ಗಣಿಗಾರಿಕೆ

ಪಿ.ಕೆ. ಹಳ್ಳಿಯ ಸರಹದ್ದಿನಲ್ಲಿ ಗಣಿಗಾರಿಕೆ ಶುರುಮಾಡಿದ ಹೆಗ್ಗಳಿಕೆ ಸಂಡೂರಿನ ಗೊಗ್ಗ ಬಸಯ್ಯ ಮತ್ತು ಗೊಗ್ಗ ಗುರು ಸಾಂತಯ್ಯವನರಿಗೆ ಸಲ್ಲುತ್ತದೆ. ೧೯೩೧ರಲ್ಲಿ ಈ ಸಹೋದರರು ಊರ ಮಣ್ಣನ್ನು ಕತ್ತೆಗಳ ಮೇಲೆ ಹೇರಿಕೊಂಡು ಬಂದು, ರೋಣದಿಂದ ಪುಡಿಮಾಡಿ ರೆಡಾಕ್ಸೈಡ್ ಮಾಡುತ್ತಿದ್ದರು. ಅದನ್ನು ಸುತ್ತುಮುತ್ತಲಿನ ಪೇಟೆಗಳಲ್ಲಿ ಮಾರಾಟ ಮಾಡಿತ್ತಿದ್ದರು. ೧೯೫೦ರ ಸುಮಾರಿಗೆ ಜಿ.ಜಿ.ಬ್ರದರ್ಸ್ ಎಂಬ ಸಂಸ್ಥೆ ಮಾಡಿಕೊಂಡು ಇವರುಗಳು ಕಬ್ಬಿಣದ ಅದಿರಿನ ಗಣಿಗಾರಿಕೆ ಆರಂಭಿಸಿದರು. ದೊಡ್ಡ ಪ್ರಮಾಣದ ಗಣಿಗಾರಿಕೆ ಆರಂಭಿಸಿದವರು. ಡಾಲ್ಮಿಯಾ ಕಂಪೆನಿಯವರು. ಇವರು ೧೯೪೮ರಲ್ಲಿ ಡಾಲ್ಮಿಯಾ ಇಂಟರ್‌ನೇಶನಲ್, ಹೊಸಪೇಟೆ ಎಂಬ ಹೆಸರಿನಲ್ಲಿ ಗಣಿಗಾರಿಕೆ ಶುರು ಮಾಡಿದರು. ಸುಮಾರು ೬೦೦ ಎಕ್ರೆಗಳಷ್ಟು ಅರಣ್ಯ ಭೂಮಿಯನ್ನು ಸರಕಾರದಿಂದ ಬಾಡಿಗೆ ಪಡೆದರು. ಈ ಭೂಮಿ ಸಂಡೂರು ತಾಲ್ಲೂಕಿಗೆ ಸೇರಿದೆ. ಆದರೆ ಇದು ಪಾಪಿನಾಯಕನಹಳ್ಳಿಯ ಸರಹದ್ದಿನಲ್ಲಿರುವುದರಿಂದ ಕಂಪೆನಿಯ ಬಹುತೇಕ ಕಾರ್ಮಿಕರು ಹಳ್ಳಿಯಿಂದಲೇ ಬಂದಿದ್ದಾರೆ. ಗಣಿಗಾರಿಕೆ ಎರಡು ವಿಧದ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಒಂದು, ಗಣಿಗಾರಿಕೆ ಎರಡು, ವ್ಯಾಗನ್ ಲೋಡಿಂಗ್. ೧೯೯೧ರ ಜನಗಣತಿ ಪ್ರಕಾರ ಗಣಿ ಕಾರ್ಮಿಕರ ಸಂಖ್ಯೆ ಪುರುಷರು ೨೫೦, ಮಹಿಳೆಯರು ೬೪, ಒಟ್ಟು ೩೧೪. ಇದು ಸಿಯಾದ ಲೆಕ್ಕಚಾರವಲ್ಲ. ೧೯೯೯ರಲ್ಲಿ ಸ್ಥಳೀಯ ಸರಕಾರೇತರ ಸಂಸ್ಥೆ ನಡೆಸಿದ ಗಣತಿಯ ಪ್ರಕಾರ ೯೬ ಕುಟುಂಬಗಳು ಗಣಿಕಾರಿಕೆಯಲ್ಲಿ ಮತ್ತು ೨೭೨ ಕುಟುಂಬಗಳು ವ್ಯಾಗನ್ ಲೋಡಿಂಗ್‌ನಲ್ಲಿ ತೊಡಗಿಸಿಕೊಂಡಿವೆ. ೨೦ ಒಂದು ಕುಟುಂಬದಲ್ಲಿ ಕನಿಷ್ಠ ಎರಡು ಸದಸ್ಯರು ಗಣಿ ಕಾರ್ಮಿಕರಾಗಿದ್ದಾರೆ ಎಂದು ಊಹಿಸಿದರೂ ಗಣಿ ಕಾರ್ಮಿಕರ ಸಂಖ್ಯೆ ೧೯೨ ಮತ್ತು ವ್ಯಾಗನ್ ಲೋಡಿಂಗ್ ಕಾರ್ಮಿಕರ ಸಂಖ್ಯೆ ೫೪೪; ಒಟ್ಟು ಕಾರ್ಮಿಕರ ಸಂಖ್ಯೆ ೭೩೬ ಆಗಬೇಕು.

ಪಿ.ಕೆ. ಹಳ್ಳಿಯ ರೈಲ್ವೆ ನಿಲ್ದಾಣ ವಸಾಹತು ಕಾಲದ್ದು. ಅಂದಿನ ಉದ್ದೇಶ ಬಳ್ಳಾರಿ ಜಿಲ್ಲೆಯ ಗಣಿ ಸಂಪತ್ತನ್ನು ಸಾಗಿಸುವುದು. ಇಂದು ಕೂಡಾ ಈ ರೈಲ್ವೆ ನಿಲ್ದಾಣ ಹೆಚ್ಚು ಕಡಿಮೆ ಅದೇ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ. ಹಲವಾರು ದಶಕಗಳಿಂದ ಗಣಿಗಾರಿಕೆಯ ಧೂಳು ತಿಂದು ಈ ನಿಲ್ದಾಣ ಕೂಡಾ ಗಣಿಗಾರಿಕೆಯ ಒಂದು ಭಾಗವೇ ಎಂಬಂತಿದೆ. ಇಲ್ಲಿ ಸರಕು ಸಾಗಣೆ ಗಾಡಿಗಳಿಗೆ ಮಾತ್ರ ನಿಲುಗಡೆ. ಪ್ರಯಾಣಿಕರ ಗಾಡಿಗಳು ನಿಂತರೂ ಇಲ್ಲಿ ಇಳಿಯುವ ಅಥವಾ ಹತ್ತುವ ಸವಲತ್ತಿಲ್ಲ. ಈ ನಿಲ್ದಾಣದಿಂದ ದೇಶದೊಳಗಿನ ಮತ್ತು ಪರದೇಶಗಳಿಗೆ ರಫ್ತು ಆಗುವ ಅದಿರು ಮದ್ರಾಸ್ ಮತ್ತು ಗೋವಾ ಬಂದರುಗಳಿಗೆ ರವಾನೆಯಾಗುತ್ತದೆ. ಅದಿರನ್ನು ದೇಶದೊಳಗೆ ಮತ್ತು ಹೊರಗೆ ಮಾರಾಟ ಮಾಡುವುದರಲ್ಲಿ ಸರಕಾರಿ ಸ್ವಾಮ್ಯದ ಎಮ್.ಎಮ್.ಟಿ.ಸಿ. (ಮೈನ್ಸ್ ಆಂಡ್ ಮಿನರಲ್ಸ್ ಟ್ರಾನ್ಸ್‌ಪೋರ್ಟೇಷನ್ ಕಾರ್ಪೋರೇಷನ್) ಮುಖ್ಯ ಭೂಮಿಕೆ ನಿಭಾಯಿಸುತ್ತಿದೆ. ಇದರ ಮುಖ್ಯ ಕೆಲಸ ಗ್ರಾಹಕ ಮತ್ತು ಉತ್ಪಾದಕರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವುದು ಈ ಕೆಲಸಕ್ಕೆ ಎರಡೂ ಕಡೆಯಿಂದಲೂ ಕಮಿಷನ್ ಪಡಿಯುತ್ತದೆ. ಈ ಕಂಪೆನಿ. ಜಿಂದಾಲ್, ಕಿರ್ಲೋಸ್ಕರ್, ಕಾಲ್ಯಾಣಿ ಮುಂತಾದ ಕಂಪೆನಿಗಳನ್ನು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸ್ಥಾಪಿಸುವವರೆಗೂ ಇಲ್ಲಿನ ಅದಿರನ್ನು ಪ್ರದೇಶಗಳಿಗೂ ದೇಶದ ಇತರ ಭಾಗಗಳಿಗೂ ರವಾನೆ ಮಾಡುತ್ತಿತ್ತು. ಈಗ ಮೇಲಿನ ಕಂಪೆನಿಗಳು ಗ್ರಾಹಕರಾಗಿದ್ದಾವೆ.

