ಈವತ್ತಿಗೂ ಜನಪದ ಸಾಹಿತ್ಯದಿಂದ ಸಮೃದ್ಧವಾಗಿರುವಂಥ ಒಂದು ಗ್ರಾಮದಲ್ಲಿ ನಾನು ಹುಟ್ಟಿ ಬೆಳೆದ ಕಾರಣ ಜನಪದ ಸಾಹಿತ್ಯ ನನ್ನ ಸೃಜನಶೀಲತೆಯ ನಿರಂತರ ಮೂಲವಾಗಿದೆ. ಆದರೆ ಈ ಕಾರಣದಿಂದ ನಾನೊಬ್ಬ ಜನಪದ ಕವಿಯೆಂದು ಅರ್ಥವಲ್ಲ. ನಾನೊಬ್ಬ ನಗರದ ಕವಿ ಮತ್ತು ಜನಪದ ಸಾಹಿತ್ಯ ನನ್ನ ಸೃಜನಶೀಲ ಶಕ್ತಿಯ ಮೂಲವಾಗಿದೆ; ನನ್ನ ಕಾವ್ಯ ಮತ್ತು ನಾಟಕದಲ್ಲಿ-ಸ್ವಲ್ಪಮಟ್ಟಿಗೆ ನನ್ನ ಕಥಾಸಾಹಿತ್ಯದಲ್ಲಿ ಕೂಡ- ಜನಪದ ಕಾವ್ಯದ ಚಹರೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಜನಪದ ಸಾಹಿತ್ಯ ನನ್ನ ಎರಡನೇ ಭಾಷೆಯಾಗಿದೆ; ಅದರ ಮೂಲಕ ಹೊರಗಿನ ಜಗತ್ತನ್ನು ಅರ್ಥಮಾಡಿಕೊಂಡು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದೇನೆ. ಒಂದು ತರಹದಲ್ಲಿ ಪ್ರತಿಯೊಬ್ಬ ಕವಿಯೂ ಸಹ ತನ್ನ ಭಾಷೆಯಿಂದ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ; ಆದರೆ ಅಂತಿಮವಾಗಿ ಪ್ರಪಂಚವನ್ನು ಕಳೆದುಕೊಂಡು ಭಾಷೆಯನ್ನು ಗೆಲ್ಲುತ್ತಾನೆ. ನನ್ನ ಬರಹದಲ್ಲಿ ಪ್ರಧಾನವಾಗಿ ಕಾಣುವ ಮಾತೃ-ಚೈತನ್ಯವು ಜನಪದ ಸಾಹಿತ್ಯದಿಂದ ಅವಿರ್ಭವಿಸಿರುವಂಥದಾಗಿದೆ ಮತ್ತು ಜನಪದ ಸಾಹಿತ್ಯದ ಪ್ರತೀಕವಾಗಿದೆ. ತಾಯಿ ಪ್ರತಿಮೆ, ಪುರಾಣ ಮತ್ತು ಕಾವ್ಯವನ್ನು ಪ್ರತಿನಿಧಿಸಿದರೆ, ತಂದೆ ಚರಿತ್ರೆ ಮತ್ತು ಗದ್ಯದ ಪ್ರತೀಕವಾಗಿದ್ದಾನೆ. ಪುರಾಣ ಮತ್ತು ಕಾವ್ಯದಲ್ಲಿ ಮಾತ್ರ ಮಾಧ್ಯಮವೇ ವಸ್ತುವಾಗಿ ಪರಿಣಮಿಸುವ ಪ್ರಮುಖವಾದ ಸಂಗತಿಯನ್ನು ನಾನು ಗುರುತಿಸಿಕೊಂಡಿದ್ದೇನೆ. ನನ್ನ ಗ್ರಾಮದ ಸಾಂಸ್ಕೃತಿಕ ಪರಂಪರೆ ನನಗೆ ದಕ್ಕಿದ್ದು ನನ್ನ ಅದೃಷ್ಟವೆಂದು ನನಗೀಗ ಅರ್ಥವಾಗತೊಡಗಿದೆ.

