ಕನ್ನಡದಲ್ಲಿ ಬರೆಯುವ ಭಾಷೆಗೂ ಆಡುವ ಭಾಷೆಗೂ ವ್ಯತ್ಯಾಸವಿರುವುದರಿಂದ ಒಂದು ಕಾವ್ಯದಲ್ಲಿ ಅಪರೂಪಕ್ಕೆ ಒಂದೆರಡು ಆಡುನುಡಿ, ಗಾದೆ ಮಾತು ಸಿಕ್ಕರೂ ಅದು ಜನಪದ ಪ್ರಜ್ಞೆ ಎಂದು ಉತ್ಸಾಹಿಸುತ್ತೇವೆ. ಇಂಥಲ್ಲಿ ಜನಪದ ಪ್ರಜ್ಞೆ ಎಂದರೆ ಹಳ್ಳೀ ಜನರ ಆಡುನುಡಿ, ಅವರ ಹಾಡುಗಳ ಲಯಗಾರಿಕೆ ಎಂದು ಮಾತ್ರ ಅರ್ಥ. ಆಡುನುಡಿ ಮತ್ತು ಅದರ ಲಯಗಾರಿಕೆ ಎಷ್ಟೆಂದರೂ ಕಾವ್ಯದ ಹೊರಮೈಗೆ ಸಂಬಂಧಪಟ್ಟವುಗಳು. ಆದರೆ ಅವುಗಳಿಗೆ ಹಿನ್ನೆಲೆಯಾಗಿರುವ ಜನಪದ ಮನೋಧರ್ಮವೂ ಅಷ್ಟೇ ಮುಖ್ಯ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತೇವೆ. ಜನಪದ ಕಾವ್ಯದಲ್ಲಿ ಈ ಮನೋಧರ್ಮದ ಕೆಲವು ಲಕ್ಷಣಗಳು ಒಡೆದುಕಾಣುತ್ತವೆ. ಇವು ನವೋದಯ ಕವಿಗಳಲ್ಲಿ ಎಷ್ಟರಮಟ್ಟಿಗೆ ಕಂಡುಬರುತ್ತವೆ-ಎಂದು ನೋಡುವುದೇ ಈ ಲೇಖನದ ಉದ್ದೇಶ.

ಜನಪದ ಕಾವ್ಯ ಜೀವನದ ಅತಿ ಶ್ರದ್ದೆಯಿಂದ ಹುಟ್ಟಿರುವಂಥಾದ್ದು. ಸುತ್ತಲಿನ ಪ್ರಪಂಚದ ಎಲ್ಲ ವಿವರಗಳಲ್ಲಿ ಉಪಯೋಗವನ್ನು ಕಂಡಿರುವಂಥಾದ್ದು. ಆದ್ದರಿಂದ ವಸ್ತುವಿನ ಆಯ್ಕೆಯಲ್ಲಿ ಯಾವ ಸಂಕೋಚ ಪ್ರವೃತ್ತಿಯೂ ಇರುವುದಿಲ್ಲ. ದೈನಂದಿನ ಬದುಕಿನ ಯಾವುದೇ ವಸ್ತು ಈ ಕಾವ್ಯಕ್ಕೆ ವಸ್ತುವಾಗಬಲ್ಲದು. ವಸ್ತುವಿನಲ್ಲಿ ಹೇಗೋ ಹಾಗೇ ಅಭಿವ್ಯಕ್ತಿಯಲ್ಲಿಯೂ ಇದು ಸಮೃದ್ಧವಾದದ್ದು. ಒಂದನ್ನು ಹತ್ತಾಗಿ ಹೇಳಿದರೂ ದಣಿಯಲಾರದ್ದು. ಉದ್ಗಾರಗಳಂತೂ ತುದಿ ನಾಲಗೆಯ ಮೇಲೆಯೇ ಇರುತ್ತವೆ. ಜೊತೆಗೆ ಬದುಕಿನ ಸ್ವಚ್ಛಂಧತೆಯನ್ನು ಒಪ್ಪಿಕೊಂಡಿರುವಂಥಾದ್ದು; ಅದನ್ನು ನಿಯಂತ್ರಿಸುವ ಯಾವ ನಿಯಮಗಳನ್ನೂ ಹಾಕಿಕೊಂಡಿರುವುದಿಲ್ಲ. ಇದೆಲ್ಲದರಿಂದಾಗಿ ಜಾನಪದಕ್ಕೆ ಬದುಕೇ ಒಂದು ಆಚರಣೆಯಾಗಿರುತ್ತದೆ. ಹಾಡುಗಾರಿಕೆ ಆಚರಣೆಯ ಒಂದು ಪ್ರಮುಖ ಅಂಗವಾಗಿರುತ್ತದೆ. ಒಬ್ಬ ಜನಪದನ ಜೀವನವನ್ನು ಅವಲೋಕಿಸಿದರೆ ಆಚರಣೆಯಿಲ್ಲದ ಒಂದು ವಿವರವೂ ಸಿಕ್ಕುವುದಿಲ್ಲ. ಕಾವ್ಯದ ಸಂದರ್ಭ ಇಂಥ ಆಚರಣೆಯಾದ್ದರಿಂದ ಕಲೆಗಾರಿಕೆಯ ಅಂಶ ಇಲ್ಲಿ ಕಡಿಮೆ. ಆದ್ದರಿಂದ ಅನುಭವವನ್ನು ತೂಗಿ ನೋಡುವ, ಬೆಲೆಗಟ್ಟುವ ದೃಷ್ಟಿ ಜನಪದ ಕವಿಗೆ ಇರುವುದಿಲ್ಲ. ಎದುರಿಗಿನ ಯಾವ ಸಣ್ಣ ವಸ್ತುವನ್ನೂ ಅಷ್ಟೇ ಆಸಕ್ತಿಯಿಂದ, ಪ್ರೀತಿಯಿಂದ ವರ್ಣಿಸುತ್ತಾನೆ, ವೈಭವಿಸುತ್ತಾನೆ. ಆದ್ದರಿಂದ ಒಬ್ಬನೇ ಕವಿಯ ಲಾವಣಿಗಳಲ್ಲಿ ಪರಸ್ಪರ ವಿರುದ್ಧವಾದ ಧೋರಣೆ ಸಿಕ್ಕುವುದು ಸಾಧ್ಯ. ಅಂದರೆ ಕಾವ್ಯ ಸೃಷ್ಟಿಸುವಾಗಿನ ಹಿಂದಿನ ಕ್ಷಣದ ಕವಿಗೂ ಈ ಕ್ಷಣದ ಕವಿಗೂ ಅಂಥ ಸಂಬಂಧವಿಲ್ಲ. ಅಷ್ಟೇ ಯಾಕೆ, ಜನಪದ ಕವಿಗಳಲ್ಲಿಯೇ ಒಬ್ಬ ಕವಿಗೂ ಇನ್ನೊಬ್ಬ ಕವಿಗೂ ವ್ಯತ್ಯಾಸವಿಲ್ಲ. ಆದ್ದರಿಂದಲೇ ಅವರು ತಮ್ಮ ಹೆಸರು ಹೇಳಿಕೊಳ್ಳುವುದೂ ಇಲ್ಲ, ಅಥವಾ ಕಡಿಮೆ. ಹೀಗಾಗಿ ಒಬ್ಬ ಜನಪದ ಕವಿಯ ನಿರ್ದಿಷ್ಟ ನಿಲುವು, ಧೋರಣೆಗಳನ್ನು ಗುರುತಿಸುವುದು ಕಷ್ಟ: ಅಥವಾ ಗುರುತಿಸಬಾರದು. ಮಹತ್ವದ ಮಾತೆಂದರೆ ಜನಪದ ಕಾವ್ಯ ಮುಖ್ಯವಾಗಿ ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ ಏನಿದ್ದರೂ ಗೌಣ.

ನವೋದಯ ಕವಿಗಳಲ್ಲಿ, ಮುಖ್ಯವಾಗಿ ಬೇಂದ್ರೆಯವರಲ್ಲಿಯೂ ವಸ್ತುವಿನ ಬಗ್ಗೆ ಯಾವುದೇ ಸಂಕೋಚ ಪ್ರವೃತ್ತಿ ಇಲ್ಲ. ನಿಸರ್ಗದ ಚೆಲುವು, ದೇಶಪ್ರೇಮ ಕಲೆ, ಸಮಕಾಲೀನ ಬದುಕಿನ ನೂರಾರು ಸಮಸ್ಯೆಗಳೂ, ಗಂಡು-ಹೆಣ್ಣುಗಳ ಪ್ರೀತಿ, ಕೌಟುಂಬಿಕ ಜೀವನದ ಸುಖದುಃಖ, ತಾತ್ವಿಕ ಅನುಭವಗಳು- ಹೀಗೆ ಎದುರಿಗೆ ಏನಿದ್ದರೂ ಅದೆಲ್ಲದರ ಮೇಲೆ ಕವಿತೆ ಬರೆದಿದ್ದಾರೆ. ಅವರ ಸಂವೇದನೆಯ ವ್ಯಾಪಕತೆ ವಸ್ತುವೈವಿಧ್ಯದಿಂದಲೇ ತಿಳಿಯುತ್ತದೆ. ಅಲ್ಲದೆ ಇವರ ಕಾವ್ಯವೂ ಬದುಕಿನ ಬಗೆಗಿನ ಪ್ರೀತಿಯಿಂದಲೇ ಹುಟ್ಟಿರುವಂಥಾದ್ದು; ಅಭಿವ್ಯಕ್ತಿಯಲ್ಲಿಯೂ ಸಮೃದ್ಧವಾದದ್ದು. ಶ್ರಾವಣದಂಥ ಒಂದೇ ವಸ್ತುವಿನ ಬಗ್ಗೆ ಅನೇಕ ಕವಿತೆ ಬರೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಾವ್ಯಸೃಷ್ಟಿಯ ಅವರ ಉತ್ಸಾಹ ಜನಪದ ಕವಿಗೂ ಹುಚ್ಚು ಹಿಡಿಸುವಂತಾದ್ದು. ಅಥವಾ ಇದನ್ನೆ ಬೇರೆ ರೀತಿ ಹೇಳುವುದಾದರೆ ಕವನ ಮಾಡುವ ಕ್ರಿಯೆ ಜನಪದ ಕವಿಯಂತೆ ಇವರಿಗೂ ಉಸಿರಾಟದಷ್ಟು ಸಹಜವಾದದ್ದು. ಆದರೆ ಮಹತ್ವದ ಒಂದು ವ್ಯತ್ಯಾಸವನ್ನು ಗಮನಿಸಬೇಕು; ಜನಪದ ಕವಿಗೆ ಕವನ ಮಾಡುವ ಕ್ರಿಯೆ ಒಂದು ಕಲೆಯಲ್ಲ, ಬೇಂದ್ರೆಯವರಿಗೆ ಅದೊಂದು ಕಲೆ, ಆದ್ದರಿಂದ ಜನಪದ ಕಾವ್ಯದಲ್ಲಿ ಜಗತ್ತಿನಲ್ಲಿರುವ ವಸ್ತು ಮತ್ತು ಕಾವ್ಯದಲ್ಲಿರುವ ವಸ್ತು ಬೇರೆ ಬೇರೆ ಅಲ್ಲ. ಜಗತ್ತಿನಲ್ಲಿ ಸಹಜ ರೂಪದಲ್ಲಿದ್ದುದು ಇಲ್ಲಿ ಅಲಂಕೃತವಾಗಿ ಬರುತ್ತದೆ. ಈ ಅಲಂಕರಣ ಕ್ರಿಯೆ (Decorating) ಜನಪದ ಕಾವ್ಯದ ವಿಶಿಷ್ಟ ಲಕ್ಷಣ. ಉದಾಹರಣೆಗೆ ಜನಪದ ಕಲೆಯಲ್ಲಿ ಮೂಡಿದ ಸಿಂಹದ ಚಿತ್ರ ನೋಡಬಹುದು.  