ಹೊಸಪೇಟೆಯಿಂದ ಪಾಪಿನಾಯಕನ ಹಳ್ಳಿಗೆ ೧೨ ಕಿ.ಮೀ. ದೂರ. ಸುಮಾರು ಅರ್ಧ ಗಂಟೆ ಪ್ರಯಾಣ. ಹಳ್ಳಿಯ ಹೆಸರು ಉದ್ದವಿದೆ. ಇಷ್ಟುದ್ದದ ಹೆಸರನ್ನು ಬರೆದು ಬರೆದು ಅಧಿಕಾರಿಗಳು ಸುಸ್ತಾಗಿರಬೇಕು. ಹಾಗಾಗಿ ಹಳ್ಳಿಯ ಹೆಸರನ್ನು ಪಿ.ಕೆ. ಹಳ್ಳಿ ಎಂದು ಮೊಟಕುಗೊಳಿಸಿದ್ದಾರೆ. ಕೆಲವು ಕಡೆ ನಾನು ಕೂಡ ಹಳ್ಳಿಯ ಮೊಟಕು ಹೆಸರನ್ನೇ ಬಳಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಹಳ್ಳಿಯನ್ನು ಇಬ್ಭಾಗವಾಗಿಸಿದೆ.[1] ಹೆದ್ದಾರಿಯ ಎರಡೂ ಮಗ್ಗುಲಿಗೆ, ಸುಮಾರು ಒಂದು ಕಿ.ಮೀ. ದೂರದವರೆಗೆ, ಮನೆಗಳಿವೆ. ಮನೆಗಳಿಗೆ ತಾಗಿಕೊಂಡಂತೆ ಅಥವಾ ಮನೆಗಳ ಮುಂದೆ ಕೆಲವು ಪೆಟ್ಟಿಗೆ ಅಂಗಡಿಗಳು, ಆರು ಹೋಟೆಲುಗಳು ಮತ್ತು ಕೆಲವು ಕಿರಾಣಿ ಅಂಗಡಿಗಳು ಇವೆ. ಹೊಸಪೇಟೆ ಕಡೆಯಿಂದ ಹಳ್ಳಿಗೆ ಹೋದರೆ ಸಿಗುವ ಮೊದಲ ಕಟ್ಟಡ ಗ್ರಾಮ ಪಂಚಾಯತಿ ಕಚೇರಿ. ಅದು ಹೆದ್ದಾರಿಯ ಬಲಭಾಗಕ್ಕಿದೆ. ಬಳ್ಳಾರಿ ಕಡೆಯಿಂದ ಬಂದರೆ ಹರಿಜನ ಕೇರಿ ಮತ್ತು ಅದರ ಎದುರು ಇರುವ ಅಂಬೇಡ್ಕರ್ ಪ್ರಾಥಮಿಕ ಶಾಲೆ ಸಿಗುತ್ತದೆ. ಪಂಚಾಯತ್ ಕಚೇರಿ ಎದುರು ಹಂಪಿಗೆ ಹೋಗುವ ರಸ್ತೆ ಕವಲೊಡೆದಿದೆ. ಹೊಸಪೇಟೆ ನಗರ ಪ್ರಾಧಿಕಾರದವರು ಹಂಪಿಗೆ ಸ್ವಾಗತ ಕೋರುವ ಬೃಹದಾಕಾರದ ದ್ವಾರವನ್ನು ಇಲ್ಲೆ ನಿರ್ಮಿಸಿದ್ದಾರೆ. ೧೯೯೯ರ ಕೊನೆಯಲ್ಲಿ ಈ ರಸ್ತೆ ಮತ್ತು ಅದಕ್ಕೆ ಸಂಬಂಧಿಸಿದ ಆನೆಗೊಂದಿ ಬಳಿ ಆಗುತ್ತಿರುವ ಸೇತುವೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚರ್ಚೆಯ ವಸ್ತುವಾಗಿತ್ತು.[2] ಹಂಪಿಗೆ ಹೋಗುವ ರಸ್ತೆಯ ಎಡಭಾಗದಲ್ಲಿ ದ್ವಾರದಿಂದ ಸ್ವಲ್ಪ ದೂರದಲ್ಲಿ ಜ್ಯೋತಿನಗರವಿದೆ. ಜ್ಯೋತಿನಗರ ಹಳ್ಳಿಯ ಬದುಕಿಗೆ ಇತ್ತೀಚಿನ ಸೇರ್ಪಡೆ. ಹೊಸಪೇಟೆ ಚರ್ಚ್ ಅಧಿಕಾರಿಗಳು ಇಲ್ಲಿ ಕೆಲವು ಎಕರೆ ಭೂಮಿ ಕೊಂಡಿದ್ದರು. ಇತ್ತೀಚಿನವರೆಗೂ ಅದು ಖಾಲಿಯೇ ಇತ್ತು. ಎರಡು ವರ್ಷಗಳ ಹಿಂದೆ ಅಲ್ಲೊಂದು ಚರ್ಚ್ ಕಟ್ಟಿಸಿದರು. ೧೯೯೭ರಲ್ಲಿ ಡಾಲ್ಮಿಯಾ ಗಣಿ ಮಾಲಿಕರು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಮುಚ್ಚಿದಾಗ ಅದರಲ್ಲಿ ದುಡಿಯುತ್ತಿದ್ದ ಸುಮಾರು ೩೨ ಕ್ರಶ್ಚಿಯನ್ ಕುಟುಂಬಗಳು ವಸತಿಗಾಗಿ ಚರ್ಚ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಚರ್ಚು ತನ್ನ ಸುತ್ತಲಿನ ಪ್ರದೇಶದಲ್ಲಿ ೩೨ ಮನೆಗಳನ್ನು ಕಟ್ಟಿಸಿ ನಿರ್ವಸತಿಗರಿಗೆ ವಸತಿ ವ್ಯವಸ್ಥೆ ಮಾಡಿತು. ಜ್ಯೋತಿನಗರದ ಕೆಳಭಾಗಕ್ಕೆ ಹೊಲಗಳಿವೆ. ಹಂಪಿಯ ರಸ್ತೆಯಲ್ಲೆ ಮುಂದುವರೆದರೆ ಸ್ವಲ್ಪ ದೂರ ಹೊಲಗಳು ನಂತರ ಹಳ್ಳಿಯ ವ್ಯಾಪ್ತಿಗೆ ಸೇರಿದ ಅರಣ್ಯ ಪ್ರದೇಶ ಶುರುವಾಗುತ್ತದೆ. ಅಲ್ಲಿರುವ ಬೋರ್ಡ್ ಆ ಜಾಗವನ್ನು ಅರಣ್ಯ ಪ್ರದೇಶವೆಂದು ಸಾರುತ್ತಿದೆ. ಆದರೆ ಅರಣ್ಯದಲ್ಲಿ ಕಂಡುಬರುವ ಮರಗಿಡಗಳು ಆ ಪ್ರದೇಶದಲ್ಲಿ ಎಲ್ಲೂ ಇಲ್ಲ.

