ಶ್ರೀ ಸಿದ್ದಪ್ಪ ಬಿದರಿಯವರ ಕವನ ಸಂಕಲನಕ್ಕೆ ಮುನ್ನುಡಿ ಬರೆಯಲು ಸಂತೋಷವಾಗುತ್ತದೆ. ಈತ ಎದುರಿಗಿದ್ದಾಗ ನನ್ನ ಹಳ್ಳಿಯ ಎಲ್ಲ ಲಾವಣಿಕಾರರ ನೆನಪಾಗುತ್ತದೆ. ಶಿವಾಪುರದ ಹುಚ್ಚು ಹಂಬಲಗಳು ಕೆರಳುತ್ತವೆ. ಸ್ವಭಾವತಃ ವಿನಯವಂತ ಕವಿ. ಪದ್ಯ ಹೇಳಣ್ಣಾ ಎಂದರೆ, ಸಂಕೋಚವಿಲ್ಲದೆ ಹಾಡಿ ಆನಂದಪಡುವ ಕವಿ. ಹಳ್ಳಿಯವನಾಗಿ, ಹಳ್ಳಿಯಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹಾಡಾಗಿಸಬಲ್ಲ ಕವಿ. ದಿನೇ ದಿನೇ ಕಳಕೊಳ್ಳುತ್ತಿರುವ ಹಳ್ಳಿಯ ಬಗ್ಗೆ ಅವನಲ್ಲಿ ಹಳಹಳಿಯಿದೆ. ಭವಿಷ್ಯದ ಕುರಿತು ಖೇದವಿದೆ. ಇವೆಲ್ಲವನ್ನು ಕವನ ಕಟ್ಟಿ ಹಾಡುವ ಎದೆಗಾರಿಕೆಯಿದೆ.

ಇವನು ಜನಪದ ಕವಿಯೆಂಬುವುದನ್ನು ನಾನು ಒತ್ತುಕೊಟ್ಟು ಹೇಳುತ್ತಿದ್ದೇನೆ. ”ಯಾವುದೇ ಜಾನಪದ ಸಂಸ್ಕೃತಿಯನ್ನು ಕೊಲೆ ಮಾಡಬೇಕೆಂದಿದ್ದರೆ ಅಲ್ಲಿ ಒಂದು ಸ್ಕೂಲು ತೆಗೆಯಬೇಕು. ಅಂದರೆ ಜಾನಪದ ತಾನಾಗಿಯೇ ನಾಶವಾಗುತ್ತದೆ”. ಈ ಮಾತಿಗೆ ಅಮೆರಿಕಾ ಒಳ್ಳೆಯ ಉದಾಹರಣೆ. ಅಲ್ಲಿ ಜಾನಪದವಿಲ್ಲ,. ಆ ರೀತಿ ಅಕ್ಷರಸ್ಥರಾಗುವ ಯಾವ ಸಮಾಜದಲ್ಲಿಯೂ ಜಾನಪದ ಉಳಿಯುವುದು ಸಾಧ್ಯವಿಲ್ಲ. ಆದರೆ ತಮ್ಮಲ್ಲೂ ಜಾನಪದ ಇದೆಯೆಂದೂ ತೋರಿಸಲು ಅಲ್ಲಿಯ ಕೆಲವು ವಿಧ್ವಾಂಸರು ಕಕ್ಕಸು ಗೋಡೆಯ ಮೇಲಿನ ಬರಹಗಳನ್ನೇ ಜಾನಪದವೆಂದು ಕರೆದು ಹಾಸ್ಯಾಸ್ಪದರಾದ ಸಂಗತಿ ನಮಗಿನ್ನೂ ನೆನಪಿದೆ. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಸಾಮೂಹಿಕ ಶಿಕ್ಷಣಕ್ಕೆ ಮಹತ್ವ ಬಂದು, ದೇಶ ಸುಶಿಕ್ಷಿತವಾಗುತ್ತಿದ್ದಂತೆಯೇ ನಮ್ಮಲ್ಲಿಯ ಜಾನಪದವೂ ನಾಶವಾದದ್ದನ್ನು ಕಣ್ಣಾರೆ ಕಂಡಿದ್ದೇನೆ. ಗಾಂಧೀಜಿಯವರ ಹತ್ಯೆಯಾದಾಗ ಬಂದಷ್ಟು ಜಾನಪದ, ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯಾದಾಗ ಬರಲಿಲ್ಲ. ಜನ ಗುಂಪಾದಲ್ಲೆಲ್ಲಾ ಜಾನಪದ ಇರುತ್ತದೆ ಎಂದು ವಿಧ್ವಾಂಸರ ಮಾತೊಂದು ಖರೆ ಬರಲಿಲ್ಲ.  ಅವರು ಹೇಳಿದಂಥ ಕಾರ್ಮಿಕರ ಜಾನಪದ, ಕಾಲೇಜು ವಿದ್ಯಾರ್ಥಿಗಳ ಜಾನಪದ ಬರಲೇ ಇಲ್ಲ.

