿಮೆಯನ್ನು ಅವರಿಗೂ ದೂರ ಮಾಡಲು ಸಾಧ್ಯವಾಗಲಿಲ್ಲ. ನನ್ನಂಥವನ ಪ್ರವೇಶ ಕೂಡಾ ಅವರ ಸದಸ್ಯತ್ವದ ಗತ್ತನ್ನು ಮರೆತು ಕುರ್ಚಿಯಿಂದ ಎದ್ದು ನಿಲ್ಲುವಂತೆ ಮಾಡಿದೆ. ಹರಿಜನರೆಲ್ಲಾ ಇದೇ ರೀತಿ ವರ್ತಿಸುತ್ತಾರೆ ಎನ್ನುವ ತೀರ್ಮಾನ ಇದಲ್ಲ. ಆದರೆ ಅವರಲ್ಲಿ ಅಂತರ್ಗತವಾಗಿರುವ ಕೀಳರಿಮೆ ಆಧುನಿಕ ಹುದ್ದೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ದೊಡ್ಡ ತೊಡಕಾಗಿರಬಹುದು. ಅದನ್ನು ಜೀವಂತವಾಗಿ ಇಡುವಲ್ಲಿ ಇಂದಿಗೂ ಜೀವಂತವಾಗಿರುವ ಹಳ್ಳಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕೇ ಕಾರಣ. ಇಲ್ಲಿ ಕೆಲವೊಂದು ಸಣ್ಣ ಪುಟ್ಟ ವಿಚಾರಗಳನ್ನು ವಿವರಿಸಿ, ಮುಂದಿನ ಪುಟಗಳಲ್ಲಿ ಅಧಿಕಾರದ ವಿಕೇಂದ್ರೀಕರಣಕ್ಕೆ ತೊಡಕಾಗಿರುವ ಹಳ್ಳಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಪರಿಶಿಲಿಸುವಾ.

೨೦೦೦ದ ಏಪ್ರಿಲ್ ತಿಂಗಳಲ್ಲಿ ಹೊಸ ಪಂಚಾಯತ್ ಸಂಘಟಿತವಾಯಿತು. ಅದರ ಪ್ರಥಮ ಮೀಟಿಂಗಿಗೆ ನನ್ನನ್ನು ಅಹ್ವಾನಿಸಿದರು. ಗ್ರಾಮ ಪಂಚಾಯತ್ ಮೀಟಿಂಗ್ ಗಮನಿಸಲು ಹಿಂದಿನ ಕಮಿಟಿ ಇರುವಾಗ ಸಾಧ್ಯವಾಗಲಿಲ್ಲ. ಅದಾಗಿಯೇ ಬಂದ ಈ ಅವಕಾಶವನ್ನು ಬಿಡಬಾರದೆಂದು ಮೀಟಿಂಗಿಗೆ ಬರಲು ಒಪ್ಪಿದೆ.

ನೋಟೀಸಿನಲ್ಲಿ ಸಭೆ ೧೧ ಗಂಟೆಗೆ ಎಂದಿದೆ; ಆದರೆ ಅದು ಯಾವತ್ತೂ ಸಮಯಕ್ಕ ಸರಿಯಾಗಿ ಆಗುವುದೇ ಇಲ್ಲ. ಅರ್ಧ ಅಥವಾ ಒಂದು ಗಂಟೆ ತಡವಾಗುವುದು ಇಲ್ಲಿ ಸಾಮಾನ್ಯ. ನೀವು ಬೇಗ ಬಂದು ಇಲ್ಲಿ ಕಾಯುವ ಬದಲು ೧೧.೩೦ಗೆ ಬಂದರೆ ಸಾಕು ಎಂದು ಸಭೆಯ ಆಹ್ವಾನ ಪತ್ರ ಕೊಟ್ಟರು. ಅದರಂತೆ ನಾನು ನಿಧಾನವಾಗಿ ೧೧.೧೫ಕ್ಕೆ ಗ್ರಾಮ ಪಂಚಾಯತ್ ಕಚೇರಿಗೆ ತಲುಪಿದೆ. ನನ್ನನ್ನು ಕಾಯುತ್ತಾ ನನ್ನ ವಿದ್ಯಾರ್ಥಿ ಮತ್ತು ಆತನ ಕೆಲವು ಸಂಗಡಿಗರು ಗೇಟ್ ಬಳಿಯೇ ಇದ್ದರು. ಯಾವಾಗಲೂ ಸಮಯಕ್ಕೆ ಸರಿಯಾಗಿ ಸಭೆ ನಡೆಯುವುದಿಲ್ಲ. ಆದರೆ ಇವತ್ತು ಕರಕ್ಟ್ ೧೧ ಗಂಟೆಗೆ ಸಭೆ ಆರಂಬವಾಗಿದೆ ಸಾರ್ ಎಂದು ನನ್ನನ್ನು ಮೀಟಿಂಗ್ ನಡೆಯುವ ಹಾಲಿಗೆ ಒಯ್ದರು. ಅಲ್ಲಿ ಸದಸ್ಯರು ಬಿಟ್ಟರೆ ಉಳಿದವರಿಗೆ ಅನುಮತಿ ಇಲ್ಲ. ನಾನು ಆಹ್ವಾನಿತ ಆದರೆ ತಡವಾಗಿದೆ, ಸಭೆ ನಡೆದಿದೆ. ಸದಸ್ಯರು ಕುಳಿತು ಕೊನೆಯ ಸಾಲಿನಲ್ಲಿ ಒಂದು ಕುರ್ಚಿ ಹಾಕಿ ಕೊಟ್ಟರು. ತಮ್ಮ ಮೊದಲ ಮೀಟಿಂಗಿಗೆ ಬಂದು ಸಲಹೆ ಸೂಚನೆ ಕೂಡಿ ಎಂದು ಕರೆದ ಅಧ್ಯಕ್ಷರಾಗಲೀ ಅಥವಾ ಕಾರ್ಯದರ್ಶಿಯಾಗಲೀ ನನ್ನನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ. ಸುಮರು ೧೫ ನಿಮಿಷ ಕುಳಿತು ಅಲ್ಲಿಂದ ಹೊರ ಬಂದೆ.

ಹೊರಗೇ ನನ್ನ ವಿದ್ಯಾರ್ಥಿ ಮತ್ತು ಆತನ ಸಂಗಡಿಗರಿದ್ದರು. ಇದೇನಯ್ಯ ಹೀಗಾಗಿದೆ? ಎಂದೆ. ಇವೆಲ್ಲಾ ಕಾರ್ಯದರ್ಶಿಯ ಕಿತಾಪತಿ ಸಾರ್. ಗ್ರಾಮ ಪಂಚಾಯತ್ ನಡವಳಿಕೆ ಆತನಿಗೆ ಗೊತ್ತಿರುವಷ್ಟು, ಸದಸ್ಯರಾರಿಗೂ ಗೊತ್ತಿಲ್ಲ. ನೀವು ಅಲ್ಲಿದ್ದರೆ ಆತನಿಗೆ ಕಿರಿಕಿರಿಯಾಗುತ್ತದೆ ಎಂದು ಈ ಬಾರಿ ಸಮಯಕ್ಕೆ ಸರಿಯಾಗಿ ಸಭೆ ಶುರುಮಾಡಿದ ಎಂದು ಅಲ್ಲಿದ್ದ ಕೆಲವು ಯುವಕರನ್ನು ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕಾರ್ಯದರ್ಶಿ ಇಷ್ಟು ಪ್ರಭಾವಶಾಲಿ ಇರಬಹುದೇ ಎಂಬ ಶಂಕೆ ಮೂಡಿತು. ಪರೀಕ್ಷಿಸುವ ಎಂದು ಪುನಃ ಮೀಟಿಂಗ್ ಹಾಲಿಗೆ ಹೋದೆ. ಸದಸ್ಯರು ಊರು ಸಮಸ್ಯೆ ಹೇಳುವುದು ಅದಕ್ಕೆ ಕಾರ್ಯದರ್ಶಿಯವರೇ ಪರಿಯಾರ ಸೂಚಿಸುವುದು ನಡಿಯುತ್ತಿತ್ತು. ಇಡೀ ಸಭೆಯಲ್ಲಿ ಸದಸ್ಯರು ಶೇಕಡಾ ೨೫ರಷ್ಟು ಮಾತನಾಡಿದರೆ ಶೇಕಡಾ ೭೫ರಷ್ಟು ಸಮಯ ಕಾರ್ಯದರ್ಶಿಯವರೇ ಮಾತನಾಡುತ್ತಿದ್ದರು ಅವರನ್ನು ಪ್ರಶ್ನಿಸಿದವರೆಂದರೆ ತಾಲ್ಲೂಕು ಪಂಚಾಯತ್ ಸದಸ್ಯ ಶಿವಶಂಕರಪ್ಪನವರು ಮಾತ್ರ.[6] ನೀರು ಗಂಟೆ ಮತ್ತು ಬಿಲ್ಲ್ ಕಲೆಕ್ಟರ್‌ಗಳ ಸಂಬಳ ಕುರಿತು ಚರ್ಚೆ ನಡಿಯುತ್ತಿತ್ತು. ಆ ಸಂದರ್ಭದಲ್ಲಿ ನೀರುಗಂಟಿಗಳು ಎಷ್ಟು ಜನ ಇದ್ದಾರೆ? ಎಂದು ಶಿವಶಂಕರಪ್ಪನವರು ಕಾರ್ಯದರ್ಶಿಯವರನ್ನು ಪ್ರಸ್ನಿಸಿದರು. ಹನುಮಂತ ಒಬ್ಬರೇ ಎಂದರು ಕಾರ್ಯದರ್ಶಿಗಳು. ಹಾಗಿದ್ದರೆ, ಅಲ್ಲೆ ಹಾಜರಿದ್ದ ಶಂಕರಪ್ಪನವರನ್ನು ತೋರಿಸಿ ಈತನ ಕೆಲಸವೇನು? ಎಂದರು.

