ನಮ್ಮ ದೇಶದ ಎಲ್ಲ ಭಾಷೆಗಳ ಇತಿಹಾಸವೂ ಒಂದೇ ರೀತಿಯದಲ್ಲ. ನಮ್ಮಲ್ಲಿ ತಮಿಳು-ಸಂಸ್ಕೃತದಂಥ ತೀರ ಪ್ರಾಚೀನ ಭಾಷೆಗಳಿದ್ದರೆ ಹಿಂದಿಯಂಥ ನೂತನವಾದ ಭಾಷೆಯೂ ಇದೆ. ನಮ್ಮ ಭಕ್ತಿಯುಗಕ್ಕಿಂತ ಮೊದಲು ಹಲವಾರು ಭಾಷೆಗಳು ಹುಟ್ಟಿಕೊಂಡು ಸಂಸ್ಕೃತದ ಸರ್ವಾಧಿಕಾರವನ್ನು ಎದುರಿಸಿದವು. ತುಳು, ಕೊಂಕಣಿಯಂಥ ಲಿಪಿಯಿಲ್ಲದ ಭಾಷೆಗಳು ಬೆಳವಣಿಗೆಗೆ ಕಾಯುತ್ತಿವೆ. ಒಂದೊಂದು ಭಾಷೆಯ ಇತಿಹಾಸವು ಅನನ್ಯವಾಗಿರುವುದರಿಂದ ಅವುಗಳ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರ ಮಾಡಬೇಕಾಗುತ್ತದೆ. ಆದರೆ ಯಾವುದೇ ಭಾಷೆಯಿರಲಿ ಅದರ ಬೆಳವಣಿಗೆಗೆ ಕೆಲವು ನಿಯಮಗಳಿವೆ. ಭಾಷೆಗೂ ಮನುಷ್ಯನ ಇತಿಹಾಸಕ್ಕೂ ನಿಕಟವಾದ ಸಂಬಂಧವಿರುವುದರಿಂದ ಭಾಷೆಯ ಬೆಳವಣಿಗೆಯಲ್ಲಿ ಈ ಇತಿಹಾಸದ ಪಾಲು ಎಷ್ಟು ಎಂಬುದನ್ನು ವಿಚಾರ ಮಾಡಬೇಕಾಗುತ್ತದೆ.

ಭಾಷೆಯ ಸ್ವರೂಪ ಇತಿಹಾಸದಂತೆಯೇ ಜಟಿಲವಾದದ್ದು, ಮನುಷ್ಯ ಇತಿಹಾಸವನ್ನು ನಿರ್ಮಿಸುತ್ತಾನೆ. ಹಾಗೇ ನಿರ್ಮಿತವಾದ ಇತಿಹಾಸ ಅವನನ್ನು ಪುನರ್ ಸೃಷ್ಟಿಸುತ್ತದೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಇಲ್ಲ. ಭಾಷೆಯ ಸ್ವರೂಪವೂ ಹೆಚ್ಚು ಕಡಿಮೆ ಇದೇ ಆಗಿದೆ. ಭಾಷೆಯೆಂದರೆ ಸುತ್ತಲಿನ ಜಗತ್ತನ್ನು ತಿಳಿದುಕೊಳ್ಳಲು ಮನುಷ್ಯ ನಿರ್ಮಿಸಿಕೊಂಡ ಒಂದು ಸಾಧನ. ಆದರೆ ಈ ಸಾಧನದಿಂದ ದೊರೆತ ತಿಳುವಳಿಕೆ ಭಾಷೆಯಲ್ಲಿಯೇ ನಿಹಿತವಾಗಿರುವುದು ಅನುಕೂಲವೂ ಹೌದು, ಸಮಸ್ಯೆಯೂ ಹೌದು. ನಮಗೆ ತಿಳುವಳಿಕೆ ಬರುವುದು ಭಾಷೆಯ ಮೂಲಕವಾಗಿ, ಅಲ್ಲದೇ ತಿಳುವಳಿಕೆ ಭಾಷೆಯ ರೂಪದಲ್ಲಿಯೇ ಬರಬೇಕು. ಮನುಷ್ಯ ಬೆಳೆಯದೇ ಭಾಷೆ ಬೆಳೆಯುವುದಿಲ್ಲ. ಭಾಷೆ ಬೆಳೆಯದೇ ಮನುಷ್ಯನೂ ಬೆಳೆಯುವುದಿಲ್ಲ. ಈ ಪರಸ್ಪರ ಅವಲಂಬನವನ್ನು ನಾವು ಗಂಭೀರವಾಗಿ ವಿಚಾರ ಮಾಡಬೇಕಾಗಿದೆ.