ಸಿಂಗಾರೆವ್ವ ಮತ್ತು ಅರಮನೆ ಹಾಗೂ ಅದರ ಇಂಗ್ಲಿಷ್ ಅನುವಾದವನ್ನು ಕುರಿತು ಒಂದೆರಡು ಸಂಗತಿಗಳನ್ನು ಪ್ರಸ್ಥಾಪಿಸಬೇಕು. ಅದೊಂದು ಕಾದಂಬರಿಯಾದರೂ ಕನ್ನಡದ ಪಾರಂಪರಿಕ ಕಥಾ ಸಾಹಿತ್ಯದ ನಿಯಮಗಳನ್ನದು ಅನುಸರಿಸುವುದಿಲ್ಲ. ಅಡ್ಡ ನಿರೂಪಣೆಗಳೇ ನೇರ ಕಥಾ ಬೆಳವಣಿಗೆಗಿಂತ ಪ್ರಮುಖವಾಗುವುದರಿಂದ ಸ್ವಲ್ಪ ವಿಚಿತ್ರವಾಗಿಯೂ ತೋರಬಹುದು. ಕಾದಂಬರಿಯ ಮುಖ್ಯವಸ್ತು ಶ್ರೀಮಂತಿಕೆ ಮತ್ತು ಅದರ ಅವನತಿ; ನಪುಂಸಕನೂ ಕ್ರೂರಿಯೂ ಆದ ದೇಸಾಯಿಯ ಪಾತ್ರದ ಮೂಲಕ ನೈತಿಕ ಪತನವನ್ನು ನಿರೂಪಿಸಲಾಗಿದೆ. ಸಾಂಪ್ರದಾಯಿಕವಾಗಿ ದೇಸಾಯಿಯೇ ಅರಮನೆಯ ಒಡೆಯ ಹಾಗೂ ಸಿಂಗಾರೆವ್ವ ಒಡೆಯನೂ ಸಹ; ಆ ಮಹಲಿನಲ್ಲಿ ಸಿಂಗಾರೆವ್ವನನ್ನು ಅಕ್ಷರಶಃ ಕೂಡಿಹಾಕಿರುತ್ತಾನೆ. ನನ್ನ ಇನ್ನೊಂದು ನಾಟಕ ಜೋಕುಮಾರಸ್ವಾಮಿಯಲ್ಲಿ ಬರುವ ಗೌಡ ವಿಶಾಲವಾದ ಭೂಮಿಯನ್ನು ಸುಂದರಿಯಾದ ಹೆಣ್ಣನ್ನೂ ಪಡೆದಿರುವಂತೆ ಯಜಮಾನನಾದವನು ಎಂದೂ ತಾನೂ ಹೊಂದಿರುವ ಪದಾರ್ಥವಾಗಲೂ ಸಾಧ್ಯವಿಲ್ಲ. ಮನುಷ್ಯ ಜೀವನವನ್ನು ಪೋಷಿಸುವಂಥದು ಪ್ರೀತಿಯೇ ಹೊರತು ಒಡೆತನವಲ್ಲ.

ಕಾದಂಬರಿಯ ಮುಖ್ಯವಾದ ಸತ್ಯವೆಂದರೆ ನಮ್ಮ ಗತವನ್ನು ವರ್ತಮಾನದಲ್ಲಿ ಹಾಗೂ ಭವಿಷ್ಯದಲ್ಲಿ ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುವುದನ್ನು ಕುರಿತಾದದ್ದು. ಕಾದಂಬರಿಯಲ್ಲಿ ನಮ್ಮ ಪಾಳೆಯಗಾರರು ವಾಸ ಮಾಡುತ್ತಿದ್ದಂತ ಅರಮನೆ ಈಗ ಅವನತಿಯ ಹಾದಿ ಹಿಡಿದಿದೆ. ಸಮಸ್ಯೆ ಎಂದರೆ ಅದನ್ನೇ ಹೇಗೆ ಬಳಸಿಕೊಳ್ಳಬಹುದು ಎಂಬುವುದು. ಗುಡಿಸಿಲಾಗಿರಲಿ, ಮಹಲಾಗಿರಲಿ ಅದು ಮುಡಿಪಾಗಿರಬೇಕಾದದ್ದು ಮಕ್ಕಳಿಗಾಗಿ. ನಪುಂಸಕನಾದ ಶ್ರೀಮಂತ ಮಹಲಿನ ಒಡೆಯನಿದ್ದಾನೆ; ಗರ್ಭಿಣಿಯಾಗಲಾರದ ಹೆಂಡತಿ ಅಲ್ಲಿ ಇದ್ದಾಳೆ. ಅವರು ಕಾಲವಾದ ಬಳಿಕ ಮಹಲನ್ನು ಶಾಲೆಯಾಗಿ ಪರಿವರ್ತಿಸುತ್ತಾರೆ ಮತ್ತು ಅಲ್ಲಿ ನೂರಾರು ಮಕ್ಕಳು ವಿದ್ಯೆ ಕಲಿಯತೊಡಗುತ್ತವೆ. ಮಹಲಿನಲ್ಲಿ ಮಕ್ಕಳ ಕಿಲ ಕಿಲ ನಗು ತುಂಬುತ್ತದೆ; ಮಹಲು ಮಕ್ಕಳಿಗಾಗಿಯೇ ಎಂಬುವುದು ನನಗೆ ಬಹಳ ಸ್ಪಷ್ಟವಾಗಿದೆ.

