ನಮ್ಮ ನವ್ಯ ಸಾಹಿತ್ಯದ ಲೇಖಕರಲ್ಲಿ ಡಾ. ಅನಂತಮೂರ್ತಿಯವರು ಅತ್ಯಂತ ಸೃಜನಶೀಲವಾದ ಚೇತನ. ಅವರ ಜೊತೆಗೆ ಬೆಳೆಯುತ್ತ ಪ್ರಬುದ್ಧರಾದ ನಾವು ಅವರ ಬೆಳವಣಿಗೆಯ ಕ್ರಮ ಪ್ರಾಪ್ತಕವಾದ ಲೆಕ್ಕವನ್ನು ಇಟ್ಟಿಲ್ಲ. ಅವರು ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಪಿಎಚ್.ಡಿ. ಪದವಿಗಾಗಿ ಇಂಗ್ಲೆಂಡಿಗೆ ಹೋಗಿ ಬಂದರು. ಕೆಲಕಾಲ ಲಾರೆನ್ಸ್, ಯೇಟ್ಸ್ ಮೊದಲಾದವರ ಹುಚ್ಚು ಹತ್ತಿಸಿಕೊಂಡು ನಮಗೂ ಹುಚ್ಚು ಹಿಡಿಸಿದರು. ಆದರೂ ಪ್ರತಿಭಾಶಾಲಿಯಾದ ಲೇಖಕನ ಶಿಕ್ಷಣ ಅವನಿಗರಿಯದಂತೆ ಒಳಗೇ ನಡೆದಿರುತ್ತದೆ. ಅನಂತಮೂರ್ತಿಯವರು ಗೋಪಾಲಕೃಷ್ಣ ಅಡಿಗರ ಕಾವ್ಯದ ಪುರಸ್ಕರ್ತರಾಗಿ ಹೊಸ ಕಾವ್ಯ ಸಂವೇದನೆಯ ಅಳ ಅಗಲಗಳನ್ನು ತೆರೆದು ತೋರಿಸಿದಾಗ ಕನ್ನಡ ಸಾಹಿತ್ಯದ ಗಮನ ಅವರ ಕಡೆಗೆ ಆಕರ್ಷಿತವಾಯಿತು. ಅಡಿಗರ ‘ಭೂಮಿಗೀತ’ ಸಂಕಲನಕ್ಕೆ ಬರೆದ ಅವರ ಮುನ್ನುಡಿ ಮಾಸ್ತಿಯವರು ಬೇಂದ್ರೆಯವರ ‘ನಾದಲೀಲೆ’ಗೆ ಬರೆದ ಮುನ್ನುಡಿಗೆ ಸಮಾನವಾದದ್ದು. ಆಗಲೇ ಅವರು ತಮ್ಮ ಸಣ್ಣ ಕತೆಗಳನ್ನು ಪ್ರಕಟಿಸಿದರು. ಕತೆಗಳಲ್ಲಿಯ ಪ್ರತಿಭೆಯಂತೆ ವಿಮರ್ಶೆಯಲ್ಲಿಯ ಅವರ ಮೇಧಾಶಕ್ತಿಯೂ ಕನ್ನಡಕ್ಕೆ ಹೊಸಗಾಗಿದ್ದವು.

