ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ – ಕನ್ನಡಿಗ – ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ : ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ಯಾಂಸರು ತೊಡಗಿಸಿಕೊಂಡ ಈ ವಿದ್ವತ್ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ : ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಭಾರತೀಯ ಆಡಳಿತ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಆಳರಸರ ಕಾಲದ ಏಕಸ್ವಾಮ್ಯದಿಂದ ಇಂದಿನ ಪ್ರಜಾಸತ್ಯಾತ್ಮಕ ಆಡಳಿತದವರೆಗೆ ಅನೇಕ ಬದಲಾವಣೆಗಳು ಉಂಟಾಗಿವೆ. ಆಡಳಿತ ಬದಲಾವಣೆಯ ಜೊತೆ ಜೊತೆಗೆ ಸಾಮಾನ್ಯ ಜನತೆ ಹಾಗೂ ಪ್ರಭುತ್ವದ ಆಲೋಚನಾ ಕ್ರಮ ಹಾಗೂ ಜೀವನ ವಿಧಾನದಲ್ಲಿಯೂ ಬದಲಾವಣೆ ಕಂಡುಬಂದಿದೆ. ಭಾರತದ ಯಾವುದೇ ಗ್ರಾಮ, ಪಟ್ಟಣ ಹಾಗೂ ನಗರಗಳು ಆಡಳಿತ ಬದಲಾವಣೆಯ ಪ್ರಯೋಗಶಾಲೆಯಂತೆ ಕಂಡುಬರುತ್ತವೆ. ಆದರೂ ಗ್ರಾಮೀಣ ಪ್ರದೇಶದ ಸೀಮಿತ ಜನಸಂಖ್ಯೆಯ ಮೇಲಿನ ಪ್ರಭಾವ ತಕ್ಷಣದಲ್ಲಿ ಕಂಡುಬರುತ್ತದೆ. ರಾಜರ ಕಾಲದ ದೇಶೀಯ ಹಾಗೂ ಪಾಶ್ಚಿಮಾತ್ಯ ಆಡಳಿತ ಹಾಗೂ ನಂತರದ ಬ್ರಿಟೀಷರ ಆಡಳಿತದ ಸಂದರ್ಭದ ಕಂಪನಿ ಆಡಳಿತ, ಸ್ವಾತಂತ್ರ್ಯೋತ್ತರದ ಪ್ರಜಾಸತ್ತಾತ್ಮಕ ಆಡಳಿತ ಭಾರತದ ಅಥವಾ ಕರ್ನಾಟಕದ ಮುಖ್ಯ ಆಡಳಿತ ಘಟ್ಟಗಳು. ವ್ಯವಸ್ಥಿತವಾದ ನಿಯೋಜಿತ ಮಂತ್ರಿಮಂಡಳ ಆಳರಸರ ಕಾಲದಲ್ಲಿ ಇದ್ದರೂ ಸಹ ಇಲ್ಲಿ ಸಾಮಾನ್ಯ ಜನರಿಗೆ ಆಡಳಿತದಲ್ಲಿ ನೇರ ಪ್ರಾತಿನಿಧ್ಯ ಇರಲಿಲ್ಲ. ಅಲ್ಲದೆ, ನಿಯೋಜಿತ ಮಂತ್ರಿಮಂಡಳ ಕೇವಲ ಆಡಳಿತಕ್ಕೆ ಮಾರ್ಗದರ್ಶನ ನೀಡುವಂತಿತ್ತು. ಬ್ರಿಟೀಷರ ಆಡಳಿತ ಸಂದರ್ಭದ ಕೊನೆಯ ದಿನಗಳಲ್ಲಿ ದೇಶ ಭಾಷೆ, ದೇಶೀಯ ಆಡಳಿತದ ಬಗ್ಗೆ ಚಿಂತನೆಗಳು ನಡೆದದ್ದು ಆಡಳಿತ ವಿಕೇಂದ್ರೀಕರಣ ಇತಿಹಾಸದ ಮೊದಲ ಹಂತ. ಏಕಸ್ವಾಮ್ಯ ಆಡಳಿತದಿಂದ ಸಾಮುದಾಯಿಕ ಆಡಳಿತ ಬಗ್ಗೆ ಆಸಕ್ತಿಯನ್ನು ತೋರಿದ ಪರಿಣಾಮವಾಗಿ ಸಾಂಸ್ಥಿಕ ಆಡಳಿತ ಅಸ್ತಿತ್ವಕ್ಕೆ ಬಂದದ್ದು ಇದಕ್ಕೆ ಉದಾಹರಣೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ನಾಯಕರನ್ನು ಒಳಗೊಂಡು ಪ್ರಾಂತೀಯ ಸಲಹಾ ಸಮಿತಿಯನ್ನು ಬ್ರಿಟೀಷರು ಸ್ಥಾಪಿಸಿದರೂ ಸಹ ಹೆಸರೇ ಸೂಚಿಸುವಂತೆ ಇದು ಕೇವಲ ಸಲಹೆ ನೀಡುವ ಸಮಿತಿ ಆಗಿತ್ತು. ಪ್ರಾದೇಶಿಕವಾದ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಕುರಿತಂತೆ ಮಾಹಿತಿಯನ್ನು ಒದಗಿಸುವುದು ಮಾತ್ರ ಸಮಿತಿಯ ಉದ್ದೇಶವಾಗಿತ್ತು. ನಂತರದ ದಿನಗಳಲ್ಲಿ ವಿಕೇಂದ್ರೀಕರಣದ ಆರಂಭಿಕ ಹಂತವನ್ನು ಕಾಣಲಾಯ್ತು. ಸ್ಥಿರ ಸರಕಾರ ರಚನೆಯ ಮೂಲಕ ಪ್ರಾದೇಶಿಕ ಅಗತ್ಯವನ್ನು ತಾನೇ ಪೂರೈಸಿಕೊಳ್ಳುವಂತೆ ಇದರ ಕಾರ್ಯವಿಧಾನ ಬದಲಾಯಿತು. ಸರಕಾರದ ಪರವಾಗಿ ಪ್ರಾದೇಶಿಕ ತೆರಿಗೆಯನ್ನು ವಿಧಿಸಿ ಸಂಗ್ರಹಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸುವುದರ ಮೂಲಕ ಸರಕಾರ ಈ ಜವಾಬ್ದಾರಿಯಿಂದ ತಪ್ಪಿಸಿಕೊಂಡಿತು. ೧೯೦೯ರ ವೇಳೆಗೆ ಗ್ರಾಮಪಂಚಾಯತ್ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿ ಕಾನೂನು ರೂಪಿತವಾದವು. ವಿಕೇಂದ್ರೀಕರಣವನ್ನು ಕಾನೂನುಬದ್ಧವಾಗಿಸುವ ಮೊದಲ ಪ್ರಯತ್ನ ಇದಾಗಿತ್ತು. ಈ ದಿಸೆಯಲ್ಲಿ ರಾಯಲ್ ಕಮೀಷನ್ಆಫ್ ಡೀಸೆಂಟ್ರಲೈಜೇಷನ್ ನೇಮಕವಾಯಿತು. ತಾಲೂಕ್ಬೋರ್ಡ್ರೂಪಿತವಾಗಿ ಶಿಕ್ಷಣ, ಆರೋಗ್ಯ ಚರಂಡಿ ನಿರ್ಮಾಣದಂತಹ ಕಾರ್ಯಗಳು ಇದರ ಅಡಿಯಲ್ಲಿ ಬಂದವು. ಆಡಳಿತ ಸುಧಾರಣೆ ಮೂರನೆಯ ಹಂತವಾಗಿ ಮದ್ರಾಸ್ ವಿಲೇಜ್ ಪಂಚಾಯತ್ ಆಕ್ಟ್ಜಾರಿಗೆ ಬಂದಿತು. ಪ್ರತಿ ಕಂದಾಯ ಹಳ್ಳಿ ತನ್ನದೇ ಆದ ಪಂಚಾಯತ್ಅಧಿಕಾರ ಪಡೆಯಿತು. ಸ್ಥಳೀಯವಾದ ಸ್ವ ಸರಕಾರಗಳಿಗೆ ಈವರೆಗೆ ಇದ್ದ ಅಧಿಕಾರಿಗಳ ನೇಮಕಕ್ಕೆ ಬದಲಾಗಿ ಚುನಾಯಿತ ಸದಸ್ಯರಿಗೆ ಅವಕಾಶ ದೊರಕಿತು. ಸೀಮಿತವಾದ ಹಕ್ಕನ್ನು ಈ ವಿಲೇಜ್ಪಂಚಾಯತ್ ಹೊಂದಿತ್ತು. ಕಂದಾಯ ವಸೂಲಿ ಊರಿನ ಗೌಡರು ಮತ್ತು ಶಾನುಭೋಗರ ಸುಪರ್ದಿನಲ್ಲಿ ಮುಂದುವರಿಯಿತು. ಅಲ್ಲದೆ, ಮತದಾನದ ಹಕ್ಕು ಸಾರ್ವಜನಿಕವಾಗಿರದೆ ಭೂಕಂದಾಯ ಕಟ್ಟುವವರಿಗೆ ಮಾತ್ರ ಸೀಮಿತವಾಗಿತ್ತು.

