ಅನೇಕ ಜನ ಸಾಂಸ್ಕೃತಿಕ ಇತಿಹಾಸಕಾರರು ಭಾರತವು ಬೇರೆ ಬೇರೆ ಸಂಸ್ಕೃತಿಗಳ ಸಂಯುಕ್ತ ಕೇಂದ್ರವೆಂಬುವುದಾಗಿ ಬಣ್ಣಿಸಿದ್ದಾರೆ. ಇದು ವಿಭಿನ್ನ ರೀತಿಯ ಧೋರಣೆಗಳನ್ನು ಪ್ರತಿಫಲಿಸುವ ಮಿಶ್ರಣ ರೀತಿಯ ಪ್ರತಿಕ್ರಿಯೆಯಾಗಿದೆ. ಇದನ್ನೇ ಜನಪ್ರಿಯ ಪರಿಕಲ್ಪನೆಯಲ್ಲಿ “ಭಿನ್ನತೆಯಲ್ಲಿ ಏಕತೆ” ಎಂದು ಕರೆಯಲಾಗಿದೆ. ನಮ್ಮ ದೇಶದಲ್ಲಿ ಸಮಾಜಗಳು ಹಾಗೂ ಬುಡಕಟ್ಟುಗಳು ಒಟ್ಟಿಗೇ ಇವೆ. ಬುಡಕಟ್ಟಿನವರು ತಮ್ಮ ಹಾಡುಗಳನ್ನು ಹಾಗೂ ಮಹಾಕಾವ್ಯಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ ಮತ್ತು ಅವರ ಇತಿಹಾಸ ಅಲಿಖಿತವಾದದ್ದಾಗಿದೆ. ಆದರೆ ಸಮಾಜಗಳಿಗೆ ಚರಿತ್ರೆಯ ಪರಂಪರೆಗಳು ಬಹು ಹಿಂದಿನಿಂದಲೂ ಸದೃಢವಾಗಿ ಬೆಳೆದು ಬಂದಿವೆ. ವಾಸ್ತವವಾಗಿ ನಮ್ಮ ದೇಶದಲ್ಲಿ ಒಂದು ಚರಿತ್ರೆಯಿಲ್ಲ; ಅನೇಕ ಚರಿತ್ರೆಗಳಿವೆ ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ ಈಗಲೂ ಕೂಡ ಬೇರೆ ಬೇರೆಯ ಕ್ಯಾಲೆಂಡರುಗಳನ್ನು ಬಳಸುತ್ತಿದ್ದಾರೆ !

ಈ ಪ್ರಬಂಧ ಬಿಡಿ ಘಟಕಗಳನ್ನು ಸ್ವಲ್ಪ ವಿಸ್ತರಿಸಿ ಮಾತನಾಡಲು ತೊಡಗುತ್ತೇನೆ. ಚರಿತ್ರೆ ಎಂಬ ಪದವನ್ನು ನಾವು ಈಗ ಅರ್ಥಮಾಡಿಕೊಂಡಿರುವಂಥೆ ನಮ್ಮ ಜನರಿಗೆ ಅದರ ಪರಿವೆಯಿರಲಿಲ್ಲ. ಗತಗಕಾಲದಿಂದ ವರ್ತಮಾನದ ತನಕ ಚರಿತ್ರೆಯ ಹರಿದು ಬಂದಿದೆಯೆಂಬ ಸಂಗತಿಯೂ ಕೂಡ ನಮಗೆ ಪುಳಕ ತಾರದು. ಇದಕ್ಕೆ ವ್ಯತಿರೀಕ್ತವಾಗಿ, ನಮ್ಮ ಪೌರಾಣಿಕ ಸಂವೇದನೆ ಅನೇಕ ಯುಗಗಳನ್ನು ಅನೇಕ ಪ್ರಪಂಚಗಳನ್ನೂ ತನ್ನ ಸದ್ಯದ ವಾಸ್ತವವೆಂದೇ ಬೆಸೆದುಕೊಳ್ಳುತ್ತದೆ. ಒಂದರ್ಥದಲ್ಲಿ, ಇದೆಲ್ಲವೂ ಘಟನೆಗಳ ನಿರಂತರ ಮುಂದುವರಿಕೆಯೇ ಆಗಿದೆ. ಹಾಗಾಗಿ, ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುವುದು ನಮಗೆ ಸಂಬಂಧಿಸದ ದೂರದ ಮಾತು ಅಂತ ನಮಗೆ ಅನ್ನಿಸುವುದೇ ಇಲ್ಲ. ಕೃಷ್ಣ ವೈವಸತ್ವನಿಗೆ ಸುಮಾರು ನಾಲ್ಕು ಯುಗಗಳ ಹಿಂದೆ ಹೇಳಿದ ನಮಗೆ ಅನ್ನಿಸುವುದೇ ಇಲ್ಲ. ಕೃಷ್ಣ ವೈವಸ್ವತನಿಗೆ ಸುಮಾರು ನಾಲ್ಕು ಯುಗಗಳ ಹಿಂದೆ ಹೇಳಿದ ಗೀತೆಯ ಸತ್ಯ ಈ ಯುಗದಲ್ಲಿ ನಮಗೆ ಪ್ರಸ್ತುತವಾಗಿದೆ.

ಹಾಗಾಗಿಯೇ ಆಧುನಿಕ ಜ್ಞಾನ ಮತ್ತು ಕಾನೂನು ಮತ್ತು ವ್ಯವಸ್ಥೆಯ ತಿಳುವಳಿಕೆ ಇದ್ದರೂ ಅಯೋಧ್ಯೆಗೆ ಸಂಬಂಧಿಸಿದ ಸಂಗತಿ ಅಷ್ಟು ಹುಚ್ಚು ಹಿಂಸೆಯ ವಸ್ತುವಾಗಿರುವುದು. ಕುಂಭ ಮೇಳದ ಸಂದರ್ಭದಲ್ಲಿ ಕೂಡ ಲಕ್ಷಾಂತರ ಜನರು ಸಂಗಮ ಸ್ನಾನಕ್ಕೆ ಮುಗಿಬೀಳುವುದರ ರಹಸ್ಯವೂ ಇದೇ ಆಗಿದೆ.