ಅನಂತಮೂರ್ತಿಯವರ ವ್ಯಕ್ತಿತ್ವದ ಮಾಟಗಾರಿಕೆಯ ರಹಸ್ಯ ಇದೇ ಎಂದು ನನ್ನ ಅನಿಸಿಕೆಯಾಗಿದೆ. ಪ್ರತಿಭೆ ಮತ್ತು ಬುದ್ಧಿವಂತಿಕೆ ಇವೆರಡೂ ಒಂದು ಸಮ ಪ್ರಮಾಣದಲ್ಲಿ ಅವರಲ್ಲಿ ಕೂಡಿಕೊಂಡಿರುವುದರಿಂದ, ಅವರಾಡಿದ ಮಾತು ಪ್ರಮಾಣವಾಗುತ್ತದೆ. ಸಾಹಿತ್ಯದಲ್ಲಿಯ ಪ್ರಾಮಾಣಿಕತೆ ಎಂದರೆ ಮಾತು ಮತ್ತು ಕ್ರಿಯೆ ಇವುಗಳ ನಡುವಿನ ಅಂತರ ಇಲ್ಲವಾಗುವುದು. ಸಾಹಿತ್ಯವನ್ನು ಸೃಷ್ಟಿಸುತ್ತಲೇ ರಾಜಕೀಯದತ್ತ ಕೂಡ ಗಮನಕೊಟ್ಟರು. ಕನ್ನಡದ ಚಳುವಳಿಯಲ್ಲಿ ಅಗ್ರಗಣ್ಯರಾಗಿ ನಿಂತರು. ನಾಡಿನಲ್ಲಿ ನಡೆಯುತ್ತಿರುವುದರ ಬಗ್ಗೆ ಅದು ರಾಜಕೀಯ ಚಳುವಳಿಯಾಗಲೀ, ಕನ್ನಡ ಹೋರಾಟವಾಗಿರಲಿ ಅಥವಾ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ಸಣ್ಣ ಕತೆಯೇ ಆಗಿರಲಿ-ಅನಂತಮೂರ್ತಿ ಏನು ಹೇಳುತ್ತಾರೆ ಎಂಬುವುದರ ಬಗ್ಗೆ ನಮಗೆ ಕುತೂಹಲವಿರುತ್ತದೆ. ಯಾಕೆಂದರೆ, ಅನಂತಮೂರ್ತಿಯವರ ವ್ಯಕ್ತಿತ್ವದಲ್ಲಿ ಮಾತು ಮತ್ತು ಕ್ರಿಯೆಗಳ ಅದ್ಭುತವಾದ ಸಮನ್ವಯವಿದೆ. ನಾಡಿನ ಎಲ್ಲ ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವ ಹೊಣೆಗಾರಿಕೆ ಅವರದಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಮಾಸ್ತಿ, ಕಾರಂತರಂಥ ನವೋದಯ ಲೇಖಕರ ನಿಜವಾದ ವಾರಸುದಾರರೆಂದರೆ ಅನಂತಮೂರ್ತಿಯವರು. ಕನ್ನಡದ ಕೊರತೆ ಎಂದರೆ ತನ್ನ ಸ್ವಂತದ ಕೊರತೆ ಎಂದು ತಿಳಿದು ಅದನ್ನು ಪೂರೈಸುವ ಕರ್ತವ್ಯವನ್ನು ಅವರು ಪ್ರಾರಂಭದಿಂದಲೇ ಮಾಡುತ್ತಾ ಬಂದಿದ್ದಾರೆ. ‘ರುಜುವಾತು’ ಪತ್ರಿಕೆಯಲ್ಲಿಯ ಅವರ ಲೇಖನಗಳು ಈ ಮಾತಿಗೆ ಸಾಕ್ಷಿಯಾಗಿವೆ. ಅವರ ಮಾತಿಗೆ ಅವರ ಕ್ರಿಯೆ ಪ್ರಮಾಣ, ಅವರ ಕ್ರಿಯೆಗೆ ಅವರ ಮಾತು ಪ್ರಮಾಣ. ಅವು ಒಂದನ್ನೊಂದು ಪರೀಕ್ಷಿಸಿ ಪೂರ್ಣವಾಗುವಂಥವು.

