ತಳಮಟ್ಟದ ಅಧಿಕಾರದ ವಿತರಣೆಯಲ್ಲಿ ಬದಲಾವಣೆ ತಂದು ಕೆಳವರ್ಗದ ಜನರನ್ನು ಸಶಕ್ತೀಕರಣಗೊಳಿಸುವ ಉದ್ದೇಶದಿಂದ ಪಂಚಾಯತ್ ಜಾರಿಗೆ ಬಂತು ಪಿ.ಕೆ. ಹಳ್ಳಿಯ ಗ್ರಾಮ ಪಂಚಾಯತನ್ನು ಅಧ್ಯಯನ ಮಾಡುವ ಮೂಲಕ ತಳಮಟ್ಟದಲ್ಲಿನ ವಿಕೇಂದ್ರೀಕರಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಹಿಂದಿನ ಅಧ್ಯಾಯಗಳಲ್ಲಿ ಪ್ರಯತ್ನಿಸಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಿದಂತೆ ವಿವಿಧ ತಾತ್ವಿಕ ಹಿನ್ನೆಲೆಗೆ ಸೇರಿದವರು ಕೆಳವರ್ಗದ ಸಶಕ್ತೀಕರಣವನ್ನು ವಿವಿಧ ರೀತಿಯಲ್ಲಿ ನಿರ್ವಚಿಸಿಕೊಂಡಿದ್ದಾರೆ. ಸಾಂಪ್ರದಾಯವಾದಿಗಳು ಮತ್ತು ಸಮುದಾಯವಾದಿಗಳು ಆಧುನೀಕರಣ ತತ್ವವನ್ನು ತಿರಸ್ಕರಿಸಿ ದೇಶಿ ಪರಿಕರಗಳ ಮೂಲಕ ಆಡಳಿತವನ್ನು ಪುನರ್ ನಿರ್ವಚಿಸಿಕೊಳ್ಳುವುದಕ್ಕೆ ಮಹತ್ವ ನೀಡುತ್ತಾರೆ. ಇವರು ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪಗೊಂಡ ಸಂಸ್ಥೆಗಳನ್ನು ಬಳಸಿಕೊಂಡು ತಳಮಟ್ಟದ ರಾಜಕೀಯ ಪ್ರಕ್ರಿಯೆಗಳನ್ನು ಬಲಗೊಳಿಸಬೇಕೆಂದು ವಾದಿಸುತ್ತಾರೆ. ಇದಕ್ಕಾಗಿ ಸಾಂಪ್ರದಾಯಿಕ ಸಂಸ್ಥೆಗಳಲ್ಲಿ ಇಲ್ಲದ ಹಲವಾರು ಗುಣಗಳನ್ನು ಅವುಗಳಿಗೆ ಉದಾರವಾಗಿ ಕೊಡಲಾಗಿದೆ. ಉದಾಹರಣೆಗೆ ಭಿನ್ನತೆಯನ್ನು ಸಹಿಸಿಕೊಳ್ಳುವುದು ಮತ್ತು ವಿವಿಧತೆಯನ್ನು ಗೌರವಿಸುವುದು. ಇವೆರಡೂ ಲಿಬರಲಿಸಂನ ಮುಖ್ಯ ಗುಣಗಳು. ಈ ಗುಣಗಳನ್ನೇ ಸಾಂಪ್ರದಾಯಿಕ ಸಂಸ್ಥೆಗಳಲ್ಲಿ ತೋರಿಸುವ ಮೂಲಕ ಅವುಗಳಿಗೆ ಜೀವ ತುಂಬಲು ಪ್ರಯತ್ನಿಸಲಾಗುತ್ತಿದೆ.[1] ಎರಡು, ಕುಟುಂಬ, ಜಾತಿ, ಧರ್ಮಗಳ ನೆಲೆಯಲ್ಲಿ ವ್ಯಕ್ತಿಯ ಗುರುತು ರೂಪುಗೊಳ್ಳುತ್ತದೆ ಎನ್ನುವಾಗ ಅದೊಂದು ಸಕಾರಾತ್ಮಕ ಗುಣ ಎನ್ನುವ ಗೃಹಿಕೆ ಇದೆ. ಈ ಗುರುತುಗಳ ಮಧ್ಯೆ ಯಾವುದೇ ಸಂಘರ್ಷ, ತಾರತಮ್ಯ, ಇತ್ಯಾದಿಗಳ ಕಲ್ಪನೆಯೇ ಇಲ್ಲ.[2] ಸಮಾನತೆ ಸಾಧ್ಯತೆಯುಳ್ಳ ಸಮಾಜ ಸೃಷ್ಟಿಯಲ್ಲಿ ಅವುಗಳಿಗೆ ಮುಖ್ಯ ಪಾತ್ರ ಇದೆ ಎಂದು ವಾದಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಆ ಸಂಸ್ಥೆಗಳು (ಗುರುತುಗಳು) ಆ ರೀತಿ ಇವೆಯೆ? ಖಂಡಿತವಾಗಿಯೂ ಇಲ್ಲ ಎನ್ನುವುದನ್ನು ಪಿ.ಕೆ.ಹಳ್ಳಿಯ ಗ್ರಾಮ ಪಂಚಾಯತ್‌ನ ಚರಿತ್ರೆಯಿಂದಲೇ ಅರ್ಥಮಾಡಿಕೊಳ್ಳಬಹುದು.

ಹಳ್ಳಿಯ ಸಂಕ್ಷಿಪ್ತ ಚರಿತ್ರೆ ಅಲ್ಲಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅರ್ಥಿಕ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸಿರಬಹುದು. ಗೌಡರು, ಶ್ಯಾನುಭೋಗರು ಮತ್ತು ತಳವಾರರು ವಸಾಹತು ಪೂರ್ವದ ತಳಮಟ್ಟದ ಆಡಳಿತ ವ್ಯವಸ್ಥೆಯ ಮುಖ್ಯ ಮೂರು ಹುದ್ದೆಗಳು. ವಸಾಹತು ಕಾಲದಲ್ಲಿ ಆ ಹುದ್ದೆಗಳು ರದ್ದಾಗಲಿಲ್ಲ; ಮುಂದುವರಿದವು. ಅವುಗಳ ಜತಗೆ ಸ್ಥಳೀಯ ಸ್ವ-ಸರಕಾರ ಪದ್ಧತಿ ಜಾರಿಗೆ ಬಂತು. ಅದರಲ್ಲಿ ಪಾಲುಗೊಳ್ಳಲು ಹಳ್ಳಿಯ ಮೇಲು ಜಾತಿಗಳ ಒಳಗೇ ಪೈಪೋಟಿ ಇತ್ತು ಅಥವಾ ಅದು ಕೇವಲ ಮೇಲು ಜಾತಿಯವರ ಆಟವಾಗಿತ್ತುಲ. ಮೇಲು ಜಾತಿಯ ಎರಡು ಕುಟುಂಬಗಳ ನಡುವೆ ಊರಿನ ಯಜಮಾನಿಕೆಗೆ ನಡೆಯುವ ಹೋರಾಟದಲ್ಲಿ ಇಡೀ ಊರು ಪಾಲುಗೊಳ್ಳಬೇಕಾಗಿತ್ತು. ಅವರಲ್ಲಿ ಯಾರು ಗದ್ದುಗೆ ಹಿಡಿದರೂ ಕೆಲ ಜಾತಿ ಜನರ ಬದುಕು ಉದ್ಧಾರರವಾಗುವ ಪ್ರಶ್ನೆಯೇ ಇರಲಿಲ್ಲ. ಊರು ಕೇರಿ ಅಂದು ದೂರ ಇದ್ದವು, ಇಂದೂ ದೂರ ಇವೆ. ಊರೊಳಗಿನ ಜಾತಿಗಳು ಮೇಲ್ನೋಟಕ್ಕೆ ಬೆರೆತಂತೆ ಕಂಡರೂ ಆಳದಲ್ಲಿ ಹಿಂದಿನ ಅಂತರವನ್ನು ಮುಂದುವರಿಸುತ್ತಿವೆ. ಆ ಅಂತರಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೇರೆಯದೇ ರೂಪದಲ್ಲಿ ಪ್ರಕಟವಾಗುತ್ತಿವೆ. ಇವರನ್ನೆಲ್ಲಾ ಒಟ್ಟು ಸೇರಿಸುವ ಜಾತ್ರೆಗಳು ಕೂಡ ಜಾತಿ ಜಾತಿ ನಡುವಿನ ಅಂತರವನ್ನು ಮುರಿದಿಲ್ಲ. ಸಾಂಪ್ರದಾಯಿಕ ಬದುಕು ಇಲ್ಲಿ ಜೀವಂತವಾಗಿ ಉಳಿದಿದೆ. ಆದರೆ ಸಂಪ್ರದಾಯವಾದಿಗಳು ಅಥವಾ ಸಮುದಾಯ ವಾದಿಗಳು ವಾದಿಸುವಂತೆ ಅದೊಂದು ಆದರ್ಶ ರೂಪದಲ್ಲಿ ಇಲ್ಲ. ಅದು ಸಮಾನತೆಯನ್ನು ಸಾಧಿಸುವ ಅಥವಾ ಭಿನ್ನತೆಯನ್ನು ಸಹಿಸುವ ಯಾವ ಲಕ್ಷಣವನ್ನೂ ಹೊಂದಿಲ್ಲ. ಮೇಲ್ವರ್ಗಗಳ ಆಸಕ್ತಿಗಳಿಗೆ ಪೂರಕವಾದ ಶತಮಾನದ ಭಿನ್ನತೆಗಳನ್ನು ಉಳಿಸಿಕೊಂಡು ಮುಂದುವರಿಯಲು ಆ ಸಂಪ್ರದಾಯ ಇಚ್ಛಿಸುತ್ತಿದೆ.

