ಮಹಿಳೆಯ ಬದುಕು ದುಡಿತಕ್ಕೆ ಸೀಮಿತ

ಗುಡಿಯಲ್ಲಿ ಲಕ್ಷ್ಮೀ ಮತ್ತು ಪಾರ್ವತಿ ತಿಮ್ಮಪ್ಪನ ಜತೆ ಇರುತ್ತವೆ. ತೇರಿನಂದು ಕೇವಲ ತಿಮ್ಮಪ್ಪನ ಮೂರ್ತಿ ಮಾತ್ರ ಮೆರವಣಿಗೆಯಲ್ಲಿ (ಉಚ್ಛಾಯದಲ್ಲಿ) ಹೋಗುತ್ತದೆ. ಲಕ್ಷ್ಮೀ ಮತ್ತು ಪಾರ್ವತಿಯ ವಿಗ್ರಹಗಳು ಗುಡಿಯಲ್ಲೇ ಉಳಿಯುತ್ತವೆ. ಈ ಸಾಂಸ್ಕೃತಿಕ ಆಚರಣೆ ಹಳ್ಳಿಯ ಸಮಾಜದಲ್ಲಿ ಸಾಂಕೇತಿಕವಾಗಿ ಮಹಿಳೆಗಿರುವ ಸ್ಥಾನಮಾನವನ್ನು ಸೂಚಿಸುತ್ತದೆ. ಇದರ ಅರ್ಥ ಮಹಿಳೆಯರು ಮನೆಯೊಳಗೆ ಇರುತ್ತಾರೆ ಎಂದಲ್ಲ. ಮೇಲು ಜಾತಿಯ ಮಹಿಳೆಯರನ್ನು ಹೊರತುಪಡಿಸಿ ಹಳ್ಳಿಯ ಎಲ್ಲಾ ಮಹಿಳೆಯರು ಪುರುಷರಿಗೆ ಸಮಾನಾಗಿ ದುಡಿಯುತ್ತಾರೆ. ಮೇಲು ಜಾತಿಯವರಲ್ಲೂ ಬಡ ಕುಟುಂಬದ ಮಹಿಳೆಯರು ಹೊರಗೆ ದುಡಿದೇ ಮನೆ ಖರ್ಚು ನಿಭಾಯಿಸಬೇಕಾಗುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪುರುಷರಿಗೆ ಸಮನಾಗಿದೆ ಅಥವಾ ಕೆಲವು ಕುಟುಂಬಗಳಲ್ಲಿ ಹೆಚ್ಚೇ ಇರಬಹುದು. ಒಂದು ವಿಧದಲ್ಲಿ ತಿಮ್ಮಪ್ಪನ ತೇರಿನ ಉದಾಹರಣೆ ಇಲ್ಲಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ ದುಡಿತ ಮತ್ತು ಜವಾಬ್ದಾರಿ ವಿಚಾರಗಳಲ್ಲಿನ ಮನೆ ಮತ್ತು ಹೊರಗೆ ಎಂಬ ವ್ಯತ್ಯಾಸವೆ ಇಲ್ಲಿಲ್ಲ. ಇನ್ನೊಂದು ವಿಚಾರದಲ್ಲಿ ಪ್ರತಿಷ್ಠಿತ ಸ್ಥಾನ ಅಥವಾ ಅಧಿಕಾರದ ಸ್ಥಾನ ಅಲಂಕರಿಸುವ ವಿಚಾರದಲ್ಲಿ ಮಹಿಳೆಯರಿಗೆ ಎರಡನೇ ದರ್ಜೆ ಸ್ಥಾನ. ಇಲ್ಲೂ ಕೂಡ ಆ ಜವಾಬ್ದಾರಿಯನ್ನು ಪೂರೈಸಲು ಅಗತ್ಯವಾದ ಗುಣಗಳ ಬಗ್ಗೆ ವಿಶ್ಲೇಷಣೆ ಇಲ್ಲ. ಪಂಚಾಯತ್‌ನ ಮಹಿಳಾ ಸದಸ್ಯರ ಆಯ್ಕೆಯಲ್ಲಿ ಪರಿಗಣನೆಗೆ ಬಂದ ಮುಖ್ಯ ಅಂಶ ಪ್ರಾಯ. ಚಿಕ್ಕ ವಯಸ್ಸಿನವರು ಬೇಡ; ಪ್ರಾಯಸ್ಥರು ಇರಲಿ. ಪ್ರಾಯಸ್ಥರು ಇರಲಿ, ಯಾಕೆ? ಅವರಿಗೆ ಹೆಚ್ಚು ಅನುಭವ ಇದೆ. ಆದುದರಿಂದ ಪಂಚಾಯತ್ ಸದಸ್ಯಯ ಜವಬ್ದಾರಿಯನ್ನು ಹೆಚ್ಚು ಉಪಯುಕ್ತವಾಗಿ ನಿಭಾಯಿಸಬಹುದೆಂದೆ? ಅಲ್ಲ. ಸದಸ್ಯೆಯಾದರೆ ಹಲವಾರು ಕಡೆ ಸುತ್ತಾಡಬೇಕು; ಅದೂ ಹೊರಗಿನವರೊಂದಿಗೆ. ಅಪರಿಚಿತರೊಂದಿಗೆ ನಿರ್ಭಿಡೆಯಿಂದ ವ್ಯವಹರಿಸಬೇಕು. ಇವೆಲ್ಲಾ ಗೌರವವುಳ್ಳ ಮನೆಯವರಿಗೆ ಹೇಳಿದ ಕೆಲಸವಲ್ಲ. ಈ ಕೆಲಸಕ್ಕೆ ಒಂದೋ ಮನೆ, ಗಂಡ, ಮಕ್ಕಳು ಇತ್ಯಾದಿ ಮಿತಿಗಳನ್ನು ಮೀರಿದವರು ಅಥವಾ ಇವೆಲ್ಲವನ್ನು ಪೂರೈಸಿ ಇನ್ನೇನೂ ವಾನಪ್ರಸ್ಥಕ್ಕೆ ರೆಡಿಯಾದವರು ಈ ಇಬ್ಬರೇ ಸರಿಯಾದವರು. ಆದುದರಿಂದಲೇ ಆಯ್ಕೆಯಾದ ಐವರಲ್ಲಿ ಒಬ್ಬರು ಅರುವತ್ತು ದಾಟಿದವರು, ಮತ್ತೊಬ್ಬರಿಗೆ ಮನೆ ಪಾಠ ಇತ್ಯಾದಿಗಳ ಮಿತಿಗಳಿಲ್ಲ, ಉಳಿದವರಿಗೆ ಐವತ್ತು ಹತ್ತಿರವಾಗಿದೆ.

ಅವಿರೋಧ  ಅಯ್ಕೆಯಾದುದರಿಂದ ಆಯಾಯ ಕುಟುಂಬಗಳ ಮೌಲ್ಯದ ಪ್ರಶ್ನೆ ಇಲ್ಲಿ ಮುಖ್ಯವೇ ಹೊರತು ಇಡೀ ಸಮಾಜದ ಮೌಲ್ಯದ ಪ್ರಶ್ನೆ ಇಲ್ಲಿ ಇಲ್ಲ ಎನ್ನಬಹುದು. ಇದು ಒಪ್ಪಬೇಕಾದ ವಿಚಾರವೇ. ಆದರೆ ಒಂದೇ ಸಾಮಾಜಿಕ ಪರಿಸರದಲ್ಲಿರುವ ಕುಟುಂಬಗಳು, ಅದೂ ಹಳ್ಳಿಯಲ್ಲಿ; ಪಂಚಾಯತ್ ರಾಜಕೀಯಕ್ಕೇ ಸಂಬಂಧಿಸಿದಂತೆ, ತೀರಾ ಭಿನ್ನವಾದ ಮೌಲ್ಯಗಳನ್ನು ಹೊಂದಿದ್ದಾರೆ ಎನ್ನುವುದು ಸರಿಯಲ್ಲ. ಅಮಿನಮ್ಮ ಮುಸ್ಲಿಮರು ಪ್ರತಿನಿಧಿ. “ನಿಮಗೆ ಪಂಚಾಯತ್ ಮೆಂಬರಾಗಲು ಆಸಕ್ತಿಯತ್ತೇ” ಎಂದು ಕೇಳಿದೆ. “ನಮ್ಮವರು (ಗಂಡ) ಮೆಂಬರಾಗಬೇಕೆಂದು ಹೇಳುವಾಗ ಆಗುವುದಿಲ್ಲ ಎಂದು ನಾನು ಹೇಳುವುದು ಹೇಗೆ?” ಎಂದು ನನಗೇ ಮರುಪ್ರಶ್ನೆ ಹಾಕಿದರು. ಚಿನ್ನಮ್ಮ ಉಪ್ಪಾರರ ಪ್ರತಿನಿಧಿ. ಜಾತಿಯ ಪ್ರಮುಖರು ಚಿನ್ನಮ್ಮ ಪ್ರತಿನಿಧಿ ಆಗಬೇಕೆಂದು ತೀರ್ಮಾನಿಸಿದರು. ಆ ಸಂದರ್ಭದಲ್ಲಿ ಚಿನ್ನಮ್ಮನ ಪತಿ (ಲಾರಿ ಚಾಲಕ) ಊರಲ್ಲಿ ಇರಲಿಲ್ಲ. ರಾತ್ರಿ ಮನೆಗೆ ಬಂದಾಗ ಚಿನ್ನಮ್ಮ ಪ್ರತಿನಿಧಿಯಾದ ವಿಷಯ ತಳಿದು ಆತನಿಗೆ ಖುಷಿಯಾಗಲಿಲ್ಲ. ಇದೆಲ್ಲ ನಮಗ್ಯಾಕೆ? ಈಗಲೇ ಹೋಗಿ ನಾನು ಮೆಂಬರಾಗುವುದಿಲ್ಲ ಎಂದು ತಿಳಿಸಿ ಬಾ ಎಂದು ರಾತ್ರಿಯೇ ಚಿನ್ನಮ್ಮನನ್ನು ಪ್ರಮುಖರ ಮನೆಗೆ ಅಟ್ಟಿದ. ಮರುದಿವಸ ಅವರ ಪಕ್ಷದ (ಚಿನ್ನಮ್ಮನನ್ನು ಜನತಾ ದಳದವರು ನಿಲ್ಲಿಸಿದ್ದು) ಇತರ ಸದಸ್ಯರು ಬಂದು ಸಮಾಧಾನ ಪಡಿಸಿದ ನಂತರವೇ ಆತ ಒಪ್ಪಿಗೆ ನೀಡಿದ್ದು. ಹೆಚ್ಚು  ಕಡಿಮೆ ಎಲ್ಲಾ ಮಹಿಳಾ ಸದಸ್ಯರ ಕತೆಯೂ ಇದೆ. ವಡ್ಡರ ಮಹಿಳಾ ಸದಸ್ಯೆಯಲ್ಲಿ ನಾನು ಏನೇ ಪ್ರಶ್ನೆ ಕೇಳಿದರು ಅದಕ್ಕೆ ಉತ್ತರ ಅವರ ಗಂಡನೆ ಕೊಡುತ್ತಿದ್ದರು. ತಡೆಯಲಾರದೆ “ನನಗೆ ನಿಮ್ಮ ಅಭಿಪ್ರಾಯವಲ್ಲ; ನಿಮ್ಮ ಪತ್ನಿಯ ಅಭಿಪ್ರಾಯ ಬೇಕಾಗಿದೆ” ಎಂದೆ. “ಅವಳಿಗೇನು ಗೊತ್ತಾಗುತ್ತದೆ ಪಂಚಾಯತ್ ರಾಜಕೀಯ; ನಾನೇ ಹೇಳಿಕೊಡಬೇಕು” ಎಂದು ಸದಸ್ಯೆಯ ಗಂಡ ತನ್ನ ಅಧಿಕಾರ ಚಲಾಯಿಸಿದ. “ಅವರಿಗೆ ರಾಜಕೀಯದ ಅರಿವೇ ಇಲ್ಲವೆಂದಾದ ಮೇಲೆ ಅವರನ್ನು ಯಾಕೆ ಮೆಂಬರು ಮಾಡಿದ್ದೀರಿ?” ಎಂದೆ. “ನಮ್ಮ ಪಾಲಿಗೆ ಬಂದುದೇ ಮಹಿಳಾ ಸೀಟು, ಅದನ್ನು ಬದಲಾಯಿಸಲು ಆಗುತ್ತದೆಯೇ?” ಎಂದು ಗಂಡ ತನ್ನ ನೋವನ್ನು ತೋಡಿಕೊಂಡರು. ಹಿಂದೆ ವಿವರಿಸಿದಂತೆ ಮಹಿಳಾ ಸೀಟು ಇಲ್ಲಿ ಕೇವಲ ನಾಮಕಾವಸ್ಥೆ. ಆದುದರಿಂದ ಯಾವ ಜಾತಿಯಲ್ಲೂ ಅದನ್ನು ಪಡೆಯಲು ವಿಶೇಷ ಹೋರಾಟ ನಡೆದಿಲ್ಲ. ಒಂದೇ ಜಾತಿಗೆ ಮಹಿಳೆ ಮತ್ತು ಪುರುಷ ಸದಸ್ಯರ ಎರಡು ಸೀಟಿಗಳಿದ್ದರೆ ಆ ಜಾತಿಯೊಳಗಿನ ಗುಂಪುಗಾರಿಕೆಯನ್ನು ಮಹಿಳೆ ಮತ್ತು ಪುರುಷ ಸೀಟುಗಳ ಹಂಚುವಿಕೆಯಿಂದಲೇ ತಿಳಿಯಬಹುದು. ಜಾತಿಯೊಳಗಿನ ಬಲಾಢ್ಯ ಗುಂಪು ಪುರುಷ ಸದಸ್ಯತ್ವವನ್ನು ಪಡೆದಿದೆ. ವಡ್ಡರ ಮತ್ತು ನಾಯಕರ ಎರಡೂ ಜಾತಿಯಲ್ಲೂ ಇದೇ ರೀತಿ ಆಗಿದೆ. ಮಹಿಳೆ ಸದಸ್ಯೆ ಆದರೂ ದಿನ ನಿತ್ಯದ ವ್ಯವಹಾರದಲ್ಲಿ ಅಧಿಕಾರ ಚಲಾಯಿಸುವುದು ಆಕೆಯ ಗಂಡ ಅಥವಾ ಮಕ್ಕಳು. ಊರಲ್ಲಿ ಅಥವಾ ಇತರೆ ಕಡೆ ಕಾರ್ಯಕ್ರಮಗಳಿಗೆ ಸದಸ್ಯೆಯನ್ನು ಅಹ್ವಾನಿಸಿದರೆ ಸದಸ್ಯೆಯ ಗಂಡನೇ ಹಾಜರಾಗುವ ಕ್ರಮವಿದೆ. ಒಂದು ವೇಳೆ ಇಬ್ಬರೂ ಹೋಗಿ ವೇದಿಕೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದರೆ ಗಂಡನೇ ಆಸನ ರೂಢನಾಗುತ್ತಾನೆ.

ಗ್ರಾಮಪಂಚಾಯತ್‌ನ ಸಭೆಗಳಲ್ಲಿ ಮತ್ತು ಇತರ ರಾಜಕೀಯ ನಿರ್ಧಾರಗಳ ವಿಚಾರಗಳಲ್ಲಿ ಈ ಸದಸ್ಯೆಯರನ್ನು ಪುರುಷ ಸದಸ್ಯರು ನಡೆಸಿಕೊಂಡದ್ದು ಕೂಡ ಮಹಿಳೆಯರಿಗೆ ಇರುವ ಎರಡನೇ ದರ್ಜೆ ಸ್ಥಾನಮಾನವನ್ನು ಸೂಚಿಸುತ್ತದೆ. ಇಡೀ ಪಂಚಾಯತ್‌ನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿತ್ತು-ಒಟ್ಟು ಹನ್ನೊಂದು ಸದಸ್ಯರಲ್ಲಿ ಆರು ಜನ ಮಹಿಳಾ ಸದಸ್ಯರು (ವಡ್ಡರ ಹಳ್ಳಿಯ ಸದಸ್ಯರನ್ನು ಸೇರಿಸಿ). ಆದರೆ ಪಂಚಾಯತ್‌ನ ಯಾವುದೇ ತೀರ್ಮಾನದಲ್ಲಿ ಇವರ ಮಾತಿಗೆ ಬೆಲೆ ಇರಲಿಲ್ಲ. ಊರಿನ ಕೆಲಸ ಬಿಡಿ; ಇವರದೇ ಕೆಲಸಗಳನ್ನು ಮಾಡಿಸಿಕೊಳ್ಳಲು ಹೆಣಗಾಡಬೇಕಾಗಿತ್ತು. ಸಂಕ್ಲಮ್ಮ ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಸಿಕೊಳ್ಳಲು ಒದ್ದಾಡಿದನ್ನು ಇಲ್ಲಿ ಸ್ಮರಿಸಬಹುದು. ಅದೇ ರೀತಿ ಕುರುಬರ ಪ್ರತಿನಿಧಿ ವೆಂಕಮ್ಮ ಆಶ್ರಯ ಯೋಜನೆಯಲ್ಲಿ ಸೈಟು ಕೊಡಲಾಗುವುದಿಲ್ಲ ಎಂದು ಅವಳ ಅರ್ಜಿ ತಿರಸ್ಕೃತವಾಯಿತು. ವೆಂಕಮ್ಮನ ಪ್ರಕಾರ ಇಡೀ ಐದು ವರ್ಷದ ಅವಧಿಯಲ್ಲಿ ಅವಳಿಗೆ ಸಿಕ್ಕಿದ ಕೆಲಸವೆಂದರೆ ಅವಳ ಮನೆ ಮುಂದಿನ ಚರಂಡಿ ರಿಪೇರಿ ಕೆಲಸ. ಅದಕ್ಕೆ ಮಂಜೂರಾದ ಒಟ್ಟು ಮೊತ್ತ ಆರು ಸಾವಿರ ರೂಪಾಯಿಗಳು. ಅದರಲ್ಲಿ ವಿಶೇಷ ಲಾಭವಾಗಿಲ್ಲ; ಎರಡು ಸಾವಿರ ಕೂಡ ಉಳಿದಿಲ್ಲವೆಂದು ಅವಳ ಅಳಲು. ಇವೆಲ್ಲಾ ತಿಮ್ಮಪ್ಪನ ತೇರಿನಲ್ಲಿ ಲಕ್ಷ್ಮೀ ಪಾರ್ವತಿಯರನ್ನು ಗುಡಿಯಲ್ಲಿ ಬಿಟ್ಟಂತೆ. ಹಾಗೆಂದ ಕೂಡಲೇ ಅಂಕ್ಲಮ್ಮ ದೇವಿಯ ಉದಾಹರಣೆಯೊಂದಿಗೆ ಮಹಿಳೆಯರಿಗೆ ಉನ್ನತ ಸ್ಥಾನವಿದೆ ಎಂದು ವಾದಿಸಬಹುದು. ಅಂಕ್ಲಮ್ಮನ ಉದಾಹರಣೆ ತಪ್ಪಾಗುವುದಿಲ್ಲ. ಆದರೆ ಅದು ಮಹಿಳೆಯರ ಉನ್ನತ ಸ್ಥಾನವನ್ನು ಗುರುತಿಸಲು ಸರಿಯಲ್ಲ. ಮಹಿಳೆಯರ ದುಡಿತವನ್ನು ಸೂಚಿಸಲು ಅಂಕ್ಲಮ್ಮನ ಉದಾಹರಣೆ ಸರಿಯಾಗಬಹುದು. ಅಂಕ್ಲಮ್ಮನ ಪೂಜೆಗೂ ಬಿತ್ತನೆಗೂ ನೇರ ಸಂಬಂದವಿದೆ. ಅಂಕ್ಲಮ್ಮ ಉತ್ಪಾದನೆಯ ಸಂಕೇತ. ಹಾಗೆ ಊರಿನ ಮಹಿಳೆ ಕೂಡ ದುಡಿಮೆ ಮತ್ತು ಉತ್ಪಾದನೆಯ ಸಂಕೇತ. ಮುಸ್ಲಿಂ ಅಭ್ಯರ್ಥಿ ಮತ್ತು ಕುರುಬರ ಪ್ರತಿನಿಧಿ ಅರವತ್ತು ದಾಟಿದ ತಿಪ್ಪಮ್ಮನನ್ನು ಬಿಟ್ಟರೆ ಉಳಿದ ಎಲ್ಲಾ ಸದಸ್ಯರು ತಮ್ಮ ಕುಟುಂಬದ ಆದಾಯ ಗಳಿಕೆಯಲ್ಲಿ ಸಮ ಪಾಲುದಾರರು.

