ಶಿವರುದ್ರಪ್ಪನವರು ಅಡಿಗರ ನಂತರದ ತಲೆಮಾರಿನವರಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ, ಅತಿರೇಕವಲ್ಲದ ವೈವಿದ್ಯಮಯವಾದ ಕಾಳಜಿಗಳಿಂದ, ತುಂಬ ಮಹತ್ವದ ಕವಿಯಾಗಿದ್ದಾರೆ. ಕನ್ನಡದಲ್ಲಿ ಬರುತ್ತಿರುವ ನವ್ಯಕಾವ್ಯದ ಓಘದಲ್ಲಿ ಒಂದು ಕಾಲಕ್ಕೆ ಅವರ ಹೆಸರು ವಿಮರ್ಶಕರಿಂದ ಮರೆತುಹೋಗಿರುವ ಉದಾಹರಣೆಗಳುಂಟಾದರೂ ತಮ್ಮ ಕಾಳಜಿಗಳನ್ನು ಭ್ರಷ್ಟಗೊಳಿಸದಿದ್ದುದೇ ಅವರ ಜಿಗುಟತನಕ್ಕೆ ಸಾಕ್ಷಿಯಾಗಿದೆ. ಅವರ ಪ್ರಾರಂಭದ ಕವಿತೆಗಳನ್ನು ಓದಿದರೆ ತಮ್ಮನ್ನು ಒಂದು ವಿಶಿಷ್ಟ ಕಾವ್ಯ ಸಂದರ್ಭದಿಂದ ಬೇರ್ಪಡಿಸಿಕೊಳ್ಳುತ್ತಿದ್ದಾರೆಂದು, ಅಸಾಯಕರಾಗಿ ಆಧುನಿಕವಲ್ಲದ ಮೌಲ್ಯಗಳೊಂದಿಗೆ ಹೊಂದಾಣಿಕೆ ನಡೆಸುತ್ತಿದ್ದಾರೆಂದು ಒಮ್ಮೊಮ್ಮೆ ಅನ್ನಿಸುತ್ತಿತ್ತು. ಇಂಥ ಅನಿಸಿಕೆಗಳಿಗೆ ಅವಕಾಶವಾದುದು ಅವರು ಕುವೆಂಪು, ಬೇಂದ್ರ ಮತ್ತು ಅಡಿಗರ ಮಧ್ಯದ ‘ಸೇತುವೆ-ಕಾವ್ಯ’ ರಚಿಸುತ್ತಿದ್ದಾರೆ ಎಂಬಂಥ ಹೇಳಿಕೆಗಳಿಂದ. ಅಲ್ಲದೇ ಅಡಿಗರ ಕಾವ್ಯ ಹುಟ್ಟಿಸಿದ ನಿರೀಕ್ಷೆಗಳು ಪ್ರತಿಯೊಬ್ಬ ಕವಿಯನ್ನಳೆಯುವ ಪ್ರಮಾಣಗಳಾಗಿ ಸ್ವೀಕೃತವಾದುದರಿಂದ, ಅದಕ್ಕೆ ಹೊಂದದವರನ್ನು ಬೇಂದ್ರೆ, ಕುವೆಂಪುಗಳ ಕಾವ್ಯ ಸಂದರ್ಭಕ್ಕೆ ಅಥವಾ ಅದರ ತುದಿಗೆ ಒಪ್ಪಿಸಿ ಕೈತೊಳೆದುಕೊಳ್ಳುವುದು ವಿಮರ್ಶಕರಿಗೆ ಹಾಯೆನಿಸಿತ್ತು. ಬೇಂದ್ರೆ, ಕುವೆಂಪು ಹಾಗೂ ಶಿವರುದ್ರಪ್ಪನವರ ಕಾವ್ಯಮನೋಧರ್ಮ ಬಹಳ ಭಿನ್ನವಾದುದು. ಹಾಗೆ ನೋಡಿದರೆ ಒಂದೇ ಸಂದರ್ಭದ ಕುವೆಂಪು, ಬೇಂದ್ರೆಗಳ ಕಾವ್ಯ ಮನೋಧರ್ಮಗಳು ಪರಸ್ಪರ ಭಿನ್ನವಾದವುಗಳೂ ಹೌದು. ಆದರೆ ಅವರಿಬ್ಬರು ಕೆಲವು ಮೌಲ್ಯಗಳನ್ನು ಒಪ್ಪಿರುವಲ್ಲಿ ಸಮಾನರಾಗಿದ್ದಾರೆ. ಅಡಿಗರ, ಅವರ ನಂತರದ ಶಿವರುದ್ರಪ್ಪನವರು ಬೇರ್ಪಡುವುದೇ ಇಲ್ಲಿ.