ಕೊಟ್ಟೂರು ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಹಾಲಹಳ್ಳಿಯ ಒಂದು ಸಭೆಯಲ್ಲಿ ಜಾನಪದದ ಬಗೆಗೆ ಇವೇ ಮಾತುಗಳನ್ನು ನಾನು ಹೇಳಿದಾಗ ಸಿದ್ದಪ್ಪ ಬಿದರಿ ಜಾನಪದಕ್ಕೆ ಸಾವಿಲ್ಲವೆಂದು ಪ್ರತಿಪಾದಿಸಿದ. ಅವನ ವಾದ ಕೇಳಿ ನನಗೆ ದುಃಖವಾಯಿತು. ಸಿದ್ದಪ್ಪ ಎದುರು ಮಾತಾಡಿದ್ದಕ್ಕಲ್ಲ, ಅವನಿಗೆ ನಾನು ಖಾತ್ರಿ ಮಾಡಲಾರದ್ದಕ್ಕೆ. ನಮ್ಮ ದೇಶದ ಅನೇಕ ಜಾನಪದ ವಿದ್ವಾಂಸರೆನಿಸಿಕೊಂಡವರನ್ನೇ ನಾನಿನ್ನೂ ಒಪ್ಪಿಸಲಾಗಿಲ್ಲ. ಹೇಳತೇನ ಕೆಳ (೧೯೬೩) ಬರೆದಾಗ ಅದರಲ್ಲಿ ವಸಾಹತುಶಾಹಿ (ಸಿಟಿಯ) ಗೌಡ ಶಿವಾಪುರವನ್ನ ನಾಶಮಾಡುವುದಕ್ಕಾಗಿ ಅಲ್ಲಿ ಸ್ಕೂಲು ತೆರೆಯುತ್ತಾನೆ. ಅದನ್ನು ನಮ್ಮ ಅನೇಕ ವಿಮರ್ಶಕರು ಪ್ರತಿಗಾಮಿ ವಿಚಾರವೆಂದು ವಾದಿಸಿದ್ದರು. ಆ ದಿನಗಳಲ್ಲಿ ಹಾಗೆ ವಾದಿಸಿದ ಕೆಲವರಾದರೂ ಈಗ ನನ್ನ ವಾದವನ್ನು ಒಪ್ಪುತ್ತಾರೆ. ಜಾನಪದ ಉಳಿಯಬಾರದೆಂದು ನನ್ನ ವಾದವಲ್ಲ, ಈಗ ಉಳಿಯುವುದು ಸಾಧ್ಯವಿಲ್ಲ ಎಂದು ದುಃಖವಾಗುತ್ತದೆ.

