ಕನ್ನಡದ ಅತ್ಯಂತ ಮಹತ್ವದ ಕವಿ ಶ್ರೀ ಗೋಪಾಲಕೃಷ್ಣ ಅಡಿಗರ ಲೇಖನಗಳ ಅಪರೂಪ ಸಂಕಲನ ಇದಾಗಿದೆ. ಕನ್ನಡ ಗದ್ಯದ ವಿಕಾಸಕ್ರಮದಲ್ಲಿ ತಕ್ಷಣವೇ ಒಡೆದು ಕಾಣುವ ವಿಶಿಷ್ಟ ಗುಣಗಳನ್ನು ಈ ಲೇಖನಗಳಲ್ಲಿ ಕಾಣುತ್ತೇವೆ. ಗದ್ಯದಲ್ಲಿಯೂ ಭಾಷೆಯ ಜೊತೆಗೆ ಇವರು ಮಾಡುವ ಹೋರಾಟ, ಗದ್ಯರಚನೆ ಪದ್ಯ ರಚನೆಯಷ್ಟೇ-ಹೊಣೆಗಾರಿಕೆಯರಿತು ಬರೆದ-ಕಷ್ಟದಾಯಕವೆಂಬುವುದನ್ನು ಮನಗಾಣಿಸುತ್ತದೆ. ಶಬ್ದಗಳ ಬಣ್ಣ ಅಥವಾ ಸಂಗೀತವನ್ನೇ ಸಂತೋಷಿಸುವಂತೆ ಭಾಷೆಯನ್ನುಪಯೋಗಿಸುವಾಗ ಬರೆಯುವವನ ಪ್ರವೃತ್ತಿ ಸ್ವಾಭಾವಿಕವಾಗಿಯೇ ಭಾವುಕವಾಗಿರುತ್ತದೆ. ಅಲ್ಲದೇ ಇಂಥ ಗದ್ಯ ಓದುವವರ ಬಗೆಗಿನ ಗೌರವವನ್ನೇನೂ ಸೂಚಿಸದೆ, ಏನು ಹೇಳಿದರೂ ಕೇಳುತ್ತಾರೆಂಬ ಭ್ರಮೆಯಿಂದ, ಅಥವಾ ವಿಪರೀತ ಆತ್ಮೀಯತೆಯಿಂದ ಕೂಡಿರುತ್ತದೆ. ಅಥವಾ ನಾಟಕದ ಪಾತ್ರಧಾರಿಯಂತೆ ಎದುರಿನವರ ಮೆಚ್ಚುಗೆಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡಿದ್ದಾಗಿರುತ್ತದೆ. ಅಂದರೆ ಅಗ್ಗದ ಪದ್ಯದಲ್ಲಿದ್ದ ಮಾನಪತ್ರವನ್ನು ಗದ್ಯವಾಗಿಸಿ ಹೇಳುತ್ತಿದ್ದಾರೆ-ಎಂದು ಅನ್ನಿಸುತ್ತದೆ. ಗದ್ಯ ಗಂಭೀರ ವಿಚಾರಗಳ ನಕ್ಕಿ ಮಾಧ್ಯಮವಾಗಬೇಕಾದಾಗ ಇಂಥ ಕೆಲ ಅನಾವಶ್ಯಕ ಅಲಂಕಾರಗಳನ್ನು ತೊರೆದು ಹೊಸ ಧಾಟಿ-ಧೋರಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಕೇಳುವವನು ಹೇಳುವವನಷ್ಟೇ ಪ್ರಬುದ್ಧನೆಂದು ತಿಳಿದು ಮುಖಾಮುಖಿ ಮಾತನಾಡುವಾಗ ಮುಖವಾಡಗಳನ್ನು ಬಿಡಬೇಕಾಗುತ್ತದೆ. ಇನ್ನೊಬ್ಬನನ್ನು ಗೌರವದಿಂದ ಕಾಣುವ ಅಡಿಗರ ಗುಣ ಅವರ ಗದ್ಯದ ಧಾಟಿಯನ್ನೂ ರೂಪಿಸಿದೆಯೆನ್ನಿಸುತ್ತದೆ.