ಅವರು ಹಿಂದಿನ ರೋಮಾಂಟಿಕ್ ಕವಿಗಳು ಬದುಕನ್ನು ಅದರ ವೈಭವಪೂರ್ಣ ಅರ್ಥದಲ್ಲಿ ಒಪ್ಪಿಕೊಂಡರು. ಧಾರ್ಮಿಕ ವಿಧಿಯನ್ನಾಚರಿಸುವ ಪೂಜಾರಿಯಂತೆ ಅದರಲ್ಲಿ ತನ್ಮಯರಾದರು. ಈ ತನ್ಮಯತೆಯಲ್ಲಿ ಶಬ್ದ ಮಂತ್ರವಾಗಿ ಆ ವಿಧಿಯನ್ನು ವಿವರಿಸಲಿಕ್ಕಾಗಿರುವ ವಿವರಣೆ ಅಥವಾ ಪುರಾಣ (Myth)ವಾಗಿ ಕಾರ್ಯ ಮಾಡುತ್ತದೆ. ವಿಧಿಕ್ರಿಯೆಯು ತನ್ಮಯತೆಯಿಂದ ದೂರವಾದಾಗ ಪೂಜಾರಿ ನಟನಾಗುತ್ತಾನೆ. ಶಬ್ದ ತನ್ನ ಮಂತ್ರ ಶಕ್ತಿಯನ್ನು ಕಳೆದುಕೊಂಡು ಕಲೆಯಾಗುತ್ತದೆ. ಅಡಿಗರಲ್ಲಿ ಬರುವ ಯಕ್ಷಗಾನ ಕರ್ಣನ ಭಾಷಣ-ವೈಖರಿಯನ್ನು ಉದಾಹರಣೆಗಾಗಿ ನೋಡಬಹುದು. ಶಿವರುದ್ರಪ್ಪನವರಿಗೆ ತಾವು ತನ್ಮಯದ ಸಂದರ್ಭದವರಲ್ಲವೆಂಬ ಪ್ರಜ್ಞೆಯೊಂದಿಗೆ ನಟನೆ ದುರಂತದ ಅರಿವೂ ಇದೆ, ನಿಜ. ಆದರೆ ಈ ಅರ್ಥದಲ್ಲಿ ಅವರದ್ದು ಸೇತುವೆಕಾವ್ಯ ಎನ್ನುವುದೂ ತಪ್ಪೆ. ಯಾಕೆಂದರೆ ಅವರ ಕಾವ್ಯ ಮನೋಧರ್ಮ ಯಾವ ದೃಷ್ಟಿಯಲ್ಲಿಯೂ ರೋಮಾಂಟಿಕ್ ಮತ್ತು ನವ್ಯಕಾವ್ಯಗಳ ಕೊಂಡಿಯಾಗುವುದಿಲ್ಲ. ಅಡಿಗರಿಗೆ ಗಟ್ಟಿಮುಟ್ಟಾದ ಆರ್ಷೇಯ ನೆಲಗಟ್ಟಿನಿಂದ ತಾನು ಬೇರ್ಪಟ್ಟವನೆಂಬ ಪ್ರಜ್ಞೆಯಿದ್ದಂತೆ ಇವರಲ್ಲಿಯೂ ಇದೆ. ಬದುಕಿನ ದುರಂತ ವಿಕಾರವನ್ನು ಅವರೊಂದಿಗಿನ ಸೋಲಿನ ನೋವನ್ನು ಇವರು ಒಪ್ಪಿಕೊಂಡವರು. ಇವರ ಕಾವ್ಯದ ನಾಯಕ ಸಮಾಜದ ಟೀಕಾಕಾರನಾಗಿ ಸಂಭಾಷಿಸಬಲ್ಲಂತೆ ವಿದೂಷಕನಾಗಿಯೂ ನಗಬಲ್ಲವನಾಗಿದ್ದಾನೆ. ಟೀಕಾಕಾರನಾಗಿ ಸಂಭಾಷಿಸಿದ್ದು ನಿರರ್ಥಕ, ನಿಷ್ಪ್ರಯೋಜಕವೆಂಬ ತಿಳುವಳಿಕೆ ಮೂಡಿ ತನ್ನ ಶಬ್ದ ಶಕ್ತಿಯ ಮಿತಿಯನ್ನು ಕಂಡುಕೊಳ್ಳುತ್ತಾನೆ. ಇದರ ಪರಿಣಾಮವಾಗಿ ವಿದೂಷಕನಾಗುತ್ತಾನೆ. ವಿದೂಷಕ ನಟನೆಯ ಲಘುತ್ವದ ಅರಿವಾಗಿ ಮತ್ತೇ ನಾಯಕನ ಪೋಜು ಕೊಡಲು ಶುರುಮಾಡುತ್ತಾನೆ. ಈ ಮಧ್ಯದ ಲಾಳಿ ಎಸೆತ, ಸಂದಿಗ್ಧ ಭಯಂಕರ ಸ್ಥಿತಿ ಈ ಕಾವ್ಯನಾಯಕನ ದಾರಿ. ನಟನೆಯ ಈ ವಿಶೇಷ ಅರಿವೇ ಅವರನ್ನು ಅಡಿಗರಿಂದ ಬೇರ್ಪಡಿಸುತ್ತದೆ. ಅಂದರೆ, ಅಡಿಗರಿಗಿರುವ ಕೆಲವು ಆರ್ಷೇಯ ಮೌಲ್ಯಗಳಲು ಅವರ ಕಾವ್ಯನಾಯಕನಲ್ಲಿ ಕೆಲವು (positive) ಧೋರಣೆಗಳನ್ನು ರೂಪಿಸುತ್ತವೆ. ಇಲ್ಲಿ ಹಾಗೇ ಆಗದಿರುವುದೇ ಈ ಕಾವ್ಯನಾಯಕನ ವೈಶಿಷ್ಟ್ಯ ಮತ್ತು ಆದ್ದರಿಂದಲೇ ಇದು ಮಹತ್ವದ್ದು.

ಉದಾಹರಣೆಗೆ ”ಮುಂಬೈ ಜಾತಕ” ಎಂಬ ಕವಿತೆಯನ್ನು ನೋಡಬಹುದು. ಈ ಕವಿತೆ ಅವರು ರೋಮಾಂಟಿಕ್ ಕವಿಗಳಿಂದ ಎಷ್ಟು ದೂರ ನಿಂತಿದ್ದಾರೆಂಬುವುದನ್ನು ಸೂಚಿಸುವುದರ ಜೊತೆಗೆ ಅಡಿಗರಿಂದ ಹೇಗೆ ಭಿನ್ನವಾಗಿದ್ದಾರೆಂಬುವುದನ್ನು ಖಾತ್ರಿಯಾಗಿಸುತ್ತದೆ. ಈ ಕವಿತೆ ಆಧುನಿಕ ಮಾನವನ ನಿರರ್ಥಕ ಜೀವನವನ್ನು ಸಾರ್ಥಕವಾಗಿ ಪ್ರತಿಮಿಸುತ್ತದೆ. ಇಲ್ಲಿ ನೋಡಬೇಕಾದ್ದು ಕವಿತೆ ಎಷ್ಟು ಮಟ್ಟಗಳಲ್ಲಿ ದುಡಿಯುತ್ತದೆ ಎಂಬುದು. ಒಂದೆರಡು ಸರ್ವನಾಮಗಳನ್ನು ನಿಷ್ಕ್ರಿಯೆಗೊಳಿಸಿದರೆ ಇದೊಂದು ಮಶಿನ್ ಕುರಿತು ಬರೆದ ಪದ್ಯ ಎನ್ನಿಸಬಹುದಾದಷ್ಟು ಈ ಕವಿತೆಯ ಸಾಮಗ್ರಿ ನಿರ್ಜಿವತೆಯಿಂದ ಕೂಡಿಕೊಂಡಿದೆ. ನೇರವಾಗಿ ವಸ್ತವಿನ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಕೊನೆಯ ಭಾಗದಲ್ಲಿ ಬಂದಿರುವ ಕ್ರಿಯಾಪದಗಳೆಲ್ಲ ಮುಂದುವರೆಯುವುದು, ಎಳುವುದು, ಬಿಡುವುದು, ಹಿಡಿಯುವುದು ಇತ್ಯಾದಿಗಳಲ್ಲಿನ ಸಂದಿಗ್ದತೆ (ambiguity): ಮುಂಬೈ ನಪುಂಸಕಲಿಂಗವಾದ್ದರಿಂದ ವಾಚ್ಯಾರ್ಥದಲ್ಲಿ ಅದಕ್ಕೆ ಸರಿಹೊಂದಿರುವುದರ ಜೊತೆಗೆ ಮಾನವ ಜೀವನದ ನಿಷ್ಕ್ರಿಯತೆಯನ್ನು ಅಥವಾ ಕ್ರಿಯೆಯ ಯಾಂತ್ರಿಕತೆಯನ್ನು ಸೂಚಿಸುತ್ತದೆ. ಇದರ ತಯಾರಿ ಪದ್ಯದ ಪ್ರಾರಂಭದಿಂದಲೇ ಶುರುವಾಗಿದೆ. ಈ ಕಾವ್ಯದ ನಾಯಕ (ಸದ್ಯಕ್ಕೆ ಇವನು ಎಂದಿಟ್ಟುಕೊಳ್ಳಬಹುದು). ನಿಸರ್ಗದಿಂದ ಬದುಕಿನ ಗಟ್ಟಿಮುಟ್ಟಾದ ನೆಲೆಯಿಂದ ಮತ್ತು ಅದರ ತಾಜಾತನದಿಂದ ದೂರವಾಗಿದ್ದವನು.