ಕನ್ನಡ ಸಾಹಿತ್ಯದಲ್ಲಿ ಅವರ ಪ್ರವೇಶವೇ ಒಂದು ಅದ್ಭುತವಾಗಿದೆ. ಅವರ ಮೊದಮೊದಲಿನ ಕ್ರಿಯೆಯ ಸ್ವರೂಪ ಪ್ರತಿಭಟನೆಯಾಗಿತ್ತು. ಅವರ ಸಣ್ಣ ಕತೆಗಳ ಭಾಷೆಯಲ್ಲಿಯ ಪ್ರತಿಭಟನೆ ನೋವು ಉಂಟುಮಾಡುವಂಥಹದು. ಆದರೆ, ಅವರ ಪ್ರತಿಭಟನೆ ಯಾರ ವಿರುದ್ಧವೂ ಅಲ್ಲ. ಹೇಳಬೇಕಾದದ್ದಕ್ಕೆ ಸರಿಯಾದ ಮಾತು ದೊರೆಯದೆ, ದೊರೆತ ಮಾತಿನಿಂದ ತೃಪ್ತಿಯಾಗದೆ ಹುಟ್ಟುವ ರೋಷ ಅವರದ್ದಾಗಿತ್ತು. ‘ಪ್ರಶ್ನೆ’, ‘ಕಾರ್ತಿಕ’, ‘ಪ್ರಕೃತಿ’ ಈ ಕತೆಗಳಲ್ಲಿಯ ನೋವು ಅಂಥದಾಗಿದೆ. ಲೇಖಕನ ಭಾವನೆ, ವಿಚಾರ, ಅನುಭವಗಳು ಎಷ್ಟೇ ಸ್ವಂತವಾಗಿದ್ದರೂ ಅವನು ಉಪಯೋಗಿಸುವ ಭಾಷೆಗೆ ಅವು ಒಗ್ಗಬೇಕು. ಒಂದೇ ಒಂದು ದಾಸವಾಳದ ಹೂವನ್ನು ತಿಂದು ಬದುಕುವ ಸುಬ್ಬಣ್ಣಕಕ್ಕನ ಚಿತ್ರ ಕೇಶವನ ಅನುಭವವನ್ನು ಅಣಕಿಸುತ್ತದೆ. ‘ಕ್ಲಿಪ್ ಜಾಯಿಂಟ್’ನಲ್ಲಿ ಕೇಶವನ ಕೊಂದು ಹಾಕಿ ಸುಬ್ಬಣ್ಣಕಕ್ಕನನ್ನು ಇಲ್ಲದಂತೆ ಮಾಡಿದರೂ, ಪರಿಹಾರ ಸಿಗುವುದಿಲ್ಲವೆಂದ ಮೇಲೆ ಮತ್ತೊಂದು…. ಮತ್ತೊಂದು ಕತೆ ಬರೆಯಬೇಕು, ಅನಂತಮೂರ್ತಿಯವರ ಬರವಣಿಗೆಯಲ್ಲಿ ಪ್ರಜ್ಞೆ ಮತ್ತು ಪರಿಸರಗಳ ನಡುವಿನ ಹೋರಾಟ ಮುಗಿಯುವುದೇ ಇಲ್ಲ. ಪ್ರಜ್ಞೆ ವೈಯಕ್ತಿಕ, ಅಂತೆಯೇ ಅದು ಜೀವಂತವಾದದ್ದು, ಲವಲವಿಕೆಯಿಂದ ಕೂಡಿದ್ದು, ಪರಿಸರ ಇದೆ ಅಷ್ಟೇ. ಅದು ಪ್ರಕೃತಿಯಂತೆ ಹಠಮಾರಿ, ಪರಿಸರವೆಲ್ಲ ಪ್ರಜ್ಞೆಯಾಗಬೇಕು, ಸಾಧ್ಯವೇ?