ಅದರ ಕಾಲು, ಟೊಂಕ, ಬಾಲ, ಕೂದಲು ಇವೆಲ್ಲ ಹಬ್ಬಿದ ಬಳ್ಳಿಯ ಹಾಗೆ ಇರುತ್ತವೆ. ಅದರ ಸುತ್ತ ಬಳ್ಳಿಯ ಒಂದು ಚೌಕಟ್ಟು ಇರುತ್ತದೆ. ಎಷ್ಟೋ ಸಲ ಮುಖ, ಕಾಲು ಮೈಕಟ್ಟುಗಳಲ್ಲಿ ಪ್ರಮಾಣವಿರುವುದಿಲ್ಲ. ಸಿಂಹದ ಮುಖ್ಯ ಗುಣ ಅವರ ಉಗ್ರಭಾವ; ಅದನ್ನು ಪ್ರದರ್ಶಿಸುವ ಮುಖ ಬಿಟ್ಟು ಉಳಿದೆಲ್ಲ ದೈವಿಕ ವಿವರಗಳು ಗೌಣವಾಗಿರುತ್ತವೆ, ಸೊಟ್ಟಸೊಟ್ಟಾಗಿ ಕಾಣುತ್ತವೆ. ಹಾಗೆಂದು ಅದನ್ನು ಅಲಂಕರಿಸದೆಯೂ ಬಿಟ್ಟಿರುವುದಿಲ್ಲ. ಇಷ್ಟಾದರೂ ಇಲ್ಲಿಯ ಸಿಂಹ ಸಿಂಹವೇ ಹೊರತು ಬೇರೆ ಯಾವುದಕ್ಕೂ ಸಂಕೇತವಲ್ಲ. ಅಥವಾ ಇನ್ನಷ್ಟೂ ಸ್ಪಷ್ಟವಾಗಿ ಹೇಳಬೇಕೆಂದರೆ ಜನಪದ ಕವಿಗೆ ವಸ್ತು ಕೇವಲ Object ಆಗಿರುತ್ತದೆಯೋ ವಿನಾ Symbol ಆಗಿರುವುದಿಲ್ಲ. ಲಾವಣಿಗಳಲ್ಲಿ ಸಹ ಹಿಂದೆ ನಡೆದ ಘಟನೆಯ ಪುನಃ ಸೃಷ್ಟಿಯೇ ಉದ್ದೇಶವಾಗಿರುತ್ತದೆ. ಕರಿಬಂಟನ ಕಥೆ ಅಥವಾ ಸಂಗೊಳ್ಳಿರಾಯಣ್ಣನ ಕಥೆ ಹಿಂದೆ ನಡೆದುಹೋದದ್ದು; ಮೂಲ ಘಟನೆಯೇ ಅದನ್ನು ಹಾಡುವ ಕವಿಗೆ ಮಾದರಿ. ಅದರ ಪುನರ್ನಿರ್ಮಾಣವಷ್ಟೇ ಕವಿಯ ಜವಾಬ್ದಾರಿ. ಆದರೆ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಹಕ್ಕಿ ಹಕ್ಕಿಯಾಗಿ ಉಳಿಯದೆ ಕಾಲಕ್ಕೆ ಸಂಕೇತವಾಗುತ್ತದೆ. (‘ಹುಬ್ಬಳ್ಳಿ ಯಾಂವ’ ದಂತ ವಿರಹ ಶೃಂಗಾರದ ಹಾಡನ್ನು ಅನುಭಾವ ಪದವೆಂದು ತಿಳಿದು ಕೆಲವು ಮಠಗಳಲ್ಲಿ ಭಜನೆಯ ಪರವಾಗಿ ಹಾಡುತ್ತಾರಂತೆ !) ಅಂದರೆ ಬೇಂದ್ರೆಯವರಿಗೆ ವಸ್ತು ವಸ್ತುವಿಗಾಗಿ ಅಲ್ಲ- ಹೊಸ ಅರ್ಥಗಳನ್ನು ಸೃಷ್ಟಿಸುವ ಸಂಕೇತವಾಗುತ್ತದೆ. ಜನಪದ ಕವಿಯಂತೆ ಇವರೂ ವಸ್ತುವನ್ನೂ ಅಲಂಕರಿಸುತ್ತಾರೆ ನಿಜ; ಆದರೆ ಅದು ನಿರುದ್ದಿಶ್ಯವಾದುದಲ್ಲ; ಹದ್ದು ಮೀರಿದ್ದಲ್ಲ. ಜನಪದ ಕಾವ್ಯದ ಎಷ್ಟೇ ಪದಗಳನ್ನು ಅವರು ತೆಗೆದುಕೊಂಡಿದ್ದರೂ ಅವೆಲ್ಲ ತಮ್ಮ ದೈನಂದಿನ ವ್ಯಾಪಾರವನ್ನು ಮೀರಿ ನಿಲ್ಲುತ್ತದೆ.

