ಕೆಲವು ಸಲಹೆಗಳು

ಒಟ್ಟು ಪರಿಸರ ಬದಲಾಗದೆ ಏನೂ ಆಗದು ಎನ್ನುವ ನಿಲುವು ಅವಾಸ್ತವಿಕ. ಚೌಕಟ್ಟನ್ನು ಬದಲಾಯಿಸುವ ಮತ್ತು ದಿನ ನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಜತೆಜತೆಯಾಗಿ ನಡೆಯಬೇಕಾಗಿದೆ. ಈಗಾಗಲೇ ಇರುವ ಪರಿಕರಗಳನ್ನು ಪರಿಣಾಮಕಾರಿಯಾಗಿ ಬಳಸುವುದರ ಕುರಿತು ಅಥವಾ ಗ್ರಾಮ ಪಂಚಾಯತ್ ಸಂಸ್ಥೆಗಳನ್ನು ಹೇಗೆ ತಳ ಮಟ್ಟದಲ್ಲಿ ಬಲಗೊಳಿಸಬಹುದು ಎನ್ನುವುದರ ಕುರಿತು ಕೆಲವು ಸಲಹೆಗಳನ್ನು ಮುಂದಿಡಲಾಗಿದೆ. ಇಲ್ಲಿ ಮುಖ್ಯವಾಗಿ ನಾಲ್ಕು ವಿಚಾರಗಳನ್ನು – ತಳಮಟ್ಟದ ಯೋಜನೆ, ಗ್ರಾಮ ಸಭೆ, ಗ್ರಾಮ ಪಂಚಾಯತ್‌ನ ಆದಾಯ ಹೆಚ್ಚಿಸುವ ಮತ್ತು ಖರ್ಚನ್ನು ಹತೋಟಿಯಲ್ಲಿರಿಸುವ ಮಾರ್ಗಗಳು – ಸ್ವಲ್ಪ ವಿಸ್ತಾರವಾಗಿ ಚರ್ಚಿಸಿದ್ದೇನೆ.

ತಳಮಟ್ಟದ ಯೋಜನೆಗಳು

ಗ್ರಾಮ ಪಂಚಾಯತ್ ಬಂದ ನಂತರ ತಳಮಟ್ಟದಲ್ಲಿ ಯೋಜನೆಗಳು ನಡಿಯಬೇಕೆಂದು ಪ್ರಯತ್ನಗಳು ನಡೆದಿವೆ. ಸರಕಾರ ಆಗಾಗ ಈ ಬಗ್ಗೆ ಸುತ್ತೋಲೆಗಳನ್ನು ಕಳುಹಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸುತ್ತದೆ. ಉದಾಹರಣೆಗೆ ೧೯೯೯ರಲ್ಲಿ ನಡೆದ ಇಂತಹ ಒಂದು ಕಾರ್ಯಕ್ರಮವನ್ನು ವಿವರಿಸುತ್ತೇನೆ. ವಿಕೇಂದ್ರೀಕೃತ ಯೋಜನೆ ತಯಾರಿಗೆ ಪೂರಕವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಪ್ರತಿನಿಧಿಗಳಿಗೆ ತರಬೇತು ನಡೆಸಬೇಕೆಂದಾಯಿತು. ಬಳ್ಳಾರಿ ಜಿಲ್ಲಾ ಪರಿಷತ್‌ವತಿಯಿಂದ ಆ ಕಾರ್ಯಕ್ರಮ ನಡಿಯಿತು. ಅದಕ್ಕೆ ಸಂಪನ್ಮೂಲ ವ್ಯಕ್ತಿಗಲೆಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್‌ಎಕನಾಮಿಕ್ ಚೇಂಜ್ ಸಂಸ್ಥೆಯಿಂದ ಅಬ್ದುಲ್ ಅಜೀಜ್‌ಮತ್ತು ಅವರ ಸಂಗಡಿಗರು ಬಂದರು. ಯೋಜನೆ ಅಂದರೇನು? ಅದರಲ್ಲಿ ಬರುವ ವಿವಿಧ ಘಟಕಗಳು ಯಾವುವು? ಅವುಗಳ ನಡುವಿರುವ ಸಂಬಂಧವೇನು? ಇತ್ಯಾದಿಗಳ ಕುರಿತು ಪಾಂಡಿತ್ಯ ಪೂರ್ಣ ಭಾಷಣ ಮಾಡಿದರು. ಈ ಕ್ರಮದಲ್ಲಿ ತರಬೇತು ಪಡೆದ ಜಿಲ್ಲಾ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ಅವರು ಗ್ರಾಮ ಮಟ್ಟದ ಅಧಿಕಾರಿಗಳಿಗೆ ತರಬೇತು ನಡೆಸಬೇಕೆಂಬ ನಿರ್ಣಯವಾಯಿತು. ಯೋಜನೆ ತಯಾರಿಸುವ ಈ ಕ್ರಮ ಯಾವ ರೀತಿಯಲ್ಲಿ ಹಿಂದಿನ ಕೇಂದ್ರೀಕೃತ ಕ್ರಮಕ್ಕಿಂತ ಭಿನ್ನವೆಂದು ಅರ್ಥವಾಗುವುದಿಲ್ಲ. ಇಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳ ಬದಲು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಮಟ್ಟದ ಅಧಿಕಾರಿಗಳು ಪಾಲುಗೊಳ್ಳುತ್ತಾರೆ; ಜನರೆಲ್ಲಿದ್ದಾರೆ? ಜನರಲ್ಲಿವೆ? ಎಂದರೆ ಖಂಡಿತವಾಗಿಯೂ ಇಲ್ಲ ಎನ್ನಲು ಸಾಧ್ಯವಿಲ್ಲ. ಯಾಕೆಂದರೆ ಆಯಾಯ ಮಟ್ಟದಲ್ಲಿರುವ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಆದರೆ ಇವರಿಗೂ ಯೋಜನೆಗೂ ಏನು ಸಂಬಂಧ? ಅಧಿಕಾರಿಗಳು ತಯಾರಿಸಿದ ಯೋಜನೆಗೆ ತೇಪ ಹಚ್ಚುವ ಕೆಲಸ ಬಿಟ್ಟರೆ ಬೇರೇನು ಇಲ್ಲಿ ಸಾಧ್ಯವಿಲ್ಲ. ಈ ತೇಪ ಹಚ್ಚುವ ಕೆಲಸವಾದರೂ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡಿಯುತ್ತದೆ. ಗ್ರಾಮದ ಹಂತದಲ್ಲಿ ಅದೂ ಇಲ್ಲ. ತಳಮಟ್ಟದಲ್ಲಿ ಇಡೀ ಯೋಜನೆಯ ರುವಾರಿ ಕಾರ್ಯದರ್ಶಿ. ಸ್ವಲ್ಪ ಓದಿದ ಸದಸ್ಯರು ಅಥವಾ ಅಧ್ಯಕ್ಷರು ಇದ್ದರೆ ತಮ್ಮ ಸ್ಥಳೀಯ ಬೇಕು ಬೇಡಗಳ ಪ್ರಶ್ನೆ ಬರಬಹುದು. ಇಲ್ಲವಾದರೆ ಇದೊಂದು ಯಾಂತ್ರಿಕ ಕೆಲಸ. ಒಂದು ಫಾರ್ಮೇಟ್ ಇರುತ್ತದೆ. ಅದರಲ್ಲಿ ಕೇಳಿದ ಅಂಕಿ ಅಂಶಗಳನ್ನು ತುಂಬಿಸಿ ಕಳುಹಿಸುವುದು. ಇಲ್ಲಿಗೆ ವಿಕೇಂದ್ರೀಕೃತ ಯೋಜನೆ ಮುಗಿಯಿತು. ಇಲ್ಲೆಲ್ಲೂ ಜನರ ಭಾಗವಹಿಸುವಿಕೆ ಇಲ್ಲ.

