ಬದುಕಿಗೆ ಹೋಗಿದ್ದಾರೆ

ಒಂದು ವರ್ಷದ ಕೆಳಗೆ ಇದೇ ಹಳ್ಳಿಗೆ ನಿರ್ಮಲ ಕರ್ನಾಟಕ ಯೋಜನೆಯ ಮೌಲ್ಯ ಮಾಪನಕ್ಕಾಗಿ ಬಂದಿದ್ದೆ.[1] ಮನೆಯೊಂದಕ್ಕೆ, ಮನೆ ಅನ್ನುವುದು ಸರಿಯಲ್ಲ; ಅದೊಂದು ಜೋಪಡಿ, ಭೇಟಿ ನೀಡಿದಾಗ ಹಿರಿಯರ್ಯಾರೂ ಜೋಪಡಿಯಲ್ಲಿ ಇರಲಿಲ್ಲ; ಜೋಪಡಿ ಹೊರಗೆ ಸುಮಾರು ಏಳೆಂಟು ವರ್ಷದ ಪುಟ್ಟ ಹುಡುಗಿ ಮತ್ತು ಸಿಂಬಳ ಸುರಿಸುತ್ತಿದ್ದ ಅವಳ ತಮ್ಮ ಆಟವಾಡುತ್ತಿದ್ದರು. ‘ನಿಮ್ಮ ಅಪ್ಪ ಅಮ್ಮ ಎಲ್ಲಿ’ ಎಂದು ವಿಚಾರಿಸಿದೆ. ‘ಅವರು ಬದುಕಿಗೆ ಹೋಗಿದ್ದಾರೆ’ ಎಂದಳು ಆ ಪುಟ್ಟ ಹುಡುಗಿ. ನನಗೆ ಆ ಹುಡುಗಿಯ ಬದುಕಿಗೆ ಹೋಗಿದ್ದಾರೆ ಎನ್ನುವ ಎರಡು ಪದಗಳು ಅರ್ಥವೇ ಆಗಿರಲಿಲ್ಲ. ಜತೆಯಲ್ಲಿದ್ದ ನನ್ನ ಸಹೋದ್ಯೋಗಿ ವಿವರಿಸಿದರು, ಬದುಕಿಗೆ ಅಂದರೆ ಕೆಲಸಕ್ಕೆ (ದುಡಿಮೆಗೆ ಅಥವಾ ಕೂಲಿಗೆ) ಹೋಗಿದ್ದಾರೆ ಎಂದು. ಅವತ್ತು ಬದುಕಿನ ವಿಚಾರ ಅಲ್ಲಿಂದ ಮುಂದೆ ಸಾಗಿರಲಿಲ್ಲ. ಗ್ರಾಮ ಪಂಚಾಯತ್ ಅಧ್ಯಯನಕ್ಕೆ ಈ ವರ್ಷ ಅದೇ ಹಳ್ಳಿ ಆಯ್ಕೆಯಾಗಿದೆ. ಪುನಃ ಆ ಹಳ್ಳಿಯನ್ನು ನೋಡುವ, ಅರ್ಥಮಾಡಿಕೊಳ್ಳುವ ಅವಕಾಶ ದೊರಕಿತು. ಹಿಂದಿನ ಬಾರಿಯಂತೆ ಮಿಂಚಿನಂತೆ ಹಾದು ಹೋಗುವ ಭೇಟಿಯಲ್ಲ ಇದು. ಸತತವಾಗಿ ಎರಡರಿಂದ ಮೂರು ತಿಂಗಳು ಹಳ್ಳಿಯ ಸಂದುಗೊಂದುಗಳನ್ನು ಬಿಡದೆ ಸುತ್ತಾಡುವ ಭೇಟಿಯಿದು. ಈಗ ನನಗೆ ಆ ಪುಟ್ಟ ಹುಡುಗಿಯ ಬದುಕಿಗೆ ಹೋಗಿದ್ದಾರೆ ಎನ್ನುವ ಪದಗಳು ಸ್ವಲ್ಪ ಸ್ವಲ್ಪವಾಗಿ ಅರ್ಥವಾಗುತ್ತಿದೆ. ಅವಳ ಅಪ್ಪ ಅಮ್ಮನ ಹಾಗೆ ಇಲ್ಲಿ ಹಲವಾರು ಕಂದಮ್ಮಗಳ ಅಪ್ಪ ಅಮ್ಮಗಳು ಬದುಕಿಗಾಗಿ ಮಾಡುವ ಹೋರಾಟ ಕಣ್ಣ ಮುಂದೆ ರಾಚುವಂತೆ ನಿಂತಿದೆ. ಹೆದ್ದಾರಿಯ ಪಕ್ಕದಲ್ಲಿ ನಿಂತರೆ ಜಿ.ಜಿ. ಬ್ರದರ್ಸ್ ಅವರ ಟ್ರಾಕ್ಟರುಗಳಲ್ಲಿ ರೆಡಾಕ್ಸೈಡ್ ಗಣಿ ಕೆಲಸದ ಮಹಿಳಾ ಕಾರ್ಮಿಕರನ್ನು ತಂದು ಹಳ್ಳಿಯಲ್ಲಿ ಇಳಿಸುವ – ಇಳಿಸುವ ಎನ್ನುವುದು ಸರಿಯಲ್ಲ; ಡಂಪ್ ಮಾಡುವ – ದೃಶ್ಯ ಸಾಮಾನ್ಯ. ಇವರ ಮೈ ಕೈ, ಬಟ್ಟೆ ಬಣ್ಣವೆಲ್ಲ ಕೆಂಪಾಗಿ ಒಂದು ರೀತಿಯ ಕೆಂಭೂತಗಳಂತೆ ತೋರುತ್ತಾರೆ. ಇದೇ ಟ್ರಾಕ್ಟರ್ ಅಥವಾ ಲಾರಿಗಳು ಇವರನ್ನು ಬೆಳಿಗ್ಗೆ ಕೆಲಸದ ಸ್ಥಳಕ್ಕೆ ಕೊಂಡೊಯ್ಯುವಾಗ ಇವರುಗಳು ನಮ್ಮ ನಿಮ್ಮ ಹಾಗೆ ಮನುಷ್ಯ ಬಣ್ಣದವರೇ ಆಗಿರುತ್ತಾರೆ. ಕೆಲಸ ಮುಗಿಸಿ ಬರುವಾಗ ಈ ರೀತಿ ಕೆಂಭೂತಗಳಾಗಿ ಬದಲಾಗುತ್ತಾರೆ.

ಅದೇ ರೀತಿ ಸ್ಟೇಷನ್ ರಸ್ತೆಯಲ್ಲಿ ನಿಂತರೆ ವಾರದಲ್ಲಿ ಕನಿಷ್ಠ ಎಂದರೆ ಎರಡು ದಿನ ಕಪ್ಪು ಬಣ್ಣದಿಂದ ಸ್ನಾನ ಮಾಡಿದವರನ್ನು ನೋಡಬಹುದು. ಸುಮಾರು ೫೦೦ ದಿಂದ ೭೫೦ ರಷ್ಟು ಸಂಖ್ಯೆಯ ಹಳ್ಳಿಗರು – ಹರಿಜನರು, ನಾಯಕರು, ವಡ್ಡರು ಮತ್ತು ಇತರ ಕೆಳಜಾತಿಯವರೇ ಹೆಚ್ಚಿದ್ದಾರೆ – ವ್ಯಾಗನ್ ಲೋಡಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಇಲ್ಲಿ ಗಂಡ, ಹೆಂಡತಿ ಮತ್ತು ಅದಿರಿನ ಬುಟ್ಟಿ ಎತ್ತಲು ಶಕ್ತಿ ತುಂಬಿದ ಮಕ್ಕಳು ಎಲ್ಲರೂ ಕೆಲಸಗಾರರೇ. ಕಪ್ಪು ಅದಿರನ್ನು ಬುಟ್ಟಿಯಲ್ಲಿ ತುಂಬಿ ರೈಲು ಡಬ್ಬಕ್ಕೆ ತುಂಬುವ ಭರದಲ್ಲಿ ಇವರುಗಳಿಗೆ ಅದಿರಿನ ಸ್ನಾನವಾಗುತ್ತದೆ. ಈ ದುಡಿಮೆ ಇವರ ಮೈ ಬಣ್ಣ ಬದಲಾಯಿಸಿದರೆ ಚಿಂತಿಲ್ಲ. ದಿನವಿಡೀ ಅದಿರು ಮತ್ತು ಅದರ ಧೂಳಿನ ಸಹವಾಸದಿಂದ ಇವರಲ್ಲಿ ಬಹುತೇಕ ಮಂದಿ ಶ್ವಾಸಕೋಶದ ರೋಗದಿಂದ ಬಳಲುತ್ತಿದ್ದಾರೆ.[2] ಶ್ವಾಸಕೋಶದ ರೋಗ ವಿಪರೀತವಾಗಿ ದುಡಿಯಲು ಅಸಾಧ್ಯವೆಂದಾಗ ಇವರು ವೈದ್ಯರ ಬಳಿ ಹೋಗುತ್ತಾರೆ. ಮದ್ದಿನ ಜತೆ ವಿಶ್ರಾಂತಿ ಅಗತ್ಯ ಈ ರೋಗಕ್ಕೆ. ಹಾಗೆಂದು ಮನೆಯಲ್ಲಿ ಮಲಗಿದರೆ ಮಕ್ಕಳಿಗೆ ಮತ್ತು ಇವರಿಗೆ ಊಟ ಹಾಕುವವರು ಯಾರು? ಹೀಗೆ ಅನಾರೋಗ್ಯದ ಮಧ್ಯೆಯೂ ದುಡಿಯುವುದು ಅನಿವಾರ್ಯ. ಇಲ್ಲಿಯ ದುಡಿಮೆ ಮತ್ತು ಬದುಕಿಗೆ – ಉಸಿರಾಡುವುದಕ್ಕೆ – ನೇರ ಸಂಬಂಧವಿದೆ. ಬದುಕಿ ಉಳಿಯಬೇಕಾದರೆ ದುಡಿಯಲೇಬೇಕು. ಆ ದುಡಿತವಾದರೂ ಎಂತಹ ದುಡಿತ – ಇಂಚು ಇಂಚಾಗಿ ಇಚರ ಬದುಕನ್ನು ತಿನ್ನುವ ದುಡಿತ. ಪ್ರತಿ ಒಂದು ದಿನದ ಬದುಕಿಗೆ ತಮ್ಮ ಆಯುಷ್ಯದ ಬಹುಪಾಲನ್ನು ದಾರೆ ಎರೆಯಬೇಕಾಗಿದೆ. ಅದಕ್ಕಾಗಿ ಈ ಅಧ್ಯಾಯದ ತಲೆಬರಹ ಬದುಕು.