ಅಲ್ಲಿನ ವಿವಿಧ ಜಾತಿಳಗ ಮತ್ತು ಅವುಗಳ ನಡುವಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳು ಸಮಾನತೆಯ ನೆಲೆಯಲ್ಲಿ ರೂಪಿತವಾಗಿಲ್ಲ. ಒಂದು ಗುರುತಿನ ನೆಲೆಯಲ್ಲಿ ಗುರುತಿಸಿಕೊಳ್ಳುವುದೆಂದರೆ ಅದು ಯಾವತ್ತು ಮತ್ತೊಂದು ಗುರುತನ್ನು ದೃಷ್ಟಿಯಲ್ಲಿ ಇಟ್ಟುಕೊಂಡೆ ನಡೆಯುವ ಪ್ರಕ್ರಿಯೆ. ಇದಕ್ಕಾಗಿ ಕೆಲವು ಸಂದರ್ಭಗಳಲ್ಲಿ ಮತ್ತೊಂದನ್ನು ನೆಗೆಟಿವ್ ಆಗಿ ಚಿತ್ರಿಸುವ ಪ್ರಯತ್ನಗಳೂ ಇವೆ. ಮೇಲು ಜಾತಿಯವರು ತಮ್ಮ ಯಜಮಾನಿಕೆಯನ್ನು ಕೇವಲ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಾತ್ರ ಚಲಾಯಿಸುವುದಲ್ಲ. ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಯಜಮಾನಿಕೆಯ ಮುಂದುವರಿಕೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕ ಕೂಡ ಅಗತ್ಯ. ಅದಕ್ಕಾಗಿ ಕೆಳ ವರ್ಗದವರು ಸಂಪನ್ಮೂಲದಲ್ಲಿ ಮಾತ್ರ ಬಡವರಲ್ಲ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಬಡವರೆಂಬ ಚಿತ್ರಣ ಸದಾ ಬಿಂಬಿತವಾಗುತ್ತದೆ. ಅದು ಹರಿಜನರನ್ನು ಹೋಟೆಲಿಗೆ ಸೇರಿಸುವ ಪ್ರಶ್ನೆ ಇರಬಹುದು, ಗುಡಿಗೆ ಪ್ರವೇಶ ನಿರಾಕರಿಸುವ ವಿಚಾರ ಇರಬಹುದು, ಜಾತ್ರೆಗಳಲ್ಲಿ ಜಾತಿಗನುಸಾರ ಕೆಲಸ ಕಾರ್ಯಗಳ ಹಂಚುವಿಕೆ ಇರಬಹುದು. ಇಲ್ಲೆಲ್ಲಾ ಸೇರಿಸಿಕೊಳ್ಳುವ ಮತ್ತು ಹೊರಗಿಡುವ ಪ್ರಕ್ರಿಯ ನಡೆಯುತ್ತಲೇ ಇರುತ್ತದೆ. ಹೀಗೆ ಒಮದು ನಿರ್ದಿಷ್ಟ ಜಾತಿಗೆ (ಗುರುತು) ಸೇರಿದ್ದೇನೆ ಎನ್ನುವ ಮೂಲಕ ತನ್ನತನ ಸಾಧಿಸಲು ಹೋರಾಟ ಆರಂಭವಾಗುತ್ತದೆ. ಆ ಹೋರಾಟ ಯಾವುದೋ ನಿರ್ವಾತ ವಾತಾವರಣದಲ್ಲಿ ನಡೆಯುವುದಿಲ್ಲ. ಒಂದು ಸಾಮಾಜಿಕ ಪರಿಸರದಲ್ಲಿ ನಡೆಯುತ್ತದೆ.

ಹಳ್ಳಿಯಲ್ಲಿ ತಕ್ಕಮಟ್ಟಿನ ಆರ್ಥಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ಗುರುತಿಸಬಹುದು. ಪಾರಂಪರಿಕ ಯಜಮಾನರು ಇಂದು ಕೆಳ ಜಾತಿಯವರಿಗೆ ಊಟ ಕೊಡುವ ದಣಿಗಳಾಗಿ ಉಳಿದಿಲ್ಲ. ಹೊರಗಿನಿಂದ ಬಂದ ಗಣಿ ಮಾಲಿಕರು ಕೆಳ ವರ್ಗದ ಜನರ ನಿಜವಾದ ದಣಿಗಳಾಗಿದ್ದಾರೆ. ಆಧುನಿಕ ಪಂಚಾಯತ್ ಸೀಟುಗಳನ್ನು ಕಾದಿರಿಸುವ ಮೂಲಕ ಹಳ್ಳಿಯ ಮೇಲು ಜಾತಿಯವರನ್ನು ಪಂಚಾಯತ್ ರಾಜಕೀಯದಿಂದ ಹೊರಗಿಟ್ಟಿದೆ. ಹೆಚ್ಚು ಕಡಿಮೆ ಪಂಚಾಯತ್‌ನ ಎಲ್ಲಾ ಹುದ್ದೆಗಳಲ್ಲಿ ಕೆಳ ಜಾತಿಯವರಿದ್ದಾರೆ. ಆದಾಗ್ಯೂ ಕೆಳಜಾತಿ ಜನರು ಇನ್ನು ಯಜಮಾನಿಕೆಯನ್ನು ರೂಢಿಸಿಕೊಂಡಿಲ್ಲ. ಅವರಿಗೆ ಪಂಚಾಯತ್‌ನ ತಮ್ಮ ವರ್ಗದ ಹಿತಾಸಕ್ತಿಗೆ ಪೂರಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗದಿರಲು ಒಂದು ಕಡೆಯಿಂದ ಶತಮಾನದ ಅಡಿಯಾಳು ಪ್ರವೃತ್ತಿ ಕಾರಣವಾದರೆ ಇನ್ನೊಂದು ಕಡೆಯಿಂದ ವರ್ತಮಾನದ ಹಳ್ಳಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕು ಕಾರಣವಾಗಿದೆ. ಅವುಗಳು ಇಂದು ಕೂಡ ಸಾಂಪ್ರದಾಯಿಕ ಮೌಲ್ಯಗಳಿಗೆ ಅನುಸಾರವಾಗಿಯೇ ಇವೆ. ಆ ಮೌಲ್ಯಗಳು ಪಾರಂಪರಿಕ ಶ್ರೇಣೀಕೃತ ವ್ಯವಸ್ಥಗೆ ಒತ್ತು ಕೊಡುತ್ತಿವೆ. ಆರ್ಥಿಕ ಆಗೂ ರಾಜಕೀಯ ಕ್ಷೇತ್ರದಲ್ಲಿ ಅದ ಸಣ್ಣಪುಟ್ಟ ಬದಲಾವಣೆಗಳನ್ನು ಕೂಡ ಪಾರಂಪತಿಕ ಮೌಲ್ಯಗಳು ಅಲ್ಲಗೆಳೆಯುತ್ತಿವೆ.

