ತಳಮಟ್ಟದ ರಾಜಕೀಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಂದು ಹಲವಾರು ಪ್ರಮುಖ ಚಚರ್ರ‍ಗಳಿವೆ. ಅವುಗಳಲ್ಲಿ ಕೆಲವನ್ನು – ಸಮುದಾಯವಾದ ಮತ್ತು ಸಂಪ್ರದಾಯ ವಾದಗಳನ್ನು ಪ್ರಸ್ತಾವನೆಯಲ್ಲಿ ಪರಿಚಯಿಸಿದ್ದೇನೆ. ಆಧುನಿಕ ರಾಜಕೀಯ ಪ್ರಕ್ರಿಯೆಗಳನ್ನು ಅಲ್ಲಗಳೆದು ನಮ್ಮದೇ ಸಂಸ್ಕೃತಿಯಲ್ಲಿ ರೂಪುಗೊಂಡ ರಾಜಕೀಯ ಪ್ರಕ್ರಿಯೆಗಳಿಗೆ ಮಹತ್ವಕೊಡಬೇಕು ಎನ್ನುವುದು ಸಮುದಾಯವಾದಿಗಳ ಮುಖ್ಯವಾದ. ಇದನ್ನು ನಾನು ದೇಶಿ ರಾಜಕೀಯವೆಂದು ನಿರ್ವಚಿಸಿಕೊಂಡಿದ್ದೇನೆ. ಆಧುನಿಕ ಪ್ರಜೆತನ (ಸಿಟಿಜನ್‌ಶಪ್) ಆಧಾರತ ರಾಜಕೀಯ ನಮ್ಮ ಸಮುದಾಯದ ಆಧಾರಿತ ರಾಜಕೀಯ ಪ್ರಕ್ರಿಯೆಗಳನ್ನು ಮೂಲೆಗುಂಪಾಗಿಸಿದೆ. ಇದರಿಂದಾಗಿ ವಿವಿಧ ಸಾಂಪ್ರದಾಯಿಕ ಗುರುತುಗಳ ನೆಲೆಗಳಿಂದ ಸಾಧ್ಯವಾಗುವ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದಂತಾಯಿತು. ಜತೆಗೆ ಪ್ರಭುತ್ವದ ಅತಿರೇಕಗಳನ್ನು ಪ್ರತಿಭಟಿಸಲು ಇಂದು ಲಿಬರಲ್ ಡೆಮಾಕ್ರಸಿ ಕೊಡಮಾಡುವ ಪ್ರಜೆತನದ ಹಕ್ಕು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯ ಗುರುತುಗಳ ನೆಲೆಯಲ್ಲಿ ರೂಪುಗೊಳ್ಳುವ ರಾಜಕೀಯ ಪ್ರಕ್ರಿಯೆಗಳಿಗೆ ಮಹತ್ವಕೊಡಬೇಕೆಂದು ಸಮುದಾಯವಾದಿಗಳು ವಾದಿಸುತ್ತಾರೆ.

ನಮ್ಮ ಸಂಸ್ಕೃತಿಯ ರಾಜಕೀಯ ಪ್ರಕ್ರಿಯೆಗಳಿಗೆ ಮಹತ್ವ ಕೊಡಬೇಕು ಎನುವ ವಾದದ ಹಿಂದೆ ಹಲವಾರು ಗ್ರಹಿಕೆಗಳಿವೆ. ದೇಶಿ ರಾಜಕೀಯ ಪ್ರಕ್ರಿಯೆಗಳು ಯಾವುದೇ ಸಂಘರ್ಷವಿಲ್ಲದ ಮತ್ತು ಸಮಾಜದ ಎಲ್ಲಾ ಜಾತಿ/ಧರ್ಮಗಳ ಆಸಕ್ತಿಗಳನ್ನು ಸಮಾನತೆಯಿಂದ ನೋಡುವ ಆದರ್ಶ ಹೊಂದಿತ್ತು ಎನ್ನುವ ಗ್ರಹಿಕೆಗಳು ಅವುಗಳಲ್ಲಿ ಮುಖ್ಯವಾದುವು. ಆದರೆ ಈ ಗ್ರಹಿಕೆಗಳು ಎಷ್ಟು ನಿಜ ಎನ್ನುವುದರ ವಿಮರ್ಶೆ ಇಂದು ಬಹಳ ಅಪರೂಪವಾಗಿದೆ. ಒಂದು ವೇಳೆ ಅಂತಹ ವಿಮರ್ಶೆಗೆ ಹೊರಟರೆ ಅದನ್ನು ಆಧುನೀಕರಣದ ಅತಿಯಾದ ಪ್ರೇಮ ಎಂದು ಆರೋಪಿಸಿ ಬಾಯಿ ಮುಚ್ಚಿಸುವ ಕೆಲಸವೇ ಹೆಚ್ಚಾಗುತ್ತಿದೆ. ಆದುದರಿಂದ ಇಲ್ಲಿ ಅಂತಹ ವಾಗ್ವಾದಗಳಿಗೆ ಇಳಿಯುವ ಪ್ರಶ್ನೆಯಿಲ್ಲ. ನೇರವಾಗಿ ಪಾಪಿನಾಯಕ ಹಳ್ಳಿಯ ದೇಶಿ ರಾಜಕೀಯ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮೇಲಿನ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಇದಕ್ಕಾಗಿ ಹಳ್ಳಿಯ ರಾಜಕೀಯ ಚರಿತ್ರೆಯ ಕಿರು ಪರಿಚಯ ಅಗತ್ಯ. ಸ್ಥಳೀಯ ರಾಜಕೀಯ ಚರಿತ್ರೆಯನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಒಂದು, ವಸಾಹತು ಸಂದರ್ಭದಲ್ಲಿನ ಗ್ರಾಮ ಪಂಚಾಯತ್ ವ್ಯವಸ್ಥೆ ಅಥವಾ ಸ್ಥಳೀಯ ಸ್ವ – ಸರಕಾರ ಪದ್ಧತಿ, ಎರಡು, ಸ್ವಾತಂತ್ರ್ಯ ನಂತರದ ಗ್ರಾಮ ಪಂಚಾಯತ್ ವ್ಯವಸ್ಥೆ, ಸ್ವಾತಂತ್ರ್ಯ ನಂತರ ೧೯೮೭ರವರೆಗೆ ಸೀಮಿತ ನೆಲೆಯ ಪಂಚಾಯತ್ ವ್ಯವಸ್ಥೆ ಇದ್ದರೆ ೧೯೮೭ರ ನಂತರ ಹೆಚ್ಚು ಗಟ್ಟಿಯಾದ ವ್ಯವಸ್ಥೆ ಬಂದಿದೆ.