ಭಾಷೆಯ ಎರಡು ಮುಖ್ಯವಾದ ಕಾರ್ಯಗಳನ್ನು ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಂವಹನ (communication) ಮತ್ತು ಅಭಿವ್ಯಕ್ತಿ (expression) ಇವೆರಡೂ ಭಾಷೆಯ ಮುಖ್ಯ ಕಾರ್ಯಗಳೆಂದು ಗುರುತಿಸಿದ್ದೇವೆ. ಮನುಷ್ಯ ಮನುಷ್ಯರಲ್ಲಿ ಪರಸ್ಪರ ತಿಳುವಳಿಕೆ, ಪರಿಚಯ, ಭಾವನೆಗಳ ವಿನಿಮಯ ಇವೆಲ್ಲ ಸಂವಹನದ ಮೂಲಕ ನಡೆಯುವಂಥವು. ಸಂವಹನ ಕಾರ್ಯದಲ್ಲಿ ಸಂದೇಶ ಮುಖ್ಯವಾಗಿ ಭಾಷೆ ಹಿಂದುಳಿಯುತ್ತದೆ. ‘ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ನಿಮ್ಮಲ್ಲಿ ಬಂದು ಮುಟ್ಟುತ್ತೇವೆ’. ಈ ವಾಕ್ಯ ಒಂದು ಸಂದೇಶವನ್ನು ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ತಲುಪಿಸಬೇಕಾಗುತ್ತದೆ. ಈ ಸಂದೇಶ ಸರಿಯಾರಿಬೇಕಾದದ್ದು ಮುಖ್ಯವೇ ಹೊರತು, ವಾಕ್ಯದ ಸೌಂದರ್ಯವಲ್ಲ. ಸೌಂದರ್ಯ ಒಮ್ಮೊಮ್ಮೆ ಸಂದೇಶದ ಅರ್ಥವ್ಯಕ್ತಿಗೆ ಕಾಲು ತೊಡಕಾಗಬಹುದು. ಒಮ್ಮೆ ಸಂದೇಶ ಅರ್ಥವಾದ ಮೇಲೆ ಆ ವಾಕ್ಯ ಸತ್ತು ಹೋಗುತ್ತದೆ. ಆದರೆ ಅಭಿವ್ಯಕ್ತಿಯಲ್ಲಿ ಮಾತ್ರ ವಾಕ್ಯದ ಸೌಂದರ್ಯವೇ ಮುಖ್ಯವಾಗುತ್ತದೆ. ಅಭಿವ್ಯಕ್ತಿ ಸಮರ್ಥವಾಗಿದ್ದರೆ ಅದರ ತಿರುಳು ಬಹು ಕಾಲ ಉಳಿಯಬಲ್ಲುದಾಗಿದೆ. ಕಾವ್ಯ ಪಂಕ್ತಿಗಳಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳುವುದು ಈ ಅಭಿವ್ಯಕ್ತಿಯ ಸಲುವಾಗಿಯೇ. “ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”. ಪಂಪ ಬನವಾಸಿಯನ್ನು ಪ್ರೀತಿಯಿಂದ ನೆನೆದುಕೊಂಡ ಸಾವಿರ ವರ್ಷಗಳ ಮೇಲೆ ಕೂಡ ಈ ಸಾಲು ನೆನಪಿರಬೇಕಾದರೆ ಅದು ಅಭಿವ್ಯಕ್ತಿಯ ಸೌಂದರ್ಯದಿಂದಾಗಿ ಮಾತ್ರ ಸಾಧ್ಯ. ಅಭಿವ್ಯಕ್ತಿ ಅನೇಕ ಅರ್ಥಗಳನ್ನು ಹುಟ್ಟಿಸಬಲ್ಲುದು.

ಸಂವಹನ ಮತ್ತು ಅಭಿವ್ಯಕ್ತಿ ಇವುಗಳ ನಡುವಿನ ವ್ಯತ್ಯಾಸದಿಂದಾಗಿ ನಮ್ಮಲ್ಲಿ ಅನೇಕ ಭಾಷಾ ಸಿದ್ದಾಂತಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಶಾಸ್ತ್ರಕ್ಕೆ ಸಂವಹನ ಮುಖ್ಯವಾಗಿದ್ದರೆ ಕಾವ್ಯಕ್ಕೆ ಅಭಿವ್ಯಕ್ತಿ ಮುಖ್ಯವಾದದ್ದು ಎಂಬ ಸಿದ್ದಾಂತ ಅವುಗಳಲ್ಲೊಂದಾಗಿದೆ. ಪ್ರಾರಂಭಿಕ ಅವಸ್ಥೆಯಲ್ಲಿ ಈ ಸಿದ್ಧಾಂತದಲ್ಲಿ ಅಪಾಯವೇನಿರುವುದಿಲ್ಲ. ಆದರೆ ಇದೇ ಸಿದ್ದಾಂತವನ್ನು ಬೆನ್ನಟ್ಟಿ ಹೋದರೆ, ಆಮೇಲೆ ತಪ್ಪಿನ ಅರಿವಾಗಿ, ತಿರುಗಿ ಬದಲಾಗದೆ ತೊಳಲಾಡಬೇಕಾಗುತ್ತದೆ. ಸಂವಹನದಲ್ಲಿ ಅಭಿವ್ಯಕ್ತಿಯ ತತ್ವ, ಅಭಿವ್ಯಕ್ತಿಯಲ್ಲಿ ಸಂವಹನದ ಅಂಶ ಇದ್ದೇ ಇರುತ್ತದೆ. ಸಂವಹನದಲ್ಲಿ ಸಂದೇಶ ಸರಿಯಾಗಿ ಅರ್ಥವಾಗದಿದ್ದರೆ ಅಭಿವ್ಯಕ್ತಿಯಲ್ಲಿ ಏನೋ ತಪ್ಪಿರಬೇಕು ಎಂಬ ಸಂಗತಿ ನಮಗೆ ಅರಿವಾಗುವುದಿಲ್ಲ. ಅಭಿವ್ಯಕ್ತಿ ಮರೆತು ಹೋಗುವಂಥಾದರೆ ಅದು ಏನೂ ಹೇಳುವುದಿಲ್ಲ ಎಂಬ ಕಾರಣಕ್ಕಾಗಿಯೇ ಇರಬೇಕು. ಸಂವಹನ ಮತ್ತು ಅಭಿವ್ಯಕ್ತಿಗಳ ರಾಜಕೀಯ ನಮ್ಮನ್ನು ತಪ್ಪುದಾರಿಗೆ ಎಳೆಯಬಲ್ಲುದು. ಸಂವಹನ ಮತ್ತು ಅಭಿವ್ಯಕ್ತಿಗಳೆರಡೂ ಭಾಷೆಯ ಮುಖ್ಯ ಕಾರ್ಯಗಳಾಗಿರುವುದರಿಂದ ಇವೆರಡಲ್ಲಿಯ ಸಮತೂಕ ಸಂಸ್ಕೃತಿಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.