ಎಲ್ಲಾ ದೇವರ ಹೆಸರಿನಲ್ಲಿ

ಊರಿನ ಸಾಂಸ್ಕೃತಿಕ ಆಚರಣೆಗಳು ಕೃಷಿ ಪ್ರಧಾನ ವ್ಯವಸ್ಥೆಯನ್ನೇ ಸೂಚಿಸುತ್ತಿದೆ. ಆದುದರಿಂದ ಇಂದು ಕೂಡ ಸಮಾಜದ ಮೇಲು ಜಾತಿಗಳಿಗೆ ತಮ್ಮ ಯಜಮಾನಿಕೆಯನ್ನು ಮುಂದುವರಿಸಲು ಕಷ್ಟವಾಗುತ್ತಿಲ್ಲವೆಂದು ವಿವರಿಸಿದ್ದೇನೆ. ಇದೇ ವಿಚಾರಕ್ಕೆ ಪೂರಕವಾದ ಇತರ ಕೆಲವು ಅಂಶಗಳನ್ನು ಗಮನಿಸುವಾ. ತಿಮ್ಮಪ್ಪನ ತೇರಿನ ಗಾಲಿ ಮುರಿದು ಹಲವಾರು ವರ್ಷ ತೇರು ನಡೆದಿರಲಿಲ್ಲ. ೧೯೭೮ರಲ್ಲಿ ಹನುಮಂತಪ್ಪನವರು ಮೇಟಿ ಚಂದ್ರಶೇಖರಪ್ಪ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿ ಅಧ್ಯಕ್ಷರಾದರು. ತೇರು ನಡಿಯದೆ ಇರುವುದರಿಂದಲೇ ಊರಿನಲ್ಲಿ ಲಿಂಗಾಯತರ ಮಧ್ಯೆ ಇಷ್ಟೊಂದು ಜಗಳ ನಡೆಯುತ್ತಿದೆ. ತೇರು ನಡೆಸಿದರೆ ಶಾಂತಿಯಾದೀತೆಂದು ತೇರು ನಡೆಸಲು ತಿರ್ಮಾನಿಸಿದರು. ತೇರನ್ನು ಪುನರ್ ಆರಂಭಿಸುವಲ್ಲಿ ಹನುಮಂತಪ್ಪನವರ ಮನೆ ದೇವರು ತಿಮ್ಮಪ್ಪನೇ ಆಗಿರುವುದು ಕೂಡ ಸ್ವಲ್ಪ ಪ್ರಭಾವ ಬೀರಿರಬಹುದು. ಮಾಜಿ ಅಧ್ಯಕ್ಷ ಚಂದ್ರಶೇಖರಪ್ಪನವರು ತೇರು ನಡೆಸುವುದನ್ನು ವಿರೋಧಿಸಿದರು. ಅವರ ವಿರೋಧಕ್ಕೆ ಕಾರಣ ಊರಲ್ಲಿ ತೇರು ನಡಿಯಬಾರದೆಂದಲ್ಲ. ಅದು ಹನುಮಂತಪ್ಪ ಅಧಿಕಾರದಲ್ಲಿರುವಾಗ ನಡಿಯಬಾರದು ಅಷ್ಟೆ. ಮೇಟಿಯವರ ವಿರೋಧದ ನಡುವೆಯೂ ತೇರು ನಡಿಯುವುದು ಖಂಡಿತವಾಯಿತು. ಉತ್ಸವಕ್ಕೆ ಸಿದ್ಧತೆ ನಡಿಯುತ್ತಿದ್ದಂತೆ ಅದನ್ನು ನಿಲ್ಲಿಸುವುದು ಹೇಗೆಂದು ಮೇಟಿಯವರು ಯೋಚಿಸುತ್ತಿದ್ದರು ಅಥವಾ ಮಾತಾಡಿಕೊಳ್ಳುತ್ತಿದ್ದರು. ತೇರಿನ ದಿನ ಹತ್ತಿರ ಬಂದಂತೆ ಊರ ವಾತಾವರಣ ಕಾವೇರಿತ್ತಿತ್ತು. ಹೊಡೆದಾಟಗಳಾಗುವ ಸಾದ್ಯತೆ ಕಂಡು ಹನುಮಂತಪ್ಪನವರು ಸಂಡೂರು (ಆಗ ಪಿ.ಕೆ.ಹಳ್ಳಿ ಸಂಡೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿತ್ತು) ಪೋಲಿಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಸಬ್‌ಇನ್‌ಸ್ಪೆಕ್ಟರ್ ದೇಸಾಯಿಯವರ (ಪೋಲಿಸ್) ಬಂದೋಬಸ್ತಿನಲ್ಲಿ ತೇರು ನಡಿಯಿತು. ತೇರು ಮುಗಿದ ನಂತರ ದೇಸಾಯಿಯವರು ಗುಡಿಯೊಳಗೆ ಹೋಗಿ ಮೂರ್ತಿಗಳನ್ನು ನೋಡಿದರೆ ಮೂರ್ತಿಗಳು ಭಿನ್ನವಾಗಿರುವುದು ಅವರ ಗಮನಕ್ಕೆ ಬಂತು.

ಊರ ಪ್ರಮುಖರ ಸಭೆ ಕರೆದು ಮೂರ್ತಿ ಭಿನ್ನವಾದ ವಿಷಯ ತಿಳಿಸಿದರು. ಊರವರ ಮಧ್ಯೆ ಸತತ ಜಗಳಕ್ಕೆ ಹನುಮಂತಪ್ಪನವರು ತೇರು ನಡಿಯದೇ ಇರುವುದೇ ಕಾರಣವೆಂದರೆ ದೇಸಾಯಿಯವರು ಮೂರ್ತಿ ಭಿನ್ನವಾದುದು ಕಾರಣವೆಂದರು. ಭಿನ್ನವಾದ ಮೂರ್ತಿಯ ಬದಲು ಹೊಸ ಮೂರ್ತಿಯನ್ನು ಮಾಡಿಸದಿದ್ದರೆ ಊರ ಗಣ್ಯರ ಜಗಳ ಮುಂದುವರಿಯಬಹುದೆಂದು ದೇಸಾಯಿಯವರು ಅಭಿಪ್ರಾಯ ಪಟ್ಟರು. ಊರವರೆಲ್ಲಾ ಅವರ ಶಕ್ತ್ಯನುಸಾರ ವಂತಿಗೆ ನೀಡಿದರೆ ಹೊಸ ಮೂರ್ತಿ ಮಾಡಿಸಬಹುದೆಂದು ಸಲಹೆ ಇತ್ತರು. ಊರವರು ಒಪ್ಪಿದರು. ಮುಂದಾಗಿ ದೇಸಾಯಿಯವರು ಅವರ ಪಾಲಿನ ಒಂದು ಸಾವಿರ ರೂಪಾಯಿ ಕೊಟ್ಟರು. ಉಳಿದ ಹಣ ಊರಲ್ಲಿ ಸಂಗ್ರಹವಾಯಿತು. ದೇಸಾಯಿಯವರು ಖುದ್ದಾಗಿ ಅರಸಿಕರೆಯಲ್ಲಿ ತಿಮ್ಮಪ್ಪ, ಲಕ್ಷ್ಮೀ ಮತ್ತು ಪಾರ್ವತಿಯ ವಿಗ್ರಹಗಳನ್ನು ಮಾಡಿಸಿ ತಂದರು. ಜತೆಗೆ ಆ ವಿಗ್ರಹಗಳ ಸ್ಥಾಪನೆಯಂದಿನ ಖರ್ಚಿಗಾಗಿ ಎರಡು ಮೂಟೆ ಜೋಳ ಮತ್ತು ಒಂದು ಮೂಟೆ ಅಕ್ಕಿ ಕಳುಹಿಸಿದರು.

ನಂಬಿಕೆ ಮತ್ತು ರಾಜಕೀಯ ಜತೆಗಿರುವುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಅಂದು ರಾಜಕೀಯ ಮೇಲು ಜಾತಿಯವರಿಗೆ ಸೀಮಿತವಾಗಿತ್ತು. ಯಜಮಾನಿಕೆಗಾಗಿ ಮೇಲು ಜಾತಿಯೊಳಗಿನ ಗುಂಪುಗಳ ನಡುವೆ ನಡಿಯುವ ಘರ್ಷಣೆಗಳು ಊರಿನ ಜಗಳವಾಗಿತ್ತು. ಅದರ ಶಾಂತಿ ಊರಿನ ಶಾಂತಿ. ಜಗಳಕ್ಕೆ ಕಾರಣವನ್ನು ಊರಿನ ರಾಜಕೀಯದಲ್ಲಿ ಹುಡಕಲಿಲ್ಲ; ದೇವರಲ್ಲಿ ಹುಡುಕಲಾಯಿತು. ದೇವರನ್ನು ತೃಪ್ತಿಪಡಿಸುವ ಮೂಲಕ ಊರಲ್ಲಿ ಶಾಂತಿಗೆ ಪ್ರಯತ್ನಿಸಲಾಯಿತು. ಇದೇ ಸಂದರ್ಭದಲ್ಲಿ ಕೆಳ ಜಾತಿಯವರ ಮಧ್ಯೆ ಕೂಡ ಘರ್ಷಣೆಗಳಿದ್ದವು. ಅವುಗಳು ಊರಿನ ಶಾಂತಿ ಕದಡುವ ಅಂಶಗಳಾಗಿರಲಿಲ್ಲ. ಯಾಕೆಂದರೆ ಅವುಗಳ ಪರಿಹಾರ ಊರಿನ ಮೇಲು ಜಾತಿ/ವರ್ಗಗಳಿಗೆ ಸೀಮಿತವಾಗಿದ್ದ ರಾಜಕೀಯ ಶಕ್ತಿಯಿಂದ ಸಾಧ್ಯವಾಗಿತ್ತು: ದೇವರು ಬರುವ ಅವಶ್ಯಕತೆ ಇರಲಿಲ್ಲ. ಇಡೀ ಪ್ರಕರಣದಲ್ಲಿ ಊರು ಶಾಂತಿ ಕದಡುತ್ತದೆ. ಹಿಂದೆ ಊರಲ್ಲಿ ಚುನಾವಣೆಗಳು ನಡೆಯುವಾಗಲೂ ಇದೇ ವಾತಾವರಣ ಪೈಪೋಟಿ ಇಡೀ ಊರಿನ ಅಳಿವು ಉಳಿವಿನ ಪ್ರಶ್ನೆಯಾಗುತ್ತಿತ್ತು. ಅಂದರೆ ಊರು, ಅಲ್ಲಿನ ಸಂಸ್ಕೃತಿ, ಸಮಸ್ಯೆ ಇವೆಲ್ಲಾ ಅಲ್ಲಿನ ಎಲ್ಲರ ಸಮಸ್ಯೆಯೂ ಅಲ್ಲ ಸಂಸ್ಕೃತಿಯು ಅಲ್ಲ ಅಲ್ಲಿನ ಮೇಲು ಜಾತಿಗಳ ಸಂಸ್ಕೃತಿ ಅಥವಾ ಸಮಸ್ಯೆ ಊರಿನ ಅಥವಾ ಎಲ್ಲರ ಸಮಸ್ಯೆ ಅಥವಾ ಸಂಸ್ಕೃತಿಯಾಗುತ್ತದೆ. ಇದು ಹೆಚ್ಚು ಕಡಿಮೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಇದ್ದಂತೆ. ಸಮಾಜದ ಮೇಲ್ವರ್ಗಗಳ ಹಿತಾಸಕ್ತಿ ದೇಶದ ಹಿತಾಸಕ್ತಿ. ಅದರ ರಕ್ಷಣೆಗೆ ಎಲ್ಲರೂ ಸಿದ್ಧರಾಗಬೇಕು.

ಮೇಲು ಜಾತಿ/ವರ್ಗಗಳು ಮತ್ತು ಊರ ಇತರರ ಮೇಲೆ ಅದರ ಯಜಮಾನಿಕ ಸತತ ಒಂದೇ ರೀತಿ ಇಲ್ಲ. ಆಧುನೀಕರಣದೊಂದಿಗೆ ಊರು ತಾಲ್ಲೂಕು, ಜಿಲ್ಲಾ, ರಾಜ್ಯ ಕೇಂದ್ರಗಳೊಂದಿಗೆ ಸೇರಿಕೊಂಡಿದೆ. ಅದೊಂದು ದ್ವೀಪವಾಗಿ ಉಳಿದಿಲ್ಲ. ಎಂ.ವೈ.ಘೋರ್ಪಡೆಯವರ ಮಾತಿನಲ್ಲಿ ಹೇಳುವುದಾದರೆ ಇಂದು ನಾವು ಗ್ಲೋಬಲ್ ವಿಲೇಜ್ ಬಗ್ಗೆ ಮಾತಾಡುತ್ತಿದ್ದೇವೆ. ವಿಲೇಜ್ ರಿಪಬ್ಲಿಕ್ ಪ್ರಾಚೀನವಾದುದು. ಇಂದು ಅವು ಸಾಧ್ಯವಿಲ್ಲ. ಇಂದು ಹಳ್ಳಿಗಳು ಸಂಪರ್ಕ ಜಾಲದೊಳಗೆ ಅಂತರ್ಗತಗೊಂಡು ಬಿಟ್ಟಿವೆ.[1] ಪರಿವರ್ತಿತ ಸನ್ನಿವೇಶದಲ್ಲಿ ಊರಿನ ರಾಜಕೀಯ ಅಧಿಕಾರದ ಹಂಚುವಿಕೆಯಲ್ಲಿ ಸ್ವಲ್ಪ ಮಟ್ಟಿನ ಪರಿವರ್ತನೆ ಸಾಧ್ಯವಾಗಿದೆ. ಮೇಲ್ವರ್ಗದ ಯಜಮಾನಿಕ ಪ್ರಶ್ನಾತೀತವಲ್ಲ. ಅದಕ್ಕೆ ಸೆಡ್ಡು ಹೊಡಿಯುವ ಪ್ರಕ್ರಿಯೆ ನಿರಂತರ. ಆದರೆ ಬದಲಾದ ಪರಿಸರದಲ್ಲಿ ಅಂತಹ ಪ್ರಕ್ರಿಯಗಳು ತುಂಬಾ ಸ್ಪಷ್ಟವಾಗಿ ಗೋಚರಿಸಬಹುದು. ತಿಮ್ಮಪ್ಪನ ತೇರಿನ ಜಗಳದ ವಿಶ್ಲೇಷಣೆಯಲ್ಲಿ ಮೇಲು ಜಾತಿ/ವರ್ಗಗಳ ನಡುವೆ ಯಜಮಾನಿಕೆಗಾಗಿ ನಡಿಯುವ ಹೋರಾಟವನ್ನು ನೋಡಿದ್ದೇವೆ. ಈಗ ದೇವರಿಗೆ ಸಂಬಂಧಿಸಿದ ಮತ್ತೊಂದು ಉದಾಹರಣೆಯ ಮೂಲಕ ಕೆಳಜಾತಿ/ವರ್ಗಗಳು ಹಳ್ಳಿಯ ರಾಜಕೀಯದಲ್ಲಿ ತಮ್ಮ ಪಾಲು ಪಡೆಯಲು ಪ್ರಯತ್ನಿಸುವುದನ್ನು ನೋಡುವಾ.