ಆದುದರಿಂದ ಅತಿಯಾದ ಅಸಮಾನತೆಯಿಂದ ತುಂಬಿರುವ ನಮ್ಮಂತಹ ವ್ಯವಸ್ಥೆಯಲ್ಲಿ ಕುಟುಂಬ/ಸಮುದಾಯಗಳು ಬಲಗೊಳ್ಳುತ್ತಿವೆ ಎನ್ನುವುದನ್ನು ಒಂದು ಪೊಸಿಟಿವ್ ಬೆಳವಣಿಗೆಯಂದು ಗೃಹಿಸಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಬಾಹ್ಯದಲ್ಲಿ ದೊರೆಯಬಹುದಾದ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಕುಟುಂಬ/ಸಮುದಾಯಗಳ ಶಕ್ತಿ, ಸಾಮರ್ಥ್ಯ ಬೇರೆ ಬೇರೆ ಆಗಿದೆ. ಯಾವಾಗ ಪ್ರತಿಯೊಂದು ಕುಟುಂಬ/ಸಮುದಾಯಕ್ಕೆ ಚಾರಿತ್ರಿಕ ಕಾರಣಗಳಿಂದ ಬಂದಿರುವ ಅಸಮಾನತೆಗಳಿಂದ ಹೊರಬರಲು ಸಮಾಜ ಅವಕಾಶ ಮಾಡಿಕೊಡುತ್ತದೆಯೋ ಆಗ ವ್ಯಕ್ತಿ ತನ್ನ ಕುಟುಂಬ ಸಮುದಾಯದ ಅವಲಂಬನೆಯಿಂದ ಹೊರಬರಲು ಸಾಧ್ಯ.[3] ಆದುದರಿಂದ ದುರ್ಬಲ ಕುಟುಂಬ/ಸಮುದಾಯಗಳ ದೃಷ್ಟಿಯಿಂದ ಕುಟುಂಬ/ಸಮುದಾಯಗಳು ಬಲಗೊಳ್ಳುತ್ತಿವೆ ಎಂದರೆ ಚಾರಿತ್ರಿಕ ಕಾರಣಗಳಿಂದ ಸಾಧ್ಯವಾಗುವ ಅಸಮಾನತೆಗಳನ್ನು ದೂರ ಮಾಡುವ ಜವಾಬ್ದಾರಿಯಿಂದ ಸಮಾಜ ದೂರವಾಗುತ್ತಿದೆ ಎನ್ನವ ಅರ್ಥ. ಈ ಹಿನ್ನೆಯಲ್ಲಿ ಹಲವಾರು ಗುರುತುಗಳು ಇರುವುದೇ ಸಮಾನತೆಯ ಒಂದು ಲಕ್ಷಣವೆಂದು ತಿಳಿಯಬೇಕಾಗಿಲ್ಲ. ಜತೆಗೆ ಅವುಗಳು ಸಮಾನತೆ ಸಾಧ್ಯವಿರುವ ಒಂದು ಪರಿಸರ ನಿರ್ಮಿಸಲು ಸಹಕಾರಿಯಾಗಿವೆ ಎಂದು ಗೃಹಿಸುವ ಅಗತ್ಯವು ಇಲ್ಲ. ಆದುದರಿಂದ ಸಾಂಪ್ರದಾಯವಾದಿ ದೃಷ್ಟಿಯಿಂದ ಪಂಚಾಯತ್ ವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳುವುದು ಸಮಾಜದ ಕೆಳ ಜಾತಿ/ವರ್ಗಗಳ ದೃಷ್ಟಿಯಿಂದ ಲಾಭದಾಯಕವಲ್ಲ. ಯಾಕೆಂದರೆ ಇಂತಹ ವಾತಾವರಣದಲ್ಲಿ ಸ್ಥಳೀಯ ಬಲಾಡ್ಯರು ಶೋಷಿತ ಜನರನ್ನು ಅಧಿಕಾರದ ಹತ್ತಿರವೂ ಬರದಂತೆ ನೋಡಿಕೊಳ್ಳಬಲ್ಲರು. ಮಂಡಲ ವ್ಯವಸ್ಥೆ ಬರುವವರೆಗೂ ಹಳ್ಳಿಯ ರಾಜಕೀಯ ಹೆಚ್ಚು ಕಡಿಮೆ ಇದೇ ಸ್ಥಿತಿಯಲ್ಲಿ ಇತ್ತು. ಇದು ಕೆಳ ಜಾತಿಗಳಿಗೆ ನ್ಯಾಯ ದೊರಕಿಸುವ ಬದಲು ಅವರನ್ನು ಸಾಂಪ್ರದಾಯಿಕ ಯಜಮಾನಿಕೆಯ ಜಾತಿಗಳ ಅಡಯಾಳಾಗಿ ಮುಂದುವರಿಸಿತ್ತು.

ಇದಕ್ಕೆ ವಿರುದ್ಧವಾಗಿ ಆಡಳಿತದ ಸ್ತರಗಳನ್ನು ಹೆಚ್ಚಿಸಿ ಅವುಗಳಲ್ಲಿ ಕೆಳಜಾತಿ/ವರ್ಗದ ಜನರಿಗೆ ಪ್ರಾತಿನಿಧ್ಯ ಕೊಡುವುದರ ಮೂಲಕ ವಿಕೇಂದ್ರೀಕರಣ ಸಾಧ್ಯ ಎನ್ನುವ ನಿಲುವು ತಾಂತ್ರಿಕ ಆಧುನೀಕರಣವಾದಿಗಳದ್ದು. ಇವರಿಗೆ ಆಧುನಿಕ ಪರಿಕರಗಳೇ ಮುಖ್ಯ. ಆಧುನಿಕ ಸಂಸ್ಥೆಗಳು ಕಾರ್ಯರೂಪಕ್ಕೆ ಬರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರಗಳಿಗೆ ತಾಂತ್ರಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ ಹಳ್ಳಿಯ ರಾಜಕೀಯದಲ್ಲೂ ಸಾಕಷ್ಟು ಪರಿವರ್ತನೆಗಳನ್ನು ಗುರುತಿಸಬಹುದು. ಎಲ್ಲಾ ಹಳ್ಳಿಗಳಂತೆ ಇಲ್ಲೂ ಆಧುನಿಕ ಪಂಚಾಯತ್ ಸಂಸ್ಥಗಳು ಕಾರ್ಯ ನಿರ್ವಹಿಸುತ್ತಿವೆ. ಸರಕಾರ ನಿರ್ಧರಿಸದ ಅವಧಿಯಲ್ಲಿ ಸದಸ್ಯರ ಆಯ್ಕೆ ನಡೆಯುತ್ತಿದೆ. ಅಧಿನಿಯಮ ಸೂಚಿಸುವಷ್ಟು ಸಂಖ್ಯೆಯಲ್ಲಿ ಸಮಾಜದ ವಿವಿಧ ವರ್ಗಗಳಿಂದ ಪ್ರತಿನಿಧೀಕರಣ ನಡೆದಿದೆ. ವರ್ಷ ವರ್ಷ ಒಂದು ನಿರ್ದಿಷ್ಟ ಮೊತ್ತದ ಅನುದಾನ ಪಂಚಾಯತ್‌ಗೆ ಬರುತ್ತಿದೆ. ಇದರ ಜತೆಗೆ ಸ್ಥಳೀಯವಾಗಿ ಮನೆ ತೆರಿಗೆ ಮತ್ತು ಇತರ ಮೂಲಗಳಿಂದ ಸ್ವಲ್ಪ ಮಟ್ಟಿನ ಆದಾಯ ಸಂಗ್ರಹವಾಗಿತ್ತಿದೆ. ಹೊರಗಿನಿಂದ ಬರುವ ಅನುದಾನ ಮತ್ತು ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳಿಂದ ಕೆಲವು ಕಾಮಗಾರಿಗಳು ನಡೆಯುತ್ತಿವೆ. ಇದರ ಜತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನಗಳು ಹಳ್ಳಿಗೂ ತುಪುತ್ತಿವೆ. ತಳಮಟ್ಟದಲ್ಲಿ ಯೋಜನೆಗಳು ನಡೆಯಬೇಕೆಂದು ಪಂಚಾಯತ್ ಕಾನೂನು ಬಯಸುತ್ತದೆ. ಯೋಜನೆಗಳು ನಡೆದಿವೆ ಎಂದು ಪಂಚಾಯತ್ ದಾಖಲೆಗಳು ತಿಳಿಸುತ್ತವೆ. ಸ್ಥಾಯಿ ಸಮಿತಿಗಳು ಇರಬೇಕೆಂದು ಪಂಚಾಯತ್ ನಿಯಮಗಳು ಬಯಸುತ್ತವೆ. ಅವೂ ಇವೆ; ದಾಖಲೆಯಲ್ಲಿ. ಹೀಗೆ ಕಾನೂನು ಬಯಸುವ ವಿಕೇಂದ್ರೀಕರಣದ ವಿಧಿ ವಿಧಾನಗಳಿಗೆ ಇಲ್ಲಿ ಯಾವತ್ತೂ ಮೋಸವಾಗಿಲ್ಲ.

ನಂತರದ ಅಧ್ಯಾಯದಲ್ಲಿ ಕಾನೂನು ಪ್ರಕಾರ ಇರುವ ವಿಕೇಂದ್ರೀಕರಣವನ್ನು ವಾಸ್ತವದಲ್ಲಿ ಇರುವ ವಿಕೇಂದ್ರೀಕರಣಕ್ಕೆ ಹೋಲಿಸಲಾಗಿದೆ. ಸದಸ್ಯರ ಆಯ್ಕೆ ಚುನಾವಣೆ ಮೂಲಕ ನಡೆಯಬೇಕೆಂದಿದೆ. ಆದರೆ ಇಲ್ಲಿ ಸದಸ್ಯರೆಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೇರೆ ವಿಧಾನದಲ್ಲಿ ಸದಸ್ಯ ಆಯ್ಕೆ ನಡೆದರೆ ಕಾನೂನು ಪ್ರಕಾರ ತಪ್ಪಲ್ಲ. ತಪ್ಪಲ್ಲ ಯಾವಾಗ ಎಂದರೆ ಕಾನೂನು ಸೂಚಿಸುವಷ್ಟು ಸಂಖ್ಯೆಯಲ್ಲಿ ಸಮಾಜದ ವಿವಿಧ ವರ್ಗಗಳಿಂದ ಪ್ರತಿನಿಧೀಕರಣ ನಡೆದಾಗ. ಹೆಚ್ಚು ಕಡಿಮೆ ಸಮಾಜದ ಎಲ್ಲಾ ಮುಖ್ಯ (ಅಂದರೆ ಹೆಚ್ಚು ಜನ ಸಂಖ್ಯೆ ಇರುವ) ಜಾತಿಗಳಿಂದ ಪ್ರತಿನಿಧಿಗಳು ಬಂದಿದ್ದಾರೆ. ಹಳ್ಳಿಯಲ್ಲಿ ಆಯ್ಕೆಯಾದ ಒಂಬತ್ತು ಸದಸ್ಯರಲ್ಲಿ ಒಬ್ಬ ಲಿಂಗಾಯತರನ್ನು ಬಿಟ್ಟರೆ ಉಳಿದವರೆಲ್ಲಾ ಕೆಳ ಜಾತಿ/ವರ್ಗಕ್ಕೆ ಸೇರಿದವರು. ಪಂಚಾಯತ್ ರಾಜ್ ಪದ ಸೂಚಿಸುವಂತೆ ಆಯ್ಕೆ ಕುಡ ಆಧುನಿಕ ಮತ್ತು ಸಂಪ್ರದಾಯದ ಸಮ್ಮಿಲನವಾಗಿದೆ. ಆಯ್ಕೆಯಾದ ಸದಸ್ಯರು ಐದು ವರ್ಷ ಪಂಚಾಯತ್ ಸಂಸ್ಥೆಯನ್ನು ನಡೆಸಿದ್ದಾರೆ. ಹೇಗೆ ನಡೆಸಿದ್ದಾರೆ ಎಂದರೆ ಹೆಚ್ಚು ಕಡಿಮೆ ಎಲ್ಲಾ ಹಳ್ಳಿಗಳಲ್ಲೂ ನಡೆಯುವ ರೀತಿಯಲ್ಲೇ ನಡೆಸಿದ್ದಾರೆ ಎನ್ನಬೇಕಾಗುತ್ತದೆ. ವರ್ಷಕ್ಕೆ ಎರಡು ಗ್ರಾಮ ಸಭೆ ನಡೆಸಬೇಕೆಂದು ನಿಯಮ ಸೂಚಿಸುತ್ತದೆ. ಮಾಡಿದ್ದೇವೆ ಎಂದು ಸಂಬಂಧ ಪಟ್ಟವರು ದಾಖಲಿಸಿದ್ದಾರೆ. ವಾಸ್ತವದಲ್ಲಿ ಒಂದು ಗ್ರಾಮ ಸಭೆ ಕೂಡ ನಡೆದಿರಲಿಲ್ಲ. ಗ್ರಾಮ ಸಭೆಗಳಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ನಡೆಯಬೇಕು. ನಡೆದಿದೆ ಎನ್ನುತ್ತವೆ ದಾಖಲೆಗಳು. ಆದರೆ ಫಲಾನುಭವಿಗಳ ಆಯ್ಕೆಯಲ್ಲಿ ಊರವರ ಪಾತ್ರ ಬಿಡಿ ಮಹಿಳಾ ಸದಸ್ಯೆಯರ ಪಾತ್ರ ಕೂಡ ಇರಲಿಲ್ಲ. ತಳ ಮಟ್ಟದಲ್ಲಿ ಯೋಜನೆಗಳು ನಡೆಯಬೇಕು ಮತ್ತು ಅದರಲ್ಲಿ ಊರವರ ಅಭಿಪ್ರಾಯ ಸೇರಿದರೆ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಕನಿಷ್ಠ ಎಲ್ಲಾ ಸದಸ್ಯರಾದರೂ ಪಾಲುಗೊಳ್ಳಬೇಕು. ಕಾರ್ಯದರ್ಶಿಯವರು ಕೊಡುವ ಮಾಹಿತಿ ಪ್ರಕಾರ ಎಲ್ಲಾ ಸದಸ್ಯರು ಪಾಲುಗೊಂಡಿದ್ದಾರೆ. ದುರಂತವೆಂದರೆ ಕೆಲವು ಸದಸ್ಯರು ಪಾಲುಗೊಳ್ಳುವುದು ಬಿಡಿ ಅಂತಹುದು ಒಂದು ಇದೆ ಎನ್ನುವ ಅರವೇ ಕೆಲವು ಸದಸ್ಯರಿಗೆ ಇಲ್ಲ. ಇಂತಹ ಸಂದರ್ಭದಲ್ಲಿ ಯೋಜನೆಯಲ್ಲಿ ಊರವ ಅಭಿಪ್ರಾಯ ಕೂಡ ಇರಬೇಕೆಂದು ಬಯಸುವುದು ಒಂದು ವಿಧದಲ್ಲಿ ಅಟ್ಟ ಹತ್ತಲು ಆಗದವ ಬೆಟ್ಟ ಹತ್ತುಲು ಪ್ರಯತ್ನಿಸಿದಂತೆ. ಸ್ಥಾಯಿ ಸಮಿತಿಗಳು ಇರಲೇಬೇಕೆಂಬ ಕಾನೂನಿನ ಅವಶ್ಯಕತೆ ಅಧ್ಯಕ್ಷರನ್ನು ಹೊರತು ಪಡಿಸಿ ಉಳಿದ ಸದಸ್ಯರ ಗಮನಕ್ಕೆ ಬಂದೇ ಇಲ್ಲ.