ವಸಾಹತು ಸಂದರ್ಭದ ದೇಶಿ ರಾಜಕೀಯ

ಭಾರತದ ಬ್ರಿಟಿಷರು ಎರಡು ಕಾರಣಗಳಿಂದ ಸ್ಥಳೀಯ ಸ್ವ – ಸರಕಾರ ಪದ್ಧತಿಯನ್ನು ಜಾರಿಗೊಳಿಸಲು ಬಯಸಿದ್ದರು. ಒಂದು ಆಡಳಿತಾತ್ಮಕ ಉದ್ದೇಶ, ಎರಡು ಕಂದಾಯ ಸಂಗ್ರಹ. ೧೮೫೭ರವರೆಗೂ ಅಧಿಕಾರಶಾಹಿ ಭಾರತವನ್ನು ಮೆನೇಜ್ ಮಾಡಲು ಸಾಕೆಂಬ ನಂಬಿಕೆ ಬ್ರಿಟಿಷರಿಗೆ. ಸಿಪಾಯಿ ದಂಗೆಯ ನಂತರ ಅವರ ಈ ನಂಬಿಕೆ ಬುಡಮೇಲಾಯಿತು. ಇಷ್ಟೊಂದು ದೊಡ್ಡ ಪ್ರದೇಶವನ್ನು ಕೇವಲ ದಬ್ಬಾಳಿಕೆಯಿಂದ ಹಿಡಿತದಲ್ಲಿಡುವುದು ಕಷ್ಟ ಎನ್ನುವ ಸತ್ಯ ಕ್ರಮೇಣ ಬ್ರಿಟಿಷರಿಗೆ ಅರಿವಾಗುತ್ತಾ ಬಂತು. ತಮ್ಮ ಹಿಡಿತ ಬಲಗೊಳ್ಳಬೇಕಾದರೆ ಸ್ಥಳೀಯ ಮೇಲುವರ್ಗದ ಸಹಕಾರ ಅಗತ್ಯ ಎನ್ನುವುದು ಸ್ಪಷ್ಟವಾಗುತ್ತಾ ಬಂತು. ಇದಕ್ಕಾಗಿ ಜಮೀನ್ದಾರರು, ಶ್ರೀಮಂತ ವ್ಯಾಪಾರಿಗಳು ಮತ್ತು ಇತರ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಾಯಕರನ್ನು ಸೇರಿಸಿ ಪ್ರಾಂತೀಯ ಸಲಹಾ ಸಮಿತಿಗಳನ್ನು ವಸಾಹತು ಸರಕಾರ ರೂಪಿಸಿತು. ಪ್ರಾದೇಶಿಕ ಬೆಳವಣಿಗೆಗಳ ಕುರಿತು ಬ್ರಿಟಿಷ್ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವುದು ಆ ಸಮಿತಿಗಳ ಮುಖ್ಯ ಕೆಲಸ. ಹೆಸರೇ ಸೂಚಿಸುವಂತೆ ಸಮಿತಿಯ ಕೆಲಸ ಕೇವಲ ಸಲಹೆ ನೀಡುವುದು ಮಾತ್ರ. ನಿರ್ಧಾರ ತಳೆಯುವ ಕೆಲಸ ಐ.ಸಿ.ಎಸ್. ಅಧಿಕಾರಿಗಳದ್ದು. ಇದು ಭಾರತದಲ್ಲಿ ಬ್ರಿಟಿಷರು ಆರಂಭಿಸಿದ ಸ್ಥಳೀಯ ಸ್ವ – ಸರಕಾರದ ಮೂಲರೂಪವೆಂದರೆ ನಂಬಲು ಕಷ್ಟವಾಗಬಹುದು.[1]

೧೯೫೭ರ ದಂಗೆ ಕೇವಲ ಬ್ರಿಟಿಷ್ ಆಳ್ವಿಕೆಯ ನೈತಿಕ ಮತ್ತು ರಾಜಕೀಯ ಸ್ಥೈರ್ಯ ಕುಂದಿಸಿದ್ದು ಮಾತ್ರವಲ್ಲ ಅವರ ಆರ್ಥಿಕ ಸ್ಥಿತಿಗೂ ಬಲವಾದ ಹೊಡೆತ ನೀಡಿದೆ. ವಸಾಹತು ಸರಕಾರದ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಹಾಗೆಂದು ಏಕ್‌ದಂ ತೆರಿಗೆ ವಿಧಿಸಿ, ತಮ್ಮ ಹಣಕಾಸು ಸ್ಥಿತಿಯನ್ನು ಸುಧಾರಿಸುವ ಎಂದರೆ ಸಿಪಾಯಿ ದಂಗೆ ಇನ್ನೂ ಹಸಿಯಾಗಿಯೇ ಇತ್ತು. ಇನ್ನು ಕಂಪೆನಿ ಆಡಳಿತದ ಸಂದರ್ಭದಲ್ಲಿ ಜಾರಿಗೆ ತಂದ ಆರ್ಥಿಕ ನೀತಿಗಳನ್ನು ಮುಂದುವರಿಸುವಂತಿರಲಿಲ್ಲ. ಯಾಕೆಂದರೆ ಆ ನೀತಿಗಳು ಭಾರತದ ಹಲವಾರು ಆರ್ಥಿಕ ಕ್ಷೇತ್ರಗಳನ್ನು ಆವಾಗಲೇ ದಿವಾಳಿ ಎಬ್ಬಿಸಿದ್ದವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ವಸಾಹತು ಸರಕಾರ ಪ್ರಜಾ ಪ್ರಭುತ್ವದ ಮೊರೆ ಹೋಯಿತು. ಅಂದರೆ ಒಂದಲ್ಲ ಒಂದು ರೂಪದಲ್ಲಿ ಸ್ಥಳೀಯ ಸ್ವ – ಸರಕಾರ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತು. ಇದು ಬ್ರಿಟಿಷರ ರಾಜಕೀಯ ಚತುರತೆಗೆ ಒಂದು ಒಳ್ಳೆಯ ಉದಾಹರಣೆ. ಒಂದು ಗುಂಡಿನಿಂದ ಎರಡು ಹಕ್ಕಿಗಳನ್ನು ಉರುಳಿಸುವ ಪ್ರಯತ್ನ. ರಸ್ತೆ, ಚರಂಡಿ, ಶಾಲೆ ಇತ್ಯಾದಿ ಸಣ್ಣ ಪುಟ್ಟ ಕಾಮಗಾರಿಗಳನ್ನು ಮಾಡಿಸುವ ಜವಾಬ್ದಾರಿ ಈ ಸ್ಥಳೀಯ ಸಂಸ್ಥೆಗಳದ್ದು. ಜತೆಗೆ ಭೂ ಕಂದಾಯ ಮತ್ತು ಇತರ ಕರಗಳನ್ನು ಸ್ಥಳೀಯರಿಂದ ವಸೂಲು ಮಾಡುವ ಜವಾಬ್ದಾರಿ ಕೂಡ ಈ ಸಂಸ್ಥೆಗಳದ್ದೇ. ಅಂದರೆ ಒಂದು ಕಡೆ ಭೂ ಕಂದಾಯ ಮತ್ತು ಇತರ ಕರಗಳನ್ನು ಸಂಗ್ರಹಿಸುವ ಜತೆಗೆ ಸಣ್ಣ ಪುಟ್ಟ ಕಾಮಗಾರಿಗಳನ್ನು ಮಾಡಿಸಲು ಸಂಬಳವಿಲ್ಲದೆ ಜನ ದೊರೆತಂತಾಯಿತು. ಇನ್ನೊಂದೆಡೆ ಸ್ಥಳೀಯರ ಮೇಲೆ ವಸಾಹತು ಸರಕಾರದ ಪರವಾಗಿ ಪರವಾಗಿ ತೆರಿಗೆ ವಿಧಿಸುವ ಪಾಪದ ಕೆಲಸ ಸ್ಥಳೀಯ ಸರಕಾರಗಳಿಗೆ ವರ್ಗಾವಣೆಯಾಯಿತು.[2]