ಹುಟ್ಟಿದ್ದು: ಆಸ್ಪತ್ರೆಯಲ್ಲಿ     
ಬೆಳೆದದ್ದು: ಬಸ್ಸು, ಕಾರು, ಎಲೆಕ್ಟ್ರಿಕ್ ಟ್ರೇನುಗಳಲ್ಲಿ

ಎಂಬ ಸಾಲು ಗಮನಿಸಬೇಕು. ಕುಡಿದದ್ದು ಎಂಬ ಭಾಗದಲ್ಲಿ ಬರುವ ‘ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು’ ಎಂಬಲ್ಲಿನ ಕಟ್ಟು ಕಥೆಯ ಧಾಟಿ ಆ ನಿಸರ್ಗ ಸಂಬಂಧದ ಕೃತಕತೆಯನ್ನು ಸೂಚಿಸುತ್ತಿದೆ. ಈತ ಕಲಿತದ್ದು ‘ಸಂಚರಿಸು, ಓಡು, ಅವರಿವರ ತಳ್ಳೀ ಮುನ್ನುಗ್ಗು, ಇವೆಲ್ಲ ಕ್ಯೂ, ಫೂಟ್‌ಪಾಪತ್‌ಗಳ ಮೇಲೆ ಓಡು’ ಎಂಬ ಕ್ರಿಯಾಪದದ ಬೇರೆ ಬೇರೆ ಶಬ್ದಗಳಲ್ಲಿ ಪದ್ಯದ ಕೊನೆಯ ತನಕ ಹೇಗೆ ಮೇಲಿಂದ ಮೇಲೆ ಅವತರಿಸುತ್ತದೆ ನೋಡಬೇಕು. ‘ಕಲಿತದ್ದು’ ಮತ್ತು ‘ತಾಯಿ’ ಭಾಗದಲ್ಲಿ ಬೇರಿರದವನು, ಸಂಬಂಧಗಳ ಸಜೀವತೆಗೆ ಎರವಾದವನು ಆಗಿರುವುದರ ಜೊತೆಗೆ ಸಾವಿನ ಬಗ್ಗೆ ಎರಡು ಸಲ ಎಚ್ಚರಿಕೆ ಕಲಿತವನು ಎಂಬುದರಿಂದ ಆತನ ಅನಾಥ ಪ್ರಜ್ಞೆ ಅವನಿಗೆ ಅರಿವಿಲ್ಲದೆ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. ಅವನಿಗೆ ಸಿಕ್ಕ ವಿದ್ಯೆ ಕೂಡ ಅವನು ಬದುಕಿನಿಂದ ವಂಚಿತನಾದ ಸಂಗತಿಯನ್ನು ಖಚಿತವಾಗಿಸುತ್ತದೆ. ಅವನೇ ಖುದ್ದಾಗಿ ಕಲಿತದ್ದು ‘ಬಸ್‌ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದೇ ಹೊರತು’ ಎಂಬಂಥ ಕೇವಲ absurd gesture ಮಾತ್ರ.

