ಜೀತ ಮುಕ್ತಿ

ನೀರಾವರಿ ಇಲ್ಲದಿದ್ದರೂ ಹಿಂದೆ ಕೃಷಿ ಹೆಚ್ಚಿತ್ತು ಎಂದು ಇಲ್ಲಿನ ಹಿರಿಯರು ವಾದಿಸುತ್ತಾರೆ. ಅದು ಹೇಗೆ ಸಾಧ್ಯ ಎಂದರೆ ಹಿಂದೆ ಹೆಚ್ಚು ಮಳೆ ಸುರಿಯುತ್ತಿತ್ತು ಎಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಇದ್ದರೂ ಇರಬಹುದು ಎಂದು ನಾನು ಅದೇ ತೀರ್ಮಾನಕ್ಕೆ ಬಂದಿದ್ದೆ. ಆದರೂ ಇಲ್ಲಿ, ಹೊಸಪೇಟೆಯಲ್ಲಿ, ಸುರಿಯುವ ಮಳೆ ಲೆಕ್ಕಾಚಾರ ಸಿಕ್ಕಿದರೆ ಒಳ್ಳೆಯದೆಂದು ತಾಲ್ಲೂಕು ಕಚೇರಿಯಲ್ಲಿ ವಿಚಾರಿಸಿದೆ. ಅಲ್ಲಿ ಸಿಕ್ಕಿದ ಅಂಕಿ ಅಂಶಗಳು ಮಳೆಯ ಕುರಿತು ಬೇರೆಯದೇ ಚಿತ್ರಣ ಕೊಡುತ್ತಿವೆ. ಹೊಸಪೇಟೆ ತಾಲ್ಲೂಕಿನಲ್ಲಿ ಸುರಿದ ಮಳೆಯ ಲೆಕ್ಕಾಚಾರದ ಪ್ರಕಾರ ೧೯೯೭ರಲ್ಲಿ ೫೬೩.೭ ಮಿಲಿಮೀಟರು ಮಳೆ ಸುರಿದಿದೆ. ೧೯೯೭ರಲ್ಲಿ ೬೬೯.೭ ಮಿ.ಮಿ.ಗೆ ಮತ್ತು ೭೦೬.೧ ಮಿ.ಮಿ.ಗೆ ಏರಿದೆ. ೧೯೯೭ರಲ್ಲಿ ಮಳೆ ಕಡಿಮೆಯಾಗಿದೆ – ೫೧೮.೨೭ ಮಿ.ಮಿ. ಆದರೆ ೧೯೯೮ ಮತ್ತು ೧೯೯೯ರಲ್ಲಿ ಪುನಃ ಕ್ರಮವಾಗಿ ೮೪೫ ಮತ್ತು ೮೦೮.೫ ಮಿ.ಮಿ. ಮಳೆಯಾಗಿದೆ.[1] ಆದುದರಿಂದ ಹಿಂದೆ ಮಳೆ ಹೆಚ್ಚಿತ್ತು ಹಾಗೆ ಕೃಷಿ ಹೆಚ್ಚಿತ್ತು ಎನ್ನುವ ವಾದ ಸರಿಯಲ್ಲ.

ಕೃಷಿ ಹೆಚ್ಚಿರುವ ಸಾಧ್ಯತೆಯನ್ನು ಬೇರೆ ಅಂಶಗಳಿಂದ ಅರ್ಥಮಾಡಿಕೊಳ್ಳಬೇಕಾಗಿದೆ. ಈ ಕುರಿತು ತಕ್ಷಣಕ್ಕೆ ಉಪಯೋಗಕ್ಕೆ ಬರುವ ಮಾಹಿತಿ ಎಂದರೆ ಜೀತ ಪದ್ಧತಿ. ಜೀತ ಪದ್ಧತಿ ಇತ್ತೆಂದು ಜೀತಕ್ಕೆ ದುಡಿದವರು ಮತ್ತು ದುಡಿಸಿಕೊಳ್ಳುತ್ತಿದವರು ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಜೀತಕ್ಕೆ ದುಡಿಸಿಕೊಂಡವರಲ್ಲಿ ಲಿಂಗಾಯತರೇ ಮುಖ್ಯರು. ಇತರ ಜಾತಿಯವರು ಜೀತಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲವೆಂದಲ್ಲ. ದೊಡ್ಡ ಹಿಡುವಳಿ ಇದ್ದ ಕುರುಬರು, ನಾಯಕರು ಮತ್ತು ವಡ್ಡರು ಜೀತಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಇವರಲ್ಲಿ ದುಡಿಯುತ್ತಿದ್ದ ಆಳುಗಳನ್ನು ಲಿಂಗಾಯತರಲ್ಲಿ ಜೀತಕ್ಕೆ ದುಡಿಯುತ್ತಿದ್ದ ಆಳುಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆ. ಇದಕ್ಕೆ ಕಾರಣ ಜಾತಿಯಲ್ಲ; ಭೂ ಹಿಡುವಳಿ. ಇಲ್ಲಿ ದೊಡ್ಡ ಭುಮಾಲಿಕರು ಲಿಂಗಾಯತರೇ ಆಗಿದ್ದರು. ಇವರ ಬದಲು ಬೇರೆ ಜಾತಿಯವರಲ್ಲಿ ಹೆಚ್ಚು ಭೂ ಹಿಡುವಳಿ ಇರುತ್ತಿದ್ದರೆ ಅವರು ಕೂಡ ಲಿಂಗಾಯತರ ಹಾಗೆ ಹೆಚ್ಚು ಸಂಖ್ಯೆಯಲ್ಲಿ ಆಳುಗಳನ್ನು ಇಟ್ಟುಕೊಳ್ಳುವ ಸಾಧ್ಯತೆ ಇತ್ತೋ ಏನೋ? ಜೀತಕ್ಕೆ ದುಡಿಸಿಕೊಳ್ಳುವವರು ಎಲ್ಲಾ ಜಾತಿಯಲ್ಲೂ ಕಂಡು ಬಂದರೂ ದುಡಿಯುವವರು ಮಾತ್ರ ಒಂದೇ ಜಾತಿಗೆ ಸೇರಿದವರು – ಹರಿಜನರು. ಈ ಕುರಿತು ಸರಕಾರಿ ಅಂಕಿ ಅಂಶಗಳು ತುಂಬಾ ಅಸ್ಪಷ್ಟವಾಗಿವೆ. ೧೯೭೧ರ ಜನಗಣತಿ ಪ್ರಕಾರ ಒಟ್ಟು ಹರಿಜನರ ಸಂಖ್ಯೆ ೩೩೮; ಮಹಿಳೆಯರು ೧೬೦, ಪುರುಷರು ೧೭೮. ಪಿ.ಕೆ. ಹಳ್ಳಿಯ ಕೃಷಿ ಕಾರ್ಮಿಕರ ಸಂಖ್ಯೆ ೧೯೭೧ರಲ್ಲಿ ಕೇವಲ ೪೦; ೩೫ ಪುರುಷರು ಮತ್ತು ೫ ಮಹಿಳೆಯರು. ಆ ವರ್ಷ ಪರಿಶಿಷ್ಟ ವರ್ಗಗಳ ಜನಸಂಖ್ಯೆ ಇಲ್ಲವೆಂದು ಸೆನ್ಸಸ್ ರಿಪೋರ್ಟ್ ಹೇಳುತ್ತದೆ. ೧೯೯೯ರಲ್ಲಿ ಹಳ್ಳಿಯಲ್ಲಿನ ಅತಿ ದೊಡ್ಡ ಸಮುದಾಯವೆಂದರೆ ನಾಯಕರದ್ದೇ – ೧೪೦ ಕುಟುಂಬಗಳಿವೆ. ಅಂದರೆ ಇವರೆಲ್ಲಾ ೧೯೭೧ರ ನಂತರ ಹಳ್ಳಿಯ ಬದುಕಿಗೆ ಸೇರ್ಪಡೆಯಾದವರೆಂದು ತಿಳಿಯಬೇಕು. ಆದರೆ ವಸ್ತಿ ಸ್ಥಿತಿ ಹಾಗಿಲ್ಲ. ಹಳ್ಳಿಯಲ್ಲೇ ಹುಟ್ಟಿ ಬೆಳೆದ ಹಲವಾರು ನಾಯಕ ಕುಟುಂಬಗಳಿವೆ. ಹೀಗೆ ಸೆನ್ಸಸ್‌ನ ಅಂಕಿ ಅಂಶಗಳಿಂದ ಊರಿನ ಸರಿಯಾದ ಚಿತ್ರಣ ಸಿಗುತ್ತದೆ ಎಂಬ ಭರವಸೆಯಿಲ್ಲ. ಆದಾಗ್ಯೂ ಈ ರಿಪೋರ್ಟ್‌ನಲ್ಲಿರುವ ಕೆಲವು ವಿಚಿತ್ರ ಅಂಕಿ ಅಂಶಗಳನ್ನು ಉಪಯೋಗಿಸಿಕೊಂಡು ಹಳ್ಳಿಯ ಸಂಕೀರ್ಣತೆಯನ್ನು ಅರಿಯಲು ಪ್ರಯತ್ನಿಸಲಾಗಿದೆ.

೧೯೭೧ರ ಸೆನ್ಸಸ್ ಪ್ರಕಾರ ಕೃಷಿಕರ ಸಂಖ್ಯೆ ೪೦೩. ಅದು ೧೯೮೧ರಲ್ಲಿ ೩೩೭ಕ್ಕೆ ಇಳಿದಿದೆ. ಕೃಷಿಕರ ಸಂಖ್ಯೆಯಲ್ಲಿ ಈ ಪ್ರಮಾಣದ ಕುಸಿತ ಹಲವಾರು ಕಾರಣಗಳಿಂದ ಸಾಧ್ಯ. ಒಂದು, ದೊಡ್ಡ ಪ್ರಮಾಣದ ವಲಸೆ. ಇಲ್ಲಿ ನೀರಾವರಿ ಇಲ್ಲ ಅಥವಾ ಬದುಕಲು ಅಸಾಧ್ಯ ಎಂದು ಬೇರೆ ಪ್ರದೇಶಗಳಿಗೆ ವಲಸೆ ಹೋಗಿರಬೇಕು.[2] ಆದರೆ ಈ ವಾದವನ್ನು ಒಪ್ಪುವುದು ಕಷ್ಟ. ಯಾಕೆಂದರೆ ೧೯೯೧ರಲ್ಲಿ ಕೃಷಿಕರ ಸಂಖ್ಯೆ ೫೭೧ಕ್ಕೆ ಏರಿದೆ. ಈ ಅವಧಿಯಲ್ಲಿ ಕೃಷಿಕರನ್ನು ಈ ಪ್ರಮಾಣದಲ್ಲಿ ಆಕರ್ಷಿಸುವ ನೀರಾವರಿ ಸುಧಾರಣೆ ಅಥವಾ ಇತರ ಯಾವ ಬೆಳವಣಿಗೆಗಳು ಇಲ್ಲಿ ಕಂಡು ಬರುತ್ತಿಲ್ಲ. ಎರಡು, ಅನೀರಿಕ್ಷಿತ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಕೃಷಿಯಿಂದ ದೂರ ಸರಿಯುವುದು. ಎರಡನೇ ಕಾರಣ ಸರಿಯಿರಬಹುದು. ಜೀತ ಪದ್ಧತಿ ಅಗ್ಗದ ಶ್ರಮ ದೊರಕುವಾಗ ಕೃಷಿಯಲ್ಲಿದ್ದು ಅದು ಇಲ್ಲವಾದಾಗ ಕೃಷಿಯಿಂದ ದೂರ ಸರಿದಿರಬಹುದು. ಈ ಅಂಶ ಕೃಷಿ ಕಾರ್ಮಿಕರ ಅಂಕಿ ಅಂಶದಿಂದಲೂ ವ್ಯಕ್ತವಾಗುತ್ತಿದೆ. ೧೯೭೧ರಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಕೇವಲ ೪೦.ಅದು ೧೯೮೧ರಲ್ಲಿ ೨೬೯ಕ್ಕೆ ಏರಿದೆ. ಕೃಷಿಕರ ಸಂಖ್ಯೆ ಇಳಿಮುಖವಾಗುವಾಗ ಕೃಷಿ ಕಾರ್ಮಿಕರ ಸಂಖ್ಯೆ ಏರಲು ಹೇಗೆ ಸಾಧ್ಯ. ಭೂ ಸುಧಾರಣಾ ಕಾಯಿದೆ ಜಾರಿ ಬಂದ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ೧೯೭೧ ಮತ್ತು ೧೯೮೧ರ ಮಧ್ಯೆ ಏರಿದೆ. ಅದಕ್ಕೆ ಮುಖ್ಯ ಕಾರಣ ಗೇಣಿದಾರರನ್ನು ದಣಿಗಳು ಅವರ ಭೂಮಿಯಿಂದ ಒಕ್ಕಲೆಬ್ಬಿಸಿರುವುದು.[3]ಆ ರೀತಿ ಭೂಮಿ ಕಳಕೊಂಡವರು ಬದಲಿ ಕೃಷಿಯೇತರ ಚಟುವಟಿಕೆಗಳು ಇಲ್ಲದೆ ಕೃಷಿ ಕಾರ್ಮಿಕರಾಗಿ ಪರಿವರ್ತಿತಗೊಂಡಿದ್ದಾರೆ. ಆದರೆ ಈ ಪ್ರದೇಶದಲ್ಲಿ ಭೂ ಸುಧಾರಣಾ ಕಾಯಿದೆಯ ಪ್ರಭಾವವೇ ಆಗಿಲ್ಲ. ಹಾಗಿರುವಾಗ ಈ ಪ್ರಮಾಣದಲ್ಲಿ (೮೫%)ಕೃಷಿಕರ ಸಂಖ್ಯೆ ಏರಲು ಕಾರಣವೇನು? ಇಲ್ಲಿನ ಕಾರಣ ಪುನಃ ಜೀತ ಪದ್ಧತಿ.

ಜನಗಣತಿಯಲ್ಲಿ ಪ್ರಾಥಮಿಕ ಅಂಕಿ ಅಂಶಗಳನ್ನು ಸಂಗ್ರಹಿಸುವ ಜವಾಬ್ದಾರಿ ಪ್ರಾಥಮಿಕ ಶಾಲಾ ಮೇಸ್ಟ್ರುಗಳದ್ದು. ಎಪ್ಪತ್ತರ ದಶಕದಲ್ಲಿ, ಇನ್ನೂ ರಿಸರ್‌ವೇಶನ್ ಸರಿಯಾಗಿ ಜಾರಿ ಬರದಿರುವ ಸಂದರ್ಭದಲ್ಲಿ, ಸ್ಥಳೀಯ ಮೇಲು ಜಾತಿಯವರೇ ಶಾಲೆಗಳಲ್ಲಿ ಮೇಸ್ಟ್ರುಗಳಾಗಿರುತ್ತಿದ್ದರು. ಇವರುಗಳಿಗೆ ಜೀತ ಕಾನೂನಿಗೆ ವಿರುದ್ಧವೆಂದು ತಿಳಿದಿರುತ್ತದೆ. ಕಾನೂನಿಗೆ ವಿರುದ್ಧವಾದುದನ್ನು ದಾಖಲಿಸಿದರೆ ತಾನೆ ಅಪರಾಧವಾಗುವುದು. ಹಾಗಾಗಿ ಜೀತದಾಳುಗಳಾಗಿ ದುಡಿಯುತ್ತಿದ್ದ ಹರಿಜನರು ೧೯೭೧ರಲ್ಲಿ ಕೃಷಿ ಕಾರ್ಮಿಕರಾಗಿ ದಾಖಲಾಗಿಲ್ಲ. ೧೯೭೫ರ ಎಮರ್ಜನ್ಸಿ ಸಂದರ್ಭದಲ್ಲಿ ಜೀತ ಮುಕ್ತಿಗೊಂಡು ಅವರು ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗ್‌ಗೆ ಹೋಗಲು ಆರಂಭಿಸಿದಾಗ ಜನಗಣತಿ ವ್ಯಾಪ್ತಿಗೆ ಬಂದಿರಬೇಕು. ಗಣಿ ಕಾರ್ಮಿಕರಲ್ಲಿ ಎರಡು ವಿಧ. ಒಂದು, ಗಣಿಯಲ್ಲಿ ದುಡಿಯುವವರು ಮತ್ತು ಎರಡು, ವ್ಯಾಗನ್ ಲೋಡಿಂಗ್ ಮಾಡುವವರು. ಗಣಿಯಲ್ಲಿ ದುಡಿಯುವವರು ಒಂದು ರೀತಿಯ ಖಾಯಂ ನೌಕರರು. ದಿನವಿಡೀ ಗಣಿಯಲ್ಲಿ ದುಡಿತವಿರುತ್ತದೆ. ಆದರೆ ವ್ಯಾಗನ್ ಲೋಡಿಂಗ್ ಒಂದು ವಿಧದ ಅರೆ ಗಣಿ ಕಾರ್ಮಿಕತ್ವ. ವಾರದಲ್ಲಿ ಎರಡು ಬಾರಿ, ಅದೂ ಕೇವಲ ಕೆಲವೇ ಗಂಟೆಗಳ ಕೆಲಸ. ಅಂತವರು ವ್ಯಾಗನ್ ಲೋಡಿಂಗ್ ಇಲ್ಲದಿರುವಾಗ ಕೃಷಿ ಕಾರ್ಮಿಕರಾಗಿ ದುಡಿಯುತ್ತಾರೆ. ಜನಗಣತಿ ಮಾಡುವವರಿಗೆ ಈ ವ್ಯಾಗನ್ ಲೋಡಿಂಗ್ ಮಾಡುವರು ಒಂದು ದೊಡ್ಡ ತಲೆನೋವು. ಅವರನ್ನು ಅತ್ತ ಗಣಿ ಕಾರ್ಮಿಕರೆಂದು ವಿಂಗಡಿಸುವಂತಿಲ್ಲ. ಇತ್ತ ಕೃಷಿ ಕಾರ್ಮಿಕರೆಂದು ಸಮೀಕರಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ತಮ್ಮ ವಿವೇಚನೆ ಬಳಸಿ ಕೃಷಿ ಕಾರ್ಮಿಕರೆಂದು ತೋರಿಸುವ ಸಾಧ್ಯತೆ ಹೆಚ್ಚು. ಯಾಕೆಂದರೆ ವ್ಯಾಗನ್ ಲೋಡಿಂಗ್ ಎನ್ನುವ ತಲೆಬರಹ ಜನಗಣತಿಯಲ್ಲಿ ಇಲ್ಲ. ಹೀಗೆ ಅಗ್ಗದ ಶ್ರಮ ಒದಗಿಸುವ ಜೀತ ಪದ್ಧತಿ ಕೃಷಿಯ ಮುಂದುವರಿಕೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದೆ.