ಇದರಿಂದ ನಮಗೇನು ಅರ್ಥವಾಗಬೇಕು ಅಂದರೆ, ನಮ್ಮ ಮನಸ್ಸಿನಲ್ಲಿ ‘ಕಾಲ’ವೆನ್ನುವುದು ಘಟನೆಗಳ ನಿಯಂತ್ರಿಕ ಸರಪಳಿಯಲ್ಲ, ಬದಲಾಗಿ ಭೂತ ಮತ್ತು ವರ್ತಮಾನವನ್ನು ಬೆಸೆಯುವ ಘಟನೆಗಳ ಸಂಯೋಜನೆ. ನಮ್ಮ ಮಹಾಕಾವ್ಯಗಳಲ್ಲಿ ಹನುಮಾನ್ ಮತ್ತು ಅಶ್ವತ್ಥಾಮನ್‌ರ ಬಗ್ಗೆ ಇರುವ “ಚಿರಂಜೀವ” ಎಂಬ ಪರಿಕಲ್ಪನೆ ಇದೇ ದೃಷ್ಟಿಯನ್ನು ಪುಷ್ಟೀಕರಿಸುತ್ತದೆ. ತ್ರೇತಾಯುಗದ ಹನುಮಂತ ದ್ವಾಪರಯುಗದ ಅರ್ಜುನನ ಲಾಂಛನವಾಗುತ್ತಾನೆ; ಅಂದರೆ ರಾಮ ಮತ್ತು ಕೃಷ್ಣರ ನಡುವೆ ಸಂಪರ್ಕ ಮಾಡಿದ ಹಾಗಾಯಿತು.

“ಏಕತೆ”ಯ ವಿಷಯಕ್ಕೆ ಬರುವುದಾದರೆ, ಭಾರತಿಯ ಕಲೆಯ ಸಂದರ್ಭದಲ್ಲಿ ಅನಾದಿ ಕಾಲದಿಂದ ಇಂದಿನವರೆಗೆ ಒಂದು ಏಕೀಕೃತವಾದ ಪರಂಪರೆ ಬೆಳೆದು ಬಂದಿರುವುದು ನಿರ್ವಿವಾದವಾಗಿದೆ. ಅಂದರೆ, ಅಜಂತಾ, ಎಲ್ಲೋರಾ, ಮೊಘಲ್, ಮತ್ತು ಕಾಂಗ್ರಾ ಚಿತ್ರಕಲಾಕೃತಿಗಳಿಂದ ಹಿಡಿದು ಇತ್ತೀಚಿನ ಅವನೀಂದ್ರನಾಥ ಮತ್ತು ನಂದಲಾಲ್ ಬೋಸರವರೆಗೆ ಈ ಪರಂಪರೆಯನ್ನು ನಾವು ಗುರುತಿಸಬಹುದು.

ಅಲ್ಲಿಂದ ಇಲ್ಲಿಯವರೆಗೆ ಏಕ ರೂಪದ ಒಂದು ಪರಂಪರೆಯನ್ನು ಚಿತ್ರಿತ ವಿವರಗಳ ಮೂಲಕ ನಾವು ನೋಡಬಹುದಾಗಿದೆ. ಭಾರತೀಯ ಚಾರಿತ್ರಿಕ ಪ್ರಜ್ಞೆ ಮತ್ತು ಕಲೆಯಲ್ಲಿರುವ ಸಾಮ್ಯವನ್ನು ಗುರುತಿಸುವುದು ನಮಗೆ ಕಷ್ಟವಾಗಲಾರದು. ಚರಿತ್ರೆಯಲ್ಲಿ ಕಾಲವು ಘಟನೆಗಳ ಸಂಯುಕ್ತಾವಸ್ಥೆಯಾಗಿದ್ದು ನಿರಂತರವೆಂದಾದರೆ, ಕಲೆಯಲ್ಲಿ ಅದು ಪ್ರತಿಯೊಂದು ವಿವರದಲ್ಲಿಯೂ ಪರಿಪೂರ್ಣತೆಯ ತುಡಿತವಾಗಿ ಗೋಚರವಾಗುತ್ತದೆ. (ಕಾಮಸೂತ್ರ, ಶಿಲ್ಪಶಾಸ್ತ್ರ, ಹಾಗೂ ನಿಜವಾಗಿ ವ್ಯಕ್ತಿ ಸುಸಂಸ್ಕೃತನಾಗಲು ಬೇಕಾದ ೬೪ ಕಲೆಗಳ ಪರಿಕಲ್ಪನೆಯನ್ನು ಗಮನಿಸಿ) ನನ್ನ “ಚಕೋರಿ”ಯಲ್ಲಿ ಅನುಭವದ ಸಮೃದ್ಧತೆಯನ್ನು ತಂದುಕೊಳ್ಳಲು ಇದೆ ಬಗೆಯ ಮಾರ್ಗವನ್ನು ನಾನು ಅನುಸರಿಸಿರುವುದರ ಬಗ್ಗೆ ಇಲ್ಲಿ ಗಮನ ಸೆಳೆಯಬಯಸುತ್ತೇನೆ.