ಇಷ್ಟಾಗ್ಯೂ ೧೯೦೯ರವರೆಗೂ ಗ್ರಾಮ ಪಂಚಾಯತ್ ವ್ಯವಸ್ಥೆಯ ಪುನರುಜ್ಜೀವನಕ್ಕೆ ಸರಿಯಾದ ಕಾನೂನಿನ ಚೌಕಟ್ಟು ಇರಲಿಲ್ಲ. ೧೯೦೯ರಲ್ಲಿ ವಿಕೇಂದ್ರೀಕರಣದ ಪರಿಶೀಲನೆಗಾಗಿ ರಾಯಲ್ ಕಮಿಶನ್ ಆನ್ ಡಿಸೆಂಟ್ರಲೈಸೇಶನ್ ಎನ್ನುವ ಒಂದು ಕಮಿಷನ್ ನೇಮಕವಾಯಿತು.[3] ವಿಕೇಂದ್ರೀಕರಣ ಕುರಿತು ಆ ಕಮಿಷನ್ ಈ ಕೆಳಗಿನ ಸಲಹೆಗಳನ್ನು ನೀಡಿತು. ೧. ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ೨. ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸಲು ತಾಲ್ಲೂಕು ಬೋರ್ಡ್‌ಗಳನ್ನು ಸಂಘಟಿಸುವುದು. ಕಮಿಷನ್ ಸಲಹೆಯ ಪ್ರಕಾರ ೧೯೧೫ರಲ್ಲಿ ವಿಕೇಂದ್ರೀಕರಣಕ್ಕೆ ಪೂರಕವಾಗುವ ಕಾನೂನು ಜಾರಿ ಬಂತು. ಅದೇ ಸಂದರ್ಭದಲ್ಲಿ ಮೊದಲನೇ ಮಹಾಯುದ್ಧ ಆರಂಭವಾಯಿತು. ಅಂತರಾಷ್ಟ್ರೀಯ ರಾಜಕೀಯ ಸ್ಥಿತಿ ಬದಲಾಯಿತು. ಯುದ್ಧದಲ್ಲಿ ಬ್ರಿಟಿಷರ ಜತೆ ಸಹಕರಿಸಿದರೆ ತಮಗೆ ಆಂತರಿಕ ಸ್ವಾತಂತ್ರ್ಯ ಸಿಗಬಹುದೆಂದು ದೂರದ ಆಶೆ ಭಾರತಕ್ಕೆ. ಯುದ್ಧದಲ್ಲಿ ಭಾರತ ವಸಾಹತು ಸರಕಾರದೊಂದಿಗೆ ಸೇರಿಕೊಂಡಿತು. ಆದರೆ ಯುದ್ಧ ಮುಗಿದರೂ ಸ್ವಾತಂತ್ರ್ಯ ಸಿಗಲಿಲ್ಲ.

ಭಾರತೀಯರನ್ನು ಸಂಪೂರ್ಣ ನಿರಾಶೆಗೊಳಿಸುವುದು ಬೇಡವೆಂದಿರಬೇಕು, ೧೯೧೯ರಲ್ಲಿ ಮೊಂಟೆಗೋ – ಶೆಲ್‌ಮ್‌ಫೋರ್ಡ್ ಸುಧಾರಣೆ ಜಾರಿಗೆ ಬಂತು. ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಬದಲಾವಣೆಗಳನ್ನು ಆ ಸುಧಾರಣೆ ಪ್ರಸ್ತಾಪಿಸಿತು. ೧. ಪ್ರತಿ ಕಂದಾಯ ಹಳ್ಳಿಯಲ್ಲೂ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸಬೇಕು. ೨. ಸ್ಥಳೀಯ ಸ್ವ – ಸರಕಾರ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾಂಶವಿರಬೇಕು ೩. ಮತದಾನದ ಹಕ್ಕನ್ನು ಹೆಚ್ಚು ಹೆಚ್ಚು ಸಾಮಾಜಿಕ ವರ್ಗಗಳಿಗೆ ವಿಸ್ತರಿಸಬೇಕು ಮತ್ತು ೪. ಸ್ಥಳೀಯ ಸಂಸ್ಥೆಯ ಅಧ್ಯಕ್ಷರುಗಳು ಚುನಾಯಿತರಾಗಬೇಕು; ನೇಮಕಗೊಳ್ಳಬಾರದು.[4] ಈ ಸುಧಾರಣೆಯ ಫಲಶ್ರುತಿಯಾಗಿ ೧೯೨೦ರಲ್ಲಿ ಮಡ್ರಾಸ್ ವಿಲೇಜ್ ಪಂಚಾಯತ್ ಆಕ್ಟ್ ಜಾರಿಗೆ ಬಂತು. ಪ್ರತಿ ಕಂದಾಯ ಹಳ್ಳಿ ಕೂಡ ತನ್ನದೇ ಪಂಚಾಯತ್ ಹೊಂದುವ ಅವಕಾಶ ಬಂತು. ಆದರೆ ಪಂಚಾಯತಿಯ ಅಧಿಕಾರ ಮತ್ತು ಕಾರ್ಯ ವ್ಯಾಪ್ತಿ ತುಂಬಾ ಸೀಮಿತವಾಗಿತ್ತು. ಕಂದಾಯ ಸಂಗ್ರಹ ಮತ್ತು ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಪಂಚಾಯತ್‌ಗೆ ಯಾವುದೇ ಹಕ್ಕು ಇರಲಿಲ್ಲ. ಕಂದಾಯ ಸಂಗ್ರಹಕ್ಕಾಗಿ ವಸಾಹತು ಸರಕಾರ ಆಧುನಿಕ ಪರಿಕರ ಹುಡುಕಲಿಲ್ಲ. ನಮ್ಮದೇ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪಗೊಂಡ ಅಧಿಕಾರಶಾಹಿಗಳಿಗೆ – ಗೌಡರು ಮತ್ತು ಶಾನುಭೋಗರಿಗೆ – ಕಂದಾಯ ವಸೂಲಿಯ ಜವಾಬ್ದಾರಿ ವಹಿಸಿತು.[5] ಮತದಾನದ ಹಕ್ಕನ್ನು ಎಲ್ಲಾ ಸಾಮಾಜಿಕ ವರ್ಗಗಳಿಗೆ ವಿಸ್ತರಿಸಬೇಕೆಂಬ ಆದರ್ಶವಿದ್ದರೂ ಅದು ಕಾರ್ಯ ರೂಪದಲ್ಲಿ ಕೇವಲ ಭೂ ಕಂದಾಯ ಕಟ್ಟುವವರಿಗೆ ಮಾತ್ರ ಸೀಮಿತಾಗಿತ್ತು. ಒಂದು ವಿಧದಲ್ಲಿ ಆ ಪಂಚಾಯತ್ ವ್ಯವಸ್ಥೆಯ ಒಟ್ಟು ಆಶಯ ಮೇಲೆ ವಿವರಿಸಿದಂತೆ ಗ್ರಾಮೀಣ ಮಟ್ಟದ ಕಾನೂನು, ಶಿಸ್ತಿನ ಜವಾಬ್ದಾರಿ ಮತ್ತು ಕಾಮಗಾರಿಗಳನ್ನು ಸ್ಥಳೀಯರಿಗೆ ವಹಿಸಿಕೊಡುವಲ್ಲಿಗೆ ಸೀಮಿತವಾಗಿತ್ತು. ಸ್ಥಳೀಯ ಕಾಮಗಾರಿಗಳನ್ನು – ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಚರಂಡಿ ರಸ್ತೆ, ಇತ್ಯಾದಿ – ಕಾಮಗಾರಿಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಬೋರ್ಡ್‌ಗಳು ಹೊತ್ತಿದ್ದವು. ಬ್ರಿಟಿಷರ ಆಡಳಿತ ಕಾಲದಲ್ಲಿ ಬಳ್ಳಾರಿ ಜಿಲ್ಲೆ ಮದ್ರಾಸು ಪ್ರಾಂತ್ಯದ ಭಾಗವಾಗಿತ್ತು. ಆ ಚಾರಿತ್ರಿಕ ಸಂದರ್ಭದಲ್ಲಿನ ಪಿ.ಕೆ.ಹಳ್ಳಿಯ ರಾಜಕೀಯ ಪ್ರಕ್ರಿಯೆಗಳನ್ನು ಪರಿಶೀಲಿಸುವ

