ಪ್ರಾರಂಭದಿಂದಲೂ ಕನ್ನಡ ಕಾವ್ಯವು ಸಂಸ್ಕೃತದ ಪ್ರಾಚೀನ ಕಾವ್ಯದ ಲೌಕಿಕ ಕಾವ್ಯಮೀಮಾಂಸೆಯ ವಿರುದ್ಧವಾಗಿ ಬಂಡೇಳುತ್ತಲೇ ಬಂದಿದೆ. ಕನ್ನಡದ ಆದಿಕವಿ ಪಂಪನು ಮಾರ್ಗ ಮತ್ತು ದೇಸಿಗಳ ನಡುವಣ ಸಂಘರ್ಷವನ್ನು ಹೊಂದಾಣಿಕೆಗೊಳಿಸಲು ಪ್ರಯತ್ನಿಸಿದನು. ವಾಸ್ತವವಾಗಿ ಅದು ಸೌಂದರ್ಯಾನುಭವ ಮತ್ತು ಧಾರ್ಮಿಕಾನುಭವಗಳ ನಡುವಣ ಸಂಘರ್ಷ. ಪಂಪ ಮತ್ತು ಇತರೆ ಜೈನ ಕವಿಗಳ ಮುಖ್ಯ ಪ್ರಯತ್ನವು ಧಾರ್ಮಿಕಾನುಭವಕ್ಕೆ ಸೌಂಧರ್ಯಾಭಿವ್ಯಕ್ತಿಯನ್ನು ನೀಡುವುದಾಗಿತ್ತು. ಜನ್ನನ್ನು ಸವಾಲು ಹಾಕುವ ಧಾಟಿಯಲ್ಲಿ ತನ್ನ ಕಾವ್ಯವು “ಜಾರರ ಚೋರರ ಕತೆಯನ್ನು ಹೇಳುವುದಿಲ್ಲ” ಎಂದು ಘೋಷಿಸುತ್ತಾನೆ. ಈ ಹೇಳಿಕೆಯನ್ನು ನೀಡುವಾಗ ಬಹುಶಃ ಅವನ ಮನಸ್ಸಿನಲ್ಲಿ ದಂಡಿಯ ದಶಕುಮಾರ ಚರಿತಂ ಇದ್ದಿರಬಹುದು. ಮೊದಲ ಹಂತದ ಜೈನ ಕವಿಗಳು ಎರಡು ಬಗೆಯ ಮಹಾಕಾವ್ಯಗಳನ್ನು ರಚಿಸಿದರು, ಒಂದು ವೀರಕಾವ್ಯ, ಇನ್ನೊಂದು ಧಾರ್ಮಿಕ ಕಾವ್ಯ. ಅವರ ನಿರರ್ಗಳವಾದ ಪದ್ಯಗಳು ಬಹು ಬುದ್ಧಿವಂತಿಕೆಯಿಂದ ಸಾಹಸ ಪರಾಕ್ರಮಗಳ ಕಥನವನ್ನು ಒಳಗೊಂಡು ಕಾವ್ಯಾನುಭವಕ್ಕೆ ನೂತನವಾದೊಂದು ರುಚಿಯನ್ನು ಕೊಡಿಸುತ್ತದೆ.