ಸ್ವಾತಂತ್ರ್ಯದ ನಂತರ ಪಂಚವಾರ್ಷಿಕ ಯೋಜನೆಯನ್ನು ಬೆಳಕಿಗೆ ತರುವುದರ ಮೂಲಕ ಕೆಲವೊಂದು ಸಾಮಾಜಿಕ ಸುಧಾರಣೆಗೆ ಪ್ರಯತ್ನ ನಡೆಯಿತು. ತಳಸ್ತರದ ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಯಿತು. ಈ ದಿಸೆಯಲ್ಲಿ ಗ್ರಾಮೀಣ ಜನರನ್ನು ತೊಡಗಿಸುವ ಸಲುವಾಗಿ ಅವರ ಆಸಕ್ತಿಯನ್ನು ಕುದುರಿಸುವ ನೆಲೆಯಲ್ಲಿ ೧೯೫೭ರ ಬಲವಂತರಾಯ್ ಅವರ ಅಧ್ಯಕ್ಷತೆಯಲ್ಲಿ ಸಮತಿ ರಚಿಸಿ ಅಧ್ಯಯನ ಮಾಡಲಾಯಿತು. ಸಮುದಾಯದ ಪಾಲ್ಗೊಳ್ಳುವಿಕೆಯನ್ನು ತರುವ ಸಲುವಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಸದಸ್ಯರ ನೇಮಕಕ್ಕೆ ಅವಕಾಶವನ್ನು ಕಲ್ಪಿಸಲಾಯಿತು. ಗ್ರಾಮೀಣ ಅಭಿವೃದ್ಧಿಯ ನಿರ್ಣಯದ ಹಕ್ಕು ಚುನಾಯಿತ ಸದಸ್ಯರಿಗೆ ಬಂದಿತು. ಗ್ರಾಮಪಂಚಾಯತ್‌, ತಾಲೂಕು ಸಮಿತಿ ಹಾಗೂ ಜಿಲ್ಲಾ ಪರಿಷತ್ಒಳಗೊಂಡ ಪಂಚಾಯತ್ರಾಜ್ ವ್ಯವಸ್ಥೆ ನಿರ್ಮಾಣವಾಯಿತು. ೧೯೫೯ರಲ್ಲಿ ಮೈಸೂರು ವಿಲೇಜ್ ಪಂಚಾಯತ್ಅಂಡ್ ಲೋಕಲ್ ಬೋರ್ಡ್ಆಕ್ಟ್ರೂಪಿತವಾಯಿತು. ಮಹಿಳೆ, ಹರಿಜನ ಹಾಗೂ ಗಿರಿಜನರಿಗೆ ಚುನಾಯಿತ ಪ್ರತಿನಿಧಿತ್ವದಲ್ಲಿ ಮೀಸಲಾತಿಯನ್ನು ಸೃಜಿಸಲಾಯಿತು. ರಸ್ತೆ, ಸೇತುವೆ, ಬಾವಿ ನಿರ್ಮಾಣ ಹಾಗೂ ದುರಸ್ತಿ, ಕುಡಿಯುವ ನೀರು, ವಿದ್ಯುತ್ಪೂರೈಕೆ ಹಾಗೂ ಚರಂಡಿ ದುರಸ್ತಿ, ಅಂಗಡಿ ಹೋಟೆಲ್ ನಿಯಂತ್ರಣ, ಸಾರ್ವಜನಿಕ ಕಟ್ಟಡ, ಸಮುದಾಯ ಭೂಮಿ, ಅರಣ್ಯ ಪ್ರದೇಶ ನಿರ್ವಹಣೆ, ಸಹಕಾರಿ ಬ್ಯಾಂಕ್, ಸಾರ್ವಜನಿಕ ಆರೋಗ್ಯ, ಗುಡಿಕೈಗಾರಿಕೆಗೆ ನಿರ್ವಹಣೆಯಂತಹ ಕಾರ್ಯಕ್ರಮಗಳು ಗ್ರಾಮಪಂಚಾಯತ್ಅಡಿಯಲ್ಲಿ ಬಂದವು.