೧೯೩೫ ರಿಂದಲೆ ಚಿಕ್ಕ ಪ್ರಮಾಣದಲ್ಲಿ ಗಣಿಗಾರಿಕೆ ಇತ್ತು. ಹಳ್ಳಿಯ ಭೂ ರಹಿತ ಕೆಲಸಗಾರರನ್ನು ತೊಡಗಿಸುವಷ್ಟು ಗಣಿಗಾರಿಕೆ ಆರಂಭವಾದುದು ೧೯೮೪ ರಿಂದ. ಅಲ್ಲಿಯವರೆಗೆ ಭೂರಹಿತರಿಗೆ ಕೃಷಿ ಕೂಲಿಯೇ ಮುಖ್ಯ ಆದಾಯ ಮೂಲ. ಸ್ಥಳೀಯ ಅಂಬೇಡ್ಕರ್ ಸಂಘದ ಅಧ್ಯಕ್ಷರಲ್ಲಿ ೧೯೪೮ ರಿಂದಲೆ ಗಣಿಗಾರಿಕೆ ಆರಂಭವಾದರೂ ಹರಿಜನರು ೧೯೭೫ರ ವರೆಗೂ ಯಾಕೆ ಜೀತದಾಳುಗಳಾಗಿ ದುಡಿಯಬೇಕಾಯಿತು ಎಂದು ಕೇಳಲು ‘ಆರಂಭದ ದಿನಗಳಲ್ಲಿ ಮಾಲಿಕರು ಗಣಿಗಾರಿಕೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು. ೧೮ ವರ್ಷದ ಕೆಳಗಿನವರನ್ನು ಗಣಿ ಕೆಲಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ನಮಗೆಲ್ಲಾ ಚಿಕ್ಕ ಪ್ರಾಯದಲ್ಲೆ ಗಣಿ ಕೆಲಸಕ್ಕೆ ಹೋಗಲಾಗಲಿಲ್ಲ. ನಮ್ಮ ಹಿರಿಯರು ಹಲವಾರು ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದರು. ಅದನ್ನು ಬಿಟ್ಟು ಒಮ್ಮಿಂದೊಮ್ಮೆಗೆ ಹೊಸ ಕಸುಬಿಗೆ ಸೇರುವಷ್ಟು ಆತ್ಮ ವಿಶ್ವಾಸ ಅವರಲ್ಲಿ ಇರಲಿಲ್ಲ. ಜನತೆಗೆ ಯಜಮಾನರಲ್ಲಿ ಮಾಡಿದ ಸಾಲ ಸಂದಾಯವಾಗದೆ ಅವರಿಗೆ ಜೀತದಿಮದ ಮುಕ್ತಿಯಿರಲಿಲ್ಲ’ ಎಂದು ಉತ್ತರಿಸಿದರು.

ಸಾಲ ಹರಿಜನರನ್ನು ಮಾತ್ರವಲ್ಲ ಇತರ ಜಾತಿಯ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಮತ್ತು ಭೂರಹಿತ ಕೂಲಿಗಳನ್ನು ಬಲಾಢ್ಯ ಭೂಮಾಲಿಕರ ಅಧೀನದಲ್ಲಿರಿಸಿತ್ತು. ಸಾಲದ ಬಂಧನ ಹೀಗಿದೆ. ಪ್ರತಿ. ರೂ. ೧೦೦೦ಕ್ಕೆ ಒಂದು ತಿಂಗಳಿಗೆ ರೂ. ೩ ಬಡ್ಡಿ. ರೂ. ೧೦೦೦ ಸಾಲ ಮಾಡಿದರೆ ವರ್ಷದ ಕೊನೆಗೆ ಸಂದಾಯ ಮಾಡಬೇಕಾದ ಒಟ್ಟು ಮೊತ್ತ, ಅಸಲು ಬಡ್ಡಿ ಸೇರಿ, ರೂ. ೧೩೬೦. ವರ್ಷದ ಕೊನೆಗೆ ಸಾಲ ಅಥವಾ ಬಡ್ಡಿ ಸಂದಾಯ ಮಾಡಲು ಆಗದಿದ್ದರೆ ಎರಡನೇ ವರ್ಷದ ಆರಂಭದಲ್ಲಿ ಅಸಲು ೧೩೬೦ ಆಗುತ್ತದೆ. ಈ ರೂ. ೧೩೬೦ಕ್ಕೆ ಹೊಸತೊಂದು ಪ್ರಾಮಿಸರಿ ನೋಟ್ ತಯಾರಾಗುತ್ತದೆ. ಹೀಗೆ ಆರೇಳು ವರ್ಷ ಕಳೆದರೆ ಅಸಲು ರೂ. ೧೦೦೦ವೇ ಇರುತ್ತದೆ. ಆದರೆ ಬಡ್ಡಿ ಬೆಳದು ರೂ. ೩೦೦೦ ದಿಂದ ೪೦೦೦ ಆಗಿರುತ್ತದೆ. ಮೊದಲ ಕೆಲ ವರ್ಷ ಸಾಲ ಕೊಟ್ಟವರು ಅಸಲು ಅಥವಾ ಬಡ್ಡಿಗಾಗಿ ತಾಕೀತು ಮಾಡುವುದಿಲ್ಲ. ಯಾವಾಗ ಅದು ಬೆಳೆದು ಆರೇಳು ಸಾವಿ ಆಗುತ್ತದೋ ಆಗ ಅದು ಪಂಚಾಯತಿ ಕಟ್ಟೆಗೆ ಬರುತ್ತದೆ. ಪಂಚಾಯತಿ ಅಧ್ಯಕ್ಷರು ಪುನಃ ಇದೇ ಭೂಮಾಲಕರು. ತೀರ್ಪು ಹೆಚ್ಚು ಕಡಿಮೆ ಎಲ್ಲರಿಗೂ ಒಂದೇ. ಭೂರಹಿತ ಕೂಲಿಯಾದರೆ ಜೀತದ ಅವಧಿ ಹೆಚ್ಚುತ್ತದೆ. ಭೂಮಿ ಇದ್ದ ಸಣ್ಣ ಅಥವಾ ಅತಿ ಸಣ್ಣ ರೈತನಾದರೆ ತನ್ನ ಭೂಮಿ ಕಳಕೊಳ್ಳಬೇಕಾಗುತ್ತದೆ. ಈ ಕ್ರಮದಲ್ಲಿ ಜೀತ ಮತ್ತು ಸಾಲ ಅಗ್ಗದ ಶ್ರಮವನ್ನು ಒದಗಿಸುತ್ತಿತ್ತು. ೧೯೭೧ ಮತ್ತು ೧೯೮೧ರ ಮಧ್ಯೆ ಕೃಷಿಕರ ಸಂಖ್ಯೆ ಕಡಿಮೆಯಾಗಿ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಳು ಇದು ಒಂದು ಕಾರಣವಿರಬಹುದು.

೧೯೭೫ರವರೆಗೂ ಜೀತ ಮತ್ತು ಪ್ರಾಮಿಸರಿ ನೋಟ್ ಮೂಲಕ ಅಗ್ಗದ ಶ್ರಮ ಪಡಿಯುವುದು ಅಡೆತಡೆಯಿಲ್ಲದೆ ನಡೆಯಿತು. ೧೯೭೫ರ ಎರ್ಮಜನ್ಸಿ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ತಂದ ಇಪ್ಪತ್ತಂಶ ಕಾರ್ಯಕ್ರಮಗಳಲ್ಲಿ ಒಂದು ಜೀತ ಮುಕ್ತಿ. ಇದು ಕಾರ್ಯರೂಪಕ್ಕೆ ಬಂದದ್ದು ಅಧಿಕಾರಿಗಳ ಮೂಲಕ. ಹಲವಾರು ಹರಿಜನರು ಜೀತದಿಂದ ಮುಕ್ತರಾದರು, ಇತರ ಜಾತಿಯವರು ಸಾಲದಿಂದ ಮುಕ್ತರಾದರು. ಕೇವಲ ಕಾನೂನಿನಿಂದಲೇ ಜೀತ ಮುಕ್ತಿ ಸಾಧ್ಯವಾಯಿತೇ ಎಂದು ಕೆಲವು ಹರಿಜನ ಹಿರಿಯರನ್ನು ಕೇಳಲಾಯಿತು. ಸ್ಥಳೀಯ ಅಥವಾ ಹೊರಗಿನ ಯಾವುದೇ ಸಂಘಟನೆ ಜೀತಮುಕ್ತಿಗಾಗಿ ಹೋರಾಡಿದ್ದು ನಿಮಗೆ ನೆನಪಿಲ್ಲವೆ? ಎಂದರೆ. ‘ಅಧಿಕಾರಿಗಳಿಂದಲೇ ನಡೆಯಿತು. ಅದೇ ಸಂದರ್ಭದಲ್ಲಿ ಗಣಿಗಾರಿಕೆಯ ಬೆಳೆಯುತ್ತಿತ್ತು. ಯಜಮಾನ್ರನ್ನು ಎದುರು ಹಾಕಿಕೊಂಡು ಬದುಕುವ ಹೊಸ ದಾರಿ ಇತ್ತುಲ ಅದು ನಮಗೆಲ್ಲಾ ಧೈರ್ಯಕೊಟ್ಟಿತ್ತು’ ಎನ್ನುವುದು ಅವರುಗಳ ಅಭಿಪ್ರಾಯದ ಸಾರಾಂಶ. ಜೀತ ಮುಕ್ತಿಯಲ್ಲಿ ಸರಕಾರಿ ಅಧಿಕಾರಿಗಳದ್ದು ಮುಖ್ಯಪಾತ್ರ ಎಂದು ಕೆಲವು ಭೂ ಮಾಲಿಕರು ಅಭಿಪ್ರಾಯ ಮಡುತ್ತಾರೆ. ಅವರ ಪ್ರಕಾರ ಆ ಸಂದರ್ಭ(ಎರ್ಮಜನ್ಸಿಯ ಸಂದರ್ಭ) ಹಾಗಿತ್ತು. ಸರಕಾರದ ಕಾನೂನ್ನು ಮುರಿಯುವ ಅಥವಾ ತಿರುಚುವ ಧೈರ್ಯ ಯಾರು ಮಾಡುತ್ತಿರಲಿಲ್ಲ. ಜೀತದಿಂದ ಆಳುಗಳನ್ನು ಮುಕ್ತಗೊಳಿಸದಿದ್ದರೆ ಜೈಲಿಗೆ ಹಾಕುತ್ತಾರೆ ಎಂಬ ಭಯ ಜೀತಕ್ಕೆ ದುಡಿಸುವವರಲ್ಲಿ ಇತ್ತುಲ ಹೊಸಪೇಟೆ ತಹಶೀಲ್ದಾರರು ಬಂದು ತಿಳಿಸಿದ ನಂತರ ಯಾರು ಅದನ್ನು ವಿರೋಧಿಸುವ ಧೈರ್ಯ ತೋರಿಸಲಿಲ್ಲ.

