ಸಮಾಜ ನಮ್ಮ ಕಣ್ಣಿಗೆ ಕಾಣದಂತೆ ಬದಲಾಗುತ್ತಿರುತ್ತದೆ ಮತ್ತು ಈ ಬದಲಾವಣೆಗೆ ಅನೇಕ ಕಾರಣಗಳಿರುತ್ತವೆ. ಬದಲಾವಣೆಯ ಗತಿ ಬಹಳ ಮಂದವಾಗಿರಬಹುದು, ಒಮ್ಮೊಮ್ಮೆ ತೀವ್ರವೂ ಆಗಬಹುದು. ಮಾನವ ಶಾಸ್ತ್ರಜ್ಞರ ಪ್ರಕಾರ ನಮ್ಮ ದೇಶದಲ್ಲಿಯ ಬದಲಾವಣೆಯ ಗತಿ ಅಷ್ಟು ತೀವ್ರವಾದದ್ದಲ್ಲ. ಆದರೆ ಈ ಶತಮಾನದ ಪ್ರಾರಂಭಕ್ಕೆ ಒಮ್ಮಲೆ ನಮ್ಮ ದೇಶ ಬದಲಾಗತೊಡಗಿತು. ಇಂಥ ತೀವ್ರವಾದ ಬದಲಾವಣೆಗೆ ಅನೇಕ ಕಾರಣಗಳನ್ನು ಕೊಡಬಹುದಾಗಿದೆ. ಇತಿಹಾಸಕಾರರ ಪ್ರಕಾರ ಈ ಬದಲಾವಣೆಗೆ ನಮ್ಮ ದೇಶದಲ್ಲಾದ ಬ್ರಿಟಿಷರ ಆಗಮನವೇ ಕಾರಣವಾಗಿದೆ. ಬ್ರಿಟಿಷರು ಕೇವಲ ನಮ್ಮ ದೇಶವನ್ನಷ್ಟೇ ಗೆದ್ದುಕೊಳ್ಳಲಿಲ್ಲ. ಅದಕ್ಕಿಂತ ಪೂರ್ವ ಎಷ್ಟೋ ಸಾರಿ ಗ್ರೀಕರು, ಮುಸಲ್ಮಾನರು ಮೊದಲಾದವರು ನಮ್ಮ ದೇಶವನ್ನು ಗೆದ್ದಿದ್ದರು. ಆ ಪ್ರಸಂಗಗಳಲ್ಲಿ ನಮ್ಮ ಸಮಾಜ ಬದಲಾಗಿದ್ದರೂ ಆಗ ಕೂಡ ಅದರ ಗತಿ ತೀವ್ರವಾಗಿರಲಿಲ್ಲ. ನಮ್ಮ ದೇಶವನ್ನು ಗೆದ್ದವರು ಕೂಡ ನಮ್ಮ ಸಂಸ್ಕೃತಿಯನ್ನು ಒಪ್ಪಿಕೊಂಡ ಅನೇಕ ಉದಾಹರಣೆಗಳಿವೆ. ಮೊಗಲರ ಕೊನೆಯ ಸಾಮ್ರಾಟನಾಗಬೇಕಿದ್ದ ದಾರಾಶಿಕೋ ಹಿಂದು ಮತ್ತು ಇಸ್ಲಾಂ ಧರ್ಮಗಳನ್ನು ಸಮನ್ವಯಗೊಳಿಸಿ ಬೇರೊಂದು ಧರ್ಮವನ್ನು ಸೃಷ್ಟಿಸಿದ.

ಆದರೆ ಬ್ರಿಟಿಷ್ ರಾಜಸತ್ತೆಯ ಪರಿಣಾಮವೇ ಬೇರೆಯಾಗಿತ್ತು. ಅವರ ಕೈಯಲ್ಲಿ ಸೋತ ಬಹದ್ದೂರಶಹಾ (ಜಾಫರ) ದೇಶವನ್ನು ಬಿಟ್ಟು ಹೋಗುವಾಗ ಭಾರತವನ್ನು ತನ್ನ ತಾಯ್ನಾಡೆಂದು ಹೇಳೀಕೊಂಡಿದ್ದಾನೆ. ಆದರೆ ಬ್ರಿಟಿಷರು ಬೇರೊಂದು ಬಗೆಯ ಸಂಸ್ಕೃತಿಯನ್ನು ತಂದರು; ಬೇರೊಂದು ರೀತಿಯ ರಾಜವ್ಯವಸ್ಥೆಯನ್ನು ತಂದರು; ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿದರು. ಮೊಗಲರ ಕಾಲಕ್ಕೆ ಕೆಲವು ವಿದ್ವಾಂಸರು ಅರಾಬಿಕ್ ಭಾಷೆಯನ್ನು ಕಲಿತಿದ್ದರಂತೆ. ಮೌಲವಿ ಮತ್ತು ಮುಲ್ಲಾಗಳಿಗೆ ಒಮ್ಮೊಮ್ಮೆ ಅರಾಬಿಕ್ ಭಾಷೆಯ ಕಾಗುಣಿತದ ಬಗ್ಗೆ ಸಂಶಯ ಬಂದರೆ ಅವರು ಗುಜರಾತದ ನಾಗರಬ್ರಾಹ್ಮಣರ ಹತ್ತಿರ ಹೋಗಿ ತಮ್ಮ ಸಂಶಯವನ್ನು ಕಳೆದುಕೊಳ್ಳುತ್ತಿದ್ದರಂತೆ. ಆದರೆ ಇಂಗ್ಲಿಷ್‌ದಂತೆ ಅರಾಬಿಕ್, ಪರ್ಸಿಯನ್ ಭಾಷೆಗಳನ್ನು ಎಲ್ಲರೂ ಕಡ್ಡಾಯವಾಗಿ ಕಲಿಯಬೇಕಾಗಿರಲಿಲ್ಲ.