ಯಾವುದೇ ಸಮಾಜದಲ್ಲಿ ತನ್ನ ಸುತ್ತಲಿನ ಜಗತ್ತನ್ನು ತಿಳಿಯಲು ಗ್ರಹಿಸಲು ಭಾಷೆಯನ್ನು ನಿರ್ಮಿಸಿಕೊಳ್ಳುತ್ತದೆ. ಜಾನಪದ ಅಂಥ ಒಂದು ಭಾಷೆ, ಅಕ್ಷರಸ್ಥ ಸಮಾಜ ತನ್ನ ತಿಳುವಳಿಕೆಯನ್ನು ಬರಹದ ಮೂಲಕ ಮುಂದಿನ ತಲೆಮಾರಿಗೆ ಸಾಗಿಸುವಂತೆ ಅನಕ್ಷರಸ್ಥ ಸಮಾಜ ತೋಂಡಿ ಸಂಪ್ರದಾಯದ ಮೂಲಕ ಸಾಗಿಸುತ್ತದೆ. ಬರಹದ ಮೂಲಕ ಸಾಗಿ ಬಂದದ್ದು ಬದಲಾವಣೆಗೊಳ್ಳುವುದಿಲ್ಲ. ಒಮ್ಮೊಮ್ಮೆ ಅಂಥ ತಿಳುವಳಿಕೆಯ ಬಗ್ಗೆ ಭಯಭಕ್ತಿ ಇದ್ದವರು ಅದನ್ನು ಪಡೆದಂತೆಯೇ ಅದರ ಹ್ರಸ್ವ, ದೀರ್ಘ, ಪ್ಲುತ ಸಮೇತ ಮುಂದಿನ ತಲೆಮಾರಿಗೆ (ಟೇಪರೆಕಾರ್ಡರ್ ಕೆಲಸ ಮಾಡಿ) ಸಾಗಿಸಿದ್ದೂ ಇದೆ. ವೇದಗಳು ಅಂಥ ಅಪರೂಪದ ಉದಾಹರಣೆಗಳು. ವೇದಗಳಿಗ ಕ್ಯಾಸೇಟ್‌ಗಳಲ್ಲಿ ಲಭ್ಯವಿರುವುದೂ ಇತಿಹಾಸ.

ಆದರೆ ಜಾನಪದ ಹಾಗಲ್ಲ, ಸೃಜನಶೀಲತೆ ಇದರ ಉಸಿರೂ ಹೌದು, ಗುಟ್ಟೂ ಹೌದು. ತಲೆಮಾರಿನಿಂದ ತಲೆಮಾರಿಗೆ ತಲುಪುವ ಪ್ರಕ್ರಿಯೆಯಲ್ಲಿ ಅದನ್ನು ಸಾಗಿಸುವ ಪ್ರತಿಯೊಬ್ಬನೂ ಸೃಜನಶಿಲನಾಗಿರುತ್ತ ತನ್ನ ಅನುಭವದ ಸಾಮಗ್ರಿಯನ್ನು ಅದರಲ್ಲಿ ಸೇರಿಸುತ್ತ ದಾಟಿಸುತ್ತಾನೆ. ಒಬ್ಬನೇ ಕಥೆಗಾರ ಒಂದು ಕಥೆಯನ್ನು ಎರಡು ಸಲ ಹೇಳುವುದು ಸಾಧ್ಯವಿಲ್ಲವೆಂದು ವಿಧ್ವಾಂಸರು ತುಸು ಅತಿಶಯೋಕ್ತಿಯಲ್ಲಿ ಹೇಳುವುದಕ್ಕೆ ಇದೇ ಕಾರಣವಾಗಿದೆ. ಯಾಕೆಂದರೆ ಶ್ರೋತೃಗಳು ಬದಲಾದಂತೆ ಅವನ ಕಥನದಲ್ಲೂ ಸಹ ಬದಲಾವಣೆಗಳಾಗುತ್ತವೆ.