ಮಹದ್ವಾರದ ಬಳಿ ಹಿಂತಿರುಗಿ ಬಂದರೆ, ಅಲ್ಲಿಂದ ಹೆದ್ದಾರಿಯ ಎಡಭಾಗಕ್ಕೆ ಸುಮಾರು ೧೫ ಮೀಟರು ದೂರದಲ್ಲಿ ತಿಮ್ಮಪ್ಪನ ಗುಡಿ ಪ್ರತ್ಯೇಕವಾಗಿ ಗೋಚರಿಸುತ್ತದೆ. ಇದು ವಿಜಯನಗರ ಕಾಲದ ಗುಡಿ, ಗುಡಿಯ ಸುತ್ತಲಿನ ಗೋಡೆ ಬಲಭಾಗದಲ್ಲಿ ಕುಸಿದಿರುವುದರಿಂದ ಗುಡಿಗೆ ಎರಡು ಪ್ರವೇಶದ್ವಾರಗಳು ಇರುವಂತೆ ಕಾಣುತ್ತಿದೆ. ಸುತ್ತು ಗೋಡೆಯೊಳಗೆ, ಗುಡಿಯ ಬಳಭಾಗದಲ್ಲಿ, ಸಂಸದರ ಧನ ಸಹಾಯದಿಂದ ಒಂದು ಸಮುದಾಯ ಭವನ ಎದ್ದಿದೆ. ಡಾಲ್ಮಿಯಾ ಗಣಿ ಬಳಿಯಲ್ಲಿ ನಡೆಯುತ್ತಿದ್ದ ಪ್ರಾಥಮಿಕ ಶಾಲೆಯನ್ನು ಈ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಈ ಗುಡಿಯ ಮುಖ್ಯ ದ್ವಾರದಿಂದ ಒಂದು ಕಚ್ಛಾರಸ್ತೆ ಗ್ರಾಮ ಚಾವಡಿಯನ್ನು ಸೇರುತ್ತದೆ. ಈ ರಸ್ತೆ ಹಿಂದೆ, ಮನೆಗಳು ಕಡಿಮೆ ಇದ್ದ ಸಂದರ್ಭದಲ್ಲಿ, ವಿಶಾಲವಾಗಿತ್ತೋ ಏನೋ. ಪಕ್ಕದಲ್ಲಿರುವ ಮನೆಗಳು ರಸ್ತೆಯನ್ನು ಎರಡು ಬದಿಯಿಂದ ಆಕ್ರಮಿಸಿಕೊಂಡಿರುವುದರಿಂದ ಈಗ ಇದು ರಸ್ತೆ ಹೋಗಿ ಓಣಿಯಾಗಿದೆ. ಗುಡಿಯ ಮುಖ್ಯ ದ್ವಾರಕ್ಕೆ ತಾಗಿಕೊಂಡಂತೆ ಎರಡು ಲಿಂಗಾಯತರ ಮನೆಗಳನ್ನು ಬಿಟ್ಟರೆ ಹೆಚ್ಚಿನವು ಮುಸ್ಲಿಮರ ಮನೆಗಳು. ಇದೇ ಓಣಿಯಲ್ಲಿ ಹಿಂದೆ ಗೌಡಿಕೆ ನಡೆಸುತ್ತಿದ್ದ ಬಾಬನ ಗೌಡನ ಮನೆಯಿದೆ. ಈಗ ಅವರಿಲ್ಲ. ಹಳೇ ಮನೆಯ ಸ್ಥಳದಲ್ಲಿ ಅವರ ಮಕ್ಕಳ ಹೊಸ ಮನೆಗಳು ಎದ್ದಿವೆ. ಗುಡಿಯ ಎದುರಿನ ರಸ್ತೆಯಲ್ಲಿ ನಡೆದು ಸ್ವಲ್ಪ ಮುಂದುವರಿದರೆ ಎಡಭಾಗಕ್ಕೆ ಕುರುಬರ ಓಣಿ ಸಿಗುತ್ತದೆ. ಐವತ್ತರ ದಶಕದಲ್ಲಿ ಆಂಧ್ರದ ಕಡೆಯಿಂದ ಇಲ್ಲಿಗೆ ಬಂದ ಕುರುಬರ ಕುಟುಂಬಗಳೇ ಇಲ್ಲಿ ಹೆಚ್ಚು ಇವೆ. ಗ್ರಾಮ ಚಾವಡಿಯಲ್ಲಿ ಹಿಂಭಾಗದಲ್ಲಿ ಉಪ್ಪಾರರ ಓಣಿ ಇದೆ. ಉಪ್ಪಾರರ ಓಣಿ ಎಂದು ಹೆಸರಿದ್ದರೂ ಇಲ್ಲಿ ಲಿಂಗಾಯತರ ಮನೆಗಳೇ ಹೆಚ್ಚು ಇವೆ. ಇದೆ ದಾರಿಯಲ್ಲಿ ಸ್ವಲ್ಪ ಮುಂದುವರಿದರೆ ಗ್ರಾಮ ಚಾವಡಿ ತಲುಪುತ್ತೇವೆ. ಗ್ರಾಮ ಚಾವಡಿಗೆ ಪ್ರತ್ಯೇಕ ಕಟ್ಟಡ ಇಲ್ಲ. ಅಗಸಿ ಬಾಗಿಲಿನ ಎರಡು ಬದಿಗಳಿಗೂ ತಾಗಿಕೊಂಡಂತೆ ಎರಡು ಕೊಠಡಿಗಳಿವೆ. ಇವೆ ಇಲ್ಲಿನ ಗ್ರಾಮ ಚಾವಡಿ ಕಟ್ಟಡಗಳು. ಅಗಸಿ ಬಾಗಿಲಿನ ಬಲಭಾಗಕ್ಕಿರುವ ಕೊಠಡಿಯಲ್ಲಿ ಒಂದು ಕಾಲದಲ್ಲಿ ಮಂಡಲ ಪಂಚಾಯತ್ ಕಚೇರಿ ಇತ್ತು. ೧೯೮೭ರಲ್ಲಿ ಮಲ್ಲಪ್ಪನವರು ಮಂಡಲ ಪ್ರಧಾನರಾಗಿದ್ದರು. ಈ ಕಚೇರಿಯಿಂದಲೇ ತಮ್ಮ ಮಂಡಲ ಪಂಚಾಯತ್ ವ್ಯವಹಾರಗಳನ್ನು ನಡೆಸಲು ತೀರ್ಮಾನಿಸಿದ್ದರು. ಒಂದು ವಿಧದಲ್ಲಿ ಇದು ಈಗಿನ ಗ್ರಾಮ ಪಂಚಾಯತ್ ಕಚೇರಿಗೆ ಹೋಲಿಸಿದರೆ ಊರಿನ ಮಧ್ಯಭಾಗದಲ್ಲೆ ಇದು. ಆದಾಗ್ಯೂ ಊರ ಪ್ರಮುಖರಲ್ಲಿ ಪಂಚಾಯತ್ ಕಚೇರಿ ಇಲ್ಲಿ ನಡೆಯುವುದನ್ನು ವಿರೋಧಿಸಿದರು. ಮಂಡಲ ಕಚೇರಿಯನ್ನು ಪುನಃ ಈಗಿನ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಎಡ ಭಾಗದ ಕೊಠೆಡಿ ವಿವಿಧ ಉದ್ದೇಶಗಳಿಗೆ ಉಪಯೋಗವಾಗುತ್ತಿದೆ. ಅದು ಮೊಹರಂ ಹಬ್ಬದ ಸಂದರ್ಭದಲ್ಲಿ ಮಸೀದಿ ಕೊಠಡಿಯಾಗಿ ಕಾರ್ಯನಿರ್ವಹಿಸುತ್ತದೆ.[3] ಉಳಿದ ದಿನಗಳಲ್ಲಿ ಉರ್ದು ಶಾಲೆ ನಡೆಯುತ್ತಿದೆ. ಮೊಹರಂ ಕೊಠಡಿಯೆದುರು ಸಣ್ಣ ಗಾತ್ರದ ಮೊಹರಂ ಮೈದಾನ. ಇದರ ಮಧ್ಯ ಭಾಗದಲ್ಲಿ, ಕೊಠಡಿಯ ಸರಿ ಎದುರಿ, ಅಲಾಯಿ ಕುಣಿ. ಕಳೆದ ಮೊಹರಂ ಹಬ್ಬದಲ್ಲಿ ಸುಟ್ಟ ಕಟ್ಟಿಗೆಯ ಬೂದಿರಾಶಿ ಅಲಾಯಿಕುಣಿ ತುಂಬಾ ತುಂಬಿದೆ. ಅಲಾಯಿಕುಣಿಯ ಸ್ವಲ್ಪ ದೂರದಲ್ಲೇ ಇಮಾಮ್ ಸಾಬರ ಗೋರಿ ಇದೆ. ಅಲ್ಲಲ್ಲಿ ಕುಸಿದಿರುವ ಮೋಟು ಗೋಡೆ ನಾಲ್ಕು ಬದಿಯಿಂದಲೂ ಮೊಹರಂ ಮೈದಾನವನ್ನು ಸುತ್ತುವರಿದಿದೆ. ತಿಮ್ಮಪ್ಪನ ಗುಡಿಯಿಂದ ಬಂದ ಕಚ್ಚಾ ರಸ್ತೆ ಗ್ರಾಮ ಛಾವಡಿಯಿಂದ ಮುಂದಕ್ಕೆ ವಿಶಾಲವಾಗಿದೆ. ಇದು ಹಳ್ಳಿಯ ಬಜಾರ್ ರಸ್ತೆ, ಈಗಿನ ಹೆದ್ದಾರಿ ಆಧುನಿಕತೆಯ ಸಂಕೇತವಾದರೆ ಈ ಬಜಾರ್ ರಸ್ತೆ ಸಾಂಪ್ರದಾಯದ ಸಂಕೇತ. ಹೆದ್ದಾರಿ ಈ ಹಳ್ಳಿಯಲ್ಲಿ ಹಾದು ಹೋಗದಿರುತ್ತಿದ್ದರೆ ಈ ಬಜಾರ್ ರಸ್ತೆಯ ಇಲ್ಲಿನ ಹೆದ್ದಾರಿ. ಊರಿನ ಎಲ್ಲಾ ಹಬ್ಬಗಳ ಸಂದರ್ಭದಲ್ಲೂ ಬರುವ ವ್ಯಾಪಾರಿಗಳು ಈ ಬಜಾರ್ ರಸ್ತೆಯಲ್ಲೇ ಅಂಗಡಿ ಇಡುತ್ತಾರೆ. ಅಂಕ್ಲಮ್ಮನ ಜಾತ್ರೆ, ಊರ ಹೊರಗಿನ ಗುಡಿಯಲ್ಲಿ ನಡೆಯುತ್ತದೆ.[4] ಆದರೆ ಸಂತೆ ಮಾತ್ರ ಈ ಬೀದಿಯಲ್ಲೇ ಸೇರುತ್ತದೆ. ಈ ರಸ್ತೆಯ ಎರಡೂ ಬದಿಗೂ ಲಿಂಗಾಯತರ, ಅದೂ ಹಿಂದಿನ ಪ್ರತಿಷ್ಠಿತ ಲಿಂಗಾಯತ ಕುಟುಂಬಗಳ ಮನೆಗಳಿವೆ. ಈ ರಸ್ತೆ ಆಂಜನೇಯ ಗುಡಿಯೆದುರು ಬಲಕ್ಕೆ ತಿರುಗಿ ಹೆದ್ದಾರಿ ಸೇರುತ್ತದೆ.

ಕುರುಬರ ಸಮುದಾಯದವರು ಪ್ರತಿ ವರ್ಷ ಗಾದಿಲಿಂಗಪ್ಪ ಪುರಾಣವನ್ನು ಈ ಗುಡಿಯಲ್ಲೆ ಪಠಿಸುವುದು. ಇದೇನು ಆದಿಯಿಂದಲ್ಲೇ ಇದ್ದ ಸಂಪ್ರದಾಯವಲ್ಲ. ಹೀಗೆ ಐದು ವರ್ಷಗಳ ಹಿಂದೆ ಆರಂಭವಾಗಿದೆ. ಸುಮಾರು ೯ ದಿನಗಳ ಈ ಕಾರ್ಯಕ್ರಮದಲ್ಲಿ ಊರಿನವರೆಲ್ಲಾ ಸೇರುತ್ತಾರೆ. ಕೊನೆಯ ದಿನ ಸೇರಿದವರಿಗೆಲ್ಲಾ ಅನ್ನ ಸಂತರ್ಪಣೆ ಇದೆ. ಸಾಮೂಹಿಕ ವಿವಾಹಗಳು ಇದೆ ಸಂದರ್ಭದಲ್ಲಿ ಜರುಗುತ್ತವೆ. ವಧುವರರಿಗೆ ಉಚಿತ ಬಟ್ಟೆ, ತಾಳಿ, ಇತ್ಯಾದಿಗಳನ್ನು ಕೊಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹಗಳು ಬಡೆಯುತ್ತಿವೆ. ಅವುಗಳಲ್ಲಿ ಬಾಲ್ಯವಿವಾಹಳ ಸಂಖ್ಯೆ ಕಡಿಮೆ ಇರಲಿಲ್ಲ. ಸಮಾಧಾನದ ಸಂಗತಿಯೆಂದರೆ ಇತ್ತೀಚಿನ ವರ್ಷಗಳಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿರುವುದು. ಈ ವರ್ಷ ನಡೆದ ಸಾಮೂಹಿಕ ವಿವಾಹದಲ್ಲಿ ಒಂದು ಬಾಲ್ಯ ವಿವಾಹವೂ ಇರಲಿಲ್ಲ. ಆಂಜನೇಯ ಗುಡಿ ಹಿಂಭಾಗದಿಂದ ಕಚ್ಚಾ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದರೆ ಊರು ಕೆರೆ ಸಿಗುತ್ತದೆ. ಕೆರೆ ಪಕ್ಕ ಈಶ್ವರನ ಗುಡಿಯಿದೆ. ಹಾಗಾಗಿ ಊರವರಿಗೆ ಇದು ಈಶ್ವರನ ಕರೆಯಾಗಿದೆ. ಮಳೆಗಾಲದಲ್ಲಿ ನೀರು ತುಂಬುತ್ತದೆ. ಫೆಬ್ರವರಿ ಮಾರ್ಚ್ ಆಗುವಷ್ಟರಲ್ಲಿ ಕೆರೆ ಖಾಲಿ. ಕೃಷಿಗೆ ಈ ನೀರು ಉಪಯೋಗವಾಗುವುದಿಲ್ಲ. ದನಕರುಗಳ ಮತ್ತು ಮನುಷ್ಯರ ಸ್ನಾನ ಇಲ್ಲೇ ನಡೆಯುತ್ತದೆ. ಊರವರ ಬಟ್ಟೆಗಳನ್ನು ಅಗಸರು ಇಲ್ಲೆ ಶುಚಿ ಮಾಡುವುದು. ಇದಕ್ಕಾಗಿ ಅಗಸರಿಗೆ ವರ್ಷಕ್ಕೆ ೪೦ ಸೇರು ಜೋಳ ಅಥವಾ ಸಜ್ಜೆ ಅಥವಾ ನವಣೆ ಕೊಡುವ ಕ್ರಮ ಈಗಲೂ ಇದೆ. ಕೆರೆ ಕೋಡಿಯ ಕೆಳಗೆ ಸ್ಮಶಾನ ಭೂಮಿ. ಊರವರ ಪ್ರಕಾರ ಇದು ಶಾನುಭೋಗರ ಭೂಮಿ. ಅವರೆ ಊರವರಿಗೆ ಉದಾರವಾಗಿ ಬಿಟ್ಟಿದ್ದಾರೆ ಎನ್ನುವ ನಂಬಿಕೆ. ಕೆರೆಗೆ ಹೋಗುವ ರಸ್ತೆಯ ಅಕ್ಕಪಕ್ಕದ ಭೂಮಿಯನ್ನು ಸ್ಥಳೀಯರು ಆಕ್ರಮಿಸಿದ್ದಾರೆ. ಮುಳ್ಳುಗಂಟಿಗಳ ಬೇಲಿಯಿಂದ ತಮ್ಮ ದನಕರುಗಳಿಗೆ ಮೇವು ಸಂಗ್ರಹಕ್ಕಾಗಿ ಬಣವೆ ಹಟ್ಟಿಗಳನ್ನು ಇಲ್ಲೆ ಮಾಡಿಕೊಂಡಿದ್ದಾರೆ. ಕೆರೆಯ ಕೆಳ ಭಾಗದ ಮಣ್ಣು (ಇಲ್ಲೇ ಸ್ಮಶಾನ ಇರುವುದು) ಗೋಡೆ ಮೆತ್ತಲು ಅನುಕೂಲವಂತೆ. ಮಣ್ಣು ತೆಗೆದು ತೆಗೆದು ಹೊಂಡಗಳೇ ಆಗಿವೆ. ಸ್ಮಶಾನದ ಭೂಮಿಯನ್ನು ನೀವು ಯಾಕೆ ಆಕ್ರಮಿಸಿಕೊಂಡಿದ್ದೀರೆಂದು ಕೇಳಿದರೆ ನಾವು ಈ ಜಾಗಕ್ಕೆ ಶಾನುಭೋಗರ ಮನೆಯವರಿಗೆ ಕೊಡಬೇಕಾದ್ದನ್ನು ಕೊಟ್ಟೇ ಬಣವೆ ಹಟ್ಟಿಗಳನ್ನು ಮಾಡಿಕೊಂಡಿದ್ದೇವೆ ಎಂಬ ಉತ್ತರ ಬಂತು. ಅದು ಸರಿ. ಆದರೆ ಕೆರೆ ಕೆಳ ಭಾಗದಿಂದ ಈ ರೀತಿ ಮಣ್ಣು ತೆಗೆದರೆ ಕೋಡಿ ಹರಿಯುವುದಿಲ್ಲವೆ? ಎಂಬ ಪ್ರಶ್ನೆಗೆ ಈ ಮಣ್ಣು ಗೋಡೆ ಮೆತ್ತಲು ಅನುಕೂಲವಾಗಿದೆ ಎಂಬುದು ಅವರ ಉತ್ತರವಾಗಿತ್ತು.