ಹೀಗೆಂದ ಮಾತ್ರಕ್ಕೆ ಇಡೀ ಹಳ್ಳಿಯೇ ಗಣಿಗಾರಿಕೆಯನ್ನು ನಂಬಿದೆ ಎನ್ನುವಂತಿಲ್ಲ. ಕೃಷಿ ಇಲ್ಲಿನ ಮತ್ತೊಂದು ಕಸುಬು.[3] ಲಿಂಗಾಯತರ ಮತ್ತು ಕುರುಬರ ಬಹುತೇಕ ಕುಟುಂಬಗಳು ಕೃಷಿಯನ್ನೇ ನಂಬಿಕೊಂಡಿವೆ. ಇದರ ಅರ್ಥ ಉಳಿದ ಜಾತಿಯಲ್ಲಿ ಕೃಷಿಕರಿಲ್ಲ ಅಥವಾ ಲಿಂಗಾಯತರು ಮತ್ತು ಕುರುಬರಲ್ಲಿ ಗಣಿ ಕಾರ್ಮಿಕರು ಇಲ್ಲವೆಂದಲ್ಲ. ಲಿಂಗಾಯತರ ಮತ್ತು ಇತರ ಜಾತಿಗಳ ಸಣ್ಣ ಮತ್ತು ಅತಿ ಸಣ್ಣ ರೈತರು ಮಳೆ ಬಂದರೆ ಕೃಷಿ ಮಾಡುತ್ತಾರೆ. ಮಳೆ ಕೈ ಕೊಟ್ಟರೆ ಒಪ್ಪೊತ್ತಿನ ಊಟಕ್ಕೆ ಬೇರೆ ದಾರಿ ಹಿಡಿಯಲೇ ಬೇಕು. ಅದು ವ್ಯಾಗನ್ ಲೋಡಿಂಗ್ ಇರಬಹುದು ಅಥವಾ ಗಣಿ ಕೆಲಸನೂ ಆಗಬಹುದು. ಅದೇ ರೀತಿ ನಾಯಕರ, ವಡ್ಡರ, ಹರಿಜನರ ಬೆರಳೆಣಿಕೆಯಷ್ಟು ಮಂದಿ (ಮಧ್ಯಮ ಗಾತ್ರದ ಹಿಡುವಳಿದಾರರು) ಕೃಷಿಕರಾಗಿದ್ದಾರೆ. ಜಾತಿ ಮತ್ತು ಕಸುನಿನ ಸಂಬಂಧದ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದೇ ಇಲ್ಲಿ ಕಷ್ಟವಾಗಿದೆ. ಇದರ ಮಧ್ಯೆಯು ಒಂದು ಸ್ಥೂಲ ವಿವರಣೆ ಕೊಡುವುದಾದರೆ ಈ ರೀತಿ ಹೇಳಬಹುದು. ಸಮಾಜದ ಮೇಲು ಮತ್ತು ಮಧ್ಯಮ ಶ್ರೇಣಿಗೆ ಸೇರುವ ಲಿಂಗಾಯತರು ಮತ್ತು ಕುರುಬರು ಹೆಚ್ಚಿನ ಸಂಖೈಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹರಿಜನರ, ನಾಯಕರ ಮತ್ತು ವಡ್ಡರ ಬಹುತೇಕ ಕುಟುಂಬಗಳು ಗಣಿಗಾರಿಕೆ ಮತ್ತು ವ್ಯಾಗನ್ ಲೋಡಿಂಗನ್ನೆ ನಂಬಿವೆ.[4]

ಖಾಲಿ ಬಿದ್ದ ಆಗೇವು, ಅಂಕಣಗಳು

ಕೃಷಿ ಹಿಂದಿನಷ್ಟು ಮಹತ್ವ ಹೊಂದಿಲ್ಲ, ಇದನ್ನು ಕೃಷಿ ಮತ್ತು ಕೃಷಿಯೇತರ ಚಟುನಟಿಕೆಗಳಲ್ಲಿ ತೊಡಗಿಸಿಕೊಂಡವರ ಅಂಕಿ ಅಂಶಗಳಿಂದ ತಿಳಿಯಬಹುದು. ಇದರ ಜತೆಗೆ ಹಳ್ಳಿಯ ಮನೆಗಳು, ಮನೆಯೊಳಗಿನ ಸ್ಥಳದ ಉಪಯೋಗ ಮತ್ತು ಬಳಕೆಯಾಗದೆ ಬಿದ್ದಿರುವ ಕೃಷಿ ಉಪಕರಣಗಳಿಂದಲೂ ಕೃಷಿ ಹಿಂದಕ್ಕೆ ಸರಿಯುತ್ತಿರುವುದನ್ನು ತಿಳಿಯಬಹುದು.[5] ಕೃಷಿಕರ ಮನೆಯ ಮಾದರಿ ಇಂತಿದೆ. ಅಂಗಳದ ಒಂದು ಮಗ್ಗುಲಿಗೆ ಆಗೇವು. ಮನೆಯ ಪ್ರವೇಶ ಬಾಗಿಲಿನ ಹೊರ ಮತ್ತು ಒಳಭಾಗದ ಎರಡೂ ಮಗ್ಗುಲಿಗೂ ನೆಲದಿಂದ ಎರಡು ಅಥವಾ ಮೂರು ಅಡಿ ಎತ್ತರದ ಕಟ್ಟೆಗಳಿವೆ. ಒಳಭಾಗದ ಕಟ್ಟೆಯ ಮೂಲೆಯಲ್ಲಿ ಗೋಡೆಗೆ ತಾಗಿಕೊಂಡಂತೆ ಕಣಜ. ಕಟ್ಟೆಗಳ ನಂತರ ನೆಲದ ಮಟ್ಟದಲ್ಲಿ ದನಗಳನ್ನು ಕಟ್ಟುವ ಅಂಕಣವಿದೆ. ಅಂಕಣದ ಮಧ್ಯದಲ್ಲಿ ಮೇವು ಹಾಕಲು ಗೋದಲಿ. ಅಂಕಣದ ನಂತರ ಪಡಶಾಲೆ. ಇಲ್ಲಿಂದ ನಂತರ ಪುನಃ ಕಟ್ಟೆಗಳ ಎತ್ತರಕ್ಕೆ ನೆಲ ಇರುತ್ತದೆ. ಪಡಶಾಲೆಗೆ ತಾಗಿಕೊಂಡಂತೆ ಅಡುಗೆ ಕೋಣೆ, ಮತ್ತೊಂದು ಭಾಗಕ್ಕೆ ದೇವರ ಕೋಣೆ. ಅಡುಗೆ ಕೋಣೆಯ ಒಂದು ಮೂಲೆಯಲ್ಲಿ ಸುಮಾರು ಒಂದು ಅಥವಾ ಎರಡು ಅಡಿ ಎತ್ತರದ ಗೋಡೆ ಬಚ್ಚಲು ಮನೆಯನ್ನು ಪ್ರತ್ಯೇಕಿಸುತ್ತದೆ. ಶಾಲೆಗೆ ಹೋದ ಅಥವಾ ಹೋಗುವ ಯುವಕರಿದ್ದ ಮನೆಯಲ್ಲಿ ಈ ಬಚ್ಚಲು ಮನೆಯ ಗೋಡೆ ಆಳೆತ್ತರ ಎದ್ದು ಅಡುಗೆ ಕೋಣೆಯಿಂದ ಪ್ರತ್ಯೇಕ ಇದೆ.

ಅಂಗಳದಲ್ಲಿರುವ ಅಗೇವು ಸುಮಾರು ಆರು ಅಡಿ ಆಳ ಮತ್ತು ಎರಡರಿಂದ ಮೂರು ಅಡಿ ಅಗಲವಿದೆ. ಕೃಷಿಯೇ ಮುಖ್ಯ ಕಸುಬಾಗಿರುವ ದಿನಗಳಲ್ಲಿ ರಾಗಿ, ಜೋಳ ಅಥವಾ ಇತರ ಧಾನ್ಯಗಳ ಶೇಖರಣೆ ಆ ಅಗೇವುಗಳಲ್ಲಿ. ಈಗ ಬಹುತೇಕ ಮನೆಗಳಲ್ಲಿ ಅಗೇವುಗಳು ಖಾಲಿ ಬಿದ್ದಿವೆ. ಕೆಲವು ಕಡೆ ಮಣ್ಣಿನಿಂದ ತುಂಬಿ ಮುಚ್ಚಿದ್ದಾರೆ. ಆಗೇವು ಉಪಯೋಗಿಸದಿರುವುದಕ್ಕೆ ಕೃಷಿ ಕಡಿಮೆಯಾಗಿರುವುದು ಒಂದು ಕಾರಣ ಮಾತ್ರ. ಆದರೆ ಇದು ಏಕ ಮಾತ್ರ ಕಾರಣವಲ್ಲ. ಕೆಲವು ರೈತರು ಇಂದು ಕೂಡಾ ದೊಡ್ಡ ಪ್ರಮಾಣದಲ್ಲಿ ಬೇಸಾಯ ಮಾಡುತ್ತಿದ್ದರೂ ಆಗೇವುಗಳನ್ನು ಉಪಯೋಗಿಸುತ್ತಿಲ್ಲ. ಅದಕ್ಕೆ ಕಾರಣಗಳು ಹಲವು. ಊರು ಬೆಳೆದು ಜನಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾಗಿವೆ.[6] ಜನಸಂಖ್ಯೆ ಹೆಚ್ಚಾದಂತೆ ಅವರು ಬಳಸಿ ಚರಂಡಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ವ್ಯವಸ್ಥೆ ಇದ್ದಲ್ಲಿ ಅದನ್ನು ಕ್ಲೀನಾಗಿ ಇಡುವುದಿಲ್ಲ. ಸಮಸ್ಯೆಯನ್ನು ಬಿಗಡಾಯಿಸಲು ಇಷ್ಟು ಸಾಲದೆಂಬಂತೆ ಜನರು ತಮ್ಮ ಮನೆಗಳನ್ನು ಶುಚಿಯಾಗಿಡುವ ಭರದಲ್ಲಿ ಮನೆಯ ಕಸ ಕಡ್ಡಿಗಳನ್ನು ಚರಂಡಿಗೆ ಸುರಿಯುತ್ತಾರೆ. ಇವೆಲ್ಲದರ ಒಟ್ಟು ಫಲ ಕೊಳಚೆ ನೀರು ಚರಂಡಿಗಳಲ್ಲಿ ಸಂಗ್ರಹವಾಗುವುದು. ಈ ಚರಂಡಿಗೆ ತಾಗಿಕೊಂಡಂತೆ ಅಂಗಳ ಮತ್ತು ಅಗೇವು ಇರುವುದರಿಂದ ಚರಂಡಿ ನೀರು ಸೋರಿ ಅಗೇವುಗಳಿಗೆ ಸೇರುತ್ತದೆ. ಹೀಗೆ ಬೆಳೆಯುತ್ತಿರುವ ಹಳ್ಳಿ ರಸ್ತೆ ಬದಿ ಅಗೇವುಗಳನ್ನು ಬಳಸದಿರುವುದಕ್ಕೆ ಒಂದು ಕಾರಣ.