ಜಾತಿ ಪದ್ಧತಿ, ಅಸ್ಪೃಶ್ಯತೆಯ ಕೀಳರಿಮೆ ಮತ್ತು ಜಾನಪದಗಳಲ್ಲಿ ಒಂದು ಬಗೆಯ ಬಿಡಿಸಲಾರದ ನಂಟಿದೆ. ಈ ಮೂಲಕ ಅಕ್ಷರಸ್ಥ ಸಮಾಜ ಅನಕ್ಷರಸ್ಥ ಸಮಾಜವನ್ನು ದೌರ್ಜನ್ಯಕ್ಕೆ ಒಳಪಡಿಸಿದ್ದಿದೆ. ತನ್ನ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಅನಕ್ಷರಸ್ಥ ಸಮಾಜ ಜಾನಪದವನ್ನು ಕೆಚ್ಚಿನಿಂದ ಅವಲಂಬಿಸಿದ್ದೂ ಇದೆ. ಜಾನಪದದಿಂದಲೇ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದೆ ಎಂಬ ತಿಳುವಳಿಕೆ ಯಾವಾಗ ಬಂತೋ ಆಗ ಜಾನಪದವನ್ನು ತಿರಸ್ಕರಿಸಿದ ಉದಾಹರಣೆಗಳು ಇವೆ. ಶಿಕ್ಷಣ ಪ್ರಸಾರ ಹೆಚ್ಚಿದಂತೆಯೇ ಕೀಳರಿಮೆಯನ್ನು ದಾಟಿ ಬರಲು ಕೆಲವು ಜಾತಿಗಳು ಪ್ರಯತ್ನಿಸಿ ಸುದೈವದಿಂದ ಸಫಲವಾದ ಉದಾಹಣೆಗಳಿವೆ. ಜೋಗತಿಯರ ಹಾಡುಗಾರಿಕೆ ಅಂಥದು. ಆ ಸಂಪ್ರದಾಯ ಉಳಿದರೆ ಜೋಗತಿಯರ ಹಾಡುಗಾರಿಕೆ ಉಳಿಯುತ್ತದೆ. ಅದು ಉಳಿಯಲೆಂದು ಸುಶಿಕ್ಷಿತನಾದ ಯಾವ ವಿವೇಕಿಯೂ ಹೇಳಲಾರ. ಜಾತಿ ವ್ಯವಸ್ಥೆಯ ಕೀಳರಿಮೆಗೂ ಜಾನಪದದ ಸೃಜನಶೀಲಗೆತೂ ಬಿಡಲಾರದ ನಂಟಿರುವುದರಿಂದ ಬೇರೆ ದೇಶಗಳ ಅನೇಕ ಜಾನಪದಗಳಿಗಿಂತ ನಮ್ಮ ಜಾನಪದ ಬೇಗನೇ ನಶಿಸುವ ಪ್ರಕ್ರಿಯೆಯಲ್ಲಿದೆ. ಹೀಗಾಗಿ ನಾವು ತೋಂಡಿಯಂಥ ವಿಭಿನ್ನವೂ, ಬರಹಕ್ಕೆ ಪೋಷಕವು ಆದ ಮಾಧ್ಯಮಕ್ಕೆ ಎರವಾಗುತ್ತಿದ್ದೇವೆ. ಅದರ ಬಗ್ಗೆ ಏನಾದರೂ ಮಾಡುವುದು ಸಾಧ್ಯವೇ ಎಂಬುದನ್ನು ಚರ್ಚಿಸಲು ಅಗತ್ಯವಿದ್ದವರು ಮುಂದೆ ಬರಲಿ. ನಾನು ಹೇಳುತ್ತಿರುವುದೇನೆಂದರೆ ವೇದ ಕಾಲದಲ್ಲಿಯೂ “ಪೈಶಾಚಿಕ ಭಾಷೆ”ಯಲ್ಲಿ ಛಲದಿಂದ ಲಕ್ಷಾಂತರ ಕಥೆಗಳನ್ನು ಹುಟ್ಟು ಹಾಕಿ ಆ ಪರಂಪರೆಯನ್ನು ಇಲ್ಲಿಯ ತನಕ ನಡೆಸಿಕೊಂಡು ಬಂದ ಜಾನಪದ ಈಗ ನಶಿಸುತ್ತಿದೆ. ಅದು ಅಕ್ಷರಸ್ಥ ಸಮಾಜಕ್ಕೆ ಎದುರು ನಿಂತು ಹುಟ್ಟಿರಬಹುದು ಅಥವಾ ವಚನಕಾರರ ಕಾಲಕ್ಕೆ ಆದಂತೆ ಬರಹಕ್ಕೆ ಪೂರಕವಾಗಿ ಬಂದುದಾಗಿರಬಹುದು.

