ಅಕ್ಷರ ಚಿಂತನ ಮಾಲೆಯಲ್ಲಿ ಪ್ರಕಟವಾಗಿರುವ ಗ್ರಂಥಗಳು ಅವುಗಳಲ್ಲಿ ಕೆಲವು ನಮ್ಮವೇ ಆಗಿದ್ದರೂ ನಮಗೆ ಪರಕೀಯವಾಗಿರುವ ಚಿಂತನವನ್ನು ನಿರೂಪಿಸುವಂಥವಾಗಿವೆ. ಭರ್ತೃಹರಿಯ ವಾಕ್ಯಪದೀಯ, ವಿದ್ಯಾಪತಿಯ ಕತೆಗಳು, ನಾಗಾರ್ಜುನನ ತಾತ್ವಿಕ ಗ್ರಂಥಗಳು, ತಮಿಳಿನ ಕಾವ್ಯ ಮೀಮಾಂಸೆ ಮೊದಲಾದವು ನಮ್ಮ ನೆಲದಿಂದಲೇ ಹುಟ್ಟಿಬಂದ ಚಿಂತನ ಕ್ರಮಗಳಾಗಿದ್ದರೂ ಯಾವ್ಯಾವುದೋ ಕಾರಣಕ್ಕಾಗಿ ಪರಕೀಯವಾಗಿ ಉಳಿದವು. ಸದ್ಯದ ಮಟ್ಟಿಗೆ ಹೇಳುವುದಾದರೆ ನಮಗೆ ಅರಿಸ್ಟಾಟಲನ ಕಾವ್ಯ ಮೀಮಾಂಸೆ ತಮಿಳಿನ ಕಾವ್ಯ ಮೀಮಾಂಸೆಗಿಂತ ಹೆಚ್ಚು ಹತ್ತಿರವಾಗಿದೆ. ಇನ್ನು ತಮಿಳಿನ ಪಂಡಿತರನ್ನು ಕೇಳಿದರೂ ಅದೇ ಕತೆ. ಅವರಿಗೆ ಪಾಶ್ಯಾತ್ಯ ಕಾವ್ಯಮೀಮಾಂಸೆ ಸಂಸ್ಕೃತ ಕಾವ್ಯ ಮೀಮಾಂಸೆಗಿಂತ ಹೆಚ್ಚು ಸಮೀಪವಾಗಿದೆ.

ಇದು ನಮ್ಮ ಇಂದಿನ ತಿಳುವಳಿಕೆಯ ಪರಿಸ್ಥಿತಿಯಾಗಿದೆ. ಅಕ್ಷರ ಚಿಂತನ ಮಾಲೆಗೆ ಬರೆದಿರುವ ಮುನ್ನುಡಿಯಲ್ಲಿ ಡಾ. ಡಿ.ಆರ್. ನಾಗರಾಜ ಇದನ್ನೇ ಸಾಮಾಜಿಕ ವಿಸ್ಮೃತಿ ಎಂದು ಕರೆದಿದ್ದಾರೆ. ವ್ಯಕ್ತಿಗೆ ಅವರಿಸಿರುವ ವಿಸ್ಮೃತಿಗಿಂತ ಭಿನ್ನವಾದ ವಿಸ್ಮೃತಿಯಿದು. ಇದು ನಮ್ಮ ತಿಳುವಳಿಕೆಯ ಸ್ವಭಾವಕ್ಕೆ ಸಂಬಂಧಪಟ್ಟ ಮಾತಾಗಿದೆ. ಇಂದು ವಸ್ತವನ್ನು ಕುರಿತ ನಮ್ಮ ತಿಳುವಳಿಕೆಗೆ ಒಂದೇ ಮುಖ ಇದ್ದರೆ ಅದು ತಿಳುವಳಿಕೆಯೇ ಅಲ್ಲ. ತಿಳುವಳಿಕೆ ಇತ್ಯಾತ್ಮಕವಾಗಿರುವಂತೆ ನೇತ್ಯಾತ್ಮಕವೂ ಆಗಿರಬೇಕು. ಬಂಗಾರದ ಬಗ್ಗೆ ಮಾತನಾಡುವಾಗ ಅದು ಬಂಗಾರ ಎಂಬ ತಿಳುವಳಿಕೆ ಮಾತ್ರವಲ್ಲದೇ ಅದು ಕಲ್ಲಲ್ಲ ಎಂಬ ತಿಳುವಳಿಕೆಯೂ ಇರಬೇಕು. ತನಗೆ ಪರಕೀಯವಾದುದ್ದನ್ನು ವಿರುದ್ಧವಾದದ್ದನ್ನು ಅರಗಿಸಿಕೊಂಡಾಗ ಮಾತ್ರ ತಿಳುವಳಿಕೆ ಗಟ್ಟಿಮುಟ್ಟಾಗುತ್ತದೆ. ಅಕ್ಷರ ಚಿಂತನ ಮಾಲೆಯ ಈ ಗ್ರಂಥಗಳು ನಮ್ಮ ತಿಳುವಳಿಕೆಯನ್ನು ಹೆಚ್ಚು ಸಮೃದ್ಧವಾಗಿಸುತ್ತವೆಂಬ ಮಾತಿನಲ್ಲಿ ಸಂಶಯವೇ ಇಲ್ಲ.

