ಪ್ರ: ಸಾಹಿತ್ಯವನ್ನು ಕುರಿತಂತೆ ಹೊಸ ಮೌಲ್ಯಮಾಪನಗಳು ಬೇಕೆನಿಸುತ್ತವೆಯೆ?

: ಸಾಕ್ಷರತೆ ಹೆಚ್ಚಿದ್ದರಿಂದ ಸಾಮಾಜಿಕ ಎಚ್ಚರವೂ ಮೂಡುತ್ತಿದೆ. ವಿಭಿನ್ನರೀತಿಯ ಜನವರ್ಗ ತಮ್ಮ ಆಶೋತ್ತರಗಳನ್ನು ವ್ಯಕ್ತಪಡಿಸುವುದಕ್ಕೆ ಸಾಹಿತ್ಯವನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೊಸ ಅನುಭವ ಲೋಕಗಳು ತೆರೆದುಕೊಳ್ಳುತ್ತಿವೆ. ಇತ್ತೀಚಿನ ಉದಾಹರಣೆಗಳನ್ನೇ ಹೇಳಬೇಕೆಂದರೆ ಮುಸ್ಲಿಂ ಜನಾಂಗದ ಕನ್ನಡ ಬರಹಗಾರರು, ದಲಿತ ವರ್ಗದ ಬರಹಗಾರರು ಮತ್ತು ಮಹಿಳೆಯರು ಕನ್ನಡ ಸಾಹಿತ್ಯಕ್ಕೆ ಹೊಸ ದನಿಗಳನ್ನು ಸೇರಿಸುತ್ತಿದ್ದಾರೆ. ನಿಜವಾಗಿ ಹೊಸ ಬರವಣಿಗೆ ಬಂದಾಗಲೆಲ್ಲ ಸಾಹಿತ್ಯವೆಂಬ ಪರಿಕಲ್ಪನೆಯನ್ನು ಕುರಿತೇ ಹೊಸ ಚರ್ಚೆಗಳು, ಬೇರೆಯ ಹೊಸ ರೀತಿಯ ಮಾನದಂಡಗಳ ಹುಡುಕಾಟ ನಡೆಯತೊಡಗುತ್ತದೆ. ಇದಕ್ಕೆ ಕಾರಣವೆಂದರೆ ಹೊಸ ರೀತಿಯ ಬರವಣಿಗೆಯ ಹಿಂದಿರುವ ಪ್ರೇರಣೆಗಳೇ ಆಗಿರುತ್ತವೆ. ಕನ್ನಡದ ವಚನ ಸಾಹಿತ್ಯವನ್ನೇ ನೋಡಿ, ವಚನಗಳನ್ನು ಸಾಹಿತ್ಯವೆಂದು ಪರಿಗಣಿಸತೊಡಗಿದ್ದೇ ಇಪ್ಪತ್ತನೆಯ ಶತಮಾನದಲ್ಲಿ, ನವೋದಯ ಬರವಣಿಗೆಯ ಕಾಲಾವಧಿಯಲ್ಲಿ. ಸಮಾಜದಲ್ಲಿ ಆಗುವ ಬದಲಾವಣೆಗಳಿಂದಾಗಿ ಸಾಹಿತ್ಯಕ್ಕೆ ಇರುವ ಸಾಮಾಜಿಕ ನಿಯೋಗವನ್ನು ಕುರಿತು ಪ್ರತಿಯೊಂದು ತಲೆಮಾರಿನಲ್ಲೂ ಹೊಸದಾಗಿ ಚರ್ಚೆ ನಡೆಯುತ್ತದೆ. ಅಂತೆಯೇ ಸಾಹಿತ್ಯದಲ್ಲಿ ಹೊಸ ಅನುಭವ ಲೋಕಗಳು ಪ್ರವೇಶಿಸಿರುವ ಈ ಸಂದರ್ಭದಲ್ಲಿ ‘ಸಾಹಿತ್ಯ’ವನ್ನು ಕುರಿತ, ಮೌಲ್ಯಮಾಪನ, ಅಂಗೀಕೃತ ಮಾನದಂಡಗಳನ್ನು ಕುರಿತ ಹೊಸ ಚರ್ಚೆ ಅಪೇಕ್ಷಣೀಯವೆಂದು ತೋರುತ್ತದೆ.

