ದೇಶದ ತುಂಬ ತಲ್ಲಣದ ಪರಿಸ್ಥಿತಿ ಇರುವಾಗ ಕೋಮು-ಸೌರ್ಹಾದದ ಬಗ್ಗೆ ನಾಲ್ಕು ಮಾತು ಹೇಳಬೇಕೆನಿಸುತ್ತದೆ. ದೇಶದ ಮನಸ್ಸು ಕೆಟ್ಟು ಹೋಗಿರುವಾಗ ‘ಏನೆಂದು ಮಾತನಾಡಬೇಕು? ಆದರೂ ಎಂದಿಗಿಂತ ಇಂದು ಸಂಯಮದ ಅಗತ್ಯ ಹೆಚ್ಚಾಗಿದೆಯೆಂದು ನಾನು ನಂಬಿದ್ದೇನೆ. ಅಲ್ಲದೇ ಎಂದಿಗಿಂತ ಸ್ವಾತಂತ್ರ್ಯದ ಅಗತ್ಯವೂ ಈಗ ಹೆಚ್ಚಾಗಿದೆ. ಸ್ವಾತಂತ್ರ್ಯ ಮತ್ತು ಸಂಯಮಗಳ ಒಳಗಿನ ಸಂಬಂಧವನ್ನು ನಾವು ಮರೆತಿರುವುದರಿಂದಲೇ ಇಂದು ಈ ಪರಿಸ್ಥಿತಿಯ ನಿರ್ಮಾಣವಾಗಿದೆ. ನೂರಾರು ವರ್ಷಗಳವರೆಗೆ ಗುಲಾಮಗಿರಿಯನ್ನು ಅನುಭವಿಸಿದ್ದ ದೇಶಕ್ಕೆ ಒಮ್ಮೆಲೆ ದೊರೆತ ಸ್ವಾತಂತ್ರ್ಯದ ಬೆಳಕಿನಿಂದ ಕಣ್ಣು ಕುಕ್ಕಿದವು. ಮೂವತ್ತು ವರ್ಷ ಕಾಲ ಬ್ಯಾಸ್ಟಿಲ್ ಸೆರಮನೆಯಲ್ಲಿ ಬಂಧಿತನಾಗಿದ್ದ ಒಬ್ಬ ಮನುಷ್ಯ ಆ ಸೆರಮನೆಯ ಪತನವಾದ ನಂತರ ಹೊರಗೆ ಬರಲೇಬೇಕಾಯಿತು. ಹೊರಗಿನ ಗಾಳಿ, ಬೆಳಕು ಅವನಿಗೆ ಸಹ್ಯವಾಗಲಿಲ್ಲ. ಕಂಡವರ ಎದುರು ‘ನಾನು ನನ್ನ ಮನೆಗೆ ತಿರುಗಿಹೋಗಬೇಕು’ ಎಂದು ಹೇಳುತಿದ್ದನಂತೆ. ಇದು ಫ್ರಾನ್ಸನ ರಾಜ್ಯಕ್ರಾಂತಿಯ ಕಥೆ. ಬಹುಶಃ ಇದು ನಮ್ಮ ಕಥೆಯೂ ಹೌದು.

ನಾಲ್ವತ್ತು ವರ್ಷಗಳಿಂದ ನಮ್ಮ ಮನಸ್ಸನ್ನು ತಿದ್ದಿಕೊಳ್ಳುತ್ತಲೇ ಇದ್ದೇವೆ. ನಮಗೆ ಗೊತ್ತಿಲದ್ದಂತೆ ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ. ಆದರೆ ಇತಿಹಾಸವನ್ನು ನಿರ್ಮಿಸುವುದೆಂದರೆ ಅಳಿಸುತ್ತಲೇ ಬರೆಯುವ ಕೆಲಸ. ದೊಡ್ಡ ದೇಶದಲ್ಲಿ ಇದೆಲ್ಲ ನಡೆಯುವುದೇ. ಆದರೆ ಇದರ ಜೊತೆಗೆ ಇನ್ನೊಂದು ಅಪ್ರೀಯವಾದ ಕೆಲಸ ನಡೆಯುತ್ತಿದೆ. ಜನರಲ್ಲಿ ದ್ವೇಷದ ಭಾವನೆಯನ್ನು ಬಿತ್ತುವ ಕೆಲಸವೂ ನಡೆದಿದೆ. ಎರಡೂ ನೂರು ವರ್ಷಗಳವರೆಗೆ ವ್ಯವಸ್ಥಿತವಾಗಿ ನಮ್ಮಲ್ಲಿ ಗುಲಾಮಗಿರಿಯನ್ನು