ಈಗ ಪ್ರಕಟವಾಗಿರುವ ಅಕ್ಷರ ಚಿಂತನ ಮಾಲೆಯ ಹನ್ನೆರಡು ಗ್ರಂಥಗಳು ಬೇರೆ ಬೇರೆ ಕಾಲಮಾನಗಳಿಗೆ, ಕೆಲವು ದೇಶ, ಭಾಷೆಗಳಿಗೆ ಸೇರಿದವುಗಳಾಗಿವೆ. ‘ತಮಿಳು ಕಾವ್ಯ ಮೀಮಾಂಸೆ’, ನಮ್ಮ ನೆರೆಯ ಭಾಷೆಗೆ ಸೇರಿದ್ದಾದರೆ, ದಾವ್‌ದ ಜಿಂಗ್‌ನ ‘ಧರ್ಮಪಥ’ ಸೂತ್ರ ಚೀನಿ ಭಾಷೆಗೆ ಸೇರಿದ್ದಾಗಿದೆ. ‘ಕನ್ನಡದ ಪ್ರಜ್ಞೆಗೆ ಇವು ಬಹಳ ದೂರದ ಕೃತಿಗಳು’. ಅಪರಿಚಿತವಾದದ್ದನ್ನು ಪರಿಚಯಿಸುವುದು, ತಿಳುವಳಿಕೆಯ ಆಯಾಮಗಳನ್ನು ವಿಸ್ತರಿಸುವುದು ಈ ಗ್ರಂಥಮಾಲೆಯ ಉದ್ದೇಶಗಳಲ್ಲಿ ಒಂದಾಗಿದೆ. ‘ವಾಕ್ಯಪದೀಯ’ ಸಂಸ್ಕೃತದಲ್ಲಿದ್ದರೂ ಕನ್ನಡದ ಮಟ್ಟಿಗೆ ಅದು ಹೊಸದಾಗಿಯೇ ಇದೆ. ಹೊಸದನ್ನು ಬರಮಾಡಿಕೊಳ್ಳುವಾಗ, ಅಪರಿಚಿತವಾದುದನ್ನು ಸ್ವೀಕರಿಸುವಾಗ ಸಂಶಯ ಮತ್ತು ಹೆದರಿಕೆಗಳು ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತವೆ. ಈ ಶತಮಾನ ಪ್ರಾರಂಭವಾಗುವ ಮೊದಲೇ ನಮಗೆ ಇಂಗ್ಲಿಷ್ ಭಾಷೆಯ ಮೂಲಕ ಪಾಶ್ಚಾತ್ಯ ವಿದ್ಯೆ, ಸಂಸ್ಕೃತಿ ಹಾಗೂ ಧರ್ಮಗಳ ಪರಿಚಯವಾಯಿತು. ಆಗ ರಾಜಕೀಯವಾಗಿ ಆಯ್ಕೆ ನಮ್ಮದಾಗಿರಲಿಲ್ಲ. ಆದ್ದರಿಂದ ಎಷ್ಟೇ ಭಯ, ಸಂಶಯಗಳಿದ್ದರೂ ಇಂಗ್ಲೀಷನ್ನು ಒಪ್ಪಿಕೊಳ್ಳಬೇಕಾಯಿತು, ಪಳಗಿಸಿಕೊಳ್ಳಬೇಕಾಯಿತು. ಆಗ ತೆರೆದ ಬಾಗಿಲು ಇನ್ನೂ ತೆರೆದೇ ಇದೆ. ಆದರೂ ಇಂಗ್ಲೀಷನ್ನು ಬಿಟ್ಟು ಬೇರೆ ಭಾಷೆ, ಸಂಸ್ಕೃತಿ ಮನೆ ಬಾಗಿಲಿಗೆ ಬಂದಾಗ ಮತ್ತೇ ಬಾಗಿಲು ಮುಚ್ಚಿಕೊಳ್ಳುವ ಮನಸ್ಸಾಗುತ್ತದೆ.