ಅಲ್ಲಿಂದ ಅವರ ‘ಸಂಸ್ಕಾರ’ ಬಂದಿತು. ಅದು ಪ್ರಕಟವಾದ ದಿನ ಕನ್ನಡ ಸಾಹಿತ್ಯದ ದೊಡ್ಡ ದಿನ. ಈ ಕೃತಿಯ ವಸ್ತುವಿನ ಹೊಸತನವೇ ನಮ್ಮನ್ನು ಬೆರಗುಗೊಳಿಸಿತು. ಆದರೆ ‘ಸಂಸ್ಕಾರ’ದ ಮಹತ್ವ ಕೇವಲ ಅದರ ಹೊಸತನದಲ್ಲಿ ಮಾತ್ರ ಇಲ್ಲ. ನಮ್ಮ ಪ್ರಜ್ಞೆ ಬೆಳೆದಂತೆ ಬೆಳೆಯುತ್ತ ಹೋಗುವ ಕೃತಿ ಅದು. ನನಗೆ ಈ ಮಾತು ಖಾತ್ರಿಯಾಗಿದೆ, ಯಾಕೆಂದರೆ ‘ಸಂಸ್ಕಾರ’ದ ಬಗೆಗೆ ನನ್ನ ಅಭಿಪ್ರಾಯವನ್ನೇ ಈಗ ಬದಲಿಸಿಕೊಂಡಿದ್ದೇನೆ. ಮೊದಲಿಗೆ ಕಾಣುವುದು ಪ್ರಾಣೇಶಾಚಾರ್ಯ ಮತ್ತು ನಾರಣಪ್ಪನ ನಡುವಿನ ವಿರೋಧ ಮತ್ತು ಅವರಿಬ್ಬರ ನಡುವಿನ ಆತ್ಮೀಯತೆ, ನಾರಣಪ್ಪನಿಗೆ ಅವರನ್ನು ಕಂಡರೆ ಗೌರವ. ಪ್ರಾಣೇಶಾಚಾರ್ಯರಿಗೆ ನಾರಣಪ್ಪನನ್ನು ಕಂಡರೆ ಕನಿಕರ. ಈ ವಿರೋಧದಲ್ಲೇ ಯಾರು ಯಾರನ್ನು ಗೆಲ್ಲುವುದಿಲ್ಲ. ಪ್ಲೇಗಿನ ಇಲಿಗಳು ಕೊಲ್ಲುವದು ನರಸತ್ತ ಬ್ರಾಹ್ಮಣರನ್ನಲ್ಲ. ನಾರಣಪ್ಪನನ್ನು ಎಂದಾಗ ಕತೆಯ ಸಮಸ್ಯೆ ಬಯಲಿಗೆ ಬರುತ್ತದೆ. ಪ್ರಾಣೇಶಾಚಾರ್ಯ ಮತ್ತು ಚಂದ್ರಿಯರ ಸಂಬಂಧದ ಸಮಸ್ಯೆ ಅದಕ್ಕಿಂತ ಹೆಚ್ಚು ಗಹನವಾದದ್ದು. ಹೆಂಡತಿ ಸತ್ತ ಸೂತಕದಲ್ಲಿ ಪ್ರಾಣೇಶಾಚಾರ್ಯರು ದೇವಸ್ಥಾನದ ಮಡಿವಂತ ಬ್ರಾಹ್ಮಣರ ಪಂಕ್ತಿಯಲ್ಲಿ ಊಟ ಮಾಡುತ್ತಾರೆ. ಹಸಿವೆ-ಕಾಮ, ಊಟ-ಸಂಭೋಗ, ಜಾತ್ರೆ- ಉತ್ಸವ, ಸಮಾರಾಧನೆ-ಸೂತಕ ಇವೆಲ್ಲ ಮಾನವೀಯ ಸಂಕೇತಗಳಾಗಿ ಕಾಡುತ್ತವೆ. ಇವೆಲ್ಲವುಗಳ ನಡುವೆ ನಿರ್ಲಿಪ್ತವಾಗಿ ನಿರ್ಲಜ್ಜವಾಗಿ ಬದುಕುವ, ಬದುಕನ್ನು ಕೆಡಿಸುವ ವಸ್ತುವೆಂದರೆ ಚಂದ್ರಿ ಎಲ್ಲರ ಮುಂದಿಡುವ ಚಿನ್ನದ ಒಡವೆಗಳು; ಅದಕ್ಕೆ ಜಾತಿಯಿಲ್ಲ, ಸೂತಕವಿಲ್ಲ, ಪಾಪವಿಲ್ಲ, ನಾಚಿಕೆಯೂ ಇಲ್ಲ.