ಇದರ ಮುಂದುವರಿಕೆಯಾಗಿ ೧೯೮೫ರಲ್ಲಿ ಕರ್ನಾಟಕದಲ್ಲಿ ಜಿಲ್ಲಾ ಪರಿಷತ್‌, ತಾಲೂಕು ಮಂಡಲ ಪಂಚಾಯಿತಿಗಳ, ಮಂಡಲ ಪಂಚಾಯತಿಗಳ ಮತ್ತು ನ್ಯಾಯ ಪಂಚಾಯತ್ಆಕ್ಟ್‌ನ್ನು ತರಲಾಯಿತು. ಇದರಿಂದಾಗಿ ಜನಸಂಖ್ಯೆಯ ಆಧಾರದ ಮೇಲೆ ಹತ್ತು ಸಾವಿರ ಜನಸಂಖ್ಯೆಯ ಹಳ್ಳಿಗಳ ಸಮುದಾಯದ ತಳಮಟ್ಟದ ಮಂಡಲ ಪಂಚಾಯತ್ಅಸ್ತಿತ್ವಕ್ಕೆ ಬಂದಿತು. ಮಹಿಳೆ, ಹರಿಜನ, ಗಿರಿಜನ, ಹಿಂದುಳಿದ ವರ್ಗದ ಜನರಿಗೆ ಮೀಸಲಾತಿಯನ್ನು ಕಲ್ಪಿಸಲಾಯಿತು.

ಮಹಿಳೆಯರಿಗೆ ಹರಿಜನರಿಗೆ ಗಿರಿಜನರಿಗೆ ಈ ಪ್ರಕ್ರಿಯೆಯಗಳಲ್ಲಿ ತೊಡಿಗಸಿಕೊಳ್ಳುವಂತೆ ಪ್ರೇರೇಪಿಸುವ ಜವಾಬ್ದಾರಿ ಸರಕಾರಕ್ಕಿತ್ತು. ಮಾನಸಿಕವಾಗಿ ಮುಂದುವರಿದ ಜನಸಮುದಾಯದ ಸಮನಾಗಿ ನಿಲ್ಲಬಲ್ಲ ಮಾನಸಿಕ ಪರಿಸರವನ್ನು ನಿರ್ಮಿಸುವುದು ಅವಶ್ಯಕವಾಗಿತ್ತು. ಆರಂಭದಲ್ಲಿ ಆಸಕ್ತಿ ಇಲ್ಲದಿದ್ದರೂ ಸಹ ಮನೆಯಿಲ್ಲದ ತನಗೆ ಒಂದು ಮನೆ ಮಾಡಿಕೊಳ್ಳಲು ಈ ಸದಸ್ಯತ್ವ ತನಗೆ ನೆರವಾದೀತು ಎಂಬ ಸೀಮಿತ ಆಸೆ ಹಾಗೂ ತನ್ನ ಓಣಿಯ ಜನರಿಗೆ ಸ್ವಲ್ಪ ಕೆಲಸವನ್ನು ಮಾಡಿಸಿಕೊಡಬಹುದು ಎಂಬ ಆಲೋಚನೆಗಳು ಅಂದಿನ ಸದಸ್ಯರಲ್ಲಿ ಇತ್ತು.

