ವಿಕೇಂದ್ರೀಕೃತ ಆಡಳಿತ ಮತ್ತು ಸಶಕ್ತೀಕರಣ ಇಂದು ಬಹು ಚರ್ಚಿತ ವಿಚಾರಗಳು. ಇವುಗಳ ಪ್ರಾಮುಖ್ಯತೆಗೆ ಎರಡು ಕಾರಣಗಳಿವೆ. ಇವು ತಳಮಟ್ಟದ ಅಧಿಕಾರದ ವಿತರಣೆಯಲ್ಲಿ ಬದಲಾವಣೆ ತಂದು ಸಾಂಪ್ರದಾಯಿಕ ಯಜಮಾನಿಕೆಯನ್ನು ಬುಡಮೇಲು ಮಾಡುತ್ತವೆ ಎನ್ನುವುದು ಮೊದಲನೆಯ ಕಾರಣವಾದರೆ ಈ ರಾಜಕೀಯ ಪ್ರಕ್ರಿಯೆಯಿಂದ ಕೆಳವರ್ಗದ ಜನರು ಸಶಕ್ತೀಕರಣಗೊಳ್ಳುತ್ತಾರೆ ಎನ್ನುವುದು ಎರಡನೇ ಕಾರಣ.[1] ಎರಡನೇ ಅಂಶ, ಕೆಳವರ್ಗದ ಜನರನ್ನು ಸಶಕ್ತೀಕರಣಗೊಳಿಸುವ ವಿಚಾರ, ಇಂದಿನ ಸಂದರ್ಭದಲ್ಲಿ ಮುಖ್ಯ. ಯಾಕೆಂದರೆ ಇಂದು ಹಂತ ಹಂತವಾಗಿ ಪ್ರಭುತ್ವ ಕೆಳವರ್ಗದ ಜನರ ಪರವಾಗಿ ಮಧ್ಯೆ ಪ್ರವೇಶಿಸುವುದನ್ನು ಕಡಿಮೆಗೊಳಿಸುತ್ತಿದೆ. ಕೆಳವರ್ಗದವರ ಪರವಾಗಿ ನೇರವಾಗಿ ಮಧ್ಯ ಪ್ರವೇಶಿಸುವ ಬದಲು ಅವರ ಹಿತಾಸಕ್ತಿ ರಕ್ಷಣೆಗಾಗಿ ಹಲವಾರು ಸಾಂಸ್ಥಿಕ ರಚನೆಗಳನ್ನು ಪ್ರಭುತ್ವವು ರೂಪಿಸುತ್ತಿದೆ. ಪಂಚಾಯತ್‌ರಾಜ್ ಕೂಡ ಆ ಸಾಲಿನಲ್ಲಿ ಬರುವ ಒಂದು ಸಂಸ್ಥೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಪಂಚಾಯತ್ ಸಂಸ್ಥೆಗಳನ್ನು ಈಗಾಗಲೇ ಇರುವ ಆಡಳಿತದ ರಚನೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಪ್ರಭುತ್ವ ಹಿಂದಕ್ಕೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಕೆಳವರ್ಗದ ಜನರು ತಮ್ಮ ಅಭಿವೃದ್ಧಿಯ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಬೇಕು ಎನ್ನುವ ಉದ್ದೇಶ ಕೂಡ ಈ ಎಲ್ಲಾ ಮಾರ್ಪಾಟುಗಳ ಹಿಂದಿದೆ. ಆದರೆ ಅತಿಯಾದ ಅಸಮಾನತೆಯಿಂದ ತುಂಬಿರುವ ನಮ್ಮ ಸ್ಥಿತಿಯಲ್ಲಿ ಈ ಸಾಂಸ್ಥಿಕ ಪರಿವರ್ತನೆಗಳ ಮೂಲಕವೇ ಸಾಮಾಜಿಕ ಪರಿವರ್ತನೆ ಸಾಧ್ಯವೇ? ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲೂ ಮೂಲಭೂತ ಬದಲಾವಣೆಗಳ ಅಗತ್ಯವಿಲ್ಲವೇ? ತಳಮಟ್ಟದ ಸಂಸ್ಥೆಗಳನ್ನು ತಮ್ಮ ಹಿತಾಸಕ್ತಿ ರಕ್ಷಣೆಗೆ ಪೂರಕವಾಗಿ ಬಳಸಿಕೊಳ್ಳುವಷ್ಟು ತಯಾರಿ ಕೆಳಜಾತಿ/ವರ್ಗಗಳಿಗೆ ಇದೆಯೇ? ಇತ್ಯಾದಿ ಪ್ರಶ್ನೆಗಳು ಇಂದು ಹೆಚ್ಚು ಪ್ರಸ್ತುತ. ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಒಂದು ಪಂಚಾಯತನ್ನು ಕೂಲಂಕುಶವಾಗಿ ಅಧ್ಯಯನ ಮಾಡುವ ಮೂಲಕ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗಿದೆ.

ಜಿಲ್ಲೆಯ ಹೊರಗಿನವರಿಗೆ ಬಳ್ಳಾರಿ ಗೊತ್ತಿರುವುದು ಎರಡು ವಿಚಾರಗಳಿಗೆ. ಒಂದು ಬಳ್ಳಾರಿಯ ಜೈಲು ಮತ್ತೊಂದು ಬಳ್ಳಾರಿಯ ಬಿರುಬಿಸಿಲು. ಎಲ್ಲ ಕಡೆಗಳಲ್ಲಿ ಮಳೆ, ಚಳಿ, ಬೇಸಿಗೆ ಕಾಲಗಳಿದ್ದರೆ ಇಲ್ಲಿ ಇರುವುದು ಬಿಸಿಲು, ಬಿಸಿಲು ಮತ್ತು ಬಿರುಬಿಸಿಲುಗಾಲ ಮಾತ್ರ ಎಂದು ಸ್ಥಳೀಯರು ಆಡಿಕೊಳ್ಳುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಸತ್ಯ ಕೂಡ. ಇಲ್ಲಿನ ರಣ ಬಿಸಿಲು ಒಣ ಭೂಮಿಯನ್ನು ಕಾದ ಕಾವಲಿಯಂತಾಗಿಸುತ್ತಿದೆ. ತುಂಗಭದ್ರಾ ಆಣೆಕಟ್ಟೆ ಆದ ನಂತರ ಇಲ್ಲಿನ ಸ್ಥಿತಿ ಸ್ವಲ್ಪ ಸುಧಾರಿಸಿದೆ. ಇದರಿಂದ ಇಡೀ ಜಿಲ್ಲೆಯ ನೀರಾವರಿ ಸಮಸ್ಯೆ ಪರಿಹಾರವಾಗಿಲ್ಲ. ಜಿಲ್ಲೆಯ ಕೆಲವು ತಾಲೂಕುಗಳ ನೀರಾವರಿ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಿದೆ. ಅವುಗಳಲ್ಲಿ ಒಂದು ಹೊಸಪೇಟೆ ತಾಲೂಕು. ಇದರಿಂದಾಗಿಯೇ ಹೊಸಪೇಟೆ ಸಣ್ಣ ಮಟ್ಟದ ಪಟ್ಟಣವಾಗಿ ಬೆಳೆಯುತ್ತಿದೆ. ಹೊಸಪೇಟೆಯ ಮೂಲ ಕೆದಕಿದರೆ ಚರಿತ್ರೆ ನೇರವಾಗಿ ನಮ್ಮನ್ನು ವಿಜಯನಗರ ಕಾಲಕ್ಕೆ ಒಯ್ಯುತ್ತದೆ. ಆದರೆ ಇಲ್ಲಿನ ನಿವಾಸಿಗಳ ಪ್ರಕಾರ ಇತ್ತೀಚಿನವರೆಗೂ ಹೊಸಪೇಟೆಯಲ್ಲಿ ಕೆಲವು ಸರಕಾರಿ ಕಚೇರಿಗಳು ಮತ್ತು ಸಣ್ಣಪುಟ್ಟ ವ್ಯವಹಾರಗಳನ್ನು ಹೊರತು ಪಡಿಸಿ ದೊಡ್ಡ ಮಟ್ಟಿನ ವ್ಯವಹಾರಗಳೇನೂ ಇರಲಿಲ್ಲ. ಹಳೆಯ ಬಸ್ ನಿಲ್ದಾಣ, ಅದರ ಹಿಂದಕ್ಕಿರುವ ಮಾರುಕಟ್ಟೆ, ಅಲ್ಲಿಂದ ಮುಂದೆ ಪೊಲೀಸ್ ಠಾಣೆ, ರೈಲ್ವೆ ನಿಲ್ದಾಣ ರಸ್ತೆ, ಆಂಜನೇಯ ಗುಡಿಯೆದುರಿನ ರಸ್ತೆ ಇವಿಷ್ಟೇ ಪೇಟೆ. ಪೇಟೆಯ ಮುಕ್ಕಾಲಾಂಶ ವ್ಯವಹಾರ ಉತ್ತರ ಭಾರತದ ಮಾರ್ವಾಡಿ ವ್ಯಾಪಾರಿಗಳ ಕೈಯಲ್ಲಿತ್ತು. ಐವತ್ತರ ದಶಕದ ಆಧುನೀಕರಣ ಇಲ್ಲಿನ ದೊಡ್ಡ ಮತ್ತು ಮಧ್ಯಮ ಗಾತ್ರದ ಕೃಷಿಕರ ಆರ್ಥಿಕ ಸ್ಥಿತಿಯನ್ನು ಸ್ವಲ್ಪ ಸುಧಾರಿಸಿತು. ತಕ್ಕಮಟ್ಟಿನ ಬಂಡವಾಳ ಶೇಖರಣೆಗೆ ಅವಕಾಶ ಮಾಡಿತು. ಇದರ ಲಾಭ ಪಡೆದ ಕೆಲವರು ತಮ್ಮ ಮಿಗತೆಯನ್ನು ಪೇಟೆಯ ವ್ಯವಹಾರದಲ್ಲಿ ತೊಡಗಿಸುವುದು ಕ್ರಮೇಣ ಆರಂಭವಾಯಿತು. ಉತ್ತರದ ವ್ಯಾಪಾರಿಗಳ ಜತೆ ಸ್ಥಳೀಯ ಮೇಲ್ವರ್ಗ ಕೂಡ ಹಲವಾರು ಅಂಗಡಿ ಮುಗ್ಗಟ್ಟುಗಳನ್ನು ಆರಂಭಿಸಿತು.

ಹೀಗೆ ಕೆಲವು ವರ್ಷಗಳಿಂದ ಹೊಸಪೇಟೆಯ ಚಿತ್ರಣವೇ ಬದಲಾಗುತ್ತಿದೆ. ಮೇಲ್ನೋಟಕ್ಕೆ ಕಾಣುವ ಕಾರಣವೆಂದರೆ ಕಿರ್ಲೋಸ್ಕರ್‌, ಜಿಂದಾಲ್, ಕಲ್ಯಾಣಿ ಇತ್ಯಾದಿ ಬೃಹತ್ ಕಬ್ಬಿಣ ಮತ್ತು ಉಕ್ಕು ಉದ್ಯಮಗಳು ಹೊಸಪೇಟೆ ಸುತ್ತಮುತ್ತ ಬಂದುದು. ಜತೆಗೆ ತೊಂಬತ್ತರ ದಶಕದಲ್ಲಿ ಆರಂಭವಾದ ಕನ್ನಡ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳು ಕೂಡ ತಕ್ಕ ಮಟ್ಟಿನ ಪ್ರಭಾವ ಬೀರಿವೆ ಎನ್ನುವ ಅಭಿಪ್ರಾಯಗಳು ಇವೆ. ಹಾಗೆ ನೋಡಿದರೆ ಹೊಸತಾಗಿ ಬಂದ ಉದ್ಯಮಗಳು ಇಲ್ಲಿನ ಜನರಿಗೆ ಉದ್ಯೋಗ ಕೊಟ್ಟಿಲ್ಲ. ಅವುಗಳ ದೊಡ್ಡ ಕೊಡುಗೆಯೆಂದರೆ ಇಲ್ಲಿನ ವ್ಯಾಪಾರಿಗಳ ವ್ಯವಹಾರ ಹೆಚ್ಚಿಸಿದ್ದು. ಇನ್ನೂ ಹೆಚ್ಚೆಂದರೆ ಹೊರಗಿನಿಂದ ಬಂದ ಉದ್ಯೋಗಿಗಳಿಗೆ ಮನೆ ಬಾಡಿಗೆ ಕೊಟ್ಟು ಸ್ಥಳೀಯ ಮೇಲ್ವರ್ಗಕ್ಕೆ ಸ್ವಲ್ಪ ಹಣ ಸಂಪಾದನೆ ಮಾಡಲು ಈ ಉದ್ಯಮಗಳು ಸಹಕರಿಸಿರಬಹುದು. ಆದುದರಿಂದ ಇವಿಷ್ಟೆ ಹೊಸಪೇಟೆಯ ಪರಿವರ್ತನೆಗೆ ಕಾರಣ ಎನ್ನುವುದು ಸರಿಯಾಗುವುದಿಲ್ಲ. ಇದಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿನ ಗಣಿಗಾರಿಕೆ, ನೀರಾವರಿಯಿಂದ ಸಾಧ್ಯವಾದ ಕೃಷಿ ಮತ್ತು ಕೃಷಿಗೆ ಪೂರಕವಾಗಿ ಬೆಳೆದ ಕೃಷಿಯೇತರ ಚಟುವಟಿಕೆಗಳು. ಹೊಸಪೇಟೆಯ ಪಶ್ಚಿಮಭಾಗಕ್ಕಿರುವ ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆಯಿದೆ. ಈ ಭಾಗದ ಕೃಷಿಕರು ಬೆಳೆಯುವ ವಾಣಿಜ್ಯ ಬೆಳೆಗಳು ಹೊಸಪೇಟೆಯ ವ್ಯವಹಾರವನ್ನು ತುಂಬಾ ಹೆಚ್ಚಿಸಿವೆ. ಕಬ್ಬು, ಬಾಳೆ, ಸೂರ್ಯಕಾಂತಿ ಇತ್ಯಾದಿಗಳು ಪೇಟೆಯ ಮಾರುಕಟ್ಟೆಯಲ್ಲಿ ನೇರ ಪ್ರಭಾವ ಬೀರಿವೆ. ಪರೋಕ್ಷವಾಗಿ ಕೋಳಿ, ಸಾಕಣೆ, ಡೈರಿ ಫಾರ್ಮ್‌, ಕುರಿ ಸಾಕಣೆ, ಹಣ್ಣು ಹಂಪಲು ಇತ್ಯಾದಿ ಬೆಳೆಗಳು ಹೊಸಪೇಟೆಯ ಬೆಳವಣಿಗೆಯಲ್ಲಿ ಪಾತ್ರವಹಿಸಿವೆ. ಆದರೆ ಹೊಸಪೇಟೆಯ ಎಲ್ಲಾ ಭಾಗಗಳಿಗೂ ನೀರಾವರಿ ವ್ಯವಸ್ಥೆ ಇಲ್ಲ. ತಾಲ್ಲೂಕಿನ ಪೂರ್ವ ಭಾಗದ ಹಳ್ಳಿಗಳು ಈಗಲೂ ಕೃಷಿಗೆ ಮಳೆಯನ್ನೇ ನಂಬಬೇಕಾಗಿದೆ. ಕೃತಕ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲದವರಿಗೆ ಮಳೆ ಬಂದರೆ ಕೃಷಿ, ಇಲ್ಲದಿದ್ದರೆ ಅವರಿವರ ಹೊಲದಲ್ಲಿ ಕೂಲಿ ಮಾಡಿ ಉಸಿರಾಡಬೇಕು.

ಅವರ ಈ ಸಮಸ್ಯೆಯನ್ನು ಪರಿಹರಿಸಲೋ ಎಂಬಂತೆ ಈ ಭಾಗದ ಗುಡ್ಡಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಹೆದ್ದಾರಿಯ ಬಲಭಾಗಕ್ಕಿರುವ ಗುಡ್ಡಗಳು ಕಬ್ಬಿಣ ಮತ್ತು ಮ್ಯಾಂಗನೀಸ್ ನಿಕ್ಷೇಪ ಹೊಂದಿವೆ. ಹಳ್ಳಿಗಳಿಗೆ ತಾಗಿಕೊಂಡಂತಿರುವ ಆ ಗುಡ್ಡಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅದು ಇಲ್ಲಿನ ಕೆಳವರ್ಗದ ಜನರಿಗೆ ಬದಲಿ ಆದಾಯದ ಮೂಲವಾಗಿದೆ. ಹೀಗೆ ಈ ತಾಲ್ಲೂಕಿನಲ್ಲಿ ಎರಡು ಪ್ರದೇಶಗಳ (ನೀರಾವರಿ ಇರುವ ಮತ್ತು ಇಲ್ಲದ ಪ್ರದೇಶಗಳ) ಜನರ ಬದುಕು ಗುಣಾತ್ಮಕವಾಗಿ ಭಿನ್ನವಾಗಿವೆ. ಈ ಭಿನ್ನತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಎರಡು ಪ್ರದೇಶಗಳಿಂದ ಒಂದೊಂದು ಗ್ರಾಮ ಪಂಚಾಯತನ್ನು ಅಧ್ಯಯನ ಮಾಡುವ ಉದ್ದೇಶ ಆರಂಭದಲ್ಲಿ ಇತ್ತು. ಆದರೆ ಸಂಪನ್ಮೂಲ ಮತ್ತು ಸಮಯದ ಅಭಾವದಿಂದ ಅದು ಸಾಧ್ಯವಾಗಲಿಲ್ಲ. ಅಧ್ಯಯನವನ್ನು ಒಣ ಭೂ ಪ್ರದೇಶದ ಒಂದು ಗ್ರಾಮ ಪಂಚಾಯತ್‌ಗೆ (ಪಾಪಿನಾಯಕನ ಹಳ್ಳಿ) ಸೀಮಿತಗೊಳಿಸಬೇಕಾಯಿತು. ಪೇಟೆ ದಾಟಿದ ಕೂಡಲೇ ಸಿಗುವ ಮೊದಲ ಹಳ್ಳೆಯೆಂದೆ ಕಾರಿಗನೂರು. ಇಡೀ ಹಳ್ಳಿಯೇ ಗಣಿಗಾರಿಕೆಯಲ್ಲಿ ಮುಳುಗಿದಂತಿದೆ. ಸುತ್ತಮುತ್ತಲಿನ ಪ್ರದೇಶ, ಮರಗಿಡಗಳು, ಕಟ್ಟಡಗಳು, ಜನರು ಎಲ್ಲರ ಬಣ್ಣ ಗಣಿ ಮಣ್ಣಿನ ಬಣ್ಣವಾಗಿದೆ. ಇಲ್ಲಿಂದ ಮುಂದೆ ವಡ್ಡರ ಹಳ್ಳಿ. ಈ ಹಳ್ಳಿಯ ಪಕ್ಕಕ್ಕಿರುವ ಗುಡ್ಡದಲ್ಲೂ ಗಣಿ ಕೆಲಸ ನಡಿಯುತ್ತಿದೆ. ಆದರೆ ಹಳ್ಳಿಯ ಜನರು ಆ ಕಡೆ ಆಕರ್ಷಿತರಾಗಿಲ್ಲ. ತಮ್ಮ ಅಲ್ಪ ಸ್ವಲ್ಪ ಭೂಮಿಯ ಕೃಷಿಯಲ್ಲೇ ತೃಪ್ತರಾಗಿದ್ದಾರೆ. ವಡ್ಡರಹಳ್ಳಿ ನಂತರ ಪಾಪಿನಾಯಕನ ಹಳ್ಳಿ ಸಿಗುತ್ತದೆ – ಈ ಅಧ್ಯಯನದ ಕೇಂದ್ರ ಬಿಂದು. ಹಳ್ಳಿ ಮತ್ತು ಅಲ್ಲಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಿದ್ದೇನೆ. ಈ ಅಧ್ಯಾಯದ ಮುಂದಿನ ಪುಟಗಳಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ಚರ್ಚೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲಿದ್ದೇನೆ. ಕೊನೆಯ ಭಾಗದಲ್ಲಿ ಅಧ್ಯಯನದ ಉದ್ದೇಶ, ವಿಧಾನ, ಎತಿಮಿತಿಗಳು ಇತ್ಯಾದಿಗಳನ್ನು ವಿವರಿಸಿದ್ದೇನೆ.

ಪಂಚಾಯತ್ ಮತ್ತು ಆಧುನೀಕರಣ

ಆಧುನೀಕರಣ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ. ತುಂಬಾ ಪ್ರಚಲಿತದಲ್ಲಿರುವ ಮತ್ತು ಜನ ಸಾಮಾನ್ಯರ ಅರಿವಿನ ಭಾಗವಾಗಿರುವ ಆಧುನೀಕರಣದ ಚಿತ್ರಣವನ್ನು ತಾಂತ್ರಿಕ ಆಧುನೀಕರಣ (ಟೆಕ್ನಾಲೊಜಿಕಲ್ ಮಾಡರ್ನಿಟಿ) ದೃಷ್ಟಿಕೋನ ಕೊಡಮಾಡಿದೆ. ಇದು ಸಮಾಜಗಳನ್ನು ಆಧುನಿಕ ಮತ್ತು ಸಾಂಪ್ರದಾಯಿಕವೆಂದು ವಿಂಗಡಿಸುತ್ತದೆ. ಮೇಕ್ಸ್‌ವೇಬರ್‌ಗುರುತಿಸಿದ ಮೇಲ್‌ರಚನೆಯ ಅಂಶಗಳನ್ನು ಹಿಡಿದು ಆಧುನಿಕ ಸಮಾಜದ ಗುಣಲಕ್ಷಣಗಳನ್ನು ಸಾಂಪ್ರದಾಯಿಕ ಸಮಾಜದ ಲಕ್ಷಣಗಳಿಗೆ ಹೋಲಿಸಿ ಸಮಾಜ ಪರಿವರ್ತನೆಯ ಥಿಯರಿಯನ್ನು ಆರಂಭಿಸಿದವರಲ್ಲಿ ಮೊದಲಿಗನಾಗಿ ಟಾಲ್‌ಕಾಟ್‌ಪಾರ್ಸನನ್ನು ಗುರುತಿಸಬಹುದು. ಈತನ ಪ್ರಕಾರ ಸಂಬಂಧ ಆಧಾರಿತ ವ್ಯವಹಾರದ ಬದಲು ಒಪ್ಪಂದ ಆಧಾರಿತ ವ್ಯವಹಾರ, ವ್ಯವಹಾರದಲ್ಲಿ ಹಣದ ಬಳಕೆ, ಅವಿಭಕ್ತ ಕುಟುಂಬ ಸಡಿಲಗೊಂಡು ವಿಭಿಕ್ತ ಕುಟುಂಬಗಳ ರಚನೆ, ಸಹಬಾಳ್ವೆಗಿಂತ ಸ್ಪರ್ಧಾತ್ಮಕ ಬದುಕಿಗೆ ಒತ್ತು, ಸಮುದಾಯಕ್ಕಿಂತ ವ್ಯಕ್ತಿ ಪ್ರಧಾನ ವ್ಯವಸ್ಥೆಗೆ ಒತ್ತು, ರಾಜರುಗಳ ಆಡಳಿತದ ಬದಲು ಪ್ರಜಾಪ್ರಭುತ್ವ ಇವೇ ಮುಂತಾದವುಗಳು ಆಧುನಿಕ ಸಮಾಜದ ಲಕ್ಷಣಗಳು.

ಈ ರೀತಿಯ ಪರಿವರ್ತನೆಗೆ ಮುಖ್ಯ ಕಾರಣವನ್ನು ಎನ್‌ಲೈಟನ್‌ಮೆಂಟ್‌ನ ಸಂದರ್ಭದಲ್ಲಿ ಪ್ರಪಂಚವನ್ನು ನೋಡುವ ದೃಷ್ಟಿಕೋನದಲ್ಲಿ ಆದ ಬದಲಾವಣೆಗಳಲ್ಲಿ ಗುರುತಿಸಬಹುದು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಪ್ರಕೃತಿಯನ್ನು ನೋಡುವ ದೃಷ್ಟಿಕೋನ ಬದಲಾಯಿತು. ಇದರ ಜತೆಗೆ ವಿಜ್ಞಾನದ ವಿಧಾನ ಪ್ರಪಂಚವನ್ನು ತಿಳಿದುಕೊಳ್ಳಲು ಸರಿಯಾದ ವಿಧಾನವೆನ್ನುವ ತೀರ್ಮಾನವೂ ಬಲಗೊಳ್ಳುತ್ತ ಬಂತು. ಇದಕ್ಕೆ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನ ಹಿಂದೆ ಅಸಾಧ್ಯವಾದುದನ್ನು ಮಾಡಿತೋರಿಸಿದ್ದು. ಪ್ರಕೃತಿಯ ಮೇಲೆ ತಕ್ಕಮಟ್ಟಿನ ಹತೋಟಿ, ಹಲವಾರು ಮೆಶನರಿ ಮತ್ತು ಯಂತ್ರಗಳ ಆವಿಷ್ಕಾರ, ಆ ಯಂತ್ರಗಳು ಉತ್ಪಾದನೆಯಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಮಾಡಿದ ಪರಿಣಾಮ ಇತ್ಯಾದಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳು ಹಿಂದಿನ ಜ್ಞಾನ ಮತ್ತು ತಂತ್ರಜ್ಞಾನಗಳಿಂದ ಉತ್ತಮ ಎನ್ನುವುದನ್ನು ಸಾಧಿಸಿದವು. ಈ ಎಲ್ಲಾ ಪರಿವರ್ತನೆಗಳು ಜ್ಞಾನದ ಸಾಂಪ್ರದಾಯಿಕ ಹರಿಕಾರರ ಬುಡವನ್ನೇ ಅಲ್ಲಾಡಿಸಿದವು. ಅವರು ಕೊಡಮಾಡುವ ಪ್ರಕೃತಿ ಮತ್ತು ಸಮಾಜದ ಚಿತ್ರಣಗಳಿಗೆ ಭಿನ್ನವಾದ ಚಿತ್ರಣವನ್ನು ವಿಜ್ಞಾನ ಕೊಟ್ಟಿತು. ಜತೆಗೆ ಉತ್ಪಾದನಾ ವಿಧಾನದಲ್ಲಾದ ಬದಲಾವಣೆ ಸಾಮಾಜಿಕ ಸಂಬಂಧದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗೆ ಕಾರಣವಾದವು. ಹೀಗೆ ವಿಜ್ಞಾನ/ತಂತ್ರಜ್ಞಾನಗಳಿಂದ ಆಧುನಿಕ ಸಮಾಜ ರೂಪುಗೊಂಡಿತು ಎನ್ನುವ ಸರಳೀಕೃತ ವಾದಗಳು ಬರತೊಡಗಿದವು. ಇವು ಸಾಮಾಜಿಕ ಪರಿವರ್ತನೆಯನ್ನು ತುಂಬಾ ಸರಳವಾಗಿ ಪರಿಭಾವಿಸುತ್ತವೆ. ವಿಜ್ಞಾನ ತಂತ್ರಜ್ಞಾನಗಳು ಉತ್ಪಾದನಾ ವಿಧಾನದಲ್ಲಿ ಬದಲಾವಣೆ ತರುತ್ತವೆ. ಬದಲಾದ ಉತ್ಪಾದನಾ ವಿಧಾನ ಸಾಮಾಜಿಕ ಸಂಬಂಧಗಳನ್ನು ಪರಿವರ್ತಿಸುತ್ತದೆ ಎನ್ನುವ ವ್ಯಾಖ್ಯಾನವಿದೆ. ಇದನ್ನೆ ಮುಂದುವರೆಸಿದರೆ ಯಾವುದೇ ಸಮಾಜದಲ್ಲಿ ಆಧುನಿಕ ಸಮಾಜದ ಸಾಂಘಿಕ ಮತ್ತು ಸಾಂಸ್ಥಿಕ ರಚನೆಗಳನ್ನು ಅಳವಡಿಸುವ ಮೂಲಕ ಸಮಾಜವನ್ನು ಆಧುನೀಕರಣ ಗೊಳಿಸಬಹುದೆಂಬ ಗೃಹಿತವಿದೆ. ಈ ಗೃಹಿತದೊಂದಿಗೆ ತೃತೀಯ ಜಗತ್ತಿನ ದೇಶಗಳು ತಮ್ಮ ಉತ್ಪಾದನಾ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು, ಇತರ ಕ್ಷೇತ್ರಗಳಲ್ಲಿ ಆಧುನಿಕ ಸಂಸ್ಥೆಗಳನ್ನು ಧಾರಾಳವಾಗಿ ಅಳವಡಿಸಿಕೊಂಡವು.

ಸ್ವಾತಂತ್ರ್ಯ ನಂತರ ಭಾರತ ಕೂಡ ಈ ಕ್ರಮದ ಆಧುನೀಕರಣಕ್ಕೆ ಪ್ರಯತ್ನಿಸಿತು. ಆಧುನಿಕ ತಂತ್ರಜ್ಞಾನ ಮತ್ತು ಸಾಂಘಿಕ ರಚನೆಗಳನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಲಾಯಿತು. ಇದರಿಂದ ತಕ್ಕಮಟ್ಟಿನ ಆರ್ಥಿಕ ಪ್ರಗತಿ ಸಾಧ್ಯವಾದರೂ ಸಾಮಾಜಿಕ ಪರಿವರ್ತನೆ ಹಾಗೂ ರಾಜಕೀಯ ಸಶಕ್ತೀಕರಣ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಆಧುನೀಕರಣದ ವಿರುದ್ಧ ಪ್ರತಿಭಟನೆಗಳು ಶುರುವಾದವು. ಪ್ರದೇಶ, ಭಾಷೆ ಇತ್ಯಾದಿ ಸಾಂಸ್ಕೃತಿಕ ನೆಲೆಗಳು ಜನರನ್ನು ಒಟ್ಟು ಸೇರಿಸಿದರೆ ಬಡತನ, ನಿರುದ್ಯೋಗ, ಅಸಮಾನತೆ ಇತ್ಯಾದಿ ಮೆಟಿರಿಯಲ್ ಪ್ರಶ್ನೆಗಳು ಚಳವಳಿಗಳನ್ನು ಗಟ್ಟಿಗೊಳಿಸಿದವು. ಕೆಲವರು ಆಧುನೀಕರಣದ ತತ್ವವನ್ನೇ ಪ್ರಶ್ನಿಸಿದರೆ ಇನ್ನು ಕೆಲವರು ಅದರ ಅನುಷ್ಠಾನ ಕ್ರಮವನ್ನು ಟೀಕಿಸಿದರು. ತಾಂತ್ರಿಕ ಆಧುನೀಕರಣದತ್ತ ದಾಪುಗಾಲು ಹಾಕುತ್ತಿದ್ದವರನ್ನು ಈ ಪ್ರತಿಭಟನೆಗಳು ಮತ್ತು ಇತರ ಬೆಳವಣಿಗೆಗಳು ತಡೆದು ಪುನರ್ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದವು. ಪರಿಣಾಮವಾಗಿ ಅಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ಯಾಕೆ ತಲುಪುತ್ತಿಲ್ಲ ಎನ್ನುವುದರ ಅಧ್ಯಯನಕ್ಕೆ ಬಲವಂತ್‌ರಾಯ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ೧೯೫೭ರಲ್ಲಿ ನೇಮಕವಾಯಿತು.[2] ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ತಳ ಮಟ್ಟದಲ್ಲಿ ರಾಜಕೀಯ ಪ್ರಕ್ರಿಯೆ ಊಳಿಗಮಾನ್ಯ ಗುಣ ಲಕ್ಷಣಗಳಿಂದ ಮುಕ್ತವಾಗಿಲ್ಲ. ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಸವಲತ್ತುಗಳು ಸ್ಥಳೀಯ ಬಲಾಢ್ಯರ ಮೂಲಕವೇ ಹಾದು ಜನಸಾಮಾನ್ಯರಿಗೆ ತಲುಪಬೇಕಾಗಿದೆ. ಇದರಿಂದಾಗಿ ಅಭಿವೃದ್ಧಿಯ ಲಾಭ ಜನ ಸಾಮಾನ್ಯರಿಗೆ ತಲುಪುತ್ತಿಲ್ಲ ಎನ್ನುವ ತೀರ್ಮಾನಕ್ಕೆ ಆ ಕಮಿಟಿ ಬಂತು. ಆ ಸಮಸ್ಯೆಗಳನ್ನು ಪರಿಹರಿಸಲು ಚುನಾವಣೆಯ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಸಂಘಟಿಸಬೇಕೆಂದು ಕಮಿಟಿ ಸಲಹೆ ನೀಡಿತು. ಜತೆಗೆ ಗ್ರಾಮೀಣ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಜನರ ಆಶೋತ್ತರಗಳಿಗೆ ಅನುಗುಣವಾಗಿವೆಯೇ ಎಂದು ನಿರ್ಣಯಿಸುವ ಜವಾಬ್ದಾರಿಯನ್ನು ಚುನಾಯಿತ ಪ್ರತಿನಿಧಿಗಳು ಹೊರಬೇಕೆಂದು ಕೂಡ ಈ ಕಮಿಟಿ ಸೂಚಿಸಿತು. ಈ ಉದ್ದೇಶ ಈಡೇರಿಕೆಗಾಗಿ ಕಮಿಟಿ ಮೂರು ಹಂತಗಳ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಸೂಚಿಸಿತು. ತಳ ಮಟ್ಟದಲ್ಲಿ ಗ್ರಾಮ ಪಂಚಾಯತ್‌ಗಳು, ತಾಲ್ಲೂಕು ಮಟ್ಟದಲ್ಲಿ ಪಂಚಾಯತ್ ಸಮಿತಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್‌ಗಳನ್ನು ಜಾರಿಗೆ ತರಲು ಸಮಿತಿ ಸಲಹೆ ನೀಡಿತು.

ಹೀಗೆ ಕಾನೂನು ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಗೆ ಪುನರ್‌ಜೀವ ತುಂಬಲಾಯಿತು. ಆದರೆ ತಳಮಟ್ಟದ ಒಟ್ಟು ಪರಿಸರ ಪಂಚಾಯತ್‌ರಾಜ್ ವ್ಯವಸ್ಥೆಗೆ ಪೂರಕವಾಗಿರಲಿಲ್ಲ. ರಾಜ್ಯಮಟ್ಟದಿಂದ ಕೆಳಗೆ ಆಡಳಿತ ರಚನೆಗಳೇ ಇಲ್ಲದಿರುವುದರ ಜತೆಗೆ ಇತರ ಹಲವಾರು ಕಾರಣಗಳನ್ನು ಅಶೋಕ್ ಮೆಹ್ತಾ ಕಮಿಟಿ ಪಟ್ಟಿ ಮಾಡಿದೆ.[3] ಕಮಿಟಿಯ ಪ್ರಕಾರ ಆ ಪಂಚಾಯತ್‌ಗಳಿಗೆ ಯಾವುದೇ ಅಧಿಕಾರಗಳಿರಲಿಲ್ಲ. ರಾಜ್ಯ ಅಥವಾ ಕೇಂದ್ರ ಸರಕಾರದಿಂದ ಅನುದಾನವಿರಲಿಲ್ಲ; ಜತೆಗೆ ಸ್ಥಳೀಯವಾಗಿ ಸಂಪನ್ಮೂಲ ಒಟ್ಟು ಸೇರಿಸಲು ಅವಕಾಶವಿರಲಿಲ್ಲ. ಇದರಿಂದಾಗಿ ಆ ಪಂಚಾಯತ್‌ಗಳು ಅಭಿವೃದ್ಧಿ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಹೆಚ್ಚೆಂದರೆ ಕೆಲವೊಂದು ಸಿವಿಕ್ ಕೆಲಸಗಳನ್ನು, ಅದೂ ರಾಜ್ಯ ಸರಕಾರದ ನೇರ ಹತೋಟಿಯಲ್ಲಿ, ಮಾಡಿಸುವುದು ಮಾತ್ರ ಪಂಚಾಯತ್ ಕೆಲಸವಾಗಿತ್ತು. ಪಂಚಾಯತನ್ನು ಆ ಸ್ಥಿತಿಯಲ್ಲಿ ಇಡುವುದರಲ್ಲಿ ಕೇಂದ್ರ ಸರ್ಕಾರದ ಪಾತ್ರವೂ ಇತ್ತು.[4] ಪಂಚಾಯತ್ ವ್ಯವಸ್ಥೆಯನ್ನು ಗಟ್ಟಿಮಾಡಲು ಅದು ರಾಜ್ಯ ಸರಕಾರಕ್ಕೆ ಅಧಿಕಾರವನ್ನು ಕೊಡಲಿಲ್ಲ; ಅನುದಾನವನ್ನೂ ಕೊಡಲಿಲ್ಲ. ತನ್ನ ಹಲವಾರು ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಕೇಂದ್ರ ಸರಕಾರ ಪಂಚಾಯತ್‌ನ್ನು ಉಪಯೋಗಿಸುತ್ತಿತ್ತು.[5] ಸಂಪನ್ಮೂಲ ಮತ್ತು ಅಧಿಕಾರ ಕೊರತೆಗಳಿಂದ ಪಂಚಾಯತ್ ವ್ಯವಸ್ಥೆ ತನ್ನ ಅಸ್ತಿತ್ವವನ್ನೇ ಕಳಕೊಂಡಿತು. ಕೆಲವು ರಾಜ್ಯಗಳಲ್ಲಿ ಪಂಚಾಯತ್‌ಗಳಿಗೆ ನಾಮಕಾವಸ್ಥೆ ನಡೆಯುತ್ತಿದ್ದ ಚುನಾವಣೆಗಳು ನಿಂತವು. ಈ ಎಲ್ಲ ಚರ್ಚೆಗಳು ಪಂಚಾಯತ್ವ್ಯವಸ್ಥೆಯ ಚರ್ಚೆಯನ್ನು ಜೀವಂತ ಇರಿಸಿದವು.