ಅಡಿಗರದು ದಿನದಿನಕ್ಕೂ ಸಮಕಾಲೀನವಾಗುತ್ತಿರುವ ಚೇತನ. ಸಮಕಾಲೀನತೆಯನ್ನು ಸಮಗ್ರವಾಗಿ ಒಪ್ಪಿ ಸಾಧ್ಯತೆಗಳಿದ್ದಲ್ಲೆಲ್ಲ ಸಾಮರ್ಥ್ಯವನ್ನು ಚಾಚಿ ಸಂಪೂರ್ಣ ಬದುಕನ್ನು ಪ್ರಾಮಾಣಿಕವಾಗಿ ಬದುಕಬಯಸುವ ವ್ಯಕ್ತಿತ್ವ ಅವರದು. ಅದು, ವಯಸ್ಸಿನ ಒಂದು ನಿರ್ದಿಷ್ಟ ಮಿತಿಯನ್ನು ಮುಟ್ಟಿದನಂತರ ಬೆಳೆಯುವ ತಾಕತ್ತು ಕಡಿಮೆಯಾಗಿ ತನ್ನ ಯೌವ್ವನವನ್ನೇ ಮೆಲುಕು ಹಾಕುವ, ಅಂದರೆ ಹಿಂದಿನ ತನ್ನನ್ನೇ ಅನುಕರಿಸುವ ಪ್ರವೃತ್ತಿಗೆ ಹೊರತಾದದ್ದು. ತಮ್ಮ ತರುವಾಯದ ತಲೆಮಾರಿಗೆ ಸಮಕಾಲೀನರಾಗಿದ್ದಂತೆ ನನಗೂ ಅವರು ಸಮಕಾಲೀನರಾಗಿದ್ದಾರೆ. ಸುತ್ತಲಿನ ಆಗುಹೋಗುಗಳಿಗೆ ತಾವಿದ್ದ ಸ್ಥಳ, ಸಮಯಗಳ ಸಂದರ್ಭದಲ್ಲಿ ಜೀವಂತವಾಗಿ ಪ್ರತಿಕ್ರಿಯೆ ತೋರುತ್ತಿದ್ದಾರೆ. ಹೊಸದನ್ನು ಹೊಸ ರೀತಿಯಲ್ಲಿ ಹೇಳಬೇಕೆಂಬ ಖಟಪಟಿಯನ್ನು, ಜಿಡುಪು ಜಿಡುಪಾಗುತ್ತಿರುವ ಅನುಭವವನ್ನು ನಕ್ಕಿಯಾಗಿ ಅಭಿವ್ಯಕ್ತಿಸುವ ಆಹ್ವಾನವನ್ನು ಒಪ್ಪುತ್ತಲೇ ಇದ್ದಾರೆ. ಸಮಕಾಲೀನತೆ ಭೂತ ಕಾಲದ ಪರಿಣಾಮವಾಗಿರುವಂತೆಯೇ ವರ್ತಮಾನದ ಸರ್ವಾಂಗಗಳ ಪೂರ್ತಿ ಪ್ರಜ್ಞೆಯೂ ಆಗಿದೆ. ಅಂದರೆ ನಮ್ಮ ಜೀವನದ ಅಂತಸ್ಸತ್ವ ಹಾಗೂ ನಮ್ಮ ಮೇಲೆ ಪ್ರಭಾವ ಬೀರಿರುವ ಪಾಶ್ಚಾತ್ಯ ಜೀವನ ಪದ್ಧತಿಯ ಅನಿವಾರ್ಯ ಹೊರಾವರಣ ಇವುಗಳನ್ನು ಸಮಗ್ರ ಬದುಕಿನಲ್ಲಿ ಪರಿಣಮಿಸುವುದು. ವರ್ತಮಾನವನ್ನು ನಿರಾಕರಿಸಿ ಭೂತ ಕಾಲದ ‘ಸ್ವರ್ಣಯುಗಕ್ಕೆ ಸ್ವಪ್ನಯಾತ್ರೆ’ ಕೈಗೊಳ್ಳುವುದಾಗಲಿ, ಭೂತ ಕಾಲವನ್ನು ನಿರ್ಲಕ್ಷಿಸಿ ‘ಕಾಲವೆಂದರೆ ವರ್ತಮಾನವೊಂದೇ, ಮನಸ್ಸಿಗಿರುವುದು ಜಾಗ್ರತ ಸ್ಥಿತಿಯೊಂದೇ’ ಎಂದು ತಿಳಿಯುವುದಾಗಲೀ ಅವರ ದೃಷ್ಟಿಯಲ್ಲಿ ಎರಡೂ ಪಲಾಯನ ಮಾರ್ಗಗಳೇ ಆಗಿವೆ. ಆದ್ದರಿಂದಲೇ ನವ್ಯತೆ ಎಂದರೆ ಬರೀ ಕಾವ್ಯಕ್ಕಲ್ಲ ಜೀವನಕ್ಕೂ ಅನ್ವಯಿಸುವಂಥದ್ದಾಗಿದೆ. ಈ ಮನೋವೃತ್ತಿ ಆಂತರಿಕ ಅನುಭವಕ್ಕೆ ಅನುರೂಪವಾದ ವಸ್ತು ಪ್ರತಿರೂಪ ಹಾಗೂ ಭಾಷೆ- ಇವುಗಳನ್ನು ಅವಿಶ್ರಾಂತವಾಗಿ ಸಂಶೋಧಿಸುವಂತೆ ಮಾಡುತ್ತದೆಯಲ್ಲದೇ ತನ್ನತನದ ಸಾಕ್ಷಾತ್ಕಾರಕ್ಕೆ ಮಾರ್ಗವೂ ಆಗುತ್ತದೆ. ಅವರ ಸಮಕಾಲೀನತೆಯ ರಹಸ್ಯ ಒಂದು ನಿಲುವನ್ನು ಮುಟ್ಟುತ್ತಲೂ ತಾನು ಇದಲ್ಲ ಅಥವಾ ಇಷ್ಟೇ ಅಲ್ಲವೆಂದು ಮತ್ತೆ ಮುಂದುವರೆಯುವ ಈ ಪ್ರಯತ್ನದಲ್ಲಿದೆಯೆಂದು ನನಗೆ ಅನ್ನಿಸುತ್ತದೆ.