ಪ್ರಭುತ್ವದ ನೆರಳಲ್ಲಿ ಬೆಳೆದು ಬಂದು ಸಮುದಾಯ ಈ ಎಲ್ಲ ಬದಲಾವಣೆಗಳಿಂದ ಹೊಂದಿಕೊಳ್ಳಲು ಮಾನಸಿಕವಾಗಿ ತಯಾರಾಗಿರಲಿಲ್ಲ. ಅಂತೆಯೇ ಪ್ರಭುತ್ವದಲ್ಲಿಯೂ ಒಮ್ಮಿಂದೊಮ್ಮೆಲೆ ತಮ್ಮ ಆಡಳಿತ ಸ್ವಾಮ್ಯವನ್ನು ತಳಸ್ತರದ ಸಮುದಾಯಕ್ಕೆ ಬಿಟ್ಟುಕೊಡಲು ಸಿದ್ಧವಾಗಿರಲಿಲ್ಲ. ಹೀಗಾಗಿ ಸಮುದಾಯದ ಜೀವನದಲ್ಲಿಯೂ ಬದಲಾವಣೆಗಳು ವ್ಯಕ್ತವಾಗತೊಡಗಿದವು. ತಳಸ್ತರದ ಸಮುದಾಯ, ಮಹಿಳೆ, ಹಿಂದುಳಿದ ವರ್ಗಗಳು ಒತ್ತಡ ಹಾಗೂ ಒತ್ತಾಯದ ಅನಿವಾರ‍್ಯತೆಯಿಂದ ಬದಲಾವಣೆಗಳನ್ನು ಸ್ವೀಕರಿಸಿದರೂ ಸಹ ಕ್ರಮೇಣ ಕೆಳಸ್ತರದ ಸಮುದಾಯದ ಹೊಸ ಪೀಳಿಗೆ ಅಧಿಕಾರವನ್ನು ಸ್ವೀಕರಿಸಲು ತಯಾರಿಯಾಯಿತು. ಪ್ರಭುತ್ವದಲ್ಲಿಯೂ ಕೂಡ ಅನಿವಾರ‍್ಯವಾಗಿ ಸ್ಥಿತ್ಯಂತರಗಳನ್ನು ಒಪ್ಪಿಕೊಂಡರೂ ಸಹ ಅಸಮಾಧಾನ ಆಂತರಿಕವಾಗಿ ಹೊಗೆಯಾಡುತ್ತಿತ್ತು. ಪ್ರಭುತ್ವಕ್ಕೆ ಪರ್ಯಾಯವಾಗಿ ಪ್ರಭುತ್ವವನ್ನು ರೂಪಿಸುವ ನಿರ್ಣಾಯಕ ಪಾತ್ರ ವಹಿಸಲು ತಂತ್ರಗಾರಿಕೆಯಲ್ಲಿ ತೊಡಗಿತು. ಪುರುಷನಿಂದ ಮಹಿಳೆಗೆ ಆಡಳಿತ ವರ್ಗಾವಣೆಯಾದರೂ ಸಹ ಆಡಳಿತದ ಹಿಂದೆ ಪುರುಷನ ಕೈವಾಡ ಮುಂದುವರಿಯಿತು. ವಿಕೇಂದ್ರೀಕರಣ ದೇಶೀಯ ಆಡಳಿತ ಪ್ರಕ್ರಿಯೆಯಿಂದಾಗಿ ಆರೋಗ್ಯ, ಶಿಕ್ಷಣ, ಗ್ರಾಮ ನೈರ್ಮಲ್ಯ ಮುಂತಾದ ಕಾರ್ಯಕ್ರಮಗಳಲ್ಲಿ ದೇಶೀಯ ಸಾಮಾನ್ಯ ಸಮುದಾಯದ ಪಾಲ್ಗೊಳ್ಳುವಿಕೆ ಒಂದು ವಿಧದಲ್ಲಿ ಬದಲಾವಣೆಯನ್ನು ತಂದರೂ ಸಹ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ನಿಯಂತ್ರಣ ತಪ್ಪುವಂತಾಯಿತು. ಈ ಎಲ್ಲ ಬದಲಾವಣೆಗಳು ಗ್ರಾಮದ ಒಟ್ಟು ಜೀವನ ಕ್ರಮದಲ್ಲಿ, ಆಲೋಚನಾ ಕ್ರಮದಲ್ಲಿ ಪರಿಣಾಮವನ್ನು ಬೀರಿತು. ನಿಧಾನವಾಗಿ ರಾಜಕೀಯದ ಪ್ರವೇಶ ಉಂಟಾಯಿತು. ವೈಯಕ್ತಿಕ ಪ್ರತಿಷ್ಠೆ, ಪಕ್ಷ ರಾಜಕೀಯ ಇನ್ನಿತರೆ ಕಾರಣಗಳಿಂದಾಗಿ ಜಾತಿ ಸಂಘಟನೆ, ಪಂಥ ಸಂಘಟನೆ, ಅಸ್ತಿತ್ವಕ್ಕೆ ಬಂದಿತು. ಹೀಗಾಗಿ ಗ್ರಾಮೀಣ ಪರಿಸರದ ಸಾಮಾಜಿಕ ಜೀವನದಲ್ಲಾದ ಬದಲಾವಣೆಗಳನ್ನು ಗ್ರಾಮದ ನೆಲೆಯಲ್ಲಿ ಅಧ್ಯಯನ ಮಾಡುವುದು ಆವಶ್ಯಕ ಹಾಗೂ ಅನಿವಾರ‍್ಯ. ಹಾಗಾದಾಗ ಮಾತ್ರ ಒಂದು ಕಾಲಮಾನದ ಸಂದರ್ಭದಲ್ಲಿ ಉಂಟಾದ ಆಡಳಿತಾತ್ಮಕ ಬದಲಾವಣೆ ಅದಕ್ಕೆ ಸಮುದಾಯಗಳಿಂದ ಬೆಳೆದು ಬಂದ ಗ್ರಾಮಜೀವನದ ಬದಲಾವಣೆಯ ಮೂಲಕ ಇವೆರಡೂ ಸಮುದಾಯದ ಸಂಬಂಧವನ್ನು ಗುರುತಿಸುವುದು ಸಾಧ್ಯವಿದೆ. ಈ ದಿಸೆಯಲ್ಲಿ ಡಾ. ಚಂದ್ರ ಪೂಜಾರಿ ಅವರು ಹೊಸಪೇಟೆ ಬಳಿಯ ಪಾಪಿನಾಯಕನಹಳ್ಳಿಯನ್ನು ಆಯ್ದುಕೊಂಡು ಬದಲಾವಣೆಯ ಕಾರಣ, ಸ್ವರೂಪ ಹಾಗೂ ಫಲಿತಾಂಶಗಳನ್ನು ಗ್ರಹಿಸಿದ್ದಾರೆ. ತಾನೂ ವ್ಯವಸ್ಥೆಯ ಒಂದು ಭಾಗವಾಗದೆ ದೂರದಲ್ಲಿ ಮೂರನೆಯ ವ್ಯಕ್ತಿಯಾಗಿ ನಿಂತು ಅಧ್ಯಯನದಲ್ಲಿ ಆವಶ್ಯಕವಾದ ಅನೇಕ ಪ್ರಶ್ನೆಗಳನ್ನು ಹಾಕಿಕೊಂಡು ಅಧ್ಯಯನದ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಸರಳವಾಗಿಯೂ ಸುಂದರವಾಗಿಯೂ ಕಥೆ ಹೇಳಿ ಸಮಸ್ಯೆಗಳನ್ನು ಬಿಡಿಸುವಂತೆ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. ಹಾಗೆ ಸಾಮಾನ್ಯವಾಗಿ ಓದಿದರೆ ಒಂದು ಗ್ರಾಮೀಣ ಕಾದಂಬರಿಯಂತೆ ಕಾಣುವ ಪ್ರಸ್ತುತ ಕೃತಿ ಅದರೊಳಗಿನ ಪ್ರಶ್ನೆ ಅಂಕಿಸಂಖ್ಯೆಗಳ ವಿವರಗಳ ಮೂಲಕ ಸಂಶೋಧನಾ ಕೃತಿಯಾಗಿಯೂ ಹೊರಹೊಮ್ಮಿದೆ.

ಡಾ. ಎ. ಮುರಿಗೆಪ್ಪ
ಕುಲಪತಿ