ನನ್ನ ಉಳಿದ ಕೃತಿಗಳಂತೆಯೇ ಈ ಕಾದಂಬರಿಯು ಈಗ ಇಂಗ್ಲೀಷ್‌ಗೆ ಅನುವಾದಗೊಂಡಿದೆ. ಯಶಸ್ವಿಯಾದ ಎಲ್ಲ ಅನುವಾದಗಳಿಗೂ ಒಂದು ಉದ್ದೇಶ ಎಂಬುವುದು ಇರುತ್ತದೆ. ಆ ಉದ್ದೇಶದ ಹಿನ್ನಲೆಯಲ್ಲಿ ನಾನು ಅನುವಾದವನ್ನು ಅಳತೆ ಮಾಡಬೇಕು. ಆ ಮಾನದಂಡವನ್ನು ಇಟ್ಟುಕೊಂಡಾಗಲೂ ನನ್ನ ಕೃತಿಯ ಅನುವಾದಗಳು ಯಶಸ್ವಿಯಾಗಿವೆ ಎಂದು ಹೇಳಬಲ್ಲೆ. ಆಧುನಿಕ ಜಗತ್ತಿನಲ್ಲಿ ಅನುವಾದಕ್ಕೆ ಒಂದು ಅಸ್ತಿತ್ವವಾದೀ ಮಹತ್ವವಿದೆ, ಅಂದರೆ ನಾವು ಎಲ್ಲ ಜ್ಞಾನವನ್ನು ದಕ್ಕಿಸಿಕೊಳ್ಳುವುದೂ ಕೂಡ ಅನುವಾದದ ಮುಖಾಂತರವೇ. ನಮ್ಮ ಸಂಸ್ಕೃತ ಗ್ರಂಥಗಳೂ ಕೂಡ ನಮಗೆ ಅನುವಾದದ ಮೂಲಕವೇ ಲಭ್ಯವಾಗಿದೆ. ಆಧುನಿಕ ಕಾಲದಲ್ಲಿ ಅನುವಾದ ಪ್ರಕ್ರಿಯೆಯು ಜ್ಞಾನವನ್ನು ಅನಾವರಣಗೊಳಿಸುವಂತೆಯೇ ಅದನ್ನು ಮುಚ್ಚಿಬಿಡುತ್ತದೆ ಕೂಡ. ಪಡೆದುಕೊಳ್ಳುವ ಭಾಷೆ ಮೂಲ ಭಾಷೆಗೆ ತನ್ನದೊಂದು ಸ್ವಲ್ಪವನ್ನು ಸೇರಿಸುತ್ತದೆ. ಅನುವಾದಗೊಳ್ಳುವ ಭಾಷೆ ಸ್ವಲ್ಪವನ್ನು ಕಳೆದುಕೊಳ್ಳುತ್ತದೆ. ನನ್ನ ಕೃತಿಗಳು ಅನುವಾದಗೊಂಡಾಗ ಬೇರೆ ರೀತಿ ಓದಿಸಿಕೊಳ್ಳುತ್ತವೆ, ಇದನ್ನು ನಾನು ಖುಷಿಯಿಂದ ಸ್ವೀಕರಿಸುತ್ತೇನೆ.