ಭಾಷೆಯ ಬೆಳವಣಿಗೆ ಸಂವಹನ ಮತ್ತು ಅಭಿವ್ಯಕ್ತಿಗಳ ಮೂಲಕವಾಗಿ ನಿರಂತರವಾಗಿ ಆಗುತ್ತಲೇ ಇರುತ್ತದೆ. ಕನ್ನಡದ ಉದಾಹರಣೆಯನ್ನೇ ಹೇಳುವುದಾದರೆ ಒಂದೂವರೆ ಸಾವಿರ ವರ್ಷಗಳಿಂದ ಈ ಬೆಳವಣಿಗೆಯ ದಾಖಲೆ ನಮ್ಮ ಶಾಸನಗಳಲ್ಲಿ, ಸಾಹಿತ್ಯದಲ್ಲಿ, ಶಾಸ್ತ್ರಗ್ರಂಥಗಳಲ್ಲಿ ದೊರೆಯುತ್ತದೆ. ಕನ್ನಡದ ಉತ್ಕೃಷ್ಟವಾದ ಉಪಯೋಗ ಶಿವಶರಣರ ವಚನಗಳಲ್ಲಿ ನಮಗೆ ಕಾಣುತ್ತದೆ. ಅತ್ಯಂತ ಗಹನವಾದ ವಿಚಾರಗಳನ್ನು, ದುರ್ಲಭವಾದ ಅನುಭವವನ್ನು ನಮ್ಮ ವಚನಕಾರರು ಸರಳವಾಗಿಯೇ ನಿರೂಪಿಸಿದ್ದಾರೆ. ಕನ್ನಡವು ಸಂಸ್ಕೃತ ಭಾಷೆಗೆ ಸರಿದೊರೆಯಾಗಿ ವಚನಕಾರರವರೆಗೆ ಬೆಳೆದು ಬಂದು, ಪ್ರೌಢಿಮೆಯನ್ನು ಪಡೆದು ಮತ್ತೇ ವಚನಕಾರರ ಮೂಲಕ ಹೊಸ ದಿಕ್ಕನ್ನು ಪಡೆಯಿತು. “ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ, ಮಾತಿನ ಮೊದಲ ಬಲ್ಲವರನೆನಗೊಮ್ಮೆ ತೋರಾ ಗುಹೇಶ್ವರಾ”. ಇದಕ್ಕೆ ಪ್ರತಿಯಾಗುವಂಥ ಹೇಳಿಕೆ ಸಂಸ್ಕೃತದಲ್ಲಿಯೂ ಇಲ್ಲವೆಂದರೆ ಕನ್ನಡ ಭಾಷೆಯ ಅಭಿವ್ಯಕ್ತಿಯ ಮಟ್ಟ ಯಾವುದೆಂಬುದು ಗೊತ್ತಾಗುತ್ತದೆ. ಮನಸ್ಸು, ಪಂಚೇಂದ್ರಿಯಗಳು ಮತ್ತು ಮಾತು ಇವು ಮೂರೂ ಕೂಡಿಕೊಂಡು ನಮ್ಮ ಅಭಿವ್ಯಕ್ತಿಯನ್ನು ಹುಟ್ಟಿಸುತ್ತ, ತಿಳುವಳಿಕೆಯ ಶಾಸ್ತ್ರವನ್ನು ನಿರ್ಮಿಸುತ್ತವೆ. ಅಲ್ಲಮನ ವಚನ ಆ ಶಾಸ್ತ್ರವನ್ನು ದಾಟಿ ತೀರಾ ಹೊಸ ಅನುಭವದಾಚೆಗೆ ನೋಡುತ್ತಿದೆ. ಇಂದ್ರಿಯಗಳು, ಮನುಸ್ಸು ಮತ್ತು ಮಾತು ಲೋಕದ ಅನುಭವವನ್ನು ಮಾತ್ರ ಪ್ರಕಟಿಸಿದರೆ ಅಲ್ಲಮನ ಮನಸ್ಸು ಮತ್ತು ಮಾತು ಇವುಗಳಿಗೆ ಅತೀತವಾದದ್ದನ್ನು ಹಿಡಿಯಲು ಪ್ರಯತ್ನಿಸುತ್ತಿದೆ. ಅಂಥ ಅನುಭವ ಮತ್ತು ತಿಳುವಳಿಕೆ ಯಾವ ಅಭಿವ್ಯಕ್ತಿಯನ್ನು ಪಡೆಯಬಹುದೆಂಬುದನ್ನು ಅಲ್ಲಮನ ವಚನಗಳಿಂದಲೇ ತಿಳಿಯಬಹುದು. ಅಲ್ಲಮನ ತಿಳುವಳಿಕೆ ಸಾಮಾನ್ಯರ ತಿಳುವಳಿಕೆಯಾಗಬೇಕಾಗಿಲ್ಲ. ಅಲ್ಲಮನಂಥವರು ಮುಂದೆಯೂ ಹುಟ್ಟಲಿಲ್ಲ. ಆದರೆ ಅವನ ಭಾಷೆ ಇಂದಿಗೂ ನಮ್ಮ ಭಾಷೆ. ಈ ಭಾಷೆಯ ಸಂಭಾವ್ಯತೆಗಳನ್ನು ಅವನು ಹಿಗ್ಗಿಸಿದ್ದಾನೆ. ಈ ಸಂಭಾವ್ಯತೆಗಳಿಂದ ಏನನ್ನು ಪಡೆಯಬಹುದೆಂಬುದು ಮುಂದಿನವರ ಜಬಾಬ್ದಾರಿಯಾಗಿದೆ. ಇತಿಹಾಸದಂತೆ ಭಾಷೆ ಕೂಡಾ ಸಾಮುದಾಯಿಕ ತಿಳುವಳಿಕೆ ಮತ್ತು ವೈಯುಕ್ತಿಕ ಪ್ರಜ್ಞೆ ಇವುಗಳ ಸಂಘರ್ಷದಿಂದ ದೀಪ್ತವಾಗುತ್ತದೆ, ಹೊತ್ತಿ ಉರಿಯುತ್ತದೆ.

ಅಲ್ಲಮನದು ಉಳಿದ ಶಿವಶರಣರ ವಚನಗಳಂತೆಯೇ ಬಾಯಿಮಾತು. ‘ವಚನ’ ಶಬ್ದದ ಅರ್ಥವೆಂದರೆ ಬಾಯಿ ಮಾತು. ಕನ್ನಡ ಸಾಹಿತ್ಯದ ಪ್ರಾರಂಭದಲ್ಲಿ ಜೈನ ಕವಿಗಳು ಬರವಣಿಗೆಗೆ ಪ್ರಾಮುಖ್ಯವನ್ನು ಕೊಟ್ಟರು. ಬರವಣಿಗೆಯ ನಿಯಮಗಳನ್ನು ಅನುಸರಿಸಿ ಸಾಹಿತ್ಯ ಬೆಳೆದು ಬಂದಿತು. ಬರವಣಿಗೆಯ ಪರಾಕಾಷ್ಟೆ ಎಂದರೆ ನಮ್ಮ ಶಾಸನ ಸಾಹಿತ್ಯ. ಶಾಸನದ ಉದ್ದೇಶವೆಂದರೆ ಶಾಸನಗಳಲ್ಲಿ ಬರೆದದ್ದು ಬಹುಕಾಲ ಉಳಿಯುವಂತಾಗಬೇಕು. ಸಾಹಿತ್ಯವೂ ಈ ವಿಷಯದಲ್ಲಿ ಶಾಸನಗಳನ್ನು ಅನುಸರಿಸಿತು. ಬರವಣಿಗೆಯ ಈ ಅಹಂಕಾರವನ್ನು ವಚನಕಾರರು ಭೇದಿಸಿದರು. ಬರವಣಿಗೆಯ ಕೃತಕತೆಯನ್ನು ಬಾಯಿಮಾತಿನ ಜೀವಂತಿಕೆಯಿಂದ ಬದುಕಿಸಿದರು. ವಚನಕಾರರ ಮುಂದಿನ ಯುಗದಲ್ಲಿ ಸಾಹಿತ್ಯ ಬಾಯಿಮಾತು ಮತ್ತು ಬರವಣಿಗೆಗಳ ನಡುವೆ ಸಮತೂಕವನ್ನು ಸಾಧಿಸಿತು. ಜೀವವೆಂದರೆ ಹುಟ್ಟ ಸಾವುಗಳ ನಡುವಿನ ಸಮತೂಕವಾಗಿರುವಂತೆ ಸಾಹಿತ್ಯ ಬಾಯಿಮಾತು ಮತ್ತು ಬರವಣಿಗೆಗಳ ನಡುವಿನ ಒಂದು ಸಮಸ್ಥಿತಿಯಾಯಿತು.

ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ನಮ್ಮಲ್ಲಿ ಇನ್ನೊಂದು ಬೆಳವಣಿಗೆ ಪ್ರಾರಂಭವಾಯಿತು. ಈ ಬೆಳವಣಿಗೆ ಪ್ರಾರಂಭವಾದದ್ದು ಗದ್ಯದ ಬೆಳವಣಿಗೆಯಿಂದ. ಪ್ರಾಚೀನ ಸಾಹಿತ್ಯದಲ್ಲಿ ಗದ್ದವಿರಲಿಲ್ಲವೆಂದಲ್ಲ. ಆದರೆ ಅದು ಕಾವ್ಯದ ಒಂದು ಪ್ರಕಾರವಾಗಿತ್ತು. ಆಗ ಗದ್ಯಪದ್ಯಗಳೆರಡೂ ಕಾವ್ಯ ಮತ್ತು ಶಾಸ್ತ್ರಗಳ ಮಾಧ್ಯಮವಾಗಿದ್ದವು. ದುರ್ಗಸಿಂಹನ ‘ಪಂಚತಂತ್ರ’ ಗದ್ಯದಲ್ಲಿದ್ದರೆ, ‘ಶಬ್ದಮಣಿ ದರ್ಪಣ’ ಪದ್ಯದಲ್ಲಿದೆ. ಆದರೆ ಹೊಸ ಗದ್ಯ ಈ ರೀತಿಯದಲ್ಲ. ಪಾಶ್ಚಾತ್ಯ ಸಾಹಿತ್ಯದ ಸಂಪರ್ಕದಿಂದ ಬೆಳೆದು ಬಂದಿರುವ ಗದ್ಯ ಪದ್ಯದಿಂದ ಸಂಪೂರ್ಣವಾಗಿ ಭಿನ್ನವಾದದು. ಈ ವ್ಯತ್ಯಾಸ ಆಂತರಿಕವಾದದ್ದು, ಸೂಕ್ಷ್ಮವಾದದ್ದು. ಕಾವ್ಯ, ಭಾಷೆಯನ್ನು ಉಪಯೋಗಿಸುವ ರೀತಿಗಿಂತ ಬೇರೆಯಾಗಿ ಗದ್ಯ ಭಾಷೆಯನ್ನು ಉಪಯೋಗಿಸುತ್ತದೆ. ಕಾವ್ಯದ ಭಾಷೆ ಇಮ್ಮುಖವಾಗುದದ್ದು. ಅದು ಜಗತ್ತಿನ ತಿಳುವಳಿಕೆಯನ್ನು ಒಂದು ದಿಕ್ಕಿನಿಂದ ಪ್ರಕಟಿಸುತ್ತಿದ್ದರೆ ಇನ್ನೊಂದು ದಿಕ್ಕಿನಿಂದ ಕವಿಯ ಅಂತರಂಗದ ತಿಳುವಳಿಕೆಯನ್ನು ಪ್ರಕಟಿಸುತ್ತದೆ. ಕುವೆಂಪುರವರ ಒಂದು ಕವಿತೆ ‘ತೇನೆ ಹಕ್ಕಿ’ ಯನ್ನು ನೋಡೋಣ. ಈ ಕವಿತೆಯ ಕೇಂದ್ರದಲ್ಲಿರುವ ವಸ್ತುವೆಂದರೆ ತೇನೆ ಹಕ್ಕಿ. ಮಲೆನಾಡಿನ ಒಂದು ಹಕ್ಕಿ. ಅದು ಬೆಳದಿಂಗಳಲ್ಲಿ ಹಾರಾಡುತ್ತ ಹಾಡುವ ಹಕ್ಕಿ. ಅದು ಹಗಲಿನಲ್ಲಿ ಹಾರಾಡುವುದಿಲ್ಲ. ಆದರೆ ತೇನೆ ಹಕ್ಕಿಯ ಬಗ್ಗೆ ಇರುವ ಈ ಎಲ್ಲ ಮಾಹಿತಿಯನ್ನು ಕವಿತೆ ಉಪಯೋಗಿಸಿಕೊಂಡರೂ ಕವಿತೆಯ ಉದ್ದೇಶ ಈ ಮಾಹಿತಿಯನ್ನು ಪ್ರಕಟಿಸುವುದಲ್ಲ. ಅದು ಮತ್ತೇನನ್ನೋ ಹೇಳಲು ತೇನೆ ಹಕ್ಕಿಯನ್ನು ಉಪಯೋಗಿಸುತ್ತದೆ. ತೇನೆ ಹಕ್ಕಿಯ ಜೊತೆಗೆ ಕವಿಯ ಆತ್ಮೀಯ ಸಂಬಂಧವಿದೆ. ‘ಹಗಲಿನಲ್ಲಿ ನೆಲವ ಸೇರಿ! ಇರುಳಿನಲ್ಲಿ ಬಾನಿಗೆ ಹಾರಿ’ ! ಹಾಡುತ್ತಿರುವ ಈ ಹಕ್ಕಿಯ ವ್ಯಕ್ತಿತ್ವದಿಂದ ಕವಿ ಆಕರ್ಷಿತನಾಗಿದ್ದಾನೆ. ಈ ಆತ್ಮೀಯ ಸಂಬಂಧವನ್ನು ಉಪಯೋಗಿಸಿಕೊಂಡು ಒಂದು ರೂಪಕವನ್ನು ಕವಿ ನಿರ್ಮಿಸಿಕೊಳ್ಳುತ್ತಾನೆ. ರೂಪಕದ ಮೂಲಕವಾಗಿ ಕವಿ ಹೇಳಬೇಕೆನಿಸಿದ್ದನ್ನು ಹೇಳುತ್ತಾನೆ.