ಇನ್ನು ಅದರ ಜತೆಗೆ ಗಣಿಗಾರಿಕೆ ಬದುಕಿಗೆ ಹೊಸ ದಾರಿ ಕೊಟ್ಟಿತು ಎನ್ನುವ ಹರಿಜನ ಹಿರಿಯರ ಮಾರು ದೊಡ್ಡ ಸತ್ಯವನ್ನು ಹೇಳುತ್ತದೆ. ಕಾನೂನಿಂದಲೇ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತಿದ್ದರೆ ಭಾರತ ಇಂದು ಒಂದು ಸ್ವರ್ಗವಾಗಬೇಕಿತ್ತು. ಕೆಳವರ್ಗದ, ಶೋಷಿತ ಜನರ, ಮಹಿಳೆಯರ, ಬಾಲಕಾರ್ಮಿಕರ ಮುಂತಾದವರ ರಕ್ಷಣೆಗೆ ಹಲವಾರು ಕಾನೂನುಗಳಿವೆ. ಇದರ ಮಧ್ಯೆಯ ಅವರುಗಳ ಶೋಷಣೆ ನಡಿಯುತ್ತಲೇ ಇದೆ. ಕೇವಲ ಕಾನೂನಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವುದನ್ನು ಇವೆಲ್ಲಾ ಸೂಚಿಸುತ್ತವೆ. ಈ ಕಾನೂನುಗಳ ಜತೆಜತೆಗೆ ಶೋಷಿತರಿಗೆ ಬದುಕುವ ಬದಲಿ ವ್ಯವಸ್ಥೆ ರೂಪಿಸುವುದು ಕೂಡ ಅಗತ್ಯ. ಯಾವಾಗ ಅಂತಹ ಬದಲಿ ವ್ಯವಸ್ಥೆಗಳು ಇರುವುದಿಲ್ಲವೋ ಆವಾಗ ಕಾನೂನುಗಳ ಕೇವಲ ಪುಸ್ತಕದಲ್ಲಿರುವ ಅಸ್ತ್ರಗಳಾಗುತ್ತವೆ. ಅದೇ ರೀತಿ ಜೀತ ಮುಕ್ತಿ ಕೇವಲ ಕಾನೂನಿನಿಂದಲೇ ಸಾಧ್ಯವಾಯಿತು ಎನ್ನುವುದು ಸರಿಯಲ್ಲ. ಈ ಕಾನೂನು ಜಾರಿ ಬರುವ ಸಂದರ್ಭದಲ್ಲಿ ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗ್ ಭರದಿಂದ ಸಾಗುತ್ತಿದ್ದವು. ಈ ಎರಡು ಮೂಲಗಳು ಹೆಚ್ಚು ಹೆಚ್ಚು ಜನರಿಗೆ ಆದಾಯದ ಬದಲೀ ಅವಕಾಶಗಳನ್ನು ಒದಗಿಸಿದವು. ಕೆಲಸದ ಅವಧಿ, ಕೂಲಿ ಮೊತ್ತ, ಕೂಲಿ ಸಂದಾಯ ಕ್ರಮ, ವಾರದ ರಜೆ, ಇತ್ಯಾದಿಗಳು ಕೃಷಿಗೆ ಹೋಲಿಸಿದರೆ ಗಣಿಗಾರಿಕೆಯಲ್ಲಿ ಉತ್ತಮವಾಗಿತ್ತು. ಜೀತದಿಂದ ಬಿಡುಗಡೆ ಹೊಂದಿದ ಜನರು ಈ ಬದಲಿ ಅವಕಾಶಗಳನ್ನು ಸಂಪೂರ್ಣ ಉಪಯೋಗಿಸಿಕೊಂಡರು. ಇದು ನೀರಿಲ್ಲದೆ ಕಷ್ಟದಲ್ಲಿ ಸಾಗುತ್ತಿದ್ದ ಕೃಷಿಗೆ ಮತ್ತೊಂದು ಹೊಡಿತವಾಯಿತು.

ವಿಕೃತ ಆಧುನೀಕರಣ

ಸ್ವತಂತ್ರ ಭಾರತ ತನ್ನ ಸಾಂಪ್ರದಾಯಿಕ ಸಮಾಜದ ಹಲವಾರು ದೋಷಗಳನ್ನು ನಿವಾರಿಸಿ ನವ ಸಮಾಜ ನಿರ್ಮಾಣಕ್ಕಾಗಿ ಆಧುನೀಕರಣ ಪ್ರಕ್ರಿಯೆ ಆರಂಭಿಸಿತು. ಆರ್ಥಿಕ ರಂಗದ ಆಧುನೀಕರಣಕ್ಕೆ ಕೈಗೊಂಡ ಮುಖ್ಯ ಕಾರ್ಯಕ್ರಮಗಳೆಂದರೆ ಕೃಷಿ ಮತ್ತು ಕೈಗಾರಿಗಕೆಗಳ ಆಧುನೀಕರಣ. ಕೃಷಿಯ ಆಧುನೀಕರಣಕ್ಕೆ ಕೃಷಿ ಉಪಕರಣಗಳು, ವಿದ್ಯುತ್, ಗೊಬ್ಬರ, ನೀರಾವರಿ ವ್ಯವಸ್ಥೆ, ಹಣಕಾಸು ವ್ಯವಸ್ಥೆ ಇತ್ಯಾದಿಗಳ ಪೂರೈಕೆ ಮತ್ತು ಸುಧಾರಣೆಗೆ ಸರಕಾರ ಮುತುವರ್ಜಿ ತೋರಿಸಿದೆ.[4] ಈ ಸವಲತ್ತುಗಳಿಂದ ಹೆಚ್ಚು ಹೆಚ್ಚು ಜನರು ಕೃಷಿಗೆ ಬರುವುದರಿಂದ ಒಂದು ಕಡೆಯಿಂದ ತಮ್ಮ ಆಹಾರ ಸಮಸ್ಯೆ ದೂರವಾಗುತ್ತದೆ ಎನ್ನುವ ಗೃಹಿಕೆಯಿದೆ. ಆದರೆ ಈ ಸವಲತ್ತುಗಳು ನಮ್ಮ ಗ್ರಾಮೀಣ ಸಮಾಜದ ಏಣಿ ಶ್ರೇಣಿಗಳನ್ನು ದಾಟಿ ಬರುವಾಗ ಯಾವ ರೂಪ ತಾಳುತ್ತದೆ ಎನ್ನುವುದನ್ನು ಪಾಪಿ ನಾಯಕನ ಹಳ್ಳಿಯ ಬೆಳವಣಿಗೆಯಿಂದ ತಿಳಿಯಬಹುದು.

ಪಾಪಿನಾಯಕನಹಳ್ಳಿಯಲ್ಲಿನ ಸಾಲದ ಸಮಸ್ಯೆ ಮತ್ತು ಅದರಿಂದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ದೊಡ್ಡ ಭೂಮಾಲಿಕರ ಅಧೀನದಲ್ಲಿ ಇರಬೇಕಾದ ಅನಿವಾರ್ಯತೆಯನ್ನು ನೋಡಿದ್ದೇವೆ. ಭಾರತದ ಎಲ್ಲಾ ಹಳ್ಳಿಗಳಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇತ್ತು ಮತ್ತು ಇದೆ.[5] ಇಂತಹ ಸಂದರ್ಭದಲ್ಲಿ ಈ ಸಮಸ್ಯೆಯ ಪರಿಹಾರಕ್ಕಾಗಿ ಸರಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಒಂದು ಸಹಕಾರಿ ಬ್ಯಾಂಕನ್ನು ಪ್ರೋತ್ಸಾಹಿಸುವುದು. ಎರಡು ಭೂ ಅಭಿವೃದ್ದಿ ಮತ್ತು ವಾಣಿಜ್ಯ ಬ್ಯಾಂಕುಗಳ ಮೂಲಕ ರೈತರ ಹಣಕಾಸಿನ ಅಗತ್ಯಗಳನ್ನು ಪೂರೈಸುವುದು. ಇದರ ಜತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಐರ್‌ಡಿಪಿ ಯೋಜನೆಯಲ್ಲಿ ಸಾಲ ಕೊಡಿಸುವ ಕ್ರಮಗಳು ಇತ್ಯಾದಿಗಳು. ಹಳ್ಳಿಯಲ್ಲಿ ೧೯೭೦ರಲ್ಲಿ ಸಹಕಾರಿ ಸಂಘ ಆರಂಭವಾಯಿತು. ಅದರ ಮೊದಲ ಅಧ್ಯಕ್ಷರು ಉದ್ವಾಳರ ಗವಿಯಪ್ಪನವರು. ಕಾನೂನು ಪ್ರಕಾರ ಸದಸ್ಯರು, ನಿರ್ದೇಶಕರು ಇದ್ದರು. ಸಾಲ ಪಡೆದವರಲ್ಲಿ ಹೆಚ್ಚಿನವರು ಲಿಂಗಾಯತರೇ ಆದರು. ಕೆಳ ಜಾತಿಯವರ ಸಹಿ ಹಾಕಿಸಿ ಅವರಿಗೆ ಸಾಲ ಕೊಟ್ಟಂತೆ ರಿಜಿಸ್ಟರ್‌ನಲ್ಲಿ ನಮೂದಿಸಿ ಅದನ್ನು ಮೇಲು ಜಾತಿಯವರು ಇಟ್ಟುಕೊಂಡು ಉದಾಹರಣೆಗಳೂ ಇವೆ. ಕೊಟ್ಟ ಸಾಲದ ವಸೂಲತಿ ಇಲ್ಲ. ಹಾಗಾಗಿ ೧೯೮೦ರಲ್ಲಿ ಹೊತ್ತಿಗೆ ಸಹಕಾರಿ ಸಂಘ ಮುಚ್ಚುವ ಸ್ಥಿತಿಗೆ ಬಂತು. ಜಿಲ್ಲಾ ಮಟ್ಟದ ಸಹಕಾರಿ ಬ್ಯಾಂಕಿನಲ್ಲಿ ದುಡಿದು ಅನುಭವ ಇರುವ ರುದ್ರಪ್ಪನವರನ್ನು ಊರವರು ಒತ್ತಾಯಿಸಿ ಅಧ್ಯಕ್ಷರನ್ನಾಗಿ ಮಾಡಿದರು. ೧೯೮೧ರಲ್ಲಿ ರುದ್ರಪ್ಪನವರು ಅಧ್ಯಕ್ಷರಾಗುವ ಸಂದರ್ಭದಲ್ಲಿ ಸುಮಾರು ಒಂದು ಲಕ್ಷದಷ್ಟು ಸಾಲ ಬಾಕಿ ಇತ್ತು. ಅವರು ಸಾಲ ವಸೂಲಾತಿಗೆ ಕ್ರಮ ಕೈಗೊಂಡರು. ಸಾಲ ವಸೂಲಾತಿ ಸುಲಭವಾಗಲು ಐರ್‌ಡಿಪಿ ಯೋಜನೆಯ ಅಡಿಯಲ್ಲಿ ಪುನರ್ ಸಾಲ ಕೊಡುವ ಭರವಸೆಯನ್ನಿತ್ತರು. ಅದರಲ್ಲಿ ಸುಮಾರು ಶೇಕಡಾ ೬೦ ರಷ್ಟು ಸಬ್ಸಿಡಿ ಇತ್ತು. ಹಿಂದಿನ ಸಾಲ ಕಟ್ಟಿದವರಿಗೆ ಐರ್‌ಡಿಪಿ ಸಾಲ ಸಿಗುವುದು ಗ್ಯಾರಂಟಿಯಾಯಿತು. ಹೊಸ ಸಾಲ ಪಡೆಯುವುದಕ್ಕಾಗಿ ಹಳೇ ಸಾಲದಲ್ಲಿ ಸುಮರು ೭೦ ಶೇಕಡಾದಷ್ಟು ಸಾಲ ವಸೂಲಾಯಿತು.