ನಾನೀಗ ಸಿದ್ದಪ್ಪನ ಕಾವ್ಯದ ಬಗ್ಗೆ ಪುನಃ ಚರ್ಚೆಗೆ ಬರುತ್ತೇನೆ.

ಸಿದ್ಧಪ್ಪ ಜನಪದ ಕವಿಯೆಂದು ಹೇಳಿದೆ. ಯಾಕೆಂದರೆ ಆತ ಅನಕ್ಷರಸ್ಥ ತೋಂಡಿಯಿಂದಲೇ ಜಗತ್ತನ್ನು ಗ್ರಹಿಸುತ್ತಾನೆ. ಮತ್ತು ಕಾವ್ಯ ರಚನೆ ಮಾಡುತ್ತಾನೆ. ಜನಪದ ಕವಿಗಳಂತೆ ತನ್ನ ರಚನೆಗಳನ್ನು ಕೇಳುಗಳೆದುರು ಆನಂದದಿಂದ ಹಾಡುತ್ತಾನೆ. ಆದರೆ ಜನಪದ ಕವಿಗಳಂತೆ ಹಾಡುಗಾರಿಕೆಯ ಸಂದರ್ಭ ಮತ್ತು ಶ್ರೋತೃಗಳು ಭಿನ್ನವಾದ ಹಾಗೆ ಇವನ ಹಾಡುಗಾರಿಕೆಯಲ್ಲಿ ಹೆಚ್ಚಿನ ಅಂಶಗಳು ಸೇರುವುದಿಲ್ಲ, ಇಲ್ಲವೇ ಕಡಿಮೆಯಾಗುವುದಿಲ್ಲ. ರಚಿಸಿದ್ದನ್ನು ಉರ್ದು ಕವಿಗಳಂತೆ ಕಂಠಪಾಠ ಮಾಡುತ್ತಾನೆ. ಹೀಗೆ ರಚಿತವಾದ ಹಾಡನ್ನು ಅಕ್ಷರ ಬಲ್ಲವರೆದುರು ಕೂತು ಹಾಡಿ ಅವರಿಂದ ಬರೆಸುತ್ತಾನೆ. ಪ್ರಕಾಶಪಡಿಸುತ್ತಾನೆ. ಈತನಕ ಆತನ ನಾಲ್ಕು ಕವನ ಸಂಕಲನಗಳು ಅಚ್ಚಾಗಿವೆ. ತನ್ನ ಕವಿತೆಗಳನ್ನು ಆತ ಓದಲಾರ. ಕವಿತೆಯ ಹೆಸರು ಹೇಳಿದರೆ ಅನೇಕ ಸಲ ಯಾವ ಕವಿತೆ ಹಾಡಬೇಕೆಂದು ಗುರುತಾಗುವುದಿಲ್ಲ. ಆದರೆ ಮೊದಲನೇ ಸಾಲು ಹೇಳಿದರೆ ತಕ್ಷಣ ಇಡೀ ಹಾಡನ್ನು ಜ್ಞಾಪಿಸಿಕೊಳ್ಳುತ್ತಾನೆ. ದೇವರು ಆತನಿಗೆ ಅದ್ಭುತ ಜ್ಞಾಪಕ ಶಕ್ತಿಯನ್ನು ಕೊಟ್ಟಿದ್ದನ್ನು ಅವನೇ ಹೇಳಿಕೊಂಡಿದ್ದಾನೆ. ಈ ಕಾರಣದಿಂದ ಆತ ತೊಂಡಿ ಸಂಪ್ರದಾಯದ ಕೊನೆಯ ಕೊಂಡಿಯ ಹಾಗೆ ಕಾಣಿಸುತ್ತಾನೆ.

* * *