ಕಳೆದ ಕೆಲವು ತಿಂಗಳು ಹಲವಾರು ಬಾರಿ ಪಂಪ್ ಕೆಟ್ಟು ಕೆಲಸ ಹೆಚ್ಚಿತ್ತು. ಆವಾಗ ಇವನನ್ನು ದಿನಗೂಲಿಗೆ ನೇಮಿಸಿಕೊಂಡಿದ್ದೇನೆ ಎಂದು ಕಾರ್ಯದರ್ಶಿಗಳ ಉತ್ತರ. ನಿಮ್ಮ ಉತ್ತರ ಸರಿಯಲ್ಲ. ಕೆಲಸ ಹೆಚ್ಚಾಗಿದೆ ಎಂದು ನೇಮಕ ಮಾಡಿದ್ದಲ್ಲ. ಹನುಮಂತಪ್ಪ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದು ಶಂಕರಪ್ಪನನ್ನು ನೇಮಕ ಮಾಡಿದ್ದೀರಿ. ಹೀಗಿರುವಾಗ ಪುನಃ ದಾಖಲೆಯಲ್ಲಿ ಕೆಲಸ ಮಾಡದ ಹನುಮಂತಪ್ಪನನ್ನು ಖಾಯಂ ನೌಕರ ಎಂದು ಇಟ್ಟುಕೊಂಡು ಕೆಲಸ ಮಾಡುವ ಶಂಕರಪ್ಪನನ್ನು ದಿನಕೂಲಿಯಾಗಿ ಇಡುವುದು ಸರಿಯಲ್ಲ ಎಂದರು. ಆವಾಗ ಮತ್ತೊಬ್ಬ ಸದಸ್ಯರು ಇಬ್ಬರನ್ನೂ ಇಟ್ಟಿಕೊಳೋಣ ಎಂದರು. ಒಬ್ಬರಿಗೇ ಸಂಬಳ ಕೊಡಲು ನಾವು ಒದ್ದಾಡುವುದು ನೋಡಿದರೆ ಇಬ್ಬರನ್ನು ಇಟ್ಟುಕೊಳ್ಳುವ ಪ್ರಶ್ನೆ ಎಲ್ಲಿದೆ ಎಂದು ಮತ್ತೊಬ್ಬ ಸದಸ್ಯರು ಪ್ರಶ್ನಿಸಿದರು. ಹೀಗೆ ವಾದ ವಿವಾದಗಳು ಬೆಳೆಯುತ್ತಲೇ ಇತ್ತು. ಈ ಸಭೆಯಲ್ಲಿ ಇದು ತೀರ್ಮಾನವಾಗುವುದು ಕಷ್ಟವೆಂದು ನೀರುಗಂಟಿಯ ವಿಚಾರ ಚರ್ಚಿಸಲು ಮತ್ತೊಂದು ಮೀಟಿಂಗ್ ಕರೆಯುವುದೆಂದು ತೀರ್ಮಾನವಾಯಿತು.

ಈ ಘಟನೆಯನ್ನ ಸೂಕ್ಷ್ಮವಾಗಿ ಅವಲೋಕಿಸಿದರೆ ಹಲವಾರು ವಿಚಾರಗಳು ತಿಳಿಯುತ್ತವೆ. ಇಡೀ ಸಭೆಯ ನಡವಳಿಕೆಯಲ್ಲಿ ಕಾರ್ಯದರ್ಶಿಯವರ ಪ್ರಭಾವ ತುಂಬಾ ಇದೆ. ಕಾರ್ಯರ್ಶಿಯವರನ್ನು ಪರಿಣಾಮಕಾರಿಯಾಗಿ ಪ್ರಶ್ನಿಸಿದವರೆಂದರೆ ಶಿವಶಂಪ್ರಪ್ಪನವರು ಮಾತ್ರ. ಉಳಿದ ಎಲ್ಲಾ ಸದಸ್ಯರು ತೇಪೆ ಹಚ್ಚುವ ಕೆಲವು ಅಭಿಪ್ರಾಯಗಳನ್ನು ನೀಡಿದ್ದಾರೆ ಹೊರತು ಕಾರ್ಯದರ್ಶಿಯವರು ನೀಡುವ ಚಿತ್ರಣವನ್ನು ಬದಲಾಯಿಸುವಂತೆ ವಾದಿಸುತ್ತಿಲ್ಲ. ಮಹಿಳಾ ಸದಸ್ಯರಂತೂ ಹಿಂದಿನ ಬಾರಿಯಂತೆ ಐವತ್ತು ದಾಟಿದವರೇ ಇದ್ದಾರೆ. ಜತೆಗೆ ಒಂದೂವರೆ  ಗಂಟೆ ಅವಧಿಯಲ್ಲಿ ಅವರಲ್ಲಿ ಯಾರೊಬ್ಬರು ಒಂದು ಮಾತೂ ಆಡಿಲ್ಲ.