‘ವ್ಯತ್ಯಾಸ’ಗಳ ಬಗ್ಗೆ ಹೇಳಬೇಕು. ವ್ಯತ್ಯಾಸಗಳು ಇವೆ; ಇಲ್ಲವೆಂತಲ್ಲ. ಅವು ಕೂಡ ನನಗೆ ರೋಮಾಂಚನವುಂಟು ಮಾಡಿವೆ. ಪರಿಲ್ಪನೆಯ ಮಟ್ಟದಲ್ಲಿ ಈ ‘ವ್ಯತ್ಯಾಸಗಳು’ ಹೇಗೆ ಕೆಲಸ ಮಾಡುತ್ತವೆ ಎಂಬುವುದನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸಲು ಪ್ರಯತ್ನಿಸುತ್ತೇನೆ. ಹಾಗೆ ಮಾಡುವಾಗ ಬಹುತೇಕ ಕನ್ನಡ ಸಂಸ್ಕೃತಿಗೆ ಸೀಮಿತಗೊಳಿಸಿಕೊಳ್ಳುತ್ತೇನೆ; ಕೆಲವು ವೇಳೆ ವಿಶಾಲವಾದ ದ್ರಾವಿಡ ಸಂಸ್ಕೃತಿಯ ಉಲ್ಲೇಖ ಬರುತ್ತದೆ; ಕನ್ನಡ ಸಂಸ್ಕೃತಿ ದ್ರಾವಿಡ ಸಂಸ್ಕೃತಿಯ ಒಂದು ಭಾಗ ತಾನೇ? ಮೊದಲನೆಯದಾಗಿ “ಮಹಾಮನೆ” ಮತ್ತು “ಅರಮನೆ”ಯ ವೈರುಧ್ಯವನ್ನೇ ಗಮನಿಸಿ. ಅರಮನೆ ಸಮಾಜದಲ್ಲಿ ರಾಜಮನೆತನದ ಶ್ರೇಣೀಕರಣದ ಸ್ಪಷ್ಟ ಸಂಕೇತ. ಇದಕ್ಕೆ ತದ್ವಿರುದ್ಧವಾದ ರೀತಿಯಲ್ಲಿ ಕನ್ನಡದ ವೀರಶೈವ ಸಾಹಿತ್ಯ “ಮಹಾಮನೆ”ಯ ಪರಿಕಲ್ಪನೆಯನ್ನು ಮುಂದಿಟ್ಟಿತು; “ಮಹಾಮನೆ” ಒಂದು ಸಾಮಾನ್ಯವಾದ ವಾಸಸ್ಥಳ; ಶೀಲ ಮತ್ತು ಸಂಸ್ಕೃತಿಯ ಸಂಪರ್ಕದಿಂದಾಗಿ ಔನ್ನತ್ಯವನ್ನು ಪಡೆದುಕೊಂಡಂತ ಕ್ಷೇತ್ರ.

ಸಮಾನ ಮನಸ್ಕರು ಒಂದು ಕಡೆ ಸೇರಿ ಬದುಕಿನ ಬೇರೆ ಬೇರೆ ವಿನ್ಯಾಸಗಳು ಮತ್ತು ಸಂರಚನೆಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಿದ್ದರು. ಅವರ ಮಾನದಂಡ “ಸನಾತನ ವೇದ”ವಾಗಿರಲಿಲ್ಲ. ಬದಲಾಗಿ “ಶರಣ” ಅಂದರೆ ಭಕ್ತನ ಮಾರ್ಗವಾಗಿತ್ತು. ಜೊತೆಗೆ, ಅಲ್ಲಿ ನೆರೆಯುತ್ತಿದ್ದವರು ಕಲಿತ ಬ್ರಾಹ್ಮಣರಾಗಿರಲಿಲ್ಲ, ಬದಲಾಗಿ ಎಲ್ಲ ವರ್ಗಗಳಿಂದ ಬಂದ ಜನಸಾಮಾನ್ಯರಾಗಿದ್ದರು. ಇದಲ್ಲದೇ ಬಹಳ ಪ್ರಮುಖವಾದ ಆಯ್ಕೆಗಳೂ ಅಲ್ಲಿ ಸೂಚಿತವಾಗಿವೆ. ಜ್ಞಾನದ ಭಾಷೆಯೆಂದೇ ಸ್ವಿಕೃತವಾಗಿದ್ದ ಸಂಸ್ಕೃತದ ಬದಲು ಪ್ರಾದೇಶಿಕ ಭಾಷೆಯಾದ ಕನ್ನಡದ ಬಳಕೆಯಾಯಿತು. ವೇದದ ಪಾರಮ್ಯವನ್ನು ಬದಿಗಿಟ್ಟು ಜನಸಾಮಾನ್ಯನ ಅನುಭವ ಪ್ರಾಮಾಣಕ್ಕೆ ಬೆಲೆ ಬಂದ ಸಂದರ್ಭ ಅದು.

ತಮಿಳು ಸಾಹಿತ್ಯದ ಕಡಗೆ ದೃಷ್ಟಿ ಬೀರಿದರೆ ಅಪರೂಪದ ಕಾವ್ಯ ‘ಸಿಲಪ್ಪದಿಕಾರಂ’ ನಮಗೆ ಕಾಣಿಸುತ್ತದೆ. ಆದು ಅಪರೂಪದ ಮಹಾಕಾವ್ಯವೆಂದು ನಾನು ನಂಬುವುದೇಕೆಂದರೆ ಅದರಲ್ಲಿನ ಕಥಾನಾಯಕ ಒಬ್ಬ ವಣಿಕ; ರಾಮಾಯಣ, ಮಹಾಭಾರತ, ಇಲಿಯಡ್, ಒಡಿಸ್ಸಿ- ಇಂಥ ಯಾವ ಕಾವ್ಯದಲ್ಲಿಯೂ ಕಾಣಸಗಿದಂಥ ನಾಯಕ.

ವಣಿಕನಾಗಿ ಕೋವಲನ್ ದೊರೆಯ ಅಧೀನದಲ್ಲಿರುವಂಥ ಒಬ್ಬ ಸಾಮಾನ್ಯ ಪ್ರಜೆ. ಇತರೆ ಮಹಾಕಾವ್ಯಗಳಲ್ಲಿನ ಕಥಾನಾಯಕರು ತಾವೇ ಸ್ವಯಂ ದೊರೆಗಳಾಗಿ ಯಾವ ಕಾನೂನು ಕಟ್ಟಳೆಗೆ ಸಿಲುಕದವರು. ಕಥಾನಾಯಕನಾಗಿ ಕೋವಲನ್ ಆಯ್ಕೆಯಾಗಿರುವುದರಿಂದ ನಮಗೆ ಅವನು ಹತ್ತಿರದವನಾಗುತ್ತಾನೆ ಮತ್ತು ಬದುಕಿನ ಬೇರೊಂದು ಪರಿಪ್ರೇಕ್ಷ್ಯ ನಮಗೆ ದಕ್ಕುತ್ತದೆ. ವೀರಶೈವ ಚಳುವಳಿಯಲ್ಲಿದ್ದಂಥ ಜನತಾಂತ್ರಿಕವಾದ ಪ್ರಜ್ಞೆ ಇದರಿಂದ ಸಾಬೀತಾಗುತ್ತದೆ.