ಬೇಂದ್ರೆಯವರು ಕಾವ್ಯ ಮೀಮಾಂಸೆಯ ಬಗ್ಗೆ ಬರೆದ ಕೆಲವು ಕವಿತೆಗಳಲ್ಲಿಯೂ ಇಂಥ ಮಾತುಗಳನ್ನೇ ಹೇಳಿದ್ದಾರೆ. ಜಗತ್ತಿನ ವಸ್ತುಗಳೆಲ್ಲಾ ಅವರಿಗೆ ಭಾವದ (Feeling) ವಸ್ತು ಪ್ರತಿರೂಪಗಳು; (‘ಒಡವ್ಯಲ್ಲೋ ಮಗನೆ ಉರಿಸಿದ್ದೊಡಲು’, “ಇಳೆಯೆಂದರೆ ಬರಿ ಮಣ್ಣಲ್ಲ”) ಬ್ರಹ್ಮವು ತನ್ನ ಶೂನ್ಯಕ್ಕೆ ತಾನೇ ಬೇಸತ್ತು ಶಬ್ದವಾಗಿ ಶಬ್ದ ಬ್ರಹ್ಮವಾಗಿ ಚಿತ್ತಿಗೆ ಗೋಚರಿಸಿತ್ತೆಂದು ಹೇಳುತ್ತಾರೆ. ಅಂದರೆ ಕಾವ್ಯಕ್ರಿಯೆಯ ಮುಖ್ಯ ಪ್ರೇರಕಶಕ್ತಿ ಭಾವ. ಈ ಭಾವ ತನ್ನ ಮೂಕತನದ ಬಂಧನದಿಂದ ಪಾರಾಗಿ ಸ್ವತಂತ್ರವಾಗಲು ಹವಣಿಸುತ್ತದೆ. (ಭವ್ಯನವ್ಯs ಹೃದಯ ದ್ರವ್ಯ | ಕವಿಯಲ್ಲಿ | ದಿವ್ಯ ಕಾವ್ಯದಲ್ಲಿ ಸ್ವಾತಂತ್ರ್ಯಾ ಪಡೆವುದಣ್ಣಾ ಸಪ್ತಕಲಾ). ವಿಶ್ವ ತನ್ನ ಅಂತರಾರ್ಥವನ್ನು ಹೇಳಿಕೊಡಲು, ತಂತಾನೆ ಸ್ಫೋಟಗೊಳ್ಳಲು ಹೇಗೆ ಚಡಪಡಿಸುವುದೆಂಬುವುದನ್ನು “ಘುರೆ ಘುರೆ ಘೊಟಕಾ| ನಡೆ ಅಂತ ಸ್ಫೋಟಕಾ” ಎಂಬ ಪದ್ಯದಲ್ಲಿ ಹೇಳಿದ್ದಾರೆ.  ಕವಿ ಆ ಭಾವವನ್ನು ಕಾವ್ಯದಲ್ಲಿ ಶಬ್ದಾರ್ಥಗಳ ಮೂಲಕ ಹಿಡಿಯುತ್ತಾನೆ. ಅಂದರೆ ಮೂಲದಲ್ಲಿ ಅಮೂರ್ತವಾದ ಭಾವವನ್ನು ಕಾವ್ಯದಲ್ಲಿ ಮೂರ್ತಗೊಳಿಸುತ್ತಾನೆ. ಈ ಮೂರ್ತಗೊಳಿಸುವಿಕೆ ಸಾರ್ಥಕವಾದ ರೀತಿಯಲ್ಲಿ ಇದು ‘ಅಂಬಿಕಾತನಯನ ಹಾಡs’ ಎಂದು ಕವಿಯೇ ಆನಂದಿಂದ ಉನ್ಮಾದಗೊಳ್ಳುವ ರೀತಿಯಲ್ಲಿ ಆಗಬೇಕು. ಒಟ್ಟಿನಲ್ಲಿ ಬೇಂದ್ರಯವರಿಗೆ ವಸ್ತು ಪ್ರಪಂಚದ ಜನದ ಕವಿಯಲ್ಲಿನಂತೆ ಕೇವಲ ವಸ್ತು ಪ್ರಪಂಚವಾಗದೆ ಸಂಕೇತಗಳ ಪ್ರಪಂಚವಾಗುತ್ತದೆ.

ಈ ಸಂದರ್ಭದಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ಜನಪದ ಕಾವ್ಯದ ಮುಖ್ಯ ಲಕ್ಷಣ ಸೇಂದ್ರಿಯತ್ವ (Sensory character) ಜನಪದ ಆಡುನುಡಿಯ ಬಹು ದೊಡ್ಡ ಸೌಭಾಗ್ಯವೆಂದರೆ ತೀವ್ರತೆ (immediacy). ಉಚ್ಛರಿಸಿದ ತಕ್ಷಣವೇ ಆ ವಸ್ತುವಿನ ಸಾಕ್ಷಾತ್ಕಾರವಾಗಬೇಕು. (ಉದಾಹರಣೆಗೆ ಅಮೇಧ್ಯೆ ಎಂಬ ಪದಕ್ಕೂ ಅದು ಸೂಚಿಸುವ ವಸ್ತುವಿಗೂ ಸಾಕಷ್ಟು ದೂರ. ಆದರೆ ಅದಕ್ಕೆ ಸಂವಾದಿಯಾದ ಜನಪದ ‘ಶಬ್ದ’ವನ್ನು ಉಚ್ಚರಿಸುವುದಷ್ಟೇ ತಡವಸ್ತು ಸಾಕ್ಷಾತ್ಕಾರವಾಗಿ ಬಿಡುತ್ತದೆ). ಜಾನಪದದಲ್ಲಿ ಒಂದೊಂದು ಪದಕ್ಕೆ ಒಂದೊಂದೇ ಅರ್ಥವಿರುವುದರಿಂದ ಅರ್ಥದ ಸ್ಷಷ್ಟತೆ- ಸಂವಹನೆಯ ತೀವ್ರ ಮುಕ್ತಾಗುವುದಿಲ್ಲ. ಆದ್ದರಿಂದಲೇ ಅದು ಸರಳವಾಗಿರುತ್ತದೆ. ಸೇಂದ್ರಿಯವಾಗಿರುತ್ತದೆ. ಬೇಂದ್ರೆಯವರು ಜನಪದ ಭಾಷೆಯನ್ನು ಈ ಉದ್ದೇಶದಿಂದಲೇ ಬಳಸುತ್ತಾರೆಂದು ಅನ್ನಿಸುತ್ತದೆ. ಯಾಕೆಂದರೆ ಅವರ ಯಾವ ಕವಿತೆಯಲ್ಲಿಯೂ ಕಣ್ಣಿಗೆ ಹೊಡೆದು ಕಾಣುವ ಸೇಂದ್ರಿಯ ಪ್ರಪಂಚವೊಂದು ಗಟ್ಟಿಮುಟ್ಟಾದ ಅರ್ಥವೊಂದು ಇದ್ದೇ ಇರುತ್ತದೆ. ಉದಾಹರಣೆಗೆ ‘ಜೋಗಿ’ ಕವಿತೆಯನ್ನೇ ನೋಡಬಹುದು. ಅದು ‘ಜೀವನದಲ್ಲಿ ಮೂಡುವ ಕಾಳರಾತ್ರಿಯ ಅನುಭವದ ವರ್ಣನೆಯೇ ಆಗಿರಲಿ, ಅಥವಾ ಅಲ್ಲಿನ ವಿವರಗಳಲ್ಲಿ ತಾತ್ವಿಕ ಪ್ರತಿಮೆಗಳೇ ಇರಲಿ; ಭೌಗೋಳಿಕ ವಿವರಗಳಲ್ಲಿ ಗೂಢ ಅನುಭವವೊಂದರ ವಾತಾವರಣ, ಕಣ್ಣಿಗೆ ಕಟ್ಟುವುದಂತೂ ನಿಜ.

ಜನಪದ ಕವಿ ಸಮೂಹ ಪ್ರಜ್ಞೆಯುಳ್ಳವನು; ಸಮೂಹದಿಂದ ಭಿನ್ನವಾದ ಹೆಸರಾಗಲಿ ವ್ಯಕ್ತಿತ್ವವಾಗಲಿ ಆತನಿಗೆ ಇರುವುದಿಲ್ಲ. ಕವನ ಮಾಡುವ ಕ್ರಿಯೆ ಸಾಮೂಹಿಕ ಚಟುವಟಿಕೆಯ ಒಂದಂಗ ಮಾತ್ರ. ಆತನ ಹಾಡುಗಾರಿಕೆಗೆ ಸಮಾಜ ಜೀವನದಲ್ಲಿ ನಿರ್ದಿಷ್ಟ ಉದ್ದೇಶಗಳಿವೆ. ಉಳಿದವರ ಕಸುಬುಗಳಿಗೆ ಬೇರೆ ಬೇರೆ ಉದ್ದೇಶಗಳಿದ್ದಂತೆ. ಈ ಉದ್ದೇಶಗಳನ್ನೆಲ್ಲ ಸಾಮಾನ್ಯವಾಗಿ ಧಾರ್ಮಿಕವೆಂಬಂಥ ಆಚರಣೆಗೆ ಸಂಬಂಧಪಟ್ಟಿರುತ್ತವೆ. ಆದ್ದರಿಂದ ಹಾಡುಗಾರಿಕೆಯಲ್ಲಿ ಆಚರಣೆಯ ಅಂಶಗಳಾದ ಕಾವ್ಯವಸ್ತುವನ್ನು ವೈಭವಿಸುವಿಕೆ, ಹಾಡಿ ಹರಸುವಿಕೆ, ಹೊಗಳುವಿಕೆ, ಇತ್ಯಾದಿಗಳು ಬಂದಿರುತ್ತವೆ. ಇಂಥ ವಸ್ತು ವೈಭವಿಸುವುದಕ್ಕೆ ಯೋಗ್ಯವೆಂದು ಎಲ್ಲರಿಂದ ಒಪ್ಪಿತವಾದದ್ದು, ಯಾವ ವಸ್ತು ವೈಭವಯೋಗ್ಯ, ಯಾವುದಲ್ಲ-ಎಂದು ತಮ್ಮಲ್ಲಿನ ನೈತಿಕ ಮೌಲ್ಯಗಳಿಂದಲೇ ನಿರ್ಧರಿಸಿರುತ್ತಾರೆ. ಒಳ್ಳೆಯದು ಬಾಳಬೇಕು. ಕೆಟ್ಟದ್ದು ನಾಶವಾಗಬೇಕು. ಇಷ್ಟು ಸರಳವಾದ ಪೂರ್ವ ನಿರ್ಧಾರಿತವಾದ ಮೌಲ್ಯ ವಿವೇಚನೆಯಿಂದಾಗಿ ಜನಪದ ಕಾವ್ಯದಲ್ಲಿ ದ್ವಂದ್ವ ಕಡಿಮೆ, ಅಥವಾ ಇರುವುದಿಲ್ಲ. ಕವನಗಳ ಸಾಮೂಹಿಕತೆ, ಸರಳತೆಯಿಂದ ಕವನದಲ್ಲಿ, ಅದರ ಆಚರಣೆಯಲ್ಲಿ ಭಾಗವಹಿಸುವಿಕೆ, ತನ್ಮಯತೆ ಅಲ್ಲಿದ್ದವರಿಗೆಲ್ಲ ಸುಲಭವಾಗುತ್ತದೆ.

ಬೇಂದ್ರೆಯವರು ತಾವಿದ್ದ ಸಮಾಜದಿಂದ ಭಿನ್ನವಾದ ಯಾವ ಧೋರಣೆ, ಮೌಲ್ಯಗಳನ್ನೂ ಪ್ರತಿಪಾದಿಸಿಲ್ಲ. ‘ಕುಣಿಯೋಣ ಬಾರs’ ‘ಮನದನ್ನೇ’ ‘ನೀ ಹಿಂಗ ನೋಡಬ್ಯಾಡ ನನ್ನ’ ಮುಂತಾದ ಎಷ್ಟೋ ಕವನಗಳ ಮೂಲಭಾವ ಕವಿಯದೇ ಆಗಿದ್ದರೂ ಅದು ಸಾಮಾನ್ಯರ ಜೀವನದ ಒಂದು ಭಾಗವಾಗಿ ಮಾತ್ರ ಬರುತ್ತದೆ. ಜನಸಾಮಾನ್ಯರ ಜೀವನದ ಸುಖದುಃಖಗಳನ್ನು ಕವಿ ಸ್ವಂತ ಸುಖದುಃಖಗಳಂತೆ ಆತ್ಮೀಯತೆಯಿಂದ ಚಿತ್ರಿಸುತ್ತಾನೆ. ‘ಅನ್ನಾವತಾರ’ದಂಥ ಕವನಗಳ ಆರ್ದ್ರತೆ, ಹೃದಯವೇಧಕತೆ ಇಂಥ ಆತ್ಮೀಯತೆಯಿಂದ ಬಂದದ್ದು. ಬೇಂದ್ರೆಯವರು ಸಾಮಾನ್ಯರ ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಹೇಗೆ ಪಾಲುಗೊಳ್ಳುತ್ತಾರೆಂಬುವುದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು. ಸ್ವಂತ ಅನುಭವಗಳನ್ನು ಹೇಳುವಾಗಲೂ ಕೂಡ ಜನಸಾಮಾನ್ಯರ ಜೀವನದ ಒಟ್ಟು ಸಂದರ್ಭದಲ್ಲಿಯೇ ನಿಂತುಕೊಂಡಿರುತ್ತಾರೆ. ‘ಸಖಿಗೀತ’ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅದು ಹೇಳಿ ಕೇಳಿ ಕವಿಯ ಆತ್ಮಚರಿತ್ರೆ. “ಮದುವೆಯ ಮಧುರ ಸ್ಮೃತಿಗಳಿಂದ ಪ್ರಾರಂಭವಾಗುವ ಗೀತ, ದಾಂಪತ್ಯದಲ್ಲಿ ಸಖ್ಯಯೋಗ ಮೂಡಲಿ ಎಂಬ ಹಾರೈಕೆಯೊಂದಿಗೆ ಮುಗಿಯುತ್ತದೆ. ಕವಿಯ ಸುಖದುಃಖಗಳು, ದಾಂಪತ್ಯದ ಸರಸ ವಿರಸಗಳು, ಸಂಸಾರದ ಅನೇಕ ತಾಪತ್ರಯಗಳು ಇದೇ ಕಾವ್ಯದ ವಸ್ತುವಾಗಿದೆ… ಅಷ್ಟೇ ಅಲ್ಲ ಋತುಮಾನಗಳ ಚಿರಂತನ ಲೀಲೆ ಕೂಡ ಕವಿಯ ನೆನಪುಗಳ ಮೂಲಕ- ಒಂದು ಸ್ಥಾನಿಕ ಕ್ರಿಯೆಯಾಗಿ ಪರಿಣಮಿಸಿದೆ. ಆದರೆ ಇಲ್ಲಿ ಬಂದಿರುವ ಜೀವನ ಚಿತ್ರ ವೈಯಕ್ತಿಕವಾಗಿದ್ದರೂ ಸಾಮಾನ್ಯ ಜೀವನದ ಒಂದು ಅಂಶವಾಗಿ ಬಂದಿದೆ. ದಾಂಪತ್ಯದಲ್ಲಿ ಸಖ್ಯಯೋಗ ಬರಬೇಕೆಂಬುವುದು ಬೇಂದ್ರೆಯವರ ಕಾವ್ಯದರ್ಶನ. ಅದು ಸಾಮಾನ್ಯ ಸಂಸ್ಕೃತಿಗೆ ಯಾವ ರೀತಿಯಿಂದಲೂ ಭಿನ್ನವಾಗಿಲ್ಲ”. ಉದ್ದೇಶವನ್ನು ಹೊರತುಪಡಿಸಿ, ಉಳಿದೆಲ್ಲ ಆಚರಣೆಯ ಅಂಶಗಳು-ತೀವ್ರತೆ, ತನ್ಮಯತೆ ವಸ್ತುವನ್ನು ವೈಭವಿಸುವುದು, ಹಾಡಿ ಹರಸುವಿಕೆ, ಅಲಂಕರಣ ಕ್ರಿಯೆ ಇವೆಲ್ಲವೂ ಇವರ ಕಾವ್ಯದಲ್ಲೂ ಇವೆ, ಜನಪದ ಕಾವ್ಯದಲ್ಲಿನಂತೆ.

ವಿವರಗಳ ಬಣ್ಣಗಾರಿಕೆ- ಜನಪದ ಕಾವ್ಯದ ಇನ್ನೊಂದು ಲಕ್ಷಣ. ವಿವರಗಳು ಒಮ್ಮೊಮ್ಮೆ ಮೂಲ ವಸ್ತುವಿಗೆ ಭಾರವಾಗುವಷ್ಟು ಸೊಕ್ಕಿರುತ್ತದೆ. ಹೌದು. ಆದರೆ ಸಾಮಾನ್ಯವಾಗಿ ವಸ್ತುವಿನ ಬಗ್ಗೆ ಮುಖ್ಯವಾಗಿ ಹೇಳಬೇಕಾದ್ದರ ಕಡೆಗೇ ಹೆಚ್ಚು ಗಮನ ಕೊಟ್ಟು ಉಳಿದ ವಿವರಗಳನ್ನು ನಿರ್ಲಕ್ಷಿಸುವುದೇ ಹೆಚ್ಚು. ವಿವರಗಳ ಉದ್ದೇಶ ವಾತಾವರಣ ಸೃಷ್ಟಿಯೇ ಆಗಿದೆ. ಅಂದರೆ ಹಿಂದೆ ಆಗಿ ಹೋದ ಘಟನೆಯನ್ನು ಪುನಃ ಸೃಷ್ಟಿಸುವುದು. ಇಂಥ ವಿವರಗಳು ಲಾವಣಿಗಳಲ್ಲಿ ಆಚರಣೆಯ ಅಂಗವಾಗಿ ಬರುತ್ತವೆ. ಆಚರಣೆಯ ಅಂಶವನ್ನು ಹೊರತುಪಡಿಸಿದರೆ ಆ ಲಾವಣಿಗಳು ರಸಾರ್ದ್ರವಾದ ಕಾವ್ಯಗಳಾಗುತ್ತವೆ; ಇಲ್ಲವೇ ಶಬ್ದಸ್ಮೃತಿಯಾಗುತ್ತವೆ. ‘ಸಖೀಗೀತ ‘ ಇಂಥ ರಸಾರ್ದ್ರವಾದ ಕಾವ್ಯವಾಗಿದೆ.