ಇವೆಲ್ಲಾ ಯಾವುದರತ್ತ ಬೆಟ್ಟುಮಾಡಿ ತೋರಿಸುತ್ತವೆ? ಕಾರ್ಯದರ್ಶಿಯವರನ್ನು ಖಳನಾಯಕನಾಗಿ ಚಿತ್ರಿಸುವ ಉದ್ದೇಶವಲ್ಲ ಇದು. ಆದರೆ ಆತ ಪ್ರತಿನಿಧಿಗಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವುದಂತೂ ಸತ್ಯ. ಕಾನೂನು ಪ್ರಕಾರ ಆತ ಮಾಡುವುದು ತಪ್ಪಲ್ಲದಿರಬಹುದು. ಸಂಸ್ಥೆಯ ಇತಿಮಿತಿಗಳನ್ನು ವಿವರಿಸುತ್ತಿದ್ದಾನೆ; ಯಾವುದು ಸಾಧ್ಯ ಯಾವುದು ಅಸಾಧ್ಯ ಎಂದು ತಾಂತ್ರಿಕ ಮಾಹಿತಿ ನೀಡುತ್ತಿದ್ದಾನೆ. ಆತ ಮನಸ್ಸು ಮಾಡಿದರೆ ತಾಂತ್ರಿಕ ಇತಿಮಿತಿಯೊಳಗೂ ಕೆಲವು ದಾರಿಗಳನ್ನು ತೋರಿಸಬಹುದು. ಹಾಗೆ ಮಾಡಿದರೆ ಸಂಸ್ಥೆಯನ್ನು ತಳಮಟ್ಟಕ್ಕೆ ಕೊಂಡೊಯ್ಯವ ಸಾಧ್ಯತೆಗಳೂ ಇವೆ. ಇನ್ನು ಅಲ್ಲಿ ಹಾಜರಿದ್ದ ಸದಸ್ಯರ ಭಾಗವಹಿಸುವಿಕೆಯನ್ನು ನೋಡಿದರೆ ಕೆಲವೊಂದು ವಿಚಾರಗಳು ತಿಳಿಯಾಗಬಹುದು. ಶಿವಶಂಕರಪ್ಪ ಆದಿಯಿಂದಲೇ ಯಜಮಾನಿಕೆಯ ಕುಂಟುಬಕ್ಕೆ ಸೇರಿದಾತ. ಜತೆಗೆ ತಾಲೂಕು ಪಂಚಾಯತ್ ಸದಸ್ಯ. ಈ ಎರಡೂ ಸ್ಥಾನ ಮತ್ತು ಅದಕ್ಕೆ ಪೂರಕವಾದ ಆತ್ಮ ವಿಶ್ವಾಸದೊಂದಿಗೆ ಪರಿಣಾಮಕಾರಿಯಾಗಿ ಮಧ್ಯೆ ಪ್ರವೇಶ ಮಾಡಿದ. ಆದರೆ ಪೂರಕವಾದ ಆತ್ಮ ವಿಶ್ವಾಸದೊಂದಿಗೆ ಪರಿಣಾಮಕಾರಿಯಾಗಿ ಮಧ್ಯೆ ಪ್ರವೇಶ ಮಾಡಿದ. ಆದರೆ ಉಳಿದವರು ಅಧ್ಯಕ್ಷರನ್ನು ಸೇರಿಸಿ ಕಾರ್ಯದರ್ಶಿಯವರು ಕೊಡಮಾಡಿದ ಇತಿಮಿತಿಗಳನ್ನು ಮೀರಿ ಚರ್ಚಿಸಲು ಸಾಧ್ಯವಾಗಲಿಲ್ಲ. ಅವರನ್ನು ಚರ್ಚಿಸಬೇಡಿ ಎಂದು ಯಾರೂ ತಾಕೀತು ಮಾಡಿಲ್ಲ. ಆದರೂ ಸದಸ್ಯರಿಗೆ ಕಾರ್ಯದರ್ಶಿ ಕೊಡಮಾಡಿದ ಚೌಕಟ್ಟನ್ನು ಮೀರಿ ಚರ್ಚಿಸಲು ಸಾಧ್ಯವಾಗಲಿಲ್ಲ. ಪುನಃ ಇದನ್ನು ತರಬೇತಿಯಿಂದ ಪರಿಹರಿಸ ಬಹುದೆಂದು ಸಲಹೆ ಕೊಡಬಹುದು. ಹಳ್ಳಿಯ ಕೆಲವು ಸದಸ್ಯರ ಪಂಚಾಯತ್ ಸಂಸ್ಥೆಯ ವ್ಯವಹಾರಗಳ ಕುರಿತ ತರಬೇತಿಗೆ ಹಾಜರಾಗಿದ್ದಾರೆ ಕೂಡ. ಆದರೆ ಆ ತರಬೇತು ಇವರ ಅರಿವು ಮತ್ತು ಪಾಲುಗೊಳ್ಳುವಿಕೆಯನ್ನು ಸುಧಾರಿಸಿದೆ ಎನ್ನಲಾಗುವುದಿಲ್ಲ. ಇದರ ಅರ್ಥ ತರಬೇತು ನಿರರ್ಥಕ ಎಂದಲ್ಲ. ತರಬೇತು ಪಡೆದ ಸದಸ್ಯ ಖಂಡಿತವಾಗಿಯೂ ಪಡೆಯದಿರುವ ಸದಸ್ಯರಿಗಿಂತ ಹೆಚ್ಚು ಅಂಶಗಳನ್ನು ಕಲಿತಿರಬಹುದು. ಆ ತಿಳುವಳಿಕೆಯನ್ನು ತನ್ನ ಸದಸ್ಯತನದ ಜವಾಬ್ದಾರಿಯನ್ನು ಪೂರೈಸುವಾಗ ಬಳಸಲೂಬಹುದು. ಆದರೆ ಉಳಿದ ಸದಸ್ಯರು, ಕಾರ್ಯದರ್ಶಿ, ಹಳ್ಳಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾತಾವರಣ ಇತ್ಯಾದಿಗಳು ಹಿಂದಿನಂತೆ ಮುಂದುವರಿಯುತ್ತಿರುತ್ತವೆ. ಅವುಗಳಲ್ಲಿ ಪರಿವರ್ತನೆಗಳಿಲ್ಲದ ಕೇವಲ ಕೆಲವು ಸದಸ್ಯರನ್ನು ತರಬೇತುಗೊಳಿಸುವುದರಿಂದ ಪ್ರಯೋಜನವಿಲ್ಲ. ಗ್ರಾಮ ಪಂಚಾಯತ್ ತಳಮಟ್ಟದಲ್ಲಿ ಬೇರೂರಲು ಪೂರಕವಾಗುವ ಅಂಶಗಳ ಕುರಿತು ಬಂದ ಅಧ್ಯಯನಗಳು ಕೂಡ ಇದೇ ವಿಚಾರಗಳನ್ನು ದೃಡಪಡಿಸುತ್ತವೆ.[7] ವಿಕೇಂದ್ರೀಕರಣ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಕೆಳಜಾತಿವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯದೊಂದಿಗೆ ಗ್ರಾಮ ಪಂಚಾಯತ್ ಕಾರ್ಯ ನಿರ್ವಹಿಸುವ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲೂ ಪರಿವರ್ತನೆಗಳು ಅಗತ್ಯ. ದೇಶದ ವಿವಿಧ ಭಾಗಗಳಲ್ಲಿ ನಡೆದ ಅಧ್ಯಯನಗಳು ಗ್ರಾಮ ಪಂಚಾಯತ್ ಸಂಸ್ಥೆಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಈ ಕೆಳಗಿನ ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿವರ್ತನೆಗಳನ್ನು ಸೂಚಿಸಿವೆ.

೧. ವಿವಿಧ ಸಮುದಾಯಗಳು ಮತ್ತು ಸಮುದಾಯದೊಳಗಿನ ಕುಟುಂಬಗಳ ನಡುವಿನ ಆದಾಯ ಮತ್ತು ಸಂಪನ್ಮೂಲದ ಒಡೆನತದಲ್ಲಿ ದೊಡ್ಡ ಅಂತರವಿರಬಾರದು.

೨. ಆದಾಯ ಗಳಿಕೆಯ ಮೂಲಗಳು ಹೇರಳವಾಗಿರಬೇಕು. ಒಂದು ಕಸುಬು ಲಾಭದಾಯಕವಲ್ಲ ಎಂದಾಕ್ಷಣ ಬದಲಾಯಿಸಲು ಮತ್ತೊಂದು ಕಸುಬು ಇರಬೇಕು ಮತ್ತು ಬದಲಾಯಿಸುವ ಅವಕಾಶವೂ ಇರಬೇಕು.

೩. ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ಮತ್ತು ಮೌಲ್ಯಗಳಲ್ಲಿ ಮೂಲಭೂತ ಪರಿವರ್ತನೆಗಳಿರಬೇಕು. ಹೊಸ ವ್ಯವಸ್ಥೆ ಮತ್ತು ಅದರಲ್ಲಿ ಪಾಲುಗೊಳ್ಳುವವರನ್ನು ಗೌರವಿಸುವ ಮತ್ತು ಅವರ ಮೇಲೆ ಭರವಸೆ ಇಡುವ ಮೌಲ್ಯ ನಿರ್ಮಾಣವಾಗಬೇಕು.

೪. ಸಮಾನತೆ ಮತ್ತು ಧರ್ಮ ನಿರಪೇಕ್ಷತೆ ಮೌಲ್ಯಗಳನ್ನು ಬಿಂಬಿಸುವ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಬೇಕು.

ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಿ.ಕೆ.ಹಳ್ಳಿಯ ಆರ್ಥಿಕ, ಸಾಮಾಜಿ ಹಾಗೂ ಸಾಂಸ್ಕೃತಿಕ ಪರಿಸರವನ್ನು ಪುನರ್ ಪರಿಶೀಲಿಸಬಹುದು.

