ಭರತೇಶ ವೈಭವದ ಕಟಕ ವಿನೋದ ಸಂಧಿಯಲ್ಲಿ ಒಂದು ಘಟನೆ ಬರುತ್ತದೆ. ಭರತ ದಿಗ್ವಿಜಯದಲ್ಲಿದ್ದಾಗ ಇರುಳು ಮೂರನೇ ಜಾವದಲ್ಲಿ ತೆರೆನಿಂತ ಕಡಲಂತೆ-ಕಟಕ ಪರವಶವಾಗಿದ್ದಾಗ ಇಬ್ಬರು ಮಾತ್ರ ಎಚ್ಚತ್ತಿದ್ದು ಮಾತಾಡಿಕೊಳ್ಳುತ್ತಿದ್ದಾರೆ:

ಹನಿಗೂಡಿ ಹಳ್ಳ ನಾರೊಳಗೂಡಿ ಹಗ್ಗವೆಂ
ಬನುವಿನೋಳ್ವಡೆಗೂಡಿ ಚಕ್ರಿ |
ಘನತೆವೆತ್ತನು ಸೇನೆ ಹೊರ ಕಾದರಿವನೊಬ್ಬ
ಮನುಜನಲ್ಲವೇ ಯೆಂದರವರು ||

ಅಹುದಹುದಾನೆ ಕುದುರೆ ಮೊದಲಾದ ಸಂ
ಗ್ರಹದೋರಿ ಜನರನಂಜಿಸಿದ |
ಸಹಜಶಕ್ತಿಯ ನೋಡಲಿಗತಗೇನುಂಟಾವ
ಮಹಿಮೆ ನಮ್ಮಂತೆಂದರೊಡನೆ ||

[1]

ಇದನ್ನು ಭರತ ಚಕ್ರಿ ಕೇಳಿಸಿಕೊಂಡ ಮಾರನೇ ದಿನ ಓಲಗದಲ್ಲಿ ಮೊಗವನಲ್ಪ ಮಾಡಿಕೊಂಡು ತನ್ನ ಕಿರಿಬೆರಳ ನರಬಿಗಿದು ಕೊಂಕಿದೆಯೆಂದ. ನೇರಗೊಳಿಸಲಿಕ್ಕೆ ರಾಜವೈದ್ಯರು ಬಂದರು, ಮಂತ್ರವಾದಿಗಳು ಬಂದರು, ಯಂತ್ರಸಿದ್ಧರೂ ಬಂದರು. ಸಾಧ್ಯವಾಗದೆ ಜಟ್ಟಿಗಳು ಬಂದರು. ಒಬ್ಬ ಜಟ್ಟಿ ಆ ಕಿರಬೆರಳನ್ನು ನೇರಗೊಳಿಸುವ ಪ್ರಯತ್ನದಲ್ಲಿದ್ದಾಗ ಭರತ ಕೈ ಎತ್ತಿದರೆ ಆತ ಬಾವಲಿಯಂತೆ ಬೆರಳಿಗೆ ತೂಗಿದನಂತೆ. ಸಾಲದೆಂದು ಇನ್ನಿಬ್ಬರು ಜಟ್ಟಿಗಳು ಆತನ ಕಾಲು ಹಿಡಿದು ತೂಗಿದರೆ ಅಕ್ಷಮಾಲೆ ಎತ್ತಿದಂತಾಯ್ತಂತೆ. ಮುಂದೆ ಬಂಗಾರದ ಸರಪಣಿ ಮಾಡಿಸಿ ಇಡೀ ಸೇನೆ ತೇರಿನ ಮಿಣಿ ಹಿಡಿದಂತೆ ಹಿಡಿದು ಕಾಲ ಪೈಸರಗೊಟ್ಟು ಎಳೆದರು. ಆಗ ಚಕ್ರಿ ತೋಳ ಸೊಕ್ಕರೆ ನೀಡಿದನಂತೆ, ಎಲ್ಲರೂ ಹೊಟ್ಟೆ ಮೇಲಾಗಿ ಕೆಡೆದರು. ಕಟ್ಟಿದ ಆನೆ ತೇಜಿಗಳು ಕೆಡೆದವು. ಅದೇ ಕಿರಿಬೆರಳಿಗೆ ಇನ್ನೊಮ್ಮೆ ಅವರನ್ನೆಲ್ಲ ಹೂಡಿ ಚಕ್ರಿ ಎಳೆದರೆ ಇಡೀ ಸೇನೆ ಚಕ್ರಿಗೆ ಸಾಷ್ಟಾಂಗವೆರಗುವಂತೆ ಬಿದ್ದಿತು. ಈಗ ಸೇನೆಗೆ ಸೇನೆಯೇ ಚಕ್ರಿಯ ಶಕ್ತಿಯ ಬಗ್ಗೆ ಬೆರಗುಪಡೆಯುವಂತಾಯಿತು. ಕೊನೆಗೆ ಮಿತ್ರರಿದ್ದನ್ನು ಹುಸಿರೋಗವೆಂದರಿತು ಪರರಿಂದ ಆಗದು, ನೀನೇ ಮಾಣಿಪುದೆಂದಾಗ ಕೊಂಕಿದ ಬೆರಳನ್ನು ಸರಳವಾಗಿಸಿಕೊಂಡನಂತೆ.