ಈ ನಿಲ್ದಾಣದಲ್ಲಿ ೧೯೮೪ರಿಂದಲೇ, ಅಂದರೆ ಡಾಲ್ಮಿಯಾದವರು ಗಣಿಗಾರಿಕೆ ಆರಂಭಿಸಿದಂದಿಂನಿಂದಲೂ ವ್ಯಾಗನ್ ನಡಿಯುತ್ತಿದೆ. ವ್ಯಾಗನ್ ತುಂಬುವ ಕೆಲಸಕ್ಕೆ ಕಂಪೆನಿಯವರು ಮತ್ತು ಎಮ್.ಎಮ್.ಟಿ.ಸಿ.ಯವರು ಗುತ್ತಿಗೆದಾರರನ್ನು ನೇಮಿಸಿಕೊಂಡಿದ್ದಾರೆ ಕೆಲಸಗಾರರು ಮತ್ತು ಗಣಿ ಮಾಲಿಕರು/ಎಮ್.ಎಮ್.ಟಿ.ಸಿ. ಯ ಮಧ್ಯೆ ಗುತ್ತಿಗೆದಾರರು ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಈ ವ್ಯವಸ್ಥೆಯಿಂದ ಗಣಿ ಮಾಲಿಕರು/ಎಮ್.ಎಮ್.ಟಿ.ಸಿ.ಯವರು ಅತಿ ಕಡಿಮೆ ಕೂಲಿಗೆ ಶ್ರಮ ಪಡಿಯಬಹುದಾಗಿದೆ. ದುಡಿಯುವ ಕೆಲಸಗಾರರು ಮತ್ತು ದುಡಿಸಿಕೊಳ್ಳುವ ಮಾಲಿಕರಿಗೂ ಯಾವುದೇ ಸಂಬಂಧವಿಲ್ಲ. ಒಂದು ಬಂಡಿಯಲ್ಲಿ ಕನಿಷ್ಠ ೫೦ ಡಬ್ಬಗಳಿವೆ. ಪ್ರತಿ ಡಬ್ಬಿಯಲ್ಲಿ ೫೫ ರಿಂದ ೬೦ ಟನ್ ಅದಿರು ತುಂಬುತ್ತದೆ. ಒಬ್ಬ ಕೂಲಿಗೆ ೫ ರಿಂದ ೬ ಟನ್ ಅದಿರು ತುಂಬುವ ಅವಕಾಶವಿದೆ. ಅಂದರೆ ಒಂದು ಡಬ್ಬ ತುಂಬಲು ಹತ್ತು ಕೆಲಸಗಾರರು ಮತ್ತು ಇಡೀ ಬಂಡಿ ತುಂಬಲು ೫೦೦ ಕಾರ್ಮಿಕರ ಅಗತ್ಯವಿದೆ. ಒಂದು ಟನ್ ತುಂಬಿದರೆ ರೂ. ೧೬ ಕೂಲಿ. ಒಂದು ಬಾರಿ ವ್ಯಾಗನ್ ಬಂದರೆ ಒಬ್ಬ ವ್ಯಕ್ತಿಯ ಕೂಲಿ ರೂ. ೮೦ ಆಗುತ್ತದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ವ್ಯಾಗನ್ ಬರುತ್ತದೆ. ಹೀಗಾಗಿ ಒಬ್ಬ ಕೂಲಿಯ ವಾರದ ಆದಾಯ ರೂ. ೧೬೦; ತಿಂಗಳಿಗೆ ರೂ. ೬೪೦. ಈ ಕೂಲಿ ಹೊರತು ಪಡಿಸಿ ಕಾರ್ಮಿಕರಿಗೆ ಇತರ ಸೌಲಭ್ಯಗಳಿಲ್ಲ. ಡಬ್ಬಿ ತುಂಬುವಾಗ ಗಾಯವಾದರೆ ಗುತ್ತಿಗೆದಾರರು ರೂ. ೫೦ ಅಥವಾ ರೂ. ೧೦೦ ಕೊಟ್ಟು ತಮ್ಮ ಜವಾಬ್ದಾರಿ ಕಳಚಿಕೊಳ್ಳುತ್ತಾರೆ. ಅದು ಬಿಟ್ಟರೆ ಮೆಡಿಕಲ್, ಶಿಕ್ಷಣ, ವಸತಿ ಇತ್ಯಾದಿ ಸವಲತ್ತುಗಳ ಪ್ರಶ್ನೆಯೇ ಇಲ್ಲ.

ವ್ಯಾಗನ್ ತುಂಬುವ ಕೆಲಸದಲ್ಲಿ ಹರಿಜನ ಮತ್ತು ಕೆಳಜಾತಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿಕೊಂಡು ತಮ್ಮ ಪಾಲಿನ ಕೋಟವನ್ನು ಭರ್ತಿ ಮಾಡುತ್ತಾರೆ. ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಕಾರ ಹಾಜರಾತಿ ಕೊರತೆಯ ಒಂದು ಕಾರಣ ವ್ಯಾಗನ್ ಲೋಡಿಂಗ್, ವ್ಯಾಗನ್ ಬಂದ ಕೂಡಲೇ ಪೋಷಕರು ಶಾಲೆಗೆ ಓಡಿ ಬರುತ್ತಾರೆ. ಶಾಲೆಯಲ್ಲಿರುವ ತಮ್ಮ ಮಕ್ಕಳನ್ನು ಸ್ವಲ್ಪ ಹೊತ್ತು ಕಳುಹಿಸಬೇಕೆಂದು ಕೇಳಿಕೊಳ್ಳುತ್ತಾರೆ. ಅವರುಗಳ ಆದಾಯದ ಮುಖ್ಯ ಮೂಲ ವ್ಯಾಗನ್ ತುಂಬುವುದೇ ಆಗಿರುವುದರಿಂದ ಶಿಕ್ಷಕರು ಮಕ್ಕಳನ್ನು ಕಳುಹಿಸುವುದಕ್ಕೆ ವಿರೋಧಿಸುವುದಿಲ್ಲ. ಸ್ವಲ್ಪ ದೊಡ್ಡ ಮಕ್ಕಳಾದರೆ ಪೋಷಕರು ಅವರನ್ನು ಡಬ್ಬಿ ತುಂಬುವ ಕೆಲಸಕ್ಕೆ ತಮ್ಮ ಜತೆಯಾಗಿಸುತ್ತಾರೆ. ಡಬ್ಬಿ ತುಂಬುವಷ್ಟು ಶಕ್ತಿ ಇಲ್ಲದವರನ್ನು ಮನೆಯಲ್ಲಿರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಬಿಟ್ಟು ತಾವು ವ್ಯಾಗನ್ ತುಂಬಲು ಹೋಗುತ್ತಾರೆ. ಹೀಗೆ ನ್ಯಾಯವಾದ ಕಾರಣಕ್ಕೆ ಗೈರು ಹಾಜರಾಗುವುದು ರೂಢಿಯಾಗುತ್ತದೆ, ಇದುವೇ ಮುಂದುವರಿದು ಇತರ ಸಂದರ್ಭದಲ್ಲೂ ಗೈರು ಹಾಜರಾಗುವುದು ಮುಂದುವರಿಯುತ್ತದೆ.

ಪ್ರೌಢ ಶಾಲಾ ಮೇಸ್ಟ್ರುಗಳು ವ್ಯಾಗನ್ ತುಂಬುವ ಕೆಲಸ ಮತ್ತು ಶಾಲಾ ಹಾಜರಾತಿ ಕುರಿತು ಬೇರೆ ವಿವರಣೆ ನೀಡುತ್ತಾರೆ. ಹಳ್ಳಿಯಲ್ಲಿರುವ ಖಾಸಗಿ ಪ್ರೌಡ ಶಾಲೆಗೆ ಸರಕಾರದ ಸಹಾಯಧನ ಮಂಜೂರಾಗಿಲ್ಲ. ಶಾಲೆಗೆ ಸೇರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ರೂ. ೩೦೦ರಿಂದ ರೂ. ೫೦೦ರವರೆಗೆ ಸಹಾಯಧನ ಸಂಗ್ರಹಿಸುತ್ತಾರೆ. ತಿಂಗಳಿಗೆ ರೂ. ೧೦ರಿಂದ ರೂ. ೨೦ ಟ್ಯೂಷನ್ ಫೀಸ್. ಈ ಸಹಾಯ ಧನ ಮತ್ತು ಟ್ಯೂಷನ್ ಫೀ ಸಂಗ್ರಹ ವ್ಯಾಗನ್ ಬರುವುದರ ಮೇಲೆ ನಿಂತಿದೆ. ಕನಿಷ್ಠ ವಾರಕ್ಕೆ ಎರಡು ಬಾರಿ ವ್ಯಾಗನ್ ಬರುತ್ತಾ ಇದ್ದರೆ ಫೀ ಸಂಗ್ರಹ ಸರಿಯಾಗಿ ಆಗುವದು; ತಪ್ಪಿದರೆ ಫೀ ಸಂಗ್ರಹ ಹೆಚ್ಚು ಕಡಿಮೆಯಾಗುವುದು. ಜತೆಗೆ ಶಿಕ್ಷಕರ ಸಂಬಳ ಕೂಡ ಇದರ ಮೇಲೆ ನಿಂತಿರುವುದರಿಂದ, ಅದೂ ಪ್ರಭಾವಿಸಲ್ಪಡುತ್ತದೆ. ತಿಂಗಳು ಗಟ್ಟಲೆ ವ್ಯಾಗನ್ ಬರದಿದ್ದರೆ ಕಾರ್ಮಿಕರು ಬೇರೆ ಪ್ರದೇಶಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಜತೆಗೆ ಕೊಂಡು ಹೋದರೆ ಗೈರು ಹಾಜರಿ ಹೆಚ್ಚುತ್ತದೆ.