ಕೋಡಿ ಮಣ್ಣಿಗೂ ಗೋಡೆಗೂ ಇರುವ ಸಂಬಂಧ ಅರ್ಥವಾಗಬೇಕಾದರೆ ಇಲ್ಲಿನ ಮನೆಗಳ ಬಗೆಗೆ ಸ್ವಲ್ಪ ತಿಳಿದಿರಬೇಕು. ಪ್ರಕೃತ್ತಿದತ್ತವಾದ ಕಲ್ಲುಗಳನ್ನು ಗೋಡೆ ಕಟ್ಟಲು ಉಪಯೋಗಿಸುತ್ತಾರೆ. ಕಲ್ಲುಗಳನ್ನು ಕೆತ್ತಿ ಅವುಗಳ ಉಬ್ಬು ತಗ್ಗುಗಳನ್ನು ತೆಗೆಯದಿರುವುದರಿಂದ ಗೋಡೆಯ ಉಬ್ಬು ತಗ್ಗುಗಳು ಜೀವಂತ ಇರುತ್ತವೆ. ಈ ಉಬ್ಬು ತಗ್ಗುಗಳನ್ನು ಮುಚ್ಚಲು ಸಿಮೆಂಟ್ ಬಳಸುವ ಕ್ರಮ ಹಿಂದೆ ಇರಲಿಲ್ಲ. ಈಗ ಸಿಮೆಂಟ್ ಇದೆ, ಅದರ ಉಪಯೋಗದ ಅರಿವೂ ಜನರಿಗಿದೆ. ಆದರೆ ಸಿಮೆಂಟ್ ಬಳಸುವಷ್ಟು ತಾಖತ್ತು ಉಳ್ಳವರು ಕಡಿಮೆ ಇದ್ದಾರೆ. ಅಂತವರಿಗೆಲ್ಲಾ ಏರಿ ಕೆಳಭಾಗದ ಮಣ್ಣು ಸಿಮೆಂಟಾಗಿ ಕೆಲಸ ಮಾಡುತ್ತಿದೆ. ಗೋಡೆಯ ಒಳಭಾಗ, ಹಿಂಭಾಗ ಮತ್ತು ಮುಂಭಾಗಕ್ಕೆ ಮಾತ್ರ ಈ ಮಣ್ಣು ಅಗತ್ಯ. ಗುಂಪು ಮನೆಗಳಿರುವ ಈ ಕಡೆ ಒಂದು ಮನೆಯ ಎಡ ಮತ್ತು ಬಲಭಾಗದ ಗೋಡೆಗಳು ಮತ್ತೊಂದು ಮನೆಯ ಗೋಡೆ. ಆದುದರಿಂದ ಆ ಗೋಡೆಗಳ ಹೊರಭಾಗಕ್ಕೆ ಆವೆ ಮಣ್ಣು ಮೆತ್ತುವ ಅವಶ್ಯಕತೆಯಿಲ್ಲ. ಮನೆ ಒಳಭಾಗದ ನೆಲಕ್ಕೆ ಬಂಡೆ ಹಾಕುವುದು ಅನುಕೂಲತೆಯ ಲಕ್ಷಣ. ಹಣ ಕೊಟ್ಟು ಬಂಡೆ ಹಾಸಲು ಸಾಧ್ಯವಿಲ್ಲದವರು ನಿರಾಶರಾಗುವ ಅವಶ್ಯಕತೆಯಿಲ್ಲ. ಬೀದಿಗೆ ಹಾಕಿದ ಬಂಡೆಯನ್ನು ಎಬ್ಬಿಸಿ ತಮ್ಮ ಮನೆ ನೆಲಕ್ಕೆ ಹಾಕಿಕೊಳ್ಳುವ ಕ್ರಮವಿದೆ. ಅದೇ ಮಾರ್ಗ ಬಳಸಿ ಕೆಲವರು ತಮ್ಮ ಮನೆಗಳನ್ನು ಅಂದಗೊಳಿಸಿದ್ದಾರೆ. ಮರದ ಅಥವಾ ಬಿದಿರಿನ ಅಡ್ಡ ಹಾಕಿ, ಅದರ ಮೇಲೆ ತಡಿಕೆ ಹಾಸಿ, ತಡಿಕೆಯ ಮೇಲೆ ಆವೆ ಮಣ್ಣು ಮೆತ್ತುವುದು ಛಾವಣಿ ನಿರ್ಮಾಣದ ಮೊದಲ ಹಂತ. ಆವೆ ಮಣ್ಣಿನ ಮೇಲುಭಾಗಕ್ಕೆ ನೀರು ಜಾರಿಹೋಗಲು ಸವಲು ಸವರಿದರೆ ಛಾವಣಿ ರೆಡಿ. ಹೀಗೆ ಏರಿ ಕೆಳಗಿನ ಮಣ್ಣು ಬಹುಪಯೋಗಿ.

ಊರವರ ಸ್ಮಶಾನಕ್ಕೆ ತಾಗಿಕೊಂಡೇ ಮುಸ್ಲಿರ ಸ್ಮಶಾನ. ಇದು ಹಿಂದೆ ಗೌಡಿಕೆ ಮಾಡುತ್ತಿದ್ದ ಮುಸ್ಲಿಂ ಕುಟುಂಬದವರಿಗೆ ಸೇರಿದ ಭೂಮಿ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸ್ಮಶಾನದ ಬಗೆಗೂ ತಕರಾರು ಎದ್ದಿದೆ. ಗೌಡರ ಕುಟುಂಬದವರು ಪ್ರಕಾರ ಹಿಂದೆ ಕೆಲವೇ ಕುಟುಂಬಗಳಿರುವಾಗ ಒಂದು ಹೊಲದ ಸ್ವಲ್ಪ ಭಾಗವನ್ನು ಸ್ಮಶಾನವಾಗಿ ಉಪಯೋಗಿಸಲು ಅವಕಾಶ ಕೊಟ್ಟಿದ್ದೆವು. ಈಗ ಮುಸ್ಲಿಂ ಕುಟುಂಬಗಳು ಸಂಖ್ಯೆ ಅರುವತ್ತು ದಾಟಿದೆ. ಇವರಿಗೆಲ್ಲಾ ನಮ್ಮ ಹೊಲವನ್ನು ಬಿಟ್ಟರೆ ನಮ್ಮ ಹೆಣ ಇಡಲು ಬೇರೆ ಜಾಗ ಹುಡುಕಬೇಕಾಗುತ್ತದೆ. ಮುಸ್ಲಿಮರು ಸ್ಮಶಾನಕ್ಕಾಗಿ ಬೇರೆ ಭೂಮಿಯನ್ನು ಹುಡುಕಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಈ ತಕರಾರಿಗೆ ಮುಸ್ಲಿಂ ಸಮುದಾಯದೊಳಗಿನ ಹಲವಾರು ಬೆಳವಣಿಗೆಗಳೆ ಕಾರಣ. ಅದನ್ನು ಮುಂದೆ ವಿವರಿಸಿದ್ದೇನೆ. ಅಂಜನೇಯ ಗುಡಿ ರಸ್ತೆ ಹೆದ್ದಾರಿ ಸೇರುವಲ್ಲಿ ಒಂದು ಅರಳಿಕಟ್ಟೆಯಿದೆ. ಸಂಜೆ ಹೊತ್ತು ಊರ ಯುವಕರು ಸೇರಿ ಪಟ್ಟಾಂಗ ಹೊಡೆಯುವ ತಾಣ ಇದು. ಈ ಅರಳಿಕಟ್ಟೆ ಎದುರು ಹೆದ್ದಾರಿಯಿಂದ ಬಲಭಾಗಕ್ಕೆ ಹೊರಡುವ ಒಂದು ಕಚ್ಚಾ ರಸ್ತೆ ರೈಲ್ವೆ ಸ್ಟೇಷನಿಗೆ ಹೋಗುತ್ತದೆ. ಈ ರಸ್ತೆ ಹೆದ್ದಾರಿಯಿಂದ ಕವಲೊಡೆಯುವಲ್ಲಿ ಐದು ದಿನಸಿ ಅಂಗಡಿಗಳು ಮತ್ತು ಒಂದು ಫ್ಲೋರ್ ಮಿಲ್ ಇದೆ. ಇಷ್ಟು ಕಿರಾಣಿ ಅಂಗಡಿಗಳು ಇಲ್ಲೇ ಆಗಿರುವುದಕ್ಕೆ ಕಾರಣವಿದೆ. ರೈಲ್ವೇ ಸ್ಟೇಷನ್ ಈ ಹಳ್ಳಿಯ ಆದಾಯದ ಒಂದು ಮುಖ್ಯ ಮೂಲ. ವಾರಕ್ಕೆ ಎರಡು ಸಾರಿ ಬರುವ ವ್ಯಾಗನ್‌ಗಳು ಇಡೀ ಹಳ್ಳಿಗೆ ಜೀವ ತುಂಬುತ್ತವೆ. ವ್ಯಾಗನ್ ಲೋಡಿಂಗ್ ಮುಗಿಸಿ ಬರುವ ಬಹುತೇಕ ಕಾರ್ಮಿಕರ ವ್ಯಾಪಾರ ಈ ಬೀದಿಯಲ್ಲಿರುವ ಅಂಗಡಿಗಳಲ್ಲಿ. ಸ್ಟೇಷನ್ ರಸ್ತೆಯ ಆರಂಭದಲ್ಲಿ ಬಲಭಾಗಕ್ಕೆ, ಹೆದ್ದಾರಿಯ ಮನೆಗಳ ಹಿಂಭಾಗಕ್ಕೆ, ಚಪ್ಪರದ ಹಳ್ಳಿಯಿದೆ. ಹಿಂದೆ ಇಲ್ಲಿ ಜೋಪಡಿ ಪಟ್ಟಿಗಳೇ ಇದ್ದುದರಿಂದ ಇಲ್ಲಿಗೆ ಚಪ್ಪರದ ಹಳ್ಳಿ ಎಂದು ಹೆಸರು ಬಂತು. ಈಗ ಜೋಪಡಿ ಪಟ್ಟಿಗಳು ಕಡಿಮೆ ಆಗಿವೆ. ಅವುಗಳ ಸ್ಥಾನದಲ್ಲಿ ಗೋಡೆ ನಿಲ್ಲಿಸಿ, ಶೀಟ್ ಹೊದೆಸಿದ ಅಥವಾ ಮಣ್ಣು ಹಾಸಿದ ಛಾವಣಿ ಮನೆಗಳು ಕಾಣಸಿಗುತ್ತವೆ. ಚಪ್ಪರದ ಹಳ್ಳಿ ಹೆಸರು ಈಗ ಅನ್ವಯವಾಗುವ ಸ್ಥಳವೇ ಬೇರೆ. ಹಿಂದಿನ ಚಪ್ಪರದ ಹಳ್ಳಿಯ ಕೆಳಭಾಗದಲ್ಲಿ ಆಶ್ರಯ ಸೈಟಿನಲ್ಲಿ ಹಲವಾರು ಜೋಪಡಿ ಪಟ್ಟಿಗಳು ತಲೆಯೆತ್ತುತ್ತಿವೆ. ಈಗ ಚಪ್ಪರದ ಹಳ್ಳಿ ಹೆಸರು ಅನ್ವಯವಾಗಬೇಕಾದ್ದು ಈ ಸ್ಥಳಕ್ಕೆ. ಆದರೆ ಅಲ್ಲಿನ ಜನರು ಆ ಸ್ಥಳಕ್ಕೆ ಅನ್ನಪೂರ್ಣೆಶ್ವರಿ ನಗರ ಎಂದು ಹೆಸರಿಟ್ಟಿದ್ದಾರೆ. ಒಂದು ವಿಧದಲ್ಲಿ ಆ ಹೆಸರು ಸರಿಯಾಗಿಯೇ ಇದೆ. ಅಲ್ಲಿ ಇರುವವರೆಲ್ಲಾ ಶ್ರಮಿಕರು. ಅವರ ದುಡಿತ ಊರಿನ ಮತ್ತು ಹೊರಗಿನ ದುಡಿಸಿಕೊಳ್ಳವವರಿಗೆ ಊಟ ಕೊಡುತ್ತಿದೆ. ನಿರ್ವಸತಿಗರಿಗೆ ಸೈಟು ವಿತರಣೆಗಾಗಿ ಆಶ್ರಯ ಯೋಜನೆಯ ಅಡಿಯಲ್ಲಿ ೧೯೮೯ರಲ್ಲೇ ಈ ಭೂಮಿ ಖರೀದಿಯಾಗಿತ್ತು. ಪ್ರತಿಬಾರಿ ಸೈಟು ಹಂಚಿಕೆಯ ಸಂದರ್ಭದಲ್ಲಿ ಗಲಾಟೆಯಾಗಿ ವಿತರಣೆ ಮುಂದಕ್ಕೆ ಹೋಗುತ್ತಿತ್ತು. ನಿರ್ವಸತಿಗರು ಸೈಟಿಗಾಗಿ ಕಾದು ಕಾದು ಸುಸ್ತಾದರು. ಆ ಸಂದರ್ಭದಲ್ಲಿ ಊರಲ್ಲಿ ಕೆಲವರು ರೈತ ಸಂಘದ ಮುಖಂಡತ್ವದಲ್ಲಿ ಈ ಸೈಟುಗಳನ್ನು ಅತಿಕ್ರಮಿಸಿ ಗುಡಿಸಲು ಹಾಕಿಕೊಂಡರು. ೧೯೯೯ರಲ್ಲಿ ಈ ಸೈಟಿನ ವಿಲೇವಾರಿ ನಡೆದು ಸುಮಾರು ೧೦೧ ಕುಟುಂಬಗಳಿಗೆ ಪಟ್ಟಾ ಕೊಡಲಾಯಿತು. ಈ ಹಿಂದೆ ಅತಿಕ್ರಮಿಸಿದವರಲ್ಲಿ ಬಡತನದ ರೇಖೆಗಿಂತ ಕೆಳಗಿನವರೆ ಹೆಚ್ಚು ಇದ್ದುದರಿಂದ ಅವರ ಸ್ವಾಧೀನತೆಯನ್ನು ಅಧಿಕೃತಗೊಳಿಸಲಾಯಿತು.

ಆಶ್ರಯ ಯೋಜನೆಯ ಈ ಜೋಪಡಿ ಪಟ್ಟಿಗಳ ಎದುರುಗಡೆ ರಸ್ತೆ ಮತ್ತೊಂದು ಮಗ್ಗುಲಿಗೆ ಸುಮಾರು ಏಳೆಂಟು ಎಕರೆ ಭೂಮಿ ಖಾಲಿ ಇದೆ. ಈ ಭೂಮಿಯನ್ನು ಹಿಂದೆ ವ್ಯಾಗನ್ ಗುತ್ತಿಗೆದಾರರೊಬ್ಬರ ಕೊಂಡಿದ್ದರು; ಈಗ ಅದು ಬೇರೆ ಯಾರದೋ ಹೆಸರಿನಲ್ಲಿದೆ. ಚಪ್ಪರದ ಹಳ್ಳಿಯ ಜನರು ಅದನ್ನು ಅತಿಕ್ರಮಿಸಬಹುದೆಂದು ಎತ್ತರದ ಕೋಡೆ ಕಟ್ಟಿದ್ದಾರೆ. ಸುತ್ತಲಿನ ಜನರು ಈ ಖಾಲಿ ಜಗವನ್ನು ಅತಿಕ್ರಮಿಸಿ ಗುಡಿಸಲು ಕಟ್ಟಿಕೊಳ್ಳಲಿಲ್ಲ; ಅದನ್ನು ಪಾಯಿಖಾನೆಯಾಗಿ ಬಳಸುತ್ತಿದ್ದಾರೆ. ಈ ಖಾಲಿ ಭೂಮಿಗೆ ತಾಗಿಕೊಂಡಂತೆ ರೈಲ್ವೆ ಸ್ಟೇಷನ್ ಕಡೆಗೆ ಮನೆಗಳ ಎರಡು ಸಾಲುಗಳಿವೆ. ಇಲ್ಲೇ ಒಂದು ಕಟ್ಟಡದಲ್ಲಿ ಮೂರು ಮನೆಗಳಿವೆ. ಆ ಮೂರರಲ್ಲಿ ಒಂದು ಪ್ರೌಡಶಾಲೆ. ಮನೆಯ ಜಗಲಿಯಲ್ಲಿ ಎಂಟನೆ ತರಗತಿ, ಮಧ್ಯದ ಕೊಠಡಿ ಬೋಧಕೇತರ ಮತ್ತು ಮುಖ್ಯೋಪಾಧ್ಯಾಯರ ಕೊಠಡಿಯಾಗಿ ಕೆಲಸ ಮಾಡುತ್ತಿದೆ. ಈ ಪ್ರೌಡಶಾಲೆಯ ಮುಂದಿನ ಸಾಲಿನಲ್ಲಿ ರೈಲ್ವೆ ನೌಕರರ ವಸತಿ ಗೃಹಗಳಿವೆ. ಅದೇ ಸಾಲಿನಲ್ಲಿ ವ್ಯಾಗನ್ ಲೋಡಿಂಗ್‌ಗೆ ಬಂದಿರುವ ವಲಸೆ ಕಾರ್ಮಿಕರ ಗುಡಿಸಲುಗಳಿವೆ. ಈ ಗುಡಿಸಲುಗಳ ಸಾಲು ಹರಿಜನಕೇರಿಯ ಹಿಂಭಾಗಕ್ಕೆ ಸೇರುತ್ತದೆ.

ಬಳ್ಳಾರಿ ಕಡೆಯಿಂದ ಬರುವಾಗ ಎಡಬಾಗಕ್ಕೆ ಸಿಗುವ ಮೊದಲ ಕಟ್ಟಡಗಳೆಂದರೆ ಹರಿಜನ ಕೇರಿ ಎದುರು ಇರುವ ಕೆಂಚಮ್ಮ ಮತ್ತು ತಾಯಮ್ಮನ ಗುಡಿಗಳು. ನಂತರ ಅಂಬೇಡ್ಕರ್ ಪ್ರಾಥಮಿಕ ಶಾಲೆ. ಇವುಗಳ ಹಿಂದುಗಡೆಗೆ ಹರಿಜನ ಕೇರಿ. ಊರಿಗೆ ಹೋಲಿಸಿದರೆ ಇಲ್ಲಿ ಮನೆಗಳು ಬಿಡಿ ಬಿಡಿಯಾಗಿವೆ; ಒಂದು ಮತ್ತೊಂದಕ್ಕೆ ಅಂಟಿಕೊಂಡಿಲ್ಲ. ಉದ್ದ ಮತ್ತು ಅಡ್ಡ ರಸ್ತೆಗಳು, ಅವುಗಳ ಎರಡೂ ಮಗ್ಗುಲಿಗೂ ವ್ಯವಸ್ಥಿತವಾಗಿ ಮನೆಗಳು. ನಲ್ಲಿ ಮತ್ತು ಬೀದಿ ದೀಪಗಳ ವ್ಯವಸ್ಥೆಯಿದೆ. ಹರಿಜನ ಕೇರಿ ಬೆಳೆಯುತ್ತ ಹಿಂದಕ್ಕೆ ಹೋದಂತೆ ವಲಸಿಗರ ಗುಡಿಸಲುಗಳು ರೈಲ್ವೆ ನಿಲ್ದಾಣದ ಕಡೆಯಿಂದ ಬೆಳೆದು ಹರಿಜನ ಕೇರಿಯತ್ತ ಬರುತ್ತಿವೆ. ಈ ವಲಸಿಗರ ಗುಡಿಸಲುಗಳಿಂದ ಸ್ವಲ್ಪ ದೂರದಲ್ಲಿ ರೈಲ್ವೆ ನಿಲ್ದಾಣ. ರೈಲ್ವೆ ಹಳಿಗಳ ಎರಡೂ ಪಕ್ಕದಲ್ಲೂ ಕಬ್ಬಿಣದ ಅದಿರಿನ ರಾಶಿ ಹತ್ತಡಿ ಎತ್ತರಕ್ಕೆ ಸುಮಾರು ಒಂದು ಕಿಲೋಮೀಟರು ದೂರಕ್ಕೆ ಬಿದ್ದಿದೆ. ರೈಲ್ವೆ ನಿಲ್ದಾಣ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶ ಯಾವುದೇ ವಸಾಹತು ಕಾಲದ ಬಣಿ ಪ್ರದೇಶಕ್ಕೆ ಕಡಿಮೆಯಿಲ್ಲ. ಅದಿರು ಹೊತ್ತು ಓಡಾಡುವ ಲಾರಿಗಳು. ಅವುಗಳು ಎಬ್ಬಿಸುವ ಧೂಳು ನಿಲ್ದಾಣ ಮತ್ತು ಸುತ್ತು ಮುತ್ತಲಿನ ಪ್ರದೇಶದ ಬಣ್ಣವನ್ನೇ ಬದಲಾಯಿಸಿವೆ. ನಿಲ್ದಾಣದ ಮುಂಭಾಗದಲ್ಲಿ ಜಿ.ಜಿ. ಬ್ರದರ್ಸ್ ಅವರ ಫ್ಯಾಕ್ಟರಿ ಮತ್ತು ಅದಕ್ಕೆ ತಾಗಿಕೊಂಡಂತೆ ನೌಕರರ ಗುಡಿಸಲುಗಳಿವೆ. ಈ ಫ್ಯಾಕ್ಟರಿಯ ಮುಂದಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದರೆ ಡಾಲ್ಮಿಯಾ ಕಂಪನಿಯ ಕಾರ್ಮಿಕರ ವಸತಿ ಗೃಹಗಳು ಸಾಲುಗಳಿವೆ. ಕಾರ್ಮಿಕರ ಗುಡಿಸಲಿನ ಮತ್ತೊಂದು ಮಗ್ಗುಲಿಗೆ ಗಣೇಶನ ಗುಡಿ. ಇದು ಕಾರ್ಮಿಕರಿಗೆ ಸಮುದಾಯ ಭವನದಂತೆ ಕೆಲಸ ಮಾಡುತ್ತಿದೆ. ಡಾಲ್ಮಿಯಾ ಕಂಪೆನಿಯವರು ಕೆಲಸ ಸ್ಥಗಿತಗೊಳಿಸುವುದರೊಂದಿಗೆ ಇಲ್ಲಿನ ಕಾರ್ಮಿಕರಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಕೂಡ ಸ್ಥಗಿತಗೊಂಡಿದೆ. ಕಾರ್ಮಿಕರು ಮುಷ್ಕರ ಆರಂಭಿಸಿದ ನಂತರ ಸಂಬಳವೂ ನಿಂತಿದೆ. ಅಕ್ಕಪಕ್ಕದ ಗಣಿಗಳ ದುಡಿತ ಮತ್ತು ಕೃಷಿ ಕೂಲಿ ಇವರ ಜೀವ ಉಳಿಸಿದೆ. ಇದೇ ರಸ್ತೆಯಲ್ಲಿ ಮುಂದುವರಿದರೆ ಸುಮಾರು ಏಳೆಂಟು ಕಿಲೋ ಮೀಟರು ದೂರದಲ್ಲಿ ಗಣಿಗಳಿವೆ. ಬಹುತೇಕ ಹೊಲಗಳು ರೈಲ್ವೆ ಹಳಿಗಳ ಎರಡೂ ಪಕ್ಕದಲ್ಲೂ ಚದುರಿದಂತಿವೆ. ಅದೇ ರೀತಿ ಹೆದ್ದಾರಿಯ ಎರಡೂ ಮಗ್ಗುಲಿಗೂ ಹೊಲಗಳಿವೆ. ಹೆದ್ದಾರಿ ಪಕ್ಕದ ಬಹುತೇಕ ಹೊಲಗಳು ಕೃಷಿಯಾಗಿಲ್ಲ. ಒಂದು ಕಾರಣ ನೀರಿನ ಕೊರತೆ, ಎರಡನೆಯದಾಗಿ ಹೆದ್ದಾರಿ ಪಕ್ಕದ ಭೂಮಿಗಳಿಗೆ ಇಂದು ಬೆಲೆ ಹೆಚ್ಚಾಗಿದೆ. ಕೃಷಿಯೇತರ ಉದ್ದೇಶಗಳಿಗೆ ಬಳಸುವುದು ಹೆಚ್ಚಾಗಿದೆ. ಹೀಗೆ ಅದನ್ನು ಮಾರಿ ಲಾಭ ಗಳಿಸುವವರ ಸಂಖ್ಯೆಯ ಹೆಚ್ಚಿದೆ.