೪೦ ವರ್ಷಗಳ ಹಿಂದೆ ಲಿಂಗಾಯತರ ಕಳಗೇರ ತಿಮ್ಮಪ್ಪನವರು ಎರಡು ಎಕ್ರೆಭೂಮಿಯನ್ನು ತಿಮ್ಮಪ್ಪನ ಗುಡಿಗೆ ಉಂಬಳಿಯಾಗಿ ಕೊಟ್ಟರು. ಆ ಭೂಮಿಯ ಕೃಷಿ ಮಾಡುವ ಜವಾಬ್ದಾರಿ ಗುಡಿಯ ಪೂಜಾರಿಗೆ (ಕುರುಬರು) ಬಂತು. ೧೯೭೦ರ ಭೂ ಸುಧಾರಣೆ ಕಾಯ್ದೆ ಜಾರಿ ಬಂದ ಸಂದರ್ಭದಲ್ಲಿ ಗಿಡಿಯ ಪೂಜಾರಿ ಸೆವೆನ್ ಫಾರ್ಮ್ ಹಾಕಿ (ಊರವರು ಬಳಸುವ ಪದ) ಭೂಮಿಯನ್ನು ತನ್ನದಾಗಿಸಿಕೊಂಡ. ಕೆಲವು ವರ್ಷಗಳ ನಂತರ ಆ ಭೂಮಿಯನ್ನು ಆರ್.ಸಿ.ಎಲ್. ಕ್ರಶರ್ ಕಂಪೆನಿಗೆ (ಜಲ್ಲಿ ಕಲ್ಲು ಮಾಡುವ ಕಂಪೆನಿ) ವರ್ಷಕ್ಕೆ ಎಕ್ರೆಗೆ ರೂ. ೨೦೦೦ದಂತೆ ೨೦ ವರ್ಷಕ್ಕೆ ಒತ್ತೆ ಇಟ್ಟ. ಆ ವ್ಯವಹಾರದಿಂದ ಬಂದ ರೂ. ೮೦೦೦ವನ್ನು ವಿನಿಯೋಜಿಸಿ ತನ್ನದೇ ಒಂದು ಕ್ರಶರ್ ಉದ್ಯಮ ಆರಂಭಿಸಿದ. ಇಷ್ಟೆಲ್ಲಾ ನಡೆದರೂ ಊರವರು ಪೂಜಾರಿಯನ್ನು ತರಾಟೆಗೆ ತೆಗೆದುಕೊಂಡಿಲ್ಲ. ಪ್ರತಿಯೊಬ್ಬರೂ ಪೂಜಾರಿಯ ಈ ವ್ಯವಹಾರವನ್ನು ಹಿಂದಿನಿಂದ ಆಡಿಕೊಳ್ಳುತ್ತಾರೆ. ಪಂಚಾಯತ್ ಕರೆದು ಆತನನ್ನು ದಂಡಿಸುವ ಗೋಜಿಗೆ ಹೋಗಿಲ್ಲ. ಯಾಕೆ ಹೀಗಾಯಿತು? ಪೂಜಾರಿ ಮೇಲು ಜಾತಿಗೆ ಸೇರಿದವನಲ್ಲ. ಆದಾಗ್ಯೂ ಯಾಕೆ ಮೇಲು ಜಾತಿಯವರು ಮತ್ತು ಪ್ರಮುಖರು ಈ ವಿಚಾರವನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ಅರ್ಥವಾಗಿರಲಿಲ್ಲ.

ಪೂಜಾರಿಯ ಈ ವ್ಯವಹಾರವೆಲ್ಲಾ ನಡೆದಿರುವುದು ೧೯೭೪ರ ನಂತರ. ಆತ ಭೂಮಿ ಒತ್ತೆ ಇಟ್ಟು ಕ್ರಶರ್ ಆರಂಭಿಸಿದ್ದ ಇತ್ತೀಚೆಗೆ. ಈ ಅವಧಿಯಲ್ಲಿ ಊರಿನ ರಾಜಕೀಯದಲ್ಲಿ ಆದ ಏರುಪೇರುಗಳನ್ನು ಗಮನಿಸಿಬೇಕು. ೧೯೭೦ರ ಗಲಾಟೆಯ ನಂತರ ಮೇಟಿಯವರಿಗೆ ಕೆಳ ಜಾತಿಯವರನ್ನು ಹಿಂದಿನದೇ ಕ್ರಮದಲ್ಲಿ ಅಂಕಿತದಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತಾ ಬಂತು. ಜೀತ ಪದ್ಧತಿಯ ನಿಲುಗಡೆ ಮೇಟಿಯವರ ಆರ್ಥಿಕ ಶಕ್ತಿಯನ್ನು ಕುಗ್ಗಿಸಿತು. ಹೀಗೆ ಊರಿನ ರಾಜಕೀಯವನ್ನು ೩೦ವರ್ಷದಿಂದ ಸಂಪೂರ್ಣವಾಗಿ ಹಿಡಿತದಲ್ಲಿಟ್ಟು ಕೊಂಡಿದ್ದ ಕುಟುಂಬ ನೇಪಥ್ಯಕ್ಕೆ ಸರಿಯುವ ಕಾಲಘಟ್ಟವದು. ೧೯೮೭ರ ಮಂಡಲ ಪಂಚಾಯತ್ ರಿಸರ್‌ವೇಷನ್ ಮೂಲಕ ಕೆಳಜಾತಿಯವರ ಪ್ರತಿನಿಧೀಕರಣವನ್ನು ಹೆಚ್ಚಿಸಿತು. ಜತೆಗೆ ಮಂಡಲ ಪ್ರಧಾನರ ಹುದ್ದೆ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು. ಆ ಸಂದರ್ಭದಲ್ಲಿ ಗುಡಿಯ ಪೂಜಾರಿ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯ ಕೂಡ ಆಗಿದ್ದ. ಪೂಜಾರಿ ಮಂಡಲ ಸದಸ್ಯನಾಗಲು ಉತ್ಸಾಹ ತೋರುತ್ತಿದ್ದ. ಊರ ಪ್ರಮುಖರು ಒಟ್ಟು ಸೇರಿ ಆತನ ಬದಲು ಮಲ್ಲಪ್ಪನವರನ್ನು ಮಂಡಲ ಪ್ರಧಾನರಾಗಿ ಮಾಡಿದರು; ಆತನನ್ನು ಅಧಿಕಾರದಿಂದ ದೂರ ಇಟ್ಟರು. ಆದರೂ ಬದಲಾದ ಪರಿಸರದಲ್ಲಿ ಪಾರಂಪರಿಕ ಶಕ್ತಿಗಳು ತಮ್ಮ ಹಿಂದಿನ ಯಜಮಾನಿಕೆಯನ್ನು ಯಥಾ ರೂಪದಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಮೇಲು ಜಾತಿಯ ಕೆಲವು ಹಿರಿಯರಲ್ಲಿ ಚರ್ಚಿಸಿದೆ. ಅವರ ಪ್ರಕಾರ, ‘ನಾವು ಈತನ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವುದಾದರೂ ಹೇಗೆ? ಆತ ಕೋರ್ಟ್, ಕಛೇರಿ ಅಂತ ಎಗರಾಡುತ್ತಿದ್ದ. ಅದನ್ನು ಪರಿಹರಿಸುವುದು ನಮ್ಮ ಮಿತಿಯೊಳಗೆ ಇರಲಿಲ್ಲ. ಅದಕ್ಕಾಗಿ ಸಮ್ಮನಿದ್ದೇವೆ’ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಆಧುನಿಕ ಸಂಸ್ಥೆಗಳು ಯಾರಿಗೆ ಮತ್ತು ಯಾವ ಶಕ್ತಿ ಎನ್ನುವ ವಿಶ್ಲೇಷಣೆಯೇ ತುಂಬಾ ಸಂಕೀರ್ಣವಾದುದು. ಇದೇ ಘಟನೆಯನ್ನು ಊರವರ ತೀರ್ಮಾನಕ್ಕೆ ಬಿಡುತ್ತಿದ್ದರೆ ತಕ್ಕ ಮಟ್ಟಿನ ನ್ಯಾಯ ದೊರಕುತ್ತಿತ್ತೋ ಏನೋ. ಆತನಿಗೆ ಕೋರ್ಟ್, ಕಛೇರಿಗಳು ಬಂದು ತನ್ನ ಹಕ್ಕನ್ನು ಸ್ಥಾಪಿಸಲು ಅನುಕೂಲವಾಯಿತು. ಆದರೆ ಆತನ ಹಕ್ಕು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಇಡೀ ಸಮುದಾಯದ ಆಸಕ್ತಿ ಬಲು ಪಶುವಾಗಬೇಕಾಯಿತು. ಸಮುದಾಯದ ಬಲಿಪಶು ಮಾಡುವ ಪಾಠವನ್ನು ಆತ ಕೊರ್ಟ್, ಕಛೇರಿಯಿಂದ ಕಲಿತಿಲ್ಲ; ತಾನು ಹುಟ್ಟಿ ಬೆಳೆದ ಸಂಸ್ಕೃತಿಯಿಂದಲೇ ಕಲಿತಿದ್ದಾನೆ. ಆತನ ಕಣ್ಣ ಮುಂದೆ ಹಲವಾರು ದಶಕಗಳಿಂದ ಮೇಲು ಜಾತಿಯವರು ಸಮುದಾಯದ ಆಸಕ್ತಿಯನ್ನು ಬಲಿಕೊಡುವುದನ್ನು ಆತ ಕಣ್ಣಾರೆ ನೋಡಿದ್ದಾನೆ.