ಕಥಾನಾಯಕನನ್ನು ಇಡೀಯಾಗಿ ವೈಭವಿಸಿಯೇ ನೋಡುತ್ತ, ವರ್ಣಿಸುತ್ತ ರತ್ನಾಕರವರ್ಣಿಗೆ ಇದೊಂದು ಅಸಹಜ ಘಟನೆಯನ್ನಿಸದೆ ಇರುವುದು ಆಶ್ಚರ್ಯವಲ್ಲ. ಇಷ್ಟು ಬಲಶಾಲಿಯಾದವನಿಗೆ ಅಷ್ಟು ದೊಡ್ಡ ಸೈನ್ಯದ ಅಗತ್ಯವೇನಿತ್ತೋ? ಎಂಬ ಪ್ರಶ್ನೆಯೂ ಅಸಂಗತ. ಯಾಕೆಂದರೆ ಓದುಗರಿಗೆ ಈ ಬಗೆಯ ಸಂದೇಹ ಹುಟ್ಟುವುದು ಸಾದ್ಯವೇ ಇಲ್ಲ. ದಿಗ್ವಿಜಯದಲ್ಲಿ ಕೂಡ ಬೇಕಾದಂಥ ಕಠಿಣ ಪ್ರಸಂಗಗಳು ಬಂದರೂ ಒಂದೆರಡು ಸಾಲುಗಳಲ್ಲೇ ಭರತೇಶ ಅವನ್ನೆಲ್ಲ ಗೆದ್ದ ಪರಿಯನ್ನು ನಾವು ನೋಡಿದ್ದೇವೆ. ಸ್ವಯಂ ಇಂದ್ರನೇ ಎದುರಾಗಿದ್ದರೂ ನಮ್ಮ ಕಥಾನಾಯಕ ಗೆಲ್ಲುತ್ತಿದ್ದನೆಂದು ಯುದ್ಧಪೂರ್ವದಲ್ಲಿಯೇ ಯಾರಾದರೂ ಹೇಳಿಬಿಡಬಹುದು.

ಇನ್ನೂ ಒಂದು ಮಾತನ್ನು ಗಮನಿಸಬೇಕು. ಇಲ್ಲಿ ಬಿಟ್ಟರೆ ಬೇರೆಲ್ಲೂ ಭರತೇಶ ತನ್ನ ಶಕ್ತಿ ಸಾಮರ್ಥ್ಯಗಳ ಪ್ರದರ್ಶನ ಮಾಡಿಯೇ ಇಲ್ಲ. ದಿಗ್ವಿಜಯದಲ್ಲಿ ಕೂಡ ರಾಜರು ಭರತನಿಗೆ ಕನ್ಯೆಯರನ್ನೊಪ್ಪಿಸಿ, ಮಾಂಡಳೀಕರಾಗಲಿಕ್ಕೆ ತುದಿಗಾಲ ಮೇಲೆ ನಿಂತವರು. ಒಬ್ಬಿಬ್ಬರು ಎದುರು ನಿಂತರೂ ಭರತನೇ ಸ್ವಯಂ ತೊಡಗಿ ನಿವಾರಿಸಬೇಕಾದಂಥವರಲ್ಲ. ಮಿಕ್ಕ ತಾಂತ್ರಿಕ ತೊಂದರೆಗಳೇನಾದರೂ ಬಂದಲ್ಲಿ ಹದಿನಾಲ್ಕು ರತ್ನಗಳು ಸಿದ್ಧವಾಗೇ ಇವೆ. ಹೀಗಾಗಿ ಕ್ಷಾತ್ರತೇಜಸ್ಸಿನಿಂದ ತುಂಬಬೇಕಾಗಿದ್ದ ಭಾಗವೆಲ್ಲ ಭರತನ ಸಂಸಾರದ ಗಲಾಟೆಯಂದಲೇ ತುಂಬಿದೆ. ಇನ್ನುಳಿದದ್ದು ಒಂದೇ ಸಂದರ್ಭ ಬಾಹುಬಲಿಯ ಜೊತೆಗೆ ಹೋರಾಡಬೇಕಾದದ್ದು. ಅದನ್ನು ಕವಿ ತಪ್ಪಿಸಿಬಿಟ್ಟಿದ್ದಾನೆ. ಹೀಗಾಗಿ ಇಡೀ ಕಾವ್ಯದಲ್ಲಿ ಬಂದ ಈ ಒಂದು ಘಟನೆಯಿಂದಲೇ ನಾವು ಭರತನ ಕ್ಷಾತ್ರ ಸಾಮರ್ಥ್ಯವನ್ನು ಅರಿಯಬೇಕಾಗಿದೆ.