ಜಾತಿ, ಧರ್ಮ ಇತ್ಯಾದಿ

ಮನೆ ತೆರಿಗೆ ರಿಜಿಸ್ಟರ್ ಪ್ರಕಾರ ಊರಲ್ಲಿ ಒಟ್ಟು ೮೫೫ ಮನೆಗಳಿವೆ. ಆದರೆ ಆ ಲೆಕ್ಕಚಾರವನ್ನು ನಂಬುವುದು ಸ್ವಲ್ಪ ಕಷ್ಟ, ಯಾಕೆಂದರೆ ಮನೆ ಕಟ್ಟಲು ಕಲ್ಲು ಹಾಕಿದವರು ಅದು ಅಧಿಕೃತ ಆಗುವವರೆಗೆ ತೆರಿಗೆ ಕಟ್ಟುತ್ತಾರೆ. ಒಮ್ಮೆ ತೆರಿಗೆ ರಿಜಿಸ್ಟರಿನಲ್ಲಿ ದಾಖಲಾದರೆ ಅವರ ಹಕ್ಕು ಕಾನೂನು ಬದ್ಧವಾಯಿತೆಂಬ ನಂಬಿಕೆ. ಇದಕ್ಕಾಗಿ ವಾಸ ಇರಲಿ ಇಲ್ಲದಿರಲಿ ತೆರಿಗೆ ರಿಜಿಸ್ಟರಿಗೆ ದಾಖಲಿಸುತ್ತಾರೆ. ಅಧಕೃತಗೊಂಡ ಬಳಿಕ ತೆರಿಗೆ ಕಟ್ಟದಿರುವ ಉದಾಹರಣೆಗಳು ತುಂಬಾ ಇವೆ. ಆದುದರಿಂದ ಈ ಲೆಕ್ಕಾಚಾರ ಸರಿಯಲ್ಲ. ಪ್ರಸ್ತಾವನೆಯಲ್ಲಿ ತಿಳಿಸಿದಂತೆ ಇದೇ ಹಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಸ್ಥೆ, ಅರುಣೋದಯ, ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯ ಕುರಿತ ಸರಕಾರದ ಪ್ರೊಜೆಕ್ಟ್‌ಗಾಗಿ ಎಲ್ಲಾ ಮನೆಗಳನ್ನು ಸರ್ವೆ ಮಾಡಿದೆ. ಅದರ ಅಂಕಿ – ಅಂಶಗಳ ಪ್ರಕಾರ ಊರಲ್ಲಿ ಇರುವ ಒಟ್ಟು ಮನೆಗಳು ೭೮೧. ವಿವಿಧ ಜಾತಿಗಳಿಗೆ ಸೇರಿದ ಕುಟುಂಬಗಳ ಸಂಖ್ಯೆ ಕೋಷ್ಠಕ – ೨ರಲ್ಲಿ ಇದೆ. ಲಿಂಗಾಯತರ ಒಟ್ಟು ಕುಟುಂಬಗಳು ೧೧೫.[5] ಹಳ್ಳಿಯ ಸಾಮಾಜಿಕ ವ್ಯವಸ್ಥೆಯಲಿ ಇವರು ಮೇಲು ಸ್ಥಾನದಲ್ಲಿದ್ದಾರೆ. ಇಲ್ಲಿನ ಬಹುತೇಕ ಲಿಂಗಾಯತರು ಕೃಷಿಕ ರೆಡ್ಡಿ ಪಂಗಡಕ್ಕೆ ಸೇರಿದವರು. ಅವರೊಳಗೆ ಹೆಣ್ಣು ಕೊಡುವ ತರುವ ಕ್ರಮವಿದೆ. ಸಾಂಪ್ರದಾಯಿಕ ನೀತಿ ನಿಯಮ ಪ್ರಕಾರ ಇವರ ಮನೆಯೊಳಗೆ ಬ್ರಾಹ್ಮಣರು ಮತ್ತು ಜಂಗಂರಿಗೆ ಮಾತ್ರ ಪ್ರವೇಶ. ಕೆಳಜಾತಿಯವರ ಮನೆಯೊಳಗೆ ಪ್ರವೇಶ ಅಥವಾ ಊಟ, ಪಾನೀಯ ಕೊಡುವುದು ಸಂಪ್ರದಾಯದ ಪ್ರಕಾರ ನಿಷಿದ್ದ. ಅಂದರೆ ಎಲ್ಲಾ ಲಿಂಗಾಯತರ ಮನೆಯಲ್ಲಿ ಆ ಸಂಪ್ರದಾಯಗಳು ಯಥಾ ರೀತಿಯಲ್ಲಿವೆ ಎನ್ನಲಾಗುವುದಿಲ್ಲ. ಕಿರಿಯರ ಯಜಮಾನಿಕೆ ಇರುವ ಕುಟುಂಬಗಳಲ್ಲಿ, ಶಾಲೆ ಕಾಲೇಜು ಓದಿದ ಯುವಕರು ಇರುವ ಕುಟುಂಬಗಳಲ್ಲಿ ಮೇಲಿನ ನಿಯಮಗಳು ತುಂಬಾ ಮಾರ್ಪಾಟುಗೊಂಡಿವೆ. ಹಳ್ಳಿಯ ಬಹುತೇಕ ಎಲ್ಲಾ ಸಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಲಿಂಗಾಯತರದ್ದೇ ನಾಯಕತ್ವ. ತಿಮ್ಮಪ್ಪನ ಗುಡಿಯ ದಿನನಿತ್ಯದ ಪೂಜೆ ಕುರುಬರ ಪೂಜಾರಿ ಮಾಡುತ್ತಾರೆ. ವಾರ್ಷಿಕ ತೇರಿನಂದು ಕೂಡ ಪೂಜೆ ಕುರುಬರದ್ದೇ ಇರುತ್ತದೆ. ಆದರೆ ತಿಮ್ಮಪ್ಪ, ಲಕ್ಷ್ಮಿ ಮತ್ತು ಸರಸ್ವತಿಗಳ ಮೂರ್ತಿಗಳಿಗೆ ಅಭಿಷೇಕ ಜಂಗಮ ಸ್ವಾಮಿಗಳಿಂದಲೇ ನಡೆಯಬೇಕು. ಅಂಕ್ಲಮ್ಮನ ಜಾತ್ರೆಯಲ್ಲಿ ಪಾಶೆಪಡುಗ ಹೊರುವುದು ಲಿಂಗಾಯತ ಮನೆಯವರು.[6] ಮೊಹರಂ ಹಬ್ಬ ಆರಂಭವಾಗುವುದೇ ಲಿಂಗಾಯತರ ಮನೆಯಿಂದ ಕೆಂಪು ಸಕ್ಕರೆ ಬಂತ ನಂತರ. ಅಂಕ್ಲಮ್ಮನ ಪೂಜಾರಿಯ ಜತೆ, ಮೊಹರಂ ಹಬ್ಬದಂದು ಪೀರ್‌ಸಾಬರಲ್ಲಿ ಹೇಳಿಕೆ ಕೇಳುವವರಲ್ಲಿ ಮೊದಲಿಗರು ಲಿಂಗಾಯತರು. ಮಾರಿ ಹಬ್ಬಕ್ಕೆ ಕೋಣ ಬಿಡುವುದು ಲಿಂಗಾಯತ ಕುಟುಂಬದವರು. ೧೯೮೭ರವರೆಗೂ ಗ್ರಾಮಪಂಚಾಯತ್ಚೇರ್‌ಮೆನ್‌ಗಿರಿ ಒಂದಲ್ಲ ಒಂದು ಲಿಂಗಾಯತ ಕುಟುಂಬದವರಲ್ಲಿತ್ತು. ೧೯೮೭ರ ನಂತರ ರಾಜಕೀಯದಲ್ಲಿ ಲಿಂಗಾಯತರ ಅಧಿಕಾರ ಹೊರನೋಟಕ್ಕೆ ಕುಂಠಿತಗೊಂಡಂತೆ ಕಾಣುತ್ತದೆ. ಇವರ ರಾಜಕೀಯದ ಇಂದಿನ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳುವುದು ಕೂಡ ಈ ಅಧ್ಯಯನದ ಭಾಗವೇ ಆಗಿದೆ.