ಈ ರೂಪಕದ ಒಂದು ಅರ್ಥವನ್ನು ಕವಿತೆ ಒಡೆದು ಹೇಳುತ್ತದೇನೋ ನಿಜ. ಆದರೆ ಹಾಗೆ ಹೇಳಬೇಕೆಂದೇನೂ ಇಲ್ಲ. ಕವಿತೆ ಹಕ್ಕಿಯ ರೂಪಕವನ್ನು ಉಪಯೋಗಿಸಿ ಸುಮ್ಮನೆ ಅರ್ಥ ಧ್ವನಿತವಾಗುವಂತೆ ಮಾಡಬಹುದು. ಅದನ್ನು ತಿಳಿದುಕೊಳ್ಳುವ ಜವಾಬ್ದಾರಿ ಓದುಗನದು. ಅಲ್ಲದೇ ಈ ರೂಪಕ ಕವಿತೆ ಉದ್ದೇಶಿಸಿರುವ ಅರ್ಥವೊಂದನ್ನೇ ಸೂಚಿಸುವುದಿಲ್ಲ. ಅದರ ಅರ್ಥಗಳು ಬೇರೆ ಬೇರೆ ಆಗಬಹುದು. ಆದ್ದರಿಂದ ಕವಿತೆಯ ಅರ್ಥ ವಿವರಣೆ ನಿರಂತರವಾಗಿ ನಡೆಯಬಹುದು. ಆದರೂ ಕವಿತೆಯ ಅರ್ಥ ಕವಿತೆಯಲ್ಲಿ ನಿಹಿತವಾಗಿಯೇ ಇರುತ್ತದೆ.  ಒಂದು ದೃಷ್ಟಿಯಿಂದ ಕವಿತೆಗೆ ಸಂವಹನದ ಆಸೆ ಇದ್ದರೂ ಸಂವಹನ ಪೂರ್ಣವಾಗುವುದಿಲ್ಲ.

ಗದ್ಯದ ಸ್ವಭಾವ ಕಾವ್ಯಕ್ಕಿಂತ ಭಿನ್ನವಾದದ್ದು. ಗದ್ಯಕ್ಕೆ ಸಂವಹನ ಅನಿವಾರ್ಯವಾಗಿದೆ. ಗದ್ಯದ ಸ್ವಭಾವದಲ್ಲಿಯ ವಿಶೇಷ ಗುಣವೆಂದರೆ ಅದರ ಅರ್ಥವ್ಯಾಪ್ತಿ. ಹೇಳಬೇಕಾದದ್ದನ್ನು ಖಚಿತವಾಗಿ ಇನ್ನೊಬ್ಬರಿಗೆ ತಿಳಿಯುವಂತೆ ಹೇಳುವುದೇ ಅದರ ಶಕ್ತಿ. ಈ ಶಕ್ತಿಯನ್ನು ಉಪಯೋಗಿಸಿಕೊಂಡು ಗದ್ಯ ತನ್ನ ಸಾಹಿತ್ಯವನ್ನು ನಿರ್ಮಿಸುತ್ತದೆ. ಇನ್ನೊಂದು ಮಾತನ್ನೂ ಇಲ್ಲಿ ನೆನಪಿನಲ್ಲಿಡಬಹುದು. ಗದ್ಯ ಪ್ರಕಟಿಸುವ ಅರ್ಥ ಉಪಯುಕ್ತವಾದ ಅರ್ಥ. ಈ ಅರ್ಥದ ಉಪಯೋಗವನ್ನು ಓದುಗ ಮಾಡಿಕೊಳ್ಳುತ್ತಾನೆ. ಇದರಿಂದಾಗಿ ಗದ್ಯದ ಸೀಮೆ ವಿಸ್ತಾರಗೊಳ್ಳುತ್ತದೆ. ಗದ್ಯ ನಿರ್ಮಿಸುವ ಸಾಹಿತ್ಯ ಲಲಿತ ಸಾಹಿತ್ಯವೇ ಆಗಬೇಕೆಂಬುದಿಲ್ಲ. ಅದು ಮಾನವಶಾಸ್ತ್ರಗಳಿಗೂ ಹಬ್ಬಬಹುದು, ಹಬ್ಬಬೇಕು. ತಿಳುವಳಿಕೆಯ ಸೀಮೆ ಕೂಡ ಗದ್ಯದ ಸೀಮೆಯಲ್ಲಿಯೇ ವಿಸ್ತಾರಗೊಳ್ಳುತ್ತದೆ.

