ಶ್ರೀ ಮನು ಬಳಿಗಾರ್ ಅವರ ಕಥೆಗಾರಿಕೆ ನಾನು ಈ ತನಕ ಓದಿದ ಕಥೆಗಿಂತ ಭಿನ್ನವಾದ ನೆಲೆಯಿಂದ ಮನಸ್ಸನ್ನು ಆವರಿಸುತ್ತದೆ. ಓದಿಯಾದ ಮೇಲೆ ಒಂದು ಬಗೆಯ ಹಿತ, ಆರೋಗ್ಯದ ಅನುಭವವಾಗಿ ಇಡೀ ಕಥೆಯನ್ನು ಪುನಃ ಸೃಷ್ಟಿಸಿಕೊಳ್ಳುವ ಹಾಗೆ ಮಾಡುತ್ತದೆ. ಇತಿಹಾಸದ ಕುತಂತ್ರಗಳಿಂದ ಭಿನ್ನವಾದ ನಿರ್ಮಲವಾದ ಸಂದರ್ಭದಲ್ಲಿದ್ದಂತೆ ಅನುಭವಾಗುತ್ತದೆ. ಅವರ ಯಾವ ಕಥೆಯೂ ಮುಗಿಯುವುದಕ್ಕೆ ಅವಸರ ಮಾಡುವುದಿಲ್ಲ. ಕಥೆಗಳಿಗೆ ಥಟ್ಟನೆ ಅಘಾತ ನೀಡುವ ಆರಂಭಗಳಿಲ್ಲ. ಅಬ್ಬರದ ಸಂಭಾಷಣೆಗಳಿಲ್ಲ. ಅಸಹಜವಾದ ತಿರುವು, ಒತ್ತಡಗಳಿಲ್ಲ, ಮರಕ್ಕೆ ಚಿಗುರು ಮೂಡುವ ಹಾಗೆ ಕಥೆ ಹುಟ್ಟಿ, ನಿಧಾನವಾಗಿ ಬಿಚ್ಚಿಕೊಂಡು ಅರಳಿ ಕೊನೆಗೊಳ್ಳುತ್ತದೆ. ಆರೋಗ್ಯಕರವಾದ ನೈತಿಕ ನಿಲುವೊಂದು ಹಿಂದೆ ನಿಂತುಕೊಂಡು ಈ ಕಥೆಗಳ ನಡಾವಳಿಯನ್ನು ನಿಯಂತ್ರಿಸಿದೆ ಎನ್ನಿಸುತ್ತದೆ. ಈ ಕಥೆಗಳು ಭಿನ್ನವಾಗಿರುವುದಕ್ಕೆ ಇಷ್ಟು ತಾಜಾ ಆಗಿರುವುದಕ್ಕೆ ಇದೇ ಕಾರಣವೆಂದು ನನ್ನ ಭಾವನೆ.  ಇವುಗಳನ್ನು ನಾನು ಒಟ್ಟಾರೆ ಓದಿದವನಲ್ಲ. ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಓದುತ್ತಿದ್ದೆ. ಓದಿಯಾದ ಮೇಲೆ ಕೆಲವು ಕಥೆಗಳನ್ನು ಮರೆಯಲಾಗಲೇ ಇಲ್ಲ. ಅಲ್ಲಿನ ಘಟನೆಗಳು ವ್ಯಕ್ತಿಗಳು ತಂತಾನೆ ನೆನಪಿಗೆ ನುಗ್ಗಿ ನಮ್ಮ ಸಂದರ್ಭಗಳನ್ನು ಪುನರಭಿನಯಿಸಿ ಹೋಗುತ್ತಿದ್ದವು. ಅವುಗಳಲ್ಲಿ ದೇವಳ್ಳಿ ಹೋರಿಯೂ ಮಲ್ಲಣ್ಣ ಪೈಲ್ವಾನನೂ ಒಂದು.