ಈ ಎಲ್ಲಾ ವಿವರಣೆಗಳು ಲಿಂಗಾಯತರನ್ನು ಆರ್ಥಿಕ, ರಾಜಕೀಯ ಭಿನ್ನತೆಗಳಿಲ್ಲದ ಒಂದು ಸಮುದಾಯವಾಗಿ ಚಿತ್ರಿಸಬಹುದು. ಜತೆಗೆ ಇವರೆಲ್ಲಾ ಬಲಿಷ್ಟ ಪಂಗಡಕ್ಕೆ ಸೇರಿದವರೆಂದಾಕ್ಷಣ ಪ್ರತಿಯೊಬ್ಬರೂ ಎಕರೆಗಟ್ಟಲೆ ಭೂಮಿ ಹೊಂದಿದ್ದಾರೆ ಅಥವಾ ರಾಜಕೀಯವಾಗಿ ಪ್ರಬಲರು ಎಂದು ತಿಳಿದುಕೊಳ್ಳುವ ಸಾಧ್ಯತೆ ಇದೆ. ಇದು ಸರಿಯಲ್ಲ. ವಾಸ್ತವಿಕವಾಗಿ ಇವರಲ್ಲಿ ಭೂಮಿ ಇಲ್ಲದವರು, ಕೃಷಿ ಕೂಲಿಗಳು, ವ್ಯಾಗನ್/ಗಣಿ ಕಾರ್ಮಿಕರು ಇದ್ದಾರೆ. ಆದರೆ ಇಂತಹವರ ಸಂಖ್ಯೆ ಇತರ ಜಾತಿಗಳಿಗೆ ಹೋಲಿಸಿದರೆ ಲಿಂಗಾಯತರಲ್ಲಿ ಕಡಿಮೆ ಇದೆ. ಶೈಕ್ಷಣಿಕವಾಗಿಯೂ ಇವರ ಸಾಧನೆ ಹಳ್ಳಿಯ ಇತರರಿಗಿಂತ ಉತ್ತಮವಿದೆ. ಆದರೆ ಇದು ಅಸಾಧಾರಣ ಎನ್ನುವಂತಿಲ್ಲ. ಇನ್ನು ಊರ ಯಜಮಾನಿಕೆಗಾಗಿ ಇವರೊಳಗೆ ಸತತ ಜಗಳ ನಡೆದಿದೆ ಮತ್ತು ನಡೆಯುತ್ತಿದೆ. ಹಳ್ಳಿಯ ರಾಜಕೀಯ ಚರಿತ್ರೆಯಲ್ಲಿ ಇವರ ಪಾತ್ರವನ್ನು ಅಲಕ್ಷಿಸಲು ಸಾಧ್ಯವೇ ಇಲ್ಲ. ಇವರೊಳಗೆ ಒಳಪಂಗಡಗಳಿಲ್ಲ. ಆದರೆ ಹಳ್ಳಿಯ ಇತರರಿಗೆ ಹೋಲಿಸಿದರೆ ಶ್ರೀಮಂತ ಕುಟುಂಬಗಳಿವೆ. ಈ ಶ್ರೀಮಂತ ಕುಟುಂಬಗಳ ನಡುವೆ ಹಳ್ಳಿಯ ಯಜಮಾನಿಕೆಗಾಗಿ ಸತತ ಹೋರಾಟ ನಡೆದಿದೆ. ಈ ಮನೆತನದ ಹೊರಾಟ ಖಾನ್‌ದಾನ್ ವೈರತ್ವವನ್ನು ಬಿಂಬಿಸುವ ಯಾವುದೇ ಮಸಾಲೆ ಹಿಂದಿ ಚಲನಚಿತ್ರಕ್ಕಿಂತ ಕಡಿಮೆಯಿಲ್ಲ. ಇದರಲ್ಲಿ ಹೊಡೆದಾವಿದೆ, ಬಡಿದಾಟವಿದೆ, ಮೋಸವಿದೆ, ವಂಚನೆಯಿದೆ, ಕೊನೆಗೆ ಕೊಲೆಯೂ ಇದೆ. ಮೇಟಿ ಮತ್ತು ಉದ್ವಾಳರ ಕುಟುಂಬದವರು ಈ ವೈರತ್ವದ ನಾಟಕದಲ್ಲಿ ಪ್ರಮುಖ ಪಾತ್ರಧಾರಿಗಳು. ಇತರ ಲಿಂಗಾಯತರು ಮತ್ತು ಇತರ ಜಾತಿಗೆ ಸೇರಿದವರು ಅವರವರ ಅನುಕೂಲಕ್ಕೆ ತಕ್ಕಂತೆ ಒಂದೋ ಮೇಟಿಗಳ ಜತೆ ಅಥವಾ ಉದ್ವಾಳರ ಜತೆ ಸೇರಿಕೊಳ್ಳುತ್ತಾರೆ.

ಹಳ್ಳಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ತುದಿಯಲ್ಲಿ ಲಿಂಗಾಯತರಾದರೆ ಇನ್ನೊಂದು ತುದಿಯಲ್ಲಿ ಹರಿಜನರಿದ್ದಾರೆ. ಇದು ಹರಿಜನ ಕೇರಿಯ ಲೊಕೇಶನ್‌ನಿಂದಲೂ ಸ್ಪಷ್ಟವಾಗುತ್ತದೆ. ಹೆದ್ದಾರಿಗೆ ಸಮಾನಾಂತರವಾಗಿ ಹೊಸಪೇಟೆ ಕಡೆಯಿಂದ ಎಡ ಭಾಗಕ್ಕೆ ಬಜಾರ್ ರಸ್ತೆ ಮತ್ತು ಅದರ ಮಧ್ಯದಲ್ಲಿ ಬರುವ ಅಗಸಿ ಬಾಗಿಲು, ಅಗಸಿ ಬಾಗಿಲು ದಾಟಿ ತಿಮ್ಮಪ್ಪನ ಗುಡಿ ರಸ್ತೆ ಇತ್ಯಾದಿಗಳನ್ನು ಹಿಂದಿನ ಪುಟಗಳಲ್ಲಿ ವಿವರಿಸಿದ್ದೇನೆ. ಇಲ್ಲಿಂದ ಕಡಿಮೆ ಎಂದರೆ ಅರ್ಧ ಕಿಲೋಮೀಟರ್ ದೂರದಲ್ಲಿ ಹರಿಜನ ಕೇರಿಯಿದೆ. ಹಿಂದೆ ಮನೆಗಳು ಕಡಿಮೆ ಇದ್ದ ಸಂದರ್ಭದಲ್ಲಿ ಊರು ಮತ್ತು ಕೇರಿಯ ಅಂತರ ತುಂಬಾ ಸ್ಪಷ್ಟವಾಗಿತ್ತೋ ಏನೋ. ಇಂದು ಒಂದು ಕಡೆಯಿಂದ ಊರು ಬೆಳೆದಿದೆ. ಮತ್ತೊಂದು ಕಡೆಯಿಂದ ಕೇರಿಯೂ ಬೆಳೆದು ಪರಸ್ಪರ ಸಂಧಿಸುತ್ತಿವೆ. ಹಿಂದೆ ಅಗಸಿ ದಾಟಿ ಊರೊಳಗೆ ಖುಶಿ ಬಂದ ಹಾಗೆ ತರುಗಾಡುವ ಸ್ವಾತಂತ್ರ್ಯ ಹರಿಜನರಿಗೆ ಇರಲಿಲ್ಲ. ಮಾರಿ ಹಬ್ಬದಂದು ಅಗಸಿ ಬಾಗಿಲಿನಿಂದಲೇ ಕೋಣವನ್ನು ನಾಯಕರು ಹರಿಜನರಿಗೆ ಹಸ್ತಾಂತರಿಸುವುದು ಕ್ರಮ. ಊರು ಕೇರಿ ಬೇರೆ ಬೇರೆಯಾದರೂ ಸ್ಮಶಾನ ಎಲ್ಲರಿಗೂ ಒಂದೇ. ಊರವರು ಆಂಜನೇಯ ಗುಡಿ ಪಕ್ಕಕ್ಕಿರುವ ದಾರಿಯಿಂದ ಸ್ಮಶಾನಕ್ಕೆ ಹೆಣ ಸಾಗಿಸುತ್ತಾರೆ. ಹರಿಜನರು ಅದೇ ದಾರಿಯಿಂದ ಹೆಣ ಸಾಗಿಸಬೇಕೆಂದು ಹಟ ಹಿಡಿದಿದ್ದಾರೆ. ಊರವರ ಪ್ರಕಾರ ಹರಿಜನರಿಗೆ ಸ್ಮಶಾನಕ್ಕೆ ಹೋಗಲು ಸರಕಾರಿ ಶಾಲೆ ಪಕ್ಕದ ದಾರಿ ಹತ್ತಿರ. ಅದನ್ನು ಬಿಟ್ಟು ಗುಡಿ ಪಕ್ಕಕ್ಕೆ ದಾರಿ ಬೇಕು ಎನ್ನುವುದು ಅನಗತ್ಯ ಜಗಳಕ್ಕೆ ಕಾಲು ಕೆರೆದಂತೆ. ಹೀಗೆ ಹೆಣ ಸಾಗಿಸುವ ದಾರಿ ಕುರಿತು ಊರವರ ಮತ್ತು ಹರಿಜನರ ನಡುವೆ ಘರ್ಷಣೆ ನಡೆದಿದೆ. ಈ ದೃಷ್ಟಿಯಿಂದಲೇ ಊರ ಮಧ್ಯೆ ದಾಟಿಹೋಗುವ ಹೆದ್ದಾರಿಯನ್ನು ಆಧುನಿಕತೆಯ ಸಂಕೇತವೆನ್ನಬಹುದು. ಈ ರಸ್ತೆ ಆಗುವ ಸಂದರ್ಭದಲ್ಲಿ ಊರು ಈಗಿನ ಅಗಸಿ ಬಾಗಿಲು ಮತ್ತು ಅದರೊಳಗಿನ ಪ್ರದೇಶಗಳಿಗೆ ಸೀಮಿತವಾಗಿತ್ತು. ಆದರೆ ಬರ ಬರುತ್ತಾ ಊರು ಬೆಳೆದು ಈ ರಸ್ತೆಯ ಎರಡೂ ಕಡೆಗೂ ಮನೆಗಳಾದವು. ಈ ರಸ್ತೆಯಲ್ಲಿ ಓಡಾಡಲು ಹರಿಜನರಿಗೆ ಯಾರ ಅಪ್ಪಣೆಯ ಅಗತ್ಯವಿಲ್ಲ. ಹರಿಜನ ಕೇರಿಗೆ ತಾಗಿಕೊಂಡಂತೆ ಅಂಬೇಡ್ಕರ್ ಪ್ರಾಥಮಿಕ ಶಾಲೆಯಿದೆ. ಇಲ್ಲಿನ ಮಕ್ಕಳ ಸಾಮಾಜಿಕ ಹಿನ್ನಲೆ ಪುನಃ ನಮ್ಮನ್ನು ಹಲವಾರು ದಶಕಗಳ ಹಿಂದೆ ಕೊಂಡು ಒಯ್ಯುತ್ತದೆ. ಈ ಶಾಲೆಯಲ್ಲಿರುವ ಮಕ್ಕಳಲ್ಲಿ ಶೇಕಡಾ ೮೦ ಕ್ಕಿಂತಲೂ ಹೆಚ್ಚಿನ ಮಕ್ಕಳು ಹರಿಜನ ಕೇರಿಯವರೆ. ಇತರ ಮಕ್ಕಳಲ್ಲಿ ಶೇಕಡಾ ೧೫ ರಷ್ಟು ನಾಯಕರ ಮತ್ತು ಮುಸ್ಲಿಮರು ಮಕ್ಕಳು. ಶೇಕಡಾ ೫ ರಷ್ಟು ಇತರ ಸಮುದಾಯಗಳ ಮಕ್ಕಳಿದ್ದಾರೆ. ಆಧುನೀಕರಣದ ಬಹುದೊಡ್ಡ ಸಂಕೇತ ಕೂಡ ಊರು ಮತ್ತು ಕೇರಿಯ ಅಂತರವನ್ನು ಕಡಿಮೆಗೊಳಿಸಿಲ್ಲ.