ಪಂಚಾಯತ್ಮತ್ತು ಸಮುದಾಯವಾದ

ಇದೇ ಸಂದರ್ಭದಲ್ಲಿ ವಿಕೇಂದ್ರೀಕೃತ ಆಡಳಿತಕ್ಕೆ ಪೂರಕವಾದ ತಾತ್ವಿಕ ಚಿಂತನೆಗಳು ಮತ್ತೊಂದು ದಿಕ್ಕಿನಿಂದಲೂ ನಡೆಯುತ್ತಿದ್ದವು. ಇವರು ಆಧುನೀಕರಣ ತತ್ವವನ್ನು ತಿರಸ್ಕರಿಸಿ ದೇಶಿ ಪರಿಕರಗಳ ಮೂಲಕ ಆಡಳಿತವನ್ನು ಪುನರ್ ನಿರ್ವಚಿಸಿಕೊಳ್ಳುವುದಕ್ಕೆ ಮಹತ್ವ ನೀಡುತ್ತಾರೆ. ಇವರನ್ನು ಸಮುದಾಯವಾದಿಗಳೆಂದು (ಕಮ್ಯುನಿಟೇರಿಯನ್ಸ್) ಗುರುತಿಸಬಹುದು.[6] ಇವರನ್ನು ಇಲ್ಲಿ ದೇಶಿವಾದಿಗಳೆಂದು ನಿರ್ವಚಿಸಿಕೊಂಡಿದ್ದೇನೆ. ಇವರಿಗೂ ಸಂಪ್ರದಾಯವಾದಿಗಳಿಗೂ ವ್ಯತ್ಯಾಸಗಳಿವೆ. ಧಾರ್ಮಿಕ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ನಿರ್ವಚಿಸಿಕೊಳ್ಳಬೇಕೆನ್ನುವುದೇ ಸಂಪ್ರದಾಯವಾದಿಗಳ ಬಯಕೆ. ಈಗಿನ ಧರ್ಮ ನಿರಪೇಕ್ಷ ರಾಷ್ಟ್ರೀಯತೆಯ ಕಲ್ಪನೆಯ ಸ್ಥಳದಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ರೂಪಿಸುವುದು ಇವರ ಏಕಮಾತ್ರ ಗುರಿ. ತಳಮಟ್ಟದ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳನ್ನು ಗುರುತಿಸಿ ಬೆಳೆಸಬೇಕೆಂಬ ಉದ್ದೇಶ ಇವರಿಗಿಲ್ಲ. ಈ ದೃಷ್ಟಿಯಿಂದ ಅಂದರೆ ವಿವಿಧತೆಯನ್ನು ಸಹಿಸದಿರುವ ದೃಷ್ಟಿಯಿಂದ ಸಂಪ್ರದಾಯವಾದಿಗಳಿಗೂ ತಾಂತ್ರಿಕ ಆಧುನೀಕರಣ ವಾದಿಗಳಿಗೂ ವಿಶೇಷ ವ್ಯತ್ಯಾಸವಿಲ್ಲ. ಅದೇ ಸಂದರ್ಭದಲ್ಲಿ ವಿವಿಧತೆಯನ್ನು ಸಹಿಸುವ ವಿಚಾರದಲ್ಲಿ ಸಂಪ್ರದಾಯವಾದಿಗಳಿಗೂ ಸಮುದಾಯವಾದಿಗಳಿಗೂ ಹೋಲಿಕೆಯಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳನ್ನು ಉಳಿಸಿ ಬೆಳೆಸಬೇಕೆಂಬ ಅಂಶದ ಮೇಲೆ ವಿಶೇಷ ಕಾಳಜಿ ತೋರಿಸುವರು ಸಮುದಾಯವಾದಿಗಳು. ಆದರೆ ಎಷ್ಟೋ ಸಂದರ್ಭಗಳಲ್ಲಿ ಸಮುದಾಯವಾದಿಗಳು ಆಧುನೀಕರಣದ ವಿರುದ್ಧ ಮಾಡುವ ಟೀಕೆಗಳನ್ನು ಸಂಪ್ರದಾಯವಾದಿಗಳು ಬಳಸುವುದರಿಂದ ಇವರಿಬ್ಬರ ತಾತ್ವಿಕ ನೆಲೆಗಳು ಒಂದೇ ಎನ್ನುವ ತಪ್ಪು ಕಲ್ಪನೆ ಬೆಳೆದಿದೆ. ಇದೇ ಸಂದರ್ಭದಲ್ಲಿ ಸಮುದಾಯವಾದಿಗಳ ಥಿಯರಿಗಳೇ ಸಂಪ್ರದಾಯವಾದಿಗಳ ತಾತ್ವಿಕ ವಾಗ್ವಾದಗಳಿಗೆ ಬೇಕಾದಷ್ಟು ಆಕರಗಳನ್ನು ಒದಗಿಸಿವೆ ಎನ್ನುವುದು ಕೂಡ ಸತ್ಯ.

ಸಮುದಾಯವಾದಿಗಳ ಆಧುನೀಕರಣದ ವಿರುದ್ಧದ ಟೀಕೆಯ ಸಾರಾಂಶವಿಷ್ಟು. ಪ್ರಸಕ್ತ ಆಡಳಿತ ವ್ಯವಸ್ಥೆ ಮಾರುಕಟ್ಟೆ, ಲಾಭ, ಇತ್ಯಾದಿ ಬಂಡವಾಳಶಾಹಿ ವ್ಯವಸ್ಥೆಯ ಅಂಶಗಳಿಗೆ ಮಹತ್ವ ಕೊಡುತ್ತಿದೆ. ಇಂತಹ ಆಡಳಿತದಲ್ಲಿ ಮಹತ್ವ ತಾಂತ್ರಿಕ ಪರಿಣಿತರಿಗೆ. ಸಾಂಪ್ರದಾಯಿಕ ಸಮಾಜವನ್ನು ಆಧುನಿಕಗೊಳಿಸುವುದು ಅಥವಾ ಬಂಡವಾಳಶಾಹಿಗೊಳಿಸುವುದೇ ಇವರ ಮುಖ್ಯ ಗುರಿ. ಅದಕ್ಕಾಗಿ ಆಧುನಿಕವಲ್ಲದ ಪ್ರತಿಯೊಂದು ನಿರುಪಯೋಗಿ ಮತ್ತು ಆದಷ್ಟು ಬೇಗ ನಾಶಹೊಂದಬೇಕಾಗಿರುವುದು ಎನ್ನುವ ನಂಬಿಕೆ ಇವರಿಗಿದೆ. ಆದುದರಿಂದ ನವ ರಾಷ್ಟ್ರ ನಿರ್ಮಾಣದಲ್ಲಿ ಆಧುನಿಕ ಬದುಕಿಂದ ವಂಚಿತರಾಗಿರುವ ಅಸಂಖ್ಯಾತ ಭಾರತೀಯರ ಅಭಿಪ್ರಾಯಗಳು ನಗಣ್ಯವಾಗಿವೆ. ಹೀಗೆ ಇಂತಹ ಆಡಳಿತ ತಳ ಮಟ್ಟದಲ್ಲಿರುವ ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಪ್ರಭುತ್ವದ ಅತಿರೇಕಗಳಿಂದ ನೊಂದು ಜನ ಪ್ರತಿಭಟಿಸಿದರೆ ಅದನ್ನು ರಾಷ್ಟ್ರದ ಹಿತಾಸಕ್ತಿಯ ಹೆಸರಿನಲ್ಲಿ ಹತ್ತಿಕ್ಕಲಾಗುತ್ತಿದೆ. ಬಲವಾದ ರಾಷ್ಟ್ರ ಕಟ್ಟುವ ನೆಪದಲ್ಲಿ ಅಸಂಖ್ಯಾತ ರಾಜಕೀಯ ಪ್ರತಿಕ್ರಿಯೆಗಳನ್ನು ಮೂಲೆಗುಂಪಾಗಿಸಲಾಗಿದೆ. ಇಲ್ಲೆಲ್ಲೂ ಮಾನವತೆಯ ಪ್ರಶ್ನೆಗಳಿಲ್ಲ. ಆಡಳಿತವನ್ನು ಮಾನವ ಪ್ರಶ್ನೆಗಳೊಂದಿಗೆ ಜೋಡಿಸದಿದ್ದರೆ ಅದು ಮಾನವೀಯಗೊಳ್ಳುವುದಾದರೂ ಹೇಗೆ? ಆದುದರಿಂದ ಜನ ಸಾಮಾನ್ಯರ ಆಸಕ್ತಿಗಳನ್ನು ಕಾಪಾಡುವ ಆಡಳಿತ ರಚನೆಗಳಿಗೆ ಮಹತ್ವ ನೀಡಬೇಕೆನ್ನುವುದು ಇವರ ವಾದ.

ಸಂಪ್ರದಾಯವಾದಿಗಳು ಮತ್ತು ಸಮುದಾಯವಾದಿಗಳ ಪ್ರಕಾರ ಇಂದಿನ ಸಮಸ್ಯೆಗೆ ಪರಿಹಾರವಾಗಿ ಪುನಃ ಆಧುನಿಕ ಸಂಸ್ಥೆಗಳ ಮೊರೆ ಹೋಗುವ ಅಗತ್ಯವಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲೇ ಪರಿಹಾರವನ್ನು ಕಂಡುಕೊಳ್ಳಬೇಕೆನ್ನುವುದೇ ಅವರ ವಾದ. ತಮ್ಮ ವಾದವನ್ನು ಗಟ್ಟಿಗೊಳಿಸಲು ಆಧುನಿಕೋತ್ತರ ಚಿಂತರು ಕೊಡಮಾಡುವ ಆಧುನೀಕರಣದ ವಿಮರ್ಶೆಯನ್ನು ಮುಂದಿಡುತ್ತಾರೆ. ಅವರ ಪ್ರಕಾರ ಆಧುನೀಕರಣಕ್ಕೆ ನಿಜವಾಗಿಯೂ ಮಾನವ ನಿರ್ಮಿತ ಬಂಧನಗಳಿಂದ ಬಿಡಿಸುವ ಶಕ್ತಿಯಿಲ್ಲ. ಆಧುನೀಕರಣದಲ್ಲಿ ಅಂತರ್‌ಗತವಾಗಿಯೇ ಮೇಲು; ಕೀಳು, ಹಿಂದುಳಿದ; ಮುಂದುವರಿದ ಇತ್ಯಾದಿ ವಿಂಗಡನೆಗಳಿವೆ. ನಾನು ಮತ್ತು ಇತರರು, ವ್ಯಕ್ತಿ ಮತ್ತು ವಸ್ತು, ಬರಹ ಮತ್ತು ಮಾತು, ಆಧುನಿಕ ಮತ್ತು ಸಂಪ್ರದಾಯ, ಸತ್ಯ ಮತ್ತು ಭ್ರಮೆ ಇತ್ಯಾದಿ ವಿರೋಧಭಾಸಗಳು ಎನ್‌ಲೈಟನ್‌ಮೆಂಟ್‌ನ ಕೂಸಾದ ಆಧುನೀಕರಣದ ಭಾಗಗಳೇ. ಇದರಲ್ಲಿ ಪ್ರಥಮ ಭಾಗ ಸರಿ, ಪ್ರಗತಿಪರ, ವಿಶೇಷ ಎನ್ನುವ ಅರ್ಥವನ್ನು ಕೊಡುತ್ತವೆ. ಆದುದರಿಂದ ಅವು ಉಳಿಯಬೇಕು ಮತ್ತು ಬೆಳೆಯಬೇಕು. ಇದಕ್ಕೆ ವಿರುದ್ಧವಾದ ಅರ್ಥವನ್ನು ಎರಡನೇ ಭಾಗ ಕೊಡುತ್ತದೆ. ಆದುದರಿಂದ ಅದಕ್ಕೆ ಉಳಿಯುವ ಮತ್ತು ಬೆಳೆಯುವ ಹಕ್ಕಿಲ್ಲ. ಹೀಗೆ ಕೆಳ ವರ್ಗವನ್ನು ಮತ್ತು ಪ್ರಕೃತಿಯನ್ನು ಶೋಷಿವು ಗುಣ ಆಧುನೀಕರಣದಲ್ಲಿ ಅಂತರ್‌ಗತವಾಗಿಯೇ ಇದೆ ಎನ್ನುತ್ತಾರೆ.