ಎಷ್ಟೇ ಅಸಹಜವಾಗಿರಲಿ, ಈ ಘಟನೆಯಿಂದ ಕವಿಯು ರೋಮಾಂಚಿತನಾಗಿದ್ದನೆನ್ನುವುದು ಸ್ಪಷ್ಟವಾಗಿದೆ. ತೇರನೆಳೆಬಹುದೈಸೆ ಹಗ್ಗವ ಹಾಕಿ ಮೇರವುನಳೆದರೆಬಹುದೇ?-ಎಂಬಲ್ಲಿ ಭರತೇಶ ಮೇರವಿನಂತಿಹದ್ದನೆಂಬುವುದನ್ನು ವಾಚ್ಯವಾಗಿಯೇ ಹೇಳಿದ್ದಾನೆ. ಸಣ್ಣ ಬೆರಳಿನ ಶಕ್ತಿಯೇ ಇಷ್ಟಾದರೆ ಹೆಬ್ಬೆಟ್ಟಿನ ಶಕ್ತಿಯೆಷ್ಟು? ಮುಷ್ಟಿಯ ಶಕ್ತಿಯೆಷ್ಟು? ಬಣ್ಣದನುಡಿಯಲ್ಲ, ಚಕ್ರಿಗುಂಟು, ಅದ್ರಿಯನಣ್ಣೆ ಕಲ್ಲಾಡುವ ಶಕ್ತಿಯೆಂದು ಪರಿವಾರದವರು ಆಶ್ಚರ್ಯಪಟ್ಟದ್ದು, ನಾಯಕನ ನಿರೀಕ್ಷೆಯಂತೆ ಇದೆ. ರತ್ನಾಕರನಿಗೆ ಈ ಘಟನೆಯಿಂದಾದ ಅನಂದ ಇನ್ನೂ ಹೆಚ್ಚು. ಯಾಕೆಂದರೆ ಅಂತ್ಯದಲ್ಲಿ ಸುರರು ಪೂಮಳೆಗರೆದರು, ಮೊಳಗಿತು ಮೂರುವರೆ ಕೋಟಿ ವಾದ್ಯ ಭೋರೆಂದೂ ಹೇಳಿಬಿಟ್ಟಿದ್ದಾನೆ. ಆದರೆ ಇದಂತೂ ಸುರರು ಪೂಮಳೆಗರೆಯುವಷ್ಟು ಅದ್ಭುತವಾದ ಪರಾಕ್ರಮವೇನೂ ಅಲ್ಲ. ಯಾಕೆಂದರೆ ಭರತೇಶನ ಪರಾಕ್ರಮಕ್ಕೆ ಅವನ ಸರಿ ಸರಿ ಪರಾಕ್ರಮಿಗಳ್ಯಾರೂ ಸವಾಲು ಹಾಕಿಲ್ಲ, ಇಬ್ಬರು ಅನಾಮಿಕರಾದ ಯಃಕಶ್ಚಿತ ಸೈನಿಕರಷ್ಟೇ. ಅವರು ಆಡಿಕೊಂಡ ಮಾತಿಗೆ, ತನ್ನ ಸಾಮರ್ಥ್ಯವನ್ನು ಅವರಿಗೆ ಖಾತ್ರಿಯಾಗಿಸಲಿಕ್ಕೆ ಇಷ್ಟೆಲ್ಲ ರಂಪಮಾಡಬೇಕೇ ಒಬ್ಬ ಚಕ್ರವರ್ತಿ? ಭರತೇಶನಿಗೆ ರತ್ನಾಕರನಿಗೆ ಇದರ ಛಲ ಹೆಚ್ಚೆಂದು ತೋರುತ್ತಿದೆ. ಅಥವಾ ಹೀಗಿದ್ದೀತು, ನಾಯಕ ಮುಂದೆಂದೂ, ಹಿಂದೆ ಕೂಡ, ಕ್ಷಾತ್ರ ಪರಾಕ್ರಮ ಮೆರೆದವನಲ್ಲವಲ್ಲ, ಇರುವ ಈ ಅಪರೂಪ ಘಟನೆಗೆ ಹೂಮಳೆ ಸುರಿಸಿಬಿಡೋಣ ಎಂದಿರಬೇಕು.

ಈ ಘಟನೆಗೆ ಸಾಹಿತ್ಯಿಕವಾದೊಂದು ಉದ್ದೇಶವೂ ಇದ್ದಂತಿದೆ. ಈಗಷ್ಟೇ ಶಾಂತಿದೂತನಾಗಿ ಬಾಹುಬಲಿಯ ಬಳಿ ಹೋದ ದಕ್ಷಿಣಾಂಕ ನಿರಾಶನಾಗಿ ಬಂದಿದ್ದಾನೆ. ಯುದ್ಧ ಅನಿವಾರ್ಯವಾಗಿದೆ. ಮುಂದೆ ಬಾಹುಬಲಿಯ ಜೊತೆ ಯುದ್ಧ ನಡೆಯುವುದಿಲ್ಲವಾದ್ದರಿಂದ ಸಾಮರ್ಥ್ಯವಿಲ್ಲದಕ್ಕೆ ಭರತೇಶ ಭಾಷಣದಿಂದ ತಮ್ಮನ ಮನಸ್ಸನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಜನ ಭಾವಿಸಬಾರದು; ಸದ್ಭಾವನೆಯಿಂದ ಹೀಗೆ ಮಾಡಿದನೇ ವಿನಾ ಹೇಡಿತನ ಎಂದಲ್ಲ ಎಂದು ತಿಳಿಯಬೇಕು. ಪಂಪನಲ್ಲಿ ಈ ಘಟನೆಯ ವಾಸ್ತವಿಕ ನಿರೂಪಣೆಯಿದೆ. ಭರತ ಬಾಹುಬಲಿ ಇಬ್ಬರೂ ರಣರಂಗದಲ್ಲಿ ಕಾದಾಡುತ್ತಾರೆ. ರತ್ನಾಕರವರ್ಣಿ ಕತೆಯಲ್ಲಿ ಮಾಡಿಕೊಂಡ ಈ ಮಾಪ್ಪಾಡನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಈ ಘಟನೆಯನ್ನು ತಂದಿದ್ದಾನೆ ಎನಿಸುತ್ತದೆ.