ಗೌಡ, ಶ್ಯಾನುಭೋಗರ ಯಜಮಾನಿಕೆ

ಊರಿನ ಗೌಡಿಕೆ ವಸಾಹತು ಸಂದರ್ಭದಲ್ಲಿ ಮತ್ತು ನಂತರದ ಕೆಲವು ವರ್ಷ ಮುಸ್ಲಿಂ ಕುಟುಂಬವೊಂದರಲ್ಲಿತ್ತು. ಬಹುತೇಕ ಮುಸ್ಲಿಂಮೇತರ ಜನರಿರುವ ಒಂದು ಹಳ್ಳಿಯ ಗೌಡಿಕೆ ಮುಸ್ಲಿಂ ಕುಟುಂಬಕ್ಕೆ ಹೇಗೆ ಸಾಧ್ಯವಾಯಿತು? ಎನ್ನುವ ಪ್ರಶ್ನೆ ಬಂತು. ಈ ಪ್ರಶ್ನೆ ಯಾಕೆ ಬರಬೇಕು ಎನ್ನುವುದು ಸಂಶೋಧನಾ ವಿಧಾನ ಮತ್ತು ಅದರ ಹಿಂದಿರುವ ತಾತ್ವಿಕ ಚಿಂತನೆಗೆ ಸಂಬಂಧಿಸಿದ ವಿಚಾರ. ಇದು ಬಹುದೊಡ್ಡ ಚರ್ಚೆಯ ವಿಚಾರವಾದರೂ ಕೆಲವೊಂದು ಅಂಶಗಳನ್ನು ಸ್ಪಷ್ಟ ಪಡಿಸಿ ಮುಂದುವರಿಯುವುದು ಅಗತ್ಯ. ಸಂಶೋಧನೆ ಮತ್ತು ಅದರ ಹಿಂದಿನ ತಾತ್ವಿಕ ನಿಲುವು ಕುರಿತಂತೆ ಮುಖ್ಯ ಎರಡು ಆಲೋಚನಾ ಕ್ರಮಗಳಿವೆ.[6] ಒಂದರ ಪ್ರಕಾರ ಸಂಶೋದನಾ ವಿಧಾನ ಯವುದೇ ತಾತ್ವಿಕ ವಿಚಾರಗಳಿಂದ ಪ್ರಭಾವಿತವಾಗಿರುವುದಿಲ್ಲ. ಅದೊಂದು ಮೌಲ್ಯ ನಿರಪೇಕ್ಷ (ವೇಲ್ಯೂ ನ್ಯೂಟ್ರಲ್) ಮತ್ತು ಸಿದ್ಧಾಂತ ನಿರಪೇಕ್ಷ (ಐಡಿಯಾಲಾಜಿ ನ್ಯೂಟ್ರಲ್) ಪ್ರಕ್ರಿಯೆ. ಯಾವುದೇ ತಾತ್ವಿಕ ವಿಚಾರಗಳ ಪ್ರಭಾವ ಇದೆ ಎಂದು ತಿಳಿಯುವುದರಿಂದ ಸರಿಯಾದ ಸಂಶೋಧನೆ ಸಾಧ್ಯವಿಲ್ಲ; ತಾತ್ವಿಕ ಬದ್ಧತೆ ಸತ್ಯದ ಶೋಧನೆಗೆ ತಡೆಗೋಡೆಯಾಗಬಹುದು. ವಿಜ್ಞಾನದ ವಿಧಾನವನ್ನು ಯಥಾ ರೀತಿಯಲ್ಲಿ ಸಾಮಾಜಿಕ ಆಗುಹೋಗುಗಳನ್ನು ಅಧ್ಯಯನ ಮಾಡಲು ಉಪಯೋಗಿಸಿದಾಗ ಈ ಕ್ರಮದ ಆಲೋಚನೆ ಸಾಧ್ಯವಾಗುವುದು. ಅಲ್ಲಿನ ಅಧ್ಯಯನ ಮಾಡುವ ಮತ್ತು ಅಧ್ಯಯನಕ್ಕೆ ಒಳಗಾಗುವ ಎಂಬ ವ್ಯತ್ಯಾಸ, ಸಿದ್ಧಾಂತ ನಿರಪೇಕ್ಷತೆ, ಇತ್ಯಾದಿಗಳು ಆ ವಿಧಾನದೊಂದಿಗೆ ಬರುತ್ತವೆ. ಎರಡನೇ ವಾದದ ಪ್ರಕಾರ ಯಾವುದೇ ಒಂದು ಸಂಶೋಧನಾ ವಿಧಾನ ಅದರದ್ದೆ ಆದ ತಾತ್ವಿಕ ಹಿನ್ನೆಲೆಯನ್ನು ಹೊಂದಿದೆ. ಒಂದು ನಿರ್ದಿಷ್ಟ ಸಂಶೊಧನಾ ವಿಧಾನವನ್ನು ಆಯ್ಕೆ ಮಾಡಿದ ಕೂಡಲೇ ಆ ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ತಾತ್ವಿಕ ಅಂಶಗಳಿಗೆ ನಾವು ಹತ್ತಿರವಾದಂತೆ. ಈ ವಾದದ ಪ್ರಕಾರ ಸಂಶೋಧನೆ ಎನ್ನುವುದು ಒಂದು ತಾತ್ವಿಕ ಪ್ರಕ್ರಿಯೆ. ಹೀಗಾಗಿ ಇಲ್ಲಿ ಅಧ್ಯಯನ ಮಾಡುವ ವಿಚಾರ ಮತ್ತು ಅಧ್ಯಯನ ಮಾಡುವವರ ಮಧ್ಯೆ ವಿಶೇಷ ಅಂತರವಿಲ್ಲ. ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಾಮಾಜಿಕ ವಾತಾವರಣದಲ್ಲಿರುವುದರಿಂದ ಸಮಾಜದಲ್ಲಿನ ಒಟ್ಟು ಬೆಳವಣಿಗೆಗಳು ಅಧ್ಯಯನ ಮಾಡುವವನ ತಾತ್ವಿಕ ನಿಲುವಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಎರಡನೆಯ ವಾದದ ಹಿನ್ನೆಲೆಯಿಂದ ನೋಡಿದರೆ ನನ್ನ ಪ್ರಶ್ನೆಗೆ ಉತ್ತರ ಸಿಗಬಹುದು.