ಇಂತಹ ಆಧುನೀಕರಣದಲ್ಲಿ ವ್ಯಕ್ತಿ ಮತ್ತು ಪ್ರಭುತ್ವದ ಸಂಬಂಧ ತುಂಬಾ ಸೀಮಿತವಾಗಿದೆ. ಯಾಕೆಂದರೆ ಆಧುನೀಕರಣ ಅಮೂರ್ತ ಸ್ವರೂಪದ ವ್ಯಕ್ತಿಯನ್ನು ರೂಪಿಸಿದೆ. ಅಮೂರ್ತ ವ್ಯಕ್ತಿಯ ಕಲ್ಪನೆ ಅಚಾರಿತ್ರಿಕವಾದುದು ಮತ್ತು ಸಮುದಾಯ ಬದುಕಿಗೆ ವಿರುದ್ಧವಾದುದು. ಅಚಾರಿತ್ರಿಕವಾದುದು ಯಾಕೆಂದರೆ ವ್ಯಕ್ತಿ ಕೇವಲ ಪ್ರಜೆಯಾಗಿರುವುದಿಲ್ಲ; ಆತ ಯಾವುದೋ ಕುಟುಂಬಕ್ಕೆ, ಜಾತಿಗೆ, ಧರ್ಮಕ್ಕೆ ಸೇರಿದವನು. ಆದುದರಿಂದ ವ್ಯಕ್ತಿಗೆ ಪ್ರಜೆತನ ದೊರಕಿದ ಕೂಡಲೇ ಆತನ ಇತರ ಗುರುತುಗಳು ಮರೆಯಾಗುತ್ತವೆ ಎಂದು ತಿಳಿಯಬೇಕಾಗಿಲ್ಲ. ಕುಟುಂಬ, ಜಾತಿ, ಧರ್ಮಗಳು ಚಾರಿತ್ರಿಕವಾಗಿಯೇ ನಮ್ಮ ಸಮಾಜದ ಮುಖ್ಯ ಅಂಶಗಳು. ಅವುಗಳು ವ್ಯಕ್ತಿ ಬದುಕುವ ಪರಿಸರದ ಮೌಲ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹುಟ್ಟಿನಿಂದ ಸಾವಿನ ತನಕ ವ್ಯಕ್ತಿಯ ಅರಿವನ್ನು ರೂಪಿಸುವ ಕೆಲಸವನ್ನು ಇವು ಮಾಡುತ್ತವೆ. ಎರಡನೆಯದಾಗಿ ಅಮೂರ್ತ ಸ್ವರೂಪದ ವ್ಯಕ್ತಿ ಇತರರೊಂದಿಗೆ ಕೇವಲ ಒಪ್ಪಂದ ಆಧಾರಿತ ಸಂಬಂಧ ಇಟ್ಟುಕೊಳ್ಳುತ್ತಾನೆ. ಆ ಸಂಬಂಧ ಕೂಡ ತನ್ನ ವೈಯಕ್ತಿಕ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ನಡೆಯುವುದರಿಂದ ಸಮುದಾಯ ಬದುಕು ನಶಿಸಿದೆ. ಈ ಕ್ರಮದಲ್ಲಿ ರೂಪುಗೊಂಡ ಅಮೂರ್ತ ವ್ಯಕ್ತಿಗೆ ಪ್ರಭುತ್ವದ ಅತಿರೇಕಗಳನ್ನು ಪ್ರತಿಭಟಿಸಲು ಸಾಧ್ಯವಿಲ್ಲ. ಹಾಗೆಂದು ಆಧುನೀಕರಣ ಪರಿಕರಗಳ ಮೂಲಕ ಪ್ರತಿಭಟಿಸುವಷ್ಟು ತಯಾರಿ ಸಮಾಜದ ಎಲ್ಲಾ ವರ್ಗಗಳಲ್ಲಿ ಇಲ್ಲ. ಈ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ರಾಜಕೀಯ ಪ್ರಕ್ರಿಯೆಗಳನ್ನು ಪುನರ್ ಜೀವನಗೊಳಿಸುವ ಅಗತ್ಯವಿದೆ ಎಂದು ಸಮುದಾಯವಾದಿಗಳು ಅಭಿಪ್ರಾಯ ಪಡುತ್ತಾರೆ. ಸಮುದಾಯವಾದಿಗಳ ಪ್ರಕಾರ ಅದೇನು ಕಷ್ಟದ ಕೆಲಸವಲ್ಲ. ಯಾಕೆಂದರೆ ಆಧುನೀಕರಣ ಸಾಂಪ್ರದಾಯಿಕ ಗುರುತುಗಳನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದೆ ಹೊರತು ಅವುಗಳನ್ನು ಸಂಪೂರ್ಣ ನಾಶಗೊಳಿಸಿಲ್ಲ. ಇಷ್ಟೆಲ್ಲಾ ಆಧುನೀಕರಣ ಪ್ರಕ್ರಿಯೆಯ ನಡುವೆಯೂ ಅವುಗಳು ಜೀವಂತ ಇರುವುದೇ ಅವುಗಳ ಅಂತಃಸತ್ವಕ್ಕೆ ಸಾಕ್ಷಿ. ಆದುದರಿಂದ ಅವುಗಳನ್ನು ಸಾಂಪ್ರದಾಯಿಕ ಸಂಸ್ಥೆಗಳೆಂದು ಮೂಲೆಗುಂಪಾಗಿಸುವುದು ಸರಿಯಲ್ಲ. ಅವುಗಳನ್ನು ನಾಶವಾಗಲು ಬಿಡಬಾರದು; ರಕ್ಷಿಸಿ ಬೆಳೆಸಬೇಕೆಂದು ಸಮುದಾಯವಾದಿಗಳು ವಾದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳಬೇಕು ಎನ್ನುವ ಆಶಯ ಸಮುದಾಯವಾದಿಗಳಿಗೆ ಇದೆ.

ಅಧ್ಯಯನದ ಉದ್ದೇಶ

ಹೀಗೆ ನಮ್ಮಲ್ಲಂತೂ ಈಗ ಪ್ರತಿಯೊಂದು ಸಮಸ್ಯೆಗೂ ಹಿಂದಕ್ಕೆ ಹೋಗುವ ಪರಿಹಾರವನ್ನು ಸೂಚಿಸಲಾಗುತ್ತಿದೆ. ನಮ್ಮ ಗತಕಾಲದಲ್ಲೊಂದು ಆದರ್ಶ ಲೋಕವಿತ್ತು ಅದನ್ನು ಈ ದರಿದ್ರ ಆಧುನೀಕರಣ ನಾಶ ಮಾಡಿತು ಎನ್ನುವ ಕಲ್ಪನೆ ಇಂದು ಬಹುಪ್ರಚಲಿತ. ಒಂದು ಕಾಲದಲ್ಲಿ ನಮ್ಮಲ್ಲಿ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳಿದ್ದವು; ಅವೆಲ್ಲಾ ಆಧುನೀಕರಣದಿಂದ ನಾಶವಾದವು ಎನ್ನುವುದು ಕೂಡ ಮೇಲಿನ ವಾದದ ಮುಂದುವರಿಕೆಯೇ ಆಗಿದೆ. ಅವುಗಳನ್ನು ಪುನರ್ ಚೇತನಗೊಳಿಸುವ ಮೂಲಕ ನಮ್ಮ ಸಮಾಜದ ಕೆಳವರ್ಗಗಳನ್ನು ಸಶಕ್ತೀಕರಣಗೊಳಿಸಬಹುದು ಎನ್ನುವ ನಂಬಿಕೆಯೂ ಇದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯ ಭಾಗವಾಗಿರುವ ತಳಮಟ್ಟದ ರಾಜಕೀಯ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಅವುಗಳ ಸ್ವರೂಪವೇನು ಆ ರಾಜಕೀಯ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಯಾರು ಅವುಗಳು ಯಾರ ಆಸಕ್ತಿಗೆ ಪೂರಕವಾಗಿದ್ದವು? ಕೆಳ ಜಾತಿ/ವರ್ಗಗಳ ಆಶೋತ್ತರಗಳಿಗೆ ಅಲ್ಲಿ ಪ್ರಾತಿನಿಧ್ಯ ಇತ್ತೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಉದ್ದೇಶ ಇಲ್ಲಿದೆ. ಅದೇ ರೀತಿ ಸ್ವಾತಂತ್ರ್ಯ ನಂತರ ಭಾರತ ಅನುಸರಿಸಿದ ಆಧುನೀಕರಣವನ್ನು ಯಾವುದೇ ದೋಷಗಳಿಲ್ಲದ ವರವೆಂದು ತಿಳಿಯುವ ಅಗತ್ಯವಿಲ್ಲವೆಂದು ಈ ಹಿಂದೆ ವಿವರಿಸಿದ್ದೇನೆ. ಸ್ವಾತಂತ್ರ್ಯ ನಂತರ ನಡೆದ ವಿಕೇಂದ್ರೀಕರಣ ಪ್ರಕ್ರಿಯೆಗಳನ್ನು ಮತ್ತು ಅವುಗಳ ಸ್ವರೂಪಗಳನ್ನು ತಿಳಿದುಕೊಳ್ಳಬೇಕಾಗಿದೆ. ಹೊಸ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಕೆಳ ಜಾತಿ/ ವರ್ಗಗಳಿಗೆ ಪ್ರಾತಿನಿಧ್ಯ ಇದೆಯೇ? ಕೆಳ ಜಾತಿ/ವರ್ಗಗಳ ಪ್ರಾತಿನಿಧ್ಯತೆಯನ್ನು ಕೆಳ ಜಾತಿ/ವರ್ಗಗಳ ಸಶಕ್ತೀಕರಣಕ್ಕೆ ಸಮೀಕರಿಸಬಹುದೇ? ಅಥವಾ ಗ್ರಾಮಪಂಚಾಯತ್ಸದಸ್ಯರಾಗಿ ಕೆಳಜಾತಿಯವರು ಆಯ್ಕೆಯಾಗಿದ್ದಾರೆ ಎಂದಾಕ್ಷಣ ಕೆಳ ಜಾತಿ/ವರ್ಗಗಳ ಸಶಕ್ತೀಕರಣ ನಡೆದಿದೆ ಎಂದು ತಿಳಿಯಬೇಕೆ? ವಿಕೇಂದ್ರೀಕರಣದ ಮೌಲ್ಯ ಮಾಪನದಲ್ಲಿ ಆಯ್ಕೆಯಾದ ಸದಸ್ಯರು ಪಂಚಾಯತ್ ಸಂಸ್ಥೆಗಳನ್ನು ಬಳಸಿಕೊಂಡ ಕ್ರಮ ಅಥವಾ ನಡೆಸಿದ ಕಾರ್ಯಕ್ರಮಗಳ ಮೌಲ್ಯ ಮಾಪನವು ಅಗತ್ಯವಿಲ್ಲವೇ? ಒಂದು ವೇಳೆ ಕೆಳ ಜಾತಿ/ವರ್ಗಗಳಿಗೆ ಸಾಕಷ್ಟು ಪ್ರಾತಿನಿಧ್ಯ ಇದ್ದಾಗಲೂ ಪಂಚಾಯತ್ಸಂಸ್ಥೆಗಳನ್ನು ಅವರ ಸಶಕ್ತೀಕರಣಕ್ಕೆ ಬಳಸಿಕೊಳ್ಳಲು ಸಾಧ್ಯಾಗದಿದ್ದರೆ, ಯಾಕೆ ಸಾಧ್ಯವಾಗುತ್ತಿಲ್ಲ? ಯಾವ ಯಾವ ಅಂಶಗಳು ವಿಕೇಂದ್ರೀಕರಣ ತಳ ಮಟ್ಟದಲ್ಲಿ ಪ್ರಕಟಗೊಳ್ಳುವಲ್ಲಿ ಅಡ್ಡಿಯಾಗಿವೆ? ಪರಿಣಾಮಕಾರಿ ವಿಕೇಂದ್ರಿಕರಣಕ್ಕೆ ಪೂರಕವಾದ ಪರಿಸರವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯತನ್ನು ಅಧ್ಯಯನ ಮಾಡುವ ಮೂಲಕ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಲಾಗಿದೆ. ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯತ್ವ್ಯಾಪ್ತಿಗೆ ೧೯೯೪ರಲ್ಲಿ ಎರಡೇ ಹಳ್ಳಿಗಳು ಸೇರಿದ್ದವು – ಒಂದು ಪಾಪಿನಾಯಕನಹಳ್ಳಿ ಮತ್ತೊಂದು ವಡ್ಡರಹಳ್ಳಿ. ಆದರೆ ಹಿಂದಿನ ಪಂಚಾಯತ್‌ನ ಕೊನೇ ವರ್ಷ ಅಂದರೆ ೧೯೯೯ರಲ್ಲಿ ಇಂಗಳಗಿ ಮತ್ತು ಶಂಕರ ನಗರ ಕ್ಯಾಂಪ್ ಎಂಬ ಇನ್ನೆರಡು ಹಳ್ಳಿಗಳು ಸೇರಿಕೊಂಡವು.[7] ಆ ಹಳ್ಳಿಗಳು ಹಿಂದೆ ಕಾರಿಗನೂರು ಪಂಚಾಯತ್ವ್ಯಾಪ್ತಿಯಲ್ಲಿದ್ದವು. ೧೯೯೯ರಲ್ಲಿ ಕಾರಿಗನೂರು ಹೊಸಪೇಟೆ ಮುನಿಸಿಪಾಲಿಟಿಗೆ ಸೇರಿತ್ತು. ಆ ಪಂಚಾಯತ್‌ನಲ್ಲಿದ್ದ ಇಂಗಳಗಿ ಮತ್ತು ಶಂಕರನಗರ ಕ್ಯಾಂಪ್‌ನ್ನು ಪಾಪಿನಾಯಕನಹಳ್ಳಿ ಪಂಚಾಯತ್‌ಗೆ ಸೇರಿಸಿದರು. ಹೀಗೆ ಅಧ್ಯಯನದ ಸಂದರ್ಭದಲ್ಲಿ ಹಳ್ಳಿಯ ಪಂಚಾಯತ್ವ್ಯಾಪ್ತಿಯಲ್ಲಿ ನಾಲ್ಕು ಹಳ್ಳಿಗಳಿದ್ದವು. ಆದರೆ ಹಿಂದಿನ ಪಂಚಾಯತ್ಅವಧಿಯಲ್ಲಿ ಹೊಸದಾಗಿ ಸೇರಿದ ಹಳ್ಳಿಗಳಿಂದ ಮನೆ ತೆರಿಗೆ ಸಂಗ್ರಹ ಮಾಡಿರಲಿಲ್ಲ. ಅದೇ ರೀತಿ ಆ ಹಳ್ಳಿಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳೂ ನಡೆದಿರಲಿಲ್ಲ. ಆದುದರಿಂದ ಅಧ್ಯಯನದ ದೃಷ್ಟಿಯಿಂದ ಪಾಪಿನಾಯಕನ ಹಳ್ಳಿ ಪಂಚಾಯತ್ವ್ಯಾಪ್ತಿಯಲ್ಲಿ ಎರಡೇ ಹಳ್ಳಿಗಳನ್ನು ಪರಿಗಣಿಸಲಾಗಿದೆ. ಪಂಚಾಯತ್‌ನ ಒಟ್ಟು ಸದಸ್ಯರ ಸಂಖ್ಯೆ ೧೧. ಅದರಲ್ಲಿ ೯ ಸದಸ್ಯರು ಪಾಪಿನಾಯಕನಹಳ್ಳಿಯಿಂದ ಬಂದರೆ ಕೇವಲ ಒಬ್ಬರು ಸದಸ್ಯರು ವಡ್ಡರಹಳ್ಳಿಯಿಂದ. ಇದರಿಂದಾಗಿ ಇಡೀ ಪಂಚಾಯತ್ಪಾಪಿನಾಯಕನ ಹಳ್ಳಿಯವರ ಅಧೀನದಲ್ಲೇ ಇತ್ತು. ಪಂಚಾಯತ್ಕಚೇರಿ ಕೂಡ ಹಳ್ಳಿಯಲ್ಲೇ ಇತ್ತು. ಪಂಚಾಯತ್‌ಗೆ ಬರುವ ಅನುದಾನದ ಬಳಕೆಯಲ್ಲೂ ಪಾಪಿನಾಯಕನ ಹಳ್ಳಿಯೇ ಮುಂಚೂಣಿಯಲ್ಲಿತ್ತು. ಈ ಎಲ್ಲಾ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಪಾಪಿನಾಯಕನ ಹಳ್ಳಿಯನ್ನೇ ಅಧ್ಯಯನದ ಕೇಂದ್ರ ಬಿಂದುವಾಗಿ ಪರಿಗಣಿಸಲಾಗಿದೆ.