ಸೃಜನಶೀಲ ಲೇಖಕರೇ ಗದ್ಯವನ್ನು ನಿರ್ಮಿಸಿದ್ದಾರೆಂಬ ಮಾತನ್ನು ಮರೆಯುವಂತಿಲ್ಲ ನಿಜ. ಇಂದು ಗದ್ಯದಲ್ಲಿ ಬೆಳೆದು ಬಂದಿರುವ ಲಲಿತ ಸಾಹಿತ್ಯ ಅಪಾರವಾಗಿದೆ. ಸಣ್ಣ ಕಥೆ, ಕಾದಂಬರಿ ಮತ್ತು ನಾಟಕಗಳು ಇಂದು ಉಪಯೋಗಿಸುವುದು ಗದ್ಯವನ್ನೇ. ಸೃಜನಶೀಲವಾದ ಸಾಹಿತ್ಯ ಗದ್ಯವನ್ನು ಉಪಯೋಗಿಸುವ ಉದ್ದೇಶ ಮಾತ್ರ ಬೇರೆಯಾಗಿರುತ್ತದೆ. ಸೃಜನಶೀಲ ಲೇಖಕ ಇತಿಹಾಸ ಸಂಪರ್ಕದಿಂದ ಶಬ್ದಾರ್ಥಗಳ ಹೊಸ ವ್ಯವಸ್ಥೆಯನ್ನು ತಾನು ಸ್ವತಃ ತನ್ನ ಸಂಸ್ಕಾರದಿಂದ ಆರ್ಜಿಸಿಕೊಂಡ ಆ ವ್ಯವಸ್ಥೆಯನ್ನು ಇತಿಹಾಸದಲ್ಲಿ ಬಿಟ್ಟು ಬಿಡುತ್ತಾನೆ. ಇಂದಿನ ಲೇಖಕನಿಗೆ ಇತಿಹಾಸದ ಪ್ರಜ್ಞೆ ಅನಿವಾರ್ಯವಾಗಿರುತ್ತದೆ. ದಿನನಿತ್ಯದ ಇತಿಹಾಸ ಪತ್ರಿಕೆಗಳ ಮೂಲಕವಾಗಿ ಶಬ್ದಾರ್ಥಗಳಲ್ಲಿ ಒಡಮೂಡುತ್ತದೆ. ಲೇಖಕನಾದವನು ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಇತಿಹಾಸಕ್ಕೆ ಅವನು ತನ್ನ ಪ್ರತಿಕ್ರಿಯೆಯನ್ನು ತನ್ನ ಕೃತಿಯಲ್ಲಿ ತೋರಿಸುತ್ತಾನೆ. ಇತಿಹಾಸದ ಜೊತೆಗಿನ ಅವನ ಪ್ರತಿಕ್ರಿಯೆ ಮತ್ತು ಜಗಳಗಳೆಲ್ಲ ಅವನ ಗದ್ಯದ ಮೂಲಕವಾಗಿ ಪ್ರಕಟವಾಗುತ್ತದೆ. ಒಂದು ಕಾದಂಬರಿಯಾಗಲಿ, ಕಥೆಯಾಗಲಿ ಇಂದು ಹುಟ್ಟುವುದೇ ಇತಿಹಾಸದಲ್ಲಿ. ಅದರ ಸಂಬಂಧ ಕೂಡ ಇತಿಹಾಸದೊಡನೆಯೆ. ಸಾಹಿತ್ಯದಲ್ಲಿ ವಾಸ್ತವವಾದವೆನ್ನವುದು ಕೇವಲ ಒಂದು ಅಭಿವ್ಯಕ್ತಿಯ ವಿಧಾನವಲ್ಲ. ಅದು ಇತಿಹಾಸವನ್ನು ನೋಡುವ ಕಣ್ಣು. (ಈ ಮಾತನ್ನು ಬಹಳಷ್ಟು ವಾಸ್ತವವಾದೀ ಲೇಖಕರು ಅರಿತುಕೊಂಡಿಲ್ಲವೆನ್ನುವ ಮಾತು ಬೇರೆ). ಇತಿಹಾಸದ ಸಂಪರ್ಕದಿಂದ ಪರಿವರ್ತನೆಗೊಂಡ ಶಬ್ದಾರ್ಥಗಳ ವ್ಯವಸ್ಥೆ ಹೊಸ ಮೌಲ್ಯವಸ್ಥೆಯನ್ನು ನಿರ್ಮಿಸಲು ಯತ್ನ ಮಾಡುತ್ತಿದೆ. ಒಳಿತು ಕೆಡಕುಗಳು, ಸರಿ ತಪ್ಪುಗಳ, ವಿವೇಕ ಅವಿವೇಕಗಳ ನಿರ್ಣಯವಾಗುವುದು ಈ ವ್ಯವಸ್ಥೆಯಿಂದಾಗಿ. ಹೊಸ ಮಾನವತಾವಾದಕ್ಕೂ ಸಾಹಿತ್ಯದಲ್ಲಿಯ ವಾಸ್ತವವಾದಕ್ಕೂ ನಿಕಟವಾದ ಸಂಬಂಧವಿದೆಯೆಂಬ ಮಾತನ್ನು ಯಾರು ಅಲ್ಲಗಳೆಯಲಾರರು.