ಆದರೆ ಇಂಗ್ಲಿಷ್ ಭಾಷೆ ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ. ಇಂದಿಗೂ ಈ ಭಾಷೆಯನ್ನು ಕಲಿಯದವನು ವಿದ್ಯಾವಂತನೇ ಅಲ್ಲ. ಇಂಗ್ಲಿಷ್ ಭಾಷೆಯ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ನಾನು ಇಲ್ಲಿ ಹೇಳಲು ಬಯಸುವುದಿಲ್ಲ. ಯಾವುದೇ ಭಾಷೆಯಾಗಲಿ ಮನುಷ್ಯನ ತಿಳುವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ನಮ್ಮ ತಿಳುವಳಿಕೆಯನ್ನು ಹೀಗೆ ತಿದ್ದಿಬಿಟ್ಟಿತು. ಈಗ ನಮ್ಮ ಚಿಂತನ, ಅದು ಕನ್ನಡದಲ್ಲಿ ಅಭಿವ್ಯಕ್ತಿಯನ್ನು ಪಡೆದರೂ, ನಡೆಯುವುದು ಮಾತ್ರ ಇಂಗ್ಲಿಷ್ ಭಾಷೆಯ ಮೂಲಕವಾಗಿ. ನಮ್ಮ ಶಿಕ್ಷಣದ ಮಾಧ್ಯಮ ಮೊದಲು ಇಂಗ್ಲಿಷ್ ಇದ್ದದ್ದು ಈಗ ಕನ್ನಡವಾಗಿದೆ. ಆದರೆ ಕನ್ನಡ ಮಾಧ್ಯಮ ಇಂಗ್ಲಿಷ್ ಮಾಧ್ಯಮದ ಅನುವಾದವಾಗಿದೆ. ನಮ್ಮ ಸಮಾಜ ತ್ವರಿತವಾಗಿ ಬದಲಾಗುವುದಕ್ಕೆ ಇಂಗ್ಲಿಷ್ ಮಾಧ್ಯಮವೇ ಕಾರಣವಾಗಿದೆ. ಇಂಗ್ಲಿಷ್ ಕಲಿತ ಮೇಲೆ ನಾವು ನಮ್ಮ ಇತಿಹಾಸದ ಕಲ್ಪನೆಯನ್ನು ರೂಪಿಸಿಕೊಂಡೆವು. ನಮ್ಮಲ್ಲಿರುವ ತರತಮ ಭಾವಗಳಿಗೆ, ಮೌಲ್ಯಗಳಿಗೆ ಸರಿ, ತಪ್ಪುಗಳ ವಿವೇಕಕ್ಕೆ ಈ ಭಾಷೆ ಕಾರಣವಾಗಿದೆಯೆಂದರೂ ತಪ್ಪಿಲ್ಲ.