ಇವುಗಳನ್ನು ಹೊರತುಪಡಿಸಿದರೂ ಈ ಕಾದಂಬರಿಯಲ್ಲಿ ಮತ್ತೇನೋ ಉಳಿದು ಬಿಡುತ್ತದೆ. ನಾರಣಪ್ಪನನ್ನು ಅನುಕರಿಸಲು ಹೋದ ಶ್ರೀಪತಿ ಬೆಳ್ಳಿಯನ್ನು ಕೊಡುತ್ತಾನೆ. ಆದರೆ, ಬೆಳ್ಳಿ ತನ್ನ ಉಡಿ ತುಂಬ ತಂದ ಮಿಂಚ ಹುಳುಗಳ ಬೆಳಕಿನಲ್ಲಿ ಮತ್ತೇನೋ ಕಾಣತೊಡಗುತ್ತದೆ. ‘ಸಂಸ್ಕಾರ’ ಕಾದಂಬರಿ ಕೇಳುತ್ತಿರುವ ಪ್ರಶ್ನೆಯೆಂದರೆ ಮನುಷ್ಯನ ಮೂಲಭೂತವಾದ ಸ್ವಾತಂತ್ರ್ಯದ ಪ್ರಶ್ನೆ. ಬಂಧನವನ್ನು ಮುರಿದು ಹೊರಬರುವುದೋ? ಅಥವಾ ಬಂಧನವನ್ನು ಮೀರಿ ಇದ್ದುಬಿಡುವುದೋ? ಈ ಆಯ್ಕೆಯ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ. ಆದ್ದರಿಂದ ಇದು ಮತ್ತೇ ಮತ್ತೇ ಓದಿ ತಿಳಿದುಕೊಳ್ಳಬೇಕಾದ ಕೃತಿಯಾಗಿದೆ.

‘ಸಂಸ್ಕಾರ’ದ ನಂತರ ಇನ್ನೆರಡು ಕಾದಂಬರಿಗಳನ್ನು ಅನಂತಮೂರ್ತಿ ಬರೆದರು. ‘ಭಾರತೀಪುರ’ ಮತ್ತು ‘ಅವಸ್ಥೆ’. ಧರ್ಮ ಮತ್ತು ರಾಜಕೀಯಗಳು ಕೂಡಿಕೊಂಡು ನಿರ್ಮಿಸಿದ ಪಂಜರದಲ್ಲಿ ಬಂಧಿಯಾದ ವ್ಯಕ್ತಿಯ ಚಿತ್ರಗಳನ್ನೇ ಇವು ಮತ್ತೇ ಮೂಡಿಸುತ್ತವೆ. ಇಲ್ಲಿಯೂ ಪ್ರಜ್ಞೆ ಮತ್ತು ಪರಿಸರಗಳ ನಡುವಿನ ಸಂಘರ್ಷವೇ ಪ್ರಮುಖವಾಗುತ್ತದೆ. ಇವೆರಡರ ನಡುವಿನ ಸಂಬಂಧದ ಅನಿವಾರ್ಯವಾಗಿದ್ದರೆ ಆ ಸಂಬಂಧ ಸ್ವರೂಪ ಹೇಗಿರಬೇಕೆಂಬುವುದನ್ನು ಈ ಕೃತಿಗಳು ಚಿಂತಿಸುತ್ತಿವೆ. ಇಲ್ಲಿ ಪ್ರೇಮ ಮತ್ತು ಸೌಹಾರ್ದ ಸಾಧ್ಯವೇ? ಅಡಿಗರ ಬಗ್ಗೆ, ತನ್ನನ್ನು ಸಾಕ್ಷಿ ಸಲುಹಿದ ಚಿಕ್ಕಿಯ ಬಗ್ಗೆ ಜಗನ್ನಾಥನಿಗೆ ಅಪಾರವಾದ ಪ್ರೇಮವಿದೆ. ಆದರೆ, ಈ ಪ್ರೇಮದಿಂದ ಸಾಮಾಜಿಕ ಸಮಸ್ಯೆಗಳನ್ನು ಹೇಗೆ ನಿವಾರಿಸುವುದು? ಈ ಎರಡೂ ಕಾದಂಬರಿಗಳು ಕೇಳುತ್ತಿರುವ ಪ್ರಶ್ನೆಗಳೆಲ್ಲ ನಮ್ಮ ಪ್ರಶ್ನೆಗಳೇ ಆಗಿರುವುದರಿಂದ ಅವುಗಳ ಪ್ರಸ್ತುತತೆ ಕಡಿಮೆಯಾಗಲಾರದು.