ನಿರ್ಮಿಸಿದ್ದ ಬ್ರೀಟಿಷರನ್ನು ನಾವು ದ್ವೇಷದಿಂದ ನೋಡಲಿಲ್ಲ. ಅಂದಿನ ರಕ್ತರಹಿತ ಕ್ರಾಂತಿ ಯಶಸ್ವಿಯಾದುದಕ್ಕೆ ಇಂದು ನಾವು ದಂಡ ತೆರುತ್ತಿದ್ದೇವೇನೋ ಎನೋ ಎಂದು ಸಂಶಯಬರುತ್ತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಾವು ಚಲ್ಲಿದ ರಕ್ತಕ್ಕೆ ಮಿತಿಯಿಲ್ಲ. ಇದೆಲ್ಲ ರಾಜಕೀಯೆಂದು ಸುಮ್ಮನೆ ಕೂಡುವಂತಿಲ್ಲ. ಈ ರಾಜಕೀಯದಲ್ಲಿ ನಾವು ಭಾಗವಹಿಸುತ್ತಿದ್ದೇವೆ. ನಮ್ಮ ಅಂತರಂಗದಲ್ಲಿ ಏನು ನಡೆಯುತ್ತಿದೆಯೆಂದು ನಮಗೆ ನಾವೇ ನೋಡಿಕೊಳ್ಳಬೇಕಾಗಿದೆ. ಇದು ಬಹಳ ಕಷ್ಟದ ಕೆಲಸವೆಂದು ನಾನು ಬಲ್ಲೆ. ಆದರೆ ಇದು ಅನಿವಾರ್ಯವಾಗಿದೆ. ಸಂಸ್ಕೃತಿಯೆಂದರೆ ಮನಸ್ಸಿನ ಸಮತೂಕವನ್ನು ಕಾಯ್ದುಕೊಳ್ಳಲು ನಾವು ನಡೆಸುತ್ತಿರುವ ಹೋರಾಟ ಅದನ್ನು ಕಲಿಯಬೇಕಾಗಿದೆ. ಕಲಿಯದಿದ್ದರೆ ವಿನಾಶವನ್ನು ಎದುರಿಸಬೇಕಾಗುತ್ತದೆ.

ಕೋಮುಗಳ ನಡುವಿನ ಸೌಹಾರ್ಧ ನಮಗೆ ಹೊಸದೇನೂ ಅಲ್ಲ. ಈ ಪಾಠವನ್ನು ನಾವು ಇನ್ನೊಬ್ಬರಿಂದ ಕಲಿಯಬೇಕಾಗಿಲ್ಲ. ರಾಜಕೀಯದ ಹೊರಗೆ ನಮ್ಮ ದೇಶದಲ್ಲಿ ಕೋಟಿಗಟ್ಟಲೆ ಜನರು ಬದುಕುತ್ತಿದ್ದಾರೆ ಅವರೆಲ್ಲ ಸೌಹಾರ್ಧವನ್ನು ಕಾಪಾಡಿಕೊಳ್ಳುತ್ತಲೇ ಬಂದಿದ್ದಾರೆ. ವಿಜಾಪುರದ ಸೂಫಿ ಸಂತರು ಸೌಹಾರ್ಧದ ಬೀಜವನ್ನು ಎಂದೋ ಬಿತ್ತಿ ಹೋದರು. ಅವರು ಬಿತ್ತಿದ ಬೀಜ ಇಂದೂ ಸಾಲುಮರಗಳಾಗಿ ನೆರಳನ್ನು ನೀಡುತ್ತಿವೆ. ಎಂಥ ಅನಾಯಕ ಸ್ಥಿತಿಯಲ್ಲಿಯೂ, ಎಂಥ ರಾಜಕೀಯ ಬಿಕ್ಕಟ್ಟಿನಲ್ಲಿಯೂ ನಮ್ಮ ಜನರು ಯಾವ ಆಧಾರದಿಂದ ಬದುಕಿ ಬಂದರು? ಸಾವಳಗಿಯ ಮಠ, ಶಿರಹಟ್ಟಿಯ ಫಕೀರಸ್ವಾಮಿಗಳು ಮಠ, ಯಮನೂರಿನ ರಾಜಾಭಾಗ ಸವಾರನ ಉರುಸು ಇವೆಲ್ಲ ಸೌಹಾರ್ಧದ ಸಂಸ್ಥೆಗಳಾಗಿ ಇಂದಿಗೂ ಉಳಿದು ಬಂದಿವೆ. ಮೊಗಲರ ಕಾಲದಲ್ಲಿ ಅರಾಬಿಕ್ ಭಾಷೆಯ ಅಕ್ಷರ ಸಂಯೋಜನೆಯ ಬಗ್ಗೆ ಸಂಶಯ ಬಂದರೆ ಮುಸಲ್ಮಾನ ಪಂಡಿತರು ಗುಜರಾತದ ಸಾಗರ ಬ್ರಾಹ್ಮಣರ ಸಲಹೆ ಕೇಳುತ್ತಿದ್ದರಂತೆ. ಪಂಡಿತ ರಾಜ ಜಗನ್ನಾಥ ಮುಸಲ್ಮಾನ ಕನ್ಯೆಯನ್ನು ಮದುವೆಯಾಗಿ ಅವಳ ಮೇಲೆ ಸಂಸ್ಕೃತದಲ್ಲಿ ಕವಿತೆಗಳನ್ನೇ ಬರೆದ. ನಮ್ಮ ವಿಜಾಪುರದ ಇಬ್ರಾಹಿಮ್ ಅದಿಲ್ ಶಹಾ ಸಂಗೀತಶಾಸ್ತ್ರದ ಮೇಲೆ ಗ್ರಂಥವನ್ನು ಬರೆದು ನಮ್ಮ ದೇವತೆಗಳನ್ನು ಕುರಿತು ಗೀತಗಳನ್ನು ರಚಿಸಿದ. ಮೊದಲ ಮೊಗಲ ಬಾದಶಹಾನಾಗಿದ್ದ ಬಾಬರ ಸಾಯುವ ಮುಂದೆ ಕಾಬೂಲ ಕಂದಹಾರಗಳನ್ನು ನೆನೆಸಿಕೊಂಡು ಪ್ರಾಣ ಬಿಟ್ಟನಂತೆ. ಆದರೆ ಕೊನೆಯ ಬಾದಶಹನಾಗಿದ್ದ ಬಹದ್ದೂರ ಶಾಹ ಈ ದೇಶವನ್ನು ಬಿಡಲಾರದೆ ಬಿಟ್ಟು ವಿದೇಶದಲ್ಲಿ ಪ್ರಾಣ ನೀಗಿದ. ಆಗ ಅವನು ಬರೆದ ಗೀತ ನಮ್ಮ ದೇಶಾಭಿಮಾನದ ಪ್ರತೀಕವಾಗಿ ಉಳಿದುಕೊಂಡಿದೆ. ಅಮೀರ ಖುಸ್ರೋ ಕಸಿ ಮಾಡಿದ್ದ ಮಾವಿನ ಹಣ್ಣುಗಳನ್ನು ನಾವಿನ್ನೂ ತಿನ್ನುತ್ತಿದ್ದೇವೆ. ಅವನು ನಿರ್ಮಿಸಿದ ಸಿತಾರ ವಾದವನ್ನು ನಮ್ಮ ರವಿಶಂಕರ ಇನ್ನೂ ನುಡಿಸುತ್ತಿದ್ದಾರೆ. ರವಿಶಂಕರ ಸಿತಾರವಾದ್ಯದಲ್ಲಿ ದ್ವೇಷದ ಅಪಸ್ವರ ಹೇಗೆ ಬಂದೀತು?

ಈ ಎಲ್ಲಾ ಪ್ರತೀಕಗಳು, ಸಂಕೇತಗಳು ಕೊಟ್ಟಿರುವ ಪಾಠವೆಂದರೆ ಒಂದೇ. ಸೌಹಾರ್ದ ಕೇವಲ ಒಂದು ಭಾವನೆಯಲ್ಲ.  ಅದು ಒಂದು ಸಾಂಸ್ಕೃತಿಕ ಅಗತ್ಯ. ನಾಟಕದಲ್ಲಿ ತಪ್ಪು ಮಾತು ಹೇಳಬಾರದು, ಹಾಡುವಾಗ ಅಪಸ್ವರ ಬರಬಾರದು, ನೃತ್ಯದಲ್ಲಿ ತಪ್ಪು ಹೆಜ್ಜೆ ಬೀಳಬಾರದು. ಇದರಲ್ಲಿ ಏನು ತಪ್ಪಾದರೂ ನಾಟಕ ನಾಟಕವಾಗುವುದಿಲ್ಲ, ಹಾಡು ಹಾಡಾಗುವುದಿಲ್ಲ, ನೃತ್ಯ ನೃತ್ಯವಾಗುವುದಿಲ್ಲ. ಸಂಸ್ಕೃತಿಯ ಮೌಲ್ಯಗಳನ್ನು ಹೊಸದಾಗಿ ಹುಟ್ಟಿಸಿಕೊಳ್ಳಬೇಕಾಗುತ್ತದೆ. ಇದು ಕಾಲಕಾಲಕ್ಕೆ ನಡೆಯಲೇಬೇಕಾಗುತ್ತದೆ. ಅದಕ್ಕಾಗಿ ಸೌಹಾರ್ದದ ಅಗತ್ಯವಿದೆ.