ಇದರ ಜತೆಗೆ ಆಹಾರ ಬೆಳೆ ಉತ್ಪದಾನೆ ಕಡಿಮೆಯಾಗಿ ವಾಣಿಜ್ಯ ಬೆಳೆ ಹೆಚ್ಚಾಗಿರುವುದು ಎರಡನೇ ಕಾರಣ. ಉಳ್ಳಾಗಡ್ಡಿ, ನೆಲೆಗಡಲೆ, ಎಳ್ಳು, ಸೂರ್ಯಕಾಂತಿ, ಹತ್ತಿ ಇತ್ಯಾದಿ ವಾಣಿಜ್ಯ ಬೆಳೆಗಳು ಇಂದು ಹೆಚ್ಚುತ್ತಿವೆ. ಇವುಗಳನ್ನು ಸಂಗ್ರಹಿಸಿಡಲು ಮನೆಯೊಳಗಿನ ಕಣಜಗಳು ಬಳಕೆಯಾಗುತ್ತಿವೆ. ಇನ್ನು ಕೆಲವು ಮನೆಗಳಲ್ಲಿ ಹಾಗೆ ಖಾಲಿ ಬಿದ್ದಿರುವ ಮತ್ತೊಂದು ಸ್ಥಳವೆಂದರೆ ಅಂಕಣ. ಒಂದು ಕಾಲದಲ್ಲಿ ದನ ಕರುಗಳಿಂದ ತುಂಬಿರುತ್ತಿದ್ದ ಅಂಕಣಗಳು ಇಂದು ಭಣಗುಟ್ಟುತ್ತಿವೆ. ನಿರುಪಯೋಗಿ ವಸ್ತುಗಳು, ಕಟ್ಟಿಗೆ, ಮುರಿದ ಪೀಠೋಪಕರಣಗಳು, ಇತ್ಯಾದಿಗಳನ್ನು ದಾಸ್ತಾನು ಇಡಲು ಇಂದು ಅಂಕಣ ಬಳಕೆಯಾಗುತ್ತಿದೆ. ಇಂದು ಕೃಷಿಗೆ ದನ ಕರುಗಳು ಅನಿವಾರ್ಯವಲ್ಲ. ಎತ್ತುಗಳ ಬದಲು ಉಳುಮೆಗೆ ಮೆಷಿನ್ ಬಳಸಬಹುದು. ಟಿಲ್ಲರ್ ಅಥವಾ ಟ್ರಾಕ್ಟರ್ ಬಳಸಿ ಉಳುಮೆ ಮಾಡಬಹುದು. ಆದರೆ ಹಳ್ಳಿಯಲ್ಲಿ ಇರುವ ಮೆಷಿನ್‌ಗಳ ಸಂಖ್ಯೆ ತುಂಬಾ ಕಡಿಮೆ. ಇಡೀ ಹಳ್ಳಿಗೆ ಮೂರು ಟ್ರಾಕ್ಟರ್‌ಗಳಿವೆ; ಟಿಲ್ಲರ್ ಒಂದೂ ಇಲ್ಲ. ಒಂದು ವೇಳೆ ಕೃಷಿಗೆ ಮೆಷಿನ್ಬಳಸುತ್ತಿದ್ದರೂ ಟ್ರಾಕ್ಟರ್‌‌ಗಿಂತ ಟಿಲ್ಲರ್ಉತ್ತಮ. ಅದರ ಬೆಲೆ ಕಡಿಮೆ ಇದ್ದು ಮಧ್ಯಮ ವರ್ಗದ ರೈತರೂ ಕೊಂಡುಕೊಳ್ಳಬಹುದಾಗಿದೆ. ಆದರೆ ಇಲ್ಲಿ ಟಿಲ್ಲರ್‌ಗಳ ಬದಲು ಟ್ರಾಕ್ಟರ್‌ಗಳಿವೆ. ಒಂದು ರುದ್ರಪ್ಪನವರದ್ದು, ಇನ್ನೆರಡು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಕರೀಂಖಾನ್ ಮತ್ತು ಶಿವಶಂಕರಪ್ಪನವರಿಗೆ ಸೇರಿದ್ದು. ಲಿಂಗಾಯತ ಸಮುದಾಯದ ಶಿವಶಂಕರಪ್ಪ ಮತ್ತು ರುದ್ರಪ್ಪನವರು ದೊಡ್ಡ ಪ್ರಮಾಣದ ರೈತರೇ. ಆದಾಗ್ಯೂ ಅವರು ಟ್ರಾಕ್ಟರ್‌ಗಳನ್ನು ಕೇವಲ ಕೃಷಿಗಾಗಿ ವಿಕ್ರಯಿಸಿದ್ದಾರೆ ಎನ್ನಲಾಗುವುದಿಲ್ಲ. ಕೃಷಿಯ ಜತೆ ಸಿಗುವ ಇತರ ಆದಾಯಗಳು ಮುಖ್ಯವಾಗಿ ಕ್ರಶರ್‌ಗಳಿಂದ ಜಲ್ಲಿಕಲ್ಲು ಸಾಗಿಸಲು, ಕಟ್ಟೋಣ ಕೆಲಸಕ್ಕೆ ಇಟ್ಟಿಗೆ ಮತ್ತು ಇತರ ಸಾಮಗ್ರಿ ಸಾಗಾಣೆ, ಗಣಿಗಾರಿಕೆ ಸಂಬಂಧಿಸಿದ ಬಾಡಿಗೆ ಕೂಡ ಟ್ರಾಕ್ಟರ್ ವಿಕ್ರಯದ ಹಿಂದಿರುವ ಕೆಲವು ಸತ್ಯಗಳು. ಹೀಗೆ ಕೃಷಿಯಲ್ಲಿ ಮೆಶಿನ್ ಬಳಕೆ ತುಂಬಾ ಕಡಿಮೆ ಇದೆ. ಆದುದರಿಂದ ದನಕರುಗಳ ಸಂಖ್ಯೆ ಮತ್ತು ಕೃಷಿಗೆ ಇಲ್ಲಿ ಸಂಬಂಧವಿದೆ.

ಜಾನುವಾರುಗಳ ಸಂಖ್ಯೆ ಇಲ್ಲಿ ಕಡಿಮೆಯಾಗುತ್ತಿದೆ ಎನ್ನುವುದನ್ನು ಮತ್ತೊಂದು ವಿಧದಿಂದಲೂ ತಿಳಿಯಬಹುದು. ಹಳ್ಳಿಗಳಿಂದ ಆಸುಪಾಸಿನ ಗುಡ್ಡೆಗಳಿಗೆ ಮೇಯಲು ಹೋಗುವ ಜಾನುವಾರುಗಳ ಸಂಖ್ಯೆಯಿಂದಲೇ ಒಂದು ಹಳ್ಳಿಯ ಕೃಷಿ ಪ್ರಾಧಾನ್ಯತೆಯನ್ನು ಅಳೆಯಬಹುದು. ಹೆಚ್ಚು ದನಕರುಗಳು ಇರುವ ಹಳ್ಳಿಯ ಪಕ್ಕದ ರಸ್ತೆ ಬೆಳಗಿನ ಜಾವ ಕಿಲೋ ಮೀಟರ್ ದೂರ ಜಾನುವಾರುಗಳಿಂದ ತುಂಬಿರುತ್ತದೆ. ಅವುಗಳ ಮಧ್ಯೆ ಜಾಗ ಮಾಡಿಕೊಂಡು ವಾಹನ ಓಡಿಸುವುದೇ ಒಂದು ಸಾಹಸ. ಈ ದನಕರುಗಳು ದಿನ ನಿತ್ಯ ಸಾಗುವಾಗ ಹಾಕುವ ಸಗಣಿಯಿಂದ ರಸ್ತೆ ತನ್ನ ಮೂಲ ಬಣ್ಣ ಕಳಕೊಂಡು ಸಗಣಿ ಸಾರಿಸಿದಂತಿರುತ್ತದೆ. ಪಿ.ಕೆ.ಹಳ್ಳಿಯ ಜಾನುವಾರುಗಳು ಮೇಯಲು ಹಂಪಿಗೆ ಹೋಗುವ ರಸ್ತೆಯ ಎರಡೂ ಮಗ್ಗುಲಿಗೂ ಬರುವ ಅರಣ್ಯ ಪ್ರದೇಶಕ್ಕೆ ಹೋಗುತ್ತವೆ. ಅವುಗಳ ಸಂಖ್ಯೆ ಹೆಚ್ಚೆಂದರೆ ೧೫೦ ರಿಂದ ೨೦೦ ಇರಬಹುದು. ಸರಕಾರಿ ಅಂಕಿ ಅಂಶಗಳು ಬೇರೆಯದೇ ಚಿತ್ರಣ ಕೊಡುತ್ತವೆ.[7] ಸರಕಾರಿ ಅಂಕಿ ಅಂಶಗಳು ತೋರಿಸುವಷ್ಟು ಜನುವಾರುಗಳು ಹಳ್ಳಿಯಲ್ಲಿ ಇಲ್ಲ.