ಅಕ್ಷರ ಚಿಂತನ ಮಾಲೆಯ ಗ್ರಂಥಗಳು ನಮ್ಮ ಪ್ರಜ್ಞೆಗೆ ಒಂದು ಅಹ್ವಾನವಾಗಿ ಬಂದರೆ ಅವುಗಳನ್ನೂ ಪಳಗಿಸಿಕೊಳ್ಳಬೇಕಾಗುತ್ತದೆ. ಈ ಪಳಗಿಸಿಕೊಳ್ಳುವ ಪ್ರಕ್ರಿಯೆಯ ಮೊದಲ ಹೆಜ್ಜೆ ಎಂದರೆ ಅನುವಾದ. ವಿದ್ಯಾಪತಿಯ ಮೈಥಿಲೀ ಕತೆಗಳು ಕನ್ನಡವಾಗಿಬಿಟ್ಟರೆ ಅವನ್ನು ಓದಿಕೊಳ್ಳುವುದು ಸುಲಭವಾಗುತ್ತದೆ. ಪರಿಚಯ ಹೆಚ್ಚಾದಂತೆ ಇವು ನಮ್ಮ ಕತೆಗಳೇ ಆಗುತ್ತವೆ. ‘ಪುರುಷ ಪರೀಕ್ಷೆ’ಗೆ ಬರೆದಿರುವ ಹಿನ್ನುಡಿಯಲ್ಲಿ ಒಂದು ಮಾತಿದೆ. ವಿದ್ಯಾಪತಿ ಮತ್ತು ಕುಮಾರವ್ಯಾಸ ಇವರಿಬ್ಬರಲ್ಲಿ ಸಮಾನ ಧರ್ಮವಿದೆ. ಇಬ್ಬರೂ ಸಂಪ್ರದಾಯನಿಷ್ಠರು. ಆದರೆ ಕುಮಾರವ್ಯಾಸ ಭಾಷೆಯ ಮಟ್ಟದಲ್ಲಿ ಸಂಪ್ರದಾಯ ನಿಷ್ಠತೆಯನ್ನು ಮೀರಿದ್ದರೆ, ವಿದ್ಯಾಪತಿ ಕೃಷ್ಣ ರಾಧೆಯರ ಸಮಾಜಬಾಹಿರವಾದ ಪ್ರಣಯದಲ್ಲಿ ಅದನ್ನು ಮೀರಿದ. ಈ ಒಳನೋಟದಿಂದ ವಿದ್ಯಾಪತಿಯ ಪರಿಚಯ ನಮಗಾದುದಲ್ಲದೇ, ಕುಮಾರವ್ಯಾಸನ ಬಗ್ಗೆ ಕೂಡ ನಮ್ಮ ತಿಳುವಳಿಕೆ ಹೆಚ್ಚಾಗುತ್ತದೆ. ಆದರೆ ಇದು ಕೂಡ ಚರ್ಚೆಯ ಆರಂಭವೆಂದೇ ನನ್ನ ಗ್ರಹಿಕೆ. ಈ ಒಳನೋಟದಿಂದ ಕುಮಾರವ್ಯಾಸ ಮತ್ತು ವಿದ್ಯಾಪತಿ ಇವರ ಕಾವ್ಯದ ಬಗ್ಗೆ ಇನ್ನೂ ವಿಸ್ತಾರವಾದ ಚರ್ಚೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಹುಟ್ಟುತ್ತದೆ.