ಕೊನೆಯ ಭಾಗವಾದ ಜೀವನ: ಈ ಎಲ್ಲ ಸಂಕೀರ್ಣ ಸಾಮಗ್ರಿ ಗಟ್ಟಿಗೊಂಡು ಹಿಂದಿನ ಭಾಗಗಳನ್ನು ಸ್ಮರಿಸುತ್ತ ಮುಂದುವರಿಯುತ್ತದೆ. ಇನ್ನೊಂದರ ಆಟಿಕೆಯಾಗಿ, ವ್ಯಕ್ತಿತ್ವಹೀನವಾದ ಯಂತ್ರವಾಗಿ ಬಟ್ಟೆಯಲ್ಲಿ ಮೈ ತುರುಕಿ ಓಡುವುದು. ಇದಕ್ಕೂ, ಅಥವಾ ಅವನಿಗೂ ಆಯಾಸವಿದೆ, ಮಡದಿಯಿದ್ದಾಳೆ ಕೊನೆಗೆ,

ತಣ್ಣಗೆ ಕೊರೆವ ಕೂಳುಂಡು
ಬಾಡಿಗೆ ಮನೆಯ ನೆರಳಿನ ಕೆಳಗೆ ಮತ್ತೆ
ಸಾವಿರ ಗಾಲಿಯುಜ್ಜುವ ಕನಸುಬಂಡಿಯ ಕೆಳಗೆ
ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು

ಎಂಬ ಭಯಾನಕ ಚಿತ್ರದೊಂದಿಗೆ ಕವಿತೆ ಕೊನೆಗೊಳ್ಳುತ್ತದೆ. ಇಡೀ ಕವಿತೆಯ ರಚನೆ ಜಾತಕ ಹೇಳುವವನ ದಾಟಿಯಲ್ಲಿದ್ದು, ವಾಚ್ಯವಾದ ಕರ್ಮ, ಕ್ರಿಯಾ ಪದಗಳಿಗೆ ಕರ್ತೃ, ಇಲ್ಲಿ ‘ಇವನು’ ಆಗಿರದೆ ‘ಇದು’ (ಮುಂಬೈ) ಎಂಬುವುದು ಬಹು ಗುಪ್ತವಾಗಿ ಹರಿದು ಬರುತ್ತದೆ. ಇಷ್ಟಾಗಿಯೂ ‘ಇದರ’ ಮಾನುಷ ಗುಣಗಳನ್ನು ತೋರಿಸುವ ಭಾಗಗಳು ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳತ್ತ ಕಣ್ಣಾಡಿಸುವುದು, ಕನಸಿನ ಕೆಳಗೆ ಸಿಕ್ಕು ತತ್ತರಿಸುವುದು, ಕಣ್ಣಾಡಿಸುವುದು ಹಿಂದೆ ಹೇಳಿದಂತೆ ಅರ್ಥಹೀನ gesture ಮಾತ್ರವಾಗಿದ್ದರೆ, ಕನಸಿನಲ್ಲಿ ಕೂಡ ಕರ್ತೃತ್ವ ಮರೆಯದೇ ಅದರ ಗಾಲಿಯ ಕೆಳಗೆ ಹಾಸು ಗಂಬಿಯಾಗಿರುವ ನಿಸ್ಸಾಯಕತೆ ಇದೆ. ಇಡೀ ಕವಿತೆ ನಮ್ಮ ನಗರ ಜೀವನದ ಅನಾಥಪ್ರಜ್ಞೆಯ ಯಾಂತ್ರಿಕ ಅರ್ಥಶೂನ್ಯವನ್ನು ತನ್ನೆಲ್ಲ ಸಂಕೀರ್ಣತೆಗಳ ಮೂಲಕ ಧ್ವನಿಸುತ್ತದೆ. ಗಟ್ಟಿಮುಟ್ಟಾದ ಮೌಲ್ಯಗಳ ಆಧಾರವೂ ಇಲ್ಲದೆ, ಅಂಥ ಆಸೆ ಸಾಧ್ಯತೆಗಳನ್ನು ಉಳಿಸಿಕೊಳ್ಳದ, ಅದರ ಪ್ರಜ್ಞೆಯಿಂದ ನಾಯಕ ನಟಸಾರ್ವಭೌಮನಾಗಿ ಫೋಜು ಕೊಟ್ಟು