ರೈಲ್ವೆ ನಿಲ್ದಾಣ ರಸ್ತೆ ಹೆದ್ದಾರಿಯಿಂದ ಕವಲೊಡೆಯುವಲ್ಲಿ ೫ ಕಿರಾಣಿ ಅಂಗಡಿಗಳಿವೆ. ಊರಲ್ಲಿರುವ ೫ ಸಾರಾಯಿ ಅಂಗಡಿಗಳಲ್ಲಿ ೨ ನಿಲ್ದಾಣ ರಸ್ತೆಯಲ್ಲಿದ್ದರೆ ಉಳಿದವು ಹೆದ್ದಾರಿಯಲ್ಲಿವೆ. ಈ ಕಿರಾಣಿ ಅಂಗಡಿ ಮತ್ತು ಸಾರಾಯಿ ಅಂಗಡಿ ವ್ಯಾಪಾರ ವ್ಯಾಗನ್ ಲೋಡಿಂಗ್ ಮೇಲೆ ನೇರ ಅವಲಂಬಿಸಿದೆ. ೧೯೯೭ರಲ್ಲಿ ಡಾಲ್ಮಿಯಾ ಗಣಿಯಲ್ಲಿ ಕೆಲಸ ನಿಲುಗಡೆ ಆರಂಭವಾಯಿತು. ಅಂದಿನಿಂದ ಸರಾಯಿ ಅಂಗಡಿ ವ್ಯಾಪಾರ ಕುಸಿದಿದೆ. ನಿಲ್ದಾಣ ರಸ್ತೆಯ ಒಂದು ಸಾರಾಯಿ ಅಂಗಡಿಯಲ್ಲಿ ಹಿಂದೆ ಕನಿಷ್ಠವೆಂದೆ ದಿನಕ್ಕೆ ೫೦೦ ಪ್ಯಾಕೆಟ್ ಮಾರಾಟವಾಗುತ್ತಿತ್ತು. ಈಗ ಅದು ೨೦೦ರಿಂದ ೨೫೦ಕ್ಕೆ ಇಳಿದಿದೆ. ಕಿರಾಣಿ ಅಂಗಡಿಗಳ ವ್ಯಾಪಾರ ಕೂಡ ವ್ಯಾಗನ್ ಲೋಡಿಂಗ್‌ನಲ್ಲಿ ಆಗುವ ಏರಿಳಿತಕ್ಕೆ ಅನುಗುಣವಾಗಿ ಏರಿತಗಳನ್ನು ಕಾಣುತ್ತದೆ. ೧೯೯೬ರಲ್ಲಿ ಆರು ತಿಂಗಳು ವ್ಯಾಗನ್ ಬರಲೇ ಇಲ್ಲ. ವ್ಯಾಪಾರ ದೊಡ್ಡ ಕುಸಿತ ಕಂಡಿದೆ. ೧೯೯೯ರ ಡಿಸೆಂಬರ್‌ನಿಂದ ಜನವರಿ ೨೦೦೦ದವರೆಗೂ ವ್ಯಾಗನ್ ಬಂದಿರಲಿಲ್ಲ. ಆವಾಗ ಕೂಡ ವ್ಯಾಪಾರ ಕುಸಿದಿದೆ. ವ್ಯಾಗನ್ ವಾರಗಟ್ಟಲೆ ಬರದಿದ್ದರೆ ಕಾರ್ಮಿಕರು ಬದಲಿ ಕೆಲಸ ಹುಡುಕುತ್ತಾರೆ. ಒಂದೆರೆಡು ವಾರ ಬರದಿದ್ದರೆ ಮುಂದಿನ ವಾರ ಬರಬಹುದೆಂದು ಈ ಕಿರಾಣಿ ಅಂಗಡಿಗಳಿಂದ ದಿನ ನಿತ್ಯದ ದಿನಸಿ ಸಾಮಾನುಗಳನ್ನು ಉದರಿಯಾಗಿ ಕೊಂಡು ವ್ಯಾಗನ್‌ಗಾಗಿ ಕಾಯುತ್ತಾರೆ. ತಿಮಗಳು ದಾಟಿದರೂ ವ್ಯಾಗನ್ ಬರದಿದ್ದರೆ ಇತರ ಕೆಲಸಗಳತ್ತ ಗಮನ ಹರಿಸುತ್ತಾರೆ. ಸುಲಭದಲ್ಲಿ ದೊರೆಯುವ ಇತರ ಆದಾಯದ ಮೂಲವೆಂದರೆ ಕೃಷಿ ಕೂಲಿ. ವ್ಯಾಗನ್ ಲೋಡಿಂಗ್‌ನ್ನೆ ನಂಬಿರುವ ಜನ ಕೃಷಿ ಕೂಲಿಗೆ ಹೋಗುವುದು ತಿಂಗಳುಗಟ್ಟಲೆ ವ್ಯಾಗನ್ ಬರದಿದ್ದರೆ ಮಾತ್ರ. ಇದಕ್ಕೆ ಕಾರಣ ಈ ಎರಡು ದುಡಿಮೆಗಳ ನಡುವೆ ಇರುವ ವ್ಯತ್ಯಾಸ. ಮುಂಜಾನೆಯಿಂದ ಸಂಜೆ ತನಕ ಹೊಲದಲ್ಲಿ ದುಡಿದರೆ ಬರುವ ಕೂಲಿ ರೂ. ೨೫ ರಿಂದ ರೂ. ೩೦. ಆದರೆ ವ್ಯಾಗನ್ ಲೋಡಿಂಗ್‌ನಲ್ಲಿ ಕೇವಲ ಕೆಲವೇ ಗಂಟೆಗಳ ದುಡಿತಕ್ಕೆ ರೂ. ೮೦ ರಷ್ಟು ಕೂಲಿ ಬರುತ್ತದೆ. ಗಂಡ, ಹೆಂಡತಿ ಮತ್ತು ಮಕ್ಕಳ ಸೇರಿ ಅರ್ಧ ದಿನ ವ್ಯಾಗನ್ ತುಂಬಿದರೆ ಹೆಚ್ಚು ಕಡಿಮೆ ರೂ. ೨೫೦ ಕೂಲಿ ಸಿಗುತ್ತದೆ. ಆದರೆ ಇದೇ ಆದಾಯ ಕೃಷಿ ಕೂಲಿಯಿಂದ ಬರಬೇಕಾದರೆ ಕನಿಷ್ಠ ಒಂದು ವಾರವಾದರೂ ದುಡಿಯಬೇಕು. ಹೀಗಾಗಿ ಇಲ್ಲಿನ ಭೂರಹಿತ ಕೂಲಿಗಳ ಕಟ್ಟ ಕಡೆಯ ಆದ್ಯತೆ ಕೃಷಿ ಕೂಲಿ.

ವ್ಯಾಗನ್ ಲೋಡಿಂಗ್ ಕಾರ್ಮಿಕರು ಯೂನಿಯನ್ ಮಾಡಿಕೊಂಡಿದ್ದಾರೆ. ಇವರ ಯೂನಿಯನ್‌ನ ಬಹುದೊಡ್ಡ ಸಾಧನೆಯೆಂದರೆ ಹೊಸ ಕಾರ್ಮಿಕರ ಸೇರ್ಪಡೆ ಕುರಿತಂತೆ ಇರುವ ನಿಯಮ. ಈಗಾಗಲೇ ದುಡಿಯುತ್ತಿರುವ ಕಾರ್ಮಿಕರ ಹೆಸರನ್ನು ಗುತ್ತಿಗೆದಾರರು ಕಾರ್ಮಿಕ ಕಲ್ಯಾಣ ಇಲಾಖೆ, ಹರಿಹರ, ಇಲ್ಲಿ ನೋಂದಾಯಿಸಿದ್ದಾರೆ. ಇವರನ್ನು ಬಿಟ್ಟು ಬೇರೆಯವರು ವ್ಯಾಗನ್ ತುಂಬಲು ಅವಕಾಶವಿಲ್ಲ. ಈ ಶಾಶ್ವತ ಕಾರ್ಮಿಕರು ಬಯಸಿದರೆ ಎರಡು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಒಂದು, ತಮ್ಮ ಪಾಲಿನ ತುಂಬುವ ಹಕ್ಕನ್ನು ಶಾಶ್ವತವಾಗಿ ಮತ್ತೊಬ್ಬರಿಗೆ ವರ್ಗಾಯಿಸಬಹುದು. ವ್ಯಾಗನ್ ಲೋಡಿಂಗ್‌ಗಿಂತ ಲಾಭದಾಯಕ ಕೆಲಸ ದೊರೆತಾಗ ಅಥವಾ ಆರ್ಥಿಕ ಸಂಕಷ್ಟದಲ್ಲಿದ್ದಾಗ ಶಾಶ್ವತ ಕಾರ್ಮಿಕತ್ವವನ್ನು ಮಾರಾಟ ಮಾಡಬಹುದು. ಶಾಶ್ವತ ಕೆಲಸದ ಹಕ್ಕು ಒಂದು ಟನ್‌ಗೆ ರೂ. ೧೦೦೦ ದಂತೆ ಮಾರಾಟವಾಗುತ್ತಿದೆ. ವಿಕ್ರಯಿಸಿದಾತ ಹೊಸ ಶಾಶ್ವತ ಕಾರ್ಮಿಕನಾಗುತ್ತಾನೆ. ಎರಡು, ತಾತ್ಕಾಲಿಕವಾಗಿ ಇತರ ಕೂಲಿಗಳಿಂದ ತಮ್ಮ ಪಾಲಿನ ಕೆಲಸವನ್ನು ಮಾಡಿಸಿಕೊಳ್ಳುವುದು. ಇದೊಂದು ರೀತಿಯ ಸಬ್ – ಕಂಟ್ರಾಕ್ಟ್ ಪದ್ಧತಿ. ಅನಾರೋಗ್ಯದಿಂದ ದುಡಿಯಲು ಅಸಮರ್ಥರಾದಾಗ ಅಥವಾ ಇದಕ್ಕಿಂತಲೂ ಲಾಭದಾಯಕ ಕೆಲಸ ದೊರೆತಾಗ ಈ ಹಕ್ಕನ್ನು ಕಾರ್ಮಿಕರು ಚಲಾಯಿಸುತ್ತಾರೆ. ಇದರ ಪ್ರಕಾರ ಶಾಶ್ವತ ಕಾರ್ಮಿಕ ತನ್ನ ಪಾಲಿನ ೫ ಟನ್ ಅದಿರು ತುಂಬಲು ಮತ್ತೊಬ್ಬನನ್ನು ದಿನಗೂಲಿಗೆ ನೇಮಿಸುತ್ತಾನೆ. ಆ ರೀತಿ ನೇಮಕಗೊಂಡಾತ ವ್ಯಾಗನ್ ತುಂಬುತ್ತಾನೆ. ಕೆಲಸ ಮುಗಿದ ನಂತರ ಶಾಶ್ವತ ಕಾರ್ಮಿಕ ಗುತ್ತಿಗೆದಾರನಿಂದ ಅಂದಿನ ಕೂಲಿ ರೂ. ೮೦ನ್ನು ಪಡಿಯುತ್ತಾನೆ. ಅದರಲ್ಲಿ ರೂ. ೫೦ನ್ನು ದಿನಗೂಲಿ ಕಾರ್ಮಿಕನಿಗಿತ್ತು. ಉಳಿದ ರೂ. ೩೦ನ್ನು ತನ್ನ ಜೇಬಿಗೆ ಸೇರಿಸುತ್ತಾನೆ. ಈ ವ್ಯವಹರದಿಮದ ಶಾಶ್ವತ ಕಾರ್ಮಿಕ ಕೂಡ ಒಂದು ವಿಧದ ಗುತ್ತಿಗೆದಾರನಾಗುತ್ತಾನೆ. ಅಂದರೆ ಇತರರು ಶ್ರಮದಿಂದ ಲಾಭಗಳಿಸುವುದು. ವರ್ಷದ ಕೊನೆಗೆ ಬರುವ ಬೋನಸ್ ಮತ್ತು ಹಬ್ಬದ ಮುಂಗಡಗಳು ಶಾಶ್ವತ ಕಾರ್ಮಿಕನಿಗೆ ಸಿಗುತ್ತದೆ. ಅದರಲ್ಲಿ ದಿನಗೂಲಿ ಕಾರ್ಮಿಕನಿಗೆ ಪಾಲುಕೊಡುವ ಸಂಪ್ರದಾಯವಿಲ್ಲ. ಇಲ್ಲಿ ಶಾಶ್ವತ ಕಾರ್ಮಿಕತ್ವ ಒಂದು ವಿಧದ ಆಸ್ತಿ; ಇತರ ಆಸ್ತಿ ಬಾಡಿಗೆಗಳಿಸಿದಂತೆ ಈ ಆಸ್ತಿ ಕೂಡ ಬಾಡಿಗೆ ಗಳಿಸಲು ಶಕ್ತವಾಗಿದೆ.