ಆದಾಗ್ಯೂ ೧೯೭೫ರವರೆಗೂ ಕೃಷಿ ಈ ಹಳ್ಳಿಯ ಬಹುತೇಕ ಕುಟುಂಬಗಳ ಜೀವನೋಪಾಯದ ಮುಖ್ಯ ಮೂಲವಾಗಿತ್ತು. ಹಳ್ಳಿಯ ಒಟ್ಟು ವಿಸ್ತೀರ್ಣ ೪೬೨೨.೯೦ ಎಕ್ರೆಗಳು. ಅದರಲ್ಲಿ ೨೫೩.೯೮ ಎಕ್ರೆಗಳನ್ನು ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಹಂಪಿಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ಅರಣ್ಯ ಪ್ರದೇಶ ಆರಂಭವಾಗುತ್ತದೆ. ಹಳ್ಳಿಗೆ ಸಮೀಪದ ಅರಣ್ಯ ಪ್ರದೇಶವನ್ನು ಊರವರು ಒತ್ತುವರಿ ಮಾಡಿಕೊಂಡು ಇತ್ತೀಚಿನವರೆಗೂ ಕೃಷಿ ಮಾಡುತ್ತಿದ್ದರು. ೧೯೯೫ರಲ್ಲಿ ಸಮುದಾಯ ಅರಣ್ಯ ಯೋಜನೆ ಆರಂಭವಾದಾಗ ಅರಣ್ಯ ಇಲಾಖೆಯವರು ರೈತರಿಂದ ಅತಿಕ್ರಮಿತ ಅರಣ್ಯ ಭೂಮಿಯನ್ನು ಬಿಡಿಸಿದ್ದಾರೆ. ಸಣ್ಣ ಪುಟ್ಟ ಪೊದೆಗಳು, ಮುಳ್ಳುಗಂಟಿ ಗಿಡಗಳನ್ನು ಬಿಟ್ಟರೆ ಅರಣ್ಯವೆಂದು ಹೇಳಿಕೊಳ್ಳುವಂಥದ್ದೇನು ಇಲ್ಲಿ ಇಲ್ಲ. ಊರವರ ಅಭಿಪ್ರಾಯದಂತೆ ಹಿಂದೆ, ಹಿಂದೆ ಅಂದರೆ ಎಷ್ಟು ಹಿಂದೆ ಎಂದು ಖಚಿತವಿಲ್ಲ, ಇಲ್ಲೆಲ್ಲಾ ದೊಡ್ಡ ಅರಣ್ಯವಿತ್ತಂತೆ. ಹಿಂದಿನ ಅರಣ್ಯದ ಪಳಯುಳಿಕೆಯೂ ಇಂದು ಕಾಣುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ಮರ ಬೆಳೆಸಲು ಮಾಡುವ ಪ್ರಮಾಣಿಕ ಪ್ರಯತ್ನ ಇಲ್ಲಿ ಕೂಡ ಕಂಡು ಬರುತ್ತಿದೆ. ಜಂಟಿ ಅರಣ್ಯ ಯೋಜನೆ, ಸಮುದಾಯ ಅರಣ್ಯ ಇತ್ಯಾದಿ ಯೋಜನೆಗಳ ಮೂಲಕ ಅರಣ್ಯ ಬೆಳೆಸುವ ಪ್ರಕ್ರಿಯೆ ಮುಂದುವರಿದಿದೆ.[8] ಇಷ್ಟಾದರೂ ಹಳ್ಳಿಯ ಆರ್ಥಿಕ ಚಟುವಟಿಕೆಗಳ ದೃಷ್ಟಿಯಿಂದ ಅರಣ್ಯ ಪ್ರದೇಶದ ನೇರ ಅಥವಾ ಪರೋಕ್ಷ ಕೊಡುಗೆ ಅತ್ಯಲ್ಪ. ಇಂಧನ ಪೂರೈಕೆಗೆ ಹಳ್ಳಿಯವರು ಕೆಲವು ಬಾರಿ ಇಲಾಖೆಯವರು ನೆಡುವ ಗಿಡಗಳನ್ನು ಬೆಳೆಯುವ ಮುನ್ನವೇ ಕಡಿಯುವ ಉದಾಹರಣೆಗಳಿವೆ. ಆದಾಗ್ಯೂ ಇಂಧನ ಪೂರೈಕೆಯಲ್ಲಿ ಅರಣ್ಯ ಪ್ರದೇಶದ ಉರುವಲಿನ ಪಾತ್ರ ಅತ್ಯಲ್ಪ. ಕೃಷಿಗೆ ಅಗತ್ಯವಾದ ಸೊಪ್ಪು, ಅಂಕಣಕ್ಕೆ ಹಾಸಲು ತರಗೆಲೆ ಕೂಡ ಇದರಿಂದ ಸಿಗುತ್ತಿಲ್ಲವೆಂದು ಊರವರ ದೂರು. ಇದಿಷ್ಟು ಅರಣ್ಯ ಪ್ರದೇಶದ ಕತೆ.

ಸುಮಾರು ೧೮೧೩.೮೯ ಎಕರೆಗಳಷ್ಟು ಕೃಷಿ ಯೋಗ್ಯ ಭೂಮಿ ಇದೆ. ಅದರಲ್ಲಿ ಬಂಜರು (೩೭.೨೪ ಎಕರೆಗಳು) ಮತ್ತು ಬೀಳು ಭೂಮಿ (೨೨೩.೩೫ ಎಕರೆಗಳು) ಗಳನ್ನು ಹೊರತು ಪಡಿಸಿದರೆ ಬಿತ್ತನೆಯಾಗುವ ನಿವ್ವಳ ಕೃಷಿ ಭೂಮಿ ೧೫೫೩.೩೦ ಎಕರೆಗಳು. ಕೃತಕ ನೀರಾವರಿ ವ್ಯವಸ್ಥೆಯುಳ್ಳ (ಬೋರ್‌ವೆಲ್ ಇರುವ) ಭೂಮಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕೃಷಿಯಾಗುತ್ತದೆ. ಕೃತಕ ನೀರಾವರಿಯುಳ್ಳವರ ಆದ್ಯತೆ ವಾಣಿಜ್ಯ ಬೆಳೆ ಬೆಳೆಯುವುದು. ಮುಖ್ಯ ಆಹಾರೇತರ ಬೆಳೆಗಳು ನೆಲೆಗಡಲೆ, ಎಳ್ಳು, ಉಳ್ಳಾಗಡ್ಡಿ, ಸೂರ್ಯಕಾಂತಿ ಮತ್ತು ಹತ್ತಿ, ಜೋಳ, ಸಜ್ಜೆ, ರಾಗಿ, ಕಡಲೆ, ತೊಗರಿ ಮತ್ತು ಹುರುಳಿ ಆಹಾರ ಬೆಳೆಗಳು. ಬಹುತೇಕ ಕೃಷಿಕರು ನೀರಿಗೆ ಮಳೆಯನ್ನೇ ನಂಬಿದ್ದಾರೆ. ಜೂನ್‌ನಿಂದ ಅಕ್ಟೋಬರ್ ಮಳೆ ಬರುವ ಕಾಲ. ಮಳೆ ಬರಲೇಬೇಕೆಂದು ಕಡ್ಡಾಯವಿಲ್ಲ. ಮಳೆ ಬಂದರೆ ಜೋಳ ಬೆಳೆಯುತ್ತಾರೆ; ಮಳೆಗೆ ಕಾದು ಕಾದು ಸುಸ್ತಾದರೆ ಸಜ್ಜೆ ಇದ್ದೇ ಇದೆ. ಬೋರ್‌ವೆಲ್ ಹಾಕಿ ಕೃತಕ ನೀರಾವರಿ ಮಾಡಿಕೊಂಡವರ ಸಂಖ್ಯೆ ೧೯೮೧ರಲ್ಲಿ ಬೆರಳೆಣಿಕೆಯಷ್ಟಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದೂ ಡಾಲ್ಮಿಯಾ ಗಣಿ ಕೆಲಸ ನಿಂತ ನಂತರ ಬೋರ್‌ವಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ೧೯೯ರ ಕೊನೆಗೆ ಕೆ.ಇ.ಬಿ. ವಿದ್ಯುತ್ ಕನೆಕ್ಷನ್ ಪಡೆದ ಪಂಪ್‌ಸೆಟ್‌ಗಳ ಸಂಖ್ಯೆ ೭೫ ಆಗಿದೆ.[9]

ಗಣಿಗಾರಿಕೆ ಸ್ಥಗಿತಗೊಂಡ ನಂತರ ಕಡಿಮೆ ಸಂಬಳಕ್ಕೆ ಕೂಲಿಗಳು ದೊರೆಯುವುದು ಕೃಷಿ ಹೆಚ್ಚಾಗಿರುವುದಕ್ಕೆ ಕಾರಣವಿರಬಹುದು. ಅಗ್ಗದ ಶ್ರಮ ಮತ್ತು ಕೃಷಿಯ ಸಂಬಂಧವನ್ನು ಮುಂದೆ ವಿವರಿಸಿದ್ದೇನೆ. ಹಳ್ಳಿಯಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆ ೭೮೧. ಅದರಲ್ಲಿ ಭೂ ಹಿಡುವಳಿದಾರರ ಸಂಖ್ಯೆ ೩೯೬; ಭೂರಹಿತ ಕುಟುಂಬಗಳು ೩೮೫.[10] ಎರಡು ವಿಧದ ಭೂ ಹಿಡುವಳಿಯನ್ನು ಇಲ್ಲಿ ನೋಡಬಹುದು. ಒಂದು, ಪಟ್ಟಾಭೂಮಿ ಎರಡು ಒತ್ತುವರಿ ಅಥವಾ ಪರಂಪೋಕ್ ಭೂಮಿ. ಪಟ್ಟಾ, ಭೂಮಿ ಇರುವ ಕುಟುಂಬಗಳ ಸಂಖ್ಯೆ ತೀರಾ ಕಡಿಮೆ. ಉದಾಹರಣೆಗೆ ಹರಿಜನರಲ್ಲಿ ಇಂತಹ ಒಂದು ಕುಟುಂಬ, ವಡ್ಡರಲ್ಲಿ ಒಂದು, ನಾಯಕರಲ್ಲಿ ಎರಡು, ಕುರುಬರಲ್ಲಿ ಮೂರು ಮತ್ತು ಮಸ್ಲಿಮರಲ್ಲಿ ಎರಡು ಕುಟುಂಬಗಳಿವೆ. ಹರಿಜನರಲ್ಲಿ ಎರಡು ಎಕ್ರೆಗಿಂತ ಮಡಿಮೆ ಒತ್ತುವರಿ ಭೂಮಿ ಇರುವ ೨೮ ಕುಟುಂಬಗಳಿದ್ದರೆ, ೩ ರಿಂದ ೫ ಎಕ್ರೆ ಭೂಮಿ ಇರುವ ೩೦ ಕುಟುಂಬಗಳು ಮತ್ತು ೬ ರಿಂದ ೧೦ ಎಕ್ರೆ ಭೂಮಿ ಇರುವ ೩ ಕುಟುಂಬಗಳಿವೆ. ಹೀಗೆ ೬ – ೧೦ ಎಕ್ರೆ ಭೂಮಿ ಇರುವ ೩ ಕುಟುಂಬಗಳನ್ನು ಸೇರಿಸಿ ಒತ್ತುವರಿ ಭೂಮಿ ಇರುವ ಒಟ್ಟು ೬೧ ಕುಟುಂಬಗಳಿವೆ. ಇದು ಪಟ್ಟಾ ಭೂಮಿ ಇರುವ ೩೨ ಹರಿಜನ ಕುಟುಂಬಗಳ ಸಂಖ್ಯೆಗಿಂತ ಸರಿ ಎರಡು ಪಟ್ಟು ಹೆಚ್ಚಿದೆ. ಅತಿ ಹೆಚ್ಚು ಒತ್ತುವರಿ ಭೂಮಿ ಹೊಂದಿದ ಮತ್ತೊಂದು ಸಮುದಾಯವೆಂದರೆ ನಾಯಕರದ್ದು. ಪಟ್ಟಾ ಭೂಮಿ ಹೊಂದಿರುವ ನಾಯಕರ ಕುಟುಂಬಗಳ ಸಂಖ್ಯೆ ೪೧. ಒತ್ತುವರಿ ಭೂಮಿ ಹೊಂದಿರುವ ಕುಟುಂಬಗಳು ೨೭. ಹೀಗೆ ಒತ್ತುವರಿ ಭೂಮಿ ಹೊಂದಿದವರಲ್ಲಿ ಸಿಂಹಪಾಲು ಹರಿಜನರದ್ದು ಮತ್ತು ನಾಯಕರದ್ದು, ಮೂರನೆ ಸ್ಥಾನದಲ್ಲಿ ಲಿಂಗಾಯತರಿದ್ದಾರೆ.