ಈ ಮಾತಿಗೆ ಒಂದು ಉದಾಹರಣೆಯನ್ನು ಕೊಡಬಯಸುತ್ತೇನೆ. ಇಂಗ್ಲಿಷ್ ಕಲಿಯುವ ಮೊದಲು ನಮ್ಮಲ್ಲಿ ವ್ಯಕ್ತಿ, ಸಮಾಜದ ಅವಿಭಾಜ್ಯವಾದ ಅಂಗವಾಗಿದ್ದ. ಸಮಾಜ ಕಾಯ್ದುಕೊಂಡು ಬಂದ ಪರಂಪರೆಯನ್ನು ಅನುಸರಿಸುತ್ತಿದ್ದ. ಪರಂಪರೆಯೆಂದರೆ ಸಮಾಜದ ಶರೀರದಲ್ಲಿ ಪ್ರವಹಿಸುವ ರಕ್ತವಿದ್ದಂತೆ. ಆದ್ದರಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಬೆಳಗುವ ಪರಂಪರೆ ಒಂದೇ ಆಗಿತ್ತು ಅಂದರೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಘರ್ಷ ಒಂದು ದೃಷ್ಟಿಯಿಂದ ಒಳ್ಳೆಯದು ಕೆಟ್ಟದ್ದು ಇವುಗಳ ನಡುವೆ ನಡೆದ ಸಂಘರ್ಷವಾಗಿತ್ತು. ಪಾಂಡವರು ಮತ್ತು ಕೌರವರು ವೈರಿಗಳು ನಿಜ. ಆದರೆ ಇಬ್ಬರೂ ನಂಬಿಕೊಂಡ ನೀತಿ ಸಂಹಿತೆ ಒಂದೇ ಆಗಿತ್ತು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನೀತಿಸಂಹಿತೆಯನ್ನು ತಾನೇ ರೂಪಿಸಿಕೊಳ್ಳಬೇಕಾಗಿದೆ. ಪರಂಪರೆಗೂ ಅವನಿಗೂ ಇದ್ದ ಸಂಬಂಧ ಈಗ ಕಡಿದು ಹೋಗಿದೆ. ಇದೆಲ್ಲ ಆದದ್ದು ಶಿಕ್ಷಣದ ಮೂಲಕವಾಗಿ ಎನ್ನವುದನ್ನು ಮರೆಯುವಂತಿಲ್ಲ. ಸುಶಿಕ್ಷಿತರು ನೌಕರಿಯ ಸಲುವಾಗಿ ತಮ್ಮ ಊರನ್ನು ಬಿಟ್ಟು ಬೇರೆ ಕಡೆಗೆ ಹೋದರು. ಅವಿಭಕ್ತ ಕುಟುಂಬಗಳು ಬೇರೆ ಬೇರೆಯಾದವು. ಅವಿಭಕ್ತ ಕುಟುಂಬದ ಆರ್ಥಿಕ ವ್ಯವಸ್ಥೆಗೂ ವಿಭಕ್ತ ಕುಟುಂಬದ ವ್ಯವಸ್ಥೆಗೂ ಸಂಬಂಧವೇ ಇಲ್ಲ. ವ್ಯಕ್ತಿಯ ಅಸ್ತಿತ್ವ, ವ್ಯಕ್ತಿಯ ಪ್ರಜ್ಞೆ ಇವೇ ಮುಖ್ಯವಾಗತೊಡಗಿದವು. ವ್ಯಕ್ತಿಯೇ ಒಂದು ಸ್ವತಂತ್ರವಾದ ಜೀವಂತವಾದ ಅಂಗ. ವ್ಯಕ್ತಿಗೂ ಮತ್ತು ಜಗತ್ತಿಗೂ ಇರುವ ಸಂಬಂಧ ಸಂಪೂರ್ಣವಾಗಿ ಬದಲಾಯಿತು. ಇದು ಒಂದು ದೃಷ್ಟಿಯಿಂದ ಜ್ಞಾತೃ ಮತ್ತು ಜ್ಞೇಯಗಳ ಸಂಬಂಧ. ವ್ಯಕ್ತಿ ಜ್ಞಾತೃವಾದರೆ ಜಗತ್ತು ಜ್ಞೇಯ. ಶಿಕ್ಷಣ ಕ್ರಮದಲ್ಲಿ ಹುಟ್ಟಿರುವ ಈ ಸಂಬಂಧ ಜಗತ್ತಿಗೂ ಈಗ ಹಬ್ಬಿಕೊಂಡಿರುವುದನ್ನು ಎಲ್ಲೆಡೆಗೆ ನೋಡಬಹುದಾಗಿದೆ. ವಿಶ್ವವಿದ್ಯಾಲಯಗಳ ಪ್ರಯೋಗ ಶಾಲೆಯಲ್ಲಿ ಕಬ್ಬಿಣದ ಅದುರನ್ನೋ, ಪಾರಜವನ್ನೋ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೂ ಅವನು ವಿಶ್ಲೇಷಿಸುವ ವಸ್ತುವಿಗೂ ಇರುವ ಸಂಬಂಧ ಈ ಬಗೆಯದಾಗಿದೆ.