ಹಳ್ಳಿಯನ್ನು ಸ್ವರ್ಗ ಮಾಡಿ ಎಂದು ಊರವರು ಕೇಳಿಲ್ಲ. ಆದರೆ ಆಶ್ರಯವಿಲ್ಲದವರು ಮನೆ ಕೊಡಿ, ಆರೋಗ್ಯವಿಲ್ಲದವರು ಆಸ್ಪತ್ರೆ ಕೊಡಿ, ಶಿಕ್ಷಣ ಇಲ್ಲದವರು ಶಾಲೆ ಕೊಡಿ ಎಂದು ಕೇಳಿದ್ದಾರೆ. ಕೇವಲ ಐದು ವರ್ಷದ ಅವಧಿಯಲ್ಲಿ ಒಂದು ಪಂಚಾಯತ್ ತನ್ನದೇ ಸಂಪನ್ಮೂಲದಲ್ಲಿ ಇವನ್ನೆಲ್ಲಾ ಪೂರೈಸಲು ಕಷ್ಟವಾಗಬಹುದು. ಅದರ ಅವಶ್ಯಕತೆಯೂ ಇಲ್ಲ. ಇವೆಲ್ಲಾ ಸವಲತ್ತುಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳು ಕೊಡುತ್ತವೆ. ಸದ್ಯದ ಪಂಚಾಯತ್‌ನ ಕೆಲಸವೆಂದರೆ ಈ ಸವಲತ್ತುಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು. ಜತೆಗೆ ಅರ್ಹರನ್ನು ಗುರುತಿಸುವುದು, ಸವಲತ್ತುಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೆ ಹೆಚ್ಚಿನ ಸವಲತ್ತುಗಳಿಗೆ ಬೇಡಿಕೆ ಸಲ್ಲಿಸುವುದು ಇತ್ಯಾದಿಗಳು ಕೂಡ ಪಂಚಾಯತ್ ವ್ಯಾಪ್ತಿಗೆ ಬರುವ ಕೆಲಸಗಳೆ. ಹೀಗೆ ಒಂದು ವಿಧದಲ್ಲಿ ಪಂಚಯತ್ ಈ ಸವಲತ್ತುಗಳನ್ನು ಹಳ್ಳಿಗೆ ತಲುಪಿಸುವ ಮಾಧ್ಯಮ. ಇಲ್ಲಿನ ಪಂಚಾಯತ್ ಒಳ್ಳೆಯ ಮಾಧ್ಯಮವಾಗಿಯೂ ಕೆಲಸ ಮಾಡಿಲ್ಲ. ಹಳ್ಳಿಯಲ್ಲಿ ರೋಗಕ್ಕೂ, ರೋಗಿಗಳಿಗೂ ಕಡಿಮೆ ಇರಲಿಲ್ಲ. ಆರು ಜನ ಖಾಸಗಿ ವೈದ್ಯರುಗಳಿಗೆ ಕೈ ತುಂಬಾ ಕೆಲಸ ಕೊಡುವಷ್ಟು ಖಾಯಿಲೆಗಳು ಹಳ್ಳಿಯಲ್ಲಿದ್ದವು. ಸರಕಾರಿ ಆಸ್ಪತ್ರೆಯೂ ಇದೆ. ಅಲ್ಲಿ ಒಬ್ಬ ವೈದ್ಯರ ನೇಮಕವೂ ಆಗಿದೆ. ಆದರೆ ಅವರು ತಿಂಗಳಿಗೊಮ್ಮೆ ಕೂಡ ಆಸ್ಪತ್ರೆ ಕಡೆ ಬರುವುದು ಅಪರೂಪ. ಆದರೂ ಪಂಚಾಯತ್ ಕಡೆಯಿಂದ ವೈದ್ಯರನ್ನು ಪ್ರತಿ ದಿನ ಬರುವಂತೆ ಮಾಡುವ ಯಾವ ಕ್ರಮವೂ ಕಂಡು ಬಂದಿಲ್ಲ. ಮನೆ ಇಲ್ಲದವರು ಆಶ್ರಯ ಯೋಜನೆಯ ಅಡಿಯಲ್ಲಿ ಕೊಂಡು ಕೊಂಡ ಭೂಮಿಯನ್ನು ಇವತ್ತು ಹಂಚಬಹುದು ನಾಳೆ ಹಂಚಬಹುದೆಂದು ಕಾದರು. ಹಲವಾರು ವರ್ಷ ಕಳೆದರೂ ಸೈಟುಗಳ ಹಂಚಿಕೆ ಪಂಚಾಯತ್ ವತಿಯಿಂದ ನಡೆಯಲಿಲ್ಲ. ನಿರ್ವಸತಿಗರು ಕಾದು ಸುಸ್ತಾದರು. ಕೊನೆಗೊಂದು ದಿನ ಸೈಟುಗಳನ್ನು ತಾವೇ ಹಂಚಿಕೊಂಡರು. ಶಿಕ್ಷಣದ ಸ್ಥಿತಿಯು ಇದುವೇ. ಚರಂಡಿ ಮತ್ತು ಗ್ರಾಮೀಣ ನೈರ್ಮಲೀಕರಣಕ್ಕೆ ಪ್ರತಿ ವರ್ಷ ಕಡಿಮೆಯೆಂದರೆ ಐವತ್ತು ಸಾವಿರದಷ್ಟು ಖರ್ಚಾಗುತ್ತಿದೆ. ಆದರೆ ಹಳ್ಳಿಯ ಚರಂಡಿಯಲ್ಲಿ ಕೊಚ್ಚೆ ನಿರ್ಮಾಣವಾಗುವುದು ತಪ್ಪಿಲ್ಲ; ಸೊಳ್ಳೆಗಳ ಕಾಟ ತಪ್ಪಿಲ್ಲ. ಜತೆಗೆ ಇದರಿಂದಲೇ ಹುಟ್ಟುವ ಖಾಯಿಲೆಗಳು ಕಡಿಮೆಯಾಗಿಲ್ಲ. ಹೀಗೆ ಪಂಚಾಯತ್‌ಗಳ ವಿಫಲತೆಯ ಪಟ್ಟಿಯನ್ನು ಮಾಡುತ್ತಾ ಹೋಗಬಹುದು.