ಅಲ್ಲಿಯ ವಿವರಗಳ ಬಣ್ಣಗಾರಿಕೆ-ಸ್ವಚ್ಛಂದ ವಾತಾವರಣ ಸೃಷ್ಟಿಸುತ್ತದೆ. ಮತ್ತು ಅದು ಎಷ್ಟು ಸ್ವಚ್ಛಂದವಾಗಿರುತ್ತದೆಯೆಂದರೆ ಚೌಕದ ಅಂತ್ಯಕ್ಕೆ ಬರುವ ಪಲ್ಲವಿಯು ಅದನ್ನು ನಿಯಂತ್ರಿಸಲು ಅಸಮರ್ಥವಾಗಿದೆ. ದಾಂಪತ್ಯಕ್ಕೆ ಸಖ್ಯಯೋಗ ಒದಗಲೆಂಬ ಕವಿಯ ದರ್ಶನ ಅಲ್ಲಿಯ ವಾತಾವರಣದ ಮೇಲೆ ಎಷ್ಟಷ್ಟೂ ಪ್ರಭಾವ ಬೀರುವುದಿಲ್ಲ. ಆ ವಾತಾವರಣದ ಒಂದಂಗವಾಗಿ- ಒಂದೆರಡು ಸಾಲಾಗಿ ಹಬ್ಬಿಕೊಳ್ಳುತ್ತದೆ ಅಷ್ಟೇ.

ಬೇಂದ್ರೆಯವರ ಕವನಗಳಲ್ಲಿ ಸಕ್ರಮವಾದ ಬೆಳವಣಿಗೆ ಸಿಕ್ಕುವುದಿಲ್ಲ ಎಂಬುದೊಂದು ಅಭಿಪ್ರಾಯವಿದೆ. ಅವು ಕಾಲಕ್ರಮದಂತೆ ಅಚ್ಚಾಗಿಲ್ಲದ್ದು ಒಂದು ತೊಂದರೆಯಾದರೆ ಸಾಮಾನ್ಯ ಜೀವನದ ಆಚರಣೆಯಿಂದ ತಾತ್ವಿಕ ಅನುಭವದವರೆಗಿನ ಕವನಗಳೆಲ್ಲ ಒಂದೇ ಸಂಕಲನದಲ್ಲಿ ಬಂದಿರುವುದು ಇನ್ನೊಂದು ತೊಂದರೆ. ಬದುಕನ್ನು ಅದರ ಸಮಗ್ರ ಸ್ವಚ್ಛಂದತೆಯೊಂದಿಗೆ ಒಪ್ಪಿದ ಕಾವ್ಯದಲ್ಲಿ ಅಂಥ ಬೆಳವಣಿಗೆಯನ್ನು ನಿರೀಕ್ಷಿಸುವುದು ಬಹುಶಃ ಸರಿಯಾಗಲಾರದೆಂದು ತೋರುತ್ತದ. ಯಾಕೆಂದರೆ ತಾನೂ ನಿಂತಸಂದರ್ಭಕ್ಕೆ ಪರಕೀಯನಾದಾಗ ಆ ಸಂದರ್ಭವನ್ನು ಪ್ರಶ್ನಿಸುವ, ಅದರೊಂದಿಗೆ ಸಂವಾದಿಸುವ, ಅದಕ್ಕಿಂತ ಭಿನ್ನವಾದ ತನ್ನನ್ನು ವ್ಯಾಖ್ಯಾನಿಸಿಕೊಳ್ಳುವ ಅಗತ್ಯ ಬೀಳುತ್ತದೆ. ಕೆಲವು ಕವಿತೆಗಳಲ್ಲಿ ಅವರೂ ಸಿಟ್ಟಿಗೇಳುತ್ತಾರೆ. ನಿಜ, ಆದರೆ ಅದೆಲ್ಲ ಜೀವನದ ಅತಿ ಶ್ರದ್ಧೆಯಿಂದ ಬಂದದ್ದು. ಅಥವಾ ಭಾವಾವೇಶದಿಂದ ಬಂದದ್ದು. ಇದು ಜನಪದ ಕವಿಯ ಮುಗ್ಧ ಶ್ರದ್ಧೆಗಿಂತ ಹೆಚ್ಚು ಪ್ರಬುದ್ಧವಾದದ್ದು.

ಜನಪದ ಸತ್ವದಿಂದಲೇ ಕವಿಯಾದ ಆನಂದಕಂದರ ಕವಿತೆಗಳೊಂದಿಗೆ ಹೋಲಿಸಿದರೆ ಬೇಂದ್ರೆಯವರ ಹೆಚ್ಚುಗಾರಿಕೆ ಸ್ಪಷ್ಟವಾಗುತ್ತದೆ. ಜನಪದ ಪ್ರೀತಿ ಇವರಲ್ಲಿ ಎಷ್ಟು ದಟ್ಟವಾಗಿದೆಯೆಂದರೆ ಜನಪದ ಕಾವ್ಯಕ್ಕೂ ಇವರ ಕಾವ್ಯಕ್ಕೂ ವ್ಯತ್ಯಾಸವೇ ಉಳಿಯುವುದಿಲ್ಲ. ಸಾಲದ್ದಕ್ಕೆ ಜನಪದ ಕವಿಯ ಮಿತಿಗಳೆಲ್ಲ ಇವರ ಕಾವ್ಯಗಳಲ್ಲಿಯೂ ಪುನರಾವರ್ತಿಸುತ್ತವೆ. ಅದೇ ಮುಗ್ದ ಉತ್ಸಾಹ, ಅವರೇ ತೆರೆದುಕೊಂಡ ಬೆರಗುಗಣ್ಣು, ಪ್ರಾಥಮಿಕ ಅವಸ್ಥೆಗಳಿಂದಾಗಿ ಅವರ ಕಾವ್ಯ ಹೆಚ್ಚೆಂದರೆ ಜನಪದ ಹಾಡುಗಳಾಗುತ್ತವೆ. ಅದಕ್ಕಿಂತ ಹೆಚ್ಚಲ್ಲ.