ಮೇಲಿನ ಘಟನೆಯ ಪೂಜಾರಿ ಮೇಲು ಜಾತಿಗಳ ಸಾಲಿನಲ್ಲಿ ಬರುವುದಿಲ್ಲ. ಸ್ಥಳೀಯ ಸಾಮಾಜಿಕ ಶ್ರೇಣಿಯಲ್ಲಿ ಲಿಂಗಾಯತರ ನಂತರ ಬರುವ ಜಾತಿಗಳ ಕುರುಬರು ಮುಖ್ಯರು. ಪ್ರಜಾಪ್ರಭುತ್ವ ಮತ್ತು ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಮೂಲಕ ಇವರು ಕೂಡ ರಾಜಕೀಯದಲ್ಲಿ ಪ್ರಭಾವಿಗಳಾಗಲು ಪ್ರಯತ್ನಿಸುತ್ತಿದ್ದಾರೆ. ಅವರು ರಾಜಕೀಯವಾಗಿ ಪ್ರಬಲರಾಗಿದ್ದಾರೆ ಎನ್ನುವುದರ ಒಂದು ಸೂಚನೆ ಪೂಜಾರಿ ಗುಡಿಯ ಆಸ್ತಿಯನ್ನು ತನ್ನ ಖಾಸಗಿ ಲಾಭಕ್ಕಾಗಿ ಬಳಸಿಕೊಂಡದ್ದು. ಇದೇ ಘಟನೆ ಮುಂದಿನ ರಾಜಕೀಯ ಬೆಳವಣಿಗೆ ಮತ್ತು ಕೆಳ ಜಾತಿಯವರು ಅಧಿಕಾರವನ್ನು ಬಳಸಿಕೊಂಡ ರೀತಿಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಬಹುದು. ಶೋಷಣೆ ಮತ್ತು ಅದರ ವಿರುದ್ದ ನಡಿಯುವ ಹೋರಾಟದ ಗುರಿಯೇನು? ಶೋಷಣೆ ರಹಿತ ಸಮಾಜ ನಿರ್ಮಾಣವೇ? ಇಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಕ್ಕೆ ಬರುವುದಾದರೆ ಶೋಷಣೆ ರಹಿತ ಸಮಾಜ ನಿರ್ಮಾಣ ಈ ರಾಜಕೀಯ ಪರಿವರ್ತನೆಗಳಿಂದ ಕಂಡು ಬರುತ್ತಿಲ್ಲ. ಇಡೀ ಪ್ರಕ್ರಿಯೆಯ ಮೂಲ ಉದ್ದೇಶಗಳು ಬೇರೆಯವೇ ಇರಬಹುದು. ಆ ಉದ್ದೇಶಗಳು ತಳಮಟ್ಟದಲ್ಲಿ ಕಾರ್ಯರೂಪಕ್ಕೆ ಬರುವಾಗ ವಿಕೃತ ರೂಪ ಪಡೆಯುತ್ತಿವೆ. ಶತಮಾನಗಳಿಂದ ತುಳಿತಕ್ಕೆ ಒಳಗಾದವರಿಗೆ ಅಧಿಕಾರ ಸಿಕ್ಕಿದಾಗ ಅವರು ಇಷ್ಟರವರೆಗೆ ಯಜಮಾನಿಕ ಮಾಡಿದವರಿಗಿಂತ ಭಿನ್ನವಾಗಿ ಅಧಿಕಾರವನ್ನು ಬಳಸುತ್ತಾರೆ ಎನ್ನುವ ದೂರದ ಕನಸಿದೆ. ಮೇಲು ಜಾತಿ/ವರ್ಗಗಳ ಅಧಿಕಾರ ಚಲಾಯಿಸಿದ ರೀತಿಗಳು, ಕ್ರಮಗಳು, ಅಕ್ರಮಗಳು ಇವರಿಗೆ ಆದರ್ಶವಾಗಲಾರವು ಎನ್ನುವ ಆಶಯವಿದೆ.

ಆದರೆ ಇಲ್ಲಿ ಮೇಲು ಜಾತಿ/ವರ್ಗಗಳ ಅಧಿಕಾರ ಬಳಕೆಯ ಶೈಲಿಯನ್ನು ಕೆಳಜಾತಿಯವರು ಅನುಕರಿಸುವಂತೆ ತೋರುತ್ತದೆ. ಇದಕ್ಕೆ ಸಮಾಜ ಶಾಸ್ತ್ರಜ್ಞರು ತಮ್ಮದೇ ವಿವರಣೆ ನೀಡಿದ್ದಾರೆ.[2] ಮೇಲು ಮತ್ತು ಕೆಳ ಜಾತಿ ಅಥವಾ ಶೋಷಕ ಮತ್ತು ಶೋಷಿತ ಸಂಬಂಧ ಯಾವುದೋ ನಿರ್ವಾತ ವಾತಾವರಣದಲ್ಲಿ ಇರುವುದಿಲ್ಲ. ಅದು ಒಂದು ಚಾರಿತ್ರಿಕವಾಗಿ ರೂಪಗೊಂಡ ಸಾಮಾಜಿಕ ಸಂಬಂಧವೇ ಆಗಿದೆ. ಇದರಿಂದಾಗಿ ಇವರಿಬ್ಬರ ನಡುವೆ ಕೇವಲ ದುಡಿವ ಮತ್ತು ದುಡಿಸುವ ಸಂಬಂಧ ಮಾತ್ರವಲ್ಲ, ಇತರ ಸಂದರ್ಭದಲ್ಲೂ ಪರಸ್ಪರ ಬೆರೆಯುವ ಮತ್ತು ವ್ಯವಹರಿಸುವ ಸಂಬಂಧವಿದೆ. ಹಿಂದಿನ ಪುಟಗಳಲ್ಲಿ ಗತಕಾಲದ ಮತ್ತು ಈಗಿನ ಪಂಚಾಯತ್ ವ್ಯವಸ್ಥೆಗಳನ್ನು ಹೋಲಿಸಿ ಯಾವುದು ಉತ್ತಮ ಎಂದು ಕೇಳಿದಾಗ ಹಿಂದಿನ ಪಂಚಾಯತ್ ಎಂದು ಕೆಲವು ಹರಿಜನ ಹಿರಿಯರು ಸೂಚಿಸಿದ್ದನ್ನು ನೋಡಿದ್ದೇವೆ. ಆ ಅಭಿಪ್ರಾಯದ ಹಿಂದೆ ವರ್ತಮಾನದ ನಿರಾಶೆಯ ಪಾತ್ರವೂ ಇರಬಹುದು. ಇದರ ಜತೆಗೆ ಅದೇ ಹಿರಿಯರ ಸ್ಥಾನದಲ್ಲಿ ನಿಂತು ಅವರು ಚಾರಿತ್ರಕವಾಗಿ ರೂಢಿಸಿಕೊಂಡ ಬದುಕು ಮತ್ತು ಮೌಲ್ಯಗಳ ಹಿನ್ನಲೆಗಳಿಂದ ಆಲೋಚಿಸಿದರೆ ಶೋಷಕ ಮತ್ತು ಶೋಷಿತರ ಸಾಮಾಜಿಕ ಸಂಬಂಧದ ಅರಿವಾಗಬಹುದು. ಕೆಳವರ್ಗದವರು ಅಲ್ಲಿನ ಎಲ್ಲಾ ಸಂದರ್ಭಗಳಲ್ಲೂ ಮತ್ತು ಎಲ್ಲಾ ವ್ಯವಹಾರಗಳಲ್ಲೂ ಶೋಷಣೆಯನ್ನು ಮಾತ್ರ ಗೃಹಿಸುತ್ತಿದ್ದರು ಎನ್ನುವುದು ಸರಿಯಾಗಲಿಕ್ಕಿಲ್ಲ. ಲಿಂಗಾಯತ ಹಿರಿಯರಲ್ಲಿ ಜೀತ ಪದ್ಧತಿ ಬಗ್ಗೆ ವಿಚಾರಿಸಿದರೆ ನೋಡ್ರಿ ಆತ ನಮಗೆ ಜೀತದ ಆಳಲ್ಲ; ನಮ್ಮ ಆಳು ಮಗ. ಅವನ ಕಷ್ಟ ಸುಖದಲ್ಲಿ ನಮ್ಮ ಕುಟುಂಬದ ಸದಸ್ಯರಂತೆ ನಾವು ಭಾಗಿಗಳಾಗುತ್ತೇವೆ. ಮನೆ ಕೆಲಸದ ಆಳನ್ನು ಕುಟುಂಬ ಸದಸ್ಯ ಎಂದು ಘೋಷಿಸಿದ ಕೂಡಲೇ ಆತ ಕುಟುಂಬದ ಆಸ್ತಿಯಲ್ಲಿ ಪಾಲುದಾರನೂ ಆಗುವುದಿಲ್ಲ ಅಥವಾ ಇತರ ಸದಸ್ಯರಂತೆ ಆತನನ್ನು ನೋಡುವುದೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಇಲ್ಲಿ ನಾವು ವಿಮರ್ಶಿಸಬೇಕಾಗಿರುವುದು ಆಧುನಿಕ ಶಿಕ್ಷಣ ಪಡದು ಲಿಬರಲ್ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿಯ ಸ್ಥಾನದಿಂದ ಅಲ್ಲ. ಜೀತಕ್ಕೆ ದುಡಿಯುವ ಆಳಿನ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಇದಕ್ಕೆ ಬೇರೆ ವಿವರಣೆಗಳು ಸಾಧ್ಯವಾಗಬಹುದು. ಮೇಲಿನ ಪದಗಳು ತುಂಬಾ ಸೀಮಿತ ಬದುಕು ಸಾಧ್ಯವಿರುವ ಜೀತದಾಳಿನ ಶೋಷಣೆಯನ್ನು ಮಾನವೀಯಗೊಳಿಸುತ್ತವೆ. ಆ ಪದಗಳಿಗೆ ಅದಕ್ಕಿಂತ ಹೆಚ್ಚಿನ ವಿವರಣೆ ನೀಡುವಷ್ಟು ಜೀತದ ಆಳಿನ ಪ್ರಪಂಚ ವಿಸ್ತರಿಸಿಲ್ಲ.

ಹೀಗೆ ಶೋಷಕ ಮತ್ತು ಶೋಷಿತ ಸಂಬಂಧಗಳು ಎಷ್ಟೇ ಅಸಹ್ಯವಾದರೂ ಅದೊಂದು ಚಾರಿತ್ರಿಕವಾಗಿ ರೂಪುಗೊಂಡು ಸಂಬಂಧ ಮತ್ತು ಅದರಿಂದ ಇಬ್ಬರೂ ಪ್ರಭಾವಿತರು. ಅದರಲ್ಲಿ ಪರಸ್ಪರರು ಇಷ್ಟ ಪಡದ ಮತ್ತು ಇಷ್ಟ ಪಡುವ ಅಂಶಗಳು ಇರಬಹುದು. ತಮ್ಮ ಕೈಕೆಳಗೆ ದುಡಿಯುವ ವ್ಯಕ್ತಿಯೊಬ್ಬನ ಬಗ್ಗೆ ಗುಣಗಾನಗಳಿರಬಹುದು. ಆದರೆ ಕೆಳ ಜಾತಿಗಳ ಬಗ್ಗೆ ಮಾತನಾಡುವಾಗ ಒಳ್ಳೆಯ ಅಂಶಗಳು ಸರಾಗವಾಗಿ ಬರುವುದು ಅಪರೂಪವೇ. ಅದಕ್ಕೆ ಬದಲು ಕೆಳ ವರ್ಗಗಳ ಕೆಟ್ಟ ಗುಣಗಜಳ ಪಟ್ಟಿಯೇ ದೊರೆಯಬಹುದು, ಅವರ ಮೈಗಳ್ಳತನ, ಹೆಚ್ಚು ಸಂಬಳ ಕೇಳುವುದು, ಕಡಿಮೆ ಕೆಲಸ ಮಾಡುವುದು, ಪ್ರಮಾಣಿಕರಲ್ಲದಿರುವುದು, ಸುಳ್ಳು ಹೇಳುವುದು ಹೀಗೆ ದುಡಿತದ ವರ್ಗಕ್ಕೆ ಕೇವಲ ಮೆಟೀರಿಯಲ್ ವಂಚನೆ ಮಾತ್ರವಲ್ಲ ಸಾಮಾಜಿಕ ಸ್ಥಾನಮಾನದ ವಂಚನೆ ಕೂಡ ನಡೆದೇ ಇದೆ. ಕೆಳ ವರ್ಗದ ನಿಂದನೆ ಮತ್ತು ಅವಹೇಳನ ಮೇಲ್ವರ್ಗದ ಯಜಮಾನಿಕೆಗೆ ಅನಿವಾರ್ಯ, ಕೇವಲ ಸಂಪನ್ಮೂಲದ ಒಡೆತನ ಮೇಲ್ವರ್ಗಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ಯಜಮಾನಿಕೆಯನ್ನು ಕೊಡಮಾಡುವುದಿಲ್ಲ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ ಸಂಪನ್ಮೂಲದ ಯಜಮಾನಿಕೆಯನ್ನು ಕಾಪಾಡಲು ಅಗತ್ಯ. ಆದುದರಿಂದ ಕೆಳ ವರ್ಗದವರಲ್ಲಿ ಒಳ್ಳೆಯ ಅಂಶಗಳನ್ನು ಗುರುತಿಸುವುದ ತಮ್ಮ ವರ್ಗ ಹಿತಾಸಕ್ತಿ ದೃಷ್ಟಿಯಿಂದ ಸ್ವಲ್ಪ ಕಷ್ಟವೇ ಸರಿ. ಇದೇ ರೀತಿ ಕೆಳ ವರ್ಗದವರು ಮೇಲ್ವರ್ಗದವರ ಕುರಿತು ದ್ವೇಷಿಸುವ ಹಲವಾರು ಅಂಶಗಳಿರುತ್ತವೆ. ಮೇಲ್ವರ್ಗದ ದಬ್ಬಾಳಿಕೆ. ಸಮುದಾಯದ ಸಂಪನ್ಮೂಲಗಳು ಮತ್ತು ವ್ಯಕ್ತಿಗಳ ಮೇಲೆ ಅವರಿಗಿರುವ ಅಧಿಕಾರ, ಆ ಅಧಿಕಾರವನ್ನು ಅವರು ತಮ್ಮ ಇಚ್ಚೆಗೆ ಅನುಸಾರ ಬಳಸಿಕೊಳ್ಳುವ ರೀತಿ ಹೀಗೆ ಹಲವಾರು ವಿಚಾರಗಳ ಕುರಿತು ಮೇಲ್ವರ್ಗದ ಮೇಲೆ ಕೆಳ ವರ್ಗದವರಿಗೆ ಅಸಹನೆ ಇದೆ.