ಈ ಕಿರಿಬೆರಳ ಸಂಗತಿಯನ್ನು ನಾನು ಇಷ್ಟ್ಯಾಕೆ ವಿವರಿಸಿದನೆಂದರೆ ಇಲ್ಲಿ ಜನಪದ ಕತೆಯ ಮಾಮೂಲಿ ಸರಕು ಇರೋದರಿಂದ. ಬೇಕಾದರೆ ಇದಿಷ್ಟು ಭಾಗದಿಂದಲೇ ಒಂದು ಸ್ವತಂತ್ರ ಜನಪದ ಕತೆ ಹೊಸೆಯಲೂಬಹುದು. ಜನಪದ ಕಥೆ ಹೇಳಿ ಕೇಳಿ ಕತೆಯಾದುದರಿಂದ ವಾಸ್ತವಿಕ ನೆಲೆಗಟ್ಟನ್ನು ಮುಟ್ಟದೆ ಅತಿಶಯೋಕ್ತಿಯ ಅಂತರದಲ್ಲಿಯೇ ಹರಿಯುತ್ತದೆ. ಅಂದರೆ ವಾಸ್ತವಿಕತೆಗೂ ಕತೆಗೂ ಒಂದು ಸಮಾನ ಅಂತರ ಕೊನೇತನಕ ಉಳಿದಿರುತ್ತದೆ. ಕೇಳುವವರು ಕತೆಯ ಪಾತ್ರದೊಂದಿಗೆ ತನ್ಮಯತೆ ಸಾಧಿಸದಂತೆ ನೋಡಿಕೊಳ್ಳುವ ಜಾಣ್ಮೆ ಅದು. ಜನಪದ ಕತೆಗಳಲ್ಲಿಯಂತೆಯೇ ಈ ಘಟನೆಗೊಂದು ಆರಂಭ, ಮಧ್ಯ, ಅಂತ್ಯವಿದೆ. ಕತೆ ಮುಂದುವರೆಯುವುದಕ್ಕೊಂದು ಪ್ರೇರಣೆ ಇದೆ. ಆರಂಭದ ಮುಂಚೆಯೇ ಅಂತ್ಯ ನಿರ್ಧಾರವಾಗಿರುವುದರಿಂದ ಅದನ್ನು ತಲುಪಿಸುವುದಕ್ಕೆ ಅವಸರವೇನೂ ಇಲ್ಲವಾದ್ದರಿಂದ ಪ್ರಕ್ರಿಯೆಗೆ ಪ್ರಾಶಸ್ತ್ಯ ಸಿಕ್ಕಿದೆ. ನಿರೀಕ್ಷೆಗೆ ಮೀರಿ ಇಲ್ಲಿ ಯಾರೂ ವರ್ತಿಸುವುದಿಲ್ಲ.

ಮಹಾಭಾರತಕ್ಕೆ ಸಂಬಂಧಪಟ್ಟಂತೆ ಭೀಮಾ ಸೌಗಂಧಿಕಾ ಪುಷ್ಪ ತರಹೋದಾಗ ಹನುಮಂತ ಮುದಿಕಪಿಯ ರೂಪದಲ್ಲಿ ಬಾಲ ಎತ್ತಲಿಕ್ಕಾಗದೆ ಕೂತಿದ್ದು, ಭೀಮ ಅದನ್ನು ಎತ್ತಹೋಗಿ ಸೋತದ್ದು- ಇಂಥದೊಂದು ಉದಾಹರಣೆ ಕತೆಯಿದೆ. ಕೂಸಿನ ರೂಪದಲ್ಲಿದ್ದ ಶಿವನನ್ನು ದೇವತೆಗಳ್ಯಾರು ಎತ್ತಲಾಗದೆ ಸೋಲೊಪ್ಪಿದ ಶಿವಲೀಲೆಯ ಕತೆಯೊಂದಿದೆ. ಮೊದಲನೆಯದನ್ನು ಹನುಮ ಭಕ್ತರೂ, ಎರಡನೆಯದನ್ನು ಶಿವಭಕ್ತರೂ ಹೇಳಿ- ಕೇಳಿಸಿಕೊಳ್ಳುತ್ತಾರೆ. ಇಲ್ಲೆಲ್ಲ ನಾಯಕನ ಅಸಾಧಾರಣ ಸಾಮರ್ಥ್ಯ ಪ್ರದರ್ಶನವಿದ್ದು, ಅದನ್ನು ಲೀಲಾಜಾಲವಾಗಿ ಸಾಧಿಸಿದ ಪರಿ ಹೇಳಿ, ಆತನ ಇಡೀ ಸಾಮರ್ಥ್ಯದ ಬಗ್ಗೆ ದಿಗಿಲು ಹುಟ್ಟಿಸುವುದು, ಆ ಮೂಲಕ ಭಕ್ತಿಯನ್ನು ಹೆಚ್ಚಿಸುವುದು ಇವುಗಳ ಉದ್ದೇಶ.