“ವ್ಯತ್ಯಾಸ”ಗಳ ಬಗೆಗೆ ಇನ್ನು ಕೆಲವು ಉದಾಹರಣೆಗಳನ್ನು ನೀಡುವುದಾದರೆ, ಅತಿಮಾನುಷವಾದ ದೈವದ ಮೂಲಕ ನಾವು ಸಂಬಂಧ ಹೊಂದಿರುವುದನ್ನು ಗಮನಿಸಿ ಕನ್ನಡಿಗನಿಗೆ, ತಮಿಳನಿಗೆ ಹಾಗು ಒಬ್ಬ ಬಂಗಾಳಿಗೆ “ಮಾತೃ” ದೇವರಾಗಿದ್ದಾಳೆ. ಆದರೆ ಪೂಜಾವಿಧಾನದ ವೈಶಿಷ್ಟ್ಯವನ್ನು ಗಮನಿಸಿದರೆ ಅಲ್ಲಿರುವುದು ಶರಣಾಗತಿ ಇಲ್ಲವೇ ಅಮಿತಾನಂದ. ಕೊಂಡ ಹಾಯುವುದನ್ನಾಗಲೀ ಅಥವಾ ಅಮ್ಮನ ಮೂರ್ತಿಯ ಮುಂದೆ ಮೈಮರೆತು ಕುಣಿಯುವುದನ್ನಾಗಲೀ ನೆನಪಿಸಿಕೊಳ್ಳಿ, ಇವೆಲ್ಲ ಹರ್ಷೊನ್ಮಾದದ ಸಂಕೇತ. ಅಸ್ಪೃಶ್ಯ ಸಂತನಾದ ನಂದನಾರ್ ಅವರ ಹಾಡುಗಳಲ್ಲಿ ಶರಣಾಗತಿ ಭಾವನ ತೀವ್ರ ಸ್ವರೂಪವನ್ನು ನಾವು ಕಾಣಬಹುದು. ಇನ್ನೊಂದು ಮುಖವಾದಂತ ಸನಾತನ ಹಿಂದೂ ಪೂಜಾ ವಿಧಾನವಿದೆಯಲ್ಲ ಅದು ವ್ಯವಹಾರಿಕವಾದಂಥದು. ಇವುಗಳಲ್ಲಿ ಹೋಮ, ಯಜ್ಞ- ಇವುಗಳ ಮೂಲಕ ದೇವತೆಗಳಿಂದ ಕೆಲವು ವರಗಳನ್ನು ಪಡೆಯುವ ಹುನ್ನಾರವಡಗಿದೆ. ಈ ಸಂಪರ್ಕದ ರೀತಿಯಲ್ಲಿಯೇ ಪೂಜಾವಿಧಾನದಲ್ಲಿಯೇ “ವ್ಯತ್ಯಾಸ” ಕಂಡುಬರುತ್ತದೆ; ಹಾಗೂ ಶರಣಾಗತಿ ಮತ್ತು ವ್ಯವಹಾರದಲ್ಲಿ ಒಂದು ಸೂತ್ರವಿದೆ.

“ಚರಿತ್ರೆ”ಯ ಬಗ್ಗೆ ಹೇಳುವುದಾದರೆ “ಆಧುನಿಕ ಚರಿತ್ರೆ” ಹುಟ್ಟಿದ್ದು ೧೮೩೬ರಲ್ಲಿ. ಮೆಕಾಲೇ ನೇತೃತ್ವದಲ್ಲಿ ಶಿಕ್ಷಣ ಅಯೋಗ ‘ಭಾರತೀಯರಿಗೆ ಎಂಥ ಶಿಕ್ಷಣ ಕೊಡಬೇಕು’ ಎಂದು ತೀರ್ಮಾನಿಸಲು ಕೂತಾಗ ಅಯೋಗದಲ್ಲಿದ್ದಂಥ ಆರು ಮಂದಿಯಲ್ಲಿ ಮೂವರು ದೇಶಿಯ ಪದ್ಧತಿಯೇ ಮುಂದುವರಿಯಲಿ ಎಂದು ವಾದಿಸಿದರು. ಆದರೆ ಉಳಿದ ಮೂವರು- ರಾಜರಾಮ್ ಮೋಹನರಾಯ್ ಅವರಲ್ಲೊಬ್ಬರು- ಭಾರತೀಯರಿಗೆ ಆಧುನಿಕ ಬ್ರೀಟಿಷ್ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ಮೆಕಾಲೆ ತನ್ನ ನಿರ್ಣಾಯಕವಾದ ಅಧ್ಯಕ್ಷೀಯ ಮುದ್ರೆ ಒತ್ತಿ ಬ್ರಿಟಿಷ್ ಶಿಕ್ಷಣವನ್ನು ಅಳವಡಿಸಿದ. ಮೆಕಾಲೆಯ ಶೈಕ್ಷಣಿಕ ಶಿಫಾರಸ್ಸುಗಳ ಆಧಾರದ ಮೇಲೆ ಇಂಗ್ಲಿಷ್ ನಮ್ಮ ಆಡಳೀತದ ಭಾಷೆಯಾಯಿತು. ಅಲ್ಲಿಯವರೆಗೆ ಉರ್ದು ಮತ್ತು ಪಾರ್ಸಿ ನಮ್ಮ ಅಧಿಕೃತ ಭಾಷೆಗಳಾಗಿದ್ದವು- ಅವುಗಳು ಹೊಸದೇನನ್ನೂ ನಮಗೆ ತಿಳಿಸಲಿಲ್ಲ. ಇಂಗ್ಲಿಷ್ ಬರುವ ತನಕ ಸಂಸ್ಕೃತ ನಮ್ಮ ಜ್ಞಾನದ ಭಾಷೆಯಾಗಿದ್ದಿತು. ಸಂಸ್ಕೃತದ ಜ್ಞಾನಕ್ಕೆ ಗಟ್ಟಿತನವಿಲ್ಲವೆಂಬುವುದನ್ನು ಇಂಗ್ಲೀಷ ಪ್ರತಿಪಾದಿಸತೊಡಗಿತು. ಭಾರತದ ಇತರೆ ಭಾಷೆಗಳೆಲ್ಲ ಒಟ್ಟಾಗಿ ಸೇರಿ ಪ್ರತಿರೋಧಿಸಿದರೂ ಇಂಗ್ಲಿಷ್ ಸದೃಢವಾಗುತ್ತಾ ಹೋದದ್ದರ ಕಾರಣ ಇದು. ಬ್ರಿಟಿಷರು ಬರುವುದಕ್ಕೆ ಮೊದಲೂ ಕೂಡ ನಮಗೆ ಚರಿತ್ರೆ ಇತ್ತು ಎನ್ನುವ ಕಾರಣದಿಂದ ನಮ್ಮ ಭಾಷೆಗಳನ್ನು ನಾವು ಅಂಗೀಕರಿಸಿದೆವು.