ವರ್ಗ ಭಿನ್ನತೆ ಮತ್ತು ಅರಿವಿನ ಸರಳೀಕೃತ ವಾದ ನಂಬುವವರಿಗೆ ಇಂತಹ ಉದಾಹರಣೆಗಳು ನುಂಗಲಾರದ ತುತ್ತೇ ಸರಿ. ಸಮಾಜದಲ್ಲಿರುವ ಶೋಷಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಂಸ್ಕೃತಿಕ ಪದರಗಳ ಅಡ್ಡಿ ಇರಬಹುದು. ಆದರೆ ಇಲ್ಲಿ ತನ್ನದೇ ಸ್ಥಿತಿಯಲ್ಲಿರುವ ಮತ್ತೊಬ್ಬನನ್ನು ಈ ರೀತಿ ದುಡಿಸುವುದು ಶೋಷಣೆಯೆಂಬ ಅರಿವಿಲ್ಲ. ಕೆಲವು ಸಂದರ್ಭದಲ್ಲಿ ಗುರುತು ಚೀಟಿ ಇರುವ ಮೇಲು ಜಾತಿಯವರು ಕೆಳ ಜಾತಿಯವರನ್ನು ದಿನಗೂಲಿಗೆ ನೇಮಿಸಿಕೊಳ್ಳುತ್ತಾರೆ. ಇದು ನಮ್ಮ ಸಾಂಪ್ರದಾಯಿಕತೆಯ ಮುಂದುವರಿಕೆ ಎನ್ನುವಂತಿಲ್ಲ. ಯಾಕೆಂದರೆ ಆಯಾಯ ಜಾತಿಯ ಒಳಗೇ ಈ ಸಬ್ – ಕಂಟ್ರಾಕ್ಟ್ ಪದ್ಧತಿ ಇರುವ ಹಲವಾರು ಉದಾಹರಣೆಗಳಿವೆ. ಇಲ್ಲಿ ಜಾತಿ ಅಥವಾ ವರ್ಗದ ಪ್ರಶ್ನೆಯೇ ಇಲ್ಲ; ಇದ್ದರೆ ಅದು ತನ್ನ ಅಸ್ತಿತ್ವದ ಪ್ರಶ್ನೆ ಮಾತ್ರ. ತಾನು ಉಳಿದ ನಂತರ ಜಾತಿ, ವರ್ಗ, ಸಂಸ್ಕೃತಿ ಇತ್ಯಾದಿಗಳು ಎನ್ನವುದು ತುಂಬಾ ಸ್ಪಷ್ಟವಾಗಿ ಗೋಚರಿಸುತ್ತದೆ.

ಸಾಂಸ್ಕೃತಿಕ ಬದುಕು

ಜನರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಸೀಮಿತಗೊಂಡಂತೆ ಸಂಸ್ಕೃತಿ ಪದವನ್ನು ಇಲ್ಲಿ ಬಳಸಿದ್ದೇನೆ. ಹಳ್ಳಿಯಲ್ಲಿ ಹಲವಾರು ಗುಡಿಗಳಿವೆ, ದೇವರಿದ್ದಾರೆ ಮತ್ತು ಆಚರಣೆಗಳಿವೆ. ಅವುಗಳನ್ನೆಲ್ಲಾ ವಿವರಿಸಲು ಹೋಗಿಲ್ಲ. ಇಡೀ ಹಳ್ಳಿಯವರೆಲ್ಲಾ ಸೇರಿ ಆಚರಿಸುವ ಮೂರು ಜಾತ್ರೆಗಳ ಮೂಲಕ ಇಲ್ಲಿನ ಸಾಂಸ್ಕೃತಿಕ ಬದುಕಿನ ಒಂದು ಸ್ಥೂಲ ಚಿತ್ರನ ಕೊಡಲು ಪ್ರಯತ್ನಿಸಿದ್ದೇನೆ. ತಿಮ್ಮಪ್ಪನ ತೇರು, ಅಂಕ್ಲಮ್ಮನ ಜಾತ್ರೆ ಮತ್ತು ಮೊಹರಂ ಹಬ್ಬ ಇವೇ ಇಲ್ಲಿನ ಮೂರು ಮುಖ್ಯ ಜಾತ್ರೆಗಳು.

ತಿಮ್ಮಪ್ಪನ ತೇರು

ಪ್ರತಿ ವರ್ಷ ಶ್ರೀರಾಮನವಮಿಯಂದು ತಿಮ್ಮಪ್ಪನ ತೇರು ನಡೆಯುತ್ತದೆ. ತೇರಿಗೆ ಮೂರು ದಿನ ಮುಂಚಿತವಾಗಿ ಗರುಡ ಪಟ ಬಿಡಿಸುತ್ತಾರೆ – ಎರಡರಿಂದ ಮೂರು ಮೀಟು ಉದ್ದದ ಬಿಳಿ ಬಟ್ಟೆಯಲ್ಲಿ ಗರುಡ ಮತ್ತ ಅದರ ಕಾಲ ಬಳಿ ಸರ್ಪದ ಚಿತ್ರವನ್ನು ಬಿಡಿಸುವುದು. ಇದನ್ನು ಚಿತ್ರಗಾರರು ಅಥವಾ ಜಂಗಮ ಸ್ವಾಮಿ ಮಾಡುತ್ತಾರೆ. ಗರುಡ ಪಟವನ್ನು ಜಂಗಮ ಸ್ವಾಮಿಗಳು ಶುದ್ಧೀಕರಿಸಿ ಪೂಜಿಸುತ್ತಾರೆ. ನಂತರ ಅದನ್ನು ಡೊಳ್ಳು ಮೆರವಣಿಗೆಯಲ್ಲಿ ಆಂಜನೇಯ ಗುಡಿಗೆ ತರುತ್ತಾರೆ. ಗುಡಿಯಲ್ಲಿ ಪುನಃ ಪಟಕ್ಕೆ ಪೂಜೆ ಮಾಡಿ ತಿಮ್ಮಪ್ಪನ ಗುಡಿಗೆ ತಂದು ಅಂಗಳದಲ್ಲಿರುವ ಗರುಡಗಂಭಕ್ಕೆ ಏರಿಸುತ್ತಾರೆ. ಅಲ್ಲಿಗೆ ಆ ದಿನದ ಆಚರಣೆ ಕೊನೆಗೊಳ್ಳುತ್ತದೆ.

ರಾಮನವಮಿಯಂದು ಮುಂಜಾನೆ ಎಂಟು ಗಂಟೆಗೆ ಗುಡಿಯಲ್ಲಿರುವ ಮೂರು ಮೂರ್ತಿಗಳಿಗೂ (ತಿಮ್ಮಪ್ಪ, ಲಕ್ಷ್ಮಿ ಮತ್ತು ಪದ್ಮಾವತಿ) ಜಂಗಮ್ಮ ಸ್ವಾಮಿಯಿಂದ ಅಭಿಷೇಕ ನಡೆಯುತ್ತದೆ. ಅಭಿಷೇಕದ ನಂತರ ಗುಡಿಯ ಪೂಜಾರಿ ಬಲಿ ಅನ್ನ ಬೇಯಿಸುತ್ತಾರೆ. ಸುಮಾರು ಐದು ಸೇರು ಅಕ್ಕಿಯ ಬಲಿ ಅನ್ನ ತಯಾರಾಗುತ್ತದೆ. ತೇರು ಎಳೆಯುವಾಗ ಯಾವುದೇ ವಿಘ್ನ ಬರದಿರಲೆಂದು ಸಂಜೆ ಮೂರು ಗಂಟೆ ಹೊತ್ತಿಗೆ ಬಲಿ ಅನ್ನ ಮತ್ತು ನೀರನ್ನು ತೇರು ಹೋಗಲಿರುವ ಮಾರ್ಗದಲ್ಲಿ ಹಾಕುತ್ತಾ ಹೋಗುತ್ತಾರೆ. ಹಿಂದೆ ಕಲ್ಲಿನ ಗಾಲಿಯಿರುವ ದೊಡ್ಡ ತೇರು ಇತ್ತಂತೆ. ಆ ತೇರು ಮುರಿದು ಬಿದ್ದಿದೆ. ಕಲ್ಲಿನ ಗಾಲಿಗಳು ಇಂದು ಕೂಡ ಗ್ರಾಮ ಛಾವಡಿಯ ಮುಂದೆ ಅನಾಥವಾಗಿ ಬಿದ್ದಿವೆ. ಹೊಸ ತೇರು ಮಾಡಿಸಿಲ್ಲ. ತೇರು ಇಂದು ಚಕ್ಕಡಿಯಲ್ಲಿ ನಡೆಯುತ್ತದೆ. ಚಕ್ಕಡಿಯ ಮಧ್ಯದಲ್ಲಿ ಒಂದು ಕುರ್ಚಿ ಹಾಕಿ ಅದರ ಮೇಲೆ ತಿಮ್ಮಪ್ಪ ಮತ್ತು ಆಂಜನೇಯ ಮೂರ್ತಿಗಳನ್ನು ಶೃಂಗರಿಸಿ ಕೊಡಿಸುತ್ತಾರೆ. ವಿಶೇಷವೆಂದರೆ ಯಾವಾಗಲೂ ತಿಮ್ಮಪ್ಪನ ಬಳಿಯೇ ಇರುವ ಲಕ್ಷ್ಮಿ ಮತ್ತು ಪದ್ಮಾವತಿ ತೇರಿನಂದು ತಿಮ್ಮಪ್ಪನ ಜತೆ ಇರುವುದಿಲ್ಲ. ಕುರ್ಚಿಯ ಒಂದು ಮಗ್ಗುಲಿಗೆ ಗುಡಿಯ ಪೂಜಾರಿ ಮತ್ತೊಂದು ಮಗ್ಗುಲಿಗೆ ವೆಂಕಟೇಶ್ವರನ ಪಟ (ಧ್ವಜ) ಹಿಡಿದವರು ನಿಂತಿರುತ್ತಾರೆ. ವೆಂಕಟೇಶ್ವರನ ಧ್ವಜ ಹಿಡಿಯುವ ಸಯೋಗ ದುಡ್ಡುರುವ ಯಾರಿಗೂ ಬರಬಹುದು. ಇದು ಸ್ವಲ್ಪ ಒಗಟಿನಂತಿದೆ, ವಿವರಿಸುತ್ತೇನೆ. ಜಾತ್ರೆಯಂದು ಮುಂಜಾನೆ ಅಭಿಷೇಕದ ನಂತರ ವೆಂಕಟೇಶ್ವರನ ಪಟದ ಹರಾಜು ನಡೆಯುತ್ತದೆ. ಅತಿ ಹೆಚ್ಚಿನ ಮೊತ್ತ ಕೂಗಿದವರಿಗೆ ಪಟ ದಕ್ಕುತ್ತದೆ. ಹಿಂದೆ ಹರಾಜಿನಲ್ಲೂ ಉದ್ರಿ ಕೂಗಲು ಅವಕಾಶವಿತ್ತು. ಆಗ ನಾಲ್ಕರಿಂದ ಐದು ಸಾವಿರದವರೆಗೂ ಪಟ ಹರಾಜು ಆಗುತ್ತಿತ್ತು. ಆದರೆ ಆ ಸಾವಿರಗಳನ್ನು ಸಂಗ್ರಹಿಸಲು ವರ್ಷವಿಡೀ ಬೇಕಾಗುತ್ತಿತ್ತು. ಕೆಲವು ಬಾರಿ ವರ್ಷ ಕಳೆದರೂ ಸಾವಿರಗಳು ಬರುತ್ತಿರಲಿಲ್ಲ. ಹಾಗಾಗಿ ಉದ್ರಿ ವ್ಯವಹಾರ ಈಗ ಇಲ್ಲ; ಏನಿದ್ದರೂ ರೊಕ್ಕ ಕೊಟ್ಟು ವ್ಯವಹರಿಸಬೇಕು. ಈಗಲೂ ಒಂದು ಸಾವಿರದಿಂದ ಒಂದೂವರೆ ಸಾವಿರದವರೆಗೆ ಪಟ ಹರಾಜಾಗುತ್ತಿದೆ. ಹರಾಜಿನಲ್ಲಿ ಪಟ ಪಡೆದವರೂ ಮೂರ್ತಿಯ ಮತ್ತೊಂದು ಮಗ್ಗುಲಿಗೆ ನಿಲ್ಲುವ ಅವಕಾಶ ಪಡೆಯುತ್ತಾರೆ.