ಒಂದು ಕಾಲದಲ್ಲಿ ಸುತ್ತಲಿನ ಭೂಮಿ ಅಥವಾ ಇತರ ಸಂಪನ್ಮೂಲಗಳನ್ನು ಅತಿಕ್ರಮಿಸುವುದು ಮೇಲು ಜಾತಿ/ವರ್ಗಗಳ ಲಕ್ಷಣವಾಗಿತ್ತು. ಇಂದು ಆ ಕೆಲಸವನ್ನು ಕೆಳ ಜಾತಿ/ವರ್ಗದವರೂ ಮಾಡುತ್ತಿದ್ದಾರೆ. ಈ ಬೆಳವಣಿಗೆಯನ್ನು ಯಾವ ರೀತಿ ನಿರ್ವಚಿಸಿಕೊಳ್ಳಬೇಕೆಂದು ಅರ್ಥವಾಗುತ್ತಿಲ್ಲ. ಇದರಲ್ಲಿ ಸಕಾರಾತ್ಮಕ ಲಕ್ಷಣಗಳನ್ನು ನೋಡುವ ಸಾಧ್ಯತೆ ಹೇಗಿದೆಯೋ ಹಾಗೆ ನಕಾರಾತ್ಮಕ ಅಂಶಗಳು ಇವೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಅತಿ ಕಡಿಮೆ ಭೂಮಿ ಹೊಂದಿರುವ ಹರಿಜನರು ಮತ್ತು ನಾಯಕರು ಅತಿ ಹೆಚ್ಚು ಒತ್ತುವರಿ ಭೂಮಿ ಮಾಡಿಕೊಂಡಿದ್ದಾರೆ. ಇದು ಅವರು ಸಶಕ್ತೀಕರಣಗೊಂಡಿರುವ ಒಂದು ಲಕ್ಷಣವೆಂದು ವ್ಯಾಖ್ಯಾನಿಸಬಹುದು. ಸಮುದಾಯದ ಆಸ್ತಿಯನ್ನು ಮೇಲು ಜಾತಿ/ವರ್ಗದವರು ತಮ್ಮ ಖಾಸಗಿ ಲಾಭಕ್ಕೆ ಬಳಸುವುದು ಅನ್ಯಾಯವಾದರೆ ಕೆಳ ಜಾತಿ/ವರ್ಗದವರು ಅದೇ ಕೆಲಸ ಮಾಡಿದರೆ ನ್ಯಾಯವಾಗುವುದು ಹೇಗೆ? ಇಲ್ಲಿ ಆಸ್ತಿಪಾಸ್ತಿಗಿಂತ ಹೆಚ್ಚು ಸಮಷ್ಠಿ ಮತ್ತು ಅದರ ಮುಂದುವರಿಕೆಗೆ ಅಗತ್ಯವಾದ ನಿಯಮದ ಉಲ್ಲಂಘನೆಯ ಪ್ರಶ್ನೆ ಮುಖ್ಯ. ನಿಯಮ ಉಲ್ಲಂಘನೆಯನ್ನು ಸಶಕ್ತೀಕರಣ ಎಂದು ನಿರ್ವಚಿಸಿಕೊಂಡರೆ ಆರೋಗ್ಯಕರ ಸಮಾಜದ ಕಲ್ಪನೆಯೇ ಸಾಧ್ಯವಿಲ್ಲ. ಇದರ ಬದಲು ನಿಯಮಗಳ ಪರಿವರ್ತನೆಗೆ ನಡಿಯುವ ಪ್ರಯತ್ನ ಮತ್ತು ನಂತರ ಸಾಧ್ಯವಾಗುವ ಸಂಪನ್ಮೂಲದ ಒಡೆತನ ಸಶಕ್ತೀಕರಣಕ್ಕೆ ಸರಿಯಾದ ದಾರಿಯಾಗಬಲ್ಲದು.

ಬಹುತೇಕ ಒತ್ತುವರಿ ನಡೆಯುತ್ತಿರುವುದು ಗಣಿಗಾರಿಗೆ ನಡೆಯುವ ಅರಣ್ಯ ಪ್ರದೇಶಗಳಲ್ಲಿ. ಇದಕ್ಕೆ ಒಂದು ಕಾರಣ ಆ ಭೂಮಿಗಳು ಸಂಡೂರು ತಾಲೂಕಿನ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ಬರುವುದು. ಈ ಹಳ್ಳಿಗೆ ಅದು ಸಮೀಪವಾದರೂ ಸಂಡೂರು ತಾಲೂಕಿನ ಒಂದು ಮೂಲೆಯಾಗುತ್ತದೆ. ಜತೆಗೆ ಅಲ್ಲಿನ ಬಹುತೇಕ ಅರಣ್ಯ ಪ್ರದೇಶಗಳನ್ನು ಗಣಿಗಾರಿಕೆಗೆ ಲೀಸ್ ಕೊಟ್ಟಿರುವುದರಿಂದ ಅಲ್ಲಿ ಏನು ನಡೆಯುತ್ತದೆ ಎಂದು ನೋಡಲು ಅರಣ್ಯಾಧಿಕಾರಿಗಳು ಬರುತ್ತಿಲ್ಲ. ಇದು ಇಲ್ಲಿನ ಭೂಮಿ ಇಲ್ಲದ ಕೆಳವರ್ಗಕ್ಕೆ ಭೂಮಿ ಹೊಂದಲು ಅನುಕೂಲವಾಯಿತು. ಇದಕ್ಕೆ ವಿರುದ್ಧವಾಗಿ ಹಳ್ಳಿಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶ ಹಂಪಿ ರಸ್ತೆಯ ಎರಡೂ ಮಗ್ಗುಲಿಗೂ ಇದೆ. ಇಲ್ಲಿ ಹೆಚ್ಚು ಒತ್ತುವರಿ ನಡೆದಿಲ್ಲ. ಒತ್ತುವರಿ ನಡೆದ ಕೆಲವು ಹೊಲಗಳನ್ನು ಅರಣ್ಯ ಇಲಾಖೆ ಮರುವಶಪಡಿಸಿಕೊಂಡಿದೆ. ಇಷ್ಟೆಲ್ಲಾ ಒತ್ತುವರಿ ನಡೆದರೂ ಕೂಡ ಬಂಗಾರಪ್ಪನವರ ಅಕ್ರಮ ಸಕ್ರಮದಲ್ಲಿ ಈ ಭೂಮಿಗಳು ಸಕ್ರಮವಾಗಿಲ್ಲ. ಪರಂಪೋಕ್ ಭೂಮಿಗಳಾಗಿಯೇ ಇವೆ. ಮೇಲಿನ ವಿವರಣೆಯ ಆಧಾರದಲ್ಲಿ ಹಳ್ಳಿಯ ಭೂ ಹಿಡುವಳಿಯ ಬಗ್ಗೆ ಈ ಕೆಳಗಿನ ತೀರ್ಮಾನಕ್ಕೆ ಬರಬಹುದು. ಬಹುತೇಕ ಮಧ್ಯಮ ಮತ್ತು ದೊಡ್ಡ ಹಿಡುವಳಿಗಳು ಲಿಂಗಾಯತರ ಸ್ವಾಧೀನವಿದೆ. ಭೂರಹಿತ ಕುಟುಂಬಗಳಲ್ಲಿ ಸಿಂಹಪಾಲು ಹರಿಜನರದ್ದು. ದೊಡ್ಡ ಹಿಡುವಳಿದಾರ ಗುಂಪಿನಲ್ಲಿ ಕುರುಬರ, ವಡ್ಡರ ಮತ್ತು ಮುಸ್ಲಿಮರ ಬೆರಳೆಣಿಕೆಯಷ್ಟೇ ಕುಟುಂಬಗಳಿವೆ. ಅದೇ ರೀತಿ ಕೆಲವು ಸಣ್ಣ, ಅತಿ ಸಣ್ಣ ಮತ್ತು ಭೂರಹಿತ ಲಿಂಗಾಯತರು ಇದ್ದಾರೆ.

ನೀರಾವರಿ ಸಮಸ್ಯೆ

೧೯೭೮ರವರೆಗೂ ಕೃಷಿ ಕಸುಬೇ ಆಗಿತ್ತು. ನಂತರದ ದಿನಗಳಲ್ಲಿ ಕೃಷಿಯ ಪ್ರಾಮುಖ್ಯತೆ ಕುಂದುತ್ತಾ ಬಂತು.[11] ಕೃಷಿಯು ಕುಂಟಿತವಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವು – ೧. ನೀರಾವರಿ ಸಮಸ್ಯೆ ೨. ಜೀತದಾಳುಗಳ ಬಿಡುಗಡೆ ೩. ಗಣಿಗಾರಿಕೆಯ ವೃದ್ಧಿ ಮತ್ತು ೪. ವಿಕೃತ ಆಧುನೀಕರಣ.

ಕೃಷಿಗೆ ಪ್ರಕೃತಿಯನ್ನೇ ನಂಬಿದ್ದ ಮತ್ತು ನಂಬಿಕೊಂಡಿರುವವರ ಸಂಖ್ಯೆ ಅಧಿಕ. ೧೯೬೮ರಲ್ಲಿ ರುದ್ರಪ್ಪನವರು ತಮ್ಮ ಸಹಕಾರಿ ಸಂಘದ ಉದ್ಯೋಗ ಬಿಟ್ಟು ಕೃಷಿ ಆರಂಭಿಸಿದಾಗ ಊರಲ್ಲಿ ಕೃತಕ ನೀರಾವರಿ ವ್ಯವಸ್ಥೆ ಇದ್ದವರೆಂದರೆ ಉದ್ವಾಳ ಹನುಮಂತಪ್ಪ ಮತ್ತು ಸಣ್ಣ ಕರಿತಿಮ್ಮಪ್ಪ ಮಾತ್ರ. ರುದ್ರಪ್ಪನವರು ಬಾವಿ ತೋಡಿಸಿ ಪಂಪ್‌ಸೆಟ್ ಹಾಕಿಸಿ ಕೃಷಿ ಆರಂಭಿಸಿದಾಗ, ೭೦ರ ದಶಕದಲ್ಲಿ ಕೆಲವೇ ಕೃತಕ ನೀರಾವರಿ ವ್ಯವಸ್ಥೆ ಹೊಂದಿದ ಕೃಷಿಕರಿದ್ದರು. ಊರಿನ ರಾಜಕೀಯದಲ್ಲಿ ಪ್ರಬಲರಾಗಿದ್ದ ಮೇಟಿಗಳ ಕುಟುಂಬದವರು ಕೃಷಿಗೆ ಜೀತದಾಳುಗಳನ್ನು ಬಳಸಿಕೊಳ್ಳುವಲ್ಲಿ ತೋರಿಸಿದ ಆಸಕ್ತಿಯನ್ನು ಕೃತಕ ನೀರಾವರಿ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ತೋರಿಸಿಲ್ಲ. ಇತರ ಊರುಗಳಂತೆ ಇಲ್ಲಿ ಕೂಡಾ ಕೆರೆಗಳಿವೆ. ಒಂದು ಆಂಜನೇಯ ಗುಡಿ ಹಿಂದಿನ ಈಶ್ವರನ ಕೆರೆ ಮತ್ತೊಂದು ಡಾಲ್ಮಿಯಾ ಗಣಿಗೆ ಹೋಗುವ ದಾರಿಯಲ್ಲಿರುವ ಸೆಟ್ಟಿ ಕೆರೆ.[12] ಈಶ್ವರನ ಕೆರೆ ಮಳೆಗಾಲದಲ್ಲಿ ತುಂಬುತ್ತದೆ. ಅದರ ಪಾತ್ರ ಚಿಕ್ಕದು. ಕೆರೆಗೆ ನೀರುಣಿಸುವ ಮೂಲಗಳು ಸೀಮಿತ. ಜನರ, ದನಕರಗಳ ಸ್ನಾನಕ್ಕೆ ಮತ್ತು ಊರವರ ಬಟ್ಟೆ ಒಗೆತಕ್ಕೆ ಈ ಕೆರೆ ಸೀಮಿತ. ಈ ಕೆರೆಯ ಕೆಳಭಾಗದಲ್ಲಿ ಕೆಲವು ಹೊಲಗಳಿವೆ; ಮುಸ್ಲಿಮರಿಗೆ ಸೇರಿದ್ದು. ಗೌಡರ ಕುಟುಂಬದವರ ಹೊಲಗಳು ಇಲ್ಲೆ ಬರುತ್ತವೆ. ಆದಾಗ್ಯೂ ಈ ಕೆರೆಯ ನೀರು ಕೃಷಿಗೆ ಬಳಕೆಯಾಗುತ್ತಿಲ್ಲ. ಜನವರಿ ಫೆಬ್ರವರಿ ತಿಂಗಳಾಗುವಾಗ ನೀರು ಖಾಲಿಯಾಗಿ ಕೆರೆ ಬತ್ತಿರುತ್ತದೆ.

ಸೆಟ್ಟಿಕೆರೆ ಡಾಲ್ಮಿಯಾ ಗಣಿಗೆ ಹೋಗುವ ರಸ್ತೆಯಲ್ಲಿದೆ. ಜಿ.ಜಿ. ಬ್ರದರ್ಸ್ ಫ್ಯಾಕ್ಟರಿಯ ಎದುರು ಭಾಗದ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ. ಸಾಗಿದರೆ ಗುಡ್ಡಗಳ ಸಾಲುಗಳು ಆರಂಭವಾಗುತ್ತದೆ. ಅಲ್ಲೆ ಎರಡು ಗುಡ್ಡಗಳು ಪರಸ್ಪರ ಮುಖ ಮಾಡಿ ನಿಂತಿವೆ. ಆ ಗುಡ್ಡಗಳ ನಡುವೆ ಒಳ ಹೋಗಲು ಕಣಿವೆಯಿದೆ. ಆ ಕಣಿವೆಯ ಮೂಲಕ ಒಳ ಹೊಕ್ಕರೆ ಹಲವಾರು ಎಕ್ರೆಗಳಷ್ಟು ಸಮತಟ್ಟಾದ ಭೂಮಿ ನಿಂತರ ಪುನಃ ಗುಡ್ಡಗಳ ಸಾಲುಗಳು. ಪರಸ್ಪರ ಮುಖ ಮಾಡಿ ನಿಂತಿರುವ ಎರಡು ಗುಡ್ಡಗಳನ್ನು ಸ್ವಲ್ಪ ಒಳಭಾಗದಲ್ಲಿ ಸೇರಿಸಿ ವಿಜಯನಗರ ಕಾಲದಲ್ಲೇ ಸೆಟ್ಟಿಕೆರೆ ನಿರ್ಮಾಣವಾಗಿತ್ತು. ಸುಮಾರು ಐವತ್ತು ಎಕ್ರೆಗಳಷ್ಟು ಸಮತಟ್ಟಾದ ಭೂಮಿ ಕೆರೆಯ ಪಾತ್ರವಾಗಿದೆ. ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಸುರಿಯುವ ನೀರು ಹರಿದು ಈ ಕೆರೆ ಸೇರುತ್ತದೆ. ಈ ಕೆರೆ ಹಿಂದಿನ ಕಾಲದಲ್ಲಿ ಒಂದು ತಡೆಕೆರೆ (ಚೆಕ್‌ಡ್ಯಾಮ್) ಇದ್ದಂತೆ. ಇದರ ಕೆಳಭಾಗದಲ್ಲಿ ವಡ್ಡರಹಳ್ಳಿ ಕೆರೆ ನಂತರ ಕಮಲಾಪುರ ಕೆರೆಗಳಿವೆ. ಮಳೆಗಾಲದಲ್ಲಿ ಸುರಿಯುವ ನೀರನ್ನು ಹಲವಾರು ಹಂತಗಳಲ್ಲಿ ತಡೆ ಹಿಡಿದು ಆಯಾಯ ಪ್ರದೇಶದ ಜನರ ಉಪಯೋಗಕ್ಕೆ ಬಳಸುವ ಕಲೆ ಹಿಂದಿನಿಂದಲೇ ಕರಗತವಾಗಿತ್ತು. ಆದರೆ ಈಗ ಸ್ಥಿತಿ ತೀರಾ ಭಿನ್ನವಾಗಿದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಈ ಕೆರೆಯ ಕೋಡಿ ಹರಿಯಿತು. ಆರಂಭದಲ್ಲಿ ಸುಂಬಾ ಸಣ್ಣ ಬಿರುಕಿತ್ತಂತೆ. ನಂತರ ಅದು ಬೆಳೆಯಿತು. ಈಗ ಅದು ಚಿಕ್ಕ ಪ್ರಮಾಣದ ನದಿಯಷ್ಟು ವಿಶಾಲವಾಗಿದೆ. ಇದೆಲ್ಲಾ ಊರವರ ಕಣ್ಣ ಮುಂದೆಯೇ ಆಗಿದೆ. ಜಾಸ್ತಿ ಮಳೆಯಾದಾಗ ಈ ನದಿ ತುಂಬಿ ಹರಿಯುತ್ತದೆ. ಗಣಿ ಪ್ರದೇಶದ ಕಲ್ಲು, ಬಿಡಿ ಮಣ್ಣುಗಳನ್ನು ಕೆಲಭಾಗದ ಹೊಲಗಳಲ್ಲಿ ಇದು ತುಂಬುತ್ತದೆ. ವಿಚಿತ್ರವೆಂದರೆ ಕೋಡಿ ಹರಿದು ಕಲ್ಲು ಮಣ್ಣಿಂದ ತುಂಬಿರುವ ಹೊಲಗಳಲ್ಲಿ ಬಹುತೇಕ ಹೊಲಗಳು ಹಿಂದೆ ಸ್ಥಳೀಯ ರಾಜಕೀಯದಲ್ಲಿ ಪ್ರಬಲರಾಗಿದ್ದ ಮೇಟಿ ಕುಟುಂಬಗಳಿಗೆ ಸೇರಿದ್ದು. ಹಿಂದೆ ಅಥವಾ ಈಗ ಕೂಡ ಊರ ಪ್ರಮುಖರು ಈ ಕೆರೆಯ ರಿಪೇರಿಗೆ ಪ್ರಯತ್ನಿಸಿಲ್ಲ. ಸಿದ್ದುನ್ಯಾಮೆ ಗೌಡರು ಖ್ಯಾತಿ ಇಲ್ಲಿಯ ಜನರಿಗೆ ಅರಿವಿದೆ. ಈ ಕೆರೆ ರಿಪೇರಿಗೆ ಅವರಷ್ಟು ದೊಡ್ಡ ಪ್ರಮಾಣದ ವಿನಿಯೋಜನೆ ಅಗತ್ಯವಿಲ್ಲ. ಆದರೆ ಸ್ಥಳೀಯವಾಗಿ ಸಂಘಟಿತ ಪ್ರಯತ್ನ ನಡೆದಿಲ್ಲ. ನಡೆಯದಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಒಂದು, ಸ್ಥಳೀಯ ಯಜಮಾನಿಕೆಯ ಜಾತಿಯೊಳಗಿನ ಬಿರುಕಿನಿಂದಾಗಿ ಸಂಘಟಿತ ಪ್ರಯತ್ನ ಸಾಧ್ಯವಾಗದಿರಬಹುದು. ಮತ್ತೊಂದು ಕಾರಣ ಇದು ನಮ್ಮ ಕೆಲಸವಲ್ಲ ಸರಕಾರದ ಕೆಲಸವೆಂಬ ಧೋರಣೆ. ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬೇಕಾದ ದೊಡ್ಡ ಮೊತ್ತದ ವಿನಿಯೋಜನೆ ಈ ರೀತಿ ಧೋರಣೆಗೆ ಕಾರಣವಾಗಿರಬಹುದು. ಇದರ ಜತೆಗೆ ಖಾಸಗಿ ಪ್ರಯತ್ನದ ಸಂಸ್ಕೃತಿ ಕಡಿಮೆ ಇರುವುದು ಕೂಡ ಸ್ವಲ್ಪ ಕೆಲಸ ಮಾಡಿರಬಹುದು.