ಯೋಜನೆ ಮೇಲಿನಿಂದ ಕೆಳಗೆ ಬರಬಾರದು. ಯೋಜನೆಯು ಕೆಳಗಿನಿಂದ ಮೇಲೆ ಹೋಗಬೇಕು ಎನ್ನುವ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ, ಎಂದು ಕರ್ನಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಮಂತ್ರಿಯವರು ಹೇಳಿದ್ದಾರೆ.[1] ಅವರು ಹೇಳುವುದರಲ್ಲೂ ಅರ್ಥವಿದೆ. ಅವರ ಪ್ರಕಾರ ಯೋಜನೆಗಳು ಕೆಳಗಿನಿಂದ ಮೇಲೆ ಹೋಗಬೇಕೆಂದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಕಾರ್ಯ ರೂಪಕ್ಕೆ ತರಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತಿಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ. ಅವರ ಅಭಿಪ್ರಾಯದಂತೆ ಕೆಳಗಿನಿಂದ ಮೇಲೆ ಯೋಜನೆ ಹೋಗಬೇಕಾದರೆ ಸಂಪನ್ಮೂಲದ ಕ್ರೋಢೀಕರಣವೂ ಕೆಳಗೆ ನಡೆಯಬೇಕು. ಆದರೆ ಈಗ ನಡೆಯುತ್ತಿರುವುದೇನು? ಸಂಪನ್ಮೂಲವೆಲ್ಲ ಕೇಂದ್ರದಲ್ಲಿ ಮಡುಗಟ್ಟಿಕೊಂಡಿವೆ. ಪಂಚಾಯತ್‌ಗಳಲ್ಲಿ ವರಮಾನ ಏನಿದೆ? ಪಂಚಾಯತ್ ವರಮಾನ ಯೋಜನೆಗಳ ಬಗ್ಗೆ ಮಾತಾಡುವುದು ನಿಷ್ಪ್ರಯೋಜಕ ಎನ್ನುವ ಗೃಹಿಕೆ ಮಾನ್ಯ ಮಂತ್ರಿಯವರದ್ದು.[2] ಅದು ಸರಿ ಕೂಡ. ಇನ್ನು ಕೆಲವರು ಮಾತೆತ್ತಿದರೆ ಕೇರಳದ ಉದಾಹರಣೆ ಕೊಡುತ್ತಾರೆ. ಅಲ್ಲಿ ಶೇಕಡಾ ೪೦ ರಷ್ಟು ಸಂಪನ್ಮೂಲ ಪಂಚಾಯತ್‌ಗಳಿಗೆ ವಿಲೇವಾರಿ ಆಗುತ್ತದೆ. ನಮ್ಮಲ್ಲೇನಿದೆ ಮಣ್ಣು; ಶೇಕಡಾ ೧೦ ರಷ್ಟು ಕೂಡ ಸಂಪನ್ಮೂಲ ಪಂಚಾಯತ್‌ಗೆ ಬರುವುದಿಲ್ಲ. ಇಷ್ಟು ಅಲ್ಪಪ್ರಮಾಣದ ಸಂಪನ್ಮೂಲ ಇಟ್ಟುಕೊಂಡು ಹೇಗೆ ಯೋಜೆನ ಮಾಡುವುದು?

ಇವೆಲ್ಲಾ ಒಪ್ಪಬೇಕಾದ ಅಂಶಗಳೇ. ಅದರ ಜತೆಗೆ ಇತರ ಕೆಲವು ಅಂಶಗಳನ್ನು ಪರಿಗಣಿಸಬೇಕಗಿದೆ. ಮುಖ್ಯವಾಗಿ ಕೇವಲ ಸಂಪನ್ಮೂಲ ಬಂದ ಕೂಡಲೇ ಕ್ರಾಂತಿಯಾಗುತ್ತದೆ ಎಂಬ ಭ್ರಮೆ ಯಾಕೆ? ನಮ್ಮಲ್ಲೇ ರಾಜ್ಯ ಸರಕಾರದಿಂದ ಧಾರಾಳ ಸಂಪನ್ಮೂಲ ಪಡೆದು ನಡೆಯುವ ಬೇಕಾದಷ್ಟು ಯೋಜನೆಗಳಿಲ್ಲವೇ.[3] ಅವೆಲ್ಲಾ ಅವುಗಳ ಮೂಲ ಉದ್ದೇಶಕ್ಕೆ ಅನುಗುಣವಾಗಿ ನಡೆದಿವೆ ಎನ್ನುವುದು ಕಷ್ಟ. ಬಹುತೇಕ ಸಂದರ್ಭಗಳಲ್ಲಿ ಅವುಗಳ ಲಾಭ ಸಮಾಜದ ಮೇಲ್ವರ್ಗಗಳಿಗೆ ಸೀಮಿತವಾಗಿವೆ. ಹಾಗಾಗಿ ಸಂಪನ್ಮೂಲ ಹೆಚ್ಚಾದ ಕೂಡಲೇ ಜನ ಸಾಮಾನ್ಯರ ಬದುಕು ಸುಧಾರಿಸುತ್ತದೆ ಎನ್ನುವುದು ಆರ್ಥಿಕ ಪ್ರಗತಿಗೆ ಒತ್ತು ಕೊಡುವ ಅಭಿವೃದ್ಧಿ ಮಾದರಿಯ ಒಂದು ಜಡ್ಡುಗಟ್ಟಿದ ಉದಾಹರಣೆ. ಕೇರಳದಲ್ಲಿ ತಳಮಟ್ಟದಿಂದ ಯೋಜನೆ ಸಾಧ್ಯವಾಗಿರುವುದು ಕೇವಲ ಸಂಪನ್ಮೂಲದ ಹೆಚ್ಚಳದಿಂದ ಅಲ್ಲ. ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿ ಬರುವ ಮೊದಲೇ ಕೇರಳದಲ್ಲಿ ನಡೆದಿರುವ ಮೂಲಭೂತ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಳ ಪಾತ್ರ ಅಲ್ಲಿನ ಪಂಚಾಯತ್‌ಕ್ರಾಂತಿಯ ಹಿಂದಿದೆ. ಅಲ್ಲಿ ನಡೆದ ಭೂ ಸುಧಾರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅವರ ಸಾಧನೆ, ಇತ್ಯಾದಿಗಳು ಇಂದಿನ ಅವರ ತಳ ಮಟ್ಟದ ರಾಜಕೀಯಕ್ಕೆ ಅಗತ್ಯವಾದ ಅಡಿಪಾಯ ಒದಗಿಸಿವೆ. ಇದನ್ನು ನಮ್ಮ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಸ್ಥಿತಿಗೆ ಹೋಲಿಸಲು ಸಾಧ್ಯವೇ ಇಲ್ಲ. ಇಲ್ಲಿನ ಹಳ್ಳಿಗಳಲ್ಲಿ ಈಗಲೂ ಊಳಿಗಮಾನ್ಯ ವ್ಯವಸ್ಥೆಯ ಎಲ್ಲಾ ಲಕ್ಷಣಗಳನ್ನು ಕಾಣಬಹುದು. ಎಪ್ಪತ್ತರ ದಶಕದ ಭೂ ಸುಧಾರಣೆಯ ಕಿಂಚಿತ್ ಪರಿಣಾಮ ಇಲ್ಲಿ ಆಗಿಲ್ಲ. ಇನ್ನು ಶಿಕ್ಷಣ ಮತ್ತು ಆರೋಗ್ಯ ಸ್ಥಿತಿಯಂತೂ ತುಂಬಾ ಕೆಟ್ಟದಾಗಿದೆ. ಕೃಷಿ ಮುಖ್ಯ ಮತ್ತು ಏಕ ಮಾತ್ರ ಕಸುಬು. ಇಂತಹ ಪರಿಸರದಲ್ಲಿ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಭೂಮಾಲಿಕರು, ವ್ಯಾಪಾರಿಗಳು, ಮತ್ತು ಇತರ ಬಲಾಢ್ಯರ ಜೇಬಿಗೆ ಸೇರಬಹುದೇ ಹೊರತು ಜನ ಸಾಮಾನ್ಯರಿಗೂ ತಲುಪುತ್ತದೆ ಎನ್ನುವ ಗ್ಯಾರಂಟಿ ಇಲ್ಲ.