ನವ್ಯ ಮತ್ತು ಬಂಡಾಯಗಳ ಆರ್ಭಟದಲ್ಲಿ ನಾವೆಂಥ ಅನುಭವಗಳನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಯಬೇಕಾದರೆ ಈ ಕಥೆಯನ್ನು ಓದಬೇಕು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಈಗಲೂ ಇರುವ ಪೈಲ್ವಾನರು, ಉಸ್ತಾದಿಗಳು ಅವರ ಹ್ಯಾವಗಳು ಪೂರ್ವ ತಯಾರಿಗಳು, ಜನ ತಮಗಿಷ್ಟವಾದ ಪೈಲ್ವಾನರ ಸುತ್ತು ಕಟ್ಟಿಗೊಳ್ಳುವ ಭಾವ ಪ್ರಪಂಚಗಳು, ಇವೆಲ್ಲ ಕಣ್ಣಿಗೆ ಕಟ್ಟುವಂತೆ ವಿವರವಾಗಿ ವರ್ಣಿಸಿದ್ದಾರೆ ಮನು. ಮಲ್ಲಣ್ಣ ಪೈಲ್ವಾನನ ವಿಷಯವೇ ಅರ್ಧ ಕಥೆಯಾಗಿದೆ. ಅವನು ಮತ್ತವನ ಎದುರಾಳಿಯ ಹೇಳಿಕೆ, ಪ್ರತಿ ಹೇಳಿಕೆಗಳು, ಅವರ ವ್ಯಾಯಾಮ ಸಾಧನೆ, ಊಟದ ವೈಭವ, ಅವರ ಟಾಂಗುಗಳು ಇನ್ನೊಂದು ತಿಂಗಳು ಕುಸ್ತಿ ಇದೆ ಎಂದಾಗ ತರಬೇತು ನೀಡಲು ಬರುವ ಉಸ್ತಾದಿಗಳು, ಅವರ ಹಿಂದಿನ ಪ್ರತಾಪಗಳು ಇವುಗಳೊಂದಿಗೆ ಕುಸ್ತಿಯ ದಿನ ಬರುತ್ತಿದ್ದಂತೆ ವಿವರವಾದ ವರ್ಣನೆಗಳಿಂದಾಗಿ ಕ್ಷಣ ಕ್ಷಣವೂ ಪತ್ತೇದಾರಿ ಕಥೆಗಳಂತೆ ಕುತೂಹಲ ಕೆರಳಿಸುತ್ತ ಕಥೆ ಮುಂದುವರೆಯುತ್ತದೆ. ಕುಸ್ತಿಯ ಅನುಭವವುಳ್ಳವರಿಗೆ ಮಾತ್ರವಲ್ಲ ಹೊರಗಿನಿಂದ ನೋಡುವವರಿಗೂ ಮೈನವಿರೇಳುವ ವರ್ಣನೆಗಳಿವು. ಕೊನೆಗೂ ಒಮ್ಮೆ ಕುಸ್ತಿ ಮುಗಿದು ಎಲ್ಲರೂ ನಿರೀಕ್ಷಿಸಿದ್ದ ಮಲ್ಲಣ್ಣ ಬಿದ್ದು ಸೀದಾ ದೇವಳ್ಳಿ ದಾರಿ ಹಿಡಿದ. ಊರಿಗೆ ಬಂದವನು ದನದ ಮನೆಗೆ ಬಂದು ಮಲಗಿದ. ಇಲ್ಲಿಗೆ ಈ ಕಥೆ ಮುಗಿದಿದ್ದರೂ ಇದೊಂದು ರೋಮಾಂಚನಕಾರೀ ಅನುಭವದ ಕಥನವಾಗುತ್ತಿತ್ತು.