ಅದೇನೆ ಇರಲಿ ಊರವರು ಈ ಕೆರೆ ರಿಪೇರಿಗಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸುವುದನ್ನು ಬಿಟ್ಟು ಬೇರೆನೊ ಮಾಡಿಲ್ಲ. ಹಿಂದೊಂದು ಬಾರಿ ಘೋರ್ಪಡೆಯವರು ಗ್ರಾಮೀಣ ಅಭಿವೃದ್ಧಿ ಮಂತ್ರಿಯಾಗಿದ್ದಾಗ ಕೆರೆ ರಿಪೇರಿ ಮಾಡಿಸುವ ಭರವಸೆ ಇತ್ತಿದ್ದಾರಂತೆ. ಆದರೆ ಡಾಲ್ಮಿಯಾ ಗಣಿ ಮಾಲಿಕರು ಅಡ್ಡಗಾಲು ಹಾಕಿದುದರಿಂದ ಕೆಲಸ ಮುಂದುವರಿಯಲಿಲ್ಲ ಎಂದು ಸ್ಥಳೀಯರ ಅಭಿಪ್ರಾಯ.[13] ಘೋರ್ಪಡೆಯವರು ಪುನಃ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳಾಗಿದ್ದಾರೆ. ೧೯೯೯ರಲ್ಲಿ ಪುನಃ ಈ ಕೆರೆಗೆ ಪುನರ್‌ಜೀವ ಕೊಡುವ ಮಾತುಕತೆ ನಡಿಯುತ್ತಿದೆ. ಈ ಕೆರೆಗೆ ಮತ್ತು ಇದರ ಕೆಳಭಾಗದಲ್ಲಿಬರುವ ವಡ್ಡರಹಳ್ಳಿ ಕೆರೆಗೆ ಚೆಕ್‌ಡ್ಯಾಮ್ ಕಟ್ಟಿಸಲು ಒಂದೊಂದು ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂಬ ಸುದ್ದಿಯಿದೆ. ಈ ಕೆರೆಗೆ ಪುನರ್ ಜೀವ ಬಂದರೆ ಎರಡು ಅನುಕೂಲಗಳಿವೆ. ಒಂದು, ೨೦೦ ರಿಂದ ೩೦೦ ಎಕ್ರೆ ಭೂಮಿಗೆ ನೀರಾವರಿ ಸಾಧ್ಯತೆ ಇದೆ. ಎರಡು, ಭೂಗರ್ಭದಲ್ಲಿ ನೀರಿನ ಮಟ್ಟ ಏರುವುದರಿಂದ ಬೋರ್‌ವೆಲ್ ಹಾಕಿ ಕೃತಕ ನೀರಾವರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇವಲ್ಲಾ ಭವಿಷ್ಯಕ್ಕೆ ಬಿಟ್ಟ ವಿಚಾರಗಳು. ಯಾವುದನ್ನು ಖಚಿತವಾಗಿ ಹೇಳುವಂತಿಲ್ಲ.

ತುಂಗಭದ್ರಾ ಆಣೆಕಟ್ಟು ಆದಾಗ ಊರಿನ ನೀರಿನ ಸಮಸ್ಯೆ ಪರಿಹಾರವಾದೀತೆಂಬ ದೂರದ ಕನಸು ಊರವರಿಗಿತ್ತು. ಅಣೆಕಟ್ಟಿನ ಕೆಲಸ ನಡಿಯುತ್ತಿದ್ದಾಗ ಊರೆಲ್ಲಾ ಅದೇ ಸುದ್ದಿಯಂತೆ. ತುಂಗಭದ್ರಾ ಅಣೆಯ ಮೇಲ್ದಂಡೆ ಕಾಲುವೆ (ಆಂಧ್ರಕ್ಕೆ ಹೋಗುವ ಕಾಲುವೆ) ಕಾರಿಗನೂರು, ವಡ್ಡರಹಳ್ಳಿ, ಪಾಪಿನಾಯಕನ ಹಳ್ಳಿಗಾಗಿ ಹೋಗುವ ಸಾಧ್ಯತೆ ಇತ್ತೆಂದು ಊರವರ ಅಭಿಪ್ರಾಯ. ಒಂದು ವಾದದ ಪ್ರಕಾರ ಆಂಧ್ರದ ಒತ್ತಡದಿಂದ ಆ ರೀತಿ ಬಳಸಿಕೊಂಡು ಹೋಗುವುದು ಸಾಧ್ಯವಾಗಲಿಲ್ಲ. ಮತ್ತೊಂದು ವಾದದ ಪ್ರಕಾರ ಸ್ಥಳೀಯ ರಾಜಕಾರಣಿಗಳು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಕಾಲುವೆ ಈ ಹಳ್ಳಿಗಳಿಂದ ಹಾದು ಹೋಗದಂತೆ ನೋಡಿಕೊಂಡರು.[14] ಈ ವಾದಗಳು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಕಷ್ಟ. ಒಂದಂತೂ ನಿಜ. ಅದೇನೆಂದರೆ ಟಿ.ಬಿ.ಡ್ಯಾಮ್‌ನ ನೀರಿನಿಂದ ಪಿ.ಕೆ.ಹಳ್ಳಿ ವಂಚಿತವಾಗಿದೆ. ಆ ಕಾಲುವೆ ಇಲ್ಲಿಂದ ಹಾದು ಹೋಗುತ್ತಿದ್ದರೆ ನೀರಾವರಿ ಆಗುತ್ತಿತ್ತು ಎನ್ನಲಾಗುವುದಿಲ್ಲ. ಆದರೆ ಸುತ್ತಮುತ್ತಲಿನ ಪ್ರದೇಶಗಳ ಭೂಗರ್ಭದಲ್ಲಿನ ಜಲಮಟ್ಟ ಏರುತ್ತಿತ್ತು. ಜತೆಗೆ ಕಾಲುವೆಯಿಂದ ಉಂಟಾಗುವ ಸೋರಿಕೆ ಸುತ್ತಲಿನ ಪ್ರದೇಶಗಳ ಕೃಷಿಗೆ ಅನುಕೂಲವಾಗುತ್ತಿತ್ತು. ಆದರೆ ಆ ರೀತಿ ಆಗಲಿಲ್ಲ. ಊರವರು ಕೃಷಿಗೆ ವರುಣ ದೇವನನ್ನು ಕಾಯುವುದು ತಪ್ಪಲಿಲ್ಲ.

 

[1]೧೯೯೮ರಲ್ಲಿ ನಮ್ಮ ವಿಭಾಗ ನಿರ್ಮಲ ಕರ್ನಾಟಕ ಯೋಜನೆಯ ಮೌಲ್ಯ ಮಾಪನ ಕೆಲಸ ವಹಿಸಿಕೊಂಡಿತ್ತು. ಅದಕ್ಕಾಗಿ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೆಲವು ಹಳ್ಳಿಗಳನ್ನು ಆಯ್ಕೆ ಮಾಡಲಾಗಿತ್ತು. ಆಯ್ದು ಪ್ರತಿ ಹಳ್ಳಿಯಲ್ಲೂ ಕನಿಷ್ಠ ಇಪ್ಪತ್ತು ಕಕ್ಕಸುಗಳನ್ನು ನೋ ವರದಿ ತಯಾರಿಸಬೇಕಿತ್ತು. ಆ ಕೆಲಸಕ್ಕಾಗಿ ಪಿ.ಕೆ.ಹಳ್ಳಿಗೂ ಭೇಟಿ ನೀಡಿದ್ದೇವೆ.

[2]ಹಳ್ಳಿಯಲ್ಲಿರುವ ವಿವಿಧ ರೋಗಗಳು, ರೋಗಿಗಳ ಸಂಖ್ಯೆ, ವೈದ್ಯಕೀಯ ಸೌಲಭ್ಯ ಇತ್ಯಾದಿಗಳ ವಿವರವನ್ನು ಮುಂದೆ ಕೊಟ್ಟಿದ್ದೇನೆ. ಕೋಷ್ಠಕ-೧೬, ೨೩ ಮತ್ತು ೨೪ರಲ್ಲಿ ಮೇಲಿನ ವಿವರಗಳಿಗೆ ಸಂಬಂಧಿಸಿದ ಅಂಕಿ ಅಂಶಗಳಿವೆ.

[3]೧೯೯೧ರ ಸೆನ್ಸಸ್ ಪ್ರಕಾರ ಊರಲ್ಲಿ ವಿವಿಧ ಆರ್ಥಿಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಇಂತಿದೆ. ಕೃಷಿಕರ ೪೭೧, ಕೃಷಿ ಕಾರ್ಮಿಕರು ೪೫೮, ಪಶುಸಂಗೋಪನೆ, ಮೀನುಗಾರಿಕೆ ಇತ್ಯಾದಿ ೧೧, ಗಣಿಗಾರಿಕೆ ೩೧೪, ಗುಡಿ ಕೈಗಾರಿಕೆ ೩, ಆಧುನಿಕ ಕೈಗಾರಿಕೆ ೧೭, ಕಟ್ಟೋಣ ಕೆಲಸ ೩೪, ವಾಣಿಜ್ಯ/ವ್ಯಾಪಾರ ೪೨ ಮತ್ತು ಸಾರಿಗೆ ಸಂಪರ್ಕ ೧೫೭. (ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್, ಡಿಸ್ಟ್ರಿಕ್ಟ್ ಸೆನ್ಸಸ್ ಹೇಂಡ್ ಬುಕ್ ಬಳ್ಳಾರಿ ಡಿಸ್ಟ್ರಿಕ್ಟ್, ಬೆಂಗಳೂರು: ಗವರ್ನ್‌ಮೆಂಟ್ ಆಫ್ ಕರ್ನಾಟಕ,೧೯೯೧)

[4]ಜಾತಿವಾರು ಆರ್ಥಿಕ ಚಟುವಟಿಕೆಗಳ ಅಂಕಿ ಅಂಶಗಳನ್ನು ಕೋಷ್ಠಕ-೨೨ರಲ್ಲಿ ಕೊಡಲಾಗಿದೆ ಮುಂದಿನ ಅಧ್ಯಾಯಗಳಲ್ಲಿ ಈ ಕುರಿತು ವಿಸ್ತಾರವಾದ ಚರ್ಚೆ ಇದೆ.

[5]ಹಲವಾರು ಮನೆಗಳ ಎದುರು ತೆನೆ ಹೊಡಿಯುವ ಕಣಜದ ಕಲ್ಲುಗಳ ಅನಾಥವಾಗಿ ಬಿದ್ದಿವೆ. ಇದಕ್ಕೆ ಕಾರಣವೂ ಇದೆ. ಇಂದು ತೆನೆ ಹೊಡಿಯುವ ಮೆಶಿನ್ ಬಂದಿದೆ. ತೆನೆ ಕೊಯ್ದು ರಾಶಿ ಹಾಕಿ ಮೆಶಿನ್ ಒಡೆಯನಿಗೆ ತಿಳಿಸಿದರೆ ಸಾಕು ಆತ ಮೆಶಿನ್ ಜತೆ ಹಾಜರು. ಅಲ್ಪ ಸಮಯದಲ್ಲಿ ತೆನೆ ಹೊಡಿಯುವ ಕೆಲಸ ಮುಗಿಯುತ್ತದೆ.