ಅಧ್ಯಯನ ವಿಧಾನ

ಅಧ್ಯಯನ ವಿಧಾನ ಕುರಿತು ಹೇಳುವುದಾದರೆ ಇದೊಂದು ಎಂಪಿರಿಕಲ್ ಅಧ್ಯಯನ. ಗುಣಾತ್ಮಕ ಅಧ್ಯಯನದ ಕೆಲವು ಅಂಸಗಳು ಇವೆ ಹೊರತು ಗುಣಾತ್ಮಕ ಅಧ್ಯಯನ ವಿಧಾನವನ್ನು ಇಲ್ಲಿ ಅನುಸರಿಸಿಲ್ಲ. ಹಾಗೆಂದು ಮಾಹಿತಿ ಸಂಗ್ರಹವನ್ನು ಕೇವಲ ಪ್ರಶ್ನಾವಳಿಗೆ ಅಥವಾ ರಾಜಕೀಯ ಕ್ಷೇತ್ರಕ್ಕೆ ಸೀಮಿತಗೊಳಿಸಿಲ್ಲ. ಊರಲ್ಲಿ ಸತತವಾಗಿ ಎರಡು ತಿಂಗಳಿಂದಲೂ ಹೆಚ್ಚು ಸಮಯ ಅಡ್ಡಾಡಿ ಎಲ್ಲಾ ಮೂಲಗಳಿಂದ ಮತ್ತು ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸಲಗಿದೆ. ವಸಾಹತು ಸಂದರ್ಭದ ಪಂಚಾಯತ್ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಊರ ಹಿರಿಯರನ್ನು ಸಂದರ್ಶಿಸಿ ಸಂಗ್ರಹಿಸಿದ್ದೇನೆ. ಹಿಂದಿನ ಪಂಚಾಯತ್‌ನ ಕೆಲವು ಅಧ್ಯಕ್ಷರುಗಳನ್ನು ಹೊರತುಪಡಿಸಿ ಇತರ ಎಲ್ಲರನ್ನೂ ಭೇಟಿಯಾಗಿದ್ದೆ. ಮಾಹಿತಿ ನೀಡಿದ ಎಲ್ಲ ಅಧ್ಯಕ್ಷರು ಮತ್ತು ಸದಸ್ಯರ ಹೆಸರುಗಳನ್ನು ಬದಲಾಯಿಸಲಾಗಿದೆ. ವಸಾಹತು ಸಂದರ್ಭದ ಪ್ರಥಮ ಅಧ್ಯಕ್ಷರ ಉದ್ವಾಳ ವೀರಪ್ಪನವರು ತುಂಬಾ ಹಿಂದೆಯೇ ತೀರಿಕೊಂಡಿದ್ದರು. ೧೯೪೫ ಮತ್ತು ೧೯೫ರ ಮಧ್ಯೆ ಪಂಚಾಯತ್ ಚೇರ್‌ಮೆನ್‌ಗಳಾದ ಮೇಲೆ ಸಿದ್ದಪ್ಪ ಮತ್ತು ಮೇಟಿ ವೀರಣ್ಣನವರು ಹೀಗೆ ಕೆಲವು ವರ್ಷಗಳ ಹಿಂದೆ ತೀರಿಕೊಂಡರು. ಅದೇ ರೀತಿ ಕೊನೆಯ ಗೌಡರಾದ ಬಾಬನ ಗೌಡರು ಕೂಡ ಅಧ್ಯಯನದ ಸಂದರ್ಭದಲ್ಲಿ ಜೀವಂತ ಇರಲಿಲ್ಲ. ಉಳಿದ ಎಲ್ಲಾ ಅಧ್ಯಕ್ಷರುಗಳು ಇಂದೂ ಇದ್ದಾರೆ. ಕೇಳಿದಾಗಲೆಲ್ಲಾ ತಮ್ಮ ಅನುಭವಗಳನ್ನು ಹೇಳಿ ಸಹಕರಿಸಿದ್ದಾರೆ. ಹಿಂದಿನ ಅಧ್ಯಕ್ಷರುಗಳು ಮತ್ತು ಅವರ ಅಧಿಕಾರ ಅವಧಿಯ ಪಟ್ಟಿಯೊಂದನ್ನು ಪರಿಶಿಷ್ಟ ಎರಡರಲ್ಲಿ (ಕೋಷ್ಠಕ – ೧) ಕೊಟ್ಟಿದ್ದೇನೆ.

೧೯೯೪ – ೯೯ರ ಪಂಚಾಯತ್‌ನ ಎಲ್ಲಾ ಸದಸ್ಯರನ್ನು ಸಂದರ್ಶನ ಮಾಡಲಾಗಿದೆ. ಅವರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಿನ್ನೆಲೆ ಪಂಚಾಯತ್‌ ಸಂಸ್ಥೆಗಳ ಬಗ್ಗೆ ಅವರ ಅರಿವು ಮತ್ತು ಭಾಗವಹಿಸುವಿಕೆ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಶ್ನಾವಳಿ ಮೂಲಕ ಸಂಗ್ರಹಿಸಲಾಗಿದೆ. (ವಿವರಗಳನ್ನು ಪರಿಶಿಷ್ಟ ಎರಡು; ಕೋಷ್ಠಕ – ೨ ರಲ್ಲಿ ಕೊಟ್ಟಿದೆ). ಊರಿನ ವಿವಿಧ ಜಾತಿ, ಕಸುಬು, ವಯಸ್ಸು, ಲಿಂಗಗಳಿಗೆ ಸೇರಿದ ೮೧ ಮಂದಿಯನ್ನು ಭೇಟಿಯಾಗಿ ಪಂಚಾಯತ್‌ಬಗ್ಗೆ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇದರ ಜತೆಗೆ ಊರ ಇತರ ಮಹನೀಯರನ್ನು ಮಾತಾಡಿಸಿ ಹಳ್ಳಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದೇನೆ. ಮಾಹಿತಿ ಕೊಟ್ಟು ಸಹಕರಿಸಿದ ಊರ ಮಹನೀಯರ ಒಂದು ಪಟ್ಟಿಯನ್ನು ಪರಿಶಿಷ್ಟ ಎರಡು; ಕೋಷ್ಠಕ – ೩ರಲ್ಲಿ ಕೊಟ್ಟಿದ್ದೇನೆ. ಹಳ್ಳಿಯಲ್ಲಿ ಮಾಹಿತಿ ಸಂಗ್ರಹಿಸುವುದು ವಿಶೇಷ ಕಷ್ಟವಾಗಲಿಲ್ಲ. ಅದರಲ್ಲೂ ಕೆಳವರ್ಗದ ಜನರಂತೂ ತಮಗೆ ತಿಳಿದುದನ್ನು ಸಂತೋಷವಾಗಿಯೆ ಹಂಚಿಕೊಳ್ಳಲು ಸಿದ್ಧರಿದ್ದರು. ಆದರೆ ಮೇಲುವರ್ಗದವರು ತಮ್ಮ ಆಸ್ತಿಪಾಸ್ತಿ ವಿವರಗಳನ್ನು ಅಷ್ಟು ಸಲೀಸಾಗಿ ಬಿಟ್ಟು ಕೊಡಲಿಲ್ಲ.

ಹಳ್ಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಮೂರು ಮೂಲಗಳಿಂದ ಪಡೆಯಲಾಗಿದೆ. ಒಂದು ಸೆನ್ಸಸ್, ಎರಡು ಪಂಚಾಯತ್ ದಾಖಲೆಗಳು ಮತ್ತು ಮೂರು, ಸ್ಥಳೀಯ ಸರಕಾರೇತರ ಸಂಸ್ಥೆ ಸಂಗ್ರಹಿಸಿದ ಅಂಕಿ ಅಂಶಗಳು. ಈ ಅಧ್ಯಯನ ೧೯೯೯ರ ಕೊನೆಗೆ ನಡೆದಿದೆ. ೧೯೯೧ರ ಜನಗಣತಿ ಆಧಾರಿತ ಅಂಕಿ ಅಂಶಗಳು ಕೊಡಮಾಡುವ ಚಿತ್ರಣ ಅಧ್ಯಯನದ ಸಂದರ್ಭದಲ್ಲಿ ವಾಸ್ತವಕ್ಕೆ ತುಂಬಾ ದೂರ ಇದ್ದವು. ಹಳ್ಳಿಯ ಕುಟುಂಬಗಳ ಸಂಖ್ಯೆ, ಜನ ಸಂಖ್ಯೆ, ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ, ಇತ್ಯಾದಿಗಳಿಗೆ ಸಂಬಂಧಿಸಿದ ಸೆನ್ಸಸ್ ಅಂಕಿ ಅಂಶಗಳು ವಾಸ್ತವಕ್ಕೆ ದೂರವಾಗಿದ್ದವು. ಆದುದರಿಂದ ಸೆನ್ಸಸ್ ಅಂಕಿ ಅಂಶಗಳನ್ನು ಕಡಿಮೆ ಪ್ರಮಾಣದಲ್ಲಿ ಇಲ್ಲಿ ಉಪಯೋಗಿಸಲಾಗಿದೆ. ಮನೆ ಅಥವಾ ಕುಟುಂಬಗಳ ಸಂಖ್ಯೆ, ಪಂಚಾಯತ್‌ಗೆ ಬರುವ ಅನುದಾನ, ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲ, ವಿವಿಧ ಕಾಮಗಾರಿಗಳಲ್ಲಿ ವಿನಿಯೋಜನೆಯಾದ ಮೊತ್ತ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ, ಫಲಾನುಭವಿಗಳ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ, ಇತ್ಯಾದಿ ಮಾಹಿತಿಗಳನ್ನು ಗ್ರಾಮ ಮತ್ತು ತಾಲ್ಲೂಕು ಪಂಚಾಯತ್‌ದಾಖಲೆಗಳಿಂದ ಪಡೆಯಲಾಗಿದೆ. ಸ್ಥಳೀಯ ಸರಕಾರೇತರ ಸಂಸ್ಥೆ, ಅರುಣೋದಯ, ತನ್ನ ಪ್ರೊಜೆಕ್ಟ್‌ಗಾಗಿ ಹಳ್ಳಿಯಲ್ಲಿರುವ ವಿವಿಧ ಆರ್ಥಿಕ ಚಟುವಟಿಕೆಗಳು, ಅವುಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ, ವಾರದ ಆದಾಯ, ಭೂ ಹಿಡುವಳಿ, ಶಿಕ್ಷಣ ಮಟ್ಟ, ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಮೀಕ್ಷೆ ನಡೆಸಿ ಸಂಗ್ರಹಿಸಲಾಗಿತ್ತು. ಅವುಗಳನ್ನು ಇಲ್ಲಿ ಉಪಯೋಗಿಸಿದ್ದೇನೆ. ಹಳ್ಳಿಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ತಾಲ್ಲೂಕು ಕಚೇರಿ, ಕೆ.ಇ.ಬಿ. ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯತ್ಕಚೇರಿ, ಪಶು ವೈದ್ಯ ಆಸ್ಪತ್ರೆ, ಗಣಿ ಮತ್ತು ಭೂಗರ್ಭ ಕಚೇರಿ, ಕಾರ್ಮಿಕ ಕಲ್ಯಾಣ ಇಲಾಖೆ ಮುಂತಾದ ಕಚೇರಿಗಳಿಂದ ಸಂಗ್ರಹಿಸಲಾಗಿದೆ. ಕೆಲವು ಕಚೇರಿಗಳಲ್ಲಿ ಸಲೀಸಾಗಿ ಮಾಹಿತಿ ದೊರೆತರೆ ಇನ್ನು ಕೆಲವು ಕಡೆ ಹಲವಾರು ಬಾರಿ ಓಡಾಡಿದ ನಂತರ ಮಾಹಿತಿ ದೊರಕುತ್ತಿತ್ತು. ಉದಾಹರಣೆಯಾಗಿ ಗಣಿ ಮತ್ತು ಭೂಗರ್ಭ ಕಚೇರಿಯಿಂದ ಮಾಹಿತಿ ಸಂಗ್ರಹಿಸಲು ಪಟ್ಟ ಪಾಡನ್ನು ಅಧ್ಯಾಯ ನಾಲ್ಕರಲ್ಲಿ ವಿವರಿಸಿದ್ದೇನೆ.