ಆರ್ಥಿಕ ಕ್ಷೇತ್ರ  

ಪಟ್ಟಾ ಭೂಮಿ ಹೊಂದಿರುವ ಒಟ್ಟು ಕಂಟುಂಬಗಳ ಸಂಖ್ಯೆ ೨೩೧, ವಿವಿಧ ಜಾತಿಗಳು ಮತ್ತು ಅವಿಗಳು ಹೊಂದಿರುವ ಪಟ್ಟಾ ಮತ್ತು ಒತ್ತುವರಿ ಭೂಮಿಯ ವಿವರವನ್ನು ಕೋಷ್ಠಕದಲ್ಲಿ ಕೊಟ್ಟಿದೆ. ಹರಿಜನರ ಮತ್ತು ವಡ್ಡರ ಒಟ್ಟು ಕುಟುಂಬಗಳು ೨೧೮.ಅದರಲ್ಲಿ ಪಟ್ಟಾ ಭೂಮಿ ಇರುವ ಕುಟುಂಬಗಳು ೫೭. ಪಟ್ಟಾ ಭೂಮಿಯೇ ಇಲ್ಲದ ೧೬೧ ಕುಟುಂಬಗಳಿವೆ. ಹರಿಜನರಲ್ಲಿ ೩೨ ಕುಟುಂಬಗಳಿಗೆ ಪಟ್ಟಾ ಭೂಮಿ ಇದ್ದರೆ ವಡ್ಡರ ೨೫ ಕುಟುಂಬಗಳಿಗೆ ಪಟ್ಟಾ ಭೂಮಿ ಇದೆ. ಆದರೆ ಇವರು ಹೊಂದಿರುವ ಪ್ರಮಾಣ ಮಾತ್ರ ಅತ್ಯಲ್ಪ. ಒಟ್ಟು ೩೭ ಭೂ ಮಾಲಿಕ ಹರಿಜನರಲ್ಲಿ ೫ ಎಕ್ರೆಗಿಂತಲೂ ಕಡಿಮೆ ಭೂಮಿ ಇರುವ ಕುಟುಂಬಗಳು ೫ ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿವೆ. ನಾಯಕರ ಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಅವರ ಒಟ್ಟು ೧೪೮ ಕುಟುಂಬಗಳಲ್ಲಿ ೪೧ ಕುಟುಂಬಗಳಿಗೆ ಪಟ್ಟಾ ಭೂಮಿ ಇದೆಯಾದರೂ ಅದರಲ್ಲಿ ೩೩ ಕುಟುಂಬಗಳು ೫ ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿವೆ. ಹರಿಜನರು. ವಡ್ಡರು ಮತ್ತು ನಾಯಕರ ಸ್ಥಿತಿಗೆ ಹೋಲಿಸಿದರೆ ಲಿಂಗಾಯತರ ಮತ್ತು ಕುರುಬರ ಸ್ಥತಿ ಉತ್ತಮವಿದೆ. ಲಿಂಗಾಯಿತರ ಒಟ್ಟು ೧೧೫ ಕುಟುಂಬಗಳಲ್ಲಿ ೫೫ ಕುಟುಂಬಗಳು ಪಟ್ಟಾ ಭೂಮಿ ಹೊಂದಿವೆ; ೨೯ ಕುಟುಂಬಗಳು ೫ ಎಕ್ರೆಗಿಂತ ಹೆಚ್ಚು ಭೂಮಿ ಹೊಂದಿವೆ. ಕುರುಬರ ೬೬ ಕುಟುಂಬಗಳಲ್ಲಿ ೩೦ ಕುಟುಂಬಗಳ ಪಟ್ಟ ಭೂಮಿ ಹೊಂದಿವೆ. ಆದರೆ ೫ ಎಕರೆಗಿಂತ ಹೆಚ್ಚು ಭೂಮಿ ಇರುವ ಕುರುಬರ ಕುಟುಂಬಗಳ ಸಂಖ್ಯೆ ಕೇವಲ ೮ (ಕೋಷ್ಠಕ-೧೯).

ನೀರಾವರಿಯೆ ಇಲ್ಲದ ಪ್ರದೇಶದಲ್ಲಿ ಸಂಪನ್ಮೂಲ ಒಡೆತನದ ವಿಶ್ಲೇಷಣೆಯಲ್ಲಿ ಭೂ ಹಿಡುವಳಿ ಮುಖ್ಯ ಅಂಶವೆ? ಮುಖ್ಯ ಅಂಶವೇ. ಟಿ.ಬಿ. ಡ್ಯಾಮ್‌ನ ನೀರು ಇಲ್ಲಿ ಬರುವುದಿಲ್ಲ ಎಂದಾಕ್ಷಣ ಇಲ್ಲ ಕೃಷಿಯೇ ಇಲ್ಲವೆಂದಲ್ಲ. ಡ್ಯಾಮ್ ಆಗುವ ಮುನ್ನವೂ ಕೃಷಿ ಇತ್ತು ಈಗಳು ಕೃಷಿ ಇದೆ. ಇತ್ತೀಚಿನ ವರ್ಷಗಳಲ್ಲಿ ಕೃತಕ ನೀರಾವರಿ ಆಧಾರಿತ (ಬೋರ್‌ವೆಲ್ ಆಧಾರಿತ) ಕೃಷಿ ಹೆಚ್ಚಾಗುತ್ತಿದೆ. ಈ ಕ್ರಮದಲ್ಲಿ ಕೃಷಿ ಮಾಡಬೇಕಾದರೆ ತಕ್ಕಮಟ್ಟಿನ ಬಂಡವಾಳದ ಅವಶ್ಯಕತೆ ಇದೆ. ಸ್ವಂತ ಶೇಖರಣೆ ಅಥವಾ ಹಿರಿಯರು ಕೂಡಿಟ್ಟ, ಹಣ ಇಲ್ಲದಿದ್ದರೆ ವಾಣಿಜ್ಯ ಅಥವಾ ಭೂ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡಿಯುವಷ್ಟು  ಶಕ್ತಿಯಿರಬೇಕು. ಎಷ್ಟೋ ಸಂದರ್ಭದಲ್ಲಿ ಈ ಬ್ಯಾಂಕ್ ವ್ಯವಹಾರ ಹಸಿವಿಲ್ಲದವನಿಗೆ ಊಟಕ್ಕೆ ಒತ್ತಾಯ ಮಾಡುವ ಗಾದೆಯಂತಿದೆ. ಅನುಕೂಲಸ್ಥರಿಗೆ ಅವಶ್ಯಕತೆ ಇಲ್ಲದಿದ್ದರೂ ಸಾಲತಗೊಳ್ಳಿ ಎಂದು ಒತ್ತಾಯ ಮಾಡಿದರೆ ನಿಜವಾಗಿಯೂ ಅವಶ್ಯಕತೆ ಇರುವ ಆದರೆ ಸ್ಥತಿವಂತನಲ್ಲದವರಿಗೆ ಬೇಕೆಂದರೂ ಸಾಲ ಕೊಡಲು ಹಿಂಜರಿಯುವ ಬ್ಯಾಂಕ್‌ಗಳೇ ಹೆಚ್ಚು. ಹೀಗೆ ಅನುಕೂಲಸ್ಥರಾದರೆ ಅಥವಾ ಬ್ಯಾಂಕ್‌ಗಳಲ್ಲಿ ಪರಿಚಿತರಿದ್ದರೆ ಅಥವಾ ಬ್ಯಾಂಕುಗಳ ನಿರ್ದೇಶಕರು ಹತ್ತಿರದವರಾದರೆ ಸಾಲ ಸುಲಭ. ಮೇಟಿ ಕುಟುಂಬದವರೊಬ್ಬರು ಹೊಸಪೇಟೆ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರು. ಹೀಗಾಗಿ ಆ ಕುಟುಂಬದವರಿಗೆ ಮತ್ತು ಅವರಲ್ಲಿ ಒಳ್ಳೆಯ ಸಂಬಂಧ ಇಟ್ಟುಕೊಂಡ ಇತರರಿಗೂ ಭೂ ಅಭಿವೃದ್ಧಿ ಬ್ಯಾಂಕಿನ ಸಾಲ ಸ್ವಲ್ಪ ಸುಲಭವಾಗಿದೆ. ಇತರರಿಗೆ ಸಮಸ್ಯೆ ಇದೆ. ಇದನ್ನು ತಮ್ಮಪ್ಪನಾಡಿಗರು ಕರೆಂಟ್ ಕನೆಕ್ಷನ್‌ಗೆ ಪಟ್ಟ ಪಾಡಿನಿಂದ ಅರ್ಥಮಾಡಿಕೊಳ್ಳಬಹುದು. ಆದುದರಿಂದ ನೀರಾವರಿ ಇಲ್ಲ ಎಂದಾಕ್ಷಣ ಭೂ ಹಿಡುವಳಿಯೇ ನಿರುಪಯುಕ್ತವೆಂಬ ತೀರ್ಮಾನ ಸರಿಯಲ್ಲ. ಭೂಮಿ ಇರುವುದರ ಜತೆಗೆ ಅದಕ್ಕೆ ನೀರುಣಿಸುವ ಶಕ್ತಿಯ ಅಗತ್ಯ. ಅದಕ್ಕೆ ಸ್ವಂತ ಬಂಡವಾಳ ಅಥವಾ ಕೃಷಿಯ ಉದ್ಧಾರಕ್ಕಾಗಿಯೇ ಇರುವ ಆಧುನಿಕ ಸಂಸ್ಥೆಗಳಲ್ಲಿ ವ್ಯವಹರಿಸುವ ಮತ್ತು ಪ್ರಭಾವ ಬೀರುವ ತಾಖತ್ತು ಇರಬೇಕು. ಕೆಳ ಜಾತಿ/ವರ್ಗದ ಜನರಿಗೆ ಇವೆರಡೂ ಸ್ವಲ್ಪ ದೂರವೇ. ಹೀಗಾಗಿ ಅಲ್ಪಸ್ವಲ್ಪ ಭೂ ಹಿಡುವಳಿಯ ನಡುವೆಯೂ ಕೃಷಿ ಕಾರ್ಮಿಕರಾಗಿ ಅಥವಾ ಗಣಿ ಕಾರ್ಮಿಕರಾಗಿ ದುಡಿಯುವ ಅಗತ್ಯ ಕೆಳ ಜಾತಿ/ವರ್ಗದ ಜನರಿಗೆ ಹೆಚ್ಚಿದೆ.