[6]ಹಳ್ಳಿಯ ಜನಸಂಖ್ಯೆ ೧೯೭೧ರಲ್ಲಿ ೨೯೭೩ ಇದ್ದದ್ದು ೧೯೮೧ರಲ್ಲಿ ೩೨೭೪ ಏರಿತ್ತು. ೧೯೮೧ ಮತ್ತು ೧೯೯೧ ಮಧ್ಯೆ ಜನಸಂಖ್ಯೆ ವಿಶೇಷ ವೃದ್ಧಿಯಾಗಿಲ್ಲ. ೧೯೯೧ರಲ್ಲಿ ಜನಸಂಖ್ಯೆ ೩೬೫೪. (ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್, ಡಿಸ್ಟ್ರಿಕ್ಟ್ ಸೆನ್ಸಸ್ ಹೇಂಡ್ ಬುಕ್ ಬಳ್ಳಾರಿ ಡಿಸ್ಟ್ರಿಕ್ಟ್, ಬೆಂಗಳೂರು: ಗವರ್ನ್‌ಮೆಂಟ್ ಆಫ್ ಕರ್ನಾಟಕ, ೧೯೭೧, ೧೯೮೧ ಮತ್ತು ೧೯೯೧)

[7]ಸರಕಾರಿ ಅಂಕಿ ಅಂಶಗಳ ಪ್ರಕಾರ ಊರಲ್ಲಿ ೧೯೯೭ರಲ್ಲಿ ೯೯೮ ದನಗಳು (ಎತ್ತುಗಳನ್ನು ಸೇರಿಸಿ), ೧೬೩ ಎಮ್ಮೆಗಳು, ೯೬೦ ಕುರಿಗಳು, ೯೯೪ ಮೇಕೆಗಳು ಮತ್ತು ೬೮೨ ಕೋಳಿಗಳಿವೆ. (ಡಿಪಾರ್ಟ್‌ಮೆಂಟ್ ಆಫ್ ಎನಿಮಲ್ ಹಸ್‌ಬೆಂಡ್ರಿ ಅಂಡ್ ವೆಟರ್‌ನರಿ, ೧೬ನೇ ಜಾನುವಾರು ಗಣತಿ, ಹೊಸಪೇಟೆ: ವೆಟರ್‌ನರಿ ವೈದ್ಯಾಧಿಕಾರಿಗಳು, ೧೯೯೮)

[8]ಸ್ಥಳೀಯ ಸರಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ಸಮುದಾಯ ಅರಣ್ಯ ಯೋಜನೆ ಆರಂಭವಾಗಿತ್ತು. ಜ್ಯೋತಿನಗರದ ಮಹಿಳೆಯರ ಜತೆ ಊರ ಮಹಿಳೆಯನ್ನು ಸೇರಿಸಿ ಸಮುದಾಯ ಅರಣ್ಯ ಕಮಿಟಿ ರಚಿಸಿದ್ದಾರೆ. ಸ್ಥಳೀಯ ಸರಕಾರೇತರ ಸಂಸ್ಥೆ ಅರುಣೋದಯದ ಪ್ರಕಾರ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ಸಮುದಾಯ ಅರಣ್ಯ ಕಮಿಟಿಯವರನ್ನು ಕಡಗಣಿಸುತ್ತಿದ್ದಾರೆ. ಸರಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಬೇಕಾದ ಇತಿಮಿತಿಯೊಳಗೆ ಬಳಸಿಕೊಳ್ಳುತ್ತಿದ್ದೇವೆ; ಅದರಿಂದ ಹೆಚ್ಚಿನದೇನು ನಮ್ಮಿಂದ ಸಾಧ್ಯವಿಲ್ಲ ಎನ್ನುವುದು ಅರಣ್ಯ ಇಲಾಖೆಯವರ ವಾದ.

[9]ಕೆ.ಇ.ಬಿಯವರ ದಾಖಲೆ ಪ್ರಕಾರ ೧೯೬೮ರಲ್ಲಿ ಊರಲ್ಲಿ ಕೇವಲ ೨ ಪಂಪ್ ಸೆಟ್ಟುಗಳಿಗೆ ಕರೆಂಟ್ ಕನೆಕ್ಷನ್ ಇತ್ತು. ೧೯೮೮ರವರೆಗೂ ವಿಶೇಷ ಬದಲಾವಣೆ ಇರಿಲಿಲ್ಲ. ೧೯೮೮ ಮತ್ತು ೯೮ರ ಮಧ್ಯೆ ಸುಮಾರು ೩೯ ಪಂಪ್ ಸೆಟ್ಟುಗಳಿಗೆ ಕನೆಕ್ಷನ್ ಕೊಡಲಾಯಿತು. ೯೯-೨೦೦೦ದಲ್ಲಿ ಪುನಃ ಹತ್ತು ಸೆಟ್ಟುಗಳಿಗೆ ಕನೆಕ್ಷನ್ ಕೊಟ್ಟಿದ್ದಾರೆ. ಹೀಗೆ ಊರಲ್ಲಿ ಒಟ್ಟು ೬೦ ಪಂಪ್ ಸೆಟ್ಟುಗಳಿವೆ. (ಕೆ.ಇ.ಬಿ.ಕಛೇರಿ, ಕರೆಂಟ್ ಕನೆಕ್ಷೆನ್ ಕೊಟ್ಟಿರುವ ಪಂಪ್ ಸೆಟ್ಟುಗಳ ದಾಖಲೆ, ಹೊಸಪೇಟೆ: ಅಸಿಸ್ಟೆಂಟ್ ಎಂಜಿನಿಯರ್, ೧೯೬೮, ೧೯೮೮, ಮತ್ತು ೧೯೯೯).

[10]ಕೋಷ್ಠಕ-೧೯ರಲ್ಲಿ ಭೂ ಹಿಡುವಳಿ ಸಂಬಂಧಿಸಿದ ಅಂಕಿ ಅಂಶಗಳಿವೆ.

[11]ಕೋಷ್ಠಕ-೨೨ರಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕುಟುಂಬಗಳ ಸಂಖ್ಯೆ ಇದೆ. ಅದರ ಪ್ರಕಾರ ಹಳ್ಳಿಯಲ್ಲಿರುವ ಒಟ್ಟು, ೭೮೧ ಕುಟುಂಬಗಳಲ್ಲಿ ಕೇವಲ ೧೫೮ ಕುಟುಂಬಗಳು ಕೃಷಿಯಲ್ಲಿ ತೊಡಗಿಸಿಕೊಂಡಿವೆ.

[12]ವಿಜಯನಗರ ಕಾಲದಲ್ಲಿ ಕೆರೆ ಮತ್ತು ಕಟ್ಟೆ ಎಂಬ ಎರಡು ಬಗೆಯ ಜಲಾಶಯಗಳಿದ್ದವು. ಹಳ್ಳಿಯ ಒಬ್ಬ ಶ್ರೀಮಂತ ಕೆರೆಯನ್ನು ಕಟ್ಟಿಸುವ ಅಥವಾ ಹಳೆಯ ಕೆರೆಯನ್ನು ರಿಪೇರಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರೆ ಹಳ್ಳಿಯ ಜನರು ಒಟ್ಟುಗೂಡಿ ಅವನಿಗೆ ಭೂಮಿಯನ್ನು ಬಿಟ್ಟುಕೊಡುವ ಕ್ರಮವಿತ್ತು. ನೀರಾವರಿ ಕಾರ್ಯಗಳನ್ನು ನಡೆಸಿದ ಶ್ರೀಮಂತ ವ್ಯಕ್ತಿಗಳನ್ನು ಅರಸರು ಪುರಸ್ಕರಿಸುತ್ತಿದ್ದರು. ದೊಡ್ಡ ವರ್ತಕರು ಭಾರೀ ವೆಚ್ಚದ ಕೆರೆಗಳನ್ನು ನಿರ್ಮಿಸಲು ಮುಂದಾಗುತ್ತಿದ್ದರು. (ಕೆ.ಎಸ್. ಶಿವಣ್ಣ “ಕೃಷಿ ವ್ಯವಸ್ಥೆ”, ಬಿ.ಷೇಕ್ ಅಲಿ ಮತ್ತು ಕೆ.ಎಸ್.ಶಿವಣ್ಣ,ಕರ್ನಾಟಕ ಚರಿತ್ರೆಕ್ರಿ.. ೧೩೩೬೧೭೬೦ಸಂಪುಟ ೩, ಹಂಪಿ: ಕನ್ನಡ ವಿಶ್ವವಿದ್ಯಾಲಯ,೧೯೯೭, ಪುಟ ೧೫೩-೧೯೯)

[13]ಈ ಕೆರೆಯ ಬದಿಯಲ್ಲೇ ಡಾಲ್ಮಿಯಾ ಗಣಿಗೆ ಹೋಗುವ ರಸ್ತೆ ಇದೆ. ಗಣಿಗಾರಿಕೆ ಆರಂಭವಾಗುವ ಮುನ್ನವೇ ಕೆರೆಯ ಕೋಡಿ ಹರಿದಿತ್ತು. ಇದರಿಂದಾಗಿ ಕೆಲವು ಕಡೆ ಗಣಿಗೆ ಹೋಗುವ ರಸ್ತೆ ಕೆರೆಯ ಪಾತ್ರಕ್ಕೆ ಸಮೀಪದಲ್ಲೇ ಹೋಗುತ್ತಿದೆ. ಒಂದು ವೇಳೆ ಕೆರೆ ದುರಸ್ತಿಯಾಗಿ ನೀರು ತುಂಬಿದರೆ ಗಣಿಗೆ ಹೋಗುವ ರಸ್ತೆಯನ್ನು ಗುಡ್ಡದ ಮೇಲಿಂದ ಮಾಡಬೇಕಾಗುತ್ತದೆ. ಅದು ಹೆಚ್ಚು ಸುತ್ತು ಬಳಸು. ಜತೆಗೆ ಹೊಸ ರಸ್ತೆ ಮಾಡುವ ಖರ್ಚು ಬೇರೆ. ಈ ಕಾರಣಗಳಿಗಾಗಿ ಡಾಲ್ಮಿಯಾದವರು ಕೆರೆ ಆಗದಂತೆ ನೋಡಿಕೊಂಡರು ಎಂದು ಊರವರ ಅಭಿಪ್ರಾಯ.

[14]ವಿವರಣೆ ಹೀಗಿದೆ. ಪಾಪಿನಾಯಕನ ಹಳ್ಳಿ ಮತ್ತು ಆಸುಪಾಸಿನ ಹಳ್ಳಿಗಳು ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ನಿಕ್ಷೇಪ ಹೊಂದಿವೆ. ನಿಕ್ಷೇಪಗಳು ಹಿಂದೆ ಹೊಲಗಳ ಆಸುಪಾಸಿನಲ್ಲೇ ಇದ್ದವು. ನೀಕ್ಷೇಪಗಳು ಇರುವ ಜಾಗದಲ್ಲಿ ಕಾಲುವೆ ಹೋದರೆ ಗಣಿಗಾರಿಕೆಗೆ ತೊಂದರೆಯಾಗುತ್ತದೆ ಎಂದು ಗಣಿ ಮಾಲಿಕರೇ, ಅವರೇ ಸ್ಥಳೀಯ ಎಂ.ಎಲ್.ಎ. ಕೂಡ ಆಗಿದ್ದರು, ಕಾಲುವೆ ಆಗದಂತೆ ನೋಡಿಕೊಂಡರು ಎಂದು ಊರ ಕೆಲವರ ಅಭಿಪ್ರಾಯ.