ಉದ್ಧರಿಸಿಕೊಳ್ಳುವ, ನಟನೆಯನ್ನು ಹೊಂದದ ಈ ನಾಯಕನ ಸ್ಥಿತಿ ಬೇಂದ್ರೆ, ಪುಟ್ಟಪ್ಪ, ಹಾಗೂ ಅಡಿಗರ ಕಾವ್ಯಗಳಲ್ಲಿನ ನಾಯಕರಿಗಿಂತ ಭಿನ್ನವಾದುದು. ಇಷ್ಟಾಗಿ ಕವಿ ಈ ಜಾತಕ ಹೇಳುವಾಗಿನ ವ್ಯಂಗ ತಾಟಸ್ಥ್ಯ ಗಮನಾರ್ಹವಾದುದು. ಅದು ಜಾತಕದಂತ ರಚನೆಯಿಂದ ಸಾಧ್ಯವಾಗಿರಬಹುದಾದರೂ ಅದರ ಮೂಲಕ ಇಷ್ಟೊಂದು ಸಂಕೀರ್ಣವಾದ ಅನುಭವವನ್ನು ಧ್ವನಿಸುವಂತೆ ದುಡಿಸಿಕೊಂಡದ್ದು ಈ ಕವಿತೆಯ ಹೆಚ್ಚುಗಾರಿಕೆ. ಮೊದಲಿನ ಭಾಗಗಳಲ್ಲಿ ಬರುವ ಕಂಡದ್ದು: ಎಂಬ ಭಾಗದಲ್ಲಿ ‘ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು’ ಎಂಬ ಮಾತು ಕವಿತೆಯ ಕೊನೆ ಮುಟ್ಟಿದಾಗ ಬದುಕಿನ ದರ್ಶನವಾಗಿ ಪರಿವರ್ತನೆಗೊಳ್ಳುವುದನ್ನು ಗಮನಿಸಬೇಕು.

ಒಂದು ನಿರ್ದಿಷ್ಟ ಪರಿಹಾರದ ಕಟ್ಟುಪಾಡಿಗೆ ಕವಿ ಬದ್ಧನಾಗದಿದ್ದಲ್ಲಿ, ಅವನು ನಿಂತ ನಿಲುವು ಹೇಗೆ ಗೊತ್ತಾದ್ದಿತೆಂಬ ವಾದವೂ ಇದೆ. ಒಂದು ಕವಿತೆಯನ್ನು ಓದುವ ಮುನ್ನ ಇದ್ದುದಕ್ಕಿಂತ, ಓದಿಯಾದ ಮೇಲೆ ನನ್ನ ಮನಸ್ಸಿನಲ್ಲಿ ಬದಲಾವಣೆ, ಬೆಳವಣಿಗೆ, ಒಂದು ವಿಶೇಷ ಪ್ರಜ್ಞೆ ಹುಟ್ಟಿಕೊಂಡರೆ ಅದು ಸಾರ್ಥಕವಾದ ಪದ್ಯ. ಅಲ್ಲದೇ ಕವಿತೆ ಇದೇ ರೀತಿ ಇರಬೇಕೆಂಬ inhibition ಇಟ್ಟುಕೊಂಡಷ್ಟೂ ಕ್ರಿಯಾಶೀಲತೆಗೆ ಮಿತಿ ಹೆಚ್ಚು. ಇಂಥ ಕವಿ ತನ್ನ ತಾ ಅನುಕರಿಸುವ ಭಯವೂ ಹೆಚ್ಚು. ಶಿವರುದ್ರಪ್ಪನವರು ಇಂಥ ಮಿತಿಗಳನ್ನು ಹಾಕಿಕೊಳ್ಳದಿದ್ದರಿಂದಲೇ ಅವರ ನಂತರದವರಿಗೆ ಸಾಧ್ಯವಾಗದಿದ್ದ ವೈವಿದ್ಯಮಯವಾದ ಕಾಳಜಿಗಳಿಗೆ ಪ್ರತಿಕ್ರಿಯೆ ವ್ಯಕ್ತಮಾಡುವ ಜೀವಂತತನ ಅವರಿಗೆ ಸಾಧ್ಯವಾಗಿದೆ. ಈ ಎಲ್ಲ ದೃಷ್ಟಿಗಳಿಂದ ಈ ಕವಿತೆ ಬಹಳ ಸಾರ್ಥಕವಾದ, ಕನ್ನಡದ ಒಂದು ಉತ್ತಮವಾದ ಕವಿತೆ ಎಂದು ಅನ್ನಿಸುತ್ತದೆ.

* * *