ನಾನು ಬರೆಯುತ್ತೇನೆ. ಬರೆವಣಿಗೆಯಲ್ಲಿ ನನ್ನ ಅನಿಸಿಕೆಗಳನ್ನು ಕಟ್ಟುತ್ತೇನೆ. ಅನಿಸಿಕೆಗಳೆಂದರೆ ನನ್ನ ಅನುಭವಗಳು. ನಾನು ಕಟ್ಟವುದು ಶಬ್ದಗಳನ್ನು ಬಳಸಿ. ಈ ಶಬ್ದಗಳು ನನ್ನ ಪರಿಸರದ ಅಂಶಗಳಾಗಿರುವ ಕಥೆಗಳು, ಕಥೆಗಳ ತುಣುಕುಗಳು, ಚಿತ್ರಗಳು ಇತ್ಯಾದಿ. ನನ್ನ ಪರಿಸರದ ಪ್ರಜ್ಞೆಯೆಂದರೆ, ನಾನು ಕಾಲ ಮತ್ತು ಪ್ರದೇಶಗಳ ಆಯಾಮದಲ್ಲಿ ನನ್ನ ಪರಿಸರಕ್ಕೆ ಪ್ರತಿಸ್ಪಂದಿಸುವ ಮಾರ್ಗ, ನಾನು ಬಳಸಿಕೊಳ್ಳುವ ಕಥೆಗಳು, ಫ್ಯಾಂಟಸಿಗಳು, ಪ್ರತೀಕಗಳು ಇತ್ಯಾದಿಗಳಲ್ಲದೇ ಬೇರಾವುದು ಅಲ್ಲ. ಇದರ ಅರ್ಥ ನನ್ನ ಆಚೆಗೆ ಮೊದಲೆ ಅಸ್ತಿತ್ವದಲ್ಲಿರುವ ವಸ್ತುವೊಂದರೊಡನೆ ನಾನು ಕಾವ್ಯಾತ್ಮಕ ಸಂಬಂಧ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದೇನೂ ಅಲ್ಲ. ನನ್ನ ಆಚೆಗಿರುವುದು ಒಂದು ಅನಾಮಧೇಯ ಶಬ್ದರಾಶಿ ಮಾತ್ರ. ಅದು ಇಟ್ಟಿಗೆ-ಗಾರೆಗಳಂತೆ ಆಕಾರ ರಹಿತ ಹಾಗೂ ವ್ಯಕ್ತಿತ್ವ ರಹಿತವಾದದ್ದು. ರಾಶಿರಾಶಿಯಾಗಿ ಚೆಲ್ಲಿಕೊಂಡಿರುವಂಥದ್ದು. ನನ್ನ ಪರಿಸರವನ್ನು ನನ್ನ ಸ್ವಂತದ್ದಾಗಿಸಿಕೊಳ್ಳುವಲ್ಲಿ ನಾನು ಸ್ವತಃ ಅದನ್ನು ಕಟ್ಟಿಕೊಳ್ಳಬೇಕು. ಇಂಥ ಪ್ರತಿಕ್ರಿಯೆಯಲ್ಲಿ ನಾನು ನನ್ನ ಪರಿಸರಕ್ಕೊಂದು ವ್ಯಕ್ತಿತ್ವವನ್ನು ಕೊಡುತ್ತೇನೆ ಹಾಗೂ ಅದೇ ಸಮಯದಲ್ಲಿ ಓರ್ವ ಕವಿಯಾಗಿ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತೇನೆ. ನಾನು ಮತ್ತು ನನ್ನ ಪರಿಸರ ಇಬ್ಬರೂ ಪರಸ್ಪರ ರೂಪಿಸಿಕೊಳ್ಳುತ್ತೇವೆ.

ನಾನು ನನ್ನ ಸುತ್ತ ನೋಡುತ್ತೇನೆ. ನನ್ನ ಒಳಗೆ ನೋಡಿಕೊಳ್ಳುತ್ತೇನೆ. ಎರಡೂ ಒಂದೇ ಪ್ರಕ್ರಿಯೆಯ ಎರಡು ಭಾಗಗಳು. ನಾನು ಯಾವುದನ್ನು ಕಾಣುವುದೂ ಸಮೃದ್ಧಿಯ, ಅತಿಶಯದ ರೂಪದಲ್ಲಿ; ಹುಚ್ಚೆಬ್ಬಿಸುವ ಹರ್ಷ, ಕರಾಳ ಕ್ರೌರ್ಯ, ಆಳ ನೋವು, ಗಾಢ ಬೆಳವಣಿಗೆ, ಕಟ್ಟುಕಿತ್ತ ಕಾಮ, ಏಕಾಕಿತನ, ಐತಿಹ್ಯಾತ್ಮಕ ರಚನೆಗಳು, ಐತಿಹ್ಯಾತ್ಮಕ ಪಾತ್ರಗಳ ಅದ್ಭುತ ಹೋರಾಟಗಳು- ಇವೆಲ್ಲವನ್ನೂ ನಾನು ಸಂಭ್ರಮದಿಂದ ಆಚರಿಸುತ್ತೇನೆ. ನನ್ನ ಮಟ್ಟಿಗೆ ಸಂಭ್ರಮಾಚರಣೆಯು ಅನುಭವದ ಪ್ರಾಥಮಿಕ ಗ್ರಹಣಾವಿಧಾನ. ಯಾಕೆಂದರೆ, ಸಂಭ್ರಮಾಚರಣೆಯಲ್ಲಿ ಏಕಕಾಲಕ್ಕೆ ವೈಯುಕ್ತಿಕವೂ, ಸಾಮೂದಾಯಕವೂ ಆದ ಸಂಗೀತ ಗುಣವಿದೆ. ಅದರ ಲಯ ಏಕಕಾಲಕ್ಕೆ ಆದಿಮವಾದದ್ದು ಹಾಗೂ ಸಮಕಾಲೀನವಾದದ್ದು. ವೃಷ್ಟಿ ಮತ್ತು ಸಮಷ್ಟಿಗಳ ಬೆಸುಗೆಯಾದದ್ದು. ಸಂಭ್ರಮಾಚರಣೆಯ ಮೂಲಕ ನಾನು ‘ಮಿಥ-ಮೇಕರ್’ನ ಕಾರ್ಯ ನಿರ್ವಹಿಸುತ್ತಿದ್ದೇನೆಂದು ನನ್ನ ನಂಬಿಕೆ. ಅನುಭವವನ್ನೊಂದು ಮಿಥ್ ಆಗಿ ಪರಿಗ್ರಹಿಸುವಾಗ ಮಾನವ ಬಾಲ್ಯಾವಸ್ಥೆಯಲ್ಲಿದ್ದ. ‘ಏಕ’ವಾಗಿದ್ದ ಆತ ‘ಬಹು’ವಿನೊಂದಿಗೆ ಅರ್ಥಪೂರ್ಣ ಸಂಬಂಧ ಕಟ್ಟಿಕೊಳ್ಳಲು ಪ್ರಯತ್ನಿಸಿದ: ಅಂತರಂಗ ಬಹಿರಂಗಗಳೆರಡನ್ನೂ ಬೆಸೆಯಲು ಯತ್ನಿಸಿದ. ಆತನ ಇಂತಹ ಪ್ರಯತ್ನದ ಒಟ್ಟು