ಇದರ ಜತೆ ಹರಿಜನ ಕೇರಿಯಲ್ಲಿನ ನ್ಯಾಯಬೆಲೆ ಅಂಗಡಿ, ಹರಿಜನ ಕೇರಿಗೆ ಸಮೀಪ ಇರುವ ಕುರುಬರ ಹೋಟೇಲು, ಸ್ಟೇಷನ್ ರೋಡ್, ಹೆದ್ದಾರಿಯಿಂದ ಕವಲೊಡೆಯುವಲ್ಲಿರುವ ಶೆಟ್ಟರ ಮತ್ತು ಲಿಂಗಾಯತರ ಕಿರಾಣಿ ಅಂಗಡಿಗಳು ಇತ್ಯಾದಿಗಳು ಹರಿಜನರ ಚಲನವಲನವನ್ನು ಊರಿನಿಂದ ಬೇರ್ಪಡಿಸಿ ಕೇರಿಯ ಸುತ್ತಮುತ್ತಲಿನ ಪ್ರದೇಶಕ್ಕೆ ಸೀಮಿತಗೊಳಿಸಿವೆ. ಇದರರ್ಥ ಹೆದ್ದಾಯಲ್ಲಿರುವ ಲಿಂಗಾಯತರ ಹೋಟೆಲುಗಳಿಗೆ ಹೋಗಲೇ ಬಾರದೆಂಬ ನಿಯಮವೇನೂ ಇಲ್ಲ. ಪ್ರತಿ ಹೋಟೆಲಿನ ಹೊರಭಾಗದಲ್ಲಿ ಒಂದು ನೀರಿನ ಫಿಲ್ಟರ್ ಮತ್ತು ಅದರ ಮೇಲೊಂದು ಲೋಟ ಇರುತ್ತದೆ. ಅದು ಹರಿಜನರಿಗೆ ಮೀಸಲು. ಹರಿಜನರಿಗೆ ಚಾ ಕುಡಿಯಲು ಬೇರೆಯದೇ ಲೋಟಗಳು. ಚಾ ಕುಡಿದು ಲೋಟ ತೊಳೆದಿಟ್ಟು ಹೋಗಬೇಕು. ತಿಂಡಿ ತಿಂದು ಪ್ಲೇಟು ತೊಳೆಯುವ ಅಗತ್ಯವಿಲ್ಲ. ಯಾಕೆಂದರೆ ತಿಂಡಿ ತಟ್ಟೆಯಲ್ಲಿ ಕೊಡುವುದಿಲ್ಲ; ಪೇಪರ್ ತುಂಡಲ್ಲಿ ಕೊಡುತ್ತಾರೆ. ತಿಂದು ಪೇಪರ್ ಬಿಸಾಕಿದರೆ ಆಯಿತು; ತಟ್ಟೆ ತೊಳೆಯುವ ಕೆಲಸವಿಲ್ಲ. ೧೯೯೯ರಲ್ಲಿನ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ದಿಸಿದರು. ಆ ಸಂದರ್ಭದಲ್ಲಿ ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳ ವರದಿಗಾರರು ಬಳ್ಳಾರಿ ಸುತ್ತ ಮುತ್ತ ತಿರುಗಾಡಿದ್ದಾರೆ. ಅವರಿಗೆಲ್ಲಾ ಇಲ್ಲಿನ ಹೋಟೆಲುಗಳ ಎರಡು ಲೋಟಗಳ ದೊಡ್ಡ ಸುದ್ದಿಯ ವಸ್ತುಗಳಾದವು.

ಅದರ ಪ್ರತಿಫಲವೋ ಏನೋ ಕೆಲವು ತಿಂಗಳುಗಳ ಹಿಂದೆ ಗಾದಿಗನೂರಿನ ಸಬ್‌ಇನ್‌ಸ್ಪೆಕ್ಟರ್ ಬಂದು ಹರಿಜನರಿಗೆ ಪ್ರತ್ಯೇಕ ಲೋಟ ಇಡಬಾರದೆಂದು ಹೋಟೇಲು ಮಾಲಿಕರಿಗೆ ಎಚ್ಚರಿಗೆ ನೀಡಿದರು. ಸಬ್‌ಇನ್‌ಸ್ಪೆಕ್ಟರ್ ಬಂದು ಎಚ್ಚರಿಕೆ ಕೊಟ್ಟು ಹೋಗುತ್ತಾರೆ; ಅವರಿಗೇನು ಗೊತ್ತು ಹೋಟೇಲು ಮಾಲಿಕರ ಸಮಸ್ಯೆ. ಪ್ರತೇಕ ಲೋಟ ಇಟ್ಟರೆ ಕಾನೂನು ಭಂಗವಾಗುತ್ತದೆ. ಇಡದಿದ್ದರೆ ಮೇಲುಜಾತಿ ಗಿರಾಕಿಗಳು ಬರುವುದಿಲ್ಲ. ತುಂಬಾ ಆಲೋಚಿಸಿ ಮಾಲಿಕರು ಈ ಸಮಸ್ಯೆಗೆ ಒಂದು ಹೊಸ ಪರಿಹಾರ ಕಂಡುಕೊಂಡರು. ಲೋಟ ಇಡುವ ಅಥವಾ ತೊಳೆಯುವ ಪ್ರಶ್ನೆ ಬಂದರೆ ತಾನೆ ಈ ಎಲ್ಲಾ ಸಮಸ್ಯೆ. ಅದಕ್ಕಾಗಿ ಉಪಯೋಗಿಸಿ ಬಿಸಾಕುವ ಪ್ಲಾಸ್ಟಿಕ್ ಲೋಟಗಳು ಹಳ್ಳಿ ಹೋಟೆಲುಗಳಿಗೂ ಬಂದವು. ಇದರಿಂದ ಚಾದ ಬೆಲೆ ಒಂದು ರೂಪಾಯಿ ಇದ್ದದ್ದು ಒಂದೂವರೆ ರೂಪಾಯಿಗೆ ಏರಿತು. ಹದಿನೈದು ಪೈಸೆಯ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಕನಿಷ್ಠ ಮೂವತ್ತೈದು ಪೈಸೆ ಲಾಭ. ಸಮಾಜ ಪರಿವರ್ತನೆ ಇಷ್ಟೊಂದು ಲಾಭದಾಯಕವಾದರೆ ಯಾರು ತಾನೇ ಸುಮ್ಮನಿರುತ್ತಾರೆ. ಎಲ್ಲರೂ ಇದೇ ಕ್ರಮ ಅನುಸರಿಸಿದರೆ. ಹರಿಜನರು ಮಾತ್ರ ಇದರಿಂದ ಖುಶಿ ಪಡಲಿಲ್ಲ. ಸಮಾನತೆ ಇಷ್ಟೊಂದು ದುಬಾರಿಯಾಗುವುದಾದರೆ ಹೊಸ ಕ್ರಮ ನಮಗೆ ಬೇಡ; ಹಿಂದಿನದೇ ರೀತಿಯಲ್ಲಿ ಪ್ರತ್ಯೇಕ ಲೋಟದಲ್ಲಿ ಕೊಡಿ ಎನ್ನುವ ಸ್ಥಿತಿ ಅವರದ್ದು.

ಪ್ಲಾಸ್ಟಿಕ್ ಗ್ಲಾಸು ಬರುವ ಮುನ್ನ ಕೊಟ್ಟೂರಿನಿಂದ ವಲಸೆ ಬಂದ ಲಿಂಗಾಯತರೊಬ್ಬರು ತಮ್ಮ ಹೋಟೇಲಿನೊಳಗೆ ಹರಿಜನರನ್ನು ಸೇರಿಸುತ್ತಿದ್ದರು. ಅದೂ ಹೆಚ್ಚು ಸಮಯ ನಡೆಯಲಿಲ್ಲ. ಊರ ಇತರ ವ್ಯಾಪಾರಿಗಳು ಮತ್ತು ಮೇಲು ಜಾತಿಯ ಪ್ರತಿಷ್ಠಿತರು ಸೇರಿ ವಲಸಿಗರ ಮೇಲೆ ನಿರ್ಬಂಧ ಹೇರಿದರು. ಹಾಗಾಗಿ ಅವರು ಕೂಡ ಇತರರಂತೆ ಹರಿಜನರಿಗೆ ಪ್ರತ್ಯೇಕ ಗ್ಲಾಸು ಇಡಬೇಕಾಯಿತು. ಹರಿಜನರಲ್ಲಿ, ಹರಿಜನ ಮುಖ್ಯಸ್ಥರಲ್ಲಿ, ಪ್ರತ್ಯೇಕ ಲೋಟದ ಕುರಿತು ವಿಚಾರಿಸಿದಾಗ, “ಈಗ ಕಾಲ ಬದಲಾಗಿದೆ, ಹಿಂದಿನಂತೆ ನಾವು ಹೊರಗೆ ಕುಳಿತುಕೊಳ್ಳಬೇಕಾಗಿಲ್ಲ” ಎಂದರು. ವಾಸ್ತವದಲ್ಲಿ ಹರಿಜನರನ್ನು ಇತರರಿಗಿಂತ ಭಿನ್ನವಾಗಿ ನಡೆಸಿಕೊಂಡರೂ ಯಾಕೆ ಅವರ ನಾಯಕರು ನನಗೆ ಬೇರೆಯದೇ ಚಿತ್ರ ಕೊಡಲು ಪ್ರಯತ್ನಿಸಿದರೆಂದು ಅರ್ಥವಾಗಲಿಲ್ಲ. ಬಹುಶಃ ಹರಿಜನರಿಗೆ ಪ್ರವೇಶ ಒದಗಿಸದಿರುವುದು ತಮ್ಮ ನಾಯಕತ್ವದ ವಿಫಲತೆಯಾದಿತೆಂಬ ಭಯ ಇರಬಹುದು. ಹರಿಜನರು ಕುಡಿದಿಟ್ಟ ಗ್ಲಾಸು ತೊಳೆಯಲು ಕುರುಬರ ಹೋಟೇಲು ಮಾಲಿಕ ಕೂಡ ಹಿಂದೇಟು ಹಾಕುತ್ತಾರೆ. ಆ ಹೊಟೇಲಿಗೆ ಹರಿಜನರದ್ದೇ ಹೆಚ್ಚು ವ್ಯಾಪಾರವಿರುವುದರಿಂದ ಈ ನೋವನ್ನು ಅವರು ನುಂಗಿಕೊಳ್ಳಬೇಕಾಗಿದೆ. ಲಿಂಗಾಯತರು ಹೋಟೇಲುಗಳಿಗೆ ಹರಿಜನರು ಹೋಗದಿರುವುದನ್ನು ತಿಮ್ಮಪ್ಪನ ಗುಡಿಗೆ ಅವರು ಪ್ರವೇಶ ಮಾಡದಿರುವ ವಾದದಿಂದ ಅರ್ಥ ಮಾಡಿಕೊಳ್ಳಬಹುದು. ತಿಮ್ಮಪ್ಪನ ಗುಡಿಗೆ ಪ್ರವೇಶಿಸಬಾರದೆಂದು ಊರವರು ವಿರೋಧಿಸಿಲ್ಲ. ‘ಆದಾಗ್ಯೂ ನಾವು ಹೋಗಿತ್ತಿಲ್ಲ. ನಮ್ಮ ಆತ್ಮ ಸಾಕ್ಷಿ ಒಪ್ಪುತ್ತಿಲ್ಲ’ ಎಂದು ಹರಿಜನ ನಾಯಕರ ಅಭಿಪ್ರಾಯ. ಒಂದು ಕಾಲದಲ್ಲಿ ಮೇಲು ಜಾತಿಯವರು ಈ ಅಂತರವನ್ನು ಬಲಪ್ರಯೋಗದಿಂದ ಕಾಪಾಡಿಕೊಳ್ಳಬೇಕಿತ್ತು. ಈಗ ಬಲ ಪ್ರಯೋಗ ಸಾಧ್ಯವಿಲ್ಲ; ಅಗತ್ಯವೂ ಇಲ್ಲ. ಬದಲಾದ ಪರಿಸರ, ಮುಖ್ಯವಾಗಿ ಹೊಸ ಆರ್ಥಿಕ ಚಟುವಟಿಕೆಗಳು ಮತ್ತು ಇತರ ಬೆಳವಣಿಗೆಗಳು ಈ ಅಂತರವನ್ನು ಮುಂದುವರಿಸುತ್ತಿವೆ. ಹರಿಜನರಿಗೂ ಈ ಅಂತರವನ್ನು ಮುರಿಯುವ ಅವಶ್ಯಕತೆ ಕಾಣುತ್ತಿಲ್ಲ. ಅವಶ್ಯಕತೆ ಇದ್ದಾಗಲೆಲ್ಲಾ ಇಲ್ಲಿನ ಹರಿಜನರು ತಮ್ಮ ಇತಿಮಿತಿಯೊಳಗೆ ಪ್ರತಿಭಟಿಸಿದ್ದಾರೆ.