ರಥ (ಚಕ್ಕಡಿ) ಗ್ರಾಮ ಛಾವಡಿಯಿಂದ ಹೊರಡುತ್ತದೆ. ದಾರಿಯಲ್ಲಿ ಬರುವ ಮನೆ ಮಂದಿ ದೇವರಿಗೆ ಹಣ್ಣು ಕಾಯಿ ಅರ್ಪಿಸುತ್ತಾರೆ. ಅಂಜನೇಯ ಗುಡಿಯ ಎದುರಿನಿಂದ ರಥ ಹೆದ್ದಾರಿ ಸೇರುತ್ತದೆ. ಹೆದ್ದಾರಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ತನಕ ಮುಂದುವರಿಯುತ್ತದೆ. ಅಲ್ಲಿಂದ ಮುಂದೆ ಹೋದರೆ ಅಂಬೇಡ್ಕರ್ ಶಾಲೆ ಮತ್ತು ಅದರ ಹಿಂದುಗಡೆಯಿಂದಲೇ ಹರಿಜನ ಕೇರಿ ಶುರುವಾಗುತ್ತದೆ. ಆದರೆ ದೇವರು ಸರಕಾರೀ ಪ್ರಾಥಮಿಕ ಶಾಲೆ ದಾಟಿ ಮುಂದೆ ಹೋಗುವುದಿಲ್ಲ. ಅಲ್ಲಿಂದಲೇ ಹಿಂತಿರುಗಿ ಬಂದ ದಾರಿಯಲ್ಲೆ ರಥ ಛಾವಡಿ ಸೇರುತ್ತದೆ. ಸುಮಾರು ನಾಲ್ಕು ಗಂಟೆ ಅಥವಾ ಸಂಜೆ ಐದರಿಂದ ರಾತ್ರಿ ಒಂಬತ್ತರವರೆಗೆ ದೇವರು ಊರು ಸಂಚಾರ ಮಾಡಿ ಜನರ ಸುಖ ದುಃಖ ವಿಚಾರಿಸುತ್ತಾರೆ. ಛಾವಡಿ ಬಳಿಯಲ್ಲಿ ದೇವರುಗಳನ್ನು ಚಕ್ಕಡಿಯಿಂದ ಇಳಿಸಿ ಆಯಾಯ ಗುಡಿಯಲ್ಲಿ ಸ್ಥಾಪಿಸುವುದರೊಂದಿಗೆ ತಿಮ್ಮಪ್ಪನ ತೇರು ಸಮಾಪ್ತಿಗೊಳ್ಳುತ್ತದೆ.

ಅಂಕ್ಲಮ್ಮನ ಜಾತ್ರೆ

ವರ್ಷದ ಭರತ ಹುಣ್ಣಿಮೆಯಂದು ಶುಕ್ರವಾರ ಅಥವಾ ಮಂಗಳವಾರ ಅಂಕ್ಲಮ್ಮನ ಜಾತ್ರೆ ನಡೆಯುತ್ತದೆ. ಜಾತ್ರೆಯ ಎರಡು ದಿನ ಮುನ್ನವೇ ಊರಿನ ಎಲ್ಲಾ ಮನೆಗಳಲ್ಲಿ ಶುದ್ದಿ ಕಾರ್ಯ ಆರಂಭವಾಗುತ್ತದೆ. ಮನೆಯೊಳಗಿರುವ ಎಲ್ಲಾ ವಸ್ತುಗಳು ಶುಚಿಯಾಗುತ್ತವೆ; ಮನೆ ಸುಣ್ಣ ಬಣ್ಣ ಕಾಣುತ್ತದೆ. ಈ ಜಾತ್ರೆಯ ಉಸ್ತುವಾರಿ ಕೂಡ ಊರ ಪ್ರಮುಖರದ್ದೆ. ಜಾತ್ರೆಯ ಖರ್ಚನ್ನು ಹೊಸಪೇಟೆಯ ಒಬ್ಬ ವ್ಯಾಪಾರಿ ವಂಶ ಪಾರಂಪರ್ಯವಾಗಿ ಭರಿಸುತ್ತಾ ಬಂದಿದ್ದಾರೆ. ಹಾಗಾಗಿ ಊರವರಿಂದ ಜಾತ್ರೆಗಾಗಿ ವಂತಿಗೆ ಎತ್ತುವ ಪ್ರಶ್ನೆಯಿಲ್ಲ. ಜಾತ್ರೆಯ ಆಚರಣೆಗಳು ಊರ ಬ್ರಾಹ್ಮಣರ ಮನೆಯಿಂದ ಆರಂಭವಾಗುತ್ತದೆ. ಹಿಂದೆ ತಿಳಿಸಿದಂತೆ ಹೊಸಿಪೇಟೆಯ ದಾನಿ ಜಾತ್ರೆಗೆ ಬೇಕಾದ ಎಲ್ಲಾ ಸಾಮಗ್ರಗಳನ್ನು ಪಟ್ಟಿ ಮಾಡಿ ಬ್ರಾಹ್ಮಣರ ಮನೆಗೆ ಕಳುಹಿಸುತ್ತಾರೆ. ಭರತ ಹುಣ್ಣಿಮೆಯ ಮುಂಜಾನೆ ಕುಟುಂಬದ ಹಿರಿಯರು ಹೊಸ ಮಣ್ಣಿನ ಮಡಿಕೆಯೊಂದನ್ನು ಶುದ್ಧೀಕರಿಸಿ ಅದರಲ್ಲಿ ಎರಡೂವರೆ ಸೇರು ಅಕ್ಕಿ ತುಂಬುತ್ತಾರೆ. ಅಕ್ಕಿ ತುಂಬಿದ ಈ ಮಡಿಕೆಗೆ ಪಾಶೆ ಪಡುಗ ಎನ್ನುತ್ತಾರೆ. ರಾತ್ರಿ ಹತ್ತೂವರೆ ಸುಮಾರಿಗೆ ಲಿಂಗಾಯತ ಪ್ರಮುಖರೊಬ್ಬರು ( ಈಗ ಮೇಟಿ ಕುಟುಂಬದ ಶಿವಶಂಕರಪ್ಪನವರು) ಬ್ರಾಹ್ಮಣರ ಮನೆಯಿಂದ ಪಾಶೆ ಪಡುಗದ ಮೆರವಣಿಗೆಯನ್ನು ಆರಂಭಿಸುತ್ತಾರೆ. ಪಾಶೆಪಡುಗ ಹೊತ್ತು ಸಾಗುವ ದಾರಿಯುದ್ದಕ್ಕೂ ಅಗಸರು ಮಡಿ ಬಟ್ಟೆ ಹಾಸುತ್ತಾರೆ. ಪಡುಗದಿಂದ ಸ್ವಲ್ಪ ಮುಂದೆ ಕಲಶ ಹೊತ್ತ ಪಂಚ ಕನ್ಯೆಯರು (ನಾಯಕರ ಜಾತಿಗೆ ಸೇರಿದವರು) ಸಾಗುತ್ತಾರೆ. ಅಂಕ್ಲಮ್ಮನ ಗುಡಿಗೆ ಐದು ಪ್ರದಕ್ಷಿಣೆ ಬಂದು ಪಾಶೆ ಪಡುಗವನ್ನು ದೇವಿಯ ಮುಂದಿರಿಸುತ್ತಾರೆ. ನಂತರ ಬಾಳೆದಿಂಡೆ ಪ್ರದಕ್ಷಿಣೆ. ಸಂಪೂರ್ಣ ವಿವಸ್ತ್ರಗೊಳಿಸಿ, ಸ್ನಾನ ಮಾಡಿಸಿ ಪೂಜೆಗೆ ಅಣಿಗೊಳಿಸಿದ ಹತ್ತರಿಂದ ಹನ್ನೆರಡು ವರ್ಷದ ಬಾಲಕನಿಗೆ ಬಾಳೆದಿಂಡೆ ಎನ್ನುತ್ತಾರೆ. ಸಾಮಾನ್ಯವಾಗಿ ಗುಡಿಯ ಪೂಜಾರಿಯ (ಕುರುಬರ ಜಾತಿಯವರು) ಗಂಡು ಸಂತಾನವೇ ಬಾಳೆದಿಂಡಾಗುವುದು. ಬಾಳೆದಿಂಡೆಯನ್ನು ದೇವಿಯ ಮುಂದಿರಿಸಿ ಪೂಜಿಸುತ್ತಾರೆ. ಪೂಜೆ ಮುಗಿಯುತ್ತಿದ್ದಂತೆ ಹುಡುಗ ಮೂರ್ಚೆ ಹೋಗುತ್ತಾನೆ. ಮೂರ್ಚೆ ಹೋದ ಹುಡುಗನನ್ನು ಕಬ್ಬಿನಿಂದ ಮಾಡಿದ ಪಲ್ಲಕ್ಕಿಯಲ್ಲಿ ಮಲಗಿಸಿ ನಾಯಕರ ನಾಲ್ವರು ಯುವಕರು ದೇವಿಗೆ ಪ್ರದಕ್ಷಿಣೆ ತಂದು ದೇವಿಯ ಎದುರು ಮಲಗಿಸುತ್ತಾರೆ. ಹುಡುಗನಿಗೆ ಪುನರ್ ಜೀವ ಕೊಡುವಂತೆ ದೇವಿಯನ್ನು ಪೂಜಾರಿ ಪರಪರಿಯಾಗಿ ಕೇಳಿಕೊಳ್ಳುತ್ತಾರೆ. ಹುಡುಗ ಎಚ್ಚರಗೊಳ್ಳುವವರೆಗೂ ಊರವರು ಉಧೋ ಉಧೋ ಎಂದು ಒಟ್ಟಾಗಿ ಕೂಗುತ್ತಿರುತ್ತಾರೆ. ಜತೆಗೆ ಕೆಟ್ಟ ಶಬ್ದಗಳಿಂದ ದೇವಿಗೆ ಬೈಯುತ್ತಿರುತ್ತಾರೆ. ಬಾಳೆದಿಂಡೆ ಅಚರಣೆ ಮಾನವ ಬಲಿಯ ಸಾಂಕೇತೀಕರಣದಂತಿದೆ.