ಅನಂತಮೂರ್ತಿಯವರು ಸೃಷ್ಟಿಸಿದ ಸಣ್ಣಕತೆ, ಮಾಸ್ತಿಯವರ ಅನಂತರದ ಸಣ್ಣಕತೆಗೆ ಒಂದು ಹೊಸ ಸ್ವರೂಪವನ್ನು ತಂದುಕೊಟ್ಟಿತ್ತು. ರಾಘವೇಂದ್ರ ಖಾಸನೀಸ್, ಜಯಂತ ಕಾಯ್ಕಿಣಿ, ವಿವೇಕ ಶ್ಯಾನಭಾಗ ಮೊದಲಾದ ಅನೇಕ ಕತೆಗಾರರು ಈ ಸ್ವರೂಪವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಹೊಸಗನ್ನಡ ಸಾಹಿತ್ಯದಲ್ಲಿ ಸಣ್ಣಕತೆ ಸಮೃದ್ಧವಾದ ಮತ್ತು ಅರ್ಥಪೂರ್ಣವಾದ ಸ್ವರೂಪವಾಗಿದೆ. ಅದಕ್ಕೆ ಕಾರಣವೆಂದರೆ ಮಾಸ್ತಿ ಮತ್ತು ಅನಂತಮೂರ್ತಿಯಂಥ ಕತೆಗಾರರು. ಅನಂತಮೂರ್ತಿಯವರ ಕಥನಶೈಲಿ, ಆಪ್ತವಾಗಿ, ಆತ್ಮೀಯವಾಗಿ ಓದುಗನ ಮನಸ್ಸನ್ನು ಹೋಗುವಂಥದು. ‘ಕ್ಲಿಪ್ ಜಾಯಿಂಟ್’, ‘ಮೌನಿ’, ‘ಬರ’, ‘ಕಾರ್ತಿಕ’, ‘ಘಟ್ಟಶ್ರಾದ್ಧ’, ‘ಸೂರ್ಯನ ಕುದುರೆ’- ಮೊದಲಾದ ಕತೆಗಳಲ್ಲಿ ಕಾಣುವ ಜಗತ್ತು ನಮ್ಮ ಇಂದಿನ ಅಥವಾ ಕತೆಗಳ ಮೂಲಕವಾಗಿ ಅರ್ಥವನ್ನು ಪಡೆದಿರುವ ಜಗತ್ತು. ಇವುಗಳನ್ನು ನವ್ಯಕತೆಗಳೆಂದು ಕರೆಯಬೇಕೋ ಬಾರದೋ ಎಂಬ ಸಂಶಯ ನನ್ನನ್ನು ಇನ್ನೂ ಕಾಡುತ್ತಿದೆ. ಈ ಕತೆಗಳಲ್ಲಿ ಕತೆಯ ಅಂಶವಿದೆ, ಇವುಗಳ ಸಂವಹನವೂ ಅಸಾಧ್ಯವಲ್ಲ. ಸಣ್ಣ ಕತೆ, ಸಾಹಿತ್ಯದ ಒಂದು ಅಪ್ರಮುಖವಾದ ಪ್ರಕಾರ. ಇಂಥ ಅಪ್ರಮುಖವಾದ ಪ್ರಕಾರದಲ್ಲಿಯೇ ಪ್ರಮುಖವಾದ ಸಾಹಿತ್ಯವನ್ನು ನಿರ್ಮಿಸಿದವರು ಮಾಸ್ತಿ ಮತ್ತು ಅನಂತಮೂರ್ತಿ.