ತಳಮಟ್ಟದ ಯೋಜನೆಗಳಿಗೆ ಸಂಪನ್ಮೂಲದ ಅವಶ್ಯಕತೆಯೇ ಇಲ್ಲ ಎಂದು ವಾದಿಸುವ ಉದ್ದೇಶ ಇದಲ್ಲ. ಖಂಡಿತವಾಗಿಯೂ ಸಂಪನ್ಮೂಲದ ಅವಶ್ಯಕತೆ ಇದೆ. ಸಂಪನ್ಮೂಲ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ಸಂಪನ್ಮೂಲ ಬಳಕೆಯಾಗುವ ಆರ್ಥಿಕ ಹಾಗೂ ಸಾಮಾಜಿಕ ಪರಿಸರ. ಆ ಪರಿಸರವನ್ನು ಸುಧಾರಿಸಿದೆ ನೇರವಾಗಿ ಸಂಪನ್ಮೂಲ ಸುರಿದರೆ ಅದು ಉಳ್ಳವರ ಜೇಬಿಗೆ ಸೇರುವುದರಲ್ಲಿ ಹೆಚ್ಚು ತ್ರಾಸವಿಲ್ಲ. ಆದುದರಿಂದ ಪರಿಸರ ಸುಧಾರಣೆಗೂ ತಕ್ಕಮಟ್ಟಿನ ಗಮನ ಹರಿಸಲೇಬೇಕಾಗಿದೆ. ತಳ ಮಟ್ಟದ ಜನರಿಗೆ ಯೋಜನೆ ಅಂದರೇನು? ಅದರಲ್ಲಿ ಅವರು ಯಾವ ರೀತಿ ಭಾಗವಹಿಸಬೇಕು? ಇದರ ಒಟ್ಟು ಪರಿಣಾಮವೇನು? ಇತ್ಯಾದಿಗಳ ಪರಿಚಯದ ಅಗತ್ಯವಿದೆ. ಇದನ್ನು ಹೇಳಿಕೊಡದೆ ನೇರವಾಗಿ ನೀವು ಯೋಜನೆಯಲ್ಲಿ ಭಾಗವಹಿಸಿ ಎಂದರೆ ಜನರಿಗೂ ಕಷ್ಟವಾದೀತು. ಆದುದರಿಂದ ಯೋಜನೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಒಂದು ಸಾಮಾಜಿಕ ಚಳವಳಿಯರ ರೂಪದಲ್ಲಿ ನಡೆಯಬೇಕಾಗಿದೆ. ಅಂತಹ ಚಳವಳಿಗೆ ಅವಶ್ಯವಾದ ಕೆಲವು ಅಂಶಗಳನ್ನು ಇಲ್ಲಿ ಸೂಚಿಸುವುದೇ ನನ್ನ ಉದ್ದೇಶ. ಯೋಜನೆಯೆಂದ ಕೂಡಲೇ ಅದು ಅಧಿಕಾರಿಗಳು ಅಥವಾ ತುಂಬಾ ಓದಿದವರು ಮಾಡುವ ಕೆಲಸ ಎನ್ನುವ ಭಾವನೆ ಇದೆ. ಯೋಜನೆ ಅಷ್ಟೊಂದು ಸಂಕೀರ್ಣ ಎಂದು ಯಾಕೆ ತಿಳಿಯಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯ ಯೋಜನೆ ಮಾಡುತ್ತಲೇ ಇರುತ್ತಾನೆ. ಅದು ಆತನ ಕೃಷಿಗೆ ಸಂಬಂಧಿಸಿ ಇರಬಹುದು ಅಥವಾ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿ ಇರಬಹುದು. ಇಲ್ಲೆಲ್ಲಾ ಆತನಿಗೆ/ಅವಳಿಗೆ ಗೊತ್ತಿಲ್ಲದಂತೆ ಕೆಲವು ತತ್ವಗಳು ಕೆಲಸ ಮಾಡುತ್ತಿರುತ್ತವೆ. ಒಂದು, ಯಾವುದೋ ಒಂದು ಸ್ಥಿತಿಯಲ್ಲಿರುವ ಕೃಷಿಯನ್ನು ಮತ್ತೊಂದು ಸ್ಥಿತಿಗೆ ಕೊಂಡೊಯ್ಯಬೇಕು. ಎರಡು, ಅದಕ್ಕೆ ಹಲವಾರು ದಾರಿಗಳು ಇರಬಹುದು; ಪ್ರತಿದಾರಿ ಕೂಡ ಬೇರೆ ಬೇರೆ ಪ್ರಮಾಣದ ಸಂಪನ್ಮೂಲ, ಕಾಲ, ಇತ್ಯಾದಿಗಳ ವಿನಿಯೋಜನೆಯನ್ನು ಬಯಸಬಹುದು. ಮೂರು, ಆತನ ಇತಿಮಿತಿಗಳನ್ನು ಗಮನದಲ್ಲಿರಿಸಿಕೊಂಡು ಹಲವಾರು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು. ನಾಲ್ಕು, ಆಯ್ಕೆ ಮಾಡಿದ ದಾರಿಯಲ್ಲಿ ಮುಂದುವರಿದು ಗುರಿ ಸಾಧನೆಗೆ ಪ್ರಯತ್ನಿಸುವುದು. ಐದು, ಗುರಿ ಸಾಧನೆಯಾಗದಿದ್ದರೆ ಯಾಕೆ ಆಗಲಿಲ್ಲ ಎಂದು ವಿಮರ್ಶೆ ಮಾಡಿಕೊಂಡು ಹಿಂದೆ ಅನುಸರಿಸಿದ ಮಾರ್ಗ ಸರಿಯಿಲ್ಲದಿದ್ದರೆ ತಿದ್ದುಪಡಿ ಮಾಡಿಕೊಂಡು ಮುಂದುವರಿಯುವುದು. ಇವೆಲ್ಲಾ ಯೋಜನೆಯ ಭಾಗಗಳೇ.

ಮೇಲಿನ ತತ್ವವನ್ನೇ ತಳ ಮಟ್ಟದ ಯೋಜನೆಗೆ ಬಳಸುವ. ಹಳ್ಳಿಯ ಆರ್ಥಿಕ ಸ್ಥಿತಿ ಯಾವುದೋ ಹಂತದಲ್ಲಿದೆ. ಆ ಸ್ಥಿತಿಯಿಂದ ಬೇರೊಂದು ಸ್ಥಿತಿಗೆ ಬದಲಾಯಿಸಿಕೊಳ್ಳಬೇಕು. ಇದು ಯೋಜನೆಯ ಸ್ಥೂಲ ಉದ್ದೇಶ. ಇದಕ್ಕೆ ಹಲವಾರು ಮಾರ್ಗಗಳಿರಬಹುದು. ಹಳ್ಳಿಯ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳಲ್ಲಿ ಕೆಲವು ಮಾರ್ಗಗಳನ್ನು ಆಯ್ಕೆ ಮಾಡುವುದು ಯೋಜನೆಯ ಭಾಗವೇ. ಗುರಿ ಮತ್ತು ಮಾರ್ಗ ನಿರ್ಧಾರವಾದ ನಂತರ ಅವುಗಳ ಸಾಧನೆಗೆ ಅಗತ್ಯವಾದ ಸಂಪನ್ಮೂಲಗಳ ಹೊಂದಾಣಿಕೆಯ ಪ್ರಶ್ನೆ. ಇವೆಲ್ಲವನ್ನು ಗ್ರಾಮ ಮಟ್ಟದಿಂದಲೇ ಆರಂಭಿಸಬಹುದು. ಈಗ ಇರುವ ಪ್ರತಿನಿಧೀಕರಣದ ವ್ಯಾಪ್ತಿಯಲ್ಲೆ ಈ ಪ್ರಯೋಗವನ್ನು ಮಾಡಬಹುದು. ಪ್ರತಿ ವಾರ್ಡ್‌‌ಗೂ ಮೂರು ಜನ ಸದಸ್ಯರಿರುತ್ತಾರೆ. ಆ ಮೂರು ಜನ ತಮ್ಮ ವಾರ್ಡ್‌ಲ್ಲಿರುವ ಮನೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು. ಗುಂಪುಗಳಾಗಿ ವಿಂಗಡಿಸಿಕೊಂಡರೆ ಪಾಲುಗೊಳ್ಳುವ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅನುಕೂಲವಾಗುತ್ತದೆ. ಪ್ರತಿ ಗುಂಪು ತಮಗೆ ಅನುಕೂಲವಾದ ಸ್ಥಳ ಮತ್ತು ಸಮಯದಲ್ಲಿ ಸಭೆ ಸೇರಿ ಚರ್ಚಿಸಬಹುದು. ಚರ್ಚಿಸಬೇಕಾದ ಮುಖ್ಯ ವಿಚಾರಗಳು ನಾಲ್ಕು. ಒಂದು, ವಾರ್ಡ್‌ನ ಈಗಿನ ಸ್ಥಿತಿಯೇನು? ಎರಡು, ಆಗಬೇಕಾದ ಕೆಲಸಗಳೇನು? ಮೂರು, ಗುರಿ ಸಾಧನೆ ಬೇಕಾದ ಸಂಪನ್ಮೂಲವೆಷ್ಟು? ನಾಲ್ಕು, ಈ ಸಂಪನ್ಮೂಲವನ್ನು ಹೇಗೆ ಭರಿಸಬಹುದು? – ತಮ್ಮ ವಾರ್ಡಿನ ಕೊಡುಗೆ, ಹೊರಗಿನಿಂದ ಬರಬಹುದಾದ ಸಹಾಯ ಧನ ಇತ್ಯಾದಿಗಳ ನಿರ್ಧಾರ. ಇದರಿಂದ ಕ್ರಮ ಬದ್ಧವಾದ ಒಂದು ಯೋಜನೆಯಾಗುತ್ತದೆ ಎಂದು ನಾನು ವಾದಿಸುತ್ತಿಲ್ಲ. ಈಗಿನ ಮೇಲಿನಿಂದ ಇಳಿಯುವ ಯೋಜನೆಗೆ ಪರ್ಯಾಯವಾಗಿ ತಳಮಟ್ಟದ ಯೋಜನೆ ಒಮ್ಮಿಂದೊಮ್ಮೆಗೆ ಸಾಧ್ಯವಿಲ್ಲ. ಇದಕ್ಕೂ ತಕ್ಕ ಮಟ್ಟಿನ ತಯಾರಿ ಅಗತ್ಯ. ಮೇಲೆ ವಿವರಿಸಿದ ಯೋಜನೆಯ ಕ್ರಮ ಜನರನ್ನು ಯೋಜನೆ ಪ್ರಕ್ರಿಯೆಯಲ್ಲಿ ಭಾಗಿಗಳಾಗಿರುವ ಪ್ರಾಥಮಿಕ ಹಂತವೆಂದು ಭಾವಿಸಬಹುದು. ಈ ಅಂಶವನ್ನು ಗ್ರಾಮ ಸಭೆಯ ಕುರಿತು ವಿವರಿಸುವಾಗ ಮುಂದುವರಿಸಲಿದ್ದೇನೆ.