ರೂಪವೆ ಮಿಥ್ ಆಗಿತ್ತು. ಅದು ಆ ಪ್ರಯತ್ನವನ್ನು ಸರ್ವಾಂಗೀಣ ಫಲವಂತಿಕೆಯ ಪ್ರತೀಕದ ಮೂಲಕ ಆಚರಿಸಿತು. ಆಗ ಬಾಲ್ಯಾವಸ್ಥೆಯಲ್ಲಿದ್ದ ಮಾನವ ಅನುಭವವನ್ನು ಆಮೂರ್ತಿಕರಿಸಲು ಹೋಗಲಿಲ್ಲ. ತತ್ವ ಚಿಂತನೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಮಿಥ್ ಆಚರಿಸಿದರೆ: ತತ್ವ ಶಾಸ್ತ್ರವು ‘ಬಹು’ವನ್ನು ‘ಏಕ’ಕ್ಕೆ ಸೀಮಿತಗೊಳಿಸುವುದರ ಮೂಲಕ ಅದನ್ನು ಗ್ರಹಿಸಲು ಪ್ರಯತ್ನಿಸುತ್ತದೆ. ಬಹುರೂಪಗಳ ಹಿಂದಿರುವ ಏಕಸತ್ವವನ್ನು ಹುಡುಕಲೆತ್ನಿಸುತ್ತದೆ. ಕವಿಯಾಗಿ ನಾನು ಬಹುರೂಪತೆಯನ್ನು ಅದರ ಎಲ್ಲ ಸಮೃದ್ಧಿಯಲ್ಲಿ ಒಪ್ಪಿಕೊಳ್ಳುತ್ತೇನೆ. ನಾವು ಭಾರತದಲ್ಲಿ ಇವತ್ತಿಗೂ ದೇವತೆಗಳೊಟ್ಟಿಗೆ ವ್ಯವಹರಿಸುತ್ತೇವಾದ್ದರಿಂದ, ಪ್ರೀತಿ-ಜಗಳಗಳನ್ನು ಆಡುತ್ತೇವಾದ್ದರಿಂದ ನಮ್ಮಲ್ಲಿ ಮಿಥ್ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. ನಮ್ಮಲ್ಲಿಯ ಪೂಜಾ ವಿಧಾನಗಳು ಮೂಲತಃ ಸಹಭಾಜ್ಯತೆಯ ಕ್ರಿಯಾವಿಧಿಗಳು; ಅಲ್ಲಿ ಮಾನುಷ ಹಾಗೂ ಅತಿಮಾನುಷರಿಬ್ಬರೂ ಒಂದೇ ಸಂರಚನೆಯ ಎರಡು ಭಾಗಗಳು. ಈ ದೃಷ್ಟಿಯಿಂದ ನಾವು ನಿಜವಾಗಿಯೂ ಮಿಥಿಕಲ್ ಜನರು. ನಾನು ನಿಜವಾಗಿಯೂ ನನ್ನ ನೆಲದ ಕವಿಯಾಗಬೇಕೆಂದರೆ ಮಿಥಿಕಲ್ ಆಗುವುದು ಅನಿವಾರ್ಯ.

ನಾನು ನನ್ನ ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತೇನೆ? ಸುಲಭವಾದದ್ದನ್ನು, ಅಪ್ರಾಮಾಣಿಕವಾದದ್ದೆಲ್ಲವನ್ನೂ ತಿರಸ್ಕರಿಸುವ ನವ್ಯವಾದಂತಹ ಚಳುವಳಿಗಳ ಪರಿಚಯ ನನಗುಂಟು. ಸಮಕಾಲೀನ ಕನ್ನಡ ಸಾಹಿತ್ಯದ ಅನೇಕ ಅತ್ಯುತ್ಕೃಷ್ಟ ಲೇಖಕರ ಮೇಲೆ ನವ್ಯವಾದ ಮಾಡಿದ ಗಾಢ ಪ್ರಭಾವದ ಪರಿಚಯವೂ ನನಗುಂಟು. ಹಾಗೆ ನೋಡಿದರೆ ನನ್ನದೇ ಬರವಣಿಗೆಯ ಒಂದು ಪುಟ್ಟ ಭಾಗವೂ ಆ ಪ್ರಭಾವವನ್ನು ಪ್ರತಿಫಲಿಸುತ್ತದೆ. ಇಂದು ಮಾತ್ರ ಅದೆಲ್ಲದ್ದರಿಂದ ಕೊಂಚ ದೂರ ನಿಂತು ನೋಡಿದಾಗ, ಪಶ್ಚಿಮದಿಂದ ನಮಗೆ ಬಂದಂತಹ ನವ್ಯವಾದ ಸಂರಚನೆಗಳು ನಾನು ನನ್ನ ಪರಿಸರದೊಂದಿಗೆ ಸಂಬಂಧ ಕಟ್ಟಿಕೊಳ್ಳುವ ಕ್ರಿಯೆಗೆ ಅವಶ್ಯಕವಾದಂತಹ ಸಾಧನಗಳಲ್ಲವೇನೋ ಎಂದೆನಿಸುತ್ತದೆ. ಎಲಿಯೆಟ್ ಮತ್ತು ಅವನ ಅನಾಥಪ್ರಜ್ಞೆ, ಅಸ್ತಿತ್ವವಾದ ಮತ್ತು ಅವರ ಅಬ್ಸರ್ಡ್ ಪ್ರಜ್ಞೆ, ಅದಿಮವಾದದ್ದನ್ನು ಬಗೆದು ಹುಡುಕಿಕೊಳ್ಳುವ ಯೂರೋಪಿಯನ್ ಪ್ರಯತ್ನ; ಸಂಸ್ಕೃತಿಯ ಲಕ್ಷಣಗಳನ್ನು ಹುಡುಕಿ ಗುರುತಿಸಿಕೊಳ್ಳುವಲ್ಲಿ ಅರ್ನಾಲ್ಡ್ ಅಥವಾ ಪೌಂಡ್ ರೀತಿಯ ಪ್ರಯತ್ನ; ಸಾರ್ತರನಿಂದ ಪ್ರಾರಂಭಿಸಿ ಹಿಪ್ಪಿಗಳವರೆಗಿನ ಆಧುನಿಕ ಪಾಶ್ಚಾತ್ಯ ಅನಾಥಪ್ರಜ್ಞೆ  – ಇವೆಲ್ಲವುಗಳ ಸತ್ವ ವಾಸ್ತವವನ್ನು ನಾನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತೇನೆ. ಆದರೆ ಇವೆಲ್ಲವನ್ನು ನನ್ನ ಸ್ವಂತದ ಮಾರ್ಗಗಳನ್ನಾಗಿ ಮಾಡಿಕೊಳ್ಳುವುದರ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ. ಮಾನವ ಸ್ಥಿತಿಯ ಬಗ್ಗೆ ನಮ್ಮಲ್ಲೆ ಇರುವ ಪ್ರಶ್ನೆಗಳು ಆ ಎಲ್ಲ ಶ್ರೇಷ್ಠ ಯೂರೋಪಿಯನ್ನರ ಪರಿಪ್ರೇಕ್ಷ್ಯಕ್ಕಿಂತ ಹೆಚ್ಚು ಮೂಲಭೂತವೂ, ಆ ಕಾರಣ ಹೆಚ್ಚು ಸಾರ್ವತ್ರಿಕವೂ ಅಲ್ಲವೇನು ?