ಬ್ರಿಟಿಷರು ಕೊಟ್ಟಂಥ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮನಸ್ಸುಗಳು ತರಬೇತಿ ಹೊಂದಿವೆ ಎಂಬ ತಿಳುವಳಿಕೆಯಿಂದಲೇ ನಾವು ಮುಂದುವರೆಯಬೇಕು; ಹಾಗಾಗಿ ನಮ್ಮ ಮನಸ್ಸುಗಳನ್ನೇ ಪ್ರಶ್ನಿಸುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿದ್ದೇವೆ. ಅವರು ನಮ್ಮನ್ನು ಬಡವರೆಂದು ಕರೆದರು, ನಾವು “ಹೌದು” ಎಂದೆವು. ನಾವು ಮೂಢರು ಎಂದರು. ಅದನ್ನೂ ನಾವು ಒಪ್ಪಿಕೊಂಡೆವು.  ‘ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆಯಿಲ್ಲ’ ಎಂದರು; ಮರುಮಾತನಾಡದೆ ಅದನ್ನೂ ಒಪ್ಪಿಕೊಂಡೆವು. ಚಾರಿತ್ರಿಕ ಪ್ರಜ್ಞೆಯ ಗೈರುಹಾಜರಿಯೇ ನ್ಯೂನತೆಯಾಗಿ ಏಕೆ ಕಾಣಬೇಕು ಎಂದು ನಾವು ಪ್ರಶ್ನಿಸಲಿಲ್ಲ. ವಾಸ್ತವವಾಗಿ ಕೆಲವು ಯೂರೋಪಿಯನ್ ದೇಶಗಳು ಮತ್ತು ಅಮೇರಿಕಾವನ್ನು ಬಿಟ್ಟರೆ ಜಗತ್ತಿನ ಎಲ್ಲ ದೇಶಗಳೂ ಚರಿತ್ರೆಯ ಹೊರಗಿರುವಂಥವು. ಆದರೆ ಈ ರಾಷ್ಟ್ರಗಳಲ್ಲಿರುವವರು ಕೂಡ ಮನುಷ್ಯರು ತಾನೇ? ಬ್ರಿಟಿಷರು ನಮ್ಮ ನೆಲದ ಮೇಲೆ ಕಾಲೂರಿದಾಕ್ಷಣದಿಂದ ಅವರು ನಮಗಿಂತ ಶ್ರೇಷ್ಠರು ಎಂದು ಒಪ್ಪಿಕೊಂಡು ಬಿಟ್ಟ ನಾವು ಮಾತ್ರ ಚರಿತ್ರೆಯ ಹೊರಗಿರುವುದು ಅವಮಾನವೆಂದು ಬಗೆದವರು. ಹಾಗಾಗಿ ಬ್ರಿಟಿಷರು ನೀಡಿದ ಚರಿತ್ರೆಯ ವ್ಯಾಖ್ಯಾನದಿಂದಾಗಿ ಸಾಹಿತ್ಯವನ್ನು ಬೇರೆಯ ಪರಿಪ್ರೇಕ್ಷ್ಯದಲ್ಲಿ ನೋಡುವ ಒತ್ತಡಕ್ಕೊಳಗಾದೆವು.

ಸಂಸ್ಕೃತದ ಮಹಾಭಾರತದ ಇತ್ತೀಚಿನ ಆವೃತ್ತಿಯಲ್ಲಿ ಈ ಅಂಶ ಬಹಳ ಸ್ಪಷ್ಟವಾಗಿದೆ. ಮಹಾಭಾರತ ಒಂದು ಬೃಹತ್ತಾದ ಮಹಾಕಾವ್ಯ. ಆ ಕಾವ್ಯದ ಯಾವ ಭಾಗ ಮೂಲದ್ದು ಇನ್ನು ಉಳಿದ ಯಾವ ಭಾಗ ಪ್ರಕ್ಷೇಪ ಎನ್ನುವುದನ್ನು ಪತ್ತೇ ಮಾಡುವ ಪ್ರಯತ್ನ ನಡೆದಿದೆ. ಈ ಕ್ರಿಯೆಯ ಹಿಂದಿರುವಂಥ ಪ್ರೇರಣೆ ಚರಿತ್ರೆಯ ಪಶ್ಚಾತ್ಯ ಪರಿಕಲ್ಪನೆಯಲ್ಲಿ ಒಡಮೂಡಿದ್ದು. ಇದರ ಪ್ರಕಾರ ಮೂಲ ಪಠ್ಯವನ್ನು ಮಾತ್ರ “ಅಪ್ಪಟ”ವೆಂದು ಪರಿಗಣಿಸಬೇಕು. ಮಹಾಭಾರತದ ಮೂಲ ಪಠ್ಯವನ್ನು ಜಯ ಎಂದು ಕರೆಯಲಾಗಿದ್ದು ಅದರಲ್ಲಿ ಕೇವಲ ಐದು ಸಾವಿರ ಪದ್ಯಗಳಿವೆ. ಇದನ್ನು ಮಾತ್ರ ‘ಅಪ್ಪಟ’ವೆಂದು ಬಗೆದು ಉಳಿದ ಒಂದು ಲಕ್ಷ ಪದ್ಯಗಳು ಪ್ರಕ್ಷೇಪವೆಂದು ಹಣೆಪಟ್ಟಿ ಕಟ್ಟಿ ಪಕ್ಕಕ್ಕಿಡುವುದು ಈ ವಿಧಾನದ ಹುನ್ನಾರವಾಗಿದೆ.