೧೯೮೨ – ೮೩ರಲ್ಲಿ ವಡ್ಡರಹಳ್ಳಿ ಹುಲಗಣ್ಣ ಅಧ್ಯಕ್ಷರಾದರು. ಅವರು ಸಾಲ ವಸೂಲು ಮಾಡಲು ಪ್ರಯತ್ನಿಸಿದರು. ೧೯೮೩ರಲ್ಲಿ ಮೇಟಿಯವರ ಸುಂದರಪ್ಪನವರು ಅಧ್ಯಕ್ಷರಾದರು. ಅಧ್ಯಕ್ಷ ಮತ್ತು ಕಾರ್ಯದರ್ಶಿ ಸೇರಿಕೊಂಡು ಸುಮಾರು ಮೂವತ್ತೈದರಿಂದ ನಲ್ವತ್ತು ಸಾವಿರದಷ್ಟು ರೂಪಾಯಿಗಳನ್ನು ದುರುಪಯೋಗಪಡಿಸಿದರು. ಅಲ್ಲಿಗೆ ಸಹಕಾರಿ ಸಂಘ ಪುನಃ ಮುಚ್ಚುವ ಸ್ಥಿತಿಗೆ ಬಂತು. ಇವರಿಬ್ಬರು ಮೇಲ್ ಕೇಸ್ ದಾಖಲಾಯಿತು. ಕೋರ್ಟಿನಲ್ಲಿ ಕೇಸು ನಡೆಯುತ್ತಿದೆ. ಇನ್ನೂ ತೀರ್ಮಾನವಾಗಿಲ್ಲ. ಇದರ ಮಧ್ಯೆ ೧೯೯೯ರ ಕೊನೆಗೆ ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಬಂದು ನೀವು ಸಹಕಾರಿ ಸಂಘವನ್ನು ಪುನರುಜ್ಜೀವನಗೊಳಿಸಿದರೆ ನಿಮ್ಮ ಸಂಘಕ್ಕೆ ಹತ್ತು ಲಕ್ಷ ರೂಪಾಯಿಯಷ್ಟು ಸಾಲ ಕೊಡಲು ಸಿದ್ದ ಎಂದರು. ಜತೆಗೆ ಒಂದು ಶರತ್ತು ವಿಧಿಸಿದ್ದಾರೆ. ಅದೇನೆಂದರೆ ಈಗಾಗಲೇ ಬಾಕಿ ಇರುವ ಸಾಲ ರೂ. ೨೩೯೦೫ಗಳು ವಸೂಲಿಯಾಗಬೇಕು. ವಡ್ಡರಹಳ್ಳಿ ಮತ್ತು ಪಿ.ಕೆ.ಹಳ್ಳಿ ಸೇರಿ ೩೩ ರೈತರ ಸಾಲ ಬಾಕಿ ಇದೆ. ಇದರಲ್ಲಿ ಪಿ,ಕೆ.ಹಳ್ಳಿಯ ರೈತರದ್ದೇ ಸಂಖ್ಯೆ ಹೆಚ್ಚು; ೨೦ ರೈತರು. ಸಾಲ ಬಾಕಿ ಇರಿಸಿದ ಹಳ್ಳಿಯ ೨೦ ರೈತರಲ್ಲಿ ೧೦ ಲಿಂಗಾಯತರು, ೩ ಕುರುಬರು, ೩ ವಡ್ಡರು, ಒಬ್ಬ ಉಪ್ಪಾರ, ಒಬ್ಬ ನಾಯಕ ಮತ್ತು ಇಬ್ಬರು ಮುಸ್ಲಿಂ ರೈತರಿದ್ದಾರೆ.

ಹಿಂದಿನ ಸಾಲ ಕಟ್ಟಿದರೆ ಸಹಕಾರಿ ಸಂಘ ಪುನಃ ಶುರುವಾಗುತ್ತದೆ ಎಂಬ ಸುದ್ಧಿ ಹಳ್ಳಿಯ ಚರ್ಚೆಗೆ ಬಂತು. ಸಾಲ ಬಾಕಿ ಇರುವ ಕೆಲವರನ್ನು ಭೇಟಿಯಾಗಿ ನೀವು ಯಾಕೆ ಸಾಲ ಕಟ್ಟಿಲ್ಲ ಎಂದು ವಿಚಾರಿಸಿದೆ. ಅವರಲ್ಲಿ ಕೆಲವರ ಅಭಿಪ್ರಾಯ ಹೀಗಿದೆ. ೧೯೮೫ರಲ್ಲಿ ಸಾಲದ ರಿಜಿಸ್ಟರ್‌ನಲ್ಲಿ ಅವರ ಹೆಸರಿಗೆ ಮಂಜೂರಾದ ಮೊತ್ತವನ್ನು ಪೂರ್ಣ ಅವರಿಗೆ ಕೊಟ್ಟಿಲ್ಲ. ಈ ಸಾಲಗಾರರು ಹಿಂದೆ ಸಹಕಾರಿ ಸಂಘದ ಅಧ್ಯಕ್ಷರಲ್ಲಿ ತೆಗೆದುಕೊಂಡ ಸಾಲ ಬಾಕಿ ಇತ್ತಂತೆ. ಮಂಜೂರಾದ ಸಾಲದ ಮೊತ್ತದಿಂದ ಅಧ್ಯಕ್ಷರು ತಮ್ಮ ವೈಯಕ್ತಿಕ ಬಾಕಿಯನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಸಾಲ ಮಾಡಿದವರಿಗೆ ಕೊಟ್ಟಿದ್ದಾರೆ. ನಮ್ಮ ಕೈಗೆ ಎಷ್ಟು ಸಾಲದ ಮೊತ್ತ ಬಂದಿದೆಯೋ ಅದನ್ನು ನಾವು ಕಟ್ಟುತ್ತೇವೆ ರಿಜಿಸ್ಟರ್‌ನಲ್ಲಿ ನಮ್ಮ ಹೆಸರಿನ ಎದುರಿರುವ ಸಾಲದ ಮೊತ್ತವನ್ನು ನಾವು ಕಟ್ಟಲು ರೆಡಿಯಾಗಿಲ್ಲ. ಯಾಕೆಂದರೆ ಅಷ್ಟು ಹಣವನ್ನು ನಾವು ಸ್ವೀಕರಿಸಿಯೇ ಇಲ್ಲ ಎಂದು ಸಾಲಗಾರರ ಅಂಬೋಣ. ಹಿಂದೆ ಅಧಿಕಾರದಲ್ಲಿದ್ದವರನ್ನು ಕೇಳಿದರೆ ನೋಡಿ ನಮಗೆ ಬರಬೇಕಾದ ಸಾಲವನ್ನು ಮುರಿದುಕೊಂಡು ಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ವಾದಿಸುತ್ತಾರೆ. ಮತ್ತೊಬ್ಬ ಲಿಂಗಾಯತ ಪ್ರಮುಖರ ಪ್ರಕಾರ, ‘೧೯೭೫ರ ಸಾಲ ಮನ್ನಾದಲ್ಲಿ ಕೇವಲ ಜೀತಕ್ಕೆ ದುಡಿಯುವವರ ಸಾಲ ಮನ್ನಾ ಮಾಡಬೇಕೆಂದು ಇತ್ತು. ಆದರೆ ನಮ್ಮಲ್ಲಿ ಬೇರೆ ಕಾರಣಕ್ಕೆ ಸಾಲ ಮಾಡಿದವರು ಕೂಡ ಹಣ ವಾಪಸು ಕೊಡದೆ ಸತಾಯಿಸಿದ್ದಾರೆ. ಸಾಲ ವಾಪಸಾತಿಗಾಗಿ ಕೋರ್ಟ್‌ಗೆ ಹೋಗುವ ಎಂದರೆ ಅವರು ನೀಡಿದ ಪ್ರಾಮಿಸರಿ ನೋಟ್ ಅವಧಿ ತೀರಿಕೋಂಡಿದೆ. ಅಂತವರ ಜತೆ ಈ ರೀತಿ (ಸೊಸೈಟಿಯಲ್ಲಿ ಅವರ ಹೆಸರಿಗೆ ಸಾಲ ಮಾಡಿಸಿ ತಮ್ಮ ಸಾಲವನ್ನು ಹಿಂದಕ್ಕೆ ಪಡಿಯುವುದು) ವ್ಯವಹರಿಸಿದರೆ ತಪ್ಪೇನಿದೆ?’ಎಂದು ಮರು ಪ್ರಶ್ನೆ ಕೇಳಿದರು.