ಇತಿಹಾಸ ಮಾನವತಾವಾದಕ್ಕೇ ನಿಲ್ಲುವುದಿಲ್ಲ. ಇತಿಹಾಸ ಅನುವಾಗಲು ಗತಿಶೀಲವಾಗಿರುತ್ತದೆ. ಐತಿಹಾಸಿಕ ಸಿದ್ದಾಂತಗಳನ್ನು ಮನುಷ್ಯ ಇತಿಹಾಸವೇ ಸುಳ್ಳು ಮಾಡುತ್ತದೆ. ಅದೇನೇ ಇದ್ದರೂ ಭಾಷೆ ಮತ್ತು ಇತಿಹಾಸಗಳ ಸಂಪರ್ಕದಿಂದ ಭಾಷೆಯ ಬೆಳವಣಿಗೆ ಅಧಿಕವಾಗಿರುವುದು ಸುಳ್ಳಲ್ಲ. ಸಾಹಿತ್ಯದ ಏಕಮೇವ ಮಾಧ್ಯಮವಾಗಿರುವ ಭಾಷೆ ಇನ್ನು ಮುಂದೆ ಎಲ್ಲ ಶಾಸ್ತ್ರಗಳಿಗೂ ಮಾಧ್ಯಮವಾಗಬೇಕಾಗಿದೆ. ಒಂದು ಕಾಲಕ್ಕೆ ಸಂಸ್ಕೃತ, ಶಾಸ್ತ್ರದ ಮಾಧ್ಯಮವಾಗಿತ್ತು. ಆದರೆ ಶಾಸ್ತ್ರಚಿಂತನ ಭಾರತದ ಉಳಿದ ಭಾಷೆಗಳಲ್ಲಿಯ ಅರಿವೂ ಹೆಚ್ಚಾಗತೊಡಗಿದೆ. ಭಾಷೆಯ ಸ್ವಪ್ರಜ್ಞೆಯಿಂದಾಗಿ ಭಾಷೆಯ ಬೆಳವಣಿಗೆಗೆ ಹೊಸ ದಿಕ್ಕು ದೊರಕಿದಂತಾಗಿದೆ.  ಸಾಹಿತ್ಯವನ್ನು ಹೊರತುಪಡಿಸಿ ಭಾಷೆ ಬೇರೆ ಚಿಂತನೆಯ ಕ್ರಮಗಳನ್ನು ಕಲಿಯತೊಡಗಿದೆ. ಮಾನವಶಾಸ್ತ್ರ ಮತ್ತು ಭೌತಿಕ ಶಾಸ್ತ್ರಗಳು ಭಾಷೆಯಲ್ಲಿ ಮೈದಾಳಲು ಕಾಯುತ್ತಿವೆ. ಭಾಷಾಂತರದ ವ್ಯವಸ್ಥೆಯಿಂದಾಗಿ ಬೇರೆ ಭಾಷೆಗಳಲ್ಲಿಯ ತಿಳುವಳಿಕೆಯೆಲ್ಲ ನಮ್ಮ ಭಾಷೆಗಳಲ್ಲಿ ಬರತೊಡಗಿದೆ.

ಆದರೆ ಇಲ್ಲಿ ಒಂದು ಮಾತನ್ನು ಹೇಳಬಹುದು. ಭಾಷೆಗಳೂ ವ್ಯಕ್ತಿಗಳಂತೆ ತಮ್ಮ ವೈಶಿಷ್ಟ್ಯಗಳನ್ನು ಕಾಪಾಡಿಕೊಂಡು ಬರುತ್ತವೆ. ಎಲ್ಲ ಭಾಷೆಗಳೂ ಎಲ್ಲ ಚಿಂತನಕ್ರಮಗಳಿಗೆ ಒಗ್ಗುವುದಿಲ್ಲ. ನಮ್ಮ ದೇಶದ ಭಾಷೆಗಳ ಉದಾಹರಣೆಗಳನ್ನೇ ಇಲ್ಲಿ ನೋಡಬಹುದು. ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿ ಆತ್ಮಚರಿತ್ರೆ ಮತ್ತು ಜೀವನವೃತ್ತಾಂತಗಳು ಬಂದಿರುವಷ್ಟು ಕನ್ನಡದಲ್ಲಿ ಬಂದಿಲ್ಲ. ಭಾರತದ ಮೂರು ನಾಲ್ಕು ಭಾಷೆಗಳಲ್ಲಿ ಮಾತ್ರ ನಾಟಕ ಸಾಹಿತ್ಯ ಸಮೃದ್ಧವಾಗಿದೆ. ಎಲ್ಲ ಭಾಷೆಗಳಲ್ಲಿ ಕಾವ್ಯವಿದ್ದರೂ ಕಾವ್ಯ ಒಂದೇ ಬಗೆಯ ಶ್ರೇಷ್ಠತೆಯನ್ನು ಪಡೆದಿಲ್ಲ. ಪ್ರತಿಯೊಂದು ಭಾಷೆಗೂ ಕೆಲವು ಪರಿಮಿತಿಗಳಿವೆ. ಅವುಗಳ ಬೆಳವಣಿಗೆ ಈ ಪರಿಮಿತಿಗಳ ಚೌಕಟ್ಟಿನಲ್ಲಿಯೇ ಆಗಬೇಕಾದದ್ದು ಅನಿವಾರ್ಯವಾಗಿದೆ.

ಭಾಷೆಯ ಬೆಳವಣಿಗೆ ಎಂದರೆ ಒಂದು ದೇಶದ ಸಂಸ್ಕೃತಿಯ ಬೆಳವಣಿಗೆ. ಸ್ವಾತಂತ್ರ್ಯ ಬಂದ ಮೇಲೆ ನಮ್ಮ ದೇಶದಲ್ಲಿ ಸಂಸ್ಕೃತಿ ಹೊಸದಾಗಿ ರೂಪುಗೊಳ್ಳುತ್ತಲ್ಲಿದೆ. ಅದರ ರೂಪು ರೇಖೆಗಳು ಇನ್ನು ನಿರ್ಧಿಷ್ಟವಾಗಿ ಮೂಡಿ ಬಂದಿಲ್ಲ. ಆದರೆ ಈ ಸಂಸ್ಕೃತಿ ನಮ್ಮ ಭಾಷೆಗಳ ಬೆಳವಣಿಗೆಗೆ ಒಂದು ರಭಸವನ್ನು ತಂದುಕೊಟ್ಟಿದೆ, ಅದನ್ನು ನಿಲ್ಲಿಸುವುದು ಸಾಧ್ಯವಿಲ್ಲ.

* * *