ಅವರ ವಾದ ಹೀಗಿದೆ: ‘ಸೃಷ್ಟಿಗೆ ಒಬ್ಬನೇ ಒಬ್ಬ ಸೃಷ್ಟಿಕರ್ತನಿರುವಂತೆ, ಒಂದು ಪಠ್ಯಕ್ಕೆ ಇರುವವನೇ ಒಬ್ಬನೇ ಕೃತಿಕಾರ. ಪಠ್ಯ ಅವನ ಸುಪರ್ದು. ಉಳಿದವರು ಅದರ ತಂಟೆಗೆ ಹೋಗುವ ಹಾಗಿಲ್ಲ. ಪಠ್ಯದ ಬೇರೆ ಬೇರೆ ಭಾಗಗಳಲ್ಲಿ ಅನಿವಾರ್ಯವಾದಂಥ ಐಕ್ಯತೆ ಇರುವುದು. ಪ್ರಕ್ಷೇಪಗಳಿಂದ ಈ ಐಕ್ಯತೆಗೆ ಧಕ್ಕೆಯುಂಟಾಗುತ್ತದೆ. ಹಾಗಾಗಿ ಅವನ್ನು ತೆಗೆದುಬಿಡಬೇಕು; ಈ ಆಲೋಚನೆಯ ಹಿಂದಿನ ಮನಸ್ಥಿತಿಯನ್ನು ನಾವು ಒಪ್ಪಿಕೊಂಡಿದ್ದೇವೆ. ‘ಒಂದು ರಾಷ್ಟ್ರ ಸಾಮೂಹಿಕವಾಗಿ ಹತ್ತು ಸಾವಿರ ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಒಂದು ಮಹಾಕಾವ್ಯವನ್ನು ಸೃಷ್ಟಿಸಿದೆ’. ಎಂಬ ವಿಸ್ಮಯಕಾರಿ ಸಂಗತಿಯ ಬಗ್ಗೆ ನಮಗೆ ಹೆಮ್ಮೆಯೆನಿಸುವುದಿಲ್ಲ. ನಮ್ಮ ವಿಜ್ಞಾನದ ವಿದ್ಯಾರ್ಥಿಗಳೂ ಕೂಡ ತಮ್ಮ ವಿಜ್ಞಾನದ ಚರಿತ್ರೆಯ ಪಾಠಗಳನ್ನು ಪ್ಲೇಟೋ ಮತ್ತು ಅರಿಸ್ಟಾಟಲ್‌ರಿಂದಲೇ ಶುರು ಮಾಡುತ್ತಾರೆ.

ಅಂಥ ಮನಸ್ಥಿತಿ ಖಂಡಿತವಾಗಿ ಈ ಕಾಲಕ್ಕಲ್ಲ. ನೋಬೆಲ್ ಪ್ರಶಸ್ತಿ ವಿಜೇತ ವಿ.ಎಸ್. ನೈಪಾಲರ ಲಾಗಾಯ್ತು ಅನೇಕ ಜನ ಚಿಂತಕರು ಭಾರತದ ಬಗ್ಗೆ ಇಟ್ಟುಕೊಂಡಿರುವ ಅಭಿಪ್ರಾಯ ಆಶ್ಚರ್ಯವುಂಟು ಮಾಡುತ್ತದೆ; ಅವರ ಪ್ರಕಾರ “ಭಾರತೀಯರು ಭೂತಕಾಲವನ್ನು ಪೂಜಿಸುತ್ತಾರೆ. ವರ್ತಮಾನದ ಬಗೆಗಾಗಲೀ, ಭವಿಷ್ಯತ್ತಿನ ಬಗೆಗಾಗಲಿ ಅಥವಾ ಪ್ರಗತಿಯ ಬಗೆಗಾಗಲಿ ಅವರಿಗೆ ದಿಗಿಲೆಂಬುವುದೇ ಇಲ್ಲ.” ಒಂದೇ ಉಸಿರಿನಲ್ಲಿ ಅವರು ಹೇಳುವ ಮಾತು ಅಂದರೆ “ಭಾರತಿಯರು ಭೂತಕಾಲವನ್ನು ಆರಾಧಿಸುತ್ತಾರೆ ಮತ್ತು ಭಾರತಿಯರಿಗೆ ಇತಿಹಾಸದ ಪ್ರಜ್ಞೆಯೇ ಇಲ್ಲ” ಎಂಬುವುದು.

ಕುರ್ತಕೋಟಿ ಅವರ ಮಾತುಗಳನ್ನು ಉದ್ಧರಿಸಿ ಹೇಳುತ್ತಿದ್ದೇನೆ; ಭೂತಕಾಲವನ್ನು ಆರಾಧಿಸುವ ಜನರು ಐತಿಹಾಸಿಕ ಪ್ರಜ್ಞೆಯನ್ನು ಹೊಂದಿಲ್ಲವೆಂದು ಹೇಳುವುದಾದರೂ ಹೇಗೆ? ವಾಸ್ತವವಾಗಿ ಹೆಚ್ಚು ಹೆಚ್ಚು ಸಂಗ್ರಹಾಲಯಗಳನ್ನು ನಿರ್ಮಿಸುವ ರಾಷ್ಟ್ರಗಳು ಭೂತ ಕಾಲವನ್ನು ಬಿಗಿಯಾಗಿ ಹಿಡಿಯುತ್ತವೆ. ಗತಕಾಲದ ವಸ್ತುಗಳನ್ನು ಮುಕ್ಕಾಗದಂತೆ ಕಾಪಾಡಿಕೊಳ್ಳಲು ಅವರು ಇನ್ನಿಲ್ಲದಂತೆ ಪ್ರಯತ್ನಿಸುತ್ತಾರೆ. ಆ ಅರ್ಥದಲ್ಲಿ, ನಮಗಿಂತ ಹೆಚ್ಚಾಗಿ ಇಂಗ್ಲೆಂಡ್, ಅಮೇರಿಕಾ ಮತ್ತು ಫ್ರಾನ್ಸ್ ದೇಶಗಳು ಗತಕ್ಕೆ ಆತುಕೊಂಡಿವೆ. ಇತ್ತೀಚಿನವರೆಗೂ ನಮ್ಮಲ್ಲಿ ವಸ್ತು ಸಂಗ್ರಹಾಲಯಗಳು ಇರಲಿಲ್ಲ. ನಮಗೆ ಐತಿಹಾಸಿಕ ಪ್ರಜ್ಞೆ ಇಲ್ಲವೆಂದು ನಮ್ಮನ್ನು ಅವಹೇಳನ ಮಾಡುವ ಪರಿಪಾಠವಿಟ್ಟುಕೊಂಡಿರುವ ಜನರು ಮೊದಲು ಕೇಳಿಕೊಳ್ಳಬೇಕಾದದ್ದು ಏನೆಂದರೆ ‘ಹೇಗೆ ಮತ್ತು ಯಾವಾಗಿನಿಂದ ಭಾರತೀಯರು ಚರಿತ್ರೆಯನ್ನು ಆರಾಧಿಸತೊಡಗಿದರು?’