ಕ್ರಿ.ಶ.೧೨ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಮತ್ತು ಅಕ್ಕಮಹಾದೇವಿ ಮೊದಲಾದ ವೀರಶೈವ ಶರಣರು ಪ್ರವರ್ತಿಸಿದ ಭಕ್ತಿ ಆಂದೋಲನಕ್ಕೆ ಮುಂಚೆ ಇದ್ದ ಕನ್ನಡ ಕಾವ್ಯದ ಕತೆ ಇದು. ಭಕ್ತಿ ಎನ್ನುವುದು ಭಗವಂತನನ್ನು ಕುರಿತು ಪ್ರೇಮ ಮಾತ್ರವೇ ಅಲ್ಲ, ಅದು ವ್ಯಕ್ತಿಯ ಅಸ್ತಿತ್ವವನ್ನು ಆಳುವ ತತ್ವವೇ ಆಗಿದೆ ಎಂದು ಬಸವಣ್ಣ ವಿವರಿಸಿದನು. ಭಗವಂತನ ದೃಷ್ಟಿಯಲ್ಲಿ ಬದುಕಿ ಮೃತಿಯನ್ನೈದುವ ‘ಶರಣ’ನು ತನ್ನ ಜೀವನವನ್ನು ಭಗವಂತನ ಸತ್ಯದ ಪರಮೋನ್ನತ ಸಾಕ್ಷಿಯಾಗಿಸುತ್ತಾನೆ. ಭಕ್ತಿಯನ್ನು ಹಿಡಿದ ಶರಣನು ಉದ್ದಕ್ಕೂ ಕಷ್ಟಗವನ್ನೇ ಅನುಭವಿಸಬೇಕಾಗುತ್ತದೆ. ಏಕೆಂದರೆ ಭಕ್ತಿಯು ಗರಗಸದ ಹಾಗೆ ಹೋಗುತ್ತಲೂ ಬರುತ್ತಲೂ ಕೊಯ್ಯುತ್ತದೆ (ಭಕ್ತಿಯ ಮಾಡಬಾರದು. ಗರಗಸದಂತೆ ಹೋಗುತ್ತ ಕೊಯ್ದದು, ಬರುತ್ತ ಕೊಯ್ವುದು) ಅಕ್ಕಮಹಾದೇವಿಗೆ ಭಕ್ತಿಯ ಪುರುಷ ಸಂಪರ್ಕದ ಯಾತನೆ-ಆನಂದಗಳೆರಡನ್ನೂ ಕೊಡುತ್ತದೆ. ಭಕ್ತ ಮತ್ತು ಭಗವಂತರ ನಡುವಿನ ಸಂಬಂಧವು ಒಬ್ಬ ಪ್ರೇಮಿ ಮತ್ತು ಪ್ರಿಯಕರನ ನಡುವಣ ಸಂಬಂಧ. ತನ್ನ ದೇವರ ದಿವ್ಯ ಸೌಂದರ್ಯವನ್ನೂ ಅವನ ಅಗಲಿಕೆಯಿಂದ ಆಗಿರುವ ಅಳಲನ್ನೂ ಕಾವ್ಯದ ಮಾತುಗಳಲ್ಲಿ ಅಕ್ಕ ಮಹಾದೇವಿ ವರ್ಣಿಸುತ್ತಾಳೆ. ಬಸವಣ್ಣ ಮತ್ತು ಅಕ್ಕಮಹಾದೇವಿಯರ ವಚನಗಳು ಉತ್ಕಟ ಭಾವ ಮತ್ತು ಸೌಂದರ್ಯದಿಂದ ಬೈಬಲಿನಲ್ಲಿ ಬರುವ ಡೇವಿಡನ ಹಾಡನ್ನು ನೆನಪಿಗೆ ತರುತ್ತವೆ.

ಒಂದು ವಚನದಲ್ಲಿ ಬಸವಣ್ಣ ಹೇಳುತ್ತಾನೆ, ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮ ದೇವ ಎಂದು. ಈ ಮಾತು ಭಕ್ತಿಯ ಪ್ರಶಂಸೆ ಮಾತ್ರವಲ್ಲ, ಅದು ವೇದಗಳ ಪ್ರಭುತ್ವವನ್ನು ನಿರಾಕರಿಸುತ್ತದೆ ಕೂಡ. ತತ್ವಶಾಸ್ತ್ರ ಮೀಮಾಂಸೆಯ ದಬ್ಬಾಳಿಕೆಯನ್ನು ಅದು ಒಪ್ಪುವುದಿಲ್ಲ. ಭಾರತದಲ್ಲಿ ಭಕ್ತಿ ಚಳುವಳಿಯು ಒಂದು ಜನತಾ ಆಂದೋಲನವಾಯಿತು. ದಬ್ಬಾಳಿಕೆ-ದೌರ್ಜನ್ಯಗಳಿಗೆ ಈಡಾಗಿದ್ದ ಜನರ ಚಳುವಳಿ ಆಯಿತು. ಅದು ಗಣ್ಯವರ್ಗದ ಅಧಿಕಾರವನ್ನು ಖಂಡಿಸಿ, ಭಗವಂತನೊಂದಿಗೆ ನೇರವಾಗಿ ಸಂಪರ್ಕ ಪಡೆಯುವುದನ್ನು ಹೇಳಿತು. ಆದರೆ ಇದರಲ್ಲಿ ಅಚ್ಚರಿಯ ಸಂಗತಿಯೆಂದರೆ, ಈ ಚಳುವಳಿಯಲ್ಲಿ ಭಾಗವಹಿಸಿದ್ದ ಸಂತರು ಹಿರಿಯ ಬುದ್ಧಿಜೀವಿಗಳು, ಜ್ಞಾನಿಗಳು. ಅವರು ದೈವಿಕ ಅನುಭವವನ್ನು ನೇರವಾಗಿ ಅನ್ವೇಷಿಸಿದರು. ಭಕ್ತನಿಗೆ ಸಾಮಾಜಿಕ ಅಥವಾ ರಾಜಕೀಯ ದಾಕ್ಷಿಣ್ಯಗಳಾವುವು ಇಲ್ಲ. ಅವನ ಸಮಸ್ತ ಅಸ್ತಿತ್ವವೂ ಸಂಪೂರ್ಣವಾಗಿ, ಭಗವಂತನ ಸೇವೆಗೆ ಮೀಸಲು. ಮೀರಾ ಒಬ್ಬ ರಾಣಿಯಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲಿಲ್ಲ ಎಂದು ನಮಗೆ ಗೊತ್ತು. ಅಕ್ಕಮಹಾದೇವಿ ಒಬ್ಬ ರಾಜನನ್ನು ಮದುವೆಯಾಗಲೂ ಒಪ್ಪಲಿಲ್ಲ. ಮುಖ್ಯವಾದ ವಿಷಯವೆಂದರೆ ಸಾಮಾಜಿಕ ಜೀವಿಯೇ ಅಲ್ಲದ ಭಗವಂತನಿಗೆ ತನ್ನನ್ನು ಅರ್ಪಿಸಿಕೊಳ್ಳುವುದು.

ರೂಪ ಮತ್ತು ವಸ್ತುಗಳೆರಡಲ್ಲೂ ಮಾರ್ಗಕಾವ್ಯಕ್ಕಿಂತ ಭಿನ್ನವಾದ ಭಕ್ತಿಕಾವ್ಯದ ಮೀಮಾಂಸೆಯನ್ನು ನಾವಿನ್ನೂ ಕಂಡುಕೊಳ್ಳಬೇಕಾಗಿದೆ, ಸೂತ್ರಿಸಬೇಕಾಗಿದೆ. ಮಾರ್ಗಕಾವ್ಯವು ಅಸಂಖ್ಯಾತ ಮಾನವಾನುಭವಗಳನ್ನು ಅರ್ಥದ ಸೂಕ್ಷ್ಮತೆಗಳನ್ನು ಅಭಿವ್ಯಕ್ತಿಸಲು, ಶಕ್ತವಾಗಿರುವ ಭಾಷೆಯಲ್ಲಿ ಕೊಡಲು ಪ್ರಯತ್ನಿಸಿತು. ಈ ಅತಿವಿಸ್ತಾರವಾದ ಭಾಷಾಯಂತ್ರದ ನಡುವೆ ಕಳೆದು ಹೋಗುವುದು ಆಧ್ಯಾತ್ಮಿಕ ಅನುಭವವೆಂದು ಕರೆಯಬಹುದಾದದ್ದು. ಅಧ್ಯಾತ್ಮಿಕಾನುಭವದ ಸ್ವರೂಪ ದೈವಿಕ ಮತ್ತು ಮಾನವ, ಸರಳ ಹಾಗೂ ಗೋಪ್ಯ ಎರಡೂ ಆಗಿದೆ. ಪ್ರಾಚೀನ ಕಾವ್ಯದ ಭಾಷೆಯ ನವುರಾದ ಈ ಅನುಭವವನ್ನು ಹಿಡಿಯಲಾರದು, ಹಿಡಿದರೂ ಅದನ್ನು ಲೌಕಿಕವಾದ ಏನೋ ಒಂದನ್ನಾಗಿ ಪರಿವರ್ತಿಸಿ ಬಿಡುತ್ತದೆ. ಉದಾಹರಣೆಗೆ ಅಲ್ಲಮನು ಭಗವಂತನ ಇರುವಿಕೆಯನ್ನು ಮಾರ್ಗಕಾವ್ಯಕ್ಕಾಗಿ ತಿಳಿದಿರದ ಒಂದು ಭಾಷೆಯ ಪದಪುಂಜವಾಗಿ ಹೀಗೆ ಹೇಳುತ್ತಾನೆ, “ಗೊಹೇಶ್ವರನು ಶಬ್ದಗೊಳಗಣ ನಿಶ್ಯಬ್ದದಂತೆ” ಇದ್ದಾನೆ. ವೀರಶೈವ ಶರಣರ ವಚನಗಳು ತುಂಬ ಇಂತಹ ಅರ್ಥಗರ್ಭಿತ ನುಡಿಗಟ್ಟುಗಳು ತುಂಬಿವೆ. ಇವು ಆತ್ಮ ಮತ್ತು ಪರಮಾತ್ಮರ ನಡುವಣ ಸಂಬಂಧದ ನಿಗೂಢ ಅಂಶಗಳನ್ನು ಸಂವಹಿಸುವ ಉಪನಿಷತ್ತಿನ ನುಡಿಗಟ್ಟುಗಳನ್ನು ನೆನಪಿಗೆ ತರುತ್ತವೆ. ಆತ್ಮ- ಪರಮಾತ್ಮನ ಈ ಸಂಬಂಧ ಶಾಶ್ವತವಾದದ್ದು, ಶರಣರ ಪ್ರಕಾರ ಮಾನವನ ಆತ್ಮವು ಭಗವಂತನಿಗಿಂತ ಹಿಂದಿನದು. ಈ ಶರಣರು ದೈವಿಕ ಅನುಭವಗಳನ್ನು ಅಭಿವ್ಯಕ್ತಿಸಿ ಸಂವಹಿಸಲು ಒಂದು ಭಾಷೆಯನ್ನೂ ರೂಪಕಗಳ ಗುಚ್ಛವನ್ನೂ ಸೃಷ್ಟಿಸಿದರು. ಮುಂದೆ ಕನ್ನಡದ ಭಕ್ತಿ ಕಾವ್ಯಗಳು ಈ ಭಾಷೆಯನ್ನು ಬೆಳೆಸಿದರು. ಉಪಯೋಗಿಸಿದರು.

ಭಕ್ತಿ ಕಾವ್ಯದ ಇನ್ನೊಂದು ಮುಖ್ಯವಾದ ಲಕ್ಷಣ ಅದರ ವ್ಯಕ್ತಿಗತ ತತ್ವದ ಅಂಶ. ಪ್ರಾಚೀನ ಕಾವ್ಯವು ವೈಯಕ್ತಿಕತೆಯ ಸಾಹಿತ್ಯಕ್ಕೆ ಪ್ರಸಿದ್ಧವಾದದ್ದು. ತನ್ನ ಸಮುದಾಯವನ್ನು ಪ್ರತಿನಿಧಿಸುವ ಪ್ರಾಚೀನ ಕವಿಯು ತನ್ನ ಜನರ ಕನಸುಗಳಿಗೆ ಆಶೋತ್ತರಗಳಿಗೆ ಅಭಿವ್ಯಕ್ತಿ ನೀಡುತ್ತಾನೆ. ಕೀಟ್ಸ್ ಹೇಳುವಂತೆ, “ಒಬ್ಬ ಕವಿಯು ಅತ್ಯಂತ ಪಾತ್ರರಹಿತ ವ್ಯಕ್ತಿ”. ಈ ಹೇಳಿಕೆಯಲ್ಲಿ ತುಂಬಾ ಸತ್ಯವಿರುವಂತೆ ತೋರುತ್ತದೆ. ಆದರೆ ಭಕ್ತಿಕವಿಗೆ ವೈಯಕ್ತಿಕತೆಯ ಅಭಿವ್ಯಕ್ತಿ ಅನಿವಾರ್ಯ. ಏಕೆಂದರೆ ಅವನು ಭಗವಂತನೊಂದಿಗಿನ ತನ್ನ ಸಂಬಂಧಕ್ಕೆ ಬದ್ಧನಾಗಿದ್ದಾನೆ. “ನಾನು ಚೆನ್ನಮಲ್ಲಿಕಾರ್ಜುನನ್ನು ವರಿಸಿರುವುದರಿಂದ ಈ ಸಾಯುವ ಗಂಡಂದಿರನ್ನು ಒಲ್ಲೆ” ಎಂದು ಹೇಳುತ್ತಾಳೆ ಅಕ್ಕಮಹಾದೇವಿ. ಅವಳ ಈ ಮಾತು ಅಪೂರ್ವವಾದ ವೈಯಕ್ತಿಕತೆಯನ್ನು ಉಳ್ಳದ್ದು. ಏಕೆಂದರೆ ಅದು ಬೇರೆ ಯಾರೊಬ್ಬರಿಗೂ ಅನ್ವಯಿಸುವುದಿಲ್ಲ. ಬಸವಣ್ಣನು ತನ್ನ ಭಗವಂತನೊಂದಿಗೆ ಅತ್ಯಂತ ಆತ್ಮೀಯವಾಗಿ ಸಲುಗೆಯ ಮಾತುಗಳನ್ನಾಡುತ್ತಾನೆ. ಪುರಂದರದಾಸರ ಹಾಡುಗಳಲ್ಲಿಯೂ ವೈಯುಕ್ತಿಕ ಜೀವನದ ಹೊಳಹುಗಳನ್ನು, ಅತ್ಯಂತ ಜಿಪುಣ ಅಕ್ಕಸಾಲಿಗನಾಗಿದ್ದ ಅವರು ಹೇಗೆ ಭಗವಂತನ ದಾಸರಾದರು ಎಂಬುದನ್ನು ನೋಡಬಹುದು.