ಸೋತು ಸುಣ್ಣಾಗಿದ್ದ ಮಲ್ಲಣ್ಣನಿಗೆ ನಿದ್ದೆ ಬಾರದಿದ್ದಾಗ ಯಾರೋ ಕಾಲನ್ನು ನೆಕ್ಕಿದಂತೆ ಭಾಸವಾಯ್ತು. ಕಣ್ದೆರು ನೋಡಿದರೆ ಹೋರಿ ಮುಕ್ಕಣ್ಣ ! ದಡ್ಡಗ್ಗನೇ ಎದ್ದವನೇ ಅದನ್ನಪ್ಪಿಕೊಂಡ… ಬಿಕ್ಕಿ ಬಿಕ್ಕಿ ಅತ್ತ… ಆಮೇಲೆ ಮಲ್ಲಣ್ಣ ತನ್ನನ್ನು ತಾನು ಹೋರಿಯಲ್ಲಿ ಪುನಃ ಸೃಷ್ಟಿಸಿಕೊಂಡ ತಾನು ಸೋತ ಸೋಲುಗಳನ್ನೆಲ್ಲ ಕಪ್ಪಕಾಣಿಕೆ ಸಮೇತ ಗೆಲ್ಲುತ್ತಾ ಹೋಗುತ್ತಾನೆ. ಕಥೆಗಾರನ ಶ್ರದ್ದೆಯಿಂದಾಗಿ ಹೋರಿಯಂಥ ಪ್ರಾಣಿ ಕೂಡ ಮಾನವಸಹಜ ಧೀರೋದಾತ್ತ ಪಾತ್ರವಾಗಿ ಬೆಳೆಯುತ್ತದೆ. ಹಿಂದೆ ಕೆಲವು ಕಥೆ ಕಾದಂಬರಿಗಳಲ್ಲಿ ಪ್ರಾಣಿಗಳು ಪಾತ್ರಗಳಾಗುವ ಮಟ್ಟಕ್ಕೆ ಬೆಳೆದುದನ್ನು ಓದಿದ್ದೆ. ಆದರೆ ಆ ಯಾವ ಪ್ರಾಣಿಗಳೂ ಮುಕ್ಕಣ್ಣನ ಹಾಗೆ ಕಥಾನಾಯಕನನ್ನೇ ಹಿಂದೆ ಸರಿಸಿ ಬೆಳೆದುದನ್ನು ಕಂಡಿರಲಿಲ್ಲ. ತುಂಬ ಹೃದಯಸ್ಪರ್ಶಿಯಾದ ನಾನೆಂದಿಗೂ ಮರೆಯಲಾಗದ ಕಥೆಯಿದು.

“ಕಥಾವಸ್ತು”ವಿನ ಜೀವಂತಿಕೆಯಿಂದ ನಳನಳಿಸುತ್ತ ಪಾತ್ರ, ಯೋಚಿಸಿದಷ್ಟೂ ಕ್ಲಿಷ್ಟವಾಗುವ ಬಿಡಿಸಿದಷ್ಟೂ ಕಗ್ಗಂಟಾಗುವ ವಿಕ್ಷಿಪ್ತ ವ್ಯಕ್ತಿತ್ವ ರೇಶ್ಮಾಳದು. ಎದುರಾದವರು ಅವಳ ವ್ಯಕ್ತಿತ್ವದ ಸೋತರೆ ಸಾಲದು. ಸೋಲನ್ನು ಒಪ್ಪಿಕೊಳ್ಳಬೇಕು. ಕೆಲವು ವಾಗ್ವಾದ, ತಿರುಗಾಟ, ಜಗಳ ಬೆಳೆಯುತ್ತ ಹೋದಂತೆ ಈಕೆ ತಾವು ಕಂಡವಳಲ್ಲವೆ? ಅಂತ ಬಹುಬೇಗ ಪರಿಚಿತಳಾಗುತ್ತಾಳೆ. ಅವಳ ದಾಂಪತ್ಯವೂ ವಿಶಿಷ್ಟವೇ. ಗಂಡ ಹೆಂಡತಿ ತಂತಮ್ಮ ಗುಣಗಳನ್ನು ಅದಲು ಬದಲು ಮಾಡಿಕೊಂಡಿರಬಹುದೆಂಬ ಮಿತ್ರರ ಅಭಿಪ್ರಾಯವನ್ನು ಕಥೆಗಾರ ತಮ್ಮ ಅಭಿಪ್ರಾಯದೊಂದಿಗೆ ಹೇಳಿದ್ದಾರೆ. ಎದುರಿನವರ ಸೋಲುಗಳಿಂದಲೇ ಜೀವಶಕ್ತಿ ಪಡೆದವಳೇ ಅನ್ನಿಸುವ ಆ ಪಾತ್ರದ ಬಾಯಲ್ಲಿ ಆತ್ಮಹತ್ಯೆಯ ಮಾತು ಬಹಳ ಅಸಹಜ ಮತ್ತು ಅಸಂಘತವೆಂಬ ಅಭಿಪ್ರಾಯಕ್ಕೆ ನಾವು ಬರುವಷ್ಟರಲ್ಲಿ ಅವಳ ಗಂಡನ ಆತ್ಮಹತ್ಯೆಯ ಆಘಾತದೊಂದಿಗೆ ಕಥೆ ಮುಗಿಯುತ್ತದೆ. ಅವನ ಆತ್ಮಹತ್ಯೆಗೇನೋ ಅವನೇ ಕೊಟ್ಟ ಕಾರಣ ಇದೆ. ರೇಶ್ಮಾಳಲ್ಲಿ ಅಜ್ಜಿ ತಾಯಿಯನ್ನೇ ಕಾಣಬಯಸಿದ ಆತ ಅದು ಸಿಕ್ಕದಾದೊಡನೆ ಆತ್ಮಹತ್ಯೆ ಮಾಡಿಕೊಂಡ. ಕಥೆ ಮುಗಿದಾದ ಮೇಲೆ ರೇಶ್ಮಾ ನಮ್ಮಲ್ಲಿ ಬೆಳೆಯತೊಡಗುತ್ತಾಳೆ. ಅವಳ ಬಗ್ಗೆ ನಾವು ಈ ತನಕ ತಿಳಿದುಕೊಂಡ ಲಘು ಭಾವನೆಗಳಿಗೆ ಗಾಂಭೀರ್ಯ ಮೂಡಿ ರೇಶ್ಮಾ ಬಗ್ಗೆ ಅನುಕಂಪ ಮೂಡುತ್ತದೆ.

ಅಧುನಿಕ ಮನುಷ್ಯನ ದೈವ “ರಾಜಕಾರಣ”ದ ಮೂಲಕವೇ ಪ್ರಕಟವಾಗುವುದೆಂದು ಥಾಮಸ್ ಮನ ಹೇಳಿದ್ದಾನೆ. ಬ್ರಿಟಿಷರಿಂದ ಬಳುವಳಿಯಾಗಿ ಬಂದ ರಾಜಕಾರಣಕ್ಕೆ ಮೌಲ್ಯಗಳ ಅಗತ್ಯ ಬೀಳುವುದು ವಿಲಾಸಕ್ಕಾಗಿ ಮಾತ್ರ. ತನಗೆ ಅನುಕೂಲವಾದ ಮೌಲ್ಯಗಳಿಲ್ಲದಿದ್ದಲ್ಲಿ ನಕಲಿ ಮೌಲ್ಯಗಳನ್ನು ಸೃಷ್ಟಿಸಿಕೊಂಡು ಮುಂದುವರೆಯುತ್ತದೆ. ‘ರಾಜಕಾರಣ’ ಎಂಬ ಕಥೆ ಈ ಸಮಸ್ಯೆಯನ್ನು ಚಿತ್ರಿಸುತ್ತ ಮಜ ತೆಗೆದುಕೊಳ್ಳುತ್ತದೆ. ರಾಜಕಾರಣ ಅದೊಂದು ಹುಚ್ಚು