ಸ್ವಾತಂತ್ರ್ಯ ಬಂದ ಬಳಿಕ ಒಂದು ಸದೃಢ ರಾಷ್ಟ್ರವನ್ನು ನಿರ್ಮಿಸಲು ಸ್ವಾವಲಂಬಿಗಳಾಗಲೂ ನಾವು ಪ್ರತಿಜ್ಞೆ ಮಾಡಿದ್ದೆವು. ಆದರೆ ಈವತ್ತು, ನಮ್ಮ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗಾಗಿ ಜಾಗತೀಕರಣದಂಥ ಹೊಸ ಪರಿಕಲ್ಪನೆಯೊಂದು ತಲೆದೋರಿದೆ. ಈ ಹೊಸ ಗಣಕ ವಿಜ್ಞಾನದಿಂದಾಗಿ ಜಗತ್ತಿನ ರಾಷ್ಟ್ರಗಳು ಎಷ್ಟು ಸಮೀಪವಾಗುತ್ತಿವೆಯೆಂದರೆ ಜಗತ್ತು ಒಂದು ವಿಶ್ವಗ್ರಾಮವಾಗಿ ಬಿಡುವಂಥ ದಿನಗಳೂ ದೂರವಿಲ್ಲ. ಈ ಕ್ಷೇತ್ರದಲ್ಲಿ ನಾನು ಪರಿಣತನಲ್ಲ ಮತ್ತು ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರದ ವಿಶೇಷಜ್ಞಾನವೂ ನನಗಿಲ್ಲ. ನಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಹೊಸ ತಂತ್ರಜ್ಞಾನವನ್ನು ಎರವಲು ಪಡೆಯುತ್ತಿದ್ದೇವೆ. ನಮ್ಮ ರಾಜಕೀಯ ಮತ್ತು ನ್ಯಾಯಾಂಗ ಸಂಸ್ಥೆಗಳು, ನಮ್ಮ ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳೂ ಕೂಡ ಪಾಶ್ಚಾತ್ಯ ಪರಿಕಲ್ಪನೆಗಳನ್ನು ಅಧರಿಸಿರುವವೇ ಆಗಿವೆ. ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮಟ್ಟಿಗೆ ಮಾತ್ರ ನಾವು ಭಾರತೀಯರಾಗಿದ್ದೇವೆ. ಉಳಿದೆಲ್ಲ ಜ್ಞಾನ ಶಾಖೆಗಳನ್ನು ಅವುಗಳ ಪಾಶ್ಚಾತ್ಯ ರೂಪಗಳಲ್ಲಿ ಅಭಿವೃದ್ಧಿಗೊಳಿಸಿದ್ದೇವೆ.