ಇದು ಆಧುನೀಕರಣ ತಳಮಟ್ಟದಲ್ಲಿ ಅಭಿವ್ಯಕ್ತಗೊಳ್ಳುವ ಪರಿ. ವ್ಯವಸ್ಥೆ ಬದಲಾಯಿಸಲು ಹುಟ್ಟು ಹಾಕುವ ಸಂಸ್ಥಗಳು ಹಳ್ಳಿಯ ಮೇಲ್ವರ್ಗದ ಅಧೀನದಲ್ಲೇ ಇರುತ್ತದೆ. ಅವನ್ನು ತಮ್ಮ ಅನುಕೂಲಕ್ಕಾಗಿ ಬಳಸಲು ಯಾರು ತಾನೇ ಹಿಂಜರಿಯುತ್ತಾರೆ. ಇಲ್ಲಿ ಮೇಲು ಜಾತಿ ಎನ್ನುವಾಗ ಕೆಳ ಜತಿಯವರೆಲ್ಲಾ ಸಾಚಾ ಎನ್ನುವ ತೀರ್ಮಾನವಲ್ಲ. ಇದು ನೈತಿಕತೆಯ ಪ್ರಶ್ನೆಯಲ್ಲ; ಆಧುನಿಕ ಸಂಸ್ಥೆಗಳಲ್ಲಿ ಭಾಗವಹಿಸುವ ಸಾಧ್ಯತೆಯ ಪ್ರಶ್ನೆ. ತಕ್ಕ ಮಟ್ಟಿನ ಆರ್ಥಿಕ ಬಲ, ಶಿಕ್ಷಣ, ರಾಜಕೀಯ ಶಕ್ತಿ ಇತ್ಯಾದಿಗಳು ಆಧುನಿಕ ಸಂಸ್ಥೆಗಳಲ್ಲಿ ಭಾಗವಹಿಸಲು ಅಗತ್ಯವಿದೆ. ಅವುಗಳ ಆಧುನೀಕರಣದ ಆರಂಭದ ದಿನಗಳಲ್ಲಿ ಮೇಲ್ವರ್ಗಕ್ಕೆ ಸೀಮಿತವಾಗಿತ್ತು. ಹಾಗಾಗಿ ಅವರುಗಳ ಯಜಮಾನಿಕೆ ನಡೆಸಲು ಸಾಧ್ಯವಾಯಿತು. ಕೆಲ ಜಾತಿಯವರಲ್ಲೂ ತಕ್ಕ ಮಟ್ಟಿನ ತಾಯಾರಿ ಇದ್ದವರು ಆಧುನೀಕರಣದ ಲಾಭ ಪಡೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಅಂತವರ ಸಂಖ್ಯೆ ಮೇಲು ಜಾತಿಯವರಿಗೆ ಹೋಲಿಸಿದರೆ ತುಂಬಾ ಕಡಿಮೆ. ಆ ರೀತಿಲಾಭ ಪಡೆದವರು ಅದನ್ನು ಸಮಾಜದ ಇತರರಿಗೂ ದಾಟಿಸುವ ಕೆಲಸ ಮಾಡಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಪಾರಂಪರಿಕ ಸಂಸ್ಕೃತಿಯ ನಕಾರಾತ್ಮಕ ಅಂಶಗಳನ್ನು ಬಳಸಿ ಕೆಳವರ್ಗವನ್ನು ಹೊಸ ಬದಿಕಿನ ಸಾದ್ಯತೆಗಳಿಂದ ದೂರ ಇರಿಸಲಾಯಿತು. ಹೀಗೆ ನಮ್ಮ ಮೇಲ್ವರ್ಗ ಆಧುನಿಕ ವ್ಯವಸ್ಥೆಯನ್ನು ತಮ್ಮ ಸ್ವಂತದ ಹಿತಾಸಕ್ತಿಯ ರಕ್ಷಣೆಗೆ ಬಳಸುವ ಮೂಲಕ ಅದನ್ನು ನಿರುಪಯುಕ್ತ ಎಂದು ಸಾಬೀತುಪಡಿಸಿದೆ. ಇದರ ಅರ್ಥ ಆ ಸಂಸ್ಥೆಗಳಿಗೆ ಅಂತರ್‌ಗತವಾದ ದೋಷಗಳೇ ಇಲ್ಲವೆಂದಲ್ಲ. ಬೇಕಾದಷ್ಟಿವೆ. ಆದರೆ ಅವುಗಳ ದೋಷಗಳನ್ನು ಪಟ್ಟಿ ಮಾಡುವ ಭರದಲ್ಲಿ ಆ ಸಂಸ್ಥೆಗಳು ಕಾರ್ಯರೂಪಕ್ಕೆ ಬರುವ ಸಮಾಜದಲ್ಲಿನ ಲೋಪ ದೋಷಗಳು ಮರೆಯಾಗಬಾರದು. ಈ ಸಂಸ್ಥೆಗಳು ಕಾರ್ಯರೂಪಕ್ಕೆ ಬರುವ ಸಮಾಜದ ವಿಶ್ಲೇಷಣೆಗೂ ಮಹತ್ವ ಕೊಡಬೇಕೆಂದು ವಾದಿಸುವುದು ಕೂಡ ಈ ಅಧ್ಯಯನದ ಉದ್ದೇಶಗಳಲ್ಲಿ ಒಂದಾಗಿದೆ.

ಹಳ್ಳಿಯವರ ಹಣಕಾಸಿನ ಸಮಸ್ಯೆಯಗಳನ್ನು ಪರಿಹರಿಸಬೇಕಾದ ಸಹಕಾರಿ ಸಂಘವೇ ಇಂದು ಒಂದು ಸಮಸ್ಯೆಯಾಗಿ ಊರವರ ಮುಂದಿದೆ. ಅವರ ಹಣಕಾಸಿನ ಅವಶ್ಯಕತೆಯನ್ನು ಪೂರೈಸಲು ಹೆಚ್ಚು ಕಡಿಮೆ ಹಿಂದಿನದ್ದೇ ವ್ಯವಸ್ಥೆಯನ್ನು ನಂಬಬೇಕು. ಸಣ್ಣ ಪುಟ್ಟ ಕೈಸಾಲ ಮಾಡುವವರಿಗೆ ಹಳ್ಳಿಯಲ್ಲೇ ಸಾಲ ಕೊಡುವ ಕೆಲವು ಹಣವಂತರಿದ್ದಾರೆ. ದಿನಲೆಕ್ಕದಲ್ಲಿ ಬಡ್ಡಿ ಸಂದಾಯ ಮಾಡಬೇಕು. ಕೆಲವು ಸಂದರ್ಭದಲ್ಲಿ ಬಡ್ಡಿ ಮುರಿದುಕೊಂಡು ಉಳಿದ ಮೊತ್ತ ಮಾತ್ರ ಸಾಲಗಾರರಿಗೆ ಸಿಗುತ್ತದೆ. ಕೃಷಿಗೆ ಅಗತ್ಯವಾದ ಚರ ಬಂಡವಾಲ ಪೂರೈಕೆಗೆ ರೈತರು ಈಗಲೂ ಬಳ್ಳಾರಿ ಅಥವಾ ಕೊಪ್ಪಳದ ಸಗಟು ವ್ಯಾಪಾರಿಗಳನ್ನೇ ನಂಬಬೇಕು. ತಾವು ಬೆಳೆದ ಬೆಳೆಯನ್ನು ತಮಗೆ ಒಪ್ಪಿಸುತ್ತೇವೆ ಎಂಬ ಭರವಸೆಯಿಂದ ಈ ವ್ಯಾಪಾರಿಗಳಿಂದ ರೈತರು ಸಾಲ ಪಡೆಯುತ್ತಾರೆ. ಹಲವಾರು ವರ್ಷಗಳಿಂದ ಈ ವ್ಯವಹಾರ ನಡೆದಿರುವುದರಿಂದ ವ್ಯಾಪಾರಿ ಮತ್ತು ರೈತರ ಮಧ್ಯೆ ತಕ್ಕ ಮಟ್ಟಿನ ನಂಬಿಕೆ ಬೆಳೆದಿದೆ. ಈ ವ್ಯವಹಾರ ಈಗಲೂ ಯಶಸ್ವಿಯಾಗಿ ನಡೆಯುತ್ತಿದೆ. ಇನ್ನು ಸ್ಥಿರ ಬಂಡವಾಳದ ಪೂರೈಕೆಗೆ ಭೂ ಅಭಿವೃದ್ಧಿ ಬ್ಯಾಂಕಿದೆ. ಇಲ್ಲಿ ಪುನಃ ಬ್ಯಾಂಕಿನ ಅಧಿಕಾರಿ ಅಥವಾ ನಿರ್ದೇಶಕರ ಪರಿಚಯವಿದ್ದರೆ ಸಾಲ ಸುಲಭ. ಇಲ್ಲವಾದರೆ ಮೊತ್ತ ಮತ್ತು ಅವಧಿ ಎರಡೂ ಕೊಡ ಬೇಡಿಕೆಗೆ ಅನುಗುಣವಾಗಿ ಇರುವುದಿಲ್ಲ. ಕೆಲವು ಬಾರಿ ಸಾಲ ಸಿಗುವುದೇ ಇಲ್ಲ. ಹಳ್ಳಿಯಿಂದ ಮೇಟಿ ಕುಟುಂಬದವರೊಬ್ಬರು ಬ್ಯಾಂಕಿನ ನಿರ್ದೇಶಕರಾಗಿದ್ದಾರೆ. ಹೀಗಾಗಿ ಲಿಂಗಾಯತರ ಸಾಲದ ಅರ್ಜಿಗಳು ಜರೂರು ಕಾರ್ಯಗತಗೊಳ್ಳುತ್ತವೆ. ಇತರರು ಸ್ಥಳೀಯ ನಿರ್ದೇಶಕ ಪ್ರಭಾವ ಬಳಸಿ ಸಾಲ ಮಂಜೂರು ಮಾಡಿಸಿಕೊಳ್ಳಬೇಕಾಗುತ್ತದೆ.