ಪ್ರ: ಅಂತಾರಾಷ್ಟ್ರೀಯವಾಗಿ ಸಮಾಜವಾದದ ಹಿನ್ನೆಡೆಗೂ ಇಂದಿನ ಸಾಹಿತ್ಯಕ ಮಿತಿಗಳಿಗೂ ಸಂಬಂಧವಿದೆಯೆ?

. ಸಾಮಾಜಿಕ ಪರಿವರ್ತನೆ ತನ್ನ ಗುರಿ ಎಂದು ಸಾಹಿತ್ಯ ಘೋಷಿಸಿಕೊಳ್ಳಬಹುದು. ಆದರೆ ನಿಜವಾಗಿ ಸಾಹಿತ್ಯದಿಂದ ಸಮಾಜದ ಬದಲಾವಣೆ ಆಗಿದೆಯೇ? ಇಲ್ಲವೆಂದೇ ನನಗೆ ತೋರುತ್ತದೆ. ಬರವಣಿಗೆಯ ಮಾಧ್ಯಮವನ್ನೇ ಆಧರಿಸಿದ ಸಾಹಿತ್ಯ ಸೃಷ್ಟಿ ಮತ್ತು ಓದುವ ಕ್ರಿಯೆ ಎರಡೂ ಈತ ತೀರ ವೈಯಕ್ತಿಕ ನೆಲೆಯಲ್ಲಿ ನಡೆಯುವಂಥವಾಗಿವೆ. ಹೆಚ್ಚೆಂದರೆ ಸಾಹಿತ್ಯದಿಂದ ವ್ಯಕ್ತಿಸಂಸ್ಕಾರ ಪರಿಷ್ಕಾರಗೊಂಡೀತು, ಭಿನ್ನ ರೀತಿಯ ಪ್ರೇರಣೆಗಳನ್ನು ಒದಗಿಸಿತು, ಹೊಸ ರೀತಿಯ ಸ್ಪಂದನ ಹುಟ್ಟೀತು ಎಂದು ಹೇಳಬಹುದು. ಅಂತರರಾಷ್ಟ್ರೀಯವಾಗಿ ಸಮಾಜವಾದ ಎದುರಿಸುತ್ತಿರುವ ಬಿಕ್ಕಟ್ಟಿಗೂ ಸಾಹಿತ್ಯದ ಸ್ಥಾನ ಉದ್ದೇಶ ಹಾಗೂ ಮಿತಿಗಳಿಗೂ ನೇರವಾದ ಸಂಬಂಧವಿದೆ ಎನಿಸುವುದಿಲ್ಲ. ಯಾಕೆಂದರೆ ಸಾಹಿತ್ಯವು ಯಾವಾಗಲೂ ಆದರ್ಶಗಳ ಪ್ರೇರಣೆಯಿಂದ ರಚಿತವಾಗುತ್ತದೆ, ದೌರ್ಬಲ್ಯಗಳನ್ನು ಕುರಿತು ಚಿಂತಿಸುವುದಿಲ್ಲ. ಚಳುವಳಿಯಾಗಿ ಸಮಾಜವಾದ ಬಿಕ್ಕಟ್ಟು ಎದುರಿಸುತ್ತಿದೆ ನಿಜ. ಆದರೆ ಸಮಾಜವಾದದ ಆದರ್ಶಗಳೇ ಸುಳ್ಳು ಎಂದಾಗಬೇಕಿಲ್ಲ.

ಪ್ರ: ಇಡೀ ಸಮಾಜವೇ ಮೂಲಭೂತವಾದದ ಕಡೆಗೆ ಚಲಿಸುತ್ತಿದೆ ಎಂದು ನಿಮಗನ್ನಿಸಿದೆಯೇ?