ಈ ಹಿನ್ನೆಲೆಯಲ್ಲಿ ಈಗ ನಾವು ಭಾರತದ ಇಂಗ್ಲಿಷ್ ಸಾಹಿತ್ಯ ಕುರಿತು ಮಾತನಾಡಬಹುದು. ಈ ಸಾಹಿತ್ಯದ ಪಕ್ಕ ಇಟ್ಟು ನೋಡಿದರೆ ನಮ್ಮ ಭಾಷೆಗಳು ಪೇಲವವಾಗಿ ಗೋಚರಿಸುತ್ತವೆ. ಇಂಗ್ಲಿಷ್ ಭಾಷೆಯಲ್ಲಿ ರಚಿತವಾಗಿರುವ ಕಾರಣಕ್ಕಾಗಿಯೇ ಭಾರತೀಯ ಇಂಗ್ಲಿಷ್ ಸಾಹಿತ್ಯ ಶ್ರೇಷ್ಠವಾಗಿ ಕಾಣುತ್ತದೆ. ಆದರೆ ಈ ತರಹದ ತೀರ್ಮಾನ ಬಹಳ ದೋಷಪೂರಿತವಾದದ್ದಾಗಿದೆ; ಏಕೆಂದರೆ ಒಂದು ಭಾಷೆಯ ಅಂತಸ್ತು ಎಷ್ಟೇ ಮೇಲ್ಮಟ್ಟದ್ದಾಗಿರಲಿ ಅದು ಇನ್ನೊಂದು ಚಿರಪರಿಚಿವಲ್ಲದ ಭಾಷೆಗಿಂತ ಶ್ರೇಷ್ಠವೆಂದು ಹೇಳಲು ಸಾಧ್ಯವಿಲ್ಲ. ಯಾವುದೇ ಒಂದು ಭಾಷೆ ಹಾಗೆ ಇರಲು ಕಾರಣ ಅನುವಾದಿಸಲಾಗದ ಏನೋ ಒಂದು ಸಂಗತಿ ಅದರಲ್ಲಿ ಇರುವುದರಿಂದ. ಭಾರತೀಯ ಸಂವೇದನೆಯನ್ನು ಅನುವಾದವಾಗುವುದನ್ನು ಮಾತ್ರ ಇಡೀ ಭಾರತೀಯ ಇಂಗ್ಲೀಷ ಸಾಹಿತ್ಯ ಅಭಿವ್ಯಕ್ತಗೊಳಿಸುತ್ತಾ ಬಂದಿದೆ. ಶೇಕ್ಸಪೀಯರನ ಕೃತಿಗಳೂ ಸಹ ಕನ್ನಡಕ್ಕೆ ಅನುವಾದಿಸಿದಾಗ ಘನವಾದ ಕೃತಿಗಳಂತೇನೂ ಕಂಡು ಬರುವುದಿಲ್ಲ. ಮೂಲತಃ ಇಂಗ್ಲಿಷ್ ಭಾಷೆಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡವರೂ ಸಹ ಅನುವಾದಿಸುವವರಾಗಿದ್ದಾರೆ; ಒಂದು ಭಾಷೆಯಿಂದ ಮತ್ತೊಂದು ಭಾಷೆಗಲ್ಲ, ಆದರೆ ಒಂದು ಸಂವೇದನೆಯಿಂದ ಮತ್ತೊಂದು ಸಂವೇದನೆಗೆ. ನಮ್ಮ ಜೀವಂತ ಸಂಸ್ಕೃತಿಯ ಸಂಪರ್ಕ ಕಳೆದುಕೊಂಡಿರುವ ನಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಲೇಖಕರೂ ಸಹ ಅನುವಾದಿಸುವವರೇ.

ಭಾರತೀಯ ಇಂಗ್ಲಿಷ್ ಬರಹದಲ್ಲಿ ಇನ್ನೊಂದು ತೊಡಕು ಕೂಡ ಇದೆ. ಪಾಶ್ಚಾತ್ಯ ವಿಮರ್ಶಾ ಮಾನದಂಡಗಳ ಕಣ್ಣಳತೆಗೆ ನೇಯ್ದಂಥ ಸಾಹಿತ್ಯ ಇದಾಗಿದೆ. ಭಾರತೀಯ ಕೃತಿಗಳ ಪರೀಕ್ಷೆಗೆ ಈ ವಿಮರ್ಶಾ ಮಾನದಂಡಗಳು ಸಾಕಾಗುವುದಿಲ್ಲ. ‘ಕಾವ್ಯ ಎನ್ನುವುದು ಬದುಕಿನ ವಿಮರ್ಶೆ’, ಬದುಕಿನ ಪ್ರತಿಬಿಂಬ- ಈ ವಿಮರ್ಶಾ ಹೇಳಿಕೆಯನ್ನಾಧರಿಸಿ ನಾವು ಪಂಪ, ಕುಮಾರವ್ಯಾಸ, ವಿದ್ಯಾಪತಿ, ತುಲಸೀದಾಸ್, ಕಂಬನ್ ಅಥವಾ ವಲ್ಲತ್ತೋಳ ಮೊದಲಾದ ಕೃತಿಗಳನ್ನು ತೂಗುವುದು ಹೇಗೆ? ಹಾಗಾಗಿ, ನಮ್ಮದೇ ಅದ ವಿಮರ್ಶಾ ಮಟ್ಟವನ್ನು ನಾವು ಕಂಡು ಹಿಡಿದುಕೊಳ್ಳಬೇಕು. ಈ ವಿಧಾನದಿಂದ ನಮ್ಮ ಕೃತಿಗಳನ್ನು ನಾವು ಪರೀಕ್ಷಿಸುವುದರ ಜೊತೆಗೆ ನಾವು ಹೊರಗಿನಿಂದ ಎರವಲು ತಂದಿರುವ ಮಾನದಂಡಗಳನ್ನೂ ಪರೀಕ್ಷಿಸಬಹುದು. ಪಾಶ್ಚಾತ್ಯ ತತ್ವಜ್ಞಾನದಲ್ಲಿರುವಂಥ ಗತಿ ತಾರ್ಕಿಕ ಚಿಂತನೆಯನ್ನೇ ಇಡೀ ಪಾಶ್ಚಾತ್ಯ ವಿಮರ್ಶೆ ಅವಲಂಬಿಸಿದೆ. ಈ ಮಾರ್ಗ ನಮಗೆ ಸಂಪೂರ್ಣವಾಗಿ ಹೊಸದು.

ಪ್ರಾರಂಭದಲ್ಲಿ ಜನಪದ ಸಾಹಿತ್ಯ ನನ್ನ ಬರವಣಿಗೆಯ ಮೇಲೆ ಮಾಡಿರುವ ಪ್ರಭಾವದ ಬಗ್ಗೆ ನಾನು ಮಾತನಾಡಿದೆ. ಕನ್ನಡ ಸಾಹಿತ್ಯದ ಎಲ್ಲ ಚಳುವಳಿಗಳನ್ನು ನನಗೆ ಎದುರಿಸುವುದಕ್ಕೆ ಸಾಧ್ಯವಾದದ್ದು ಹಾಗೂ ಅದ್ಯಾವುದರಿಂದ ಮಾರುಹೋಗದ ತರಹ ಇರಲು ನನಗೆ ಸಾಧ್ಯವಾದಷ್ಟು ಮತ್ತೇ ನನ್ನ ತೌರೂರಾದ ಜನಪದ ಸಾಹಿತ್ಯಕ್ಕೆ ವಾಪಸ್ಸು ಹೋಗಲು ನನಗೆ ಅವಕಾಶವಿದ್ದದರಿಂದ. ಈಗ ಸಾಹಿತ್ಯ ವಲಯದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಈಗ ಬರೆಯಲು ತೊಡಗಿರುವಂಥ ಕವಿಗಳು ಮನೆಯನ್ನು ಕಳೆದುಕೊಂಡವರಾಗಿದ್ದಾರೆ. ತಾವು ಬರೆಯುವುದಕ್ಕೆ ಆಯ್ದುಕೊಂಡಿರುವ ಭಾಷೆಯನ್ನು ಅವರು ಕಲಿಯುವುದರ ಜೊತೆಗೆ ಆ ಭಾಷೆಯನ್ನು ಸೃಷ್ಟಿಸಿರುವಂಥ ಇಡೀ ಸಂಸ್ಕೃತಿಯನ್ನು ಕರಗತಮಾಡಿಕೊಳ್ಳಬೇಕು. ಅದೃಷ್ಠವಶಾತ ನನ್ನ ಗುರುಗಳು ಮತ್ತು ಸ್ನೇಹಿತರು ಆಗಿದ್ದಂಥ ಪ್ರೊ. ಭೂಸನೂರಮಠ ಹಾಗೂ ಪ್ರೊ. ಕೆ.ಡಿ. ಕುರ್ತಕೋಟಿ ಅವರಂಥವರಿಂದ ಕಲಿಯುವ ಅವಕಾಶ ನನಗಾಯಿತು. ನನ್ನ ಸಂವೇದನೆ ಹಾಗೂ ಸಂಸ್ಕೃತಿಯನ್ನು ಅನ್ವೇಷಿಸುವುದಕ್ಕೆ ಅಂಥವರೇ ಪ್ರೇರಣೆ ನೀಡಿರುವುದು, ಎಳೆಯ ತಲೆಮಾರಿನವರೂ ಹಾಗೆಯೇ ಮಾಡಬೇಕೆಂದು ನನ್ನ ಆಸೆ.

* * *