ನಮ್ಮ ನಾಗರೀಕತೆಗಳು- ಪಾಶ್ಚಾತ್ಯ ಅಥವಾ ಪೌರ್ವಾತ್ಯ, ಅಪರಿಚಿತರು ಇಣುಕಬಾರದಂಥ ತಮ್ಮದೇ ಆದ ರಹಸ್ಯ ಕೋಣೆಗಳನ್ನು ಹೊಂದಿವೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡಲಿಕ್ಕೂ ಹಾಗೂ ಅರ್ಥದ ಸಂವಹನಕ್ಕೂ ಇದು ಅಗತ್ಯ ಕೂಡ; ಹಾಗೆಯೇ ಒಂದು ಅನುವಾದರೆ ಅನನ್ಯತೆಯನ್ನು ನಿರ್ಧರಿಸಲು ಬೇರೆಯ ಸೂಕ್ಷ್ಮ ಸಂಗತಿಗಳೂ ಇವೆ. ಸಾಪೇಕ್ಷವಾದ ವೈಯುಕ್ತಿಕ ಅನನ್ಯತೆ ನನ್ನ ಮಟ್ಟಿಗೆ ಬಹಳ ಮುಖ್ಯವಾಗುವುದು ಏಕೆಂದರೆ ಅದರ ಮೂಲಕ ಹೊರಗಿನ ಪ್ರಪಂಚದ ಜೊತೆಗಿನ ನನ್ನ ಸಂಪರ್ಕವನ್ನು ನಿರೂಪಿಸಲು ಸಾಧ್ಯವಾಗುವುದರಿಂದ. ಒಂದು ಕುಟುಂಬದ ಜೀವನಕ್ಕಾಗಿ ನಿರ್ಮಿತವಾದ ಒಂದು ಮನೆಯಲ್ಲಿ ಗೋಡೆಗಳಿರುತ್ತವೆ, ಬಾಗಿಲುಗಳೂ ಇರುತ್ತವೆ; ಗೋಡೆಗಳು ಪ್ರಪಂಚದಿಂದ ನನ್ನನ್ನು ಪ್ರತ್ಯೇಕಗೊಳಿಸುತ್ತವೆ, ಹಾಗೆಯೇ ಬಾಗಿಲುಗಳು ಹೊರಗಿನ ಪ್ರಪಂಚದೊಡನೆ ನಾನು ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸುತ್ತವೆ. ಈ ಸಂದರ್ಭದಲ್ಲಿ ನಾನು ಹೇಳಬಯಸುವುದೇನೆಂದರೆ ನಮ್ಮಲ್ಲಿ ಬಾಗಿಲುಗಳು ಮಾತ್ರ ಇವೆ, ಗೋಡೆಗಳಿಲ್ಲ. ಎಲ್ಲ ನಿರೂಪಗಳನ್ನು ನಿವಾರಿಸಿಕೊಂಡಿರುವಂಥ ಪ್ರಪಂಚದಲ್ಲಿ ಬದುಕುವುದು ಕಷ್ಟ ಹಾಗೂ ಗೊಂದಲಮಯವಾದದ್ದಾಗಿದೆ.