ಚರಿತ್ರೆಯ ದೊಡ್ಡ ಸಮಸ್ಯೆಯೆಂದರೆ ಅದು ಸಂಪೂರ್ಣವಾಗಿ ಭೂತವನ್ನು ವರ್ತಮಾನದಿಂದ ಪಡೆದ ಪ್ರತ್ಯೇಕ ಮಾಡಿಬಿಡುತ್ತದೆ. ಸೌಹಾರ್ದಯುತವಾಗಿ ಭೂತ ಮತ್ತು ವರ್ತಮಾನ ಒಟ್ಟಿಗೇ ಇರಬಲ್ಲವು ಎಂಬ ಸಾಧ್ಯತೆಯನ್ನು ಅದು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಹಾಗೂ ಕಾಲದ ಛಿದ್ರೀಕರಣ ಕೇವಲ ಕೃತಕವಾದದ್ದು ಎಂಬುವುದನ್ನೂ ಅರ್ಥಮಾಡಿಕೊಳ್ಳುವುದಿಲ್ಲ. ಎ.ಕೆ. ರಾಮಾನುಜನ್‌ರವರು ಹೇಳಿರುವ ಒಂದು ಪ್ರಸಂಗದ ಕಡೆಗೆ ನಿಮ್ಮ ಗಮನ ಸೆಳೆಯಲು ಇಷ್ಟಪಡುತ್ತೇನೆ. ಮದ್ರಾಸ್‌ನ ಪ್ರಾಚ್ಯಸಂಶೋಧನಾ ಸಂಸ್ಥೆಯಲ್ಲಿ ಒಂದು ತುಂಬಾ ಮೌಲಿಕವಾದಂಥ ಜೈನ ಪಠ್ಯ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಆ ಪಠ್ಯದ ಬೇರೆ ಪ್ರತಿ ಇಲ್ಲದೆ ಕಾರಣ ಮತ್ತೇ ಮುದ್ರಿಸಲು ಕೂಡ ಆಗಲಿಲ್ಲ. ಸಂಸ್ಥೆಯ ನಿರ್ದೇಶಕರು ಆ ಪಠ್ಯ ಹುಡುಕಿಕೊಂಡು ಊರೂರು ಆಲೆಯುತ್ತಿದ್ದಾಗ ಒಂದು ಗ್ರಾಮದ ಜೈನರ ದೇವಸ್ಥಾನದಲ್ಲಿ ಅದೇ ಪಠ್ಯವನ್ನು ಯಾರೋ ಗಟ್ಟಿಯಾಗಿ ಓದಿ ಹೇಳುತ್ತಿರುವುದು ಕೇಳಿಸಿತು. ಸರಕಾರದ ಪ್ರಕಾರ ಕಳೆದುಹೋಗಿದ್ದಂಥದ್ದು ಜನಸಮುದಾಯದಲ್ಲಿ ಜೀವಂತವಾಗಿತ್ತು. ಸರಕಾರಕ್ಕೆ “ಗತ”ವಾಗಿದ್ದದು ಸಮುದಾಯಕ್ಕೆ ‘ವರ್ತಮಾನ’ವಾಗಿದ್ದಿತು.

ರಾಮಾಯಣ ಮಹಾಭಾರತಗಳು ನಮ್ಮ ಕವಿಗಳನ್ನು ಎಷ್ಟು ಬಗೆಯಾಗಿ ಕಾಡಿವೆಯೆಂದರೆ ಮತ್ತೇ ಮತ್ತೇ ಅವುಗಳನ್ನು ಅವರು ಬರೆದಿದ್ದಾರೆ. ಸದ್ಯಕ್ಕೆ ನಮ್ಮ ಚರ್ಚೆಯನ್ನು “ಅನುವಾದ”ವೆಂಬ ಪರಿಕಲ್ಪನೆಗೆ ಸೀಮಿತಗೊಳಸಿಕೊಳ್ಳೋಣ. ವಿಲಿಯಂ ಜೋನ್ಸ ಅಭಿಜ್ಞಾನ ಶಾಕುಂತಲವನ್ನು ಇಂಗ್ಲೀಷಿಗೆ ಅನುವಾದ ಮಾಡಿದ ನಂತರ ಅನುವಾದ ಕಾರ್ಯಕ್ಕೆ ಅವರು ಗುರುತು ಮಾಡಿದ್ದ ನಿಯಮಗಳನ್ನೇ ಅನುಸರಿಸುತ್ತಾ ನಾವು ಕೂಡ ಅವರ ಅನೇಕ ಕೃತಿಗಳನ್ನು ಅನುವಾದಿಸಿಕೊಂಡೆವು. ಅನುವಾದದ ಈ ನವೀನ ಕಲೆಯನ್ನು ನಾವು ಅವರಿಂದಲೇ ಕಲಿತಿದ್ದ ಕಾರಣ ನಮಗೆ ಅನ್ಯ ಮಾರ್ಗವಿರಲಿಲ್ಲ. ನಿಯಮಗಳೆಂದರೆ:

ಅ) ಅನುವಾದ ಮೂಲಕ್ಕೆ ನಿಷ್ಠರಾಗಿರಬೇಕು.