ಆದರೆ ಒಬ್ಬ ಭಕ್ತಿಕವಿಯ ಆತ್ಮಾಭಿವ್ಯಕ್ತಿಗೂ ಆಧುನಿಕ ರೋಮಾಂಟಿಕ್ ಕವಿಯದಕ್ಕೂ ನಡುವೆ ಒಂದು ವ್ಯತ್ಯಾಸವಿದೆ. ಅಧುನಿಕ ಕವಿಗೆ ತನ್ನ ಕಾವ್ಯದ ರಚನಾತ್ಮಕ ಪ್ರಕ್ರಿಯೆಯಲ್ಲಿ ತಾನೂ ಭಾಗವಹಿಸುತ್ತಿರುವುದರ ಬಗೆಗೆ ಉತ್ಪ್ರೇಕ್ಷಿತ ಭಾವನೆಯಿರುತ್ತದೆ. ವರ್ಡ್ಸ್‌ವರ್ತ್‌ ಮತ್ತು ಷೆಲ್ಲಿ ಇವರ ಕಾವ್ಯದಲ್ಲಿ ನಾವು ನೋಡುವ ‘ಅಹಂ -ಭವ್ಯತೆ’ ಭಕ್ತಿಕಾವ್ಯದಲ್ಲಿ ಕಂಡು ಬರುವುದಿಲ್ಲ. ನಾವು ಭಕ್ತಿಕಾವ್ಯದಲ್ಲಿ ‘ನಾನು’ವಿನ ಸ್ಥಾನವನ್ನು ಕುರಿತು ಗಂಭೀರವಾಗಿ ಪರಿಗಣಿಸಬೇಕು. ಒಬ್ಬ ಭಕ್ತಕವಿಯ ‘ನಾನು’ ಪರಿವರ್ತನೆಯ ಪ್ರಕ್ರಿಯೆಯಲ್ಲಿರುತ್ತದೆ. ಅದು ಭಗವಂತನ ನಾಮರಾಹಿತ್ಯದಲ್ಲಿ ತನ್ನನ್ನು ಲೀನವಾಗಿಸಿಕೊಂಡು ತನ್ನನ್ನು ಕಳೆದುಕೊಂಡು ಬಿಡುವುದು. ಆತ್ಮವು ಭಗವಂತನ ಸೇವೆಗೆ ಅರ್ಪಿತವಾಗುವುದರಿಂದ, ಸ್ವತಂತ್ರವೂ ಹೌದು. ಬಂಧಿತವೂ ಹೌದು. ಏಕೆಂದರೆ ಸ್ವಾತಂತ್ರ್ಯ ಬಂಧನ, ಎರಡೂ ಈ ಆತ್ಮದ ಸ್ಥಿತಿಗಳಲ್ಲ. ಆತ್ಮದ ರೂಪಕವು ಭಕ್ತಿಕಾವ್ಯಕ್ಕೆ ಅಗತ್ಯವಾಗಿ ಬೇಕು. ಏಕೆಂದರೆ ಆತ್ಮವೇ ದಿವ್ಯಾನುಭವದ ಗ್ರಾಹಕ. ಬಹುಕಾಲ ನಿಲ್ಲುವ ಅಭಿವ್ಯಕ್ತಿಯನ್ನು ಅದಕ್ಕೆ ಕೊಡುವುದೂ ಆತ್ಮವೇ. ಅದು ರಚನಶೀಲ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ ಮನೋವೈಜ್ಞಾನಿಕ ಆತ್ಮವಲ್ಲ, ಆದರೆ ‘ಜಾಗ್ರತಸ್ಥಿತಿಯ ಬೆಂಕಿಯಿಂದಾಗಲಿ’, ‘ಕನಸುಗಳ ಮಬ್ಬು ಬೆಳಕಿನಿಂದಾಗಲಿ’, ಸ್ವಲ್ಪವೂ ಪರಿಣಾಮಗೊಳ್ಳದ ಆತ್ಮ. ಆತ್ಮವು ಭಗವಂತನ ಧನಿಯನ್ನು ಅಲಿಸುತ್ತದೆ ಮತ್ತು ಅದನ್ನು ಒಂದು ಹಾಡಾಗಿ ಪರಿವರ್ತಿಸುತ್ತದೆ. ನಮ್ಮ ಬಹುತೇಕ ಭಕ್ತಿ ಕವಿಗಳು ಭಾವಿಸುವುದು ಕವಿಯು ಒಂದು ಮಾದ್ಯಮ ಮಾತ್ರ. ಭಗವಂತನ ಕೈಗಳಲ್ಲಿ ಒಂದು ಉಪಕರಣ ಮಾತ್ರ ಎಂಬುವುದಾಗಿ. ಕನ್ನಡದ ಭಕ್ತಿ ಕವಿಗಳಲ್ಲಿ ಬಹುಶಃ ಅಗ್ರಮಾನ್ಯನಾದ ಕುಮಾರವ್ಯಾಸ ಪೀಠಿಕಾ ಪದ್ಯಗಳಲ್ಲೊಂದರಲ್ಲಿ ವೀರನಾರಾಯಣನೆ ಕವಿ ಕುಮಾರವ್ಯಾಸ ಕೇವಲ ಒಂದು ಲಿಪಿಕಾರ ಎಂದು ಹೇಳುತ್ತಾನೆ. ಇನ್ನೊಬ್ಬ ಭಕ್ತಿಕವಿ ಲಕ್ಷ್ಮೀಶ, ತನ್ನ ಭಗವಂತ ಅತ್ಯಂತ ಶ್ರೇಷ್ಠ ಸಂಗೀತಜ್ಞ, ಒಬ್ಬ ವೈಣಿಕನೂ ಒಂದು ವೀಣೆಯಿಂದ ರಾಗಗಳನ್ನು ಹೊರಡಿಸುವಂತೆ ಅವನು ತನ್ನಿಂದೀ ಕಾವ್ಯವನ್ನು ಮೂಡಿಸಿದ್ದಾನೆ ಎಂದು ನಂಬುತ್ತಾನೆ. ಭಕ್ತಿ ಕಾವ್ಯದ ಕರ್ತತ್ವ ಐತಿಹಾಸಿಕ ಮಾತ್ರ, ಜನರು ನಿರ್ದಿಷ್ಟ ಕಾವ್ಯವನ್ನೋ ಕವಿಯನ್ನೋ ಗುರುತಿಸಲು ಸಹಾಯ ಮಾಡುವ ಒಂದು ಪಟ್ಟಿ, ಅಷ್ಟೇ.

ಭಾರತೀಯ ಭಕ್ತಿ ಕಾವ್ಯದಲ್ಲಿ ಹೆಚ್ಚಿನವುಗಳಂತೆ ಕನ್ನಡ ಭಕ್ತಿ ಕಾವ್ಯವೂ ನಿರರ್ಗಳವಾದುದು, ಭಾವ ಸಾಂದ್ರತೆಯನ್ನು ಒಳಗೊಂಡಿರುವಂಥದು. ಭಕ್ತಿ ಕವಿಗಳೆಲ್ಲರೂ ಒಣತರ್ಕದ ವೈಚಾರಿಕತೆಯನ್ನು ನಿರಾಕರಿಸುತ್ತಾನೆ, ಸ್ಮರಣೆ ಅಥವಾ ದರ್ಶನ ಮೂಲಕ ಗುರುತಿಸುವ ಒಂದು ಪ್ರಕ್ರಿಯೆಯನ್ನು ನಂಬುತ್ತಾರೆ. ಆದರೆ ಇಲ್ಲಿ ಒಂದು ಮಾತ ಹೇಳಬಹುದು. ಕನ್ನಡ ಕವಿಗಳು ‘ಶುಷ್ಕ ವಿಚಾರ’ಕ್ಕೆ ವಿಮುಖರಾದರೂ, ಬಹು ದೊಡ್ಡ ವಿದ್ವಾಂಸರಾಗಿದ್ದರು. ಬುದ್ಧಿ ಜೀವಿಗಳಾಗಿದ್ದರು. ನಮ್ಮ ಮುಖ್ಯ ಕವಿಗಳಲ್ಲಿ ಹರಿಹರ ಮತ್ತು ಕುಮಾರವ್ಯಾಸ ಈ ಇಬ್ಬರನ್ನು ಹೆಸರಿಸಿ ಹೇಳಬಹುದಾದರೆ ಅವರು ಬಹು ಉನ್ನತ ಮಟ್ಟದ ವಿದ್ವಾಂಸರಾಗಿದ್ದರು. ಹರಿಹರನ ನಂಬಿಯಣ್ಣನ ರಗಳೆ ಪದ್ಯ- ಗದ್ಯೆಗಳೆರಡಲ್ಲೂ ಇರುವ ಒಂದು ಕಥನ. ಅದು ಭಾವನಿರ್ಭರವಾಗಿರುವುದರ ಜೊತೆಜೊತೆಗೇ ಅದಕ್ಕೊಂದು ಬೌದ್ಧಿಕ ವಿನ್ಯಾಸವೂ ಇದೆ. ಅದು ನಂಬಿಯ ಜೀವನವನ್ನು ಚಿತ್ರಿಸುತ್ತದೆ. ವಾಸ್ತವವಾಗಿ ಅವನು ದೇವಪುತ್ರ, ಪಾರ್ವತಿಯ ಇಬ್ಬರು ದಾಸಿಯರ ಬಗೆಗೆ ಮೋಹಪರವಶನಾದುದರ ಫಲವಾಗಿ ಅವನು ಈ ಭೂಮಿಯಲ್ಲಿ ಜನಿಸಬೇಕಾಗುತ್ತದೆ. ಅವನು ಇಲ್ಲಿ ಹುಟ್ಟಿದ ಮೇಲೆ ಅವನ ಆಸೆಗಳನ್ನು ಈಡೇರಿಸುವ ಜವಾಬ್ದಾರಿ ಶಿವನದ್ದಾಗುತ್ತದೆ. ನಂಬಿಯ ಪ್ರೇಮ ಪ್ರಕರಣಗಳಲ್ಲಿ ಶಿವನು ಮಧ್ಯವರ್ತಿಯಾಗಿ ಓಡಾಡುತ್ತಾನೆ. ಹಾಗೆಯೇ ಪ್ರಾಪಂಚಿಕ ಕಾಮನೆಗಳಿಂದ ಬಾಧಿತನಾಗದ ಹಾಗೆ ಅವನ ಮೇಲೆ ಕಣ್ಣಿಡುತ್ತಾನೆ. ಕಥೆಯು ಒಂದು ಭಾವನಿರ್ಭರ ಪ್ರೇಮ ಕಥೆಯಂತೆ ಓದಿಸಿಕೊಂಡರೂ, ಅದು ಗಹನವಾದ ನೈತಿಕ ನಿಯಮವೊಂದರ ದೃಷ್ಟಾಂತವಾಗುತ್ತದೆ. ಪ್ರತಿಯೊಂದು ಕಾಮನೆಯೂ ಪೂರ್ತಿಗೊಳ್ಳಬೇಕಾಗುತ್ತದೆ. ಮರಣವೆನ್ನುವುದು ಪೂರೈಕೆಯ ಪರಾಕಾಷ್ಠೆಯಾಗುತ್ತದೆ.