ಕೋಷ್ಠಕ ೨೨ರಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳ ಸಂಖ್ಯೆಯನ್ನು ಕೊಡಲಾಗಿದೆ. ಶೇಕಡಾ ೭೮ರಷ್ಟು (೭೩%ವ್ಯಾಗನ್ ಮತ್ತು ೫% ಗಣಿ ಕೆಲಸ) ಹರಿಜನ ಕುಟುಂಬಗಳು ವ್ಯಾಗನ್ ಲೋಡಿಂಗ್‌ನಲ್ಲಿ ತೊಡಗಿಸಿಕೊಂಡರೆ ಕೃಷಿಯನ್ನು ಕೇವಲ ಶೇಕಡಾ ೧೦ ಕುಟುಂಬಗಳು ನಂಬಿವೆ. ವ್ಯಾಗನ್ ಲೋಡಿಂಗ್ ಒಂದು ಶಾಶ್ವತ ಆದಾಯ ಮೂಲವಲ್ಲ. ವ್ಯಾಗನ್ ಬರದಿದ್ದರೆ ಕೃಷಿ ಕೂಲಿಗಳಾಗಿ ದುಡಿಯಬೇಕಾಗುತ್ತದೆ. ವಾರಗಟ್ಟಲೆ ವ್ಯಾಗನ್ ಬಾರದೆ ಊಟಕ್ಕೆ ಬೇರೆ ದಾರಿಯೇ ಇಲ್ಲವೆಂದಾಗ ಮಾತ್ರ ಇವರು ಕೃಷಿ ಕೂಲಿಗೆ ಹೋಗುವುದು. ಇದಕ್ಕೆ ಕಾರಣ ವ್ಯಾಗನ್ ಬರುವುದು ಕಡಿಮೆಯಾದಂತೆ ಇಲ್ಲಿನ ಕೃಷಿಕರಿಗೆ ಕಡಿಮೆ ಸಂಬಳಕ್ಕ ಕೂಲಿಗಳು ದೊರೆಯುತ್ತಾರೆ. ಇದೇ ಸ್ಥತಿ ವಡ್ಡರು ಮತ್ತು ನಾಯಕರು ಕುಟುಂಬಗಳಲ್ಲೂ ಇದೆ. ಶೇಕಡಾ ೫೮ರಷ್ಟು ವಡ್ಡರ (೫೦% ವ್ಯಾಗನ್, ೮%ಗಣಿ) ಮತ್ತು ಶೇಕಡಾ ೫೮ ರಷ್ಟು ನಾಯಕರ (೪೪% ವ್ಯಾಗನ್, ೧೪% ಗಣಿ) ಕುಟುಂಬಗಳು ವ್ಯಾಗನ್/ಗಣಿ ಕಾರ್ಮಿಕರಾಗಿದ್ದಾರೆ. ಶೇಕಡಾ ೧೩ ರಷ್ಟು ವಡ್ಡರ (೩% ಕೃಷಿ ಕೂಲಿ, ೧೦% ಕೃಷಿ) ಕೃಷಿ ಆಧಾರಿತ.

ಕೃಷಿ, ಕೃಷಿ ಕೂಲಿ, ವ್ಯಾಗನ್/ಗಣಿ ಕೆಲಸ ಇತ್ಯಾದಿ ವಿಂಗಡನೆಗಳು ಕಟ್ಟುನಿಟ್ಟಿನವಲ್ಲ. ವ್ಯಾಗನ್ ಅಥವಾ ಗಣಿ ಕೆಲಸ ಇಲ್ಲದಿರುವಾಗ ಕೃಷಿ ಕೂಲಿಯಾಗಿ ದುಡಿಯುವುದು. ಅಲ್ಪ ಸ್ವಲ್ಪ ಭೂಮಿ ಇದ್ದವರು ಕೃಷಿ ಮಾಡುವುದು ಇವೆಲ್ಲಾ ಜತೆಜತೆಯಾಗಿ ನಡಿಯುತ್ತಿದೆ. ಇಂಥವರು ನೀರಿಗೆ ಮಳೆಯನ್ನೇ ನಂಬಬೇಕು. ಇಂಥವರ ಭೂಮಿ ಕೃತಕ ನೀರಾವರಿ ವ್ಯವಸ್ಥೆ ಮಾಡಿಕೊಂಡವರ ಭೂಮಿಗೆ ಹತ್ತಿರವಿದ್ದರೆ ಬಾಡಿಗೆಗೆ ನೀರು ಮಾರಾಟ ಮಾಡುವ ಕ್ರಮ ಒಣ ಭೂ ಪ್ರದೇಶಗಳಲ್ಲಿ ಸಾಮಾನ್ಯ. ನೀರನ್ನು ಈ ಕ್ರಮದಲ್ಲಿ ಪಡಿಯುವವರು ಬಾಡಿಗೆ ರೂಪದಲ್ಲಿ ತಾವು ಬೆಳೆದ ಬೆಳೆಯ ಶೇಕಡಾ ೨೫ರಷ್ಟನ್ನು ನೀರು ಕೊಡುವ ದೊಡ್ಡ ಕೃಷಿಕರಿಗೆ ಕೊಡಬೇಕು. ಬಹುತೇಕ ಸಂದರ್ಭದಲ್ಲಿ ಬಾಡಿಗೆಗೆ ನೀರು ದೊರೆಯುವುದು ರಾತ್ರಿ ಹೊತ್ತಲ್ಲಿ. ತಮ್ಮ ಅಲ್ಪಸ್ವಲ್ಪ ಭೂಮಿಯ ಕೃಷಿಗಾಗಿ ಈ ಸಣ್ಣ ಕೃಷಿಕರು ಹಗಲು ರಾತ್ರಿ ಹೋರಾಡಬೇಕಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಕೃತಕ ನೀರಾವರಿ ವ್ಯವಸ್ಥೆ ಇರುವ ದೊಡ್ಡ ಕೃಷಿಕರು ತಮ್ಮ ಹೊಲದ ಹತ್ತಿರವಿರುವ ಸಣ್ಣ ಕೃಷಿಕರ ಹೊಲಗಳನ್ನು ಒಪ್ಪಂದದ ಮೇರೆಗೆ ಪಡಿಯುತ್ತಾರೆ. ಆ ರೀತಿ ಪಡೆದವರು ಬೆಳೆಯ ಶೇಕಡಾ ೨೫ರಷ್ಟನ್ನು ಹೊಲದ ಯಜಮಾನನಿಗೆ ಬಾಡಿಗೆ ರೂಪದಲ್ಲಿ ಕೊಡಬೇಕು. ಈ ವ್ಯವಹಾರವೆಲ್ಲಾ ತುಂಬಾ ಅಲ್ಪ ಪ್ರಮಾಣದಲ್ಲಿ ನಡಿಯುತ್ತಿವೆ.