ಆ) ಮೂಲ ಪಠ್ಯ ಮಾತ್ರ ಅಪ್ಪಟ/ ಶ್ರೇಷ್ಠ/ ಅದಕ್ಕೆ ಮಾತ್ರ ಅಧಿಕೃತತೆ

ಇ) ಅನುವಾದವೆಂದೂ ಮೂಲವಾಗಲಾರದು.

ಈ) ಅನುವಾದವನ್ನು ಮೂಲಕ್ಕೆ ಸಂಬಂಧಿಸಿದಂತೆ / ಮೂಲಕ್ಕೆ ತುಲನೆ ಮಾಡಿ ಅದರ ಮೌಲ್ಯ ನಿರ್ಣಯ ಮಾಡಬಹುದು.

ಆದರೆ ಅನುವಾದದ ವಿಷಯದಲ್ಲಿ ನಮಗಿದ್ದಂಥ ಪರಿಕಲ್ಪನೆ ಇದಲ್ಲ. ನಮ್ಮ ಪ್ರಕಾರ ಮೂಲ ಪಠ್ಯದಿಂದ ಅನುವಾದ ದೂರವಿದ್ದಷ್ಟು ಅದರ ಮೌಲ್ಯ ಹೆಚ್ಚುತ್ತದೆಯೆಂಬುವುದು ನಮ್ಮ ನಂಬಿಕೆ. ಒಂದು ಪಠ್ಯವನ್ನು ಯಾವುದೇ ಒಂದು ಪ್ರದೇಶ ತನ್ನದಾಗಿಸಿಕೊಳ್ಳುತ್ತಿದ್ದ ಬಗೆಯೆಂದರೆ ಸ್ಥಳೀಯವಾದ ಬಗೆಯನ್ನೂ, ಸ್ಥಳೀಯವಾದ ಪ್ರಸ್ತುತತೆಯನ್ನೂ ಅದಕ್ಕೆ ನೀಡುವುದರ ಮೂಲಕ. ರಾಮಾಯಣ ಮತ್ತು ಮಹಾಭಾರತಗಳು ನಮ್ಮ ದೇಶೀಯ ಭಾಷೆಗಳಲ್ಲಿ- ಅದು ಶಿಷ್ಟ ಭಾಷೆಯಿರಲಿ ಅಥವಾ ಮೌಖಿಕ ಉಪಭಾಷೆಯೇ ಇರಲಿ- ನಮಗೆ ದಕ್ಕಿರುವ ಕ್ರಮವೇ ಹೀಗೆ. ಪಂಪ, ಕುಮಾರವ್ಯಾಸ ಹಾಗೂ ಕಂಬನ್‌ರಂಥ ಕವಿಗಳು ಅನುವಾದಿಸಿರುವುದೇ ಹೀಗೆ. ಹಾಗಾಗಿ ಆ ಪ್ರಕ್ರಿಯೆ ಕೇವಲ ಭಾಷಿಕ ಮಟ್ಟದಲ್ಲಿ ಮಾತ್ರ ನಡೆಯದೆ ಬೇರೆ ಬೇರೆ ಸ್ತರಗಳಲ್ಲೂ ಕೆಲಸ ಮಾಡಿದೆ. ಉದಾಹರಣೆ, ಭಾರತದ ಬೇರೆ ಭಾಗಗಳಲ್ಲಿ ರಾಮ, ಲಕ್ಷ್ಮಣ, ಸೀತೆ ಅಥವಾ ಪಾಂಡವರು ತಿರುಗಾಡಿದ್ದ ಜಾಗವನ್ನು ನಿಮಗೆ ಜನರು ತೋರಿಸುತ್ತಾರೆ. ಕರ್ನಾಟಕ ಒಂದರಲ್ಲೇ ಕೀಚಕನಿಗೆ ಸಂಬಂಧಿಸಿದ ಅಖಾಡ ಮತ್ತು ಅಂಗಸಾಧನೆಯ ಐದು ಜಾಗಗಳನ್ನು ನಾವು ಕಾಣಬಹುದು. ರಾಮನ ಜೊತೆ ಕಾಡಿನಲ್ಲಿ ಅಲೆಯುತ್ತಿರುವಾಗ ಸೀತೆಯ ಸೀರೆಯಿಂದಾದ ಗುರುತನ್ನು ಜನರು ಹಂಪಿಯಲ್ಲಿ ಇಂದಿಗೂ ತೋರಿಸುತ್ತಾರೆ. ಚಿತ್ರದುರ್ಗದಲ್ಲಿ ಭೀಮನ ಪಾಕಶಾಲೆಯ ಗುರುತುಗಳಿವೆ.

ಇದು ಇನ್ನೊಂದು ಬಗೆಯ ಅನುವಾದ. ಅಧುನಿಕ ಅನುವಾದಕ್ಕೂ ಇದಕ್ಕೂ ಹೋಲಿಸಿದರೆ, ಆಧುನಿಕ ಅನುವಾದ ಎಷ್ಟು ಸಪ್ಪೆ ಎಂಬುದು ಗೊತ್ತಾಗುತ್ತದೆ. ಆದರೆ ಇವತ್ತು ಗೌರವಕ್ಕೆ ಭಾಜನವಾಗಿರುವುದು ಅಂಥ ಅನುವಾದವೇ . ನಮ್ಮ ಅನುವಾದದ ಬಗೆಗಿನ ಅರಿವೂ ಕೂಡ ಬಂದಿರುವುದು ಇದರಿಂದಲೇ. ಅನುವಾದದ ತತ್ವ ಈವತ್ತು ಇದೇ ಆಗಿದೆ. ಉಳಿದ ತತ್ವಗಳ ಅನ್ವೇಷಣೆಯೇ ಇಂದು ನಮ್ಮ ಮುಂದಿರುವ ಸವಾಲಾಗಿದೆ.

* * *

—-
ಕನ್ನಡನುವಾದ: ಸಿ. ನಾಗಣ್ಣ