ವಿಕೇಂದ್ರೀಕರಣ ಮತ್ತು ಸಶಕ್ತೀಕರಣ

ಅಧ್ಯಯನದ ಇತಿಮಿತಿಗಳನ್ನು ವಿವರಿಸುವ ಮುನ್ನ ಪುಸ್ತಕದಲ್ಲಿ ಆಗಾಗ ಬರುವ ಎರಡು ಪದಗಳನ್ನು – ವಿಕೇಂದ್ರೀಕರಣ ಮತ್ತು ಸಶಕ್ತೀಕರಣಗಳನ್ನು ವಿವರಿಸಬೇಕಾಗಿದೆ. ವಿಕೇಂದ್ರೀಕರಣವನ್ನು ಆಡಳಿತದ ರಚನೆಗಳಲ್ಲಿ ಆಗುವ ಹೆಚ್ಚಳವೆಂದು ನಿರ್ವಚಿಸಿಕೊಳ್ಳಲಾಗಿದೆ. ಹಾಗೆಂದ ಮಾತ್ರಕ್ಕೆ ಅದನ್ನು ಒಂದು ಗುರಿ ಎನ್ನುವ ಅರ್ಥದಲ್ಲಿ ಪರಿಗಣಿಸಿಲ್ಲ. ಬದಲಿಗೆ ನಿರ್ದಿಷ್ಟ ಉದ್ದೇಶ ಈಡೇರಿಕೆಗೆ ಅಗತ್ಯವಾದ ಮಾರ್ಗವೆಂದು ವಿಕೇಂದ್ರೀಕರಣವನ್ನು ಅರ್ಥೈಸಿಕೊಳ್ಳಲಾಗಿದೆ. ಸ್ವಲ್ಪ ವಿಸ್ತಾರವಾಗಿ ಹೇಳುವುದಾದರೆ ಕೇಂದ್ರೀಕೃತ ವ್ಯವಸ್ಥೆ ಗ್ರಾಮೀಣ ಮಟ್ಟದ ಜನರ ಅವಶ್ಯಕತೆಗಳಿಗೆ ಸ್ಪಂದಿಸಲು ವಿಫಲವಾಗಿದೆ. ಆದುದರಿಂದ ಆಡಳಿತದ ರಚನೆಗಳನ್ನು ಹೆಚ್ಚಿಸಿ ತಳ ಮಟ್ಟಕ್ಕೂ ಆಡಳಿತದ ರಚನೆಗಳನ್ನು ತಲುಪಿಸಬೇಕು. ಹಾಗೆ ಆದಾಗ ಮಾತ್ರ ಜನರ ಸಮಸ್ಯೆಗಳಿಗೆ ಆಡಳಿತ ಸ್ಪಂದಿಸಲು ಸಾಧ್ಯ ಎನ್ನುವ ಗೃಹಿತದಿಂದ ಪಂಚಾಯತ್ಸಂಸ್ಥೆಗಳಿಗೆ ಪ್ರಾಮುಖ್ಯತೆ ಬಂದಿದೆ. ಆಡಳಿತದ ರಚನೆಗಳನ್ನು ತಳ ಮಟ್ಟಕ್ಕೆ ತಲುಪಿಸುವುದಾದರೂ ಯಾಕೆ? ಜನರ ಬೇಕು ಬೇಡಗಳನ್ನು ಅರಿತು ವ್ಯವಹರಿಸಲು ಜನರಿಂದ ದೂರವಿರುವ ಆಡಳಿತಕ್ಕೆ ಸಾಧ್ಯವಿಲ್ಲ. ಜನರ ಹತ್ತಿರವೆ ಇರುವ ಆಡಳಿತ ಮಾತ್ರ ಈ ರೀತಿ ವ್ಯವಹರಿಸಲು ಸಾಧ್ಯ. ಆದುದರಿಂದ ಇಲ್ಲಿ ಒತ್ತು ಇರುವುದು ಸಂಸ್ಥೆಯ ಅಸ್ತಿತ್ವಕ್ಕಲ್ಲ, ಅದು ಎಷ್ಟರ ಮಟ್ಟಿಗೆ ತಳಮಟ್ಟದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎನ್ನುವ ಅಂಶಗಳ ಮೇಲೆ.

ಒಂದು ಕಾಲದಲ್ಲಿ ಸಂಪತ್ತಿನ ಮರು ವಿತರಣೆಯ ವಿಚಾರದಿಂದ ಬೇರ್ಪಡಿಸಿ ಸಮಾನತೆಯ ಚರ್ಚೆಯನ್ನು ಊಹಿಸಲು ಅಸಾಧ್ಯವಾಗಿತ್ತು. ರಷ್ಯಾ ಮತ್ತು ಇತರ ಎಡ ಪಂಥೀಯ ರಾಷ್ಟ್ರಗಳಲ್ಲಿ ಸರಕಾರೀ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆ ಮೂಲೆ ಗುಂಪಾಗುವುದರೊಂದಿಗೆ ಸಂಪತ್ತಿನ ಮರುವಿವರಣೆಯ ಪ್ರಶ್ನೆ ಕೂಡ ನೆನೆಗುದಿಗೆ ಬಿದ್ದಿದೆ. ಮುಕ್ತ ಮಾರುಕಟ್ಟೆ ಮತ್ತು ವ್ಯಕ್ತಿಯ ಸಶಕ್ತೀಕರಣ ಈಗ ಚಾಲ್ತಿಯಲ್ಲಿರುವ ಪದಗಳು. ಅಂತಾರಾಷ್ಟ್ರೀಯ / ರಾಷ್ಟ್ರೀಯ ಪರಿಸರ ನಿರ್ಮಿಸಿರುವ ಈ ಇತಿಮಿತಿಯೊಳಗೆ ಸಾಧ್ಯವಾಗುವ ಸಮಾಜ ಪರಿವರ್ತನೆಯ ಮಾದರಿಯೆಂದರೆ ಮಾನವ ಮುಖಿ ಅಭಿವೃದ್ಧಿ ಮಾತ್ರ. ಇಲ್ಲಿ ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವಿಲ್ಲ. ವ್ಯಕ್ತಿಯ ಪರಿವರ್ತನೆಗೆ ಮಹತ್ವ. ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಯಾವುದಾದರೂ ಒಂದು ಕೆಲಸದಲ್ಲಿ ಪರಿಣತಿ ಪಡೆದರೆ ವ್ಯಕ್ತಿಯೊಬ್ಬನ ಬದುಕವ ಸಾಧ್ಯತೆಯೇ ಸಕಾರಾತ್ಮಕವಾಗಿ ಬದಲಾಗಬಹುದೆನ್ನುವ ಗೃಹಿತ ಇಲ್ಲಿದೆ. ಆರೋಗ್ಯ, ಶಿಕ್ಷಣ ಮತ್ತು ಇತರ ಸವಲತ್ತುಗಳ ಮೂಲಕ ವ್ಯಕ್ತಿಯೊಬ್ಬನ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುವುದಕ್ಕೆ ಈ ಮಾದರಿಯ ಪ್ರಾಮುಖ್ಯತೆ. ಉತ್ತಮ ಆರೋಗ್ಯ ಮತ್ತು ಶಿಕ್ಷಣದಿಂದ ಆಧುನಿಕ ಕಸುಬಿಗೆ ಅಗತ್ಯವಾದ ಪರಿಣತಿ ಹೊಂದಿ ಹೊಸತಾಗಿ ರೂಪುಗೊಳ್ಳುವ ಕ್ರಮ ಮಾರುಕಟ್ಟೆಯಲ್ಲಿ ಪಾಲುಗೊಳ್ಳಲು ಅನುಕೂಲ. ಆ ಮೂಲಕ ತನ್ನ ಮತ್ತು ಕುಟುಂಬದ ಆದಾಯವನ್ನು ಸುಧಾರಿಸಿ ಕೊಳ್ಳಬಹುದೆಂಬ ಗೃಹಿತವಿದೆ. ಹೊಸ ಭಾಷೆಯ ಅರಿವು, ಹೊಸ ವಿಚಾರದ ಅರಿವು, ಹೊಸ ಕಸುಬಿನ ಕಲಿಕೆ ಇತ್ಯಾದಿಗಳು ಸಶಕ್ತೀಕರಣ ಪದದ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಂತು ಅರಿವು, ಭಾಗವಹಿಸುವಿಕೆ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಇತರ ಮೂಲಭೂತ ಸೌಲಭ್ಯಗಳ ಹೊಂದುವಿಕೆ ಇತ್ಯಾದಿಗಳಿಂದ ಸಶಕ್ತೀಕರಣವನ್ನು ಗುರುತಿಸಲಾಗಿದೆ.

ಇಷ್ಟಾಗ್ಯೂ ಇದೊಂದು ಪರಿಪೂರ್ಣ ಅದ್ಯಯನ ಎಂದು ತಿಳಿಯುವ ಹಾಗಿಲ್ಲ. ತುಲನಾತ್ಮಕ ವಿವರಣೆ ಇಲ್ಲದಿರುವುದು ಈ ಅಧ್ಯಯನದ ಬಹು ದೊಡ್ಡ ಕೊರತೆ. ಒಣ ಭೂಪ್ರದೇಶದ ಗ್ರಾಮ ಪಂಚಾಯತನ್ನು ನೀರಾವರಿ ಇರುವ ಭೂಪ್ರದೇಶದ ಪಂಚಾಯತ್‌ಗೆ ಹೋಲಿಸಿ ನೋಡುತ್ತಿದ್ದರೆ ತಕ್ಕ ಮಟ್ಟಿನ ಪರಿಪೂರ್ಣತೆಯನ್ನು ನಿರೀಕ್ಷಿಸಬಹುದಿತ್ತು. ಹಿಂದೆ ತಿಳಿಸಿದಂತೆ ಸಮಯ ಮತ್ತು ಸಂಪನ್ಮೂಲ ಕೊರತೆಯಿಂದ ಕೇವಲ ಒಣ ಭೂಪ್ರದೇಶದ ಗ್ರಾಮ ಪಂಚಾಯತ್‌ಗೆ ಅಧ್ಯಯನವನ್ನು ಸೀಮಿತಗೊಳಿಸಬೇಕಾಯಿತು. ಇದರ ಜತೆಗೆ ಹಳ್ಳಿಯ ರಾಜಕೀಯ ಪ್ರಕ್ರಿಯೆಯನ್ನು ರಾಜ್ಯದ ಅಥವಾ ದೇಶದ ಇತರ ಭಾಗಗಳಲ್ಲಿ ನಡೆದ ಅಧ್ಯಯನಗಳಿಗೆ ಹೋಲಿಸಿಲ್ಲ. ತುಂಬಾ ಸೀಮಿತ ಅವಧಿಯಲ್ಲಿ ಅಧ್ಯಯನ ಮುಗಿಸಬೇಕಾದ ಒತ್ತಡ ಇದ್ದುದರಿಂದ ಇತರ ಪ್ರದೇಶಗಳಲ್ಲಿ ನಡೆದ ಅಧ್ಯಯನಗಳನ್ನು ಪರಿಶೀಲಿಸಲಾಗಿಲ್ಲ. ಕಾರಣ ಎಷ್ಟೇ ಒಳ್ಳೆಯದಿದ್ದರೂ ಹಳ್ಳಿಯ ರಾಜಕೀಯ ಪ್ರಕ್ರಿಯೆಯನ್ನು ತುಲನಾತ್ಮಕವಾಗಿ ನೋಡದಿರುವುದು ಅಧ್ಯಯನದ ದೊಡ್ಡ ಕೊರತೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಇಲ್ಲಿ ಬಂದಿರುವ ತೀರ್ಮಾನಗಳಿಗೆ ತುಂಬಾ ಸೀಮಿತ ಅನ್ವಯಿಕೆ ಇರಬಹುದು. ಎರಡು, ವಿಕೇಂದ್ರೀಕರಣ ರಾಜಕೀಯ ಅಧಿಕಾರದ ವಿತರಣೆಗೆ ಸಂಬಂಧಿಸಿದ ಪ್ರಶ್ನೆ ಕೂಡ. ಆದರೆ ಇದನ್ನು ಇಲ್ಲಿ ಅಭಿವೃದ್ಧಿ ಅಧ್ಯಯನದ ದೃಷ್ಟಿಕೋನದಿಂದ ನೋಡಲಾಗಿದೆ; ರಾಜಕೀಯ ಶಾಸ್ತ್ರದ ಹಿನ್ನೆಲೆಯಿಂದ ನೋಡಲಾಗಿಲ್ಲ. ಇದರಿಂದಾಗಿ ರಾಜಕೀಯ ಶಾಸ್ತ್ರದ ಹಿನ್ನೆಲೆ ಕೊಡಬಹುದಾದ ತಿಳುವಳಿಕೆಯಿಂದ ಈ ಅಧ್ಯಯನ ವಂಚಿತವಾಗಿದೆ.