ಇದೇ ಸಂದರ್ಭದಲ್ಲಿ ಗುಡಿಯ ಎದುರು ಅಂಗಳದಲ್ಲಿ ಮೂರು ಕಲ್ಲುಗಳನ್ನಿಟ್ಟು ಒಲೆ ಸಿದ್ಧವಾಗುತ್ತದೆ. ಮಣ್ಣಿನ ಪಡುಗ ಬಿರುಕು ಬಿಡದಂತೆ ಒಲೆಯ ಕಲ್ಲುಗಳನ್ನು ಬಟ್ಟೆಯ ಸಿಂಬಿಗಳು ಅಲಂಕರಿಸುತ್ತವೆ. ಒಲೆಯ ಬದಿಯಲ್ಲೇ ಬೆಂಕಿ ಕುಂಡ ಸಿದ್ಧವಾಗಿದೆ. ಊರವರು ಸಂಗ್ರಹಿಸಿದ ಒಂದು ಚಕ್ಕಡಿಯಷ್ಟು ಕಟ್ಟಿಗೆಯನ್ನು ಬೆಂಕಿ ಕುಂಡದಲ್ಲಿ ಪೇರಿಸಿದ್ದಾರೆ. ದೇವಿಯ ಅಪ್ಪಣೆ ಪಡೆದು ಪೂಜಾರಿ ಗಂಧದ ಕಟ್ಟಿಗೆಯಿಂದ ಪಡುಗದ ಒಲೆ ಹಚ್ಚುತ್ತಾರೆ. ಅದೇ ಬೆಂಕಿಯಿಂದ ಬೆಂಕಿ ಕುಂಡ ಕೂಡ ಹಚ್ಚುತ್ತಾರೆ. ಗಂಧದ ಕಟ್ಟಿಗೆ ತರುವ ಕೆಲಸ ವಡ್ಡರದ್ದು. ಇತ್ತೀಚಿನ ದಿನಗಳಲ್ಲಿ ಇಡೀ ಪಡುಗದ ಅಕ್ಕಿ ಬೇಯಿಸುವಷ್ಟು ಗಂಧದ ಕಟ್ಟಿಗೆ ಸಿಗುವುದಿಲ್ಲ. ಶಾಸ್ತ್ರಕ್ಕಾಗಿ ಗಂಧದ ಕೆಲವು ತುಂಡುಗಳನ್ನು ಹಾಕಿ ಇತರ ಕಟ್ಟಿಗೆಯಿಂದಲೆ ಪಡುಗದ ಅಕ್ಕಿ ಬೇಯಿಸುತ್ತಾರೆ. ಅನ್ನ ಬೇಯುತ್ತಿರುವಾಗ ಪಕ್ಕದಲ್ಲಿರುವ ಅಗ್ನಿ ಕುಂಡದ ಕಟ್ಟಿಗೆ ಉರಿದು ಕೆಂಡದ ರಾಶಿಯಾಗಿದೆ. ಈ ಕೆಂಡದ ರಾಶಿ ಮೇಲೆ ಗುಡಿಯ ಪೂಜರಿ ಮುಖದ್ವಾರದ ಕಡೆಯಿಂದ ಬರಿಗಾಲಲ್ಲಿ ನಡೆದು ಮತ್ತೊಂದು ಬದಿಗೆ ಹೋಗಿ ಪುನಃ ಅದೇ ಕೆಂಡದ ಹಾದಿಯಲ್ಲಿ ಹಿಂತಿರುಗಿ ದೇವಿಯ ಪೀಠದ ಬಳಿಯಲ್ಲೆ ನಿಲ್ಲುತ್ತಾರೆ. ಅಲ್ಲಿಂದ ಊರಿನ, ಜನರ, ದನಕರುಗಳ, ಮಕ್ಕಳ, ಆರೋಗ್ಯ ಭಾಗ್ಯದ ಕುರಿತು ಹೇಳಿಕೆ ನಡೆಯುತ್ತದೆ. ಹೇಳಿಕೆಯ ನಂತರ ಪಾಶೆಪಡುಗದ ಮುಚ್ಚಳ ತೆಗೆದು ಪಡುಗದ ನಾಲ್ಕು ಮೂಲೆಗಳಿಂದ ಒಂದೊಂದು ಹಿಡಿ ಅನ್ನ ಬಾಚಿ ತಟ್ಟೆಯ ನಾಲ್ಕು ಮೂಲೆಗಳಲ್ಲಿ ಇಡುತ್ತಾರೆ; ಮಧ್ಯದಿಂದ ಒಂದು ಹಿಡಿ ತೆಗೆದು ತಟ್ಟೆಯ ಮಧ್ಯದಲ್ಲಿ ಇಡುತ್ತಾರೆ. ಮುಂದಿನ ವರ್ಷದ ಮಳೆ, ಬೆಳೆ, ಜನರ, ದನ ಕರುಗಳ ಆರೋಗ್ಯ ಭಾಗ್ಯದ ಬಗ್ಗೆ ಈ ಹಿಡಿ ಅನ್ನ ಸೂಚನೆ ನೀಡುತ್ತದೆ. ಹಿಡಿ ಅನ್ನದಲ್ಲಿರುವ ಎಲ್ಲಾ ಅಗುಳುಗಳು ಸರಿಯಾಗಿ ಬೆಂದಿದ್ದರೆ ಮಳೆ ಬೆಳೆ ಸರಿಯಾಗಿ ಆಗುತ್ತದೆ; ಬೆಂದಿಲ್ಲದಿದ್ದರೆ ಮಳೆ ಬೆಳೆ ಸರಿಯಾಗಿ ಆಗುವುದಿಲ್ಲ ಎನ್ನುವ ನಂಬಿಕೆಯಿದೆ. ಪ್ರಸಾದ ರೂಪದಲ್ಲಿ ಪಾಶೆ ಪಡುಗದ ಅನ್ನವನ್ನು ಪೂಜಾರಿ ಹಂಚುತ್ತಾರೆ. ಪಸಲು ಹೆಚ್ಚಾಗಲೆಂದು ಆ ಪ್ರಸಾದವನ್ನು ರೈತರು ತಮ್ಮ ಹೊಲಗಳಲಿ ಹಾಕುತ್ತಾರೆ. ಹೀಗೆ ಅಂಕ್ಲಮ್ಮನ ಜಾತ್ರೆ ಕೃಷಿ ಮತ್ತು ಊರವರ ಸುಖ ಭಾಗ್ಯಗಳೊಂದಿಗೆ ಸಂಬಂಧ ಹೊಂದಿದೆ.

ಮೊಹರಂ ಹಬ್ಬ

ಮೊಹರಂ ಹಬ್ಬಕ್ಕಿಂತ ಕೆಲವು ದಿನ ಮುಂಚಿತವಾಗಿ ಅಲಾಯಿಕುಣಿಗೆ ಗುದ್ಲಿ ಹಾಕುವ ಆಚರಣೆ ಇದೆ. ಆ ದಿನ ಊರ ಪ್ರಮುಖರ (ಮೇಟಿ ಲಿಂಗಾಯತರ) ಮನೆಯಿಂದ ಕೆಂಪು ಸಕ್ಕರೆ ತಂದು ಅಲಾಯಿ ಕುಣಿ ಮಾಡುವ ಜಾಗದಲ್ಲಿ ಇರಿಸಿ, ಊದುಬತ್ತಿ ಮತ್ತು ಲೋಬಾನ ಹಚ್ಚಿ ಪೂಜಿಸುತ್ತಾರೆ. ಉರ್ದು ಭಾಷೆಯಲ್ಲಿ ಮಂತ್ರ ಹೇಳಿ ಐದು ಬಾರಿ ಗುದ್ಲಿ ಪೂಜೆಯ ಶಾಸ್ತ್ರ ಆಗುತ್ತದೆ. ಗುದ್ಲಿ ಶಾಸ್ತ್ರದ ಆರನೆಯ ದಿನ ದೇವರನ್ನು ಗುಡಿಯಿಂದ ಮಸೀದಿಗೆ ತರುವ ಶಾಸ್ತ್ರವಿದೆ. ಗ್ರಾಮ ಛಾವಡಿಗೆ ತಾಗಿಕೊಂಡಂತಿರುವ ಎಡ ಭಗದ ಕೊಠಡಿ ಮೊಹರಂ ಹಬ್ಬದ ಸಂದರ್ಭದಲ್ಲಿ ಮಸೀದಿಯಾಗಿ ಪರಿವರ್ತಿತಗೊಳ್ಳುತ್ತದೆ. ದೇವರ ಮೂರ್ತಿಗಳನ್ನು ಹಿಂದೆ ಗೌಡರ ಮನೆಯವರು ಇರಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿನ ಜನ ಜಾಸ್ತಿಯಾದಂತೆ ದೇವರು ಇರಿಸಲು ಜಾಗ ಕಡಿಮೆಯಾಯಿತು ಹಾಗೆ ಬೇರೆ ಜಾಗದಲ್ಲಿ ದೇವರು ಇರಿಸಲು ಆರಂಭಿಸಿದರೆಂದು ಒಂದು ಅಭಿಪ್ರಾಯವಿದೆ. ಮತ್ತೆ ಕೆಲವರ ಪ್ರಕಾರ ದೇವರು ಮನೆಯಲ್ಲೇ ಇದ್ದರೂ ಗೌಡರ ಮನೆಯ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿತ್ತು. ಇಂತಹ ದೇವರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಾದರೂ ಯಾಕೆ ಎಂದು ಗೌಡರ ಮನೆಯವರು ದೇವರ ಇರಸಿಕೊಳ್ಳಲು ನಿರಾಕರಿಸಿದರು ಎಂಬ ಅಪವಾದವು ಇದೆ. ಅದೇನೆ ಇರಲಿ ಈಗಂತೂ ದೇವರನ್ನು ಹುಸೇನ್ ಪೀರ್ (ಗೌಡರ ಸಂಬಂಧಿ ಮತ್ತು ಮೊಹರಂ ಹಬ್ಬದಂದು ದೇವರು ಹೊರುವವರು) ತಮ್ಮ ಮನೆಯ ಪಕ್ಕಕ್ಕಿರುವ ಒಂದು ಚಿಕ್ಕ ಗುಡಿ(ಸಲಲ್ಲಿ)ಯಲ್ಲಿ ಇರಿಸಿದ್ದಾರೆ.