: ‘ಇಡೀ ನಮ್ಮ ಸಮಾಜವೇ’ ಧಾರ್ಮಿಕ ಮೂಲಭೂತವಾದ ಕಡೆಗೆ ಚಲಿಸುತ್ತಿದೆ ಎಂದು ಅನ್ನಿಸುವುದಿಲ್ಲ. ಧರ್ಮ ಎಂದೂ ಮೂಲಭೂತವಾದಿಯಾದುದಲ್ಲ. ಅಥವಾ, ಮೂಲಭೂತವಾದ ಧರ್ಮವಲ್ಲ. ಗಾಂಧಿ, ಬುದ್ಧ, ಬಸವಣ್ಣ, ಇಂಥವರು ಧಾರ್ಮಿಕರೆಂದೂ ಒಪ್ಪುವುದಾದರೆ ಅವರು ಯಾರೂ ಮೂಲಭೂತವಾದಿಗಳಲ್ಲ. ಸಾಹಿತ್ಯ ಇಂಥ ಧಾರ್ಮಿಕರಿಂದ ಎಂದೂ ಲಾಭವನ್ನೇ ಪಡೆದಿದೆ. ನಿಜವಾಗಿ ಸೃಜನಶೀಲನಾದ ಲೇಖಕ ಎಂದೂ ಮೂಲಭೂತವಾದಿಯಾಗಿರಲು ಸಾಧ್ಯವೇ ಇಲ್ಲ. ಮೂಲಭೂತವಾದವು ಮುಖ್ಯವಾಗಿ ರಾಜಕೀಯ ಅಧಿಕಾರಗ್ರಹಣದ ಒಂದು ಮಾರ್ಗವಾಗಿ ಕಾಣುತ್ತಿದೆ. ಕಲಾವಿದರು- ಬರಹಗಾರರು ಮನುಷ್ಯನನ್ನು ಮುರುಟಿಸುವ ಶಕ್ತಿಗಳನ್ನು ಹೇಗೆ ವಿರೋಧಿಸುತ್ತಾರೋ ಹಾಗೆಯೇ ಧಾರ್ಮಿಕ ಮೂಲಭೂತವಾದವನ್ನೂ ವಿರೋಧಿಸಬೇಕು.

ಪ್ರ: ಯಾಂತ್ರಿಕ ಕ್ರಾಂತಿಯಿರದ ಸಾಹಿತ್ಯವನ್ನು ಕಾಪಾಡುವ ದಾರಿ ಯಾವುದು?

: ಇಲ್ಲ. ತಾಂತ್ರಿಕತೆ ಹಾಗೂ ವಿಜ್ಞಾನ ಎಷ್ಟೇ ಬೆಳೆದರೂ ಸಾಹಿತ್ಯಕ್ಕೆ ತನ್ನದೇ ಆದ ಸ್ವತಂತ್ರ್ಯವಿದೆ. ಎಲ್ಲಿಯವರೆಗೆ ಮನುಷ್ಯನಿಗೆ ಮನುಷ್ಯನಲ್ಲಿ ಆಸಕ್ತಿ ಇರುತ್ತದೆಯೋ, ಎಲ್ಲಿಯವರೆಗೆ ಮಾತು, ಶಬ್ದ ಇರುತ್ತದೋ ಅಲ್ಲಿಯವರೆಗೆ ಸಾಹಿತ್ಯಕ್ಕೆ ಚ್ಯುತಿ ಬರಲಾರದು. ಸಾಹಿತಿಯು ಮಾತಿನ ಮಾಂತ್ರಿಕತೆಗೆ ಮರುಳಾದವನು, ಶಬ್ದ ಶಕ್ತಿಯನ್ನು ಆರಾಧಿಸುವವನು, ಜಗತ್ತನ್ನೂ ಅದರ ಆಚೆಯದನ್ನು ಕಂಡು ಕಾಣಿಸಲು ಶಬ್ದಕ್ಕೆ ಅಂಟಿದವನು. ಸಾಹಿತಿಗಳು ತಮ್ಮ ಕಸುಬುಗಾರಿಕೆಯನ್ನು ಇನ್ನಷ್ಟು ಮತ್ತಷ್ಟು ಪರಿಷ್ಕರಿಸಿಕೊಳ್ಳುತ್ತ ತಮ್ಮ ಮಾಧ್ಯಮ ಮನುಷ್ಯನಿಗೆ ಅನಿವಾರ್ಯ ಎಂದು ನಿರೂಪಿಸುವುದೇ ಮಾನವೀಯವಾದ ಸಾಹಿತ್ಯವನ್ನು ಯಾಂತ್ರಿಕ ಕ್ರಾಂತಿಯಿಂದ ಕಾಪಾಡುವ ದಾರಿಯಾಗುತ್ತದೆ.

* * *

—-
೧೯೯೨ರಲ್ಲಿ ನಡೆದ ಸಂದರ್ಶನ