ಅಕ್ಷರ ಚಿಂತನ ಮಾಲೆಯ ಈ ಗ್ರಂಥಗಳನ್ನು ಪ್ರತ್ಯೇಕವಾಗಿ ಓದಿಕೊಂಡು ಅವುಗಳ ಮೌಲ್ಯಮಾಪನ ಮಾಡುವುದು ಸಾಧ್ಯ. ಆದರದು ಸದ್ಯಕ್ಕೆ ಪ್ರಯೋಜನಕಾರಿಯಾಗಿಲ್ಲ. ದಾವ್‌ದ ಜಿಂಗ್ ನ ಭಾಷಾಂತರ ಸರಿಯಾಗಿದೆಯೇ, ಚೀನಿ ಕಾವ್ಯಪರಂಪರೆಯಲ್ಲಿ ಅದರ ಸ್ಥಾನಮಾನವೇನು ಎಂಬುವುದರ ಬಗ್ಗೆ ಈ ಚಿಕ್ಕ ಪುಸ್ತಕ ತಿಳುವಳಿಕೆಯನ್ನೂ ಕೊಡುವುದಿಲ್ಲ. ತಮಿಳು ಕಾವ್ಯ ಮೀಮಾಂಸೆಯಿಂದ ‘ಶಿಲಪ್ಪದಿಕಾರಂ’ದಂಥ ಕೃತಿಯನ್ನು ಇಡಿಯಾಗಿ ಗ್ರಹಿಸಲು ಸಾಧ್ಯವೇ? ಅಥವಾ ಅವರದ್ದೇ ಈಚಿನ ಸಾಹಿತ್ಯವನ್ನು ವಿವರಿಸಲು, ಸ್ವೀಕರಿಸಲು ಸಾಧ್ಯವೇ? ಈ ಬಗ್ಗೆ ಆ ಗ್ರಂಥದಲ್ಲಿ ಉತ್ತರಗಳಿಲ್ಲ. ಆದರೆ ಈ ಗ್ರಂಥಗಳನ್ನೆಲ್ಲ ಒಟ್ಟಾಗಿಯೇ ನೋಡಬೇಕು. ಈ ಹನ್ನೆರಡು ಗ್ರಂಥಗಳ ಆಯ್ಕೆ, ಅವು ಒಟ್ಟಾಗಿ ಕನ್ನಡದ ಬರವಣಿಗೆಯ ಮೇಲೆ ಬೀರಬಹುದಾದ ಪ್ರಭಾವ, ಅವೆಲ್ಲ ಕೂಡಿಕೊಂಡು ನಿರ್ಮಿಸುವ ಚಿಂತನಕ್ರಮ ಇವುಗಳ ಬಗ್ಗೆ ನಮ್ಮ ವಿಮರ್ಶೆ ಲಕ್ಷ್ಯ ಕೊಡಬೇಕಾಗಿದೆ. ಪಂಜಾಬದ ಸೂಫಿ ಕವಿ ಶೇಕ್ ಫರೀದ ಮತ್ತು ದಾರಾಶಿಕೋ ಇವರ ನಡುವಿನ ಐತಿಹಾಸಿಕ ಸಂಬಂಧ ನಮ್ಮನ್ನು ಕೆರಳಿಸಬೇಕು. ಋಗ್ವೇದ ಚಿಂತನೆ ನಾಗಾರ್ಜುನ ಚಿಂತನಕ್ರಮವನ್ನು ಎದುರಿಸಬೇಕು.

ಇನ್ನೂ ಒಂದು ಮಾತನ್ನು ಹೇಳಬಯಸುತ್ತೇನೆ. ದೇಶಾದ್ಯಂತ ಪ್ರಕಾಶನದ ಕಾರ್ಯಕ್ರಮದಲ್ಲಿ ಅಕ್ಷರ ಚಿಂತನ ಮಾಲೆಯ ಪ್ರಕಾಶನ ಒಂದು ತುದಿಯಾಗಿದ್ದರೆ, ನಮ್ಮ ನವಸಾಕ್ಷರರನ್ನು ತಯಾರು ಮಾಡುವ ಪ್ರಕಾಶನ ಇನ್ನೊಂದು ತುದಿಯಾಗಿದೆ. ಆದ್ದರಿಂದ ಪ್ರಕಾಶನದ ಉದ್ದೇಶದ ಬೆಳಕಿನಲ್ಲಿಯೇ ಈ ಗ್ರಂಥಗಳನ್ನು ಬೆಲೆಗಟ್ಟುವುದು ಹೆಚ್ಚು ಫಲಪ್ರದವಾಗಿದೆ.

* * *


[1] ಡಿ.ಆರ್.ನಾಗರಾಜ ಸಂಪಾದಿಸಿದ ಅಕ್ಷರ ಚಿಂತನೆ ಮಾಲೆಯ ಬಗ್ಗೆ ಪುಸ್ತಕ ಮಾಹಿತಿಯಲ್ಲಿ ಬರೆದ ಲೇಖನ