ಭರತೇಶನ ಕತೆಯೂ ಅದೇ ಜಾಡಿನಲ್ಲಿದೆ. ಇದು ನಾಯಕನ ಬಲಪ್ರದರ್ಶನದ ಒಂದೇ ಒಂದು ಉದಾಹರಣೆಯಾಗಿರುವುದರಿಂದ ಇದರ ಮಹತ್ವ ಇನ್ನೂ ಹೆಚ್ಚು. ಇಡೀ ಕಾವ್ಯದ ಸಂದರ್ಭದಲ್ಲಿ ಈ ಘಟನೆ ಪ್ರತ್ಯೇಕವಾಗಿ ನಿಲ್ಲುವುದೇ ಇಲ್ಲ. ಯಾಕೆಂದರೆ ಈವರೆಗಿನ ಭರತ ಚಕ್ರಿಯ ಪಾತ್ರ ಜನಪದ ರಮ್ಯಕತೆಗಳ ನಾಯಕರಂತೆಯೇ ಇದೆ. ಬೃಹತ್ಕಥೆ, ಅರೇಬಿಯನ್ ನೈಟ್ಸ್ ಓದಿದವರಿಗೆ ಈವರೆಗಿನ ಭರತನ ಪಾತ್ರ ಅಪರಿಚಿತವಲ್ಲ. ಒಬ್ಬನೇ ನಾಯಕ ಅನೇಕ ಪ್ರೇಯಸಿಯರನ್ನು ಹೊಂದಿರುವುದು, ಸಾಹಸದ ಅಂತ್ಯಕಿಟ್ಟ ಪಣಗಳಂತೆ ಅವರು ನಾಯಕನಿಗೆ ದಕ್ಕುವುದು, ಬಹುಸಂಖ್ಯೆಯ ಪ್ರೇಯಸಿಯರೊಂದಿಗೆ ಅಷ್ಟೇ ಸಂಖ್ಯೆಯ ವ್ಯಕ್ತಿತ್ವಗಳಾಗಿ ರಮಿಸುವುದು, ನಾಯಕನ ಪ್ರಭಾವವಲಯದಲ್ಲಿ ಅವರು ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡು, ಅವನ ವೈಭದ ಭಾಗಗಳಾಗಿ, ಉಪಕರಣಗಳಾಗಿ ಅದರಲ್ಲಿಯೇ ಸಾರ್ಥಕ್ಯ ಪಡೆಯುವುದು, ಸಂಬಂಧಗಳಲ್ಲಿ ಘರ್ಷಣೆ ಇಲ್ಲದಿರುವುದು. ಇದೆಲ್ಲ ಜನಪದ ರಮ್ಯಕತೆಗಳ ಸಾಮಗ್ರಿ. ಜನಪದ ಕತೆಗಾರ ತನ್ನ ನಾಯಕ ಎಂತಹ ಅಮಾನುಷ ಸಾಹಸ ಮಾಡಿದರೂ ಒಪ್ಪಿಕೊಳ್ಳುವಂಥ ಸ್ಥಿತಿಗೆ ಕೇಳುವವರನ್ನು ತಂದಿಡುತ್ತಾನೆ. ರತ್ನಾಕರವರ್ಣಿ ಇದನ್ನು ಯಥೇಷ್ಠವಾಗಿ ಬಳಸಿದ್ದಾನೆ. ಇದನ್ನಾತ ಸಾಧಿಸುವುದು ಅಲಂಕರಣದ ಮೂಲಕ.

ಈ ಕಾವ್ಯದ ಹೆಸರೇ ಹೇಳಿ ಕೇಳಿ ಭರತೇಶ ವೈಭವ ಅರ್ಥಾತ್ ಭರತೇಶನ ವೈಭವದ ವರ್ಣನೆ, ಅಂದರೆ ಕವಿ ತನ್ನ ನಾಯಕನನ್ನು ವರ್ಣಿಸಿರುವುದು ವೈಭವದ ಮಟ್ಟದಲ್ಲಿಯೇ ಹೊರತು ದಿನರೂಢಿಯ, ವಾಸ್ತವಿಕತೆಯ ಮಟ್ಟದಲ್ಲಿ ಅಲ್ಲ ಎನ್ನುವುದನ್ನು ಹೆಸರಿನಲ್ಲಿಯೇ ಸ್ಪಷ್ಟಪಡಿಸಿದ್ದಾನೆ. ಇದಕ್ಕೆ ಕಾರಣಗಳೂ ಇವೆ. ಭರತಚಕ್ರಿ ಸಾಮಾನ್ಯನಲ್ಲ, ಸಾಮಾನ್ಯ ಚಕ್ರವರ್ತಿಯೂ ಕೂಡ ಅಲ್ಲ. ಪ್ರಥಮ ತೀರ್ಥಂಕರನ ಮಗ, ಪ್ರಥಮ ಚಕ್ರವರ್ತಿ, ಹದಿನಾರನೆಯ ಮನು, ತೀರ್ಥಂಕರನ ಜೊತೆಗೆ ಉಪನಾಯಕನಾಗಿ, ಬರಬೇಕಾದವನು ಇಲ್ಲಿ ನಾಯಕನಾಗಿ ಬಂದಿದ್ದಾನೆ. ಪುರಾಣದ ಭಾವ ಪ್ರಪಂಚಕ್ಕೆ ಸಂಬಂಧಪಟ್ಟ ಇಂಥ ನಾಯಕನನ್ನು ವಾಸ್ತವಿಕವಾಗಿ, ಕಾವ್ಯದಲ್ಲಿ ತಗುಳ್ಚಿ ಹೇಳುವ ಐತಿಹಾಸಿಕ ಪಾತ್ರದಂತೆ ಚಿತ್ರಿಸುವುದು ಸಾಧ್ಯವಿಲ್ಲ. ಅಭಾಸಕ್ಕೆ ಅವಕಾಶವಿಲ್ಲದಂತೆ ಇಂಥವನನ್ನು ಚಿತ್ರಿಸಲಿಕ್ಕೆ ರತ್ನಾಕರವರ್ಣಿಗೆ ಮಾದರಿಯಾಗಿ ಹೊಳೆದವನು ಜನಪದ ರಮ್ಯಕತೆಗಳ ನಾಯಕ. ಆದ್ದರಿಂದಲೇ ನಿರೂಪಣೆಯ ಅಂಗವಾಗಿ ಅಲಂಕರಣ ಬರುತ್ತದೆ. ಕಣ್ಣುಮುಚ್ಚಿ ಯಾವುದೇ ಪುಟದ ಯಾವುದೇ ಪದ್ಯ ತೆಗೆದು ಓದಿದರೂ ಈ ಮಾತಿಗೆ ಸಾಕ್ಷಿಯಿದೆ. ಸವತಿ ಮತ್ಸರವರಿಯದ ೯೬ ಸಾವಿರ ಮಡದಿಯರಂತೆ, ಚಿನ್ನದ ನೆಲವಂತೆ, ಅರಮನೆಯಂತೆ, ಆ ಒಡ್ಡೋಲಗ, ಆ ಪರಿವಾರ, ಆ ವಿನೋದ, ಆ ಮಾಂಡಳಿಕರು, ಆ ಮಂತ್ರಿಗಳು- ಎಲ್ಲೆಲ್ಲೂ ಇಡೀ ಕಾವ್ಯ ಅಲಂಕರಣದಿಂದ ಇಡಿ ಕಿರಿದು ತುಂಬಿ ಹೋಗಿದೆ. ವಸ್ತುವಿನ ವಿಸ್ಮಯತೆಯನ್ನು ಎಲ್ಲೂ ಉಳಿಸಿಕೊಳ್ಳದೇ ವಾಚ್ಯವಾಗಿ ಒಂದು ಹೇಳುವಲ್ಲಿ ಹತ್ತು ಹೇಳುತ್ತ ಈವರೆಗೆ ಬಂದ ಕತೆಗಾರಿಕೆ ಇಲ್ಲಿಂದ ಮುಂದೆ ವಿಚಿತ್ರವಾದ ತಿರುವನ್ನು ತೆಗೆದುಕೊಳ್ಳುತ್ತದೆ.