ವಿಶಿಷ್ಟ ಅರ್ಹತೆಯ ಬಹು ಸಂಖ್ಯಾಕರು ಮತ್ತು ಸರಿಕರು-ಹೀಗೆ ಓದುಗರನ್ನನುಲಕ್ಷಿಸಿ ಈ ಲೇಖನಗಳನ್ನು ಉದ್ದೇಶಪೂರ್ವಕವಾಗಿ ಎರಡು ಮಟ್ಟಗಳಲ್ಲಿ ನಿಂತು ಬರೆದರೆನ್ನಿಸುತ್ತದೆ. ‘ಸಾಕ್ಷಿ’, ‘ಕಳೆದ ಹತ್ತು ವರ್ಷಗಳ ಕಾವ್ಯ’ಗಳ ಸಂಕೀರ್ಣ ಗದ್ಯದೊಂದಿಗೆ ನಿನ್ನೆ ಮೊನ್ನೆ ಬರೆದ ‘ಸಕಾರದ ಪ್ರಶ್ನೆಯ’ ಸರಳ ಗದ್ಯದೊಂದಿಗೆ ಹೋಲಿಸಿ ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಪ್ರಾರಂಭದ ಕೆಲ ಲೇಖನಗಳು, ಪ್ರಶ್ನೆಗೆ ಕೊಟ್ಟ ತರ್ಕಬದ್ಧ ಉತ್ತರದ ಧಾಟಿಯಲ್ಲಿ, ಎದುರಿಗಿದ್ದವರಿಗೆ ತಿಳಿಯ ಹೇಳಲೇಬೇಕೆಂದು ಬರೆದವುಗಳಾದ್ದರಿಂದ ವಿವರಣೆ ಜಾಸ್ತಿಯಾಗುತ್ತದೆ, ಪುನರುಕ್ತಿಯೆಂದೂ ಅನ್ನಿಸುತ್ತದೆ. ವಿಚಾರಗಳನ್ನು ಖಾತ್ರಿಯಾಗಿಸುವ ಭರದಲ್ಲಿ ಉದಾಹರಣೆಗಳು ತೀರಾ ಸರಳವಾಗಿ, ಉಕ್ತಿ ಭಾವಗೀತೆಯ ತೀವ್ರತೆಯನ್ನು ಹೊಂದುತ್ತದೆ. ಇಂಥಲ್ಲಿ ಗದ್ಯದ ಕೆಲವು ಅಪರೂಪವಾದ ಏರಿಳಿತಗಳನ್ನು ಅನುಭವಿಸುತ್ತೇವೆ. ಹಾಗೆಂದು ಹೇಳುವ ಭರದಲ್ಲಿ, ಸೂಕ್ಷ್ಮವ್ಯತ್ಯಾಸದ ಎಷ್ಟೋ ಪದಗಳು ಮನಸ್ಸಿನಲ್ಲಿದ್ದು, ಬಾಯ್ಗೆ ಬಂದ ಪದವೊಂದನ್ನು ತುರುಕಿ ಸ್ಪಷ್ಟತೆಗೆ ಎರವಾಗುವಂತೆ ಅಥವಾ ಭಾವುಕವಾಗಿ ಹೇಳುವುದಿಲ್ಲ. ಆದರೆ ‘ಸಾಕ್ಷಿ’ ಕನ್ನಡದ ಅತ್ಯಂತ ಶ್ರೇಷ್ಠ ಲೇಖನಗಳಲ್ಲಿ ಒಂದೆಂದು ನಾನು ಭಾವಿಸಿದ್ದೇನೆ. ‘ಸಾಕ್ಷಿ’, ‘ಕಳೆದ ಹತ್ತು ವರ್ಷಗಳ ಸಾಹಿತ್ಯ ‘ ಮತ್ತು ‘ಮಣ್ಣಿನ ವಾಸನೆ’ಗಳಲ್ಲಿ ಗದ್ಯದ ರಚನೆ ಜಿಡುಪಾಗುತ್ತ ಹೋಗುತ್ತದೆ. ಹೇಳುವವನ ಕಷ್ಟ ಇನ್ನೂ ಅಧಿಕವಾಗುತ್ತದೆ. ಆಳವಾದ ವಿಚಾರಗಳಿಗೆ ಭಾಷೆಯಲ್ಲಿ ಆಕಾರ ಕೊಡಬೇಕಾದಾಗ ಸಹಜವಾಗಿಯೇ ಅವುಗಳಿಗೊಂದು ಮಿತಿ ಹಾಕಿದಂತಾಗುತ್ತದೆ. ತಾನು ಹೇಳಬೇಕೆಂಬುದಕ್ಕೂ, ಹೇಳುವುದಕ್ಕಿದ್ದ ಬಲಿಯದೆಯಿರುವ ಭಾಷೆಗೂ ನಡುವೆ ಕಂದಕವಿರುವಾಗ ಈ ತೊಂದರೆ ಇನ್ನೂ ಹೆಚ್ಚಾಗುತ್ತದೆ. ಬಡಿವಾರದ, ಹಾರಿಕೆಯ, ಇಂಪಾದ ಪದಗಳಿಂದ ಆಕರ್ಷಕ ಉದ್ಗಾರ ತೆಗೆದು, ಹೇಳಬೇಕಾದುದನ್ನು ಅತಿ ರಂಜಿಸಿ, ಅಂದರೆ ಏನೂ ಹೇಳದೆಯೂ ಹೇಳಿದಂತೆ ನಟಿಸಿ ಈ ತೊಂದರೆಯಿಂದ ಪಾರಾಗಬಹುದು. ಆದರೆ ಹೊಣೆಗಾರಿಕೆಯ ಅರಿವುಳ್ಳ ಪ್ರಾಮಾಣಿಕ ಕವಿಗೆ ಗದ್ಯ ಬರವಣಿಗೆಯೂ ಪದ್ಯದಂತೇ ತನ್ನ ವಿಚಾರಗಳಿಗೆ ಅನುರೂಪವಾದ ಭಾಷೆಯ ನಿರಂತರ ಸಂಶೋಧನೆಯಾಗುತ್ತದೆ. ಗದ್ಯವೂ ಪದ್ಯದಷ್ಟೇ ಕಷ್ಟದಾಯಕವಾಗುತ್ತದೆ. ಗದ್ಯಂ ಕವೀನಾಂ ನಿಕಷಂ ವದಂತಿ- ಈ ಅರ್ಥದಲ್ಲಿ ಗಂಭೀರವಾದ, ಸೂಕ್ಷ್ಮಾತ್‌ಸೂಕ್ಷ್ಮತರವಾದ ವಿಚಾರಗಳನ್ನು ಕನ್ನಡದಲ್ಲಿಯೂ ಅಭಿವ್ಯಕ್ತಗೊಳಿಸುವುದು ಸಾಧ್ಯವಿದೆಯೆಂದು ಈ ಲೇಖನ ‘ಸಾಕ್ಷಿ’ ರುಜುವಾತುಪಡಿಸುತ್ತದೆ. ಪ್ರತಿಯೊಂದು ಪದವನ್ನೂ ಇಲ್ಲಿ ಜವಾಬ್ದಾರಿಯಿಂದ ಆಯ್ದು, ತೂಗಿ, ಬಯಸಿದ ಅರ್ಥವನ್ನು ರವುದೆಯಷ್ಟೂ ಸಂಶಯಕ್ಕೆ ಈಡಾಗದೆ ಸ್ಫುರಿಸುವಂತೆ ಉಪಯೋಗಿಸಲಾಗಿದೆ. ಇದು ಸಮಕಾಲೀನ ಅರಿವಿನ ಮಹತ್ವದ ಪದರುಗಳನ್ನೊಳಗೊಂಡ ಉಳಿಯುವ ಗದ್ಯ ಈ ಲೇಖನಗಳು ಅವರ ಕಾವ್ಯವನ್ನು ಅರ್ಥೈಸುವಲ್ಲಿ ಮಹತ್ವದ ದಾಖಲೆಗಳಾಗಬಹುದೆಂದೂ ಭಾವಿಸುತ್ತೇನೆ.

* * *


[1] ಅಡಿಗರ ‘ಮಣ್ಣಿನ ವಾಸನೆ’ ಗದ್ಯ ಸಂಕಲನಕ್ಕೆ ಬರೆದ ಮುನ್ನುಡಿ-೧೯೬೬.