ಸಾಮಾಜಿಕ ಬದಲಾವಣೆಗೂ ನಮ್ಮ ಶಿಕ್ಷಣಕ್ರಮಕ್ಕೂ ಇರುವ ನಿಕಟವಾದ ಸಂಬಂಧವನ್ನು ನಾವು ಅಲ್ಲಗಳೆಯುವಂತಿಲ್ಲ. ಶಿಕ್ಷಣ ಇಂದು ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ. ಒಬ್ಬ ಸುಶಿಕ್ಷಿತ ತನಗೆ ಗೊತ್ತಿಲ್ಲದಂತೆ ಒಂದು ಪಂಜು ಆಗುತ್ತಾನೆ. ಕತ್ತಲೆಯನ್ನು ಬೆಳಗಲು ಪಂಚು ಅಗತ್ಯವಾಗಿದೆ. ಆದರೆ ಈ ಪಂಜನ್ನು ಒಬ್ಬರು ಇನ್ನೊಬ್ಬರ ಕೈಗೆ ಸಾಗಿಸುವಾಗ ಎಚ್ಚರದಿಂದ ಇರಬೇಕಾಗುತ್ತದೆ. ಅಂಗಿರಸನೋ, ಪ್ರೊಮಿಥಿಯೆಸ್‌ನೋ ದಿವ್ಯಾಗ್ನಿಯನ್ನು ಈ ಜಗತ್ತಿಗೆ ತಂದರೆ ಜಗತ್ತು ಸುಟ್ಟ ಹೋಗದಂತೆ ನೋಡಿಕೊಳ್ಳಬೇಕು.

ನಮ್ಮ ಶಿಕ್ಷಣಕ್ರಮದಲ್ಲಿಯೂ ಕೂಡ ಬದಲಾವಣೆಗಳಾಗತೊಡಗಿವೆ. ನಮ್ಮ ದೇಶದ ವಿಶ್ವವಿದ್ಯಾಲಯಗಳಲ್ಲಿ ಈ ಬದಲಾವಣೆ ಇನ್ನೂ ಅಷ್ಟೊಂದು ತೀವ್ರವಾದ ಸ್ಥಿತಿಯಲ್ಲಿಲ್ಲ. ಆದರೆ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಏನನ್ನು ಹೇಳುತ್ತವೆ? ಸಾಹಿತ್ಯವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ರಭಸದಿಂದ ಇಳಿಮುಖವಾಗತೊಡಗಿದೆ. ನಾಡಿಗೆ ಸ್ವಾತಂತ್ರ್ಯ ಬರುವ ಮೊದಲು ಶಿಕ್ಷಣ ಕ್ರಮದಲ್ಲಿ ಸಾಹಿತ್ಯಕ್ಕೆ ಉನ್ನತವಾದ ಸ್ಥಾನವಿತ್ತು. ಈಗ ಆ ಸ್ಥಾನ ಇಂಜಿನಿಯರಿಂಗ್ ಮತ್ತು ವೈದ್ಯ ಶಾಸ್ತ್ರಗಳಿಗೆ ಬಂದಿದೆ. ಈ ಬದಲಾವಣೆಗೆ ಕಾರಣ ಸ್ಪಷ್ಟವಾಗಿರುವುದರಿಂದ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾಡಿಗೆ ಇಂಜಿನಿಯರರು, ಡಾಕ್ಟರರು ಹೆಚ್ಚು ಪ್ರಮಾಣದಲ್ಲಿ ಬೇಕಾಗಿದ್ದಾರೆ ಮತ್ತು ಈ ವೃತ್ತಿಗಳಲ್ಲಿ ಲಾಭ ಹೆಚ್ಚು ಎಂಬ ಸಂಗತಿ ಎಲ್ಲರಿಗೂ ಗೊತ್ತಿದ್ದದ್ದೇ. ಈಗ ಪ್ರತಿಯೊಬ್ಬ ವಿದ್ಯಾರ್ಥಿ ಇಂಜಿನಿಯರ್ ಡಾಕ್ಟರನಾಗಬೇಕೆಂದು ಕನಸು ಕಾಣುತ್ತಾನೆ. ಒಂದು ವೇಳೆ ಅವನ ಕನಸು ನನಸಾಗದಿದ್ದರೆ ಹತಾಶನಾಗುತ್ತಾನೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗಂತೂ ಸಾಹಿತ್ಯ ಬೇಕಾಗಿಲ್ಲ. ಸೋತವರಿಗೂ ಬೇಕಾಗಿಲ್ಲ. ಯಾಕೆಂದರೆ ಅದು ಅವನ ಕನಸಲ್ಲ. ಇಂದು ಸಾಹಿತ್ಯದ ವಿದ್ಯಾರ್ಥಿ ಸಂಕೋಚದಿಂದ ಶಿಕ್ಷಣವನ್ನು ಪಡೆಯುತ್ತಾನೆ. ಒಂದು ಬಗೆಯ ಸಾಮಾಜಿಕ ಕೀಳರಿಮೆಯಿಂದ ಅವನು ಸುಶಿಕ್ಷಿತನಾಗುತ್ತಾನೆ. ಕೆಲವು ಕಡೆಗಂತೂ ಸಾಹಿತ್ಯ, ಕಲಿಯುವವರಿಗೆ ಹೋಗಲಿ ಕಲಿಸುವವರಿಗೂ ಬೇಕಾಗಿಲ್ಲ. ಸಾಹಿತ್ಯದ ವಿದ್ಯಾರ್ಥಿ ಕೂಡ ಇಂದು ಸಾಹಿತ್ಯವನ್ನು ಬಿಟ್ಟು ಭಾಷಾಶಾಸ್ತ್ರವನ್ನು ಕಲಿಯಲು ಆಸೆಪಡುತ್ತಾನೆ.