ಕೆಲವೇ ಸಂಧಿಗಳ ಹಿಂದೆ, ಭರತ ದಿಗ್ವಿಜಯದಲ್ಲಿದ್ದಾಗ, ಅಯೋಧ್ಯೆಯಲ್ಲಿಯ ತನ್ನ ಅನುಜರಿಗೆ ಶರಣಾಗತರಾಗಬೇಕೆಂದು ಪತ್ರ ಬರೆದು ಕಳಿಸಿದ್ದಾಗ ಅವರಲ್ಲಿ ೯೩ ಮಂದಿ ಸೋದರರು ಸ್ವಾಭಿಮಾನಕ್ಕೆ ಕಟ್ಟುಬಿದ್ದು ಆದಿ ದೇವನ ಬಳಿ ದೀಕ್ಷೆ ಹೊಂದಿ ದಿಗಂಬರರಾದರು. ಭರತನ ಪ್ರಭಾವ ವಲಯದಲ್ಲಿ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದವರು ಹೇಳಿಕೊಳ್ಳುವುದಕ್ಕೆ ಹೆಸರು ಕೂಡಾ ಇರದವರು, ರತ್ನಾಕರವರ್ಣಿ ಕೊಡುವ ಒಂದೆರಡು ಸಾಲುಗಳಲ್ಲಿಯೇ ತೇಲಿ ಮುಳುಗುತ್ತಿದ್ದವರು ಇದ್ದಕ್ಕಿದ್ದಂತೆ, ಅನೀರೀಕ್ಷಿತವಾಗಿ ಸಿಡಿದು ಸ್ವತಂತ್ರರಾಗಿ ಬಿಟ್ಟಿದ್ದಾರೆ. ೯೬ ಸಾವಿರ ಮಡದಿಯರನ್ನಾಳಿದ, ಹುಬ್ಬಿನಲ್ಲೇ ರಾಜ ಮಹಾರಾಜರಿಗೆ ಆಜ್ಞೆ ನೀಡಬಲ್ಲ, ಷಟ್ಖಂಡ ಜಯಿಸಿದ, ಕಿರುಬೆರಳಿನಿಂದ ಸೈನ್ಯ ಸಾಗರವನ್ನೇ ತನ್ನಡಿಗೆ ಚೆಲ್ಲಿಕೊಂಡ ಭರತ ಚಕ್ರವರ್ತಿಗೆ ಅವನ ಸಹೋದರರೇ ವಿರೋಧಿಗಳಾಗಿದ್ದಾರೆ! ಈತ ಉಳಿದವನೊಬ್ಬ ತಮ್ಮ ಬಾಹುಬಲಿಯನ್ನಾದರೂ ಉಳಿಸಿಕೊಳ್ಳೋಣವೆಂದರೆ ಸಂಧಾನ ಮುರಿದು ಯುದ್ಧ ಅನಿವಾರ್ಯವಾಗಿದೆ. ಈ ತನಕ ಅಪ್ಯಾಯಮಾನವಾಗಿದ್ದ, ಆದರ್ಶದ ಸಮಶೀತೋಷ್ಣದಲ್ಲಿ ಹಿತಕರವಾಗಿದ್ದ ವಾತಾವರಣ ಈಗ ಒಮ್ಮೆಲೆ ಸ್ಫೋಟಗೊಂಡು ಬಿಗಡಾಯಿಸುತ್ತದೆ. ಭರತನ ಲೌಕಿಕ ಪತನ ಇಲ್ಲಿಂದಲೇ ಆರಂಭವಾಯಿತು.