ಎಲ್ಲವೂ ತಳ ಮಟ್ಟದಲ್ಲೇ ನಿರ್ಧಾರವಾಗಬೇಕು ಅಥವಾ ಆದೀತು ಎನ್ನುವ ಭ್ರಮೆ ಇದಲ್ಲ. ಆದರೆ ಆಯಾಯ ಹಂತದಲ್ಲಿ ಆಗಬೇಕಾದ ಯೋಜನೆಗಳು ಆಯಾಯ ಹಂತದಲ್ಲಿ ಆದರೆ ಅವು ವಾಸ್ತವಕ್ಕೆ ಹತ್ತಿರವಾಗಬಹುದು ಎನುವ ಅಭಿಪ್ರಾಯವಿದು. ಗ್ರಾಮೀಣ ಜನರಿಗೆ ಒಮ್ಮಿಂದೊಮ್ಮೆಲೆ ತಮ್ಮ ಹಳ್ಳಿಯ ಪರಿಪೂರ್ಣ ಯೋಜನೆ ಮಾಡುವುದು ಕಷ್ಟ. ಪ್ರಾರಂಭದ ಹಂತದಲ್ಲಿ ಯೋಜನೆ ತಯಾರಿಯ ಪ್ರಾಥಮಿಕ ಪಾಠಗಳು ಬೇಕೇ ಬೇಕು. ಅದನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೀಡಬಹುದು. ಆದುದರಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪ್ರತಿನಿಧಿಗಳಿಗೆ ಈಗ ಕೊಡುತ್ತಿರುವ ತರಬೇತು ನಿರರ್ಥಕವಲ್ಲ. ಆದರೆ ಅವುಗಳ ಉದ್ದೇಶ ಯೋಜನೆ ತಯಾರಿಯ ಪೂರ್ವ ಸಿದ್ಧತೆಗೆ ಸೀಮಿತಗೊಂಡರೆ ಉತ್ತಮ. ಯೋಜನೆ ತಯಾರಿ ಕೆಲಸವನ್ನು ಕ್ರಮೇಣ ಗ್ರಾಮೀಣ ಜನರೇ ಪೂರೈಸುವ ಉದ್ದೇಶವಿರಬೇಕು.[4] ಅಧಿಕಾರಿಗಳು ಡೆಲ್ಲಿಯಲ್ಲಿರಲಿ ಜಿಲ್ಲಾ ಕೇಂದ್ರಗಳಲ್ಲಿರಲಿ ಅಧಿಕಾರಿಗಳೇ. ಅವರಿಗೆ ಪ್ರತಿ ಹಳ್ಳಿಯ ಸಮಸ್ಯೆ ಏನೆಂದು ತಿಳಿಯುವುದು ಕಷ್ಟವೇ. ಸ್ಥಳೀಯ ಜನರೇ ಸ್ಥಳೀಯ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲರು. ಸಮಸ್ಯೆಗೆ ಪರಿಹಾರ ಕೂಡ ಕಂಡುಕೊಳ್ಳಬಲ್ಲರು. ಇದು ಸಾಧ್ಯವಾಗಬೇಕಾದರೆ ಈಗ ಇರುವ ಗ್ರಾಮ ಸಭೆಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು.

ಗ್ರಾಮ ಸಭೆ

ಈಗಿನ ಗ್ರಾಮ ಸಭೆಗೆ ಊರಿನ ವಯಸ್ಕರೆಲ್ಲಾ ಸದಸ್ಯರು. ವರ್ಷಕ್ಕೆ ಕನಿಷ್ಠ ಎಂದರೆ ಎರಡು ಗ್ರಾಮ ಸಭೆಗಳು ನಡಿಯಬೇಕು. ಅದು ಎಲ್ಲಿ, ಹೇಗೆ ನಡಿಯಬೇಕು, ಯಾರು ನಡಿಸಬೇಕು, ಅಲ್ಲಿ ಚರ್ಚೆಗೆ ಬರಬೇಕಾದ ವಿಚಾರಗಳೇನು? ಇತ್ಯಾದಿಗಳನ್ನು ಪಂಚಾಯತ್‌ಅಧಿನಿಯಮ ತಿಳಿಸುತ್ತದೆ. ಹಳ್ಳಿಯ ಅಭಿವೃದ್ಧಿಗಾಗಿ ನಡಿಯುವ ಬಹುತೇಕ ಕಾರ್ಯಕ್ರಮಗಳು, ಯೋಜನೆಗಳು, ಆದಾಯ ಇವೆಲ್ಲಾ ಇಲ್ಲಿ ಚರ್ಚಿತವಾಗಿ ನಿರ್ಧಾರವಾಗಬೇಕು. ಇವೆಲ್ಲಾ ಪೇಪರಿನಲ್ಲಿ ಗ್ರಾಮ ಸಭೆ ಕುರಿತು ಇರುವ ವಿಚಾರಗಳು. ವಾಸ್ತವದಲ್ಲಿ ಗ್ರಾಮ ಸಭೆಯ ಸ್ಥಿತಿಗತಿ ಬೇರೆಯೇ ಇದೆ. ಪಂಚಾಯತ್ ಕುರಿತು ನಡೆದ ಅಧ್ಯಯನಗಳ ಪ್ರಕಾರ ಗ್ರಾಮ ಸಭೆಗಳೆ ನಡಿಯುವುದಿಲ್ಲ. ಒಂದು ವೇಳೆ ನಡೆದರೂ ಅದು ನಿಜವಾದ ಅರ್ಥದಲ್ಲಿ ಗ್ರಾಮ ಸಭೆಯಲ್ಲ. ಅಂದರೆ ಅಲ್ಲಿ ಊರವರೆಲ್ಲಾ ಸೇರಿರುವುದಿಲ್ಲ, ಸೇರಿದ್ದಾರೆ ಎಂದು ಸಾಧಿಸಲು ಬೋಗಸ್ ಸಹಿ ಇರುತ್ತದೆ, ಊರವರಿಗೆ ಮಾಹಿತಿ ಇರುವುದಿಲ್ಲ, ಮುಖ್ಯವಾದ ವಿಚಾರಗಳು ಚರ್ಚಿತವಾಗಿರುವುದಿಲ್ಲ. ಹೀಗೆ ಗ್ರಾಮ ಸಭೆ ಬಗ್ಗೆ ಹತ್ತು ಹಲವು ಅಪವಾದಗಳಿವೆ. ಇವೆಲ್ಲಾ ಸರಿ. ಇದಕ್ಕಿಂತಲೂ ಮುಖ್ಯವಾದ ಒಂದು ಪ್ರಶ್ನೆ ಕೇಳಬೇಕಾಗಿದೆ. ಅದೇನೆಂದರೆ ಈಗ ಕಾನೂನಿನಲ್ಲಿರುವ ಗ್ರಾಮ ಸಭೆಯನ್ನು ಯಥಾರೂಪದಲ್ಲಿ ಕಾರ್ಯಗತಗೊಳಿಸಲು ಸಾಧ್ಯವೇ?

ಈ ಪ್ರಶ್ನೆಗೆ ಹೌದು ಅಥವಾ ಅಲ್ಲ ಎಂದು ಉತ್ತರಿಸುವ ಮುನ್ನ ನಿಯಮಾನುಸಾರ ನಡಿಯುವ ಒಂದು ಗ್ರಾಮ ಸಭೆಯನ್ನು ಕಲ್ಪಿಸುವ. ಒಂದು ಗ್ರಾಮ ಪಂಚಾಯತ್‌ವ್ಯಾಪ್ತಿಗೆ ಎರಡು ಅಥವಾ ಮೂರು ಹಳ್ಳಿಗಳು ಬರಬಹುದು. ಎಲ್ಲಾ ಹಳ್ಳಿಗಳನ್ನು ಸೇರಿಸಿ ಸಭೆ ಮಾಡಬೇಕೆಂದಿಲ್ಲ; ಪ್ರತಿ ಹಳ್ಳಿಗೂ ಪ್ರತ್ಯೇಕ ಸಭೆ ನಡಿಸಬಹುದು. ಒಂದು ಹಳ್ಳಿಯಲ್ಲಿ ಕನಿಷ್ಠ ೩೦೦ ಮನೆಗಳಿವೆ ಎಂದು ಊಹಿಸುವ. ಒಂದು ಮನೆಯಿಂದ ಸಭೆಗೆ ಒಬ್ಬ ಬಂದರೂ ಒಟ್ಟು ಹಾಜರಿ ೩೦೦ ಆಗುತ್ತದೆ. ಈ ೩೦೦ ಜನರನ್ನು ಸೇರಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರಬೇಕು. ಅಲ್ಲಿ ಸೇರಿರುವ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಮಂಡಿಸಲು ಕೇವಲ ಮೂರು ನಿಮಿಷ ತೆಗೆದುಕೊಂಡರೂ ವಿಚಾರ ಮಂಡನೆಗೆ ಕನಿಷ್ಠ ೧೫ ಗಂಟೆಗಳು ಬೇಕು. ವಿಚಾರ ಮಂಡನೆಯಾದ ನಂತರ ವಾಗ್ವಾದಗಳು ನಡಿಯಬಹುದು. ಇವುಗಳು ಒಂದು ಹಂತಕ್ಕೆ ಒಂದು ತೀರ್ಮಾನಕ್ಕೆ ಬರಲು ಇನ್ನೂ ಎರಡರಿಂದ ಮೂರು ಗಂಟೆಗಳ ಕಾಲಾವಕಾಶ ಬೇಕು. ಅಂದರೆ ಒಂದು ಅಂಶದ ತೀರ್ಮಾನಕ್ಕೆ ಕನಿಷ್ಠ ೧೭ ರಿಂದ ೧೮ ಗಂಟೆಗಳು ಬೇಕು. ಈ ಕ್ರಮದಲ್ಲಿ ಗ್ರಾಮ ಸಭೆ ನಡೆಸಲು ಸಾಧ್ಯವೇ? ಆದುದರಿಂದಲೇ ಈಗ ಇರುವ ಕ್ರಮದಲ್ಲಿ ಗ್ರಾಮ ಸಭೆ ಫಲಕಾರಿಯಾಗುವುದು ಬಿಡಿ; ಅದು ನಡಿಯಲು ಸಾಧ್ಯವೇ ಇಲ್ಲ.