ತಂತ್ರಜ್ಞಾನ, ಅರ್ಥಶಾಸ್ತ್ರ ಹಾಗೂ ವಾಣಜ್ಯದ ಬೆಳವಣಿಗೆಯ ತೀರ್ಪು ಕೊಡಲು ನಾನು ಸಮರ್ಥನಲ್ಲ. ಆದರೆ ಸಾಪೇಕ್ಷ ಅಂಶ ನಾನು ಅರ್ಧ್ರವಾಗಿ ಬೆರೆತುಕೊಂಡಿರುವ ಸಂಸ್ಕೃತಿ ವಲಯಕ್ಕೆ ಅತ್ಯಂತ ಮುಖ್ಯವಾಗಿ ಬೇಕಾಗಿದೆ. ಈ ಪ್ರಮಾಣದಲ್ಲಿ ಜಾಗತೀಕರಣವಾಗುತ್ತಿರುವುದು ಸಂಸ್ಕೃತಿಗೆ ಖಂಡಿತವಾಗಿಯೂ ಮಾರಕ. ನನ್ನ ಮಟ್ಟಿಗೆ ಹೇಳುವುದಾದರೆ ಪ್ರತಿಯೊಂದು ಕಲಾಕೃತಿಯೂ ಒಂದು ಕರಕುಶಲ ವಸ್ತುವಿನ ಹಾಗೆ ಅಥವಾ ನನ್ನ ಅಜ್ಜಿ ಸ್ವತಃ ತಯಾರಿಸಿದ ವಿಶೇಷವಾದ ಖಾದ್ಯ ಪದಾರ್ಥದ ತರಹ ಕಲಾವಿದನ ಕೈ ಸ್ಪರ್ಶವನ್ನು ಹೊತ್ತದ್ದಾಗಿರಬೇಕು. ನಾನು ಬೆಳೆದ ಜಾನಪದ ಸಂಸ್ಕೃತಿಯ ವಾತಾವರಣದಲ್ಲಿ ಈ ವಿರೋಧಗಳಿರಲಿಲ್ಲ. ನನ್ನ ಕಾವ್ಯ ಹಾಗೂ ನಾಟಕಗಳು ನಡೆಯುವುದು ‘ಶಿವಪುರ’ ಎಂಬ ಸ್ಥಳದಲ್ಲಿ; ವಾಸ್ತವವಾಗಿ ಇದು ನಾನು ಹುಟ್ಟಿ ಬೆಳೆದಂಥ ಊರಿನ ತದ್ರೂವು; ಅದು ಬಹಳ ಹಿಂದುಳಿದಿರುವ ಬಡವರು ಹಾಗೂ ಏನು ತಿಳಿಯದ ಜನರು ವಾಸಿಸುವಂಥ ಊರು. ಹೋಳಿ ಹಬ್ಬದ ಸಂದರ್ಭದಲ್ಲಿ ಮಣ್ಣಿನಲ್ಲಿ ಮಾಡಿಡುತ್ತಿದ್ದ ಕಾಮನ ಬೊಂಬೆಗಳನ್ನು ನೋಡಿ ನನ್ನ ಸೌಂಧರ್ಯ ಪ್ರಜ್ಞೆಯನ್ನು ಬೆಳೆಸಿಕೊಂಡೆ. ಹಾಗೆಯೇ ಜಾನಪದ ಗೀತೆಗಳು ಹಾಗೂ ಲಾವಣಿಗಳನ್ನು ಕೇಳಿ ಲಯಪ್ರಜ್ಞೆಗೆ ತೆರೆದುಕೊಂಡೆ. ನನ್ನ ಗ್ರಾಮದ, ನನ್ನ ಜನರ ಚರಿತ್ರೆ ಮತ್ತು ಭಾಷೆ ನಾನು ಕಾವ್ಯ, ನಾಟಕ ಹಾಗೂ ಕಾದಂಬರಿಯನ್ನೂ ಬರೆಯುವಂತೆ ಪ್ರೇರೇಪಿಸಿದವು. ಹಾಗೆಂದ ಮೇಲೆ ನನ್ನನ್ನು ಪಾಶ್ಚಿಮಾತ್ಯ ಸಾಹಿತ್ಯ ಮುಟ್ಟಲೇ ಇಲ್ಲ ಅಂತ ಅಲ್ಲ. ಈ ಪ್ರಭಾವವನ್ನು ಅರಗಿಸಿಕೊಂಡು ಉತ್ತಮ ಕೃತಿಗಳನ್ನು ಉತ್ಪತ್ತಿ ಮಾಡುವಂಥ ಶಕ್ತಿ ಶಿವಪುರದ ಸಂಸ್ಕೃತಿಗೆ ಇದೆ ಎನ್ನುವುದು ನನ್ನ ನಂಬಿಕೆ. ಯಾವನೇ ಲೇಖಕನಾಗಲಿ ಕೇವಲ ತನ್ನ ಅನುಭವದ ಬಗ್ಗೆಯೇ ಅವನು ಬರೆಯುವುದಿಲ್ಲ- ತನ್ನ ಅನುಭವದ ದ್ರವ್ಯದಿಂದ ರೂಪಕಗಳನ್ನು ಅವನು ತೆಗೆದುಕೊಳ್ಳುತ್ತಾನೆ. ಒಂದು ಸಮುದಾಯದ ಭಾಷೆಯಿಂದ ಒಡಮೂಡುವ ಈ ವ್ಯಕ್ತಿಗತವಾದಂಥ ರೂಪಗಳು ಹಾಗೂ ವೈಯುಕ್ತಿಕವಾದದ್ದರೊಡನೆ ಸಾರ್ವತ್ರಿಕವಾದದ್ದನ್ನು ಬೆಸೆಯುವುದರ ಮೂಲಕ ಒಂದು ಕಾವ್ಯದ ಹೆಣಿಗೆ ಸೃಷ್ಟಿಯಾಗುತ್ತದೆ. ಸಮುದಾಯ, ಸಮಾಜ ಮತ್ತು ರಾಷ್ಟ್ರದ ನಡುವಿನ ಸಂಬಂಧ ಏಕಕಾಲದಲ್ಲಿ ಮೂರ್ತವೂ, ಅಮೂರ್ತವೂ ಆಗಿರುತ್ತದೆ; ಆದರೆ ಕವಿಯಾದವನಿಗೆ ಮೊದಲನೇ ಬದ್ಧತೆ ಇರುವುದು ಅವನ ಸಮುದಾಯಕ್ಕೆಯೇ.

ಈ ಬದ್ಧತೆಯಿಂದಲೇ ‘ಭಾರತೀಕರಣ’ ಎನ್ನುವ ಅರ್ಥ ನನಗೆ ಆಗುವುದು. ಒಂದು ರಾಷ್ಟ್ರವಾಗಿ ಭಾರತ ಅಥವಾ ರಾಷ್ಟ್ರವೆನ್ನುವ ಪರಿಕಲ್ಪನೆಯೇ ಬಹಳ ಅಮೂರ್ತವಾದದ್ದು. ಭಾರತದ ರಾಜಕೀಯ ಏಕತೆ ಕೂಡ ಇನ್ನೊಂದು ಅಮೂರ್ತತೆಯಾಗಿದ್ದು, ನಮ್ಮ ರಾಷ್ಟ್ರಗೀತೆ ಮತ್ತು ಕವಾಯಿತು ಹಾಡುಗಳಿಗೆ ಅದು ಸ್ಫೂರ್ತಿ ನೀಡಬಲ್ಲದು. ಮಹಾತ್ಮಾ ಗಾಂಧಿ ಅವರ ಕಾಲದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಒಂದು ರಾಷ್ಟ್ರದ ಕಾಣ್ಕೆಗೆ ಸ್ವಲ್ಪ ಪ್ರಮಾಣದ ಮೂರ್ತಸ್ವರೂಪವಾದರೂ ಇದ್ದಿತು. ಆದರೆ ಅದು ಕ್ಷಣಿಕವಾದದ್ದಾಗಿತ್ತು ಮತ್ತು ಈವತ್ತು ರಾಷ್ಟ್ರವೆಂಬ ವಿಚಾರವೇ ಸಂಪೂರ್ಣವಾಗಿ ಅಮೂರ್ತವಾಗಿದೆ. ನನ್ನ ಮಟ್ಟಿಗೆ ಮೂರ್ತವೂ, ಜೀವಂತವೂ ಆದದ್ದೇನೆಂದರೆ ನನ್ನ ಮನೆ ಮತ್ತು ನಾನು ಬದುಕುತ್ತಿರುವ ಸಮಾಜ ಮತ್ತು ಸಂವಹನಕ್ಕೆ ನಾನು ಉಪಯೋಗಿಸುವಂಥ ಭಾಷೆ. ಈ ತರಹದ ಸಪೂರವೂ ಮೂರ್ತವೂ ಆದ ಅನುಭವದಿಂದ ನನ್ನ ಕೃತಿಗಳನ್ನು ರಚಿಸುತ್ತೇನೆ. ನಮ್ಮ ಬಹುತೇಕ ಬರಹಗಾರರಿಗೆ ಬಾಲ್ಯವೇ ಅವರ ಜೀವಂತ ಅನುಭವದ ಮೂಲ ಮತ್ತು ವಯಸ್ಕ ಬದುಕು ಅರ್ಥರಹಿತವಾದ ದೈನಂದಿನ ಕೆಲಸದಲ್ಲಿ ವ್ಯಯವಾಗುತ್ತಿರುತ್ತದೆ.