ಮಧುರಚೆನ್ನರು ಜನಪದ ಸತ್ವವನ್ನು ಅನುಭಾವದ ಅಭಿವ್ಯಕ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಾರೆ. ಲೋಕದ ವಿವರಗಳನ್ನು ಅತೀಂದ್ರಿಯ ಅನುಭವದ ಚಟುವಟಿಕೆ ಕಾಣುವುದು ಅವರ ವಿಶೇಷ. ಅಂಥ ಚಟುವಟಿಕೆಯ ವರ್ಣನೆ ಮಾಡುವಾಗಲೂ ಜನಪದ ಶಬ್ದಗಳನ್ನು ತೂಗಿ ತೂಗಿ ಆಯ್ಕೆ ಮಾಡಿ ಅವುಗಳ ಒರಟುತನ ಸುಲಿಯುತ್ತಾರೆ. ‘ನನ್ನ ನಲ್ಲ’ದ ಮಧುರಭಾವ ಭಕ್ತಿಗೆ ಅದರ ಅಗತ್ಯವು ಇದ್ದೀತು. ಅಥವಾ ಅಗತ್ಯಕ್ಕೆ ತಕ್ಕಂತೆ ಜನಪದ ಭಾಷೆಯನ್ನು ಒಗ್ಗಿಸಿಕೊಳ್ಳುತ್ತಾರೆ ಎಂದಾದರೂ ಆಗಬಹುದು. ಬೇಂದ್ರೆಯವರಲ್ಲಿರುವಂಥ ಜನಪದ ಪ್ರೀತಿ ಮಧುರ ಚೆನ್ನರ ಕಾವ್ಯದಲ್ಲಿ ಸಿಕ್ಕುವುದಿಲ್ಲ. ಜನಪದ ಸ್ಪರ್ಶವಾದಾಗಲೆಲ್ಲ ಅದರ ಸೊಕ್ಕು ನಿಯಂತ್ರಿಸುವ ಪ್ರಜ್ಞೆಯೊಂದು ಇವರಲ್ಲಿ ಸದಾ ಎಚ್ಚೆತ್ತಿರುತ್ತದೆ. ಇದು ವಸ್ತುವಿನ ಗಹನತೆ, ಅಭಿವ್ಯಕ್ತಿಯ ಉದ್ದೇಶಗಳ ಅರಿವಿನಿಂದ ಮೂಡಿ ಬರುವಂಥಾದ್ದು. ವಚನಕಾರರ ಕರ್ಮ-ಕೌಶಲ್ಯವನ್ನು ನೆನಪಿಗೆ ತರುವಂಥಾದ್ದು. ತನ್ನ ಆತ್ಮವನ್ನು ಒಂದೊಂದು ಪದವು ಎಷ್ಟೆಷ್ಟು ಸಮರ್ಥವಾಗಿ ತೋರಿತೆಂದು ಅದನ್ನು ಅಂಗೈಯಲ್ಲಿ ಹಿಡಿದು ಪರೀಕ್ಷಿಸುವ ಕಾಳಜಿ ವಚನಕಾರರದು. ಜಾನಪದದ ತನ್ಮಯತೆಗಿಂತ ವಚನಕಾರರ ಇಂಥ ಕಾಳಜಿ ಮಧುರಚೆನ್ನರಲ್ಲಿ ಒಡೆದು ಕಾಣುತ್ತವೆ.

ನವೋದಯ ಕವಿಗಳು ಬಂದದ್ದು ಪ್ರಾಚೀನ ಕಾವ್ಯದ ಯುಗ ಮುಗಿದು ಭಾಷೆ ಮೃತ್ಯಾವಸ್ಥೆಯಲ್ಲಿದ್ದಾಗ. ’ಕುವೆಂಪು ಆ ಕೊರತೆಯನ್ನು ಸಂಸ್ಕೃತದಿಂದ ತುಂಬಲೆತ್ನಿಸಿದರೆ ಬೇಂದ್ರೆಯವರು ಜಾನಪದದ ನೆರವು ಪಡೆದರು. ಆಡುನುಡಿ- ಜನಪದ ಜೀವನ- ಇವು ಕಾವ್ಯವಾಗಬಲ್ಲವೆಂಬುವುದೇ ಆಗ ಬೆರಗಿನ ವಿಷಯವಾಗಿತ್ತು. ಪಂಡಿತರ ಕಣ್ಣು ಕುಕ್ಕುವ ಹಾಗೆ ಬೇಂದ್ರೆಯವರು ಅದನ್ನು ಸಾಧ್ಯವಾಗಿಸಿ ತೋರಿಸಿದರು. ಆಗಿನ ಕಾಲದಲ್ಲಿ ಅವರ ಕವಿತೆಗಳಿಗೆ ಬಂದ ಜನಪ್ರಿಯತೆಯನ್ನು ನೋಡಿದರಂತೂ ದಿಗ್ಭ್ರಮೆ ಮೂಡುತ್ತದೆ. ಇಂಥ ಸಾಧ್ಯತೆಗಳನ್ನು ತೋರುವುದಷ್ಟೇ ತಡ ಎಲ್ಲಕಡೆಗೆ ಹುಚ್ಚು ಉತ್ಸಾಹ ಹರಿದಾಡಿತು. ಅವಸರದಲ್ಲಿ ಆಗಬಾರದವರೂ ಕವಿಗಳಾದರು. ಆಡುನುಡಿಯನ್ನು ಬಳಸಿದರು. ಆ ಚರಿತ್ರೆ ಏನೇ ಇರಲಿ ಜನಪದ ಸತ್ವದಿಂದ ಪುಷ್ಪರಾದ ಬೇಂದ್ರೆ, ಮಧುರಚೆನ್ನರಂಥ ಗಟ್ಟಿ ಮುಟ್ಟಾದ ಕವಿಗಳು ಮುಂದೆ ಬಂದರು, ಯಾವ ಜಾನಪದವು ಇಂಥ ಕವಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದು.

* * *