ಸೌಹಾರ್ದದ ಅಗತ್ಯ, ಇನ್ನೂ ಒಂದು ದೃಷ್ಟಿಯಿಂದ ಇಂದು ಹೆಚ್ಚಾಗಿದೆ. ಸೌಹಾರ್ದಕ್ಕಿಂತ ಹೆಚ್ಚು ಆಕರ್ಷಕವಾಗಿರುವುದು ದ್ವೇಷ. ನಮ್ಮ ಯಕ್ಷಗಾನದಲ್ಲಯ ಬಣ್ಣದ ವೇಷಗಳಂತೆ ಇದು ಮನಸ್ಸನ್ನು ಸೆಳೆಯುತ್ತದೆ. ವೈರವೆನ್ನುವುದು ನೀರ ಶಬ್ದದ ಭಾವನಾಮವೆಂಬುವುದನ್ನು ಮರೆಯುವಂತಿಲ್ಲ. ವೀರನಾಗಬೇಕಾದರೆ ‘ವೈರ’ಅಗತ್ಯವೆಂದು ನಾವು ದೃಢವಾಗಿ ನಂಬಿದ್ದೇವೆ. ವೀರದ ವಿಜೃಂಭಣೆಯಲ್ಲಿ ನಾವು ಒಂದು ಮಹತ್ವದ ಮಾತನ್ನು ಮರೆತುಬಿಟ್ಟಿದ್ದೇವೆ. ದ್ವೇಷದಿಂದ ಮನಸ್ಸು, ಹೃದಯ ಕಲ್ಲಾಗುತ್ತವೆ. ಮಕ್ಕಳಿಗೆ ಉಣಿಸುವ ಮೊಲೆಹಾಲು ವಿಷವಾಗುತ್ತದೆ. ಇನ್ನೊಂದು ಧರ್ಮವನ್ನು ದ್ವೇಷ ಮಾಡುವಾಗ ನಮ್ಮ ಧರ್ಮದಲ್ಲಿಯೇ ನಂಬಿಕೆ ಉಳಿಯಲಾರದು. ದ್ವೇಷವಿದ್ದಲ್ಲಿ ನಂಬಿಕೆಯಿಲ್ಲ. ಧರ್ಮವೆಂದರೆ ಆಸ್ತಿಯಲ್ಲ. ನಾವು ಹಾಗೆ ತಿಳಿದುಕೊಂಡು ಧರ್ಮವನ್ನು ಇಂದು ಮಾರಾಟಕ್ಕಿಟ್ಟಿದ್ದೇವೆ. ಈ ದ್ವೇಷ ನಮ್ಮ ಭಾಷೆಯಲ್ಲಿ ಮೂಡಿ ಬಂದಾಗಲೇ ನಾವು ಧರ್ಮಾಂಧರಾಗುವುದು. ಇಂದು ನಮ್ಮ ಧರ್ಮ ತಮ್ಮ ಸೃಜನಶೀಲತೆಯನ್ನು ಕಳೆದುಕೊಂಡಿದೆಯೆಂದು ಒಪ್ಪಿಕೊಳ್ಳಬೇಕಾಗಿದೆ. ಕಾವ್ಯವೇ ಆಗಲಿ, ಧರ್ಮವೇ ಆಗಲಿ ತನ್ನ ಸೃಜನಶೀಲತೆಯನ್ನು ಕಳೆದುಕೊಂಡರೆ ಅದನ್ನು ದೂರ ಎಸೆದು ಬಿಡಬೇಕಾಗುತ್ತದೆ. ಧರ್ಮದ ಉಳಿವಿಗಾದರೂ ಈ ದ್ವೇಷಭಾವನೆಯನ್ನು ಬಿಡಲೇಬೆಕಾಗುತ್ತದೆ. ‘ಮನೆಯ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡದು’ ಎಂದರು ಬಸವಣ್ಣನವರು. ಈ ಮಾತನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ದ್ವೇಷವೆಂದರೆ ಅದು ಮನೆಯೊಳಗಿನ ಕಿಚ್ಚು. ಅದು ನಮ್ಮನ್ನು ಮೊದಲು ಸುಟ್ಟು ಆಮೇಲೆ ಇನ್ನೊಬ್ಬರನ್ನು ಸುಡುತ್ತದೆ. ಅದಕ್ಕಾಗಿ ಇಂದು ಸೌಹಾರ್ದದ ಅಗತ್ಯ ಎಂದಿಗಿಂತ ಹೆಚ್ಚಾಗಿದೆ.

* * *