ನಾನೊಬ್ಬ ಕವಿ ಹಾಗೂ ನಾಟಕಕಾರ- ಇವೆರಡೂ ಕಲೆಗಳೂ ಸಹ ಗಾಢವಾದ ಬದ್ಧತೆಯಿಂದ ನಿರ್ಮಾಣವಾಗುವಂಥವು ಕಾವ್ಯಕ್ಕೆ ನಿಮ್ಮ ಅನುಭವದ ಅಪ್ಪಟತನಕ್ಕೆ ನೀವು ಬದ್ಧರಾಗಿರಬೇಕಾಗುತ್ತದೆ. ಎರಡನೆಯದಾಗಿ, ಕಾವ್ಯಾಭಿವ್ಯಕ್ತಿ ಎನ್ನುವುದು ಭಾಷೆಯಲ್ಲಿನ ಶ್ರಮದ ಕೆಲಸ. ಕವಿ ಭಾಷೆಯನ್ನು ಕೇವಲ ತನ್ನ ಚಿಂತನೆ ಮತ್ತು ಭಾವನೆಯ ಮಾಧ್ಯಮವಾಗಿ ಬಳಸಿದ ಪಕ್ಷದಲ್ಲಿ ಕಾವ್ಯ ಅನುವಾದಕ್ಕಿಂತ ಹೆಚ್ಚೇನಿಸುವುದಿಲ್ಲ. ಭಾಷೆ ಹೆಚ್ಚಿನಂಶ ಮಾಧ್ಯಮವಾಗಿ ಬಳಕೆಯಾಗುವಂಥದ್ದು; ಹಾಗಾಗಿ ನೀವು ಏನನ್ನು ಸಂವಹನಗೊಳಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ, ಮಾಧ್ಯಮವಲ್ಲ. ಆದರೆ ಒಬ್ಬ ಅಪ್ಪಟ ಕವಿಗೆ ಭಾಷೆ ಒಂದು ಸೂಚಕವೂ ಕೂಡ ಹೌದು; ಹಾಗಾಗಿ, ಭಾಷೆಯ ಮಿತಿಗಳನ್ನು ಭಾಷೆಯೇ ಮೀರಬೇಕಾಗುತ್ತದೆ. ಭಾಷೆಯ ಬಗೆಗಿನ ಬದ್ಧತೆ ಮಾತ್ರ ಈ ಹೊಣೆಯನ್ನು ನಿಭಾಯಿಸುತ್ತದೆ. ಪ್ರಾಯಶಃ ಟಿ.ಎಸ್. ಎಲಿಯೆಟ್ ‘ಒಂದು ಬುಡಕಟ್ಟಿನ ಭಾಷೆಯ ಸೂಕ್ಷ್ಮೇ ಕರಣ’ ಎನ್ನುವಾಗ ಅವನ ಮನಸ್ಸಿನಲ್ಲಿದುದು ಈ ಪ್ರಕ್ರಿಯೆಯೇ ಇರಬೇಕು. ಭಾಷೆ ಒಂದು ಸಂಸ್ಕೃತಿ ಉತ್ಪನ್ನವಾಗಿರುವುದರಿಂದ ಅದು ಒಂದು ಸಂಸ್ಕೃತಿಯನ್ನು ನಿರ್ಮಾಣ ಮಾಡುತ್ತದೆ; ಹಾಗಾಗಿ ಭಾಷೆಗೆ ಬದ್ಧರಾಗಿರುವುದು ಎಂದರೆ ಸಂಸ್ಕೃತಿಗೆ ಬದ್ಧರಾಗಿರುವುದು ಎಂದೇ ಅರ್ಥ.

ಈಗ ನಾಟಕಕ್ಕೆ ಬರೋಣ. ನಾಟಕ ಭಾಷೆಯನ್ನು ಉಪಯೋಗಿಸುತ್ತದೆ; ಹಾಗೆಯೇ ಜನರಿಂದ ನಿರ್ಮಾಣವಾದ ರಂಗಭೂಮಿಯನ್ನು ಉಪಯೋಗಿಸುತ್ತದೆ. ನಾಟಕ ನಮ್ಮ ಜನರನ್ನು ತತ್‌ಕ್ಷಣದಲ್ಲಿ ತಲುಪಬೇಕು. ತತ್ ಕ್ಷಣದ ತಲುಪುವಿಕೆ ಬಹಳ ಮುಖ್ಯವಾದದ್ದು; ಆದರೆ, ವಿಷಾದದ ಸಂಗತಿಯೆಂದರೆ, ನಮ್ಮ ಆಧುನಿಕ ನಾಟಕ ಇದನ್ನು ಮರೆಯುತ್ತದೆ. ನಾವು ಈಗ ಪ್ರಯೋಗದ ಹಿಂದೆ ಬಿದ್ದಿದ್ದೇವೆ. ಸೂಕ್ಷ್ಮ ಸಾಂಸ್ಕೃತಿಕ ರಾಜಕಾರಣ ಇಲ್ಲಿ ಕೆಲಸ ಮಾಡುತ್ತಿರಬಹುದೆಂದು ಅನುಮಾನವಿದೆ ನನಗೆ.

ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಪಾಶ್ಚಾತ್ಯ ಸಮಾನರೊಡನೆ ಸ್ಪರ್ಧಿಸಬೇಕಾದಂಥ ಒತ್ತಡ ನಿರ್ಮಾಣವಾಗಿದೆ. ಈ ಸ್ಪರ್ಧೆಯ ತುಡಿತದಲ್ಲಿ ನಮ್ಮ ಜನರನ್ನೇ ನಾವು ಮರೆಯುತ್ತಿದ್ದೇವೆ; ಅವರಾದರೋ ನಮ್ಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ಅರಿಯದ ಗಲಿಬಲಿಯಲ್ಲಿದ್ದಾರೆ. ನಮ್ಮ ಪುರಾತನ ನಾಟಕದ ತಂತ್ರಗಳನ್ನು ರಂಗಭೂಮಿಗೆ ತರುತ್ತಿರುವುದನ್ನು ನಮ್ಮ ನಾಟಕಕಾರರು ಗುರುತಿಸಿಲ್ಲವಾದರೂ ಆ ಬೆಳವಣಿಗೆಗೆ ಮಾತ್ರ ಆಶಾದಾಯಕವಾದದ್ದೇ. ಜಾನಪದ ರಂಗಭೂಮಿಯ ಆಪ್ತತೆಯು ನನ್ನ ನಾಟಕಕ್ಕೆ ಸ್ವಾತಂತ್ರ್ಯ ನೀಡಿರುವುದು ನನಗೆ ಬಹಳ ಮುಖ್ಯವೆನಿಸಿದೆ. ನಟ ಮತ್ತು ಪ್ರೇಕ್ಷಕರ ನಡುವೆ ಯಾವಾಗಲೂ ಒಂದು ಮುಕ್ತ ಸಂಭಾಷಣೆ ಇದ್ದು ನಾಟಕದ ಮೇಲೆ ಭಾಗವತ ಒಂದು ರೂಪ ಕೊಡಲು ಸ್ವತಂತ್ರನಾಗಿರುತ್ತಾನೆ- ಇದು ಕೂಡ ಅರ್ಥಪೂರ್ಣವಾದದ್ದೇ.

ನಮ್ಮ ರಂಗಭೂಮಿಯಲ್ಲಿ ‘ಭಾರತೀಕರಣ’ದ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಇದನ್ನು ಸದೃಢಗೊಳಿಸಿ ಬೆಳೆಸುವ ಪಕ್ಷಕ್ಕೆ ಜಾಗತಿಕರಣ ಪ್ರಕ್ರಿಯೆಯೆ ಕೆಲವು ಅನಿಷ್ಠಗಳನ್ನಾದರೂ ನಿವಾರಿಸಲು ಸಾಧ್ಯವಾಗಬಹುದು. ಪ್ರತಿಯೊಂದು ಕಾಲಘಟ್ಟಕ್ಕೂ ಪ್ರೇರಣೆ ಇರುತ್ತದೆ. ಹಾಗೆಯೇ ಅದಕ್ಕೆ ವಿರುದ್ಧವಾದ ಜಗ್ಗುವಿಕೆಯೂ ಇರುತ್ತದೆ. ಈ ಜಗ್ಗುವಿಕೆ ಕಲೆ ಮತ್ತು ಸಂಸ್ಕೃತಿಯ ಪ್ರತಿಷ್ಠೆಯಾಗಿರುವಂತೆಯೇ ಅವುಗಳ ಹಣೆಬರಹವೂ ಆಗಿರುತ್ತದೆ.

“ಇಬ್ಸನ್ ನನ್ನ ಗ್ರಾಮದಲ್ಲಿ ಸಾಧ್ಯವಾಗುವುದೇ ಇಲ್ಲ”; ಇದಕ್ಕೆ ಇನ್ನೊಂದು ಮಾತು ಸೇರಿಸಲೇ ‘ಅವನು ಸಾಧ್ಯವಾಗಕೂಡದು’.