ಪ್ರಸಕ್ತ ಸನ್ನಿವೇಶದಲ್ಲಿ ತುಂಬಾ ಚರ್ಚೆಯಲ್ಲಿರುವ ಅಂಶವೆಂದರೆ ಹಿಂದೂ ರಾಷ್ಟ್ರೀಯತೆಯ ಪ್ರಶ್ನೆ. ಕೆಲವು ವರ್ಷಗಳ ಹಿಂದೆ ಹಿಂದೂ ಪರಿಕಲ್ಪನೆಯೇ ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗಿತ್ತು. ಈಗ ಹಿಂದೂ ಪರಿಕಲ್ಪನೆಯನ್ನು ಬದಿಗಿಡಲು ಸಾಧ್ಯವಿಲ್ಲ. ಮುಸ್ಲಿಂಮೇತರ ಎನ್ನುವುದನ್ನು ನಾನು ಪ್ರಯತ್ನ ಪೂರ್ವಕವಾಗಿಯೇ ಬಳಸಿದ್ದೇನೆ. ನನಗೆ ಮೊದಲಿಗೆ ಬಂದ ಆಲೋಚನೆ ಏನೆಂದರೆ ಹಿಂದುಗಳೇ ಹೆಚ್ಚಿರುವ ಹಳ್ಳಿಯಲ್ಲಿ ಮುಸ್ಲಿಂ ಗೌಡಿಕೆ ಹೇಗೆ? ನಂತರ ಸುಧಾರಿಸಿಕೊಂಡು ನನ್ನ ಪದ ಬಳಕೆಯನ್ನು ಪ್ರಯತ್ನ ಪೂರ್ವಕವಾಗಿಯೇ ಬದಲಾಯಿಸಿಕೊಂಡೆ. ಹಿಂದೂ ಪದ ಬಳಕೆಯಲ್ಲಿ ವರ್ತಮಾನದಲ್ಲಿ ನಡೆಯುತ್ತಿರುವ ಹಿಂದುತ್ವವಾದಿಗಳ ಪ್ರಭಾವ ಹೇಗೆ ಇದೆಯೋ ಹಾಗೆ ಅದನ್ನು ಪ್ರಯತ್ನ ಪೂರ್ವಕ ತಿದ್ದಿಕೊಳ್ಳುವಲ್ಲಿ ನನ್ನ ಓದು ಮತ್ತು ಬದುಕಿನ ಪ್ರಭಾವವೋ ಇದೆ. ಹಾಗಾಗಿ ನಾವು ಕೇಳುವ ಪ್ರಶ್ನೆಗಳು ಅದಕ್ಕೆ ಹುಡುಕುವ ಉತ್ತರಗಳು ಮತ್ತು ಉತ್ತರ ಹುಡುಕುವ ವಿಧಾನಗಳು ಎಲ್ಲವೂ ನಮ್ಮ ಬದುಕು ಮತ್ತು ಆ ಸಂದರ್ಭದಲ್ಲಿ ರೂಢಿಸಿಕೊಂಡ ತಾತ್ವಿಕ ಹಿನ್ನೆಲೆಯಿಂದ ಪ್ರಭಾವಿತ. ನನ್ನ ಈ ವಾದಕ್ಕೆ ಪೂರಕವಾಗಿರುವ ಮತ್ತೊಂದು ವಿಚಾರವನ್ನು ಓದುಗರ ಮುಂದಿಡಬೇಕಾಗಿದೆ. ಊರಲ್ಲಿನ ಮಸ್ಲಿಂ ಗೌಡಿಕೆ ಅಧ್ಯಯನಕ್ಕೆ ಹೋದ ನನಗೆ ವಿಚಿತ್ರವಾಗಿತ್ತೇ ಹೊರರು ಊರವರಿಗೆ ಅದೊಂದು ಅಸಹಜ ಬೆಳವಣಿಗೆ ಆಗಿರಲಿಲ್ಲ. ಕೆಲವರಲ್ಲಿ ಉದ್ದೇಶಪೂರ್ವಕವಾಗಿಯೇ ನಿಮ್ಮಲ್ಲಿ ಇಷ್ಟು ಹಿಂದುಗಳ ಮನೆಯಿದ್ದರೂ ಅದು ಹೇಗೆ ಊರ ಗೌಡಿಕೆ ಮುಸ್ಲಿಂ ಕುಟುಂಬಕ್ಕೆ ಹೋಯಿತು? ಎಂದು ಕೇಳಿದ್ದೇನೆ. ಹಾಗೆ ಕೇಳುವಾಗ ಹೌದು ಇದು ಯಾಕೆ ಹೀಗಾಯಿತು ಎಂದು ನಮಗೂ ಅರ್ಥವಾಗುವುದಿಲ್ಲ ಎನ್ನುವ ಉತ್ತರವನ್ನು ನಿರೀಕ್ಷಿಸಿದ್ದೆ. ಆದರೆ ಅವರ ಉತ್ತರಗಳು ನನ್ನ ಊಹೆಗಳಿಗೆ ಹತ್ತಿರವಿರಲಿಲ್ಲ. ‘ನೋಡ್ರಿ ಅದೆಲ್ಲಾ ತುಂಬಾ ಹಿಂದೆ ತೀರ್ಮಾನವಾದವು. ಅದು ಯಾಕಾಯಿತೆಂದು ಈಗ ನಾವು ಹೇಗೆ ಹೇಳುವುದು’ ಎಂದು ಕೆಲವರೆಂದರೆ ಮತ್ತೆ ಕೆಲವರು, ‘ಅದು ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ. ಗೌಡಿಕೆ ಪ್ರಶ್ನೆ. ಅಷ್ಟು ಭೂಮಿ ಕೊಟ್ಟು ಅಧಿಕಾರ ಕೊಟ್ಟರೆ ಯಾರು ಗೌಡಿಕೆ ಬೇಡ ಅನ್ನುತ್ತಾರೆ’. ಅದರಲ್ಲೇನು ವಿಶೇಷ ಎಂದು ಎಂತಹ ತಲೆ ಕೆಟ್ಟ ಪ್ರಶ್ನೆ ಕೇಳುತ್ತೀಯ ನೀನು ಎನ್ನುವ ರೀತಿಯಲ್ಲಿ ನನ್ನ ಮುಖ ನೋಡುತ್ತಿದ್ದರು. ಹೀಗೆ ಎಷ್ಟೋ ಬಾರಿ ನಮ್ಮ ಥಿಯರಿಟಿಕಲ್ ಅರಿವು ವಾಸ್ತವವನ್ನು ಪ್ರಭಾವಿಸಲು ಪ್ರಯತ್ನಿಸುತ್ತದೆ. ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ ಊರ ಗೌಡರ ಕತೆ ಏನಾಯಿತೆಂದು ನೋಡುವ.