ಗ್ರಾಮ ಸಭೆ ಸರಿಯಾಗಿ ನಡಿಯಬೇಕಾದರೆ ಪುಸ್ತಕ ವ್ಯವಸ್ಥೆಯನ್ನು ಈ ಕೆಳಗಿನಂತೆ ಬದಲಾಯಿಸಿಕೊಳ್ಳಬಹುದು.

೧. ಇಡಿ ಹಳ್ಳಿಯನ್ನು ಸೇರಿಸಿ ಚರ್ಚಿಸುವ ಬದಲು ಪ್ರತಿ ವಾರ್ಡ್‌‌ನಲ್ಲಿ ಇಪ್ಪತ್ತರಿಂದ ಮೂವತ್ತು ಮನೆಗಳನ್ನು ಸೇರಿಸಿ ಒಂದು ಮಿನಿ ಗ್ರಾಮಸಭೆ ನಡೆಸಬಹುದು. ಒಂದು ವಾರ್ಡ್‌‌ನಲ್ಲಿ ೧೦೦ ಮನೆಗಳಿದ್ದರೆ ಮೂರರಿಂದ ನಾಲ್ಕು ಗ್ರಾಮ ಸಭೆಗಳು ನಡಿಯಬಹುದು. ಇಡಿ ಹಳ್ಳಿಯಲ್ಲಿ ಮೂರು ವಾರ್ಡ್‌‌ಗಳಿದ್ದರೆ ಒಂಬತ್ತರಿಂದ ಹನ್ನೆರಡು ಮಿನಿ ಸಭೆಗಳು ನಡಿಯಬಹುದು.

೨. ಈ ಮಿನಿ ಗ್ರಾಮ ಸಭೆಗಳನ್ನು ನಡಿಸುವ ಜವಾಬ್ದಾರಿ ಆಯಾಯ ವಾರ್ಡ್‌‌ನಿಂದ ಬರುವ ಪ್ರತಿನಿಧಿಗಳಿಗೆ ಸೇರಿದ್ದು. ವಾರ್ಡ್‌ನ ಪಂಚಾಯತ್ ಸದಸ್ಯರು ಪ್ರತಿ ಮನೆಗಳ ಗುಂಪಿಗೆ ಒಬ್ಬರನ್ನು ಅಥವಾ ಇಬ್ಬರನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡಬಹುದು.

೩. ವಾರ್ಡ್‌‌ನ ಸದಸ್ಯ ಮತ್ತು ಮಿನಿ ಗ್ರಾಮ ಸಭೆ ಕೂಡಿಸಲು ಆಯ್ಕೆಯಾದ ಪ್ರತಿನಿಧಿಗಳು ಅವರವರ ವ್ಯಾಪ್ತಿಗೆ ಬರುವ ಮನೆಗಳನ್ನು ಸೇರಿಸಿ ಸಭೆ ನಡೆಸಬಹುದು. ಈ ಪುಟ್ಟ ಗುಂಪಿನಲ್ಲಿ ಅವರ ಬೇಕು ಬೇಡಗಳು, ಸಮಸ್ಯೆಗಳು, ಪರಿಹಾರಗಳು, ಸಂಪನ್ಮೂಲ ಹೊಂದಾಣಿಕೆ ಇತ್ಯಾದಿಗಳು ಚರ್ಚೆಯಾಗಬಹುದು, ತೀರ್ಮಾನವಾಗಬಹುದು.

೪. ಒಂದು ವಾರ್ಡ್‌‌ನಲ್ಲಿ ಮೂರರಿಂದ ನಾಲ್ಕು ಸಭೆಗಳು ನಡಿಯಬೇಕಾಗುತ್ತದೆ. ನಂತರ ಆಯಾಯ ಗುಂಪಿನ ಪ್ರತಿನಿಧಿಗಳು ಮತ್ತು ಆ ವಾರ್ಡ್‌‌ನ ಸದಸ್ಯರು ಸೇರಿ ಆ ವಾರ್ಡ್‌ನ ಎಲ್ಲಾ ಮಿನಿ ಗ್ರಾಮ ಸಭೆಗಳಿಂದ ಬಂದ ತೀರ್ಮಾನಗಳನ್ನು ಕ್ರೋಢಿಕರಿಸಬಹುದು. ಇದೇ ರೀತಿ ಎಲ್ಲಾ ವಾರ್ಡ್‌ನ ಸದಸ್ಯರು ಸೇರಿ ಆ ವಾರ್ಡ್‌ನ ಎಲ್ಲಾ ಮಿನಿ ಗ್ರಾಮ ಸಭೆಗಳಿಂದ ಬಂದ ತೀರ್ಮಾನಗಳನ್ನು ಕ್ರೋಢಿಕರಿಸಬಹುದು. ಇದೇ ರೀತಿ ಎಲ್ಲಾ ವಾರ್ಡ್‌ಗಳಿಂದ ಕ್ರೋಢೀಕೃತವಾಗಿ ಬಂದ ತೀರ್ಮಾನಗಳನ್ನು ಎಲ್ಲಾ ಸದಸ್ಯರು ಮತ್ತು ಮಿನಿ ಗ್ರಾಮ ಸಭೆಯ ಪ್ರತಿನಿಧಿಗಳು ಪರಿಶೀಲಿಸಿ ಕ್ರೋಢಿಕರಿಸಬೇಕು. ಇದು ಸಮಸ್ತ ಹಳ್ಳಿಯ ನಿರ್ಧಾರವಾಗುತ್ತದೆ.

ಈಗ ಗ್ರಾಮ ಸಭೆ ಆಗುವುದೇ ಅಪರೂಪ. ಒಂದು ವೇಳೆ ಸಭೆ ನಡೆದರೂ ಅಲ್ಲಿ ಫಲಾನುಭವಿಗಳ ಆಯ್ಕೆ ಬಿಟ್ಟರೆ ಬೇರೆ ಯಾವ ವಿಷಯವೂ ಚರ್ಚೆಗೆ ಬರುವುದಿಲ್ಲ. ಇಂತಹ ಸ್ಥಿತಿಯಿಂದ ತಳ ಮಟ್ಟದ ಜನರ ಪರಿಪೂರ್ಣ ಪಾಲುಗೊಳ್ಳುವಿಕೆಯನ್ನು ಒಮ್ಮಿಂದೊಮ್ಮೆಲೆ ಊಹಿಸುವುದು ಕಷ್ಟ. ಒಂದು ಉತ್ತಮ ವಿಧಾನ ಕಾರ್ಯರೂಪಕ್ಕೆ ಬರುವ ಮುನ್ನ ಹಲವಾರು ಪ್ರಯೋಗಗಳು ನಡಿಯಬಹುದು. ಅಂತಹುಗಳಲ್ಲಿ ಇದೂ ಒಂದು; ಇದುವೇ ಅಂತಿಮವಲ್ಲ. ಇದರ ಮುಖ್ಯ ಉದ್ದೇಶ ಈಗಿನ ಗೊಂದಲಮಯ ಗ್ರಾಮ ಸಭೆಯಿಂದ ಬಿಡುಗಡೆ. ಅದಕ್ಕಾಗಿ ಮೇಲಿನ ವಿಧಾನವನ್ನು ಪ್ರಯೋಗಾತ್ಮಕವಾಗಿ ಬಳಸಬಹುದು. ಇಲ್ಲಿ ಸಭೆಯನ್ನು ಕೇವಲ ಪಲಾನುಭವಿಗಳ ಆಯ್ಕೆಗೆ ಸೀಮಿತಗೊಳಿಸುವ ಉದ್ದೇಶವಿಲ್ಲ. ಜನರು ತಮ್ಮ ಬೇಕು ಬೇಡಗಳನ್ನು ಪಟ್ಟಿ ಮಾಡುವ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಆಲೋಚಿಸಬೇಕಾಗಿದೆ ಇಲ್ಲಿ. ಸಮಸ್ಯೆಗಳನ್ನು ಪಟ್ಟಿ ಮಾಡುವಲ್ಲಿ ಜನರು ಯಾವತ್ತು ಹಿಂದೆ ಬಿದ್ದಿಲ್ಲ. ಅದರೆ ಅದರ ಪರಿಹಾರ ಕುರಿತು ಅವರು ಆಲೋಚಿಸಿಲ್ಲ. ಯಾಕೆಂದರೆ ಅವರಿಗೆ ಆಲೋಚಿಸಲು ಅಧಿಕಾರದಲ್ಲಿರುವವರು ಅವಕಾಶ ಕೊಟ್ಟಿಲ್ಲ. ಸಮಸ್ಯೆ, ಅದರ ಪರಿಹಾರ ಎರಡು ಕೂಡ ತಳಮಟ್ಟದವರಿಂದ ತೀರ್ಮಾನವಾದಾಗ ವಿಕೇಂದ್ರೀಕರಣ ಅರ್ಥಪೂರ್ಣವಾಗುತ್ತದೆ.