 

[1]೧೯೯೮ರಲ್ಲಿ ಇದು ರಾಷ್ಟ್ರೀಯ ಹೆದ್ದಾರಿ ೬೩ ಆಗಿದೆ. ಪೇಟೆಯಿಂದ ಬಳ್ಳಾರಿಗೆ ಪ್ರಯಾಣಿಸುವಾಗ ತಾಲ್ಲೂಕಿನ ಹಲವಾರು ಹಳ್ಳಿಗಳು ಹೆದ್ದಾರಿಯ ಬಲ ಭಾಗಕ್ಕೆ ಸಿಗುತ್ತವೆ. ಕೃಷಿಯೊಂದಿಗೆ ಗಣಿ ಕೆಲಸ ಈ ಹಳ್ಳಿಗಳ ಕೆಳ ವರ್ಗದ ಜನರ ಅವಿಭಾಜ್ಯ ಅಂಗ. ಗಣಿ ಎಬ್ಬಿಸುವ ಧೂಳು, ಸಿಡಿಮದ್ದು ಆಕಾಶಕ್ಕೆ ಸಿಡಿಸುವ ಧೂಳುಮಣ್ಣು, ಲಾರಿಗಳ ಭರಾಟೆ, ಇವೆಲ್ಲಾ ಹಳ್ಳಿಗಳ ಸಹಜ ಸ್ವರೂಪವನ್ನು ಮರೆ ಮಾಚಿವೆ. ಅಪರೂಪಕ್ಕೆ ಬರುವ ಮಳೆ ಗಣಿಗಾರಿಕೆ ಹುಟ್ಟು, ಹಾಕುವ ಧೂಳುಮಣ್ಣನ್ನು ಸುತ್ತಲಿನ ಹೊಲಗಳಲ್ಲಿ, ಕೆರೆಗಳಲ್ಲಿ ಪುಕ್ಕಟೆಯಾಗಿ ತುಂಬಿ ಕೆರೆಗಳ ನೀರನ್ನು ಕೆಂಪಾಗಿಸುತ್ತಿದೆ. ಸುತ್ತಲಿನ ಕೆರೆಗಳ ಹೂಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಈ ಗಣಿಗಳು ಹೊರಹಾಕಿದ ಧೂಳುಮಣ್ಣೆ ತುಂಬಿದೆ.

[2]ಹೀಗೆ ವರ್ಷಗಳ ಹಿಂದೆ ಈ ರಸ್ತೆಯನ್ನು ಅಗಲಗೊಳಿಸಿ ಹಂಪಿ, ಆನೆಗೊಂದಿಗಳ ಮೂಲಕ ಬೆಂಗಳೂರು ಪೂನಾ ಹೆದ್ದಾರಿಗೆ ಸೇರಿಸುವ ಯೋಜನೆ ಆರಂಭವಾಯಿತು. ಅದರ ಭಾಗವಾಗಿ ಆನೆಗೊಂದಿಯ ತಳವಾರಘಟ್ಟದಲ್ಲಿ ೧೯೯೭ರಿಂದ ಸೇತುವೆ ನಿರ್ಮಿಸುವ ಕೆಲಸ ಶುರುವಾಗಿಬಿಟ್ಟಿತು. ಅನೆಗೊಂದಿ ಮತ್ತು ಸುತ್ತಲಿನ ಊರಿನವರಿಗೆಲ್ಲಾ ತಮ್ಮ ಹಲವಾರು ವರ್ಷಗಳ ಕನಸು ನನಸಾಗುತ್ತದೆ ಎಂದು ಖುಶಿ. ಅವರ ಖುಶಿ ಹೆಚ್ಚು ಸಮಯ ಬಾಳಲಿಲ್ಲ. ೧೯೯೮ರಲ್ಲಿ ಯುನೆಸ್ಕೊದ ಅಧಿಕಾರಿಗಳು ಹಂಪಿ ಮತ್ತು ಸುತ್ತಲಿನ ಪ್ರದೇಶಗಳಿಗೆ ಭೇಟಿಯಿತ್ತರು. ಆನೆಗೊಂದಿ ಸೇತುವೆಯಾದರೆ ಜಿಂದಾಲ್‌ನ ಬೃಹತ್ ಗಾತ್ರದ ಲಾರಿಗಳು ಆ ಮಾರ್ಗದಲ್ಲಿ ಸಾಗಿದರೆ ಹಂಪಿಯ ಸ್ಮಾರಕಗಳಿಗೆ ಅಪಾಯವಿದೆ ಎಂದು ಯುನೆಸ್ಕೊದ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸೇತುವೆಯ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ. ಸೇತುವೆ ಕೆಲಸವನ್ನು ನಿಲ್ಲಿಸದಿದ್ದರೆ ಹಂಪಿಯನ್ನು ವರ್ಲ್ಡ್ ಹೆರಿಟೇಜ್ ಪಟ್ಟಿಯಿಂದ ತೆಗೆಯುವ ಬೆದರಿಕೆಯನ್ನು ಒಡ್ಡಲಾಗಿದೆ. ಆ ಪ್ರಕಾರ ಕರ್ನಾಟಕ ಸರಕಾರ ಸೇತುವೆ ಕೆಲಸ ನಿಲ್ಲಿಸಿದೆ. ಆದರೆ ಸ್ಥಳೀಯ ಜನತೆ ಸುಮ್ಮನೆ ಉಳಿದಿಲ್ಲ. ತಮ್ಮ ಹಲವಾರು ದಶಕಗಳ ಬೇಡಿಕೆ ಇಡೇರದಿದ್ದರೆ ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಹೀಗೆ ಈ ರಸ್ತೆ ಮತ್ತು ಅದಕ್ಕೆ ಆನೆಗೊಂದಿ ಬಳಿ ಆಗುತ್ತಿರುವ ಸೇತುವೆ ಅಂತರಾಷ್ಟ್ರೀಯ ಸುದ್ದಿಯಾಗಿದೆ.

[3]ಮುಸ್ಲಿಂರು ಚಾರಿತ್ರಿಕವಾಗಿಯೇ ಈ ಹಳ್ಳಿಯ ಭಾಗವಾಗಿದ್ದಾರೆ. ವಸಾಹತು ಪೂರ್ವದಿಂದಲೇ ಇಲ್ಲಿ ಸುಮಾರು ೨೫ ರಿಂದ ೩೦ ಮುಸ್ಲಿಂ ಕುಟುಂಬಗಳು ಇದ್ದವೆಂದು ತಿಳಿದು ಬರುತ್ತದೆ. ಆದಾಗ್ಯೂ ಅವರಿಗೆ ಪ್ರತ್ಯೇಕ ಮಸೀದಿಯ ಅವಶ್ಯಕತೆ ಬಿದ್ದಿಲ್ಲ. ಮೊಹರಂ ಸಂದರ್ಭದಲ್ಲಿ ಅಗಸಿ ಬಾಗಿಲಿನ ಪಕ್ಕಕ್ಕಿರುವ ಕೊಠಡಿ ಮಸೀದಿಯಾಗಿ ಕೆಲಸ ಮಾಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅವರಿಗೂ ಒಂದು ಪ್ರತ್ಯೇಕ ಮಸೀದಿ ಕಟ್ಟಡ ಬೇಕೆಂದು ಅನ್ನಿಸಿದೆ. ಅದಕ್ಕಾಗಿ ವಕ್ಪ್ ಬೋರ್ಡ್ ಮತ್ತು ಇತರ ಸಹಾಯ ಧನ ಪಡೆದು ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಒಂದು ಮಸೀದಿ ಕಟ್ಟಡದ ಕೆಲಸ ನಡೆಯುತ್ತಿದೆ. ಆ ಕಟ್ಟಡ ಮತ್ತು ಅದರ ಹಿಂದಿರುವ ರಾಜಕೀಯವನ್ನು ಮುಂದೆ ವಿವರಿಸಲಾಗಿದೆ.

[4]ಅಂಕ್ಲಮ್ಮನ ಗುಡಿ ಊರಿಂದ ಸುಮನಾರು ಒಂದೂವರೆ ಕಿ.ಮೀ.ದೂರದ ಪಶ್ಚಿಮದ ಗುಡ್ಡಗಳ ಸಮೀಪದಲ್ಲಿ ಇದೆ. ಅಲ್ಲಿಗೆ ರೈಲ್ವೆ ಹಳಿ ದಾಟಿ ಹೋಗಬೇಕು. ಇನ್ನೂ ಕೂಡ ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಜಾತ್ರೆ ಸಂದರ್ಭದಲ್ಲಿ (ಜಾತ್ರೆ ಫೆಬ್ರವರಿ ತಿಂಗಳ ಕೊನೆಗೆ ನಡೆಯುತ್ತದೆ.) ಹೊಲಗಳ ನಡುವೆ ಕಚ್ಚಾ ರಸ್ತೆ ಮಾಡಿ ಸರಕು ಮತ್ತು ಜನರ ಓಡಾಟ ನಡೆಯುತ್ತದೆ.

[5]ಹಳ್ಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಮೂರು ಮೂಲಗಳಿಂದ ಪಡೆಯಲಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದ್ದೇನೆ. ಕುಟುಂಬಗಳ ಸಂಖ್ಯೆಯನ್ನು ಅರುಣೋದಯ ಸಂಸ್ಥೆಯ ಆರ್.ಸಿ.ಎಚ್. ಸಮೀಕ್ಷೆಯಿಂದ ಪಡೆಯಲಾಗಿದೆ.

[6]ಎರಡನೇ ಅಧ್ಯಾಯದ ಪುಟ ಸಂಖ್ಯೆ ೭೦ರಲ್ಲಿ ಪಾಶೆಪಡುಗದ ವಿವರ ಇದೆ.