ಮುಸ್ಲಿಂಮೇತರರೇ ಹೆಚ್ಚಾಗಿರುವ ಒಂದು ಹಳ್ಳಿಯಲ್ಲಿ ಮುಸ್ಲಂ ಗೌಡಿಕೆ ಹೇಗೆ ಸಾಧ್ಯ ಎನ್ನುವುದಕ್ಕೆ ಉತ್ತರ ಹುಡುಕುವ ಕೆಲವು ಕಸರತ್ತುಗಳನ್ನು ಮಾಡಿದೆ. ಭೂತಕಾಲಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಚರಿತ್ರೆಯಷ್ಟು. ಸಮರ್ಪಕವಾದ ಕ್ಷೇತ್ರ ಯಾವುದು? ಒಂದು ವೇಳೆ ಚರಿತ್ರೆಯಲ್ಲಿ ಬರುವ ಪಾತ್ರದಾರಿಗಳು ಇಂದು ಬಂದು ಸಾಕ್ಷಿ ಹೇಳುವ ಸ್ಥಿತಿ ಇರುತ್ತಿದ್ದರೆ ನಾನು ಇಷ್ಟು ಸುಲಭದಲ್ಲಿ ಚರಿತ್ರೆಯನ್ನು ಕೆದಕಲು ಹೋಗುತ್ತಿರಲಿಲ್ಲ. ಅವರ್ಯಾರು ಬರುವುದಿಲ್ಲವೆಂದು ಖಾತ್ರಿಯಾದ ನಂತರವೇ ವಿಜಯನಗರ ಚರಿತ್ರೆಯ ಸಾಮಾನ್ಯ ಜ್ಙಾನದೊಂದಿಗೆ ಈ ಕೆಳಗಿನ ಲೆಕ್ಕಾಚಾರ ಆರಂಭಿಸಿದೆ. ವಿಜಯನಗರದ ಪತನ ಆದಿಲ್‌ಶಾಹಿ ರಾಜರುಗಳಿಂದ ಆಗಿದೆ ಎಂದು ಚರಿತ್ರಕಾರರು ಪ್ರಚಾರ ಪಡಿಸಿದ್ದಾರೆ. ಪತನದ ನಂತರ ಮುಸ್ಲಿಂ ಸೇನಾಧಿಕಾರಿಗಳು ಅಥವಾ ಸಣ್ಣ ಪುಟ್ಟ ಸೈನಿಕರು ಈ ಕಡೆ ಬಂದು ನೆಲೆಸಿರಬಹುದು ಎನ್ನುವುದು ಒಂದು ಊಹೆ.[7] ಎರಡನೆಯದು, ಬಳ್ಳಾರಿಯು ೧೮೦೦ರಲ್ಲಿ ಬ್ರಿಟಿಷರ ಮದ್ರಾಸು ಪ್ರಾಂತ್ಯಕ್ಕೆ ಸೇರಿದ್ದು. ಅಲ್ಲಿಯವರೆಗೂ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿತ್ತು. ಆ ಸಂದರ್ಭದಲ್ಲಿ ರಾಯ ಸಂಬಂಧದ ಪ್ರಭಾವದಿಂದ ಮುಸ್ಲಿಂ ಕುಟುಂಬಗಳು ಇಲ್ಲಿ ಬಂದಿರಬಹುದು. ಹೀಗೆ ಚರಿತ್ರೆಯಲ್ಲಿ ನಡೆದಿರಬಹುದಾದ ಘಟನೆಗಳ ಕುರಿತು ಹಲವಾರು ಊಹೆಗಳು ನಡೆದಿದ್ದವು. ಪುಟ್ಟದಾದ ಈ ಘಟನೆ ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದು ಕಷ್ಟ ಸಾಧ್ಯ. ಇದಕ್ಕೆ ಸರಿಯಾದ ಪರಿಹಾರವೆಂದರೆ ಗೌಡಿಕೆ ನಡೆಸುತ್ತಿದ್ದ ಆ ಕುಟುಂಬದವರನ್ನು ವಿಚಾರಿಸುವುದೇ ಒಳ್ಳೆಯದೆಂದು ಅವರ ಮನೆ ಹುಡುಕಿದೆ. ಮನೆಯೇನೋ ಸಿಕ್ಕಿತು. ಆದರೆ ಹಳೇ ಮನೆ ಬಿದ್ದು ಈಗ ಅದರ ಜಾಗದಲ್ಲಿ ಹೊಸ ಮನೆ ಎದ್ದಿದೆ. ಜತೆಗೆ ಗೌಡಿಕೆ ನಡೆಸಿದ ಕೊನೆಯ ವ್ಯಕ್ತಿ ಕೂಡಾ ಈಗ್ಗೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಮಕ್ಕಳನ್ನು ಕೇಳಿ ತಿಳಿದುಕೊಳ್ಳುವ ಎಂದು ಹಿರಿ ಮಗನನ್ನು ಸಂಪರ್ಕಿಸಿದೆ. ಅವರು ಊರಲ್ಲೇ ಇದ್ದರು. ತಮ್ಮ ಹಿರಿಯರು ಎಲ್ಲಿಂದ ಬಂದರು? ಗೌಡಿಕೆ ಹೇಗೆ ಸಾಧ್ಯವಾಯಿತು? ಎನ್ನುವ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸ್ವಲ್ಪ ಕಷ್ಟವೇ ಆಯಿತು. ನನ್ನ ಚಿಕ್ಕ ತಮ್ಮನಿಗೆ ಆ ವಿಚಾರ ತಿಳಿದಿರಬಹುದು ಆತನಲ್ಲಿ ವಿಚಾರಿಸಿ ಎಂದು ಸಲಹೆ ಇತ್ತರು. ಚಿಕ್ಕ ತಮ್ಮ ಕರೀಂಖಾನ್ ಈ ಅಧ್ಯಯನ ನಡೆಸುವ ಸಂದರ್ಭದಲ್ಲಿ ತಾಲ್ಲೂಕು ಪಂಚಯತ್ ಅಧ್ಯಕ್ಷರಾಗಿದ್ದರು. ಅವರನ್ನು ಅವರ ಹೊಸಪೇಟೆ ಮನೆಯಲ್ಲಿ ಬೇಟಿಯಾದೆ. ಅವರು ತಮ್ಮ ಹಿರಿಯರ ಬಗ್ಗೆ ಕೊಟ್ಟ ಮಾಹಿತಿ ಇಷ್ಟು. ಗೌಡರ ಕುಟುಂಬದ ಹಿರಿಯರು ಆಂಧ್ರದ ಪೆನಾಗೊಂಡ ಕಡೆಯಿಂದ ವಲಸೆ ಬಂದವರು. ಅವರಿಗೆ ಸ್ಥಳೀಯ ರಾಜರುಗಳಿಂದ (ಟಿಪ್ಪುಸುಲ್ತಾನ ಇರಬಹುದು) ೧೧೦ ಎಕರೆ ಭೂಮಿ ಗೌಡಿಕೆಗಾಗಿ ಇನಾಂ ಸಿಕ್ಕಿತು. ತಳಮಟ್ಟದ ಆಡಳಿತ ವ್ಯವಸ್ಥಯಲ್ಲಿ ಮೂರು ಮುಖ್ಯ ಹುದ್ದೆಗಳಿದ್ದವು. ಅವುಗಳಲ್ಲಿ ಒಂದು ಗೌಡಿಕೆ/ಪಟೇಲ ಎರಡು ಶ್ಯಾನುಭೋಗ ಮತ್ತು ಮೂರು ತಲವಾರ. ಶ್ಯಾನಭೋಗರಿಗೂ ೧೦೦ ಎಕ್ರೆ ಭೂಮಿ ಇನಾಂ ಸಿಕ್ಕಿದೆ.[8] ವಸಾಹತು ಸಂದರ್ಭದಲ್ಲಿ ಆ ಹುದ್ದೆಗಳು ರದ್ದಾಗಲಿಲ್ಲ. ಬದಲಿಗೆ ಇನಾಂ ಆಗಿ ದೊರೆತ ಭೂಮಿಯೊಂದಿಗೆ ವಸಾಹತು ಸರಕಾರ ಆ ತಳಮಟ್ಟದ ಅಧಿಕಾರಿಗಳಿಗೆ ಸಂಬಳ ನೀಡಲು ಆರಂಭಿಸಿತು. ಗೌಡರಿಗೆ ರೂ. ೭, ಶ್ಯಾನುಭೋಗರಿಗೆ ರೂ. ೭, ಮತ್ತು ತಳವಾರರಿಗೆ ರೂ. ೫ ಸಂಬಳ ನಿಗದಿಯಾಗಿತ್ತು. ಆ ಸಂಬಳ ಹೆಚ್ಚುತ್ತಾ ಹೆಚ್ಚುತ್ತಾ ೧೯೮೦ರಲ್ಲಿ ಗೌಡರಿಗೆ ರೂ. ೧೨೦, ಶ್ಯಾನಭೋಗರಿಗೆ ರೂ. ೧೨೦ ಮತ್ತು ತಳವಾರರಿಗೆ ರೂ. ೬೦ ಆಗಿತ್ತು. ಅದೇ ವರ್ಷ ಕರ್ನಾಟಕ ಸರಕಾರ ಹೊಸ ಕಾನೂನು ತಂದು ಗೌಡರ, ಶ್ಯಾನುಭೋಗರ ಮತ್ತು ತಳವಾರರ ಹುದ್ದೆಗಳನ್ನು ರದ್ದುಗೊಳಿಸಿ ಗ್ರಾಮ ಲೆಕ್ಕಿಗರ ಹುದ್ದೆ ಜಾರಿಗೊಳಿಸಿತು. ಸರಕಾರದ ಆ ನಿರ್ಣಯವನ್ನು ವಿರೋಧಿಸಿ ಬಾಬನ ಗೌಡರು, ಹಳ್ಳಿಯ ಕೊನೆಯ ಗೌಡರು, ನೆರೆಯ ಹಳ್ಳಿಯ ಗೌಡರುಗಳೊಂದಿಗೆ ಸೇರಿ (ಕಮಾಲಾಪುರದ ಅಚ್ಚಣ್ಣ ಗೌಡರು, ಕಲ್ಲಳ್ಳಿ ಬಸವನ ಗೌಡರು, ಗಳ್ಳರಕೇರಿ ತಿಮ್ಮನ ಗೌಡರು) ಸರಕಾರದ ಹೊಸ ಕಾನೂನು ಜಾರಿ ಬರದಂತೆ ಹೈಕೋರ್ಟ್‌ನಿಂದ ತಡೆ ತಂದರು. ತಡೆ ತಂದು ಸುಮಾರು ಐದು ವರ್ಷ ಗೌಡಿಕೆ ಮುಂದುವರಿಯಿತು. ಮುಂದೆ ಸರಕಾರದ ಕಾನೂನೇ ಊರ್ಜಿತಗೊಂಡಿತು. ಸರಕಾರ ಕೊಟ್ಟ ರೂ. ೫೦೦೦ ಪರಿಹಾರ ಪಡಕೊಂಡು ಗೌಡರ ಕುಟುಂಬ ಗೌಡಿಕೆಯಿಂದ ಹಿಂದೆ ಸರಿಯಬೇಕಾಯಿತು.