ಗುದ್ಲಿ ಶಾಸ್ತ್ರದ ಆರನೆಯ ದಿನ ದೇವರು ಇರಿಸಿದ ಪಟ್ಟಿಗೆಗೆ ಪೂಜಾರಿ (ಕುತಬ್ ಸಾಬ್) ಬಟ್ಟೆ ಹೊದಿಸಿ, ಹೂ ಹಾಕಿ ಪೂಜಿಸುತ್ತಾರೆ. ಪೂಜಿಸಿದ ದೇವರ ಪೆಟ್ಟಿಗೆಯನ್ನು ಹುಸೇನ್ ಪೀರ್ ಹೊತ್ತುಕೊಂಡು ಮೆರವಣಿಗೆಯಲ್ಲಿ ಮಸೀದಿ ಕಡೆಗೆ ಬರುತ್ತಾರೆ. ಚಪ್ಪಡಿ ಬಾರಿಸುತ್ತಾ ಹರಿಜನರು ಮುಂದೆ ಸಾಗಿದರೆ ಅವರ ಹಿಂದೆ ಪಂಜಿನ ಬೆಳಕು ತೋರಿಸುವವರು (ಈಗ ಗ್ಯಾಸ್ ಲೈಟ್ ಬಂದಿದೆ), ನಂತರ ಹುಸೇನ್ ಪೀರ್ ದೇವರ ಪೆಟ್ಟಿಗೆ ಹೊತ್ತು ನಿಧಾನ ಹೆಜ್ಜೆ ಹಾಕುತ್ತಾರೆ. ದೇವರ ಪೆಟ್ಟಿಗೆಗೆ ನವಿಲುಗರಿಯ ಬೀಸಣಿಕೆ ದಾರಿಯುದ್ದಕ್ಕೂ ನಡೆದಿರುತ್ತದೆ. ಅಲಾಯಿಕುಣಿಗೆ ಒಂದು ಸುತ್ತು ದೇವರ ಪೆಟ್ಟಿಗೆಯನ್ನು ಮಸೀದಿಯಲ್ಲಿ ಇರುಸುತ್ತಾರೆ. ಆ ಪೆಟ್ಟಿಗೆಯಲ್ಲಿ ನಾಲ್ಕು ದೇವರ ಆಕಾರಗಾಳಿವೆ. ಅದನ್ನು ಪೂಜಾರಿ ಹೊರ ತೆಗೆದು ಹರಕೆ ಬಂದ ಹೂ, ಬಟ್ಟೆಗಳಿಂದ ಅಲಂಕರಿಸುತ್ತಾರೆ, ಗುದ್ಲಿ ಪೂಜೆಯ ಒಂಬತ್ತನೆಯ ದಿನ ಅಥವಾ ದೇವರನ್ನು ಮಸೀದಿಯಲ್ಲಿ ಇರಿಸಿದ ಮೂರನೆ ದಿನ ಚಿಕ್ಕ ದೇವರುಗಳ ಮೆರವಣಿಗೆ ಇದೆ. ಅಲಂಕರಿಸಿದ ಚಿಕ್ಕ ದೇವರುಗಳನು ಹೊತ್ತುಕೊಂಡು ಹುಡುಗರು ಮಸೀದಿಯಿಂದ ದೇವರ ಗುಡಿ ತನಕ ಬಂದು ಪನಃ ಅದೇ ದಾರಿಯಲ್ಲಿ ಮಸೀದಿಗೆ ಹಿಂತಿರುಗುವುದು. ಅದೇ ದಿನ ಫಕೀರರಾಗುವ ಆಚರಣೆಯೂ ಇದೆ. ಬ್ರಾಹ್ಮಣರು, ಶೆಟ್ಟರು ಮತ್ತು ಲಿಂಗಾಯತರನ್ನು ಹೊರತುಪಡಿಸಿ ಉಳಿದ ಎಲ್ಲಾ ಜಾತಿಯ ಜನರು ಫಕೀರರಾಗುತ್ತಾರೆ. ಎರಡು ವಿಧದ ಫಕೀರತ್ವ ಇದೆ. ಒಂದು, ಐದು ದಿನದ ಫಕೀರ – ಇದು ಮುಸ್ಲಿಮರಿಗೆ ಮಾತ್ರ. ಎರಡು, ಏಳು ದಿನದ ಫಕೀರ – ಇದು ಇತರ ಜಾತಿಯವರಿಗೆ, ಫಕೀರರಾಗುವವರು ಸ್ನಾನ ಮಾಡಿ ಸಕ್ಕರೆ, ಊದು ಬತ್ತಿ, ಹೂ ಮತ್ತು ಲಾಡಿ (ಕೆಂಪು ಬಟ್ಟೆ) ಸಮೇತ ಬಸೀದಿಗೆ ಬರುತ್ತಾರೆ. ತಂದ ಸಾಮಗ್ರಿಗಳನ್ನು ಕುತುಬ್ ಸಾಬಿ ತಕ್ಕೊಂಡು ದೇವರ ಮುಂದಿರಿಸಿ ಪೂಜೆ ಮಾಡಿ ಲಾಡಿ ಮತ್ತು ಸಕ್ಕರೆಯ ಸ್ವಲ್ಪ ಭಾಗವನ್ನು ವಾಪಾಸು ಕೊಡುತ್ತಾರೆ. ಲಾಡಿಯನ್ನು ಕೈಗೋ ಅಥವಾ ಕೊರಳಿಗೆ ಕಟ್ಟಿಕೊಂಡು ಸಕ್ಕರೆಯನ್ನು ಮನೆ ಮಂದಿಗೆಲ್ಲಾ ಹಂಚುತ್ತಾರೆ. ಅಂದಿನಿಂದ ಅವರು ಫಕೀರರು.

ಹತ್ತನೆಯ ದಿನ ಕತ್ತಲರಾತ್ರಿ ಆಚರಣೆ. ಮುಂಜಾನೆ ಎಂಟು ಗಂಟೆಗೆ ಅಲಾಯಿ ಕುಣಿಗೆ ಪೂಜೆ. ನಂತರ ಊರವರು ಅಲಾಯಿ ಕುಣಿಗೆ ಕಟ್ಟಿಗೆ ತುಂಬುವುದು. ಹಿಂದೆ ಅಲಾಯಿಕುಣಿಗೆ ಕಟ್ಟಿಗೆ ಕಡಿಯುವುದನ್ನು ವಿರೋಧಿಸುವಂತಿರಲಿಲ್ಲ. ಯಾರ ಭೂಮಿಯಿಂದಲೂ ಯಾರೂ ಬೇಕಾದರೂ. ಕಟ್ಟಿಗೆ ತರಬಹುದಿತ್ತು. ಅರಣ್ಯ ಇಲಾಖೆಯವರು ಕೂಡ ಆ ಒಂದು ದಿನ ಕಟ್ಟಿಗೆ ಕಡಿಯಲು ಅವಕಾಶ ಕೊಡುತ್ತಿದ್ದರು. ಆದರೆ ಇಲ್ಲೊಂದು ಅಲಿಖಿತ ಒಪ್ಪಂದವಿತ್ತು. ಅದೇನೆಂದರೆ ಕೇವಲ ನಿರುಪಯೋಗಿ ಗಿಡಗಳನ್ನು ಮಾತ್ರ ಕಡಿಯಬೇಕು. ಜನರ ದಿನ ನಿತ್ಯದ ಬದುಕಿನ ವೈಷಮ್ಯಗಳು ಧಾರ್ಮಿಕ ಕ್ಷೇತ್ರಕ್ಕೂ ಪಸರಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಲಾಯಿಕುಣಿ ನೆಪದಲ್ಲಿ ಉಪಯೋಗಿ ಮರ ಗಿಡಗಳನ್ನು ಕಡಿಯಲು ಆರಂಭಿಸಿದರು. ಹಾಗಾಗಿ ಇಂದು ಖುಶಿ ಬಂದ ಜಾಗದಿಂದ ಕಟ್ಟಿಗೆ ತರುವಂತಿಲ್ಲ. ಆದಾಗ್ಯೂ ಕೇಳಿದರೆ ಯಾರೂ ನಿರಾಕರಿಸುವುದಿಲ್ಲ; ಸ್ಥಳೀಯ ಗಣಿ ಮಾಲಿಕರನ್ನು ಸೇರಿಸಿ. ಮಧ್ಯಾಹ್ನ ಮೂರು ಗಂಟೆಯಿಂದ ಎಲ್ಲಾ ದೇವರುಗಳಿಗೂ ಹರಕೆ ಬಂದ ಬಟ್ಟೆ ಮತ್ತು ಹೂವಿನಿಂದ ಶೃಂಗಾರ. ಸಂಜೆ ಹೊತ್ತಿಗೆ ಪೂಜೆ ಮಾಡಿಸಿಕೊಳ್ಳಲು ಊರವರು ಬರಲು ಆರಂಭಿಸುತ್ತಾರೆ. ಬೆಲ್ಲದ ಹಾಲು ಮತ್ತು ಮಾದ್ಲಿಯೊಂದಿಗೆ ಕುಟುಂಬದ ಎಲ್ಲಾ ಸದಸ್ಯರು ಸೇರಿ ಬರುತ್ತಾರೆ. ತಮ್ಮ ಹಿಂದಿನ ವೈರತ್ವ ಮರೆತು ಒಂದಾಗಲು ಕುಟುಂಬದ ಸದಸ್ಯರಿಗೆ ಇದೊಂದು ಸದಾವಕಾಶ. ಮಾದ್ಲಿ ಮತ್ತು ಬೆಲ್ಲದ ಹಾಲಿನ ಸ್ವಲ್ಪ ಭಾಗವನ್ನು ಮಸೀದಿಯಲ್ಲಿರುವ ಒಂದು ದೊಡ್ಡ ಹಂಡೆಗೆ ಸುರಿದು ಉಳಿದ ಭಾಗವನ್ನು ತಂದವರಿಗೆ ಹಿಂತಿರುಗಿಸುತ್ತಾರೆ. ಮೇಲು ಜಾತಿಯವರು ಬೆಲ್ಲದ ಹಾಲು ಮತ್ತು ಮಾದ್ಲಿ ತರುವುದಿಲ್ಲ. ಕೆಂಪು ಸಕ್ಕರೆ ತಂದು ಪೂಜೆ ಮಾಡಿಸಿಕೊಳ್ಳುತ್ತಾರೆ. ಆದರೆ ಮನೆಯಲ್ಲೇ ಮಾದ್ಲಿ ಮಾಡುತ್ತಾರೆ. ಹರಿಜನರೂ ಮಾದ್ಲಿ ಮತ್ತು ಬೆಲ್ಲದ ಹಾಲು ತರುತ್ತಾರೆ. ಅವುಗಳನ್ನು ಮೊಹರಂ ಮೈದಾನದ ಸುತ್ತು ಗೋಡೆಯ ಮೇಲಿರಿಸುತ್ತಾರೆ. ಅಲ್ಲಿಂದ ಅವುಗಳನ್ನು ಪೂಜಾರಿ ಒಳತಂದು ಪೂಜಿಸಿ ಸಕ್ಕರೆಯ ಸ್ವಲ್ಪ ಭಾಗವನ್ನು ಇರಿಸಿಕೊಂಡು ಮಾದ್ಲಿ ಮತ್ತು ಬೆಲ್ಲದ ಹಾಲನ್ನು ಸಂಪೂರ್ಣ ಹಿಂತಿರುಗಿಸುತ್ತಾರೆ.