ಶೇಕಡಾ ೪೦ರಷ್ಟು(೩೭% ಕೃಷಿ, ೩% ಕೃಷಿ ಕೂಲಿ) ಲಿಂಗಾಯತ ಕುಟುಂಬಗಳು ಮತ್ತು ಶೇಕಡಾ ೫೧ ರಷ್ಟು ಕುರುಬರು (೪೫% ಕೃಷಿ, ೬% ಕೃಷಿ ಕೂಲಿ) ಕೃಷಿಕರು. ಈ ಎರಡೂ ಸಮುದಾಯಗಳಲ್ಲೂ ಇತರ ಸಮುದಾಯಗಳಿಗೆ ಹೋಲಿಸಿದರೆ ಗಣಿ ಸಂಬಂಧಿ ಕೆಲಸಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕಡಿಮೆ. ಲಿಂಗಾಯತರ ಶೇಕಡಾ ೩೪ರಷ್ಟು ಮತ್ತು ಕುರುಬರ ಶೇಕಡಾ ೨೧ರಷ್ಟು ಕುಟುಂಬಗಳು ಕ್ರಮವಾಗಿ ಗಣಿ ಸಂಬಂಧಿ ಕೆಲಸಗಳಲ್ಲಿದ್ದಾರೆ. ಅಲ್ಪ ಸಂಖ್ಯಾತರಲ್ಲಿ ಎಲ್ಲಾ ಕ್ರಿಶ್ಚಿಯನ್ ಕುಟುಂಬಗಳಿಗೆ ಗಣಿ ಕೆಲಸವೇ ಮುಖ್ಯ ಆದಾಯದ ಮೂಲ. ೧೯೯೭ರಲ್ಲಿ ಡಾಲ್ಮಿಯಾ ಕಂಪೆನಿ ಲೇ ಆಫ್ ಆರಂಭಿಸಿದ ನಂತರ ಇವರು ಇತರ ಕೆಲಸಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಸುತ್ತಲಿನ ಇತರ ಗಣಿಗಳಿಗೆ ಅಥವಾ ಇತರ ಕೃಷಿಯೇತರ ಕೆಲಸಗಳಿಗೆ ಈ ಕ್ರಿಶ್ಚಿಯನ್ ಕುಟುಂಬಗಳು ಹೋಗುತ್ತಿವೆ. ಕ್ರಿಶ್ಚಿಯನ್‌ರಿಗೆ ಹೋಲಿಸದರೆ ಮುಸ್ಲಿಂ ಕುಟುಂಬಗಳು ಚಾರಿತ್ರಿಕವಾಗಿಯೇ ಹಳ್ಳಿಯ ಭಾಗವಾಗಿವೆ. ಶೇಕಡಾ ೩೫ರಷ್ಟು ಮುಸ್ಲಿಂ ಕುಟುಂಬಗಳು ಕೃಷಿಕರಾದರೆ ಗಣಿ ಕೆಲಸದಲಿರುವ ಕುಟುಂಬಗಳು ಶೇಕಡಾ ೧೭. ಹಳ್ಳಿಯ ಶೇಕಡಾ ೨೭ರಷ್ಟು ಕುಟುಂಬಗಳು ಕಿರಾಣಿ ಅಂಗಡಿ, ಪೆಟ್ಟಿಗೆ ಅಂಗಡಿ, ಹೋಟೇಲು, ಸಾರಾಯಿ ವ್ಯಾಪಾರ, ಲಾರಿ ಚಾಲಕರು, ಕಂಡೆಕ್ಟರ್, ಕ್ಲೀನರ್ ಇತ್ಯಾದಿ ಕೃಷಿಯೇತರ ಕೆಲಸಗಳಲ್ಲಿದ್ದಾರೆ. ಹರಿಜನರ ಶೇಕಡಾ ೧೧ ರಷ್ಟು, ವಡ್ಡರ ಶೇಕಡಾ ೨೮ರಷ್ಟು ಮತ್ತು ನಾಯಕರ ಶೇಕಡಾ ೨೦ರಷ್ಟು ಕುಟುಂಬಗಳು ಕೃಷಿಯೇತರ ಕೆಲಸಗಳಲ್ಲಿವೆ. ಇವರಿಗೆ ಹೋಲಿಸಿದರೆ ಲಿಂಗಾಯತರ ಶೇಕಡಾ ೩೭, ಮುಸ್ಲಿಮರ ಶೇಕಡಾ ೪೪ರಷ್ಟು ಕುಟುಂಬಗಳು ಕೃಷಿಯೇತರ ಕೆಲಸಗಳಲ್ಲಿವೆ.

ಹಳ್ಳಿಯ ಒಟ್ಟು ೭೮೧ ಕುಟಂಬಗಳಲ್ಲಿ ೨೨೫ರಷ್ಟು ಕುಟುಂಬಗಳ ವಾರದ ಆದಾಯ ರೂ.೨೦೦ಕ್ಕಿಂತ ಕಡಿಮೆ ಇದೆ. ರೂ.೨೦೦ ರಿಂದ ರೂ.೫೦೦ ವಾರದ ಆದಾಯವಿರುವ ಕುಟುಂಬಗಳ ಸಂಖ್ಯೆ ೩೯೧, ಬಹುತೇಕ ಹರಿಜನರ (೮೨), ವಡ್ಡರ (೪೬) ಮತ್ತು ನಾಯಕರ (೭೮) ಕುಟುಂಬಗಳು ಈ ಆದಾಯ ಮಿತಿಯೊಳಗೆ ಬರುತ್ತವೆ. ಕುರುಬರ ೩೪, ಲಿಂಗಾಯತರ ೪೧, ಮುಸ್ಲಿಂರ ೨೮ ಮತ್ತಿ ಕ್ರಿಶ್ಚಿಯನ್‌ರ ೨೪ ಕುಟುಂಬಗಳು ಇದೇ ಆದಾಯದ ಮಿತಿಯೊಳಗೆ ಬರುತ್ತವೆ. ರೂ. ೫೦೦ರಿಂದ ರೂ.೧೦೦೦ ವಾರದ ಆದಾಯವಿರುವ ಕುಟುಂಬಗಳ ಸಂಖ್ಯೆ ೧೫೦. ಈ ಆದಾಯ ವಿತಿಯೊಳಗೆ ಬರುವ ಕುಟುಂಬಗಳಲ್ಲಿ ಲಿಂಗಾಯತರದ್ದೇ ಸಿಂಹಪಾಲು-೩೫ ಕುಟುಂಬಗಳಿವೆ. ಇತರರು ಈ ಕೆಳಗಿನ ಕ್ರಮದಲ್ಲಿದ್ದಾರೆ-೧೪ ಹರಿಜನ, ೧೬ ವಡ್ಡ, ೨೬ ನಾಯಕ, ೭ ಕುರುಬ, ೧೮ ಮುಸ್ಲಿಂ ಮತ್ತು ೬ ಕ್ರಿಶ್ಚಿಯನ್ ಕುಟುಂಬಗಳು. ರೂ.೧೦೦೦ಕ್ಕೂ ಮೇಲ್ಪಟ್ಟು ವಾರದ ಆದಾಯವಿರುವ ಕುಟುಂಬಗಳ ಸಂಖ್ಯೆ ಕೇವಲ ೧೫. ಇಲ್ಲೂ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತರ ೧೨, ನಾಯಕರ ೧ ಮತ್ತು ಇತರ ಜಾತಿಯ ಎರಡು ಕುಟುಂಬಗಳು ಈ ಆದಾಯ ಮಿತಿಯೊಳಗೆ ಬರುತ್ತವೆ. (ಕೋಷ್ಠಕ-೨೦)