ಆದಾಯ ಮತ್ತು ಖರ್ಚು

ಆದಾಯ ಮತ್ತು ಖರ್ಚಿನ ವಿವರಗಳಿಗಿಂತ ಮುನ್ನ ಇವಕ್ಕೆ ಸಂಬಂಧಿಸಿದ ಕೆಲವೊಂದು ತಾತ್ವಿಕ ವಿಚಾರಗಳನ್ನು ಗಮನಿಸಬೇಕಾಗಿದೆ. ಒಂದು, ಸಮಷ್ಠಿ ನಿಯಮ ಮತ್ತು ಎರಡು, ಸಮುದಾಯದ ಅಥವಾ ಸಾರ್ವಜನಿಕ ಸೊತ್ತಿನ ಬಳಕೆ. ಇವೆರಡು ಪರಸ್ಪರ ಸಂಬಂಧಿಸಿವೆ. ಸಮಷ್ಠಿ ನಿಯಮ ಕುರಿತು ಈಗಾಗಲೇ ಇರುವ ಚರ್ಚೆಯ ಪ್ರಕಾರ ನಿಯಮವನ್ನು ಮಾಡುವವರು ಸಮಾಜದ ಮೇಲ್ವರ್ಗದವರು. ಅಂತಹ ನಿಯಮಗಳು ವರ್ಗಾಸಕ್ತಿಯನ್ನು ಹೊರತು ಪಡಿಸಿ ಇರಲು ಸಾಧ್ಯವಿಲ್ಲ. ಮೇಲ್ವರ್ಗದವರು ರೂಪಿಸಿದ ನಿಯಮಗಳು ಅವರ ಆಸಕ್ತಿಗಳಿಗೆ ಪೂರಕವಾಗಿರುತ್ತದೆ. ಸಮಾಜದ ಎಲ್ಲಾ ವರ್ಗಗಳ, ಅದರಲ್ಲೂ ಸಮಾಜದ ಕೆಳ ವರ್ಗಗಳ, ಆಸಕ್ತಿಗೆ ಪೂರಕವಾಗಿ ಇರಲು ಸಾಧ್ಯವೇ ಇಲ್ಲ. ಇಂತಹ ನಿಯಮಗಳನ್ನು ಸಮಷ್ಠಿ ನಿಯಮ ಎನ್ನುವುದೇ ತಪ್ಪು. ಸಮಷ್ಠಿ ನಿಯಮವೇ ಅಲ್ಲದಿರುವುದನ್ನು ಅನುಸರಿಸುವ ಅಗತ್ಯವಾದರೂ ಏನಿದೆ? ಒಂದು ವೇಳೆ ಅನುಸರಿಸದಿದ್ದರೆ ಅದು ನಿಯಮವನ್ನು ಉಲ್ಲಂಘಿಸಿದಂತಾಗುವುದಿಲ್ಲ; ಬದಲಿ ನಿಯಮಗಳಿಗೆ ಪ್ರಯತ್ನಿಸಿದಂತಾಗುತ್ತದೆ.

ಆದರೆ ಬದಲಿ ನಿಯಮಗಳಿಗೆ ಪ್ರಯತ್ನಿಸುವುದು ಬೇರೆ ನಿಯಮಗಳ ಉಲ್ಲಂಘನೆ ಬೇರೆ. ಬದಲಿ ನಿಯಮಗಳ ರೂಪಿಸುವುದಕ್ಕಾಗಿ ನಿಯಮಗಳ ಉಲ್ಲಂಘನೆ ಸ್ವಾಗತಾರ್ಹ. ಆದರೆ ಸುಲಭ ದಾರಿಗಾಗಿ ನಿಯಮಗಳ ಉಲ್ಲಂಘನೆ ಬದಲಿ ನಿಯಮಗಳ ರೂಪುಗೊಳ್ಳುವಿಕೆಯಲ್ಲಿ ಸಮಾಪ್ತಿಯಾಗುವುದಿಲ್ಲ. ಇದೊಂದು ತುಂಬಾ ತಾತ್ಕಾಲಿಕ ಪರಿಹಾರ ಅಷ್ಟೇ. ಸಮಾಜದ ಮೂಲಭೂತ ಪರಿವರ್ತನೆ ಬಯಸುವ ಯಾವ ಐಡಿಯಾಲಾಜಿ ಕೂಡ ಇಂತಹ ತೇಪೆ ಹಚ್ಚುವ ಕಾರ್ಯಕ್ರಮಗಳಿಗೆ ಮಹತ್ವ ಕೊಡುವುದಿಲ್ಲ. ಆದುದರಿಂದ ಸಮಷ್ಠಿ ನಿಯಮವನ್ನು ಯಾರು ಮುರಿದರೂ ತಪ್ಪೇ ಆಗಬೇಕು. ಇದು ಸಮಾನತೆಯ ತಾಂತ್ರಿಕ ಅನುಸರಣೆ ಅಲ್ಲ. ತಾಂತ್ರಿಕ ಅನುಸರಣೆ ವಿವಿಧ ಸಂಸ್ಕೃತಿಯಲ್ಲಿ ಬದುಕುವವರ ಬದುಕಿನ ಸಾಧ್ಯತೆಗಳನ್ನು ಇಲ್ಲವಾಗಿಸುತ್ತದೆ. ಇಲ್ಲಿ ಮಾತಾಡುತ್ತಿರುವುದು ಹೆಚ್ಚು ಕಡಿಮೆ ಒಂದೇ ಉತ್ಪಾದನಾ ಸಂಬಂಧದ ಪರಿಸರದಲ್ಲಿ ವ್ಯವಹರಿಸುವವರ ಕುರಿತು, ಇವರ ಸಾಂಸ್ಕೃತಿಕ ಆಚರಣೆಗಳು ಭಿನ್ನವಾಗಿರಬಹುದು; ಸಾಮಾಜಿಕ ವ್ಯವಸ್ಥೆಯನ್ನು ಎಲ್ಲಾ ಮನೆಗಳಿಗೆ ವಿಸ್ತರಿಸಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ನೀರು ಬಿಡುವುದರಿಂದ ಪ್ರತಿ ಮನೆಗೂ ಮೀಟರು ಅಳವಡಿಸುವ ಅಗತ್ಯವಿಲ್ಲ. ಇದರಿಂದ ಆದಾಯ ಹೆಚ್ಚುತ್ತದೆ. ನೀರಿನ ದುರ್ಬಳಕೆ ತಪ್ಪುತ್ತದೆ. ಜತೆಗೆ ನೀರಿಗಾಗಿ ನಡೆಯುವ ಬೀದಿ ಜಗಳವೂ ತಪ್ಪುತ್ತದೆ.

೨. ಹೊಸ ವಾಣಿಜ್ಯ ಮಳಿಗೆಗಳು – ರಾಷ್ಟ್ರೀಯ ಹೆದ್ದಾರಿ ೬೩ ಈ ಹಳ್ಳಿಯನ್ನು ಇಬ್ಬಾಗಿಸುತ್ತದೆ. ರಸ್ತೆ ಬದಿಯಲ್ಲಿ ಹಲವಾರು ಹೋಟೇಲುಗಳು, ಅಂಗಡಿಗಳು, ಒಂದು ಮೆಡಿಕಲ್ ಸ್ಟೋರ್, ಕಿರಾಣಿ ಅಂಗಡಿಗಳು ಮತ್ತು ಎರಡು ಕ್ಲಿನಿಕ್‌ಗಳಿವೆ. ಇವುಗಳಿಗೆಲ್ಲಾ ಸರಿಯಾದ ಕಟ್ಟಡಗಳಿಲ್ಲದೆ ಹಳೆ ಕಟ್ಟಡಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪಂಚಾಯತ್ ವತಿಯಿಂದ ಭೂಮಿ ಖರೀದಿಸಿ ಒಂದು ವಾಣಿಜ್ಯ ಮಳಿಗೆ ಶುರುಮಾಡಿದರೆ ಹೊಸ ವ್ಯಾಪಾರ ವಹಿವಾಟು ಶುರುಮಾಡುವವರಿಗೆ ಅನುಕೂಲವಾಗುತ್ತದೆ. ಪಂಚಾಯತ್‌ನ ಆದಾಯವು ಹೆಚ್ಚುತ್ತದೆ.

೩. ಕಲ್ಯಾಣ ಮಂಟಪ – ಊರಲ್ಲಿ ಸಾವಿರಕ್ಕೆ ಹತ್ತಿರ ಮನೆಗಳಿವೆ. ವರ್ಷಕ್ಕೆ ಹಲವಾರು ಮದುವೆಗಳು ನಡೆಯುತ್ತವೆ. ಈಗ ಹೆಚ್ಚಿನ ಮದುವೆಗಳು ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ನಡೆಯುತ್ತದೆ. ಇದರ ಬದಲು ತಿಮ್ಮಪ್ಪನ ಗುಡಿ ಪಕ್ಕಕ್ಕಿರುವ ಸಮುದಾಯ ಭವನವನ್ನೇ ಕಲ್ಯಾಣಮಂಟಪವಾಗಿ ಕಡಿಮೆ ಖರ್ಚಿನಲ್ಲಿ ಪರಿವರ್ತಿಸಬಹುದು. ವರ್ಷಕ್ಕೆ ೫೦ ಮದುವೆ ಮತ್ತು ಇತರ ಸಮಾರಂಭಗಳು ನಡೆದು ಪ್ರತಿ ಸಮಾರಂಭಕ್ಕೂ ಕನಿಷ್ಠ ರೂ. ೫೦೦ ಬಾಡಿಗೆ ವಸೂಲಿಯಾದರೂ ರೂ. ೨೫೦೦ ಕ್ಕಿಂತಲೂ ಹೆಚ್ಚಿನ ಆದಾಯ ಗ್ರಾಮಪಂಚಾಯತ್‌ಗೆ ಬರಬಹುದು.