ಗೌಡರ ಮುಖ್ಯ ಕೆಲಸಗಳಲ್ಲಿ ಭೂ ಕಂದಾಯದ ರೈತರಿಂದ ವಸೂಲಿ ಮಾಡಿ ಸರಕಾರಕ್ಕೆ ಸಂದಾಯ ಮಾಡುವುದು ಮತ್ತು ಹಳ್ಳಿಯ ಕಾನೂನು ಮತ್ತು ಶಿಸ್ತು ಕಾಪಾಡುವುದು ಸೇರಿದ್ದವು ಒಂದೇ ಜಾತಿಗೆ ಸೇರಿದವರೊಳಗಿನ ಜಗಳ ಜಾತಿ ನಾಯಕರ ಪಂಚಾಯತಿಯಲ್ಲಿ ತೀರ್ಮಾನವಾಗುತ್ತಿದ್ದವು. ಬೇರೆ ಬೇರೆ ಜಾತಿಯವರೊಳಗಿನ ಮತ್ತು ಒಂದೇ ಜಾತಿಯೊಳಗಿನ ಅದರೆ ಜಾತಿ ಪಂಚಾಯತಿಯಲ್ಲಿ ತೀರ್ಮಾನವಾಗದ ಜಗಳಗಳು ಗೌಡರ ವ್ಯಾಪ್ತಿಗೆ ಬರುತ್ತಿದ್ದವು. ಇಲ್ಲಿ ಕೂಡ ಜಾತಿ ನಾಯಕರು ಮತ್ತು ಊರ ಪ್ರಮುಖರನ್ನು ಸೇರಿಸಿಕೊಂಡೆ ಜಗಳಗಳ ತೀರ್ಮಾನವಾಗುತ್ತಿತ್ತು. ಪಂಚಾಯತಿಯಲ್ಲಿ ತೀರ್ಮಾನವಾಗದ ಕೇಸ್‌ಗಳು ಪೋಲೀಸರಿಗೆ ಹೋಗುತ್ತಿದ್ದವು. ಪೋಲಿಸರತ್ತ ಹೋಗುವಾಗ ಗೌಡರ ಅಪ್ಪಣೆ ಅಗತ್ಯವಿಲ್ಲ. ಆದರೆ ಪೊಲೀಸರು ಊರಿಗೆ ಬರುವುದಾದರೆ ಗೌಡರ ಗಮನಕ್ಕೆ ಬಂದೇ ಬರಬೇಕು. ಇದರ ಜತೆಗೆ ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗೌಡರ ಮುಖಂಡತ್ವ ಅಗತ್ಯವಿತ್ತು. ಊರಿಗೆ ಭೇಟಿ ನೀಡುವ ಸರ್ಕಾರಿ ಅಧಿಕಾರಿಗಳು ಗೌಡರ ಮೂಲಕವೇ ಊರವರೊಂದಿಗೆ ವ್ಯವಹರಿಸಬೇಕಿತ್ತು. ಪಿ.ಕೆ.ಹಳ್ಳಿಯಲ್ಲಿ ಮೇಲಿನ ಎಲ್ಲಾ ಕೆಲಸಗಳು ಥಿಯರಿಯಲ್ಲಿದ್ದಂತೆ ಕಾರ್ಯ ರೂಪಕ್ಕೆ ಬರುತ್ತಿರಲಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ಒಂದು, ಗೌಡರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಊರಿನ ಇತರರಿಗಿಂತ ತುಂಬಾ ಮೇಲ್ಮಟ್ಟದಲ್ಲಿರಲಿಲ್ಲ. ಊರಿನ ಇತರ ಜಾತಿಯವರು ಮುಖ್ಯವಾಗಿ ಲಿಂಗಾಯತರು ಸಂಖ್ಯೆಯಲ್ಲಿ ಮತ್ತು ಆರ್ಥಿಕವಾಗಿಯೂ ಬಲಗೊಳ್ಳುತ್ತಿದ್ದರು. ಎರಡು, ಪ್ರಸ್ತಾವದಲ್ಲಿ ವಿವರಿಸಿದಂತೆ ವಸಾಹತು ಸರಕಾರ ಗ್ರಾಮ ಪಂಚಾಯತಿಯ ಪುನರುಜ್ಜೀವನಕ್ಕೆ ಪ್ರಯತ್ನಿಸಿದ್ದು.

 

[1]ಡೇವಿಡ್ ವಾಶ್‌ಬ್ರೂಕ್, “ದಿ ರೆಟೊರಿಕ್ ಆಫ್ ಡೆಮಾಕ್ರಸಿ ಆಂಡ್ ಡೆವಲಪ್‌ಮೆಂಟ್ ಇನ್ ಇಂಡಿಯಾ”, ಲೇಖನ ಸುಗತ ಬೋಸ್ ಆಂಡ್ ಆಯೇಶಾ ಜಲಾಲ್ (ಸಂಪಾದಿಸಿದ), ನೇಶನಲಿಸಂ, ಡೆಮಾಕ್ರಸಿ ಆಂಡ್ ಡೆವಲಪ್‌ಮೆಂಟ್: ಸ್ಟೇಟ್ ಆಂಡ್ ಪೊಲಿಟಿಕ್ಸ್ ಇನ್ ಇಂಡಿಯಾ, ನ್ಯೂ ಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೮, ಪುಟ ೩೬-೪೯

[2]ಗವರ್ನ್‌ಮೆಂಟ್ ಆಫ್ ಇಂಡಿಯಾ, ರಿಪೋರ್ಟ್ ಆಫ್ ದಿ ಟೇಕ್ಸ್‌ಸೇಷನ್ ಎನ್‌ಕ್ವಯರಿ ಕಮಿಟಿ-೧೯೫೩, ೧೯೫೪ ನ್ಯೂಡೆಲ್ಲಿ, ೧೯೫೫.

[3]ವೆಂಕಟರಂಗಯ್ಯ ಆಂಡ್ ಪಟ್ಟಾಭಿರಾಮ್ (ಸಂಪಾದಿಸಿದ), ಲೋಕಲ್ ಗವರ್ನ್‌ಮೆಂಟ್ ಇನ್ ಇಂಡಿಯಾ: ಸಿಲೆಕ್ಟ್ ರೀಡಿಂಗ್ಸ್, ಮನಿಷಾ ಗ್ರಂಥಾಲಯ ಲಿಮಿಟೆಡ್,೧೯೬೭

[4]ಶ್ರೀರಾಮ್ ಮಹೇಶ್ವರಿ, ಲೋಕಲ್ ಗವರ್ನ್‌ಮೆಂಟ್ ಇನ್ ಇಂಡಿಯಾ, ನ್ಯೂ ಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೭೧, ಪುಟ ೨೦-೨೧.