ಈ ಮೊದಲೇ ಸೂಚಿಸಿರುವಂತೆ ಅನಂತಮೂರ್ತಿಯುವರು ನಮ್ಮ ಕಾಲದ ಚಿಂತಕರಲ್ಲಿ ಒಬ್ಬರು. ಅವರ ಚಿಂತನ ಸಾಹಿತ್ಯವೆಲ್ಲ ಅವರ ‘ಪೂರ್ವಾಪರ’ ಎನ್ನುವ ಪುಸ್ತಕದಲ್ಲಿ ಸಂಗ್ರಹವಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆ, ಜಾತಿಪದ್ಧತಿ, ರಾಜಕೀಯ ಪರಿಸ್ಥಿತಿ, ಭಾಷೆಯ ಅನಿವಾರ್ಯತೆ, ಸಾಹಿತ್ಯ ಹೀಗೆ ಹಲವಾರು ಸಮಕಾಲೀನ ಪ್ರಶ್ನೆಗಳನ್ನು ಕುರಿತು ತಮ್ಮ ಚಿಂತನವನ್ನು ಈ ಲೇಖನಗಳಲ್ಲಿ ಹರಿಯಬಿಟ್ಟಿದ್ದಾರೆ. ರಾಜಕೀಯ ಬಂಧನದಿಂದ ಬಿಡುಗಡೆಯನ್ನು ಪಡೆದ ಮೇಲೆ ಕೂಡ ನಾವು ಇನ್ನೂ ಹಲವಾರು ಬಂಧನಗಳಿಂದ ಪಾರಾಗಬೇಕಾಗಿದೆ. ಕರ್ನಾಟಕದಲ್ಲಿಯೇ ಕನ್ನಡ ಭಾಷೆ ಇನ್ನೂ ಮಹತ್ವದ ಸ್ಥಾನವನ್ನು ಪಡೆಯದಿರುವ ಸಂಗತಿಯನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು. ಅನಂತಮೂರ್ತಿಯವರು ಕನ್ನಡದ ಬಗ್ಗೆ ತಮ್ಮ ದಿಟ್ಟವಾದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅನಂತಮೂರ್ತಿಯವರದು ಸತತವಾದ ಚಿಂತನ, ಜನ ಜೀವನದ ಆಗು ಹೋಗುಗಳ ಬಗ್ಗೆ, ಅವರ ಜೀವನ ಶೈಲಿಯ ಬಗ್ಗೆ ಅವರಿಗಿರುವ ಕಳಕಳಿ ಅಗಾಧವಾದದ್ದು.