ಸಮುದಾಯಗಳ ನಡುವೆ ಮತ್ತು ಸಮುದಾಯದೊಳಗಿನ ಕುಟುಂಬಗಳ ನಡುವೆ ಸಾಕಷ್ಟು ಆದಾಯದ ಅಂತರವಿದೆ. ಹರಿಜನರ, ವಡ್ಡರ ಮತ್ತು ನಾಯಕರ ಬಹುತೇಕ ಕುಟುಂಬಗಳು ಇತರ ಸಮುದಾಯಗಳ ಕುಟುಂಬಗಳಿಗೆ ಹೋಲಿಸಿದರೆ ಆರ್ಥಿಕವಾಗಿ ಹಿಂದಿವೆ. ಅವರೊಳಗಿನ ಈ ಅಂತರ ಹಳ್ಳಿಯ ಬದುಕಿನ ಸರಿಯಾದ ಪರಿಚಯವಿಲ್ಲದಿದ್ದರೆ ದೊಡ್ಡ ಪ್ರಮಾಣದ್ದಾಗಿ ಕಂಡು ಬರಲಿಕ್ಕಿಲ್ಲ. ಕಾರಣವಿಷ್ಟೆ, ಜನರ ಉಡುಗೆ ತೊಡುಗೆಗಳು, ಮನೆಗಳು, ದಿನನಿತ್ಯ ಬಳಸುವ ಗ್ರಾಹಕ ವಸ್ತುಗಳು ಇತ್ಯಾದಿಗಳು ಯಾವುವು ಕೂಡ ದೊಡ್ಡ ಮಟ್ಟಿನ ಆರ್ಥಿಕ ಅಂತರವನ್ನು ಬಿಂಬಿಸುತ್ತಿಲ್ಲ. ಆದರೆ ಅಲ್ಲಿನ ಸಾಮಾಜಿಕ ವಾತಾವರಣದಲ್ಲಿ ಬದುಕುವ ಎಲ್ಲರಿಗೂ ಹೊರನೋಟಕ್ಕೆ ನಗಣ್ಯವಾಗಿ ತೋರುವ ಈ ಆರ್ಥಿಕ ಅಂತರಗಳು ಎಷ್ಟು ಪ್ರಬಲ ಎನ್ನುವುದರ ಅರಿವಿರಬಹುದು. ಆದಾಗ್ಯೂ ಉತ್ತರ ಕರ್ನಾಟಕದ ಇತರ ಹಳ್ಳಿಗಳಿಗೆ ಹೋಲಿಸಿದರೆ ಪಿ.ಕೆ.ಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಧುನಿಕ ಆರ್ಥಿಕ ಚಟುವಟಿಕೆಗಳಿವೆ. ಉತ್ತರ ಕರ್ನಾಟಕದ ಬಹುದೊಡ್ಡ ಲಕ್ಷಣವೆಂದರೆ. ಅದರ ಕೃಷಿ ಆಧಾರಿತ ಬದುಕು. ಆದರೆ ಬಳ್ಳಾರಿ ಜಿಲ್ಲೆಯ ಅದರಲ್ಲೂ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಬಣಿಗಾರಿಕೆ ಬಲವಾಗಿ ಬೇರೂರಿದೆ. ಇದರಿಂದಾಗಿ ಆದಾಯ ಬದಲಿ ಮೂಲಗಳಿವೆ ಎಂದು ಹೇಳಬಹುದಷ್ಟೇ. ಈ ಬದಲಿ ಮೂಲಗಳು ದುಡಿಯುವ ಜನರ ಬದುಕಿನ ಎಲ್ಲಾ ಸಾಧ್ಯತೆಗಳನ್ನು ಹೆಚ್ಚಿಸಿವೆ ಎಂದು ತಿಳಿಯಬೇಕಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಗಣಿ ದುಡಿಮೆ ಕೃಷಿಯಿಂದ ಸ್ವಲ್ಪ ಹೆಚ್ಚು ಸಂಬಳ ಕೊಡಬಹುದು. ಆದರೆ ಗಣಿ ಕಾರ್ಮಿಕರಿಗೆ ಕಾನೂನು ಪ್ರಕಾರ ಸಲ್ಲಬೇಕಾದ ಯಾವ ಸವಲತ್ತು ಕೂಡ ಇಲ್ಲ. ಇವುಗಳನ್ನು ಪಡಿಯುವಷ್ಟು ಸಂಘಟಿತ ಬಲ ಕಾರ್ಮಿಕರಲ್ಲಿ ಇಲ್ಲ. ಹಿಂದೆ ವಿವರಿಸಿದಂತೆ ಕೃಷಿಯೇತರ ದುಡಿತದಿಂದ ಸಾಧ್ಯವಾಗುವ ಹೆಚ್ಚಿನ ಆದಾಯವನ್ನು ಆಸ್ಪತ್ರೆಗೆ ಸುರಿಯುವ ಅಗತ್ಯವೂ ಇದೆ. ಜತಗೆ ಒಣ ಭೂಮಿ ಮತ್ತು ನಿರುದ್ಯೋಗ-ಈ ಎರಡು ಸೇರಿ ಹಳ್ಳಿಗರನ್ನು ಎಷ್ಟೇ ಸಂಬಳಕ್ಕೂ ದುಡಿಸಬಹುದಾದ ಸ್ಥಿತಿ ನಿರ್ಮಾಣ ಮಾಡಿವೆ. ತೊಂಬತ್ತರ ದಶಕದಲ್ಲಿ ಜಿಂದಾಲ್ ಉಕ್ಕಿನ ಕಾರ್ಖಾನೆ ಬಂದಾಗ ಊರೆಲ್ಲಾ ಅದರದೇ ಸುದ್ದಿ: ಅದರಲ್ಲಿ ವಿನಿಯೋಜನೆಯಗುವ ಹಣದ ಮೊತ್ತ, ಎಕರೆಗಟ್ಟಲೆ ಭೂಮಿಯಲ್ಲಿ ಅದು ಹರಡಿರುವ ಸೊಬಗು, ಯುವಕರಿಗೆ ಉದ್ಯೋಗಸಿಗುವ ಭರವಸೆ-ಹೀಗೆ ಹಲವಾರು ವಿಷಯಗಳು ಜನರ ದಿನ ನಿತ್ಯದ ಚರ್ಚೆಯಲ್ಲಿ ಬಮದೇ ಬರುತ್ತಿದ್ದವು. ಕಾರ್ಖಾನೆ ಕಟ್ಟಡ ನಿರ್ಮಾಣ ಹಂತದಲ್ಲಿ ಹಳ್ಳಿಯ ಕೆಲವು ಯುವಕರಿಗೆ ಕೆಲಸ ದೊರಕಿದೆ. ಇದೊಂದು ರೀತಿ ನಗರ ಪ್ರದೇಶದಲ್ಲಿನ ಅಸಂಘಟಿತ ಕಟ್ಟೋಣ ಕಾರ್ಮಿಕರಂತಗೆ. ಅಸಂಖ್ಯಾತ ಬಹುಮಹಡಿ ಕಟ್ಟಡಗಳನ್ನು ಅವರು ಕಟ್ಟುತ್ತಾರೆ. ಕಟ್ಟಡ ನಿರ್ಮಾಣ ಆಗುವವರೆಗೆ ಅದು ಅವರ ಕಟ್ಟಡ. ಸಂಪೂರ್ಣಗೊಂಡ ಮರುದಿವಸ ಅದರಲ್ಲಿ ದುಡಿದವರಿಗೆ ಆ ಕಟ್ಟಡದ ಹತ್ತಿರ ಸುಳಿಯುವುದು ಕೂಡ ಕಷ್ಟ. ಇಲ್ಲೂ ಹಾಗೇ ಆಗಿದೆ. ಕಾರ್ಖಾನೆಯ ಕಟ್ಟಡದ ಕೆಲಸ, ಕಂಪೆನಿ ಕೆಲಸಗಾರರಿಗೆ ವಸತಿ ಸಮುಚ್ಛಯಗಳ ನಿರ್ಮಾಣದ ಕೆಲಸ, ರಸ್ತೆ ನಿರ್ಮಾಣದ ಕೆಲಸ ಇತ್ಯಾದಿಗಳಿಗೆ ದಿನಗೂಲಿಗೆ ದುಡಿಯುವ ಭಾಗ್ಯ ಹಳ್ಳಿಯವರಿಗೂ ದಕ್ಕಿದೆ. ಇನ್ನು ಕೆಲವರಿಗೆ ಕಂಪೆನಿಯಲ್ಲಿ ಕಂಟ್ರಾಕ್ಟ್ ಕೂಲಿಗಳಾಗಿ ಕೆಲಸ ಕೊರಕಿದೆ. ಆದರೆ ಇಲ್ಲಿನವರು ಯಾರು ಕೂಡ ಅಲ್ಲಿ ಶಾಶ್ವತ ಉದ್ಯೋಗಿಗಳಾಗಿಲ್ಲ. ಆದಕ್ಕೆ ಕಾರಣವೂ ಇದೆ. ಅಲ್ಲಿ ಡುಡಿಯುವ ಶಾಶ್ವತ ಉದ್ಯೋಗಿಗಳಲ್ಲಿ ಶೇಕಡಾ ೯೦ರಷ್ಟು ತಾಂತ್ರಿಕ ಡಿಗ್ರಿಯುಳ್ಳವರು. ಅಂಥವರು ಈ ಹಳ್ಳಿಯಲ್ಲಿ ಕಡಿಮೆ. ಹೀಗೆ ಜಿಂದಾಲ್ ಕಾರ್ಖಾನೆ ಹಳ್ಳಿಯಿಂದ ಕೆಲವೇ ಕಿ.ಮೀ. ದೂರದಲಿದ್ದರೂ ಅದರಿಂದ ಹಳ್ಳಿಯ ಜನರಿಗೆ ವಿಶೇಷ ಪ್ರಯೋಜನವಾಗಿಲ್ಲ.

 

[1]ಬಿಕು ಪರೇಕ್ “ಜವಾಹರ್‌ಲಾಲ್ ನೆಹರು ಆಂಡ್ ದಿ ಕ್ರೈಸಿಸ್ ಅಫ್ ಮೊಡರ್ನೈಸೆಶನ್”, ಪುಟ ೨೧-೫೬.

[2]ಎ.ಆರ್. ದೇಸಾಯಿ, ರೂರಲ್ ಸೋಶಿಯಾಲಜಿ ಇನ್ ಇಂಡಿಯಾ, ಬಾಂಬೆ: ಪಾಪ್ಯುಲರ್ ಪ್ರಕಾಶನ, ೧೯೬೯.

[3]ಅತಿಯಾದ ಬಡತನ ಮತ್ತು ಶತಮಾನಗಳ ತುಳಿತ ಮನುಷ್ಯರನ್ನು ಪ್ರಾಣಿಗಳಿಗಿಂತ ಕಡೆಯಾಗಿಸುತ್ತದೆ. ಪೌಷ್ಠಿಕಾಂಶದ ಕೊರತೆ, ದಿನದ ಬಹುಭಾಗ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ವ್ಯಯವಾಗುವುದು, ನಾಳೆಯ ಬದುಕಿನ ಭದ್ರತೆ ಇಲ್ಲದಿರುವುದು, ಭವಿಷ್ಯದಲ್ಲಿ ಸುಖ ಕಾಣುವ ಸಾಧ್ಯತೆ ಇಲ್ಲದಿರುವುದು ಇವೆಲ್ಲಾ ಕೆಳ ವರ್ಗದ ಜನರ ಅಸ್ತಿತ್ವದ ಪ್ರಶ್ನೆಗೆ ಬೇರೆಯದೇ ರೂಪು ಕೊಡುತ್ತವೆ. ಅವರ ಬದುಕಿನಲ್ಲಿ ಎದ್ದು ಕಾಣುವ ಲಕ್ಷಣಗಳೆಂದರೆ ಅತಿಯಾದ ನಿರಾಸಕ್ತಿ, ಡಿಪ್ರೆಷನ್, ಅನ್ಯಾಯವನ್ನು ಸಹಿಸುವ, ಯಾವುದರ ಮೇಲೂ ನಂಬಿಕೆ ಇಲ್ಲದಿರುವುದು ಇತ್ಯಾದಿಗಳು. ಹೆಚ್ಚಿನ ವಿವರಗಳಿಗೆ – ರುಕ್ಮಿನಿ ರಮಣಿ, ಸ್ಲಮ್ ಆಫ್ ಮೆಡ್ರಾಸ್ ಸಿಟಿ, ಮೆಡ್ರಾಸ್ ಇನ್ಸ್ಟಿಟ್ಯುಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್, ೧೯೮೫ ಮತ್ತು ಎಸ್.ಎಮ್. ಮೈಕೆಲ್, ದಲಿತ್ಸ್ ಇನ್ ಮಾಡರ್ನ್ ಇಂಡಿಯಾ, ನ್ಯೂ  ಡೆಲ್ಲಿ: ವಿಸ್ತಾರ್ ಪಬ್ಲಿಕೇಷನ್ಸ್, ೧೯೯೯.

[4]ಹನುಮಂತಪ್ಪನವರ ರಾಜಕೀಯ ಜೀವನವನ್ನು ಅಧ್ಯಾಯ ಮೂರರಲ್ಲಿ ವಿವರಿಸದ್ದೇನೆ.

[5]ಮರಿಯೊ ರುಟೇನ್, ಫಾರ್ಮ್ಸ್ ಆಂಡ್ ಪ್ಯಾಕ್ಟರೀಸ್: ಸೋಶಿಯಲ್ ಪ್ರೊಪಯಲ್ ಅಫ್ ಲಾರ್ಜ್ ಫಾರ್ಮರ್ಸ್ ಆಂಡ್ ರೂರಲ್ ಇಂಡಸ್ಟ್ರಿಯಲಿಸ್ಟ್ಸ್ ಇನ್ ವೆಸ್ಟ್ ಇಂಡಿಯ, ಡೆಲ್ಲಿ: ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೫.

[6]ಹಿಂದೆ ಅಧಿಕಾರ ಚಲಾಯಿಸಿದ ಮೇಟಿಗಳ ಮೇಲಿನ ದ್ವೇಷ ಊರಲ್ಲಿ ಇನ್ನೂ ಆರಿಲ್ಲ. ಅವರ ಪೈಕಿ ಯಾರೇ ಚುನಾವಣೆಗೆ ನಿಂತರು ಸೋಲುವುದು ಗ್ಯಾರಂಟಿ ಎನ್ನುವ ಅಭಿಪ್ರಾಯವಿದೆ. ಶಿವಶಂಕರಪ್ಪನವರು ಮೇಟಿ ಕುಟುಂಬಕ್ಕೆ ಸೇರಿದವರು. ಆದರೆ ಹಿಂದೆ ಯಜಮಾನಿಕೆ ಮಾಡುತ್ತಿದ್ದ ಮೇಟಿಗಳು ಮತ್ತು ಶಿವಶಂಕರಪ್ಪನವರ ಸಂಬಂಧ ಅಷ್ಟಕಷ್ಟೇ ಅ ಕಾರಣದಿಂದಲೇ ಊರವರು ಅವರನ್ನು ತಾಲ್ಲೂಕು ಪಂಚಯತ್ ಸದಸ್ಯರಾಗಲು ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಇವೆ.

[7]ಟಿ.ಕೆ. ಉಮನ್, “ಮಿತ್ ಆಂಡ್ ರಿಯಾಲಿಟಿ ಇನ್ ಇಂಡಿಯನ್ ಕಮ್ಯುನಿಟೇರಿಯನ್ ವಿಲೇಜ್”, ಜರ್ನಲ್ ಆಫ್ ಕಾಮನ್ವೆಲ್ತ್ ಪೊಲಿಟಿಕಲ್ ಸ್ಟಡೀಸ್, ಸಂಚಿಕೆ ೪, ಸಂಖ್ಯೆ ೨, ೧೯೬೬, ಪುಟ ೧೦೩-೭, ಟಿ.ಕೆ. ಉಮನ್, ಏಲಿಯನ್ ಕಾನ್ಸಪ್ಟ್ಸ್ ಆಂಡ್ ಸೌತ್ ಏಸಿಯನ್ ರಿಯಾಲಿಟಿ: ರೆಸ್‌ಪಾನ್‌ಸಸ್ ಆಂಡ್ ರಿಫಾರ್‌ಮ್ಯುಲೇಷನ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಷನ್ಸ್, ೧೯೯೫ ಮತ್ತು ಯೋಗೇಂದ್ರ ಸಿಂಗ್, “ಸೋಶಿಯಲ್ ಸ್ಟ್ರಕ್ಚರ್ ಆಂಡ್ ವಿಲೇಜ್ ಪಂಚಾಯತ್ಸ್”, ಎ.ಆರ್. ದೇಸಾಯಿಯವರ, ರೂರಲ್ ಸೋಶಿಯಾಲಜಿ ಇನ್ ಇಂಡಿಯಾ, ಪುಟ ೫೭೦-೭೯.