[5]ಅನಾದಿ ಕಾಲದಿಂದಲೂ ಸರಕಾರದ ಪರವಾಗಿ ಭೂ ಕಂದಾಯ ಮತ್ತು ಇತರ ತೆರಿಗೆಗಳನ್ನು ಹಳ್ಳಿಯ ಗೌಡ ಮತ್ತು ಸೇನಬೋವ ಎಂಬಿಬ್ಬ ಅಧಿಕಾರಿಗಳು ವಸೂಲು ಮಾಡುತ್ತಿದ್ದರು. ವಿಜಯನಗರ ಕಾಲದಲ್ಲಿ ಮತ್ತು ನಂತರ ಕಾಲದಲ್ಲೂ ಇವರು ಬಹು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದರು. ಗೌಡಿಕೆ ಅಥವಾ ಗ್ರಾಮ ಮುಖ್ಯಸ್ಥನ ಅಧಿಕಾರವನ್ನು ಸಾರ್ವಜನಿಕ ಸೇವೆ ಮಾಡಿ ಹೆಸರಾದವನೊಬ್ಬನಿಗೆ ರಾಜನೋ, ಅಧಿಕಾರಿಗಳೋ ಅಥವಾ ಗ್ರಾಮದ ಜನರೋ ವಹಿಸಿಕೊಡುತ್ತಿದ್ದರು. ಈ ಸೇವೆಗಾಗಿ ಆತನಿಗೆ ಗೌಡಗೊಡಿಗೆ ಅಥವಾ ತೆರಿಗೆ ರಹಿತ ಭೂಮಿ ದೊರಕುತ್ತಿತ್ತು. (ಕೆ.ಎಸ್.ಶಿವಣ್ಣ, “ಕೃಷಿ ವ್ಯವಸ್ಥೆ”. ಪುಟ ೧೫೩-೧೯೯)

[6]ಸಂಶೋಧನಾ ವಿಧಾನ ಮತ್ತು ಅದರ ತಾತ್ವಿಕ ಹಿನ್ನೆಲೆ ಕುರಿತು ಎರಡೇ ಆಲೋಚನಾ ಕ್ರಮಗಳಿರುವುದಲ್ಲ; ತುಂಬಾ ಇವೆ. ಕನ್ನಡದಲ್ಲಂತೂ ಮೇಲೆ ತಿಳಿಸಿದ ಎರಡು ವಿಧಾನಗಳು ಕುರಿತು ಸಾಕಷ್ಟು ಚರ್ಚೆ ನಡಿಯುತ್ತಿದೆ. ಆದುದರಿಂದ ಆ ಎರಡನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.

[7]ವಿಜಯನಗರದ ಪತನದಲ್ಲಿ ಮುಸ್ಲಿಂ ರಾಜರುಗಳ ಪಾತ್ರವನ್ನು ಗುರುತಿಸುವ ಬರಹಗಳು ಬೇಕಾದಷ್ಟಿವೆ. ಆ ಚಾರಿತ್ರಿಕ ಸಂದರ್ಭದಲ್ಲಿ ರಾಜರುಗಳ ನಡುವೆ ನಡೆಯುವ ಯುದ್ದಗಳಿಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಕಾರಣಗಳೇ ಮುಖ್ಯವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಯುದ್ಧಗಳಲ್ಲೂ ಧಾರ್ಮಿಕ ಅಂಶಗಳನ್ನು ಗುರುತಿಸುವ ಬರಹಗಳು ಹೆಚ್ಚು ಪ್ರಚಾರ ಪಡಿಯುತ್ತಿವೆ. ಹೀಗಾಗಿ ಚರಿತ್ರೆಯ ವಿದ್ಯಾರ್ಥಿ ಅಲ್ಲದವರಿಗೆ ಹೆಚ್ಚು ಪ್ರಚಾರ ಪಡೆಯುತ್ತಿರುವ ಇಂತಹ ಪುಸ್ತಕಗಳೇ ಚರಿತ್ರೆಯ ಮುಖ್ಯ ಮಾಹಿತಿ ಮೂಲಗಳಾಗುವ ಸಾಧ್ಯತೆಗಳಿವೆ. ಅಂತಹ ಪುಸ್ತಕಗಳು ಹಲವಾರು ಇವೆ. ಉದಾಹರಣೆಗೆ- ರಾಬರ್ಟ್ ಸಿವೆಲ್, ಎ ಫೊರ್‌ಗೊಟನ್ ಎಂಪಾಯರ್. ವಿಜಯನಗರ, ನ್ಯೂಡೆಲ್ಲಿ: ಏಶಿಯನ್ ಎಜುಕೇಶನಲ್ ಸರ್ವೀಸಸ್, ೧೯೮೦, ಕೃಷ್ಣಸ್ವಾಮಿ ಅಯ್ಯಂಗಾರ್, ಸೋರ್‌ಸಸ್ ಆಫ್ ವಿಜಯನಗರ ಹಿಸ್ಟರಿ, ಡೆಲ್ಲಿ: ಗ್ಯಾನ್ ಪಬ್ಲಿಷಿಂಗ್ ಹೌಸ್, ೧೯೮೬.

[8]ಹಿಂದಿನಿಂದಲೂ ಗೌಡರು ಅಧಿಕಾರದ ಕೇಂದ್ರವಾದರೆ ಶ್ಯಾನುಭೋಗರು ದಾಖಲೆಗಳ ಕೇಂದ್ರ, ಹಳ್ಳಿಯ ಕೃಷಿಯೋಗ್ಯ ಮತ್ತು ಬಂಜರು ಭೂಮಿ, ಕೃಷಿಯಾಗುತ್ತಿರುವ ಹಾಗೂ ಬೀಳು ಬಿದ್ದಿರುವ ಭೂಮಿ, ಇವುಗಳ ವಿಸ್ತೀರ್ಣ, ಗದ್ದೆ ಮತ್ತು ಹೊಲ ಬೇಸಾಯಗಳ ವಿವರ, ತೆರಿಗೆ ಹಾಕಿರುವ ಮತ್ತು ವಿನಾಯಿತಿ ಪಡೆದಿರುವ ಭೂಮಿಗಳ ವಿವರ, ಬೆಳೆಗಳ ಅಂದಾಜು, ಕಂದಾಯ ವಿವರ, ಹಳ್ಳಿಯ ಬ್ರಹ್ಮಾದಾಯ, ದೇವಾದಾಯ ಮತ್ತು ಮಾತಾಪುರ ಭೂಮಿಗಳ ವಿಸ್ತೀರ್ಣ, ವಿವಿಧ ಗ್ರಾಮ ಸೇವೆಗಳು. ಸಾರ್ವಜನಿಕ ಸೇವೆಯೂ ಸೇರಿದಂತೆ ಹಳ್ಳಿಯ ಆಡಳಿತಕ್ಕೆ ಸಂಬಂಧಿಸಿದ ಸಮಸ್ತ ಮಾಹಿತಿಗಳು ಶ್ಯಾನಭೋಗರ ಬಳಿ ದಾಖಲೆಯಲ್ಲಿರುತ್ತಿದ್ದವು. (ಕೆ.ಎಸ್. ಶಿವಣ್ಣ “ಕೃಷಿ ವ್ಯವಸ್ಥೆ”, ಪುಟ ೧೮೩)