ಮೇಲಿನ ವಿವರಗಳನ್ನು ನೀಡುವ ಮೂಲಕ ವಿಕೇಂದ್ರೀಕರಣದ ಯಾವ ಲಕ್ಷಣಗಳೂ ಈ ಹಳ್ಳಿಯಲ್ಲಿ ಪ್ರಕಟಗೊಂಡಿಲ್ಲ ಅಥವಾ ವಿಕೇಂದ್ರೀಕರಣ ಪ್ರಯತ್ನವೇ ನಿರರ್ಥಕ ಎಂದು ವಾದಿಸುವ ಉದ್ದೇಶ ಇದಲ್ಲ. ಇಲ್ಲಿನ ಉದ್ದೇಶ ಪಂಚಾಯತ್ ಸಂಸ್ಥೆಗಳನ್ನು ಎಷ್ಟರ ಮಟ್ಟಿಗೆ ಕೆಳ ಜಾತಿ/ವರ್ಗಗಳ ಸಶಕ್ತೀಕರಣಕ್ಕೆ ಬಳಸಲಾಗಿದೆ ಎನ್ನುವುದರ ವಿಶ್ಲೇಷಣೆ. ಸಶಕ್ತೀಕರಣವನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಇಲ್ಲಂತು ಅರಿವು, ಭಾಗವಹಿಸುವಿಕೆ. ಆರೊಗ್ಯ, ಶಿಕ್ಷಣ, ವಸತಿ ಮತ್ತು ಇತರ ಮೂಲಭೂತ ಸೌಲಭ್ಯಗಳ ಹೊಂದುವಿಕೆ ಇತ್ಯಾದಿಗಳಿಂದ ಸಶಕ್ತೀಕರಣವನ್ನು ಗುರತಿಸಲಾಗಿದೆ. ಈ ದೃಷ್ಟಿಯಿಂದ ಪಂಚಾಯತ್ ವಿಶೇಷ ಸಾಧನೆ ಮಾಡಿಲ್ಲವೆಂದು ಮೇಲಿನ ಅಂಕಿ ಅಂಶಗಳಿಂದ ತಿಳಿಯುತ್ತದೆ. ಇವುಗಳನ್ನು ಹೊರತುಪಡಿಸಿ ಇತರ ಬೆಳವಣಿಗೆಗಳನ್ನು ಗಮನಿಸಿದರೆ ವಿಕೇಂದ್ರೀಕರಣದ ಹಲವು ಲಕ್ಷಣಗಳನ್ನು ಗುರುತಿಸಬಹುದು. ಮುಂದಿನ ಬಾರಿ ನೀವು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆ? ಎಂದು ಹರಿಜನ ಪ್ರತಿನಿಧಿ ಕರಿಸಿದ್ದನವರನ್ನು ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಜನರಿಗೆ ತಮ್ಮ ಹಕ್ಕಿನ ಬಗ್ಗೆ ಇರುವ ಜಾಗೃತಿಯನ್ನು ಪರಿಚಯಿಸುತ್ತದೆ. ಕೈಮುಗಿದು ಕರಿಸಿದ್ದನವರು, “ನನ್ನನ್ನು ಮೆಂಬರು ಮಾಡಿ ತಿಂಗಳಿಗೆ ಸಾವಿರ ರೂಪಾಯಿ ಸಂಬಳ ಕೊಡುತ್ತೇನೆ ಎಂದರೂ ನನಗೆ ಈ ಪಂಚಾಯತ್ ಮೆಂಬರ್‌ಗಿರಿ ಬೇಡ” ಎಂದರು. “ಯಾಕೆ ಬೇಡ” ಎಂದು ವಿಚಾರಿಸಿದರೆ, “ನಲ್ಲಿಯಲ್ಲಿ ನೀರು ಬರದಿದ್ದರೆ ನಾನು ರಪೇರಿ ಮಾಡಬೇಕು, ವಿದ್ಯತ್ ಸಂಪರ್ಕ ಕೆಟ್ಟು ಹೋದರೆ ನಾನು ಕಂಬ ಹತ್ತಬೇಕು, ಏನೇ ಸಮಸ್ಯೆ ಬಂದರೂ ಅದಕ್ಕೆ ಪಂಚಾಯತ್ ಮೆಂಬರನೇ ಜವಾಬ್ದಾರ. ಹಾಗೆ ಅವುಗಳನ್ನು ರಿಪೇರಿ ಮಾಡುವ ಕೆಲಸ ಕೂಡ ಆತನದ್ದೇ ಎಂದು ಈ ಕೇರಿ ಜನ ತಿಳಿದಿದ್ದಾರೆ. ಅವರು ಮುಂದುವರಿದು, ಕೇಳುವುದನ್ನಾದರೂ ಮರ್ಯಾದೆಯಿಂದ ಕೇಳಿದರೆ ಆದೀತು, ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ, ಕುಡಿದರಂತೂ ಕೇಳುವುದೇ ಬೇಡ ಹೊಡಿಯುವುದಕ್ಕೆ ಬರುತ್ತಾರೆ. ಇಂತಹ ಸ್ಥಿತಿಯಲ್ಲಿ ಯಾರು ಮೆಂಬರಾಗಲು ಇಚ್ಚಿಸುತ್ತಾರೆ ಹೇಳಿ, “ಎಂದು ನನ್ನ ಮುಖ ನೋಡಿದರು. ಅಧ್ಯಕ್ಷರು ಮತ್ತು ಒಬ್ಬ ಸದಸ್ಯರನ್ನು ಬಿಟ್ಟು ಉಳಿದ ಎಲ್ಲರ ಅಭಿಪ್ರಾಯ ಹೆಚ್ಚು ಕಡಿಮೆ ಇದುವೆ. ಜನರಿಗೆ ತಮ್ಮ ಹಕ್ಕಿನ ಬಗ್ಗೆ ಸಾಕಷ್ಟು ತಿಳುವಳಿಕೆಯಿದೆ. ಆಶ್ರಯ ಸೈಟು ವಿತರಣೆಯ ಪ್ರಸಂಗ ಕೂಡ ಇದೇ ಅಂಶವನ್ನು ದೃಢಪಡಿಸುತ್ತದೆ. ಗ್ರಾಮ ಸಭೆಯಲ್ಲಿ ಆಗುವ ಗಲಾಟೆಗೂ ಸ್ವಲ್ಪ ಕಾರಣ ತಮಗೆ ಬರಬೇಕಾದ್ದು ಬರಲಿಲ್ಲವೆಂಬ ನೋವು. ತಳಮಟ್ಟದ ವಿಕೇಂದ್ರೀಕರಣಕ್ಕೆ ಜನರು ತಮ್ಮ ಹಕ್ಕಿನ ಬಗ್ಗೆ ಜಾಗರೂಕರಾದರೆ ಸಾಕೆ? ಜವಾಬ್ದಾರಿಯ ಕುರಿತು ಮಾತಾಡುವವರು ಯಾರು? ಜವಾಬ್ದಾರಿಯಿಲ್ಲದೆ ಹಕ್ಕಿದೆಯೆ? ಇದ್ದರೂ ಅದು ನಿಜವಾದ ಹಕ್ಕೇ? ಹಕ್ಕು ಮತ್ತು ಜವಾಬ್ದಾರಿಗಳ ಕುರಿತ ತಿಳುವಳಿಕೆ ಸದಸ್ಯರಲ್ಲೇ ತುಂಬಾ ಕಡಿಮೆ. ಹೊರಗಿನಿಂದ ಬರುವ ಅನುದಾನ ಮತ್ತು ಸಹಾಯದಿಂದಲೇ ಕಟ್ಟಿಕೊಳ್ಳುವ ವಿಕೇಂದ್ರೀಕರನ ಎಷ್ಟು ಗಟ್ಟಿಯಿರಬಹುದು. ತಮ್ಮ ಪಾಲಿನ ಜವಾಬ್ದಾರಿಯನ್ನು ಪೂರೈಸಲು ಸ್ಥಳೀಯರು ಮುಂದಾಗದಿದ್ದರೆ ಆರೋಗ್ಯಕರ ವಿಕೇಂದ್ರೀಕರಣ ಸಾಧ್ಯವೆ? ಈ ಎಲ್ಲಾ ಪ್ರಶ್ನೆಗಳಿಗೆ ನಕಾರಾತ್ಮಕ ಉತ್ತರವೇ ದೊರೆಯಬಹುದು ಇಲ್ಲಿ. ಹಿಂದೆ ವಿವರಿಸಿದಂತೆ ಇಲ್ಲಿ ಚರ್ಚಿಸಿದ ಕೆಲವೊಂದು ಸಮಸ್ಯೆಗಳು ಈ ಪಂಚಾಯತ್‌ನ ಸ್ಪೆಶಾಲಿಟಿಯಲ್ಲ. ಹೆಚ್ಚು ಕಡಿಮೆ ಎಲ್ಲಾ ಪಂಚಾಯತ್‌ಗಳು ಕತೆಯೂ ಇದೆ.