ಪುಸ್ತಕದಲ್ಲಿ ಬರುವ ಅಧ್ಯಾಯಗಳನ್ನು ಈ ಕೆಳಗಿನಂತೆ ಜೋಡಿಸಲಾಗಿದೆ. ಮೊದಲನೆ ಅಧ್ಯಾಯ ಪಾಪಿನಾಯಕನ ಹಳ್ಳಿಯ ಕಿರು ಪರಿಚಯವನ್ನು ಮಾಡಿಸುತ್ತದೆ. ಹಳ್ಳಿಯಲ್ಲಿರುವ ವಿವಿಧ ಜಾತಿಗಳು, ಧರ್ಮಗಳು ಮತ್ತು ಅವರ ಸಾಮಾಜಿಕ ಸ್ಥಾನಮಾನಗಳ ವಿವರಗಳನ್ನು ಈ ಅಧ್ಯಾಯದಲ್ಲಿ ಕಾಣಬಹುದು. ಹಳ್ಳಿಯ ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಎರಡನೆ ಅಧ್ಯಾಯದಲ್ಲಿ ವಿವರಿಸಿದ್ದೇನೆ. ಅಧ್ಯಾಯ ಮೂರರಲ್ಲಿ ಸ್ಥಳೀಯ ರಾಜಕೀಯ ಚರಿತ್ರೆಯನ್ನು ಎರಡು ಹಂತಗಳಲ್ಲಿ ಗುರುತಿಸಿದ್ದೇನೆ. ಒಂದು, ವಸಾಹತು ಸಂದರ್ಭದಲ್ಲಿನ ಗ್ರಾಮ ಪಂಚಾಯತ್ವ್ಯವಸ್ಥೆ ಅಥವಾ ಸ್ಥಳೀಯ ಸ್ವ – ಸರಕಾರ ಪದ್ಧತಿ, ಎರಡು, ಸ್ವಾತಂತ್ರ್ಯ ನಂತರದ ಗ್ರಾಮ ಪಂಚಾಯತ್ ವ್ಯವಸ್ಥೆ. ಎಂಪಿರಿಕಲ್ ವಿಧಾನ ವಿಕೇಂದ್ರೀಕರಣವನ್ನು ನಿರ್ವಚಿಸಿಕೊಳ್ಳುವ ಮತ್ತು ವಿಕೇಂದ್ರೀಕರಣದ ಗತಿಯನ್ನು ಗುರುತಿಸುವ ಬಗೆಯನ್ನು ಅಧ್ಯಾಯ ನಾಲ್ಕರಲ್ಲಿ ವಿವರಿಸಲಾಗಿದೆ. ಈ ದೃಷ್ಟಿಕೋನ ಕೊಡ ಮಾಡುವ ವಿಧಾನದಿಂದ ಪಿ.ಕೆ. ಹಳ್ಳಿಯ ವಿಕೇಂದ್ರೀಕರಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಈ ವಿಧಾನದ ಇತಿಮಿತಿಗಳೇನು? ಬದಲಿ ಆಲೋಚನೆಗಳೇನು? ಅವು ಎಷ್ಟರ ಮಟ್ಟಿಗೆ ವಿಕೇಂದ್ರೀಕರಣವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ ಎಂಬುದರ ಚರ್ಚೆ ಮುಂದಿನ ಅಧ್ಯಾಯದಲ್ಲಿದೆ. ಕೆಳವರ್ಗದ ಸಶಕ್ತೀಕರಣ ಯಾಕೆ ಸಾಧ್ಯವಾಗುತ್ತಿಲ್ಲ? ಯಾವ ಯಾವ ಅಂಶಗಳು ವಿಕೇಂದ್ರೀಕರಣ ತಳಮಟ್ಟದಲ್ಲಿ ಪ್ರಕಟಗೊಳ್ಳುವಲ್ಲಿ ಅಡ್ಡಿಯಾಗಿವೆ? ಪರಿಣಾಮಕಾರಿ ವಿಕೇಂದ್ರೀಕರಣಕ್ಕೆ ಪೂರಕವಾದ ಪರಿಸರವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಪುಸ್ತಕದ ಆರನೇ ಅಧ್ಯಾಯದಲ್ಲಿದೆ. ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಕೆಲವು ತಾತ್ಕಾಲಿಕ ತೀರ್ಮಾನಗಳನ್ನು ಕೊಡಲಾಗಿದೆ. ಕೋಷ್ಠಕಗಳು, ಮಾಹಿತಿ ನೀಡಿದ ಮಹನೀಯರ ಪಟ್ಟಿ ಮತ್ತು ತಳ ಮಟ್ಟದಲ್ಲಿ ವಿಕೇಂದ್ರೀಕರಣವನ್ನು ಬಲಪಡಿಸಲು ಕೆಲವು ಸಲಹೆಗಳನ್ನು ಪರಿಶಿಷ್ಟ ೧, ೨ ಮತ್ತು ೩ ರಲ್ಲಿ ಕ್ರಮವಾಗಿ ಕೊಡಲಾಗಿದೆ.

 

[1]ರಜನಿ ಕೊಥಾರಿ, “ಇಸ್ಯುಸ್‌ ಇನ್ ಡಿಸೆಂಟ್ರಲೈಸ್‌ಡ್‌ ಗವರ್ನೆನ್ಸ್‌”, ಲೇಖನ ಅಬ್ದುಲ್‌ ಆಜೀಜ್‌ ಆಂಡ್ ಡೇವಿಡ್‌ಅರ‍್ನನಾಲ್ಡ್‌ (ಸಂಪಾದಿಸಿದ), ಡಿಸೆಂಟ್ರಲೈಸ್ಡ್ಗವರ್ನೆನ್ಸ್ಇನ್ಏಶಿಯನ್ ಕಂಟ್ರೀಸ್,ನ್ಯೂ ಡೆಲ್ಲಿ: ಸೇಜ್ ಪಬ್ಲಿಷರ್ಸ್, ೧೯೯೬, ಪುಟ ೩೪-೪೧.

[2]ಬಲವಂತರಾಯ್ ಮೆಹ್ತ, ರಿಪೋರ್ಟ್ ಆಫ್ ದಿ ಟೀಮ್ ಫಾರ್ ದಿ ಸ್ಟಡಿ ಆಫ್ ಕಮ್ಯುನಿಟಿ, ಪ್ರೊಜೆಕ್ಟ್ಸ್ ಆಂಡ್ ನೇಶನಲ್ ಎಕ್ಸ್‌ಟೆನ್‌ಶನ್ ಸರ್ವೀಸಸ್, ವಾಲ್ಯೂಮ್‌ ಒನ್, ನ್ಯೂಡೆಲ್ಲಿ: ಪ್ಲಾನಿಂಗ್ ಕಮಿಷನ್, ೧೯೫೯.

[3]ಅಶೋಕ್‌ಮೆಹ್ತ, ರಿಪೋರ್ಟ್‌ ಆಫ್‌ ದಿ ಕಮಿಟಿ ಆನ್ ಪಂಚಾಯತ್ ಇನ್‌ಸ್ಟಿಟ್ಯುಶನ್ಸ್, ನ್ಯೂಡೆಲ್ಲಿ : ಮಿನಿಸ್ಟ್ರಿ ಆಫ್ ಎಗ್ರಿಕಲ್ಚರ್‌ ಅಂಡ್ ಇರಿಗೇಷನ್, ೧೯೭೮

[4]ಆರ್.ಪಿ. ಮಿಶ್ರ (ಸಂಪಾದಿಸಿದ), ಲೋಕಲ್ ಲೆವೆಲ್ ಪ್ಲಾನಿಂಗ್ ಆಂಡ್ ಡೆವಲಪ್ಮೆಂಟ್,ನ್ಯೂಡೆಲ್ಲಿ: ಸ್ಟರ್ಲಿಂಗ್ ಪಬ್ಲಿಷರ್ಸ್, ೧೯೮೩, ಪಿ.ಎನ್. ಶಂಕರನ್, ಪಂಚಾಯತ್‌ ರಾಜ್: ಇನ್‌ಸ್ಟಿಟ್ಯುಶನಲ್‌ ಡೈಮೆನ್‌ಶನ್ಸ್ ಅಂಡ್ ಡಿಫೀಶಿಯನ್ಸ್‌ಸೀಸ್, ಕುರುಕ್ಷೇತ್ರ, ಸಂಚಿಕೆ ೪೫, ಸಂಖ್ಯೆ ೯, ಜೂನ್ ೧೯೯೭, ಪುಟ ೫೧-೫೩ ಮತ್ತು ಒ.ಪಿ. ಬೊಹ್ರ, ಡಿಸೆಂಟ್ರಲೈಸೇಷನ್ ಆಂಡ್ ಡಿವೊಲ್ಯೂಷನ್ ಆಫ್ ಪವರ್ಸ್ ಆಂಡ್ ಪಂಕ್ಚನ್ಸ್‌ಟು ಪಂಚಾಯತ್ಸ್, ಜರ್ನಲ್ ಆಫ್ ರೂರಲ್ ಡೆವಲಪ್ಮೆಂಟ್, ಸಂಚಿಕೆ ೧೯, ಸಂ.೨, ಏಪ್ರಿಲ್-ಜೂನ್‌೨೦೦೦, ಪುಟ ೧೮೫-೯೭.

[5]ಎಂ.ಎ. ವೂಮನ್‌ ಅಂಡ್ ಆಭಿಜಿತ್‌ ದತ್ತ (ಸಂಪಾದಿಸಿದ), ಪಂಚಾಯತ್ಸ್ಆಂಡ್ ದಿ ಯರ್ಫಿನಾನ್ಸ್‌, ನ್ಯೂಡೆಲ್ಲಿ: ಇನ್‌ಸ್ಟಿಟ್ಯುಟ್ ಆಫ್ ಸೋಶಿಯಲ್ ಸಯನ್ಸ್‌, ೧೯೯೫ ಮತ್ತು ಎಂ.ಎ. ವೂಮನ್‌, ಡಿಸೆಂಟ್ರಲೈಸೇಷನ್ಆಫ್ ರಿಸೋರ್ಸಸ್ಫ್ರೋಮ್ಸ್ಟೇಟ್ ಟು ಪಂಚಾಯತ್ರಾಜ್ಇನ್ಸ್ಟಿಟ್ಯುಶನ್ಸ್‌: ಸರ್ಚ್ಫಾರ್ ಎ ನೊರ್ಮೆಟೀವ್ಎಪ್ರೋಚ್, ನ್ಯೂ ಡೆಲ್ಲಿ: ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್‌ ಸಯನ್ಸ್, ೧೯೯೫

[6]ಇಂತಹ ವಾದವನ್ನು ಮುಂದಿಡುವ ಹಲವಾರು ಪುಸ್ತಕಗಳಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ. ರಜನಿ ಕೊಥಾರಿ, ಸ್ಟೇಟ್ ಎಗೆಯಿನ್‌‌ಸ್ಟ್ಡೆಮಾಕ್ರಸಿ: ಇನ್ಸರ್ಚ್ ಆಫ್ ಹ್ಯೂಮನ್ಗವರ್ನೆನ್ಸ್, ಡೆಲ್ಲಿ, ೧೯೮೪, ಡಿ.ಎಲ್.ಸೇತ್‌ಆಂಡ್‌ಆಶಿಶ್‌ನಂದಿ (ಸಂಪಾದಿಸಿದ), ಮಲ್ಟಿವರ್ಸ್ ಆಫ್ ಡೆಮಾಕ್ರಸಿ, ನ್ಯೂ ಡೆಲ್ಲಿ: ಸೇಜ್ ಪಬ್ಲಿಕೇಷನ್ಸ್‌, ೧೯೯೬

[7]ಶಂಕರನಗರ ಕ್ಯಾಂಪ್ ಗಣಿ ಕಾರ್ಮಿಕರ ಮನೆಗಳಿರುವ ಒಂದು ಹಳ್ಳಿ. ಅಲ್ಲಿ ಇತರ ಹಳ್ಳಿಗಳಂತೆ ಹೊಲ ಅಥವಾ ಕೃಷಿ ಇಲ್ಲ. ಅಲ್ಲಿರುವ ಎಲ್ಲಾ ಕುಟುಂಬಗಳ ಆದಾಯದ ಮೂಲ ಗಣಿ ಕೆಲಸ.