ಕುಮಾರವ್ಯಾಸನು ಮಹಾಭಾರತದ ಕಥೆಯನ್ನು ಮತ್ತೇ ಹೇಳಿದ್ದಾನೆ. ಅವನ ಪ್ರಕಾರ ಕೃಷ್ಣನೇ ಈ ಮಹಾಕಾವ್ಯದ ನಾಯಕ. ಕಥೆಯಲ್ಲಿರುವ ಏಕೈಕ ದೈವಿಕ ಅಂಶ ಕೃಷ್ಣ. ಆ ಪಾತ್ರವಿಲ್ಲದೆ ಹೋದರೆ ಅದು ನಿರ್ದಾಕ್ಷಿಣ್ಯವಾಗಿ ಮನುಷ್ಯರ ಕಥೆ. ಕುಮಾರವ್ಯಾಸನ ಕೃತಿಯಲ್ಲಿ ಕೃಷ್ಣನು ಕಥೆಯ ಪ್ರಜ್ಞೆಯ ಬಿಂದುವಾಗುತ್ತಾನೆ, ಏಕೆಂದರೆ ಮಾನವನ ಅದೃಷ್ಟವನ್ನಾಳುವ ತತ್ವ ಅವನೇ. ಕಾವ್ಯವನ್ನು ಬೌದ್ಧಿಕಗೊಳಿಸುವುದು ಯಾವ ಅಂಶವೆಂದರೆ, ಮನುಷ್ಯನು ಭಗವದಿಚ್ಛೆಗೆ ತನ್ನನ್ನು ಒಪ್ಪಿಸಿಕೊಳ್ಳುವ ಸಮಸ್ಯೆಯನ್ನು ಅವನು ನಿರ್ವಹಿಸಿರುವ ರೀತಿ. ವ್ಯಕ್ತಿತ್ವ ದೊಡ್ಡದಾದಷ್ಟೂ ಭಗವದಿಚ್ಛೆಗೆ ಅವನ ಇಚ್ಛೆಯ ಶರಣಾಗತಿ ಕಷ್ಟವಾಗುತ್ತಾ ಹೋಗುತ್ತದೆ. ತನ್ನ ಭಕ್ತರಾದ ಅರ್ಜುನ ಮೊದಲಾದವರ ಬಗೆಗೆ ವ್ಯವಹರಿಸುವುದಕ್ಕಿಂತ ದುರುಳಪಾತ್ರಗಳಾದ ದುರ್ಯೋಧನ ಮೊದಲಾದವರನ್ನು ನಿರ್ವಹಿಸುವುದು ಕೃಷ್ಣನಿಗೆ ಸುಲಭ. ಅವನು ಭೀಷ್ಮ ಮತ್ತು ಕರ್ಣರನ್ನು ಕೊಲ್ಲುವಂತೆ ಬಹಳ ಕಷ್ಟದಿಂದ ಅರ್ಜುನನ ಮನವೊಲಿಸುತ್ತಾನೆ. ಏಕೆಂದರೆ ಅವರನ್ನು ಕೊಲ್ಲದಿರಲು ಅರ್ಜುನನು ಕೊಡುವ ಕಾರಣಗಳು ಮಾನವೀಯವಾಗಿವೆ, ಪ್ರೇಮಯುತವಾಗಿವೆ. ಆಳವಾದ ಪ್ರಾಪಂಚಿಕ ಮೋಹದಿಂದ ಬಲಗೊಂಡ ಮಾನವೇಚ್ಛೆಗೂ ದೈವೇಚ್ಛೆಗೂ ನಡುವೆ ನಡೆಯುವ ಒಂದು ಸಂಘರ್ಷವನ್ನು ಕುಮಾರವ್ಯಾಸನು ನಮ್ಮ ಮುಂದಿಡುತ್ತಾನೆ. ಮಾನವ ಗ್ರಹಿಕೆಗೆ ನಿಲುಕಲಾರದಷ್ಟು ಎತ್ತರವಾದ ಒಂದು ನೈತಿಕ ವ್ಯವಸ್ಥೆಯನ್ನು ದೈವೇಚ್ಛೆಯು ಇಲ್ಲಿ ವ್ಯಕ್ತಪಡಿಸುತ್ತದೆ. ಮನುಷ್ಯನು ಭಾವಿಸುವುದು ಒಂದಾದರೆ, ದೇವರು ಯಾವಾಗಲೂ ಅದನ್ನು ಮುರಿಯುವುದಿಲ್ಲ, ಬದಲು ಇನ್ನೂ ಉನ್ನತವಾದ ಸತ್ಯ ಮತ್ತು ಶಕ್ತಿಯ ವ್ಯವಸ್ಥೆಯೊಂದನ್ನು ತೋರಿಸಿಕೊಡುತ್ತಾನೆ. ಕೃಷ್ಣನು ಮಾನವ ಆಶೋತ್ತರಗಳಿಗೆ ವಿರೋಧಿಯಾದವನಲ್ಲ. ಮನುಷ್ಯನಿಗಿರುವ ಯಾತನೆಯನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಅವನು ಮೆಚ್ಚುತ್ತಾನೆ. ದೇವತೆಗಳು ಹೀಗೆ ಸಹಿಸಿಕೊಳ್ಳಲಾರರು ಎಂದು ಅವನು ಬಲ್ಲನು. ಕುಮಾರವ್ಯಾಸನ ಕಾವ್ಯವು ಮಾನವನ ಭಕ್ತಿಯನ್ನು ಮಾತ್ರವಲ್ಲದೆ ಭಗವಂತನು ಈ ಜಗತ್ತನ್ನು ಸಹನೆಯಿಂದ ಅರಿಯುವುದನ್ನು ತೋರಿಸುತ್ತದೆ.

* * *