ಸ್ವತಂತ್ರ ಭಾರತ ಅನುಸರಿಸಿದ ಅಭಿವೃದ್ದಿ ನೀತಿಗಳು ಮೂಲಭೂತ ಸಾಮಾಜಿಕ ಪರಿವರ್ತನೆಗೆ ಪೂರಕವಾಗಿರಲಿಲ್ಲ. ಹಿಂದೆ ವಿವರಿಸಿದಂತೆ ಸಾಂಪ್ರದಾಯಿಕ ಸಮಾಜದ ಅಸಮಾನತೆಗಳನ್ನು ಯಥಾರೀತಿಯಲ್ಲಿ ಇರಿಸಿಕೊಂಡು ನಡೆಸಿದ ಆಧುನೀಕರಣ ಪ್ರಕ್ರಿಯೆ ಸಮಾಜದ ಮೇಲ್ವರ್ಗಗಳ ಆಸಕ್ತಿಗೆ ಪೂರಕವಾಗಿಯೇ ಇತ್ತು. ಇದರಿಂದಾಗಿ ಕೆಳವರ್ಗದವರು. ತಮ್ಮ ಸಾಂಪ್ರದಾಯಿಕ ಕಸುಬುಗಳನ್ನು ತ್ಯಾಗ ಮಾಡಬೇಕಾಯಿತು. ಅಂದರೆ ಅದೊಂದು ಆದರ್ಶ; ಅದರ ನಾಶ ತುಂಬಲಾರದ ನಷ್ಟ ಎನ್ನುವ ಅರ್ಥದಲ್ಲಿ ಹೇಳುತ್ತಿಲ್ಲ. ಸಾಂಪ್ರದಾಯಿಕ ಕಸುಬಿನಿಂದ ವಂಚಿತರಾದ ಕೆಳವರ್ಗದವರಿಗೆ ಅತ್ತ ಆಧುನಿಕ ಕಸುಬುಗಳೂ ಪ್ರಾಪ್ತವಾಗಲಿಲ್ಲ. ಆದುದರಿಂದ ಇಲ್ಲಿ ನೋವಿರುವುದು ಕೆಳವರ್ಗದವರ ತ್ರಿಶಂಕು ಸ್ಥತಿಯ ಬಗ್ಗೆ. ಇದರ ಅರ್ಥ ಆಧುನೀಕರಣದಲ್ಲಿ ಯಾವುದೇ ದೋಷವಿಲ್ಲ ಅಥವಾ ಅದು ಯಾವುದೇ ಮಾರ್ಪಾಟು ಇಲ್ಲದೆ ಅನುಸರಿಸಬೇಕಾದ ಥಿಯರಿ ಎಂದಲ್ಲ. ಅದರಲ್ಲೂ ಬೇಕಾದಷ್ಟು ಲೋಪಗಳಿವೆ. ಉದಾಹರಣಗೆ ನಮ್ಮ ಎಲ್ಲಾ ಸಮಸ್ಯೆಗಳನ್ನು, ತಾಂತ್ರಿಕ ಆಧುನೀಕರಣ ತತ್ವಕ್ಕೆ ಬದ್ಧರಾಗಿರುವವರು, ಆಡಳಿತದ ರಚನೆಗಳನ್ನು ಹೆಚ್ಚಿಸುವುದರ ಮೂಲಕ ಪರಿಹರಿಸಿಕೊಳ್ಳಬಹುದೆಂದು ವಾದಿಸುತ್ತಾರೆ. ಆದರೆ ಅಲ್ಲಿ ಕೂಡ ಬಡತನವನ್ನು ಆರ್ಥಿಕ ಕಾರಣಗಳಿಗೆ ಸೀಮಿತಗೊಳಿಸಿ ನೋಡಲಾಗುತ್ತಿದೆ. ಹರಿಹಾರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಅಭವೃದ್ದಿ ಕಾರ್ಯಕ್ರಮಗಳನ್ನು ಪಂಚಾಯತ್ ಮೂಲಕ ಜನರಿಗೆ ತಲುಪಿಸಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಬಡತ ಕೇವಲ ಆರ್ಥಿಕ ಪ್ರಶ್ನೆ ಅಲ್ಲ. ಉತ್ತಮ ಕೂಲಿ, ಪೌಷ್ಠಿಕಾಂಶ, ಉತ್ತಮ ಶಿಕ್ಷಣ, ಆಶ್ರಯ ಇತ್ಯಾದಿಗಳು ಕೆಳ ವರ್ಗದ ಜನರಿಗೆ ಗಗನ ಕುಸುಮಗಳು ನಿಜ. ಆದರೆ ಅದು ಸಾಧ್ಯವಾಗುವುದು ಒಂದು ಸಾಮಾಜಿಕ ಪರಿಸರದಲ್ಲಿ. ಅಲ್ಲಿ ಚಾರಿತ್ರಿಕವಾಗಿ ರೂಪಗೊಂಡು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಚನೆಗಳು ಮೇಲಿನ ಕೊರತೆಗಳನ್ನು ಮುಂದುವರಿಸಲು ಅವಶ್ಯವಾದ ಚೌಕಟ್ಟನ್ನು ಒದಗಿಸುತ್ತವೆ. ಆ ಚೌಕಟ್ಟನ್ನು ಸುಧಾರಿಸುವ ಕಾರ್ಯಕ್ರಮಗಳು ಇಲ್ಲದಿದ್ದರೆ ಭೌತಿಕ ಕೊರತೆ ಮುಂದುವರಿಯುತ್ತಲೇ ಇರುತ್ತದೆ.