ಒಂದು ಕಾಲಕ್ಕೆ ಶಿಕ್ಷಣದಲ್ಲಿ ಸಾಹಿತ್ಯಕ್ಕಿದ್ದ ಮಾನ್ಯತೆ ಇಂದು ವಿಜ್ಞಾನಕ್ಕೆ ಬಂದಿದೆ. ಬರಬಾರದೆಂದೇನೂ ಇಲ್ಲ. ಆದರೆ ಈ ಬದಲಾವಣೆಯ ಹಿಂದಿನ ಕಾರಣ ಮಾತ್ರ ವಿಚಿತ್ರವಾಗಿದೆ. ಸಾಹಿತ್ಯದಿಂದ ಏನಾಗಬೇಕಾಗಿದೆ? ನಮಗೆ ಇಂದು ಬೇಕಾಗಿರುವುದು ಅನ್ನವೇ ಹೊರತು ಕನಸುಗಳಲ್ಲ. ನಮಗೆ ಇಂದು ಯೋಜಕರು ಬೇಕೇ ಹೊರತು ಕನಸುಗಾರರಲ್ಲ. ದೇಶದ ಭೌತಿಕ ಸಂಪತ್ತು ಹೆಚ್ಚಾಗಬೇಕಾದರೆ ಸರಿಯಾದ ಯೋಜನೆಗಳು ಬೇಕು. ವೈಜ್ಞಾನಿಕ ತಿಳುವಳಿಕೆ ಬೇಕು. ತೆರೆದ ಕಣ್ಣುಗಳಿಂದ ಜಗತ್ತನ್ನು ನೋಡುವ ಧೀರರು ಬೇಕು. ಅದಕ್ಕಾಗಿ ವಿಜ್ಞಾನ ಬೇಕು. ಇದು ಇಂದು ಸಾಮಾನ್ಯವಾಗಿರುವ ವೈಚಾರಿಕತೆಯಾಗಿದೆ.

ಇಂಥ ವಿಚಾರಸರಣಿಯನ್ನು ವಿರೋಧಿಸಿ ಮಾತನಾಡಲು ನಾನು ಇಲ್ಲಿ ಬಂದಿಲ್ಲ. ಜಗತ್ತು ಹೆಚ್ಚು ಶ್ರೀಮಂತವಾದರೆ ನಮಗೆ ಸಂತೋಷವೇ. ಅದಕ್ಕಿಂತ ಹೆಚ್ಚಾಗಿ ಬಡತನ ನಿರ್ಮೂಲವಾಗಬೇಕು. ಆದರೆ  ಈ ವಿಚಾರ ಸರಣಿಯನ್ನು ನಂಬಿಕೊಂಡು ನಡೆದ ಮೇಲೆ ಕೂಡ ನಮ್ಮ ಬಡತನ ಕಡಿಮೆಯಾಗಿದೆಯೇ? ಅಂದ ಮೇಲೆ ಇಂಥ ವೈಚಾರಿಕತೆಯಲ್ಲಿ ಏನೋ ನ್ಯೂನತೆ ಇರಬೇಕು. ನಮ್ಮ ಆಸೆಗಳು ಕಡಿಮೆಯಾಗಬೇಕೇ ಹೊರತು ಸಂಪತ್ತು ಹೆಚ್ಚಾದರೆ ಬಡತನ ಕಡಿಮೆಯಾಗುವುದಿಲ್ಲ. ಆಹಾರ, ವಸತಿ, ಮೊದಲಾದ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆ ಪ್ರತಿಯೊಬ್ಬನಿಗೂ ಇರಬೇಕು. ಇದು ಪ್ರಜಾಪ್ರಭುತ್ವದ ಮೂಲ ಉದ್ದೇಶ ಮತ್ತು ಅಂತಿಮ ಪ್ರಯೋಜನ ಕೂಡ. ಅದು ಆಗದಿದ್ದರೆ ನಮ್ಮ ಇರುವಿಕೆಯ ರೀತಿಯಲ್ಲಿಯೇ ಎಲ್ಲಿಯೋ ತಪ್ಪಾಗಿದೆ ಎಂದು ತಿಳಿಯಬೇಕು. ನಮ್ಮ ಪೂರ್ವಾಗ್ರಹಗಳು, ಧಾರ್ಮಿಕ ನಂಬಿಕೆ ಅಪನಂಬಿಕೆ ಮೊದಲಾದವುಗಳು ಮನುಷ್ಯನ ಸುಸೂತ್ರ ಜೀವಿತಕ್ಕೆ ಅಡ್ಡಿ ಬರುತ್ತವೆ. ಇದು ನಿಜವಾಗಿ ರಾಜಕೀಯದ ಹೊಣೆಗಾರಿಕೆ. ವಿಶ್ವವಿದ್ಯಾಲಯಗಳ ಹೊಣೆಗಾರಿಕೆ ಸಂಸ್ಕೃತಿಯನ್ನು ನಿರ್ಮಿಸುವುದು. ಅನ್ನದಷ್ಟೇ ಅವಶ್ಯವಾಗಿರುವ ಇನ್ನೊಂದು ಜೀವಸತ್ವವೆಂದರೆ ಸಂಸ್ಕೃತಿ. ಕಡು ಬಡತನದಲ್ಲಿಯೂ ಗೌರವದಿಂದ ಬಾಳುವ ಜನರಿದ್ದಾರೆ. ಈ ಗೌರವ ಅವರಿಗೆ ಬರುವುದು ಅವರ ಸಾಂಸ್ಕೃತಿಕ ಪರಂಪರೆಯಿಂದ. ‘ಮುಗದಾವ ನಮ್ಮ ಜ್ವಾಳ, ಉಳದಾವ ನಮ್ಮ ಹಾಡು’ ಜೋಳ ಬೀಸುತ್ತಿರುವ ಹಳ್ಳಿಯ ಗರತಿ ಹಾಡುವ ಹಾಡು ಇದು. ಭೌತಿಕ ಪ್ರಗತಿಗೆ ಒಂದು ಮಿತಿ ಇದೆ, ಇರಬೇಕು. ಅಲ್ಲಿಂದ ಮುಂದೆ ನಮ್ಮ ಭಾವನಾತ್ಮಕ ವಿಕಾಸ ಪ್ರಾರಂಭವಾಗಬೇಕು; ಮನುಷ್ಯನಾಗಿ ಬಾಳಲು ಕಲಿಯಬೇಕು.

ಗರತಿಯ ಹಾಡನ್ನು ಇಲ್ಲಿ ಯಾಕೆ ಹೇಳಿದೆನೆಂದರೆ: ಗರತಿಗೆ ಬೀಸುವ ಕಲ್ಲು ಕೇವಲ ಹೊಟ್ಟೆ ತುಂಬುವ ಸಾಧನವಷ್ಟೇ ಅಲ್ಲ; ಅದು ಹಾಡುಗಳ ಉಗಮವೂ ಹೌದು. ಬೀಸಿದರೆ ಮುಗಿದು ಹೋಗುವ ಜೋಗುಳ ಮುಗಿಯದಿರುವ ಹಾಡುಗಳಿಗೆ ಜನ್ಮವೀಯುತ್ತದೆ. ಈ ಹಾಡುಗಳಿಂದ ಗರತಿಯ ಮನಸ್ಸು ಸುಸಂಸ್ಕೃತವಾಗುತ್ತದೆ. ಗರತಿಯ ಹಾಡನ್ನು ನಾವು ಈ ಭಾವನಾತ್ಮಕವಾಗಿ ಮಾತ್ರ ನೋಡಿದ್ದೇವೆ. ಜಾನಪದ ಸಾಹಿತ್ಯದ ಕ್ಷೇತ್ರದಲ್ಲಿ ಬೇಕಾದಷ್ಟು ಸಂಶೋಧನೆ ಇಂದು ನಡೆಯುತ್ತಿದೆ. ಆದರೆ, ಈ ಹಾಡಿನ ಸಾಂಸ್ಕೃತಿಕ ಮಹತ್ವವನ್ನು ನಾವು ಇನ್ನೂ ಅರಿತಂತಿಲ್ಲ. ಜಾನಪದವೇ ಆಗಲಿ, ಅಭಿಜಾತವೇ ಆಗಲಿ ಹಾಡು ನಮ್ಮ ಮನಸ್ಸನ್ನು ಅರಳಿಸಿ ಅದು ಜಡವಾಗದಂತೆ ನೋಡಿಕೊಳ್ಳುತ್ತದೆ. ಚಿಕ್ಕಂದಿನಲ್ಲಿ ನಮ್ಮ ನಿದ್ದೆಗೆ ನೆರವಾಗುವ ಹಾಡು ನಮ್ಮ ಪ್ರಬುದ್ಧಾವಸ್ಥೆಯಲ್ಲಿ ನಮಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ. ಹಾಡು ನಮಗೆ ಪ್ರೀತಿಸಲು, ಚೆಲುವನ್ನು ಗುರುತಿಸಲು, ಆತ್ಮವಿಶ್ವಾಸವನ್ನು ಕಾಯ್ದುಕೊಳ್ಳಲು ಕಲಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ನಮಗೆ ನೂರಾರು ಕನಸುಗಳನ್ನು ದಾನ ಮಾಡುತ್ತದೆ. ಹಾಡು ಒಂದು ದೃಷ್ಟಿಯಿಂದ ಉದ್ದೇಶರಹಿತವಾದದ್ದು. ‘Song is an aimless Breath’ ಎಂದು ಜರ್ಮನ ಕವಿ Rilke ಹೇಳುತ್ತಾನೆ. ‘ಅರ್ಥವಿಲ್ಲದ ಸ್ವಾರ್ಥವಿಲ್ಲ ಬರಿಯ ಭಾವಗೀತಾ’ ಎಂದು ಬೇಂದ್ರೆಯವರು ಹೇಳಿದರು. ಆದರೆ ಹಾಡಿನ ನಿರುದ್ದಿಶ್ಯವೇ ಅದರ ಉದ್ದೇಶವೆಂಬುವುದನ್ನು ಮರೆಯಬಾರದು. ಹಾಡು ಎಂದೂ ಗುರಿ ತಪ್ಪುವುದಿಲ್ಲ. ಗುರಿ ತಪ್ಪದಿರುವುದು ಸಂಪಿಗೆಯ ಸುಗಂಧದಂತೆ ಹಾಡಿಗೆ ಅನಿವಾರ್ಯವಾಗಿದೆ.