ಬರಹಗಾರನೊಬ್ಬನಿಗೆ ಯಾವತ್ತೂ ಅವನ ಕಾಲದ ಪ್ರಜ್ಞೆ ಮತ್ತು ಅವನ ಪ್ರದೇಶದ ಪ್ರಜ್ಞೆಯಿರುತ್ತದೆ. ಇರಬೇಕಾಗುತ್ತದೆ. ವಾಸ್ತವವಾಗಿ ಬರಹಗಾರನ ಎಲ್ಲ ಸೃಷ್ಟಿಯನ್ನು ಪ್ರಭಾವಿಸುವ ಈ ಎರಡೂ ಮಹತ್ವದ ಅಯಾಮಗಳನ್ನು ಬೇರ್ಪಡಿಸುವುದು ಅಸಾಧ್ಯ. ಈ ದೇಶದಲ್ಲಿ ಇಂದು ಬರೆಯುತ್ತಿರುವ ಓರ್ವ ಲೇಖಕನಾಗಿ ನಾನು ಈ ಎರಡು ಅಯಾಮಗಳನ್ನು ನನ್ನದೇ ದೃಷ್ಟಿಕೋನದಿಂದ ನೋಡಬಯಸುತ್ತೇನೆ. ನಾನು ನನ್ನ ಅನುಭವದ ಟೆಕ್ಸ್‌ಚರ್ ಅನ್ನು ಪಡೆದುಕೊಳ್ಳುವುದು ಮುಖ್ಯವಾಗಿ ನನ್ನ ಪ್ರದೇಶ ಪ್ರಜ್ಞೆಯ ಮುಖಾಂತರ. ಅದು ನನ್ನ ಬರವಣಿಗೆಯ ಮೂಲಧಾತುವಾಗಿರುತ್ತದೆ. ನನ್ನ ಅನುಭವದ ನೇಯ್ಗೆಯ ಎಳೆ ಎಳೆಯನ್ನೂ ಕಟ್ಟಿಕೊಡುತ್ತದೆ. ನನ್ನ ಕಾಲವನ್ನು ಮಾತ್ರವಲ್ಲ; ಬೇರೆ ಎಲ್ಲಾ ಕಾಲ್ಪನಿಕ ಆದರೆ ಅರ್ಥಪೂರ್ಣ ಕಾಲದ ರೂಪಗಳನ್ನೂ ಅದು ಒಳಗೊಳ್ಳುತ್ತದೆ. ಕಾಲ ಪ್ರಜ್ಞೆಗೆ ಹೆಚ್ಚು ಒತ್ತು ನೀಡುವುದನ್ನು ನಾನು ಅಷ್ಟಾಗಿ ಒಪ್ಪುವುದಿಲ್ಲ. ಕಾಲ ಪ್ರಜ್ಞೆಯು ಅಮೂರ್ತವಾದುದು ಮತ್ತು ಬರಹಗಾರನಲ್ಲಿ ನ್ಯೂರೋಸಿಸ್‌ನ ರೂಪ ತಾಳಬಲ್ಲಂಥದ್ದು. ಪಶ್ಚಿಮದ ಸರಿಸಾಟಿಯಾಗಬೇಕೆಂಬ ಅಳುಬುರುಕ ಅಪೇಕ್ಷೆ ಇಂಥ ನ್ಯೂರೋಸಿಸ್‌ನ ಫಲವಾಗಿದೆ.  ಮಾತ್ರವಲ್ಲ, ನಮ್ಮ ದುರ್ದೈವದ ವಸಾಹತುಶಾಹಿ ಅನುಭವದ ಭಾಗವೂ ಆಗಿದೆ. ಬರಹಗಾರನಿಗೆ, ಚಿತ್ರಕಲಾವಿದನಿಗೆ, ಶಿಲ್ಪಿಗೆ ಎಲ್ಲರಿಗೂ ಪ್ರದೇಶವೇ ಮೂಲವಾದ, ನಿಜವಾದ, ತುರ್ತಿನ ಅನುಭವ ಕ್ಷೇತ್ರ. ಕಾಲಪ್ರಜ್ಞೆಯೆನ್ನುವುದು ಮಾತ್ರ ಬಹಳಷ್ಟು ಮಟ್ಟಿಗೆ ಕಲ್ಪನೆಯ ರೂಪದ್ದು. ನಾನು ಪ್ರಾಯಶಃ ಈ ವೈದೃಶ್ಯವನ್ನು ಕೊಂಚ ಸರಳೀಕರಿಸುತ್ತಿದ್ದೇನೆ. ಆದರೆ ನಾನು ನನ್ನ ಬರವಣಿಗೆಯನ್ನು ಈ ರೀತಿಯಲ್ಲಿಯೇ ವಿವರಿಸ ಬಯಸುತ್ತೇನೆ. ಹಾಗಾಗಿ ಸಮಕಾಲೀನ ಮತ್ತು ಆಧುನಿಕದ ನಡುವಿನ ಭಿನ್ನತೆಗಳ ಬಗೆಗಿನ ಪಾಂಡಿತ್ಯಪೂರ್ಣ ಚರ್ಚೆಗಳು ನನ್ನ ಸೃಜನಶೀಲತೆಯ ಕೇಂದ್ರದಿಂದ ಕೊಂಚ ದೂವಿರುವಂಥವು. ನಾನು ನನ್ನ ಪ್ರದೇಶಕ್ಕೆ ಎಷ್ಟು ಸೇರಿದವನೋ, ನನ್ನ ಕಾಲಕ್ಕೂ ಅಷ್ಟೇ ಸೇರಿದವನು, ಬೇರೆ ವಿಧಿಯಿಲ್ಲದಂತೆ, ನನ್ನ ವೈಯಕ್ತಿಕ ಅನುಭವದ ಸಾಪೇಕ್ಷ ಒತ್ತಡಗಳು ನನ್ನ ಬರವಣಿಗೆಯ ವ್ಯಕ್ತಿತ್ವವನ್ನು ನಿರ್ಧರಿಸುತ್ತೇನೆ. ನನ್ನ ಸಮಕಾಲೀನ ಕನ್ನಡ ಲೇಖಕರ ಮಧ್ಯೆ ನನ್ನ ವ್ಯಕ್ತಿ ವಿಶಿಷ್ಟತೆಯನ್ನು ಕಟ್ಟಿಕೊಡುತ್ತವೆ. ಪರಿಸರ ನನಗೆ ಅನುಭವವಾಗುವುದು ಮೂಲಭೂತವಾಗಿ ಮತ್ತು ಮುಖ್ಯವಾಗಿ ದೇಶಪ್ರಜ್ಞೆಯಾಗಿ.

ನನ್ನ ಪ್ರದೇಶಪ್ರಜ್ಞೆಯ ಗಾಢತೆಗೆ ನನ್ನ ಸಾಮಾಜಿಕ ಹಿನ್ನೆಲೆಯೂ ಕೊಂಚ ಕಾರಣವಾಗಿದೆ. ನಾನು ಮೇಲುಜಾತಿಗೆ, ಅರ್ಥಾತ್ ಸಂಸ್ಕೃತ ಪ್ರಭಾವದ ಜಾತಿಗೆ ಸೇರಿದವನಲ್ಲ. ಆದಕಾರಣ ಮೇಲುಜಾತಿಯ ಪರಂಪರೆಯ ಮುಖ್ಯ ಮೂಲಾಂಶಗಳಾದ ಕಾಲ-ಕಾಲಾತೀತತೆ, ರೂಪ-ಸತ್ವ, ಜನ್ವ-ಮೋಕ್ಷ ಇತ್ಯಾದಿ ವೈದೃಶ್ಯಗಳಿಂದ ನಾನು ದೂರ. ಮೂಲತಃ ಕಾಲಕೇಂದ್ರೀತವಾದ ಇಂಥ ಸಂರಚನೆ, ಪರಿಕಲ್ಪನೆಗಳಿಂದ ಅಭಾದಿತನಾದ್ದರಿಂದ ನಾನು ಮಗುವಿನಂಥವನು. ಮಗುವಿನಂತೆ ಇಂದ್ರೀಯ ಪ್ರಜ್ಞೆಯ ತತ್‌ಕ್ಷಣದ ಸಂವಹನದ ಶಕ್ತಿಗೆ ಪೂರಾ ಮರುಳಾಗಿರುವವನು. ನನ್ನ ಅನುಭವಗ್ರಹಿಕೆಯ ಕೇಂದ್ರದಲ್ಲಿರುವುದು ಬಹುತ್ವದ ಒಂದು ವರ್ಣಮಯ, ವೈಭವಸಮೃದ್ಧ ಪ್ರಜ್ಞೆ. ಹಾಗಾಗಿ ಮಿಥ್‌ಗಳನ್ನು ಸೃಷ್ಟಿಸುವಂತಹ ಮನೋಧರ್ಮಕ್ಕೆ ನಾನು ತುಂಬಾ ಹತ್ತಿರದಲ್ಲಿರುವಂಥವನು.