ಕುದುರೆ, ಆದರೆ ಅದೃಶ್ಯವಾದ ಕುದುರೆ. ಪ್ರತಿಯೊಬ್ಬರ ಕೈಯಲ್ಲಿ ಲಗಾಮಿದೆ. ಆದರೆ ಆ ಕುದುರೆ ತನ್ನ ಬಳಿಯೇ ಇದೆಯೆಂದು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಪ್ರತಿಯೊಬ್ಬರ ಹತ್ತಿರವೂ ಅದಿಲ್ಲ. ಲಗಾಮು ಅದಲು ಬದಲು ಮಾಡುವ ಚೇಷ್ಟೆಯೂ ನಡೆಯುತ್ತದೆ. ಇಲ್ಲಿಯ ಪ್ರತಿಯೊಬ್ಬನೂ ಒಂದೇ ಪಾತ್ರವನ್ನು ಬೇರೆ ಬೇರೆ ಥರ ಅಭಿನಯಿಸುತ್ತಾನೆ. ಕುದುರೆ ಒಬ್ಬರಿಗೆ ಮಾತ್ರ ಸಿಕ್ಕುವುದು ಸಾಧ್ಯ. ಈ ಸುದೈವಿ ಆ ಸುದೈವಿ ಯಾರೆಂದು ತೀರ್ಮಾನಿಸುವುದೇ ಇಲ್ಲಿಯ ಆಟ. ತೀರ್ಮಾನವಾದ ಕೂಡಲೇ ಎಲ್ಲ ಬಣ್ಣ ಬದಲಾಗಿ ಬೇರೊಂದು ಪಾತ್ರದ ಸಿದ್ಧತೆಗೆ ತೊಡಗುತ್ತಾರೆ.

”ಮುತ್ತೈದೆ” ನಿಧಾನವಾಗಿ ಬಿಚ್ಚಿಕೊಳ್ಳುವ ಕಥೆ. ಡಾ.ಸುರೇಶ್ ಹಳೆ ಪಳೆಯುಳಿಕೆ ಕಟ್ಟಡಗಳ ಅಸಾಮಾನ್ಯ ರಚನೆ, ಭದ್ರತೆ ಭವ್ಯತೆಗಳನ್ನು ಮೆಚ್ಚಿಕೊಳ್ಳುತ್ತ ತನ್ನಜ್ಜಿ ದೇವೀರಮ್ಮನನ್ನು ಜ್ಞಾಪಿಸಿಕೊಳ್ಳುತ್ತಾನೆ. ಆಕೆಗೆ ಆರಾಮವಿಲ್ಲವೆಂಬ ಸಂಗತಿ ಎರಡು ತಿಂಗಳು ಹಳೆಯದು. ಮುತೈದೆಯಾಗಿ ಸಾಯಬೇಕೆಂಬುವುದು ಅವಳ ಹಟ. ಹೆಣವಾದಾಗಲೂ ”ಹಸಿರು ಬಳೆ, ಕೆಂಪು ಕುಂಕುಮ ಗಲ್ಲದ ತುಂಬ ಅರಿಶಿಣ ಈ ಸಾಮಗ್ರಿಗಳೇ ತನಗೆ ಸ್ವರ್ಗಕ್ಕೆ ಸೋಪಾನ ತೋರಿಸಬಲ್ಲವೆಂಬ ಮೂಢನಂಬಿಕೆ” ಆಕೆಯದು. ಅಜ್ಜಿಯ ಈ ಅಭಿಲಾಷೆಯನ್ನು ಬಿಡಿಸಿ ಗುಣಪಡಿಸಬೇಕೆಂದು ಡಾಕ್ಟರ್ ಮೊಮ್ಮಗನ ಸಂಕಲ್ಪ. ಅಜ್ಜ ”ಬೆಂಕಿಸ್ವಾಮಿ”! ಹಿಂದೊಮ್ಮೆ ಅಜ್ಜನಿಗಾಗದ ಅಭಿಪ್ರಾಯ ಹೇಳಿದ್ದಕ್ಕೆ ಅಜ್ಜ ಹೊಡೆದು ಅವಳ ಮೈಮೇಲಾದ ಗಾಯಗಳು ಮಾಯಲಿಕ್ಕೆ ಒಂದೂವರೆ ತಿಂಗಳು ಹಿಡಿದಿತ್ತು. ಅದಕ್ಕೆ ಅಜ್ಜನ ಜೊತೆಗಿರುವುದೆಂದರೆ ಏಳು ಹೆಡೆ ಸರ್ಪದ ಜೊತೆಗಿದ್ದಂತೆ ಎಂದು ದೇವೀರಮ್ಮ ಹೇಳಿದ್ದನ್ನು ಮೊಮ್ಮಗ ಜ್ಞಾಪಿಸಿಕೊಂಡು ಅಂಥವಳನ್ನು ಸಾವಿನಿಂದ ಪಾರುಮಾಡುವುದು ಹ್ಯಾಗೆಂದು ಚಿಂತೆ ಮಾಡುತ್ತಾ ಬರುತ್ತಾನೆ. ಬಂದು ನೋಡಿದರೆ ಅವನ ಕಲ್ಪನೆ ತಲೆಕೆಳಗಾಗಿದೆ. “ಏನಾರ ಮಾಡಿ ನನ್ನನ್ನು ಆರಾಮ ಮಾಡು ನಾ ಜೀವಂತ ಇದ್ದಾಗಲೇ ಅವರ ಕಣ್ಣು ಮುಚ್ಚಲಿ” ಎಂದಾಡಿದ ಅಜ್ಜಿಯ ಮಾತು ಕೇಳಿ ಬೆರಗಾಗುತ್ತಾನೆ. ಕಥೆ ಇದ್ದಕ್ಕಿದ್ದಂತೆ ಲಘು ಹಾಸ್ಯಕ್ಕೆ ತಿರುಗಿತೇ ಎಂದು ಅನುಮಾನ ಬರುವಷ್ಟರಲ್ಲಿ ಗೊತ್ತಾಗುತ್ತದೆ. ಬೆಂಕಿಯಂಥ ಅಸಹಕಾರೀ ಗಂಡ (ಅಜ್ಜ) ಹಾಸಿಗೆ ಹಿಡಿದಾಗ ಅವನ ಸೇವೆಗೆ ಯಾವ ಆಳೂ ತಯಾರಿರಲಿಲ್ಲ. ಆಗಲೇ ಅಜ್ಜಿ ನಿರ್ಧರಿಸಿದ್ದಳು. ತಾನೂ ಜೀವಂತವಾಗಿರದಿದ್ದರೆ ಇವರ ಹೆಣವೂ ಅನಾಥವಾಗಿ ಬಿಡಬಹುದು ಎಂದು. ಆದ್ದರಿಂದ ತಾನು ಬದುಕಲೇಬೇಕು. ಕಥೆ ಓದಿ ಮುಗಿಸಿದಾಗ ಅಜ್ಜಿಯ ಬಗೆಗಿನ ನಮ್ಮ ಗೌರವ ಇಮ್ಮಡಿಯಾಗುತ್ತದೆ. ಮಂದಹಾಸದೊಂದಿಗೆ ಕಥಾರಂಭದ ಪಳೆಯುಳಿಕೆಗಳ ನೆನಪಾಗುತ್ತದೆ. ಕಥೆ ಎಲ್ಲೂ ಆಡಂಬರ ಮಾಡದೇ ಮೌನವೇ ಅನುಭವವಾಗುವ ಈ ಪರಿ ಬಳಿಗಾರರಿಗೇ ವಿಶಿಷ್ಟವಾದುದು.