ಹೀಗೆ ಎರಡು ರೀತಿಯ ಪ್ರಯತ್ನ-ಒಂದು ವರ್ಗಮಾನದ ಕೊರತೆಗಳನ್ನು ಭರಿಸುವ ಮತ್ತೊಂದು ಆ ಕೊರತೆಗಳು ಮುಂದುವರಿಯಲು ಸಹಕಾರಿಯಾಗಿರುವ ಚೌಕಟ್ಟನ್ನು ಸುಧಾರಿಸುವ-ಏಕಕಾಲದಲ್ಲಿ ಆಗಬೇಕಾಗಿದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರದ ಸುಧಾರಣೆಗೆ ನಮ್ಮಲ್ಲಿ ಬೇಕಾದಷ್ಟು ಕಾನೂನುಗಳಿವೆ. ಅವುಗಳ ಮುಖ್ಯ ಉದ್ದೇಶ ಸಾಂಪ್ರದಾಯಿಕ ಸಮಜದ ಕೆಲವು ಅನಿಷ್ಠ ವ್ಯವಹಾರಗಳನ್ನು ತಡಿಯುವದು. ಆದರೆ ಅವುಗಳಿಂದಲೇ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ನಂಬುವುದು ತಾಂತ್ರಿಕ ಆಧುನೀಕರಣದ ಮತ್ತೊಂದು ರೂಪವಾಗುತ್ತದೆ. ತಳಮಟ್ಟದ ಸಾಮಾನಿಕ ಪರಿವರ್ತನೆಗಳಿಗೆ ಆಧುನಿಕ ಪರಿಕರಗಳು ಪೂರಕವಾಗಬೇಕು. ಒಂದು ವೇಳೆ ಆಗದಿದ್ದರೆ ಆಧುನೀಕರಣದ ಲೋಪದೋಷಗಳನ್ನು ವಿಶ್ಲೇಷಿಸುವುದು ಅಗತ್ಯ ಕೊಡ. ಹಾಗೆಂದು ಅಂತಹ ವಿಶ್ಲೇಷಣೆಗಳು ಏಕಮುಖವಾದರೆ ಸಂಪ್ರದಾಯವಾದಿಗಳು ಮುಂದಿಡುವ ವಾದಗಳಿಗಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಇಂತಹ ಸಂದಿಗ್ದ ಸಂದರ್ಭದಲ್ಲಿ ಸಮುದಾಯವಾದಿಗಳು ಸೂಚಿಸುವ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳನ್ನು ಉಳಿಸಿ ಬೆಳೆಸಬೇಕೆಂಬ ಅಂಶಗಳು ಅಪ್ಯಾಯಮಾನವಾಗಿ ತೋರಬಹುದು. ಆದರೆ ಇದನ್ನು ಯಥಾ ರೀತಿಯಲ್ಲಿ ಸ್ವೀಕರಿಸುವಂತಿಲ್ಲ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪಗೊಂಡ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಚನೆಗಳು ಶತಮಾನದ ಶೋಷಣೆಗಳನ್ನು ಮುಂದುವರಿಸಲು ಅವಶ್ಯವಾದ ಚೌಕಟ್ಟನ್ನು ಒದಗಿಸುತ್ತಿವೆ. ಆ ಚೌಕಟ್ಟನ್ನು ಸುಧಾರಿಸುವ ಕಾರ್ಯಕ್ರಮಗಳು ಇಲ್ಲದಿದ್ದರೆ ಭೌತಿಕ ಕೊರತೆ ಮುಂದುವರಿಯುತ್ತಲೇ ಇರುತ್ತದೆ.

ಎರಡು, ಸಂಪ್ರದಾಯವಾದಿಗಳು, ಸಮುದಾಯವಾದಿಗಳು ಮತ್ತು ತಾಂತ್ರಿಕ ಆಧನೀಕರಣವಾದಿಗಳು ಮುಂದಿಡುವ ಸಲಹೆಗಳು ಮೂಲಭೂತ ಸಾಮಾಜಿಕ ಪರಿವರ್ತನೆಗೆ ದಾರಿಯಾಗುವುದು ಕಷ್ಟ ಸಾಧ್ಯ. ಯಾಕೆಂದರೆ ಇವರ ನಡುವಿನ ಭಿನ್ನತೆಗಳು ಕೇವಲ ರಾಜಕೀಯ ಪ್ರಕ್ರಿಯೆಗಳಿಗೆ ಸೀಮಿತಗೊಂಡಿದೆ. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ಕುರಿತು ಇವರೆಲ್ಲಾ ಹೆಚ್ಚು ಕಡಿಮೆ ಒಂದೇ ನಿಲುವನ್ನು ಹೊಂದಿದ್ದಾರೆ. ಮಾರುಕಟ್ಟೆ, ಸಂಪನ್ಮೂಲದ ಖಾಸಗಿ ಒಡೆತನ, ಬಂಡವಾಳಶಾಹಿ ಉತ್ಪಾದನೆ ಸಂಬಂಧಗಳ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇವರೆಲ್ಲಾ ಬಂಡವಾಳದ ಅಂತಾರಾಷ್ಟ್ರೀಯ ವ್ಯವಸ್ಥೆ ಕೊಡಮಾಡುವ ನೀತಿಯನ್ನು ಬೆಂಬಲಿಸುತ್ತಾರೆ. ಮುಕ್ತ ಮಾರುಕಟ್ಟೆ ನೀತಿ ಉಂಟು ಮಾಡಬಹುದಾದ ಅಸಮಾನತೆಯನ್ನು ರಾಜಕೀಯ ಪ್ರಕ್ರಿಯೆಗಳ ಮೂಲಕ ಪರಿಹರಿಸಿಕೊಳ್ಳಬಹುದೆಂಬ ನಂಬಿಕೆ ಇವರಿಗಿದೆ. ಯಾವ ರೀತಿಯ ರಾಜಕೀಯ ಪ್ರಕ್ರಿಯೆಗೆ ಮಹತ್ವ ನೀಡಬೇಕೆಂಬ ವಿಚಾರ ಕುರಿತು ಮಾತ್ರ ಇವರ ಮಧ್ಯೆ ಭಿನ್ನತೆ ಇರುವುದು. ಆರ್ಥಿಕ ಕ್ಷೇತ್ರದ ನೀತಿ ನಿಯಮಗಳನ್ನು ಪ್ರಭುತ್ವ ನಿರ್ಧರಿಸಲು ಆವಕಾಶವಿದ್ದರೆ ಮಾತ್ರ ಮುಕ್ತ ಮಾರುಕಟ್ಟೆ, ನೀತಿ ಉಂಟು ಮಾಡಬಹುದಾದ ಅಸಮಾನತೆಯನ್ನು ರಾಜಕೀಯ ಪ್ರಕ್ರಿಯಗಳ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯ. ಪ್ರಭುತ್ವದ ಮೂಗು ತೂರಿಸುವಿಕೆಯಿಂದ ಆರ್ಥಿಕ ಕ್ಷೇತ್ರ ದೂರ ಇರಬೇಕೆನ್ನುವುದೇ ಜಾಗತೀಕರಣದ ಬಹುದೊಡ್ಡ ಲಕ್ಷಣ. ಇಂತಹ ಸಂದರ್ಭದಲ್ಲಿ ಇವರೆಲ್ಲಾ ಸೂಚಿಸುವ ರಾಜಕೀಯ ಪ್ರಕ್ರಿಯೆಗಳು ತಳಮಟ್ಟದ ಜನರ ಬದುಕನ್ನು ಮೂಲಭೂತವಾಗಿ ಬದಲಾಯಿಸಲು ಸಾಧ್ಯವೇ?

 

[1]ಗುರುಪ್ರೀತ್ ಮಹಾಜನ್, “ಕಲ್ಚರಲ್ ಎಂಬೋಡಿಮೆಂಟ್ ಆಂಡ್ ಹಿಸ್ಟರೀಸ್: ಟುವರರ್ಡ್ಸ್ ಕನ್‌ಸ್ಟ್ರಕ್ಷನ್ ಆಫ್ ಸೆಲ್ಫ್”, ಲೇಖನ ಉಪೇಂದ್ರ ಬಕ್ಷಿ ಆಂಡ್ ಬಿಕು ಪರೇಕ್ (ಸಂಪಾದಿಸಿದ) ಕ್ರೈಸಿಸ್ ಆಂಡ್ ಚೇಂಜ್ ಇನ್ ಕಾಂಟೆಂಪರರಿ ಇಂಡಿಯ, ನ್ಯೂ ಡೆಲ್ಲಿ ಸೇಜ್ ಪಬ್ಲಿಕೇಷನ್ಸ್, ೧೯೯೫, ಪುಟ ೩೫೦-೩೬೯.

[2]ಗುರುಪ್ರೀತ್ ಮಹಾಜನ್, ಕಲ್ಚರಲ್ ಎಂಬೋಡಿಮೆಂಟ್, ಪುಟ ೩೫೦-೩೬೫.

[3]ಚಂದ್ರ ಪೂಜಾರಿ, ಸ್ವದೇಶಿ – ಒಂದು ವಿಶ್ಲೇಷಣೆ, ಹಂಪಿ : ಕನ್ನಡ ವಿಶ್ವವಿದ್ಯಾಲಯ, ೧೯೯೯.