ಇನ್ನು ಕೃಷಿಯ ಅಭಿವೃದ್ದಿಗೆ ಅನುಕೂಲವಾಗಲೆಂದು ರೈತರ ಪಂಪುಸೆಟ್ಟುಗಳಿಗೆ ಕಡಿಮೆ ದರದಲ್ಲಿ ಮತ್ತು ತ್ವರಿತವಾಗಿ ವಿದ್ಯುತ್ ಸಂಪರ್ಕ ಕೊಡಬೇಕುಂದು ನಿಯಮವಿದೆ. ಇದು ಯಾವ ರೀತಿಯಲ್ಲಿ ನಡೆಯುತ್ತದೆ ಎಂದು ಹಳ್ಳಿಯ ಒಂದು ಉದಾಹರಣೆಯೊಂದಿಗೆ ನೋಡುವ. ನಾಡಿಗರ ತಿಮ್ಮಪ್ಪನವರು (ಪರಿಶಿಷ್ಟ ವರ್ಗಕ್ಕೆ ಸೇರಿದವರು)೨೫/೨/೯೯ರಂದು ತಮ್ಮ ಹೊಸ ಬೋರ್‌ವೆಲ್ಲಿಗೆ ವಿದ್ಯುತ್ ಪೂರೈಕೆ ಬೇಕೆಂದು ಅರ್ಜಿ ಸಲ್ಲಿಸಿದರು. ಅರ್ಜಿಯೊಂದಿಗೆ ವಿದ್ಯುತ್ ಪೂರೈಕೆ ಮುಂಗಡವೆಂದು ರೂ. ೨೪೫೦ (ಬಿಲ್ ನಂ. ೧೬೧೪೦ ಮತ್ತು ೧೬೧೫೦) ಕಟ್ಟಿಸಿಕೊಳ್ಳಲಾಗಿದೆ. ವಾಸ್ತವದಲ್ಲಿ ಜೂನಿಯರ್ ಇಂಜಿನಿಯರ್ ರೂ. ೫೦೦೦ ಮೊತ್ತವನ್ನು ( ಬಿಲ್ಮೊತ್ತ ಮತ್ತು ತಮ್ಮ ಲಂಚ ಸೇರಿಸಿ) ತಿಮ್ಮಪ್ಪನವರಿಂದ ತಾ ೨೬/೨/೯೯ರಂದು ಪಡೆದಿದ್ದಾರೆ. ಇಲಾಖೆಗೆ ಸಲ್ಲಬೇಕಾದ ಮೊತ್ತ ಸಲ್ಲಿಸಿ ಕರೆಂಟ್ ಸಂಪರ್ಕ ಇವತ್ತು ಬರಬಹುದು ನಾಲೆ ಬರಬಹುದೆಂದು ಸುಮಾರು ಎರಡು ತಿಂಗಳು ಕಾದರು. ನಂತರ ಹೊಸಪೇಟೆಯ ಕೆ.ಇ.ಬಿ. ಕಚೇರಿಗೆ ಹೋಗಿ ವಿಚಾರಿಸಿದರು. ವಡ್ಡರಹಳ್ಳಿ ಬಳಿ ಮೂರು ಕಂಬ ಇಳಿಸಿದ್ದೇವೆ. ಅವುಗಳನ್ನು ನಿಮ್ಮ ಹೊಲಕ್ಕೆ ಸಾಗಿಸಿ ಎಂದು ಸಂಬಂಧ ಪಟ್ಟವರು ತಿಳಿಸಿದರು. ಮರುದಿವಸ ತಿಮ್ಮಪ್ಪನವರು ಆ ಮೂರು ಕಂಬಗಳನ್ನು ವಡ್ಡರ ಹಳ್ಳಿಯಿಂದ ತಮ್ಮ ಹೊಲಕ್ಕೆ ಸುಮಾರು ೩ ಕಿ.ಮೀ. ದೂರ ತಮ್ಮ ಸ್ವಂತ ಖರ್ಚಿನಲ್ಲಿ ಸಾಗಿಸದರು. ಕೆಲವು ದಿನ ಬಿಟ್ಟು ಕುಣಿ ತೋಡಲು ಇಬ್ಬರು ಬಂದರು. ಕುಣಿ ತೋಡಿ ಕಂಬ ನಿಲ್ಲಿಸಲು ಅವರಿಗೆ ರೂ. ೩೦೦ ಕೊಡಬೇಕಾಯಿತು. ಇಷ್ಟೆಲ್ಲಾ ಕೆಲಸಗಳಾದರೂ ತಂತಿ ಪೂರೈಕೆ ಆಗಲಿಲ್ಲ. ಹಲವಾರು ಬಾರಿ ಕೆ.ಇ.ಬಿ. ಕಚೇರಿಗೆ ಅಲೆದರು ತಾ.೧೦/೨/೨೦೦೦ಕ್ಕೆ ತಮ್ಮ ವಿದ್ಯುತ್ ಸಂಪರ್ಕದ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂದು ವಿಚಾರಿಸಲು ಕಚೇರಿಗೆ ಹೋದಾಗ ತಂತಿಯನ್ನು ಅವರ ಕೈಯಲ್ಲೇ ಕೊಟ್ಟರು. ಆ ತಂತಿ ಸುತ್ತನ್ನು ತಂದು ಮನೆಯಲ್ಲಿರಿಸಿದ್ದಾರೆ. ಮುಂಗಡ ಕಟ್ಟಿ ವರ್ಷ ಕಳೆದರೂ ವಿದ್ಯುತ್ ಸಂಪರ್ಕವಾಗಿಲ್ಲ. ಬೋರ್‌ವೆಲ್ಲ ಕೂಡಾ ತಮ್ಮ ಉಳಿತಾಯದಿಂದ ಮಾಡಿದ್ದಲ್ಲ; ಸಾಲದಿಂದ ತೆಗೆಸಿದ್ದು. ಆ ಸಾಲದ ಮೇಲಿನ ಬಡ್ಡಿ, ಇದರ ಜತೆಗೆ ಒಂದು ವರ್ಷದಿಂದ ನೀರಿಲ್ಲದ ಕೃಷಿ ಮಾಡಲು ಆಗದೆ ಆದ ನಷ್ಟ ಇವೆಲ್ಲವನ್ನು ಭರಿಸುವವರು ಯಾರು?

ತಿಮ್ಮಪ್ಪನವರು ಪರಿಶಿಷ್ಟ ವರ್ಗಕ್ಕೆ ಸೇರಿದವರು. ಅವರಿಗೆ ಕಾನೂನು ಪ್ರಕಾರ ತ್ವರಿತ ಗತಿಯಲ್ಲಿ ಮತ್ತು ಕಡಿಮೆ ದರದಲ್ಲಿ ಸೇವೆ ಸಿಗಬೇಕಿತ್ತು. ಆದರೆ ವಾಸ್ತವದಲ್ಲಿ ಅದಕ್ಕೆ ವಿರುದ್ಧವಾದುದೆ ನಡೆದಿದೆ. ಇದು ಹಳ್ಳಿಯಲ್ಲಿರುವ ಎಲ್ಲರ ಕತೆ ಎಂದು ಹೇಳಲಾಗುವುದಿಲ್ಲ. ಕೆ.ಇ.ಬಿ. ಕಛೇರಿಯಲ್ಲಿ ಅಥವಾ ಇತರ ಕಚೇರಿಯಲ್ಲಿ ಇರುವ ಅಧಿಕಾರಿಗಳ ಪರಿಚಯವಿದ್ದರೆ ಕೆಲಸ ಸುಲಭದಲ್ಲಿ ಆಗುತ್ತದೆ. ರಾಜಕಾರಣಿಗಳ ಪರಿಚಯವಿದ್ದರೂ ನಡಯುತ್ತೆ. ತಿಮ್ಮಪ್ಪನವರು ಕೂಡಾ ಕಡೆಗೆ ಅದೇ ಮಾರ್ಗ ಹಿಡಿದಿದ್ದಾರೆ. ಹೊಸಪೇಟೆ ಎಂ.ಎಲ್.ಎ. ನಾಯಕರ ಜಾತಿಯವರು. ತಿಮ್ಮಪ್ಪನರು ಅವರನ್ನು ಕಂಡು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಅವರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಯೋಜನೆಗಳು ಜಾರಿ ಬರುವ ಈ ಕ್ರಮದಲ್ಲಿ ಕೆಳ ಜಾತಿ/ವರ್ಗಗಳು ಲಾಭ ಪಡಿಯುವ ಸಾಧ್ಯತೆಗಳು ತುಂಬಾ ಕಡಿಮೆ. ಸಣ್ಣ ಮತ್ತು ಅತಿ ಸಣ್ಣ ರೈತರು ಸಕ್ರಿಯವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಕೃಷಿಯಿಂದ ಸಂಪತ್ತಿನ ಮರುವಿತರಣೆ ಸಾಧ್ಯ. ಆದರೆ ವಿಕೃತ ಆಧುನೀಕರಣದಿಂದ ಮತ್ತು ಹಳ್ಳಿಯ ಏಣಿ ಶ್ರೇಣಿ ವ್ಯವಸ್ಥೆಯಿಂದಾಗಿ ಸಣ್ಣ ಮತ್ತು ಅತಿ ಸಣ್ಣ ಕೃಷಿಕರು ಮತ್ತು ಭೂರಹಿತ ಕಾರ್ಮಿಕರು ಅವರ ಏಳಿಗೆಗಾಗಿ ಇರುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಲು ಆಗುತ್ತಿಲ್ಲ. ಪಾರಂಪರಿಕವಾಗಿ ಬಲಿಷ್ಠರಾಗಿರುವವರಿಗೆ ತಮ್ಮ ಆಸಕ್ತಿಗಳನ್ನು ಪೂರೈಸಿಕೊಳ್ಳಲು ಈ ಸ್ಥಿತಿ ಅನುಕೂಲವಾಗಿದೆ. ಇಂತಹ ಸಂದರ್ಭದಲ್ಲಿ ನೀರಾವರಿ ಇಲ್ಲ, ಬೋರ್‌ವೆಲ್ಲ ತೆಗೆಸಿ ಕೃತಕ ನೀರಾವರಿ ಮಾಡಿಸಿಕೊಳ್ಳುವ ಎಂದರೆ ಸಾಲದ ವ್ಯವಸ್ಥೆ ಇಲ್ಲ. ಹೇಗೋ ಹೊಂದಾಣಿಕೆ ಮಾಡಿಕೊಂಡು ಬೋರ್‌ವೆಲ್ ತೆಗೆಸಿದರೆ ವಿದ್ಯುತ್ ಸಂಪರ್ಕಕ್ಕೆ ವರ್ಷಗಟ್ಟಲೆ ಕಾಯಬೇಕು ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಯಲ್ಲಿ ಮುಂದುವರಿಯುವ ಭರವಸೆ ಇಟ್ಟುಕೊಳ್ಳುವುದಾದರೂ ಹೇಗೆ? ಅವರ ದಿನ ನಿತ್ಯದ ಖರ್ಚನ್ನು ಭರಿಸುವ ಯಾವುದೇ ಕೃಷಿಯೇತರ ಚಟುವಟಿಕೆ ಸಿಕ್ಕಿದರೂ ಅದರತ್ತ ಆಕರ್ಷಿತರಾಗುವುದು ಸಹಜ. ಪಿ.ಕೆ.ಹಳ್ಳಿಯಲ್ಲೂ ಇದೇ ಆಯಿತು. ಗಣಿಗಾರಿಕೆ ಆರಂಭವಾದಂತೆ ಹೆಚ್ಚು ಹೆಚ್ಚು ಜನ ಅದರತ್ತ ಆಕರ್ಷಿತರಾದರು.