ಜನಪದ ರಮ್ಯ ಕತೆಯ ನಾಯಕನಂತೆ ಆಕಾಶಗಮನ ಮಾಡುತ್ತಿದ್ದ ಭರತ ಈಗ ದೊಪ್ಪನೆ ಮಾನವಸ್ತರದ ಮಣ್ಣಿನ ಮೇಲೆ ಬೀಳುತ್ತಾನೆ. ಇಲ್ಲಿಂದ ಮುಂದೆ ಕತೆ ವಾಸ್ತವಿಕವಾಗುತ್ತದೆ. ಹಿಡಿದಿಟ್ಟ ನೀರು ಕಟ್ಟೆಯೊಡೆದು ನುಗ್ಗುವಂತೆ ನಂಬಿದವರು ಕೈ ಮೀರಿ ವರ್ತಿಸುತ್ತಾರೆ. ಎಂತೆಂಥಾ ಗಂಭೀರ ಸಂದರ್ಭಗಳನ್ನು ಲೀಲಾಜಾಲವಾಗಿ ನಿಯಂತ್ರಿಸಿದವನು ಈಗ ಸಣ್ಣ ಸನ್ನಿವೇಶ ಕೂಡಾ ಕಣ್ಣೆದುರಲ್ಲೇ ಅಂಕೆ ಮೀರುವುದನ್ನು ನಿಸ್ಸಹಾಯಕನಾಗಿ, ಕಂಬನಿಗರೆಯುತ್ತ ನೋಡಬೇಕಾಗುತ್ತದೆ. ಯುದ್ಧನಿಂತರೂ ಬಾಹುಬಲಿ ದೀಕ್ಷೆಗೊಳ್ಳುವುದೇನೂ ನಿಲ್ಲಲಿಲ್ಲ. ಸೋದರರೆಲ್ಲ ಮುನಿಸಿನಿಂದ ಮುನಿಗಳಾಗಿ ಮನುವಂಶವೇ ಮುಳುಗುವಂತಾಗಿದೆ. ಅರಮನೆ ಅಧಿಕ ಶೋಕದಿಂದ ಮುಳುಗಿ ಹೋಗಿದೆ. ಷಟ್ಖಂಡ ಗೆದ್ದ ದಿಗ್ವಿಜಯಕ್ಕೆ ಈ ಕೊನೆಯೆ? ಇದನ್ನು ಬಯಸಿ ದಿಗ್ವಿಜಯ ಮಾಡಿದನೆ? ವೃಷಭಾಚಲದಲ್ಲಿ ಹಿಂದಿನ ರಾಜರ ಪ್ರಶಸ್ತಿಗಳನ್ನು ಅಳಿಸಿ, ಅಡ್ಡಬಂದ ಶಾಸನದೇವತೆಗಳನ್ನು ದಂಡಿಸಿ ತನ್ನ ಪ್ರಶಸ್ತಿಯನ್ನು ಕೊರೆಯಿಸಿದಾಗಲೂ ಕರಗದ ಗಂಡುಗರ್ವ ಈ ಕೌಟುಂಬಿಕ ದುರಂತದ ಮುಂದೆ ಕರಗುತ್ತದೆ. ಮಂದಿಗೆ ಮೂರು ದಿನ ಮುಖ ತೋರಿಸದೇ ಒಳಗೊಳಗೇ ಶೋಕಗೊಂಡನಂತೆ.

ಆಮೇಲೆ ತಾಯಿ ಆರ್ಯಿಕೆಯಾದಳು. ಸೇನಾನಿ ಮಹರ್ಷಿಯಾದ, ಮೀಸೆ ಕೂಡ ಮೂಡದ ನೂರು ಜನ ಮಕ್ಕಳಿಗೂ ಅಕಾಲ ವೈರಾಗ್ಯ ಬಂತು. ಸಾಲದ್ದಕ್ಕೆ ತಂದೆ ನಿರ್ವಾಣ ಹೊಂದಿದ. ದಿನಬೆಳಗಾದರೆ ಸಂಬಂಧದ ಒಬ್ಬಿಬ್ಬರು ಜಿನಧೀಕ್ಷೆ ತಗೊಂಡ ಸುದ್ದಿ ಬರುತ್ತಲೇ ಇವೆ. ಯಾರನ್ನು ಸಮಾಧಾನ ಮಾಡಬೇಕು? ಯಾರನ್ನು ಬಿಡಬೇಕು? ಈ ತನಕ ಓದುಗರು ಹಾಗೂ ನಾಯಕನ ಮಧ್ಯ ಇದ್ದ ಅಡ್ಡಗೋಡೆ ಕಳಚಿಬಿದ್ದು ನಾಯಕ ನಮ್ಮಂತಾಗುತ್ತಾನೆ, ನಮ್ಮವನಾಗುತ್ತಾನೆ. ಈಗ ಈತ ಜನಪದ ರಮ್ಯಕತೆಗಳ ನಾಯಕನಲ್ಲ. ಗ್ರಿಕ್ ರುದ್ರ ನಾಟಕದ ನಾಯಕನಂಥವನು.