ಅನಂತಮೂರ್ತಿಯವರು ಕವಿತೆಗಳನ್ನೂ ಬರೆದಿದ್ದಾರೆ. ಎರಡು ಸಂಕಲನಗಳು ಈಗಾಗಲೇ ಪ್ರಕಟವಾಗಿವೆ. ಅವರ ಕಾವ್ಯದ ಬೆಲೆಸೆಲೆಗಳು ಇನ್ನೂ ನಿಶ್ಚಿತವಾಗಿಲ್ಲ. ಆದರೆ, ಅವರ ಕಾವ್ಯ ಮತ್ತು ಅವರ ಲೇಖನಗಳಲ್ಲಿ ಒಂದು ಸಮಾನ ಧರ್ಮವಿದೆ. ಎರಡೂ ಚಿಂತನಪರವಾದವುಗಳು. ಗಂಭೀರವಾದ ಆಲೋಚನೆ ಲೇಖನಗಳಿಗೆ ಸತ್ವನ್ನೀಯುವಂತ ಕಾವ್ಯವನ್ನೂ ಘೋಷಿಸುತ್ತದೆ. ಈ ಸಂಗತಿಯ ಮಹತ್ವ ನಾವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಾಗಿದೆ. ಅವರ ಚಿಂತನವೆಂದರೆ ಅವರ ತಾರ್ಕಿಕ ದೃಷ್ಟಿಕೋನದ ಫಲವಾಗಿಲ್ಲ. ಅದು ಕಾವ್ಯವನ್ನೂ ಬೆಳಗಬಲ್ಲ, ಆಳವಾದ ತಿಳುವಳಿಕೆಯಾಗಿದೆ. ಉಳಿದವರಿಗೆ ಅಗೋಚರವಾಗಿರುವ ಸತ್ಯ ಅವರ ಕಣ್ಣಿಗೆ ಕಾಣುತ್ತದೆ. ಎಂ.ಎನ್. ರಾಯ್‌ರ ಬಗ್ಗೆ ಅವರು ಬರೆದಿರುವ ಕವಿತೆಯನ್ನು (ಗುರುರಾಯ) ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಡಾ. ಅನಂತಮೂರ್ತಿಯವರು ಇಂದು ದೊಡ್ಡ ಸ್ಥಾನದಲ್ಲಿದ್ದಾರೆ. ಅವರು ಜೀವನದಲ್ಲಿ ಸಾಧಿಸಿರುವ ವಿಕ್ರಮಗಳು ಅನೇಕವಾಗಿವೆ. ಆದರೆ, ಅವರ ದೊಡ್ಡತನವಿರುವುದು ಈ ವಿಕ್ರಮಗಳಲ್ಲಿ ಅಲ್ಲ. ಅವರು ಸ್ನೇಹಿತರಾಗಿ ದೊಡ್ಡವರು. ನಾಡಿನ ಯಾವುದೇ ಸಮಸ್ಯೆ ಇರಲಿ, ಅದು ಅವರಿಗೆ ಒಂದು ವೈಯುಕ್ತಿಕ ಸಮಸ್ಯೆಯಾಗಿರುವುದರಿಂದ ಅವರು ದೊಡ್ಡವರು. ನಾಡಿನ ಇತಿಹಾಸವನ್ನು ಅವರು ನಿರ್ಮಿಸಿಲ್ಲ. ಆದರೆ, ಇತಿಹಾಸದ ದಿಕ್ಕನ್ನು ಯಾವ ಕಡೆಗೆ ಇದೆಯೆಂಬುವುದನ್ನು ಅವರು ಬಲ್ಲರು. ಅದಕ್ಕಾಗಿ ಅವರಿಗೆ ಈ ಅದರ ಸತ್ಕಾರ.

ದೇಶದ ಅನೇಕರಿಗೆ ಪ್ರಶಸ್ತಿಕೊಡುವ ಅನಂತಮೂರ್ತಿಯುವರಿಗೆ ಘನತರವಾದ ಡಾ. ಮಾಸ್ತಿ ಪ್ರಶಸ್ತಿಯನ್ನು ಕೊಟ್ಟು ನಮಗೆಲ್ಲ ಸಂತೋಷವನ್ನುಂಟು ಮಾಡಿದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮಿತಿಗೆ ವಂದನೆಗಳನ್ನು ಹೇಳಲೇಬೇಕು. ಹಾಗೆಯೇ ಅದನ್ನು ಪಡೆದ ನಮ್ಮ ಪ್ರೀತಿಯ ಅನಂತಮೂರ್ತಿಯವರಿಗೂ ಅಭಿನಂದನೆಗಳು.

* * *