ರಾತ್ರಿ ಒಂದು ಗಂಟೆ ಸುಮಾರಿಗೆ ಪೂಜಾರಿ ಅಲಾಯಿ ಕುಣಿಯಲ್ಲಿ ತುಂಬಿಸಿರುವ ಕಟ್ಟಿಗೆಗೆ ಬೆಂಕಿ ಹಚ್ಚುವುದು. ಬೆಂಕಿ ಉರಿವಾಗ ಊರವರು ಅಲಾಯಿ ಕುಣಿ ಸುತ್ತಾ ಕುಣಿಯುತ್ತಾರೆ. ಕಟ್ಟಿಗೆ ಉರಿದು ಕೆಂಡವಾದ ಬಳಿಕ ಅದರ ಮೇಲೆ ಹುಸೇನ್ ಪೀರ್ ನಡೆಯುವ ಶಾಸ್ತ್ರವಿದೆ. ಅವರು ದೇವರನ್ನು ಅಲಾಯಿ ಕುಣಿಗೆ ಒಂದು ಸುತ್ತು ತಂದು ಸ್ವಲ್ಪ ದೂರದಲ್ಲಿರುವ ಮುಸ್ಲಿಂ ಹಿರಿಯರ ಘೋರಿಗೆ ಪ್ರದಕ್ಷಿಣೆ ಹಾಕಿ ಮಸೀದಿ ಕೊಠಡಿಯೆದುರು ನಿಲ್ಲುತ್ತಾರೆ. ಛಾವಡಿಯ ಮುಂದೆ ಊರ ಪ್ರಮುಖರಿಂದ (ಶಿವಶಂಕರಪ್ಪ, ಮಲ್ಲಪ್ಪ) ಹೇಳಿಕೆ ಕೇಳುವ ಕ್ರಮವಿದೆ. ಇಲ್ಲಿ ಕೂಡ ಮಳೆ ಬೆಳೆ, ಜನರ ಆರೋಗ್ಯ ಭಾಗ್ಯದ ಬಗೆಗೆ ಹೇಳಿಕೆ ನಡೆಯುತ್ತದೆ. ನಂತರ ದೇವರನ್ನು ಹೊತ್ತುಕೊಂಡು ಹುಸೇನ್ ಪೀರ್ ಪ್ರತಿ ಮನೆಗೂ – ಹರಿಜನರ ಮನೆಗಳನ್ನು ಹೊರತುಪಡಿಸಿ – ಭೇಟಿ ನೀಡುತ್ತಾರೆ. ದೇವರು ಊರು ಸುತ್ತುವುದು ಇಡೀ ದಿನ ನಡೆಯುತ್ತದೆ. ಅದೇ ಸಂದರ್ಭದಲ್ಲಿ ಅಲಾಯಿ ಕುಣಿ ಸುತ್ತಾ ಊರವರ ಕುಣಿತ ಕೂಡ ಸಾಗಿರುತ್ತದೆ. ಸಂಜೆ ಐದು ಗಂಟೆ ಹೊತ್ತಿಗೆ ದೇವರು ಮಸೀದಿ ಗುಡಿಯ ಬಳಿ ಬಂದು ಅಲಾಯಿ ಕುಣಿ ಮುಚ್ಚಲು ಸೂಚಿಸುತ್ತಾರೆ. ಕೆಂಡವನ್ನೆಲ್ಲಾ ಸೇರಿಸಿ ರಾಶಿ ಮಾಡುತ್ತಾರೆ. ರಾಶಿಯ ತುದಿಗೆ ಬಾರೆ ಗಿಡದ ಕೋಲನ್ನು ನೆಡುತ್ತಾರೆ. ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ದೇವರು ಕರ್‌ಬಾಳಕ್ಕೆ ಹೊರಡುತ್ತಾರೆ. ಊರ ಬಾವಿಗೆ ಹೋಗಿ ಬಟ್ಟೆ ಮತ್ತು ಹೂವಿನ ಅಲಂಕಾರಗಳನ್ನು ಬಿಚ್ಚಿ ಮಕರಂಭಕ್ಕೆ (ದೇವರ ಆಕಾರ) ಸ್ನಾನ ಮಾಡಿಸಿ ಮಸೀದಿಗೆ ತರುತ್ತಾರೆ. ಕರ್‌ಬಾಳದಿಂದ ಹಿಂತಿರುಗಿ ಬರುವ ಹೊತ್ತಿಗೆ ಅಲಾಯಿ ಕುಣಿಸುತ್ತಾ ಊರವರು ಆಡು ಮಾಂಸದ ಎಡೆ ಮಾಡಿಕೊಂಡು ಕುಳಿತಿರುತ್ತಾರೆ. ಅದೇ ಸಂದರ್ಭದಲ್ಲಿ ಫಕೀರರಾದವರು ತಮ್ಮ ಲಾಡಿಗಳನ್ನು ಬಿಚ್ಚಿ ಅಲಾಯಿ ಕುಣಿಯಲ್ಲಿ ನಟ್ಟಿರುವ ಕೋಲಿಗೆ ಹಾಕುತ್ತಾರೆ. ಮರು ದಿವಸ ಬೆಳಿಗ್ಗೆ ಹುಡುಗರು ಸಕ್ಕರೆ (ಮಂಡಕ್ಕಿ) ಪ್ರಸಾದವನ್ನು ಎಲ್ಲಾ ಮನೆಗಳಿಗೂ ತಲುಪಿಸುತ್ತಾರೆ.

ಉತ್ತರ ಕರ್ನಾಟಕದ ಇತರ ಹಳ್ಳಿಗೆ ಹೋಲಿಸಿದರೆ ಈ ಹಳ್ಳಿಯ ಬದುಕು ಹಲವಾರು ಏರುಪೇರುಗಳನ್ನು ಕಂಡಿದೆ. ೧೯೫೦ರವರೆಗೆ ನಿಂತ ನೀರಿನಂತೆ ಯಾವುದೇ ಬದಲಾವಣೆ ಇಲ್ಲದೆ ಇದ್ದ ಬದ್ದ ಕೃಷಿಯಲ್ಲಿ ಇಡೀ ಹಳ್ಳಿ ಉಸಿರಾಡಬೇಕಿತ್ತು. ಆದರೆ ಅದು ನಿಜವಾಗಿಯು ಇಲ್ಲಿನ ಮೇಲ್ವರ್ಗಕ್ಕೆ ಗೋಲ್ಡನ್ ಏಜ್. ಜೀತ ಪದ್ಧತಿ, ಪ್ರಶ್ನಾತೀತ ಊರಿನ ಯಜಮಾನಿಕೆ (ಪಂಚಾಯತ್ ಚೇರ್‌ಮೆನ್ ಗಿರಿ) ಇತ್ಯಾದಿಗಳಿಂದ ಕೆಳ ವರ್ಗದ ಶ್ರಮವನ್ನು ಅಗ್ಗದ ಕೂಲಿಗೆ ಪಡೆಯುವುದು ಮೇಲು ಜಾತಿಯವರಿಗೆ ಸಮಸ್ಯೆ ಆಗಿರಲಿಲ್ಲ. ೧೯೫೦ರ ನಂತರ ನಿಧಾನವಾಗಿ ಹಳ್ಳಿಯಲ್ಲಿ ಬದಲಾವಣೆಗಳು ಆಗತೊಡಗಿದವು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಲೆ ಎತ್ತಿದ ಗಣಿಗಾರಿಕೆ ಊರಿನ ಆರ್ಥಿಕ ಸ್ಥಿತಿಯನ್ನು ನಿಧಾನವಾಗಿ ಪ್ರಭಾವಿಸತೊಡಗಿತು. ಆರಂಭದಲ್ಲಿ ಕೆಳ ಜಾತಿಯವರು ಅತ್ತ ಸಾಗಿದರೆ ೧೯೭೫ರ ನಂತರ ಹರಿಜನರು ಕೂಡ ಗಣಿ ಕೆಲಸಗಳಲ್ಲಿ ತಮ್ಮ ಹೊಸ ಬದುಕು ಆರಂಭಿಸಿದರು. ಇದು ಇಲ್ಲಿನ ಮೇಲ್ವರ್ಗಕ್ಕೆ ದೊರೆಯುತ್ತಿದ್ದ ಅಗ್ಗದ ಶ್ರಮವನ್ನು ಇಲ್ಲದಾಗಿಸಿತು. ಇದರಿಂದಾಗಿ ಮೇಲ್ವರ್ಗದ ಕೃಷಿ ತಾತ್ಕಾಲಿಕ ಹಿನ್ನಡೆ ಕಂಡಿದೆ. ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿದ್ದರೂ ಇಲ್ಲಿನ ಸಾಂಸ್ಕೃತಿಕ ಬದುಕು ಯಾವುದೇ ಬದಲಾವಣೆ ಇಲ್ಲದೆ ಹಿಂದಿನ ರೀತಿಯಲ್ಲಿ ಮುಂದುವರಿಯುತ್ತಿದೆ. ಇವೆಲ್ಲಾ ಇಲ್ಲಿನ ರಾಜಕೀಯ ಬದುಕಿನ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ಮುಂದಿನ ಅಧ್ಯಾಯಗಳಲ್ಲಿ ನೋಡಲಿದ್ದೇವೆ.