ಇದನ್ನೇ ನಾನು ಪತನ ಎಂದು ಕರೆದದ್ದು. ಬೇರೆಯವರು ಏನೇ ಹೇಳಲಿ, ಇದಂತೂ ಸ್ಪಷ್ಟವಾಗಿ ವ್ಯಕ್ತಿತ್ವದ ಪತನವೆನ್ನುವುದರಲ್ಲಿ ನನಗೆ ಯಾವ ಸಂದೇಹಗಳೂ ಇಲ್ಲ. ಲೌಕಿಕವಿರುವುದೇ ಅಲೌಕಿಕದ ಸಾಧನೆಗೆ ಎಂಬುವುದನ್ನು ಭರತೇಶನಿಗೆ, ಮೊಲೆಯ ಮೇಲಿದ್ದು ಆತ್ಮನ ನೆಲೆಯ ಕಾಣಬಲ್ಲ ನಿರಂಜನ ಸಿದ್ಧನಿಗೆ ಹೇಳಿಕೊಡಬೇಕೆ? ಅಂಥವನು ಸೋದರರು, ಮಕ್ಕಳು ದೀಕ್ಷೆಗೊಂಡಾಗ, ತಾಯಿ ಆರ್ಯಿಕೆಯಾದಾಗ, ತಂದೆ ನಿರ್ವಾಣ ಹೊಂದಿದಾಗ ಸಾಮಾನ್ಯರಂತೆ ದುಃಖಿಸುವುದನ್ನು, ಮೂರು ದಿನ ಮುಖ ಮುಚ್ಚಿಕೊಂಡು ಅಳುವುದನ್ನು ಹ್ಯಾಗೆ ವಿವರಿಸಲಾದೀತು? ಆದ್ದರಿಂದಲೇ ಈ ಕಾವ್ಯ ಓದಿದಾಗ ಗ್ರೀಕ್ ರುದ್ರನಾಟಕ ಓದಿದ ಅನುಭವವಾಗುತ್ತದೆ.

ಲೌಕಿಕ ಮತ್ತು ಪಾರಮಾರ್ಥಿಕಗಳಲ್ಲಿ ವಿರೋಧ ಕಾಣದೆ ಲೌಕಿಕ ಸಾಮಗ್ರಿಯನ್ನು ಅಲೌಕಿಕದ ಸಾಧನೆಗೆ ಬಳಸಿಕೊಳ್ಳುವ ಒಂದು ಮನೋಧರ್ಮ ಉದ್ದಕ್ಕೂ ಕನ್ನಡ ಕಾವ್ಯ ಪರಂಪರೆಯಲ್ಲಿ ಕಂಡುಬರುತ್ತದೆ. ರತ್ನಾಕರವರ್ಣಿ ಇದಕ್ಕೆ ಹೊರತಾಗಿಲ್ಲ. ಲೌಕಿಕನಾಗಿ ಭರತಚಕ್ರಿ ರಾಜ್ಯಭಾರ, ಸಂಸಾರ, ದಿಗ್ವಿಜಯ ಮಾಡಬೇಕಾಯ್ತು; ಮಾಡಿದ. ಲೌಕಿಕ ಕರ್ತವ್ಯದ ಈ ವೈಭವವನ್ನು ವರ್ಣೀಸಲಿಕ್ಕೆ ರತ್ನಾಕರವರ್ಣಿ ಜನಪದ ರಮ್ಯಕತೆಗಳ ನಾಯಕನನ್ನು ಮಾದರಿಯಾಗಿ ಇಟ್ಟುಕೊಂಡದ್ದು, ನಾಯಕ ನಮ್ಮಂತಾಗಿದ್ದರೆ, ನಿರೂಪಣೆ ವಾಸ್ತವಿಕವಾಗಿದ್ದರೆ, ನಾಯಕನಿಗೂ ಓದುವ ಜಾಣರಿಗೂ ಮಧ್ಯೆ ಅಂತರವೇ ಉಳಿಯದೇ ತನ್ಮಯತೆಯುಂಟಾಗುತ್ತಿತ್ತು. ಕವಿಯ ಕಾವ್ಯೋದ್ದೇಶಕ್ಕೆ ವಿರುದ್ಧವಾಗಿ ಭರತೇಶ ವೈಭವ ಒಂದು ಶೃಂಗಾರ ಕಾವ್ಯವಾಗುತ್ತಿತ್ತು. ನಾನು ಮೇಲೆ ಹೇಳಿದ ವ್ಯಕ್ತಿತ್ವದ ಪತನವನ್ನು ತಾಂತ್ರಿಕ ಪತನವಾಗಿ ಮಾರ್ಪಡಿಸಿದ್ದೇ ರತ್ನಾಕರಸಿದ್ಧನ ಹೆಚ್ಚುಗಾರಿಕೆಯೆಂದು ಅನ್ನಿಸುತ್ತದೆ.

* * *

 


[1] ಭರತೇಶ ವೈಭವ- ಸಂ:  ಜಿ. ಬ್ರಹ್ಮಪ್ಪ, ಹಂಪನಾ, ಕಮಲಾ ಹಂಪನಾ, ಬೆಂಗಳೂರು, ೧೯೬೭ ಪುಟ. ಸಂಖ್ಯೆ ೪೭೩-೭೪