 

[1]ತಾಲ್ಲೂಕು ಕಚೇರಿ, ತಾಲ್ಲೂಕಿನಲ್ಲಿ ಸುರಿದ ಮಳೆಯ ಕ್ರೋಢಿಕೃತ ಅಂಕಿ ಅಂಶಗಳು, ಹೊಸಪೇಟೆ: ಅಂಕಿ ಅಂಶಗಳ ಅಧಿಕಾರಿ, ೧೯೭೧-೧೯೯೮.

[2]ವಲಸೆ ಬಗ್ಗೆ ಮಾಹಿತಿ ಕೊಡುವ ಪುಸ್ತಕಗಳು-೧. ಜಿ.ಕೆ.ಲಿಸೆನ್ ಮತ್ತು ಇತರರು (ಸಂಪಾದಿಸಿದ), ವಿಮೆನ್, ಮೈಗ್ರೆಂಟ್ಸ್ ಆಂಡ್ ಟ್ರೈಬಲ್ಸ್: ಸರ್ವಯಿಲ್ ಸ್ಟ್ರೇಟನಿ ಇನ್ ಏಶಿಯಾ, ನ್ಯೂ ಡೆಲ್ಲಿ: ಮನೋಹರ್ ಪಬ್ಲಿಷರ್ಸ್, ೧೯೮೯ ಮತ್ತು ೨. ಡಿಸೋಜ (ಸಂಪಾದಿಸಿದ), ದಿ ಇಂಡಿಯನ್ ಸಿಟಿ: ಪವರ್ಟಿ, ಇಕಲಾಜಿ ಆಂಡ್ ಅರ್ಬನ್ ಡೆವಲಪ್ಮೆಂಟ್, ನ್ಯೂಡೆಲ್ಲಿ: ಮನೋಹರ್ ಪಬ್ಲಿಷರ್ಸ್, ೧೯೭೯.

[3]ವಿವರಗಳಿಗೆ ಚಂದ್ರಶೇಖರ ದಾಮ್ಲೆ, ಲೇಂಡ್ ರಿಪೋರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿತ್ತ ಆಫ್ ಸಕ್ಸ್‌ಸ್, ಎಕನಾಮಿಕ್ ಆಂಡ್ ಪೊಲಿಟಕಲ್ ವೀಕ್ಲಿ, ಸಂಚಿಕೆ ೨೪, ಸಂಖ್ಯೆ ೩೩, ಆಗೋಸ್ತ್ ೧೯೮೯, ಪುಟ ೧೮೯೬-೧೯೦೬ ಮತ್ತು ಎ.ಆರ್. ರಾಜಪುರೋಹಿತ್ (ಸಂಪಾದಿಸಿದ), ಲೇಂಡ್ ರಿಫೋರ್ಮ್ಸ್ ಇನ್ ಇಂಡಿಯಾ, ನ್ಯೂಡೆಲ್ಲಿ: ಆಶಿಶ್ ಪಬ್ಲಿಷಿಂಗ್ ಹೌಸ್, ೧೯೮೪.

[4]ಕೃಷಿಯ ಆಧುನೀಕರಣಕ್ಕೆ ಸರಕಾರ ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಯಾವ ವರ್ಗಕ್ಕೆ ಅನುಕೂಲವಾಯಿತು ಎನ್ನುವ ವಿವರಗಳಿವೆ ಈ ಕೆಳಗಿನ ಲೇಖನಗಳನ್ನು ಮತ್ತು ಪುಸ್ತಕಗಳನ್ನು ನೋಡಬಹುದು-೧. ರುಡೊಲ್ಪ್ ಆಂಡ್ ರುಡೊಲ್ಪ್, ಇನ್ ಪರ್ಸುಟ್ ಆಫ್ ಲಕ್ಷ್ಮೀ: ದಿ ಪೊಲಿಟಿಕಲ್ ಎಕನಾಮಿ ಆಫ್ ದಿ ಇಂಡಿಯನ್ ಸ್ಟೇಟ್, ಚಿಕಾಗೊ: ಚಿಕಾಗೊ ಯುನಿವರ್ಸಿಟಿ ಪ್ರೆಸ್, ೧೯೮೭ ೨. ಮರಿಯೊ ರುಟೇನ್, ಸೋಶಿಯಲ್ ಪ್ರೊಫೈಲ್ ಆಫ್ ಎಗ್ರಿಕಲ್ಚರಲ್ ಅಂತ್ರಪ್ರನರ್ಸ್: ಎಕನಾಮಿಕ್ ಬಿಹೇಯರ್ ಆಂಡ್ ಲೈಫ್ ಸ್ಟೈಲ್ ಆಫ್ ಮಿಡ್ಲ್-ಲಾರ್ಜ್ ಫಾಮರ್ರ‍್ಸ್ ಇನ್ ಸೆಂಟ್ರಲ್ ಗುಜರಾರ್, ಎಕನಾಮಿಕ್ ಆಂಡ್ ಪೋಲಿಟಿಕಲ್ ವೀಕ್ಲಿ, ಸಂಚಿಕೆ ೨೧, ಸಂಖ್ಯೆ ೧೩, ೧೯೮೬, ಪುಟ ೧೫-೨೩ ಮತ್ತು ೩. ರುದ್ರ ಎ, “ಬಿಗ್ ಫಾಮರ್ರ‍್ಸ್ ಆಫ್ ಪಂಜಾಬ್: ಸೆಕೆಂಡ್ ಇನ್‌ಸ್ಟಾಲ್‌ಮೆಂಟ್ ಆಫ್ ರಿಸಲ್ಟ್ಸ್‌” ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಸಂಚಿಕೆ ೪, ಸಂಖ್ಯೆ ೫೭, ೧೯೬೯ ಪುಟ ೨೧೩-೧೯.

[5]ಕೃಷಿಯ ಆಧುನೀಕರಣಕ್ಕೆ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿತು. ಆದರೆ ಅವುಗಳು ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಪಾಲಿಗೆ ಗಗನ ಕುಸುಮಗಳಾಗಿದ್ದವು. ಅವರಿಗೆ ಮಾರುಕಟ್ಟೆ ಮತ್ತು ಅಲ್ಲಿನ ವ್ಯವಹಾರ ಮುಕ್ತವೂ ಆಗಿರಲಿಲ್ಲ. ಸ್ವತಂತ್ರವೂ ಆಗಿರಲಿಲ್ಲ. ಬಹುತೇಕ ಸಂದರ್ಭದಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಬಲಿಯಾಗಿ ಮಾರುಕಟ್ಟೆಯಲ್ಲಿ ವ್ಯವಹರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಈ ವಿವರಗಳನ್ನು ನೀಡುವ ಸಾಕಷ್ಟು ಲೇಖನಗಳು ಮತ್ತು ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸಿದ್ದೇನೆ. ೧. ಪ್ರಸಾದ್. ಪಿ., “ರಿಯಕ್ಚನರಿ ರೋಲ್ ಆಫ್ ಯುಸರ್ಸ್: ಕ್ಯಾಪಿಟಲ್ ಇನ್ ರೂರಲ್ ಇಂಡಿಯಾ”, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಸಂಚಿಕೆ ೯, ಸಂಖ್ಯೆ ೩೭, ೩೩ ಆಂಡ್ ೩೪, ೧೯೭೪ ಪುಟ ೧೩೦೫-೮, ೨. ಕೃಷ್ಣ ಭಾರಧ್ವಾಜ್, ಎಕ್ಯುಮ್ಯಲೇಷನ್, ಎಕ್ಸಚೇಜ್ ಆಂಡ್ ಡೆವಲಪ್‌ಮೆಂಟ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಷನ್ಸ್, ೧೯೯೪, ೩. ಪ್ರಣಾಬ್ ಬರ್ದಾನ್, ಪೊಲಿಟಿಕಲ್ ಎಕನಾಮಿ ಆಪ್ ಡೆವಲಪ್‌ಮೆಂಟ್ ಇನ್ ಇಂಡಿಯಾ, ಆಕ್ಸ್‌ಫರ್ಡ್: ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್. ೧೯೮೪, ೪. ಜಿ.ಎಸ್.ಬಲ್ಲ (ಸಂಪಾದಿಸಿದ), ಎಕನಾಮಿಕ್ ಲಿಬರಲೈಸೇಷನ್ ಆಂಡ್ ಇಂಡಿಯನ್ ಎಗ್ರಿಕಲ್ಚರ್, ನ್ಯೂಡೆಲ್ಲಿ: ಇನ್‌ಸ್ಟಿಟ್ಯುಟ್ ಫಾರ್ ಸ್ಟಡೀಸ್ ಇನ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್,೧೯೯೪.