ನಮ್ಮ ಹಳ್ಳಿಗಳಲ್ಲಿಯೂ ಬೀಸುವ ಕಲ್ಲು ಕಡಿಮೆಯಾಗತೊಡಗಿವೆ. ಬೀಸುವ ಕಲ್ಲು ಮತ್ತು ಹಿಟ್ಟಿನ ಗಿರಣಿಗಳ ನಡುವಿನ ಆಯ್ಕೆಯೇ ನಮ್ಮ ಮುಂದಿರುವ ಸಮಸ್ಯೆಯಾಗಿದೆ. ಹಿಟ್ಟಿನ ಗಿರಣಿಯ ಆಕರ್ಷಣೆ ಮತ್ತು ಅನುಕೂಲತೆಗಳು ಬೀಸುವ ಕಲ್ಲಿಗೆ ಇಲ್ಲ. ಎರಡು ನಿಮಿಷಗಳಲ್ಲಿ ಹಿಟ್ಟು ಬೀಸಿಕೊಡುವ ಗಿರಣಿ ಇರುವಾಗ ದೊಡ್ಡ ನಸುಕಿನಲ್ಲೆದ್ದು ಜೋಳ ಬೀಸುವುದು ಕಷ್ಟದ ಕೆಲಸ. ಗಿರಣಿ ಇದ್ದರೆ ನಮ್ಮ ಶ್ರಮ ಉಳಿಯುತ್ತದೆ, ಸಮಯ ಉಳಿಯುತ್ತದೆ. ಮನೆ ಸ್ವಚ್ಛವಾಗಿರುತ್ತದೆ. ಆದರೆ ಇಲ್ಲಿ ಇರುವ ಸಮಸ್ಯೆ ಎಂದರೆ ಒಂದೇ. ಗಿರಣಿ ಇದ್ದರೆ ಹಾಡುಗಳಿಲ್ಲ. ಕೆಲಸ ಮತ್ತು ಹಾಡು ಒಂದನ್ನೊಂದು ಅರ್ಥಪೂರ್ಣವಾಗಿಸಿ ಬಾಳನ್ನು ಬೆಳಗುವುದಿಲ್ಲ. ಗಿರಣಿ ಮತ್ತು ಹಾಡು ಒಂದನ್ನೊಂದು ಅರ್ಥಪೂರ್ಣವಾಗಿಸಿ ಬಾಳನ್ನು ಬೆಳಗುವುದಿಲ್ಲ. ಗಿರಣಿ ಮತ್ತು ಹಾಡು ಇವುಗಳಲ್ಲಿ ಒಂದಿದ್ದರೆ ಇನ್ನೊಂದು ಇರುವುದಿಲ್ಲವೆನ್ನವುದು ಈಗ ಜೀವನದ ನಿಯಮವಾಗಿದೆ. ನಮ್ಮ ಹಾಡಿನ ಹಕ್ಕಿ ಜೀವನದ ಗೂಡನ್ನು ತೊರೆದು ಕನಸುಗಳಿಲ್ಲದ ಮರುಭೂಮಿಯಲ್ಲಿ ಬದುಕಬೇಕಾಗಿದೆ. ಹಾಡಿನ ಹಕ್ಕಿಯ ಜೀವ ಗಟ್ಟಿಮುಟ್ಟಾದದ್ದು. ಅದು ಎಲ್ಲಿಯೂ ಬದುಕಬಲ್ಲದು. ಆದರೆ ಹಾಡನ್ನು ಬಿಟ್ಟುಕೊಟ್ಟ ಜೀವನದ ಪಾಡು ಏನಾಗಬಹುದು?