ಕೆಳ ವರ್ಗದವರ ದೃಷ್ಟಿಯಿಂದ ಮೇಲ್ವರ್ಗದ ನಾಯಕತ್ವದ ಶೈಲಿಯನ್ನು ಅವರ ಮಾತಿನಲ್ಲೇ ಕೇಳಬೇಕು. ಒಬ್ಬ ಹರಿಜನ ಹಿರಯರ ಪ್ರಕಾರ, ಹಿಂದೆ ಪಂಚಾಯತ್ ಚೇರ್‌ಮೆನ್ ಜತೆ ವ್ಯವಹರಿಸಬೇಕಾದರೆ ಎಷ್ಟು ಭಯ ಭಕ್ತಿ ಇತ್ತು. ಅವರನ್ನು ಕಂಡು ತಮ್ಮ ಅವಾಹಲು ಕೇಳಿಕೊಳ್ಳಬೇಕಾದರೆ ಜನ ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಈಗ ನೋಡಿ ನಮ್ಮ ವಡ್ಡರ ಹುಡುಗ ಕೂಡ ಚೇರ್‌ಮೆನ್ ಅಂತೆ. ಆ ಹುಡುಗನಿಗೆ ಹಿಂದಿಲ್ಲ ಮುಂದಿಲ್ಲ. ಏನು ಪಂಚಾಯತೋ ಏನು ಅಧ್ಯಕ್ಷರೋ, ಎಂದು ನಿಟ್ಟುಸಿರು ಬಿಟ್ಟರು. ಉದ್ವಾಳ ವೀರಪ್ಪನವರ ಸಿಟ್ಟು ಮತ್ತು ಅವರು ಜಾತ್ರೆಯಲ್ಲಿ ಗಲಾಟೆ ಮಾಡಿದವರಿಗೆ ಸಾರ್ವಜನಿಕವಾಗಿಯೇ ಥಳಿಸಿದ್ದು ಊರ ಎಲ್ಲರ ಬಾಯಲ್ಲಿ ಇಂದು ಕೂಡ ಮೆಚ್ಚುಗೆಯ ರೂಪದಲ್ಲಿ ವ್ಯಕ್ತವಾಗುತ್ತಿದೆ. ಇಡೀ ಊರಿನ ಯಜಮಾನಿಕೆಯನ್ನು ಮೇಟಿ ಕುಟುಂಬದವರು ಸುಮಾರು ಮೂವತ್ತು ವರ್ಷ ತಮ್ಮ ಇಚ್ಛೆಗೆ ಅನುಸಾರ ನಡೆಸಿದ್ದಾರೆ. ಅವರ ದಬ್ಬಾಳಿಕೆ, ಅಹಂಕಾರ, ಕೆಳ ಜಾತಿಯವರನ್ನು ತುಳಿಯುವ ಗುಣ ಇತ್ಯಾದಿಗಳು ಇಂದಿಗೂ ಮನೆ ಮಾತಾಗಿವೆ. ಆದರೆ ಅವುಗಳ ಜತೆಗೆ ನಂಬಿದವರನ್ನು ಕೈಬಿಡದೆ ಅವರ ಗುಣ, ಆಶ್ರಯ ಕೇಳಿದರೆ ಇಲ್ಲ ಎನ್ನದ ಗುಣ ಕೂಡ ಸುದ್ದಿಯಲ್ಲಿದೆ. ಕರೀಂಖಾನ್ ನಂತವರೇ ಅವರ ನಾಯಕತ್ವ ನಂಬಬಹುದಾದ ನಾಯಕತ್ವ ಎಂದು ಊರ ಪ್ರಮುಖರ ಸಹವಾಸ ಬಿಟ್ಟು ಮೇಟಿಯವರ ಜತೆ ಸೇರಿದ್ದಾರೆ. ಹೀಗೆ ಮೇಲು ಜಾತಿಯವರ ಯಜಮಾನಿಕೆಯ ವಿರುದ್ದ ಕೆಳಜಾತಿಯವರಿಗೆ ಕೇವಲ ದ್ವೇಷ ಅಥವಾ ಅಸಹನೆ ಮಾತ್ರ ಇತ್ತು ಎನ್ನುವುದು ಸರಿಯಲ್ಲ. ಇವುಗಳ ಜತೆಜತಗೆ ಅವರ ಯಜಮಾನಿಕೆಯ ಶೈಲಿಯನ್ನು ಕೆಳ ವರ್ಗ ಮೆಚ್ಚುತ್ತದೆ ಕೂಡ.

ಎರಡನೆಯದಾಗಿ ಕೆಳ ವರ್ಗ ತನ್ನ ಪ್ರತಿಭಟಯನ್ನು ಅಭಿವ್ಯಕ್ತಗೊಳಿಸುವ ವಿಧಾನ. ಮೇಲ್ವರ್ಗದ ಯಜಮಾನಿಕೆ ಬಲಯುತವಾಗಿರುವಾಗ ಕೆಳವರ್ಗದವರು ತಮ್ಮ ಅಸಹನೆಯನ್ನು ಪರೋಕ್ಷ ರೀತಿಯಲ್ಲಿ ತೋರಿಸಬಹುದು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರದಿರುವುದು, ಮಾಡಬೇಕಾದಷ್ಟು. ಪ್ರಮಾಣದಲ್ಲಿ ಕೆಲಸ ಮಾಡಿದಿರುವುದು, ಯಜಮಾನನ ಆಸ್ತಿಗೆ ಸಣ್ಣ ಪುಟ್ಟ ನಷ್ಟ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಬಹುದು. ಆದರೆ ಆರ್ಥಿಕ ಅಥವಾ ರಾಜಕೀಯ ಬದಲಾವಣೆಗಳಿಂದ ಯಜಮಾನಿಕೆ ಹಿಡಿತ ಸಡಿಲಗೊಂಡಾಗ ಕೆಳ ವರ್ಗದವರು ತಮ್ಮ ಅಸಹನೆಯನ್ನು ತೋರಿಸುವ ವಿಧಾನದಲ್ಲೂ ಪರಿವರ್ತನೆ ಮಾಡಿಕೊಳ್ಳಬಹುದು. ಹೊಸ ಸಂದರ್ಭದಲ್ಲಿ ಪರೋಕ್ಷ ವಿಧಾನಗಳು ಮರೆಯಾಗಬಹುದು. ಹಿಂದೆ ಮೇಲು ಜಾತಿಗಳ ಗುಣಗಳೆಂದು ದ್ವೇಷಿಸುತ್ತಾ ಇದ್ದ ಗುಣಗಳನ್ನು ಕೆಳ ಜಾತಿಯವರು ಅನುಸರಿಸುವ ಮೂಲಕ ತಾವು ಯಜಮಾನರಾಗಿದ್ದೇವೆ ಎಂದು ಸಾರಲು ಆರಂಭಿಸಬಹುದು.

ಮಂಡಲ ಪಂಚಾಯತ್ ಬರುವ ಹಿಂದಿನ ಪಂಚಾಯತ್ ವ್ಯವಸ್ಥೆ ಬಗ್ಗೆ ಊರಲ್ಲಿ ಮಾಹಿತಿ ಸಂಗ್ರಹಿಸುವಾಗ ಬಹುತೇಕ ಕೆಳ ಜಾತಿಯವರು ಲಿಂಗಾಯತರ ದಬ್ಬಾಳಿಕೆ ಕುರಿತು ದೂರಿದ್ದಾರೆ. ಮಂಡಲ ಪಂಚಾಯತ್ ಬರುವವರೆಗೂ ಇಡೀ ಹಳ್ಳಿಯ ಯಜಮಾನಿಕ ಕೆಲವೇ ಲಿಂಗಾಯತ ಕುಟುಂಬದಲ್ಲಿತ್ತು. ಅವರಿಗೆ ಅಧಿಕಾರ ಊರನ್ನು ಉದ್ದಾರ ಮಾಡಲು ಅಲ್ಲ: ತಮ್ಮ ಉದ್ಧಾರಕ್ಕಾಗಿ. ಊರಿನ ಕಾಮಗಾರಿಗಾಗಿ ಬಂದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಸೊಸೈಟಿಯಲ್ಲಿ, ಶಾಲಾ ವ್ಯವಸ್ಥಾಪಕ ಮಂಡಳಿಯಲ್ಲಿ, ಎಲ್ಲಾ ಕಡೆ ಲಿಂಗಾಯತರನ್ನೇ ತುಂಬಿಸಿದ್ದಾರೆ. ಹೀಗೆ ಹತ್ತು ಹಲವು ಅಪವಾದಗಳು. ಅದರ ಜತೆಗೆ ಕೆಲವು ಪಂಚಾಯತ್ ಚೇರ್‌ಮೆನ್‌ಗಳು ಶಾಲಾ ಟೀಚರ್‌ಗಳ ಜತೆ ಅಥವಾ ಇತರ ಸ್ತ್ರೀಯರೊಂದಿಗೆ ಸಂಪರ್ಕ ಹೊಂದಿರುವುದು ಇವೆಲ್ಲಾ ಊರವರ ಅದರಲ್ಲೂ ಕೆಳ ಜಾತಿಯವರ ದೃಷ್ಟಿಯಿಂದ ಹಿಂದಿನ ಅಧ್ಯಕ್ಷರುಗಳ ಅಪರಾಧವಾಗಿದ್ದವು. ಕಳೆದ ಪಂಚಾಯತ್‌ಲ್ಲಿ ಒಬ್ಬ ಲಿಂಗಾಯತ ಸದಸ್ಯರನ್ನು ಬಿಟ್ಟರೆ ಉಳಿದವರೆಲ್ಲಾ ಕೆಳ ಜಾತಿಯವರು. ಪ್ರಥಮ ಎರಡು ವರ್ಷ ಲಿಂಗಾಯತರೊಬ್ಬರು ಅಧ್ಯಕ್ಷರಾಗಿದ್ದರು. ನಂತರದ ಅವಧಿಯಲ್ಲಿ ಪರಿಶಿಷ್ಟ ಜಾತಿಯವರೊಬ್ಬರು ಅಧ್ಯಕ್ಷರು. ಹಿಂದೆ ಲಿಂಗಾಯತರ ವಶದಲ್ಲಿ ಪಂಚಾಯತ್ ಇದ್ದಾಗ ಏನೆಲ್ಲಾ ದೂರುಗಳಿದ್ದವೋ ಅವೆಲ್ಲಾ ಹೆಚ್ಚು ಕಡಿಮೆ ಇಂದಿನ ಸದಸ್ಯರ ಮತ್ತು ಅಧ್ಯಕ್ಷರ ಮೇಲೂ ಇವೆ. ಕಾಮಗಾರಿಗಳಿಗಾಗಿ ಬಂದ ದುಡ್ಡನ್ನು ತಮ್ಮಲ್ಲೇ ಹಂಚಿಕೊಂಡು ಕಳಪೆ ಕಾಮಗಾರಿಗಳನ್ನು ಮಾಡಿದ್ದಾರೆ. ಆಶ್ರಯ ಮನೆ ಕಟ್ಟಿಸಲು ಬರುವ ಸಾಮಾಗ್ರಿಗಳನ್ನು ಅಧ್ಯಕ್ಷರು ತಮ್ಮ ಸಂಬಂಧಿ ಮನೆಯಲ್ಲಿ ಇರಿಸಿ ಅವನ ಮೂಲಕ ಆಶ್ರಯ ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದರು. ಮಹಿಳಾ ಸದಸ್ಯರನ್ನು ಇವರು ತಮ್ಮ ಇಡೀ ಅವಧಿಯಲ್ಲಿ ಸರಿಯಾಗಿ ನಡೆಸಿಕೊಂಡೆ ಇಲ್ಲ. ಹಣ ಅಥವಾ ಫಲಾನುಭವಿಗಳ ನಿರ್ಧಾರದ ವಿಚಾರದಲ್ಲಿ ಮಹಿಳಾ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಇಲ್ಲ. ಸಣ್ಣಪುಟ್ಟ ಕೆಲಸಕ್ಕೂ ಫಲಾನುಭವಿಗಳಿಂದ ಲಂಚ ಬಯಸುತ್ತಿದ್ದರು. ಹೀಗೆ ಹಲವಾರು ದೂರುಗಳಿವೆ. ಊರವರು ಮಾಡುವ ಎಲ್ಲಾ ಅಪವಾದಗಳು ಸರಿಯಿಲ್ಲದಿರಬಹುದು. ಆದರೆ ಎಲ್ಲಾ ಅಪವಾದಗಳು ಸುಳ್ಳು ಎನ್ನುವುದು ಕೂಡ ಸರಿಯಲ್ಲ. ಸದಸ್ಯರು ಪಂಚಾಯತ್ ಸಂಸ್ಥೆಗಳನ್ನು ಸರಿಯಾಗಿ ಉಪಯೋಗಿಸದಿರುವುದು ಮತ್ತು ದುರುಪಯೋಗ ಪಡಿಸಿದ್ದು, ಸ್ವಾರ್ಥ ಸಾಧನೆಗಾಗಿ ಸಮುದಾಯದ ಆಸಕ್ತಿ ಬಲಿಕೊಡುವುದು, ಇತ್ಯಾದಿಗಳು ಕೆಳ ಜಾತಿ ವರ್ಗದ ಜನರು ಮೇಲ್ವರ್ಗದ ಮೇಲೆ ಮಾಡುತ್ತಿದ್ದ ಅಪವಾದಗಳು. ಇಂದು ಆ ಅಪರಾಧಗಳನ್ನು ತಾವೇ ಮಾಡಿ ತಮ್ಮ ಯಜಮಾನಿಕೆಯನ್ನು ಜಗತ್ತಿಗೆ ಸಾರುತ್ತಿದ್ದಾರೆ.

ಯಾಕೆ ಹೀಗಾಗುತ್ತಿದೆ? ಎನ್ನುವ ಪ್ರಶ್ನೆಗಿಂತ ಯಾಕೆ ಇದಕ್ಕಿಂತ ಭಿನ್ನವಾಗಿ ಆಗಬೇಕು ಎಂದು ಕೇಳಿಕೊಳ್ಳುವುದು ಉತ್ತಮ. ವರ್ಗ ಪ್ರಜ್ಞೆಯನ್ನು ಜಾಗ್ರತ ಇರುಸುವಲ್ಲಿ ಸಂಪನ್ಮೂಲದ ಒಡೆತನ, ಸಾಮಾಜಿಕ ಮೌಲ್ಯಗಳು ಮತ್ತು ಧಾರ್ಮಿಕ ನಂಬಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಲವಾರು ಅಂಶಗಳೂ ಏಕಕಾಲದಲ್ಲಿ ವ್ಯಕ್ತಿಯೊಬ್ಬನ ಅರಿವನ್ನು ರೂಪಿಸುವುದರಿಂದ ಯಾವುದರ ಪಾಲು ಎಷ್ಟೆಂದು ನಿರ್ಣಾಯಕವಾಗಿ ಹೇಳುವದು ಸ್ವಲ್ಪ ಕಷ್ಟವೇ. ಆದುದರಿಂದಲೇ ಗ್ರಾಮ್ಸಿ ಕೆಳ ವರ್ಗದ ಜನರ ತಿಳುವಳಿಕೆ ತುಂಬಾ ಸಂಕೀರ್ಣವಾದುದು ಎಂದು ಅಭಿಪ್ರಾಯ ಪಟ್ಟಿದ್ದಾನೆ.[3] ಮೇಲು ಜಾತಿಯ/ವರ್ಗದ ಕೈಕೆಳಗೆ ದುಡಿಯುವಾಗ (ಹರಿಜನರಿಗೆ ಇತರ ಸಂದರ್ಭದಲ್ಲೂ) ಅವರಿಗೆ ತಮ್ಮ ಶೋಷಣೆಯ ಅರಿವಾಗುತ್ತದೆ. ಆ ಸಂದರ್ಭದಲ್ಲಿ ದುಡಿಯುವ ನಾವೆಲ್ಲಾ ಒಂದೇ ಎಂಬ ಭಾವನೆಯೂ ಬರಬಹುದು. ಇತರ ಸಂದರ್ಭಗಳಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ವಿಚಾರಗಳಲ್ಲಿ ತಮ್ಮ ಅರಿವಿಲ್ಲದೆಯೇ ಅವರು ಮೇಲು ಜಾತಿ/ವರ್ಗಗಳ ಮೌಲ್ಯಗಳನ್ನು ತಮ್ಮದೆಂದು ಪರಿಭಾವಿಸುವ ಸಾಧ್ಯತೆ ಇದೆ. ಊರ ಜಾತ್ರೆಗಳು, ಹಬ್ಬಗಳು, ಹರಿದಿನಗಳು, ಎಲ್ಲರನ್ನೂ ಒಟ್ಟು ಸೇರಿಸುವ ಸಂದರ್ಭಗಳು. ಜತೆಗೆ ದಿನ ನಿತ್ಯದ ಬದುಕಿನಲ್ಲಿ ಚಾರಿತ್ರಿಕವಾಗಿ ಬಂದಿರುವ ಸಾಮಾಜಿಕ ಮೌಲ್ಯಗಳನ್ನು ಪ್ರಶ್ನಿಸಿದೆ ಸ್ವೀಕರಿಸುವುದು ನಡೆಯುತ್ತದೆ. ಇಲ್ಲೆಲ್ಲಾ ತಮ್ಮ ಅರಿವಿಲ್ಲದೆಯೇ ಕೆಳ ಜಾತಿ ವರ್ಗದವರು ಮೇಲ್ ಜಾತಿ/ವರ್ಗದ ಮೌಲ್ಯಗಳನ್ನು ಒಪ್ಪಿ ನಡೆಯುತ್ತಾರೆ. ಗುಡಿಯೊಳಗೆ ಹರಿಜನರಿಗೆ ಪ್ರವೇಶವಿಲ್ಲದಿರುವುದು ಸರಿಯಲ್ಲವೆಂದು ಅಂಬೇಡ್ಕರ್ ಸಂಘದ ಅಧ್ಯಕ್ಷರಿಗೆ ತಿಳಿದಿದೆ. ಆದರೆ ನೀವು ಯಾಕೆ ಪ್ರವೇಶಿಸಲು ಪ್ರಯತ್ನಿಸಿಲ್ಲವೆಂದರೆ ನಮ್ಮ ಆತ್ಮ ಸಾಕ್ಷಿ ಒಪ್ಪುತ್ತಿಲ್ಲ ಎನ್ನುವುದು ಗ್ರಾಮ್ಸಿ ಸೂಚಿಸಿದ ವಿರೋಧಭಾಸಗಳಿಗೆ ಉತ್ತಮ ಉದಾಹರಣೆಯಾಗಬಹದು. ಇಲ್ಲಿ ಕೇವಲ ಕೆಳ ಜಾತಿ/ವರ್ಗದ ಬದುಕು ಅವರ ಅರಿವಿನ ಪ್ರಶ್ನೆಯನ್ನು ಸಂಕೀರ್ಣಗೊಳಿಸಿದ್ದಲ್ಲ; ಯಜಮಾನಿಕೆಯ ಸಂಘಟನೆ ಕೂಡ ಸಂಕೀರ್ಣವಾಗಿಯೇ ಇದೆ. ಮೇಲು ಜಾತಿಯನ್ನು ಒಂದು ಸಂಘಟಿತ, ಏಕ ರೂಪಿಯಾದ ಶೋಷಕ ವರ್ಗವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದು ಆ ರೀತಿ ಇಲ್ಲ. ಅದರಲ್ಲಿ ಅತೀ ಕಡಿಮೆ ಸಂಬಳ ಕೊಟ್ಟು ಒದ್ದು ಕೆಲಸ ಮಾಡಿಸುವವರು ಇದ್ದಂತೆ ಚೆನ್ನಾಗಿ ಸಂಬಳ ಕೊಟ್ಟು ಕೆಲಸದವರನ್ನು ಮನುಷ್ಯರ ಹಾಗೆ ದುಡಿಸಿಕೊಳ್ಳುವವರು ಇದ್ದಾರೆ. ಇದರ ಜತೆಗೆ ಭೂಮಿ ಅಥವಾ ಸಂಪನ್ಮೂಲ ಇಲ್ಲದ ಎಷ್ಟೋ ಮೇಲು ಜಾತಿ ಕುಟುಂಬಗಳ ಕಲ ಜಾತಿಯವರ ದುಡಿತದ ಸಂಗಾತಿಗಳೂ ಆಗಿರುತ್ತಾರೆ. ಈ ಎಲ್ಲಾ ಅಂಶಗಳು ಮೇಲು ಜಾತಿ/ವರ್ಗವನ್ನು ಒಂದು ಏಕರೂಪಿಯಾದ ಶೋಷಕ ವರ್ಗವಾಗಿ ಕಲ್ಪಸಿಕೊಳ್ಳುವಲ್ಲಿ ದೊಡ್ಡ ತೊಡಕಾಗಿವೆ.