೪. ಕೃಷಿ ನೀರಾವರಿ – ಹಳ್ಳಿಯ ಪೂರ್ವ ಮತ್ತು ಪಶ್ಚಿಮ ಎರಡು ದಿಕ್ಕುಗಳಿಗೂ ಗುಡ್ಡಗಳ ಸಾಲುಗಳಿವೆ. ಮಳೆಗಾಲದಲ್ಲಿ ಅವುಗಳ ಮೇಲೆ ಸುರಿದ ಮಳೆ ವ್ಯರ್ತವಾಗಿ ಹೋಗುತ್ತಿದೆ. ಎರಡು ಗುಡ್ಡಗಳು ಸೇರಿವಲ್ಲಿ ಕಡಿಮೆ ವೆಚ್ಚದಲ್ಲಿ ಚೆಕ್ ಡ್ಯಾಮ್‌ಗಳನ್ನು ಕಟ್ಟಿಸಬಹುದು. ಡ್ಯಾಮ್ ನಿರ್ಮಿಸಲು ಹಣಕ್ಕಾಗಿ ಹುಡುಕಾಟ ಅಗತ್ಯವಿಲ್ಲ. ವಾಟರ್ ಶೆಡ್ ಡೆವಲಪ್‌ಮೆಂಟ್‌ನ ಹೆಸರಿನಲ್ಲಿ ಸರಕಾರ ತುಂಬಾ ಹಣ ಖರ್ಚು ಮಾಡುತ್ತಿದೆ. ಆ ಯೋಜನೆಯಡಿಯಲ್ಲಿ ಹಣ ಪಡೆದು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಬಹುದು. ಇದರಿಂದ ಅಂರ್ತಜಲ ಹೆಚ್ಚುತ್ತದೆ. ಬರಡು ಭೂಮಿಯ ಕೃಷಿಗೆ ಅನುಕೂಲವಾಗುತ್ತದೆ. ನೀರು ಬಳಕೆಗೆ ಒಂದು ಕನಿಷ್ಠ ತೆರಿಗೆಯನ್ನು ಹಾಕಬಹುದು. ಕೃಷಿಗೆ ಬಾಡಿಗೆ ನೀರು ಪಡೆದು ಅಭ್ಯಾಸವಿರುವ ಜನರಿಗೆ ಪಂಚಾಯತ್ ವಿಧಿಸುವ ತೆರಿಗೆ ವಿಚಿತ್ರವಾಗಲಿಕ್ಕಿಲ್ಲ.

ಸದಸ್ಯರು ಮತ್ತು ಹಳ್ಳಿಗರು ಮನಸ್ಸು ಮಾಡಿದರೆ ಇದೇ ರೀತಿಯ ಇತರ ಹಲವಾರು ಆದಾಯದ ಮೂಲಗಳು ಸಿಗಬಹುದು. ಅಂತಹ ಮೂಲಗಳನ್ನು ಬಳಸಿಕೊಂಡು ಪಂಚಾಯತ್‌ನ ಆದಾಯ ಹೆಚ್ಚಿಸಿಕೊಳ್ಳಬಹುದು. ವಿಕೇಂದ್ರೀಕರಣ ಒಂದು ವಿಧದಲ್ಲಿ ಸ್ವಾಯತ್ತತೆಯೂ ಹೌದು. ಆದರೆ ಅದು ಕಾರ್ಯರೂಪಕ್ಕೆ ಬರಬೇಕಾದರೆ ಸ್ಥಳೀಯವಾಗಿ ಸ್ವಲ್ಪಮಟ್ಟಿನ ಆದಾಯ ರೂಪುಗೊಳ್ಳುವುದು ಅಗತ್ಯ. ಪ್ರತಿಯೊಂದಕ್ಕೂ ಹೊರಗಿನ ನೆರವಿಗೆ ಕೈಚಾಚುವುದು ಹಳ್ಳಿಯ ಸ್ವಾಭಿಮಾನದ ದೃಷ್ಟಿಯಿಂದ ಮತ್ತು ಸ್ವಾಯತ್ತತೆಯನ್ನು ಬಯಸುವ ದೃಷ್ಟಿಯಿಂದ ಆರೋಗ್ಯಕರವಲ್ಲ.

ಖರ್ಚು

ಖರ್ಚಿಗೆ ಸಂಬಂಧಪಟ್ಟಂತೆ ಎರಡು ವಿಚಾರಗಳನ್ನು ಚರ್ಚಿಸಬಹುದು. ೧. ಯಾವುದೇ ಖರ್ಚು ಯಾವುದೇ ಸಮಸ್ಯೆ ಪರಿಹಾರಕ್ಕಾಗಿ ಅಥವಾ ಹೆಚ್ಚಿನ ಸವಲತ್ತಿಗಾಗಿ ಆಗುತ್ತಿದೆ. ೨. ಸಮಸ್ಯೆ ಪರಿಹಾರ ಅಥವಾ ಸವಲತ್ತಿನ ಹೆಚ್ಚಳ ಯಾವುದೋ ಒಂದು ವಿಧಾನದಿಂದ ಆಗುತ್ತಿದೆ. ಈಗ ಅನುಸರಿಸುತ್ತಿರುವ ವಿಧಾನ ಸರಿಯೇ ಅಥವಾ ಬದಲಿ ವಿಧಾನಕ್ಕೆ ಯಾಕೆ ಪ್ರಯತ್ನಿಸಬಾರದೆನ್ನುವ ಪ್ರಶ್ನೆ ಕೇಳಿಕೊಂಡರೆ ಕೆಲವೊಂದು ಹೊಸ ವಿಧಾನಗಳು ಸಿಗಬಹುದು. ಉದಾಹರಣೆಗೆ ಗ್ರಾಮೀಣ ನೈರ್ಮಲ್ಯೀಕರಣ ವ್ಯವಸ್ಥೆ. ಪ್ರತಿ ವರ್ಷ ವಾರ್ಷಿಕ ಬಜೆಟಿನಲ್ಲಿ ಚರಂಡಿ ವ್ಯವಸ್ಥೆ ಅಥವಾ ನೈರ್ಮಲ್ಯೀಕರಣಕ್ಕೆ ಹಣ ವ್ಯಯವಾಗುತ್ತದೆ. ಜತೆಗೆ ಜವಾಹರ್ ರೋಜ್‌ಗಾರ್ ಯೋಜನೆಯಡಿಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ಹಣ ವ್ಯಯವಾಗುತ್ತಿದೆ. ಚರಂಡಿ ನಿರ್ಮಾಣದ ಉದ್ದೇಶವಾದರೂ ಏನು? ಜನರು ಬಳಸಿದ ನೀರು ಒಂದೇ ಕಡೆ ಸಂಗ್ರಹವಾಗದೆ ಚಲಿಸುವಂತಾಗಬೇಕು. ಆ ರೀತಿ ಚಲಿಸಿದರೆ ಕೊಚ್ಚೆ ನಿರ್ಮಾಣವಾಗುವುದು ತಪ್ಪುತ್ತೆ, ಸೊಳ್ಳೆಗಳ ಕಾಟ ತಪ್ಪುತ್ತೆ ಮತ್ತು ಮಲೇರಿಯಾ ಅಥವಾ ಇತರ ಕಾಯಿಲೆಗಳು ಕಡಿಮೆಯಾಗುತ್ತೆ ಎನ್ನುವ ಗ್ರಹಿಕೆ ಇದೆ. ಮೇಲಿನ ಉದ್ದೇಶಗಳು ಈಡೇರಿವೆಯೇ? ಲಕ್ಷಗಟ್ಟಲೆ ಹಣ ಚರಂಡಿ ನಿರ್ಮಾಣ ಮತ್ತು ಬಂಡೆ ಹಾಸುವುದಕ್ಕೆ ವ್ಯಯವಾಗುತ್ತಿದೆ. ಆದರೆ ಕೊಳಚೆ ನಿರ್ಮಾಣವಾಗುವುದು ಕಡಿಮೆಯಾಗಿಲ್ಲ, ಮಲೇರಿಯಾ ಮತ್ತು ಇತರ ಕಾಯಿಲೆಗಳು ಕಡಿಮೆಯಾಗಿಲ್ಲ. ಹೀಗಿರುವಾಗ ಈ ಖರ್ಚು ಕುರಿತು ಯಾಕೆ ಪನರ್ ಪರಿಶೀಲಿಸಬಾರದು.

ಇಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಚರಂಡಿಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಿಸುವುದು. ಅದರಲ್ಲಿ ಕಸ ಕಡ್ಡಿ ತುಂಬದಂತೆ ಕ್ರಮ ವಹಿಸುವುದು. ಎರಡು, ಬದಲಿ ವ್ಯವಸ್ಥೆಗೆ ಪ್ರಯತ್ನಿಸುವುದು. ಚರಂಡಿಗೆ ಮೂರು ಮೂಲಗಳಿಂದ ನೀರು ಸೇರುತ್ತದೆ. ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರು ಮತ್ತು ಸ್ನಾನದ ನೀರು. ಪ್ರತಿ ವರ್ಷ ಜುಲೈಯಿಂದ ಫೆಬ್ರವರಿ ತನಕ ಅಗಸ ಊರವರ ಬಟ್ಟೆಗಳನ್ನು ಊರ ಕೆರೆಯಲ್ಲಿ ತೊಳೆಯುತ್ತಾನೆ. ಆ ಅವಧಿಯಲ್ಲಿ ಬಟ್ಟೆ ಒಗೆದ ನೀರು ಚರಂಡಿಗೆ ಸೇರುವುದಿಲ್ಲ. ಉಳಿದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಅವರವರ ಮನೆಯೆದುರೆ ಬಟ್ಟೆ ಒಗೆಯುವುದು. ಹೀಗೆ ವರ್ಷದ ಎಲ್ಲಾ ಅವಧಿಯಲ್ಲೂ ಪ್ರತಿ ಮನೆಯಿಂದ ಕನಿಷ್ಠ ಕೆಲವು ಲೀಟರು ನೀರು ಚರಂಡಿ ಸೇರುತ್ತದೆ. ಒಂದು ಕಡೆಯಿಂದ ನೀರಾವರಿ ಇಲ್ಲದ ಇಂತಹ ಪ್ರದೇಶಗಳಲ್ಲಿ ನೀರು ಅಪವ್ಯಯವಾಗುತ್ತಿದೆ. ಇನ್ನೊಂದು ಕಡೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಈ ನೀರು ಕೊಳಚೆ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಈ ಎರಡು ಸಮಸ್ಯೆಗಳ ಪರಿಹಾರಕ್ಕೆ ಬದಲಿ ಉಪಾಯ ಹುಡುಕಬೇಕಾಗಿದೆ. ಈ ಹಳ್ಳಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಲಹೆಗಳನ್ನು ನೀಡಬಹುದು. ಅಂಗಳ ಅಥವಾ ಮನೆಯೆದುರು ಸ್ವಲ್ಪ ಜಾಗವಿರುವ ಮನೆಗಳು ಅಲ್ಲಿ ತೆಂಗಿನ ಸಸಿ ಅಥವಾ ತರಕಾರಿ ಬೆಳೆಯಬಹುದು. ಬಳಕೆಯಾದ ನೀರನ್ನು ಚರಂಡಿಗೆ ಬಿಡುವ ಬದಲು ತೆಂಗಿನ ಅಥವಾ ತರಕಾರಿ ಬುಡಕ್ಕೆ ಬಿಡಬಹುದು. ಕೆಲವು ಮನೆಗಳಲ್ಲಿ ಅಂತಹ ಪ್ರಯತ್ನ ನಡೆದಿದೆ. ಅಂತವುಗಳಿಂದ ಚರಂಡಿ ಸೇರುವ ನೀರು ಕಡಿಮೆಯಿದೆ. ಈ ವಿಧಾನವನ್ನು ಎಲ್ಲಾ ಮನೆಗಳಲ್ಲಿ ಬಳಸಲು ಸಾಧ್ಯವಿಲ್ಲ. ಇಲ್ಲಿನ ಗುಂಪು ಮನೆಗಳ ಕ್ರಮದಿಂದಾಗಿ ಮನೆಯೆದುರು ಅಥವಾ ಹಿಂಭಾಗದಲ್ಲಿ ಖಾಲಿ ಜಾಗವೇ ಇಲ್ಲ. ಅಂತಹ ಕಡೆ ಚರಂಡಿ ನಿರ್ಮಣ ಮಾಡಿ ನೀರನ್ನು ಖಾಲಿ ಜಾಗಕ್ಕೆ ಸಾಗಿಸಿ ಉಪಯೋಗಿಸುವಂತಾಗಬೇಕು. ಖಾಸಗಿ/ಸಾರ್ವಜನಿಕ ವಿಂಗಡನೆ ಕೂಡ ಚರಂಡಿ ಮತ್ತು ಇತರ ಸಾರ್ವಜನಿಕ ವ್ಯವಸ್ಥೆಗಳ ದುರಾವಸ್ಥೆಗೆ ಕಾರಣವಾಗಿರಬಹುದು. ಮನೆಯಿಂದ ಹೊರಗಿರುವ ಜಾಗ ಸಾರ್ವಜನಿಕ; ಅದನ್ನು ಹೇಗೆ ಬೇಕಾದರೂ ಬಳಸಹಬಹುದು. ಅದರ ದುರುಪಯೋಗವೇ ಹೆಚ್ಚು. ಇದರ ಪರಿಹಾರಕ್ಕೆ ಒಳ್ಳೆಯ ಉಪಾಯವೆಂದರೆ ಸಮಸ್ಯೆಯನ್ನು ಖಾಸಗೀಕರಣಗೊಳಿಸುವುದು. ಇಷ್ಟರವರೆಗೆ ನಡೆದ ಸಾರ್ವಜನಿಕ ಪ್ರಯತ್ನಗಳಲ್ಲಿ ಲಾಭ ಖಾಸಗೀಕರಣಗೊಂಡು ನಷ್ಟ ಸಾರ್ವಜನಿಕಗೊಳ್ಳುತ್ತಿತ್ತು. ಇಲ್ಲಿ ಸಮಸ್ಯೆಯನ್ನು ಖಾಸಗೀಕರಣಗೊಳಿಸುವ ಮೂಲಕ ಸಮಸ್ಯೆಗೆ ಕಾರಣವಾದವರನ್ನು ಸಮಸ್ಯೆಯ ಪರಿಹಾರಕ್ಕೆ ಜವಾಬ್ದಾರಿ ಮಾಡಬಹುದು.

 

[1]ಎಂ.ವೈ. ಘೋರ್ಪಡೆ, ವಿಕೇಂದ್ರೀಕರಣ ತತ್ವ ಮತ್ತು ಆಚರಣೆ, ಪುಟ ೧೪

[2]ಎಂ.ವೈ. ಘೋರ್ಪಡೆ, ವಿಕೇಂದ್ರೀಕರಣ ತತ್ವ ಮತ್ತು ಆಚರಣೆ, ಪುಟ ೧೪

[3]ನಮ್ಮ ನೀರಾವರಿ ವ್ಯವಸ್ಥೆ, ರಸ್ತೆ, ವಿದ್ಯುತ್ ಸವಲತ್ತುಗಳೆಲ್ಲಾ ಕೋಟಿಗಟ್ಟಲೆ ಹಣ ಸುರಿದು ನಡೆಯುವ ಯೋಜನೆಗಳೇ. ಅವುಗಳಲ್ಲಿ ಹೇಗೆ ಸಂಪನ್ಮೂಲ ಸೋರಿ ಹೋಗುತ್ತಿದೆ ಎನ್ನುವುದರ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಇನ್ನು ಬಡವರ ಉದ್ಧಾರಕ್ಕಾಗಿಯೇ ಇರುವ ಯೋಜನೆಗಳು ಕೂಡ ಹೇಗೆ ಉಳ್ಳವರ ಜೇಬು ಸೇರುತ್ತದೆ ಎನ್ನುವುದು ಹೊಸ ಸತ್ಯವಲ್ಲ.

[4]ಕೇರಳದಲ್ಲಿ ತಳಮಟ್ಟದ ಯೋಜನೆ ಕಾರ್ಯರೂಪಕ್ಕೆ ಬರುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ನಡೆದಿದೆ. ಐದು ಹಂತದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಗ್ರಾಮ ಸಭೆ ಸೇರಿ ಜನರು ತಮ್ಮ ಬೇಕು ಬೇಡಗಳನ್ನು ಪಟ್ಟಿ ಮಾಡುವ ಕೆಲಸ. ಎರಡನೇ ಹಂತದಲ್ಲಿ ಡೆವಲಪ್‌ಮೆಂಟ್ ಸೆಮಿನಾರ್ ಮಾಡಿ ಜನರು ಪಟ್ಟಿ ಮಾಡಿದ ಬೇಕು ಬೇಡಗಳನ್ನು ಪರಿಷ್ಕರಿಸಿ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ದಾರಿಗಳನ್ನು ಸೂಚಿಸಲಾಗುತ್ತದೆ. ಮೂರನೇ ಹಂತದಲ್ಲಿ ಈ ಪರಿಹಾರಗಳನ್ನು ಯೋಜನೆಯಲ್ಲಿ ಸೇರಿಸಬಹುದಾದ ಪ್ರೋಜೆಕ್ಟ್‌ಗಳಾಗಿ ಪರಿವರ್ತಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ಇಂತಹ ಪ್ರೋಜೆಕ್ಟ್‌ಗಳನ್ನು ಸೇರಿಸಿ ಹಳ್ಳಿಯ ಯೋಜನೆ ತಯಾರಾಗುತ್ತದೆ. ಐದನೆ ಹಂತದಲ್ಲಿ ಹಳ್ಳಿಯ ಯೋಜನೆ ತಾಲ್ಲೂಕು ಮತ್ತು ಜಿಲ್ಲಾ ಯೋಜನೆಗಳೊಂದಿಗೆ ಸೇರಿಸುವ ಕೆಲಸ. (ಟಿ.ಎಮ್. ತೋಮಸ್ ಐಸಾಕ್ ಮತ್ತು ಕೆ.ಎನ್. ಹರಿಲಾಲ್, ಪ್ಲ್ಯಾನಿಂಗ್ ಫಾರ್ ಎಂಪವರ್‌ಮೆಂಟ್: ಪೀಪಲ್ಸ್ ಕೆಂಪೇಯಿನ್ ಫಾರ್ ಡಿಸೆಂಟ್ರಲೈಸ್‌ಡ್ ಪ್ಲ್ಯಾನಿಂಗ್ ಇನ್ ಕೇರಳ, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಸಂಚಿಕೆ ೩೨, ಸಂಖ್ಯೆ ೧೨೨, ಜನವರಿ ೧೯೯೭, ಪುಟ ೫೩-೫೮)