ವಿಜ್ಞಾನ ನಮ್ಮಬಾಳಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ. ನಿಷ್ಠುರವಾದ ಸತ್ಯದರ್ಶನ ಮಾಡಿಸುತ್ತದೆ. ಈ ಮಾತಿನಲ್ಲಿ ನನಗೆ ಸಂದೇಹವಿಲ್ಲ. ಆದರೆ ವಿಜ್ಞಾನ ನಮಗೆ ಕನಸುಗಳನ್ನು ಕೊಡುವುದಿಲ್ಲ. ಕನಸು ಕಾಣುವುದು ಬೇಡವೆಂದೇ ಅದು ಹೇಳುತ್ತದೆ. ಸಾಹಿತ್ಯ ನಮ್ಮ ಕನಸುಗಳನ್ನು ಪೋಷಿಸುತ್ತದೆ. ನಮ್ಮ ಸಂವೇದನೆಗಳನ್ನು ಹೊಸದಾಗಿ ಸೃಷ್ಟಿಸುತ್ತದೆ. ನಮ್ಮ ಪಂಚೇಂದ್ರಿಯಗಳಿಗೆ ಪಟುವಾಗಿ ಕೆಲಸ ಮಾಡಲು ಕಲಿಸುತ್ತದೆ. ‘ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಪಂಪ ಹೇಳಿದ ಮೇಲೆ ನಮ್ಮ ತಾಯ್ನಾಡನ್ನು ನೋಡುವ ದೃಷ್ಟಿ ನಮಗೆ ದೊರಕಿತು. ಸಾಹಿತ್ಯ ನಮ್ಮ ದಿನನಿತ್ಯದ ಜೀವನವನ್ನು ಶ್ರೀಮಂತವನ್ನಾಗಿ ಮಾಡಬಲ್ಲದು. ಅದಕ್ಕಾಗಿ ನಮಗೆ ಸಾಹಿತ್ಯ ಬೇಕು.

ನಮ್ಮ ಶಿಕ್ಷಣ ಕ್ರಮದಲ್ಲಿ ಸಾಹಿತ್ಯಕ್ಕೆ ಒಂದು ಮಹತ್ವದ ಸ್ಥಾನವಿದೆ. ಸಾಹಿತ್ಯವೊಂದೇ ನಮಗೆ ಜಗತ್ತನ್ನು ನೋಡಲು ಕಲಿಸುತ್ತದೆ. ಜಗತ್ತಿನಾಚೆಗೆ ನೋಡಲು ಕೂಡ ಕಲಿಸುತ್ತದೆ. ನಾವು ಮನುಷ್ಯರಾಗಿಯೂ ಮನುಷ್ಯರಂತೆ ಬಾಳತೊಡಗಿಲ್ಲ. ಈ ಮನುಷ್ಯತ್ವವನ್ನು ನಮ್ಮಲ್ಲಿ ಹುಟ್ಟಿಸುವುದು ಸಾಹಿತ್ಯ. ಸಾಹಿತ್ಯವನ್ನು ಶಿಕ್ಷಣ ಕ್ರಮದಿಂದ ತೆಗೆದುಹಾಕಿದರೆ ಹಣ್ಣುಕೊಡದ ಹೂಗಿಡಗಳನ್ನು ನಿರುಪಯುಕ್ತವೆಂದು ಕಡಿದು ಹಾಕಬೇಕಾಗುತ್ತದೆ. ನಮ್ಮ ದೇಶದಲ್ಲಿ ಒಂದು ಒಳ್ಳೆಯ ಸಂಪ್ರದಾಯವಿದೆ. ಅದು ನಿಮಗೂ ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ. ದೇವರ ಪೂಜೆಗೆ ಹೂವು ಆಯ್ದುಕೊಳ್ಳಬೇಕಾದರೆ ಆ ಹೂ ಹಣ್ಣು ಕೊಡದ ಹೂವಾಗಿರಬೇಕು. ಹಣ್ಣು ಕೊಡುವ ಹೂವುಗಳನ್ನು ಪೂಜೆಗೆ ಆಯ್ದುಕೊಳ್ಳುವಂತಿಲ್ಲ. ಈ ಸಂಪ್ರದಾಯ ನನ್ನ ದೃಷ್ಟಿಯಿಂದ ಬಹಳ ಅರ್ಥಪೂರ್ಣವಾದದ್ದು. ಹಣ್ಣಾಗುವ ಹೂವುಗಳನ್ನು ಹರಿದು ಹಣ್ಣಿನ ಬೆಳೆಗೆ ಅಡ್ಡಿಯನ್ನುಂಟು ಮಾಡಬಾರದು. ಅದರಂತೆಯೇ ಹಣ್ಣಾಗದ ಹೂವುಗಳನ್ನು ದೇವರಿಗೇ ಅರ್ಪಿಸಬೇಕು. ಈ ಸಂಪ್ರದಾಯದಲ್ಲಿ ನನಗೆ ನಾಡಿನ ಸಾಂಸ್ಕೃತಿಕ ಇತಿಹಾಸ ಕಣ್ಣಿಗೆ ಕಟ್ಟುತ್ತದೆ.

* * *