ಮೇಲಿನ ತಾತ್ವಿಕ ಹಿನ್ನೆಲೆಯಿಂದ ಹಳ್ಳಿಯ ಕೆಳ ವರ್ಗದವರ ರಾಜಕೀಯ ವ್ಯವಹಾರವನ್ನು ವಿಶ್ಲೇಷಿಸಿದರೆ ಕೆಲವು ವಿಚಾರಗಳು ತಿಳಿಯಾಗಬಹುದು. ವ್ಯಕ್ತಿಯೂಬ್ಬ ಕೆಳ ಜಾತಿ/ವರ್ಗಕ್ಕೆ ಸೇರಿದ ಕೂಡಲೇ ಆತನಿಗೆ ವರ್ಗ ಕಾಳಜಿ ಇರುತ್ತದೆ ಎಂದು ಯಾಕೆ ಗ್ರಹಿಸಬೇಕು. ವ್ಯಕ್ತಿಯೊಬ್ಬನ ಅರಿವು ಆತ ಬದುಕುವ ಪರಿಸರದಿಂದ ಪ್ರಭಾವಿತವಾಗುತ್ತದೆ ಸರಿ. ಆದರೆ ಆತ ಬದುಕುವ ಪರಿಸರ ತುಂಬಾ ಸಂಕೀರ್ಣವಾದುದು. ಅಲ್ಲಿ ಕೇವಲ ಹೊಟ್ಟೆ ಬಟ್ಟೆಯ ಹೋರಾಟಗಳು ಮಾತ್ರವಲ್ಲ; ಆತನ ನಂಬಿಕೆಯ ಮತ್ತು ಮೌಲ್ಯದ ಪ್ರಶ್ನೆಗಳು ಇವೆ. ಆತ ಬದುಕುವ ಪರಿಸರ, ಜಾತಿ, ಧರ್ಮ ಇತ್ಯಾದಿಗಳು-ಆತ ಪ್ರಪಂಚವನ್ನು ನೋಡುವ ಮತ್ತು ಆರ್ಥೈಸುವ ಪ್ರಕ್ರಿಯೆಯನ್ನು ಗಣನೀಯವಾಗಿ ಪ್ರಭಾವಿಸುತ್ತಿವೆ. ಕೆಲವು ಸಂದರ್ಭದಲ್ಲಿ ತಾನು ದುಡಿಯುತ್ತಿರುವ ಜನರೊಂದಿಗೆ ಆತ ತನ್ನ ಜಾತಿ, ಧರ್ಮಗಳನ್ನು ಬದಿಗಿಟ್ಟು ಗುರುತಿಸಿಕೊಳ್ಳಬಹುದು. ಮತ್ತೆ ಕೆಲವು ಸಂದರ್ಭಗಳಲ್ಲಿ ಕುಟುಂಬ, ಜಾತಿ, ಧರ್ಮ ಇತ್ಯಾದಿಗಳು ಆತನ ಅರಿವನ್ನು ನಿರ್ಧರಿಸಬಹುದು. ಹೀಗೆ ಆತ ತನ್ನನ್ನು ಮತ್ತು ಸುತ್ತಲಿನ ಸಮಾಜವನ್ನು ಗುರುತಿಸುವ ನೆಲೆಗಳು ಸತತವಾಗಿ ಬದಲಾಗುತ್ತಿರುತ್ತವೆ. ಇದರಿಂದ ಒಂದು ನಿರ್ದಿಷ್ಟ ನೆಲೆಯಲ್ಲಿ ನಿಂತು ಗುರುತಿಸಿಕೊಳ್ಳಲು ಕಷ್ಟವಾಗಬಹುದು. ಜಾತಿ, ವರ್ಗ ಕಾಳಜಿ ಬೆಳೆಯುವಲ್ಲಿ ಈ ಸ್ಥತಿ ದೊಡ್ಡ ತೊಡಕಾಗಿರಬಹುದು. ಇದರಿಂದಾಗಿ ಒಂದೇ ಘಟನೆ ಅಥವಾ ಬೆಳವಣಿಗೆ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆಯಾಗಿ ಕಾಣಬಹುದು. ವಸ್ತು ಸ್ಥಿತಿಯ ಅರಿವೇ ಬೇರೆ ಬೇರೆಯಾದಾಗ ಪ್ರತಿಸ್ಪಂದಿಸುವ ಕ್ರಮಗಳು ಸಹಜವಾಗಿ ವಿಭಿನ್ನವಾಗಿರಲೇಬೆಕು.

ಈ ಹಳ್ಳಿಯ ಸಾಂಸ್ಕೃತಿಕ ಬದುಕನ್ನು ವಿಶ್ಲೇಷಿಸುವ ಮೂಲಕ ವಿಕೇಂದ್ರಿಕರಣದ ವಿಫಲತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆಗಳಾಗಿವೆ. ಒಂದು ಕಾಲದಲ್ಲಿ ಊರಿನ ಮೇಲು ಜಾತಿಯವರು ಎಲ್ಲಾ ರೀತಿಯಿಂದಲೂ ದಣಿಗಳಾಗಿದ್ದರು. ಇಂದು ಸಂಬಳ ಕೊಡುವ ಯಜಮಾನರು ಗಣಿ ಮಾಲಿಕರು.

ಇವರು ಸ್ಥಳೀಯ ಮೇಲು ಜಾತಿಗೆ ಸೇರಿದವರಲ್ಲ. ಹೀಗೆ ವ್ಯಾಗನ್ ಮತ್ತು ಗಣಿ ಕೆಲಸ ಸಮಾಜದ ಕೆಳ ಜಾತಿ/ವರ್ಗಗಳಿಗೆ ಬದಲಿ ಆದಾಯದ ಮೂಲವನ್ನು ಒದಗಿಸಿವೆ. ಆದರೆ ಹೊಸ ಯಜಮಾನರು ಮತ್ತು ಕೆಲಸಗಾರರ ಸಂಬಂಧ ಸೀಮಿತ ಮತ್ತು ಒಪ್ಪಂದ ಆಧಾರಿತ. ಈ ಜನರು ತಮ್ಮ ಬದುಕಿನ ಬಹುತೇಕ ಭಾಗವನ್ನು ಹಿಂದಿನ ಸಾಂಪ್ರದಾಯಿಕ ಸಮಾಜದ ಮೌಲ್ಯಗಳಿಗೆ ಅನುಗುಣವಾಗಿ ರೂಪಸಿಕೊಳ್ಳಬೇಕಾಗಿದೆ. ಪಾರಂಪರಿಕ ಸಾಮಾಜಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ಮುಂದುವರಿಗೆ ಪಾರಂಪರಿಕ ಯಜಮಾನಿಕೆಯನ್ನು ಸಾಂಕೇತಿಕವಾಗಿ ಮುಂದುವರಿಸಲು ಸಹಕಾರಿಯಾಗಿವೆ. ಜತೆಗೆ ಕೆಳ ಜಾತಿ ವರ್ಗಗಳು ತಮಗೆ ಸಿಕ್ಕದ ಅಧಿಕಾರ ಬಳಸುವಲ್ಲಿ ತಮ್ಮ ಸ್ವಂತಿಕೆಯನ್ನು ಪ್ರದರ್ಶಿಸಲು ಅಸಾಧ್ಯವಾಗಿದೆ. ಅವರಿಗೆ ಅರಿವಿಲ್ಲದೆಯೇ ಹಿಂದಿನ ಯಜಮಾನಿಕೆಯವರ ಶೈಲಿಯನ್ನು ಅನುಕರಿಸುತ್ತಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿ ವಿಶೇಷ ಪರಿವರ್ತನೆ ಇಲ್ಲದಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಒಂದು ವಿಧದ ತೋರಿಕೆಯ ಮುಂದುವರಿಕೆ ಕಾಣುತ್ತಿದೆ. ಕೆಳ ಜಾತಿ/ವರ್ಗದ ಜನರಿಗೆ ತಮ್ಮ ವರ್ಗ ಆಸಕ್ತಿಯನ್ನು ಅರ್ಥಮಾಡಿಕೊಳ್ಳಲು ಈ ಪರಿಸರ ದೊಡ್ಡ ತೋಡಕಾಗಿದೆ. ಹೀಗಾಗಿ ಗ್ರಾಮ ಪಂಚಾಯತ್ ಕಾರ್ಯಕ್ರಮಗಳನ್ನು ತಮ್ಮ ಜನರ ಆಸಕ್ತಿಗಳಿಗೆ ಪೂರಕವಾಗಿ ನಿರ್ವಚಿಸಿಕೊಳ್ಳಲು ಸಾಧ್ಯವಾಗಿಲ್ಲ.

 

[1]ಎಂ.ವೈ. ಘೋರ್ಪಡೆ, ವಿಕೇಂದ್ರಿಕರಣ ತತ್ವ ಮತ್ತು ಆಚರಣೆ ವಿಚಾರ ಸಂಕಿರಣದ ಆಶಯ ಭಾಷಣ, ಟಿ.ಆರ್. ಚಂದ್ರಶೇಖರ (ಸಂಪಾದಿಸಿದ), ವಿಕೇಂದ್ರೀಕರಣ ತತ್ವ ಮತ್ತು ಆಚರಣೆ, ವಿದ್ಯಾರಣ್ಯ: ಕನ್ನಡ ವಿಶ್ವವಿದ್ಯಾಲಯ, ೨೦೦೦.

[2]ಈ ಕೆಳಗಿನ ಸಮಾಜ ಶಾಸ್ತ್ರಜ್ಞರ ಬರಹಗಳ ಆಧಾರದಲ್ಲಿ ಕೆಳ ವರ್ಗಗಳ ರಾಜಕೀಯ ಶೈಲಿಯನ್ನು ನಿರ್ವಚಿಸಿಕೊಂಡಿದ್ದೇನೆ – ಜೇಮ್ಸ್ ಸ್ಕೋಟ್, ವೆಪನ್ ಆರ್ಫ ದಿ ವೀಕ್: ಎವ್ರಿಡೆ ಫಾರ್ಮ್ಸ್ ಆಫ್ ಪೆಸೆಂಟ್ ರಿಸಿಸ್ಟೆನ್ಸ್, ನ್ಯೂ ಹೆವನ್: ಯೇಲ್ ಯುನಿವರ್ಸಿಟಿ ಪ್ರೆಸ್, ೧೯೯೮, ಡೊಗ್ಲಸ್ ಹೇನ್ಸ್ ಆಂಡ್ ಗ್ಯಾನ್ ಪ್ರಕಾಶ (ಸಂಪಾದಿಸಿದ), ರಿಸಿಸ್ಟೆನ್ಸ್ ಆಂಡ್ ಎವ್ರಿಡೆ ಸೋಸಿಯಲ್ ರಿಲೇಷನ್ಸ್ ಇನ್ ಸೌತ್ ಏಶಿಯಾ, ಡೆಲ್ಲಿ: ಆರ್ಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೧ ಮತ್ತು ದೀಪಾಂಕರ್ ಗುಪ್ತ, ರೈವಲ್ರಿ ಆಂಡ್ ಬ್ರದರ್ ಹುಡ್: ಪೊಲಿಟಿಕ್ಸ್ ಇನ್ ದಿ ಲೈಫ್ ಆಫ್ ಫಾಮ್ಮರ್ಸ್ ಇನ್ ನೋದರ್ನ್ ಇಂಡಿಯಾ, ಡೆಲ್ಲಿ, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೭.

[3]ರಾಬರ್ಟ್ ಬೊಕಾಕ್, ಹೆಜಮೊನಿ, ಇಂಗ್ಲೆಂಡ್: ಎಲಿಸ್ ಹಾರ್‌ವುಡ್ ಲಿಮಿಟೆಡ್, ೧೯೮೬.