ಸಂಕಲನದ ಎಲ್ಲ ಕಥೆಗಳೂ ನನಗೆ ಸಮಾನವಾಗಿ ಇಷ್ಟವಾದವೆಂತೆಲ್ಲ. ಪೃಥ್ವಿಯ ಮೇಲೊಂದು ಮರಡಿ, ಜಾಲ, ಘಾತ ಇವು ತೆಳುವಾದ ಅನುಭವ ನೀಡಿ ತಮ್ಮಷ್ಟಕ್ಕೆ ಹಿಂದೆ ಸರಿವ ಕಥೆಗಳು. ಹಾಗೆಂದು ಇವುಗಳನ್ನು ಲಘುವಾಗಿ ಪರಿಗಣಿಸಬೇಕೆಂದೂ ಅಲ್ಲ. ಜಾತಿವಂತ ಸಂಗೀತಗಾರನೆಂದೂ ಅಪಸ್ವರ ಎತ್ತಲಾರ ಅಲ್ಲವೇ? ಈ ಕಥೆಗಳ ಹಿಂದೆಯೂ ಬದುಕಿನ ನಿಗೂಢಗಳನ್ನು ಕಾಂಬ ಹಂಬಲದಿಂದ ಮಿಡಿವ ಒಂದು ಸುಸಂಸ್ಕೃತ ಮನಸ್ಸು ಕ್ರಿಯಾಶೀಲವಾಗಿರುವುದನ್ನು ಬದುಕಿನ ಗಾಢ ಕತ್ತಲೆಗಳನ್ನು ಎದುರಿಸಿ ನೋಡುವ ಉತ್ಸಾಹದ ಧೈರ್ಯ ಕಾಣುತ್ತದೆ.

ಅಣ್ಣಯ್ಯನ ಹೆಣ ಅಮೆರಿಕದಿಂದ ಬರುವ ಸುದ್ದಿಯಿಂದ ಆರಂಭವಾಗುವ “ಸಾವು ಬದುಕು ನಿರಂತರ” (ಬದುಕು ಮಾಯೆಯ ಮಾಟ) ಒಂದು ಮಹತ್ವಾಕಾಂಕ್ಷೆಯ ಕಥೆ, ಹೆಣ ಬರುವ ತನಕ ಕಾಯುತ್ತ ಕಾಲವನ್ನನುಭವಿಸುವ ಗೋಳು ಒಂದಾದರೆ, ಬಂದ ಮೇಲೆ ಅಣ್ಣಯ್ಯನ ಹೆಣ ಎದುರಿಗಿಟ್ಟುಕೊಂಡು ಬದುಕಿದ್ದಾಗ ಅವನೊಂದಿಗಿನ ಸಂಬಂಧಗಳನ್ನು ಜ್ಞಾಪಿಸಿಕೊಳ್ಳುತ್ತ ಸಾವು ಬದುಕುಗಳು ಕೈ ಕೈ ಹೆಣೆದ ಪರಿಗೆ ಬೆರಗಾಗುತ್ತ ಸಾವಿನ ಮೀಮಾಂಸೆಗೆ ಬಂದು ತಲುಪುವುದಿನ್ನೊಂದು. ಅಣ್ಣಯ್ಯನಿಗೆ ಸಾವು ಅನುಭವವಿಲ್ಲ. ಯಾಕೆಂದರೆ ಆತ ಆಗಲೇ ಸತ್ತಿದ್ದಾನೆ. ಆದರೆ ಅದರ ಮೀಮಾಂಸೆಗೆ ತೊಡಗಿದ ಪ್ರಭುದೇವನಿಗೆ ಅದು ಅನುಭವವಾಗಿ ಅಣ್ಣಯ್ಯನ ಸಾವನ್ನು ಇವನೂ ಸತ್ತು, ಪ್ರಭುದೇವನಾದುದರಿಂದ ಆ ಅನುಭವಕ್ಕೆ ಸಾಕ್ಷಿಯಾಗುತ್ತಾನೆ. ರಾತ್ರಿ ಕನಸಿನಲ್ಲಿ ತಾನು ಸತ್ತು ಸಾವಿನ ಮೆರವಣಿಗೆಯಲ್ಲಿ ತಾನೂ ಭಾಗಿಯಾಗಿ ಹೆಣವೂ ಹೆಣಕ್ಕೆ ಸಾಕ್ಷಿಯೂ ಆಗಿ ಏಕಕಾಲದಲ್ಲಿ ಎರಡು ಪಾತ್ರಗಳನ್ನು ಅಭಿನಯಿಸುತ್ತಾನೆ. ಸಾವಿನ ಇಂಥ ಭಯಾನಕ ದರ್ಶನದಲ್ಲಿಯೇ ಕಥೆ ಮುಗಿಯಿತೆಂದಾಗ ಗೋರಿಯಿಂದ ಚಿಮ್ಮುವ ಹಸಿರಿನ ಹಾಗೆ ಚುನಾವಣೆ ಬಾಜಾಭಜಂತ್ರಿ ಊರನ್ನು ಸಾವು ತುಂಬಿದ ನಮ್ಮ ಮನಸ್ಸನ್ನು ಆಕ್ರಮಿಸಿ ಸಂಭ್ರಮಿಸುತ್ತದೆ. ಓದಿ ಮುಗಿಸಿದ ಮೇಲೂ ಕಥೆ ಹಿಂದೆ ಮುಂದೆ ಸರಿಯುತ್ತ ಭಯಾನಕವಾದ ಹಾಗೆಯೇ ಸಡಗರದ ದೃಶ್ಯಗಳಿಗೆ ಅರ್ಥದ ಪದರುಗಳನ್ನು ಕಟ್ಟಿಕೊಡುತ್ತ ಬೆಳೆಯುತ್ತದೆ. ಕನ್ನಡದ ಶ್ರೇಷ್ಠ ಕಥೆಗಳಲ್ಲಿ “ಸಾವು ಬದುಕು ನಿರಂತರ” ಮತ್ತು “ದೇವಳ್ಳಿ ಹೋರಿಯೂ ಮಲ್ಲಣ್ಣ ಪೈಲ್ವಾನನೂ” – ಕಥೆಗಳು ನಿಲ್ಲುತ್ತವೆಂದು ನಂಬಿದ್ದೇನೆ.

ಮನು ಬಳಿಗಾರ್ ಅವರ ಕಥೆಗಳು ನನಗೆ ಇಷ್ಟವಾದ ಬಗೆಯನ್ನು ಅವು ನನಗೆ ನೀಡಿದ ಅನುಭವದ ಪುಟ್ಟ ವಿಶ್ಲೇಷಣೆ ಸಮೇತ ವಿವರಿಸಿದ್ದೇನೆ. ನನ್ನ ಹಾಗೇ ಇವರೂ ಹಳ್ಳಿಯವರು. ನನ್ನ ಪಕ್ಕದ ಜಿಲ್ಲೆಯವರು, ನಮ್ಮಿಬ್ಬರ ಭಾವ ಪ್ರಪಂಚ ಭಿನ್ನವಾದದ್ದಲ್ಲ. ಇಂಥ ಒಬ್ಬ ಮಿತ್ರ ಆಗಲೇ ಕನ್ನಡದ ಕಥಾ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬದುಕನ್ನು ಅದರೆಲ್ಲ ಗಾಂಭೀರ್ಯ ಮತ್ತು ಹೊಳಹುಗಳೊಂದಿಗೆ ನೋಡಿ ಬೆಚ್ಚನೆಯ ಭಾವನೆಗಳಿಂದ ಅಂದಗೆಡದಂತೆ ಹಿಡಿದು ಕಥೆ ಕಟ್ಟಿ ತೋರಿಸುವ ಶ್ರೇಷ್ಠ ಕಲೆ ಮತ್ತು ಶೈಲಿ ಮಾತ್ರ ಕೇವಲ ಅವರದ್ದೇ, ಅವರೊಬ್ಬರದೇ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತ ಅವರಿಂದ ಇನ್ನೂ ಇಂತಹ ಉತ್ತಮ ಕಥೆಗಳು ಬರಲಿ, ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಲಿ ಎಂದು ಹಾರೈಸುತ್ತೇನೆ.

* * *


[1] ಶ್ರೀ ಮನು ಬಳಿಗಾರ್ ಅವರ ‘ಬದುಕು ಮಾಯೆಯ ಮಾಟ’ ಪುಸ್ತಕಕ್ಕೆ ಬರೆದ ಮುನ್ನುಡಿ ೨೦೦೨