ಕೆಳಜಾತಿಯೊಂದಕ್ಕೆ ಸೇರಿದ ಅನಾನುಕೂಲವೆ ನನಗೆ ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಅನಕ್ಷರಸ್ಥರಾದ, ಶೋಷಿತರಾದ ನನ್ನ ಜನ ಜೀವ ಸಮೃದ್ಧ ಹಾಡುಗಳ ಮೂಲಕ ತಮ್ಮ ಅನುಭವವನ್ನು ಉಳಿಸಿಕೊಂಡರು, ಬೆಳೆಸಿಕೊಂಡರು. ಅವರಿಗೆ ಇಂದ್ರೀಯಾತ್ಮಕ ನೆನಪೇ ಜ್ಞಾನ ಸರ್ವಸ್ವವಾಗಿತ್ತು. ಹಾಗಾಗಿ ನನಗೆ – ಅವರ ಮಗನಿಗೆ – ಸಾಕ್ಷರತೆ ಮತ್ತು ಬರವಣಿಗೆ ಸಾಧ್ಯವಾದಾಗ ಅದು ಅವರಿಗೆ ಸಾಮಾನ್ಯವಾಗದೆ ಅಸಾಮಾನ್ಯ ಸಂತೋಷದ ವಿಷಯವಾಯಿತು.

ಈ ದೇಶದಲ್ಲಿ ಅಮೂರ್ತೀಕರಿಸುವ ಬ್ರಾಹ್ಮಣ್ಯದಿಂದ ಹಿಡಿದು ಮೂರ್ತಸಮಗ್ರತೆಯ ಶೂದ್ರತ್ವ ಅಥವಾ ಆದಿಮತೆಯವರೆಗೆ ಹರಡಿಕೊಂಡ ವೈವಿದ್ಯ; ವಿಸ್ತಾರದ ಸಾಮಾಜಿಕ ಮತ್ತು ಬೌದ್ಧಿಕ ಸಂರಚನೆಗಳಿರುವ ಈ ದೇಶದಲ್ಲಿ, ಬೇರೆಡೆಯ ನಗರೀಕೃತ, ಅನಾಮಧೇಯ ಸಮಾಜದಲ್ಲಿ ಕಲ್ಪಿಸಿಕೊಳ್ಳಲೂ ಆಗದಂಥ ಶಕ್ತಿ ಮತ್ತು ಸಮೃದ್ಧಿಯೊಡನೆ ಇಲ್ಲಿನ ಪರಿಸರಕ್ಕೆ ಸ್ಪಂದಿಸಲು ಸಾಧ್ಯವಿದೆಯೆಂದು ನನ್ನ ನಂಬಿಕೆಯಾಗಿದೆ. ಮಿಥಿಕಲ್ ಮಾರ್ಗ ಇಲ್ಲಿ ಇನ್ನೂ ಅರ್ಥಪೂರ್ಣವಾದುದು, ವಾಸ್ತವವಾದುದು.

* * *

—-
೧೯೯೨ – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದರ್ಭದಲ್ಲಿ ಮಾಡಿದ ಇಂಗ್ಲಿಷ್ ಭಾಷಣದ ಕನ್ನಡ ರೂಪ. ಅನು: ಜಶವಂತ್ ಜಾಧವ್.