ನಾನು ಬಹಳ ಹಿಂದೆ ರಂಗಭೂಮಿಯ ಬಗ್ಗೆ ಬರೆದ ಲೇಖನವೊಂದರಲ್ಲಿ ಹೀಗೆ ಹೇಳಿದ್ದೇ ಮತ್ತು ಈಗಲೂ ಅದರ ಬಗ್ಗೆ ನನಗೆ ನಂಬಿಕೆ ಇದೆ. ಇಬ್ಸನ್‌ನ ರಂಗಭೂಮಿ ಎಂಥ ಸಮಾಜವನ್ನು ಕಲ್ಪಿಸಿಕೊಳ್ಳುತ್ತದೆಯೆಂದರೆ ಆ ಸಮಾಜವು ಮಾನವತಾವಾದ ಅಥವಾ ಸಮಾಜವಾಜದಂಥ ವೈಚಾರಿಕ ತತ್ವ ಮತ್ತು ಸಿದ್ಧಾಂತಗಳನ್ನು ನಂಬುತ್ತದೆ. ಮಾನವ ಪ್ರಗತಿಯ ಬಗೆಗಿನ “ಪುರಾಣ” ಮತ್ತು ಚರಿತ್ರೆಯನ್ನದು ನಂಬುವಂಥ ಸಮಾಜ. ನಾನು ಹುಟ್ಟಿ ಬೆಳೆದ ಊರಿನಲ್ಲಿ ಇಂಥ ಸಮಾಜವಿಲ್ಲ. ನಮ್ಮ ಗ್ರಾಮಗಳ ಸಂಸ್ಕೃತಿಯಾದರೋ ಮುಕ್ತವೂ ಸಮಗ್ರವೂ ಆಗಿರುವಂಥದ್ದು-ಆ ಸಂಸ್ಕೃತಿ ಕೇವಲ ಒಳ್ಳೆಯದನ್ನು ಮಾತ್ರ ಇರಿಸಿಕೊಂಡು ಜೀವನದಲ್ಲಿನ ಕೇಡನ್ನು ಹತ್ತಿಕ್ಕುವಂಥದಲ್ಲ; ಹಾಗೆಯೇ ಆ ಸಂಸ್ಕೃತಿಯಲ್ಲಿ ಜಗಳವಾಡುವುದು ಮತ್ತು ರಾಜಿಯಾಗುವುದು ಪರಸ್ಪರ ವಿರೋಧವಾದ ಸಂಗತಿಗಳಲ್ಲ.

ಕೆಡುಕೆಂಬುವುದು ಅತಿಮಾನುಷ ಬಲಗಳಿಂದ ನಾಶವಾಗುತ್ತದೆ. ಇಲ್ಲವೇ ತನ್ನನ್ನು ತಾನೇ ನಾಶಗೊಳಿಸಿಕೊಳ್ಳುತ್ತದೆ. ಮನುಷ್ಯ ಹೊಣೆಗಾರಿಕೆ ದೈವದ ಹೊಣೆಗಾರಿಕೆ ಅಡ್ಡಬರುವುದಿಲ್ಲ. ಮಧ್ಯ ಪ್ರವೇಶಿಸುವುದಿಲ್ಲ.

ಇಬ್ಸನ್ ನಮ್ಮಲ್ಲಿ ಏಕೆ ಸಾಧ್ಯವಾಗಬಾರದು ಅಂದರೆ ನಾಟಕ ಕೃತಿಕಾರನಿಗೆ ಸೇರಿದುದಾದರೂ ರಂಗಭೂಮಿ ಮಾತ್ರ ಜನರಿಗೆ ಸೇರಿದುದು ಎಂಬುವುದರಲ್ಲಿ ನನಗೆ ದೃಢವಾದ ನಂಬಿಕೆ. ಅವರು ಹಳ್ಳಿಯಲ್ಲಿರಲಿ ಅಥವಾ ನಗರಗಳಲ್ಲಿರಲಿ ನಾನು ಬರೆಯುವುದು ನನ್ನ ಜನರಿಗಾಗಿ. ನಮ್ಮ ದೇಶದಲ್ಲಿ ನಗರ ಸಂಸ್ಕೃತಿ ಎನ್ನುವುದು ಗ್ರಾಮೀಣ ಸಂಸ್ಕೃತಿಗಿಂತ ತೀರಾ ಭಿನ್ನವಾದುದಾಗಿಲ್ಲ.

* * *

—-
ಕನ್ನಡನುವಾದ: ಸಿ. ನಾಗಣ್ಣ